ಕಂದ

ಹಾರುವರೆನ್ನಂ ಹೆದರಿಸಿ |
ಹೋರುವರಾ ಕಡೆಗೆ ತಮ್ಮ ಬಿಂಕಗಳಿಂದಂ ||
ಧೀರನೆ ನೋಡೈ ಕರ್ಣ ವಿ |
ಚಾರಿಸಲೇನಹುದಿವರೀ ನೀತಿಗಳಿಂದಂ       ||೨೯೭||

ಆದವಶಕುನಂಗಳಿಗಂ |
ಮೇದಿನಿಯೊಳಗ್ಯಾರು ಶಾಂತಿಯನು ವಿರಚಿಸುತಂ ||
ಹಾದಿಯ ಹಿಡಿಯೈಯೆನುತಂ |
ತಾ ಧೈರ್ಯದಿ ನಡೆದ ಮೂರ್ಖನಗ್ರೇಸರನುಂ         ||೨೯೮||

ರಾಗ ಭೈರವಿ ತ್ರಿವುಡೆತಾಳ

ಬಂದನಾಗ | ಕೌರವ | ಬಂದನಾಗ  || ಪಲ್ಲವಿ ||

ಬಂದನಾ ಧೃತರಾಷ್ಟ್ರ ಭೂಪನ | ನಂದನನು ನಲವಿಂದ ತನ್ನಯ |
ಕಂದ ಲಕ್ಷಣಸಹಿತ ಸೇನಾ | ವೃಂದದೊಡಗೊಂಡಾಗ ಪರಿಣಯ |
ಕೆಂದು ದ್ವಾರಾವತಿಗೆ ತಾ ಮನ | ಮುಂದುವರಿದಂದದಲಿ ಸೊಬಗಿಂ |
ಧಂ ಧಣಂ ಧಣರೆಂಬ ಭೇರಿಯ | ನಂದು ಪೊಡೆಸುತ್ತತಿವಿನೋದದಿ || ಬಂದನಾಗ ||೨೯೯||

ಕರಿ ತುರಗ ರಥ ಪದಚರರ ಪರಿ | ಪರಿಯ ಸೇನಾನಾಯಕರ ಭೋ |
ರ್ಮೊರವ ವಾದ್ಯ ಸಂಗೀತ ನೃತ್ಯಗ | ಳೊರಲ್ವ ಪಾಠಕರೋಳಿಯಿಂ ವರ |
ತರುಣಿಯರ ಕರಕಲಶಗನ್ನಡಿ | ಯುರುತರದ ಶೃಂಗಾರದಿಂದಲಿ |
ಸರಿಯದಾ ಮಹಿಯೊಳಗೆ ತನಗೆಂ | ದರಿಯದಾ ಮಾಯಾವಿಲಾಸವ || ಬಂದನಾಗ         ||೩೦೦||

ಗಾಢದಿಂದೀಪರಿಯ ಲಯ್ದುತೆ | ಬೀಡಬಿಟ್ಟನು ಹರಿಯ ಪುರಹೊರ |
ನಾಡಿನೊಳಗದ ಕಾಣುತಲೆ ನಗು | ತೋಡಿ ಬಂದರುಹಿದರು ವನಚರ |
ರಾಡಲೇನದ ಕೃಷ್ಣನೊಳು ಕಯ್ | ಜೋಡಿಸುತ ಕೌರವನ ಬರವನು |
ಪ್ರೌಢಿಯಿಂ ಪದುಳದಲಿ ಕೇಳೆಲೆ | ರೂಢಿ ಪಾಲಕ ರಂಜಿಸುತ್ತಲಿ || ಬಂದನಾಗ     ||೩೦೧||

ಭಾಮಿನಿ

ಚರರ ನುಡಿಯನು ಕೇಳ್ದು ನಗುತಲಿ |
ಸಿರಿಯರಸನಕ್ರೂರನನು ತಾ |
ಕರೆದು ಪೇಳಿದನಾಗ ಪರಿಹಾಸ್ಯಾದಿ ವಚನದಲಿ ||
ಪರಮ ಭಕ್ತನೆ ಕೇಳು ಕುರುಕುಲ |
ರೆರೆಯನುರು ಪರಿಣಯಕೆ ಪುನರಪಿ |
ಮರಳಿ ಬಂದನದೆಂಬರೇಂ ಚೋದ್ಯವೊ ಧರಿತ್ರಿಯಲಿ  ||೩೦೨||

