ಭಾಮಿನಿ

ಕ್ಷೋಣಿಪತಿ ಕೇಳಾ ಕಿರೀಟಿಯ |
ಬಾಣಮುಖದಲಿ ಕಡಿವಡೆದು ಹರಿ |
ವಾಣದಾರತಿಯಂತೆ ನೆತ್ತರು ಸೂಸೆ ದೆಸೆದೆಸೆಗೆ ||
ಕಾಣುತಾ ರವಿವರ್ಮ ಗಜರಿ ಕೃ |
ಪಾಣ ಪಿಡಿದಯ್ತರಲು ಮಿಗೆ ಗೀ |
ರ್ವಾಣಪತಿನಂದನ ನುಡಿದ ಘುಡುಘುಡಿಸಿ ಖಳನೊಡನೆ         || ೧೫೬ ||

ರಾಗ ಕಾಂಭೋಜಿ ಮಟ್ಟೆತಾಳ

ಆರೆಲಾ ಮದಾಂಧವೀರನೆ | ನಿನ್ನಧಟುತನವ | ತೋರೆಲಾ ತನ್ನೊಡನೆ ಘಮ್ಮನೆ ||
ಭೂರಿ ಶೌರ್ಯದಿಂ ವರೂಥ | ವೇರಿ ಮುಂದೆ ಬರುವೆ ಬವರ |
ಶೂರ ನಿನ್ನ ಪೆಸರದಾವು | ದಾರ ತರಳನೆಂಬುದರುಹು || ಆರೆಲಾ        || ೧೫೭ ||

ವರರಸಾತಲಾಧಿಪಾಲಕ | ದನುಜೇಶ ದಿತಿಯ | ತರಳ ಸಮಸಪ್ತಕರ ಬಾಲಕ ||
ತರಣಿವರ್ಮನೆಂದು ತನ್ನ | ಕರೆವರಯ್ಯ ಲೋಕದೊಳಗೆ |
ಭರಿತ ವಿಕ್ರಮಾಂಕ ತಾನ | ದಿರಲಿ ನಿನ್ನ ಗೋತ್ರವೇನು || ಆರೆಲಾ        || ೧೫೮ ||

ವಾರಣಾಖ್ಯಪುರಕಧೀಶನು | ಪೌರುಷದಿ ತ್ರಿಪು | ರಾರಿಯೊಡನೆ ಹೋರಿದಾತನು ||
ಸಾರಸಾಕ್ಷ ಭಜಕನಾಗಿ | ಮೂರು ಜಗದಿ ಜಯವ ಪಡೆದ |
ಧೀರ ವೀರ ದುಶ್ಚವನಕು | ಮಾರ ಪಾರ್ಥನೆಂದು ತಿಳಿಯೊ || ಆರೆಲಾ    || ೧೫೯ ||

ರಾಗ ಭೈರವಿ ಅಷ್ಟತಾಳ

ಪಾರ್ಥನೆಂಬವನೆ ನೀನು | ಮಜ್ಜನಕನ | ಪೂರ್ತಿಗೊಳಿಸಿದಾತನು ||
ವ್ಯರ್ಥ ಸಾಯದಿರೀಗ | ಸ್ವಾರ್ಥವಿಡಿದು ಶರ | ಣಾರ್ತಿಯಾಗುಳುಹುವೆನು || ೧೬೦ ||

ತಾತನ ಕೊಂದವಗೆ | ಜಾತನ ಕೊಲ್ವು | ದೇತರ ಘನ ಬಿನುಗೆ ||
ವಾತಸಂಭವಗಾಗಿ | ನೀ ತೆರಳದಿರು ಪ | ರೇತಪಾಲಕನಲ್ಲಿಗೆ   || ೧೬೧ ||

ಗಳಹದಿರೆಲವೊ ನರ | ನಿನ್ನಯ ಜಲ್ಲಿ | ಗಳ ಕಂಡೆನಿಂದು ಪೂರ ||
ನಳಿನಭವಾದ್ಯರು | ಮುಳಿದೊಡೊಮ್ಮೆಗೆ ಗೆಲ್ವೆ | ಕೊಳುಗುಳವಮಿತ ಶೂರ         || ೧೬೨ ||

ಬಡಿವಾರವಾಡದಿರು | ಸುರದ್ವಿಷ | ರೊಡೆಯ ನೀ ಬಾಯ್ಮುಚ್ಚಿರು ||
ಬಿಡದೆ ಬೇವಿನ ಬೀಜ | ಗುಡದ ಪರ್ವತದಿ ತಂ | ದಿಡಲು ಸ್ವಾದಹುದೆ ಸಾರು      || ೧೬೩ ||

ಎಲವೊ ಸುರೇಂದ್ರಜಾತ | ನಿನಗೆನ್ನೊಳು | ಛಲವಿದು ತರವೆ ಖ್ಯಾತ ||
ಬಲುಹನು ನೋಡೆಂದು | ಬಳಿಕ ಪೂಡಿದನು ಕೂ | ರಲಗನು ದೈತ್ಯನಾಥ          || ೧೬೪ ||

