ರಾಗ ಭೈರವಿ ಏಕತಾಳ

ಹಿಂದೆ ವನದೊಳಿರಲೆನ್ನ | ದಶ | ಕಂಧರನೊಯ್ಯಲಿಕವನ ||
ಕೊಂದು ನೀ ಬಿಡಿಸಿದೆ ಸೆರೆಯ | ಮುನಿ | ದಂದವಿದೇನಿಂದೆರೆಯ         ||೧೫೧||

ರಾಘವ ಹಾ ರಣಧೀರ | ಗುಣ | ಸಾಗರ ಸಾಧುವಿಚಾರ ||
ಈ ಘನ ವಿಪಿನಮಧ್ಯದಲಿ | ಇನ್ನು | ಹೇಗೆ ಜೀವಿಸಲಿ ಸದ್ಯದಲಿ  ||೧೫೨||

ಎತ್ತಲು ನೋಡಿದಡತ್ತ | ಬಲು | ಕತ್ತಲೆ ಕವಿದಿದೆ ಸುತ್ತ ||
ಗೊತ್ತನದೇನೆಂದರಿಯೆ | ಕಾ | ಲೆತ್ತಿಡೆ ಮುಳ್‌ಗಳು ಸುರಿಯೆ     ||೧೫೩||

ಆರಿಡುತಿಹವು ಭೀಕರದಿ | ಬಲು | ಘೋರ ಮೃಗಂಗಳು ಭರದಿ ||
ದಾರಿಯನರಿಯೆನು ಶಿವನೆ | ಇದ | ನ್ನಾರಿಗೆ ಪೇಳಲಿ ಭವನೆ     ||೧೫೪||

ವಾರ್ಧಕ

ಪರಮಶಿವ ಶಂಕರ ತ್ರಿಯಂಬಕ ತ್ರಿಶೂಲಧರ |
ಹರ ನೀನೆ ಗತಿಯೆಂದು ಸೀತೆ ಕಂಗಾಣದುರು |
ತರ ಶೋಕದಿಂದಲಾ ವನಮಧ್ಯದೊಳ್ ಮರುಗುತಿರ್ದ ತತ್ಸಮಯಕಂದು ||
ಗಿರಿಜಾತೆ ಸಹಿತ ಪಶುಪತಿಯಂತರಿಕ್ಷದೊಳ್ |
ಬರುತಿರಲು ಕೇಳಿ ಪಾರ್ವತಿ ಕಾಂತನಂ ನಿಲಿಸಿ |
ಕರುಣಕೀಡಾಗಿ ಕಾಣುತಲೀಕೆಗಾದ ವಿಧಿಯಂ ಶರ್ವನೊಡನೆಂದಳು       ||೧೫೫||

ರಾಗ ನೀಲಾಂಬರಿ ಏಕತಾಳ

ಕಾಂತ ಲಾಲಿಸುವುದಿತ್ತ | ಈ ಸತಿಗೆ ಬಂ | ದಾಂತುಕೊಂಡಿರುವಾಪತ್ತ ||
ಎಂತೀಕೆ ಸೈರಿಪಳು | ಗರ್ಭಿಣಿಯಾಗಿ | ಕಾಂತಾರಮಧ್ಯದೊಳು ||೧೫೬||

ಹಿಂದೆನ್ನ ದಶಶಿರಗೆ | ನೀವೀಯಲೊ | ಯ್ವಂದಿಂತು ನಾನು ಕೂಗೆ ||
ಇಂದಿರೆಯಾದಿವಳು | ಮತ್ತಿದ ಹರಿ | ಗೆಂದು ತಾ ಬಿಡಿಸಿದಳು   ||೧೫೭||

ಆರ ನಾಮವದರಿಕೆ | ನಿಮ್ಮ ಚಿತ್ತಕೆ | ಆ ರಾಮನರಸಿ ಈಕೆ ||
ದಾರಿಯ ಇವಳಿಗೊಂದ | ತೋರಲು ಬೇಕು | ಭೂರಿ ಕಾರುಣ್ಯದಿಂದ      ||೧೫೮||

