ಕಂದ

ಇಂತೆನುತಾಕ್ಷಣ ದ್ರೌಪದಿ |
ಯುಂ ತಳುವದೆ ಭಾನುಮತಿಯ ಜರೆದಲ್ಲಿಂದಂ ||
ಪಿಂತಿರುಗುತ ನಕುಲನ ಸಹ |
ಇಂತಿದನಂ ಗಣಿಸದೆ ಬಂದ ರಾಗ ಪುರಕಂ   ||೫೨೨||

ಹರಿಗಂ ಮಣಿದೀ ವಾರ್ತೆಯ |
ನರುಹಲ್ಕೆಮಜಾದಿಗಳುಂ ನಗುತ್ತಲವನಂ |
ಉರೆ ಮನ್ನಿಸುತಂ ನಕುಲನ |
ದ್ರುಪದಜೆಯೈದಲ್ ಪೇಳ್ದರುಪಚರ್ಯಗಳನುಂ         ||೫೨೩||

ಪರಿಣಯದುರುವೈಭವಕಂ |
ವರಸರಸಿಜನಾಭನ ಅನುಮತಿಯಿಂದಾಗಳ್ ||
ಸೌಭದ್ರಾತ್ಮಜಗಂ ಮಿಗೆ |
ಸೌಭಾಗ್ಯವನುಂ ಹಲಧರ ಹರುಷಗಳಿಂದಂ  ||೫೨೪||

ಮಂಗಲಶಾಸ್ತ್ರದಿ ವಿರಚಿಸಿ |
ಮಂಗಲವತಿಯರು ಮೊದಲಾ ರುಕ್ಮಿಣಿಸಹಿತಂ ||
ಹಿಂಗದೆ ಭೂದ್ವಿಜರಿಂದಂ |
ಕಂಗೊಳಿಸುವ ಮಂಗಳಾಷ್ಟಕವ ಸೊಗಯಿಸಿದರ್      ||೫೨೫||

ಭಾಮಿನಿ

ಕರೆದರಾ ಸಮಯದಲಿ ಧಾರೆಯ |
ನೆರೆಯಲಾ ಹಲಧರನು ಗುರುದ್ವಿಜ |
ವರರ ಸಂತಸದಿಂದ ಕೇಳ್ದಾ ರಾಮನಿಂತೆಂದ ||
ನೀತಿಯಿದುಯೆಂದೆನಲು ಹಲಧರ |
ನೋತು ವಧುವರರಿಂಗೆ ನಾರಿಯ |
ರಾತತೂಕ್ಷಣದಿಂದ ಶೃಂಗರಿಸಿ ನಗುತೊಲವಿನಲಿ      ||೫೨೬||

ವಚನ

ಮತ್ತಾ ವೇಳೆಯೊಳ್ ಸಿರಿ ಮೊದಲಾದ ವೃತ್ತಕುಚೆಯರಯ್ತಂದು ಅತ್ಯಧಿಕ ಹರುಷದಲಿ ಅರಸಿನೆಣ್ಣೆಶಾಸ್ತ್ರ ವಿರಚಿಸಲುಂ ನವರತ್ನ ಖಚಿತಮಾದ ಮಂಟಪದೊಳ್ ಶೋಭಿಸುವ ಹಸೆಮಣೆಗಂ ಪಾಡುತ್ತ ಕರೆತಂದರದೆಂತೆನೆ –

ರಾಗ ತುಜಾವಂತು ಆದಿತಾಳ

ಏಳು ಏಳಯ್ಯ ಪಾರ್ಥನ | ಬಾಲ ಬಿಂಕವದ್ಯಾಕೆ ನಿನ್ನ |
ಮೇಲೆ ಮನವಿಟ್ಟು ಕನ್ಯಾ | ಬಾಲೆಯ ಕರವಿಡಿದು ಸಂಪನ್ನ ವಿ ||
ಶಾಲದಿಂ ಹಸೆಗೆ ಮುದದಿಂದ || ಶೋಭಾನೆ  ||೫೨೭||