ಕಂದ

ಆದರು ನೀನವನೆಡೆಗಂ |
ಸಾದರದಿಂದಯ್ದೆ ಸೊಬಗನುಂ ತಿಳಿದೊಲವಿಂ ||
ಮೋದದಿ ಬರ್ಪುದೆನುತ್ತಂ |
ಶ್ರೀಧರನವನೆಡೆಗೆ ಕಳುಪಿದನಕ್ರೂರನನುಂ   ||೩೦೩||

ರಾಗ ಕಾಪಿ ಅಷ್ಟತಾಳ

ನಡೆತಂದನಕ್ರೂರನಾಗ | ದೇವ | ನಡಿಗೆ ವಂದಿಸಿ ಕೌರವನೆಡೆಗಾಗ      || ಪಲ್ಲವಿ ||

ಬರುತ ಕಂಡನು ವಿಪಿನದಲಿ | ಭೋ |
ರ್ಮೊರವ ಸೇನೆಗಳ ವಾದ್ಯಗಳ ಘೋಷದಲಿ ||
ಕುರುಕುಲದೆರೆಯನಂದದಲಿ | ನಿಂ |
ದಿರಲು ಕಯ್ ಮುಗಿದು ಕೇಳಿದನು ತೋಷದಲಿ        ||೩೦೪||

ಕ್ಷೇಮವೆ ಶಶಿಕುಲೋದ್ಭವನೆ | ಪರಿ |
ಣಾಮವೆ ಸತಿಸುತಾದ್ಯಖಿಳರ್ಗೆ ಸೇನೆ ||
ಈ ಮಹಿಯೊಳು ನೃಪವರನೆ | ಇನ್ನು |
ಸಾಮರ್ಥ್ಯದಲಿ ನಿನಗೆಣೆಯನ್ನು ಕಾಣೆ         ||೩೦೫||

ನೀ ಬಂದ ವಾರ್ತೆಯ ಕೇಳಿ | ಈಗ |
ಸ್ವಾಭಿಮಾನದಿ ಸತ್ಕೃಪೆಯನು ತಾಳಿ ||
ತಾ ಬಿಡದಟ್ಟಿದ ಮುರಲೀ |  ಧರ |
ವೈಭವದಿಂದೆನ್ನ ತ್ವರಿತಗಳಲ್ಲಿ       ||೩೦೬||

ಎಂದಕ್ರೂರನ ಕರೆದು | ಮುದ |
ದಿಂದ ಲಾಲಿಸಿ ಕುರುಭೂಪಾಲ ನಲಿದು ||
ಚಂದದಿಂದವನ ಕಯ್ ಪಿಡಿದು | ಬಲು |
ಸಂದೇಹದಿಂದ ಮಾತಾಡಿದ ನಲಿದು         ||೩೦೭||

ರಾಗ ಮಧುಮಾಧವಿ ಏಕತಾಳ

ಏತಕಟ್ಟಿದ ಹರಿ ನಿನ್ನ ನಮ್ಮಡೆಗೆ | ಈ | ರೀತಿಯ ಕಾಣಲು ಚೋದ್ಯವಾಯ್ತೆಮಗೆ ||
ಆತಗೆಮ್ಮೊಳು ಸಂಪ್ರೀತಿಯು ಜನಿಪುದು | ಭೂತಳದೊಳಗತಿ ನೂತನವಾಗಿದೆ |
ಮಾತೇನವಿದ್ದರೆ ಪೇಳ್ವುದು ಸಂ | ಪ್ರೀತಿಯಿಂದಕ್ರೂರನೆ ನೀ ತಿಳಿದು     ||೩೦೮||

ಕೌರವನೆಂದುದ ಲಾಲಿಸಿ ಬಳಿಕ | ಅ | ಕ್ರೂರ ನಸುನಗುತ ತಾನೆಂದನು ವಾಕ್ಯ ||
ಧೀರ ನೀ ಮರಳಿ ಗಂಭೀರದೊಳಿಲ್ಲಿಗೆ | ವೋರಣದಿಂ ಬಂದುದೇತಕೆನುತಲಿ ವಿ |
ಚಾರಸೆನುತ ಕಾರುಣ್ಯದಿ ಕಳುಪಿದ | ಮಾರಮಣನು ಕೇಳ್ ಧಾರಿಣಿಪಾಲ ||೩೦೯||

ಆದರಕ್ರೂರ ಕೇಳ್ ನಾ ಬಂದಹದನ | ಆ | ಮಾಧವನರಿಯನೆ ಸಾಕೇನನುಮಾನ ||
ಮೋದದಿ ಲಕ್ಷಣಗವನಣ್ಣನ ಮಗ | ಳಾದವಳನು ಧಾರೆಯನೆರೆಸಿಕೊಳಲು |
ಈ ದಶಮಿಯ ಲಗ್ನಕೆ ತವಕಗಳಿಂ | ಸಾಧಿಸಲಯ್ದಿದೆವೈ ದಯಾಂಬುಧಿಯೆ         ||೩೧೦||