ಎಚ್ಚ ಮಾರ್ಗಣ ತರಿದು | ಕೋದಂಡದೊ | ಳೆಚ್ಚ ರೋಷವ ಸುರಿದು ||
ದುಶ್ಚರಿತಗೆ ಬಿಡ | ಲಚ್ಚರಿಯೆನೆ ಶಿರ | ಚುಚ್ಚಿ ಕೆಡಹಲಿರಿದು       || ೧೬೫ ||

ಭಾಮಿನಿ

ಜಗತಿಪತಿ ನೀ ಕೇಳು ಕುಂತಿಯ |
ಮಗನ ಬಾಣವ ಸಹಿಸಲಾರದೆ |
ವಿಗಡ ದಿನಕರವರ್ಮ ಕಾಲನ ಕಂಡ ಸಂಗರದಿ ||
ಹಗರಣವನಿದನೀಕ್ಷಿಸುತ್ತಾ |
ಶುಗಕುಮಾರಕನುಗ್ರದಲಿ ಬಂ |
ದೊಗುಮಿಗೆಯ ಪೌರುಷದಿ ನುಡಿದನು ಪಾರ್ಥಗೀ ತೆರದಿ        || ೧೬೬ ||

ರಾಗ ಭೈರವಿ ಏಕತಾಳ

ಎಲವೋ ಮಘವನ ಮಗನೆ | ನೀ | ಕಲಹದೊಳತಿ ಸಹಸಿಗನೆ ||
ಛಲ ಮಾಡದಿರು ನಿರರ್ಥ | ಜಯ | ಲಲನೆಯು ದೊರೆವಳೆ ಧೂರ್ತ       || ೧೬೭ ||

ಅಗ್ರಜನೆಂಬುದಕಾಗಿ | ಬಿಡ | ಲುಗ್ರಗೊಳುವೆ ಬಲುವಾಗಿ ||
ವಿಗ್ರಹಕೊದಗೀ ಕ್ಷಣದಿ | ನಿನ್ನ | ನಿಗ್ರಹಿಸುವೆ ನಾ ರಣದಿ         || ೧೬೮ ||

ಕರೆ ಸೂತತ್ವಕೆ ಹರಿಯ | ಧ್ವಜ | ಕಿರಿಸೋ ಕಾಡಿನ ಕಪಿಯ ||
ಬರಿಸು ಬೆಂಬಲಕೆ ಶಿವನ | ನೀ | ಕರೆಸು ತಲೆಯ ಕಾವವನ     || ೧೬೯ ||

ಬಡಕುರಿಯನು ಗೆಲಲೇಕೆ | ಮೃಗ | ದೊಡೆಯನು ತೆರಳಲು ಬೇಕೆ ||
ಫಡ ನಿನ್ನನು ಗೆಲಲೀಗ | ಹರಿ | ಮೃಡರೇಕದನೊರೆ ಬೇಗ       || ೧೭೦ ||

ಬಗುಳದಿರೆಲವೊ ಕಿರೀಟಿ | ಮಮ | ಬಿಗುಹಿಗಿಲ್ಲ ಸರಿಸಾಟಿ ||
ಖಗಪತಿಯೊಡನುರಗಾಳಿ | ಸಂ | ಯುಗಗೆಯ್ದುಳಿವವೆ ಬಾಳಿ    || ೧೭೧ ||

ಹವಧೀರನು ನೀನೆಂದು | ಮಿಗೆ | ಜವನಂದದಿ ನರನಂದು ||
ಕವಲು ಕಳಂಬವ ಸುರಿಯೆ | ಹರಿ | ಕುವರನು ತಾ ಮೆಯ್‌ಮರೆಯೆ       || ೧೭೨ ||

ಭಾಮಿನಿ

ಅರಸ ಕೇಳಾ ಭೀಮ ಪಾರ್ಥನ |
ಶರದ ಹತಿಯಂ ತಾಳಲಾರದೆ |
ಧರೆಗೆ ಮೂರ್ಛಿತನಾಗಿ ಮೆಯ್ಮರೆದೊರಗಿರಲು ಕಂಡು ||
ಸುರಪನಂದನನಾಗ ಭಲರೇ |
ಮರುತಜಾತ ಪರಾಕ್ರಮಂಗಳ |
ಮೆರೆಸದಿರು ಬಾರೆನುತ ನಿಂದಿಸುತಲೆ ಪಚಾರಿಸಿದ    || ೧೭೩ ||

ರಾಗ ಕಾಂಭೋಜಿ ಅಷ್ಟತಾಳ

ಅರರೆ ವೃಕೋದರ ಗೆದ್ದ | ಸಂ | ಗರದಿ ಪರಾಕ್ರಮಿ ಬದ್ಧ ||
ದುರುಳ ಕೌರವನ ಸಂ | ಹರಿಸಿ ಕೀನಾಶನ |
ಪುರಕಟ್ಟಿರುವ ಮಹ | ಧುರಧೀರನಹೆ ಸರಿ    || ೧೭೪ ||

ಭಾರತಾಹವ ಗೆಲ್ದ ವೀರ | ಮೇ | ಣೀ ರಸೆಯೊಳಗತಿ ಶೂರ ||
ಮಾರವೈರಿಯ ಪಾದ | ಸಾರಸ ಒಲಿಸಿದು |
ದಾರನು ನಿನಗೇನು | ಸೇರಿತು ಮೌನವು     || ೧೭೫ ||

