ಭಾಮಿನಿ

ವರ ಸುಮಿತ್ರಾತನಯನಂದೀ |
ತೆರದಿ ತನ್ನಯ ಸಕಲ ಸೈನಿಕ |
ವೆರಸಿ ನಡೆತಂದೊಡನೆ ಘನ ಕಾಂತಾರಮಧ್ಯದಲಿ ||
ತೆರತೆರದಿ ಬೀಡಿಕೆಯ ಬಿಡಿಸುತ |
ಕರೆದು ಬಳಿಕ ಸುಮಂತ್ರಮಂತ್ರೀ |
ಶ್ವರನಿಗೀ ತೆರದಿಂದ ಸೂಚಿಸಿದನು ಸಗಾಢದಲಿ        ||೨೮೯||

ರಾಗ ಸುರುಟಿ ಏಕತಾಳ

ಮಂತ್ರಿವರನೆ ಕೇಳಾ | ಧೀರ ಸು | ಮಂತ್ರ ಸುಗುಣಶೀಲ        || ಪಲ್ಲವಿ ||

ಎಲ್ಲಿಹರೆಂಬುದನು | ಬಾಲಕ | ರಲ್ಲಿಗೆ ಸಲೆ ನೀನು ||
ನಿಲ್ಲದೆ ಬಲಸಹಿತಯ್ದಿ ಪ್ರಯತ್ನದಿ | ಮೆಲ್ಲನರಸಿ ತಿಳಿದಪುದವರಿರವನು    ||೨೯೦||

ಒಡನೆ ಕುಮಾರರನು | ಕೈಸೆರೆ | ವಿಡಿದೀ ಕ್ಷಣ ನೀನು ||
ತಡೆಯದೆ ತಹುದೆನ್ನೆಡೆಗೆ ರಘೂತ್ತಮ | ನಡೆಸುವ ಕಾರ್ಯಕೆ ಎಡರಾಗದವೋಲ್  ||೨೯೧||

ರಾಗ ಪಂತುವರಾಳಿ ಮಟ್ಟೆತಾಳ

ಎನಲು ಕೇಳ್ದು ರಥವನೇರ್ದು ಮಂತ್ರಿವರ್ಯನು |
ಘನ ಚುತುರ್ಬಲೌಘ ಸಹಿತ ಬರುವ ಪರಿಯನು ||
ವನದೊಳಿತ್ತ ದೂರದಲ್ಲಿ ಕುಶನು ಕಾಣುತ |
ವಿನಯದಿಂದ ಲವನೊಳೆಂದ ಮನದೊಳುಬ್ಬುತ       ||೨೯೨||

ನೋಡು ಪೂರ್ವಜಾತ ಹಿಂದಕೋಡಿದಸುರರು |
ಕೂಡಿ ಬಲವನೀಗ ಸೆಣಸಿಯಾಡಬರುವರು ||
ಮಾಡಿದಪೆನು ಮರನ ಹಣ್ಣನುದುರ್ಚಿದಂದದಿ |
ಆಡಿ ಫಲವದೇನು ನೋಳ್ಪುದೈಸೆ ಚಂದದಿ   ||೨೯೩||

ಎಂದು ಮಾತನಾಡುತಿರಲು ಬಾಲರೀರ್ವರು |
ಬಂದು ಮುಸುಕಲಪರಿಮಿತದ ಸೈನ್ಯಸಾಗರ ||
ಮಂದಹಾಸದಿಂದಲಾಂತು ಧನುಶರಗಳನು |
ಕುಂದದಾ ಕುಮಾರರೆಚ್ಚರೇನನೆಂಬೆನು       ||೨೯೪||

ಸರಳಿನಿಂದ ವೈರಿಬಲವ ಸವರುತಿರ್ದರು |
ಬರಿಯ ಜಳ್ಳುಬಲದಲೇನು ಫಲವು ವೀರರು ||
ಇರಲು ಬರುವುದೆನಲು ಕೇಳುತಾ ಸುಮಂತ್ರನು |
ಭರದೊಳಿವರನಯ್ದೆ ತಡೆದು ನಿಂದು ನುಡಿದನು        ||೨೯೫||

ರಾಗ ಸಾಂಗತ್ಯ ರೂಪಕತಾಳ

ಎಲೆ ಬಾಲರಿರ ನಮ್ಮ ಬಲವನ್ನು ಗೆಲಿದೆನೆಂ | ಬುಲುಹು ಬೇಡೀ ಕ್ಷಣ ನಿಮ್ಮ ||
ತಲೆಯನ್ನು ಕಡಿದು ಭೇತಾಳ ಭೂತಂಗಳ್ಗೆ | ಬಲಿಯೀವೆನೆನೆ ಲವನೆಂದ  ||೨೯೬||