ತರಳೆ ನೀ ಕಾಂತಗೆ ಮೆಚ್ಚಿ ಬಂದು | ಶಿರವ ತಗ್ಗಿಸಿಕೊಳಲ್ಯಾತಕಿಂದು ||
ನೆರೆದ ಜನಮಧ್ಯದಲಿ ಪೂರ್ಣೇಂದು | ಪರಿಶೋಭಿಸುತಿಹ ಪತಿಯೊಡನಿಂದು ||
ವೆರದು ಕನಕಾಂಗಿ ಹಸೆಗೇಳು || ಶೋಭಾನೆ  ||೫೨೮||

ಹೊಂತಕಾರಿಗಳೊಳು ರಣಧೀರ | ಕಂತುಸುಮ ಶೃಂಗಾರ |
ದಂತೀಶಾದಿ ಭೋಗೋಲ್ಲಾಸಶೂರ || ಸಂತಸದಿ ಸದ್ವನ ಗಂಭೀರ ನಿ |
ಶ್ಚಿಂತೆಯೊಳು ಪಾರ್ಥಜನೆ ಹಸಗೇಳು || ಶೋಭಾನೆ   ||೫೨೯||

ಪಟ್ಟೆಸೀರೆಯ ನೆರಿವಿಡಿದುಟ್ಟು | ಶ್ರೇಷ್ಠ ತರದ ಆಭರಣವ ತೊಟ್ಟು |
ಬಟ್ಟ ಕುಚೆಯರ ಕೈಗಳ ಮುಟ್ಟು | ತಿಟ್ಟಣಿಪಜನರೆಡೆಯೊಳೊಡಂಬಟ್ಟು |
ತಟ್ಟನೆ ಕನಕಾಂಗಿ ಹಸೆಗೇಳು || ಶೋಭಾನೆ  ||೫೩೦||

ಈ ಪರಿಯಲಿ ರುಕ್ಮಿಣಿ ಮೊದಲಾದ | ದ್ರೌಪದಿಯು ಸಹ ನಿತ್ಯಾನಂದ |
ರೂಪನಾದ ಶ್ರೀಕೃಷ್ಣನ ನೆನೆದಾ | ಭೂಪನಭಿಮನ್ಯ ಕನಕಾಂಗಿಯರನಂದೀ |
ಚಾಪಲದಿಂ ಹಸೆಗೆ ಕರೆದರು || ಶೋಭಾನೆ   ||೫೩೧||

ಕಂದ

ಹಸೆಮಣೆಗೀಪರಿಯಿಂದಂ |
ಶಶಿಮುಖಿಯರು ಪಾಡಿ ಕರೆದು ವಧೂವರರುಗಳಂ ||
ಕುಶಲದಿ ಕುಳ್ಳಿರಿಸಿಯೆ ಸಂ |
ತಸದಿಂ ರಚಿಸಿದರುಮರಿಸಿನೆಣ್ಣೆಯ ಶುಭಮಂ          ||೫೩೨||

ರಾಗ ಸೌರಾಷ್ಟ್ರ ಅಷ್ಟತಾಳ

ಕಲ್ಯಾಣಂ | ಶುಭ | ಕಲ್ಯಾಣಂ                 || ಪಲ್ಲವಿ ||

ಕಲ್ಯಾಣಂ ಕಾಮಿನಿ ಕನಕಾಂಗಿಗೆ | ಕಲ್ಯಾಣಂ ಶುಭ ಕಲ್ಯಾಣಂ          || ಅ ||
ಸಿರಿಮುಖ್ಯಾಂಗನೆಯರು ಕೂಡಿ | ಪರಿ ಪರಿಯ ಸ್ವರದಲಿ ಪಾಡಿ |
ಕರೆದೆಬ್ಬಿಸಿ ಕನಕಾಂಗಿಯ ಕಯ್ಯೊಳ | ಗರಸಿನವಿತ್ತು ಪೂಸೆಂದರರಸಗೆ || ಕಲ್ಯಾಣಂ         ||೫೩೩||

