ರಾಗ ಮಧುಮಾಧವಿ ಆದಿತಾಳ
ಮುದದಿಂದಲಿ ತಾಯೆ | ಮೊಮ್ಮನ | ಮದುವೆಯ ಮದವತಿಯೆ ||
ಮದುವಣಿಗಶಾಸ್ತ್ರವನು | ಮಾಡಲು | ಸದನದೊಳಾಹದನು ||೭೨||
ಸಕಲನುಕೂಲಗಳ | ನೊದಗಿನೊಳ್ | ಸಕಲರೊಡನೆ ಕೇಳ ||
ಶಕುತಿಯಿಂದಾಗಿಪುದು | ದಿನ ಸಮೀ | ಪಕೆ ಬಂದಿದೆಯಿನ್ನು ||೭೩||
ಷಷ್ಠಿಯ ಲಗ್ನಕ್ಕೆ | ಪೋಗುವ | ಥಟ್ಟನೆ ಪರಿಣಯಕೆ ||
ಕಟ್ಟಿಸಿ ವಡವೆಗಳ | ಬೇಕಾದ | ಪಟ್ಟೆ ಪೀತಾಂಬರಗಳ ||೭೪||
ನಂದನ ನಿಂತೆನಲು | ಕೇಳ್ದಾ | ನಂದದಿ ಮನಸಿನೊಳು ||
ಚಂದದಿ ಗಾಂಧಾರಿ | ರಚಿಸಿದ | ಳಂದುತ್ಸವ ನಾರಿ ||೭೫||
ಭಾಮಿನಿ
ಮೊಮ್ಮನಿಗೆ ಮದುವಣಿಗಶಾಸ್ತ್ರವ |
ನುಂ ಮನೋಹರುಷದೊಳಗಾನಿಸಿ |
ಸಮ್ಮತದಿ ಸಕಲಾನುಕೂಲಕ್ಕಾಳಿಯರ ಕರೆಸಿ ||
ನಿರ್ಮಲದಿ ಶೋಭಸ್ಕರವನತಿ |
ರಮ್ಯದಿಂ ಮಾಡುವುದೆನುತ್ತಲೆ |
ಹಮ್ಮಿನಿಂದಪ್ಪಣೆಯನಿತ್ತಳು ಹರದಿ ಗಾಂಧರಿ ||೭೬||
ರಾಗ ಭೈರವಿ ಝಂಪೆತಾಳ
ಹೊರಗೆ ಕೌರವನು ತಾ | ನಿರದೆ ಸಚಿವಾದಿಗಳ |
ಕರೆದು ಪೇಳ್ದನು ಪುರದಿ | ಭರದಿ ಡಂಗುರವ ||೭೭||
ಹೊಡಿಸಿ ವೈವಾಹಕೆಂ | ದೊಡನೆ ಸಾರಿಸಿ ಸಕಲ |
ರೊಡಗೂಡಿ ಬಹುದೆಂದು | ದೃಢದಿಂದ ನುಡಿದು ||೭೮||
ಚತುರಂಗ ಬಲವನಿ | ನ್ನತಿಶಯದಿ ನೆರಹುವುದೆ |
ನುತ ಅಪ್ಪಣೆಯಿತ್ತನೀ | ಕಥನಮಿನ್ನೆಂತೊ ||೭೯||
ವಚನ
ಈ ಪ್ರಕಾರದಿಂದ ಹಸ್ತಿನಾಪುರದೊಳ್ ವೈವಾಹದುತ್ಸವದ ಸಂಭ್ರಮದಿಂದಿರುತಿರಲತ್ತಲಾ ಇಂದ್ರಪ್ರಸ್ಥದೊಳು ಸೌಭದ್ರೆ ತಾನೇಂ ಗೆಯ್ದಳೆನೆ _
ರಾಗ ಭೈರವಿ ತ್ರಿವುಡೆತಾಳ
ಬಂದಳಾಗ | ಭಾವಕಿ | ಬಂದಳಾಗ || ಪಲ್ಲವಿ ||
ಬಂದಳಾ ಗಜಪುರಕೆ ಪದುಳಗ | ಳಿಂದ ಪಾರ್ಥನ ಕಿರಿಯರಸಿ ಮುದ |
ದಿಂದ ಶೃಂಗರವಾಗಿ ತಾನಿ | ನ್ನಂಧನೃಪತಿಯ ದರ್ಶನಕ್ಕೊಲ |
ವಿಂದ ಮೈವೆಳಗುಗಳ ಬೀರುತ | ಚಂದಿರನ ಚಿತ್ತದಲಿ ಜರೆವುತ |
ಧಂ ಧಣಂ ಧಣರೆಂಬ ಮಿಗೆ ಕಾ | ಲಂದುಗೆಯ ರಭಸದಲಿ ರಂಜಿಸಿ || ಬಂದಳಾಗ ||೮೦||