ಭಾರಿಯ ದೇಹಕ್ಕೆ ನುಡಿಗೆ ಮೆಚ್ಚಿದೆ ಮನ | ಧೀರತ್ವವಿರೆ ಕಾಣದಿಹುದೆ ||
ತೋರಲೇಕೆಲವೊ ಕಂಕುಳನೆತ್ತಿ ಎಸೆವ ಕ | ಸ್ತೂರಿಯ ಪರಿಮಳವನ್ನು    ||೨೯೭||

ಎಂದು ನೂರಾರು ಮಾರ್ಗಣದಿಂದ ಲವನೆಸ | ಲಂದು ಮಂತ್ರಿಯು ಗಾಯವಡೆದು ||
ಸಂದು ಮೂರ್ಛೆಗೆ ಬಳಿಕೇಳುತ್ತ ಕಡು ಭೀತಿ | ಯಿಂದುಸಿರಿದನು ಸಾರಥಿಗೆ         ||೨೯೮||

ತಿರುಹು ಸಾರಥಿ ರಥವನು ತಾಳಲಾರೆನು | ತರಳನಂಬಿನ ಗಾಯ ಘನವು ||
ಮರಿಯಾದೆಯಲ್ಲ ಕಾದುವುದಿನ್ನುಯೆನುತಲೆ | ಮರಳ್ದನು ಸೌಮಿತ್ರಿಯೆಡೆಗೆ         ||೨೯೯||

ಅವನತ್ತ ತಿರುಗಲು ಕುಶನನ್ನು ಕರೆದೆಂದ | ಲವನೆಲೆ ತಮ್ಮ ನೀ ಕೇಳು ||
ಸವೆದುದು ಸರಳ್ಗಳು ಗುರುವಿನ ಬಳಿಗಯ್ದಿ | ತವಕದಿ ತಹುದೆನಲೆಂದ    ||೩೦೦||

ರಾಗ ಮಾರವಿ (ಶಂಕರಾಭರಣ) ಆದಿತಾಳ

ಲಾಲಿಸಗ್ರಜ ನಿನ್ನನೋರ್ವನ ನಾನೆಂತು |
ಕಾಳಗದಲಿ ಬಿಟ್ಟು ಪೋದರೆ ಮುಂದೆ ||
ಪೇಳುವೆನೇನ ಸದ್ಗುರುವಿಗೆ ಮಾತೆಯು |
ಕೇಳಿದ ಮಾತ್ರದಿ ತಾಳಳೆ ಚಿಂತೆ    ||೩೦೧||

ಕೊಡುವೆ ನಾನಿವರೊಡನೆ ಯುದ್ಧವ ನೀನು |
ತಡೆಯದೆ ಹೋಗಿ ಮುನೀಂದ್ರನ ||
ಒಡನೆ ಶಸ್ತ್ರಾಸ್ತ್ರವ ಕೊಂಡು ಬಾರೆಂದೆಂಬ |
ನುಡಿಯನು ಕೆಳುತ ಕಡುಗುತ್ತ ಲವನೆಂದ     ||೩೦೨||

ರಾಗ ಮಾರವಿ ಆದಿತಾಳ
ತಮ್ಮ ನೀನೀ ಪರಿ | ನಮ್ಮೊಳು ಪೇಳ್ವುದು | ಧರ್ಮವೆ ತಿಳಿದು ನೋಡು ||
ಸಮ್ಮತವಲ್ಲಿದು | ಸುಮ್ಮನೆ ನಡೆ ನಡೆ | ಗಮ್ಮನಿಲ್ಲಿರದೆ ಬೇಗ || ಮುನಿಯೆಡೆಗೀಗ  ||೩೦೩||

ಎಂದ ಮಾತನು ಕೇಳಿ | ನೊಂದು ಮನದಿ ಕುಶ | ಕಂದಿ ಕಣ್ಣೀರಿಡುತ ||
ಇಂದೊರ್ವನನು ಬಿಡು | ವಂದವೆಂತೆನುತಲಿ | ಬಂದನೆಣ್ಣುತಲೆ ಸಾಗಿ || ಆಶ್ರಮಕಾಗಿ       ||೩೦೪||

