ಭಾಮಿನಿ
ವಾರಣಾಪುರಧೀಶ್ವರನೆ ಕೇ |
ಳಾ ರಣದಿ ಹೇರಂಬ ಬೀಳಲು |
ಮಾರ ಮದಗರ್ವಾಪಹಾರನ ಬಲದೊಳೆಲ್ಲವರು ||
ಸಾರಿ ಹಿಂಜರಿದಿರಲು ಕಾಣುತ |
ಲಾರುಭಟೆಯೊಳು ಬಂದು ದ್ರುಪಕು |
ಮಾರಿಗಿದಿರಾಗುತ್ತ ತಾರಕಮಥನ ನಿಂತೆಂದ || ೪೭೬ ||
ರಾಗ ನಾದನಾಮಕ್ರಿಯೆ ಅಷ್ಟತಾಳ
ನಾರಿ ಕುಣಿಯದಿರು ಮದದಲ್ಲಿ | ದೊಡ್ಡ | ಮಾರಿಯಾಗಿರುವೆ ಸಂಗರದಲ್ಲಿ ||
ತೋರಿಸು ಪ್ರಮಥರ ಗೆಲಿದಿರ್ಪ | ಶೌರ್ಯ | ಸಾರ ನಿಲಿಸುವೆ ನಿನ್ನಯ ದರ್ಪ || ೪೭೭ ||
ಸಾಕು ಸಾಕೆಲೊ ಶಿಖಿವಾಹನ | ಬರೆ | ಕಾಕುಮಾತಿನೊಳೇನ್ ಪ್ರಯೋಜನ ||
ನೀ ಕಲಿಯಾದರೆ ಬವರದಿ | ವಿಕ್ರ | ಮಾಕುಲತೆಯ ತೋರು ತವಕದಿ || ೪೭೮ ||
ಸುದತಿ ನಿನ್ನೊಳು ರಣ ಮಾಡಲು | ನಾ | ಬೆದರುವ ಧೀರನೆ ನೋಡಲು ||
ವಧಿಸಿದರೀಗ ಸ್ತ್ರೀಹತ್ಯವು | ಬಂದ | ಪುದುತೋರೆ ನಿನ್ನ ದುಷ್ಕೃತ್ಯವು || ೪೭೯ ||
ಸಂಸಾರದಾಸೆಗಳನು ಬಿಟ್ಟು | ನೀ ನ | ಪುಂಸತ್ವ ಪಡೆದೆ ಕೇಳೆಲೊ ಗುಟ್ಟು ||
ಹಂಸವರೂಥನ ಲಿಪಿಯನು | ಈಗ | ಧ್ವಂಸಮಾಡುವೆ ನಿಮಿಷದಿ ನಾನು || ೪೮೦ ||
ರೋಗಿಗೌಷಧ ತಂದು ಕೊಡಲದು | ರುಚಿ | ಯಾಗದು ನೀತಿಯ ನುಡಿಯಿದು ||
ತಾಗದು ನಿನಗೆಂದ ಷಟ್ಶಿರ | ಬಲು | ಬೇಗದೊಳೆಸೆದನು ಷಟ್ಶರ || ೪೮೧ ||
ಬಿಟ್ಟ ಮಾರ್ಗಣವನ್ನು ತರಿವುತ್ತ | ಸತಿ | ತಟ್ಟನೆ ಪ್ರತ್ಯಸ್ತ್ರವೆಸೆಯುತ್ತ ||
ಧಿಟ್ಟ ವಿಶಾಖನ ಗೆಲಿದಳು | ಮುದ | ಗೊಟ್ಟು ಸತ್ವರದಿ ಮುಂಬರಿದಳು || ೪೮೨ ||
ವಾರ್ಧಕ
ಭೂನಾಥ ಕೇಳಿಂತು ಪಾಂಚಾಲೆ ಸಂಗರದಿ |
ಸೇನಾನಿಯಂ ಗೆಲಿದು ನಂದಿಯಂ ಭಂಗಿಸುತ |
ಲಾ ನಿಕುಂಭನ ಮುರಿದು ಚಂಡಪ್ರಚಂಡರಂ ಜವಗೆಡಿಸಿ ಭೈರವನನು ||
ಬೇನೆಗೊಳಿಸಿದು ವೀರಬಾಹುಕಮತಂಗರ ನಿ |
ಧಾನಮಂ ನಿಲಿಸುತ್ತ ಪಿಂಗಲನ ಜರ್ಜರಿಸಿ |
ಸಾನುರಾಗದಿ ಮೆರೆದು ಮುಂದಯ್ದಿ ನೀಲ ಕಂಧರನಿದಿರು ಗರ್ಜಿಸಿದಳು || ೪೮೩ ||
ಭಾಮಿನಿ
ಧಾರಿಣೀಪಾಲಕನೆ ಲಾಲಿಸು |
ನಾರಿ ದ್ರುಪದಾತ್ಮಜೆಯ ಕಡುಹ ಪು |
ರಾರಿ ಕಾಣುತ ವೀರಭದ್ರನ ಕರೆಯಲಾ ಕ್ಷಣದಿ ||
ಕೋರೆದಾಡೆಯ ಕೆಂಜಡೆಯ ಕೆಂ |
ಪೇರಿದಕ್ಷಿ ಕರಾಳವದನದಿ |
ಭೋರಿಡುತ ನಡೆತಂದು ರೋಷದಿ ನುಡಿದನಯ್ಯಂಗೆ || ೪೮೪ ||
ರಾಗ ಕೇದಾರಗೌಳ ಝಂಪೆತಾಳ
ಏಕೆನ್ನ ನೆನೆದೆ ತಾತ | ಪೇಳ್ ಮನದ | ವ್ಯಾಕುಲವ ಸುಪ್ರಖ್ಯಾತ ||
ಲೋಕ ಮೂರನು ಸುಡುವೆನು | ಸಪ್ತರ | ತ್ನಾಕರದ ನೀರ್ಗುಡಿವೆನು || ೪೮೫ ||
