ಕಂದ

ಶ್ರೀಗೋಪಾಲಂ ಸುರವರ |
ವಾಗೀಶಾದ್ಯಮಿತಮುನಿನತಪಾದಕಮಲಂ |
ನಾಗಾರಿಧ್ವಜನೊಲಿದುಂ |
ಬೇಗದೊಳೆನಗೀಗೆ ಮುಕ್ತಿಸಾಮ್ರಾಜ್ಯವನುಂ ||

ರಾಗ ಸೌರಾಷ್ಟ್ರ ಆದಿತಾಳ

ಜಯ ಜಯ ಗಣನಾಥ | ದುರಿತ | ಮಯವರ್ಜಿತ ಖ್ಯಾತ   || ಪಲ್ಲವಿ ||

ಉರಗಬಂಧನತೋಷ | ಕರಧೃತ | ನಿರಾತಾಂಕುಶಪಾಶ ||
ಪರಮಪಾವನವೇಷ | ಪಾಹಿ ಶ್ರೀ | ಕರಮೂರ್ತಿ ವಿಘ್ನೇಶ        ||೧||

ಅಂಬಾಸುತ ದೇವ | ದಿವಿಜಕ | ದಂಬಸನ್ಮುನಿಸೇವ ||
ಕುಂಭಿನಿವಕ್ತ್ರಾವ | ಅಂಬನ | ಕುಂಭಿನಿಜನ ಭಾವ       ||೨||

ಸಿಂಧುಸುಗಾಂಭೀರ್ಯ | ಬಹು ವಿ | ಘ್ನಾಂಧಕಾರಾಳಿ ಸೂರ್ಯ ||
ಸುಂದರ ಶತಶೌರ್ಯ | ನಿತ್ಯಾ | ನಂದವೀವುದು ಕಾರ್ಯ       ||೩||

ಭಾಮಿನಿ

ಈಶ ವರಲಕ್ಷ್ಮೀಶ ವಾಣಿವಿ |
ಲಾಸ ಸನ್ಮುನಿ ವ್ಯಾಸ ಶುಕಯೋ |
ಗೀಶ ವಾಲ್ಮೀಕಾದಿಗಳಿಗಭಿನಮಿಸಿ ಸಂತಸದಿ ||
ವಾಸವಾರ್ಚಿತೆ ಗಿರಿಜೆ ಭಾರ್ಗವಿ |
ವೇಷರಹಿತೆ ಸುಶೀಲೆ ಶಾರದೆ |
ಯಾ ಸುಸನ್ಮಂಗಲೆಯರಿಗೆ ಪೊಡಮಡುವೆನನುದಿನದೀ         ||೪||

ಕಂದ

ಗುರು ಬ್ರಹ್ಮಾನಂದಮರೇಂ |
ದ್ರರನೆಡೆಬಿಡದೆನ್ನ ಹೃದಯಕಮಲದೊಳುಂನಾಂ |
ನಿರತಂ ಧ್ಯಾನಿಸುತಲಿ ಹಲ |
ಧರನಾತ್ಮಜೆಗಾದ ಪರಿಣಯವನುಂ ಪೇಳ್ವೆಂ           ||೫||

ರಾಗ ಭೈರವಿ ಝಂಪೆತಾಳ

ಜನಮೇಜಯ ಕ್ಷಿತಿಪ | ನೆನಿಪ ಧಾರ್ಮಿಕರಿಗೆ ಸ ||
ನ್ಮುನಿಪ ವೈಶಂಪಾಯ | ನನು ಮುದದೊಳೊಲಿದು    ||೬||

ಭಾರತದ ಕಥೆಯ ವಿ | ಸ್ತಾರದಿಂ ಪೇಳುತಿರ ||
ಲಾ ರಾಜಶೇಖರನು ಭೂರಿ ಹರುಷದಲಿ      ||೭||

ಒಂದು ದಿನ ಮುನಿಪಾದ | ದ್ವಂದ್ವಗಳಿಗಭಿನಮಿಸಿ ||
ಚಂದದಿಂ ಬೆಸಗೊಂಡ | ನೊಂದ ಪ್ರಶ್ನೆಯನು          ||೮||

