ಎರಡನೆ ಸಂಧಿ : ಲವಕುಶರ ಕಾಳಗ

ಭಾಮಿನಿ

ಮುನಿಗಳಿರ ನೀವ್ ಕೇಳಿ ಬಳಿಕೊಂ |
ದಿನದಲಾ ಲವಕುಶಕುಮಾರರು |
ವಿನಯ ಮಿಗೆ ವಾಲ್ಮೀಕಿಯಂಘ್ರಿಗೆ ನಮಿಸಿ ಕೈ ಮುಗಿದು ||
ವನದಿ ಮೃಗಗಳ ಬೇಟೆಯಾಡುವ |
ಮನವಿಹುದು ನಮಗಪ್ಪಣೆಯ ಕೊಡಿ |
ರೆನಲು ಬೇಡೆಂದೆನುತಲಾ ಋಷಿವರ್ಯನುಸಿರಿದನು   ||೨೧೪||

ರಾಗ ಕಾಪಿ ಅಷ್ಟತಾಳ

ಚಂದವಾಯ್ತಯ್ಯ ನಿಮ್ಮಿರವು | ಬೇಟೆ | ಗೆಂದು ಪೋಗುವಿರಿ ಸೌಭಾಗ್ಯಕ್ಕೆ ವರವು ||
ಹೊಂದಿ ನೀವೆಮ್ಮಲಿರ್ದುದಕೆ | ಕೀರ್ತಿ | ಬಂದಪುದೆಮಗೆ ನಿಮ್ಮನು ಸಾಕಿದುದಕೆ   ||೨೧೫||

ಸದರವಲ್ಲಿದು ಬೇಟೆ ನೋಡೆ | ಬಹು | ವಿಧದ ಮಾಯವ ಬಲ್ಲರಿಹರಲ್ಲಿ ಕೂಡೆ ||
ಅದರೊಳೊರ್ವಳು ಶತ್ರುವಿಹಳು | ನೀವಿ | ರ್ಪುದನಿಲ್ಲಿ ಬಲ್ಲಳು ಸಾಧಿಸದಿರಳು     ||೨೧೬||

ಮಾತ ಕೇಳುವರು ನೀವಲ್ಲ | ಪೇಳು | ಸೀತೆ ನಿನ್ನಯ ಮಕ್ಕಳಿಗೊಂದು ಸೊಲ್ಲ ||
ಈ ತೆರದವಿವೇಕ ಸಲ್ಲ | ವೆಂದು | ನೀ ತಿಳಿದಷ್ಟನು ಪೇಳಬೇಕಲ್ಲ         ||೨೧೭||

ರಾಗ ಸೌರಾಷ್ಟ್ರ ಅಷ್ಟತಾಳ

ಬೇಡವೈ ಸುತರಿರ ಮೃಗಬೇಟೆಯೆಂಬುದು | ಕೇಳಿರಯ್ಯ || ಹಿಂದೆ |
ಕೇಡು ಬಂದಿರ್ಪುದು ಬಹು ಜನಕದರಿಂದ | ಕೇಳಿರಯ್ಯ ||೨೧೮||

ಆಡಿದ ಮಾತಿದು ಪುಸಿಯಲ್ಲ ಋಷಿಗಳು | ಕೇಳಿರಯ್ಯ || ನಿಮ್ಮ |
ನೋಡಿದಡಸುರೆ ಕೊಂಡೊಯ್ಯದೆ ಮಾಣಳು | ಕೇಳಿರಯ್ಯ       ||೨೧೯||

ಹಿಂದೆ ನಾ ಬಹುಪರಿ ದಣಿದಿರ್ಪೆನವಳಿಂದ | ಕೇಳಿರಯ್ಯ || ಪೋದ |
ರಿಂದು ನಿಮ್ಮನು ಕಂಡರೇನ ಮಾಳ್ಪಳೊ ಕಾಣೆ | ಕೇಳಿರಯ್ಯ    ||೨೨೦||

ಬಂದಲ್ಲದಿರದು ನೀವ್ ಪೋದರೆ ಕಲಹವು | ಕೇಳಿರಯ್ಯ || ಬೇಡ |
ಚಂದವಲ್ಲಿದು ಬುದ್ಧಿ ನಿಮಗೆಲೆ ಸುತರಿರ | ಕೇಳಿರಯ್ಯ  ||೨೨೧||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಇಂತು ವರ ವಾಲ್ಮೀಕಿ ಸೀತೆಯ | ರಂತು ನುಡಿದುದ ಕೇಳ್ದು ಲವ ಕುಶ |
ರಂತರಿಸದುಸಿರಿದರು ಶೌರ್ಯದಿ | ಪಂಥವಿಡಿದು      ||೨೨೨||

