ರಾಗ ಪಂತುವರಾಳಿ ಮಟ್ಟೆತಾಳ

ಕಲಿ ಘಟೋತ್ಕಚ | ಕಾಣು | ತುಲಿದು ಸುರವ್ರಜ ||
ಚಲಿಸಿ ತಮ್ಮೊಳು | ಭೀತಿ | ಗೊಳುವ ತೆರದೊಳು      ||೧೪೮||

ಪರಮಶಕ್ತಿಯ | ತೆಗೆದ | ಸುರ ಸುಭದ್ರೆಯ ||
ತರಳಗಿಟ್ಟನು | ಚ | ಚ್ಚರದಿ ಧಿಟ್ಟನು ||೧೪೯||

ಬರುವ ಬಾಣದ | ಭೀತಿ | ಗಿರದೆ ಕಾಣದ ||
ಗುರುತ ಮರೆತರು | ತ್ರಿಪುರ | ಹರನ ಪ್ರಮುಖರು      ||೧೫೦||

ಸಿಡಿದವದ್ರಿಗ | ಳಾಗ | ಳೊಡನೆ ವಿಪಿನಗ ||
ಳೆಡೆಯ ತರುಗಳು | ಬೀಳ | ಲುಡುಗಣಂಗಳು         ||೧೫೧||

ಉದುರಿತವನಿಗೆ | ಕಡಲು | ಕುದಿದುದೀ ಬಗೆ ||
ಅದುಭುತಂಗಳಾ | ಬಾಣ | ದೊದಗಿತಾಗಳಾ          ||೧೫೨||

ಘೋರ ಶಕ್ತಿಯು | ಬಂದ | ಪಾರ ಮಹಿಮೆಯು ||
ಯಾರು ಪೊಗಳ್ವರು | ಧರೆಯೊಳ್ | ತೋರು ವೀರರು ||೧೫೩||

ಕಿಚ್ಚನುಗುಳುತ | ಬಂದು | ಚಚ್ಚುತಾಗಿ ತಾ ||
ಅಚ್ಯುತನಳಿಯಗೆ | ಬಿಡಲು | ಅಚ್ಚರಿಂ ಮಿಗೆ  ||೧೫೪||

ಕಂದ

ಇಂಥಾ ದೈತ್ಯನ ಶಕ್ತಿಯೊ |
ಳುಂ ತಳುವದೆ ಮೂರ್ಛೆಯಿಂದೆ ಮೆಯ್ಮರೆದೊರಗಲ್ ||
ಕಾಂತಾಮಣಿ ಸೌಭದ್ರೆಯು |
ಮಿಂತಿದನುಂ ಕಾಣುತಯ್ದೆಮತಿಶೋಕಿಸಿದಳ್ ||೧೫೫||

ರಾಗ ನೀಲಾಂಬರಿ ರೂಪಕತಾಳ

ಏತಕೆ ಮಲಗಿದೆ ರಥದಲಿ | ಮಾತುಗಳಾಡದೆ ದೈತ್ಯನೊ |
ಳೀತೆರದಿಂ ಸುಮ್ಮನೆ ಮಮ | ಜಾತನೆ ಜಡದಿಂದ ||
ಭೀತಿಗಳೇನೀ ದಾನವ | ನೇತರ ದೊಡ್ಡಿತು ತಿಳಿಯಲು |
ಭೂತಳದೊಳು ಪರಿಕಿಸಲೀ | ಕೋತಿಯು ನಿನಗಿದಿರೆ   ||೧೫೬||

ಕಾಲವು ಕಷ್ಟಗಳಾಯಿತು | ಬಾಲಕ ಪಣೆಯೊಳು ಬರೆದುದ |
ಮೇಲಾರೈ ಮೀರುವರೀ | ಮೂರ್ಲೋಕದೊಳಿನ್ನು ||
ಆಲೋಚಿಸೆ ನಿನ್ನಯ ಕೈ | ಕಾಲುಗಳ್ ತಣ್ಣಗಾದುದು |
ನಾಲಿಗೆಯೊಳಸರಿದಿದೆ ಕ | ಣ್ಣಾಲಿಗಳ್ ಮುಚ್ಚಿದವು     ||೧೫೭||

ನಾನೊಂದೆಣಿಸಲು ದೈವವು | ತಾನೊಂದೆಣಿಸಿತೆ ಹಾ ಹಾ |
ಕಾನನದೊಳು ಗತಿ ಯಾರೆನ | ಗೇನೆನ್ನಲಿ ವಿಧಿಯೆ ||
ದಾನವಮಥನನು ಮಾವನು | ಸೂನುವೆ ನಿನಗದರೊಳಗೆ |
ತಾನತಿಧರ್ಮನು ಯಮಜನು | ಕಾಣಲಿಕನಿಲಜನು    ||೧೫೮||