ವರಗದಾದಂಡವೇನಾಯ್ತು | ನೂರು | ಕರಿಗಳ ಬಲುಹೆಲ್ಲಿ ಹೋಯ್ತು ||
ಬರಿದೆ ರಣದಿ ರಕ್ಕ | ಸರನೆಲ್ಲ ಕೊಲ್ಲಿಸಿ |
ಧರೆಯ ಮೇಲ್ ಬಿದ್ದು ನೀ | ಹೊರಳಲೇತಕೊ ಹೇಡಿ   || ೧೭೬ ||

ವಾರ್ಧಕ

ಕೇಳವನಿಪಾಲನೀ ತೆರದಿ ಮರುತಜನ ಕ |
ಟ್ಟಾಳು ಪಾರ್ಥನು ಜರೆಯಲದನಾಲಿಸುತ ಕಡೆಯ |
ವ್ಯಾಳಭೂಷಣನಂತೆ ಖಾತಿಯಂ ತಾಳುತ ವೃಕೋದರಂ ತತ್‌ಕ್ಷಣದೊಳು ||
ತಾಳದಿರು ಗರ್ವವ ಕಿರೀಟಿ ಮದ್ದರೆವೆ ತವ |
ತೋಳಬಲ್ಪಂ ಮುರಿವೆನೆಂದು ಕೋಪಿಸಿ ತನ್ನ |
ಮೇಳದೊಳಗಿರ್ದ ಪಾಂಚಾಲೆಯಂ ಕರೆದವಳೊಳಿಂತೆಂದನತಿ ಗರ್ಜಿಸಿ  || ೧೭೭ ||

ರಾಗ ಕೇದಾರಗೌಳ ಝಂಪೆತಾಳ

ಬಾರೆಲೇ ಕೀರವಾಣಿ | ಬಿಸಜಮುಖಿ | ನಾರಿಮಣಿ ಭುಜಗವೇಣಿ ||
ವೀರ ಪಾರ್ಥನ ಸಮರದಿ | ಸೋತೆ ನೀ | ತೋರಿಸೆಲೆ ಸಹಸ ಭರದಿ     || ೧೭೮ ||

ಏನಿದೇನೆಂದೆ ನೀರ | ಭರ್ತನೊಳು | ನಾನೆಂತು ಗೆಯ್ವೆ ಸಮರ ||
ಮಾನಹಾನಿಗೆ ಮಾರ್ಗವು | ನಿಮಗೆ ಬಂ | ತೇನವನೊಳತಿ ವೈರವು      || ೧೭೯ ||

ಭಾರತಾಹವ ಜಯಿಸಿದ | ವ್ಯಾಜದಲಿ | ಹೋರಾಡಿದನು ದುರ್ಮದ ||
ಸಾರಸಾರಿ ದಿವಾಕರ | ವರ್ಮರನು | ಗಾರುಗೆಡಿಸಿರ್ಪನು ನರ  || ೧೮೦ ||

ನಲ್ಲ ನಾನರಿತೆನಿದನು | ಗಾಂಡೀವಿ | ಬಿಲ್ಲೆತ್ತಿ ತಂದಾತನು ||
ವಲ್ಲಭನೊಳೆಂತು ಬವರ | ಮಾಳ್ಪೆನದ | ಸೊಲ್ಲಿಸೆನಗೀಗ ವಿವರ          || ೧೮೧ ||

ಒರೆಯದಿರು ಬರಿದೆ ಛಾಳಿ | ನಿಲದಿದಿರು | ತೆರಳತ್ತ ಹೆಣ್ಣುಮೂಳಿ ||
ದುರುಳ ಕೀಚಕ ನಿನ್ನನು | ಭಂಗ ಪಡಿ | ಸಿರೆ ವಿಜಯನೆಲ್ಲಿರ್ದನು || ೧೮೨ ||

ಅಹುದಹುದು ಪ್ರಾಣನಾಥ | ನಿನ್ನ ನುಡಿ | ಸಹಜ ಗೋತ್ರಾರಿಜಾತ ||
ಮಹಿಯೊಳಗ್ಗದ ಶೂರನು | ಕಾದಲೆಂ | ತಹುದೊ ಜಯ ನಾನರಿಯೆನು   || ೧೮೩ ||

ಪಿಂತೋರ್ವ ಕೌಂಡ್ಲೀಕನು | ನಮ್ಮ ಯದು | ಸಂತತಿಯ ಗೆಲಲು ನೀನು ||
ಪಂಥವಿಡಿದೆಮನಗರಿಗೆ | ಕಳುಹಿಸಿದೆ | ಕುಂತಿಸುತನೆಣೆಯೆ ನಿನಗೆ        || ೧೮೪ ||

ಬಿಡು ಬಿಡನುಮಾನಗಳನು | ತನಗೀಗ | ಕೊಡು ಮುದದೊಳಪ್ಪಣೆಯನು ||
ಜಡಿದು ಫಲುಗುಣನ ಕಡುಹ | ನಿಲಿಸುವೆನು | ಕಡೆಗೆ ನೋಡೆನ್ನ ಬಲುಹ  || ೧೮೫ ||