ಬಾ ಮಗನೆ ವೀರಭದ್ರ | ಸಲಿಸು ಮಮ | ಕಾಮಿತವ ಗುಣಸಮುದ್ರ ||
ಕಾಮಿನೀಮಣಿ ದ್ರೌಪದಿ | ಗಣರ ನಿ | ರ್ನಾಮಗೆಯ್ದಳು ಬವರದಿ || ೪೮೬ ||
ತರುಣಿಗಂಜೆನು ನಿಶ್ಚಯ | ಮನದೊಳಗೆ | ಧರಿಸಲೇತಕೆ ಚಿಂತೆಯ ||
ಧುರದೊಳಾರನು ಗೆಲ್ದಳು | ಪೇಳದರ | ಪರಿಯನತಿ ಸಂತಸದೊಳು || ೪೮೭ ||
ಸಾರ ಸಾಂಬಕ ರತಿಪತಿ | ರೇವತಿಯ | ನೀರ ಸಾತ್ಯಕಿ ಗಣಪತಿ ||
ತಾರಕಾಂತಕ ಮುಖ್ಯರ | ಜಯಿಸಿದಳು | ನಾರಿ ಸಂಗರದಿ ಕುವರ || ೪೮೮ ||
ಕೊಡು ನೇಮ ತನಗೆನ್ನಲು | ಅಪ್ಪಣೆಯ | ಮೃಡನೀಯೆ ಭಟನಾಗಲು ||
ಕಡುಗಿ ವೀರಾವೇಶದಿ | ನಡೆತಂದು | ಮಡದಿಗೆಂದನು ರೋಷದಿ || ೪೮೯ ||
ರಾಗ ಸುರುಟಿ ರೂಪಕತಾಳ
ಭಲಭಲರೇ ನಾರಿ | ನಿಲು ದ್ರುಪದಕುಮಾರಿ || ಪ ||
ಕೇಳ್ತರುಣಿಯೆ ನಿನ್ನನು ಕೊಂ | ದಾಳ್ತನ ತೋರಿದರೆ ||
ತಾಳ್ತಾಳಿದು ಸ್ತ್ರೀಹತ್ಯದ | ಗೋಳ್ ತಟ್ಟುವುದರರೇ || ೪೯೦ ||
ನಿಲ್ಮದನಾರಿಕುಮಾರಕ | ನಲ್ಮೆಯೊಳೆನ್ನಿದಿರು ||
ಗಾಲ್ಮೇಲೆಮಾಡುವೆ ರಕ್ತದ | ಬಲ್ಮೆಯನುಸಿರದಿರು || ೪೯೧ ||
ತೋರ್ಬಲುಹೆನ್ನನು ಗೆಲುವವ | ರಾರ್ಭುವನದಿ ಹೇಳು ||
ದೂರ್ಬೇಡೀಕ್ಷಣ ನಿಲಿಸುವೆ | ಕಾರ್ಬಾರನು ತಾಳು || ೪೯೨ ||
ಸಾರ್ಮತಿಹೀನನೆ ಶೌರ್ಯವ | ಪಾರ್ಮಾಡುವೆ ಭರದಿ ||
ಕಾರ್ಮೆಯ್ಯವ ಸೋತಿರುವನು | ಮಾರ್ಮಲೆತೀ ಧುರದಿ || ೪೯೩ ||
ಬಲ್ಗಳಹದಿರೆಲೆ ಕಾಮಿನಿ | ಸಲ್ಗೆಯೊಳೇನೊರೆವೆ ||
ಪಲ್ಗಳ ಕಳಚಿ ಶರೀರದ | ಎಲ್ಗಳ ನುಗ್ಗರಿವೆ || ೪೯೪ ||
ಆರ್ಗುಂಟೀ ಸಾಹಸಗಳು | ಭೋರ್ಗರೆಯದಿರೆಂದು ||
ಕಾರ್ಗಾಲವಿದೆಂಬಂದದಿ | ಕೂರ್ಗಣೆ ಬಿಡಲಂದು || ೪೯೫ ||
ದುರ್ಧರದಲಗೆಲ್ಲವ ಪಥ | ವರ್ಧದಿ ಕಡಿದಾಗ ||
ದರ್ಧರನೆಸೆದನು ಶರಗಳ | ವರ್ಧಿಸುತತಿ ಬೇಗ || ೪೯೬ ||
ಐಮೊಗದವನಿಷು ತರಿಯುತ | ನೈಮೆಯ ಕಣೆಗಳನು ||
ಕೈಮಾಡಲಿಕದ ಸಹಿಸದೆ | ಮೈಮರೆದೊರಗಿದನು || ೪೯೭ ||
ಭಾಮಿನಿ
ಭೂಪ ಕೇಳಿಂತಾಗ ಕೃಷ್ಣೆಯ |
ರೋಷದುರುಬೆಗೆ ವೀರಭದ್ರನು |
ತಾ ಪಿರಿದು ಮೌನದಲಿ ಮಲಗಿರಲಾಗ ಶಂಕರನು ||
ಈ ಪರಿಯ ಕಂಡಾ ತ್ರಿಶೂಲವ |
ಕೋಪದಲಿ ಧರಿಸುತ್ತ ನಡೆತರ |
ಲಾಪಜಾಂಬಕಿ ನುಡಿದಳಾ ಕೈಲಾಸವಾಸಿಯೊಳು || ೪೯೮ ||
ರಾಗ ಭೈರವಿ ಅಷ್ಟತಾಳ
ಶರ್ವನೆಂಬವನೆ ನೀನು | ನಿನ್ನಣುಗರ | ಗರ್ವವ ಮುರಿದಿಹೆನು ||