ಹಿರಿಯಪ್ಪಗಳಿವರೀರ್ವರು | ನೆರೆ ಪಾರ್ಥನು ಪೆತ್ತಾತನು |
ಕಿರಿಯಯ್ಯಂದಿರು ಕಲಿಗಳು | ವರ ಮಾದ್ರೀಸುತರು ||
ತರುಣಿ ದ್ರೌಪದಿ ಪತಿವ್ರತೆ | ಯರಿಗೆ ಶಿಖಾಮಣಿ ಕುಂತಿಯು |
ವರ ದೇವಿಯು ತಾನಿನ್ನೀ | ಕರಕರೆ ತಾಳುವರೆ         ||೧೫೯||

ಅಣ್ಣ ಘಟೋತ್ಕಚ ತಾನಿರೆ | ಚಿಣ್ಣನೆ ಸೈರಿಸುವನೆ ಈ |
ಪುಣ್ಯಜನೇಶನ ಬಿಡುವನೆ | ಬಣ್ಣಿಸಲೇಕಿರದೆ ||
ಹುಣ್ಣಿಮೆ ಚಂದ್ರನ ಕಾಂತಿಯ | ಬಣ್ಣದ ಮುಖ ಕಂದಿತೆ ಮು |
ಕ್ಕಣ್ಣನ ಕರುಣವು ಕಡೆಯಲಿ | ಕಣ್ಣಿಗೆ ಕನಸಾಯ್ತೆ        ||೧೬೦||

ನಂದನ ನಿನಗಾರಿದ್ದರು  | ಇಂದಿಗೆಯಿಲ್ಲದೆ ಹೋಯಿತೆ |
ಸಂದಿತೆ ಮತ್ತೆನ್ನಯ ಬರಿ | ದಂದುಗದಾಶೆಗಳು ||
ಇಂದಿರೆರಮಣನೆ ಹರಿ ಗೋ | ವಿಂದನೆ ರಕ್ಷಿಸಿಕೊಳ್ಳೈ |
ಯೆಂದಳಲುತ ಸೌಭದ್ರೆಯು | ಅಂದುರುಳಿದಳ್ ಧರೆಗೆ ||೧೬೧||

ಭಾಮಿನಿ

ಪರಿಪರಿಯ ದುಃಖಿಸುವ ಪಾರ್ಥನ |
ತರುಣಿಯನು ಈಕ್ಷಿಸುತ ಮತ್ತ |
ಚ್ಚರಿಯೊಳಾಕ್ಷಣ ಭೀತಿಯಂ ತಾಳ್ದಾಗ ಹೈಡಿಂಬಿ ||
ಹರ ಹರಾಯಿವಳಾರೆನುತ ಬಂ |
ದೆರಗಿ ಪದದಲಿ ಮಧುರವಚನದಿ |
ಸರಸಿಜಾಂಬಕಿಯೊಡನೆ ನುಡಿದನು ಪೊಡವಿಪಾಗ್ರಣಿಯೆ         ||೧೬೨||

ರಾಗ ತೋಡಿ ಆದಿತಾಳ

ಯಾರವ್ವ | ತಾಯೆ | ಯಾರವ್ವ      || ಪಲ್ಲವಿ ||

ಸುರರೊ ಮಾನವರೊ ಸಂಗರ ಶೂರನೀತ |
ಧುರದೊಳೆಮ್ಮೊಡನೆ ಸೆಣಸಲು ಪ್ರಖ್ಯಾತ ||
ಬರುವದೇಕಿಲ್ಲಿಗೆ ಬಳಿಕಲ್ಲಿ ಮಾತ |
ಮರೆಯದುಸಿರೆ ಮಾನಿನಿ ತಿಳಿದರ್ಥ || ಯಾರವ್ವ       ||೧೬೩||

ಈ ಕಲಿ ವೀರ ತಾನೇನಹ ನಿನಗೆ |
ವ್ಯಾಕುಲತೆಗಳ ಬಿಡು ಬಿಡೀ ಮೇಗೆ ||
ಸಾಕಾರಿ ಸರ್ವೇಶ ಸತ್ಯಸೌಂದರಿಯೆ |
ಏಕಾಕಿಯಾಗಿ ಧೃತಿಗೆಡುವರೆ ಹೀಗೆ || ಯಾರವ್ವ        ||೧೬೪||