ನಸುನಗುತ ಮಾನಿನಿ ಬಳಿಕ | ಬಿಸಜ ಬಾಂಧವನ ಪೋಲುವ ಮೊಗಕಾ |
ಗೆಸೆವರಸಿನವನು ಕರದಲಿ ಧರಿಸುತ | ಕುಶಲದಿಂದಯ್ತಂದು ಪೂಸಿದಳು || ಕಲ್ಯಾಣಂ       ||೫೩೪||

ಧನುಶರಗಳನಾಂತು ವೈರಿ | ಗಣವನಧಿಯ ಬತ್ತಿಸುವ ಕರಗಳ |
ವಿನಯದಿ ತನ್ನಯ ಮೃದುಹಸ್ತದಿಪಿಡಿ | ದನುವಿ ಪೂಸಿದಳರಸಿನವ || ಕಲ್ಯಾಣಂ    ||೫೩೫||

ಶರದೇಂದು ಭಾಸಗೆ ಮುದ್ದು ಮೊಗ | ದರಸಿಯು ಕೆಮ್ಮೆಣ್ಣೆಯ ಬೆರೆಸಿದ |
ಅರಶಿನವನು ಆ ಚೆಲುವಗೆಸ| ತ್ಕರದಿ ಪೂಸಿದಳತಿಸೊಬಗಿನಿಂ || ಕಲ್ಯಾಣಂ        ||೫೩೬||

ಮೃಗಮದತಿಲಕವ ಫಣೆಯೊಳಗೆ | ಮುಗುದೆ ತಾನಿಡುತ ಕೊರಳೊಳಗೆ |
ಮುಗುಳ್ಮಲ್ಲಿಗೆ ಹಾರಧರಿಸುತೀಶಗೆ | ನಗುತ ವೀಳ್ಯವನಿತ್ತು ಕುಳ್ಳಿರ್ದಳ್ || ಕಲ್ಯಾಣಂ        ||೫೩೭||

ಅನಿತರೊಳಭಿಮನ್ಯುವ ದ್ರುಪದ | ತನುಜೆಯು ನೆಬ್ಬಿಸಿ ಕೃಷ್ಣನ ನೆನೆದಾ |
ಕನಕಾಂಗಿಗೆ ಅರಸಿನವ ಪೂಸೆನುತ | ತನಯನ ಕೈಯೊಳಿತ್ತಳರಸಿನವ || ಕಲ್ಯಾಣಂ        ||೫೩೮||
ಎಡಬಲಗಳನೀಕ್ಷಿಸುತಾಗ | ಕಡುಗಲಿ ಪಾರ್ಥನಸುತನು ತಾ ಬೇಗ |

ಉಡುಪತಿಯನು ಪೋಲ್ವಾನನವನು ತಾರೆಂ | ದೊಡನೆ ಪೂಸಿದನರಸಿನವ || ಕಲ್ಯಾಣಂ    ||೫೩೯||
ಹಸ್ತಕಡಗ ಕಂಕಣದಿಂದ | ವಿಸ್ತರವಾದ ಮುದ್ರಿಕೆಯಿಂದ |

ಸ್ವಸ್ತದಿ ತೋರ್ಪ ಹಸ್ತಗಳ ತಾರೆಂದು ಪ್ರ | ಶಸ್ತದಿ ಪೂಸಿದಳರಸಿನವ || ಕಲ್ಯಾಣಂ ||೫೪೦||
ಕಾಲನೂಪುರ ಗೆಜ್ಜೆಗಳಿಂದ | ಮೇಲಾದಪಿಲ್ಲಿ ಮೆಂಟಿಕೆಯಿಂದ |

