ಕಂದ

ಗಜನಗರೇಶನೆ ಲಾಲಿಸು |
ವಿಜಯನು ಬಲುತೆರದಿ ಶೋಕಿಸುತ್ತಿರಲಾಗಂ ||
ಮಝರೆನ್ನುತ ಮಿಗೆ ದ್ರುಪದಾ |
ತ್ಮಜೆ ಪಾರ್ಥನ ಮೂದಲಿಸುತ ನುಡಿದಳು ಬೇಗಂ     || ೨೨೮ ||

ರಾಗ ನವರೋಜು ಏಕತಾಳ

ಓಹೋ ಪಾರ್ಥ ಸಮರ್ಥ | ಬಲು | ಸಾಹಸಿಯೆಂಬುದು ಸ್ವಾರ್ಥ ||
ಕಾಹುರದೊಳು ಖಗ | ವಾಹನ ರುದ್ರರೊ |
ಳಾಹವದೋರಿದ | ಬಾಹುಬಲಾನ್ವಿತ || ಓಹೋ        || ೨೨೯ ||

ಮೂರು ಲೋಕದ ಗಂಡ | ರಿಪು | ವಾರ ನಿಶೀಮಾರ್ತಂಡ ||
ಸಾರಸಸಖಜನ | ಗಾರುಗೆಡಿಸಿದವ |
ಧಾರಿಣಿಯೊಳು ಸರಿ | ಯಾರಿಲ್ಲೈಖರೆ || ಓಹೋ        || ೨೩೦ ||

ಶಿವನಸ್ತ್ರವೇನಾಯ್ತು | ಮಾ | ಧವನೊಲವೆಲ್ಲಿಗೆ ಹೋಯ್ತು ||
ಜವದಿಂ ತವ ಪರಿ | ಭವಕಯ್ತಂದಿಹ |
ಪವನಜ ಜಾರಿದ | ಬವರಪರಾಕ್ರಮಿ || ಓಹೋ         || ೨೩೧ ||

ಹೆಣ್ಣಿನ ವಿಕ್ರಮವೆಲ್ಲ | ನೀ | ಕಣ್ಣಿಲಿ ನೋಡಿದೆಯಲ್ಲ ||
ಹಣ್ಣದೆ ಸಮರವ | ಮಣ್ಣಿಲಿ ಹೊರಳುತ |
ಲೆಣ್ಣುತ ಮಿಗೆ ಪೂ | ಗಣ್ಣನ ನೆನೆವೆಯ || ಓಹೋ       || ೨೩೨ ||

ಬರಸೀಗ ಶ್ರೀವರನ | ನೀ | ಕರೆಸು ಗಂಗಾಧರನ ||
ಧುರದೊಳು ಪಿಂದಕೆ | ಸರಿಯೆನು ಧರಣಿಯ |
ನುರುಹುವೆ ಲಜ್ಜಿಸ | ದಿರು ರಣಕೇಳೈ || ಓಹೋ        || ೨೩೩ ||

ಭಾಮಿನಿ

ಪೊಡವಿಪಾಲ ನಿಧಾನಿಸೀ ಪರಿ |
ಜಡಜಮುಖಿ ದ್ರೌಪದಿ ನುಡಿದ ಬಿರು |
ನುಡಿಯ ಕೇಳುತ ಕಂಗಳಲಿ ಕಿಡಿ ಸೂಸಿ ಫಲುಗುಣನು ||
ಮಡದಿ ಗಳಹದಿರೀಗ ನಿನ್ನಯ |
ಕಡುಹ ನಿಲಿಸುವೆನೆನುತ ಕೋಪದಿ |
ನಡುಗಿ ಸೌಭದ್ರೆಯನು ಬೇಗದಿ ಕರೆಸುತಿಂತೆಂದ      || ೨೩೪ ||

ರಾಗ ಘಂಟಾರವ ಝಂಪೆತಾಳ

ಬಾರೆ ಮೋಹನಾಕಾರೆ | ನಾರಿ ಸೌಭದ್ರೆ ನೀ |
ಸಾರಿ ದ್ರುಪದಾತ್ಮಜೆಯ | ಗಾರುಗೆಡಿಸೀಗ ||
ನೀರ ಮೊದಲರುಹು ನಿನ | ಗೀ ರೀತಿಯವ ಳೊಡನೆ |
ವೈರತ್ವ ಬಂದಿರುವ | ಕಾರಣವ ಬೇಗ        || ೨೩೫ ||

ಕುವಲಯಾಂಬಕಿ ಕೇಳು | ಪವನಜನ ಹರಿಬಕೆಂ |
ದವಳಯ್ದಿ ರಣದಿ ಪರಿ | ಭವಿಸಿದಳು ತನ್ನ ||
ಧವನೆ ಚಿತ್ತವಿಸು ಹರಿ | ಭವನೊಳೇತಕೆ ಘೋರ |
ಹವಗೆಯ್ದಿರದನೆನಗೆ | ವಿವರಿಸೈ ಮುನ್ನ       || ೨೩೬ ||

