ಭಾಮಿನಿ

ಜಗತಿಪಾಲ ನಿಧಾನಿಸೀಪರಿ |
ಹಗರಣದಿ ಕೃತವರ್ಮ ದ್ರುಪದನ |
ಮಗಳ ಬಾಣವ ಸಹಿಸಲಾರದೆ ನೆಲದಿ ಬಿದ್ದಿರಲು ||
ಬಗೆಯ ಕಂಡಾ ಸಾತ್ಯಕಿಯು ಭುಗು |
ಭುಗಿಲೆನುವ ರೌದ್ರದಲಿ ನಡೆತರ |
ಲಗಡು ವಿಕ್ರಮಿಯನು ನಿರೀಕ್ಷಿಸಿ ನುಡಿದಳಾ ಕೃಷ್ಣೆ      || ೪೦೨ ||

ರಾಗ ಘಂಟಾರವ ಅಷ್ಟತಾಳ

ಎಲ್ಲಿಗಯ್ದುವೆ ನಿಲ್ಲು ಸಾತ್ಯಕಿ ನಿನ್ನ |
ಗೆಲ್ಲುವೆನು ಕ್ಷಣದಲ್ಲಿ ತನ್ನಯ | ಮಲ್ಲಸಾಹಸ ಬಲ್ಲೆಯ   || ೪೦೩ ||

ಏನೆಂದೆ ಯಾಜ್ಞಸೇನಿ ನಲ್ಲನೊಳು ಸಂ |
ಧಾನಗೊಳದೆ ನವೀನ ಜಗಳವ | ನೀನೆಸಗಿದುದು ಮಾನವೆ     || ೪೦೪ ||

ನೀತಿ ಪೇಳ್ವರೆ ತಾತ ನೀನೆನಗಲ್ಲ |
ರೀತಿಯರಿಯದೆ ಮಾತನಾಡುವೆ | ಕೋತಿಯಂದದಿ ಪಾತಕಿ    || ೪೦೫ ||

ಒದರಬೇಡೆಲೆ ಸುದತಿ ಸ್ತ್ರೀಹತ್ಯಕೆ |
ಬೆದರಿ ನುಡಿದರೆ ಮದದಿ ಕುಣಿವೆಯ | ಸದೆವೆನೀಕ್ಷಣ ಕದನದಿ   || ೪೦೬ ||

ಸಾರೆಲೋ ಹಿಂದೆ ಭೂರಿಶ್ರವನ ಕಯ್ಯೊಳ್ |
ಹೋರಿ ಸಿಲುಕಿದ ಸಾರ ಬಲ್ಲೆನು | ಧೀರತನವನು ತೋರಿಸು    || ೪೦೭ ||

ಬಿಟ್ಟು ಪೋಗೆಲೆ ತಟ್ಟನೆ ಕದನವ |
ಸಿಟ್ಟು ತೋರ್ದರೆ ಕುಟ್ಟಿ ಮಸ್ತಕ | ವಟ್ಟುವೆನು ಯಮಬಟ್ಟೆಗೆ      || ೪೦೮ ||

ಉಸಿರಬೇಡ ನಿನ್ನಸಮ ವಿಕ್ರಮವೆಂದು ||
ಪೊಸಮಸೆಯ ಕಣೆವಿಸರವೆಸೆಯಲು | ವಸುಧೆಗುರುಳಿದ ವ್ಯಸನದಿ       || ೪೦೯ ||

ಭಾಮಿನಿ

ಶರಧಿವಸನಾಧೀಶ ಕೇಳಾ |
ಧುರದಿ ಸಾತ್ಯಕಿ ಮೆಯ್‌ಮರೆಯೆ ತ |
ದ್ದಿರವ ಕಾಣುತ ಸಾಂಬ ಪ್ರಳಯದ ಸಾಂಬನಂದದಲಿ ||
ಕರದಿ ಕೋದಂಡವನು ಧರಿಸುತ |
ವರವರೂಥವನಡರಿ ರೋಷಾ |
ತುರದಿ ರಣಕಯ್ತಂದು ದ್ರುಪದನ ಜಾತೆಗಿಂತೆಂದ      || ೪೧೦ ||

ರಾಗ ಭೈರವಿ ಏಕತಾಳ

ಮಾತುಲಾನಿ ನುಡಿ ಕೇಳು | ನಿನ | ಗೇತಕೆ ಪೌರುಷ ತಾಳು ||
ನೀತಿಯಲ್ಲ ಧುರವರರೆ | ಯದು | ವ್ರಾತವ ಗೆಲಿದೆಯ ಧಿರುರೆ   || ೪೧೧ ||

ಹರಿಯ ಕುಮಾರಕ ಸಾಂಬ | ನೀ | ನೊರೆಯುವುದೇಕೀ ಡಂಭ ||
ಕುರುವರನಣುಗೆಯ ವರಿಸಿ | ಮಿಗೆ | ಸೆರೆಬಿದ್ದಿಹ ಬಲು ಸಹಸಿ   || ೪೧೨ ||