ಪರಶಿವನೆ ತಾನೊಮ್ಮೆ ನಮ್ಮೊಳು | ಧುರಕೆ ಬರೆ ನಿಮ್ಮಯ ಕಟಾಕ್ಷದಿ |
ಸರಿಯಲರಿವೆವೆ ಸಾಕು ಬಿಡಿರವ | ಳಿರವಿದೇನು        ||೨೨೩||

ಅಪ್ಪಣೆಯ ನಮಗಿತ್ತು ಕಳುಹದೆ | ಒಪ್ಪುವರು ನಾವಲ್ಲವೆನುತಲಿ |
ಅಪ್ಪಿ ಕಾಲ್ಗಳನೈದೆ ಪ್ರಾರ್ಥಿಸು | ತಿಪ್ಪವರನು ||೨೨೪||

ಕಂಡು ಕಾರುಣ್ಯದಲಿ ಮುನಿಪನು | ಖಂಡಪರಶುವ ಭಜಿಸಿ ಪಡೆದು |
ದ್ದಂಡ ಧನುಶರವಿತ್ತು ಜಯವದು | ಖಂಡಿತದೊಳು     ||೨೨೫||

ಆಗಲೈ ನಿಮಗೆನುತ ಪರಸ | ಲ್ಕಾಗಲವರಾ ಸೀತೆಯಂಘ್ರಿಗೆ |
ಬಾಗಿ ನೇಮವ ಕೊಂಡು ಮೇಣ್ ಕಲ | ಸೋಗರವನು ||೨೨೬||

ಕಟ್ಟಿ ಕೊಡೆ ಭೋಜನಕೆ ಕೊಂಡದ | ಶ್ರೇಷ್ಠಮತಿಗಳು ಪೊರಟರಾ ಕ್ಷಣ |
ಪಟ್ಟದಾನೆಯ ತೆರದಿ ತಾವಂ | ದಿಷ್ಟತೆಯೊಳು         ||೨೨೭||

ರಾಗ ಮಾರವಿ ಏಕತಾಳ

ಏನೆಂಬೆನು ನೃಪಸೂನುಗಳುರುತರ |
ಕಾನನವನು ಸುಯ್ದಾನದಿ ಪೊಕ್ಕು ಸ |
ಗಾನತನದಿ ಪಂಚಾನನ ಮುಂತಹ |
ನಾನಾ ಮೃಗಗಳ ಹಾನಿಯಗೆಯ್ದರ | ದೇನನೆಂಬೆ      ||೨೨೮||

ಪೂರುವ ದಕ್ಷಿಣ ತೋರುವ ಪಡುವೆಂ |
ಬೀರೀತಿಯೊಳಿಹ ಮೂರು ದೆಸೆಯ ಸಂ |
ಚಾರವೆಸಗಿ ಮೃಗವಾರವ ಮಥಿಸುತ |
ಭೋರನೆ ಉತ್ತರಕಾರಿಡುತಯ್ದಿದ | ರೇನನೆಂಬೆ        ||೨೨೯||

ವಾರ್ಧಕ

ವನದೊಳೀ ತೆರದಿಂದ ಮಧ್ಯಾಹ್ನ ಪರಿಯಂತ |
ಘನತರದ ಮೃಗಬೇಟೆಯಾಡಿ ದಣಿದು ಸರೋಜ |
ವನದೊಂದನುಂ ಸಾರ್ದು ಕಾಲ್ಮೊಗಂ ತೊಳೆದು ಕುಳ್ಳಿರ್ದು ಭೋಜನವನೆಸಗಿ ||
ಜನಕಜಾಸುತರಿರ್ಪ ಸಮಯದೊಳಗಿತ್ತ ಶೂ |
ರ್ಪಣಕಾಖ್ಯೆ ತಾನಸುರೆ ಕಂಡು ಮಿಗೆ ದೂರದೊಳ್ |
ಮನದಿ ಯೋಚಿಸುತಿರ್ದಳಿವರನುಂ ಕೊಂಡೊಯ್ವ ಯತ್ನಮಂ ತನ್ನೊಳಿರದೆ       ||೨೩೦||

ರಾಗ ಕಾಂಭೋಜಿ ಝಂಪೆತಾಳ

ಅಹಹ ಸಿಕ್ಕಿದುದಿಂದು ಬಹುರುಚಿಯ ತಿನಸೊಂದು |
ಗಹನಕೀರ್ವರೆ ಬಾಲರಿವರು ||
ಬಹುದು ಚಿತ್ರವು ವೀರರಹರೊ ಬಲ್ಲವರಾರು |
ಸಹಸಿಗಳ ತೆರದಿ ತೋರುವರು     ||೨೩೧||

