ಕಂದ

ದಶಮಿಯ ಲಗ್ನಕೆ ಕೌರವ |
ವಿಸರಂ ನಡೆತಪ್ಪುದೆಂಬ ವಾರ್ತೆಯ ಕೇಳೈ ||
ಅಸುರನೆ ನೀನದರೊಳು ವಿರ |
ಚಿಸು ಮಾಯದಿ ನಾಳಿನ ಷಷ್ಠಿಯ ಲಗ್ನಕವರಂ         ||೨೧೯||

ಇಂತೆನೆ ಶ್ರೀಕಾಂತಂ ಕೇ |
ಳ್ದುಂ ತಳುವದಲಾ ಘಟೋತ್ಕಚಂ ಹರುಷದೊಳುಂ ||
ನಿಂತುಳಿದಯ್ದಿವರಂ ತಾ |
ಕಂತುಪಿತಂಗಯ್ದೆ ಬಿನ್ನಹವ ಮಾಣ್ದನಣಂ     ||೨೨೦||

ರಾಗ ಮಾರವಿ ಏಕತಾಳ

ಸ್ವಾಮಿ ಲೇಸಾಯಿತೀ ಕಾರ್ಯದಪ್ಪಣೆಯಿ | ನ್ನೀ ಮಹಿಯೊಳಗೆನಗೆ ||
ನೇಮಿಸಿದಂದದಿ ಮಾಳ್ಪೆ ವಿಚಾರಿಪು | ದೈ ಮಮತೆಯೊಳೆಮಗೆ ||೨೨೧||

ನಿನ್ನ ಕರುಣವಿರಲಿದಕನುಮಾನಗ | ಳಿನ್ನೇತಕೆ ಬರಿದೆ ||
ಹೊನ್ನೊಂದಿರೆ ದಾರಿದ್ರ್ಯ ಸಂಭವಿಪುದೆ | ಪನ್ನಗಾರಿಧ್ವಜನೆ       ||೨೨೨||

ಎಂದೆನುತೀಪರಿಯಿಂದ ಘಟೋತ್ಕಚ | ನಂದು ವಿಪಿನದೆಡೆಗೆ ||
ಬಂದು ಸೃಷ್ಟಿಸಿದಾನಂದದಿ ಕುರುಬಲ | ವೃಂದವ ಮಾಯದಲಿ  ||೨೨೩||

ವಾರ್ಧಕ

ಧಾರಿಣೀಪತಿ ಕೇಳು ಕೌರವಾದ್ಯಖಿಲ ಸುಕು |
ಮಾರ ಕರ್ಣ ದ್ರೋಣ ಭೀಷ್ಮ ಮುಖ್ಯರನಾಗ |
ಭೂರಿ ಸೇನಾದ್ಯಮಿತ ನಾರಿಯರ ನಿವಹಮಂ ಮಾಯೆಯಿಂ ಸೃಷ್ಟಿಸುತಲಿ ||
ಭೇರಿ ಕಹಳಾರವಗಳಾರುಭಟೆಯಿಂದಯ್ದೆ |
ದ್ವಾರಕೆಯ ಬಾಹ್ಯವಿಪಿನದಿ ಕಲಿಘಟೋತ್ಕಚಂ |
ತೋರುತಿಹ ಸೂರ್ಯೋದಯಾನಂತರದಿ ನಿಲಿಸಿ ಮೆರೆದನೇನ್ ವೈಚಿತ್ರ್ಯಮಂ     ||೨೨೪||

ವಚನ

ಇಂತೀ ಪ್ರಕಾರದಿಂ ಘಟೋತ್ಕಚಂ ಮಾಯಾಕೌರವರಂ ನಿರ್ಮಿಸಿ ಪುರಬಾಹ್ಯದೊಳ್ ನಿಲಿಸಲಾ ವೇಳ್ಯದೊಳ್ ಮಾಯಾಚರನಯ್ದಿ ಹಲಧರನೊಡನಿಂತೆಂದನು –

ರಾಗ ಸುರುಟಿ ಆದಿತಾಳ

ಯಾದವಾಗ್ರಣಿಯೆ ಕೇಳು | ಸಂತತ | ನೀ ದಯದಿಂದೇಳು ||
ಆದರಿದಕೊ ಕುರುಭೂಪಾಲನು ಸುವಿ | ನೋದದಿ ದಿಬ್ಬಣವಯ್ದಿದನಿಲ್ಲಿಗೆ   ||೨೨೫||