ವಚನ

ಇಂತೆಂದಾ ಕೌರವನುಡಿಯಂ ಕೇಳಿ ಅಕ್ರೂರನತಿಸಂತಸಂ ತಾಳಿ ಮತ್ತವನೊಡನಿಂತೆಂದನು –

ರಾಗ ಶಂಕರಾಭರಣ ತ್ರಿವುಡೆತಾಳ

ಏನ ಹೇಳುವೆನೊಂದು ಚೋದ್ಯವ | ಮಾನನಿಧಿ ಕುರುಭೂಪ ಲಾಲಿಸು |
ತಾನದೇಂ ಕಡು ಚಿತ್ರಮಾಗಿದೆ | ಈ ನಡತೆಯು       ||೩೧೧||

ಕೌರವನು ತಾನೆನ್ನುತಲೆ ಬಲು | ಧೀರತನದಲಿ ದಳಸಹಿತ ಗಂ |
ಭೀರದಲಿ ನಡೆತಂದುಯಿಲ್ಲಿಗೆ | ಭೋರನಿದಕೊ         ||೩೧೨||

ಮೊನ್ನೆ ಷಷ್ಠಿಯ ದಿವಸದಲಿ ವರ | ಕನ್ನೆ ಕನಕಾಂಗಿಯನು ವಿಭವದಿ |
ಮನ್ನಿಸುತ ಹಲಧರನೊಡನೆ ಸಂ | ಪನ್ನರೊಲಿದು      ||೩೧೩||

ಧಾರೆಯನು  ತಾನೆರಸಿಕೊಂಡುರೆ | ತೋರ ಭುಜ ಬಲರಯ್ದಿದರು ಕು |
ಮಾರಿಯನು ಕರೆಕೊಂಡು ಮಾಯದೊ | ಳಾರದೆಂತೊ         ||೩೧೪||

ಇದಕೊ ನಿಮ್ಮಯ ದಿಬ್ಬಣವು ಬಂ | ದದುಭುತದ ವಾರ್ತೆಯನು ಕೇಳುತ |
ಕದನಕರ್ಕಶ ಹಲಧರನು ಕ್ರೋ | ಧದಲಿ ನಿಮ್ಮ        ||೩೧೫||

ಪಡೆಯನೆಲ್ಲವ ಸದೆಬಡಿಯಲೆಂ | ದೊಡನೆ ತಾನಯ್ತಹನು ತಿಳಿಯದೆ |
ತಡವಿದೇತಕೆ ಕಾಲವೇಳ್ಯದಿ | ನಡೆಯಿರಯ್ಯ ||೩೧೬||

ಹೀಗೆನುತ ನಿಮ್ಮೊಡನೆ ಪೇಳೆನು | ತಾ ಗರುಡವಾಹನನು ಕಳುಪಿದ |
ಮೇಗೆ ನಿಮ್ಮೊಳಗೇನಿಹುದೊ ಕೈ | ಲಾಘವಗಳು       ||೩೧೭||

ಕಂದ

ಎಂದಕ್ರೂರನ ಪೆಸರೊಳ |
ಗೊಂದಕ್ಷರಮುಳಿದು ವಾಚಿಸಲ್ಕಾ ಪೆಸರಂ ||
ಅಂದಂ ತಾಳ್ದುದು ಚಿತ್ತದೊ |
ಳಂಧನೃಪಾತ್ಮಜನು ಪೇಳ್ದನಕ್ರೂರನೊಳುಂ  ||೩೧೮||

ರಾಗ ಶಂಕರಾಭರಣ ಅಷ್ಟತಾಳ

ಬಲ್ಲೆನು ಹೊಗೋ | ಇದೆಲ್ಲವ | ಬಲ್ಲೆನು ಹೋಗೋ ||
ಬಲ್ಲೆನು ಹೋಗು ಶ್ರೀ | ವಲ್ಲಭಗೀಗ ನ |
ಮ್ಮಲ್ಲಿ ನೇಹಗಳೆಂ | ಬುಲ್ಲಾಸಗಳನೆಲ್ಲ || ಬಲ್ಲೆನು       ||೩೧೯||