ಸೀತೆಯಣುಗರದಲ್ಲದೀ ತೆರದಿ ಬಹರೆಂಬ |
ರೀತಿಯನು ಕಾಣೆನೀ ವನಕೆ ||
ಮಾತನಾಡಿಸಿ ತಿಳಿದು ನಾ ತಳುವದೊಯ್ದಿವರ |
ಘಾತಿಸಿಯೆ ತಿನದಿರಲಿನ್ನೇಕೆ         ||೨೩೨||

ಈ ಹೆಣ್ಣು ಜನ್ಮವದರಿಂದಲೀ ರೂಪವನು |
ಸಾಹಸದಿ ಮರೆಸಿ ಶುಭತರದ ||
ದೇಹವನು ಧರಿಸಿ ಸಂಗೀತವಿದ್ಯೆಯೊಳಿವರ |
ಮೋಹಿಸುವೆನೀಗಳೆಂದೆನುತ        ||೨೩೩||

ಜನವಿಮೋಹನ ರೂಪವನು ತಾಳ್ದು ದನುಜೆ ಕಾ |
ನನಮಧ್ಯದಲಿ ಪಾಡುತಿದಿರು ||
ಘನ ಮುದದಲುಯ್ಯಾಲೆಯನು ತೂಗುವನುವನಾ |
ಜನಕಜಾತ್ಮಜರು ಕೇಳಿದರು ||      ||೨೩೪||

ಕೇಳುತೆಂದನು ಕುಶನೊಳಾ ಲವನು ತಮ್ಮ ನೀ |
ನಾಲಿಸಿದೆಯಾ ಧ್ವನಿಯನದರ ||
ಆಲಾಪಕುರೆ ಮನವು ಕೋಳುಹೋದುದು ನೋಳ್ಪ |
ಏಳೆನಲಿಕೆಂದನಗ್ರಜಗೆ     ||೨೩೫||

ಆಗದಾಗದು ತಿಳಿದೆ ರಾಗಭೇದಗಳಿಂದ |
ಲೀಗ ದಾನವಿಯ ಸ್ವರವೆಂದು ||
ಪೋಗೆ ಬಪ್ಪುದು ಕಲಹವೆಂದು ಕುಶನುಸಿರುತಿರ |
ಲಾಗಿರುವ ಲವನು ಪೇಳಿದನು       ||೨೩೬||

ಆದಡೇನವಳ ಶಿಕ್ಷಿಪುದೇನು ಘನವೆಮ್ಮ |
ಕಾದಿ ಬದುಕುವಳೆ ಸಾಕೆನುತ ||
ನಾದರಸ ಮಿಗಿಲೆಸೆವ ನಾಗವೇಣಿಯೊಳೆಂದ |
ನಾದರದಿ ಕುಶಸಹಿತ ಬಂದು        ||೨೩೭||

ಆರು ಪೇಳಲೆ ತರುಣಿ ರೂಪಿನಲಿ ರತಿಗೆ ನೀ |
ನೂರುಮಡಿಯಾಗಿ ತೋರುತಿಹೆ ||
ಚಾರುಗಾನದಲಿ ಗಂಧರ್ವಿಯರದೆಲ್ಲಿ ಬಹು |
ಕಾರಣಿಕೆಯೆಂದನಾ ಲವನು         ||೨೩೮||

ವನವಾಸಿಗಳು ನಮ್ಮನೇನ ಕೇಳುವಿರಿ ನಿ |
ಮ್ಮನುವಿದೇನಾರು ನೀವೆಂಬ ||
ದನುಜೆಗೆಂದರು ಬೇಟೆಗಯ್ದಿದೆವು ಜಾನಕಿಯ |
ತನಯರಾವೆಂದು ಲವಕುಶರು      ||೨೩೯||

ರಾಗ ಘಂಟಾರವ ಅಷ್ಟತಾಳ

ಚಂದವಾದುದಿನ್ನೇನೆಂಬೆ ಸೀತೆಯ |
ನಂದನರೆ ನೀವ್ ಕೇಳಿ ಬಹಳಾ | ನಂದವಾಯಿತು ಮನಸಿಗೆ    ||೨೪೦||

ನಿಂದಿರೇತಕೆ ಬನ್ನಿಯುಯ್ಯಾಲೆಯಾ |
ನಂದದಿಂದಾಡುವೆವು ನೀವ್ ಸಹಿ | ತಿಂದು ಸೌಖ್ಯದೊಳೆಂದಳು          ||೨೪೧||

ಅಸುರೆಯೆಂದುದ ಕೇಳುತ್ತ ಲವನತಿ |
ಕುಸಲದಿಂ ಲೆಕ್ಕಿಸದೆಯುಯ್ಯಲೆ | ಮಸಗುತೇರಲು ಕಾಣುತ     ||೨೪೨||