ಪುರಬಾಹೆಯೊಳಿಹರು | ಭೀಷ್ಮಮು | ಖ್ಯರು ಸನ್ಮುನಿವರರು ||
ಧುರವಿಜಯರು ಕರ್ಣಾಶ್ವತ್ಥಾಮರು | ಪರಮೋಲ್ಲಾಸದಿ ಪರಿತಂದಿಹರೈ   ||೨೨೬||

ಈ ದಿನ ಷಷ್ಠಿಯಲಿ | ಲಗ್ನವ | ಸಾಧಿಸಲೆನುತಲ್ಲಿ ||
ಕಾದಿಹರತಿ ಸಂಭ್ರಮದೊಳಿದಿರುಗೊಳ | ಲಯ್ದುವುದೈ ತಡೆಯದೆ ತವಕಗಳಿಂ     ||೨೨೭||

ಎಂದ ಚರನ ನುಡಿಯ | ಲಾಲಿಸು | ತಂದು ರೋಹಿಣಿತನಯ ||
ಚಂದವಾಯ್ತೆನುತವನನು ಮನ್ನಿಸಿ ನಡೆ | ತಂದನು ಶ್ರೀಗೋವಿಂದನ ಕರೆಯಲು   ||೨೨೮||

ಕಂದ

ಬಂದಗ್ರಜನಂ ಕಾಣು |
ತ್ತಂದು ಶ್ರೀಕೃಷ್ಣನಯ್ದೆ ಪದಕೆರಗಲ್ಕಂ ||
ಚಂದದಿ ಪರಸುತ ತಾನಿಂ |
ತೆಂದಂ ಹಲಧರನುಮಾಗಲತಿ ಸಂಭ್ರಮದೊಳ್       ||೨೨೯||

ರಾಗ ಮಧ್ಯಮಾವತಿ ಆದಿತಾಳ

ಕೇಳು ಶ್ರೀಕೃಷ್ಣ ಕೌರವೇಶ್ವರನ | ಬಾಲಗೆ ಕನಕಾಂಗಿಯ ಕೊಡುವೆನಿದಕೊ         || ಪಲ್ಲವಿ ||
ಈ ದಿನದಿರುಳಿನೊಳಯ್ದು ಗಳಿಗೆಯಲ್ಲಿ |
ಸಾಧಿಸಬೇಕು ಲಗ್ನವನು ಮತ್ತೆ ||
ಕಾದುಕೊಂಡಿದೆ ಕುರುನೃಪನ ದಿಬ್ಬಣವು ತಾ |
ನಯ್ದಿ ವಿಪಿನದಲ್ಲಿ ಹಾದಿಯ ನೋಡುತ್ತ        ||೨೩೦||

ತಡವ ಮಾಡದೆ ಬೇಗ ಇದಿರುಗೊಂಡವರನ್ನು |
ಬಿಡದೀಗ ಕರೆತಂದು ಇಳಿಸಬೇಕಯ್ಯ ||
ಪೊಡವಿಪರಿಲ್ಲದಿದ್ದರೆ ಹಾಸ್ಯವನು ಮಾಳ್ಪ |
ರೊಡನೆ ಪೋಗುವರೇಳು ಮಡದಿಯರ್ ಸಹವಾಗಿ     ||೨೩೧||

ಎಂದಗ್ರಜನ ಮೊಗವ ನೋಡಿ ನಸುನಗುತಲಿ |
ಮಂದಹರ್ಷಗಳಿಂದ ಮಾರಮಣನು ||
ಬಂದುರುತರವಾದೊಂದುತ್ತರವನು |
ಸಂದೇಹವಿಡದೆ ಸಲ್ಲೀಲೆಯೊಳ್ ನುಡಿದನು   ||೨೩೨||

ರಾಗ ಭೈರವಿ ಆದಿತಾಳ

ಭಲಾ ಭಲಾ ಬಲು ಸಂತೋಷವಾಯಿತು | ಯೇನ ಹೇಳಲಿಯೆನ್ನಣ್ಣ ||
ಕುಲಾಲಭವನವ ಕುಲಜರು ಪೊಕ್ಕರೆ | ಬಳಸುವದೇನದು ತಾರ್ಕಣ್ಯ      ||೨೩೩||

ಮನೆಯಂಗಣದೊಳು ಕಲ್ಪತರುಗಳಿರೆ | ವನದೊಳಗಣ ಗಿಡಗಳ ಬಯಸಿ ||
ತನುಬಳಲಿಕೆಯಲಿ ತೊಳಲ್ವರೆ ತುದಿಯಲಿ | ಘನಪರಾಕ್ರಮಿಗಳು ಪಂಥದಲಿ       ||೨೩೪||