ನಿರ್ವಹಿಸಲು ತೀರ | ದಿರ್ವ ತ್ರಿಶೂಲಕೆ | ಸರ್ವಥಾ ಬೆದರೆ ನಾನು || ೪೯೯ ||
ವರಗಂಜದಿರುವ ನಾರಿ | ಮತ್ತಾರ್ಗೆ ಹಿಂ | ಜರಿವೆ ನೀ ದೊಡ್ಡ ಮಾರಿ ||
ಒರೆಯಲಿನ್ನೇನು ತ್ರೈ | ಧರಣಿಯೊಳಿರುವಂಥ | ತರುಣಿಯರೊಳು ವಿಕಾರಿ || ೫೦೦ ||
ಇರುವುದ್ಯಾರೊಳು ವಿಕಾರ | ವೆಂಬುದನು ನಿ | ರ್ಧರಿಸೀಗ ಗೌರೀ ನೀರ |
ವರರುಂಡಮಾಲವ | ಧರಿಸಿದು ಭಸ್ಮ ಮೆ | ತ್ತಿರುವೆ ಶರೀರ ಪೂರ || ೫೦೧ ||
ಮಹಿಯ ಭಕ್ತರ ಪೊರೆದು | ಸರ್ವಾಂಗದಿ | ವಹಿಸಿಕೊಂಡಿಹೆ ಬಿರುದು ||
ಸಹಸದೋರಿದರೀಗ | ದಹಿಸಿಬಿಡುವೆ ಹುತ | ವಹಲೋಚನವ ತೆರೆದು || ೫೦೨ ||
ಕಡುಪತಿವ್ರತೆಯರನು | ನಿಟಿಲಾಕ್ಷಿಯು | ಸುಡುವುದೆ ಗ್ರಹಿಸದನು ||
ಮೃಡ ನಿನ್ನ ವಿಕ್ರಮ | ನಡೆಯದೆನ್ನೊಡನಲ್ಪ | ಕಡುಹನು ನಿಲಿಸುವೆನು || ೫೦೩ ||
ಕೇಳ್ದೆನೊಂದಿತಿಹಾಸವು | ಸುವ್ರತೆಯರಿ | ನ್ನಾಳ್ದನೊಳತಿ ವೈರವು ||
ತಾಳ್ದವನಿಯೊಳೆಂತು | ಬಾಳ್ದಪರೆನಗೆ ನೀ | ಪೇಳ್ದ ಮಾತಾಶ್ಚರ್ಯವು || ೫೦೪ ||
ಗಿರಿಜೆ ಮಿನಾಕ್ಷಿಯಾಗಿ | ಜಗದೊಳವ | ತರಿಸಿ ನಿನ್ನೆಡೆಗೆ ಸಾಗಿ ||
ಸರಿಸರಿಯೆನಿಸಿ ಸಂ | ಗರದಿ ಕಾದಾಡಿದ | ಪರಿ ತಿಳಿ ವಿವರವಾಗಿ || ೫೦೫ ||
ಬಗುಳದಿರೆಂದೆನುತ | ತ್ರಿಶೂಲವ | ನೆಗೆಯಲು ವಿಷ್ಣುಪ್ರೀತ ||
ಬಗೆಯನು ಕಂಡೊಗು | ಮಿಗೆಯೊಳು ದ್ರುಪದನ | ಮಗಳೊರೆದಳು ನಗುತ || ೫೦೬ ||
ವಾರ್ಧಕ
ಹರ ನಿನ್ನವಸ್ಥೆಗಳನೇನ ಪೇಳಲಿ ಸತ್ತ |
ವರ ರುಂಡಮಾಲೆ ಕಂಧರದಿ ಸರ್ವಾಂಗ ಮೆ |
ತ್ತಿರುವೆ ಭಸಿತ ಶ್ಮಶಾನವೆ ವಸ್ತಿ ದರ್ವೀಕರಾಭರಣ ತೊಗಲುಡುಗೆಯು ||
ಶಿರದಿ ಭಾಗೀರಥಿ ಕಪಾಲದಿ ಹಿಮಾಂಶುವಿಳಿ |
ದಿರುವೀ ಜಟಾಜೂಟದಂದವಾರ್ಗುಂಟು ನೀ |
ಧರೆಗಧಿಕನಹುದಾದರಂಜೆನೆಂದಾ ತ್ರಿಶೂಲವನೆಳೆದು ಬೊಬ್ಬಿರಿದಳು || ೫೦೭ ||
ಭಾಮಿನಿ
ಭಾಪುರೇ ಪಾಂಚಾಲೆ ಬವರದಿ |
ನೀ ಪರಾಕ್ರಮಿಯಹುದು ನಿನ್ನಾ |
ಟೋಪ ನಿಲಿಸುವೆನೀ ಕ್ಷಣದೊಳೆಂದಾ ಮಹಾರುದ್ರ ||
ಕೋಪದಿಂ ಪಾರ್ವತಿಯ ಕರೆದು ನಿ |
ರೂಪವಿತ್ತಟ್ಟಿದನು ಸಂಗರ |
ಕಾ ಪರಂತಪೆ ಬಂದು ನುಡಿದಳು ದ್ರುಪದನಂದನೆಗೆ || ೫೦೮ ||
ರಾಗ ನಾದನಾಮಕ್ರಿಯೆ ಅಷ್ಟತಾಳ
ನಿಲ್ಲು ದ್ರೌಪದಿ ಪೋಪುದೆಲ್ಲಿಗೆ | ರಣ | ದಲ್ಲಿ ಬೆದರೆ ನಿನ್ನ ಜಲ್ಲಿಗೆ |
ನಲ್ಲನೊಳ್ ಸೆಣಸಿದಂತಲ್ಲಿದು | ನಿನ್ನ | ಬಲ್ಲವಿಕೆಯು ತನ್ನೊಳ್ ಸಲ್ಲದು || ೫೦೯ ||
