ರಾಗ ತೋಡಿ ಏಕತಾಳ

ಇಂದುವದನೆ ಕುಂದರದನೆ ಮಂದಗಜಗಮನೆ |
ಚಂದನಗಂಧಿನಿ ಅರವಿಂದದಳನಯನೆ       ||೭೮||

ಎಂದಿನಂದವಿರದು ನಿನ್ನ ಮೊಗದೊಳಿಂದು ಸಿರಿಯು |
ಕಂದಿದೇತಕೆನಲು ಕೇಳುತೆಂದಳು ಮೈಥಿಲಿಯು        ||೭೯||

ಪ್ರಾಣಕಾಂತ ಲಾಲಿಸು ಪ್ರವೀಣ ಹಿಂದಾದೊಂದು |
ಏಣದ ಬೇಟೆಗೆ ಪೋಗಲಾನು ಮನದಿನೊಂದು         ||೮೦||

ದೀನೆಯಾದೆನೆಂಬುದರಿತು ಮಾನಸದೊಳಿಂದು |
ಧ್ಯಾನಿಸುತ್ತಿರಲು ತೋರ್ಪುದಾನನದಿ ಕಂದು ||೮೧||

ರಾಗ ಮಾರವಿ ಏಕತಾಳ

ಸೀತೆಯ ನುಡಿಯನು ಕೇಳುತ ರಘುಕುಲ | ಜಾತನು ವಿನಯದಲಿ ||
ಪ್ರೀತಿ ಮಿಗಲು ಕೈವಿಡಿದೊಳಪುಗುತ ಸ | ಮೇತದಿ ಮಂಚದಲಿ  ||೮೨||

ಕುಳ್ಳಿರೆ ನಿರಿನಿಟಿಲೆಂದಾ ಮಂಚವು | ದಳ್ಳಿ ಮುರಿಯಲಾಗ ||
ತಲ್ಲಣಿಸುತ್ತಲಿ ಹಾರಿದನೇನಿದು | ವಿಳ್ಳಿಮವೆಂದೆನುತ   ||೮೩||

ಕೃತ್ರಿಮವಲ್ಲದೆ ಸತ್ಯವಿದಾಗದೆ | ನುತ್ತಲಿ ಸಹಭವರ ||
ಹತ್ತಿರ ಕರೆಯಲು ಮತ್ತೆ ಕರವ ಮುಗಿ | ವುತ್ತವರುಸಿರಿದರು      ||೮೪||

ರಾಗ ಕೇದಾರಗೌಳ ಅಷ್ಟತಾಳ

ಹದಿನಾಲ್ಕು ಲೋಕವ ಹೃದಯದೊಳಿಂಬಿಟ್ಟ | ಸದಮಲಾತ್ಮಕನೆ ನಿನ್ನ |
ಮುದದಿಂದ ತಾಳಬಲ್ಲುದೆ ಮಂಚವೆಂದೆನ | ಲದಕೆ ರಾಘವನೆಂದನು     ||೮೫||

ಬಲ್ಲವರಿಂಗೆ ಮಾತಲ್ಲದೆ ಲೋಕಕ್ಕೆ | ಸಲ್ಲದೀ ನುಡಿಯೆನ್ನುತ ||
ಮೆಲ್ಲನೆ ಹಾಸಿಗೆಯೆಲ್ಲವನೆತ್ತಲು | ಅಲ್ಲಿ ಕಂಡನು ಪಠವ ||೮೬||

ಕಂಡಿರೆ ನಾರಿಯ ಕಪಟವನನುಜರು | ಖಂಡಿತವಾಗಿ ನೀವು ||
ಭಂಡ ರಾವಣನ ರೂಪವ ತಾನೆ ನಿರ್ಮಿಸಿ | ಕೊಂಡು ಸಂತಯಿಸುವಳು  ||೮೭||

ಎಂದು ಕೋಪದಿ ಕಿಡಿಯಿಡುತಲೆ ರಾಘವ | ನಂದು ವೈದೇಹಿಯೊಳು ||
ಮುಂದೆಸೆಯಲಿ ತಲೆಗುತ್ತಿ ದುಮ್ಮಾನದಿ | ನಿಂದಿರಲುಸಿರಿದನು  ||೮೮||