ಭಾಮಿನಿ

ವರ ಸುಮಂತ್ರಾಮಾತ್ಯನಿತ್ತಲು |
ಮರಳಿ ಲಕ್ಷ್ಮಣನೆಡೆಗೆ ನಮ್ಮಲಿ |
ಹರಿಯದಾ ಬಾಲರನು ತರುವಡೆನುತ್ತ ಬಿನ್ನಯ್ಸೆ ||
ಇರಲಿ ನೋಡುವೆನೆನುತ ಸೈನಿಕ |
ವೆರಸಿ ಲವನನು ಬಂದು ವಿಲಯದ |
ಶರಧಿಯಂದದಿ ಮುತ್ತಿದನು ಸೌಮಿತ್ರಿಯಾ ಕ್ಷಣದಿ      ||೩೦೫||

ರಾಗ ಶಂಕರಾಭರಣ (ಪಂಚಾಗತಿ) ಮಟ್ಟೆತಾಳ

ಲವಕುಮಾರನು | ಕವಿವ ಬಲವನು |
ತವಕಿಸುತ್ತನೇಕ ಬಾಣ | ಚಯದಲೆಚ್ಚನು     ||೩೦೬||

ಏನಿದದ್ಭುತ | ಸೇನೆಯಗಣಿತ |
ತಾನದೊರ್ವ ಸವರ್ದನಮಮ | ಜಾನಕೀಸುತ         ||೩೦೭||

ಅಳಿದ ಬಲವನು | ಬಳಿಕ ಲವನನು |
ತಿಳಿವುತಾ ಸುಮಿತ್ರೆಯಣುಗ | ನುಲಿವುತುಸಿರ್ದನು    ||೩೦೮||

ರಾಗ ನಾದನಾಮಕ್ರಿಯೆ ಅಷ್ಟತಾಳ

ಎಲವೊ ಬಾಲಕನೆ ನೀ ಕೇಳೆಮ್ಮ | ಭೂರಿ |
ಬಲವನ್ನು ಗೆಲಿದೆನೆಂದುರೆ ಹಮ್ಮ ||
ತಳೆಯದಿರೀ ಕ್ಷಣ ನಿನ್ನನು | ಪಿಡಿ |
ದೆಳೆದು ಪಟ್ಟಣಕೊಯ್ವೆನೆಂದನು     ||೩೦೯||

ಮಾತಿನಿಂದೇನು ಸಾಹಸವಿರೆ | ಸುಮ |
ಹಾತಿ ಸಮರ್ಥರು ನೋಳ್ಪರೆ ||
ಭೀತಿಯದೇನೆಲ್ಲಿಗೊಯ್ದರೆ | ಎನು |
ತಾತಗುಸಿರ್ದನು ಖತಿಯೇರೆ        ||೩೧೦||

ಹಸುಳೆ ನಿನ್ನಿಂದಲಾಗುವುದೇನು | ಕೋಟಿ |
ಯಸುರರ ಬಗೆಯದೆನಗೆ ನೀನು ||
ತುಸುಮಾತ್ರವೆಣೆಯೆ ಹೇಳೆಂದೆನು | ತೆಚ್ಚ |
ನಸಮ ಸಹಸಿ ರಾಮವರಜನು      ||೩೧೧||

ಮಶಕಕೋಟಿಯ ಕೊಲುವಾನೆಗೆ | ಸಿಂಹ |
ಶಿಶುವಾದರೇನು ಸೋಲ್ವುದೆ ಹೀಗೆ ||
ಹಸುಳೆಯಾದರೆ ಎನ್ನ ಶರಕೇನೂ | ಕಾಣೆ |
ಶಿಶುತನವೆಂದಾತನೆಚ್ಚನು ||೩೧೨||

ಸೋಲುವುದುಂಟೆ ನಿನ್ನಸ್ತ್ರದಿ | ಫಡ |
ಬಾಲಕ ಕೇಳು ತ್ರೈಲೋಕದಿ ||
ಮೇಳವುಂಟೆನದಿರು ತನಗಿಂದು | ಬಾಣ |
ಜಾಲವ ಸುರಿದನಾತನೊಳಂದು    ||೩೧೩||

ಆದರೇನಾಯ್ತು ನಿನ್ನಧಟನು | ಸಲೆ |
ಸೇದುವಾತನು ತಾನೆಂದುರೆ ನೀನು ||
ಕಾದಿದಡರಿದಪುದೆನ್ನುತ | ಬಾ |
ಣಾಬುಧಿ ಕವಿಸಿದ ಕನಲುತ್ತ          ||೩೧೪||

