ರಾಗ ಮಾರವಿ ಏಕತಾಳ

ನಡೆದ ಕೌರವನನು | ತಡೆದ ಘಟೋತ್ಕಚ | ಫಡ ಫಡ ಮುಂದಕೆ | ಅಡಿಯಿಡಬೇಡೆನು |
ತೊಡನೆ ಗರ್ಜಿಸಿ ಬೆಂ | ಬಿಡದೆ ಕಂಗಳೊಳಾಗ | ಕಿಡಿಗರೆವುತ ಪ್ರಳಯ | ದಡುಪತಿಧರನಂತೆ | ಮಿಡುಕುತ ಕೌರವ | ಪಡೆಯನು ಸವರುತ | ಹುಡುಕುತ ಕರ್ಣನ | ಕೆಡಹುತ ಶಕುನಿಯ |
ಕಡಿದು ಕರಿತುರಗಗ | ಳಡಿಗಳರದ ಖಳ | ಪೊಡವಿಗುರುಳಿಸಿ ಕೋಲ್ | ಪಿಡಿದರನೊರಸಿ ಬಾಯ್ | ಬಿಡಿಸಿ ಭೀಷ್ಮನ ಕಂ | ಗೆಡಿಸಿಯಶ್ವತ್ಥಾಮನ | ನಡವಿಯ ಮಧ್ಯದೊಳ್ | ಕೆಡಹಿ ಬೀಳ್ವಂದದಿ | ಸುಡುತಲಿರ್ದನು ಮಿಕ್ಕ | ಧಡಿಗರಾದವರನ್ನು | ತಡಮಾಡದೆ ಹಾಸ್ಯ | ಕೆಡೆಯನು ಮಾಡಲು |
ಜಡಜಸಂಭವ ನಕ್ಕನು || ತಿಳಿದಿದ ಸಿರಿ | ಯೊಡೆಯ ನಲಿವುತಿರ್ದನು ||
ತನ್ನೊಳು ತಾನೆ | ಮೃಡನಾಶ್ಚರಿಯಬಟ್ಟನು || ಏನೆಂಬೆ ಕೇಳ್ |
ದೃಢಮತಿಯಿಂದಲೆ ಧರಣೀಶ ಹರಿಯ ಮಾಯ ವಿಚಿತ್ರಗಳ ಮುದದಲಿ || ಏನನೆಂಬೆ        ||೩೬೮||

ಕಂದ

ಈ ಪರಿಯಂದಂ ಕೌರವ |
ಭೂಪನನುಂ ಭಂಗಿಸುತಂ ಕಳುಹಲ್ಕಾತಂ ||
ತಾ ಪದುಳದಿ ನಡೆತಂದುಂ |
ಕೋಪಗಳಂ ಶಾಂತಿಗೆಯ್ದು ಮಣಿದನೆಮಜಗಂ ||       ||೩೬೯||

ವಚನ

ಈ ಪ್ರಕಾರದಿಂ ಬಂದು ವಂದಿಸಿದ ಘಟೋತ್ಕಚನಂ ಕಂಡು ಧರ್ಮರಾಯನತಿವಿನಯದಿಂದ ಇಂತೆಂದನು –

ರಾಗ ಸೌರಾಷ್ಟ್ರ ಅಷ್ಟತಾಳ

ಏನಯ್ಯ ಬಹಳ ಬಳಲಿ ಬಂದುದಾಗಿದೆ | ದಾನವೇಶ || ನ |
ವೀನ ಕಾರ್ಯಂಗಳದೇನ ಸಾಧಿಸಿದೆಯೈ | ದಾನವೇಶ          ||೩೭೦||

ಹಾನಿವೃದ್ಧಿಗಳಾರಿಗಾಯಿತಿನ್ನದರೊಳು | ದಾನವೇಶ || ನಿ |
ಧಾನಿಸಲನುಮಾನವಾಗಿದೆ ಪೇಳಯ್ಯ | ದಾನವೇಶ   ||೩೭೧||

ಎಲ್ಲಿಗಯ್ದಿದೆ ಯಾವಲ್ಲಿ ಕದನವಾಯ್ತು | ದಾನವೇಶ || ರಣ |
ಮಲ್ಲ ವಿಚಾರಿಸಲುಲ್ಲಾಸವಾಗಿದೆ | ದಾನವೇಶ         ||೩೭೨||