ದ್ವಿಪದಿ

ಮುನಿರಾಯ ಲಾಲಿಸೈ ಮತ್ತೆನ್ನ ಮಾತ |
ಮನಸಿನಲಿ ಗ್ರಹಿಸಿ ಮನ್ನಿಸುತ ಪ್ರಖ್ಯಾತ      ||೯||

ಈ ಭಾರತದ ಕಥಾಸಾರದಲಿ ಬಳಿಕ |
ಸೌಭದ್ರೆ ಯಾತ್ಮಜನಿಗಂದು ಜಿತನರಕ       ||೧೦||

ಹಲಧರನ ಸುತೆಯು ಕನಕಾಂಗಿಯೆಂದೆಂಬ |
ಚೆಲುವ ಕನ್ಯಾರತ್ನವನ್ನು ಭಯಗೊಂಬ        ||೧೧||

ಜನರು ಹರುಷಿಸುವಂತೆ ಪರಿಣಯವ ಗೆಯ್ದ |
ಘನತರದ ಚಾರಿತ್ರಮಂ ಪೇಳ್ವುದೆಂದ        ||೧೨||

ಎಂದೆನುತ ಕಯ್ ಮುಗಿದ ಕ್ಷಿತಿಪತಿಯ ನೋಡಿ |
ಮಂದಹಾಸದೊಳೆಂದ ಋಷಿಯು ನಲಿದಾಡಿ ||೧೩||

ದೊರೆರಾಯ ಕೇಳಯ್ಯ ನೀ ಕೇಳ್ದ ಬಗೆಗೆ |
ವಿರಚಿಸುವರಾರಳವು ಹರಿಯ ಚೋರತೆಗೆ    ||೧೪||

ಆದಡುಸಿರುವೆನು ಭಕ್ತಿಯಲಿ ಲಾಲಿಪುದು |
ಸಾಧುಸಜ್ಜನರೆರೆಯ ಸೌಖ್ಯದಿಂದೊಲಿದು     ||೧೫||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಇಂದುವಂಶೋದ್ಭವನೆ ಲಾಲಿಪು | ದಿಂದು ನೀ ಬೆಸಗೊಂಡ ಪ್ರಶ್ನೆಯ |
ಚಂದದಿಂ ವಿಸ್ತರಿಸುವೆನು ಮನ | ದಂದು ಬಳಿಕ        ||೧೬||

ಹಸ್ತಿನಾಪುರವರದಿ ಕೌರವ | ರಿತ್ತ ಪಾಂಡುಕುಮಾರರಿಂದ್ರ |
ಪ್ರಸ್ಥಪುರದೊಳಗಿರ್ದರೈ ಬಲು | ಸ್ವಸ್ಥದಿಂದ   ||೧೭||

ಚಾರುತರ ವೈಭವದಿ ನರನ ಕು | ಮಾರನಾದಭಿಮನ್ಯುವಯ್ವರ |
ಭೂರಿ ತೋಷಂಬಡಿಸುತಿರ್ದಾ | ನಗರದಲ್ಲಿ   ||೧೮||

ಅತ್ತ ದ್ವಾರಕೆಯಲ್ಲಿ ಶ್ರೀಪುರು | ಷೋತ್ತಮನು ಹಲಧರನ ಸಹಿತಲಿ |
ಚಿತ್ತಜಾದಿಗಳೊಡನೆ ಬಲುಮೆರೆ | ವುತ್ತ ಮುದದಿ       ||೧೯||

ಇರುತಿರಲು ಬಲಭದ್ರನಿಗೆ ಶುಭ | ಕರೆಯದಾಗಿಹ ಪುತ್ರಿಯೊರ್ವಳು |
ಪರಮವೈಭವದಿಂದ ಜನಿಸಿದ | ಳುರುತರದಲಿ         ||೨೦||

ದಿನದಿನಕ್ಕಾ ಶುಕ್ಲಪಕ್ಷದ | ವನಜದಂತರ್ಭಕಳು ಬೆಳೆಯಲು |
ಜನಕನದನೀಕ್ಷಿಸುತ ಮನದಲಿ | ನೆನೆದನೊಂದ        ||೨೧||

ಭಾಮಿನಿ

ಆರಿಗೀ ಸುತೆಯಳನು ಪ್ರೇಮದಿ |
ಧಾರೆಯಂ ನಾನೆರೆದು ಕೊಡುವೆನ |
ದಾರಿಹರು ಸಲ್ಲಕ್ಷಣದಿ ಧಾರಿಣಿಯೊಳನವರತ ||
ಸಾರಸಾಸನನನುಮತಿಯು ತಾ |
ನಾರಿಗಿಹುದೆನ್ನುತಲೆ ಮನದಲಿ |
ಭೂರಿ ಚಿಂತೆಯೊಳಿರಲನುಜೆ ಸೌಭದ್ರೆಯಿಂತೆಂದಳ್   ||೨೨||