ನೀನೆಸಗಿದ ಕಾರ್ಯದ ಸಂಗತಿಯನು | ಮಾನವಾಗಿದೆಯೆನ್ನಯ ಮನಕೆ ||
ಹಾನಿವೃದ್ಧಿಗಳೇನಾಹುದೊ ಕಾಣದು | ಏನ ಹೇಳುವೆನೀ ಸಂಭ್ರಮಕೆ      ||೨೩೫||

ಎತ್ತಲು ಕುರುಕುಲವೆತ್ತಲು ಯಾದವ | ರೆತ್ತಲು ಪರಿಣಯದುತ್ಸಹವು ||
ಎತ್ತೆತ್ತಲು ನಾ ಕಾಣೆನು ಕಡೆಯಲಿ | ಮೃತ್ಯುಂಜಯನೆ ಬಲ್ಲನಿದಕೊ       ||೨೩೬||

ಮೂರ್ಖರ ಮನೆಯಲಿ ಮಾನಿಗಳಾದವರ್ | ನೀರ್ ಕುಡಿವುದು ನೀತಿಗಳೇನೈ ||
ವಾರ್ಕದ ಒಡವೆಯನೆನ್ನಲೆನ್ನನದನು | ತೋರ್ಕೆಗೆ ತನ್ನದಾಗುವುದೆ       ||೨೩೭||

ಪಿರಿಯರ ಕೂಡಿ ನಿತ್ಯಾತಗೆ ಸಲುಗೆ | ಯುತ್ತರಗಳು ನಮಗೆ ತಿಳಿಯಬರಿದೆ ||
ಹರುಷವಾಯ್ತಾಗುವ ಕಾರ್ಯವದಾಗಲಿ | ಪರಿಕಿಸೆ ಚಚ್ಚರದಲಿ ಬಳಿಕ     ||೨೩೮||

ಕಂದ

ಈ ರೀತಿಯೊಳಂ ಹಲಧರ |
ಗಾ ರಾಜೀವಾಕ್ಷ ಪೇಳ್ದು ಮತ್ತಿಂತೆಂದಂ ||
ಚಾರು ನಯೋಕ್ತಿಗಳಿಂದಂ |
ತಾ ರಾಜಿಸುತಯ್ದೆ ಚಿತ್ತದೊಳೆ ನಸುನಗುತಂ ||೨೩೯||

ತಂಗಿಯನುಳಿದೀ ಕಾರ್ಯದ |
ಸಂಗತಿಗಾಂ ಬರಲಯೋಗ್ಯವೆನಗಂ ಮುದದಿಂ ||
ಸಂಗರಶೂರನೆ ಪೋಗೈ |
ಮಂಗಲದಿಂದಾದ ಕಜ್ಜಮಂ ವಿರಚಿಸಲುಂ    ||೨೪೦||

ಭಾಮಿನಿ

ಹರಿಯು ತಾನಿಂತೆನಲು ಕೇಳ್ದವ |
ಗೊರೆಯದಲೆ ಬದಲುತ್ತರವ ಹಲ |
ಧರನು ವಸುದೇವಾದಿ ಸಾತ್ಯಕಿ ನಂದ ಮುಖ್ಯರನು ||
ಸಿರಿಯು ಮೊದಲಾದಷ್ಟಮಹಿಷಿಯ |
ರುರು ಮಹಾದೇವಕಿಯರೆಲ್ಲರ |
ಕರೆದನೈ ಪರಿಣಯದ ವಿಭವಕೆ ದೊರೆಯೆ ಕೇಳೆಂದ    ||೨೪೧||

ಕಂದ

ಹಲಧರನಿಂತೆನಲುಂ ಕೇ |
ಳ್ದೊಲವಿಂ ವಸುದೇವದೇವಕಿಯರಿಂತೆಂದರ್ ||
ನಳಿನಾಕ್ಷಂ ಬಾರದಿಹಾ |
ಕೆಲಸಕ್ಕಾವ್ ಬರಲಯೋಗ್ಯಮುಂ ನಡೆಯೆಂದರ್ ||    ||೨೪೨||

ರಾಗ ನಾದನಾಮಕ್ರಿಯೆ ಅಷ್ಟತಾಳ

ಇಂತೆಂದೆಲ್ಲರ ಮಾತ ಕೇಳುತ್ತ | ತ | ನ್ನಂತರಂಗದಿ ಕಿನಿಸ ತಾಳುತ್ತ ||
ಮುಂತಾಹದರಿಯದೆ ಹಲಧರ | ಬಲು | ಪಂಥದಿ ಬಂದ ಭಾವಿಸದಾರಾ  ||೨೪೩||