ಜಲಜಲೋಚನೆ ಲಾಲಿ | ಸೆಲೆ ಭಾರತಾರಣವ |
ಗೆಲಿದ ವ್ಯಾಜವ ಹಿಡಿದು | ಕಲಹವೆಮಗಾಯ್ತು ||
ತಿಳಿದೆ ನಿಮ್ಮಯ್ವರಿಗೆ | ಲಲನೆಯಾಗಿರುತಿದಿರು |
ನಿಲಬಹುದೆ ಜಗದಿ ಧರೆ | ಯಲಿ ನೀತಿ ಹೋಯ್ತು       || ೨೩೭ ||

ಮೆಚ್ಚಿದನು ಭಳಿರೆ ಮನ | ದಿಚ್ಛೆಯನು ಸಲಿಸೀಗ |
ಸ್ವಚ್ಛಾಂಗಿ ನಡೆ ರಣಕೆ | ಚಚ್ಚರದೊಳಿಂದು ||
ಬೆಚ್ಚದಿರು ಸವತಿಯನು | ನುಚ್ಚುನುರಿಗೆಯ್ವೆ ಬೇ |
ರುಚ್ಚರಿಸದಿರು ತನ್ನೊ | ಳಚ್ಚ ಗುಣಸಿಂಧು    || ೨೩೮ ||

ವಾರ್ಧಕ

ಜಗತಿಪತಿ ಕೇಳಾಗ ನಿಜಕಾಂತನೊಡನೆ ಹರಿ |
ಭಗಿನಿ ನೇಮವಕೊಂಡು ಸಮರಕಾತುರಳಾಗಿ |
ತೆಗೆದುಟ್ಟು ಚಲ್ಲಣವ ಬಲಿದ ಮೊಲೆಕಟ್ಟುಗಳ ಥಳಥಳಿಸುವಾಭರಣದ ||
ನಗುಮೊಗದ ಮಿಂಚುಗಳ ಚಂಚಲದ ನಯನದಿಂ |
ಮಿಗೆ ತೊಲಗುವಂಘ್ರಿ ವಯ್ಯಾರದಲಿ ಹಸ್ತದೊಳ್ |
ಬಗೆಬಗೆಯ ಕಯ್ದುಗಳ ಪಿಡಿದು ರಣಕಯ್ತರಲ್ ದ್ರುಪದನಂದನೆ ನುಡಿದಳು         || ೩೩೯ ||

ರಾಗ ಶಂಕರಾಭರಣ ಏಕತಾಳ

ಯಾರೆ ಧೀರೆ ನೀನು ನಿನ್ನ | ಯಾರು ಕಳುಹಿಸಿದರು ಮೇಣಿ |
ನ್ನ್ಯಾರಿಗಾಗಿ ಬಂದುದೀ ಸ | ವಾರಿ ಲಲಿತಾಂಗಿ ||
ಯಾರಿಗಾಗಿ ಯಾರು ಬರುವರ್ | ಯಾರ ಹರಿಬವ್ಯಾರಿಗೇನು |
ನೀರಗಾಗಿ ನಿನ್ನೊಳ್ ರಣಕೆ | ಸಾರಿದೆನಕ್ಕ    || ೩೪೦ ||

ಸ್ವಚ್ಛಾಂಗಿ ನೀ ಕೇಳು ಸವತಿ | ಮಚ್ಚರದಿ ಕಾದುವೆಯ ಸಮರ |
ದಿಚ್ಛೆಯೊಳ್ಳಿತಲ್ಲ ನಿನಗೆ | ಹುಚ್ಚೇನೆ ತಂಗಿ ||
ಅಚ್ಚ ಕುಸುಮ ಗಂಧಿ ಬಲುಹ | ನುಚ್ಚರಿಸದಿರಮಮ ಪತಿಯೊಳ್ |
ಬೆಚ್ಚದೆ ಕಾದಾಡಿದುದಕೆ | ಮೆಚ್ಚರ್ ಯಾರಕ್ಕ || ೩೪೧ ||

ಏಕಪತಿಯೊಳ್ ಕಷ್ಟ ಮಾಡ | ಲೇಕಪತಿಯೊಳಿಷ್ಟವಿಹುದು |
ಠೀಕು ಮಾತಾಡದಿರು ನಡೆ ವಿ | ವೇಕದಿ ತಂಗಿ ||
ಲೋಕದೊಳಗೇಕಪತಿಗ | ನೇಕಸತಿಗಳಿಹುದ ಬಲ್ಲೆ |
ನೇಕಸತಿಗನೇಕಪತಿಗಳ್ | ನಾ ಕಾಣೆನಕ್ಕ    || ೩೪೨ ||