ಬಾಲೆ ವಿಡಾಯದಿ ನಡವ ಚರಣವ ತಾರೆಂ | ದೋಲಾಡಿ ಪೂಸಿದನರಸಿನವ || ಕಲ್ಯಾಣಂ   ||೫೪೧||
ನೊಸಲುತಿಲಕವ ತಿದ್ದುತ | ಕುಸುಮ ಮಾಲೆಯ ಮುಡಿಗೆ ಮುಡಿಸುತ |

ಅಸದೃಶವೆನಲಾ ಕಾಂತೆಗೆ ವೀಳ್ಯವ | ನೊಸೆದಿತ್ತು ಸೇಸೆಯ ತಳುವುತ್ತ || ಕಲ್ಯಾಣಂ        ||೫೪೨||
ನಿತ್ಯಾನಂದಾತ್ಮಕಹರಿಯ | ಮತ್ತೆ ಮನದಿ ನೆನೆವುತ ಕ್ಷಿತಿಯ |

ಮುತ್ತಿನ ಪೀಠದಿ ಕುಳ್ಳಿರೆ ಬಾಸಿಗ | ವೃತ್ತಕುಚೆಯರಳವಡಿಸಿದರು || ಕಲ್ಯಾಣಂ      ||೫೪೩||

ವಚನ

ಈ ರೀತಿಯಿಂ ಅರಸಿನೆಣ್ಣೆಯ ಶಾಸ್ತ್ರಮಂ ವಿರಚಿಸಿ ಆರತಿಯೆತ್ತಿದರದೆಂತೆನೆ –

ಶೋಭಾನೆ

ಅಂಬುಜಾಕ್ಷಿಗೆ ಅಮಿತ ವಿಭವೆಗೆ ಜಂಭವೈರಿಯ ಮೊಮ್ಮಗೆ |
ಕಂಬು ಕಂಠಿಗೆ ಕರುಣವಾರ್ಧಿಗೆ ಕುಂಭಿನೀಶರ ಗಂಡಗೆ ||
ಕುಂಭಕುಚೆಗೆ ಕಲಾವಿನೋದೆಗೆ ದಂಬಹರಣೆಗೆ ಶರಣೆಗೆ |
ಜಾಂಬವತಿ ಸಿರಿಮುಖ್ಯ ಮಹಿಷಿಯರೆಂಬವರು ನಲಿದಾಡಿ ಪಾಡುತ |
ಅಂಬುಜದಾರತಿಯ ಬೆಳಗಿರೆ        ||೫೪೪||

ತೋರ ಮುತ್ತಿನ ಹಾರದಿಂ ಶೃಂಗಾರಮಾಗಿ ಶೋಭಿಪಳಿಗೆ |
ಮಾರನನುಪಳಿದೋರಣದಿ ರಣಧೀರನಾಗಿಹ ಶೂರಗೆ |
ವಾರಣೇಂದ್ರನ ಗಮನಗತಿಯ ಉದಾರ ವಿಕ್ರಮನಿಗೆ |
ನಾರಿಭಾಮಾದೇವಿ ಸುಭದ್ರೆಯ ಸಾರತರದಿಂ ಸೊಗಸುತೊಲವಿಂ |
ಮೇರುವೆಯಾರತಿಯ ಬೆಳಗಿರೆ      ||೫೪೫||

ಚಂದದಿಂ ಹಲಧರಜೆಗೆ ಅಮರಪತಿನಂದನನ ನಂದನನಿಗೆ |
ಮುಂದುವರಿದುರೆ ಪರಸುತಿಹ ದ್ವಿಜ ವೃಂದದಿಂ ಶೋಭಿಸಿಮಿಗೆ |
ಬಂದರುಲ್ಲಾಸದಲಿ ಭಾವಕಿ ರುಗ್ಮಿಣಿಯರು ವಧುವರರಿಗೆ |
ಇಂದಿರಾಪತಿಯಾದ ನಿತ್ಯಾನಂದ ಹರಿ ನೀ ಸಲಹೆನುತ ವರ |
ಕುಂದಣದಾರತಿಯ ಬೆಳಗಿರೆ        ||೫೪೬||