ಚೋರನು ಮೊದಲೇ | ಪಾಂಡವರಿಗೆ | ಚಾರಕನೆಲೆಲೇ ||
ಯಾರರಿಯರು ಈ ವಿ | ಚಾರವ ಗೊಲ್ಲರ |
ಕೇರಿಯೊಳ್ ಕೂಳುಂಬ | ಪಾರ ಮಹಿಮೆಗಳ || ಬಲ್ಲೆನು         ||೩೨೦||

ಸದ್ದಿಲ್ಲದಂತೆ | ವೈದರ್ಭಿಯ | ಕದ್ದೊಯಿದು ಮತ್ತೆ ||
ಬದ್ದಿಸಿ ಭಾವನ | ಗುದ್ದಿ ಭಂಗಿಸಿ ಬಲು |
ಬುದ್ಧಿವಂತನು ತಾನೆಂ | ದಿದ್ದ ಗೋಪಾಲನ || ಬಲ್ಲೆನು ||೩೨೧||

ಮಾತೇನವನೊಡನೆ | ನಮಗೆ ನಡೆ | ನೀತಿಕೋವಿದನೆ ||
ಖ್ಯಾತ ಬಲರಾಮನ | ಪ್ರೀತಿಯೊಂದಿದ್ದರೆ |
ಭೂತಳದೊಳಗೀ | ಘಾತಕನಿಂದೇನ್ || ಬಲ್ಲೆನು       ||೩೨೨||

ವಚನ

ಈ ರೀತಿಯಿಂ ಕೌರವನತಿ ನಿಷ್ಠುರದಿಂ ನುಡಿದಕ್ರೂರನಂ ಕಳುಪಲತಿ ಶೀಘ್ರದಿಂ ಕೃಷ್ಣನೆಡೆಗಯ್ತಂದು ಮತ್ತವನೆಂದನು –

ಭಾಮಿನಿ
ಲಾಲಿಸೈ ಗೋಪಾಲ ಕೌರವ |
ಬಾಲೆ ಕನಕಾಂಗಿಯ ವಿವಾಹಕೆ |
ಮೇಲುವರಿದಾನಂದದಿಂ ದಿಬ್ಬಣವನಯ್ದಿಹನು ||
ಹೇಳಿದರೆ ನಿಜವಾರ್ತೆಗಳ ಬಲು |
ಭಾಳ ಸತ್ತ್ವದಿ ಜರೆದು ನಿಮ್ಮನು |
ತಾಳಿ ಸತ್ಕ್ರೋಧವನು ಕಳುಪಿದನೆಂದನಕ್ರೂರ         ||೩೨೩||

ಕಂದ

ಆ ಸಮಯದೊಳಿತ್ತಂ ನಿಜ |
ವೇಷದ ಕೌರವನ ಚಾರಕನದೋರ್ವಂ ತಾಂ ||
ತೋಷದಿ ಬಂದುಂ ಪರಮೋ |
ಲ್ಲಾಸದಿ ಹಲಧರನಿಗೆರಗಿ ಮತ್ತಿಂತೆಂದಂ      ||೩೨೪||

ರಾಗ ಸಾರಂಗ ಆದಿತಾಳ

ಯಾದವಾಗ್ರಣಿಯೆ ನೀನು | ಲಾಲಿಸು ವಿ | ನೋದದಿ ವಸಗೆಯನು ||
ಆದರೆ ಕೌರವ | ರಾಯನ ದಿಬ್ಬಣ | ವಯ್ದಿ ಹೊರಗೆ ತಾ | ಕಾದಿಹರೀಗಲು ||೩೨೫||

ತರಳ ಲಕ್ಷಣನಿಗಿನ್ನು | ನಿನ್ನಯ ಕು | ವರಿ ಕನಕಾಂಗಿಯನ್ನು ||
ಮರೆಯದೆ ದಶಮಿಯ | ವರ ಮುಹೂರ್ತದಿ ಧಾರೆ |
ಯೆರೆಸಿ ಕೊಂಬರೆ ಬಂದ | ದೊರೆ ದಾರಿಯ ನೋಳ್ಪ   ||೩೨೬||

ತಡವ ಮಾಡದೆ ಏಳಯ್ಯ | ಇದಿರ್ಗೊಂ | ಬಡೆ ಬೀಗರನು ಜೀಯ ||
ಸಡಗರದಿಂದೆನ | ಲೊಡನಾರ್ಭಟಿಸುತ | ಕಡು ಕಿನಿಸಿಂದ ಬೆಂ | ಬಿಡದೆಂದ ಹಲಧರ        ||೩೨೭||