ರಾಗ ತೋಡಿ ಅಷ್ಟತಾಳ

ಅಣ್ಣ ಚಿಂತಿಪುದೇಕೆ ಸುಮ್ಮನೆ ನೀನೆನ್ನ | ಚಿಣ್ಣನಾದಭಿಮನ್ಯುಗೆ ||
ಕನ್ನೆ ಕನಕಾಂಗಿಯ ಕೊಡುವದೆ ಮತವಗ್ರ | ಗಣ್ಯನೆ ತಿಳಿದು ನೋಡು     ||೨೩||

ತಿಳಿದೆನು ಕಾಣವ್ವ ತಂಗಿ ನಿನ್ನಯ ಮುದ್ದು | ತರಳನಾದಭಿಮನ್ಯುಗೆ ||
ಚೆಲುವಿಸಿ ಕೊಡುವವನಲ್ಲವೆ ಸುತೆಯನ್ನು | ನಳಿನಾಕ್ಷಿ ನಲವಿನಲಿ         ||೨೪||

ಸೋದರಿಕೆಗೆ ಸುತೆಯನು ಕೊಡದಾರಿಗೆ | ನೀ ಧಾರೆಯೆರೆವೆಯಣ್ಣ ||
ಮೇದಿನಿಯೊಳು ಮತ್ತತಿ ಚೋದ್ಯವಾಗಿದೆ | ಯಾದವಾಗ್ರಣಿಯೆಯೀಗ     ||೨೫||

ಎನಲು ಕೇಳುತ ಮತ್ತನುಜೆಯ ಮೊಗ ನೋಡಿ | ವಿನಯದಿ ನಸುನಗುತ ||
ವನಜಾಕ್ಷಿ ಕೇಳೆ ಪೇಳುವೆನೆನ್ನ ಚಿತ್ತದ | ನೆನಹನು ನಿಜವಾಗಿಯೆ ||೨೬||

ಕಂದ

ಭಾವಕಿ ಕೇಳೌ ಸುತೆಯನು |
ಠೀವಿಯೊಳು ಕೌರವೇಶ್ವರನಣುಗಂಗೀವೆಂ ||
ಈ ವಿಷಯಕ್ಕನುಮಾನಮ |
ದಾವುದುಮಿನಿತಿಲ್ಲಮೆನುತ ಹಲಧರನೆಂದಂ  ||೨೭||

ರಾಗ ಸಾಂಗತ್ಯ ರೂಪಕತಾಳ

ಎಂದಗ್ರಜನ ಮಾತ ಲಾಲಿಸಿ ಸೌಭದ್ರೆ | ಅಂದು ಚಿತ್ತದಿ ಕಡುನೊಂದು ||
ಬಂದಳು ಮುರವೈರಿಯೆಡೆಗೆ ಮಾತಾಡದೆ | ಮಂದಹರ್ಷಿತಳಾಗಿ ಬಳಿಕ ||೨೮||
ಕಾಣುತ್ತ ಕಾಮನಯ್ಯನು ಕಿರುತಂಗಿಯ | ಏನಮ್ಮ ಮಾತಾಡದೀಗ ||
ಜಾಣವೆಯುಳಿದು ನಿಂದಿರ್ಪೆ ಯಾಕೆಂದು ಗೀ | ರ್ವಾಣವಂದಿತ ನುಡಿಸಿದನು       ||೨೯||

ನುಡಿಸಿದ ಶ್ರೀಕೃಷ್ಣನೊಡನೆ ಪೇಳ್ದಳು ಮುದ್ದು | ಮಡದಿಯ ಮೋಹನ್ನೆ ಮಣಿದು ||
ಕಡು ಚಿಂತೆಯಿಂದ ಕಂಧರವನ್ನು ತಗ್ಗಿಸಿ | ತಡೆಯದೆ ತಾನೊಂದುತ್ತರವ ||೩೦||

ರಾಗ ಕಾಂಭೋಜಿ ಅಷ್ಟತಾಳ

ದೇವ ಲಾಲಿಸಯ್ಯ | ಅಗ್ರಜ ವಾಸು | ದೇವ ಲಾಲಿಸಯ್ಯ ||
ದೇವ ಲಾಲಿಸು ಭ | ಕ್ತಾವಳಿಯನು ಪೊ | ರೆವ ವೈದರ್ಭೆಯ ರಮಣ || ಹೇ ಅಣ್ಣ   ||೩೧||

ಸಾತಿಶಯಗಳಿಂದ | ಬಲರಾಮ ನಿ | ನ್ನೋತು ಕರುಣದಿಂದ ||
ಖ್ಯಾತಿಯಿಂ ಕೌರವ | ನಣುಗಗೆ ಕುವರಿಯ | ಪ್ರೀತಿಯೊಳೀವನಂತೆ || ತಾ ಮತ್ತೆ   ||೩೨||