ರಾಗ ಕೇದಾರಗೌಳ ಝಂಪೆತಾಳ

ಪಾರ್ವತಿಯ ನುಡಿ ಕೇಳುತ | ಬಳಿಕಲಾ | ಶರ್ವನುಸಿರಿದನು ನಗುತ ||
ಸರ್ವಯತ್ನದೊಳಿವಳನು | ಕರುಣ ಮಿಗೆ | ನಿರ್ವಹಿಸಿ ರಕ್ಷಿಸುವೆನು        ||೧೫೯||

ನಿನ್ನಿಂದಲಧಿಕವೆನಲು | ಈ ಕಮಲೆ | ಎನ್ನನುರೆ ಕಾದಿರ್ಪಳು ||
ಮನ್ನಣೆಯ ಮಾತಿದಲ್ಲ | ಕೇಳೆಲೆ ಅ | ಪರ್ಣೆ ಪೂರ್ವದಲದೆಲ್ಲ   ||೧೬೦||

ಭಸ್ಮಾಸುರಗೆ ವರವನು | ನಾನಿತ್ತು | ವಿಸ್ಮಯದೊಳೋಡುವುದನು ||
ಸಸ್ಮಿತದಿ ಪೇಳ್ದುಪತಿಗೆ | ಸಲಹಿರ್ಪ | ಳೀ ಸ್ಮರಣೆ ಮರೆಯದೆನಗೆ         ||೧೬೧||

ಇಂತೆಂದು ಪೇಳ್ದಗಜೆಯ | ಸಂತವಿಸಿ | ಮುಂತಹುದಕಮರಮುನಿಯ ||
ಚಿಂತಿಸಲ್ಕಾಗಬಂದು | ಪದಕೆರಗಿ | ನಿಂತಿರಲು ಪೇಳ್ದನಂದು    ||೧೬೨||

ರಾಗ ಸಾವೇರಿ ಅಷ್ಟತಾಳ

ಕೇಳಯ್ಯ ಸುರಮುನಿನಾಥ | ನಾನು | ಪೇಳುವುದೊಂದು ಪ್ರಖ್ಯಾತ       || ಪಲ್ಲವಿ ||

ರಾಮನರಸಿ ಸೀತೆಯಿವಳು | ನೋಡ | ಲಾ ಮಹಾಲಕ್ಷ್ಮೀಯಾಗಿಹಳು ||
ನೀ ಮನತಂದೀಕೆಗೊಂದು ಮಾರ್ಗವನು | ನೇಮಿಸಿ ರಕ್ಷಿಸಬೇಹುದೀ ಸಮಯದಿ   ||೧೬೩||

ಪೋಗು ನೀನಾಕೆಯಿರ್ಪೆಡೆಗೆ | ಬಹು | ಬೇಗದೊಳೆನುತಲಾ ಕಡೆಗೆ ||
ನಾಗಭೂಷಣ ದೇವಋಷಿಯನು ಕಳುಹಿಸಿ | ಸಾಗಿದನೊಡನಿತ್ತ ಪಾರ್ವತಿಸಹಿತಲಿ ||೧೬೪||

ರಾಗ ಸಾಂಗತ್ಯ ರೂಪಕತಾಳ

ಇತ್ತ ನಾರದಮುನಿನಾಥನ ಬರವ ಕಾ | ಣುತ್ತಲಿ ಜನಕನಂದನೆಯು ||
ಉತ್ತಮರೆಂದರಿದಾರು ನೀವೆನಲೆರ | ಗುತ್ತ ಬಿನ್ನಹವ ಮಾಡಿದನು        ||೧೬೫||

ಲಾಲಿಪುದೆಲೆ ತಾಯೆ ಸೃಷ್ಟಿ ಕರ್ಮವನಾಂತ | ನಾಳಿಕೋದ್ಭವನೆನ್ನ ಪಿತನು ||
ಈ ಲೋಕದೊಳಗೆಲ್ಲ ನಾರದನೆನುತಲಿ | ಪೇಳಿಕೊಂಡಪರು ಮತ್ತೆನಗೆ   ||೧೬೬||

ಪರಮಪುಣ್ಯಾತ್ಮೆ ಪತಿವ್ರತೆ ರಾಘವ | ನರಸಿ ನೀನಾಗಿರ್ದೀ ವನದಿ ||
ನೆರೆ ಶೋಕವಾಂತಿರ್ಪ ಕಾರಣವೇನೆನ | ಲರುಹಿದಳ್ ತನ್ನ ಸಂಗತಿಯು ||೧೬೭||

