ಕಂದ

ಕೇಳ್ದಾ ಕ್ಷಣದಿಂ ಧರ್ಮಜ |
ತಾಳ್ದು ಹರುಷ ತವಕದಿ ಪೇಳ್ದನು ಪಾರ್ಥನೊಳುಂ ||
ಆಳ್ದನ ದರುಶನಕೆ ಪೊರಟ |
ಪೇಳ್ದನತಿಸಂಭ್ರಮದಿ ಕರಗಳ ಜೋಡಿಸುತಂ ||೪೪೭||

ವಚನ

ಈ ರೀತಿಯಿಂದ ಧರ್ಮಜಾರ್ಜುನರ್ ಸಹಿತ ಶ್ರೀ ಕೃಷ್ಣನಂ ಕಂಡು ಸ್ತುತಿಗೆಯ್ಯಲೊಡನತಿ ಕಾರುಣ್ಯದಿಂ ಕಮಲಾಕ್ಷನವರೊಡನತಿ ವಿನಯದೊಳಿಂತೆಂದಂ –

ರಾಗ ಸೌರಾಷ್ಟ್ರ ತ್ರಿವುಡೆತಾಳ

ಕೇಳು ಧರ್ಮಜ ಕ್ಷೇಮವೇ ನಿ | ನ್ನಾಲಯದಿ ನೀವ್ ಸರ್ವಮಂದಿಯು |
ಹೇಳು ಹೇಳೈ ಹರುಷದಿಂದಲಿ | ಭೂಲಲಾಮ          ||೪೪೮||

ಅತ್ತೆಗಳು ತಾವೇನ ಮಾಳ್ಪರು | ಮತ್ತೆ ದ್ರೌಪದಿ ಸುಖದೊಳಿರುವಳೆ |
ಇತ್ತಲನಿಲಜ ಪಾರ್ಥಯಮಳರು | ಸ್ವಸ್ಥದಿಂದ ||೪೪೯||

ಸೇವೆಗನುಕೂಲಿಗಳೆ ನಿಮಗಾ | ಲಾವರೊಳು ಸಂಶಯಗಳಿಲ್ಲವೆ |
ಭೂವಿಬುಧತತಿಧ್ಯಾನ ನಡೆವುದೆ | ಠಾವಿನಲ್ಲಿ  ||೪೫೦||

ಎಂದೆನುತಲೀ ಪರಿಯೊಳಗೆ ಗೋ | ವಿಂದ ನಮ್ರತೆಯಿಂದ ಬೆಸಗೊಳ |
ಲಂದು ಯಮಜನು ಕರವ ಮುಗಿದಿಂ | ತೆಂದನಾಗ    ||೪೫೧||

ರಾಗ ಮಾರವಿ ಝಂಪೆತಾಳ

ಕಮಲಾಕ್ಷ ಲಾಲಿಸೈ ಕರುಣದಿಂದೊಲಿದು |
ವಿಮಲರತ್ನಾಭರಣ ವಿಶ್ವ ಸಂಚರಣ                 || ಪಲ್ಲವಿ ||

ದೇವ ನಿನ್ನ ಕಟಾಕ್ಷದಿಂದ ಸುಕ್ಷೇಮಿಗಳು |
ಭಾವಿಸಲು ಸರ್ವರೀವರೆಗೆ ಕೇಳು ||
ಪಾವಮಾನಿಯು ಪಾರ್ಥರೀ ಮಾದ್ರಿಸುತರು ತಾವ್ |
ಸೇವೆಗನುಕೂಲಿಗಳ್ ಸತತ ಸೌಖ್ಯದೊಳು   ||೪೫೨||

ತೆರಳಬೇಕೈ ಮನೆಗೆ ತಡವಾಗುತಿದೆ ಮತ್ತೆ |
ಪರಿಪರಿಯೊಳುಪಚಾರವನು ಪೇಳ್ವಡೆ ||
ಧರೆಯೊಳಾನೆಷ್ಟರವ ದಾನವಾಂತಕ ತಿಳಿಯೆ |
ಅರಿಯೆವೆಲೆ ತಮ್ಮಂತಃಕರಣವೆಲೆ ಕೃಷ್ಣ      ||೪೫೩||

ಇಂತೆನಲು ಧರ್ಮಜನ ಸಂತವಿಸಿ ನಡೆತಂದು |
ಸಂತಸದೊಳರಮನೆಯ ಬಾಗಿಲಲಿ ||
ನಿಂತು ರಥವಿಳಿದು ಶ್ರೀಕಾಂತ ಬಲಭದ್ರ ಸಹ |
ಯಿಂತು ಬರೆ ಸರ್ವ ನಾರಿಯರು ಬಳಿಕ       ||೪೫೪||

ಪೊಗಳುತ್ತಲಂತಃಪುರದಿ ಪೀಠದಿಂ ಕುಳಿತು |
ಬಗೆಬಗೆಯ ಪೂಜೋಪಚಾರಗಳನು ||
ಸೊಗಸಿನಿಂ ಕೈಗೊಂಡು ಸರ್ವಸಂಭ್ರಮದಿಂದ |
ನಗಧರನು ಧರ್ಮಜನ ಕರೆದೆಂದನೊಲಿದು   ||೪೫೫||