ತೊಲತೊಲಗೆಲೆ ಪಾಂಚಾಲೆ | ರಣ | ದಲಿ ತೋರಿಸದಿರು ಲೀಲೆ ||
ಛಲದಿಂದೇನದೆ ಸ್ವಾರ್ಥ | ಪತಿ | ಯಲಿ ಕಾದಿರುವೆ ನಿರರ್ಥ     || ೪೧೩ ||

ಜನನಿಯರೊಳು ಮನಮಾಡಿ | ತಾ | ತನ ಕೋಪಕೆ ಕಯ್ ನೀಡಿ ||
ಘನ ಶಾಪವ ಪಡೆದಿರುವೆ | ನೀ | ನೆನಗೆ ಸುಬೋಧೆಯನೊರೆವೆ || ೪೧೪ ||

ಬಾಯಿಯ ಕಾಳಗವಿದುವೊ | ಭಟ | ರಾಯತಿಕೆಯ ಸಂಗರವೊ ||
ಕಾಯುವರಾರೈ ನಿನ್ನ | ಪಡೆ | ನಾಯಿಯಪೋಲ್ ನಡೆ ಮುನ್ನ  || ೪೧೫ ||

ಜತನವರಿತು ಮಾತಾಡು | ತವ | ಪಿತನನೀಗ ಬರಮಾಡು ||
ಗತಿ ತೋರಿಪೆನೆಂದೆನುತ | ಶರ | ತತಿ ಸುರಿದಳು ನಸುನಗುತ || ೪೧೬ ||

ಭಾಮಿನಿ

ಉತ್ತರೆಯ ಮೊಮ್ಮಗನೆ ನೀ ಕೇ |
ಳಿತ್ತಲಗ್ನಿಜೆಯೆಸೆದ ಸರಳಿನ |
ಮೊತ್ತ ತಾಳದೆ ಸಾಂಬ ಧರಣಿಯೊಳೊರಗಿರಲು ಕಂಡು ||
ಕೃತ್ತಿವಾಸನ ತೆರದಿ ಖತಿ ಧರಿ |
ಸುತ್ತ ಬಿಲ್ಲನು ಪಿಡಿದು ರಥವೇ |
ರುತ್ತ ನಡೆತಂದಾಕ್ಷಣದೊಳಲರಂಬನಿಂತೆಂದ          || ೪೧೭ ||

ರಾಗ ಭೈರವಿ ಅಷ್ಟತಾಳ

ಅತ್ತೆ ಕೇಳ್ ಸ್ತ್ರೀಹತ್ಯವು | ಮಾಡುವರೆ ಹೇ | ಸುತ್ತಿದೆ ಮನ ಸತ್ಯವು ||
ಮತ್ತಕಾಶಿನಿಯರೊ | ಳುತ್ತಮೆ ಗೆಯ್ದ ಮ |
ಹತ್ತಾದ ದುಷ್ಕೃತ್ಯವು | ಏನ್ ಪಥ್ಯವು         || ೪೧೮ ||

ಧಿರುರೆ ಶಭಾಸೆನ್ನನು | ನೀನೇನೆಂದು | ಜರೆದೆ ಬಲ್ಲೆನು ನಿನ್ನನು ||
ವಿರಹದಿ ಶಂಬರಾ | ಸುರನ ಪಾಕಾಂಗನೆ |
ಗೆರಕ ಕೂಡಿದ ಧೀರನು | ಸೈ ವೀರನು        || ೪೧೯ ||

ಬಿಡು ಬಿಡೀ ಶೌರ್ಯಗಳು | ಪರಾಕ್ರಮ | ನಡೆಯಲಾರದು ಎನ್ನೊಳು ||
ಪೊಡವಿಯೊಳಿಹ ಮುನಿ | ಗಡಣವೆನ್ನಲಗಿಗೆ |
ನಡುಗುವರ್ ಭೀತಿಯೊಳು | ನೀನಿದ ಕೇಳು  || ೪೨೦ ||

ಯೋಗಿಗಳ್ ಬೆದರ್ವರೆಂದೆ | ಕಪರ್ದಿಯ | ತಾಗಿ ಪೂಶರವ ಹಿಂದೆ ||
ರಾಗದಿಂದೆಸೆಯಲು | ದ್ಯೋಗಿಸಲುರಿ ಗಣ್ಣಿಂ |
ದಾಗ ನಿರ್ಗತಿಗೆ ಸಂದೆ | ಏ ಹಂದೆ  || ೪೨೧ ||

ಅರರೆ ಪೂಶರಕಿಂದ್ರನು | ಸರ್ವಾಂಗದಿ | ಧರಿಸಿದನಕ್ಷಿಯನು ||
ಸಿರಿಗೆ ವಕ್ಷವನಿತ್ತ | ಹರಿ ಬೊಮ್ಮನಣುಗೆಯ |
ನೆರೆದನು ನಿಟಿಲಾಕ್ಷನು | ಭಗಪೀಠನು         || ೪೨೨ ||

ಮುಗುಳಂಬನೀ ತೆರದಿ | ಬಗುಳುವುದು | ಸೊಗಸೆ ಗ್ರಹಿಸು ಮನದಿ ||
ಜಗದ ಮುಮುಕ್ಷುಗಳ್ | ಬಗೆಯರು ನಿನ್ನನೆಂ |
ದುಗಿಯೆ ಶರವ ಭರದಿ | ವಿಕ್ರಮದಿ   || ೪೨೩ ||