ಚಾರುವರಿದು ನಾನು | ಎನ್ನಯ ಸುಕು | ಮಾರನಿಗೀಯೆಂದೆನು ||
ಸಾರತ್ತಲೆನುತ ವಿ | ಚಾರಿಸದೀಮಾತ | ಮೀರಿದ ಸೋದರವ || ಸಂಜೀವ         ||೩೩||

ಭಾಮಿನಿ

ಎಂದನುಜೆಯಾನನವನೀಕ್ಷಿಸಿ |
ಮಂದಹಾಸದಿ ಮಧುರವಚನಗ |
ಳಿಂದ ತಾನಿಂತೆಂದನಾ ಗೋವಿಂದನನುನಯದಿ ||
ಕುಂದಕುಡ್ಮಲರದನೆ ಕೇಳೌ |
ತಂದುಕೊಳಲೇಕಿನಿತು ಚಿಂತೆಯ |
ನಿಂದು ವಿಧಿ ಬರೆದಂತದಾಹುದು ತೆರಳು ಮನೆಗೆಂದ  ||೩೪||

ವಚನ

ಈ ಪ್ರಕಾರ ಹರಿ ನಿರೂಪಿಸಲಾ ಮಾತಿಗಂ ಸೌಭದ್ರೆ ತಾನಿಂತೆಂದಳು _

ರಾಗ ಕೇದಾರಗೌಳ ಝಂಪೆತಾಳ

ಹೋಗಿಬರುತೇನೆ ಮನೆಗೆ | ಶ್ರೀ ಕೃಷ್ಣ | ಹೋಗಿಬರುತೇನೆ ಮನೆಗೆ       || ಪಲ್ಲವಿ ||

ಅತ್ತಲೇ ಪೋದಳೆಂದು | ಕೋಪಿಸುವ | ಳತ್ತೆ ಮನಸಿನಲಿ ನೊಂದು ||
ಮತ್ತೆ ಹಿರಿಯಕ್ಕ ತಾನು | ನೆನೆಸುವಳು | ನಿತ್ಯದಲಿ ಕೇಳು ನೀನು         ||೩೫||

ಭಾವಗಳು ಚಿಂತಿಸುವರು | ಪಾರ್ಥ ತಾ | ನೀ ವಿಧಕ್ಕೊಪ್ಪರವರು ||
ಕೇವಲವು ಕಲಿಗಳಯ್ಯ | ಮಯ್ದುನರು | ಭೂವಲಯದೊಳಗೆ ಜೀಯ      ||೩೬||

ಚಿಣ್ಣ ಚಾಲ್ವರಿವನಲ್ಲ | ಪಾಲ್ಮೊಸರು | ಬೆಣ್ಣೆಯವಗೀವರಿಲ್ಲ ||
ಎಣ್ಣಿಸುವನೇಕೆ ಬಾರ | ನೆಂದೆನ್ನ | ಅಣ್ಣ ನಿಜವಾಗಿ ಶೂರ        ||೩೭||

ಕಂದ

ಎಂದನುಜೆಯ ಹರುಷಗಳಿಂ |
ದಂದದಿ ರಥವೇರಿಸುತ್ತೆ ಬೀಳ್ಗೊಡೆ ಹರಿಯುಂ ||
ಬಂದಳು ಪತಿಯಾಲಯಕಂ |
ಕುಂದೋಪಮರದನೆಯೊಲವಿನಿಂ ಧರಣೀಶಾ          ||೩೮||
ನಡೆತಂದವ್ವೆಯ ಕಾಣು |
ತ್ತೊಡನಂಘ್ರಿಗೆ ಮಣಿದು ಕುವರನಾದಭಿಮನ್ಯುಂ ||
ತೊಡೆಯಳ್ ಕುಳ್ಳಿರಲುಂ ಮೆ |
ಯ್ದಡವಿದಳತಿ ಪ್ರೇಮದಿಂದೆ ಸೌಭದ್ರೆಯು ತಾಂ       ||೩೯||

ವಚನ

ಈ ಪ್ರಕಾರದಿಂದ ಸೌಭದ್ರೆಯು ದ್ವಾರಕೆಯಿಂದಯ್ತಂದು ಮಗನಂ ಮನ್ನಿಸಿ ಪತಿಯಂತರಂಗಮಂ ಸಂತಸಂಬಡಿಸಿ ಭಾವ ಮಯ್ದುನಾದಿಗಳಾವತ್ತೆಯರಿಗಭಿನಮಿಸಿ ದ್ರೌಪದಿಗಂ ಕಯ್ ಮುಗಿದು ವಿಲಾಸದಿಂದಿರುತಿರಲಿತ್ತಲಾ ಬಲಭದ್ರನದೇಂ ಗೆಯ್ದನೆನೆ –