ಸಕಲ ಸನ್ನಾಹಯುಕ್ತಗಳಿಂದ | ಮಾಡಿ | ವಿಕಟವೆಂಬುದ ತಿಳಿಯದೆಯಂದ ||
ನಿಕಟವ ಪೊರಟನು ಮುದದಿಂದ | ಪರಿಣ | ಯಕೆ ನಡೆತಂದಿದಿರ್ಗೊಳಲೆಂದ       ||೨೪೪||

ಕಲಶಗನ್ನಡಿವಿಡಿದ ಸತಿಯರ | ಕೂಡಿ | ನಲವಿನಿಂದಲಿ ನಿಜಪರಿವಾರ ||
ದೊಲವಿನಿಂ ವಾದ್ಯರವಗಳಿಂದ | ಮತ್ತಾ | ಹಲಧರನಯ್ದಿದ ಗೆಲವಿಂದ    ||೨೪೫||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಕೇಳಿದೈ ಸಂತಸದೊಳೆಲೆ ಭೂ | ಪಾಲ ಹಲಧರನೀಪರಿಯ ಸ |
ಮ್ಮೇಳದಿಂ ದಿಬ್ಬಣವನಿದಿರ್ಗೊಳ  | ಲಾಲಯವನು     ||೨೪೬||

ಪೊರಟುಬರುತಿರಲಿತ್ತಲಾ ಶ್ರೀ | ವರನನುಜ್ಞೆಯೊಳಾ ಘಟೋತ್ಕಚ |
ಭರದಿ ರೋಹಿಣಿಯಾತ್ಮಜನ ಮಂ | ದಿರವ ಪೊಕ್ಕು    ||೨೪೭||

ಯಾರು ಕಾಣದ ತೆರದೊಳಾ ಸುಕು | ಮಾರಿ ಕನಕಾಂಗಿಯ ತೆರದಿ ಪ್ರತಿ |
ನಾರಿಯನು ನಿರ್ಮಿಸಿಯೆ ಭವನದಿ | ಬೇರೆ ನಿಲಿಸಿ      ||೨೪೮||
ಎತ್ತಿಕೊಂಡಯ್ದಿದನು ಹಲಧರ | ಪೆತ್ತ ಪುತ್ರಿಯ ಹರಿಯನಿಲಯಕೆ |
ಮತ್ತದೋರ್ವರು ತಿಳಿಯದಂದದಿ | ಸ್ವಸ್ಥದಿಂದೆ        ||೨೪೯||

ತಂದ ತರುಣಿಯ ಕಾಣುತಲೆ ಗೋ | ವಿಂದನಂತಃಪುರಕೆ ಕಳುಪಿಯೆ |
ಮಂದಹಾಸದಿ ಮನ್ನಿಸಿದ ತಾ | ನಂದು ಖಳನ         ||೨೫೦||

ಕಂದ

ಇತ್ತಂ ಹಲಧರ ಬೀಯಗ |
ನತ್ಯಧಿಕೋಲ್ಲಾಸದಿಂದಲಿದಿರ್ಗೊಂಡುಂ ತಾ ||
ನಿತ್ತುಡುಗೊರೆಯಂ ಮನ್ನಿಸಿ |
ಕೃತ್ರಿಮರಂ ಮನೆಗೆ ಕರೆದುತಂದಂ ಬಳಿಕಂ  ||೨೫೧||

ರಾಗ ಭೈರವಿ ಝಂಪೆತಾಳ

ಬಳಲಿ ಬಂದಿರಿ ನೀವು | ಕುಳಿರಿ ಗದ್ದುಗೆಯೊಳೆಂ |
ದೊಲವಿನಿಂ ಕೌರವರ | ಹಲಧರನು ನಗುತ  ||೨೫೨||

ಉಪಚರಿಸಿ ಪರಿಪರಿಯೊ | ಳಪರಿಮಿತ ಸಂತಸದಿ |
ಕೃಪೆಯಿಂದ ಸರ್ವರನು | ಶಪಥದಿಂದಾಗ    ||೨೫೩||

ಬಿಸಿಲೂಟ ಬೀಡಾರ | ದೆಸಕಗಳನಾಗಿಸುತ |
ಕುಶಲತರವಾಗಿ ಕುರು | ವಿಸರದೊಳೆ ನಲಿದು         ||೨೫೪||

ನಳಿನಾಪ್ತನಸ್ತಮಿಸೆ | ಘಳಿಗೆಬಟ್ಟಲನಿಡಿಸಿ ||
ಘಳಿಲನಾ ಷಷ್ಠಿಯಲಿ | ಘಳಿಗೆಯಯ್ದಕ್ಕೆ       ||೨೫೫||