ಮುನಿರಾಯ ಕೇಳ್ ಬೇಟೆಗೆಂದು ರಾಘವ ತನ್ನ | ಅನುಜರು ಸಹಿತ ಪೋಗಿರಲು ||
ದನುಜೆ ಕೃತ್ರಿಮದಿ ಸಾಲ್ತಲೆಯಸುರನ ಪಠ | ವನೆಯೆನಗಿತ್ತಡಗಿದಳು     ||೧೬೮||

ಬಳಿಕ ವಲ್ಲಭನಯ್ದೆ ಕಾಣುತ್ತ ಪಠವನ್ನು | ತಳಿದು ಕೋಪದೊಳೆನ್ನ ಕೊಲಲು ||
ಕಳುಹಿದನೀ ಮಹಾ ಘೋರಾರಣ್ಯಕೆ ಪೃಥ್ವಿ | ಬಲನಾದ ಸೌಮಿತ್ರಿಯೊಡನೆ         ||೧೬೯||

ಕಡಿವೆನು ಕೊರಳನೆಂದೆನುತ ಸೌಮಿತ್ರಿಯು | ಖಡುಗವ ಝಳಪಿಸಲದರ ||
ನಡುವೆ ಬಿಂಬಿಸಿದುದು ಶಿಶುಪಿಂಡವದ ಕಂಡು | ನಡೆದನೆನ್ನನು ಬಿಟ್ಟು ಪುರಕೆ      ||೧೭೦||

ಹಿಂಡನಗಲ್ದ ಹುಲ್ಲೆಯ ತೆರನಾಯ್ತೆನ್ನ | ಕಂಡು ರಕ್ಷಿಸುವರಾರಿನ್ನು ||
ಅಂಡಿಕೊಂಡಿದೆ ಗರ್ಭವದರಲ್ಲಿ ಮುಂದೇನ | ಕಂಡಿರುವನೊ ಸಾಂಬಶಿವನು        ||೧೭೧||

ಕ್ಷಿತಿಯೊಳು ಜನಕನ ಸುತೆಯು ಮೇಣ್ ಸೊಸೆ ದಶ | ರಥನಿಂಗೆ ರಾಘವನರಸಿ ||
ಮಿತಿಯಿಲ್ಲ ಸಂಪದಕಾದರೇನದು ಪೂರ್ವಾ | ರ್ಜಿತವಿಧಿ ಬಿಡಲಿಲ್ಲ ಬೆನ್ನ   ||೧೭೨||

ರಾಗ ಯರಕಲಕಾಂಭೋಜಿ ಅಷ್ಟತಾಳ

ಎಂದು ಶೋಕದಿ ಬಿಕ್ಕಿ ಬಿರಿದಳುತಿರಲು ನಾ | ರಂದ ಮೌನೀಶ್ವರನು ||
ನಿಂದು ಕಾರುಣ್ಯದಿ ನುಡಿದನು ನಿಮಿಕುಲ | ನಂದನೆಯೊಡನೆ ತಾನು     ||೧೭೩||

ಎಲೆ ತಾಯಿ ಲಾಲಿಸು ಏಕೆ ನೀ ಸುಮ್ಮನೆ | ಹಲವು ಯೋಚಿಸುವೆ ಹೀಗೆ ||
ತಿಳುಹುವೆ ನಾ ವಾಸಕೊಂದು ಸುಸ್ಥಳವದ | ನೆಲೆಯಹುದದು ನಿನಗೆ     ||೧೭೪||

ಜನನಿ ಕೇಳುವ ಕಾಲಕ್ಕೇನು ಬಹುದದ | ನನುಭವಿಸದೆ ತೀರದು ||
ತ್ರಿಣಯನು ಭಿಕ್ಷುವಾಗನೆ ಹಿಂದೆ ಸುಮ್ಮನಿ | ನ್ನೆಣಿಸಿದರೇನಹುದು         ||೧೭೫||

ಇಹನು ವಾಲ್ಮೀಕಿಯೆಂದೆಂಬ ಮುನೀಂದ್ರನು | ಬಹಳ  ಸಮೀಪದಲಿ ||
ಬಹು ಸುಕೃತಿಯು ಕೃಪಾವಂತ ಸತ್ಯಾತ್ಮಕ | ನಹನು ಕೇಳ್ ತಾಯೆಯಿಲ್ಲಿ          ||೧೭೬||