ಕುಶನು ತೂಗಿದನೇನೆಂಬೆನವನಿ ಕಂ |
ಪಿಸುವವೋಲಾಗಸತನಕ ಭಯ | ವೊಸರುವಂದದಿ ದನುಜೆಗೆ  ||೨೪೩||

ಕಂಡು ರಕ್ಕಸಿ ಖತಿಯಿಂದ ಲವನನು |
ಹಿಂಡಿ ಹೀಳುವೆನೆನುತ ಮಿಗೆ ದೋ | ರ್ದಂಡದಲಿ ಪಿಡಿದಪ್ಪುತ  ||೨೪೪||

ಕೊಂಡು ಹಾರಿದಳಂಬರಮಾರ್ಗದಿ |
ಚಂಡಿಯಂತುದ್ದಂಡತನದಲಿ | ಕಂಡು ಸುರರಚ್ಚರಿವಡೆ ||೨೪೫||

ಬಿಟ್ಟು ಪಾಶವ ಕುಶನು ದಾನವಿಯನು |
ಕಟ್ಟಿ ತಂದವನಿಯಲಿ ಕೆಡೆದುರೆ | ಮೆಟ್ಟಿದನು ಪದದಿಂದಲಿ       ||೨೪೬||

ಪೆಟ್ಟು ತಾಗಿದ ಕ್ಷಣದಲ್ಲಿ ಪಲ್ಗಳು |
ತಟ್ಟನುದುರಿಯೆ ತೊಟ್ಟಿಡಲು ಜರು | ಗುಟ್ಟಿ ರಕುತವು ಪೇಳ್ದಳು  ||೨೪೭||

ಭಾಮಿನಿ

ಎಲೆ ಕುಮಾರರಿರೆನ್ನ ಪಲ್ಗಳ |
ತಳಕಳೆದ ನಿಮ್ಮನು ರಣಾಗ್ರದಿ |
ಕೊರೆಸದಿರ್ದೊಡೆ ಹೆಂಗುಸಲ್ಲೆಂದೆನುತ ಸೂಟಿಯಲೆ ||
ಛಲದಿ ಲಂಕೆಗೆ ಬಂದು ರಾಕ್ಷಸ |
ತಿಲಕನಾದ ವಿಭೀಷಣನು ಸಭೆ |
ಯೊಳಗೆ ಕುಳ್ಳಿರೆ ಕಂಡು ದೊಪ್ಪನೆ ಕೆಡೆದಳವನಿಯಲಿ  ||೨೪೮||

ಕಂದ

ನಿಡಿಸರದಿಂದವನಿಯೊಳಡ |
ಗೆಡೆದಳಲುವ ಶೂರ್ಪಣಖೆಯನೀಕ್ಷಿಸುತಾಗಂ ||
ನುಡಿದಂ ನಿನ್ನುವನೇಂ ಗರ |
ಹಿಡಿಯಿತುಸಿರೆನ್ನುತಲಾಗಳಾ ದನುಜೇಂದ್ರಂ ||೨೪೯||

ರಾಗ ತುಜಾವಂತು ಝಂಪೆತಾಳ

ಏನಾದುದಕಟ ನಿನಗುಸಿರೆನ್ನೊಳಿಂದು |
ನೀನೇತಕೀ ತೆರದಿ ಮರುಗುತಿಹೆ ಬಂದು     || ಪಲ್ಲವಿ ||

ಮಲಗಿರ್ಪ ಮಾರಿಯನು ಛಲದಿ ಹೊಯ್ದೆಬ್ಬಿಸಿದ |
ಡುಳುಹುವುದೆ ಲೋಕವನು ನಿನ್ನನೀ ತೆರದಿ ||
ಕಲಹಿಸಿದರಾರು ಬದುಕುವರಕಟ ಸಾಕು ಸಾ |
ಕುಳಿಯದುಸಿರೆಲ್ಲವೆಂ ದೆನೆ ಪೇಳ್ದಳಂದು      ||೨೫೦||

ರಾಗ ಸಾರಂಗ ಏಕತಾಳ

ಕೇಳು ತಮ್ಮ ಬಾಲರೀರ್ವರು | ವನಕೆ ಬಂದು | ಖೂಳತನದಿ ಕೋಳುಗೊಂಡರು ||
ತಾಳಲಾರೆನವರಟ್ಟುಳಿಯನು | ಎನ್ನ ಪಲ್ಗಳು | ಕೀಳುವಂತೆ ಹೊಯ್ದರಿನ್ನೇನು      ||೨೫೧||