ಮೆಚ್ಚಿದೆನು ರಮಣಿ ನಿನ್ನ | ವಿಕ್ರಮಕೆ | ಪೆಚ್ಚಿತಾನಂದ ಮುನ್ನ ||
ಎಚ್ಚರದೊಳಯ್ದಿ ಜವದಿ | ಬಳಿಕ ನಿ | ನ್ನಿಚ್ಛೆಯಂತೆಸಗು ಹವದಿ  || ೧೮೬ ||

ವಾರ್ಧಕ

ಲೇಸನಾಡಿದೆ ಕಾಂತ ತತ್‌ಕ್ಷಣವೆ ರಣಕಯ್ದಿ |
ವಾಸವಾತ್ಮಜನ ಬಡೆದವನ ಹರಿಬಕೆ ಬಂದ |
ರಾ ಸುದರ್ಶನಧಾರಿಪರಮೇಶರಂ ಗೆಲುವೆ ತಪ್ಪೆನಿದಕೀಗ ನಾನು ||
ನೀ ಸುಗಂಧಿಕಪುಷ್ಪವೆನಗೆ ತಂದಿತ್ತು ದು |
ಶ್ಶಾಸನನ ಕೊಂದು ತನ್ನಿಚ್ಛೆ ಸಲಿಸಿರ್ಪೆ ಶಾ |
ಭಾಸುರೇ ನಿನ್ನಿಷ್ಟಮಂ ಪೂರ್ತಿಗೊಳಿಸುವೆನು ತಾ ವೀಳ್ಯವೆನಗೆಂದಳು   || ೧೮೭ ||

ಭಾಮಿನಿ

ಪೂತುರೇ ಮೆಚ್ಚಿದೆನು ಮನ್ಮನ |
ಪ್ರೀತೆ ವೀಳೆಯವಿತ್ತೆ ಪಾರ್ಥನ |
ಧಾತುಗೆಡಿಸುತ ಬಾರೆನುತ ಕಳುಹಿದನು ಸಂಗರಕೆ ||
ಆ ತತುಕ್ಷಣ ಪೊರಟು ದ್ರುಪದನ |
ಜಾತೆ ರಣಸನ್ನದ್ಧಳಾಗುತ |
ಲಾ ತುರಾಸಾಹಜನಿದಿರು ಬಂದೆಂದಳೀತೆರದಿ         || ೧೮೮ ||

ರಾಗ ಕೇದಾರಗೌಳ ಅಷ್ಟತಾಳ

ನೀರ ನಿನಗೆ ನಮ | ಸ್ಕಾರ ರಣಕೆ ಬಂದೆ | ತೋರು ಕಯ್‌ಚಳಕವನು ||
ಮಾರುತಜಾತನ | ಗಾರುಗೆಡಿಸಿದಂಥ | ಪೌರುಷ ನೋಡುವೆನು          || ೧೮೯ ||

ರಮಣಿಯೇನಿದು ನಿನ್ನಾ | ಗಮನ ವಿಚಿತ್ರವಿ | ದಮಮ ಬಿಲ್‌ಧರಿಸಿ ನಿಂದೆ ||
ರಮಣನಿಗಿದಿರಾಗಿ | ಸಮರಗೆಯ್ವೆಯ ಪರಾ | ಕ್ರಮದಿ ನೀ ತೆರಳು ಹಿಂದೆ || ೧೯೦ ||

ವಾದಿಸುತ್ತಿಂದು ವೃ | ಕೋದರನೊಡನೇಕೆ | ಕಾದಿದೆ ನೀ ನಿರರ್ಥ ||
ಸೋದರರಾಗಿ ವಿ | ನೋದದೊಳಿರದೆ ಮ | ತ್ತೀ ದುರಾಗ್ರಹವೆ ಪಾರ್ಥ    || ೧೯೧ ||

ನಾರಿ ನೀನೆನ್ನ ವಿ | ಚಾರ ಮಾಡುವೆಯ ಬ | ಜಾರಿ ನಾ ಭರ್ತನಲ್ಲೆ ||
ಮಿರಿದ ಕಾಂತ ಸ | ಮಿರಜನಾದನೆ | ಸಾರತ್ತ ಭರನೆ ಖುಲ್ಲೆ     || ೧೯೨ ||

ಅಧಮ ದುಶ್ಶಾಸನ | ನುದರವ ಬಗಿದು ರ | ಕ್ತದೊಳದ್ದಿ ಕೇಶವನು ||
ರದನದಿ ತಲೆಯ ಬಾ | ಚಿದು ಸಿರಿಮುಡಿಯ ಕ | ಟ್ಟಿದ ಕಾಂತಾಶುಗಜಾತನು      || ೧೯೩ ||

ಧಿರುರೆ ಶಭಾಸು ಇ | ನ್ನರಿತೆನರಿತೆ ಸ್ವಯಂ | ವರದೊಳು ಶಿವಧನುವ ||
ಮುರಿವುತ್ತ ನಿನ್ನನು | ವರಿಸಿದ ಪತಿ ತಾನು | ನೆರೆ ಗ್ರಹಿಸಿದರನುವ        || ೧೯೪ ||