ರಾಗ ಪೂರ್ವಿ ಏಕತಾಳ

ಆ ಋಷಿಯಾಶ್ರಮಕಾಗಿ | ಪೋಗು ನೀನು | ಈಗ |
ತೋರಿಸುವೆ ಮಾರ್ಗವ ಸಂ | ಶಯವೇನು ||
ಭೂರಿ ಪುಣ್ಯವಂತ ಸತ್ಯ | ನಿಧಿಯು ತಾನು | ನಿನ್ನ |
ಪಾರಮಾರ್ಥಭಾವದಿಂದ | ರಕ್ಷಿಸುವನು      ||೧೭೭||

ಇಂತೆಂದು ಸಾಮದೊಳರುಹಿ | ಸೀತೆಯನ್ನು | ಸಲೆ |
ಸಂತವಿಟ್ಟು ನಾರದ ಮು | ನೀಂದ್ರ ತಾನು ||
ಅಂತಿಕದಿ ಪಥವನಿದಕೊ | ನೋಡೆನುತ್ತ | ತೋರ್ದ |
ನಂತರದಿ ಸ್ವಚ್ಛಗತಿಯ | ಸಾರ್ದನಾತ        ||೧೭೮||

ರಾಗ ಕೇದಾರಗೌಳ ಅಷ್ಟತಾಳ

ಸೀತಿಯಯ್ತಂದಿಹಳಿತ್ತಲೆಂಬುದ ಮುನಿ | ನಾಥ ವಾಲ್ಮೀಕಿಯತ್ತ ||
ತಾ ತನ್ನೊಳರಿತು ಯೋಗದಿ ಶಿಷ್ಯರ್ಗೆಂದನು | ಪ್ರೀತಿಯೊಳ್ ಮನ್ನಿಸುತ ||೧೭೯||

ಕೇಳಿ ಶಿಷ್ಯರು ನಮ್ಮ ವನದ ಬಾಹೆಯೊಳಿಂದು | ತ್ರೈಲೋಕ್ಯಮಾತೆ ಸೀತೆ ||
ತಾಳಿ ಶೋಕವನು ಬಂದಿರುವಳು ಕರೆತಹು | ದಾಲಸ್ಯಗೊಳದೆ ನೀವು    ||೧೮೦||

ಎನಲರಸುತ್ತ ವಟುಗಳು ಬಂದು ಕಂಡರು | ಜನಕಕುಮಾರಿಯನು ||
ವಿನಯದಿ ಕೈಮುಗಿದೆಂದರು ವಾಲ್ಮೀಕಿ | ಮುನಿಯ ನಿರೂಪವನು         ||೧೮೧||

ರಾಗ ರೀತಿಗೌಳ ಪಂಚಾಗತಿ ಮಟ್ಟೆತಾಳ

ತಾಯೆ ಮಹಾಮಾಯೆ ಲಾಲಿಸು | ರಘುಕುಲೇಂದ್ರ | ಜಾಯೆ ವಿಮಲೆ ತಾಯೆ ಪಾಲಿಸು ||
ತೋಯರುಹದಳಾಯತಾಕ್ಷಿ | ವಾಯುತನಯವಂದ್ಯಚರಣೆ     ||೧೮೨||

ಮುನಿಪ ವಾಲ್ಮೀಕಿ ನಿಮ್ಮನು | ಕರೆದು ತನ್ನಿ | ರೆನುತಲಟ್ಟಿರುವ ನಮ್ಮನು ||
ವನಕೆ ನೀವು ಬಂದ ಪರಿಯ | ಘನ ಸಮಾಧಿಬಲದೊಳರಿದು    ||೧೮೩||

ಏಳಬಹುದು ಅವರ ನಿಕಟಕೆ | ಪೊರೆವನಾ ದ | ಯಾಳುವೆಂದು ಸಂತವಿಸಲಿಕೆ ||
ಲೋಲನೇತ್ರೆ ಬಂದಳೊಯ್ಯ | ನೂಳಿಗದ ಕುವರರೊಡನೆ       ||೧೮೪||

