ರಾಗ ಭೈರವಿ ಏಕತಾಳ

ಅಕ್ಕ ಕೇಳೆಮ್ಮ ರಾಯನು | ಪುರದೊಳಗಿಹ |
ಚಿಕ್ಕವನನು ಕೊಲ್ವನು ||
ಅಕ್ಕರುಂಟೇನೆ ಏ ತಂಗಿ | ಮರುಳಾದೆ ನೀನು |
ಮಕ್ಕಳಾಟಕೆ ತನ್ವಂಗಿ     ||೩೬೨||

ತನ್ನ ಹೆಂಡತಿಯ ತಾನು | ಕೊಲ್ಲಲು ಕಳುಹಿ |
ದನ್ಯರೊಳು ಕರುಣವೇನು ||
ಮುನ್ನ ಲಕ್ಷ್ಮಣನೊಡನೆ | ಅಡವಿಗಟ್ಟನೆ |
ಇನ್ನದ ಪೇಳ್ದರೇನೆ         ||೩೬೩||

ಎಂತ ಚೆಲುವನೇ ಬಾಲ | ಪೂರ್ಣಚಂದ್ರಮ |
ನಂತೆ ಕಾಣಿಸುವನಲ್ಲ ||
ಇಂತಾ ಕುಮಾರನನು | ಪಡೆದಾಕೆ ತಾನು |
ಎಂತು ಸೈರಿಸುವಳಿನ್ನು    ||೩೬೪||

ಭಾಮಿನಿ

ಇಂತು ತಮ್ಮೊಳು ಮಾತನಾಡುತ |
ಕಾಂತೆಯರು ಬರುತಿರಲು ಕುಶನಿದ |
ನಂತದೆಲ್ಲವ ಕೇಳ್ದು ವೃಕ್ಷವನಿಳಿದು ತಕ್ಷಣದಿ ||
ಪಿಂತೆ ಸೀತೆಯುಸಿರ್ದ ಕುರುಹಂ |
ತಾಂ ತಿಳಿವುತಲಿ ಚಂದ್ರಮತಿಯೆಂ |
ಬಂತರವನೈತಂದು ನುಡಿದನು ವಿನಯವಚನದಲಿ     ||೩೬೫||

ರಾಗ ಮಾಧವಿ ಏಕತಾಳ

ನಿಲ್ಲು ನಾರಿ ಚಂದ್ರಮತಿ ನಿ | ನ್ನಲ್ಲಿ ಮಾತದೊಂದು ||
ಸೊಲ್ಲಿಸುವುದಿಹುದು ಕೇಳೆ | ಫುಲ್ಲನಯನೆಯಿಂದು      ||೩೬೬||

ಎಲ್ಲಿಂದ ಬಂದೆ ಸಂದೇಹ | ಗೊಳ್ಳುತಿಹುದಿದೇನು ||
ಇಲ್ಲಿ ಲಕ್ಷ್ಮಣ ತಂದಾತ | ನಲ್ಲವೇನೈ ನೀನು  ||೩೬೭||

ಆತನೆಮ್ಮಗ್ರಜನು ನಾವು | ಸೀತೆಯಣುಗರೆಲೆಗೆ ||
ಪ್ರೀತಿಯವಳು ನೀನೆಂದೆನುತ | ಮಾತೆ ಪೇಳ್ದಳೆನಗೆ   ||೩೬೮||

ನೂತನವಾಯ್ತಿದನು ಕೇಳ್ದು | ಖ್ಯಾತ ರಾಮನರಸಿ ||
ಭೂತಳದೊಳಿಹಳೆ ನಿಜವೆ | ಸೀತೆ ಜೀವವೆರಸಿ        ||೩೬೯||

ಎಡತೋಳಿನೋಳ್ ಮತ್ಸ್ಯವೆಂದು | ನುಡಿದಳ್ ಕುರುಹು ನಿನ್ನ ||
ಮಡದಿ ಪೇಳಿರ್ದಪಳು ಸೀತೆ | ದೃಢವು ಮಾತಿದೆನ್ನ    ||೩೭೦||

ನುಡಿ ಮತ್ತೇನನಿತ್ತಿರ್ದಪಳೊ | ಬಿಡಿಸುವರೆ ಲವನ ||
ಕೊಡು ಸಂದೇಹ ಬೇಡವೀಗ | ಕೊಡುವೆನವಗೆ ಚಿನ್ನ   ||೩೭೧||

ವಾರ್ಧಕ

ಎನೆ ಸೀತೆಯಿತ್ತ ಮದ್ರಿಕೆಯ ಕುಶನೀಯಲ್ಕೆ |
ಘನಹರುಷದಿಂದಪ್ಪಿ ಮುದ್ದಿಸುತ ಪೋಪೆ ನಾ |
ತನಯ ಕಾದಿಹರೆನ್ನನಿರು ಮರನನೇರ್ದು ನೀ ಲೇಸಹುದು ಮುಂದೆನ್ನುತ ||
ವನಜನೇತ್ರೆಯರೊಡನೆ ಬಂದು ನೀರೆರೆವಾಗ |
ಲನುವರಿದು ಲವನ ಕರದೊಳು ನೀಡಿಯುಂಗುರವ |
ನನುಜನಿಹ ವೃಕ್ಷಮಂ ಸೂಚನೆಯ ಗೆಯ್ದಳೆಲೆ ಮುನಿಪ ಕೇಳಚ್ಚರಿಯನು  ||೩೭೨||