ಸರಿಯಾಗಿ ಕಾದುತಲಿರೆ ಕಂಡು | ಬಳಿ |
ಕುರುಬಲ ಲಕ್ಷ್ಮಣ ಖತಿಗೊಂಡು ||
ಉರಗಪಾಶದಲಿ ಬಾಲಕನನು | ಕಟ್ಟಿ |
ಭರದಿಂದ ರಥಕೆಳೆದೊಯ್ದನು       ||೩೧೫||

ರಾಗ ತೋಡಿ ತ್ರಿವುಡೆತಾಳ

ಕುಳ್ಳಿರಿಸಿ ಬಾಲನನು ರಥದಲಿ | ಕಳ್ಳನನು ಹಿಡಿತರುವ ತೆರದಲಿ |
ಮೆಲ್ಲನಯೋಧ್ಯಕ್ಕೆ ನಡೆತಂದು ||
ಫುಲ್ಲಲೋಚನ ರಾಮನಿದಿರಲಿ | ನಿಲ್ಲಿಸಿಯೆ ನಮಿಸೆಂದು ಪೇಳಲು |
ಸೊಲ್ಲಿಸಿದನಾ ಲವನು ನಗುತಂದು  ||೩೧೬||

ಗುರುವಿಗಲ್ಲದೆ ಮಾತೆಗಲ್ಲದೆ | ಪರರ ಚರಣಕ್ಕೆರಗಲರಿಯದು |
ಶಿರವದೆನ್ನದದೇನ ಮಾಡುವೆನು ||
ಅರುಹುವಿರಿ ನೀವ್ ನಿಮ್ಮ ರಾಯನ | ಚರಣಕಭಿನಮಿಸೆಂದು ನಮ್ಮಲಿ | ಹರಿಯದೆನಲಿಂತೆಂದನುಸುರಾರಿ ||೩೧೭||

ನಿನ್ನ ಪಡೆದಿಹ ಮಾತೆ ಯಾವಳು | ಮುನ್ನ ಗುರುವಾರೆಂಬುದೆಲ್ಲವ |
ಭಿನ್ನವಿಲ್ಲದೆ ತಮ್ಮ ನೀನದನು ||
ಎನ್ನೊಡನೆ ಪೇಳೆಂದು ಘನ ಸಂ | ಪನ್ನ ರಾಘವ ತಾನೆ ಕೇಳಲು |
ಉನ್ನತದ ಸಾಹಸಿಕ ಲವನೆಂದ     ||೩೧೮||

ಮಾತೆಯನು ಗುರುಗಳನು ಪೇಳ್ವುದು | ನೀತಿಯಲ್ಲಾ ಹಗೆಯರೊಳು ನಿಮ |
ಗೇತಕೆಮ್ಮ ವಿಚಾರವೆಂದೆನುತ ||
ಭೀತಿಗೊಳ್ಳದೆ ಲವನು ಪೇಳಿದ | ಮಾತ ಕೇಳುತ ಬಳಿಕ ರಘುಕುಲ |
ಜಾತ ತಲೆದೂಗುತ್ತಲುಸಿರಿದನು     ||೩೧೯||

ರಾಗ ಭೈರವಿ ಝಂಪೆತಾಳ

ಅಮಮ ಈತನ ಪಡೆದ | ರಮಣಿ ಪಿತನದಾವವರೊ |
ಸಮನಾಗಿ ಉತ್ತರವ | ನಮಗೆ ಕೊಡುತಿಹನು ||೩೨೦||

ಮಾತಿನಲಿ ರೂಪಿನಲಿ | ಚಾತುರ್ಯ ಶೌರ್ಯಗಳ |
ಲೀ ತರಳಗೆಣೆಗಾಣೆ | ಭೂತಳದಿ ದಿಟವು      ||೩೨೧||

ನೆರೆ ದಿಂಡೆ ಪಾಲನಿವ | ನಿರುವುದಿವನ ವಿಚಾರ |
ವಿರಲಿ ಸಂಕಲೆಯೊಳೆಂ | ದರುಹಿ ಬಂಧಿಸಿದ  ||೩೨೨||

ಕುಶನಿತ್ತ ಮಾರ್ಗದಲಿ | ಋಷಿಯೆಡೆಗೆ ಬರುವವನು |
ದೆಶೆಗೆಟ್ಟು ಮನದಿ ಚಿಂ | ತಿಸುತ ಮರುಗಿದನು         ||೩೨೩||