ಕಂದರ್ಪಾರಿಯ ಸತಿ ಬಂದೆಯ | ಹವ | ಕಿಂದೆನಗಿದಿರಾಗಿ ನಿಂದೆಯ ||
ಚಂದವಾಗಿಹುದು ನಿನ್ನಂದವು | ಭರ | ದಿಂದ ತೋರಿಸುವೆ ನಿರ್ಬಂಧವು || ೫೧೦ ||
ತರುಣಿ ಲಾಲಿಪುದಿಂದು ಹರಿಯೊಳು | ಕರಿ | ಧುರವೆಸಗುತ್ತಲಿ ಧರೆಯೊಳು ||
ಇರುವುದೆ ಬಿಟ್ಟು ಸಂಗರವನು | ನೀ | ತೆರಳು ನಾ ಕಾಳಿಯಾಗಿರುವೆನು || ೫೧೧ ||
ಉಮೆಯಾದಡೆನಗೇನು ಸಮರದಿ | ಪಿಂತೆ | ಗಮಿಸುವಳಲ್ಲೊಂದು ನಿಮಿಷದಿ ||
ಶಮೆಗೊಳಿಸುವೆನೆಂದು ಸಮನಿಸಿ | ಬಿಡ | ಲಮಿತ ಶರವ ಬಿಲ್ಲೊಳಮರಿಸಿ || ೫೧೨ ||
ಭಾಮಿನಿ
ಅವನಿಪಾಲಕ ಕೇಳು ದ್ರುಪದನ |
ಕುವರಿಯೆಚ್ಚಸ್ತ್ರದಿ ಭವಾನಿಯು |
ಭುವನಕೊರಗುತಲೆಚ್ಚರಿಕೆಗುಂದಿದಳು ನಿಮಿಷಾರ್ಧ ||
ತವಕದಿಂದೇಳುತ ಕಡೆಯ ಭೈ |
ರವಿಯೆನಲು ಪಲ್ಗಡಿದು ರೋಷದೊ |
ಳವಘಡಿಸಿ ಮತ್ತಾ ಮಖೋದ್ಭವೆಗೊರೆದಳಿಂತೆನುತ || ೫೧೩ ||
ರಾಗ ಶಂಕರಾಭರಣ ಮಟ್ಟೆತಾಳ
ಕೇಳು ಕೃಷ್ಣೆ ಧುರದೊಳೊಮ್ಮೆ ಸೋಲಿಸಿದೆ ಖರೆ |
ತಾಳದಿರು ಮಹೋಗ್ರ ಗರ್ವದಾಳಿಕೆಯ ನೆರೆ ||
ಜಾಲವಲ್ಲ ಧನುವ ಪಿಡಿದು ಶರಗಳ ತೊಡು |
ಕಾಲ ಬಂದಿಹುದು ಸಮಿಪ ಕಾಳಗವ ಬಿಡು || ೫೧೪ ||
ಗಿರಿಕುಮಾರಿ ಸೋಲುತೊಮ್ಮೆ ಧರಣಿಗೊರಗಿದು |
ಭರದೊಳೆದ್ದು ಬಂದು ತನ್ನ ಮರಳಿ ತಡೆವುದು ||
ಸರಿಯಿದಲ್ಲ ವಿಕ್ರಮದೊಳು ಬರಿದೆ ಕೆಡುವೆಯ |
ಮರುಳರಂತೆ ನಿನ್ನ ಶೌರ್ಯದಿರವ ನುಡಿವೆಯ || ೫೧೫ ||
ಮೊದಲಿನಂದವಲ್ಲವೆನ್ನ ಕದನವೀಕ್ಷಿಸು |
ಹೃದಯದೊಳಗೆ ಸುರವರೇಂದ್ರಪದವಪೇಕ್ಷಿಸು ||
ವಧಿಸಿಬಿಡುವೆನೆಂದೆನುತ್ತ ಗದೆಯೊಳಿಟ್ಟಳು |
ಸುದತಿ ನೊಂದು ಬಳಿಕಲಾ ವಸುಧೆಗೆ ಬಿದ್ದಳು || ೫೧೬ ||
ಭಾಮಿನಿ
ಇಂದುವಂಶಪಯೋಧಿಶಶಿ ಕೇ |
ಳಂದು ಗೌರಿಯ ಗದೆಯ ಘಾತಕೆ |
ನೊಂದು ದ್ರುಪದಾತ್ಮಜೆ ವಸುಂಧರೆಗೊರಗಿ ಬಳಿಕೆದ್ದು ||
ಬಂದು ವೀರಾವೇಶದಲಿ ಖತಿ |
ಯಿಂದ ಗರ್ಜಿಸಿ ಭೀಕರಸ್ವರ |
ದಿಂದ ಹೈಮಾವತಿಗೆ ನುಡಿದಳು ಸಮರಕನುವಾಗಿ || ೫೧೭ ||
ರಾಗ ಭೈರವಿ ಏಕತಾಳ
ಓಹೋ ಮೆಚ್ಚಿದೆನಬಲೆ | ನೀ | ಸಾಹಸದೊಳಗತಿ ಪ್ರಬಲೆ ||
ಮೋಹದಿ ನಾ ಬಿಡಲೊಮ್ಮೆ | ಉ | ತ್ಸಾಹದಿ ತೋರುವೆ ಹೆಮ್ಮೆ || ೫೧೮ ||
ತೊಲ ತೊಲಗನಲನ ಜಾತೆ | ಪತಿ | ಯಲಿ ಕಾದಿದ ದುರ್ನೀತೆ ||
ಹುಲುವೀರಳು ನಿನ್ನುವನು | ಕ್ಷಣ | ದಲಿ ಸಂಹರಿಸದೆ ಬಿಡೆನು || ೫೧೯ ||
ಸರಿಸರಿ ಕಾಂತನೊಳಾನು | ಸಂ | ಗರಗೆಯ್ದುದು ಹೆಚ್ಚೇನು ||