ವಿಟಜನರ ಮೈಮರೆಸಿ ಬಲು ಸಂ | ಕಟಗೊಳಿಸುತತಿ ಚಚ್ಚರದಿ ವರ |
ಜಟಿಲರೆದೆ ಬಿರಿವಂತೆಯಾ ಧೂ | ರ್ಜಟಿಯ ರಮಣಿಯ ತೆರದಿ ಮತ್ತಾ |
ಕುಟಿಲ ಕುಂತಳೆಯುಟ್ಟ ಪಟ್ಟೆಯು | ಪಟಪಟನೆ ಪಾರುತ್ತಿರಲು ಶ |
ಕಟಹರನನುರೆ ಮನದಿ ನೆನೆಯುತ | ಪಟುತರದ ವೇಗಂಗಳೊಯ್ಯನೆ || ಬಂದಳಾಗ ||೮೧||
ಮತ್ತೇಭವಿಕ್ರೀಡಿತಂ
ನಡೆಗಂ ನಾಚುತ ಹಂಸರಾಜ ಗಮಿಸೇ ತಾಂ ಮಾನಸಕ್ಕಾಕ್ಷಣಂ |
ನುಡಿಗಂ ಕೀರ ಪಿಕಾದಿಗಳ್ ತೃಷೆಗಳಿಂದೇಕೆತ್ತಲುಂ ಪಾರ್ದವು ||
ಕಡುಗುಂದುತ್ತೆ ಸುವೇಣಿಗಯ್ದೆ ಫಣಿಪಂ ಪಾತಾಳಮಂ ಸಾರ್ದನುಂ |
ಜಡದೊಳ್ ತಾವರೆಯಾದವಂದು ನಳಿನಂಗಳ್ ತನ್ಮುಖದ್ಯೋತಕಂ ||೮೨||
ಕಂದ
ಇಂತೀ ಪರಿಯಿಂ ಪಾವನೆ |
ದಂತಿಪುರಕಯ್ದಿ ಕಾಣುತ್ತಂಧನೃಪಾಲಂ ||
ಗಂತಳುವದೆ ವಂದಿಸಲುಂ |
ಸಂತಸದಿಂ ನೆಗಹಿ ಪರಸುತೆಂದನು ಭೂಪಂ ||೮೩||
ರಾಗ ಸೌರಾಷ್ಟ್ರ ಆದಿತಾಳ
ಏನವ್ವ ತಾಯೆ ನೀನಿಂದು ದ್ವಾರಕೆಯಿಂದ | ನೀ ನಡೆತಂದೆಯೆ ಮನೆಗೆ ||
ದಾನವಾಂತಕನು ಸುಕ್ಷೇಮದೊಳಿಹನೆ ತತ್ | ಸೂನುವೇಂಗೆಯ್ವನು ಹೇಳ ||೮೪||
ಧರ್ಮಜಾದಿಗಳು ತಾವ್ ತಮ್ಮೊಳಗೆಲ್ಲರು | ಒಮ್ಮನದೊಳು ನಡೆವರೇನೆ ||
ನಿರ್ಮಲದಿಂದ ನಿಮ್ಮತ್ತೆ ದ್ರೌಪದಿಯರು | ಸಮ್ಮತದಿಂದೊಪ್ಪುತಿಹರೆ ||೮೫||
ಊರೊಳೇನಾದರು ಪೊಸ ವಾರ್ತೆಗಳುಂಟೆ | ಭೂರಿ ಹರುಷದಿ ಬಹಳವಾಗಿ ||
ಮಾರುತಾತ್ಮಜ ಪಾರ್ಥರವರೇನ ನೆನವರೆ | ಕಾರಿಯವನು ಮನದಲ್ಲಿ ||೮೬||
ವಚನ
ಇಂತೆಂಬ ಧೃತರಾಷ್ಟ್ರನೊಳು ಸೌಭದ್ರೆ ತಾನಿಂತೆಂದಳು –
ರಾಗ ತೋಡಿ ಆದಿತಾಳ
ಮಾವ ಲಾಲಿಸು ಮಾತ ಮನೆಗೆ ಬಂದೆನು ಮೊನ್ನೆ | ಶ್ರೀವರನಿಗೆ ಕ್ಷೇಮವೀವರೆಗಣುಗಾ ||
ಠೀವಿಯಿಂ ನಿಮ್ಮಾಶೀರ್ವಾದದಿಂ ಕುಶಲಿಗಳ್ | ಭಾವಮೈದುನರಿಗೆ ಕೇವಲಂತರ್ಯ ||೮೭||
ಅತ್ತೆಗಳಿಗೆ ಹಿರಿಯಕ್ಕನೊಡನೆ ಪ್ರೇಮ | ವತ್ಯಧಿಕವು ಕೇಳುವಧಿಕ ದಯಾಳು ||