ಭಾಮಿನಿ

ರಾಮನಾಮಾಕ್ಷರದ ಮುದ್ರಿಕೆ |
ಯಾ ಮಹಾತ್ಮನ ಕರದಿ ಬೀಳಲು |
ಕೋಮಲದ ಪದಯುಗದ ಸಂಕಲೆ ಕಡಿದುದಾ ಕ್ಷಣಕೆ ||
ಪ್ರೇಮದಿಂದಾ ಕಡಿದ ಕುಡಿಯನೆ |
ಭೂಮಿಜಾತ್ಮಜ ಕೊಂಡೆರಗಿ ನಿ |
ರ್ನಾಮವನು ಮಾಡಿದನು ಕಾವಲೊಳಿರ್ಪ ದಾನವಿಯ ||೩೭೩||

ರಾಗ ಸೌರಾಷ್ಟ್ರ ತ್ರಿವುಡೆತಾಳ

ದುರುಳೆಯನು ಧರೆಗೊರಗಿಸಲ್ಕ | ಲ್ಲಿರುವ ಕಾಪಿನ ಭಟರು ಲವನನು |
ತರುಬಿದರು ಬಿಡದಿರಿಯೆನುತಲ | ಬ್ಬರಿಸುತೊಡನೆ     ||೩೭೪||

ಕಡಿದ ಸಂಕಲೆಯುಡಿಯೊಳವರನು | ಬಡೆದು ನಾಲ್ದೆಸೆಗಟ್ಟಿ ಹಾಯ್ದನು |
ಒಡನಿರದೆ ಕುಶನಡರ್ದ ಪಾದಪ | ದೆಡೆಗೆ ಭರದಿ       ||೩೭೫||

ಇತ್ತ ಚಾರರು ಬಂದು ರಘುವಂ | ಶೋತ್ತಮನನೀಕ್ಷಿಸುತ ಕೈಮುಗಿ |
ವುತ್ತ ಬಿನ್ನವಿಸಿದರು ನಡೆದಿಹ | ವೃತ್ತಗಳನು  ||೩೭೬||

ರಾಗ ಮುಖಾರಿ ಏಕತಾಳ

ಲಾಲಿಸು ದೇವ ರಾಮಚಂದ್ರ | ಸದ್ಗುಣಸಾಂದ್ರ | ಲಾಲಿಸು ದೇವ ರಾಮಚಂದ್ರ ||
ಬಾಲ ತಪ್ಪಿ ಪೋದನು | ಪೇಳುವನೇನದನು  || ಪಲ್ಲವಿ ||
ಚಂದ್ರಮತಿಯ ಕುಟಿಲದಲ್ಲಿ | ಸಂಕಲೆ ಕಡಿಯ | ಲಂದು ಬಾಲಕನು ಮತ್ತಲ್ಲಿ |
ಕೊಂದನದರ ಹೋ | ಳಿಂದಲಿ ಗಾರುಡಿ |
ಯೆಂದೆಂಬವಳನು | ಮುಂದಕೆ ಹಾಯಲು |
ಬಂದಡ್ಡಯ್ಸಿದ | ಮಂದಿ ಕುದುರೆ ಸಹ |
ಹೊಂದಿಸಿ ಕೆಲದಲಿ | ಮುಂದಕೆ ನಡೆದ        ||೩೭೭||

ಭಾಮಿನಿ

ಚರರ ನುಡಿಯನು ಕೇಳಿ ರಘುಪತಿ |
ಕೆರಳಿ ಕರೆ ಕರೆ ಚಂದ್ರಮತಿಯನು |
ದುರುಳತನವನು ಗೆಯ್ದಳೇ ಸಂಕಲೆಯನವಳಿಂಗೆ ||
ಚರಣಕಿಕ್ಕಿರೆನಲ್ಕೆ ಜೋಡಿಸೆ |
ಮರಳಿ ತರುವರೆ ಭರತ ಶತ್ರು |
ಘ್ನರನು ತವಕದಿ ಕರೆವುತಿಂತೆಂದನು ಸಗಾಢದಲಿ      ||೩೭೮||

ರಾಗ ನಾದನಾಮಕ್ರಿಯೆ ಅಷ್ಟತಾಳ

ಕೇಳಿರೈ ಭರತಶತ್ರುಘ್ನರು | ಪೋಗಿ | ರೇಳಿಲವನು ಮಾಡದೀರ್ವರು ||
ಬಾಲನ ಹಿಡಿತಹುದೀ ಕ್ಷಣ | ಬಾಯಿ | ಸಾಲದು ಪೊಗಳುವಡಾತನ       ||೩೭೯||