ಖೂಳರು ದಾರಿಯೊಳೆಲ್ಲಿದಿರಾದರು | ದಾನವೇಶ || ಹಮ್ಮಿ |
ನಲ್ಲಿ ಹೇಗಾದರು ಅವರೆಲ್ಲರರುಹಯ್ಯ | ದಾನವೇಶ     ||೩೭೩||

ಹೊತ್ತ ಚೋಹಗಳಿಂದ | ಮತ್ತರಾ | ದವರ್ ಯಾರು | ದಾನವೇಶ || ಹುಚ್ಚು | ಪೃಥ್ವಿಪಾಲಕರೊಳು ಕದನವೇನಾಯಿತು | ದಾನವೇಶ          ||೩೭೪||

ಹೊತ್ತಿಹೊಗೆವುತಿದೆ ಕುಡಿಮೀಸೆಗಳೆಲ್ಲ | ದಾನವೇಶ || ಆದ |
ವೃತ್ತಾಂತವೇನು ವಿಚಾರಿಸುವೆನುಯೀಗ | ದಾನವೇಶ ||೩೭೫||

ರಾಗ ಕೇದಾರ ಅಷ್ಟತಾಳ

ಇಂತೆನೆ ಯಮಜನು  ಮಾತ | ಖಳ | ನಿಂತು ಕೈಮುಗಿದೆಂದ ನಗುತ ||
ಸಂತೋಷಾಬ್ಧಿಯೊಳ್ ಮುಳುಗುತ್ತ | ಮಾ | ಕಾಂತನ ಮನದಿ ನೆನೆವುತ್ತ ||೩೭೬||

ಹಿರಿಯಯ್ಯ ಕೇಳೊಂದು ಮಾತ | ಹಲ | ಧರನ ಸಂಜಾತೆಯನಿತ್ತ
ದುರುಳ ಕೌರವನೆಂಬಾತ | ಕರಿ | ಪುರದಿಂದ ದ್ವಾರಕೆಗಯ್ದುತ  ||೩೭೭||

ಬಂದೆವು ಪರಿಣಯಕೆಂದು | ಸಾ | ನಂದದಿಂದುಸಿರಲು ನಿಂದು ||
ಅಂದು ಕೇಳುತ ರೋಷದಿಂದ | ಗೋ | ವಿಂದನಗ್ರಜ ನಡೆತಂದು         ||೩೭೮||

ಮಾಯಾವಿಗಳು ಬಂದಿರ್ಯಾಕೆ | ಮತ್ತೆ | ಸಾಯಕದಿಂ ಸಾಯಲಿಕೆ ||
ಘಾಯವಡೆದು ಸರ್ವ ಬಲಕೆ | ಕುರು | ರಾಯನೋಡಿದ ಕರಿಪುರಕೆ        ||೩೭೯||

ಕಂಡನಾ ಸಮಯದಿ ನಾನು | ಭಯ | ಗೊಂಡು ಓಡುವ ಕೌರವರನು ||
ಭಂಡು ಮಾಡಿದೆನವರನ್ನು | ಬಲವ | ದಿಂಡುದರಿದು ಕಳುಹಿದೆನು         ||೩೮೦||

ಭಾಮಿನಿ

ಯಾತಕಿನ್ನನುಮಾನ ಧರ್ಮಜ |
ಸಾತಿಶಯದಿಂದಾ ಸುಭದ್ರಾ |
ಜಾತಗಾ ಕನಕಾಂಗಿಯನು ಪರಿಣಯವನಾಗಿಪುದು ||
ಪ್ರೀತಿಪಾತ್ರನ ಕಳುಹಿಸುತ ಶ್ರೀ |
ನಾಥನನು ಕರೆತರಲು ತಳುವದೆ |
ಖ್ಯಾತಿವಂತನೆಯೆಂದು ನುಡಿದನು ವರ ಘಟೋತ್ಕಚನು         ||೩೮೧||

ಕಂದ

ಖಳನೆಂದುದ ಲಾಲಿಸಿ ತಾ |
ನೊಲವಿಂದಂ ದ್ರುಪದರಾಯನೊಡನುಡುಗೊರೆಯಂ ||
ಹಲಧರ ಕೃಷ್ಣಾದಿಗಳಿಗೆ |
ಕಳುಹಿದ ಕರೆತರಲು ಧರ್ಮಜನು ನಸುನಗುತಂ       ||೩೮೨||