ಮತ್ತೆ ಮರುತಜ ಪಾರ್ಥರನ್ಯತ್ರ ರಾಜಕಾರ್ಯ | ದೆತ್ನದೊಳಿಲ್ಲವಯ್ಯ ತಿಳಿಯಲು ಜೀಯ ||೮೮||
ಪುರದೊಳಿಂದಿಗೆ ಪೊಸ ಪರಿಯ ವಾರ್ತೆಗಳಿಲ್ಲ | ವರಿತುದನರುಹಿದೆ ದೊರೆ ನಿಮ್ಮ ಪದದ ||
ದರುಶನಕೆಂದಯ್ದೆ ತೆರಳುವೆ ನಾ ಮನೆಗೆ | ಹರುಷದಿಂದಪ್ಪಣೆಯ ಕೊಡಬೇಕಿಂದೆನಗೆ ||೮೯||
ಕಂದ
ಎಂದರ್ಜುನನರಸಿಯನಾ |
ನಂದದಿ ಪರಸುತ ಕಳುಹಿಸಲಂಧನೃಪಾಲಂ ||
ಬಂದಾ ಗಾಂಧಾರಿಗೆ ತಾ |
ವಂದಿಸಿ ಬೀಳ್ಗೊಂಡಳಯ್ದೆಯೇನ್ ಪಾವನೆಯೋ ||೯೦||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಬರುತ ಕಂಡಳು ಭಾವೆ ತಾನಿ | ನ್ನರಮನೆಯೊಳಾಳಿಯರು ಬಲು ಚ |
ಚ್ಚರದಿ ವೈವಾಹೋತ್ಸವಕೆ ಪರಿ | ಪರಿಗಳಿಂದ ||೯೧||
ಎತ್ತ ನೋಡಿದಡತ್ತ ಶೃಂಗರಿ | ಸುತ್ತ ಶೋಭಸ್ಕರವ ರಚಿಸು |
ತ್ತೆತ್ತಿ ಧ್ವನಿಯನು ಸೊಬಗಿ ನಿಂ ಪಾ | ಡುತ್ತಲಿರಲು ||೯೨||
ಕಾಣುತೀ ವಿಧಗಳನು ವರಕ | ಲ್ಯಾಣಿ ತಾ ಕರೆದೋರ್ವ ತರುಣಿಯ |
ಮಾಣದಾಕ್ಷಣ ಕೇಳಿದಳು ಅನು | ಮಾನದಿಂದ ||೯೩||
ರಾಗ ಘಂಟಾರವ ಆದಿತಾಳ
ಏನೆ ಲಲಿತಾಂಗಿ | ಈ ವೈಭವದಾನಂದ | ವೇನೆಲೆ ತಂಗಿ || ಪಲ್ಲವಿ ||
ಪೊಸ ಪೊಸ ಪರಿಯಾಗಿದೆ | ವಿಚಾ | ರಿಸಲರಮನೆಯೊಳಿಂದೆ ||
ಒಸಗೆಯದೇನು ಮುಂದೆ | ನಿಮ್ಮರಸ ತಾ | ನೆಸಗಿದ ಕಾರ್ಯವಿಂದೆ ||೯೪||
ಎನಗೇನು ತಿಳಿವುದಿಲ್ಲ | ಕಂಡರೆ ಮ | ತ್ತನುಮಾನವಾಹುದೆಲ್ಲ ||
ಘನತರವಾಗಿದೆಲ್ಲ | ಶೃಂಗರಿಸುವ | ದನು ಪರಿಕಿಸೆ ಸುಳ್ಳಲ್ಲ ||೯೫||
ಭೀತಿಯ ಬಿಟ್ಟುಸಿರೆ | ಈ ವಿಧಗಳ | ನೋತುಯೆನ್ನೊಳು ಶೃಂಗಾರೆ ||
ನೀ ತಳುವದೆಯು ಬೇರೆ | ಕಪಟಗಳ | ಮಾತನಾಡದೆ ಚದುರೆ ||೯೬||
ರಾಗ ಮಧ್ಯಮಾವತಿ ಆದಿತಾಳ
ಈ ರೀತಿಯಿಂದ ವಿ | ಚಾರಿಸಿ ಕೇಳ್ದ ಶೃಂ ||
ಗಾರಿಯೊಡನೆ ಪೇಳ್ದ | ಳೋರುವಳ್ ಮುದದಿ ||೯೭||
ತಾಯೆ ಲಾಲಿಸು ನಮ್ಮ | ರಾಯ ಕೌರವನ ಸು ||
ಪ್ರೀಯದ ಸುತಗೆ ವಿ | ಡಾಯದಿಂದೀಗ ||೯೮||