ವಾರ್ಧಕ

ವರಪರೀಕ್ಷಿತಜಾತ ಲಾಲಿಸೈ ಕಾಮನಂ |
ಪರಿಭವಿಸುತನಿರುದ್ಧನಂ ಗೆಲ್ದು ವಜ್ರನಂ |
ಮುರಿದು ಮಿಗೆ ಕೃತವರ್ಮನುಬ್ಬಟೆಯ ನಿಲಿಸುತಕ್ರೂರನಂ ಜಯಿಸುತಂದು ||
ತ್ವರಿತದಿಂದುದ್ಧವನ ಗರ್ವಮಂ ಮುರಿದು ಯದು |
ಸರಣಿಯಂ ಜವಗೆಡಿಸಿ ಮುಂದೊತ್ತಿ ಬರುತಿರಲ್ |
ಪರಿಯ ಕಂಡಾಗ ಸಂಕರ್ಷಣಂ ಖಾತಿಯೊಳ್ ನುಡಿದ ಪಾಂಚಾಲೆಯೊಡನೆ        || ೪೨೪ ||

ರಾಗ ಶಂಕರಾಭರಣ ಮಟ್ಟೆತಾಳ

ಧಿರುರೆ ಧಿರುರೆ ಕೃಷ್ಣೆ ಸಮರಕೆ | ನಿಲ್ಲೀಗ ನಿನ್ನ |
ಗರುವ ಬಿಡಿಸಿ ಬಿಡುವೆ ನಿಮಿಷಕೆ || ಪ ||

ತರುಣಿ ನಿನಗೆ ಬಹಳ ಧೈರ್ಯ | ವಿರಲು ತೋರಿಸೀಗ ಶೌರ್ಯ |
ದಿರವ ಬಂದೆ ರೌಹಿಣೇಯ | ಸರಸವಲ್ಲ ಸಮರದಾಯ || ಧಿರುರೆ          || ೪೨೫ ||

ನೋಡು ನಿನ್ನ ಬಲವನಿನ್ನು | ರೂಢಿಯೊಳಗೆ ಬಿದ್ದುದನ್ನು |
ಗಾಢ ಪಂಥವೇಕೊ ನಿನಗೆ | ಪಾಡೆ ನೀನು ಬವರದೊಳಗೆ || ಧಿರುರೆ      || ೪೨೬ ||

ಅಲ್ಪ ಬಲರ ಗೆಲಿದು ರಣದಿ | ಜಲ್ಪಿಸದಿರು ಕಡುಹ ಕ್ಷಣದಿ |
ಬಲ್ಪಿನಿಂದ ಮುರಿದು ನಿನ್ನ | ತಲ್ಪಿಸುವೆನು ಜವಗೆ ಮುನ್ನ || ಧಿರುರೆ       || ೪೨೭ ||

ಹರಿಯ ಕೂಡೆ ಭಾಷೆ ನುಡಿದು | ಮರುತಸುತನ ಬಳಿಗೆ ನಡೆದು |
ಧುರದಿ ಸೋತು ಬಂದುದರಿವೆ | ತೆರಳು ನಿನ್ನ ಗರ್ವ ಮುರಿವೆ || ಧಿರುರೆ  || ೪೨೮ ||

ರೀತಿಯರಿತು ಮಾತನಾಡು | ನೀತಿಯಲ್ಲ ತಿಳಿದು ನೋಡು |
ಘಾತಿಸುವೆನೆನುತ್ತ ಶರದ | ವ್ರಾತ ದ್ರುಪದ ಸುತೆಗೆ ಸುರಿದ || ಧಿರುರೆ     || ೪೨೯ ||

ಸರಸಿಜಾಕ್ಷಿ ರೋಷದಿಂದ | ಬರುವ ಕಣೆಯ ತವಕದಿಂದ |
ಮುರಿದು ಪ್ರತಿವಿಶಿಖವನೆಸೆಯ | ಭರದಿ ಬಲನ ಬಿಂಕ ಕುಸಿಯೆ || ಧಿರುರೆ || ೪೩೦ ||

ಭಾಮಿನಿ

ಮಾನವಾಧಿಪ ಕೇಳು ರೋಹಿಣಿ |
ಸೂನು ದ್ರುಪದನ ಸುತೆಯ ಬಾಣವ |
ನಾನಲಾರದೆ ನೆಲದಿ ಬಿದ್ದಿರಲದ ನಿರೀಕ್ಷಿಸುತ ||
ಸಾನುರಾಗದೊಳಂದು ವಿಷ್ವ |
ಕ್ಸೇನನಚ್ಚರಿವಡುತ ಬವರಕೆ |
ತಾನೆ ಬಂದಿದಿರಾಗಿ ಭಗಿನಿಯೊಳೊರೆದನಿಂತೆನುತ    || ೪೩೧ ||