ಇತ್ತಂ ಭೀಮನು ಪಾರ್ಥನಿ |
ಗತ್ಯಧಿಕೋತ್ಸಹದಿಂ ಕರೆದು ಪೇಳ್ದ ಪುರಮಂ ||
ಅತ್ಯಧಿಕದಿ ಶೃಂಗರಿಪುದೆ |
ನುತ್ತ ಪರಿತೋಷದಿಂದಂ ತಾನಿರುತಿರ್ದಂ    ||೩೮೩||

ದ್ವಿಪದಿ

ಅಣ್ಣನಾಡಿದ ಮಾತ ಕೇಳಿ ಕಲಿ ಪಾರ್ಥ |
ಚಿಣ್ಣನಭಿಮನ್ಯುವಿನ ಪರಿಣಯಕೆನುತ್ತ         ||೩೮೪||

ಸುರಪುರಕೆ ಬರೆದೋಲೆ ವಿಶ್ವಕರ್ಮನನು |
ಕರೆಸಿ ತತ್ಪುರವ ಶೃಂಗರಿಸಲರುಹಿದನು      ||೩೮೫||

ಕೇಳಿದಾಕ್ಷಣ ಪುರೋಚನ ನಗುತಲಂದು |
ತಾಳಿ ಹರುಷವ ತತೂಕ್ಷಣದಿ ಮನದಂದು    ||೩೮೬||

ನಿಲಿಸಿದನು ಕೇರಿಕೇರಿಯಲಿ ಬೆಂಬಿಡದೆ |
ಒಲವು ಮಿಗೆ ಕುರುಜುಮೇರ್ವೆಗಳ ಚಚ್ಚರದೆ ||೩೮೭||

ತಳಿರುತೋರಣ ಮಕರತೋರಣಗಳಾಗ |
ಚಳಕದಿಂದೆಡೆಯೆಡೆಗೆ ರಚಿಸಿದರು ಬೇಗ      ||೩೮೮||

ನವರತ್ನಖಚಿತದುಪ್ಪರಿಗೆ ಸಾಲ್ಗಳಲಿ |
ಸುವಿಲಾಸಮಾದ ಸುವರ್ಣ ಪ್ರತಿಮೆಯಲಿ     ||೩೮೯||

ತೋರ್ವ ವೈಚಿತ್ರ್ಯಗಳನೆಸಗಿ ದ್ವಾರದಲಿ |
ತೀವಿನಿಂದಿರುವ ರಂಭಾಸ್ತಂಭಗಳಲಿ          ||೩೯೦||

ಮಾದಳಿರನಳವಡಿಸಿ ಮಿಗೆ ಪತಾಕೆಗಳ |
ಕೋದುನಭತಳಕಡರ್ವಂತೆ ಕಟ್ಟಿದರು ಬಹಳ ||೩೯೧||

ಈ ರೀತಿಯಿಂದ ಶೃಂಗರಿಸಲಾ ಪುರವು |
ಭೂರಿನೇತ್ರನ ಪುರಕೆ ಮಿಗಿಲಾಯ್ತು ಠಾವು    ||೩೯೨||

ನೋಡಿ ಉಡುಗೊರೆಯಿತ್ತು ವಿಶ್ವಕರ್ಮನಿಗೆ |
ಗಾಢದಿಂ ಪಾರ್ಥ ಕಳುಹಿದನು ಸುರಪುರಕೆ   ||೩೯೩||

ಧಾರಿಣೀಪತಿ ಕೇಳು ದ್ರುಪದ ತಾನಿತ್ತ |
ದ್ವಾರಕೆಗೆ ನಡೆತಂದನತಿಬೇಗ ನಗುತ        ||೩೯೪||

ಚರರು ಕಾಣುತ ದ್ರುಪದಬರವ ಮುದದಿಂದ |
ಮಣಿದು ಮಾಕಾಂತನಿಗೆ ಮುಗಿದು ಕರಯುಗವ        ||೩೯೫||

ಮುದದಿ ಪೇಳ್ದರುಹಿದರ್ ಕೇಳಿದಾಕ್ಷಣದಿ |
ಕರೆಸಿದನು ಪ್ರೇಮದಲಿ ಕಮಲಾಕ್ಷನೊದಗಿ    ||೩೯೬||

ವಚನ

ಆ ಸಮಯದೊಳು ದ್ರುಪದರಾಯನಯ್ತಂದು ದಾನವಾಂತಕಗಂ ನಮಿಸಲಾ ಶ್ರೀಕೃಷ್ಣನು ಮನೋಹರುಷದಿಂ ಮತ್ತವನೊಡನಿಂತೆಂದಂ –