ರಾಗ ಭೈರವಿ ಪಂಚಾಗತಿ ಮಟ್ಟೆತಾಳ

ಬಂದ ಜನಕಸುತೆಯ ಕಂಡು ಮುನಿಲಲಾಮನು |
ಕುಂದದೊಯ್ವುತಾಲಯಕ್ಕೆ ಸುಪ್ರನಿಧಿಯನು ||
ಚಂದದಿಂದ ಭೂರಿ ಭಕ್ತಿಭಾವದಿಂದಲಿ |
ವಂದಿಸುತ್ತಲುಪಚರಿಸಿದನಖಿಳ ವಿಧದಲಿ      ||೧೮೫||

ರಾಗ ನೀಲಾಂಬರಿ ರೂಪಕತಾಳ

ಜನಕಜೆ ಬಳಿಕ ಶೋಕದಿ ತಲೆಗುತ್ತಿ ಕಂ | ಬನಿಗರೆವುತ್ತ ನಿಂದಿರಲು ||
ಮನದಭಿಪ್ರಾಯವನರಿದು ಕಾರುಣ್ಯದಿ | ಮುನಿರಾಯ ಪೇಳ್ದನಿಂತೆಂದು   ||೧೮೬||

ತಾಯೆ ನಿನ್ನಯ ಮನದಭಿಮತವರಿತಿಹೆ | ಆಯಾಸಗೊಳದಿರು ಬರಿದೆ ||
ತೋಯಜಾಂಬಕಿ ನಿನ್ನ ಉದರದೊಳ್ ಜನಿಸುವ | ಆಯುವಂತನು ಕುಮಾರಕನು ||೧೮೭||
ದೇವ ರಕ್ಷಣ್ಯ ಅನಾಥರಿಗೆಂಬುದ | ದೇವಿ ನೀ ನೋಡಿದೆಯಲ್ಲ ||
ಸಾವಧಾನದಲಿರು ಪುತ್ರಿಯ ಭಾವದಿ | ಓವಿ ಪಾಲಿಪೆನು ಕೇಳವ್ವ          ||೧೮೮||

ಇಂತೆಂದು ಮಿಥಿಲೇಂದ್ರಸುತೆಯೊಳು ಬಳಿಕ ತತ್ | ಕಾಂತೆಯ ಪರಿಚರ್ಯಕೆಂದು ||
ಸಂತಸ ಮಿಗೆ ಮುನಿವಧುಗಳನೊಲಿದಿತ್ತು | ಸಂತವಿಟ್ಟನು ಮುನಿವರನು  ||೧೮೯||
ತುಂಬಿತು ನವಮಾಸ ಪ್ರಸವವೇದನೆ ಮೆಯ್ಯೊಳ್ | ಮುಂಬರಿದುದು ಜನಕಜೆಗೆ ||
ಹಂಬಲಿಸುತ್ತ ರಾಮನನು ಕುಳ್ಳಿರೆ ಕೇಳ್ದ | ರಂಬುಜಾಂಬಕಿಯರಿಂತೆಂದು ||೧೯೦||

ರಾಗ ಮಧುಮಾಧವಿ ಏಕತಾಳ

ಮಲ್ಲಿಕಾಸುಮಂದಹಾಸೆ | ಫುಲ್ಲತಿಲಸುಮನಾಸೆ |
ಫುಲ್ಲನೇತ್ರೆ ನಿನ್ನ ದೇಹ | ದಲ್ಲಿ ನೋಡಲು ||
ಇಲ್ಲ ಸ್ವಸ್ಥವೆಂಬುದೆಮ | ಗೆಲ್ಲರಿಗೆ ತೋರಿಬರುವ |
ದುಳ್ಳಡುಸಿರೆಂದರ್ ಮುನಿ | ವಲ್ಲಭೆಯರು     ||೧೯೧||

ಕೇಳಿರವ್ವ ಘನವಿದಾಯ್ತು | ಪೇಳಲೊಲ್ಲೆ ನಿಮ್ಮೊಳಿನಿತು |
ಮೇಳವಿಸಿದ ವೇದನೆಯ | ತಾಳಲಾರೆನು |
ಆಳಿದಾ ರಾಮನ ಕರುಣ | ದೇಳಿಗೆ ಯಾವಾಗಲಹುದೊ |
ಶೂಲಪಾಣಿಬಲ್ಲನೆಂದ | ಳಾ ಲತಾಂಗಿಯು   ||೧೯೨||