ಪುರಹರನೊಳು ನೀನಂದು | ಕಾ | ದಿರುವುದನರುಹೆನಗಿಂದು || ೫೨೦ ||
ಜಡಜದಳಾಂಬಕಿ ಕೇಳು | ಬಲು | ಬೆಡಗನುಸಿರದಿರು ತಾಳು ||
ಬಿಡುವೆನು ಭುಜಗಾಸ್ತ್ರವನು | ನೀ | ತಡೆಕೊಳ್ಳೆನುತೆಸಲದನು || ೫೨೧ ||
ವಾರ್ಧಕ
ಗಿರಿಜೆ ಫಣಿಬಾಣವನ್ನೆಚ್ಚಡೆ ಮಖೋದ್ಭವೆಯು |
ಗರುಡಾಸ್ತ್ರದಿಂ ತರಿಯಲದ್ರಿಬಾಣವನೆಸೆಯೆ |
ವರವಜ್ರವಿಶಿಖದಿಂ ಖಂಡಿಸಿದಳಿನಕಳಂಬದೊಳಂಧಕಾರಶರಮಂ ||
ಪರಿಹರಿಸೆ ಪಾರ್ವತಿ ಬಲಾಹಕಾಸ್ತ್ರವನೆಸಲ್ |
ಮರುತಾಸ್ತ್ರದಿಂದದಂ ತೊಲಗಿಸಲ್ ಶಿಖಿಶರವ |
ನುರುಬಿದಡೆ ಜಲರೋಪದಿಂ ತರಿಯಲದ ಕಂಡಪರ್ಣೆಗೊರೆದಳು ದ್ರೌಪದಿ || ೫೨೨ ||
ರಾಗ ಭೈರವಿ ಅಷ್ಟತಾಳ
ಗಿರಿಜಾತೆ ಲಾಲಿಸೀಗ | ಹಿಂತಿರುಗಿದ | ಧುರದಿ ಮಹೇಶ ಬೇಗ ||
ಸರಿಯಲ್ಲ ಜಯವಿಂದು | ದೊರಕದು ನಿನ್ನಯ | ಶಿರದೊಳೆಂತಿಹುದೊ ಯೋಗ || ೫೨೩ ||
ಬಾಲಿಕಾಮಣಿಯೆ ಕೇಳು | ನಿನ್ನೊಳು ನಾನು | ಸೋಲುವುದುಂಟೆ ಹೇಳು ||
ಕಾಳಗದೊಳಗೇಕ | ಕೋಲನೆಸೆದು ಯಮ | ನಾಲಯ ತೋರ್ಪೆ ತಾಳು || ೫೨೪ ||
ರುದ್ರನರ್ಧಾಂಗಿ ನಿನ್ನ | ವಿಭ್ರಮವನ್ನು | ಛಿದ್ರಿಸದಿರೆನು ಮುನ್ನ ||
ಭದ್ರಾದಿ ವೀರರ | ನಿದ್ರಿಸಿದೆನು ನೀನು | ಪದ್ರಿಸಬೇಡ ತನ್ನ || ೫೨೫ ||
ಧೀರೆ ನೀನಹುದೆನ್ನುತ | ಶೈಲೇಂದ್ರಕು | ಮಾರಿಯು ಗರ್ಜಿಸುತ ||
ಭೋರನೆಚ್ಚಳು ತ್ರಿಪು | ರಾರಿಯ ಧ್ಯಾನಿಸಿ | ಕೂರಲಗನು ನಗುತ || ೫೨೬ ||
ವಾರ್ಧಕ
ವಸುಧೆಪಾಲಕ ಕೇಳು ಪಾರ್ವತಿಯ ಶರತರಿವು |
ತಸಿಗಳಿಂದೊರ್ಮೆ ಕುಂತಗಳಿಂದಲೊರ್ಮೆ ಪ |
ಟ್ಟಸಗಳಿಂದೊರ್ಮೆ ಗದೆಗಳೊಳೊರ್ಮೆ ಘನತರದ ಸುರಗಿಯಿಂದೊರ್ಮೆಯೊರ್ಮೆ ||
ಮುಸಲಂಗಳಿಂದೊರ್ಮೆ ಮುದ್ಗರದೊಳೊರ್ಮೆ ತಾ |
ವಸಮಸಂಗರದೊಳಿಂತುಭಯನಾರಿಯರಧಿಕ |
ಮಸಕದಿಂದಾಗ ಸರಿಮಿಗಿಲೆನಿಸಿ ಕಾದಿದರ್ ಪೇಳಲೇನದ್ಭುತವನು || ೫೨೭ ||
ಭಾಮಿನಿ
ಕುರುಕುಲಾಗ್ರಣಿ ಕೇಳು ಸಮರದಿ |
ಮೆರೆದುಕೊಂಡಿರಲಿಂತು ದ್ರೌಪದಿ |
ಭರದಿಯಾಲೋಚಿಸಿದಳಿವಳೊಳು ಸೌಮ್ಯರೂಪಿನಲಿ ||
ವರುಷ ಸಾಸಿರ ಕಾದಿದರೆ ಗೆಲ |
ಲರಿದೆನುತ ಚಂಡಿಸ್ವರೂಪವ |
ಧರಿಸಿ ಭೋರ್ಗುಡಿಸುತ್ತ ಬಂದಿದಿರಾದಳಾ ಕ್ಷಣದಿ || ೫೨೮ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಚಂಡಿರೂಪದಿ ಬರಲು ದ್ರೌಪದಿ | ಕಂಡದನು ಶರ್ವಾಣಿ ಖತಿಯಲಿ |
ಡೆಂಡಣಿಸುತುಸಿರಿದಳು ತಾನು | ದ್ದಂಡತನದಿ || ೫೨೯ ||