ರಾಗ ಕಾಂಭೋಜಿ ಝಂಪೆತಾಳ

ಕ್ಷೇಮವೇ ನಿನಗು ಧರ್ಮಜಾದಿಗಳಿಗು ಪರಿ | ಣಾಮದಿಂದಿಹರೆ ಪೇಳಯ್ಯ ||
ನೀ ಮನೋಹರುಷದಿಂದಯ್ತಂದುದೇಕಿಲ್ಲಿ | ಕಾಮಿತವ ನೀ ಪೇಳು ದ್ರುಪದ         ||೩೯೭||

ಇಂತೆಂದ ಗೋವಿಂದನಡಿಗೆರಗಿ ಧರ್ಮಜನು | ಸಂತಸದಿ ಕಳುಹಿದುಡುಗರೆಯ ||
ತಾಂ ತವಕದಿಂದಿಟ್ಟು ತಳುವದವರರುಹಿದುದ | ನಿಂತು ಬಿನ್ನಪಗೆಯ್ದನಾಗ         ||೩೯೮||

ಹರಿಯೆ ಲಾಲಿಪುದು ನಿಮ್ಮ ಗ್ರಜನ ಸುತೆಯ | ದೊರೆಯನುಜ ನರನ ಸಂಭವಗೆ ||
ಪರಿಣಯಂ ಗೆಯ್ಯಲೋಸುಗ ನಿಮ್ಮನೆಲ್ಲರನು | ತೆರಳ್ವುದೆನುತೊಲಿದು ಧರ್ಮಜನು         ||೩೯೯||

ಕಳುಪಿದನು ತನ್ನೆನುತ ದ್ರುಪದನುಸುರಲ್ ಕೇಳು | ತಲೆ ತವಕದಿಂದಂಬುಜಾಕ್ಷ ||
ಒಲವು ಮಿಗೆ ಮನ್ನಿಸುತಲವನೊಡನೆ ಸೂಚಿಸಿದ | ಸಲುಗೆಯಿಂದಾಗ ಶ್ರೀಹರಿಯು ||೪೦೦||

ಕರೆಯಯ್ಯ ಹಲಧರನು ಕಡು ಚಿಂತೆಯಿಂದಿಹನು | ದುರುಳರಿಂದಾದ ಕಾರ್ಯಕ್ಕೆ ||
ತೆರಳುತತಿವಿನಯದಿಂದುಚಿತವರಿತೊಡನೆ ಪರಿ | ಪರಿಯಿಂದ ನಡೆ ನಿಲ್ಲಬೇಡ     ||೪೦೧||

ಶ್ರೀಕಾಂತನಿಂತೆನಲು ದ್ರುಪದರಾಯನು ರೇವ | ತೀಕಾಂತನೆಡೆಗಯ್ದು ತಾನು ||
ಏಕಾಂತಮಂದಿರದೊಳಿರಲುಡುಗೊರೆಯನಿತ್ತು | ತಾ ಕಯ್ಯ ಮುಗಿದು ಬಳಿಕೆಂದ   ||೪೦೨||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಜೀಯ ಲಾಲಿಸು ಹಲಧರನೆ ಸು | ಪ್ರೀಯದಿಂದಲೆ ಶಶಿಕುಲೋದ್ಭವ |
ರಾಯ ಧರ್ಮಜ ಕಳುಹಿಹನು ಸುವಿ | ಡಾಯದಿಂದ    ||೪೦೩||

ಪರಿಣಯವನಭಿಮನ್ಯುವಿಗೆ ತಾ | ವಿರಚಿಸಲು ನಿನ್ನಯ ಸುಪುತ್ರಿಯ |
ತೆರಳ್ವುದೆಲ್ಲರೆನುತ್ತ ತೋಷದಿ | ಪರಮಪುರುಷ        ||೪೦೪||

ಉಡುಗೊರೆಯ ಕಳುಹಿಹನು ಸಂತಸ | ದೊಡನೆ ಪೊರಡುವುದೆನಲು ಕೇಳುತ |
ಘುಡುಘುಡಿಸಿ ನೆಲನೊಡೆವ ತೆರದಲಿ | ಝಡಿದು ಹಲವ          ||೪೦೫||

ನಿದ್ರೆಯಿಂ ಮಲಗಿಹ ಮಹೋರಗ | ರೌದ್ರದಿಂ ತಾನೆದ್ದ ತೆರದಲಿ |
ರುದ್ರನಾವೇಶದಲಿ ಮೆರೆಯಲು | ಕುಧ್ರ ಬಿರಿಯೆ        ||೪೦೬||