ಭಾಮಿನಿ

ಬಂದೆವೈ ಭೂಪಾಲ ಕೇಳ್ ನ |
ಮ್ಮಿಂದಲಾಹ ಸುಕಾರ್ಯವೇನದ |
ನಿಂದು ಪೇಳಲು ಮಾಳ್ಪೆ ತವಕದಿ ನಿನ್ನ ದಯದಿಂದ ||
ಎಂದೆನಲು ಶ್ರೀಕೃಷ್ಣನುರುಪದ |
ದ್ವಂದ್ವಕಭಿನಮಿಸುತ್ತ ನುಡಿದನು |
ಚಂದದಿಂ ಕುಂತೀಕುಮಾರಕ ಕೇಳು ಭೂವರನೆ        ||೪೫೬||

ರಾಗ ಭೈರವಿ ಝಂಪೆತಾಳ

ಏನ ಹೇಳಲಿ ಸ್ವಾಮಿ | ಈ ನುಡಿಗೆ ಸಂತಸದಿ |
ಮಾನನಿಧಿ ಭಕ್ತರಾ | ಧೀನ ನೀನೆಂದು        ||೪೫೭||

ಪೊಗಳ್ವದೇನದು ಪುಸಿಯೆ | ಜಗದೊಳಗೆ ಜೀವರನು |
ಮಿಗೆ ಕುಣಿಸಲಿವರ್ಯಾರು | ನಗುವದಿನ್ನೇನು ||೪೫೮||

ನಿನ್ನಗ್ರಜನ ಸುತೆಯ | ನಿನ್ನ ಪಾರ್ಥನ ಸುತಗೆ ||
ಮನ್ನಿಸುತ ಜನಜನಿತ | ದಿಂ ನಲವಿನಿಂದ    ||೪೫೯||

ಪರಿಣಯವನೆಸಗಲೆಂ | ದೆನುತ ಜಯಜಯವೆನಲು ||
ಪರಮ ವೈಭವದಿಂದ | ಪುರದಿ ಪದುಳದಲಿ   ||೪೬೦||

ಕಂದ

ಆದಡೆ ಧರ್ಮಜ ಸುಖದುಃ |
ಖಾದಿಂಗಳಿಗಯ್ದೆ ಪರತ ಸಂತತಿಗಳನುಂ ||
ಮೇದಿನಿಯೊಳು ಪುಟ್ಟಿದವಂ |
ಸಾದರದಿಂ ತಿಳಿದು ನೋಡು ನಿನ್ನಯ ಮನದಿಂ       ||೪೬೧||

ಕರೆಸೈ ಕೌರವನಂ ಚ |
ಚ್ಚರದಿಂದವನರಸಿ ಭಾನುಮತಿ ಮುಖ್ಯರನುಂ ||
ಮರೆವುದಯೋಗ್ಯಂ ಸತ್ಯಾ |
ತ್ಮರಿಗೆಲೆ ಭೂಪವರೇಣ್ಯನೆ ಬಹುವಿತರಣದಿಂ ||೪೬೨||

ಇಂತೆನೆ ಶ್ರೀಕಾಂತನು ತಾಂ |
ಸಂತಸದಿಂ ಯಮಜನಾಗ ನಕುಲನ ಬಳಿಕಂ ||
ತಾಂ ತಳುವದೆ ಸತಿ ದ್ರೌಪದಿ |
ಯಂತಃಪುರಕಯ್ದಿ ಕರೆಸಿ ಮತ್ತಿಂತೆಂದಂ      ||೪೬೩||

ರಾಗ ಆಹೇರಿ ಝಂಪೆತಾಳ

ಕರೆಯಬೇಕಂತೆ ಕೌರವನ | ಇದಕೊ ಅವ | ನರಸಿ ಸಹವಾಗಿ ಪರಿಣಯಕೆ ಬರುವುದಕೆ      || ಪ ||
ನಕುಲ ಕೇಳ್ ಪೇಳುವೆ ನರಕವಿದಾರಣನೆಂದ |
ಯುಕುತಿಯಿದು ಸಹಜ ಅವರಿಂದಾಹುದೇನು ||
ಸಕಲರುವೆರಸಿ ಬಂದರು ಬರಲಿ ಬರದಿರಲಿ |
ಪ್ರಕಟವಾಗಿರಲಿ ಲೋಕಕೆ ಪೋಗು ನೀ |
ನು ಕಳಂಕಿಯಾಗದೆ ಕರಿಪುರಕೆ  ದ್ರೌಪದಿಯ |
ಸುಖತರದೊಳೊಡಗೊಂಡು ಮನಕೆ ||
ದೃಢವಾಂತಿ | ದಕೆ ಕಡೆಯಲಿವರಾಲೋಚಿತದಿ         ||೪೬೪||