ರಾಗ ಮುಖಾರಿ ಅಷ್ಟತಾಳ

ಏನಿದು | ಸೀತೆ | ಏನಿದು   || ಪಲ್ಲವಿ ||

ಏನಿದು ಸೀತೆ ನಿನ್ನಯ ಕಾರ್ಯಭರವು |
ಸಾನುರಾಗದಿ ತೋರುತಿಹುದು ನಿನ್ನಿರವು || ಏನಿದು   || ಅ. ಪಲ್ಲವಿ ||

ಏಣದ ನೆಪದಿಂದಲೆನ್ನನು ಕಳುಹಿ |
ನಾಣುವೆಯಿಂದಲಿ ರಾಕ್ಷಸಗಳುಪಿ ||
ಕಾಣದ ತೆರದಿಂದ ಲಂಕೆಗೆ ಪೋಗಿ |

ದಾನವನೊಡನಿರ್ದೆಯೊ ದಿಟವಾಗಿ || ಏನಿದು          ||೮೯||
ಇರಲಾರೆ ಕಾಣದಾತನನೆಂಬುದಾಗಿ |
ಬರೆಕೊಂಡು ಪಠವ ನಿನ್ನೊಳಗೆ ಚೆನ್ನಾಗಿ ||
ಇರಿಸಿಕೊಂಡಿಹೆಯ ಹಾಸಿಗೆಯೊಳಗೀಗ |
ನೆರೆ ಗುಪಿತವ ಗೆಯ್ದು ಪೇಳು ನೀ ಬೇಗ || ಏನಿದು     ||೯೦||

ರಾಗ ಮಾರವಿ ಝಂಪೆತಾಳ

ಅಲ್ಲಿ ನೀ ಪೇಳಿರಲು ಕೊಲ್ಲದಿರೆನಂದು |
ವಲ್ಲಭಳೆ ನಿನ್ನ ಮನ ತಲ್ಲಣಿಪುದಿಂದು         ||೯೧||

ಕೊಂದೆನಯ್ಯೋ ನಿನ್ನ ಕಾಮಧೇನುವನು |
ಮುಂದುವರಿದುದು ಕಾರ್ಯ ಪೇಳಿ ಫಲವೇನು         ||೯೨||

ಮಾತನಾಡೆನುತ ಝೇಂಕಿಸಲು ರಾಘವನು |
ಧಾತುಗೆಡುತಿರೆ ಸೀತೆ ಮತ್ತೆ ಪೇಳಿದನು      ||೯೩||

ಜನನಿ ಕೌಸಲ್ಯೆ ಕೈಕೆಯಿ ಸುಮಿತ್ರೆಯರನು |
ಅನುವಿನಿಂ ಬರಹೇಳು ನೋಡಲವರಿದನು    ||೯೪||

ಊರ್ಮಿಳಾ ಶ್ರುತಕೀರ್ತಿ ಮಾಳವಿಯರೀಗ |
ಸಮ್ಮತವೆ ನೋಡಲಿವಳಿರವನ್ನು ಬೇಗ       ||೯೫||

ಕಂದ

ಎನಲವರೆಲ್ಲರ್ ಬಂದಾ |
ದನುಜನ ಪಠವೀಕ್ಷಿಸುತಂ ಬಿಡಲಚ್ಚರಿಯಂ ||
ಜನಪಾಲಾತ್ಮಜನೀಕ್ಷಿಸಿ
ಮಣಿವುತ್ತಂ ಪೇಳ್ದನಾಗ ಕೌಸಲ್ಯೆಯೊಳಂ     ||೯೬||

ರಾಗ ತೋಡಿ ಏಕತಾಳ

ಆಲಿಪುದೆಲೆ ಮಾತೆ ನಿಮ್ಮಯ ಸೊಸೆ ಸೀತೆ |
ಖೂಳ ರಾವಣನ ರೂಪವ ಬರಕೊಂಡು ||
ಲಾಲಿಸುವಳು ನಾವು ಬೇಡವೆಂಬುದಕಾಗಿ |
ಕೇಳಿದರೆಂದೆನೆ ಕಿವಿ ಮುಚ್ಚಿ ಕೇಳಿದಳು        ||೯೭||

ಏನೆ ಅಂಗನೆ ಸೀತೆ ಮಾನವಂತೆ ಪ್ರಖ್ಯಾತೆ |
ದಾನವನುರು ರೂಪವನು ಬರಕೊಂಡು ||
ನೀನೇತಕಿರುವೆ ಪೇಳೆಂದು ಕೌಸಲ್ಯೆ ಕೇಳ |
ಲಾ ನೀರೆ ಕಯ್ ಮುಗಿವುತ್ತ ಪೇಳಿದಳು      ||೯೮||