ಒಲಿಸಿದರೇನಾಯ್ತು | ಬಲುಭಟ ಕೀಚಕ | ಸಲೆ ಭಂಗ ಕೊಡಲವನ ||
ಕುಲವ ತೀರ್ಚಿದು ಮಾನ | ಸಲಹಿದ ಕಾರಣ | ಕಲಹಕಯ್ದೆನು ಧವನ     || ೧೯೫ ||

ಭಾಮಿನಿ

ಮಾದಳಾಧರೆ ಕೇಳು ನಿನಗೆ ವೃ |
ಕೋದರನೊಳತಿ ಪ್ರೀತಿಯೇ ಸೊಗ |
ಸಾದುದೆಲೆ ಬಳಿಕುಳಿದ ನಾಲ್ವರು ರಮಣರಲ್ಲವಲೆ ||
ಆದಡಿದು ಸತಿ ಪತಿಗಳಧಿಕ ವಿ |
ರೋಧದಲಿ ರಣಗೆಯ್ದರೆಂದಪ |
ವಾದ ಬಪ್ಪುದು ಜಗಳವಿದು ಸರಿಯಲ್ಲ ತೊಲಗೆಂದ    || ೧೯೬ ||

ವಾರ್ಧಕ

ಹೇ ಪಾರ್ಥ ಗಳಹದಿರು ಬರಿದೆ ಪಿಂತೆನಗೆ ಬಂ |
ದಾಪತ್ತುಗಳನೆಲ್ಲ ಪರಿಹರಿಸಿ ಮನದ ಸಂ |
ತಾಪಮಂ ಬಿಡಿಸಿದಾತನೆ ಭೀಮ ರಣಭೀಮನವನಲ್ಲದಾರಿರ್ಪರು ||
ನೀ ಪರಮಸಾಹಸಿ ಕಣಾ ಮರುತಜಾತನ ಪ |
ದಾಪಜಕ್ಕೆರಗಿ ಸಖ್ಯವನೆಸಗಲೀಕ್ಷಣವೆ |
ನಾ ಪೋಪೆನಲ್ಲದಿರೆ ನಿನ್ನಧಟು ನೋಳ್ಪೆನಿಲ್ಲೀ ಧುರಕ್ಕೆನಲೆಂದನು         || ೧೯೭ ||

ರಾಗ ಮಾರವಿ ಏಕತಾಳ

ಬಿಡು ಬಿಡು ನಿನ್ನಯ | ಬೆಡಗಿನ ನುಡಿಯನು | ಮಡದೀಮಣಿ ಕೇಳು ||
ಪಿಡಿ ಕೋದಂಡವ | ತೊಡು ಶರ ನಿಲಿಸುವೆ | ಕಡು ಪೌರುಷ ತಾಳು      || ೧೯೮ ||

ಧಿರುರೆ ತ್ರಿವಿಷ್ಟಪ | ನರ ದರ್ವೀಕರ | ಧರೆ ಗೆಲಿದಂತಲ್ಲ |
ಧುರಮುಖದೊಳಗೆ | ನ್ನುರುತರವಿಕ್ರಮ | ದಿರ ಪರಿಕಿಸು ನಲ್ಲ   || ೧೯೯ ||
ಕೋಕನದಾಕ್ಷಿ ಸ | ಮಿಕದೊಳಾ ಕೌಂ | ಡ್ಲೀಕನ ಗೆಲಿದಿರ್ಪ ||

ಕಾಕು ಪರಾಕ್ರಮ | ನೀ ಕಾಣಿಸುವುದಿ | ದೇಕೆಲೆ ಬಿಡು ದರ್ಪ     || ೨೦೦ ||
ಸುಡುವೆನು ಲೋಕವ | ಬಡಿವೆನು ಕಾಲನ | ಕುಡಿವೆನು ಕಡಲೇಳು ||
ಜಡಜಕುಮಾರಕ | ಕಡೆಯವನನು ಗೋ | ಳ್ಗುಡಿಸುವೆ ಸಮರದೊಳು     || ೨೦೧ ||

ಪತಿಯೊಳು ಸಂಗರ | ಹಿತವಲ್ಲವು ಮತಿ | ಯುತೆ ನೀನದ ಗ್ರಹಿಸು ||
ಜತನವಿರಲಿ ನಿನ | ಗತಿ ಕಠಿನದ ಶರ | ತತಿ ಸುರಿಸಿಹೆ ಸಹಿಸು || ೨೦೨ ||

ಬರುವಸ್ತ್ರವ ಸತಿ | ತರಿದು ಕಿರೀಟಿಯು | ಧರಿಸಿದ ಬಿಲ್ಲೆಳೆದು ||
ಮೆರೆದಿರೆ ಮನದೊಳ | ಗುರೆ ಯೋಚಿಸಿದನು | ನರನತಿ ಭಯ ತಳೆದು   || ೨೦೩ ||