ರಾಗ ಕಾಂಬೋಜಿ ಏಕತಾಳ

ಏನೆ ಭ್ರಮರಭಾಸೆ ಯಾಜ್ಞ | ಸೇನೆ ಕೋಪವೇಕೆ |
ಮಾನವುಳ್ಳ ಸತಿಯರಿಗೆ ನಿ | ಧಾನವಲ್ಲ ಜೋಕೆ ||
ಸಾನುರಾಗದಿಂದ ಯದುವಿ | ತಾನವೆಲ್ಲ ಮುರಿದೆ |
ನೀನೇನರಿಯದವಳೆ ನಮ್ಮೊ | ಳೀ ನಿರೋಧ ಬರಿದೆ   || ೪೩೨ ||

ರಾಗ ಮಾರವಿ ಝಂಪೆತಾಳ

ಮಾಧವನೆ ಲಾಲಿಸು ವಿ | ನೋದದಿಂದೆನ್ನ ನುಡಿ |
ಈ ಧನಂಜಯ ತಾ ವೃ | ಕೋದರನೊಳಿಂದು ||
ಕಾದಿ ಸೋಲಿಸೆ ನರನ | ಭೇದಿಸಿದರಿಂದ ನಿನ |
ಗಾದುದೇ ಕೊರತೆ ಪೇ | ಳೈ ದಯಾಸಿಂಧು  || ೪೩೩ ||

ರಾಗ ಕಾಂಭೋಜಿ ಏಕತಾಳ

ನಾಗವೇಣಿ ವರನೊಳ್ ಮಾಡ | ಲಾಗದಿಂತು ಮುನಿಸು |
ತ್ಯಾಗ ಭೋಗ ಪತಿಯಿಂದಲ್ತೆ | ರಾಗದಿ ನೀ ಗ್ರಹಿಸು ||
ಪೋಗಲದು ಸುಭದ್ರೆಯಳನ | ಭ್ಯಾಗಮದೊಳು ನೀನು |
ತಾಗಿ ಬಹಳ ಭಂಗಬಡಿಸ | ಲಾಗಿ ಬಂದೆ ನಾನು       || ೪೩೪ ||

ರಾಗ ಮಾರವಿ ಝಂಪೆತಾಳ

ಅಣ್ಣ ಕೇಳ್ ಸೌಭದ್ರೆ | ಬಣ್ಣದಿಂದೆನ್ನೊಡನೆ |
ಹಣ್ಣಿದಳು ಧುರವ ಮು | ಕ್ಕಣ್ಣನಂದದೊಳು ||
ಮಿಣ್ಣನಾಕೆಯ ಗರ್ವ | ಮಣ್ಣುಗೂಡಿಸಿದೆನದ |
ನೆಣ್ಣದಿರು ಮನದಿ ಪೂ | ಗಣ್ಣ ಪಿಂತೆರಳು     || ೪೩೫ ||

ರಾಗ ಕಾಂಭೋಜಿ ಏಕತಾಳ

ತರುಣಿರನ್ನೆ ಕೇಳು ಪಿಂತೆ | ದುರುಳ ದುಶ್ಶಾಸನನು |
ಭರದಿ ನಿನ್ನನೆಳೆದು ನೀನು | ಟ್ಟಿರುವ ದುಪ್ಪಟೆಯನು ||
ಧರಧರನೆ ಸೆಳೆಯಲು ಬೆದರಿ | ಸ್ಮರಿಸೆ ಮನದೊಳೆನ್ನ |
ಮೆರೆವ ಮಾನ ಪೊರೆದುದನ್ನು | ಮರೆತೆಯಾ ನೀ ಮುನ್ನ        || ೪೩೬ ||

ರಾಗ ಮಾರವಿ ಝಂಪೆತಾಳ

ವನರುಹಾಕ್ಷನೆ ನಿನ್ನ | ತನಯ ಕಂದರ್ಪನಿಗೆ |
ದಿನವೆಂಟರೊಳು ಮದುವೆ | ಯನು ಮಾಳ್ಪೆನೆಂದು ||
ವನಿತೆಯರೊಳೊರೆದೆನ್ನ | ನೆನೆಯಲಾ ಕಮಲನೃಪ |
ತನುಜೆಯಳನೊದಗಿಸಿದು | ದನು ಯೋಚಿಸಿಂದು      || ೪೩೭ ||

ರಾಗ ಭೈರವಿ ಏಕತಾಳ

ಬಿಡು ಬಿಡು ಶೌರ್ಯವ ತಂಗಿ | ರಣ | ಕಡೆಗೊಡದಿರು ಭದ್ರಾಂಗಿ ||
ಹಿಡಿ ಕಾರ್ಮುಕ ತೊಡು ಶರವ | ತಡೆ | ಗಡಿದಿಳುಹುವೆ ತವ ಶಿರವ       || ೪೩೮ ||

ಸಾರೆಲವೋ ಗೋವಳನೆ | ಬಡಿ | ವಾರವಿದೇಕೆನ್ನೊಡನೆ ||
ಗಾರುಗೆಡದಿರೆಲೊ ರಣದಿ | ದಧಿ | ಚೋರನೆ ತೊಲಗೀ ಕ್ಷಣದಿ   || ೪೩೯ ||