ಧಿರುರೆ ಶಾಭಾಸುರೆ ಮಖೋದ್ಭವೆ | ತರಹರಿಸದಿರು ಘೋರರೂಪವ |
ಧರಿಸಿ ಬಂದಿದಿರಾದೆ ಮನಕಾ | ಶ್ಚರಿಯವಾಯ್ತು || ೫೩೦ ||
ಪಿಂದೆ ತನ್ನನು ಭಜಿಸಿ ಮಮ ರೂ | ಪಂದವಾಗುವ ವರವಪೇಕ್ಷಿಸ |
ಲಂದು ದಯಪಾಲಿಸಿದೆ ನಿನಗಾ | ನಂದದಿಂದ || ೫೩೧ ||
ದುರುಳ ಭಸ್ಮಾಸುರಗೆ ಪತಿಗಳು | ವರವ ಕೊಡಲು ಪರೀಕ್ಷೆ ಗೋಸುಗ |
ಪುರಹರನ ಬೆದರಿಸುತಲಟ್ಟಿದ | ತೆರನ ಗೆಯ್ದೆ || ೫೩೨ ||
ತಾಳೆನುತ್ತ ಭವಾನಿ ಬಳಿಕ ಕ | ರಾಳಮುಖಿಯಾಗುತ್ತಲೆ ಮಹಾ |
ಕಾಳಿಯಾಕೃತಿ ಧರಿಸಿನಿಂದಳು | ಪೇಳಲೇನು || ೫೩೩ ||
ರಾಗ ಮಾರವಿ ಏಕತಾಳ
ಪೊಡವಿಪ ಕೇಳಾ | ಮೃಡನರಸಿಯು ಕೆಂ |
ಜಡೆಯ ತ್ರಿಶೂಲವ | ಪಿಡಿದು ವೃಷೇಂದ್ರನ |
ನಡರಿ ಚಂಡಿಯನು | ತಡೆದು ಸೆಣಸಿದಳು |
ಘುಡು ಘುಡಿಸುತ ಭರ | ಸಿಡಿಲಾರ್ಭಟೆಯೊಳು || ಏನನೆಂಬೆ || ೫೩೪ ||
ಹಾರುತ ಕುಳಿತೆ | ದ್ದೇರುತ ನಭವನು |
ಸಾರುತ ಕೆಂಜಲ | ಕಾರುತ ಹತ್ತಿರ |
ಸೇರುತಲತಿ ಖತಿ | ಯೇರುತ ಪಿಂದಕೆ |
ಜಾರುತ ವಿಕ್ರಮ | ದೋರುತ ಸಮರದಿ || ಮೆರೆದರಂದು || ೫೩೫ ||
ತಗ್ಗಿದ ವಾಸುಕಿ | ಕುಗ್ಗಿದ ಕಮಠನು |
ಬಗ್ಗಿದವಿಭಗಳು | ನೆಗ್ಗಿದ ಕಮಲಜ |
ಮುಗ್ಗಿದವದ್ರಿಯು | ಜಗ್ಗಿದ ಶಂಕರ |
ಹಿಗ್ಗಿದ ಕೇಶವ | ಲೆಗ್ಗಿದ ಸುರಪನು || ಕೇಳೈ ಭೂಪ || ೫೩೬ ||
ತರಣಿಕಲಾನಿಧಿ | ಯರು ತರಹರಿಸಿದ |
ರುರೆ ಕರ್ಪರ ಘಟ | ಬಿರಿದುದು ಸಪ್ತಮ |
ಶರಧಿಗಳುಕ್ಕಿದ | ವರರೆ ಚರಾಚರ |
ನೆರೆ ಬೆದರಲು ಮೂ | ಧರೆ ನಡನಡುಗಿತು || ಪೇಳಲೇನು || ೫೩೭ ||
ಜನಪದದೊಳು ಪೊಸ | ತೆನುವಂದದಿ ಗಿರಿ |
ತನುಭವೆ ಕೃಷ್ಣೆಯ | ರನುವರ ಕೊಡುತಲಿ |
ಘನ ಶೌರ್ಯದೊಳಿರೆ | ಮುನಿ ನಾರದ ಬಂ |
ದನುಪಮೆಯರೊಳೆಂ | ದನು ತಡಿರೆನುತಲಿ || ಭೀತಿಯಿಂದ || ೫೩೮ ||
ರಾಗ ಧನ್ಯಾಸಿ ಏಕತಾಳ
ಕೇಳಿರೆನ್ನ ನುಡಿ | ಕಾಳಿ ಚಂಡಿಯರು | ತಾಳಿ ತಾಳಿ ಸುಡಿ | ಬಾಳುವೆ ||
ಕೋಳುಹೋಯ್ತು ಲೋ | ಕಾಳಿಯೆಲ್ಲ ನಿ | ಮ್ಮಾಳುತನವ ಬಿಡಿ | ಪೇಳುವೆ || ೫೩೯ ||
ಲೊಟ್ಟೆಯಲ್ಲ ಕಿವಿ | ಗೊಟ್ಟು ಕೇಳಿ ನಿ | ಮ್ಮಟ್ಟಹಾಸ ಧರೆ | ಸುಟ್ಟುದು ||
ಧಿಟ್ಟತನವನಿದ | ಬಿಟ್ಟುಬಿಡಿರಿ ಭಯ | ಪಟ್ಟು ಲೋಕ ಕಂ | ಗೆಟ್ಟುದು || ೫೪೦ ||
ಒಂದೆ ಗುಣವು ನಿಮ | ಗೊಂದೆ ಶಕ್ತಿ ಬಳಿ | ಕೊಂದೆ ರೂಪು ಸಂ | ಬಂಧವು ||