ವಾರ್ಧಕ

ನಾರಿಯೊಳ್ ಕಾಳಗವೆ ತನಗಕಟ ಪಿಂತೆ ಮದ |
ನಾರಿಯೊಳ್ ಸೆಣಸಿದ ಪರಾಕ್ರಮಿಗೆ ಕೋದಂಡ |
ನಾರಿಯೊಳ್ ಬಲವಿಲ್ಲದಲುಗುತಿದೆ ಸೋತರಪಹಾಸ್ಯ ಬಹುದೆನ್ನಧಟಿಗೆ ||
ಮಾರಿಯಾಗಿಹಳಿಂದು ದ್ರುಪದಸುತೆಯಲ್ಲಿವಳ್ |
ಮಾರಿಸ್ವರೂಪಿಯೆಂಬುದ ಬಲ್ಲೆನೀಗ ಹೆ |
ಮ್ಮಾರಿಗೌತಣಬಡಿಸುವೆನು ಸತಿಯ ಗರ್ವಮಂ ಹನುಮಂತನಿಂ ಮುರಿವೆನು      || ೨೦೪ ||

ಭಾಮಿನಿ

ಸಿಂಧುವಸನಾಧೀಶ್ವರನೆ ಕೇ |
ಳಂದು ಫಲುಗುಣನಿಂತು ಯೋಚಿಸಿ |
ಚಂದದಿಂ ಹನುಮಂತನನು ಧ್ಯಾನಿಸಿದ ಭಕ್ತಿಯಲಿ ||
ಗಂಧವಾಹಕುಮಾರ ನೀ ಬಾ |
ರೆಂದು ಕರೆಯಲು ತತ್‌ಕ್ಷಣವೆ ನಡೆ |
ತಂದು ಮುಖ್ಯಪ್ರಾಣ ನುಡಿದನು ವೀರನರನೊಡನೆ    || ೨೦೫ ||

ರಾಗ ಪಂತುವರಾಳಿ ಅಷ್ಟತಾಳ

ಏಕೆನ್ನ ನೆನಸಿರುವೆ | ಫಲ್ಗುಣನೆ ನೀ | ಶೋಕದಿ ಮುಳುಗಿರುವೆ ||
ನಾಕೇಶನಣುಗ ತ್ರಿ | ಲೋಕವಿಜಯ ವರಾ |
ನೀಕವಿಕ್ರಮ ನಿನ್ನ | ವ್ಯಾಕುಲ ಬಿಡು ಬಿಡು    || ೨೦೬ ||

ಮೂರು ಲೋಕವ ನುಂಗುವೆ | ಮೆರೆವ ಸಪ್ತ | ಪಾರಾವಾರವ ಪೀರುವೆ ||
ಮೇರುಗಿರಿಯ ಕಿತ್ತು | ವಾರಿಧಿಗಿಡುವೆ ಸ |
ನ್ನೀರೇಜ ಪ್ರಿಯನ ಸಂ | ಚಾರವ ನಿಲಿಸುವೆ   || ೨೦೭ ||

ನುಡಿ ಮನದಿರವ ಬೇಗ | ಸುಮ್ಮನೆ ನೀನು | ತಡಮಾಡಲೇತಕೀಗ ||
ಪೊಡವಿಯೊಳಿದು ಚಿತ್ರ | ಮಡದಿಯೊಳಾ ಗ್ರಹ |
ವಿಡಿದ ಕಾರಣವೇನು | ಕೊಡು ನೇಮವೆನಗಿಂದು       || ೨೦೮ ||

ರಾಗ ರೇಗುಪ್ತಿ ಆದಿತಾಳ

ಅರುಹಲಿನ್ನೇನೆನ್ನ | ದುರವಸ್ಥೆಗಳನು ಸ | ಚ್ಚರಿತ ಮುಖ್ಯಪ್ರಾಣ ||
ವರಮಹಾಭಾರತ | ಧುರ ಗೆಲ್ದ ವ್ಯಾಜದಿ |
ಮರುತಜಗೆನಗು ದು | ಸ್ತರದ ಕಾಳಗವಾಯ್ತು          || ೨೦೯  ||

ಆ ವೃಕೋದರ ಸೋಲ | ಲೀ ವೃತ್ತಾಂತವನು ಪ | ತಿವ್ರತೆ ಕೃಷ್ಣೆ ಕೇಳ್ದು ||
ತಾ ವೃಷಾರಥನಂತೆ | ತೀವ್ರದಿ ಬರಲಿಂದು |
ನಾ ವೃಥಾ ರಣ ಗೆಯ್ದೆ | ನೀ ವೃತ್ತಸ್ತನೆಯೊಳು         || ೨೧೦ ||

ಕದನದಿ ಜಯ ದೊರ | ಕದರಿಂದ ನಿನ್ನಯ | ಪದಯುಗವನು ನೆನೆದೆ ||
ಅಧಿಕಪರಾಕ್ರಮಿ ಸುದತಿಯ ಗರ್ವವ |
ಮೆದೆಗೆಡಿಸಯ್ಯ ನೀ | ನೊದಗಿ ಸಂಗರಕಯ್ದಿ  || ೨೧೧ ||

ವಾರ್ಧಕ

ಶ್ವೇತವಾಹನ ಕೇಳು ನೀ ಮರುಗದಿರು ದ್ರುಪದ |
ಜಾತೆ ನಿನ್ನೊಳು ಮಹಾಸಂಗರವನೆಸಗಿದಳೆ |
ನಾಥನೆಂಬಭಿಮಾನವಿಡದೆ ಸಂಗ್ರಾಮದೊಳು ನಿನ್ನುವನು ಸೋಲಿಸಿದಳೆ ||
ವಾತಸಂಭವಗಾಗಿ ಜಗಳಕಯ್ತಂದಿಹಳೆ |
ಭೂತಳದಿ ಸತ್ಪತಿವ್ರತೆಯಾಗಿ ಪತಿಯೊಳಭಿ |
ಘಾತವೆಸಗುವಳೆ ನಾನವಳ ಗರ್ವವನೀಗ ಮುರಿಯುವೆನು ತತ್ ಕ್ಷಣದೊಳು      || ೨೧೨ ||