ಭಾಮಿನಿ

ಜನಪ ಕೇಳಿಪರಿಯ ವಿಭವದಿ |
ದಿನ ಚತುಷ್ಟಯವನ್ನು ಕಳೆವುತೆ |
ಘನತರದ ಚೂರ್ಣೋತ್ಸವದ ಮಂಗಲವ ರಚಿಸುತ್ತ ||
ತನತನಗೆ ನಡೆತಂದ ದ್ವಿಜರಿಗೆ |
ಕನಕಮುಖ್ಯಾಭರಣ ದಕ್ಷಿಣೆ |
ಯನು ವಿನಯದಿಂದಿತ್ತು ತೃಪ್ತಿಯ ಬಡಿಸಿ ಬಹುವಿಧದಿ  ||೫೪೭||

ಕಂದ

ಬಲರಾಮಂಗುಳಿದುರುಯಾದವ |
ಬಲವು ವಸುದೇವದೇವಕಿ ಮುಖ್ಯರ್ಗೆಲ್ಲಂ ||
ಚಳಕದೊಳವುತಣ ಮಾಡಿಸಿ |
ಬಳಸಿದರುಪಚರ್ಯದಿಂದೆ ಯಮಜಾದಿಗಳುಂ         ||೫೪೮||

ರಾಗ ಭೈರವಿ ಝಂಪೆತಾಳ

ಪೊಡವಿಪಾಗ್ರಣಿ ಕೇಳು | ಜಡಜಾಕ್ಷ ರಾಮರಿಗೆ |
ಮಡದಿಯರಿಗಾದಿಯರ | ನೊಡನಿಪ್ಪವರಿಗೆ   ||೫೪೯||

ಪೀತಾಂಬರಗಳ ಬಹು | ನೂತನಾಭರಣಗಳ |
ಭೂತಳೇಶ್ವರರಯ್ವರ್ | ಪ್ರೀತಿಯಿಂದಾಗ     ||೫೫೦||

ತಂದೊಪ್ಪಿಸುತ ನಂದ | ನಂದನನ ಪದಕಮಲ |
ದ್ವಂದ್ವಗಳಿಗಭಿನಮಿಸ | ಲಂದು ಶ್ರೀಕೃಷ್ಣ     ||೫೫೧||

ನುಡಿದನೆಲೆ ಧರ್ಮಜನೆ | ಉಡುಗೊರೆಯ ನಮಗಿತ್ತೆ |
ಪೊಡವಿಪರೊಳೌದಾರ್ಯ | ದೃಢವು ನಿನಗೆಂತೊ      ||೫೫೨||

ಯಾರು ಬಲ್ಲರೆನುತ್ತೆ | ಧೀರ ಹರಿ ರಾಮರಾ |
ನಾರಿ ಕನಕಾಂಗಿಯನು | ಧಾರಿಣಿಪರಿಂಗೆ     ||೫೫೩||

ಪರಸುತೊಪ್ಪಿಸಿ ದ್ರುಪದ | ವರಸುತೆ ಸುಭದ್ರೆಯರ |
ನೆರವಿಯಿಂ ಕುಂತಿಯಂ | ಕರೆದೆಂದರಾಗ     ||೫೫೪||

ತಂಗಿಯರುಗಳು ಕೇಳಿ | ಯಿಂಗಿತದೊಳೀ ಸೊಸೆಯ |
ಸಂಗಡಾಡಿಸುತ ಸೌ | ಖ್ಯಂಗಳಿಂದಿಹುದು    ||೫೫೫||

ವಚನ

ಈ ರೀತಿಯಿಂ ಮುರಾರಿ ಮನೋಹರುಷದಿಂ ಪಾಂಡವರಂ ಮನ್ನಿಸಿ ಮತ್ತಿಂತೆಂದನು –

ರಾಗ ಶಂಕರಾಭರಣ ತ್ರಿವುಡೆತಾಳ

ಹೋಗಿಬರುವೆವು ಪೊಡವಿಪರೆ ಸ |
ರಾಗದಿಂ ನೀವ್ ನೆನೆಸಲಿಲ್ಲಿಗೆ |
ಕೂಗದಿಳಿತಹೆಯಿದು ಯಥಾರ್ಥದಿ | ಯೋಗಿಗಳಿರ     ||೫೫೬||