ಕಾಕೋದರಜಡೆ ಕೇಳು | ಸುವಿ | ವೇಕವ ಮನದೊಳು ತಾಳು ||
ಲೋಕಾಕ್ಷನ ಸುತನೆಡೆಗೆ | ನಿನ್ನ | ನೂಕುವೆ ಸತ್ವರದೊಳಗೆ     || ೪೪೦ ||

ಹಕ್ಕಿಗಮನ ಗಳಹದಿರು | ನೀ | ಸಿಕ್ಕಿದೆ ಪಿಂಜರಿಯದಿರು ||
ಸೊಕ್ಕರೆವೆನು ನೋಡೆನುತ | ಶರ | ಘಕ್ಕನೆ ಸುರಿದಳು ನಗುತ  || ೪೪೧ ||

ಬರುವಸ್ತ್ರವ ಕತ್ತರಿಸಿ | ಮುರ | ಹರ ಕೋಪದಿ ಗಹಗಹಸಿ ||
ಧರಿಸಲು ಚಕ್ರವ ಭರದಿ | ಕಂ | ಡೊರೆದಳು ಸತಿಯಬ್ಬರದಿ      || ೪೪೨ ||

ವಾರ್ಧಕ

ನೀನೆಲೆ ರಜಸ್ತತ್ತ್ವತಾಮಸಗುಣಂಗಳೊಳ್ |
ಲೀನನಾಗುತ ಸೃಷ್ಟಿ ಸ್ಥಿತಿಲಯಾದಿಯನೆಸಗಿ |
ಸ್ವಾನುಭವದಾನಂದದೊಳಗಿಹ ಮಹಾ ಮಹಿಮ ಸರ್ವವ್ಯಾಪಕನೆನಿಸಿದು ||
ಮಾನಾವಮಾನವಗುಣಾವಗುಣಗಳನೆಣಿಸ |
ದೀ ನಿರೋಧದೊಳೆನ್ನ ಕೆಣಕಿ ವಿಕ್ರಮದೋರೆ |
ನಾ ನಿನಗೆ ಬೆದರೆನೆನ್ನುತ ಕರದ ಚಕ್ರಮಂ ಸೆಳೆದವಳ್ ಗರ್ಜಿಸಿದಳು     || ೪೪೩ ||

ಭಾಮಿನಿ

ಸಾರಸಾಕ್ಷನೆ ಕೇಳು ತನ್ನ ವಿ |
ಚಾರಿಸದೆ ರಣವೆಸಗಿದೆಯ ಗಂ |
ಭೀರವಾದ ಸುದರ್ಶನಕೆ ಬೆಲೆಯಿಲ್ಲದಾಯಿತಲ ||
ತೋರು ನಿನ್ನ ಪರಾಕ್ರಮವನೆಂ |
ದಾ ರಮಣಿ ಜರೆಯಲ್ಕೆ ಕೇಳಿ ಮು |
ರಾರಿ ಕೋಪದೊಳುಲಿದು ಗಂಗಾಧರನ ಧ್ಯಾನಿಸಿದ    || ೪೪೪ ||

ರಾಗ ಕಟಾವು ಏಕತಾಳ

ಬಾ ಶಂಕರ ಪರ | ಮೇಶ ದಿಗಂಬರ | ಕ್ಲೇಶವಿನಾಶ ಸು | ರೇಶ ನಮಿತ ಜಗ |
ದೀಶ ಪಿನಾಕಿ ಮ | ಹೇಶ ತ್ರಿಯಕ್ಷಗಿ | ರೀಶ ಭಯಂಕರ ದೋಷವಿದೂರ ಧ |
ನೇಶಪ್ರಿಯ ಕುಸು | ಮೇಶಾಂತಕ ಭೂ | ತೇಶ ಕಪರ್ದಿ ಬಿ | ಲೇಶಯಭೂಷ ಪ |
ರೇಶ ಜಟಾಧರ | ಪೂಷಜವೈರಿ ಉಮೇ | ಶ ಭೀಮ ನಭ | ಕೇಶ ಸದಾಶಿವ | ಬಾ ಬಾ ಬಾ  || ೪೪೫ ||

ವಾರ್ಧಕ

ಮಹಿತಳಾಧಿಪ ಲಾಲಿಸೀ ತೆರದಿ ಖಗರೂಢ |
ನಹಿಭರಣನಂ ಧ್ಯಾನಿಸಲ್ಕೆ ಕೈಲಾಸದೊಳ್ |
ಮಹದೇವನರಿತು ಶೂಲವ ಕರದಿ ಪಿಡಿದು ಕಾತ್ಯಾಯನಿಯನೊಡಗೂಡುತ ||
ಗುಹ ಗಣಪ ನಂದಿ ಭೃಕುಟಿಯು ವೀರಬಾಹುದು |
ಸ್ಸಹ ಭೃಂಗಿ ಭೂತಭೇತಾಳರನ್ನೊಡಗೊಳುತ |
ವಹಿಲದಿಂ ಕುರುಕ್ಷೇತ್ರಕಯ್ತಂದು ಚಿಂತಿಸುವ ಕೃಷ್ಣನಂ ಕಂಡೆಂದನು       || ೪೪೬ ||