ಕುರುನೃಪಾಲಗೆಂದು ನಿಶ್ಚಯಿ | ಸಿರಲು ಬಲ ಕಿರೀಟಿಯೊಡನೆ |
ತೆರಳಿ ಕಳ್ಳತನದಿ ಬಂದುದರಿಯೆನೇ ತಂಗಿ ||
ಅರರೆ ಗಳಹದಿರು ಬಿಡೌಜ | ತರಳಗೆ ಸಣ್ಣಣ್ಣ ಧಾರೆ |
ಯೆರೆದು ಕಳುಹೆ ಬಂದೆ ನಿನಗೆ | ಕೊರತೆಯೇನಕ್ಕ     || ೩೪೩ ||

ಬೇಡ ಬೇಡ ಸಲುಗೆ ತನ್ನ | ಕೂಡೆ ಪಾರ್ಥ ವಿಕ್ರಮದಿ ಹೋ |
ರಾಡಿ ಸೋತು ಹೋದ ಪರಿಯ | ನೋಡೆಲೆ ತಂಗಿ ||
ಮೋಡವಾಹಸುತನ ಗೆಲಿದ | ಪಾಡು ಪಂಥ ಸಲ್ಲದೆನ್ನೊಳ್ |
ಗಾಢ ಗರ್ವವಿರಲು ರಣವ | ಮಾಡಿ ನೋಡಕ್ಕ         || ೩೪೪ ||

ರಾಗ ಭೈರವಿ ಏಕತಾಳ

ಒದರದಿರೆಲೆಯೆಲೆ ತಂಗಿ | ನಿನ್ನ | ಮದವಿಳಿಸುವೆ ಲಲಿತಾಂಗಿ ||
ಕದನಕೆ ಬಂದಿದಿರಾದೆ | ತ | ನ್ನಧಟನು ತಿಳಿಯದೆ ಹೋದೆ      || ೩೪೫ ||

ಕಾಂತನ ಜಯಿಸಿದೆನೆಂದು | ಬಲು | ಭ್ರಾಂತಿಯ ತಾಳದಿರಿಂದು ||
ತಾಂ ತಳುವದೆನಿನ್ನುವನು | ಕೃ | ತಾಂತನ ಪುರಕಟ್ಟುವೆನು     || ೩೪೬ ||

ನಿಂದಿಸಬೇಡಬ್ಬರದಿ | ಋಣ | ಸಂದುದು ವಿಶ್ವಂಭರದಿ ||
ಮುಂದಿರುವಾಸೆಯು ನಿನಗೆ | ನಿ | ನ್ನಿಂದಾಗುವುದೇನೆನಗೆ      || ೩೪೭ ||

ಎನ್ನಿಂದಹುದನು ನೋಡು | ನಿನ | ಗಿನ್ನೀಶೌರ್ಯವೆ ಕೇಡು ||
ಪನ್ನಿಯ ನುಡಿಯದಿರೆನುತ | ಶರ | ವನ್ನೆಸೆದಳು ನಸುನಗುತ   || ೩೪೮ ||

ಹಿಂಜರಿವೆನೆ ಸಂಗರದಿ | ನಿನ | ಗಂಜೆ ಸಹಾಯಕೆ ಭರದಿ ||
ನಂಜುಗಳನ ಕರೆಸೆಂದು | ಶರ | ಪುಂಜವ ಸುರಿಸಿದಳಂದು     || ೩೪೯ ||

ನಡುಮಾರ್ಗದೊಳದ ಕಡಿದು | ಘುಡು | ಘುಡಿಸುತ ಕೋಪದಿ ಜಡಿದು ||
ಕಿಡಿಯುಗುಳುವ ಶರ ಬಿಡಲು | ಸುರ | ಗಡಣ ನಭದಿ ಗೋಳಿಡಲು        || ೩೫೦ ||

ಬರುವಾಸ್ತ್ರವ ಕತ್ತರಿಸಿ | ಪ್ರತಿ | ಶರಗಳ ಬಿಲ್ಲಿನೊಳಿರಿಸಿ ||
ಸುರಿಯೆ ಸುಭದ್ರೆಯು ನೊಂದು | ಮಿಗೆ | ಧರಣಿಯೊಳೊರಗಿದಳಂದು    || ೩೫೧ ||

ಭಾಮಿನಿ

ಭಗಿನಿ ಪೇಳಿದೆ ನಿನಗೆ ಮೊದಲೇ |
ಜಗಳ ಲೇಸಲ್ಲೆಂದು ಕೇಳದೆ |
ಹಗರಣವ ಗೆಯ್ದೊರಗಿದೆಯ ತನ್ನಧಟು ನೋಡಿದೆಯ ||
ಬಗೆವಳಲ್ಲ ಸುರಾಸುರರ ಶಿರ |
ನೆಗಹಿ ನೋಡೆಂದೆನುತ ಜರೆಯಲು |
ನಗಧರನ ಚರಣಗಳ ನೆನೆದು ಸುಭದ್ರೆ ಮರುಗಿದಳು   || ೩೫೨ ||