ಎಂದೆನುತ ರಥವೇರ್ದು ಹಲಧರ |
ರಿಂದಿರೆಯು ರೇವತಿಯು ಮುಖ್ಯ |
ನಂದಮಹಿಷಿಯರಾದಿಯಾದ ಸ್ತ್ರೀ | ವೃಂದದಿಂದ       ||೫೫೭||

ನಡೆಯಲವರನು ಬಿಡದೆ ಬಂದರು |
ತಡೆಯದಡಿಗಡಿಗೆರಗಿ ಪೊಡವಿಪ |
ರೊಡನೆ ನಡುಮಾರ್ಗಗಳ ಪರಿಯಂ | ತೆಡೆಯವಿಡಿದು ||೫೫೮||

ಆ ಸಮಯದೊಳು ಉಪಚರಿಸಿ ಪರಿ |
ತೋಷದಿಂ ಪಾಂಡವರ ಪಿಂದಕೆ |
ಕೇಶವನು ಕಳುಹುತ್ತ ಬಂದ ವಿ | ಲಾಸದಿಂದ ||೫೫೯||

ಸಾತ್ಯಕಿ ಪ್ರಮುಖಾದಿಗಳ ಪೊಗ |
ಳ್ದತ್ಯಧಿಕ ಸಂಭ್ರಮದಿ ಸೊಗಸುತ |
ದೈತ್ಯಮರ್ದನ ಬಂದ ದ್ವಾರಕಾ | ಪತ್ತಣಕ್ಕೆ   ||೫೬೦||

ಕೇರಿಕೇರಿಯ ಜನರು ಹರುಷದೊ |
ಳಾರತಿಯ ಬೆಳಗುತ್ತಲಿರಲು ಮು |
ರಾರಿಯಯ್ದಿದನರಮನೆಯ ಹೊರ | ದ್ವಾರದೆಡೆಗೆ      ||೫೬೧||

ರಥವನಿಳಿದಾಕ್ಷಣದಿ ಉದ್ಧವ |
ಪತಿಕರಿಸಿ ಹಸ್ತದಿ ಸುಹಸ್ತವ |
ನತಿಶಯದೊಳಿಳಿದಂತು ಪೀಠಕೆ | ಸತಿಯು ಸಹಿತ    ||೫೬೨||

ಇರದೆ ಕುಳ್ಳಿರಲೆಡಬಲದಿ ಹಲ |
ಧರನತಿಥಿಯಾಗಿಹರು ಬಾಂಧವ |
ರಿರಲು ಸತಿಸುತ ವೈಭವದಿ ಕೇಳ್ | ಧರಣಿಪಾಲ      ||೫೬೩||

ಕಂದ

ತರುಣಿಯರಾ ವೇಳೆಯೊಳುಂ |
ಪರಿಪರಿಯ ಸೊಡರ್ಗಳ ಸುಳಿದು ಚೆಲ್ಲುತ ಬಳಿಕಂ ||
ತರತರದಾರತಿಗಳನುಂ
ಸ್ವರವೆತ್ತಿ ತಾವ್ ಪಾಡುತೆತ್ತೆತ್ತಿ ನಮಿಸಿದರಾಗಳ್      ||೫೬೪||