ತಾಯೆ ಲಾಲಿಸು ರಾಮನೋರ್ವನಲ್ಲದೆ ಮಿಕ್ಕ |
ನಾಯಿಗಳನು ಮನದೆಣಿಪೆನೆ ನಾನು ||
ಮಾಯರಕ್ಕಸಿ ಮೋಸವಿತ್ತಡಗಿದಳೆನ |
ಲಾ ಯುವತಿಗೆ ಮತ್ತೆ ಪೇಳ್ದಳೂರ್ಮಿಳೆಯು   ||೯೯||

ಎಷ್ಟು ಪೇಳಿದರೇನು ತಂದೆ ನೀ ಜನಕನ |
ಶ್ರೇಷ್ಠವಂಶಕೆ ಹಳಿವನು ಮಾತದೇನು ||
ಮುಟ್ಟದೀ ನುಡಿಯೆನುತೂರ್ಮಿಳೆಯುಸಿರಲು |
ಅಷ್ಟರೊಳ್ ಸೌಮಿತ್ರಿಗೆಂದ ರಾಘವನು       ||೧೦೦||

ಭಾಮಿನಿ

ಅನುಜ ಕೇಳೀ ದನುಜಪಠವಿದು |
ಇನಕುಲಕೆ ಪಗೆಯಾದ ಕಾರಣ |
ಘನತರದ ಬ್ರಹ್ಮಾಸ್ತ್ರದಲಿ ಕೊಲ್ಲೆನಲು ಸೌಮಿತ್ರಿ ||
ಎನೆ ಹಸಾದವೆನುತ್ತ ಲಾ ಕ್ಷಣ |
ದನುಜನನು ಸಂಹರಿಸಿ ಚರಣಕೆ |
ವಿನಯದಿಂದಲಿ ಮಣಿಯಲವಗಿಂತೆಂದ ಶ್ರೀರಾಮ     ||೧೦೧||

ರಾಗ ಮಧುಮಾಧವಿ ಅಷ್ಟತಾಳ

ಬಾರೋ ತಮ್ಮ ಸೌಮಿತ್ರಿ ನೀನೀಗ |
ತೋರಿಸು ನಿನ್ನ ಕಯ್ ಗುಣವನು ಸಲೆ ಬೇಗ   || ಪ ||

ತಂದಳೀಕೆಯು ವಂಶವೆರಡಕೆ ಘನವಾದ |
ನಿಂದೆಯನೇನೆಂಬೆನೀ ಕ್ಷಣವಿವಳ ||
ಕುಂದದೆ ವನಕೊಯ್ದು ಶಿರವನ್ನು ಛೇದಿಸಿ |
ತಂದೀವುದೆಣಿಕೆಯಿಲ್ಲದೆ ಕುರುಹದೊಂದ      ||೧೦೨||

ಕಂದ

ಇಂತೆನೆ ಕೇಳುತ ಲಕ್ಷ್ಮಣ |
ಮುಂತಾದನುಜಾತರಬ್ಜಜಾತ್ಮಜ ಮುಖ್ಯರ್ ||
ಸಂತತದಿಂದೀ ಭಯ ಮಿಗ |
ಲಂತರಿಸದೆ ಕರವ ಮುಗಿವುತುಸಿರಿದರಾಗಳ್          ||೧೦೩||

ರಾಗ ಮಧುಮಾಧವಿ ತ್ರಿವುಡೆತಾಳ

ಜೀಯ ಲಾಲಿಸು ದೇವಿಯರಲೀ |
ಮಾಯಕವುಯೆಂದಿಗೆಯು ಬರುವುದೆ |
ನ್ಯಾಯವಲ್ಲಿದು ನಾವು ಬಲ್ಲೆವು | ಕಾಯಬೇಹುದು ಕರುಣದಿ      ||೧೦೪||

ಬಾರದೆಮ್ಮಯ ಮನಸಿಗೀ ನುಡಿ |
ತಾರದಿರು ಹೆಂಗೊಲೆಗೆ ಮನವನು |
ದೂರು ಬರುವುದು ದಾಶರಥಿಯವಿ | ಚಾರಿಯೆನುತಲಿ ಲೋಕದಿ ||೧೦೫||
ಎಂದು ಕಯ್ಗಳ ಮುಗಿದು ಬಹು ಪರಿ |
ಯಿಂದ ಜಾಂಬವಮುಖ್ಯರುಸಿರಲು |
ಒಂದಕೂ ಮನವೊಡಬಡದೆ ರಘು | ನಂದನನು ಬಳಿಕೆಂದನು   ||೧೦೬||