ಕಂದ

ಸುಡು ಸುಡು ನೀನ್ಯಾರೆಲೊ ಖಳ |
ದಡಿಗನೊ ನಡೆಯತ್ತಲೆನುತ ಘರ್ಜಿಸಿ ಮತ್ತಾ ||
ಜಡಜಾಂಬಕನಂ ಕರೆಸು |
ತ್ತುಡುಪತಿಧರನಂತೆ ರೌದ್ರದೊಳಗಿಂತೆಂದಂ ||೩೨೮||

ರಾಗ ಮಾರವಿ ಅಷ್ಟತಾಳ

ಏನಯ್ಯ | ಕೃಷ್ಣ | ಏನಯ್ಯ | ನ |
ವೀನವಾಗಿದೆ ಕಾರ್ಯದನುಭವಗಳಿದು || ಏನಯ್ಯ             || ಪಲ್ಲವಿ ||

ಮೊದಲು ಕೌರವರೆಂದು ಬಂದೆನ್ನ ಮಗಳ |
ಮದುವೆಯ ಮಾಡಿಕೊಂಡೊಯ್ದರು ದುರುಳ ||
ರದುಭುತಮಾಯವಿಚಿತ್ರದಿ ಕೇಳ |
ಹದನೆಲ್ಲವಂತಿರಲಾದರು ಬಹಳ || ಏನಯ್ಯ  ||೩೨೯||

ಮತ್ತೆ ಕೌರವರೆಲ್ಲ ಬಂದಿಹ ಪಾಡು |
ಹೊತ್ತ ಚೋಹದಿ ಮದುವೆಯೆಂದೀ ಕೇಡು ||
ಎತ್ತಣದೇನು ನಾ ಕಾಣೆನು ನೋಡು |
ಸುತ್ತಿದಂತಾಗಿದೆ ತಿಳಿದು ಮಾತಾಡು || ಏನಯ್ಯ       ||೩೩೦||

ಹೆಣ್ಣನು ಮಾಯವ ಮಾಡಿದರಲ್ಲ |
ಪುಣ್ಯ ಜನರು ಪರಿಕಿಸಲವರ್ ಕ್ಷುಲ್ಲ ||
ರೆಣ್ಣಿಸದೀಗಲೆ ಬಳಿಕಿಲ್ಲಿ ಕಳ್ಳ |
ಕುನ್ನಿ ಕೌರವರಾರೊ ಸಣ್ಣ ಮಾತಲ್ಲ || ಏನಯ್ಯ         ||೩೩೧||

ಕಂದ

ಇಂತೆನೆ ಹಲಧರನುಂ ಕೇ |
ಳ್ದುಂ ತವಕದಿಂದ ಕಾಮಪಿತನು ನಸುನಗುತಂ ||
ನಿಂತುಳಿಯಿಂ ಗೆಯ್ದುಂ ನಲ |
ವಿಂ ತಾನರಿಯದ ತೆರದೊಳು ಉಸಿರಿದನಾಗಳ್      ||೩೩೨||

ರಾಗ ಪಂತುವರಾಳಿ ಆದಿತಾಳ

ಯಾರು ಬಲ್ಲರು ಈ ವಿ | ಚಾರದ ಮಹಿಮೆಯ ||
ಧಾರಿಣಿಯೊಳು ತ್ರಿಪು | ರಾರಿಯೋರ್ವನದಲ್ಲದೆ        ||೩೩೩||

ಅಣ್ಣ ನಿನಗೆ ಮೊದ | ಲೆನ್ನ ಮಾತುಗಳೆಲ್ಲ ||
ಸಣ್ಣದಾಯಿತು ಈಗ | ಎಣ್ಣಿಸಲೇನು ಮಾತು  ||೩೩೪||

ಸುರರೊ ನರರೊ ದಾನ | ವರೊ ನಿಜವಿಲ್ಲದಾಯ್ತು ||
ಬರಿಬರಿ ಪರಿಹಾಸ್ಯ | ಕಿರದೆ ಕಾರಣವಿಂತು   ||೩೩೫||

ತಡೆಯದಿಲ್ಲಿಗೆ ಬಂದ | ಪೊಡವಿಪನವನಾರೊ ||
ತಡೆಯದೇನನಹರೊ | ನುಡಿಯಲಸದಳ     ||೩೩೬||

ಮೂರ್ಖರ ಮನೆದೈವ | ತೋರ್ಕೆಗೆ ಕೌರವ ||
ತಾರ್ಕಣ್ಯವಾಯಿತಲ್ಲ | ಯಾರ್ಕೇಳುವದೇನುಂಟು      ||೩೩೭||