ರಾಗ ಸೌರಾಷ್ಟ್ರ ತ್ರಿವುಡೆತಾಳ

ಬಂದನಾ  ಗಜಪುರಕೆ ಹಲಧರ | ನಂದು ಸಂತಸದಿಂದ ಕೇಳ್ದಾ |
ನಂದದಿಂ ಕೌರವನು ತಾ ನಡೆ | ತಂದು ಬೇಗ         ||೪೦||

ಇದಿರು ಬಂದೆರಗುತ್ತ ತನ್ನಯ | ಸದನಕೊಡಗೊಂಡೊಯ್ದು ಮನ್ನಿಸಿ |
ವಿಧವಿಧದೊಳುಪಚಾರದಿಂ ಸ | ಮ್ಮುದಗೊಳಿಸುತ    ||೪೧||

ಕೇಳಿದನು ಕುಶಲಾದಿಗಳ ವರ | ನೀಲಮೇಘಶ್ಯಾಮ ಮುಂತಹ |
ದೋಳಿಗಳ ಸುಪ್ರೇಮದಿಂದಲೆ | ಭೂಲಲಾಮ          ||೪೨||

ಕಂದ

ಎಂದಂಧನೃಪಾತ್ಮಜನೊಳು |
ಬಂದುರುತರ ತೋಷದಿಂದೆ ಹಲಧರ ನಗುತಂ ||
ಸಂದೇಹಂ ಕೊಳದತ್ಯಾ |
ನಂದದಿ ತಾ ನುಡಿದನೆನಿತು ಸ್ನೇಹಂ ಬಳಿಕಂ ||೪೩||

ರಾಗ ಕಾಂಭೋಜಿ ಝಂಪೆತಾಳ

ಕುಶಲಿಗಳು ನಾವು ಕೇಳ್ ಕೌರವೇಶ್ವರ ನಿನಗೆ | ಕುಶಲವೆ ಸರ್ವ ಬಳಗಕ್ಕೆ ||
ಕುಶಲಮೊಂದಿದೆ ಕೇಳು ಪೇಳ್ವೆ ನಾನತಿಜವದಿ | ಕುಶಲವೋಪಮನ ದಯೆಯಿಂದ ||೪೪||

ಧಾತ್ರಿಯಲಿ ದಯದಿಂದ ಜನಜನಿತದಿಂ ನಿನ್ನ | ಪುತ್ರ ಲಕ್ಷಣನಿಗೀಗೆನ್ನ ||
ಪುತ್ರಿಯಂ ಧಾರೆಯನ್ನೆರೆವೆನಿದು ಮಾಯಾವಿ | ಚಿತ್ರಂಗಳಲ್ಲ ತಾ ಸಿದ್ಧ    ||೪೫||

ಆಗಲೈ ಮನೆಯೊಳಗೆ ಸಕಲ ಸೋಪಸ್ಕರಗ | ಳೀಗ ವೈವಾಹದುತ್ಸವಕೆ ||
ಬೇಗ ಬರಿಸೈ ಪ್ರೀಯರಾದ ಬಾಂಧವರುಗಳ | ಸಾಗರಸುಗಂಭೀರಶೌರ್ಯ        ||೪೬||

ನಿಶ್ಚಯದ ವೀಳೆಯವ ಕೊಡುವೆನಿದಕೊಳ್ಳೆಂದು | ಅಚ್ಯುತಾಗ್ರಜನು ಕೌರವಗೆ ||
ಚಚ್ಚರದೊಳಿತ್ತನೇಂ ಕಾರುಣ್ಯ ಮೂರುತಿಯೊ | ಸಚ್ಚರಿತನಾಲಿಸಾಶ್ಚರ್ಯ ||೪೭||

ವಚನ

ಈ ರೀತಿಯಿಂದ ಪೇಳ್ದ ಹಲಧರನೊಡನೆ ಕೌರವ ಪೇಳ್ದನದೆಂತೆನೆ –

ರಾಗ ಸಾವೇರಿ ಅಷ್ಟತಾಳ

ಬಲು ಚಂದವಾಯ್ತಯ್ಯ ಭಾವ | ನಿನ್ನ | ಒಲುಮೆಗಳೆನಗೆ ಸಂಜೀವ ||
ಛಲದಂಕ ಮಲ್ಲ ನಿಶ್ಚಲದಿಂದಲಿ ಕುರು | ಕುಲವನುದ್ಧರಿಸಿದೆ ಗೆಲವೆಂತು ಪೊಗಳುವೆ         ||೪೮||