ಹೊಂದಿ ರೋಷವನು | ಮಂದಬುದ್ಧಿಯೊಳ | ಗಿಂದು ಕಾದಲೇನ್ | ಚಂದವು || ೫೪೧ ||
ವಾರ್ಧಕ
ಭಾಪುರೇ ಚೋದ್ಯಮಿದು ಚಂಡೀ ಮಹಾಕಾಳಿ |
ರೂಪದೊಳ್ ಶೌರ್ಯದಿ ಸಹಸ್ರಾಬ್ದ ಕಾದಲು ಜ |
ಯಾಪಜಯ ನಿಮಗೆ ಹೊದ್ದುವುದುಂಟೆ ಸಾಕೀ ಸಮಿಕ ಬಿಡಿ ಕ್ರೋಧವೆಂದು ||
ಆ ಪರಂತಪೆಯರನು ಸಂತವಿಸಿ ನಾರದ ರ |
ಮಾಪತಿಯುಮಾಪತಿಗಳಂಘ್ರಿಗೆರಗುತ ವಾತ |
ಗೋಪಸುತರಂ ಭರದಿ ಸಂಧಾನಗೊಳಿಸಿ ಬಳಿಕಿಂತೆಂದ ಸರ್ವರೊಡನೆ || ೫೪೨ ||
ರಾಗ ಆನಂದಾಹೇರಿ ಝಂಪೆತಾಳ
ಕೇಳಿರೆಲ್ಲವರಿಂದು | ತಾಳದಿರಿ ಸಿಟ್ಟು ||
ಕಾಳಗವ ಬಿಡಿ ಸಾಕು | ಪೇಳುವೆನು ಗುಟ್ಟು || ಕೇಳಿ || ಪ ||
ತಾಲಾಂಕ ಶ್ರೀಗೌರಿ | ಲೋಲ ಶರ್ವಾಣಿವನ | ಮಾಲಶುಗಜಾತ ಪಾಂ | ಚಾಲೆ ದೇವೇಂದ್ರ ||
ಬಾಲನಾಗಿರುವ ಪಾರ್ಥ | ಮುಖ್ಯರಿದ | ನಾಲಿಸುವುದೀಗ ಸ್ವಾರ್ಥ | ಬಿಡಿರಿ ಹವ |
ದಾಲೋಚನೆಗಳು ವ್ಯರ್ಥ | ಮಮ ವಚನ | ಜಾಲವಲ್ಲಿದು ಯಥಾರ್ಥ ||
ಸಂಗರದಿ | ಮೂಲೋಕ ಬೆದರಿಹುದು | ಮೇಲಿರುವ ಸುರರು ಕಂ |
ಗಾಲಾಗಿಹರು ನಿಮ್ಮ | ಲೀಲೆಗಳ ಬಿಡಿ ಸಾಕು || ಕೇಳಿ || ೫೪೩ ||
ಭಾರತಾರಣ ಗೆಲ್ದ | ರಾರೆನುವ ಸಂಶಯ ನಿ | ವಾರಿಸುವೆನಿದರನು ವಿ | ಚಾರಿಸಿರಿ ಮನದಿ ||
ಮಾರಪಿತನ ಸುದರ್ಶನ | ಸಕಲ ರಿಪು | ವಾರ ಕೊಂದು ಕೃತಾಂತನ | ಪುರಕಟ್ಟ |
ಲಾ ರಸಾಧಿಪ ದ್ರುಪದನ | ತನುಜೆಯು | ಬ್ಬೇರಿ ಕೋಪದಿ ಚಿದ್ಘನ ||
ಚಂಡಿಯಾ | ಕಾರ ಧರಿಸಿದು ರಕ್ತ | ಧಾರೆಯಂ ಕುಡಿಕುಡಿದು |
ಭೂರಿ ವಿಕ್ರಮದಿಂದ | ತಾ ರಂಜಿಸಿದಳಂದು || ಕೇಳಿ || ೫೪೪ ||
ಹರಿಯ ಚಕ್ರದ ಬಲದಿ | ತರುಣಿಮಣಿ ದ್ರೌಪದಿಯು |
ಧುರ ಗೆಲ್ದಳೆಂದು ನಿ | ರ್ಧರಿಸಿರೆಲ್ಲವರು ||
ನರ ಪವನಜರು ವಿರುದ್ಧ | ಹಿಡಿದೆಸಗ | ದಿರಿ ಬರಿದೆ ಘೋರಯುದ್ಧ |
ಜಗದಿ ನಿ | ಮ್ಮರಸಿ ಬಲು ಶೂರೆ ಸಿದ್ಧ | ಗ್ರಹಿಸಲಿದು |
ಮುರಹರನ ಮಹಿಮೆ ಬದ್ಧ | ನೀವಿನ್ನು | ಹರುಷವನು ತಳೆದು ಮ |
ತ್ಸರವೆಲ್ಲ ಬಿಟ್ಟು ನಿ | ಮ್ಮರಮನೆಗೆ ಪೋಗಿ ಸುಖ | ವಿರಿ ವಿವೇಕದೊಳೆಲ್ಲ || ಕೇಳಿ || ೫೪೫ ||
ರಾಗ ಮಧ್ಯಮಾವತಿ ತ್ರಿವುಡೆತಾಳ
ಧರಣಿಪತಿ ಚಿತ್ತವಿಸು ನಾರದ | ನೊರೆದುದನು ಕೇಳುತ್ತ ಭಾರತ |
ಧುರವ ದ್ರೌಪದಿ ಗೆಲಿದಳೆಂಬುದು | ಸರಿಯಿದೆಂದರು ಸರ್ವರು | ಹರುಷದಿಂದ || ೫೪೬ ||
ಮತ್ತೆ ನಿರ್ಜರಯೋಗಿ ಸುಮನಸ | ಪತ್ತಣಕೆ ಗಮಿಸಿದನು ಶಿವ ಪುರು |