ಆದರಿಲ್ಲಿಂದ ಹೆಣ್ಣ | ನೊಯ್ದುದೊಂದಪಕೀರ್ತಿ ||
ಯಾದುದು ಪೋಗುವುದೆಯೀ | ಯಾದವವಂಶಕ್ಕೆ      ||೩೩೮||

ವಾರ್ಧಕ

ಪಿರಿಯವರು ನೀವು ನಿಮಗುತ್ತರಂ ಕೊಡುವರಾಂ |
ಕಿರಿಯನಾದೆಂ ಬಳಿಕಲೀ ಕಾರ್ಯನಿರವಿನೊಳ್ |
ಪರಿಕಿಸಲ್ಕಿಲ್ಲ ನಿಲ್ಲುವಡಸಾಧ್ಯಮದಾಗಿ ತೋರ್ಪುದೇಂ ಗೆಯ್ವೆ ಸತತಂ ||
ಸಿರಿಯ ಸಹಿತಂ ಪೋಪೆನೆತ್ತಲಾದರೆನುತ್ತ |
ಮುರವಿದಾರಣಕೃಷ್ಣನೆರಗಲಾ ಹಲಧರಂ |
ಕರುಣದಿಂ ಹರಿಯನುಂ ಮನ್ನಿಸುತ ಚಿತ್ತದೊಳ್ ರೌದ್ರಮಂ ತಾಳ್ದೆಂದನು ||೩೩೯||

ರಾಗ ಪಂತುವರಾಳಿ ಮಟ್ಟೆತಾಳ

ತಮ್ಮ ಕೋಪಿಸ | ಬೇಡ | ಸುಮ್ಮನಿರೇಲೊ ||
ನಮ್ಮ ನಡತೆಗೆ | ನೋಡು | ಗಮ್ಮನೇ ಮಿಗೆ  ||೩೪೦||

ಆದರಾಗಲಿ | ಇನ್ನು | ಧಾರಿಣೀಯಲಿ ||
ನಾರಿಯೊಯ್ದರು | ಮಹಾ | ಪಾರಮಹಿಮರು ||೩೪೧||

ಇರಲದೆಲ್ಲಿಯು | ಬಿಡದೆ | ತರಿದು ತರುವೆನು ||
ಮರೆದು ನಿಲ್ಲೆನು | ಕ್ಷಣದಿ | ತೆರಳ್ವೆನೆಂದನು  ||೩೪೨||

ಎಂದು ಹಲವನು | ತಿರುಹು | ತಂದು ಮನೆಯನು ||
ಚಂದದಿ ಪೊರಟನು | ರೋಹಿಣಿ | ಕಂದನೆಂಬನು       ||೩೪೩||

ಕಂದ

ಹಲಧರ ಪೊರಟುದ ಕಾಣು |
ತ್ತೊಲವಿಂ ಕೌರವನ ಚರನುಮಯ್ತಂದುಂ ತಾಂ ||
ಗೆಲವಿಂ ನಸುನಗುತಂ ಕುರು |
ಕುಲನೃಪವರಗಯ್ದೆ ಪೇಳ್ದ ಪರಿಪರಿಯಿಂದಂ  ||೩೪೪||

ಬಂದಂ ಬೀಯಗ ನಡೆ ನೀ |
ವಿಂದುಂ ಸನ್ನಾಹಮಾಗಿ ನಿಲುವುದೆನಲ್ಕಂ ||
ಅಂಧನೃಪಾತ್ಮಜ ಸೇನಾ |
ವೃಂದಸಹಿತ ಲೆದ್ದುಮಿದಿರಿನೊಳ್ ನಿಂದಿರ್ದಂ          ||೩೪೫||

ರಾಗ ಭೈರವಿ ಆದಿತಾಳ

ಆ ಸಮಯದಿ ಬಲು | ರೋಷಾವೇಶದಿ |
ಕೇಶವಾಗ್ರಜ ಕೈ | ಲಾಸಾಧಿಪನಂ |
ತೇಸು ಬಣ್ಣಿಸುವೆ ಮ | ಹೀಶನ ಪಡೆಯನು |
ನಾಶಗೆಯ್ವೆನುಯೆಂದು | ಬೇಸರದಂದು || ಬಂದನಾಗ ||೩೪೬||

ಕಂಗಳೊಳಿಂಗಳ | ಮಂ ಕರೆಯುತ ಹಾ |
ರಂಗಳ ತೊಡರ ಕ | ರಂಗಳೊಳ್ ಬಿಡಿಸುತ |
ಮುಂಗಡೆಯೊಳ್ ಬೆ | ಡಂಗಿನೊಳ್ ನಿಂದಿಹ |
ರಂಗವನೀಕ್ಷಿಸು | ತಂಗ ಮುಖದಲಿ || ಬಂದನಾಗ     ||೩೪೭||