ಯಮಜಾನಿಲಜಾ ಮಾದ್ರೀಕುಮಾರ |
ಅಮಿತಪರಾಕ್ರಮಿ ಪಾರ್ಥನು ಧೀರ ||
ಅಮಮ ಮತ್ತವರ್ಯಾರು ನಿಮ್ಮ ವಿಚಾರ |
ನಮಗೆ ತೊಳಲುತಿದೆ ತರುಣಿ ಗಂಭೀರ || ಯಾರವ್ವ   ||೧೬೫||

ಇಲ್ಲ ಘಟೋತ್ಕಚನೆಂದು ಹಂಬಲಿಸಿ |
ತಲ್ಲಣಿಸುತ ದುಃಖಿಸಿದೆಯಲ್ಲರಸಿ ||
ನಿಲ್ಲದೆ ಕುಂತಿ ದ್ರೌಪದಿಯರ ನೆನೆಸಿ |
ಘಲ್ಲಣೆಯಿಂ ಘೋಷಿಪೆ ಗುಣರಾಶಿ || ಯಾರವ್ವ         ||೧೬೬||

ಎಂದು ಈ ಪರಿಯ ಹೈಡಿಂಬಿಯು ನರನ |
ಮಂದಗಾಮಿನಿಯನ್ನು ನುಡಿಸಿ ಕೇಳ್ದವನ ||
ಮುಂದುವರಿಯಬೇಡವೆನುತಲೆ ನಾನಾ |
ಸಂದೆಹಗೊಲೆದಳು ನಂಬದಿನ್ನ || ಯಾರವ್ವ  ||೧೬೭||

ರಾಗ ಶಂಕರಾಭರಣ ತ್ರಿವುಡೆತಾಳ

ನಂಬಲಾರೆನು ಕೇಳೊ ದಾನವ | ರೆಂಬವರು ಕಪಟಿಗಳು ಮತ್ತೀ |
ಕುಂಭಿನಿಯೊಳದನೇನ ಹೇಳಲಿ | ಸಂಭ್ರಮಗಳ        ||೧೬೮||

ಹಿಂದೆ ಧರಣಿಜೆಗಳುಪಿ ದಶಶಿರ | ಬಂದು ಯತಿವೇಷದಲಿ ಮೈಮರೆ |
ದಿಂದುವದನೆಯನೊಯ್ದ ಕಾರಣ | ಕುಂದದೀಗ         ||೧೬೯||

ಯಾರು ಬಲ್ಲರು ನಿಮ್ಮೊಳವ ನೀ | ದೂರ ನಿಲ್ಲಿನ್ನೇನು ಮಾತುಗ |
ಳೀ ರಸೆಯೊಳೆನಗೀಗ ಸುಡು ಸುಡು | ಕಾರಿಯವನು   ||೧೭೦||

ಎನಲು ಹೈಡಿಂಬಿಯು ವಿಚಕ್ಷಣೆ | ಯನುನಯದ ಮಾತುಗಳ ಲಾಲಿಸಿ |
ಯನುವಿನಿಂ ತಾ ಪೇಳ್ದ ಮತ್ತಾ | ವನಿತೆಯೊಡನೆ      ||೧೭೧||

ರಾಗ ಮಾರವಿ ಏಕತಾಳ

ದೇವರ ಸಾಕ್ಷಿ ನಂಬಿಕೊಳ್ಳೆ ಇನ್ನು | ಧಾವತಿ ಪಡದೆ ಕೇಳ್ ತರಳೆ ||
ಯಾವ್ಯಾವ ಕಾಲಕ್ಕೇನೇನಾಹುದು | ಭೂವಲಯದಿ ತಿಳಿದವರ್ ಯಾರು  ||೧೭೨||

ಪೂರ್ವಾರ್ಜಿತಗಳ ಮೀರುವರ್ ಯಾರೌ | ತೋರ್ವಿ ಪ್ರಪಂಚಗಳೊಳಗೆ ||
ಮಾರ್ವೋವರು ತ್ರೈಮೂರ್ತಿಗಳಾದರು | ಸರ್ವ ಕಾಲವು ನಿರ್ವಹಿಸದಲೆ  ||೧೭೩||

ಕೊಟ್ಟೆನು ಭಾಷೆಯ ಬಿಟ್ಟೆನು ವೈರವ | ತುಟ್ಟತುದಿಗೆ ನಾ ಶಿವನಾಣೆ ||
ಶ್ರೇಷ್ಠಳೆ ನೀ ಬಂದಿಷ್ಟವನರುಹಲು | ಕಷ್ಟವನುಳಿದು ಕರುಣದಿಂದ         ||೧೭೪||