ಇತ್ತಲುಡಿದ ದಂತವನೆಲ್ಲ | ನೋಡು ನೋಡಯ್ಯ | ನೆತ್ತರು ಧಾರಿಡುತಿಹುದಲ್ಲ ||
ವ್ಯರ್ಥವೆನ್ನನಿಂತು ಗೆಯ್ದರು | ನೀನಲ್ಲದೆ ಸ | ಮರ್ಥನೆ ಇನ್ನಾರು ಕೇಳ್ವರು          ||೨೫೨||
ನಿನ್ನಂದದ ತಮ್ಮನಿರುತಿರೆ | ಎನಗೆ ಬಂದ | ಬನ್ನವನ್ನು ಕಾಣುತಿರುವರೆ ||
ಇನ್ನವರ ಬರಿದೆ ಬಿಟ್ಟಿರೆ | ರಾಕ್ಷಸರೆಲ್ಲ | ಹೆಣ್ಣಾಗದೆ ಪುರುಷರಹರೆ ||೨೫೩||

ಭಾಮಿನಿ

ದನುಜೆ ಶೂರ್ಪಣಖೆಯ ಛಲೋಕ್ತಿಯ |
ನನುಪಮಬಲ ವಿಭೀಷಣನು ಕೇ |
ಳ್ದನವರತ ಕಲಹದಲಿ ಪ್ರೀತಿಯದೈಸೆ ನಿನಗೆನುತ ||
ವನದೊಳಿಹ ಬಾಲರೊಳು ಯುದ್ಧವ |
ಮನದಿ ನಿಶ್ಚಯಗೊಂಡು ಮಂತ್ರೀ |
ಜನವು ಮೊದಲಾದಸುರಸೈನಿಕವೆರಸಿ ಹೊರವಂಟ    ||೨೫೪||

ರಾಗ ಮಾರವಿ ಏಕತಾಳ

ಅಸುರರ ಪಡೆ ಸಹಿತಸಮತರದ ಸಾ | ಹಸಿಕ ವಿಭೀಷಣನು ||
ದೆಸೆ ಕಂಪಿಸೆ ಬರೆ ಕುಶನೀಕ್ಷಿಸಿ ಲವ | ಗುಸಿರಿದನಿಂತೆಂದು      ||೨೫೫||

ಅಗ್ರಜ ನೋಡಸುರಾಂಗನೆ ತನ್ನ ಸ | ಮಗ್ರ ಬಲವು ಸಹಿತ ||
ವಿಗ್ರಹಕಾವ್ ಬಾಲಕರೆಂಬುದರಿಂ | ದುಗ್ರದಿ ಬರುವುದನು        ||೨೫೬||

ಇವಳ ಹರಬಕಯ್ತಂದಿವರನು ನಾ | ಕವಲುಗೊಳಿಸಿದಪೆನು ||
ತವೆ ನೀ ಪರಿಕಿಸಬೇಹುದೆನುತಲಾ | ಹವಕಯ್ದಿದ ಕುಶನು       ||೨೫೭||

ರಾಗ ಶಂಕರಾಭರಣ ಮಟ್ಟೆತಾಳ

ವೀರ ಕುಶನು ಧನುವ ಠೇಂ | ಕಾರಗೆಯ್ವುತಹಿತಸೈನ್ಯ |
ವಾರಿನಿಧಿಗೆ ವಡಬನಂತೆ | ಸಾರಿ ನಿಂತಿರೆ    ||೨೫೮||

ಆರುಭಟೆಯೊಳಸುರಬಲವು | ಭೋರನಯ್ತಂದು ದಿವಿಜ |
ವಾರ ಬೆದರುವಂತೆ ಮುತ್ತಿ | ತೇರು ಮದದಲಿ         ||೨೫೯||

ಕಾಣುತಾಗ ಕುಶನು ಕನಲಿ | ಕೌಣಪರ ಬಲೌಘವನ್ನು |
ಹೂಣೆ ಹೊಕ್ಕು ಕಾದಿ ಕೆಡಹಿ | ಚೂಣಿಯವರನು         ||೨೬೦||

ಜಾಣರಿಹರೆ ಬಹುದು ಬರಿಯ | ಮೇಣಸತ್ತ್ವದಿಂದ ಫಲವ |
ಕಾಣೆನೆನುತ ಕರೆದನೊಡನೆ | ಬಾಣವೃಷ್ಟಿಯ           ||೨೬೧||

ಅಣವ ಖತಿಯೊಳಾ ವಿಭೀ | ಷಣನ ಮಂತ್ರಿ ತಡೆದು ಕುಶನೊ |
ಳಣಕವಲ್ಲವೆಲವೊ ಬಾಲ | ಕಣನ ಮಧ್ಯದಿ    ||೨೬೨||

ಕ್ಷಣದಿ ನೋಡಬಹುದು ಕೈ | ಗುಣವನೆಂದು ಹೂಂಕರಿಸುತ |
ಕಣೆಯನಿವನ ಮೇಲೆ ಕರೆದ | ನೆಣಿಕೆಯಿಲ್ಲದೆ  ||೨೬೩||