ಫಡ ಫಡ ಕೌರವ | ಬಡುಗ ನಿನ್ನಯ ಬಲು |
ಬೆಡಗನು ಪರಿಕಿಸು | ವಡೆ ಮಾಯಗಳಿದು |
ನಡೆ ನಡೆ ನಿಲ್ಲದೆ | ಪಡೆಸಹಿತೆಂದೆನು |
ತೆಡಬಲಗಳ ಬೆಂ | ಬಿಡದೆ ಸವರುತ || ಬಂದನಾಗ    ||೩೪೮||

ಕರಿಗಳ ಸುಂಡಿಲ | ತುರಗಗಳ ಕಾಲ್ಗಳ |
ವರ ಚಕ್ರಂಗಳ | ಮುರಿದು ಕೆಡಹಿ ಪದ |
ಚರರನು ತರಿವುತ | ಲಿರಲು ಕಾಣುತಲಾ |
ಕುರುಕುಲದರಸನು | ಬೆರಗಿನ್ನಾದ || ಬಂದನಾಗ       ||೩೪೯||

ದ್ರೋಣ ಭೀಷ್ಮಾದಿಗಳ್ | ಕಾಣದಾದರು ಕರ್ಣ
ನೇನಾದನೊ ಸು | ಮ್ಮಾನಗಳಡಗಿಯೆ |
ಕಾನನದೊಳಗಿಹ | ವಾನರರಂದದಿ |
ಸೇನೆಗಳೆಲ್ಲವು | ಹಾನಿಗಳಾಗೆ || ಬಂದನಾಗ ||೩೫೦||

ವಚನ

ಈ ಪ್ರಕಾರದಿಂ ಹಲಧರನು ಕೌರವನಂ ಮುಖಭಂಗಿತನಂ ಮಾಡಲಾ ವೇಳೆಯೊಳ್ ಕೌರವನಿಂತೆಂದನು –

ರಾಗ ಮುಖಾರಿ ಆದಿತಾಳ

ಯಾಕೋ ಭಾವ ಅವಿವೇಕವು ನಿನಗೆ | ಈ ಕಡು ಅಪಹಾಸ್ಯಗಳು ಮೊದಲಿಗೆ ||
ನಾಕದವರು ನಗರೇನೈ ಬಿಡು ಬಿಡು | ಸಾಕು ಸಾಕು ಸಮ್ಮತವಲ್ಲ        ||೩೫೧||

ಆಗುವ ಕಾರ್ಯಗಳಾಗಲಿ ಲಗ್ನವ | ನೀಗ ಸಾಧಿಸಬೇಕದರೊಳಗೆ ||
ಹೇಗಾದರು ಹೊತ್ತನು ಕಳೆವುದು ಸಹ | ಜಾಗಮ ಹೋಗುವ ನಡೆ ಮನೆಗೆ         ||೩೫೨||

ಬೆದರುವರೆಲ್ಲರು ಬುಧರಾದಿಗಳಾ | ದದುಭುತದಿಂ ಸುದತಿಯರೆಲ್ಲ ||
ಮದುವಣಿಗನು ಮೆಯ್ ಮರೆದಿಹನೀ ಮೋ | ದದ ಸಂಭ್ರಮಗಳಿಗೇನೆನಲಿ         ||೩೫೩||

ರಾಗ ಭೈರವಿ ಏಕತಾಳ

ಎನ್ನುವದೇನೆಲೊ ಕುನ್ನಿ | ನಡೆ | ಬನ್ನಣೆ ಸಾಕೆಲೊ ಬನ್ನಿ ||
ಎನ್ನುತ ಹಲಧರನಾಗ | ಕರ | ವನ್ನೆಗಹುತಲತಿ ಬೇಗ  ||೩೫೪||
ಹಲ್ಲುಕಳಚಿ ಬೀಳ್ವಂತೆ | ಹೊಡೆ | ದಲ್ಲೆ ನುಡಿದ ತಾ ಮತ್ತೆ ||
ಎಲ್ಲಿಹ ಭಾವನು ಮರುಳೆ | ಮ | ತ್ತಿಲ್ಲಿಗೇತಕೆ ಬಂದೆಗಿರುಳೆ      ||೩೫೫||