ಗೋಪಾಲಗಾ ಪಾಂಡುಸುತರು | ನಿರ್ | ಲೇಪರತ್ಯಾಪ್ತರಿನ್ನವರು ||
ಈ ಪರಿ ವಿಷಯಕೊಡಬಡುವನೆ ಶ್ರೀಕೃಷ್ಣ  | ಹೇ ಪುಣ್ಯಚರಿತ ಪಾವನಕೀರ್ತಿ ವಿಖ್ಯಾತ       ||೪೯||

ದೇವಕಿವಸುದೇವರಲಿ | ಕುಂತೀ | ದೇವಿಗಂತರ್ಯ ನಿತ್ಯದಲಿ ||
ಭಾವೆ ಸುಭದ್ರೆಯ ಸುತ ಸೋದರಳಿಯನು | ಧಾವತಿ ಬಿಡುವರೆ ದ್ರೌಪದಿಮುಖ್ಯರು         ||೫೦||

ಗಂಟಿಕ್ಕಿಕೊಂಡಿದೆ ಜಗಳ | ಅದರೊಳ್ | ತುಂಟನು ಭೀಮನು ದುರುಳ ||
ಕಂಟಕ ನಮಗಾ ಪಾರ್ಥನೆಂಬಾತನು | ನೆಂಟತನಗಳೆಂತಹುದೊ ನಾ ಕಾಣೆ      ||೫೧||

ಎಂದಂಧನೃಪತಿಯಾತ್ಮಜನ | ನುಡಿ | ಯಂದು ಲಾಲಿಸಿ ಹಲಧರನಾ ||
ಸಿಂಧುವಬ್ಬರಿಸುವ ತೆರದಿ ಕಿನಿಸತಾಳು | ತೆಂದನು ಸಭೆಯೊಳ್ ಸತ್ತ್ವಾತಿಶಯಗಳಿಂದ     ||೫೨||

ರಾಗ ಭೈರವಿ ಏಕತಾಳ

ಯಾರಿಂದಾಗುವುದೇನು | ಕಾ | ಮಾರಿಯೆ ತಡೆಯಲಿ ತಾನು ||
ಧಾರೆಯನೆರೆವೆನು ಸುತೆಯ | ಸುಕು | ಮಾರ ಲಕ್ಷಣಗೆ ಕೇಳ್ ರಾಯ     ||೫೩||

ಮುಳಿದರೆ ಪಾಂಡವರಧಟ | ನರೆ | ಗಳಿಗೆ ಮುರಿವೆ ಕೇಳ್ ದಿಟ್ಟ ||
ತಳುವದನುಜನೊಪ್ಪದಿರಲು | ತಾ | ನುಳಿಸೆನೀ ಕಾರ್ಯವ ಕೇಳು        ||೫೪||

ಯಾಕೈ ಇದಕನುಮಾನ | ವಿ | ವೇಕವಿಲ್ಲವೆ ಬಹು ಜಾಣ ||
ಸಾಕು ಸುಮ್ಮನೆ ಧೈರ್ಯನಾಗು | ಇದ | ಕೋ ಕೌರವ ನೀ ಹೋಗು      ||೫೫||

ಭಾಮಿನಿ

ಧರಣಿಪತಿ ಕೇಳೀಪರಿಯ ಹಲ |
ಧರನು ಕೌರವನಣುಗ ಲಕ್ಷಣ |
ಗಿರದೆ ತನ್ನ ಕುಮಾರಿಯನು ಕೊಡಲೆನುತ ನಿಶ್ಚಯಿಸಿ ||
ಕರೆಸಿ ದೈವಜ್ಞರಲಿ ಲಗ್ನವ |
ನಿರಿಸಿದನು ಬಹ ಷಷ್ಠಿಯಲ್ಲದ |
ಡಿರಲು ದಶಮಿಗಳೆರಡರೊಳಗೊಂದರಲಿ ತಡೆಯದಲೆ ||೫೬||

ನಡೆತಹುದು ದಿಬ್ಬಣವ ನೀವೆಂ |
ದೊಡನೆ ದ್ವಾರಕೆಗಯ್ದಿದನು ಬಹು |
ದೃಢತರದಿ ಸರ್ವೇಶ್ವರಿಚ್ಛೆಯದೆಂತೊ ಮೇಲೀಗ ||
ಸಡಗರದೊಳಿನ್ನಿತ್ತ ಗಜಪುರಿ |
ಯೊಡೆಯಗಾಯ್ತತಿ ತೋಷ ಸ್ವಪ್ನದಿ |
ಬಡವಗರಸುತನಂಗಳಾದಂತೀಗಳಿನ್ನೆಂದ    ||೫೭||