ಆವ ಪುಣ್ಯಾತ್ಮೆ ಪೆತ್ತಳೊ ಕಾಣೆ | ಗುರು | ವಾವನೊ ಬಾಲನಿಗಿಲ್ಲೆಣೆ ||
ಕೇವಲ ಸಾಹಸವಂತನು | ನಿಮ್ಮ | ಭಾವಕೆ ತಿಳಿದಪುದೆಂದನು  ||೩೮೦||

ರಾಗ ಶಂಕರಾಭರಣ ಮಟ್ಟೆತಾಳ

ಎನಲು ಭರತ ಶತ್ರುಹರರು | ಮನದೊಳುಬ್ಬಿ ಸೈನ್ಯಸಹಿತ |
ಧನು ಶರಾಳಿ ಕೊಂಡು ಸಂ | ದಣಿಸಿ ಬರುತಿರೆ ||
ಜನಕಜಾಕುಮಾರರಿತ್ತ | ಅನುವರಕ್ಕೆ ಸನ್ನಹಿಸಲಿ |
ಕನಿತರೊಳಗೆ ಮುತ್ತಿತಿವರ | ಘನಚತುರ್ಬಲ ||೩೮೧||

ಬಿಡದಿರರ್ಭಕರನು ಸೆರೆಯ | ಹಿಡಿಯಿರೆನುತ ಬಂದು ಕವಿದ |
ಪಡೆಯನಿವರು ಕ್ಷಣದಿ ಬಾಣ | ಗಡಣದಿಂದಲಿ ||
ಕಡಿದುರುಳ್ಚಲಯ್ದೆ ಕಾಣು | ತೊಡನೆ ಶತ್ರುಘ್ನನವರ |
ಕಿಡಿಯನಿಡುವ ಕೋಪದಿಂದ | ತಡೆವುತೆಂದನು        ||೩೮೨||

ಭಳಿರೆ ಬಾಲಕರಿರ ನಮ್ಮ | ಬಲವನೆಲ್ಲ ಸವರ್ದ ಶೌರ್ಯ |
ಗಳನು ತೋರ್ಪುದೆನ್ನೊಳೀಗ | ಕಲಿಗಳಾಗಿರೆ ||
ಬಳಿಕ ತಿಳಿಯಬಹುದೆನುತ್ತ | ಬಲು ಶರಾಳಿಗಳನು ಬಿಡಲಿ |
ಕುಲಿದು ತರಿವುತೆಂದ ಕುಶನು | ಮುಳಿಸಿನಿಂದಲಿ      ||೩೮೩||

ಕರದಿ ಶಸ್ತ್ರವಿರ್ದು ಬಳಿಕ | ಬರಿಯ ಮಾತನಾಡೆ ನಿನ್ನ |
ಹಿರಿಯತನಕೆ ಹೆದರಿ ಹಿಂದೆ | ಸರಿವರಲ್ಲವೈ ||
ಅರಿಯಬಹುದು ಬಳಕೆನುತ್ತ | ಸರಳಮಳೆಯ ಕರೆಯೆ ತಾಳ |
ಲರಿಯದವನು ಗಾಯವಟ್ಟು | ಮರಳ್ದನಾ ಕ್ಷಣ          ||೩೮೪||

ರಾಗ ಭೈರವಿ ಏಕತಾಳ
ವರ ಶತ್ರುಘ್ನನು ಧುರದಿ | ಸೋ | ಲ್ದಿರವನು ಕಾಣುತ ಭರದಿ ||
ಭರತನು ಕುಶಗಿದಿರಾಂತು | ಖತಿ | ವೆರಸಿ ನುಡಿದನವನಿಂತು   ||೩೮೫||

ಕಲಹದಿ ಶತ್ರುಘ್ನನನು | ಸಲೆ | ಗೆಲಿದೆನೆನುತ್ತಲಿ ನೀನು ||
ಗೆಲವ ಮನಕೆ ತರಬೇಡ | ಕಡು | ಗಲಿ ಭರತನು ನಾ ನೋಡಾ ||೩೮೬||

ಕಂಗಳು ಮೂರೇನಿಹುದೆ | ಮುಖ | ಮಂಗದೊಳಯ್ದೇನಿಹುದೆ ||
ಹಿಂಗದೆ ಭರತನದಾಗೆ | ರಣ | ರಂಗದಿ ಭಯವಿಲ್ಲೆನಗೆ ||೩೮೭||

ಸಂತಸವಾದುದು ನಿನ್ನ | ನುಡಿ | ಗಂತರವಿಲ್ಲೆಲೆ ಚಿಣ್ಣ ||
ಕಂತುವೆ ನೀನೇನಲ್ಲ | ಶಿವ | ನಂತೆನಗೂ ಕುರುಹಿಲ್ಲ   ||೩೮೮||

ನೀ ಹೆಣ್ಣಾಗಿರಲಾನು | ಸ್ಮರ | ನಾಹೆನು ಸಂಶಯವೇನು ||
ಸಾಹಸಿಗನೆ ನೀನೆನುತ | ಕುಶ | ನೂಹಿಸಿ ನುಡಿದನು ನಗುತ    ||೩೮೯||