ವಾರ್ಧಕ

ಸೀತಾಂಗನೆಯ ಬೇಸರಂ ತಿಳಿದು ಮುನಿಸತಿಯ |
ರೋತು ಮಣಿ ಮಂತ್ರೌಷಧಿಯನೆಸಗೆ ಬಳಿಕ ಸುಮ |
ಹಾತಿಶಯ ಶುಭಲಗ್ನದೊಳ್ ಪಡೆದಳರ್ಭಕನ ಇನಬಿಂಬಸಮರುಚಿರನ ||
ಜಾತಕರ್ಮಾದಿ ಸಂಸ್ಕಾರಂಗಳಂ ಪರಮ |
ಪ್ರೀತಿಯಿಂದಲಿ ರಚಿಸಿ ವಾಲ್ಮೀಕಿಮುನಿವರಂ |
ಖ್ಯಾತಿಯಿಂ ಲವನೆಂದು ನಾಮಧೇಯವನಿಟ್ಟು ಕರೆದನದನೇಂ ಪೇಳ್ವೆನು ||೧೯೩||

ರಾಗ ಜೋಗುಳ ಅಷ್ಟತಾಳ

ದಿವಸ ಹನ್ನೊಂದರೊಳ್ ಮುನಿಸುದುತಿಯರು |
ತವತವಗಯ್ತಂದು ಕುಸುಮನೇತ್ರೆಯರು ||
ಲವಕುಮಾರಕನ ಸಂತಸದಿ ತೊಟ್ಟಿಲೊಳಿಟ್ಟು |
ವಿವಿಧ ರಾಗಗಳಿಂದ ಪಾಡಿ ತೂಗಿದರು || ಜೋ ಜೋ  ||೧೯೪||

ಜೋ ಜೋ ಮಿಥಿಳೇಂದ್ರಜಾಸುಕುಮಾರ |
ಜೋ ಜೋ ತನುಕಾಂತಿನಿರ್ಜಿತಮಾರ ||
ಜೋ ಜೋ ವಾರಿಧಿಸದೃಶಗಂಭೀರ ||
ಜೋ ಜೋ ರಘುವಂಶವನರುಹ ಸೂರ | ಜೋ ಜೋ  ||೧೯೫||

ಚಾರುಚಂಪಕಸುಮನಾಸನೆ ಜೋ ಜೋ |
ಸಾರಸನೇತ್ರ ಸುಹಾಸನೆ ಜೋ ಜೋ ||
ಭೂರಿಸಾಹಸ ಶುಭಗಾತ್ರನೆ ಜೋ ಜೋ |
ಶಾರದಿಂದೂಪಮವಕ್ತ್ರನೆ ಜೋ ಜೋ || ಜೋ ಜೋ   ||೧೯೬||

ಭಾಮಿನಿ

ತೂಗಿ ಶಿಶುವನು ಪರಸಿ ಕೆಳದಿಯ |
ರಾಗ ತಂತಮ್ಮಾ ದಳಾಲಯ |
ಕಾಗಿ ಗಮಿಸಿದರಿತ್ತಲೊಂದಿನ ಜನಕನಂದನೆಯು ||
ಯೋಗಿವರ್ಯನ ವಶದಿ ಮಲಗಿಸಿ |
ಬೇಗ ತೊಟ್ಟಿಲೊಳೊಡನೆ ಮಗುವನು |
ಸಾಗಿದಳು ಸ್ನಾನಾಭಿಕಾಂಕ್ಷೆಯೊಳುರೆ ಸರೋವರಕೆ    ||೧೯೭||

ರಾಗ ಸೌರಾಷ್ಟ್ರ ಏಕತಾಳ

ಧರಣಿನಂದನೆ ಸರೋವರಕಾಗಿ ಬರಲಲ್ಲಿ | ನೆರೆದ ಕೋಡಗವಿಂಡು ತಮ್ಮ ||
ಮರಿಗಳನಪ್ಪಿ ತುಪ್ಪಿರಿದು ಮುದ್ದಾಡುವ | ಪರಿಯನೀಕ್ಷಿಸುತ ಪೇಳಿದಳು   ||೧೯೮||