ಭಾನುಮತಿ ಮುಖ್ಯರಂ ಕರೆಯಲೀ ದ್ರೌಪದಿಯ |
ನೀನಾ ನರೇಶ್ವರನ ಬರಲು ಪೇಳ್ವದು ಬಳಿಕ ||
ಏನಾದರಾಗಲಿ ತಮ್ಮ | ನಿನ್ನ ಮಾನಾಭಿ |
ಮಾನ ನಮ್ಮದು ಕೇಳು ತಮ್ಮ ||
ಇನ್ನು | ಅನುಮಾನಿಸದೆ ಚಚ್ಚರದಿ ಸುಮ್ಮ | ನೆ ಹೀಗೆ |
ಯಾನವನ್ನಡರಿ ತೆರಳುವುದು ಧರ್ಮ         ||೪೬೫||

ಅಣ್ಣ ನೀ ಕೇಳು ನೀನೆಂದ ನುಡಿ ಸದ್ಧರ್ಮ |
ವೆಣ್ಣಿಸುವೆ ನಾನಾದರಾಗಲಾ ಕೌರವನು ||
ಪುಣ್ಯಜನೇಶ್ವರನ ಮುಖ್ಯರಿಗೆ ತಾ ಗುರುವು |
ತಿಣ್ಣಗರ್ವಗಳಿಂದಲೆನ್ನ | ನಿಷ್ಠುರಗ |
ಳನ್ನು ತೋರ್ಪುದನುಸಿರ್ವೆ ಸಂಪನ್ನ          ||೪೬೬||

ವಚನ

ಇಂತೆನುತ ನಕುಲನುಸಿರಲಾ ಮಾತಿಗೆ ಯಮಜನತಿಸಂತಸಪಡುತಲಿಂತೆಂದಂ –

ರಾಗ ಸಾಂಗತ್ಯ ರೂಪಕತಾಳ

ಸೈರಿಸಲು ಬೇಕಯ್ಯ ತಮ್ಮ ನಮ್ಮಯ ಕಾರ್ಯ | ವೈರಿಗಳೆಡೆಯೊಳು ಪೌರುಷವು ಬೇಡ    ||೪೬೭||

ಪಾಸಟಿಯೆ ನಿನಗಾತ ಗೌರವದಿಂದಲಿ ಬೇಗ | ಬರಹೇಳಿ ನಮ್ರತೆಯಿಂದಲಿ ಬಹುಬೇಗ      ||೪೬೮||

ಎಂದ ಧರ್ಮಜನ ಪಾದ ದ್ವಂದ್ವಕೆರಗಿ ನಲ | ವಿಂದ ನಕುಲದ್ರೌಪದಿಯರು         ||೪೬೯||

ಬಂದರು ದಾರಿವಿಡಿದು ಕರಿಪುರಕೆ ನಿ | ನ್ನಂದದಿಂ ಮತ್ತೆ ಯೋಚಿಸುತ    ||೪೭೦||

ಚಚ್ಚರದಿಂದಯ್ದಿ ಹಸ್ತಿನಾಪುರವ ನಿ | ನ್ನಚ್ಚರಿಯಿಂದಯ್ದೆ ಪೋಗಲು        ||೪೭೧||

ಚಚ್ಚರದಿಂ ಕಂಡು ಚರನಯ್ದಿ ಕೌರವ | ಗೆಚ್ಚರಿಸಿದ ಸೊಬಗಿನಿಂದ         ||೪೭೨||

ಭಾಮಿನಿ

ಚರರ ನುಡಿಯನು ಕೇಳ್ದು ಕೌರವ |
ನರರೆ ತನಗಿದು ಚೋದ್ಯವೆನುತಲೆ |
ಕರೆಸಿ ನಕುಲ ದ್ರೌಪದಿಯರನು ನಿಜ ಸಭಾಸ್ಥಳಕೆ ||
ಮರೆಯದಲೆ ಮನ್ನಿಸುತ ಮನದಲಿ |
ಕರಗಿ ಕಾತರಿಸುತ್ತಲವರೊಳು |
ತರುಣಿ ದ್ರೌಪದಿಯನ್ನು ಕಳುಹಿದನರಸಿಯಿದ್ದೆಡೆಗೆ      ||೪೭೩||

ವಚನ

ಈ ಪ್ರಕಾರ ನಡೆತಂದ ನಕುಲನಂ ಕರೆದು ಕೌರವ ಮತ್ತಿಂತೆಂದಂ –

ರಾಗ ತೋಡಿ ಅಷ್ಟತಾಳ

ಏನಯ್ಯ ನೀ ಬಹು ಬಳಲಿ ಬಂದಿಹೆಯಿಲ್ಲಿ | ಸಾನಂದದಿಂದಲೀಗ ||
ಏನಾದರೀಗ ನವೀನ ಕಾರ್ಯಗಳನು | ಮಾನವಿಲ್ಲದೆ ಪೇಳಯ್ಯ ||೪೭೪||

ಪೇಳುವದೇನಣ್ಣ ಪಾರ್ಥನ ಸುತಗೆ ಸ | ಲ್ಲೀಲೆಯೊಳ್ ಬಲಭದ್ರನ ||
ಬಾಲೆಯ ಲಗ್ನಕ್ಕೆ ಕರೆಯಲು ನಿನ್ನ ಕೃ | ಪಾಳು ಧರ್ಮಜನಟ್ಟಿದ ||೪೭೫||