ರಾಗ ಮಾರವಿ ಅಷ್ಟತಾಳ
ಕೇಳಿರೈ ಜಾಂಬವರು | ಮೇಣೀಕೆಯ |
ಜಾಲವನೆಲ್ಲವರು ||
ಖೂಳ ದೈತ್ಯನ ಸಂಗಡಿರ್ದುದ ಕಪಟದಿ |
ಮೇಳವಿಸಿ ಕೊಂಡಗ್ನಿಯನು ಪೊ | ಕ್ಕೇಳಲಿಲ್ಲವೆ ಚದುರತನದಲಿ ||೧೦೭||

ಆಗಲೆ ತಿಳಿದಿಹೆನು | ವಹ್ನಿಯಲೀಕೆ |
ಪೋಗಿ ಬಂದುದಕೆ ನಾನು ||
ಈಗಲೀ ಪಠದಿಂದ ಕಪಟ ನಿಶ್ಚಯವೆಂಬು |
ದಾಗಿ ತೋರ್ದರು ಹೀಗೆ ಪೇಳ್ವುದು | ಸಾಗದೀ ನುಡಿ ಸಾಕು ಸುಮ್ಮನೆ   ||೧೦೮||
ಏನ ನೋಡುವೆ ಲಕ್ಷ್ಮಣ | ನೀನೆನ್ನ ಸ್ವಾ |
ಧೀನನಯ್ಸಲೆಯೀ ಕ್ಷಣ ||
ಮಾನಿನಿಯನು ತೆಗೆ ನಿಲ್ಲದಿರಿದಿರೆಂದು |
ದಾನವಾಂತಕ ಪೇಳೆ ಮರುಗಿದ |
ರೀ ನಿರೋಧಕೆ ಸುಜನರೆಲ್ಲರು       ||೧೦೯||

ಭಾಮಿನಿ

ಧರಣಿಪನ ನುಡಿ ಕೇಳ್ದು ಸಲೆ ಮನ |
ಗರಗಿ ಲಕ್ಷ್ಮಣ ಸುರಿವ ಕಂಬನಿ |
ಯೊರಸುತಕಟಕಟೀ ವಿಧಿಯು ದೊರಕಿದುದೆ ತನಗೆನುತ ||
ಮರುಗುತಲಿ ದೇವಿಯರನೊಯ್ಯನೆ |
ಪೊರಡಿಸಲು ಕಾಣುತ್ತ ಶೋಕದ |
ಲಿರದೆ ಪುರ ನಾರಿಯರು ತಮ್ಮೊಳು ಮಾತನಾಡಿದರು ||೧೧೦||

ರಾಗ ಶಂಕರಾಭರಣ ಏಕತಾಳ

ತಂಗಿ ಕೇಳೆ ಕಮಲನಯನೆ | ಹೆಂಗಳರನ್ನೆ ಸೀತೆಯನೆ |
ಭಂಗಿಸಲ್ ಕಾನನಕೊಯ್ವು | ದಂಗವೇನಿನ್ನು ||೧೧೧||

ಹಿಂಗದೆ ಸ್ತ್ರೀವಧೆಗೆ ಮನವ | ಮಂಗಳಾತ್ಮ ರಾಮನಿತ್ತು |
ಹಂಗಿಸಿ ಕಳುಹಿದನಲ್ಲೆ | ಭೃಂಗುಕುಂತಳೆ     ||೧೧೨||

ಅಸುರೆಯ ಮಾಯಕವೆನ್ನು | ತುಸಿರೆ ಕೇಳ್ದು ಕೇಳಿದಂತೆ |
ಯಸನ ಹಿಡಿದು ಕಳುಹಿಸುವುದು | ಕುಶಲವೇನವ್ವ     ||೧೧೩||

ಹೆಸರದಂತೆ ಕುಲದೀಪರ್ಗೆ | ವಸುಧೀಶ ಊರ್ಮಿಳೆಯರಿಗೆ |
ಹಸನವಾಯಿತೇನೊ ಕಾಣೆ | ಕುಸುಮಲೋಚನೆ       ||೧೧೪||