ಭಳಿರೆ ವೀರನಹೆಯೊ ದೈತ್ಯ | ಗಳಹುತನದಿ ಚದುರ ಬಾಹು |
ಬಲವದೆಂತಡಿರ್ದಡಿರಲಿ | ತಿಳಿವೆನೆನುತಲಿ   ||೨೬೪||

ತುಳುಕಲಪರಿಮಿತದಿಬಾಣ | ಗಳನು ತಾಳಲಾರದವನು |
ತಲೆಯ ಬಾಗಿಸುತ್ತಲಿರದೆ | ಕೆಲಕೆ ಸಾರ್ದನು ||೨೬೫||

ರಾಗ ಭೈರವಿ ಅಷ್ಟತಾಳ

ಧುರದಿ ಮಂತ್ರೀಶ ತಾನು | ಸೋಲಲು ಕಾಣು | ತಿರದೆ ವಿಭೀಷಣನು ||
ಶರಚಾಪವನು ಕೊಂಡು ಬಾಲಕಗಿದಿರಾಂತು | ಭರದಿಂದಲಿಂತೆಂದನು    ||೨೬೬||

ಒಮ್ಮೆ ನೀ ಹಸುಳೆಯೆಂದು | ಬಿಟ್ಟರೆ ನಿನ್ನ | ನಮ್ಮವರೆಲ್ಲರಿಂದು ||
ಉಮ್ಮಹಗೊಳದಿರು ನೋಡೆಂದು ಕಣೆಗಳ | ಚಿಮ್ಮಿದನೇನೆಂಬೆನು        ||೨೬೭||

ಬಾಲನೆಂದವರೆನ್ನನು | ಬಿಟ್ಟಂದದಿ | ಕಾಳಗದೊಳಗೆ ನೀನು ||
ಸೋಲಿಸದಿರೆ ಅನುಮಾನವೇನೆನುತೆಚ್ಚ | ಪೇಳುವೆನೇನದನು  ||೨೬೮||

ಕುಶನಸ್ತ್ರರಾಜಿಯಲಿ | ವಿಭೀಷಣ | ನಸವಳಿದಾಜಿಯಲಿ ||
ವಸುಧೆಯೊಳ್ ಮೂರ್ಛಿಸುತ್ತೇಳುತ ಪುನರಪಿ | ಯುಸಿರ್ದನು ಚೋದ್ಯದಲಿ        ||೨೬೯||

ಭಾಮಿನಿ

ಆರು ನೀವೆಲೆ ಬಾಲರಿರ ಬಲು |
ವೀರರಹಿರಿ ನಿಧಾನಿಸಲು ಮನು |
ಜೋರಗಾಮರಲೋಕದೊಳಗೆನ್ನೊಡನೆ ಮಾರಾಂತು ||
ಹೋರಿ ಬದುಕುವರಿಲ್ಲವೆಲ್ಲರ |
ನೋರುವನೆ ಜಯಿಸಿದೆಯದಾರ ಕು |
ಮಾರನೆಂಬುದನುಸಿರಬೇಕೆನೆ ಪೇಳ್ದನಾ ಕುಶನು      ||೨೭೦||

ರಾಗ ಸಾರಂಗ ಅಷ್ಟತಾಳ

ಕಾಳಗಕ್ಕೆ ಬಂದೆಮ್ಮನು | ಸೋಲಿಸುವೆನೆಂಬೆ ನೀನು ||
ಕೇಳುವೆ ಯಾಕೆಲವೊ ನಮ್ಮ | ಮೂಲಸ್ಥಿತಿಯನು      ||೨೭೧||

ಕೇಳದನಕ ನಿಮ್ಮಿರವ | ತಾಳದೆನ್ನ ಮನವು ಸ್ಥಿರವ ||
ಜಾಳವಿಸದಿರ್ಪುದಿನ್ನು | ಪೇಳಬಹುದಿನ್ನು      ||೨೭೨||

ಆದಡೆ ಕೇಳೆಮ್ಮ ಮಾತೆ | ಮೇದಿನಿಸಂಜಾತೆ ಸೀತೆ ||
ಸಾಧುನಾಮ ಲವಕುಶರೆಂ | ದೈದೆ ಲೋಕದಿ ||೨೭೩||

ಮೇದಿನಿಯೊಳಿನ್ನಾರ್ಗೆ ನಿಮ್ಮೊಳ್ | ಕಾದುವ ಸಾಮರ್ಥ್ಯವಿಹುದು ||
ಮೋದವಾಯ್ತು ಕೇಳಿದೆ ನಿ | ಮ್ಮಾದಿಯನಿನ್ನು          ||೨೭೪||