ಧಾರೆಯನ್ನೆರೆದು ಸುಕು | ಮಾರಿಯಂ ಹಲಧರನು |
ನಾರಿಯಿವಳ್ ಮಾಯಾವಿ | ಕಾರಿಯೆಂಬುದನು        ||೨೫೬||

ಅರಿಯದಲೆ ಕಪಟದುರು | ಕುರುನೃಪಾಲನ ಸುತಗೆ |
ಸುರರು ಹಾಸ್ಯವ ಮಾಳ್ಪ | ತೆರದಿ ಸಂಭ್ರಮದಿ         ||೨೫೭||

ಭಾಮಿನಿ

ಇತ್ತಲಾ ಪುರುಷೋತ್ತಮನು ವರ |
ಸಪ್ತ ಋಷಿಗಳ ಬರಿಸಿ ಬಳಿಕಾ |
ಮತ್ತಕಾಶಿನಿ ದೇವಕೀವಸುದೇವರನುಮತಿಯಿಂ ||
ದತ್ಯಧಿಕ ಸಂತಸದೊಳಣ್ಣನ |
ನೊತ್ತಿಗೊಳಗಾದಖಿಲ ವಿಭವವ |
ಚಿತ್ತದಲಿ ನೆನೆಸುತ್ತ ನಗುತಲಿ ನೃಪತಿ ಕೇಳೆಂದ        ||೨೫೮||

ವಾರ್ಧಕ

ಕರಿರಾಜನಂ ಬಾಧಿಸಿದುದೇನು ಪುಷ್ಕರದಿ |
ಪರಿಶೋಭಿಸುವುದಾವುದವಧೂತನವನಿಯೊಳ್ |
ತಿರುಗುವನದಾರೊಡನದೆಂತಿರ್ಪ ಗೋರಕ್ಷನಂ ಪಿರಿಯನಾರ್ ತಿಳಿವುತೆ ||
ಬರೆದು ಮೂರಕ್ಷರದಿ ನಾಲ್ಕು ಪಙಯನಯ್ದೆ |
ನೆರೆ ಶೋಭಿಸುತ್ತರೊಳ್ ಮಧ್ಯದಕ್ಷರನೋದ |
ಲುರುತರದ ಪೆಸರಿನಬಲೆಯನನುಜೆಯಣುಗಗಂ ಧಾರೆಯನ್ನೆರೆದ ಹರಿಯು        ||೨೫೯||

ಕಂದ

ಬಳಿಕನುಜೆಯಭೀಷ್ಟವನುಂ |
ಸಲಿಸಿಯೆ ಚಳಕದಲಿ ವಧುವರರ ಮತ್ತವರಂ ||
ಖಳನೊಡನಿಂದ್ರಪ್ರಸ್ಥಕೆ |
ಕಳುಪಿದ ನಳಿನಾಕ್ಷನೆಂತೊ ಮಾಯೆ ವಿಚಿತ್ರಂ         ||೨೬೦||

ರಾಗ ಮಾರವಿ ಏಕತಾಳ

ಈ ಕಡೆಯಲಿ ಹಲಧರನತಿಸಂಭ್ರಮ | ದಾ ಕಡಲೊಳು ಮುಳುಗಿ ||
ಕಾಕು ಮಾಯಾ ವಧೂವರರನುಪಚರಿಸುತ | ನೇಕ ವಿಧಗಳಿಂದ          ||೨೬೧||

ಮಂಟಪದಲಿ ಕುಳ್ಳಿರಿಸಿ ಬಂದಿಹ ಬಹು | ನಂಟರ ಕರೆದೆಂದ ||
ಬಂಟರು ನೀವು ಕಾರ್ಯವ ಗೆದ್ದಿರಿ ನೀಲ | ಕಂಠನ ಕೃಪೆಯಿಂದ ||೨೬೨||

ಬಾರೈ ಕೌರವ ಕರ್ಣ ದ್ರೋಣಾ | ಚಾರ್ಯರು ಭೀಷ್ಮರುಗಳು ||
ಶೂರ ಶಕುನಿಯಶ್ವತ್ಥಾಮರು ಗಂ | ಭೀರದಿ ಹರುಷದಲಿ         ||೨೬೩||

ಭೂಮದ ಪಙಲಿ ಕುಳ್ಳೀರ್ವರು ವೇಗದಿ | ಕಾಮಿನಿಯರು ಸಹಿತ ||
ತಾಮಸವೇಕೆಂದೆನುತಲಿ ಹಲಧರ | ನಾ ಮಹಾಕೃತಕರನು     ||೨೬೪||