ರಾಗ ನೀಲಾಂಬರಿ ರೂಪಕತಾಳ

ಯಾರೊಡನುಸಿರಲಿ ಲಜ್ಜೆಯ | ಯಾರಿದ ಪರಿಹರಿಸುವರು ಮು |
ರಾರಿಯೆ ನತಸಂಸಾರಿಯೆ | ಬಾರತಿ ದಯೆದೋರಿ || ಪ ||

ಪ್ರೀತನ ಬಲು ವಿಕ್ರಮದೊಳು | ಘಾತಿಸಿ ಮೆರೆದಿಹ ದ್ರುಪದನ |
ಜಾತೆಯ ಸಂಗರದೊಳು ಕೈ | ಸೋತೆನೆ ತಾನಿಂದು ||
ಮಾತುಳಮಥನನ ಸಹಭವೆ | ಗೀತೆರದಪಜಯವಾಗಲು |
ಭೂತಳದೊಳಗೆನಗೊಂದಪ | ಖ್ಯಾತಿಯು ಬಂತಲ್ಲ     || ೩೫೩ ||

ಖಗವಾಹನ ನಾ ನಿನಗೀ | ಮೊಗದೋರುವೆನೆಂತೈ ಮಮ |
ಮಗನ ಸುಕೀರ್ತಿಗೆ ತನ್ನಿಂ | ದೊಗೆದುದೆ ಮಲಿನತೆಯು ||
ವಿಗಡಪರಾಕ್ರಮಿ ಪಾರ್ಥಗೆ | ಜಗಳದ ಸ್ಥಿತಿಯೇನರುಹಲಿ |
ಸೊಗಸಾದುದೆ ನಿನಗೆನ್ನೀ | ಹಗರಣದಾಸರವು         || ೩೫೪ ||

ಎಲ್ಲಿರ್ಪೆಯೊ ಮಧುಸೂದನ | ಫುಲ್ಲದಳಾಯತಲೋಚನ |
ತಲ್ಲಣಿಸುತಲಿಹೆ ರುಕ್ಮಿಣಿ | ವಲ್ಲಭ ಬಾರೀಗ ||
ಸಲ್ಲಲಿತಾಂಗನೆ ಸೋದರಿ | ಯಲ್ಲವೆ ನಿನಗೆನ್ನೊಳು ದಯ |
ವಿಲ್ಲವೆ ಮೆಯ್ದೋರೀ ಕ್ಷಣ | ಬಲ್ಲಿದ ಗುಣ ಸಿಂಧು         || ೩೫೫ ||

ಭಾಮಿನಿ

ಸಿಂಧುವಸನಾಧೀಶ ಕೇಳಿಂ |
ತೆಂದು ದುಃಖದಿ ಪಾರ್ಥನರಸಿಯು |
ಮಂದರಾಧರನಂಘ್ರಿ ನೆನೆವುತ ಶೋಕಿಸುತ್ತಿರಲು ||
ಬಂದನಲ್ಲಿಗೆ ಸಕಲ ಸದ್ಗುಣ |
ಸಿಂಧು ನಾರದನಾಗಲಾ ಮುಚು |
ಕುಂದವರದಾನುಜೆಯನೀಕ್ಷಿಸಿ ನುಡಿದ ವಿನಯದಲಿ    || ೩೫೬ ||

ರಾಗ ಜಂಜೂಟಿ ಏಕತಾಳ

ಓಹೋ ಸೌಭದ್ರೆ ನೀನೇತಕಳಲುವೆ || ಪ ||
ವರಸುಚರಿತ್ರೆ | ನಿರುಪಮಗಾತ್ರೆ |
ಮರುಗುವುದೇನಿದು | ಸರಸಿಜನೇತ್ರೆ || ಓಹೋ        || ೩೫೭ ||

ಧನುಶರ ಬಿಟ್ಟು | ಮನದಿ ಕಂಗೆಟ್ಟು |
ಘನ ದುಃಖಿಪೆ ತಿಳು | ಹೆನಗೀ ಗುಟ್ಟು || ಓಹೋ        || ೩೫೮ ||

ಧರಸತಿ ಧೈರ್ಯ | ತೊರೆಯದೆ ಶೌರ್ಯ
ನೆರೆ ತವ ಮನಸಿನ | ಪರಿಯೊರೆತ್ವರ್ಯ || ಓಹೋ    || ೩೫೯ ||

ರಾಗ ಘಂಟಾರವ ರೂಪಕತಾಳ

ಮುನಿಕುಲಾಧಿಪ | ಕೇಳು ಮುದದೊಳು | ಮನದ ಶೋಕವ | ಪೇಳ್ವೆ ನಿನ್ನೊಳು ||
ಘನವರೂಥನ | ಸುತನ ಬವರದಿ | ವನಿತೆ ದ್ರೌಪದಿ | ಗೆಲಲು ತವಕದಿ   || ೩೬೦ ||