ಬಲರಾಮನಯ್ದಿ ನಿ | ಶ್ಚಲಚಿತ್ತದಿಂದ ತಾ ||
ನೊಲವಿನಿಂ ತನ್ನಾತ್ಮಜೆ | ಯಳನು ನಲವಿಂದ ||೯೯||
ಕೊಡುವೆನೆಂದೆನುತ ಬೆಂ | ಬಿಡದೆ ನಿಶ್ಚಯದಿ ||
ಪೊಡವೀಶಗಭಯವ | ಕೊಡುತ ಸಂತಸದಿ ||೧೦೦||
ನಾಳಿನ ಷಷ್ಠಿಗದ | ರೊಳಗಲ್ಲದಿರಲು ||
ಮೇಲಣ ದಶಮಿಗೆ | ಬಾಲೆಲಗ್ನಗಳು ||೧೦೧||
ಬರೆಸಿ ಪತ್ರಿಕೆಯ ಚ | ಚ್ಚರದಿ ತಾನಯ್ದಿದ |
ನರುಹುವೆನೇನ ಪಂ | ಕರುಹದಳಾಕ್ಷಿ ||೧೦೨||
ಭಾಮಿನಿ
ಎಂದು ಪೇಳಿದ ದೂತಿಯುತ್ತರ |
ಕಂದು ಮನದಲಿ ಚಿಂತಿಸುತ ಭರ |
ದಿಂದ ಮನೆಗಯ್ದುತ್ತ ಮಾತುಗಳಾಡದೋರ್ವರಲಿ ||
ಕಂದಿದಾನನ ಕಾಂತಿಯಿಂ ಸಲೆ |
ಸಂದೆಗಂಗೊಳುತಯ್ದೆ ಸಜ್ಜೆಯ |
ಮಂದಿರದಿ ಪವಡಿಸಿದಳಾ ಸೌಭದ್ರೆಯತಿಜವದಿ ||೧೦೩||
ಕಂದ
ಆ ಸಮಯದೊಳಭಿಮನ್ಯುಂ |
ಬೇಸರದೊಳ್ ಮಾತೆಯೆಲ್ಲಿಗಯ್ದಿದಳೆಂದುಂ ||
ತಾ ಸೊಬಗಿಂದರಸುತಲಾ |
ಯಾಸಗಳಿಂ ಪೊಕ್ಕನಾಗಲವ್ವೆಯ ಮನೆಗಂ ||೧೦೪||
ಮಂಚದಿ ಮಲಗಿರ್ದವ್ವೆಯ |
ನುಂ ಚಚ್ಚರದಿಂದಲಿ ಕಾಣುತ ಭೀತಿಯೊಳಂ ||
ಸಂಚಿತ ಚಿಂತೆಯದೇನೆಂ |
ದಂ ಚತುರತೆಯಿಂದ ಮಣಿದು ನುಡಿಸಿದನಾಗಳ್ ||೧೦೫||
ರಾಗ ಭೈರವಿ ಆದಿತಾಳ
ತಾಯೆ ಚಿಂತಿಪುದೇನು | ಪೇಳೆನ್ನೊಳು | ಮಾಯವಿದರೊಳಿನ್ನು ||
ತೋಯಜಮುಖಿ ಸು | ಪ್ರೀಯದೊಳೇಳುಯಿ | ನ್ನಾಯಾಸಗಳನುಳಿದು ||೧೦೬||
ಯಾರೇನೆಂದರಮ್ಮ | ನಿಮ್ಮನು ಮ | ತ್ತಾರು ನಿಂದಿಸಿದರಮ್ಮ ||
ಈ ರೀತಿಯಲಿ ಬರಿ | ಮೋರೆ ಮುಸುಕನಿಟ್ಟು | ಧೀರೆ ಪವಡಿಸುವರೇನೆ ||೧೦೭||
ಅತ್ತೆ ಕೋಪಿಸಿಕೊಂಡಳೊ | ಹಿರಿಯಕ್ಕನು | ಚಿತ್ತದಿ ಭ್ರಮೆಗೊಂಡಳೊ ||
ಪಾರ್ಥ ತವರ್ಮನೆ | ಯತ್ತ ಪೋದಳು ಯೆಂ | ದುತ್ತರಿಸಲಿಹನೆ ||೧೦೮||
ಭಾವಮೈದುನರುಗಳು | ಭೇದವ ಮಾಡಿ | ಭಾವಿಸದಿಹರೆ ಪೇಳು ||
ಯಾವ ಕಾರ್ಯಕೆ ಕಿನಿ | ಸುವ ತಾಳಿಹೆ ತಾಯೆ | ದೇವಿ ನೀನಿಂದುಸಿರೆ ||೧೦೯||