ಕಂದ

ಇಂತದುಭುತ ರಭಸದಿ ಬಳಿ |
ಕಂ ತಳುವದೆ ದ್ರುಪದನೊಡನೆಯತಿ ನಿಷ್ಠುರದಿಂ ||
ಚಿಂತೆಯನುಳಿದುಂ ಪೇಳಿದ |
ನೆಂತೈ ಹಲಧರನ ವಿಕ್ರಮಾಟೋಪಗಳಂ    ||೪೦೭||

ರಾಗ ಭೈರವಿ ಝಂಪೆತಾಳ

ಏನೆಲವೊ ದ್ರುಪದ ನೀ | ನೇನಾಡಿದೆಯೊ ಈಗ |
ಸಾನಂದದಿಂದ ಮ | ಹಾನುತೋಷದಲಿ      ||೪೦೮||

ಸತ್ಯದಲಿ ಧರ್ಮಜನೆ | ನುತ್ತ ಪೇಳ್ವುದು ಲೋಕ |
ವ್ಯರ್ಥವಾಯಿತು ಭೀಮ | ಪಾರ್ಥರಿಂ ಪೆಸರು ||೪೦೯||

ಮಂದಮತಿಗಳು ಕಪಟ | ದಿಂದಯ್ದಿ ಮತ್ತೆನ್ನ |
ನಂದನೆಯನೊಯ್ದರೇ | ಹಂದೆಗಳು ಸಹಜ   ||೪೧೦||

ನರನು ಮೊದಲಿಗೆ ಯತೀ | ಶ್ವರನಂತೆ ತಾನಯ್ದಿ |
ವರ ಸುಭದ್ರೆಯನು ಚ | ಚ್ಚರದಿ ಕಳವಿನಲಿ    ||೪೧೧||

ಕೊಂಡೊಯ್ದುದಿಲ್ಲವೇ | ಪುಂಡುತನದಲಿ ಪುರಕೆ |
ಅಂಡಲೆವುದೇಕೆ ನಾ | ಕಂಡ ಕೆಲಸಕ್ಕೆ        ||೪೧೨||

ಭಾಮಿನಿ

ಆದರಾಲಿಸು ದ್ರುಪದ ಕೌರವ |
ರೀ ದುರುಳರಿವರನು ಪರೀಕ್ಷಿಸಿ |
ಮೇದಿನಿಯ ಕೊಡದಟ್ಟಿಹರು ಮತ್ತೇನದಂತಿರಲಿ ||
ಓದುವರು ವೇದವನು ಜಲದಲಿ |
ಸಾಧಿಸುತ ಹಾಕುವರು ಗಾಳವ |
ಮಾಧವನಿಗಿವರಯ್ದೆ ಸ್ನೇಹಿತರಂತೆ ತಿಳಿಯಲ್ಕೆ         ||೪೧೩||

ಕಂದ

ನಡೆ ನಡೆಯೆನುತಂ ದ್ರುಪದನ |
ಕಡು ಕಿನಿಸಿನಿಂ ಹಲವನಯ್ದೆ ತಿರುಗಿಸುತ್ತಂ ||
ಫಡ ಫಡ ಪಾಂಡವರಾ ಪೆಸ |
ರಡಗಿಪೆನೆಂದೆನುತೆ ಪೊರಟನಾ ಕ್ಷಣದೊಳಗಂ        ||೪೧೪||

ವಚನ

ಈ ರೀತಿಯಿಂದಾರ್ಭಟಿಸುತ್ತಂ ಹಲಧರ ಪೊರಟುದನೀಕ್ಷಿಸುತಾ ದ್ರುಪದನಯ್ತಂದು ಶ್ರೀಕೃಷ್ಣನೊಡನಿಂತೆಂದಂ –

ರಾಗ ಆನಂದಭೈರವಿ ಆದಿತಾಳ

ಕೆಟ್ಟಿತು | ಕಾರ್ಯ | ಕೆಟ್ಟಿತು          || ಪಲ್ಲವಿ ||
ಕೆಟ್ಟಿತಯ್ಯ ಕಾರ್ಯವು ಶ್ರೀ | ಕೃಷ್ಣ ನಾನೇನ ಹೇಳಲಿ ||
ಹರುಷದಿ | ಹಾಹಾ | ಸರಸದಿ       ||೪೧೫||