ಪ್ರೀತನೆನ್ನನು | ರಣಕೆ ಕಳುಹಲು | ಸಾತಿಶಯದಲಿ | ಬಂದು ಕಾದಲು ||
ಸೋತುಹೋದೆನು | ಸಮರಮುಖದೊಳು | ಖಾತಿಯಿಂದಲಿ | ಕೃಷ್ಣೆ ಮೆರೆವಳು     || ೩೬೧ ||

ಸಾಗರಾತ್ಮಜೆ | ರಮಣಗಿದರನು | ಪೋಗಿ ಪೇಳುವ | ಜನರ ಕಾಣೆನು ||
ಈಗಲಾರೊಡ | ನೆನುವೆ ಕಷ್ಟವ | ತ್ಯಾಗಮಾಡುವೆ | ನೆನ್ನ ಕಾಯವ      || ೩೬೨ ||

ವಾರ್ಧಕ

ಮರುಗದಿರು ಸೌಭದ್ರೆ ನಿನ್ನಣ್ಣನೆಡೆಗಯ್ದಿ |
ಭರದಿ ತವ ಕಷ್ಟಮಂ ತಿಳುಪಿ ಯದುಬಲ ಸಹಿತ |
ಸಿರಿಯರಸನಂ ಕಳುಹಿಸುವೆನಿದಕೆ ತಪ್ಪೆನೆಂದವಳ ಸಂತವಿಸಿ ಮುನಿಪ ||
ಕರದಿ ವೀಣೆಯ ಕೊಂಡು ರಾಮನಾಮವ ನುತಿಸಿ |
ಮೆರೆವ ದ್ವಾರಾವತಿಗೆ ನಡೆತಂದು ವಸುದೇವ |
ತರಳನಂಘ್ರಿಗೆ ನಮಿಸಲೆತ್ತಿ ಮನ್ನಿಸಿ ಕೃಷ್ಣನುಸಿರಿದಂ ಯೋಗಿಯೊಡನೆ    || ೩೬೩ ||

ರಾಗ ಗೌಳ ಏಕತಾಳ

ಎತ್ತ ಗಮನವಿದು | ಬಿತ್ತರಿಸೈ ಮುನಿ | ಪೋತ್ತಮ ಗುಣಸಾರ ||
ಸುವಿಚಾರ | ದಯೆದೋರ | ಕೀರ್ತಿವಿಸ್ತಾರ   || ೩೬೪ ||

ಮೂರುಲೋಕ ಸಂ | ಚಾರವ ಮಾಡುವ | ಕಾರಣಿಕ ವಿಧಾತ್ರ ||
ವರಪುತ್ರ | ಶುಭಗಾತ್ರ | ಸವಾರಿ ವಿಚಿತ್ರ      || ೩೬೫ ||

ರಸೆಯೊಳೇನಾದರು | ಪೊಸ ವಾರತೆಯಿರ | ಲುಸಿರೆನ್ನೊಳು ಜೀಯ ||
ಸುಪ್ರೀಯ | ನಿರ್ಮಾಯ | ತಾಪಸರಾಯ     || ೩೬೬ ||

ರಾಗ ಮಧ್ಯಮಾವತಿ ಏಕತಾಳ

ಕೇಳು ಕೃಷ್ಣ ನಾ ಪೇಳುವ ನುಡಿಯ |
ತಾಳಿ ದಯವ ಕರುಣಾಳು ಎನ್ನೊಡೆಯ || ಕೇಳು || ಪ ||

ಹರಿಯೆ ನೀ ಮರುತೇಂದ್ರ | ತರಳರ ಸಂತಯಿಸಿ |
ತೆರಳಲು ನರವೃಕೋ | ದರರು ಶೌರ್ಯದೊಳು ||
ನೆರೆ ಯುದ್ಧವನು ಮಾಡಿ | ದರೆ ಪಾರ್ಥ ಜಯವ ಹೊಂ |
ದಿರಲು ದ್ರೌಪದಿ ಭೀಮ | ಗೆರವಾಗಿ ಬಂದು || ಕೇಳು   || ೩೬೭ ||

ಶ್ವೇತವಾಹನನನ್ನು | ಧಾತುಗೆಡಿಸಲಭಿ |
ಘಾತಕೆ ನಿನ್ನನು | ಜಾತೆ ಸುಭದ್ರೆ ||
ಕಾತರದಲಿ ಪೋಗಿ | ನೂತನಾಹವ ಗೆಯ್ದು |
ಸೋತು ಬಿದ್ದಿರುವಳು | ಭೂತಳದೊಳಗೆ || ಕೇಳು      || ೩೬೮ ||