ರಾಗ ಶಂಕರಾಭರಣ ಪಂಚಾಗತಿ ಮಟ್ಟೆತಾಳ

ಕುಶನು ಪೇಳ್ದ ನುಡಿಯ ಕೇಳ್ದು ಕನಲಿ ಭರತನು |
ದೆಸೆಯ ಕಾಣಬಾರದೆಂಬ ಪರಿಯೊಳ್ ಶರವನು ||
ಮುಸುಕಲಂದು ಕಡಿದು ಮಗುಳೆ ಬಳಿಕ ಬಾಲನು |
ನಸುನಗುತ್ತಲೆರಡುಮಡಿಯಲಿದಿರಿಗೆಚ್ಚನು    ||೩೯೦||

ಭಳಿರೆ ಬಾಲ ಮೆಚ್ಚಿದೆನು ಕುಮಾರವರ್ಗದಿ |
ಇಳೆಯೊಳಾರ ಕಾಣೆನೆಣೆಯ ನಿನಗೆ ಗರ್ವದಿ ||
ಹೊಳೆವುತಯ್ದುತಿರಲು ಬಾಣಗಳನು ತರಿವುತ |
ತುಳುಕಿದನು ನಿಶಿತ ಶರಗಳೆಲ್ಲ ಮೆರೆವುತ    ||೩೯೧||

ಆಸುಕಣೆಗಳನ್ನು ತರಿವುತೊಡನೆ ಕುಶಲನು |
ಲೇಸು ವೀರನಹೆಯೊ ನೀನು ಎನುತಲವನನು ||
ವಾಸಿ ಪಂಥ ವಿಡಿದು ಬಾಣವೆಂಟರಿಂದಲಿ |
ಘಾಸಿಯಾಹ ತೆರದೊಳೆಚ್ಚನೇನನುಸಿರಲಿ    ||೩೯೨||

ಭಾಮಿನಿ

ಘಾಯವಟ್ಟಾ ಕುಶನ ಬಾಣದ |
ಲಾ ಯಶೋನಿಧಿ ಸೋತು ನಮ್ಮಲಿ |
ಹಾಯದೆನುತಲೆ ತಿರುಗೆ ಕಾಣುತ ಚರರು ತವಕದಲಿ ||
ರಾಯರಾಘವನೆಡೆಗೆ ನಡೆತಂ |
ದಾಯಕಿನ್ನೇನಕಟ ರಣದಿ ಪ |
ಲಾಯನವನೆಸಗಿದನು ಭರತನೆನುತ್ತಲುಸಿರಿದನು      ||೩೯೩||

ರಾಗ ನವರೋಜು ಏಕತಾಳ

ಲಾಲಿಸು ರಾಜಲಲಾಮ | ದಿ | ಕ್ಪಾಲಕವಂದಿತ ರಾಮ ||
ಹೇಳಲೇನದನು ನಾ | ಬಾಲಕರೀರ್ವರು | ಮೇಳವಿಸಿಹರವ | ರೂಳಿಗ ಘನವೈ    ||೩೯೪||

ರಣದಿ ಶತ್ರುಘ್ನನನು | ಸಲೆ | ಕೆಣಕಿಸಿಯೆ ಸೋತವನು ||
ಗುಣಮಣಿ ಭರತನು | ಸೆಣಸಲರಿಯದಾ | ಕಣೆಯಿಂದೇರ್ವಡ | ದೆಣಿಸದೆ ತಿರಗಿದ ||೩೯೫||

ಪೋದಾ ಸೈನ್ಯದ ಮಾತು | ಮ | ತ್ತಾದಿಯೊಳೇ ಲಯವಾಯ್ತು ||
ಮೇದಿನಿಯೊಳಗಾರ್ | ಕಾದುವರವರೊಳು | ಭೇದಿಸಲರಿದೆಲೆ | ಆದಿಪುರುಷನೆ     ||೩೯೬||

ರಾಗ ಭೈರವಿ ತ್ರಿವುಡೆತಾಳ

ಚಾರಕರ ನುಡಿ ಕೇಳ್ದು ರಘುಕುಲ | ವೀರನುರೆ ಚೋದ್ಯದಲಿ ಮೂಗಿನೊ |
ಳೇರಿಸಿದ ಬೆರಳಿಂದಲೊಯ್ಯನೆ | ಚಾರು ಮಕುಟವ ತೂಗುತಿನ್ನೇನ್ |
ವೀರರೋ ಮನಕರಿಯದಾಯ್ತು ಕು | ಮಾರಕರ ನೆಲೆಯೆನುತಲಾಕ್ಷಣ |
ಭೋರಿಡುವ ರಣವಾದ್ಯರವಗಳ | ಭೂರಿ ಘನವೈಭವಗಳಿಂದಲಿ ||
ಬಂದನಾಗ | ಯುದ್ಧಕ | ಯ್ತಂದನಾಗ         ||೩೯೭||