ಅಟ್ಟಿದ ಮಾತಿದು ಸಹಜವು ನಕುಲ ನಿ | ಮ್ಮಿಷ್ಟವು ಸಂತೆನುತ ||
ದುಷ್ಟ ಭಾವದಲಿ ನಮ್ಮರ್ತಿಗಳೆಯಲು ಪಡ | ಬಿಟ್ಟು ಕಳುಹಿದನೇನೈ      ||೪೭೬||

ಅಣ್ಣ ಕೇಳೀ ಪಾರ್ಥಸಂತತಿಯೊಳಗಾಗ | ರುಣ್ಣದುಳಿದರೆ ಹೇಳು ||
ಪುಣ್ಯವೆ ಕಾರಣ ಪರಿಕಿಸಲೇನಗ್ರ | ಗಣ್ಯ ನೀ ತೆರಳಬೇಕೈ       ||೪೭೭||

ಆದರು ದಾಯಾದ್ಯಮತ್ಸರ ಬಿಡುವುದೆ | ಮೇದಿನಿಯೊಳಗೆ ತಮ್ಮ ||
ಮಾದುದಿಲ್ಲಯ್ಯ ನೀವೆಸಗಿ ದುರುಕ್ತಿಯು | ವೇದಿಸಲೇಕಿದಕೆ      ||೪೭೮||

ಬಂದುದಿಲ್ಲಣ್ಣ ನಾ ಬಾಧಿಸುವರೆ ನಿನ್ನ | ನಿಂದು ಏಕಾಂಗಿಯಾಗಿ ||
ಸಂದೇಹಗೊಂಡು ನಿಷ್ಠುರವಾಡದೆ ಹೀಗೆ | ನಿಂದಿಸಿ ನಮ್ಮ ನೀನು         ||೪೭೯||

ಸಾಕು ನಿಂದಿಸುವದಿದೇತಕೆ ಪೊಸತಾಗಿ | ವ್ಯಾಕುಲದಿಂದ ತಮ್ಮ ||
ಸಾಕಾರಿ ನಿಮಗಾ ಕೃಷ್ಣನೆಂಬವನ | ಪೋಕನು ವಿರಚಿಸಲು      ||೪೮೦||

ವಿರಚಿಸಲೇನಣ್ಣ ಕೃಷ್ಣ ಸಾಕಾರದಿ | ನಿರತ ಜೀವಿಪುದು ಸಹಜ ||
ದುರುಳರುಪದ್ರವಗಿರಿಯ ಸಂಹರಿಸಲು | ವರ ಕುಲಿಶಗಳಲ್ಲದೆ   ||೪೮೧||

ಅಲ್ಲದಹುದುಯೆಂಬುದೆಲ್ಲವ ಬಲ್ಲೆನು | ನಿಲ್ಲು ಸೈರಿಸು ತುದಿಗೆ ||
ಕಳ್ಳನ ಬಲುಮೆಯ ತೋರ್ಪೆನು ತವಕಿಸ | ದಿಲ್ಲಿ ನಿಜದಿ ನಕುಲ ||೪೮೨||
ತೋರುವದೇನೊ ನೀ ನಿಜವಾಗಿ ತುದಿಯಲಿ | ಕೌರವ ಕಂಡ ಮಾತ ||

ಬೇರೆ ಯೋಚಿಸಲೇಕೆ ತಿಳಿಯದೆ ನಿನಗೆ ವಿ | ಚಾರಿಸಿ ಕಾರ್ಯಗಳು       ||೪೮೩||
ಕಾರ್ಯವಿರ್ದಡೆ ನಾ ಕಾಂಬೆನು ಕಡೆಯಲಿ | ಕಾರ್ಯವು ನಿನಗೇತಕೆ ||

ಧೈರ್ಯವೆಷ್ಟೆಲವೊ ಛೀ ನಡೆ ಹೋಗು ತರಳನೆ | ಹೀನಮಾತುಗಳಾಡದೆ ||೪೮೪||
ಛೀ ಎನ್ನನೆಂದರೆ ತರಳ ನಾನಾದರು | ಸೈರಿಸುವೆನು ನೋಡಿಕೊ ||

ಮಾತಿಗೆ ಮಾತಾಡದಿನ್ನೇಕೊ ಧೂರ್ತನೊಳ್ | ಸಾತಿಶಯವು ಕೌರವ    ||೪೮೫||
ಹುಡುಗ ನಿನಗೇತಕಿಂಥ ಸೊಕ್ಕಿನ ಮಾತು | ಬಡತನದಿಂದಿರದೆ ||

ಬಡಿವಾರವನು ಮಾಡಿ ಭ್ರಷ್ಟನಾಗಲು ಬೇಡ | ಜಡಜಾಕ್ಷನಿಂ ಬಳಿಕ       ||೪೮೬||
ಸಿರಿವಂತ ನೀನು ಬಡವರ್ ನಾವು ನಿನ್ನಲ್ಲಿ | ತಿರಿಯಲು ಬಂದುದಿಲ್ಲ ||