ಬಲರಾಮನೊಡನೆ ಪೋಗಿ | ತಿಳಿಸು ಕಾರ್ಯದೊಲವ ||
ನಲವಿಂದ | ನೀ ನಿ | ಶ್ಚಲದಿಂದ     ||೪೧೬||

ಉಡುಗೊರೆಯನೊಪ್ಪಿಸಲು | ಘುಡುಘುಡಿಸುತ್ತ ತನ್ನೊಳು ||
ಜರೆದನು | ಧರಣಿಪ | ರಿರವನು      ||೪೧೭||

ಹಿಂದಾದ ಮಾಯಗಳು ಪಾಂಡವ | ರಿಂದಲವರ ಕೊಲುವೆನೆನುತ ||
ಪೊರಟನು | ಕೋಪದೊ | ಳಿದ್ದಷ್ಟಾನು        ||೪೧೮||

ನೀನಲ್ಲದನ್ಯತ್ರನವನ | ಕಾಣುತ್ತ ಮನ್ನಿಸುವರೊರ್ವ ||
ರಿಲ್ಲಯ್ಯ | ಸ್ವಾಮಿ | ಕೇಳಯ್ಯ       ||೪೧೯||

ತಡವ ಮಾಡಬೇಡವೆಂದು | ನುಡಿದ ದ್ರುಪದನ ಮಾತಂದು ||
ಲಾಲಿಸಿ | ಭಕ್ತರ | ಪಾಲಿಸಿ ||೪೨೦||

ಪೊರೆವ ಬಿರುದು ತನ್ನದೆಂದು | ಹರಿಯು ತಾ ಭರದೊಳಯ್ತಂದು ||
ನಗುತಲಿ | ಅಣ್ಣಗೆ | ರಗುತಲಿ        ||೪೨೧||

ಪೇಳ್ದನಂತರಂಗದಲ್ಲಿ | ತಾಳ್ದು ಶಾಂತಿಯ ಸರ್ವೇಶ ||
ನೀತಿಗಳ | ನವಗುರೆ | ಮಾತುಗಳ  ||೪೨೨||

ರಾಗ ಮಾರವಿ ಆದಿತಾಳ

ಯಾಕೊ ಈ ಪರಿಹಾಸ್ಯ | ಅಣ್ಣ ವಿ |
ವೇಕಗಳೆಂಬುದ ಮರೆತೆಯ ಬಿಡು ಬಿಡು || ಯಾಕೊ   || ಪಲ್ಲವಿ ||

ವಿಧಿಲಿಖಿತಗಳನ್ನು | ಮೀರುವ | ಸದಮಲರಾರಿನ್ನು ||
ಅದರೊಳಗೀಶ್ವರನಪ್ಪಣೆಯಿಂದಾಹುದು ತಾ | ನದ ತುದಿಗೆ ಕಟೂಗ್ರವೇಕೊ        ||೪೨೩||

ಕಥೆಯನು ಕೇಳ್ದರಿಯ | ನೀ ದಶ | ರಥಭೂಪತಿಯ ||
ಅತಿಶಯದಿಂದುರು ಪರಿಣಯವಾದುದು | ಪೃಥಿವಿಯೊಳಾನರುಹಲು ತಿಳಿಯಲು    ||೪೨೪|

ದೂರುವೆ ಪಾಂಡವರ | ನಿನಗಾ | ಕೌರವರೇನಹರೊ ||
ಧಾರಿಣಿಯಲಿ ಮಾಯಾವಿಗಳೆಂಬುದು | ಮೂರು ಲೋಕದಿ ಪ್ರಸಿದ್ಧ ಕಣಾಯಿಲ್ಲಿ     ||೪೨೫||

ಅರಗಿನ ಮನೆ ಮಾಡಿ | ಕುಂತಿಜ | ರರಿಯದಂದದಿ ಕೂಡಿ ||
ಉರುಹಲದೆಂತೊ ಜೀವಿಸಿದರೊ ನಿನ್ನೊಳ | ಗರಿತು ವಿಚಾರಿಸು ಧರಣಿಪ ಸತ್ಯವ  ||೪೨೬||

ಬಂಧುತ್ವಗಳಲ್ಲಿ | ಸಂತಸ | ಸಂದೇಹಗಳಲ್ಲಿ ||
ಕುಂದನೆಣಿಸುವರೇನೈ ಶ್ರೀಕೃಷ್ಣನೊ | ಳೆಂದನು ಹಲಧರನತಿ ರೌದ್ರಗಳೊಳು      ||೪೨೭||