ಪೇಳುತ್ತೀಪರಿಯೊಳಗೌತಣವ ವಿ | ಶಾಲದಿ ವಿರಚಿಸುತ ||
ಮೇಲೆ ಚತುರ್ಥಿಯದಾಗಲು ಕುರುಭೂ | ಪಾಲರಿಗೊಂದು ದಿನ  ||೨೬೫||

ಭಾಮಿನಿ

ಭೀಗರೌತಣವೆಂದು ಮಾಡಲು |
ನಾಗಪತಿಯವತಾರಿಯಲಸದ |
ಲಾಗ ಗೃಹದಲಿ ಶಾಕಪಾಕಾದ್ಯಖಿಲ ಭಕ್ಷ್ಯಗಳ ||
ಮೇಗೆ ಚಚ್ಚರದಿಂದ ಮಾಡಿಸಿ |
ಭಾಗಧೇಯರೆ ಬನ್ನಿರೆನುತಲಿ |
ಕಯ್ಗಳನು ಬೀಸುತ್ತ ಕರೆದೆಲ್ಲರನು ಮನ್ನಿಸುತ ||೨೬೬||

ರಾಗ ಭೈರವಿ ಝಂಪೆತಾಳ

ಪಂಕ್ತಿಯಲಿ ಕುಳ್ಳಿರಿಸಿ ತಾಂ ತಳುವದಾ ಕ್ಷಣದಿ |
ಸಂತಸದಿ ಹಲಧರನು ನಗುತ ||
ಶಾಂತಿಯಿಂ  ಶ್ರೀಗಂಧಮಂ ತರಿಸಿ ಪೂಸಿದನ  |
ದೆಂತು ಮೋಹವೊ ಬಳಿಕ ಕುರುಭೂಪನೊಳು         ||೨೬೭||

ಎಡೆಗೆ ಭಕ್ಷ್ಯಾದಿಗಳ ಬಡಿಸಲಪ್ಪಣೆಯಿತ್ತು |
ಮಡದಿಯರ ಸಾಲ್ಗಳನು ಮನ್ನಿಸುತಲಿ ||
ಗಡೆಬಡೆಯೊಳಿರಲು ತಂದೊಡನೆ ಬೀಗರಿಗಿಕ್ಕ |
ಲಡಿಗಡಿಗೆ ಪೊರಟರ್ ಸಾಲ್ ಪಿಡಿದು ಜನರು ||೨೬೮||

ಈಕ್ಷಿಸುತ ನಿಂದಿರ್ದನಾ ಕ್ಷಮಾಪತಿಗಳಂ |
ರಾಕ್ಷಸಾಂತಕನಗ್ರಜನು ನಲವಿನಿಂದ ||
ತತ್‌ಕ್ಷಣದಿ ಮಾಯಾವಿಚಕ್ಷಣೆಯ ರೂಪಿಗಳು |
ಭಕ್ಷಿಸಲ್ಕನುವಾದರಮಿತವಾಗಿ       ||೨೬೯||

ಉಪ್ಪು ಉಪ್ಪಿನಕಾಯಿ ಹಪ್ಪಳದ ಹೆಡಿಗೆಗಳ |
ತುಪ್ಪಗಳ ಕೊಡಗಳನ್ನು ||
ಒಪ್ಪದಿಂದೊಬ್ಬೊಬ್ಬ ತಪ್ಪದೇ ತಿನ್ನುತಲಿ |
ಚಪ್ಪರಿಸಿ ನಾಲಿಗೆಯ ನಲಿವುತಿರ್ದ  ||೨೭೦||

ಶಾಕಗಳ ತರುತಲಿರಲೇಕ ತುತ್ತಿಗೆ ನುಂಗಿ |
ನೂಕು ತಲೆ ಬರಿಯ ಮಡಕೆಗಳನೊಡನೆ ||
ಸೋಕುತಲೆ ಭಕ್ಷ್ಯಗಳ ಬೇಕೆಂದರಿಲ್ಲದಲೆ |
ಕಾಕರೂಪಿಗಳು ನಲಿದರು ಸೌಖ್ಯದಿ ||೨೭೧||

ವಚನ

ಈ ಪ್ರಕಾರದಿ ಭೋಜನಂ ಗೆಯ್ದು ಮಾಯಾವಿಗಳ್ ಪರಿಹಾಸ್ಯಮಂ ಗೆಯ್ವುತಿರ್ದರದೆಂತೆನೆ-

ರಾಗ ಕೇದಾರಗೌಳ ಝಂಪೆತಾಳ

ಯಾಕೆ ಕೈ ತಡೆವಿರಯ್ಯ | ಬಡಿಸುವವ | ರಾ ಕಡೆಯನಿಂದು ಜೀಯ ||
ಶಾಕಾದಿಗಳ ತನ್ನಿರೊ | ಪರಿಹಾಸ್ಯ | ಸಾಕು ಬಿಡಿ ಬಿಡಿ ಕೇಳಿರೊ          ||೨೭೨||