ದುರುಳ ದಾಯಾದ್ಯರಲಿ | ಬಹಳ ನಿ | ಷ್ಠುರ ಸಂಭವಿಸಿತೆಯಲ್ಲಿ ||
ಮರೆಯದೆ ಪೇಳಿದ | ರುರುಳಿಪೆನವರನ್ನು | ಸರಳೊಂದರಿಂದಲೆಂದ ||೧೧೦||
ವಚನ
ಈ ಪ್ರಕಾರದಿಂದಭಿಮನ್ಯು ನುಡಿಸಿದ ಮಾತಿಗಂ ಸೌಭದ್ರೆ ದುಗುಡದಿಂದಿಂತೆಂದಳ್ –
ರಾಗ ಶಂಕರಾಭರಣ ಆದಿತಾಳ
ಏನ ಹೇಳಲಯ್ಯೊ ನಿನಗೆ | ಕಂದ ಕಂದ | ಯೆನ್ನ |
ಮಾನಹಾನಿಯನು ಕೇಳು | ಕಂದ ಕಂದ || ಪಲ್ಲವಿ ||
ಹಲಧರ ತನ್ನಯ ಮಗಳ | ಕಂದ ಕಂದ | ಕುರು |
ಕುಲಜ ಕೌರವಣುಗಗೆ | ಕಂದ ಕಂದ ||
ಗೆಲವಿನಿಂದಲೀವನಂತೆ | ಕಂದ ಕಂದ | ಅವನ |
ಛಲವನಿನ್ನೇನನುಸಿರಲಿ | ಕಂದ ಕಂದ ||೧೧೧||
ಅಂದೆ ನಾ ಕೇಳ್ದರಗ್ರಜ | ಕಂದ ಕಂದ | ಕೊಡೆ |
ನೆಂದು ಶಪಥವ ಮಾಡ್ದ | ಕಂದ ಕಂದ ||
ಮುಂದೆಯೇನುಪಾಯವಯ್ಯೊ | ಕಂದ ಕಂದ | ಯಾರಿ |
ಗಿಂದು ಈ ದೂರನು ಪೇಳ್ವೆ | ಕಂದ ಕಂದ ||೧೧೨||
ಕರಿಪುರಕ್ಕೆ ತಾನೆ ಪೋಗಿ | ಕಂದ ಕಂದ | ದುಷ್ಟ |
ರೆರೆಯನಿಗಿತ್ತಂತೆ ಮಾತ | ಕಂದ ಕಂದ ||
ತೆರಳುವದಂತೆ ದಿಬ್ಬಣವು | ಕಂದ ಕಂದ | ನಾಳೆ |
ಬರುವ ಷಷ್ಠಿಯ ಲಗ್ನಕ್ಕೆ | ಕಂದ ಕಂದ ||೧೧೩||
ರಾಗ ಮಾರವಿ ಏಕತಾಳ
ದೂರುವುದಾರಿಗೆ | ತಾಯೆ ಅನ್ಯತ್ರವು | ವಾರಿಜಾಂಬಕನಿರಲು ||
ಬೇರೋರ್ವರುಯಿದ | ಬಿಡಿಸುವರೇ ಮದ | ನಾರಿಯು ತಾ ತಿಳಿಯ ||೧೧೪||
ಬಿಡು ಬಿಡು ಕೌರವ | ಬಡುಗನ ಮಗನಿಗೆ | ಸಡಗರದಲಿ ಸುತೆಯ |
ಕೊಡಲೀಸುವೆನೇ | ನಾ ಮಾರನ ಬಲು | ಬಡಿವಾರಗಳೇನು ||೧೧೫||
ಅರಿಯದೆ ಕಾರ್ಯವ | ಮಾಣ್ದರೆ ಕುರುಕುಲ | ವರಿವೆನರೆಕ್ಷಣಕೆ ||
ಗರುವಿಸಿದರೆ ಹಲ | ಧರನ ಪಡೆಯನೀಗ | ಪರಿಕಿಸಲೇನಹುದು ||೧೧೬||
ಮೂರುಲೋಕದ ಗಂ | ಡನು ನಮ್ಮಯ್ಯನು | ಮಾರುತಾತ್ಮಜನಯ್ದೆ ||
ಧಾರಿಣಿಯೊಳು ತ್ರಿಪು | ರಾರಿಯ ಪರಮವ | ತಾರನು ತಾನಿಹನು ||೧೧೭||
ಸತ್ಯಸಂಧನು ಧ | ರ್ಮಜನದರೊಳು ನಿನ | ಗೆತ್ತಣದೀ ಚಿಂತೆ ||
ಹೊತ್ತುಗಳೆವದೇ | ತಕೆ ಪೋಗುವ ಪುರು | ಷೋತ್ತಮನೆಡೆಗೆ ನಡೆ ||೧೧೮||