ರಾಗ ಘಂಟಾರವ ಝಂಪೆತಾಳ

ಹೀಗೆಂಬ ದೈತ್ಯನೊಳು | ನಾಗವೇಣಿಯು ನಯದೊ |
ಳಾಗಳುಸಿರಿದಳು ತ | ನ್ನಾಗಮವನೆಲ್ಲ       ||೧೭೫||

ಖಳರಾಯ ಕೇಳಯ್ಯ | ಕಲಿಪಾರ್ಥನರಸಿ ತಾ |
ನಳಿನಾಕ್ಷನನುಜೆ ಮಂ | ಗಲವತಿಯಾದ      ||೧೭೬||

ಸೌಭದ್ರೆಯೆಂಬವಳು | ಸೌಭಾಗ್ಯವಂತೆಯೀ |
ದೌರ್ಭಾಗ್ಯಕೊಳಗಾದೆ | ನೈ ಬಾಹುಬಲನೆ   ||೧೭೭||

ಭಾವಿಸಲು ಧರ್ಮನೃಪ | ಪಾವಮಾನಿಗಳವರು ||
ಭಾವವಂದ್ಯರೆನಗೆ ಯಿ | ನ್ನಾವ ಸಂಶಯವು  ||೧೭೮||

ವರ ಮಾದ್ರಿಸುತರೆಂಬ | ತರಳರ್ ತಾವ್ ಮೈದುನರು |
ಹಿರಿಯಕ್ಕ ದ್ರೌಪದಿಯು | ನೆರೆ ಕುಂತಿದೇವಿ   ||೧೭೯||

ಅತ್ತೆಯು ಘಟೋತ್ಕಚನು | ಪುತ್ರ ಭೀಮಂಗವನು |
ಮತ್ತೀಕುವರಗೀಗ | ದೈತ್ಯನಗ್ರಜನು ||೧೮೦||

ಕಂದನಭಿಮನ್ಯುವಿನ | ನೊಂದು ಕಾರ್ಯನಿಮಿತ್ತ |
ಬಂದೆವೈ ದ್ವಾರಕೆಗೆ | ಯೆಂದೆನುತವಿಲ್ಲಿ       ||೧೮೧||

ಏನನುಸಿರಲಿ ದೈವ | ವೇನ ಮಾಡಿತು ನೋಡು |
ದಾನವಾಧಿಪನೆಯೆಂ | ದಾ ನಾರಿ ನುಡಿಯೆ   ||೧೮೨||

ಕಂದ

ಬಳಿಕೆಂದಾ ಸೌಭದ್ರೆಯ |
ನೊಲವಿಂ ಸಂತವಿಸಿ ದೈತ್ಯನಭಿಮನ್ಯುವಿಗಂ ||
ಬಳಿದುಂ ಸಂಜೀವನಮಂ |
ಚಳಕದೊಳೆಬ್ಬಿಸಿಯೆ ಪೇಳ್ದನೊಂದುತ್ತರಮಂ ||೧೮೩||

ಭಾಮಿನಿ

ತಾಯೆ ಲಾಲಿಪುದೀಗ ಮತ್ತಾ |
ವಾಯುಸುತನಾತ್ಮಜನು ತಿಳಿಯ |
ಲ್ಕಾಯತಾಂಬಕಿ ವರ ಘಟೋತ್ಕಚನೆನಿಪ ನಾನಿದಕೊ ||
ಪ್ರೀಯನೀಯಭಿಮನ್ಯುವೀ ಬರಿ |
ಮಾಯಕವ ನಾ ತಿಳಿಯದಾದೆನು |
ತಾಯೆ ಪಾಲಿಸು ತಪ್ಪನೆಂದೆರಗಿದನು ಹೈಡಿಂಬಿ       ||೧೮೪||

ಪಾದಕೆರಗಿದ ಪಿರಿಯ ಸುತನನು |
ಮೋದದಿಂ ತೆಗೆದಪ್ಪಿ ಮನ್ನಿಸೆ |
ಸಾಧುಸಜ್ಜನರೆರೆಯನಸುರನು ನಲಿವುತನುನಯದಿ ||
ಸಾದರದಿ ಕೇಳಿದನು ಕೃಷ್ಣನ |
ಸೋದರಿಯೊಳತಿಜವದಿ ದ್ವಾರಕೆ |
ಗಯ್ದುತಿಹ ಸೌಕರ್ಯವೇನೆಂದೆನುತ ಕೈಮುಗಿದು      ||೧೮೫||