ರಾಗ ಪಂತುವರಾಳಿ ಏಕತಾಳ

ಶಂಕೆಯೇನಯ್ಯ ವಿಷ್ಣು | ಜನಾರ್ದನ | ಪಂಕಕುಲಾದ್ರಿಜಿಷ್ಣು ||
ಕಿಂಕರನುತ ಸುರ | ಸಂಕುಲರಕ್ಷಭ | ಯಂಕರದಾನವ | ಬಿಂಕವಿಮರ್ದನ |
ಕುಂಕುಮಚರ್ಚಿತ | ಸಂಕಟಹರಣ ಶು | ಭಂಕರ ಹರಿ ಶ್ರೀ | ವೆಂಕಟ ರಮಣನೆ     || ೪೪೭ ||

ಕ್ಷೀರನಿಧಿಯೆ ವಾಸವು | ಮೆರೆವ ಜಗ | ಮೂರು ನಿನ್ನಾಧೀನವು ||
ಶ್ರೀರಮೆಯೇ ಸತಿ | ವಾರಿಜಮಾರ್ಗಣ | ಶಾರದೆವರರು ಕು | ಮಾರಕರೆಲೆ ವೃಂ |
ದಾರಕರೆಲ್ಲ ಪ | ದಾರವಿಂದವನು | ಸೇರಿರುತಿರಲವಿ | ಚಾರವಿದೇನಿದು  || ೪೪೮ ||

ಧರೆಭಾರ ತಿದ್ದಲೆಂದು | ಜಗದೊಳವ | ತರಿಸಿದೆ ಭಕ್ತ ಬಂಧು ||
ಮೆರೆಯುವ ಸಚರಾ | ಚರವನು ನಿತ್ಯದಿ | ಪೊರೆವ ಮಹಾತುಮ | ನರರಂದದಿ ಬಲು | ಮರುಕವ ಮನದಲಿ | ಧರಿಸುತಲೆನ್ನನು | ಸ್ಮರಿಸಿದ ಸಂಗತಿ | ಯರುಹತಿ ತ್ವರಿತದಿ      || ೪೪೯ ||

ರಾಗ ದೇಶಿ ಏಕತಾಳ

ಲಾಲಿಸಿ ಕೇಳೆನ್ನ ನುಡಿಯ | ನೆಲೆ ಸಾಂಬ | ಪಾಂ |
ಚಾಲೆಯ ದುಷ್ಕೃತ್ಯದಿರವ | ನೆಲೆ ಸಾಂಬ     || ೪೫೦ ||

ಭಾರತಾನೀಕ ಧುರದೊ | ಳೆಲೆ ಸಾಂಬ | ಗೆಲ್ದ |
ರಾರೆನುತ ಹರೀಂದ್ರಜಾತ | ರೆಲೆ ಸಾಂಬ     || ೪೫೧ ||

ಕಾದಿರಲು ಭೀಮ ಸೋತ | ನೆಲೆ ಸಾಂಬ | ಬಳಿ |
ಕೀ ದುರಾತ್ಮೆ ಬಂದು ರಣದೊ | ಳೆಲೆ ಸಾಂಬ          || ೪೫೨ ||

ನರ ಸುಭದ್ರೆ ಯದುಸೈನಿಕವ | ನೆಲೆ ಸಾಂಬ | ಜಯಿ |
ಸಿರುವಳವಳ ಗೆಲಲು ನೆನೆದೆ | ನೆಲೆ ಸಾಂಬ || ೪೫೩ ||

ವಾರ್ಧಕ

ಪಕ್ಷೀಂದ್ರಗಮನ ಲಾಲಿಸು ನಿನ್ನ ಲೀಲಾಚ |
ರಿತ್ರಮಂ ಬಿತ್ತರಿಸಲಾರ್ಗಳವು ಸಂಗರದಿ |
ಸುತ್ರಾಮತನುಜ ಬಲರಾಮಾದಿ ಯಾದವರ್ ಸೋತಿರ್ಪುದಾಶ್ಚರ್ಯವು ||
ಚಿತ್ರಮಿದು ಮರುಗದಿರು ದ್ರುಪದಾವನೀಶ್ವರನ |
ಪುತ್ರಿಯ ಪರಾಕ್ರಮವ ನಿಲಿಸುತಲೆ ಕಾಲನ ಧ |
ರಿತ್ರಿಗವಳಂ ಕಳುಹಿಸುವೆನರ್ಧ ನಿಮಿಷದೊಳ್ ನೋಡೆನ್ನ ಸಾಹಸವನು  || ೪೫೪ ||

ಭಾಮಿನಿ

ಕುಂಜರಾವತಿನಾಥ ಕೇಳೈ |
ಕಂಜನೇತ್ರನೊಳಿಂತುಸಿರಿ ಮೃ |
ತ್ಯುಂಜಯನು ಕಳುಹಿದನು ಪ್ರಮಥಗಣಂಗಳನು ಧುರಕೆ ||
ಜಂಜಡದಿ ನಡೆತಂದು ತರಣಿಗೆ |
ಮಂಜು ಕವಿವಂದದಲಿ ಮುಸುಕಿರ |
ಲಂಜದಿರೆ ಪಾಂಚಾಲೆ ಬಳಿಕಾ ಭೃಕುಟಿ ತಾ ನುಡಿದ   || ೪೫೫ ||