ಕಂದ
ಮಾತೆಯೊಳಿಂತೆನುತಂ ಯಮ |
ಜಾತನ ಸನ್ನಿಧಿಗೆ ಬಂದು ಮಣಿದಭಿಮನ್ಯುಂ ||
ಇಂತೀ ವಾರ್ತೆಯನರುಹು |
ತ್ತಾತನೊಳಪ್ಪಣೆಯನಾಂತು ಮನೆಗಯ್ತಂದಂ || ||೧೧೯||
ಪಡೆದವಳೀಪರಿ ಹದನಂ |
ನುಡಿದು ದ್ವಾರಕೆಗೆ ಪೋಗಲೇಳೆಂದೆನುತಂ ||
ಸಡಗರದಿಂ ರಥಮಂ ತಂ |
ದೊಡನಾಕ್ಷಣ ನಿಲಿಸೆ ನಲಿದಳಾ ಸೌಭದ್ರೇ ||೧೨೦||
ರಾಗ ಪಂಚಾಗತಿ ಮಟ್ಟೆತಾಳ
ಮಗನ ಮಾತನಾಲಿಸುತ್ತ | ಮುಗುದೆ ಹರುಷದಿ |
ನಗುತ ನಲವಿನಿಂದ ಪೊರಟ | ಳಂದು ವೇಗದಿ ||
ನಗಧರನೊಳು ಪೇಳ್ವೆನೆಂದು | ನಾರಿ ಪದುಳದಿ |
ಬಗೆಬಗೆಯ ಸ್ಮರಣೆಗೆಯ್ದು | ಸುಗುಣೆ ಗಮಕದಿ ||೧೨೧||
ಪೊರಟ ತಾಯ ರಥವನೇರಿ | ಸುತ್ತ ಪಾರ್ಥನ |
ವರ ಕುಮಾರ ನಡೆದನಾಗ | ಲತಿವಿಚಕ್ಷಣ ||
ಪರಿಪರಿಯ ಧನುಶರಂಗ | ಳಿಂದಲಾಕ್ಷಣ |
ಹರಿಯ ಕಾಂಬ ತವಕದಿಂದ | ಮಧುರಭಾಷಣ ||೧೨೨||
ರಾಗ ಮಾರವಿ ಏಕತಾಳ
ನಡೆದನು ತನ್ನಯ | ಪಡೆದ ತಾಯೊಡನೆ ಬೆಂ |
ಬಿಡದೆ ರಥವನಂ | ದಡರಿ ಸಂಭ್ರಮದಲಿ ||
ಫಡಫಡಯೆನುತು | ದ್ಘಡಿಸುತ ಹಯವನು |
ಝಡಿದು ಬೋಳಯ್ಸುತ | ಕಡುಗಲಿಯಾದ || ನಡೆದನಾಗ ||೧೨೩||
ರಥದ ಮಹಾಚಮ | ತ್ಕೃತಿ ಹಯಗಳ ಹೇ |
ಷಿತರವದಲಿ ಭೂ | ಸತಿ ನಡುಗಿದಳು ||
ಪಥದಲಿ ಗಿರಿತರು | ಪೃಥಿವಿಗುರುಳಿ ಮೆರೆ |
ವುತಲಿರ್ದುದು ನರ | ಸುತನ ಸಾಹಸದಿ || ನಡೆದನಾಗ ||೧೨೪||
ಖಗಮೃಗಗಳು ಸಂ | ಯುಗ ಸಮರ್ಥನ ಬಗೆ |
ಬಗೆಯ ಹೂಂಕೃತಿಗಳ | ಸೊಗಸನಾಲಿಸುತಲಿ ||
ಧಿಗಿಲೆನುತೆದೆಯೊಳು | ಹೊಗುವೆಡೆಯಿಲ್ಲದೆ |
ಗಗನಾಟವಿಗಳ | ನರಸುತಯ್ದಿದವು || ಕೇಳು ಭೂಪ ||೧೨೫||
ಬತ್ತಿತು ಸರಸಿಗ | ಳೆತ್ತೆತ್ತಲು ಮುಗಿಲ್ |
ಮೊತ್ತ ಕವಿದು ರವಿ | ಕತ್ತಲೆಯಾಯಿತು ||
ತತ್ತರಿಸಿದರುರು | ದೈತ್ಯರಾವೆಡೆಯೊಳು |
ಗೊತ್ತ ಕಾಣದೆ ಭಯ | ವೆತ್ತು ತಮ್ಮೊಳಗೆ || ಕೇಳು ಭೂಪ ||೧೨೬||