ಭಾಮಿನಿ

ಶರಧಿಯಂಬರೆಯಧಿಪ ನೀ ಕೇ |
ಳರಿತು ಹರಿನಾಟಕವ ಹನುಮನು |
ನರನಿಗಭಯವನಿತ್ತು ರೋಷದಿ ಘೋರರೂಪಿನೊಳು ||
ಮೆರೆವ ಕುಲಿಶ ಶರೀರನಾಕ್ಷಣ |
ಸರಸಿಜಾಯತನೇತ್ರೆಯೆಡೆಗೈ |
ತರುತ ಮಿಗೆ ಗಂಭೀರ ನಾದದೊಳೊರೆದನಿಂತೆನುತ  || ೨೧೩ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಪೂತುರೇ ಪಾಂಚಾಲೆ ಬಲು ವಿಪ | ರೀತ ಕೃತ್ಯವ ಗೆಯ್ದೆ ವರನೊಡ |
ನೇತಕಾಗ್ರಹ ಲಲನೆಯರಿಗಿದು | ನೀತಿಯಹುದೆ        || ೨೧೪ ||

ಪರಮಪಾವನೆ ಸತ್ಪತಿವ್ರತೆ | ಯರು ಮನೋವಲ್ಲಭನೊಳೆಂದಿಗು |
ಧುರವೆಸಗುವರೆ ನಿನಗಿದೇತಕೆ | ಮರುಳುತನವು      || ೨೧೫ ||

ಸತಿಯರಿಗೆ ಪತಿಯಲ್ಲದನ್ಯಥ | ಗತಿಯಿಹುದೆ ಸರ್ವತ್ರ ಲೋಕದಿ |
ಶ್ರುತಿಗಳೆಂಬವು ಸತಿಗೆ ದೈವವು | ಪತಿಯೆನುತಲಿ      || ೨೧೬ ||

ಕಾಡದಿರು ಧವನೊಳು ನಿರರ್ಥದಿ | ಮೋಡವಾಹನ ಸುತಗೆರಗಿ ಕ್ಷಮೆ |
ಬೇಡೆನಲು ದ್ರೌಪದಿಯು ನುಡಿದಳು | ಗಾಢದಿಂದ      || ೨೧೭ ||

ರಾಗ ನಾದನಾಮಕ್ರಿಯೆ ಮಟ್ಟೆತಾಳ

ಬಾರೆಲಾ ವನೌಕಸಾಗ್ರಣಿ || ಪ ||
ಬಾರೊ ಮುಂದೆ ಶೌರ್ಯದಿರವ | ತೋರಿಸೆನ್ನೊಳೀಗ ಬರಿದೆ |
ದೂರ ನಿಂತು ನುಡಿವೆ ನೀತಿ | ಸಾರು ಬೇಗ ಜತನ ನಿನ್ನ |
ಮೋರೆಯೊಳಗೆ ಸುಳಿವುದಾಗ್ರಹ || ಗರ್ವಿಸದಿರಿಂದು |
ಹೀರ ಕಾಯನೆನುತ ವಿಗ್ರಹ || ಗೆಯ್ಯಲ್ಕೆ ರಣದಿ |
ಗಾರುಗೆಡಿಸಿ ಮಾಳ್ಪೆ ನಿಗ್ರಹ || ಬಾರೆಲಾ      || ೨೧೮ ||

ಸುಂದರಾಂಗಿ ಕೇಳು ನೀನು | ಮಂದಗರ್ವದೊಳಗೆ ಕಾಂತ |
ನೆಂದು ಗ್ರಹಿಸದೀಗ ನರನ | ಹೊಂದಿ ಕಲಹಗೆಯ್ದುದಧಿಕ |
ಚಂದ ಗಂಡನೆಂಬ ಭಕ್ತಿಯ || ತೊರೆದಿರುವೆ ತವಕ |
ದಿಂದ ತೋರು ನಿನ್ನ ಶಕ್ತಿಯ || ನಾನೀಗ ನೋಳ್ಪೆ |
ನಿಂದು ಸಮರಗೆಯ್ವ ಯುಕ್ತಿಯ || ಬಾರೆಲಾ  || ೨೧೯ ||

ಕೋಡಗಾಗ್ರಗಣ್ಯ ನಿನ್ನ | ಪಾಡುಪಂಥವೆನ್ನೊಳಾಡ |
ಬೇಡ ಬವರದೊಳಗೆ ಪಿಂತೆ | ಮೂಢ ರಕ್ಕಸರನು ಗೆಲ್ದ |
ಮೋಡಿ ತೋರ್ಪೆಯೇಕೆ ಸುಮ್ಮನೆ || ಸಂಗ್ರಾಮದಿರವ |
ನೋಡೆನುತ್ತ ನಾರಿ ಧಿಮ್ಮನೆ || ಭೋರ್ಗರೆದು ಶರವ |
ಪೂಡಿ ಬಿಟ್ಟಳೆಂಟು ಗಮ್ಮನೆ || ಬಾರೆಲಾ      || ೨೨೦ ||