ಷೋತ್ತಮನೊಳಪ್ಪಣೆಗೊಳುತ ಗಣ | ಮೊತ್ತ ಸಹಿತ ತೆರಳ್ದನು | ರಜತಗಿರಿಗೆ || ೫೪೭ ||
ಪವನಜಾತ ಕಿರೀಟಿಯರ ಶ್ರೀ | ಧವನು ಸಂತವಿಸುತ್ತ ಯಜ್ಞೋ |
ದ್ಭವೆ ಸುಭದ್ರೆಯರೊಡನೆ ತಾನು | ತ್ಸವದಿ ವಾರಣನಗರಿಗೆ | ಕಳುಹಿಸಿದನು || ೫೪೮ ||
ಬಂದು ಭೀಮ ಧನಂಜಯರು ನಡೆ | ದಂದವಂತಕನಣುಗಗುಸಿರಿ ಮು |
ಕುಂದನಡಿಗಳ ನೆನೆದು ನಿತ್ಯಾ | ನಂದದಿಂದಿರುತಿರ್ದರು | ಸ್ಥಿರಮನದೊಳು || ೫೪೯ ||
ನರಕಸೂದನನಿತ್ತ ರೇವತಿ | ವರಸಹಿತ ಯದುಬಲದೊಡನೆ ನಡೆ |
ತರಲು ದ್ವಾರಕೆಗಂಗನೆಯರಾ | ದರದಿ ನೀರಾಜನವನು | ತೋರಿಸಿದರು || ೫೫೦ ||
ಭಾಮಿನಿ
ಸಾರಮಣಿ ಜನಮೇಜಯನೆ ಕೇ |
ಳಾ ರಮಾಧವನಂದು ಪಾಂಡು ಕು |
ಮಾರಕರ ಗರ್ವವನು ದ್ರುಪದಕುಮಾರಿಯಿಂ ಮುರಿದು ||
ಧಾರಿಣಿಗೆ ಪೊಸತಾದ ಲೀಲೆಯ |
ತೋರಿ ಹರುಷದೊಳಿರ್ದ ಸಜ್ಜನ |
ವಾರವನು ಸಲಹುತ್ತ ಸೌಮಾಂಗಲ್ಯಯುತನಾಗಿ || ೫೫೧ ||
ವಾರ್ಧಕ
ಶ್ರೀವಧೂವಲ್ಲಭನ ಲೀಲಾಚರಿತ್ರಮಿದ |
ಭೂವರ ಪರೀಕ್ಷಿತನ ಸುತಗೆ ವೈಶಂಪಾಯ |
ತಾ ವಿವರಿಸಿದ ದ್ರೌಪದೀಪ್ರತಾಪವ ಸಕಲರರಿವಂತೆ ಕನ್ನಡದೊಳು ||
ಭೂವಲಯಕುತ್ತಮ ಕಡಂದಲೆಯ ಗ್ರಾಮದೊಳ್ |
ಠೀವಿಯಿಂದಿರುವ ಭಕ್ತರಗುತ್ತನಾಳ್ವ ಭೂ |
ದೇವಕುಲರತುನ ಸುಬ್ರಾಯನ ಕುಮಾರಕಂ ರಾಮಾಖ್ಯ ವಿವರಿಸಿದನು || ೫೫೨ ||
ರಾಗ ಆಹೇರಿ ಏಕತಾಳ
ಮಂಗಲಂ | ಜಯ | ಮಂಗಲಂ || ಪ ||
ಶ್ರೀರಮೆಯರಸಗೆ ಯದುವರಗೆ | ವಾರಿಧಿಶಯನಗೆ ಗಿರಿಧರಗೆ ||
ನಾರಾಯಣಗೆ ಕೃಪಾಕರಗೆ | ತಾರಾಪತಿನಗರೇಶ್ವರಗೆ || ಮಂಗಲಂ || ೫೫೩ ||
ನಿರ್ಮಲಕಾಯಗೆ ಶರ್ವನಿಗೆ | ಕರ್ಮವರ್ಜಿತಗೆ ರುದ್ರನಿಗೆ ||
ಚರ್ಮಾಂಬರಗೆ ಮಹೇಶನಿಗೆ | ಧರ್ಮಸ್ಥಳನೆಲೆವಾಸನಿಗೆ || ಮಂಗಲಂ || ೫೫೪ ||
ಶರಜನ್ಮಗೆ ಷಾಣ್ಮಾತುರಗೆ | ನಿರುಪಮಚರಿತಗೆ ಷಟ್ಶಿರಗೆ ||
ದುರಿತವಿದೂರಗೆ ಶುಭಕರಗೆ | ಮೆರೆವ ಕಡಂದಲೆಪುರವರಗೆ || ಮಂಗಲಂ || ೫೫೫ ||
ಸ್ತಂಭೇರಮನಿಭವಕ್ತ್ರನಿಗೆ | ನಂಬಿದ ಭಕ್ತರ ಪೊರೆವವಗೆ ||
ಲಂಬೋದರನಿಗೆ ಗಣಪನಿಗೆ | ಶಂಬರಪಟ್ಟಣಧಾಮನಿಗೆ || ಮಂಗಲಂ || ೫೫೬ ||
ಗಿರಿಜಾತೆ ಸರ್ವೇಶ್ವರಿಗೆ | ಕರುಣಾಕರೆಗೆ ವಸುಂಧರೆಗೆ ||
ತರಣಿವಿರಾಜೆ ಪರಾತ್ಪರಗೆ | ವರಪುಳಿನಾಪುರವಾಸಿನಿಗೆ || ಮಂಗಲಂ || ೫೫೭ ||
|| ಯಕ್ಷಗಾನ ದ್ರೌಪದೀಪ್ರತಾಪ ಮುಗಿದುದು ||
Leave A Comment