ಕಂದ

ಕೇಳೈ ಧರಣಿಪ ಭೀಷ್ಮ ಸು |
ಶೀಲ ದ್ರೋಣಾದಿ ಕರ್ಣ ಶಕುನಿಗಳುರು ಸ ||
ಮ್ಮೇಳದೊಳೊಪ್ಪಿರುವಂಧನೃ |
ಪಾಲನ ಬಳಿಗಯ್ದಿ ಕೌರವಂ ಮಣಿದೆಂದಂ    ||೫೮||

ರಾಗ ಮಾರವಿ ಏಕತಾಳ

ಕೇಳಿದೆಯ | ತಂದೆ | ಕೇಳಿದೆಯ    || ಪಲ್ಲವಿ ||

ನಾ | ಪೇಳುವ ಮಾತನಾಲಸ್ಯವಿಲ್ಲದೆಯೀಗ || ಕೇಳಿದೆಯ       || ಅನು ಪಲ್ಲವಿ ||

ಧಾರುಣಿಯೊಳಗೆ ಬಲು ಧೀರ ಬಲರಾಮದೇವನು |
ಕಾರುಣ್ಯದಿ ನಿನ್ನ ಮೊಮ್ಮಲಕ್ಷಣನಿಗೆ ||
ಭೂರಿ ಮಮತೆಯಿಂ ತನ್ನ ಕುಮಾರಿಯ ನೀವೆನೆಂದೆನುತ |
ದ್ವಾರಕೆಯಿಂದಯ್ದಿ ಎನ್ನೊಳ್ | ಕಾರುಣ್ಯದಿ ನುಡಿದುದನ್ನು || ಕೇಳಿದೆಯ   ||೫೯||

ಬರುವ ಷಷ್ಠಿಯೊಂದದಲ್ಲದಿರಲು ಮೇಲಣ ದಶಮಿ |
ಎರಡರೊಳೊಂದು ಲಗ್ನಕ್ಕೆ ತೆರಳುವದೆಂದು ||
ಬರೆಸಿ ಪತ್ರಿಕೆಗಳನು ತಾ ಭರದಿಂದ ಪೊರಟು ತನ್ನ |
ಪುರಕೆ ಪದುಳದಿಂದಯ್ದಿದ ಪುರಹರನ ಕೃಪೆಯದೆಂತೊ || ಕೇಳಿದೆಯ     ||೬೦||

ಈ ಕಾರ್ಯದೊಸಗೆಗಳು ವಿವೇಕವಾಗಿ ನಡೆಯಲು ಪ |
ರಾಕುಮಾಡುವೆನು ಮುಂದೆ ಪಾಂಡವರನ್ನು ||
ಲೋಕದಿ ಪೆಸರಡಗಿಸಿ ಏಕಧಿಪತ್ಯವನಾಳ್ವೆ |
ನಾಕಾಧಿಪನಂತೆ ನಿರ್ ವ್ಯಾಕುಲತೆಯಿಂದಲಹುದು || ಕೇಳಿದೆಯ         ||೬೧||

ಕಂದ

ಕೌರವನೆಂದುದ ಕೇಳ್ದುಂ |
ಮಾರುತ್ತರವೀಯದಿರಲು ಆ ಧೃತರಾಷ್ಟ್ರಂ ||
ಭೋರನೆ ಭೀಷ್ಮಾಚಾರ್ಯನು |
ಆ ರಾಜಕುಮಾರಗೆಂದನೊಂದುತ್ತರಮಂ     ||೬೨||

ರಾಗ ಘಂಟಾರವ ಝಂಪೆತಾಳ

ಏನಾದರೇನು ಎಲೆ ರಾಜಶೇಖರನೆ |
ಅನುಮಾನವಾಗಿರ್ಪುದೀ ಕಾರ್ಯದೊಸಗೆಗಳು || ಏನಾದರೇನು          || ಪಲ್ಲವಿ ||

ಉರಗ ನಕುಲಗಳೊಂದು ಕೂಡಿ ತಾನಾಡುವದೆ |
ಕರಿಯೊಡನೆ ಹರಿಗೆ ಬಂಧುತ್ವವುಂಟೆ ||
ವರ ರಾಜಕೀರಗೆ ಬಿಡಾಲನೊಳು ಮೈತ್ರತೆಯೆ |
ಬರಿದೊರೆಗೆ ಬಯಸಲಡಗುವುದೆ ತೃಷೆಯಿನ್ನು          ||೬೩||