ಕಂದ

ಕೈಮುಗಿದುಂ ಕೇಳ್ದಸುರಂ |
ಗೈಮೊಗನುರುಸಖನ ಸೋದರಿಯು ಸಂತಸದಿಂ |
ವೈಮಾನಸವನ್ನುಳಿದುಂ |
ಹೈಮವತಿಯ ವೋಲ್ ಕಟಾಕ್ಷದಿಂದಿಂತೆಂದಳ್        ||೧೮೬||

ರಾಗ ಅಹೇರಿ ಝಂಪೆತಾಳ

ಲಾಲಿಸೊ ವೈರಿಗಜಸಿಂಹ ಸತತ | ಗುಣ | ಶೀಲ ದೈತ್ಯಾಗ್ರಣಿಯೆ ವಿಕ್ರಮದ ಕಣಿಯೆ        || ಪಲ್ಲವಿ ||
ಛಲದಿಂದಲೆನ್ನ ಹಿರಿಯಣ್ಣನೆಂಬಾತ ಕುರು |
ಕುಲದ ಕೌರವನಾತ್ಮಜನಿಗೆ ದಾರನು ಕೇಳ |
ದೊಲವಿನಿಂ ತನ್ನ ಸುತೆಯನು ಕೊಡುವೆನೆಂದೆನುತ |
ನಿಲದೆ ಗಜಪುರಿಗೆ ತಾನಯ್ದಿ || ದಾಯಾದ್ಯ |
ರಲಿ ನೇಹಮಂ ಬಳಸಿ ಮುದದಿ || ನಿಶ್ಚಯತಾಂ |
ಬುಲವಿತ್ತು ಭರದೊಳನುನಯದಿ || ದೈವಜ್ಞ
ರಲಿ ಲಗ್ನಮಂ ಬರೆಸಿ ಬಹಳ ದೃಢಗಳಲಿ      ||೧೮೭||

ಇದಕೊ ನಾಳಿನ ಷಷ್ಠಿಯಲ್ಲ | ದಿರಲಾ ದಶಮಿ |
ಯುದಯದೊಳೆರಡು ಲಗ್ನದೊಳೊಂದು ಲಗ್ನಕ್ಕೆ |
ಒದಗಿನಿಂದೆಲ್ಲರು ಬರ್ಪುದೆಂದೆನುತಾಗ |
ಮದಮುಖರಿಗರುಹಿ ದ್ವಾರಕೆಗೆ || ಬಂದನೆಂ |
ಬುದ ಕೇಳ್ದೆನಯ್ಯ ನಾ ಹೀಗೆ || ಈ ಮಾತ |
ಪದುಮನಾಭಂಗರುಹಿ ಮಿಗೆ || ಪೊರಟೆನೈ |
ಸದನದಿಂ ಸುತನೊಡನೆ ಸಟೆಯಲ್ಲೆ ಮೇಗೆ   ||೧೮೮||

ಆಡಿಗೆರಗುತಗ್ರಜನೊಳೊಡನೆನ್ನ ಚಿಣ್ಣನಿಗೆ |
ಕೊಡುವದೊಳ್ಳಿತು ಕುವರಿಗಿದು ಸೋದರಿಕೆ ಸಹಜ |
ಮಿಡುಕದಿರು ಮನದೊಳೆಂದೆನುತ  ಮಾತಾಡಿದರೆ |
ನುಡಿಯದಾದನು ನೀತಿಗಳನು || ನೋಡು |
ಕಡುಗಲಿಯೆ ಕಾರ್ಯಗಳನಿನ್ನು || ಇದಕಿಲ್ಲಿ |
ತಡವಾಯಿತೇನ ಪೇಳುವೆನು || ಇನ್ನಾದರ್ |
ನಡೆಯಬೇಕೈ ಚಚ್ಚರದಿ ಪೇಳ್ವುದೇನು        ||೧೮೯||

ವಚನ

ಇಂತೀ ಪ್ರಕಾರದಿ ಸೌಭದ್ರೆ ಘಟೋತ್ಕಚನೊಳ್ ಪೇಳಲಾ ಮಾತಿಗಂ ಮತ್ತವನಿಂತೆಂದನು –

ರಾಗ ಸೌರಾಷ್ಟ್ರ ತ್ರಿವುಡೆತಾಳ

ಮಾತೆ ಮಾತಿನ್ನೇನಿದಕೆ ಸಹ | ಜಾತಗೀ ಕಾರ್ಯವನು ಮಾಡಲು |
ನಾ ತೆರಳುವೆನು ಹರಿಯೆಡೆಗೆ ನಡೆ | ಸಾತಿಶಯದಿ    ||೧೯೦||