ವ್ಯಾಮೋಹವೆಂತುಟೊ ಮೃಗಜಾತಿಗಾದರು | ಪ್ರೇಮದಿ ತಮ್ಮ ಬಾಲಕರ ||
ಮಾಮಾ ಕೊಂಡಾಡುವುದಿನಿತಾದ ಮೇಲೆನ್ನ | ಕೋಮಲನನು ಬಿಡಬಹುದೆ        ||೧೯೯||

ಎಂದು ಬೇಗದಿ ಪರ್ಣಶಾಲೆಯ ಬಳಿಗಾಗಿ | ಬಂದು ತೊಟ್ಟಿಲೊಳಿರ್ಪ ಶಿಶುವ ||
ಚಂದಿರಮುಖಿ ಕೊಂಡು ಪುನರಪಿ ಸ್ನಾನಕ | ಯ್ತಂದಳು ಸರಸಿಯಿದ್ದೆಡೆಗೆ  ||೨೦೦||

ರಾಗ ಕಾಂಭೋಜಿ ಝಂಪೆತಾಳ

ಇತ್ತ ತೊಟ್ಟಿಲಲಿ ಶಿಶುವಿಲ್ಲದಿರೆ ಕಂಡು ಮುನಿ | ಪೋತ್ತಮನು ಮನದಿ ಕಳವಳಿಸಿ ||
ಮತ್ತಕಾಶಿನಿ ಸೀತೆಗೇನೆಂಬೆನೆಂದು ಮರು | ಗುತ್ತ ತನ್ನೊಳಗೆ ಪೇಳಿದನು ||೨೦೧||

ಪತಿಯನಗಲಿದ ಶೋಕವನು ಪುತ್ರನುದ್ಭವದಿ | ಮತಿವಂತೆ ಮರೆತಿರ್ಪಳೀಗ ||
ಖತಿಯಿಂದ ಶಾಪವನು ಕೊಡದೆ ಮಾಣಳು ಮುಂದೆ | ಗತಿಯೇನನೆಸಗಿದಪೆನೆನುತ         ||೨೦೨||

ಆಲೋಚನೆಯ ಗೆಯ್ದು ಕುಶವ ಮಂತ್ರಿಸಿ ದಿವ್ಯ | ಬಾಲಕನ ತೆರದಿಂದಲೆಸಗಿ ||
ಚಾಳೈಸದಂತೆ ಮಲಗಿಸಿದನಾ ತೊಟ್ಟಿಲೊಳು | ಪೇಳಲೇನಾಶ್ಚರ್ಯವದನು       ||೨೦೩||

ಬಂದು ವರಕಾಸಾರದಿಂದ ತೊಟ್ಟಿಲೊಳಿರುವ | ನಂದನನ ಕಂಡು ಜಾನಕಿಯು ||
ಎಂದಳೇನಿದು ಚೋದ್ಯ ತಂದೆ ಮುನಿಪತಿ ಪೇಳು | ಕಂದನಿವನಾರೆಂದೆನುತಲಿ    ||೨೦೪||

ಎನಲೆಂದನೆಲೆ ತಾಯೆ ನಿನಗಾಗಿ ದರ್ಭೆ ಕೂ | ರ್ಚನು ಮಂತ್ರಿಸಲ್ಕಾದನಿವನು ||
ತನಯ ನಿನಗೀತನೆಂದೆನುತ ಸೀತೆಯ ವಶದಿ | ಮುನಿರಾಯನಿತ್ತು ಮಗುಳುಸಿರ್ದ          ||೨೦೫||

ಹಿರಿಯಾತನಿವ ಲವನು ಕಿರಿಯಾತನಿವ ಕುಶದಿ | ವಿರಚಿಸಿದ ಕಥನದಿಂ ಕುಶನು ||
ಸರಸಿಜಾಂಬಕಿ ನಿನ್ನ ತರಳರಿವರಿರ್ವರೆನೆ | ಹರುಷದಿಂಪೊರೆದಳರ್ಭಕರ ||೨೦೬||