ಭರತಲಕ್ಷ್ಮಣ ಶತ್ರುಮರ್ದನ | ವರಸುಮಂತ್ರಾಭಾಸ್ಕರಾತ್ಮಜ |
ಮರುತನಂದನ ಜಾಂಬವಾದಿಗ | ಳೆರಡು ಪಾರ್ಶ್ವದೊಳಿರಲು ಪಾಠಕ |
ರಿರದೆ ಕೈವಾರಿಸಲು ಗಜರಥ | ತುರಗ ಪಾದಾತಿಗಳ ಸಂದಣಿ |
ಮೆರೆಯೆ ಮೇರೆಯ ಮೀರಿ ಬರುತಿಹ | ಶರಧಿಯಂದದಿ ಸಕಲ ಬಲಸಹ ||
ಬಂದರಾಗ | ಸಮರಕ | ಯ್ತಂದರಾಗ         ||೩೯೮||

ರಾಗ ಮಾರವಿ ಏಕತಾಳ

ಮಾನವರೆರೆಯನು | ತಾನೀ ಪರಿಯಿಂ |
ದಾನೆ ಕುದುರೆ ರಥ | ಸೇನೆ ಸಹಿತಲನು |
ಮಾನಿಸದೊಡನೆ ನಿ | ಧಾನದಿ ಬಂದಾ |
ಸೂನುಗಳನು ಸು | ಯ್ದಾನದಿ ಮುತ್ತಿದ | ರೇನನೆಂಬೆ  ||೩೯೯||

ನಡೆ ನಡೆ ಹಿಡಿ ಹಿಡಿ | ಕೆಡೆ ಕೆಡೆ ಕಡಿ ಕಡಿ |
ತಡೆ ತಡೆ ಫಡ ಫಡ | ಪೊಡೆ ಪೊಡೆ ಬಿಡಬೇ |
ಡೆಡೆಯೊಳೆನುತಲಾ | ರ್ಭಟಿಸಿ ಭಟರು ಬೊ |
ಬ್ಬಿಡುತಲಿ ಮುತ್ತಿದರ್ | ಸಡಗರದಿಂದಲಿ | ಏನನೆಂಬೆ  ||೪೦೦||

ಕಂದ

ಎಲ್ಲವರಂ ಮಿಕ್ಕೀ ರಘು |
ವಲ್ಲಭನುಂ ಹಾರಿಸುತಯ್ದೆ ನಿಜರಥವನುಂ ||
ಮೆಲ್ಲನೆ ಬಾಲಕರೀರ್ವರಿ |
ಹಲ್ಲಿಗೆ ತಂದಿದಿರು ನಿಲಿಸಿ ಮಗುಳಿಂತೆಂದಂ  ||೪೦೧||

ರಾಗ ಕೇದಾರಗೌಳ ಅಷ್ಟತಾಳ

ಭಳಿರೆ ಬಾಲಕರಿರ ಮೆಚ್ಚಿದೆ ನಿಮ್ಮಯ | ಬಲು ಪರಾಕ್ರಮಕೆ ನಾನು ||
ಕುಲವು ನಿಮ್ಮದು ಆವುದುಸಿರುವುದೆನೆ ಕೇಳಿ | ಒಲವಿಂದ ಲವನೆಂದನು  ||೪೦೨||

ಸಂಗರಕಿದಿರಾಗಿ ಕುಲವ ಕೇಳುವುದೇನೈ | ಭಂಗಿಯ ತೆರದಿಂದಲಿ ||
ಹೆಂಗುಸಲ್ಲೈಸೆ ಕಾದಿದಡೆ ಕಾಣಿಸದೆ ನ | ಮ್ಮಂಗವು ನಿನಗೆಂದನು        ||೪೦೩||

ಗೆಲವಲ್ಲ ಗೆಲಿದರೆ ಸೋತರೆ ಸೋಲಲ್ಲ | ಎಲೆ ಬಾಲರಿರ ನಿಮ್ಮೊಳು ||
ಕಲಹದಿ ಲಕ್ಷ್ಮಣ ನಿನ್ನನು ಸೆರೆವಿಡೆ | ದೆಳೆತಾರನೇನೊ ಪೇಳು  ||೪೦೪||

ಅಣ್ಣನ ಸೆರೆಯೊಳಗಿಟ್ಟಿರ್ದ ನಿನ್ನಯ | ಬಣ್ಣಗಾರಿಕೆಗಳನ್ನು ||
ಕಣ್ಣಾರೆ ನೋಳ್ಪೆನೆಂದೆಚ್ಚನು ಕುಶನೇನ | ಬಣ್ಣಿಸಿದಪೆನದನು     ||೪೦೫||

ರಾಗ ಶಂಕರಾಭರಣ ಮಟ್ಟೆತಾಳ

ಕಡುಗಿ ರಘುಕುಲೆಂದ್ರನೊಡನೆ | ಹುಡುಗರೆಚ್ಚ ಶರವನೆಲ್ಲ |
ಕಡಿದು ಕೂಡೆ ಕೋಲಗರೆದ | ಗಡಿಮಿತಿಲ್ಲದೆ  ||೪೦೬||