ರಾಗ ನೀಲಾಂಬರಿ ರೂಪಕತಾಳ

ಏನ ಮಾಡುವೆನಯ್ಯೊ | ಈ ವಿಧಿಗಿನ್ನಕಟಕಟ |
ತಾನು ಕೋಪಿಸಿಯಣ್ಣ | ಪೋಗೆಂದನೆನ್ನ      ||೩೨೪||

ಕೇಳುತಲಿದೆ ರಣರಂಗದ | ಕೋಲಾಹಲ ಸಿಂಹಧ್ವನಿ |
ಮೇಳಯ್ಸಿದ ರಥ ಚೀತ್ಕಾ | ರಾಳಾಪವು ಕಿವಿಗೆ         ||೩೨೫||

ಘೀಳಿಡುತಿಹ ವಾದ್ಯಸ್ವನ | ಸೂಳಯ್ಸುವ ಕಹಳೆಗಳು |
ಪೇಳವೆನೀಗಾಗುತಲಿದೆ | ಕಾಳಗವತಿ ಕಠಿನ  ||೩೨೬||

ಕಡುಹಿನ ಕಾಳಗದೊಳಗಿ | ನ್ನಡವಿಯೊಳೊರ್ವನ ಬಿಟ್ಟು |
ನಡೆದೇನೆಂದರೆ ಬರದೊಂ | ದಡಿ ಮುಂದೇಗುವೆನು   ||೩೨೭||

ತಡೆದೆನೆಂದಾದರೆ ಕೋಲ್ಗಳು | ಕಡಮೆಯದಾಗಿದೆ ರಣದಲಿ |
ಪಿಡಿದೊಯ್ವರೊ ಕೊಲುವರೊ ಎ | ನ್ನೊಡವುಟ್ಟಿರ್ದವನ          ||೩೨೮||

ಅರಿದಿದನೆಲ್ಲವ ನಾನತಿ | ಭರದಿಂದಲ್ಲಿಗೆ ಪೋದರೆ |
ಗುರುವೇನೆಂಬನೊ ಮಾತೆಯು | ಮರುಗದೆ ಮಾಣುವಳೆ       ||೩೨೯||

ಹರ ಹರ ಇನ್ನೇನೆಂಬನು | ಹರಿವನು ಕಾಣೆನು ಚಿಂತೆಗೆ |
ಹುರುಡೆಲ್ಲೆರಡನು ನೋಡ | ಲ್ಕರಿಯೆನುಪಾಯವನು   ||೩೩೦||

ಭಾಮಿನಿ

ನುಡಿದು ಫಲವೇನಿನ್ನು ಪೋಗದೆ |
ತಡೆದೆನಾದರೆ ಮುನಿಪನಲ್ಲಿಗೆ |
ಕೆಡದೆ ಮಾಣದು ಕಾರ್ಯವೆಂದೆನುತಾ ಕ್ಷಣವೆ ಕುಶನು ||
ನಡೆದು ಬಂದಾ ಪರ್ಣಮಂದಿರ |
ಕೊಡನೆ ಋಷಿಗಳ ಮಾತೆಯರ ಮೆ |
ಲ್ಲಡಿಗೆ ನಮಿಸಲು ಭಯದಿ ಕೇಳ್ದಳು ಸೀತೆಯೀ ತೆರದಿ  ||೩೩೧||

ರಾಗ ನೀಲಾಂಬರಿ ಏಕತಾಳ

ಮಗನಿಂದೆಲ್ಲಿಗೆ ಪೋದ | ಸುಗುಣನು ತಾನೇನಾದ ||
ಆಗಲಿದು ನೀನೆಲ್ಲಿಂದ | ಮಿಗುವರಿಯ್ದಿದೆ ಕಂದ         ||೩೩೨||

ಬೇಡೆನೆ ಬೇಟೆಗೆ ಪೋಗಿ | ಕೂಡಿರುವಣ್ಣನ ನೀಗಿ ||
ಕಾಡೊಳಗೀ ನೀನು | ಗಾಢದಿ ಬಂದಿರವೇನು ||೩೩೩||

ಅರಿಗಳು ಕೊಂಡೊಯ್ದಪರೊ | ಸೆರೆವಿಡಿದೇಂ ಗೆಯ್ದಪರೊ ||
ತರಳನನೊರ್ವನನುಳಿದು | ಬರಬಹುದೇ ನೀ ತಿಳಿದು ||೩೩೪||

ಕಂದ

ಜನನಿಯಳಲನುಂ ಕೇಳಿದು |
ಮನದೊಳ್ ತಾನಾಗ ಧೈರ್ಯಮಂ ತಾಳ್ದು ಕುಶಂ ||
ವನದೊಳ್ ನಡೆದಿಹ ವೃತ್ತವ |
ನನುವಿಂದಂ ಪೇಳಿದ ಮಾತೆಗೆ ಸಾಂಗದೊಳಂ        ||೩೩೫||