ಇತ್ತಂ ಪಾಂಡವರಿಂದ್ರ |
ಪ್ರಸ್ಥದೊಳ್ ಮನದೊಳಗೆ ಹರಿಯನುಂ ನೆನೆನೆನೆದುಂ ||
ಸ್ವಸ್ಥದೊಳಿರ್ದಂ ಧಾರಿಣಿ |
ಪೋತ್ತಮ ಜನಮೇಜಯ ಕ್ಷಿತೀಶನೆ ಮುದದಿಂ         ||೫೬೫||

ಧರ್ಮಜ ಭೀಮಾರ್ಜುನರಿಂ |
ಗಂ ಮಿಗೆ ವಿನಯದಿ ಮಣಿದಾ ಘಟೋತ್ಕಚಂ ಸೌ ||
ರಮ್ಯದೊಳಯ್ದಿದ ಪುರಕಂ |
ಕಾಮಾರ್ಥಮದಾಯಿತೆಂದು ಕಡು ತವಕದೊಳಂ      ||೫೬೬||

ದ್ವಿಪದಿ

ಹೀಗೆಂದ ಕಥೆಯ ವಿಸ್ತಾರಂಗಳೊಲಿದು |
ಯೋಗಿ ವೈಶಂಪಾಯನನು ತಾಮನದಿ ನಲಿದು       ||೫೬೭||

ಜನಪ ಜನಮೇಜಯ ಕ್ಷಿತಿಪಗರುಹಿದನು |
ವನಜಾಕ್ಷನಂ ನೆನೆದು ವಿನಯದಿಂ ತಾನು    ||೫೬೮||

ಈ ಕಥೆಯ ಭಕ್ತಿಯಿಂದೊಲಿದು ಸಜ್ಜನರು |
ಶ್ರೀಕಾಂತನೊಲುಮೆಯಿಂದೋದೆ ಮತಿಯುತರು      ||೫೬೯|

ಇಷ್ಟಾರ್ಥಮಂ ಪಡೆದು ಪೊಡವಿಯೊಳ್ ತುದಿಗೆ |
ಶ್ರೇಷ್ಠದಿಂ ವೈಕುಂಠಮಂ ಸಾರ್ವರ್ತಡಿಗೆ     ||೫೭೦||

ದುರಿತ ದುರ್ಬಾಧೆಗಳು ದೂರವಾಗುವುದು |
ನಿರತವಾ ಮೋದವಕ್ಕರದಿ ಮೋಹಿಪುದು     ||೫೭೧||

ಸಂಶಯಗಳಲ್ಲದಲೆ ಸರ್ವರೀ ಕೃತಿಯ ||
ಪುಂಸ್ತ್ರೀಗಳ್ ಬರೆದೋದಿ ಪಡೆಯಿರೋ ಮತಿಯ       ||೫೭೨||

ಭಾಮಿನಿ

ಪರಮಗುರುವೆಂದೆನಿಸುವಾ ಮಹ |
ವರ ಚಿದಾನಂದಾವಧೂತರ |
ಕರುಣದಿಂ ಭಾರತದಿ ಮೆರೆವ ಸಭಾಸುಪರ್ವದಲಿ ||
ನೆರೆ ಪುಡುಕುತಚ್ಚರಿಯ ಕಥೆಯೆಂ |
ದರಿತು ಚರಿತೆಯ ತೆರದಿ ವಿರಚಿಸಿ |
ಬರೆದುದನುಮೋದುತ್ತ ಕಂಡವರರಿವುದರೆ ತಿಳಿದು     ||೫೭೩||