ಬಡವರೇ ಕುಮಾರರದರ | ನಡೆಯೊಳಾರ್ದು ತರಿದು ನಾಲ್ಕು |
ಮಡಿಯೆನಲ್ಕೆ ಸುರಿದರಂಬ | ಫಡ ಫಡೆನುತಲಿ         ||೪೦೭||

ತಣಿಯದಿವರ ಸತ್ತ್ವವೀ | ಕಣೆಗಳಿಂದಲೆನುತ ರಘುಜ |
ನೆಣಿಸಿ ಬಾಲರಂಬುಗಳನು | ಕ್ಷಣದಿ ಖಂಡಿಸಿ ||೪೦೮||

ಫಣಿಶರವನು ತೆಗೆದೆಸಲ್ಕೆ | ಪ್ರಣತ ಗರುಡಮಾರ್ಗಣದಲಿ |
ಗುಣವನೆಸಗಿದನು ಕುಮಾರ | ಮಣಿ ಲವಾಖ್ಯನು      ||೪೦೯||

ತಿರುಗಿ ರಘುಕುಲೇಂದ್ರನಗ್ನಿ | ಶರವ ಬಿಡಲು ವಾರುಣಾಸ್ತ್ರ |
ವರದಿ ಲವಕುಮಾರನದನು | ಪರಿಹರಿಸಲಿಕೆ  ||೪೧೦||

ಗಿರಿ ಕಳಂಬನೆಸಲು ರಾಮ | ನಿರದೆ ಬಳಿಕ ವಜ್ರಮಯದ |
ಸರಳಿನಿಂದ ಕಡಿದನಾ | ತರಳನೆಣಿಸದೆ      ||೪೧೧||

ಭಾಮಿನಿ

ತಿಮಿರಬಾಣವ ಬಿಡಲು ರಾಮನು |
ಕಮಲಬಾಂಧವಶರದಿ ಲವನುಪ |
ಶಮಿಸಲೀ ಪರಿ ಬಹುವಿಧದ ಮಂತ್ರಾಸ್ತ್ರಗಳನೆಲ್ಲ ||
ಸಮರಮುಖದಲಿ ಗೆಲಲು ಬಾಲಕ |
ರಮಿತ ವಿಕ್ರಮಗಳನು ಸೀತಾ |
ರಮಣನೀಕ್ಷಿಸಿ ಚೋದ್ಯಬಡುತಿಂತೆಂದನವರೊಡನೆ    ||೪೧೨||

ರಾಗ ಕಾಂಭೋಜಿ ಝಂಪೆತಾಳ

ಕುವರರಿರ ನಿಮ್ಮ ಸಾಹಸಕೆ ಮೆಚ್ಚುವುದು ಮನ | ವಿವರಿಸುವೆ ನಾನದೇನಿನ್ನು ||
ದಿವಿಜ ಮಾನವ ಭುಜಂಗಾದಿಗಳೊಳೆಮ್ಮ ಗೆಲು | ವವರಿಲ್ಲವಿದುವೆ ನಿಶ್ಚಯವು      ||೪೧೩||

ಆರ ಮಕ್ಕಳು ನೀವು ಪೇಳಬೇಕೆನುತ ರಘು | ವೀರ ಬಹುಪರಿಯೊಳವರೊಡನೆ ||
ಚಾರಿವರಿವುತ ಕೇಳೆ ನಸುನಗೆಯು ಮಿನುಗಲವ | ರಾ ರಘೋತ್ತಮಗೆ ಪೇಳಿದರು  ||೪೧೪||

ಮನಕೆ ಬೇಸರವಾದಡಿಳುಹು ಧನುಶರಗಳನು | ಘನವೀರನಾಗಿರಲು ಕಾದು ||
ನಿನಗೇತಕೆಮ್ಮ ಪಡೆದವರ ಬಹಳಾಯತವು | ಎನುತಲೆಚ್ಚರು ಸೂಟಿಯಿಂದ        ||೪೧೫||

ಮಿತಿಯಿಲ್ಲದಾ ಬಾಲರೆಚ್ಚ ಬಾಣಗಳು ರಘು | ಪತಿಯ ಪಾದದಿ ಬಿದ್ದುವೊಡನೆ ||
ಖತಿಯಿಂದ ರಾಮನೆಸೆದಪರಿಮಿತ ಶರಗಳಾ | ಸುತರ ಮಸ್ತಕವ ಮೀರಿದುವು     ||೪೧೬||

ಅಚ್ಚರಿವಡುತ ರಾಮನೆಂದ ಜಾಂಬವರೊಳೇ | ನಚ್ಚಿತವಿದೀ ಕುಮಾರಕರು ||
ಎಚ್ಚಾ ಶರೌಘ ಬಂದೆನ್ನ ಪಾದದ ಬಳಿಯೊ | ಳೊಚ್ಚಿತದಿ ಬೀಳುತಿಹುದೇಕೆ         ||೪೧೭||