ರಾಗ ಸಾವೇರಿ ರೂಪಕತಾಳ

ಮಾತೆ ಲಾಲಿಪುದೆನ್ನ ಮಾತನು ಸಲೆ ಮುನ್ನ |
ಚಾತುರ್ಯವದು ಸಹಜವಾಗಿಹುದು || ಪಲ್ಲವಿ ||

ಆದಿಯೊಳಸುರರೊಳಾದುದು ಕಲಹವು |
ಭೇದಿಸಲರಿದೆಂಬ ತೆರದಿಂದ ನಮಗೆ ||
ಪೋದರು ದೆಸೆದೆಸೆಗವರು ನಮ್ಮೊಳು ಸೋತು |
ಕಾದಲಾರದೆ ಘೋರ ರಣರಂಗದೊಳಗೆ      ||೩೩೬||

ಬಳಿಕೇನ ಪೇಳುವೆ ಧರಣಿ ಪಾಲರ ಮಹಾ |
ರ್ಬಲ ಬಂದು ಮುಸುಕಿತು ಕಡಲಿನಂದದಲಿ ||
ಕೊಳುಗುಳದೊಳು ಬಲು ಸೈನ್ಯವ ಕೊಂದೆವು |
ವಿಲಯದ ರುದ್ರನಂದದಲಿ ನಾವಿರದೆ         ||೩೩೭||

ಸರಳುಸಂಗರದಲ್ಲಿಲ್ಲೆಸೆಯಲು ಬಳಿಕೆನ್ನೊಳ್ |
ತರುವುದೆಂದಗ್ರಜ ನೇಮಿಸೆ ನನ್ನ ||
ಧುರದೊಳೊರ್ವನ ಬಿಟ್ಟು ಪೋಪನಲ್ಲೆನೆ ಕೇಳಿ |
ಕೆರಳ್ದರೆ ತರಲು ಬಂದೆನು ಮುನಿಯೆಡೆಗೆ      ||೩೩೮||

ಭಾಮಿನಿ

ಧರಣಿಪಾಲರೊಳಾಯ್ತು ಧುರವೆಂ |
ದರುಹೆ ಕೇಳುತ ಕುಶನ ವಚನವ |
ತರುಣಿ ಜಾನಕಿಯನ್ಯರಲ್ಲೆಂಬುದನು ನಿಶ್ಚಯಿಸಿ ||
ವರ ಮುನೀಂದ್ರನ ಚರಣಕಮಲದಿ |
ಹೊರಳುತಲೆ ಘನ ಚಿಂತೆಯಿಂದಲಿ |
ಮರುಗಿದಳು ಸಲೆ ಮೋಸವಾದುದೆನುತ್ತ ಹಮ್ಮಯ್ಸಿ   ||೩೩೯||

ರಾಗ ಆನಂದಭೈರವಿ ಏಕತಾಳ

ಏನ ಮಾಳ್ಪರೊ ಹಾಯೆನ್ನ | ಸೂನುವನಿನ್ನಕಟ ತನು |
ಯೋಗ್ಯವೆ | ಬಂದ | ಭಾಗ್ಯವೆ       ||೩೪೦||

ರಣದೊಳೊರ್ವನೆ ತಾನೆಂತು | ಸೆಣಸಿ ಗೆಲ್ದನೊ ಕಂತು |
ಹರ ಬಲ್ಲ | ಮತ್ತು | ಬೇರಿಲ್ಲ         ||೩೪೧||

ಚಿಂತೆಗೆಡೆಯಾದೆ ನಾನೆಂದು | ದಂತಿಗಮನೆ ಮರುಗಲಂದು ||
ಋಷಿ ತಾನು | ಸಂತ | ವಿಸಿದನು    ||೩೪೨||

ರಾಗ ಮಾಧವಿ ತ್ರಿವುಡೆತಾಳ

ಇಂದುಮುಖಿ ಬಿಡು ಚಿಂತೆಯನು ತವ | ನಂದನಗೆ ಶಂಕರನ ಘನ ಕೃಪೆ |
ಯಿಂದಲೇನ್ ಭಯವಿಲ್ಲವಾಹುದು | ಮುಂದವರೊಳು ವಿವೇಕವು          ||೩೪೩||