ಅನ್ನಗಳ ಹೆಡಿಗೆಯಲ್ಲಿ | ಬಿಸಿಬಿಸಿಯ | ಚೆನ್ನೆಸೆವ ತೋವೆಯಲ್ಲಿ ||
ತಿನ್ನುವರೆ ತಡವಾಯಿತು | ಹಸಿವಿನಿಂ | ಕಣ್ಣಿನಲಿ ಜೀವ ಹೋಯ್ತು         ||೨೭೩||

ಹರವಿಯಾ ಸಾರತಂದು | ನಮಗೆ ಕುಡಿ | ವರೆ ಸುರಿವರಯ್ಯ ಬಂದು ||
ಒರಲುತಿದೆ ಪಂಕ್ತಿಯೆಲ್ಲ | ಹಲಧರನ | ಪರಿಯು ಸೊಗಸಾಯಿತಲ್ಲ        ||೨೭೪||

ತುಪ್ಪಗಳ ಕೊಡನ ಕಾಣೆ | ಆದರೊಂ | ದುಪ್ಪಿನಕಾಯ ಬಾನೆ ||
ಇಪ್ಪುದಾವಾವ ಕಡೆಯ | ಬಡಿಸಿ ನ | ಮ್ಮಪ್ಪಗಳು ಬಿಡಿ ವಿಡಾಯ         ||೨೭೫||

ನೀರು ಮಜ್ಜಿಗೆಯಿಲ್ಲವೆ | ಪಾಲ್ಮೊಸರ | ನ್ಯಾರು ಕಾಣದೇನಾದವೆ ||
ಯಾರು ಮಾಡಿಸಹೇಳಿದ | ರೌತಣವ | ನೀ ರಾಮಗಿನ್ನು ಬಿಡದ |೨೭೬||

ಬಿಸಿಯ ತೀರಿದರದೇನು | ಪದಾರ್ಥಗಳು | ಹಸಿಯಾದರಾಗಲಿನ್ನು ||
ಮಿಸುಕದಲಿ ತನ್ನಿರೆಂದು | ಮೊರೆಯಿಟ್ಟು | ರಸುರನುರು ಕೃತಕರಂದು     ||೨೭೭||

ಹೀಗೆಂದು ಹಾಸ್ಯವಾಡಿ | ಹಲಧರನ | ನಾಗ ಜರವುತಲೆ ಜೇಡಿ ||
ಬೇಗದಲಿ ತರುಣಿ ಸಹಿತ | ಮಲ್ಲಿಂದ | ಮೈಗರೆದರವರಾಡುತ   ||೨೭೮||

ಭಾಮಿನಿ

ಕಾಣುತೀಪರಿಯದುಭುತದ ಬಿ |
ನ್ನಾಣವನು ಹಲಧರನು ತನ್ನೊಳು |
ಮಾಣದಾಲೋಚಿಸುತ ಮತ್ತೀ ಚೋದ್ಯವೇನೆನೆನುತ ||
ಬಾಣಸಿನ ಮನೆಯನು ವಿಚಾರಿಸಿ |
ಕೌಣಪರೊ ಕೌರವರೊ ಇವರಿರ |
ವೇನದೆಂಬುದನೀಶ ಬಲ್ಲನುಯೆನುತ ಕಡುನೊಂದ     ||೨೭೯||