ಮರುಳಂಗ ನೀನಾಡಿ ಗರುವಿಸಲೇತಕೆ | ದೊರೆಯಾದರೇನು ಪೇಳಾ     ||೪೮೭||
ಬದುಕಲೆಂದೆನುತ ಬಿಟ್ಟರೆ ಧರ್ಮನೆಂಬಗೆ | ಬದಲಾಗಿ ಬಂತೆ ಭಾಗ್ಯ ||

ಮದದಿಂದ ಮಲಗಿದ ಮೃಗವನೆಬ್ಬಿಸುವರೆ | ಮದವೆಂತಿಪ್ಪುದೊ ಕೂಳು   ||೪೮೮||
ಮಲಗಿದುರಗನು ತಾ ತಲೆಯೆತ್ತಿ ಮರೆಯೆ ನ | ಕುಲ ಕಂಡರುಳಿಸುವುದೆ ||

ಗೆಲವೇಕೆ ಗೂಢವಿನ್ನೇಕೆ ಸಂತೋಷವಾ | ಯ್ತೆಲೆಲೊ ನಾ ಬಂದ ಪರಿ     ||೪೮೯||
ಬಂದ ದಾರಿಗೆ ಸುಂಕವಿಲ್ಲದನು ಕೇಳದ ಹಾ | ಗೊಂದು ಚೀಟನು ಕೊಡುವೆ ||

ಮುಂದುವರಿಯದೀಗ ಕಾಲವೇಳ್ಯದಿ ಪೋ | ಗಣ್ಣಂದಿರಿದ್ದೆಡೆಗೆ    ||೪೯೦||

ಕಂದ

ಕೌರವನಿತ್ತಂ ನಕುಲನೊ |
ಳತಿನಿಷ್ಠೂರಗಳನಾಡಲವನತಿ ಕಿನಿಸಿಂ ||
ಸೈರಿಸದೆಂದಂ ಗರ್ಜಿಸಿ |
ಭೈರವಕೋಪಾಟೋಪದಿ ಜರೆವುತ್ತವನಂ     ||೪೯೧||

ರಾಗ ಆನಂದಭೈರವಿ ಏಕತಾಳ

ಏನ್ಮ್ಯಾ ಕೌರವ ನೀನೆನ್ನ | ಹೀನ ಮಾತುಗಳಿಂದಾಡಲ್ಯಾನ್ಮ್ಯಾ ||
ನಾನಾಪರಿಯೊಳನುಮಾನ ಚಿತ್ತದೊಳೀಗ | ಗಾನರಂದದಿ ಕುಣಿದಾಡಲ್ಯಾಕ್ಮ್ಯಾ    ||೪೯೨||

ಹೊತ್ತ ಚೋಹಗಳೊಳ್ ಮತ್ತೆ ಮಡುವಿನಲ್ಲಿ | ಕುತ್ತಿಗೆ ಕೆಳಗಾಗಿ ಬೀಳಲೇಕ್ಮೆ ||
ಸುತ್ತಿಕೊಂಡಿದೆ ಕೇಳ್ ಮೃತ್ಯು ನಿನಗೆ | ಕತ್ತೆಯಂದದಿ ವರಲುತ್ತಿ ಯಾಕ್ಮೇ ||೪೯೩||

ನಳ ಮಾಂಧಾತರು ಭಾಗ್ಯದೊಳನುಭವಿಸಿದ | ರಿಳೆಯೊಳು  ಸಾಮ್ರಾಜ್ಯದಿ ಬಾಳ್ವರೇನ್ಮೆ ||
ಬಲಿ ಮುಖ್ಯರಾಗಿಹ ಖಳರದೇನಾದರು | ತಿಳಿಯದೆ ಕೆಟ್ಟು ಹೋಗಬೇಡ ಕಾಣ್ಮೆ     ||೪೯೪||

ದಶಕಂಠನೆಂತಿದ್ದನೆಂತಾದ ತುದಿಯಲಿ | ತುಸು ಮಾತ್ರ ಮನಕರುಹಿಲ್ಲವೇನ್ಮೆ ||
ಅಸಹಾಯಶೂರನೆಂದು ನಿನ್ನೊಳು ಹಿಗ್ಗಿ ಹೇರಿದು | ದೆಸೆಗೆಟ್ಟು ಪೋಪೆ ನೋಡು ಪುಸಿಯಲ್ಲೆ ||೪೯೫||
ಏಕಾಧಿಪತ್ಯವು ಎನಗೆಂದು ಕೂಡಿದ | ಕಾಕರ ಸಭೆಯಲಿ ಮೆರವೆಯಲ್ಮೆ ||
ಸೋಕಿಕೊಂಡಿದೆ ನಿನ್ನ ಶುದ್ಧ ಭ್ರಾಂತನ ಪರಿ | ಲೋಕಕಂಟಕದಿಂದಲೆಲ್ಮೆ ||೪೯೬||

ಪರರನು ನಿಂದಿಸಿ ನರಕಭಾಜನನಾಗಿ | ಕುರಿಯಂತೆ ಕೊರಳಕೊಯ್ಸಿ ಕೊಳಬೇಡೆಯಲ್ಮೆ ||
ಕರಿಯಾದರೇನೊಂದು ಇರುವೆ ಕಚ್ಚಲು ತಾ | ನೊರಲಿ ಬಾಯ್ಬಿಡುವ ನಿತ್ಯವಲ್ಮೆ   ||೪೯೭||