ನಿಧಿಯಿರಲು ದಾರಿದ್ರ್ಯವೇತಕೆ | ಸದನ ತಾನಿರಲಡವಿ ಯಾತಕೆ |
ಕದವಿರಲು ತಟ್ಟಿಗಳದ್ಯಾತಕೆ | ಪದುಮಗಂಧಿ ||೧೯೧||

ಸರಸಿಜಾಕ್ಷನ ಕೃಪೆಯಿರಲು ಪರಿ | ಪರಿಯ ಚಿಂತೆಗಳೇನು ಫಲ ಹಲ |
ಧರನದೇನಜ್ಞಾನಿಯೇ ಸ | ಚ್ಚರಿತೆ ನೋಡಾ ||೧೯೨||

ಆದರಿದರೊಳು ಮಿಗುವರಿದರೀ | ಕೈದುಗಳು ಕುಡುಗೋಲದಾಯಿತೆ |
ಕೊಯ್ದುಬಿಡುವೆನು ಕೊರಳ ಕುರುಕುಲ | ವಾದಿಯಾಗಿ  ||೧೯೩||

ಬಿಡುವೆನೇ ಹಲಧರನ ಸುತೆಯನು | ಕೊಡದುಳಿದರೀ ತಮ್ಮಗಿನ್ನೆಲೆ |
ಮಡದಿಯರ ಮಾಣಿಕ್ಯವೇ ಕೇಳ್ | ದೃಢಗಳಿಂದ       ||೧೯೪||

ಭಾಮಿನಿ

ವರ ಘಟೋತ್ಕಚನಿಂತೆನುತ ಸ |
ಚ್ಚರಿತೆ ಸೌಭದ್ರೆಯೊಳು ಸೊಬಗಿಂ |
ದೊರೆದು ರಥದಿಂದಿಳಿಸಿಯಭಿಮನ್ಯುವಿನ ಮನ್ನಿಸುತ ||
ಭರದಿ ಪೆಗಲನ್ನೇರಿಸುತ್ತೀ |
ರ್ವರನನಿಲವೇಗದಲಿ ನಿರ್ಜರ |
ರೆರೆಯ ಮೆಚ್ಚುವ ತೆರದಿ ದ್ವಾರಕೆಗಯ್ದಿದನು ಭೂಪ     ||೧೯೫||

ಕಂದ

ಬಳಸಿದ ನಿಶಿಯೊಳಗೊರ್ವರ್ |
ತಿಳಿಯದ ತೆರದಿಂದ ತವಕದೊಳಗಾ ದೈತ್ಯಂ ||
ನಳಿನಾಕ್ಷನ ನಿಲಯದ ಮುಂ |
ದಿಳುಹಿಸುತೀರ್ವರನುಮೈದೆ ಮಿಗೆ ನಿಂದನವಂ        ||೧೯೬||

ತಂಗಿಯ ಬರವಂ ಕೇಳು |
ತ್ತಂ ಘಳಿಲನೆ ಕೃಷ್ಣ ನಗುತವಳಕರೆಸಲ್ಕಂ ||
ಅಂಗನೆ ಸೌಭದ್ರೆಯು ಮಾ |
ಸಂಗರಶೂರರ್ ಸಮೇತಮಯ್ದುತೆ ಮಣಿದಳ್         ||೧೯೭||