ಈ ಪರಿಗಳ ಸ | ಲ್ಲಾಪದಿ ಮರುತಜ |
ತಾ ಪಡೆದಸುರಪ್ರ | ತಾಪನ ವಿಪಿನದಿ ||
ಆ ಪಾರ್ಥನ ಕುಲ | ದೀಪನ ರಥ ಬರೆ |
ಕೋಪದಿ ತಡೆದೈ | ತ್ಯೋಪ್ವನಚರರು || ಕೇಳು ಭೂಪ ||೧೨೭||
ಕಂದ
ತಡೆದಸುರಚರರುಗಳನುಂ |
ಬಡಿದೊಡನಟ್ಟುತಮಯ್ದುತಿರಲು ಪಾರ್ಥಸುತಂ ||
ಕಡು ಭಯದಿಂದಂ ಮತ್ತವ |
ರೊಡೆಯನ ಬಳಿಗಯ್ದು ಪೇಳ್ದರೀ ಪರಿ ಹದನಂ ||೧೨೮||
ರಾಗ ಮಧ್ಯಮಾವತಿ ಆದಿತಾಳ
ಕೇಳು ಖಳಕುಲ | ಶೀಲ ನೀನೊಲಿದು ||
ಪೇಳುವೆ ನಾ ಪೊಸ | ಲೀಲೆಯ ಲಾಲಿಸು ||೧೨೯||
ಚಿಣ್ಣನೋರ್ವನದೊಂದು | ಹೆಣ್ಣನು ಕರಕೊಂಡು ||
ಬಣ್ಣದಿಂ ರಥವೇರ್ದು | ತಿಣ್ಣ ಗರ್ವದೊಳೀಗ ||೧೩೦||
ಬಂದೆಮ್ಮ ವಿಪಿನವ | ನಿಂದು ಮುರಿದು ಮುದ ||
ದಿಂದಲಯ್ದುವನೆಲ್ಲಿ | ಗೆಂದರೆ ಪೇಳದೆ ||೧೩೧||
ತಡೆದರೆಮ್ಮನು ಕೊಂದು | ಕೊಡುಹುತಟ್ಟಿದ ನೋಡು ||
ನುಡಿವೆವೆನವನುರು | ಕಡುಗಲಿತನವ ||೧೩೨||
ರೂಪಿನೊಳಗೆ ಮದ | ನೋಪನು ವಿಕ್ರಮದಿ ||
ಭೂಪ ನಿಮ್ಮಯ್ಯನಾ | ಟೋಪಗಳಂತಿದೆ ||೧೩೩||
ಭಾಮಿನಿ
ಚರರ ನುಡಿಯನು ಕೇಳ್ದು ಕಂಗಳೊ |
ಳುರಿಯನುಗುಳುತ ಪ್ರಳಯ ಕಾಲದ |
ಹರನ ಪರಿಯಂತೆದ್ದು ತಾ ಗದ್ದುಗೆಯನಡಹಾಯ್ದು ||
ಕರದಿ ಧನುಶರವಾಂತು ಬಲು ಚ |
ಚ್ಚರದಿ ನರನ ಕುಮಾರನೊಳು ಸಂ |
ಗರವ ಮಾಳ್ಪೆನೆನುತ್ತ ನಡೆದನು ಕಲಿ ಘಟೋತ್ಕಚನು ||೧೩೪||
ಕಂದ
ಇಂತದ್ಭುತದಿಂದಸುರಂ |
ತಾಂ ತವಕದೊಳಯ್ದಿ ತಡೆದು ಪಾರ್ಥನಸುತನಂ ||
ಮುಂತರಿಯದೆ ಮಾತಾಡಿಸಿ |
ದಂ ತಾ ಪಂಥದಿ ಘುಡುಘುಡಿಸುತೆಮತಿರೌದ್ರದೊಳಂ || ||೧೩೫||
ರಾಗ ನೀಲಾಂಬರಿ ಏಕತಾಳ
ಆರೆಲವೊ ನಿನ್ನಯ ಪೆಸರೇ | ನೂರಾವುದು ದಾರ ಕುಮಾರ ||
ನಾರಿಯು ತಾನಿವಳಾರೀ ವಿಪಿನಕೆ | ಭೋರನೆ ನೀನಯ್ದಿದುದೇಕೆ ||೧೩೬||
ಪೋಗುವೆ ಮತ್ತೆಲ್ಲಿಗೆ ಪೇಳೆಲೊ | ಸಾಗದಿರು ಮುಂದಕೆ ಮರುಳೆ ||
ನೀಗಿದೆ ವ್ಯರ್ಥದಿ ನೀ ತನುವನು | ಮೇಗಿನ್ನು ಗತಿಯಾರು ನಿನ್ನ ಬೆಂಬಲಕೆ ||೧೩೭||