ಜಾಂಬವಾದಿಗಳ ನುಡಿಯ | ನಂಬಲಾರದಿನಿತು ರಘು |
ಸಂಭವನಿಗಕಟೀ ಬುದ್ಧಿ | ಸಂಭವಿಸಿತೆ        ||೧೧೫||

ಕಂಬುಕಂಠಿ ಕೇಳೆ ಹಿರಿಯ | ರೆಂಬ ಮಾತ ಮೀರ್ದು ತಾನು |
ಲಂಬಿಸಲರಿವುದೆ ಸೌಖ್ಯ | ವಿಂಬಿನಿಂದಲಿ     ||೧೧೬||

ರಾಗ ಶಂಕರಾಭರಣ ರೂಪಕತಾಳ

ಪುರಜನ ಪರಿಜನ ಮಾನಿನಿಜನ ಮುಂತಾ | ಗಿರುವರೆಲ್ಲರು ದುಗುಡದಲಿ ||
ತರುಣಿ ಸೀತೆಯ ವನಕೊಯ್ವುದ ಕಾಣುತ | ಮರುಗಿದರೇನ ಪೇಳುವೆನು ||೧೧೭||

ಸಡಲಿದಾಭರಣದಿ ತಡಲಿದಾಸ್ಯದಿ ಕಡ | ಲಿಡುವ ಕಂಬನಿಯ ಧಾರೆಗಳ ||
ಪೊಡವಿಯೊಳ್ ನಟ್ಟ ದೃಷ್ಟಿಯು ಮೌನ ಮುಸುಕಿನ | ಮಡದಿ ಸೀತೆಯು ಬರುತಿರಲು       ||೧೧೮||

ಮೆಲ್ಲ ಮೆಲ್ಲನೆ ಪುರವನು ದಾಂಟಿ ಕೆಡುವಟ್ಟೆ | ಯಲ್ಲಿಮುಂದಕೆ ಬರುತಿರಲು ||
ಕಲ್ಲು ಮುಳ್ಗಳಲಿ ಕಾಲೊಡೆದು ನೆತ್ತರು ಸೂಸೆ | ತಲ್ಲಣಿಸುತಲೆಂದಳೊಡನೆ         ||೧೧೯||

ತಂದೆ ಲಕ್ಷ್ಮಣ ತಾಳು ವಿಪಿನಕ್ಕೆ ನಾನಿನ್ನು | ಮುಂದೆ ಹೆಜ್ಜೆಯನಿಡಲಾರೆ ||
ನೊಂದವಳೊಡನೇಕೆ ಸರಸವು ರಾಘವ | ನೆಂದಂತೆ ಮಾಡು ಬೇಗದಲಿ  ||೧೨೦||

ಹಿರಿದಾಗಿ ಬಳಲಿದೆ ವನವಾಸದಲಿ ಹಿಂದೆ | ದುರುಳ ರಾವಣನ ಮಂದಿರದಿ ||
ನೆರೆ ಕಷ್ಟಕೊಳಗಾದೆ ನಿಂದಿಲಿ ಈ ವಿಧಿ | ಗೆರವಾದೆನಕಟ ನಾ ಬರಿದೆ     ||೧೨೧||

ಮಾರೀಚೋಕ್ತಿಯದೆಂದು ಪೇಳ್ದರೆ ನಿನಗೆ ನಾ | ಕ್ರೂರ ವಾಕ್ಯವನೆಂದ ಕತದಿ ||
ಸೇರಿತು ನಿನ್ನಿಂದ ವಧೆ ತನಗದರಿಂದ | ಲಾರು ಮೀರ್ವರು ದೈವಗತಿಯ ||೧೨೨||

ರಾಗ ಶಂಕರಾಭರಣ ತ್ರಿವುಡೆತಾಳ

ಎಂದ ಸೀತೆಯ ನುಡಿಯ ಕೇಳುತ |
ನೊಂದು ಮನದಲಿ ಮರುಗಿ ಲಕ್ಷ್ಮಣ |
ತಂದು ವನದಲಿ ನಿಲಿಸಿ ವೃಕ್ಷವ | ನೊಂದರಡಿಯ      ||೧೨೩||