ದ್ವಿಪದಿ

ಮಣಿದನುಜೆಯಂ ನೆಗಹಿ  ಮಾಮನೋಹರನು |
ವಿನಯದಿಂ ಮನ್ನಿಸುತಲವಳ ಸೂನುವನು   ||೧೯೮||

ಪರಸಿ ಪದುಳದಿ ಘಟೋತ್ಕಚನ ಕಾಣುತ್ತ |
ಪರಮಪ್ರೀತಿಯೊಳು ಸತ್ಕರಿಸಿದನು ನಗುತ  ||೧೯೯||

ಕೇಳಿದನು ಕುಶಾಲದಿಗಳನು ದೈತ್ಯನೊಳು |
ತಾಳಿ ಸಮ್ಮೋದವನು ಹರಿಯು  ಸರಸದೊಳು         ||೨೦೦||

ಮಾತಾಡಿಸಿದನು ಮಮತೆಯಲಿ ಮತ್ತಾಗಾ |
ಯಾತುಧಾನಾಗ್ರಣಿಯನಯ್ದೆ ತಾ ಬೇಗ       ||೨೦೧||

ಏನಯ್ಯ ನೀ ಬಂದ ಕಾರ್ಯವೇನೆನುತ |
ವೈನತೇಯಧ್ವಜನು ಬೆಸಗೊಳಲು ದೈತ್ಯ     ||೨೦೨||

ಪಾದಕೆರಗುತಲಿ ಪದುಳದಿ ಬಂದಹದನ |
ಮಾಧವನಿಗರುಹಿದನುಮಹಿತವನದಹನ     ||೨೦೩||

ರಾಗ ಕಾಂಭೋಜಿ ಏಕತಾಳ

ಏನ ಹೇಳಲಯ್ಯ ಸ್ವಾಮಿ ಏನ ಹೇಳಲಿ | ನ |
ವೀನವಾದ ಬಿನ್ನಪದ ನಿನ್ನೊಡನಿಲ್ಲಿ  || ಪಲ್ಲವಿ ||
ಆದರೀ ಕಿರಿಯವ್ವ ಸೌಭದ್ರೆ ದುಗುಡದಿ | ತ್ವತ್ |
ಪಾದದರುಶನಕೆಂದು ಮಗನೊಳ್ ಪ್ರೇಮದಿ ||
ಸಾದರದಿ ರಥವನೇರ್ದು ಬರಲು ವೇಗದಿ | ಕಂಡೆ |
ಹೇ ದಯಾನಿಧಿಯೆ ನಾನು ಎನ್ನ ವಿಪಿನದಿ    ||೨೦೪||

ಯಾರವ್ವ ನೀನೆಲ್ಲಿಗೆ ಪಸುಳೆಸಹಿತಲಿ | ಈ |
ಘೋರ ಕಾನನದಿ ಪೋಪೆಯೋರ್ವಳೆನುತಲಿ ||
ದಾರಿಯಡ್ಡಕಟ್ಟಿ ಕೇಳಲಾಗ ಮನದಲಿ | ನೀ |
ನಾರೆಂದೆನುತಲಿ ಎನ್ನ ನುಡಿಸಿದಳಲ್ಲಿ         ||೨೦೫||

ನುಡಿಸಲೆನ್ನ ನಿಜವ ಪೇಳಲ್ ಮರುಕದಿ ತಾನು | ಈ |
ಮಡದಿಯರ್ಮೋಹನ್ನೆ ತನ್ನ ವೃತ್ತಾಂತವನು ||
ಬಿಡದುಸಿರಿದಳೆನ್ನೊಡನೊಂದು ಸ್ಥಿತಿಯನು | ಎ |
ನ್ನೊಡೆಯ ಕೇಳಲದಕಾಶ್ಚರ್ಯಗಳಾಯಿತೇನು         ||೨೦೬||

ಆ ಕ್ಷಣಮೀರ್ವರನು ಪೆಗಲನೇರಿಸಿ | ಕಮ |
ಲಾಕ್ಷ ಕರೆತಂದೆನಯ್ಯ ತಂದೆ ಲಾಲಿಸಿ ||
ಈ ಕ್ಷಿತಿಯೊಳ್ ರಕ್ಷಿಪುದು ಸತತ ಭಾವಿಸಿ | ಸರ್ವ |
ಸಾಕ್ಷಿಯಾದ ಮೂರ್ತಿಯೆ ನಿನ್ನೊಳವ ತೋರಿಸಿ        ||೨೦೭||

ಎನುತ ದೈತ್ಯನೆರಗಲಾಗ ನಿತ್ಯತೃಪ್ತನು | ಮುದ್ದು |
ವನಿತೆ ವೈದರ್ಭೆಯ ನೋಡಿ ನಗುತಲೆಂದನು ||
ದನುಜಾಗ್ರಣಿಯೆ ನೀ ಪೇಳು ಪೇಳೆಲ್ಲವನು | ತಂಗಿ |
ಯನುನಯದಿ ನುಡಿದುದನೆನಲುಸಿರ್ದನಸುರನು       ||೨೦೮||

ರಾಗ ಮಾರವಿ ಏಕತಾಳ

ದೇವರ ದೇವ ಬಿನ್ನಪವ | ಭಾವಿಸಯ್ಯ | ಬಳಿಕ ಒಡೆಯನೆ ಜೀಯ        || ಪಲ್ಲವಿ ||

ನಿನ್ನಗ್ರಜನು | ತಾನು | ತನ್ನ ಸುತೆಯನ್ನು ||
ಕುನ್ನಿ ಕೌರವನಾ | ಮಗಗೆ | ಕೊಡುವನಂತೆನ್ನ         ||೨೦೯||