ಆಗವಳೆಡೆಗೆ ನಾ | ಪೋಗಿರೆ ನಿನಗಿದ |
ರಾಗಮ ತಿಳುಹಿಸ | ಲಾಗಿ ಕಳುಹಿದಳು ||
ಸಾಗರಶಯನ ನೀ | ಬೇಗ ಸೈನಿಕ ಕೂಡಿ |
ನಾಗವೇಣಿಯ ಬಳಿಗೆ | ಪೋಗಬೇಕಂತೆ || ಕೇಳು      || ೩೬೯ ||

ರಾಗ ಮಾರವಿ ಅಷ್ಟತಾಳ

ಏನನಾಡಿದಿರಿ | ಮೌನೀಂದ್ರರಿಂ | ದೇನನಾಡಿದಿರಿ || ಪ ||
ಮಾನಸ ಕಚ್ಚರಿ | ತಾನಿದು ಶಿವ ಶಿವ || ಏನ || ಅ |||

ಕಡು ಪರಾಕ್ರಮಿಯು ಕಿರೀಟಿ | ಊರು | ಪೊಡವಿಯೊಳಾರಿಲ್ಲ ಸಾಟಿ ||
ಮಡದಿಯು ಗೆಲಿದುದು | ಕಡು ವಿಚಿತ್ರವೆ ಸರಿ || ಏನ   || ೩೭೦ ||

ಬಾಲೆ ಸುಭದ್ರೆಯ ಧುರದಿ | ಪಾಂ | ಚಾಲೆ ಸೋಲಿಸಿದಳೆ ಭರದಿ ||
ಜಾಲವಲ್ಲವಳಿಗೆ | ಕಾಲ ಬಂದಿದೆ ದಿಟ || ಏನ || ೩೭೧ ||

ಒಡಗೊಂಡು ಯದುಸೈನಿಕವನು | ಪೋಗಿ | ತಡೆಯುತ್ತ ಯಾಜ್ಞಸೇನಿಯನು ||
ಬಿಡುವೆನೆ ನಿಲಿಸುವೆ | ಕಡು ಪೌರುಷವನಿಂದು || ಏನ  || ೩೭೨ ||

ಭಾಮಿನಿ

ಕುಂಭಿನೀಪತಿ ಕೇಳು ನಾರದ |
ನಂಬುಜಾಕ್ಷನ ನುಡಿಯನಾಲಿಸು |
ತಂಬರಕ್ಕಡರಿದನು ಶ್ರೀಹರಿನಾಮ ಕೀರ್ತಿಸುತ ||
ಅಂಬುಜಾಕ್ಷನು ಯೋಚಿಸುತ ನೀ |
ಲಾಂಬರನ ಬಳಿಗಯ್ದಿ ಸಲೆ ಸೌ |
ರಂಭದಿಂದುಸಿರಿದನು ತಂಗಿಯ ಪರಿಭವಂಗಳನು     || ೩೭೩ ||

ರಾಗ ಸೌರಾಷ್ಟ್ರ ಅಷ್ಟತಾಳ

ಅವಧರಿಸಯ್ಯ ಪೇ | ಳುವೆನೊಂದು ಪೊಸ ಸುದ್ದಿ | ಅಣ್ಣದೇವ || ಬಲು |
ತವಕದೊಳಿದ ನೀ | ಕಿವಿಗೊಟ್ಟು ಲಾಲಿಸು | ಅಣ್ಣದೇವ || ೩೭೪ ||

ಭಾರತಾಹವ ಗೆಲ್ದ | ಘೋರ ವ್ಯಾಜದೊಳಿಂದು | ಅಣ್ಣದೇವ || ಜಂ |
ಭಾರಿ ಸಮಿರಕು | ಮಾರರ್ ಕಾದಿದರಂತೆ | ಅಣ್ಣದೇವ || ೩೭೫ ||

ಭೀಮ ರಣದಿ ಸೋಲ | ಲಾಮೇಲೆ ದ್ರೌಪದಿ | ಅಣ್ಣದೇವ || ಬಂ |
ದಾ ಮಹಾ ನರನ ವಿ | ಶ್ರಾಮಿಸಿರುವಳಂತೆ | ಅಣ್ಣದೇವ        || ೩೭೬ ||

ಬವರಕೆಮ್ಮಯ ಸಹ | ಭವೆ ಸುಭದ್ರೆಯು ಪೋಗಿ | ಅಣ್ಣದೇವ ||
ಸೋತು | ಭುವನದೊಳೊರಗಿ ಶೋ | ಕವನು ತಾಳಿಹಳಂತೆ | ಅಣ್ಣದೇವ || ೩೭೭ ||

ನಾರದನಯ್ತಂದು | ವಾರತೆಯುಸಿರಿದ | ಅಣ್ಣದೇವ || ಪ್ರವಿ |
ದಾರಣಕೊದಗಲು | ಸಾರಬೇಕೀಕ್ಷಣ | ಅಣ್ಣದೇವ       || ೩೭೮ ||