ರಾಗ ಭೈರವಿ ಮಟ್ಟೆತಾಳ

ನಿಲ್ಲು ನರಸತಿ | ನೀ | ನೆಲ್ಲಿ ಪೋಗುತಿ ||
ಸಲ್ಲದೀಗ ತೋರ್ಪೆ ಬವರ | ದಲ್ಲಿ ದುರ್ಗತಿ   || ೪೫೬ ||

ಆರು ನೀನೆಲಾ | ಬಲು | ಶೂರನಹೆ ಭಲಾ ||
ಮಿರಿ ಕಲಹ ಕಟ್ಟಿದಾತ | ನಾರು ಹೇಳೆಲಾ    || ೪೫೭ ||

ಪುರವಿನಾಶನು | ಕಳುಹಿ | ಸಿರುವ ತನ್ನನು ||
ಮೆರೆವ ಭೃಕುಟಿಯೆನುವ ಪೆಸರು | ತರಿವೆ ನಿನ್ನನು     || ೪೫೮ ||

ರಣದಿ ನೀ ಕಣಾ | ಸಹಸಿ | ಗಣದಿ ಹೆಗ್ಗಣ ||
ಬಣಗೆ ಮುರಿವೆನೀಗ ನಿನ್ನ | ನೆಣವ ನೀಕ್ಷಣ || || ೪೫೯ ||

ಸಾಕು ಪಂಥವು | ನಿನಗ | ದೇಕೆ ಶೌರ್ಯವು ||
ಭೀಕರಿಸದಿರೆಂದು ಭರದಿ | ನೂಕಲಸ್ತ್ರವು      || ೪೬೦ ||

ತುಂಡುಗೆಯ್ದಳು | ಬಳಿಕು | ದ್ದಂಡ ಶರಗಳು ||
ಹಿಂಡಿ ಬಿಡಲು ಬಿದ್ದ ಸುಪ್ರ | ಚಂಡನಾಗಲು   || ೪೬೧ ||

ಭಾಮಿನಿ

ಭೂಲಲಾಮನೆ ಕೇಳು ದ್ರುಪದನ |
ಬಾಲಿಕೆಯ ಶರಹತಿಗೆ ಭೃಕುಟಿಯು |
ಬೀಳೆ ಕಾಣುತ ಭೃಂಗಿ ರೋಷವ ತಾಳುತಾಕ್ಷಣದಿ ||
ಕಾಲ ಭೈರವನಂತೆ ಗರ್ಜಿಸಿ |
ಶೂಲವನು ಧರಿಸುತ್ತ ವರ ಪಾಂ |
ಚಾಲೆಯೊಳು ಕಂಗಳಲಿ ಕಿಡಿಗಳ ಸೂಸುತಿಂತೆಂದ    || ೪೬೨ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಫಡ ಫಡಂಗನೆ ಕೇಳು ಭೃಕುಟಿಯ | ತಡೆದು ಜಯಿಸಿದ ಪಿತ್ತ ಮಸ್ತಕ |
ಕಡರಿರುವುದನು ನಿಲಿಸಿಬಿಡುವೆನು | ತಡೆಯದಿಂದು    || ೪೬೩ ||

ಸಾಕು ಸಾಕೆಲೊ ಭೃಂಗಿ ನೀ ಬರಿ | ದೇಕೊರೆವೆ ಜಯ ದೊರಕಲಾರದು |
ಪೋಕತನ ನಿಲಿಸುವೆನು ನಡೆ ನಡೆ | ಜೋಕೆಯಿಂದ   || ೪೬೪ ||

ಕೆಡದಿರೆಂದಾಡಿದರೆ ನೀನೊಡ | ಬಡದೆ ನುಡಿಯುಲ್ಲಂಘಿಸುವೆ ಶಿರ |
ಕಡಿವೆ ಖಡ್ಗದೊಳೀಕ್ಷಿಸೆನ್ನಯ | ಕಡುಹುಗಳನು         || ೪೬೫ ||

ಮರುಳರಂದದಿ ನುಡಿವೆಯೇತಕೆ | ಹರಿಬಲರ ಗೆಲಿದಾಕೆ ತಾನಾ |
ಗಿರಲು ನಿನ್ನಧಟಿಗೆ ಬೆದರ್ವೆನೆ | ಧುರದೊಳಿನ್ನು        || ೪೬೬ ||

ಬಾಲೆಯರ ಸಾಹಸದಿರವು ಮೊಣ | ಕಾಲ ಕೆಳಗೆನ್ನುವರು ಲೋಕದಿ |
ಜಾಲವಲ್ಲೆನು ತಾಗ ತಿವಿದನು | ಲೀಲೆಯಿಂದ || ೪೬೭ ||

ಪೂತುರೇ ಬಲು ವೀರನೆಂದತಿ | ಖಾತಿಯಲಿ ಪಾಂಚಾಲೆ ಮಾರ‍್ಗಣ |
ವ್ರಾತವೆಸೆಯಲು ಬಿದ್ದ ಧರಣಿಗೆ | ಕಾತರಿಸುತ         || ೪೬೮ ||