ದುರುಳ ದಾಯಾದ್ಯ | ರವರು | ಹರುಷದಿ  ಈಗ |
ಬರುವರಂತಯ್ಯ |  ಭರದಿ | ಸಿರಿಯ ಸುಪ್ರೀಯ        ||೨೧೦||

ನಾಳಿನ ಷಷ್ಠಿಗೆ | ಲಗ್ನ | ಘಳಿಗೆಯೊಲುಮೆಗೆ ||
ಸೋಲದೆ ಬಹುದಂತೆ | ನಿಲ್ಲದೆ | ಕಾಲವ್ಯಾಳ್ಯದಿ ಮತ್ತೆ ||೨೧೧||

ಈ ವಾರ್ತೆಗಳನು | ಕೇಳುತ | ಧಾವತಿಯಿಂ ತಾನು ||
ದೇವಿ ಸುಭದ್ರೆಯನು | ಬಂದಿಹ | ಳೀ ವಿವರವದೇನು  ||೨೧೨||

ವಾಶಿ ಪಂಥಗಳಿರ | ಲ | ಕ್ಷ್ಮೀಶನಿದಕೆ ಕುವರ ||
ನೇಸರವನು ಭಾರ | ನಿನ್ನದು | ಕೇಶವ ಗಂಭೀರ       ||೨೧೩||

ವಚನ

ಇಂತೆಂದು ಘಟೋತ್ಕಚಂ |  ನುಡಿಯಲಾ ಮಾತಿಗಂ ಶ್ರೀಕಾಂತನು ಸಂತಸಂ ತಾಳಿ ಕಾಂತಾಶಿರೋಮಣಿಯಾದ ಸೌಭದ್ರೆಯಂ ಸಂತಯಿಸಿ ಘಟೋತ್ಕಚನೊಳ್ ಮತ್ತಿಂತೆಂದನು –

ರಾಗ ಸುರುಟಿ ಏಕತಾಳ

ಲಾಲಿಪುದಸುರೇಶ | ಈ ಕಾರ್ಯವ | ಕೇಳಿದೆನೈ ತೋಷ ||
ಮೇಲುವರಿದಿದೆಯಣ್ಣ | ನೋಲಗದಲಿ ಮೂರ್ಖ |
ರೋಲು ಮತಿಗಳು ವಿ | ತಾಳಿಸಿತೇನೆಂಬೆ    ||೨೧೪||

ಆದರಿನ್ನೊಂದಿಹುದು | ಅದಕೆ ತಕ್ಕ | ಸಾಧನವನು ಮಾಳ್ಪುದು ||
ಹಾದಿಯಲ್ಲದೆ ಬೇರೆ | ವಾದಿಸಲೇನುಂಟು |
ಕಾದುವದೊಳ್ಳಿತಲ್ಲ | ಬಲ್ಲ ಪಿರಿಯರೊಳು     ||೨೧೫||

ನೀತಿಗಳಲ್ಲದಿರೆ | ಮಾಡುವದೇನ್ | ಮಾತಿಗೆ ಬಳಿಕರ್ಯಾರೆ ||
ಆತುರಬಟ್ಟರ | ಹುದೆ ಕಾರ್ಯ ಸುಮ್ಮನೆ |
ಯಾತುಧಾನನೆ ಯುಕ್ತಿ | ಯಿಂ ಗೆಲಬೇಕಯ್ಯ ||೨೧೬||

ಮೇರೆ ತಪ್ಪಿದ ನದಿಯನ್ನು  | ದಾಟಲು ಹರ | ಗೋಲದಲ್ಲದೆ ತಾನಿನ್ನು ||
ಯಾರಿಗಾದರು ಪೊಕ್ಕು | ಸೇರಲುಂಟೇ ದಡವ |
ಧಾರಿಣಿಯಲಿ ಬಲು | ಶೂರರಿನ್ನಾದರು        ||೨೧೭||

ಭಾಮಿನಿ

ಎಲವೆಲವೊ ದೈತ್ಯೇಶ ಕೇಳೈ |
ಹಲವು ಮಾತಿಂದೇನು ನಾಳಿನ |
ಬೆಳಗವೆಂಬುದರೊಳಗೆ ಕೌರವಬಲವನನಿತುವನು ||
ಬಳಿಕ ನೀ ಮಾಯದಲಿ ಸೃಷ್ಟಿಸಿ |
ನಿಲಿಸು ದಿಬ್ಬಣ ಬಂದ ತೆರದಲಿ |
ನಲವಿನಿಂ ಪುರಬಾಹ್ಯ ವಿಪಿನದಿ ಚಚ್ಚರದೊಳೆಂದ      ||೨೧೮||