ತೆಗೆದು ಖಡುಗವನೊರೆಯನುಗಿವುತ |
ಬಿಗುಹಿನಲಿ ಝಳಪಿಸಲು ಹೊಳೆದುದು |
ಸೊಗಸಿನಿಂದಲಿ ಗರ್ಭಪಿಂಡವು | ಮಿಗೆಯದರೊಳು    ||೧೨೪||

ಏನಿದಚ್ಚರಿಯೆನುತ ಮನದಲಿ |
ಧ್ಯಾನಿಸುತ ಸೌಮಿತ್ರಿ ಬಳಿಕಾ |
ಮಾನಿನೀಮಣಿಯೊಡನೆ ಪೇಳ್ದನು | ತಾನು ಭಯದಿ    ||೧೨೫||

ಕಡಿವೆ ನಿಮ್ಮನೆನುತ್ತ ಖಡುಗವ |
ಝಡಿಯೆ ಹೊಳೆದುದು ಗರ್ಭವದರಲಿ |
ದೃಢದಿ ನೀ ಗರ್ಭಿಣಿಯೆ ಪೇಳೌ | ತಡೆಯದೆನಲು      ||೧೨೬||

ಆಹುದು ಗರ್ಭಿಣಿಯೆಂಬ ಮಾತಿದು |
ವಿಹಿತವಾದುದು ತಿಂಗಳಾರನೆ |
ಗಹನ  ಮಾಡಗ್ರಜನ ನೇಮಕೆ | ಕುಹಕವಿಡದೆ          ||೧೨೭||

ಕೇಳಿ ದೇವಿಯ ನುಡಿಯನುರು ಕರು |
ಣಾಳುತನದಿಂದಿಳುಹಿಯಸಿಯನು |
ತಾಳಿ ಚಿಂತೆಯನೆಂದನೂರ್ಮಿಳೆ | ಯಾಳಿದವನು     ||೧೨೮||

ರಾಗ ಧನ್ಯಾಸಿ ಆದಿತಾಳ

ಅಕಟಕಟೀಕೆಯ ಕೊಂದರೆ ರಘುಕುಲ |
ಕಖಿಲಕದೆಲ್ಲಿ ತಿಲಾಂಜಲಿ ಮುಂದೆ ||
ಸಕಲ ವಂಶಾಂತಕ ನಾನಾಗದಿರುವೆನೆ |
ಭಕುತವತ್ಸಲ ಹರಿ ಕಾಯ್ದನಿಂದಿನಲಿ ||೧೨೯||

ಸತ್ಯ ಸೀತೆಯಲಿ ರಾಮನಲೆನ್ನಲಿರುವ ನಿ |
ಮಿತ್ತದಿ ಹೊಳೆದುದು ಶಿಶುಪಿಂಡವಿಂತು ||
ಕೃತ್ರಿಮದಸುರೆಯಿಂದಲ್ಲದೆಯೆಂದಿಗು |
ಮಿಥ್ಯದ ನುಡಿ ದೇವಿಯರಲಿ ಬಂದಪುದೆ      ||೧೩೦||

ಸಾರಿ ಕೋಪದಿ ಪೇಳ್ದನಲ್ಲದೆ ಸೂಕ್ಷ್ಮವಿ |
ಚಾರವನರಿದುಸಿರಿದ ಮಾತಿದಲ್ಲ ||
ಮೀರಿದರಣ್ಣನ ನುಡಿ ತನಗದರಿಂದ |
ಬಾರದು ದೋಷವು ನಿಶ್ಚಯವಾಗಿ   ||೧೩೧||

ರಾಗ ಘಂಟಾರವ ಆದಿತಾಳ

ಇಂತು ನಿಶ್ಚಯ ಗೆಯ್ದು ಸೀತೆಯೊಳೂರ್ಮಿಳಾ |
ಕಾಂತನೆಂದನು ತಾಯೆ ನಿಮ್ಮಯ ಮನವು ||
ಎಂತು ಬಂದಪುದಂತು ಪೋಪುದು ಕೊಲುವನ |
ಲ್ಲಂತರವಿಲ್ಲೆಂದು ಮುಗಿದನು ಕರವ ||೧೩೨||

ಹೀಗೆಂದು ಪೇಳ್ದು ಪಿಂತಿರುಗಿ ಲಕ್ಷ್ಮಣನತ್ತ |
ಪೋಗುವುದನು ಕಂಡು ಬೆದರಿ ಜಾನಕಿಯು ||
ರಾಘವ ಹಾ ಹಾ ಸೌಮಿತ್ರಿಯೆನುತಲಿ |
ಕೂಗಿ ಮೂರ್ಛೆಯೊಳ್ ಬಿದ್ದಳವನಿಯೊಳವಳು         ||೧೩೩||