ಲವನೊಡನೆ ಯುದ್ಧದಲಿ ಗೆಲುವರ | ಭುವನ ಮೂರರೊಳಯ್ದೆ ಕಾಣೆನು |
ಕವಲುಗೊಳಿಸುವರ್ ನಾರದಾದ್ಯರು | ಯುವತಿ ಮಣಿ ಬಿಡು ಶೋಕವ    ||೩೪೪||

ವಾರ್ಧಕ

ಎಂದು ಸೀತೆಯನೊಡಂಬಡಿಸಿ ಬಳಿಕಾ ಕುಶನಿ |
ಗಂದು ಮಂತ್ರಾಸ್ತ್ರ ಶಕ್ತಿಯನಿತ್ತು ಧನುವ ಪಿಡಿ |
ವಂದಮಂ ತಿಳುಹಿ ಮಗುಳೇರಿಸಿಳಿಸುವ ಬಾಣಮಂ ಬಿಡುವ ಕುಶಲಗಳನು ||
ಚಂದದಿಂ ತೋರೆ ತದನಂತರದಿ ಜನಕಸುತೆ |
ತಂದಿತ್ತಳೊಂದು ಮುದ್ರಿಕೆಯನಾ ಕುವರನೊಡ |
ನಿಂದಿದಂಕೊಂಡು ಪೋಪುದು ಪೇಳ್ವೆನಿದರ ಕಾರಣವನೆನುತಿಂತೆಂದಳು  ||೩೪೫||

ರಾಗ ರೇಗುಪ್ತಿ ಆದಿತಾಳ

ಎತ್ತಲಾದರು ಸಾಕೇತ | ದತ್ತ ಸಿಕ್ಕಿರಲೆಮ್ಮಾತ |
ಮತ್ತೆ ದಿವ್ಯ ಮುದ್ರಿಕೆಯ | ನಿತ್ತಪುದಯ್ಯ ಕೇಳ್ ನೀನು  ||೩೪೬||

ಹಿಂದೆನ್ನ ವೈವಾಹದೊಳು | ತಂದೆಯಿತ್ತಾಕೆಯೊರ್ವಳು |
ಚಂದ್ರಮತಿಯೆಂದೆಂಬವಳು | ಸಂದೇಹವಿಲ್ಲವಲ್ಲಿಹಳು  ||೩೪೭||

ನಾರಿಯೆಡದೋಳೊಳ್ ಮೀನಾ | ಕಾರವಿರ್ಪುದು ಲಾಂಛನ |
ಆ ರೀತಿಯ ನೀನು ತಿಳಿದು | ಚಾರು ಮುದ್ರಿಕೆಯನೀವುದು       ||೩೪೮||

ಆಕೆಯಿಂದ ಕೊಡಿಸಲದನು | ಹಾಕಿರೆಸಂಕೋಲೆಯನ್ನು |
ಸೋಕೆ ಕಡಿದು ಪೋಗಿ ಲವನು | ತಾ ಕಡೆಗೆ ವಿಜಯನಹನು     ||೩೪೯||

ಮಾತೆಗೆಂದ ಬಳಿಕ ಕುಶನು | ಯಾತಕೆ ಚಿಂತಿಪೆ ನೀನು |
ಈ ತರಣಿ ಮುಳುಗುವುದರೊಳ್ | ನಾ ತಂದೀವೆ ಲವನ ಕೇಳು ||೩೫೦||

ವಾರ್ಧಕ

ಇಂತೆಂದು ಜನನಿಗಭಿನಮಿಸಿ ನೇಮವನೆ ಕೊಂ |
ಡಂತರಿಸದಾ ಕುಶಂಪೊರಮಟ್ಟು ಬರೆ ವನಕೆ |
ಮುಂತೆ ಲವನಂ ಕಾಣದರಸಿದಂ ಕರೆಕರೆವುತಣ್ಣ ಹಾ ಹಾಯೆನ್ನುತ ||
ಚಿಂತೆಯೊಳು ಬಿದ್ದಿರ್ದ ಹೆಣನ ರಾಶಿಯನೆಲ್ಲ |
ಮಂತಾನೆ ಬಗಿಬಗಿದು ನೋಡಿದರೆ ನೋಡದಿರ |
ಲೆಂತು ಸೈರಿಪೆನೆಂದು ಮರುಗಿದಂ ಬಹಳ ಪರಿಯಿಂದಲದನೇಂ ಪೇಳ್ವೆನು        ||೩೫೧||