ಹಸುಮಗನಾಗಿಹೆ ನೋಡಲುಯೆ | ನ್ನೆಸುಗೆಗೆ ತಾಳುವೆಯೊ ಇನ್ನೆಂತು ||
ಮಿಸುಕದಿರೆಂದೆನುತಲಿ ಭೋರ್ಮೊರೆ | ದಸುರನು ನಿಂದಿರಲೆಂದನು ಕಂದ ||೧೩೮||
ರಾಗ ಸೌರಾಷ್ಟ್ರ ಅಷ್ಟತಾಳ
ಕೂಗಲೇಕೊ ಸುಮ್ಮನೆ ನೀ | ನೀಗ ದೈತ್ಯ ಪಿಶಾಚ ನಿ |
ನ್ನಾಗಮವ ಬಲ್ಲೆ ಕಾಣೊ | ಹೋಗಿನ್ನತ್ತತ್ತ ||೧೩೯||
ಅತ್ತ ಹೋಗೆಂದರೆ ಹೋಗಲ್ | ಮತ್ತಿಲ್ಲಿಗೆ ಬಂದುದಿಲ್ಲ |
ಗೊತ್ತಾವದೆಂದರೆ ಪಸುಳೆ | ಧೂರ್ತತನವೆ ||೧೪೦||
ಧೂರ್ತನಹುದಲ್ಲವೆಂಬು | ದರ್ತು ನೋಡು ದೈತ್ಯನೆನ್ನ |
ಅರ್ಥಕಾಗಿ ಬಂದುದಿಲ್ಲ | ಗುರ್ತು ಪೇಳ್ವರೆ ||೧೪೧||
ಕಳ್ಳನೇನೊ ಹೋಗಾದರೆ | ಒಳ್ಳಿತಾಗಿದೆ ಈ ಮಾತು |
ಬಳ್ಳು ಕಾಗೆಗಳ್ಗೆ ಗುರಿ | ಯಾದೆಲೊ ಕಂದ ||೧೪೨||
ಗುರಿಯು ನಾನೊ ನೀನೊ ತಿಳಿಯೈ | ದುರುಳ ಬಳ್ಳು ಕಾಗೆಗಳ್ಗೆ |
ಶರದ ಮೊನೆಯಿಂದ ತೋರ್ಪೆ | ನರರೆ ತಾಳಿಕೊ ||೧೪೩||
ರಾಗ ಶಂಕರಾಭರಣ ಮಟ್ಟೆತಾಳ
ನರನ ಕುವರ ಗರ್ವದಿಂದ ದುರುಳ ದೈತ್ಯನ |
ಜರೆಯಲಾತ ಭರದಿ ಭೋರ್ಮೊರೆವುತಾಕ್ಷಣ ||
ಉರಗಬಾಣವೆಸೆಯಲದರ ಸರಸದಿಂದಲಿ |
ಗರುಡ ಬಾಣದಿಂದ ತರಿದ ತರಳ ನಗುತಲಿ ||೧೪೪||
ವಾರುಣಾಸ್ತ್ರವೆಸೆಯೆ ದೈತ್ಯವೀರರೋಷದಿ |
ಮಾರುತಾಸ್ತ್ರದಿಂದಲದರ ಮುರಿದು ಮಧ್ಯದಿ ||
ಮೀರಿತೆಂದು ಖಳನು ಪರ್ವತಾಸ್ತ್ರವೆಸೆಯಲು |
ತೋರುತದರ ಖಂಡಿಸಿದನು ಕುಲಿಶಶರದೊಳು ||೧೪೫||
ಮಿಕ್ಕಿತೆಂದು ಸೊಕ್ಕಿನಿಂದಾಗ್ನೇಯಾಸ್ತ್ರವ |
ರಕ್ಕಸನೆಸೆಯೆ ಘಕ್ಕನದರ ತಿಳಿದು ಭಾವವ ||
ಬಿಕ್ಕು ಬಿರಿಯಲೆಚ್ಚನದಕೆ ವನಸುಶಸ್ತ್ರವ |
ಕಕ್ಕಸದಲಿ ಕಲಿ ಸುಭದ್ರೆಯಾತ್ಮಸಂಭವ ||೧೪೬||
ನೋಡಿ ಪುಣ್ಯಜನರಧೀಶನಮಿತ ಶಸ್ತ್ರವ |
ಮೂಡಿಗೆಗಳೊಳಿಪ್ಪುದುಗಿದು ಬಿಡಲು ಚೋದ್ಯವ ||
ಮಾಡಿ ಮನದಿ ಸವರುತಿರ್ದನಧಿಕ ರೌದ್ರವ |
ಪಾಡು ಪಂಥದಿಂದ ತಾಳ್ದು ಪಾರ್ಥನಂಶವ ||೧೪೭||
Leave A Comment