ದ್ವಿಪದಿ

ಅತ್ತಲಾ ಗಜಪುರದಿ ಕೌರವೇಶ್ವರನು |
ಪುತ್ರನ ವಿವಾಹಕೆಂದೆನುತ ಹರ್ಷವನು       ||೨೮೦||

ತಾಳಿ ತವಕದಲಿ ಭೀಷ್ಮಾದಿಗಳ ಕೂಡಿ |
ಆಲೋಚಿಸುತಲೆ ಸರ್ವರೊಳು ಮಾತಾಡಿ    ||೨೮೧||

ಬೆಳಗಿದರೆ ನಾಳೆ ದಶಮಿಯಲಿ ವರ ಲಗ್ನ |
ಘಳಿಲನೀ ದಿವಸದಲಿ ಪೊರಡೆ ನಿರ್ವಿಘ್ನ       ||೨೮೨||

ಅಂದು ಕುವರನನಲಂಕರಿಸಿ ಬಾಸಿಗವ |
ತಂದು ಶಿರಕಳವಡಿಸಿ ಮಂಗಳಾಷ್ಟಕವ       ||೨೮೩||

ಕೂಗಿಸುತ ವಿಪ್ರರಲಿ ಸೇನೆ ಸಹಿತಾಗ |
ಆಗಮೋಕ್ತದಲಿ ರಥವೇರ್ದು ಬರೆಬೇಗ        ||೨೮೪||

ಕಳಚಿ ಬಿದ್ದುದು ರಥದಿ ಬಾಸಿಗವು ಜಾರಿ |
ಚಳಕದಿಂದನಿತರೊಳು ಕಟ್ಟಿದರು ತೋರಿ     ||೨೮೫||

ಪಥದೊಳುರಗನ ಕಂಡರೀಚೆಯಲಿ ಬಳಿಕ |
ಪತಿಶೂನ್ಯಳಾದ ಸತಿಯಯ್ತಂದಳನಕ        ||೨೮೬||

ಭೂಸುರನದೋರ್ವ ಶಿರಮುಂಡನಂ ಗೆಯ್ದು |
ಹೇಸದಲೆ ಕರದಿ ತಿಲದರ್ಭೆಯನು ಪಿಡಿದು    ||೨೮೭||

ಇದಿರಿನಲಿ ಹಾಯ್ದ ಮಾರ್ಜಾಲ ಬಲದಿಂದ |
ಪದುಳದಿಂ ಪೋಯ್ತೆಡಕೆ ಪುಣ್ಯವೇನೆಂದ      ||೨೮೮||

ಕಲ್ಲೊಳುದಿಸಿದವು ತಾವರೆಗಳಲ್ಲಲ್ಲಿ |
ತಲ್ಲಣಿಸುತುಡುಗಣಗಳುದುರ್ದವೆಡೆಯಲ್ಲಿ     ||೨೮೯||

ಧೂಮಕೇತುಗಳಂಬರದಲಿ ತೋರಿದವು |
ಪ್ರೇಮದಿಂ ಹಂಗ ಬಲಗಡೆಗೆ ಸಾರಿದವು      ||೨೯೦||

ಇಂತದ್ಭುತಗಳೊಳವಶಕುನವಾಗಲಿಕೆ |
ತಾಂ ತವಕದಿಂ ನೋಡಿ ಭೀಷ್ಮ ಕುರುಕುಲಕೆ ||೨೯೧||

ಏನು ಚೋದ್ಯವೊಯೆಂದು ಚಿಂತಿಸುತಲೊಡನೆ |
ತಾನೆಂದ ಕೌರವನೊಳೊಲಿದು ಧರಣಿಪನೆ   ||೨೯೨||

ರಾಗ ಕಾಂಭೋಜಿ ಝಂಪೆತಾಳ

ಕಂಡೆಯ ಭೂಪ ನೀನಪಶಕುನಮುತ್ಪಾತ | ತಂಡತಂಡದಲಿ ತೋರ್ದುದನು ||
ಅಂಡಲೆಯಬೇಡವೇನೆನ್ನಬಹುದಿದಕಿನ್ನು | ಖಂಡಪರಶುವೆ ಬಲ್ಲನಲ್ಲ       ||೨೯೩||

ಮರದುದಿಯೊಳಿರುವ ಫಲವನು ಕಾಂಕ್ಷಿಸುತ ಹೆಳವ |
ಧರೆಯೊಳಗೆ ಬಾಯ್ ಬಿಡುವ ತೆರದಿ ||
ಬರಿದೆ ಬಯಸಿದರೆ ಭ್ರಾಂತರುಯೆಂಬುದೀ ಲೋಕ |
ಮರೆಯದಾಲಿಸು ಎನ್ನ ಮಾತ       ||೨೯೪||

ಕೋಪ ಬಂದರು ಬರಲಿ ಕಡೆಗೆ ಕಾಂಬುದು ಕಾರ್ಯ |
ಈ ಪರಿಯ ಪರಮ ಸಂತೋಷ ||
ಶ್ರೀಪತಿಯನುಳಿದಾಹುದುಂಟೆಯೇನ್ ಮಾಯಕವೊ |
ವ್ಯಾಪಿಸುವುದೆಮ್ಮನನವರತ        ||೨೯೫||

ಎಂದ ಭೀಷ್ಮನ ನುಡಿಯನಾಲಿಸುತ ಕುರುರಾಯ |
ನಂದು ರೌದ್ರವ ತಾಳಿ ಮನದಿ ||
ಮುಂದುಗಾಣದೆ ಪೇಳ್ದ ದುರ್ವೃತ್ತಿಯಿಂ ಹಾಸ್ಯ
ದಿಂದಲೊಂದುತ್ತರವನಾಗ ||೨೯೬||