ಎಂತಾದಡೇನು ಶ್ರೀಕಾಂತನನುಮತಿಯಿಲ್ಲ |
ದಂತ ಕಾರ್ಯಗಳು ಕಡೆಗಂತರಂಗಗಳು ||
ಸಂತಸದೊಳನುಜೆಯ ಸುತಂ ತಾನೆ ಮನೆಯೊಳಿರ |
ಲೆಂತಳುವದಾದ ಈ ಪಂಥ ಹಲಧರಗೆ       ||೬೪||

ಆ ಮೇಲೆ ಪಾರ್ಥನಾ ಕಾಮನಯ್ಯನ ಪ್ರಾಣ |
ತಾ ಮುನಿದರೀ ಮೂರು ಲೋಕವಳಿವ ||
ಭೀಮನೆಂಬುವನು ರುದ್ರಾವತಾರನು ಸುಗುಣ |
ಧಾಮನೇ ಧರ್ಮರಾಯನು ನೋಡು ಬಳಿಕ  ||೬೫||

ದ್ರುಪದರಾಯನ ಕಯ್ಯಕಟ್ಟಿ ತಂದವರಾರು |
ಕಪಿಯು ತಾನ್ಯಾರ ರಥತುದಿಯೊಳಿಹುದು ||
ವಿಪರೀತವಾದ ಬಕನನು ಮುರಿದರಾರಯ್ಯ |
ಕಪಟವಿದರೊಳಗೇನು ಕಾಣೆನತಿಜವದಿ       ||೬೬||

ರಾಗ ಸವಾಯ್ ತ್ರಿವುಡೆತಾಳ

ಗಂಗಾತನಯನೆಂದಗವನೀಕ್ಷಿಸು | ತಂಗಮುಖದಿ ಕರ್ಣನು ತಾನು ||
ಕಂಗಳೊಳಿಂಗಳಮಂಗರೆಯುತ ಬೆ | ಡಂಗಿನೊಳೆಂದನು ಧರಣಿಪಗೆ     ||೬೭||

ಹಾರುವರೆಂಬವರಾರನಾದರು ಗಂ | ಭೀರದಿ ಪೊಗಳುವುದೆ ಸಹಜ ||
ಕೋರುವರ್ ತಮ್ಮ ವಿಚಾರವ ನಮ್ಮೊಳು | ದಾರತ್ವದಿ ಪಿರಿಯರುಯೆಂದು         ||೬೮||

ಇರಲಿರಲಿವರುತ್ತರವಿಲ್ಲಿಗೆ ದೊರೆ | ವರ ನೀನೆಸಗೈ ಕಾರ್ಯವನು ||
ಧರೆಯೊಳಗಾ ಹಲಧರನಸಮರ್ಥನೆ | ಬರಿ ಚಾತುರ್ಯದಿ ಫಲವೇನು    ||೬೯||

ತಡೆವನೆ ಪಾರ್ಥನು ಕೊಡಲೀಸನೆ ಹರಿ | ಬಡಿವಾರಗಳಂತಿರಲೀಗ ||
ಅಡಿಗಡಿಗೇತಕೆ ಕಡು ಚಿಂತೆಯು ತಾ | ನಡೆಯಲಿ ದಿಬ್ಬಣವತಿ ಬೇಗ      ||೭೦||

ವಾರ್ಧಕ

ಈ ರೀತಿಯಿಂ ಪೇಳ್ದ ಭೀಷ್ಮಕರ್ಣಾದಿಗಳ |
ಚಾರುತರ ಸಂವಾದದುತ್ತರವನುಂ ಕೇಳು |
ತಾ ರಾಜಶೇಖರನೆನಿಸಿದ ಧೃತರಾಷ್ಟ್ರ ತಾ ಬಳಿಕ ತನಯಂಗೆಂದನು ||
ಬಾರಯ್ಯ ಕುರುಕುಲೋದ್ಧಾರ ನೀನೆಸಗಿದೀ |
ಕಾರಿಯಕ್ಕನುಮಾನಮೇನಿಹುದು ಪಣೆಯೊಳಂ |
ಸಾರಸಾಸನ ಬರೆದ ಲಿಖಿತಮಿನ್ನೆಂತಿಹುದೊ ಮೀರಲಾರಳವು ಮಗನೆ   ||೭೧||

ವಚನ

ಇಂತೆನುತಾಡಿದ ಪಿತನನುಮತಿಯುತ್ತರಮಂ ಕೇಳಿ ಮಾತೆಯಾದ ಗಾಂಧಾರಿಗಂ ಮಣಿದಿಂತೆಂದನು-