ರಾಗ ನೀಲಾಂಬರಿ ತ್ರಿವುಡೆತಾಳ

ಏನ ಗೆಯ್ದಪರೆನ್ನಗ್ರಜನನ್ನು | ಬಿದ್ದ | ಸೇನೆಯೊಳರಸಲು ಕಾಣೆನು ||
ಮೌನಿವರ್ಯನನೆಂತು ಕಾಂಬೆನು | ಮಾತೆ | ಗೀ ನಿರೋಧವ ಹೇಗೆಂಬೆನು        ||೩೫೨||

ಜೀವಿಸಿರ್ದರೆ ತಹೆನವನನು | ಪೇಳ್ವ | ರಾವರೆನ್ನಗ್ರಜನಿರವನ್ನು ||
ಏವೆನೆಂದೆನುತ ಯೋಚಿಸುತಲಿ | ಕೋಪ | ಭಾವವ ತಾಳ್ದನಾ ಕ್ಷಣದಲಿ   ||೩೫೩||

ರಾಗ ಮಾರವಿ ಏಕತಾಳ

ಏಸುವೆನು ಭೂಮಿಯನೀಗಲವನ ತೋ | ರಿಸದಿರ್ದರೆನುತ್ತಾ ||
ಕುಶನಂಬನು ಧನುವಿಗೆ ಪೂಡಲ್ ಮಹ | ವಸುಮತಿಯಾ ಕ್ಷಣದಿ          ||೩೫೪||

ನಡುಗುತ ಭಯದಲಿ ಸ್ತ್ರೀರೂಪದಿ ಕುಶ | ನೆಡೆಗೆ ಭರದಿ ಬಂದು ||
ನುಡಿದಳದೇಕೆ ವೃಥಾ ನೀ ಬಾಣವ | ತೊಡುವೆ ಅಯೋಧ್ಯೆಯಲಿ         ||೩೫೫||

ಇರುವನು ನಿನ್ನಗ್ರಜ ಸಂಕಲೆಯೊಳು | ವರ ಲಕ್ಷ್ಮಣನವನ ||
ಉರಗಾಸ್ತ್ರದಿ ಬಂಧಿಸಿ ಕೊಂಡೊಯ್ದಿದ | ತ್ವರಿತದಿ ನಡೆಯೆನುತ ||೩೫೬||

ಎಂದೆನೆ ಭೂಮಿಯಯೋಧ್ಯೆಗೆ ಕುಶನೈ | ತಂದುನ್ನತವಾದ ||
ಬಂಧುರ ವೃಕ್ಷವನೇರ್ದಾರೀಕ್ಷಿಸ | ದಂದದಿ ಕುಳ್ಳಿರ್ದ   ||೩೫೭||

ರಾಗ ಕೇದಾರಗೌಳ ಝಂಪೆತಾಳ

ಇತ್ತ ಸಾಕೇತಪುರವರದಿ | ನರಬಲಿಯ |
ನಿತ್ತಪಡೆ ಮಾರಿಗತಿ ಭರದಿ ||
ಸುತ್ತ ಮೇರುವೆ ಕುರುಜು ತಳಿಗೆ | ತೋರಣವ |
ಬಿತ್ತರಿಸೆ ನಾಲ್ಕು ದೆಸೆಗಳಿಗೆ         ||೩೫೮||

ಪಟ್ಟವಾಳಗಳ ಸಿಂಗರಿಸಿ | ಪೂವನಿಳಿ |
ವಿಟ್ಟು ಚಂದದಲಲಂಕರಿಸಿ ||
ಒಟ್ಟಿ ಕೂಳ್ಗಳ ರಾಶಿಗಳನು | ಸನ್ನಾಹ |
ವಟ್ಟುದೆನೆ ಕೇಳ್ದು ರಘುವರನು       ||೩೫೯||

ನೆರೆ ಕೇಳ್ದು ಮಂತ್ರಿಕೆಯಸುರೆಯ | ಕರೆಸಲವ |
ಳರುಹಿದಳು ಮುಂದಾಹ ಪರಿಯ ||
ಪುರದಲಿಹ ದಾಸಿಯರದೆಲ್ಲ | ಮೀಸುವರೆ |
ತರುವುದುದಕವ ನದಿಯೊಳುಳ್ಳ     ||೩೬೦||

ಎಂದೆನಲು ಪೋಗಿ ವಾರಿಯನು | ತುಂಬಿತರು |
ವಂದೆಲ್ಲರಡಿಯಿಡುತಲಿದನು ||
ಚಂದ್ರಮತಿ ಮುಖ್ಯದಾಸಿಯರು | ಮನದಲುರೆ |
ನೊಂದುಕೊಳುತಯ್ದೆ ಪೇಳಿದರು    ||೩೬೧||