ರಾಗ ಪಂತುವರಾಳಿ ಪಂಚಾಗತಿ ಮಟ್ಟೆತಾಳ

ಆಡಿದರ್ ಬಾಲಲೀಲೆಯ | ಲವಕುಶರು       || ಪಲ್ಲವಿ ||

ರೂಢಿಗಿದು ವಿಚಿತ್ರವೆನಲು | ಪ್ರೌಢಿಯಿಂದ ಶಿಶುತನದಲಿ         || ಅ. ಪಲ್ಲವಿ ||

ಬೆಟ್ಟ ಪೀರಿ ತನ್ನ ತಾಯ | ಬಟ್ಟ ಮೊಗವ ನೋಡಿ ನಗುತ |
ತೊಟ್ಟಿಲಲ್ಲಿ ನಲಿವುತೊಡನೆ | ದಟ್ಟಡಿಗಳನವನಿಗಿಡುತ |
ತಟ್ಟಿ ಕಯ್ಯ ಚಪ್ಪಾಳಿಕ್ಕುತ || ತಮ್ಮೊಳೀರ್ವ |
ರೊಟ್ಟುಗೂಡಿಕೊಂಡು ಸೊಕ್ಕುತ | ನೋಳ್ಪ ಜನರಿ |
ಗಿಷ್ಟರೆನಿಸಿ ಮುನಿಗಳಿಗೆ ಸಂ |
ತುಷ್ಟಿಯನ್ನು ಮನಕೆ ಮಾಡಿ || ಆಡಿದರ್      ||೨೦೭||

ರಾಗ ಭೈರವಿ ಝಂಪೆತಾಳ

ಬಳಿಕ ವಾಲ್ಮೀಕಿಮುನಿ | ತಿಲಕನಾ ಕುವರರಿಂ |
ಗೊಲಿದು ಮಣಿ ಕಾಂಚನೋ | ಜ್ಜ್ವಲಭೂಷಣವನು      ||೨೦೮||

ತರಿಸಿ ಸುರಪುರದಿಂದ | ಪರಸಿ ಬಾಲರಿಗಲಂ |
ಕರಿಸಿ ಸೀತೆಗೆ ತೋರ್ದ | ಹರುಷಪೂರದಲಿ  ||೨೦೯||

ತನಯರನು ಕಾಣುತಲಿ | ಘನಹರುಷದಿಂದಪ್ಪಿ |
ಮುನಿಯ ಕೊಂಡಾಡಿದಳು ಮನದಣಿಯಲಂದು        ||೨೧೦||

ರಾಗ ಮಾರವಿ ಏಕತಾಳ

ದಿನದಿನಕಾ ಬಾಲರು ಸಿತಪಕ್ಷದ | ವನರುಹರಿಪುವಂತೆ ||
ತನುಬಳೆವುತಲಿರ್ದರು ವೈದೇಹಿಯ | ಮನಕೆ ಹರುಷವಿತ್ತು      ||೨೧೧||

ಐದು ವರ್ಷಕಕ್ಷರದಾರಂಭವ | ನಯ್ದೆ ಕುಮಾರರಿಗೆ ||
ವೈದಿಕವಿಧಿಯಲೆಸಗಿ ಉಪನಯನವ | ಗೆಯ್ದನದರ ಮೇಲೆ      ||೨೧೨||

ವಾರ್ಧಕ

ಬಳಿಕಾ ಕುಮಾರರಿಂಗುರೆ ಧನುರ್ವೇದಾದಿ |
ಗಳನಯ್ದೆ ಸಂಗೀತ ಪದ್ಯಾದಿ ವಿದ್ಯೆಯಂ |
ಲಲಿತವೀಣಾಭ್ಯಾಸಮಂ ರಾಮಚಾರಿತ್ರಕಥನಮಂ ಸಾಂಗದಿಂದ ||
ಒಲಿದು ಮುನಿನಾಥನುಪದೇಶಿಸಿದ ಮಾತ್ರದೊಳ್ |
ಕಲಿತರೇಂ ಮೇಧಾತಿಶಯಮುಳ್ಳರೆಂಬುದಂ |
ತಿಳಿಯಲರಿದೆಂಬಂತೆ ಶೋಭಿಸುತಲಿರ್ದರವರೇನೆಂಬೆನಚ್ಚರಿಯನು      ||೨೧೩||

ಮೊದಲನೆ ಸಂಧಿ ( ಪಠದ ಸಂಧಿ) ಮುಗಿದುದು