ಅಕ್ಕ ಬಾರದಲಮವಾಸೆ ನಿಲ್ಲುವದೆ | ಇಕ್ಕೊ ಸೈರಿಸಿ ಸೈರಿಸಿಕೊಳ್ಮೆ ||
ಸೊಕ್ಕಿನುತ್ತರ ಕರಳ್ದಿಕ್ಕುವನೌಷಧಿಯ | ರಕ್ಕಸಾಂತಕನೆಚ್ಚರಿರಲ್ಮೆ         ||೪೯೮||

ಕಂದ

ಉರುತರ ರೌದ್ರದಿ ನಕುಲನು |
ಕೌರವನಂ ಕಡು ನಿಷ್ಠುರವಚನಗಳಿಂದಂ ||
ಭೋರನೆ ಜರೆಯಲ್ಕಾತಂ |
ಮಾರುತ್ತರವಿತ್ತು ಗರ್ಜಿಸಿದನಾ ಕ್ಷಣದೊಳ್   ||೪೯೯||

ಪಿಡಿಪಿಡಿ ಬಡಿಬಡಿ ಪೋರನ |
ಫಡಫಡ ನಮ್ಮೊಳು ಸಲುಗೆಗೆ ನಿಲ್ವನುಮಕಟಾ ||
ತಡವ್ಯಾಕೆನಲಾ ನಕುಲಂ |
ತಡೆಯದೆ ಪೊರಟನತಿ ಜವದಿ ಸಭ್ಯಸ್ಥಳದಿಂ  ||೫೦೦||

ಇತ್ತಂ ದ್ರುಪದಜೆಯು ಕುರುನೃ |
ಪೋತ್ತಮನಂಗನೆಯಹ ಭಾನುಮತಿಯ ಬಳಿಗಂ ||
ಅರ್ತಿಯೊಳ್ ಪೋಗಲು ಪೀಠವ |
ನಿತ್ತುಪಚರಿಸುತಳವಳೆಂದಳೊಂದುತ್ತರವಂ  ||೫೦೧||

ರಾಗ ಶಂಕರಾಭರಣ ಏಕತಾಳ

ಬಾರವ್ವಾ ಬಂದೆಯ ದ್ರುಪದಭೂರಮಣ ಕುಮಾರಿ |
ದಾರಿದಪ್ಪಿದೆಯೊ ಕಾಣೆ ನಾರಿ ದ್ರೌಪದಿ ||
ದಾರಿಯ ತಪ್ಪಿ ಬರುವ ಭ್ರಾಂತರೊಳು ಪುಟ್ಟಿದವಳಲ್ಲ |
ಕಾರಿಯನಿಮಿತ್ತ ಬಂದೆನಮ್ಮ ಭಾನುಮತಿ    ||೫೦೨||

ಬಂದ ಕಾರಣವದೇನು ಇಂದುಮುಖಿಯೆ ಹೇಳೀಗ |
ಸಂದೇಹವಿಲ್ಲದೆ ಸೊಗಸಿನಿಂದ ದ್ರೌಪದಿ ||
ಸಂದೇಹವ್ಯಾಕಮ್ಮ ಸುಂದರಾಂಗಿ ನಿನ್ನೊಳು |
ಸಂದೇಹವಿಡದೀಗ ಕೇಳು ಪೇಳ್ವೆ ಭಾನುಮತಿ          ||೫೦೩||

ಪೇಳಾದರೊಸಗೆಗಳೇನು ತಾಳಿ ದರ್ಪವ ಜಾತದಿ |
ಕೇಳುವೆ ಕಿವಿಗೊಟ್ಟು ಸೊಬಗಿನಿಂದೆ ದ್ರೌಪದಿ ||
ಕೇಳಾದರಭಿಮನ್ಯುವಿಗೆ ನೀಲಕಾಯನಗ್ರಜನ |
ಬಾಲೆಯ ಲಗ್ನವು ಭಾನುಮತಿ       ||೫೦೪||

ಆಗುವ ಲಗ್ನಕ್ಕದೇನು ಯೋಗಬಂದ ಮೇಲೆ ಬಡವ |
ಗಾಗಲಿಲ್ಲವೆ ಸೌಭಾಗ್ಯವಿದಕೊ ದ್ರೌಪದಿ ||
ನಾಗವೇಣಿ ಸಹಜವು ನೀ ಸಾಗಿ ಬರಬೇಕು ಲಗ್ನಕ್ಕೆ |
ಹೋಗೆಂದೆಮಜ ನೇಮವಿತ್ತನವ್ವ ಭಾನುಮತಿ          ||೫೦೫||

ಕರೆವುದು ಸಹಜವು ಕಾಣೆ ಕರುಣವಿನ್ನೆಂತುಸಿರಲಿ |
ದೊರಕಿತೆ ನಿಮಗೈಶ್ವರ್ಯವು ತರುಣಿ ದ್ರೌಪದಿ ||
ದೊರಕದೇನವ್ವ ನಿಮ್ಮಂಥ ದೊರೆಗಳವಂಶದವರಾಗಿ |
ಮರೆಯಮಾತಿನ್ಯಾತಕೆ ತಾಯೆ ಭಾನುಮತಿ  ||೫೦೬||