ಭಾಮಿನಿ

ಬಾರೊ ಬಾರೆಲೊ ಕೃಷ್ಣ ನಿನ್ನ ವಿ |
ಕಾರದುರುಮಾಯಕಗಳೆಂಬುದ |
ನಾರರಿಯರೆಲೆ ಲೋಕದಲಿ ಸಾರತ್ತಲೆಂದೆನುತ ||
ತೋರುತಲಿ ಕಂಗಳಲಿ ಕಿಡಿಗಳ |
ಭೋರನಬ್ಬರಿಸುತ್ತಿರಲು ವರ |
ನಾರದನು ನಡೆತಂದನಾಯೆಡೆಗಾ ತತುಕ್ಷಣಕೆ         ||೪೨೮||

ಕಂದ

ಕಂಡಾ ಋಷಿಯಂ ಈರ್ವರು |
ಮಂಡೆಯನುಂ ಬಗ್ಗಿಸಿ ಮಣಿದುಂ ನಿಂದಿರಲ್ಕವ ||
ರುಂಡವನೊಲೆದುಂ ಭಯಮಂ |
ಕೊಂಡಿಹ ಸಭೆಯೊಳಗೆ ನುಡಿದನಾ ಯತಿತಿಲಕಂ      ||೪೨೯||

ರಾಗ ಶಂಕರಾಭರಣ ಅಟತಾಳ

ಏನಯ್ಯ | ರಾಮ | ಏನಯ್ಯ         || ಪಲ್ಲವಿ ||

ಏನಯ್ಯ ಈ ಅವ | ಮಾನದಚ್ಚರಿಗಳು |
ಕಾಣಲೆಮಗೆ ನ | ವೀನ ತೋರುತಲಿದೆ || ಏನಯ್ಯ     || ಅನು ಪಲ್ಲವಿ ||

ಸಾಕು ಸೈರಿಸು ಸೈರಿಸಯ್ಯ | ಅವಿ | ವೇಕದ ನಡತೆಯು ಜೀಯ |
ಮೂರು | ಲೋಕವು ಮೆಚ್ಚದಲ್ಲಯ್ಯ || ಏ ರಾಯ |
ನಾಕೇಶ ಮೊದಲಾದ | ನೇಕ ಸುರರು ಮಹಾಪ |
ರಾಕಿಂದುಧರ ಸಹ | ವ್ಯಾಕುಲತೆಯೊಳಿಹ || ಏನಯ್ಯ ||         ||೪೩೦||

ಶೇಷಾವತಾರಿಯು ನೀನು | ವೈಕುಂ | ಠೇಶ ನಾರಾಯಣನಿವನು |
ಯಾದ | ವಾ ಸಮೂಹವು ಸುರರಿನ್ನು || ಇದಕೊ |
ಏಸು ಬಣ್ಣಿಸುವಿಯೀ | ರೋಷದಾಯಸಗಳೀ |
ವೇಷಗಳೇಂ ಪರಿ | ಹಾಸ್ಯ ಕಾರಣವೆಲ್ಲ || ಏನಯ್ಯ     ||೪೩೧||

ಯಾರಯ್ಯ ಹೊಣೆ ಪಾಂಡವರಿಗೆ | ಅವರ್ | ಯಾರು ಈ ಭ್ರಮೆ ಯಾಕೆ ನಿನಗೆ |
ಹೊಂತ | ಕಾರಿಗಳಹುದವರ್ಕಡೆಗೆ || ಕಯ್ |
ಮೀರಿಯೆ ಕುಂತಿಕು | ಮಾರರೊಳ್ ಸೆಣಸಲು |
ತೋರುವ ನಿಮ್ಮವ | ತಾರಗಳುಳಿವುದೆ || ಏನಯ್ಯ    ||೪೩೨||

ಬೇಡ ನೀ ಬಿಡು ಆತ್ಮಘಾತ | ಕಯ್ | ಮಾಡುವ ಮನವ ಪ್ರಖ್ಯಾತ |
ಹರಿ | ದಾಡುವ ಹೊಳೆಯೊಳು ನಿರತ || ಓ |
ಡಾಡಿಸಬೇಕ | ಲ್ಲದೆ ಹರ ಗೋಲನ್ನು |
ಕೋಡಗಲ್ಲಿನ ಬೆಟ್ಟ | ದಲಿ ನಡೆಸುವರುಂಟೆ || ಏನಯ್ಯ ||೪೩೩||