ಭಾಮಿನಿ

ಚಂದಿರಾನನೆ ಸೀತೆ ಮೂರ್ಛೆಗೆ |
ಸಂದು ಮಲಗಿರಲಿತ್ತ ಲಕ್ಷ್ಮಣ |
ನೊಂದು ನೆತ್ತರಹೊನ್ನೆಯೆಂಬಾ ತರುವಿರಲು ಕಡಿದು ||
ಸಂದ ರಕುತದ ತೆರದಿಯಿರಲದ |
ತಂದು ತೋರಿಸೆ ಕಾಣುತಾ ರಘು |
ನಂದನನು ಘನ ಶೋಕದಲಿ ಕಳವಳಿಸುತಿಂತೆಂದ     ||೧೩೪||

ರಾಗ ನೀಲಾಂಬರಿ ಪಂಚಾಗತಿ ಮಟ್ಟೆತಾಳ

ಅನುಜ ಲಕ್ಷ್ಮಣ ವನರುಹೇಕ್ಷಣ |
ಮನದಿ ಸಂಶಯವಿಲ್ಲದೆನ್ನಯ ||
ವನಿತೆ ರನ್ನೆಯ ಜನಕಕನ್ನೆಯ |
ವನದಿ ಕೊಲುವುದು ಉಚಿತವೇನಿದು          ||೧೩೫||

ಒಂದು ಬಾರಿಯು ಖತಿಯೊಳುಸಿರ್ದರೆ |
ತಂದೆ ಮುನಿದು ನೀನಿಂತು ಕೊಲುವರೆ ||
ಬಂದುದೆಂತು ಕೈ ನಿನಗೆ ಪೇಳಯ್ಯ |
ಸಂದುದೆಂತು ದುರ್ಮನವು ಮಮ ಪ್ರಿಯ     ||೧೩೬||

ಕೊಲುವ ಸಮಯದಿ ಏನ ಪೇಳ್ದಳು |
ಜಲಜನೇತ್ರೆ ಜಾನಕಿಯು ನಿನ್ನೊಳು ||
ಉಳಿಸದಿಂತು ಖಡ್ಗದಲಿ ರಕುತವ |
ಬಳಸಿ ತಂದು ತೋರಿದೆಯೊ ಸತ್ತ್ವವ         ||೧೩೭||

ರಾಗ ಭೈರವಿ ಝಂಪೆತಾಳ

ಅನುತಾಪಗೊಳುತಲಿಂ | ತನುಪಮನು ಕೇಳುತಿರ |
ಲನುಜ ಲಕ್ಷ್ಮಣನೆಂದ | ನನುನಯದೊಳಂದು          ||೧೩೭||

ಕೇವಲ ಪರಾನಂದ | ಪಾವನಾತ್ಮ ಮುಕುಂದ |
ದೇವ ನೀ ತಾಳಲೇ | ಕೀ ವಿಧದ ಕುಂದ      ||೧೩೮||

ನಿನ್ನ ಕಾರ್ಯಕೆ ನಾನು | ಅನ್ಯನಾಗೆನು ದೇವ |
ಎಣ್ಣಲಾಗದು ಮನದೊ | ಳಿನ್ನು ಜಾನಕಿಯ   ||೧೩೯||

ತೋರಿ ಹೇಳಿದೆ ಕುರುಹ | ಬೇರೆ ಮಾತಿಲ್ಲೆನಲು |
ನಾರಿ ಹಾಯೆಂದೆನುತ | ಚೀರಿ ಮರುಗಿದನು  ||೧೪೦||

ರಾಗ ನೀಲಾಂಬರಿ ಆದಿತಾಳ
ಸೀತೆ ಹಾ ಹಾ ಚಂದ್ರೇಭವಕ್ತ್ರೆ | ಸೀತೆ ಮೃದುಗಾತ್ರೆ ||
ಮಾತನಾಡಬಾರದೇನೆ | ಪೋತಹಂಸಯಾನೆ         ||೧೪೧||

ಎನ್ನ ಭಾಗ್ಯದಾ ಕಂದರವೆ | ಚಿನ್ನದಂತೆ ಮೆರೆವೆ ||
ನಿನ್ನ ಮುದ್ದು ಮೊಗವ ಕಾಣ | ದಿನ್ನು ಬಾಳ್ವೆನೆಂತು     ||೧೪೨||