ಕಚ್ಚಹರುಕನಣ್ಣನು ತಾ ಲಜ್ಜೆಗೇಡು ಮಾಡಿ ತುದಿಗೆ |
ಹಚ್ಚಡಂಬಟ್ಟು ನಿಮ್ಮನೆಗೆಯಿತ್ತ ದ್ರೌಪದಿ ||
ಹೆಚ್ಚು ಮಾತೇನಕ್ಕ ಅಣ್ಣನು ಲಜ್ಜೆಗೆಡುಕರೊಳು ಬಳಸಲಿಲ್ಲ |
ಹುಚ್ಚನಾಗಲಿಲ್ಲ ಕೇಳೆ ಹೇ ಭಾನುಮತಿ        ||೫೦೭||

ಸಾಕುಸಾಕು ನಿನ್ನಯ ವಿವೇಕದ ಸಾಭಿಮಾನವು |
ಕಾಕವರ್ಣನಿಂದ ಧರ್ಮಜ ಕೆಟ್ಟ ದ್ರೌಪದಿ ||
ಕಾಕವರ್ಣನಿಂದಲೆ ಈರೇಳು ಲೋಕವು ನೀವುಗಳು |
ಕಾಕುತನದ ಮಾತಿದ್ಯಾಕೆ ಹೇ ಭಾನುಮತಿ   ||೫೦೮||

ದಾರಿದ್ರ್ಯಗಧಿಕಾರ ಬರಲು ಏರುವನುಪ್ಪರಿಗೆಯನ್ನು |
ತೋರುವಹಂಕಾರದಿಂದೆ ತಿಳಿಯೆ ದ್ರೌಪದಿ ||
ಯಾರಾದರೇನಧಿಕಾರದೊಳೇರಿದರುಪ್ಪರಿಗೆಯನ್ನು |
ತಾರತಮ್ಯವ ತಿಳಿದಯದಾದೆಯೆಲೆ ಭಾನುಮತಿ       ||೫೦೯||

ಮೇಲು ಕೀಳೆಂಬುದಕೆಲ್ಲ ಬಾಲೆ ನೀನೊಬ್ಬಳೆ ಬಲ್ಲೆ |
ಶೀಲೆ ಗಂಡರೈವರಾದ ಮೇಲೆ ದ್ರೌಪದಿ ||
ಕೇಳೆ ಗಂಡರೈವರಾಗಲ್ಮೂಲ ಕಾರಣವು ಬೇರೆ |
ಬಾಳಲಿಲ್ಲ ಬಹುಜನದೊಳೆಲೆಯೆ ಭಾನುಮತಿ ||೫೧೦||

ಜನರಹಿತರಾಗಿ ಮತ್ತೆ ಜನಪತಿತ್ವವನುಳಿದು |
ಜನುಮ ಹೊರವುದಯೋಗ್ಯವಿದಕೊ ದ್ರೌಪದಿ ||
ಜನುಮ ಹೊರವುದಯೋಗ್ಯವೆನಬೇಡ ನಿಮ್ಮಂಥ ದುಷ್ಟ |
ಜನರ ವಾಸದಡವಿಯು ತಾನೆಲೆಯೆ ಭಾನುಮತಿ      ||೫೧೧||

ಅಡವಿಯು ಸ್ವಸ್ಥವಾಗುವುದು ಕಡೆಗೆ ನಿಮ್ಮ ಪ್ರಾಪ್ತಿಗಳಿಗೆ |
ಮಿಡುಕದಿರು ಮನಸಿನಲ್ಲಿ ಮಡದಿ ದ್ರೌಪದಿ ||
ಮಿಡುಕಲ್ಯಾತಕೆ ಮಾನ್ಯರಿಂಗಡವಿಯೆ ಪಟ್ಟಣವಮ್ಮ |
ದೃಢತರವೊಂದಿರಲು ಧರೆಯೊಳದೆಲೆಯೆ ಭಾನುಮತಿ ||೫೧೨||

ಧರೆಯೊಳು ದೃಢತರವಿರ್ದ ಪರಿಯಿಂದೂರ ಬಿಟ್ಟು ಪೋಗಿ |
ಪೊರೆವಿರೊಡಲನು ತಿರುಕರಂತೆ ತಿಳಿಯೆ ದ್ರೌಪದಿ ||
ತಿರುಕರಿಗೆ ಕಡೆಯಾಗಿ ಮೈಮುರಿಯ ಪೆಟ್ಟತಿಂದು ಮೊನ್ನೆ |
ಮರಳು ಮನೆಗೆ ಬಂದನಾವ ದೊರೆಯೆ ಭಾನುಮತಿ   ||೫೧೩||

ಬಂದ ಕಾರಣವ ನೋಡುವೆನೆಂದು ಬಂದೆಯ ನಾಯಂತೆ |
ನಿಂದಿಸಿ ಬೊಗಳುತ್ತಯೆನ್ನ ಮುಂದೆ ದ್ರೌಪದಿ ||
ಮುಂದೆ ನಿಂತು ಬೊಗಳದೆ ತಾನಿಂದು ನಾಯಿಗಳು ಊರ |
ಹಂದಿಯ ಕಂಡರೆ ತಿನ್ನದೇನೆ ಭಾನುಮತಿ    ||೫೧೪||