ಭಾಮಿನಿ

ಕಡಲುಡಿಗೆಯವಳೊಡೆಯ ನೀ ಕೇ |
ಳೊಡನೆ ಭೃಂಗಿಯು ಸತ್ತ್ವ ಗುಂದುತ |
ಪೊಡವಿಗುರುಳಿದ ಪರಿಯನೀಕ್ಷಿಸುತಾಗ ಸತ್ವರದಿ ||
ಘುಡು ಘುಡಿಸುತಲೆ ಲೋಚನದಿ ಕೆಂ |
ಗಿಡಿಯ ಸೂಸುತ್ತಾ ಕ್ಷಣದಿ ಹೇ |
ರೊಡಲ ಗಣಪತಿ ಬಂದು ತಡೆದನು ದ್ರುಪದನಂದನೆಯ         || ೪೬೯ ||

ರಾಗ ಪಂಚಾಗತಿ ಮಟ್ಟೆತಾಳ

ಧಣುರೆ ಕೃಷ್ಣೆ ನಿಲ್ಲು ಬಂದೆ | ರಣವು ಸರಸವಲ್ಲ ನಿನ್ನ |
ಕ್ಷಣದಿ ಮುರಿದು ಭೂತಗಡಣ | ಕುಣಿಸಿ ಬಿಡುವೆನು ||
ಗಣರನೆಲ್ಲ ಗೆಲಿದೆನೆಂದು | ಕುಣಿಯದಿರು ಮದಾಂಧಳಾಗಿ |
ಕಣದಿ ನಿಲಿಸಿಬಿಡುವೆನೀಗ | ನೆಣದ ಕೊಬ್ಬನು || ೪೭೦ ||

ನುಡಿಯದಿರು ಗಣೇಶ ನಿನ್ನ | ಕಡುಹಿಗಂಜುವಾಕೆಯಲ್ಲ |
ಪೊಡವಿಗುರುಳಿರುವುದು ಪ್ರಮಥ | ಗಡಣ ಸಮರದಿ ||
ಒಡನೆ ಮನದಿ ಗ್ರಹಿಸಿ ಹವದ | ತೊಡಕುಗಳನು ಬಿಟ್ಟು ಪಿಂತೆ |
ನಡೆವುದೊಳ್ಳಿತಲ್ಲದಿರಲು | ಕೆಡುವೆ ಸುಮ್ಮನೆ || ೪೭೧ ||

ತಾವರಾಕ್ಷಿ ಕೇಳು ನಿನ್ನ | ಠೀವಿಗೆನ್ನಲೇಸು ಪತಿಯೊಳ್ |
ನೀ ವಿರೋಧದಿಂದ ಸೆಣಸಿ | ದಾವ ನೀತಿಯು ||
ರಾವಣಾರಿ ಸಕಲ ಜಗವ | ಕಾವ ಧಾತನವನ ಗೆಲ್ದೆ |
ಭೂವಲಯದಿ ನಿನಗೆ ದೈವ | ದೇವರಿಲ್ಲವೆ    || ೪೭೨ ||

ಮುಪ್ಪುರಾರಿಯಣುಗ ಬರಿದೆ | ತಪ್ಪು ಮಾತನಾಡಬೇಡ |
ತುಪ್ಪ ಕಬ್ಬು ಕಡಲೆ ಮೋದ | ಕಪ್ಪ ಚಕ್ಕುಲಿ ||
ಚಪ್ಪರಿಸಲು ನಿನಗೆ ಧುರದೊ | ಳಿಪ್ಪುದೇ ನಿರರ್ಥ ಕಾದಿ |
ಸೊಪ್ಪಳಾಗಲೇತಕವನಿ | ಗಪ್ಪಳಿಸುವೆನು     || ೪೭೩ ||

ನಳಿನನೇತ್ರೆ ಲಾಲಿಸೆನ್ನ | ನಿಳೆಯೊಳೆಸಗುತಿಹ ಸುಕಾರ್ಯ |
ಗಳಿಗೆ ಮೊದಲು ಪೂಜಿಸುವುದ | ತಿಳಿ ಸರಾಗದಿ ||
ಕಲಹವೆನಗೆ ಗಣ್ಯವಲ್ಲ | ಕೊಲುವೆ ನಿನ್ನನೆಂದು ಭರಿತ |
ಮುಳಿಸಿನಿಂದ ಗಣಪನಾರು | ಹಿಳುಕವೆಚ್ಚನು || ೪೭೪ ||

ಭೀಕರಿಸುತ ಬರುವ ಕಣೆಯ | ತಾ ಕಡಿದು ಗಜಾಸ್ಯಗೆಂದ |
ಳೇಕೆ ಕಾಕು ಪಂಥ ನಿನಗೆ | ಸಾಕೆನುತ್ತಲಿ ||
ಆ ಕುರಂಗನೇತ್ರೆ ಶರವ | ನೇಕವೆಸೆಯಲಾಗ ಸಹಿಸ |
ದೇಕದಂತ ಬಿದ್ದನಾ ಸ | ಮಿಕಮಧ್ಯದಿ        || ೪೭೫ ||