ಭಾಮಿನಿ

ಎಂದ ಋಷಿವರನುತ್ತರಕೆ ಮನ |
ದಂದು ಮುಸಲವನಿಳುಹಿ ಹದನೇ |
ನೆಂದು ನಗುತೀಕ್ಷಿಸಿದನಾ ಗೋವಿಂದನಾನನವ ||
ಬಂದೆರಗಿ ಮುನಿಚರಣಕನಿತರೊ |
ಳಂದದಿಂ ಸುರಪುರಕೆ ತೆರಳಿದ |
ನಿಂದುವಂಶೋದ್ಭವನೆ ಕೇಳಾಯತಿ ತತುಕ್ಷಣಕೆ        ||೪೩೪||

ಕಂದ

ಬಳಿಕಂ ಹಲಧರನಿತ್ತಂ |
ನಳಿನಾಕ್ಷಗೆಂದನಾಗಳತಿ ಹರುಷದಿಂದಂ ||
ತಳುವಿನ್ನೇತಕೆ ಪೋಗುವ |
ಯೇಳುವುದು ನೀನು ವಿನಯದಿ ಪಾಂಡವರೆಡೆಗಂ      ||೪೩೫||

ದ್ವಿಪದಿ

ಅಣ್ಣನೆಂದುದ ಕೇಳಿ ಕಡು ಹರುಷದಿಂದ |
ಪನ್ನಗಾರಿಧ್ವಜನು ತಾ ಪದುಳದಿಂದ ||೪೩೬||

ಕರೆಸಿ ದೇವಕಿ ಮುಖ್ಯ ವಸುದೇವರುಗಳ |
ಸಿರಿಯು ಮೊದಲಾದಷ್ಟಮಹಿಷಿಯರ ಕೇಳಾ  ||೪೩೭||

ಸಾತ್ಯಕಿಯೊಡನೆ ರಥವ ತರಿಸಿ ತತ್ ಕ್ಷಣದಿ |
ದೈತ್ಯಾರಿ ಬಲಭದ್ರರೊಡವೆರಸಿ ಭರದಿ       ||೪೩೮||

ದೇವಕಿ ಪ್ರಮುಖ ನಾರಿಯರು ಸಹ ಸೇರಿ |
ಸಾವಧಾನದಿ ಪೊರಟ ಪುರವನಾ ಶೌರಿ      ||೪೩೯||

ಪಥವಿಡಿಯಲಿಂದ್ರಪ್ರಸ್ಥಕೆ ಸೊಬಗಿನಿಂದ |
ಸ್ತುತಿಸುತಿರ್ದರು ನಾಕದವರು ಮೇಲಿಂದ     ||೪೪೦||

ನಿಗಮವಚನಗಳಿಂದ ಪೊಗಳ್ವ ಪಾಠಕರು |
ಬಗೆಬಗೆಗಳಿಂದ ನರ್ತಿಪ ನೃತ್ಯಾಂಗನೆಯರು ||೪೪೧||

ಛತ್ರ ಚಾಮರವಿಡಿದು ಚೆಲುವಂಗನೆಯರು |
ಪಕ್ಷೀಂದ್ರ ಸೇವಿಸುವ ಸುಗುಣ ಚಾರಕರು     ||೪೪೨||

ಭೇರಿ ಶಂಖ ಮೃದಂಗ ಕಹಳೆರವದಿಂದ |
ಧಾರಿಣಿಯದುರ್ವಂತೆ ಹರಿಯು ನಡೆತಂದ    ||೪೪೩||

ಪಯಣದಲಿ ಪಯಣಮಂ ನಡೆಯೆ ಶ್ರೀನಾಥ |
ದಯದಿಂದ ಪಾಂಡವರ ಮನೆಗೆ ಪ್ರಖ್ಯಾತ    ||೪೪೪||

ಆ ಸಮಯದಲಿ ದ್ರುಪದ ಮುಂದಯ್ದಿ ಭರದಿ |
ತೋಷದಿಂ ಸೂಚಿಸದ ಧರ್ಮಜಗೆ ಮುದದಿ   ||೪೪೫||

ಇದಕೊ ಶ್ರೀಹರಿ ಬಂದನೆಂದು ಕುಣಿದಾಡಿ |
ಮಧುಮಥನನನು ಸ್ಮರಿಸಿ ಮುದದಿ ನಲಿದಾಡಿ         ||೪೪೬||