ರಾಗ ಮಾರವಿ ಏಕತಾಳ

ಬಾಲಮೌಳಿಮಣಿಗಳಿರ ನಾ | ಪೇಳುವಂಥ ಮಾತೊಂದ |
ಕೇಳಿರಯ್ಯ | ನೀವು | ಕೇಳಿರಯ್ಯ    || ಪಲ್ಲವಿ ||

ಧರಣಿಜಾತೆ ಸೀತೆ ನಮಗೆ | ಪರದೈವವು ನೀವಾ ದೇವಿ |
ಯರಿಗೆ ಪುತ್ರರಾದ ಮೇಲೆ | ಪರಿಕಿಸಿ ನೋಡೆ ||
ನೆರೆ ಸಂಭಾವಿತರು ನಿಮ್ಮೊಳ್ | ಧುರವೇಕಕಟ ಅರಿಯದಿಂತು |
ಮರೆಮೋಸಹೋದ ಮೇಲಿನ್ನು | ಬರಿದೆ ಹೇಳಿ ಫಲವದೇನು     ||೨೭೫||

ಕಲಹಾಳಿ ಕೇವಲ ಮಾರಿ | ಕುಲಗೇಡಿ ಶೂರ್ಪಣಖೆಯಿಂದ |
ಕೊಳಗುಳ ಸೇರಿದುದೇನ | ತಿಳಿಯೆನೆಮ್ಮೊಳು ||
ಹಲವು ಪರಿಯೊಳ್ ಹಿಂದೆ ವಂಶ | ಕಳಿವನೆ ತಂದಾಕೆಯಿವಳ |
ನೊಳಗೆ ಪೊಗಿಸಬಾರದೆನ್ನ | ಹೊಳಲೊಳಿನ್ನು ಮಾತದೇನು    ||೨೭೬||

ವಾರ್ಧಕ

ಎಂದು ಲವಕುಶರೊಡನೆ ಕಾಳಗವನುಳಿದು ನಡೆ |
ದಂದಾ ವಿಭೀಷಣಂ ಮಿಕ್ಕ ಬಲಸಹಿತಲ |
ಯ್ತಂದ ಆಲಯಕತ್ತಲಿತ್ತಲದನೆಲ್ಲಮಂ ಕಾಣುತಾ ಶೂರ್ಪಣಖೆಯು ||
ನೊಂದುಕೊಳುತಕಟಕಟ ನಾನೆಸಗಿದಾಯಾಸ |
ಮಿಂದು ನಿಷ್ಫಲಭೂತಮಾಯ್ತೆಲ್ಲಮಿದಕೆ ಬೇ |
ರೊಂದುಪಾಯವನಯ್ದೆ ಮಾಳ್ಪೆನೆಂದೆಣಿಸಿ ಸಾಕೇತಪುರಕಯ್ತಂದಳು     ||೨೭೭||

ನಿಜರೂಪಮಂ ಮರೆಸಿ ಕೊರವಂಜಿಯಂತೆ ಪುರ |
ವ್ರಜದಿ ಸಂತರಿಸುತುದಕವನು ಮಂತ್ರಿಸಿ ತಳಿಯೆ |
ಗಜತುರಗ ಗೋಮಹಿಷಿವಿಷ್ಟಕರ ಮುಂತಾದಮೆಲ್ಲದಿರವಾ ಕ್ಷಣದೊಳು ||
ರುಜೆರೋಗದಿಂದಿರೆ ನಿಮಿತ್ತಮಂ ಕೇಳ್ದರಿದು |
ರುಜುವಾಗದರಸನಿಂದಲ್ಲದೆನೆ ಕೇಳುತಖಿ |
ಳಜನಂ ರಘೂತ್ತಮಂಗುಸಿರಲ್ಕೆ ಕರೆಸಿದಂ ಗಾಡಿಗಾರ್ತಿಯನಿವಳನು     ||೨೭೮||

ಭಾಮಿನಿ

ಕಣಿಯ ಪೇಳೆನೆ ರಘುಜನಾಕೆಯ |
ಮಣೆಯಲಕ್ಕಿಯನಿಟ್ಟು ತನ್ನಯ |
ಫಣೆಗೆ ಕೈಗಳ ಚಾಚಿ ಗುರುದೇವತೆಯ ಪ್ರಾರ್ಥಿಸುತ ||
ಮಣಿದು ದೆಸೆದೆಸೆಗಳಿಗೆ ಕುಳ್ಳಿ |
ರ್ದೆಣಿಸಿ ಕಂಗಳ ಮುಚ್ಚಿ ಬಿಡುತಾ |
ಬಣಗು ರಕ್ಕಸಿ ಪೇಳ್ದಳೆಲ್ಲರ ಮುಂದೆ ಪ್ರಶ್ನೆಯನು      ||೨೭೯||