ರಾಗ ಕಾಂಭೋಜಿ ಏಕತಾಳ

ಒರೆಯದಿರ್ ಕೇಶವನೆ | ವಾಹ್ವಾ | ಪರಿಹಾಸ್ಯದ ವಾಕು ||
ನರನನಗ್ನಿ ಜಾತೆ | ಗೆಲ್ದು | ದರರೆ ಬಹಳ ಠೀಕು        || ೩೭೯ ||

ಸಹಜೆ ಸುಭದ್ರೆಯನು | ತಾ ಜಯಿ | ಸಿಹಳೆ ಯಾಜ್ಞಸೇನೆ ||
ವಿಹಿತವಲ್ಲ ಕುಳಿತಿ | ರುವುದು | ಬಹೆನು ರಣಕೆ ನಾನೆ  || ೩೮೦ ||

ಬರಿದೆ ತಡಮಾಡದಿರು | ಬಲವ | ನೆರಹು ಜವದಿ ರಣಕೆ ||
ಮೆರೆವ ಯದುಸಮೂಹ | ವನ್ನು | ಹೊರಡಿಸಯ್ಯ ಕ್ಷಣಕೆ         || ೩೮೧ ||

ವಾರ್ಧಕ

ಅರಸ ಕೇಳೈ ಹಲಾಯುಧನೊರೆದ ನುಡಿಯನವ |
ಧರಿಸಿ ಚಕ್ರಾಯುಧಂ ನೆರಹಿ ನಿಜಮೋಹರವ |
ಮೆರೆವ ಕೃತವರ್ಮ ರತಿಪತಿಯುಷಾಪತಿ ಸಾಂಬ ಸಾತ್ಯಕಿಯರೊಡಗೂಡುತ ||
ಭರದಿ ನೀಲಾಂಬರನ ಪೀತಾಂಬರಂ ಕೂಡಿ |
ವರಕುರುಕ್ಷೇತ್ರದೆಡೆಗಯ್ತಂದು ಶೋಕಿಸು |
ತ್ತಿರುವಾ ಸುಭದ್ರೆಯನು ಕಂಡಾಗ ಮಾಧವಂ ಸಂತವಿಸುತಿಂತೆಂದನು   || ೩೮೨ ||

ರಾಗ ಸುರುಟಿ ಏಕತಾಳ

ಲಾಲಿಸೆನ್ನ ತಂಗಿ | ಸುಗುಣವಿ | ಶಾಲೆ ಮೋಹನಾಂಗಿ ||
ವ್ಯಾಲವೇಣಿ ಪೊಂ | ಚೇಲಕಿಭದ್ರೆಯೆ |
ಬಾಲೆ ಮರುಗದತಿ | ಲೀಲೆಯೊಳಿರು ಸದಾ   || ೩೮೩ ||

ಸುಂದರಾಸ್ಯವಿಂದು | ಕಂದಲು | ಬಂದುದೇನೆ ಕುಂದು ||
ಹೊಂದಿಹ ಪರಿಭವ | ವಿಂದೆನಗರುಹು ಪು |
ರಂದರನಣುಗನು | ದಂದುಗವಿತ್ತನೆ || ೩೮೪ ||

ಹೊತ್ತಿಹೆ ಚಿಂತೆಯನು | ಕಾಯದಿ | ನೆತ್ತರರಿವುದೇನು ||
ಮತ್ತಗಮನೆ ತವ | ಚಿತ್ತದ ಚಂಚಲ |
ಕಿತ್ತೆನ್ನೊಡನಿದ | ಬಿತ್ತರಿಸೀಕ್ಷಣ      || ೩೮೫ ||

ರಾಗ ಶಂಕರಾಭರಣ ರೂಪಕತಾಳ

ಜಯ ನಮಸ್ತೇ ಕೇಶವಾಯ | ಜಯ ರಮಾವರ ||
ಜಯ ಜನಾರ್ದನಾಚ್ಯುತಾಯ | ಜಯ ಗದಾಧರ      || ೩೮೬ ||

ಕೇಳು ತನ್ನ ಚಿಂತೆಯನು ಕೃ | ಪಾಳು ಹರುಷದಿ ||
ಪೇಳಲೇನು ದ್ರುಪದಜಾತೆ | ಬಾಳ ಗರ್ವದಿ   || ೩೮೭ ||

ಧುರದಿ ಸೋಲಿಸಿದಳು ನೊಂದೆ | ನರಕಸೂದನ ||
ಭರದೊಳವಳ ಶೌರ್ಯ ನಿಲಿಸು | ದುರಿತಭೇದನ      || ೩೮೮ ||