ಹೋಗು ಹೋಗೆನ್ನು ತಬ್ಬರಿಸಿ | ಒರೆ | ದಾಗ ಭಂಗಿಸುತಲಿ ಸಹಸಿ ||
ಕೂಗುವರನು ತಾ ನಿಲಿಸಿ | ಮೆಯ್ | ಬೀಗುವ ತೆರದಿಂದೊರಸಿ ||         ||೩೫೬||

ಅಟ್ಟಿದ ಕೌರವಬಲವ | ಕಂಡ | ಬಟ್ಟೆ ಮಾಡುತ ದಿಬ್ಬಣವ ||
ಅಟ್ಟಹಾಸದಿ ಬಲರಾಮ | ನಿಕೊ | ದಿಟ್ಟತನದಿ ನಿಸ್ಸೀಮಾ        ||೩೫೭||

ಓಡಿದರೇನಾಶ್ಚರ್ಯ | ಯೆಂಬ | ಗಾಢದಿ ಭೀಷ್ಮಾಚಾರ್ಯ ||
ರಾಡದೆ ನುಡಿಗಳ ಮತ್ತಾ | ದಾರಿ | ನೋಡುತ ಗಜಪುರದತ್ತ    ||೩೫೮||

ಕೌರವ ಖೋಡಿಯ ದಾರಿ | ತನ್ನ | ಗೌರವಗಳು ಬಲ ಕುಡುಗಿ ||
ಶೌರಿಯಗಳ ಸೊಬಗಳಿದೂ | ಕಾಮ | ವೈರಿಯ ನೆನಸುತಲುಳಿದು       ||೩೫೯||

ದಾರಿಯ ಬಿಡಿ ಕರಿಪುರಕೆ | ನಿ |  ಷ್ಕಾರಣ ಪೆಟ್ಟು ತಿಂದುದಕೆ ||
ಭೂರಿ ನೇತ್ರಾದಿಗಳ್ ನಗುತ | ಅ | ಪಾರ ಹಾಸ್ಯದೊಳಿರ್ದರ್ ಮತ್ತಾ    ||೩೬೦||

ಕಂದ

ಇತ್ತಂ ಹಲಧರ ಕೌರವ |
ಮೊತ್ತಗಳಂ ಕೊಂದು ಕೆಡಪಿ ಮನೆಗಯ್ದುತ್ತಂ ||
ಚಿತ್ತದಿ ಚಿಂತೆಯೊಳಿರಲಿ |
ನ್ನಿತ್ತಂ ಭೀಮಜನುಮಾಗ ಕೌರವ ಬಲಮಂ   ||೩೬೧||

ಬಂದುಂ ಪಥದೊಳ್ ತಡೆದಂ |
ಕುಂದದೆ ಕೋಪಂಗಳಿಂದಮಬ್ಬರಿಸುತ್ತಂ ||
ನಿಂದೀ ಧರೆ ನಡುಗುವ ತೆರ |
ದಿಂ ತಾಂಗರ್ಜಿಸುತ ಪೇಳ್ದನಾ ಕೌರವಗಂ   ||೩೬೨||

ರಾಗ ಪಂತುವರಾಳಿ ಏಕತಾಳ

ಎಲ್ಲಿಗೆ ಪೋಗುವೆ | ಖುಲ್ಲ ಕೌರವ ನೀ ||
ನಿಲ್ಲು ನಿಲ್ಲೆಲೊ ಕಾರ್ಯ | ವಿಲ್ಲದಾಯಿತೆ      ||೩೬೩||

ಎತ್ತ ಹೋದನೊ ಕರ್ಣ | ಧೂರ್ತ ಶಕುನಿಯೆಲ್ಲಿ ||
ವ್ಯರ್ಥವಾಯಿತೆ ಮದುವೆ | ಯತ್ಯುತ್ಸಹಂಗಳು         ||೩೬೪||

ಮೂಢಮತಿಯೆ ನೀ | ಖೋಡಿಯಾದೆಯೆಂದು ||
ಗಾಢದಿಂದಲಿ ಕೈ | ಮಾಡಿದ ಕಲಹಕ್ಕೆ        ||೩೬೫||

ಕಾಣುತ ಕುರುಬಲ | ಭೂನಾಥ ಘಟೋತ್ಕಚ ||
ದಾನವ ತಡೆವ ನಿ | ದಾನವನೆಲ್ಲವ  ||೩೬೬||

ಮಾತನಾಡದಲಾಗ | ಯಾತುಧಾನನೊಳಂದು ||
ತಾತತುಕ್ಷಣದಿ ನಡೆಯಲ್ | ಸೋತು ಸೊಬಗಿನಿಂದೆ   ||೩೬೭||