ತಿನುವಕಾಲ ಬಂತು ತನಗೆ ತಾನೊಬ್ಬರೊಬ್ಬರ |
ನೆನವರಿಕೆಯಿರಲೆ ನಡತೆ ಹೀನೆ ದ್ರೌಪದಿ ||
ನೆನವರಿಕೆಯಿಹುದು ಕಾಣೆಯೆನುವೆಯಾತಕ್ಕೆ ಸುಮ್ಮನೆ |
ವನಿತೆ ನಡತೆಹೀನರಿಗೆ ಗುರುವು ಭಾನುಮತಿ ||೫೧೫||

ಕೆಟ್ಟ ಮೂಳಿಯರಿಗೆ ಗುರುವು | ಶ್ರೇಷ್ಠವಲ್ಲವೆ ನೀ ಹೇಳು |
ಬಟ್ಟೆ ವಿಡಿದು ನೀ ಬಂದಂತೆ ಪೋಗೆ ದ್ರೌಪದಿ ||
ಬಟ್ಟೆವಿಡಿದು ಪೋಗಲು ಕೊಟ್ಟೆ ಮೂಳಿ ಯಾರಪ್ಪಣೆ |
ಕಟ್ಟಿಕೊ ಸೆರಗಿನಲಿ ಗಂಟನೆಲೆ ಭಾನುಮತಿ   ||೫೧೬||

ಗಂಟುಕಟ್ಟುವದ್ಯಾತಕ್ಕೆ ತುಂಟ ತೊತ್ತೆಯ ನಡೆ |
ಅಂಟಿತೆ ಪಿತ್ತವು ತಲೆಗೆಯೆ ಕೆಟ್ಟ ದ್ರೌಪದಿ ||
ಅಂಟದೆ ತಾ ಬಿಡದು ಕಾಣೆ ತುಂಟೆತೊತ್ತೆಯಪಿತ್ತ |
ಮಂಟಪದ ಮುರಿವುದರಿಯದೇನೆ ಭಾನುಮತಿ         ||೫೧೭||

ಕೈಯ ಮುಗಿವೆ ನಡೆಯೊ ಬಾಯ | ಹೊಯ್ಸಿಕೊಳ್ಳದೆ ನೀ ಮನೆಗೆ |
ಅಯ್ಯೊ ಮಂಟಪ ಮುರಿದೆಡೆಯ ನಿಲ್ಲದೆನೆ ದ್ರೌಪದಿ ||
ಕಯ್ಯ ಮುಗಿವದ್ಯಾತಕೆ ಬಾಯ | ಹೊಯ್ಸಿಕೊಂಡೋಡಿ ಬಂದ |
ಗಯ್ಯಾಳಿಗಳ್ಯಾರು ದಮ್ಮಯ್ಯ ಭಾನುಮತಿ   ||೫೧೮||

ಹಲ್ಲಮುರಿಸಿ ಕೊಳ್ಳದಿರೆ ಖುಲ್ಲೆ ಸೊಕ್ಕಿನುತ್ತರದಿ |
ನಿಲ್ಲದೆ ಬಾಗಿಲ ಬಿಟ್ಟು ನಡೆಯೆ ದ್ರೌಪದಿ ||
ನಿಲ್ಲುವರ್ಯಾರೆ ಹಿಡಿ ಹೊನ್ನ ನಿಲ್ಲಿ ಸುರಿದರೆ ಕಡೆಯಲ್ಲಿ |
ಹಲ್ಲ ಮುರಿಸಿಕೊಂಬೆ ನಾಳೆಯೆ ಭಾನುಮತಿ  ||೫೧೯||

ಉರಗನ ಹಿಂಡಿನೊಳ್‌ಪೊಕ್ಕೂ ಮರಳಿ ಜೀವಿಸಿ ಪೋಪರೆ |
ನರರೊನಲವಿನಿಂದ ನಾಚದರುಹೆ ದ್ರೌಪದಿ ||
ಉರಗನ ಹಿಂಡಾದರೇನೆ ಗರುಡ ಮಂತ್ರವಿದ್ದ ನರರಿ |
ಗರರೆ ನಾಚಿಕೆ ಯಾರಿಗೆಲೆಯೆ ಭಾನುಮತಿ    ||೫೨೦||

ಮುಕ್ಕ ನಿನಗೆಷ್ಟು ಮಾತೆ ಬಿಸಾಡಿಸುವೆ ನೋಡು |
ಹೊಕ್ಕಂತೆ ಹೊರಟು ಹೋಗಿಕೊ ಹೋ ದ್ರೌಪದಿ ||
ರಕ್ಕಸಾಂತಕನಾಣೆಯೆ ಹೊಕ್ಕಂತೆ ಹೊರಟು ಹೋಗದೆ |
ಮುಕ್ಕರಲ್ಲಿ ತಾ ಬಂದೆನೇನೆ ಭಾನುಮತಿ     ||೫೨೧||