ಬರುವ ಕಣೆಯ ಮುಖ್ಯ ಪ್ರಾಣ | ತರಿದು ರೋಷದಿಂದಲಯ್ವ |
ರರಸಿಗೊದೆಯಲದನು ಸಹಿಸಿ | ನೆರೆ ವಿನೋದದಿಂದಲವನ |
ತರುಬಿ ಮೂದಲಿಸುತ ಜಡಿದಳು || ಮಹೋಗ್ರದಿಂದ |
ಮರುತಸುತನ ಸೆರೆಯ ಪಿಡಿದಳು | ಮತ್ತವನ ಬಿಟ್ಟು |
ಸರಸಿಜಾಕ್ಷಿಯಿಂತು ನುಡಿದಳು || ಬಾರೆಲಾ   || ೨೨೧ ||

ವಾರ್ಧಕ

ವೃಕ್ಷದಿಂ ವೃಕ್ಷಕುಲ್ಲಂಘಿಸುತ ಫಲಗಳನು |
ಭಕ್ಷಿಸುವ ಕೋತಿಗೀ ರಣವೇಕೆ ನಿನ್ನುವನು |
ಲಕ್ಷಕೆಣಿಸುವಳಲ್ಲ ಶ್ರೀರಾಮಭಕ್ತನೆನ್ನುವ ಬಿರುದು ಕಳಕೊಳ್ಳದೆ ||
ಸುಕ್ಷೇಮದಲಿ ರಾಮಸೇತುವಿನ ಬಳಿಗಯ್ದಿ |
ಪಕ್ಷಿರೂಢನ ಧ್ಯಾನಿಸುತ್ತಿರ್ಪುದಲ್ಲದೊಡೆ |
ಶಿಕ್ಷಿಸುವೆ ಸಂಗರದೊಳೆನುತ ಪಾಂಚಾಲೆಯತಿ ಬೊಬ್ಬಿರಿದು ಗರ್ಜಿಸಿದಳು         || ೨೨೨ ||

ಭಾಮಿನಿ

ಸಾರಸಾಕ್ಷಿಯ ಮಾತ ಕೇಳುತ |
ವೀರ ಪವನಾತ್ಮಜನು ಗ್ರಹಿಸಿದ |
ನಾರಿಯಲ್ಲಿವಳಾದಿಶಿವೆಯಾಗಿಹಳು ಸಂಗರದಿ ||
ಮಾರವೈರಿಗಸಾಧ್ಯವೆನು ತಲಿ |
ಸಾರಲಾ ರಾಮೇಶ್ವರಕೆ ಜಂ |
ಭಾರಿತನಯನು ಕಂಡು ವ್ಯಥೆಯೊಳು ಹರಿಯ ನುತಿಸಿದನು     || ೨೨೩ ||

ರಾಗ ಕಮಾಚು ಧ್ರುವತಾಳ

ಬಾರೋ ಸಾರಸದಳನಯನ | ಬೇಗ | ಬಾರೋ || ಪ ||
ನಾರಾಯಣಪದ | ವಾರಿಜಯುಗಳವ |
ಸೇರಿದೆ ಶೋಕನಿ | ವಾರಣ ಕಾರಣ | ಬಾರೋ || ಅ ||
ಹಾರ ಮಕುಟ ಕೇ | ಯೂರ ಕುಂಡಲಯುತ | ಮಾರ ಜನಕ ಮೆಯ್ದೋರೋ ||
ನೀರ ತೋರು ಶಾ | ರೀರ ಘೋರಭವ | ಪಾರಾಯಣ ಮುದ ಬೀರೊ || ಬಾರೋ  || ೨೨೪ ||

ರಮಣಿಯು ತನ್ನನು | ಸಮರದಿ ಗೆಲಿದಳು | ಕ್ಷಮೆಯೊಳು ನಾನಿರಲೆಂತು ||
ನಮಿಸುವೆ ತವ ಪದ | ಕಮಲಕೆ ಬೇರಾ | ಗಮವಿಲ್ಲವು ಋಣ ಸಂತು || ಬಾರೋ   || ೨೨೫ ||

ಸುರಗಜವಿಳುಹಿದೆ | ಧರಣಿಗೆ ಗಂಗಾ | ಧರನೊಳು ಸೆಣಸಿದೆ ಭೂರಿ ||
ಹರಿ ನಿನ್ನೊಳು ಖೇ | ಚರ ಗಯಗೋಸುಗ | ಧುರ ಗೆಯ್ದಿರುವೆ ಮುರಾರಿ || ಬಾರೋ          || ೨೨೬ ||

ಜನಿತಾರಭ್ಯದಿ | ವಿನಯದಿ ಸಲಹಿದ | ಘನಮಹಿಮನೆ ಮಾತಾಡೊ ||
ಅನುವರಕೊದಗಲಿ | ಕನುಪಮ ಶಕ್ತಿಯ | ನೆನಗೀಯಲು ದಯಮಾಡೊ || ಬಾರೋ         || ೨೨೭ ||