ರಾಗ ಭೈರವಿ ಝಂಪೆತಾಳ

ತಂಗಿ ಬಾರಳಲದಿರು | ಭಂಗಿಸುವೆ ದ್ರೌಪದಿಯ |
ಸಂಗರದೊಳೀಗ ಮನ | ದಿಂಗಿತವನರಿತೆ    || ೩೮೯ ||

ಬೇಡ ಭಯ ನಿನಗೆಂದು | ಮೋಡಬಣ್ಣನು ಸನ್ನೆ |
ಮಾಡಿದನು ಮಾರ್ಬಲಕೆ | ಕೂಡೆ ಗರ್ಜಿಸುತ || ೩೯೦ ||

ಪುಂಡರೀಕಾಂಬಕನ | ಕಂಡು ಪಾಂಚಾಲೆ ಕೋ |
ದಂಡವನು ಪಿಡಿದು ಖತಿ | ಗೊಂಡೊರೆದಳಿಂತು        || ೩೯೧ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ವೀರನಹೆ ವೈಕುಂಠ ಖರೆ ಖರೆ | ನಾರಿ ಸೌಭದ್ರೆಯ ಸಹಾಯಕೆ |
ಭೋರನಯ್ತಂದಿರುವೆ ಯದುಪರಿ | ವಾರ ಸಹಿತ       || ೩೯೨ ||

ಬೆಕ್ಕಿನಂದದಿ ಗೋಪಿಯರ ಮನೆ | ಪೊಕ್ಕು ಚೌರ್ಯದಿ ಪಾಲುಬೆಣ್ಣೆಯ |
ಮುಕ್ಕಿದಂದವಿದಲ್ಲ ಸಮರವು | ಹಕ್ಕಿಗಮನ  || ೩೯೩ ||

ಶಕ್ರ ತಾವರೆಭವ ಭವಾದ್ಯರ | ವಿಕ್ರಮಕೆ ನಾ ಬೆದರುವೆನೆ ಹಿಡಿ |
ಚಕ್ರವೀಗ ಪರೀಕ್ಷಿಸುವೆನು ಪ | ರಾಕ್ರಮವನು || ೩೯೪ ||

ಭುಗಿಲೆನುತ ರೋಷದಲಿ ಕೋಲ್ಗಳ | ನಗಧರನಿಗೆಸುತಿರಲು ಕಾಣುತ |
ಹಗರಣಕ್ಕಿದಿರಾಗಿ ಗಾಂಧಿನಿ | ಮಗನು ನುಡಿದ         || ೩೯೫ ||

ರಾಗ ಮಾರವಿ ಏಕತಾಳ

ಪೂತುರೆ ದ್ರೌಪದಿ | ಮಾತುಳಮರ್ದನ | ನೇತಕೆ ನಿಂದಿಸುವೆ ||
ನೂತನವಾದಭಿ | ಘಾತಕೆ ನಿಲು ತವ | ರೀತಿಯ ಪರಿಕಿಸುವೆ    || ೩೯೬ ||

ಮುನಿನಾರದನಿಗೆ | ವನಿತೆಯನಿತ್ತಿಹ | ಬಿನುಗಲ್ಲವೆ ನೀನು ||
ಘನತೆಯನರಿತಿಹೆ | ನನುವರದೊಳು ಗಣಿ | ಸೆನು ನಿನ್ನನು ನಾನು       || ೩೯೭ ||

ಕಾಹುರದೊಳು ಬಲು | ಸಾಹಸದೋರುವ | ಬಾಹಿರತನವೇಕೆ ||
ನಾ ಹೆದರುವೆನೆಲೆ | ಸ್ತ್ರೀಹತ್ಯಕೆ ನಡೆ | ಮೋಹರ ಬಿಡು ಜೋಕೆ || ೩೯೮ ||

ಬಿಡು ಬಿಡು ಬವರಕೆ | ನಡೆತಂದೆನ್ನೊಳು | ನುಡಿಯದಿರೀ ಧರ್ಮ ||
ಕಡುಗಲಿಯಾದರೆ ಕೊಡು ಸಂಗರವನು | ತಡೆಯದೆ ಕೃತವರ್ಮ          || ೩೯೯ ||

ಪರಮ ಪತಿವ್ರತೆ | ಯರ ಪದ್ಧತಿ ತೊರೆ | ದಿರುವಂಗನೆ ನಿನ್ನ |
ತರಿಯಲು ಹೊದ್ದದು | ದುರಿತವೆನುತಲತಿ | ಶರ ಸುರಿಸಿದ ಮುನ್ನ        || ೪೦೦ ||

ಮೂಢನೆ ಬಲು ಮಾ | ತಾಡದಿರೆನ್ನುತ | ಗಾಢದೊಳದ ತರಿದು ||
ಜೋಡಿಸಿ ಪ್ರತಿ ಶರ | ಪೂಡಲು ಬಿದ್ದನು | ರೂಢಿಗೆ ಮೈಮರೆದು || ೪೦೧ ||