ನಾನೆಸೆದ ಬಾಣಗಳ ಸಂಖ್ಯಾತದಿಂದಲಾ | ಸೂನುಗಳ ಮಸ್ತಕವ ಮೀರಿ ||
ಭಾನುಮಾರ್ಗಕೆ ಪೋಗಿ ಧಾರಿಣಿಗೆ ಬಿದ್ದಿಪುದಿ | ದೇನು ಚೋದ್ಯವು ತಿಳಿಯದೆಂದ  ||೪೧೮||

ಇಂತಿರಲಿಕತ್ತ ಕೌಸಲ್ಯೆ ಸಂಕಲೆಯೊಳಿಹ | ದಂತಿಗಾಮಿನಿ ಚಂದ್ರಮತಿಯ ||
ನಿಂತು ದೂರದಿ ಕಂಡು ಮಾತನಾಡಿಸಿದಳು ಮ | ಹಾಂತರ ಸ್ನೇಹಪೂರ್ವದಲಿ    ||೪೧೯||

ರಾಗ ಸಾವೇರಿ ಆದಿತಾಳ

ಏನೆ ಚಂದ್ರಮತಿ ನಾರಿ | ಎಲೆ ಹೊಂತಕಾರಿ  || ಪಲ್ಲವಿ ||

ಮಾನವಾಧಿಪ ರಾಮ | ಗೇನಪರಾಧವ | ನೀನೆಸಗಿದೆ ಪೇಳು | ಮಾನಿನಿಯೆನ್ನೊಳು         || ಅ ಪ ||

ಚಿಕ್ಕಂದಾರಭ್ಯ ನಿನ್ನನು | ಸಾಕಿ ಸಲಹಿರ್ಪೆ | ನಕ್ಕರಿಂದಲೆ ನಾನು ||
ರಕ್ಕಸರಿಗೆ ಹಗೆಯಾಗಿಹ ರಾಮನು | ಇಕ್ಕಿಸಿದನೇಕೆ ನಿನಗೆ ಸಂಕಲೆಯನ್ನು         ||೪೨೦||

ರಾಗ ಪುನ್ನಾಗ ತ್ರಿವುಡೆತಾಳ

ತಾಯೆ ನಾನಿನ್ನೇನೆಂಬೆನು | ಅವಿಚಾರದಲಿ ರಘು | ರಾಯನೆನಗೀ ತೆರನ ಗೆಯ್ದುದನು ||
ಮಾಯಕದ ನುಡಿಯಲ್ಲವರು ಸೀ | ತಾಯುವತಿಯಾತ್ಮಜರು ದಿಟ ನಿ |
ರ್ದಾಯದಿಂದವರೊಡನೆ ಯುದ್ಧವು | ನ್ಯಾಯವಲ್ಲೆನಲೀಕೆಯೆಂದಳು       ||೪೨೧||

ಎನಲು ಕೌಸಲ್ಯೆ ಚೋದ್ಯಬಡುತಲಿ | ಪೇಳ್ದಳು ಇದೇನೆಲೆ | ಜನಕಜೆಯ ಲಕ್ಷ್ಮಣನು ಪೂರ್ವದಲಿ ||
ಜನಪನಾಜ್ಞೆಯೊಳೊಯ್ದು ಘನಕಾ | ನನದ  ಮಧ್ಯದಿ ವಧಿಸಿ ಬಾರನೆ |
ನಿನಗೆ ಮರುಳಾಟಿಕೆಯದೇಕೆಂ | ದೆನುತ ಪೇಳ್ದರೆ ಮತ್ತೆ ನುಡಿದಳು       ||೪೨೨||

ನಾನು ನಿಶ್ಚಯವಾಗಿ ತಿಳಿದಿಹೆನು | ಪುಸಿಯಲ್ಲವಿರ್ಪಳು |
ಜಾನಕಿಯು ದಿಟವಿದುವೆ ಕೇಳ್ ನೀನು ||
ಮಾನನಿಧಿ ಲಕ್ಷ್ಮಣನ ಕರೆಸಿ ನಿ | ಧಾನದಿಂದ ವಿಚಾರಿಸುವುದೆನೆ |
ಸಾನುರಾಗದಿ ಕರೆಸಲಯ್ತಂ | ದಾನತನು ಶಂಕಿಸುತ ನುಡಿದನು          ||೪೨೩||

ರಾಗ ಸೌರಾಷ್ಟ್ರ ಆದಿತಾಳ

ಮಾತೆ ಬಿನ್ನಹ ಯುದ್ಧಕೆ ಪೋಗುವೆನ್ನನು | ಇಲ್ಲಿ |
ಗೇತರ ನಿಮಿತ್ತದಿಂದ ಕರೆಸಿರ್ಪೆ ನೀನು ||
ತಾತ ಕೇಳಂದು ರಾಮನು ಜನಕಸುತೆಯನು | ವನದಿ |
ಘಾತಿಸಿ ಬಾರೆನಲೇನ ಗೆಯ್ದೆಯೊ ನೀನು      ||೪೨೪||