ವಲ್ಲಭಳೆ ನಿನಗೋಸುಗವೆ | ಬಿಲ್ಲ ನೆಗಹಿದೆನು ||
ಎಲ್ಲ ದಾನವರ ಕೊಂದೆ | ಎಲ್ಲಿ ಪೋದೆ ನೀನು          ||೧೪೩||

ದನುಜೆಯ ಕೌಟಿಲ್ಯವೆಂದು | ವನಿತೆ ನೀ ಪೇಳ್ದುದನು ||
ಮನಕೆ ತಾರದಿನಿತು ನಿನ್ನ | ಮುನಿದು ಕೊಲಿಸಿದೆನು   ||೧೪೪||

ಕೋಕದಾ ಪಯೋಧರಯುಗಳೆ | ಕೋಕಿಲಸುಗಾನೆ ||
ಶೋಕಾಬ್ದಿಯೊಳೆನ್ನ ನಿಂತು | ನೂಕಿ ಪೋಪರೇನೆ      ||೧೪೫||

ಭಾಮಿನಿ

ದಶರಥಾತ್ಮಜನಿಂತು ಶೋಕದಿ |
ಬಸವಳಿದು ಧರಣಿಯಲಿ ಮೂರ್ಛಾ |
ವಶದಿ ಬಿದ್ದಿರೆ ಕಂಡು ಭರತಾದಿಗಳು ಕಳವಳಿಸೆ ||
ಬಿಸಜಸಂಭವಸುತನು ಬಳಿಕೀ |
ಗಸಣಿಯನು ಕಾಣುತ್ತ ಮೆಲ್ಲನೆ |
ವಸುಮತೀಶನ ಸಂತವಿಡುತುಸಿರಿದನು ಸಾಮದಲಿ    ||೧೪೬||

ರಾಗ ಬೇಗಡೆ ಅಷ್ಟತಾಳ

ಲಾಲಿಸು ದೇವ ಸರ್ವಾತ್ಮ ಗೋವಿಂದ |
ನೀಲಮೇಘಶ್ಯಾಮ ನಿಜ ನಿತ್ಯಾನಂದ ||
ಪೇಳಿ ವೇದಗಳಂತ್ಯಕಾಣವು ನಿನ್ನ |
ಮೂಲಚಾರಿತ್ರದ ನೆಲೆ ವಿಶ್ವಪೂರ್ಣ ||೧೪೭||

ನರನಾಟಕವು ನಿನಗೇಕಿಂತು ಬರಿದೆ |
ಪರಮಾತ್ಮನೆಂಬ ಭಾವವು ನಿನಗರಿದೆ ||
ಧರಣಿಜೆಯಿಂದೇನು ರಾಜ್ಯದಿಂದೇನು |
ನೆರೆ ಮಾಯದಾಯವೆಂದರಿಯೆಯ ನೀನು    ||೧೪೮||

ಶೋಕ ಮೋಹವು ಹೊದ್ದದಂಥ ಚಿನ್ಮಯನು |
ಏಕೀ ವಿಷಾದವನಾನುವೆ ನೀನು ||
ಸಾಕೆಂದು ಬಹುಪರಿಯಿಂದ ಜಾಂಬವನು |
ಭೂಕಾಂತ ರಾಮನನೊಡಬಡಿಸಿದನು        ||೧೪೯||

ಪರಿವರ್ಧಿನೀ

ಇತ್ತಲು ವನದಲಿ ಮೂರ್ಛೆಯ ತಿಳಿದೇ |
ಳುತ್ತಲೆ ಜನಕನೃಪಾಲಾತ್ಮಜೆ ಶಿರ |
ವೆತ್ತಿ ಸುಮಿತ್ರಾಸಂಭವನಿಲ್ಲದಿಹುದನುರೆ ಕಾಣುತಲಿ ||
ಚಿತ್ತದಿ ಸಂತಾಪವ ತಳೆವುತ್ತ ಮ |
ಹತ್ತರ ಶೋಕದಿ ಬಾಯ್ಬಿಟ್ಟೊರಲಿದ |
ಳೆತ್ತಲಿದೆಂಬುದನರಿಯದೆ ಹಿಂಡನಗಲಿದ ಹರಿಣಿಯಂತೆ          ||೧೫೦||