ಕಂದ

ನಿತ್ಯಾನಂದವಧೂತನು |
ಮತ್ಯಧಿಕೋತ್ಸವದಿಂದಾ ಗುರುವಂ ನೆನೆದುಂ ||
ಮತ್ತೀ ಧರೆಯೊಳು ಸುಲಭ ಸ |
ಮರ್ಥದೊಳಿದನೆಕ್ಷಗಾನದಿಂ ವಿರಚಿಸಿದಂ     ||೫೭೪||
ತಪ್ಪುಗಳಿರಲುಂ ಬಲ್ಲವ |
ರೊಪ್ಪಿ ತಿದ್ದುವುದು ಕುಂದನ್ನೆಣಿಸದೆ ಸತತಂ ||
ಕಪ್ಪೆಯು ಹಳಿದೊಡೆ ಕಡಲಂ |
ಉಪ್ಪತಿಶಯಮಿರಲಬ್ಧಿಗೆ ಬಪ್ಪುದೆ ಕೊರತೇ   ||೫೭೫||
ಓದಿದ ಬಲದಿಂದೀಕಥೆ |
ಯಾದುದು ತಾನಲ್ಲ ನಿಜದಿ ಸದ್ಗುಣವನಧಿಂ ||
ಮೋದದೊಳಪ್ಪಣೆಗೊಡಲಿಂ |
ತಾದುದು ಮೊದಲಿಂ ಪೇಳ್ದುದಲ್ಲವಿನ್ನಿಲ್ಲವಣಂ ||೫೭೬||

ಮಂಗಲ

ರಾಗ ಸೌರಾಷ್ಟ್ರ ಆದಿತಾಳ

ಮಂಗಲಂ ಜಯ ಮಂಗಲಂ || ಮೋಹನಾಂಗಗೆ ಶ್ರೀರಂಗಧಾಮಗೆ ಮಂಗಲಂ     || ಪ ||

ಜಲದಿ ತಮನ ಕೊಂದಾತನಿಗೆ | ಕುಲಗಿರಿಯನು ತಾಳ್ದ ಕೂರ್ಮನಿಗೆ ||
ನೆಲನನೊಯ್ದಸುರನ ಗೆಲಿದವಗೆ | ಸುಲಭದಿ ಪ್ರಹ್ಲಾದನಿಗೊಲಿದನಿಗೆ | ಮಂಗಲಂ  ||೫೭೭||

ವಾಮನನಾಗಿ ಬಲಿಯೊಳಯ್ದೆ | ಭೂಮಿದಾನವ ಕೇಳಿ ಧರಣಿಯ ಸೆಳೆ ||
ದಾಮಹಾತ್ಮಗೆ ಭಾರ್ಗವ | ರಾಮನೆನಿಸಿದ ರಾಜೀವಾಕ್ಷನಿಗೆ     ||೫೭೮||

ಧರಣಿಜೆಗಾಗಿ ದಶಶಿರನ ಶಿರ | ವರಿದವಗೆ ಶ್ರೀಕೃಷ್ಣನಿಗೆ ||
ದುರುಳ ತ್ರಿಪುರರ ಪತಿವ್ರತೆಯರ | ಹುರುಳು ಗೆಡಿಸಿದ ಬೌದ್ಧರೂಪನಿಗೆ   ||೫೭೯|

ದುಷ್ಟರ ಮಡುಹಲೋಸುಗವಾಗಿ | ಶ್ರೇಷ್ಠತರದ ವಾಜಿಯನೇರಿ ||
ಸೃಷ್ಟಿಯ ಭಾರವನಿಳುಹಿದಗೆ | ಅಷ್ಟಮನಾರಿ ಮುಖ್ಯಾಂಗನೆಯರಿಗೆ       ||೫೮೦||

ದೈತ್ಯಾಬ್ಧಿಯ ವಡಬಾನಲಗೆ | ಪ್ರತ್ಯಕ್ಷಸಾಕ್ಷಿ ತಾನೆನಿಸುವಗೆ ||
ನಿತ್ಯಾನಂದವಧೂತನಿಗೆ | ಸತ್ಯಾತ್ಮನಿಗೆ ಸರ್ವೇಶ್ವರಗೆ          ||೫೮೧||

ಯಕ್ಷಗಾನ ಕನಕಾಂಗಿ ಕಲ್ಯಾಣ ಮುಗಿದುದು
|| ಶ್ರೀ ಕೃಷ್ಣಾರ್ಪಣಮಸ್ತು ||