ಕಡಿವೆನೆನುತ ಜಡಿಯಲಸಿಯೊಳ್ ಶಿಶುಪಿಂಡವಲ್ಲಿ | ಹೊಳೆಯ |
ಲೊಡನೆ ಸೀತೆಯನು ಬಿಟ್ಟು ಬಂದೆ ವನದಲ್ಲಿ ||
ಕಡು ಸಂತೋಷವಾಯ್ತು ಭಲರೆ ಭಲರೆ ಲಕ್ಷ್ಮಣ | ಕೀರ್ತಿ |
ಪಡೆದ ನಮ್ಮ ವಂಶಕೆಲ್ಲ ನೀನೆ ಸಂಪನ್ನ      ||೪೨೫||

ವಾರ್ಧಕ

ಎಂದು ಪೊಗಳ್ದಾ ಸುಮಿತ್ರಾತ್ಮಭವಸಹಿತ ರಘು |
ನಂದನಂಗಿದನೆಲ್ಲ ತಿಳುಹಬೇಕೆನುತಲೈ |
ತಂದಳಾ ಕೌಸಲ್ಯೆ ರಣಭೂಮಿಗಾಗಿ ಕಡುತವಕದಿಂದಾ ಕ್ಷಣದೊಳು ||
ಮಂದಿಕುದುರಾನೆಗಳನೆಡಬಲಕಿರಿಸುತ ಬರು |
ವಂದಮಂ ಕಾಣುತಾಶ್ಚರ್ಯದಿಂ ರಾಘವಂ |
ಬಂದು ಪದಕೆರಗುತೇನಿಲ್ಲಿ ಬರವಾಯ್ತು ನಿಮ್ಮದು ಚೋದ್ಯಮೆನಲುಸಿರ್ದಳು       ||೪೨೬||

ರಾಗ ನೀಲಾಂಬರಿ ಝಂಪೆತಾಳ

ಕಂದ ಬಿಡು ಯುದ್ಧವದು ಸಲ್ಲ | ನಿನ್ನ ನಿಜ | ನಂದನರು ಕೇಳಿವರು ತಿಳಿದೆ ನಾನೆಲ್ಲ ||
ಇಂದುಮುಖಿ ಸೀತೆಗುದಿಸಿರ್ದ | ಬಾಲಕರು | ಸಂದೇಹವಿಲ್ಲವೈ ವಚನವಿದು ಸಿದ್ಧ  ||೪೨೭||

ಎಂದ ನುಡಿ ಕೇಳ್ದ ಮಾತ್ರದಲಿ | ರಾಘವನು | ಸಂದ ಮೂರ್ಛೆಯನು ಚೇತರಿಸಿ ಬಳಿಕಿನಲಿ ||
ಸಂದೇಹಗೊಳುತ ಲಕ್ಷ್ಮಣನ | ಕರೆದಪ್ಪಿ | ಕಂದಿ ಕಂಬನಿದುಂಬಿ ಪೇಳ್ದನೀ ಹದನ   ||೪೨೮||

ದೇವಾಂಶಜಾತ ಗುಣಯೂಥೆ | ಸೌಮಿತ್ರಿ | ಜೀವಿಸಿರ್ಪಳೆ ಜನಕಜಾತೆ ವಿಖ್ಯಾತೆ ||
ನೀ ವನಕೆ ಒಯ್ದೇನ ಗಯ್ದೆ | ಪೇಳೆನಲಿ | ಕಾ ವಿಧವನೆಲ್ಲವನು ತಾನು ಪೇಳಿದನು  ||೪೨೯||

ರಾಗ ಮಧುಮಾಧವಿ ತ್ರಿವುಡೆತಾಳ

ದೇವ ನಿಮ್ಮಾಜ್ಞೆಯಲಿ ವನಕಾ | ದೇವಿಯರ ಕರೆದೊಯ್ದು ಕೊಲಲೆಂ |
ದೋವಿ ಖಡುಗವ ಜಡಿಯಲದರೊಳು | ಕೇವಲದ ಶಿಶುಪಿಂಡವು ||೪೩೦||

ಹೊಳೆಯೆ ಗರ್ಭಿಣಿಯೆಂಬ ವಿಷಯವ | ತಿಳಿದು ಭಯದಲಿ ಭ್ರೂಣವಧೆಗಾ |
ನಳುಕಿ ಸೀತಾದೇವಿಯರ ಕೊಲ | ದುಳುಹಿ ಬಂದೆನು ದಿಟವಿದು ||೪೩೧||

ತಪ್ಪು ನನ್ನಿಂದಾದರದ ನೀ | ನೊಪ್ಪಿಕೊಳಬೇಕೆಂದು ಲಕ್ಷ್ಮಣ |
ನಿಪ್ಪ ಸಮಯಕೆ ನಾರದನು ನಡೆ | ತಪ್ಪುದನು ಮಿಗೆ ಕಂಡರು   ||೪೩೨||

ಹರಿಯ ನಾಮ ಸ್ಮರಣೆಯಲಿ ಬಹ | ಸುರಮುನಿಯನೀಕ್ಷಿಸುತ ರಾಘವ |
ನೆರಗಿ ಕರಗಳ ಮುಗಿದು ಬಂದಿಹ | ಪರಿಯದೇನೆನಲೆಂದನು    ||೪೩೩||