ರಾಗ ಮಧುಮಾಧವಿ ಏಕತಾಳ

ಧರಣಿಪ ಕೇಳ್ ನಿನ್ನ ಪುರವರದೊಳಗಯ್ದೆ |
ಪಿರಿದಾದ ಹೆಣ್ಣುದೈವವದೊಂದು ತಾನು ||
ಹರಕೆಯ ಕೇಳುತ್ತಲಿರುವುದು ನೀವದ |
ತರಿಸಿಕೊಟ್ಟರೆ ರಾಜ್ಯಕಿರದೆಲ್ಲ ಕ್ಷೇಮ ||೨೮೦||

ಹೇಳು ಹೇಳೇನ ಬೇಡುವುದದು ಹರಕೆಯ |
ಕಾಲಕಂಠನಲಿರ್ದರೇನು ತಾನದನು ||
ಲೀಲೆಯೊಳ್ ತರಿಸುವೆ ನೋಡೆಂದು ರಘುಕುಲ |
ಮೌಳಿರತ್ನನು ಪೇಳ್ದಡೆಂದಳೀ ನುಡಿಗೆ        ||೨೮೧||

ಅಡವಿಯೊಳಿರ್ವರು ಹುಡುಗರಿದ್ದಪರಂತೆ |
ಹಿಡಿತಂದು ಬಲಿಯನಿತ್ತರೆ ನಿಮ್ಮ ಪುರದಿ ||
ಮಡದಿ ಮಕ್ಕಳಿಗೆ ಗೋಗಜವಾಜಿಗಳಿಗೆಲ್ಲ |
ತಡೆಯದೆ ಕ್ಷೇಮವಾದಪುದೆಂದಳಸುರೆ        ||೨೮೨||

ತಂದೀಯೆ ಹರಕೆಯ ಮುಂದೆ ಕ್ಷೇಮವೆ ಹುಸಿ |
ಹೊಂದದೆ ನುಡಿಗೆ ಪೇಳೆಂದೆನೆ ರಘುಜ ||
ಸಂದೇಹವಿಲ್ಲ ತಾನಿಂದು ಪೇಳಿದ ಮಾತಿ |
ಗೆಂದಿಗು ಹುಸಿಬಾರದೆಂದಳು ದನುಜೆ        ||೨೮೩||

ರಾಗ ಕೇದಾರಗೌಳ ಅಷ್ಟತಾಳ

ದುರುಳೆಯಿಂತೆನೆ ಕೇಳ್ದು ಧರಣಿಪಾಲಕ ತಾನೆ | ತರುವೆ ಬಾಲಕರನೆಂದು ||
ಭರದಿಂದಲೇಳುವ ಪರಿಯ ಲಕ್ಷ್ಮಣನು ಕಂ | ಡೆರಗುತ್ತಲಿಂತೆಂದನು       ||೨೮೪||

ಲಾಲಿಸಗ್ರಜ ನೀನು ಪರಿಯಂತವೇತಕಾ | ಬಾಲಕರನು ತಹಡೆ ||
ಸಾಲದೆ ಇದಕೆನ್ನ ಕಳುಹಿಸಿ ನೋಡೆನೆ | ಭೂಲೋಲನಿಂತೆಂದನು         ||೨೮೫||

ಸದರದ ಬಾಲಕರಾಗಿರರೆಂದೆನ್ನ | ಹೃದಯದಿ ತೋರುತಿದೆ ||
ಅದಕಹ ಸನ್ನಹದಿಂದಲಿ ಪೋಗೆನ | ಲದಕೆ ಮತ್ತಿಂತೆಂದನು     ||೨೮೬||

ಎಷ್ಟು ಸಾಹಸಿಕರು ಆದರೇನವದಿರ | ಕಟ್ಟಿ ನಾ ತಾರದಿರೆ ||
ಸೃಷ್ಟಿಯೊಳ್ ಲಕ್ಷ್ಮಣನಹೆನೆ ನೇಮವನೀಗ | ಕೊಟ್ಟೆನ್ನ ಕಳುಹೆಂದನು     ||೨೮೭||

ರಾಗ ಅಹೇರಿ ಝಂಪೆತಾಳ

ಇಂತೆಂದು ರಘುವಂಶತಿಲಕನಿಂದಪ್ಪಣೆಯ |
ನಾಂತು ಧನುಶರ ಕೊಂಡು ಸಕಲ ಸನ್ನಹನಾಗಿ |
ತಾಂ ತವಕದಿಂದ ಮಣಿರಥವೇರ್ದು ಶೋಭಿಪ ಮ |
ಹಾಂತ ಚತುರಂಗಪಡೆಸಹಿತ | ವರಸು |
ಮಂತ್ರ ಮಂತ್ರಿಯ ಸನ್ನೆಯಿಂದ ಬೊಬ್ಬಿಡುತ |
ಬಂದನು ಮಹಾರಣ್ಯಕೆಂದು | ದೇವ |
ವೃಂದ ಭಯಗೊಳೆ ಸುಮಿತ್ರಾತ್ಮಭವನಂದು ||೨೮೮||