ಶಾರ್ದೂಲ ವಿಕ್ರೀಡಿತಂ

ಕೃಷ್ಣಂ ಶ್ರೀಯದುವಂಶಮೌಕ್ತಿಕಮಣಿಂ ಕೃಷ್ಣಾಂ ಪುರಸ್ಕೃತ್ಯತಾಂ |
ಕಾರ್ಷ್ಣೇಃ ಶ್ರೀರತಿಪಾಣಿಪೀಡನಕರಂ ಸೋಷ್ಣೀಷಭೂಪಾದೃತಮ್ |
ಜಿಷ್ಣುಂ ಭೀಷ್ಮಸುತಾಖಿಲೇಷ್ಟವರದಂ ಧೃಷ್ಣುಂ ಜಗತ್ಪಾಲಕಂ |
ಜಿಷ್ಣುಪ್ರೀತಿವಿವರ್ಧನಂ ಸುಖತನುಂ ವಿಷ್ಣುಂ ಭಜೇ ಸರ್ವದಾ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಧರಣಿಪತಿ ಜನಮೇಜಯಂಗಾ | ದರದಿ ವೈಶಂಪಾಯನಾಖ್ಯನು |
ವರಮಹಾಭಾರತಚರಿತ್ರೆಯ | ನೊರೆವುತಿರಲು         ||೧||

ಎರಗಿ ಪುನರಪಿ ಕೇಳ್ದ ಋಷಿಯೊಳು | ಸರಸಿರುಹದಳನಯನ ತನ್ನಯ |
ತರಳ ಮನ್ಮಥನಿಂಗೆ ಲಗ್ನವ | ವಿರಚಿಸುವಡೆ ||೨||

ತರುಣಿಮಣಿ ದ್ರೌಪದಿಯ ಮನದಲಿ | ಸ್ಮರಿಸುತಾಕೆಯ ಮುಖದೊಳಬಲೆಯ |
ನರಸಿ ವಿಭವದಿ ಪರಿಣಯವರಚಿ | ಸಿರುವ ಕತೆಯ     ||೩||

ಒಂದುಳಿಯದೆನಗದನು ವಿವರದೊ | ಳಿಂದು ನೀ ತಿಳುಹೆನುತ ಬೆಸಗೊಳ |
ಲಂದು ಮುನಿಪತಿ ಪೇಳ್ದ ಶಶಿಕುಲ | ನಂದನಂಗೆ       ||೪||

ವಾರ್ಧಕ

ಧರಣಿಪತಿ ಲಾಲಿಸೈ ಪೂರ್ವದ ಕಥಾಮೃತವ |
ಹರುಷದೊಳ್ ನಿನಗೊರೆವೆ ವಸುಧೆಗತಿ ಶ್ರೇಷ್ಠವಹ |
ಕರಿಪುರವನಖಿಳ ವೈಭವದಿ ನಿಮ್ಮಯ ಕುಲಜರಾಳುತತಿ ತೋಷದಿಂದ ||
ಇರುತಿರಲು ದುರ್ಯೋಧನಾಖ್ಯ ದಾಯಾದ್ಯಮ |
ತ್ಸರದಿ ಕಪಟದ್ಯೂತವನ್ನಾಡಿ ಧರೆಯನಪ |
ಹರಿಸುತ್ತ ಪಾಂಡವರ ದುರ್ಧರಾಜ್ಞೆಯ ಗೆಯ್ದು ಕಾನನಕೆ ಕಳುಹಿಸಿದನು   ||೫||

ಭಾಮಿನಿ

ಹರಿದಯದಿ ವನದೊಳಗೆ ಪಾಂಡವ |
ರರಸರಯ್ವರು ದ್ರೌಪದಿಯ ಸಹಿ |
ತಿರದೆ ವನವಾಸವನು ಮುಗಿಸಿದರಮಿತ ಸೌಖ್ಯದಲಿ ||
ವರುಷವಜ್ಞಾತವನು ಕಳೆವುತ |
ಧರಣಿಗೋಸುಗ ಕೌರವಾದ್ಯರ |
ಧುರದಿ ಸಂಹರಿಸಲ್ಕೆ ಧರ್ಮಜಗಾಯ್ತು ಪಟ್ಟವದು      ||೬||

ರಾಗ ಭೈರವಿ ಝಂಪೆತಾಳ

ವಸುಮತೀಶನೆ ಕೇಳು | ಕುಶಲದಲಿ ಪಾಂಡವರು |
ವಸುಧೆಯನು ಪಾಲಿಸುತ | ಲೆಸೆದರವರಂದು          ||೭||

ಇತ್ತ ಕೌಂತೇಯರಿರ | ಲತ್ತ ಹರಿ ದ್ವಾರಕಾ |
ಪತ್ತಣದೊಳೊಪ್ಪಿರ್ದ | ನಾಪ್ತಜನಸಹಿತ      ||೮||

ಭೂರಿ ಭಾಗ್ಯದೊಳಿರಲು | ಮಾರಾದಿ ನಂದನರು |
ನೀರಜಾಪ್ತನ ತೆರದಿ | ರಾರಾಜಿಸಿದರು        ||೯||

ಭರಿತವಿಭವದಿ ಯಾದ | ವರ ಗಡಣದಿಂದ ಹಲ |
ಧರನೊಡನೆ ಮೆರೆದಿರ್ದ ಕರುಣಸಾಗರನು    ||೧೦||

ಸಿರಿದೇವಿ ಮೊದಲಾದ | ತರುಣಿಯರ ನೊಡಗೊಂಡು |
ತರಣಿಪ್ರಕಾಶದೊಳು | ಮುರಮಥನನಿರ್ದ    ||೧೧||

ಭಾಮಿನಿ

ಪರಮಪಾವನವೆನಿಪ ದ್ವಾರಕೆ |
ಪುರವರದಿ ಶ್ರೀವಾಸುದೇವನು |
ಪರಿಪರಿಯ ಪಾಠಕರ ಗಡಣದಿ ಸಭೆಯೊಳೊಪ್ಪಿರಲು ||
ಸರಸಿಜಾಯತನೇತ್ರೆ ರುಕ್ಮಿಣಿ |
ತರುಣಿಯರ ಮೇಳದಲಿ ಬಂದಾ |
ಗರುಡಗಮನನ ಪದಕೆರಗಲುಪಚರಿಸುತಿಂತೆಂದ      ||೧೨||

ರಾಗ ಕೇದಾರಗೌಳ ಅಷ್ಟತಾಳ

ಮಾನಿನಿ ರುಕ್ಮಿಣಿಯೇನು ಕಾರಣ ಬಂದೆ | ನೀನತಿ ದುಗುಡದಿಂದ ||
ಸಾನುರಾಗದೊಳು ಬಂದೆರಗಿದ ಹದನವಿ | ದೇನೆಂದು ಬೆಸಗೊಂಡನು   ||೧೩||

ಎರೆಯ ಲಾಲಿಪುದು ನಾನೊರೆಯುವ ವಚನವ | ಕುರಣದಿಂದೀಗ ನೀನು ||
ಹರುಷದಿಂದೆನ್ನಯ ತರಳ ಮನ್ಮಥಗೇಕೆ | ಪರಿಣಯವೆಸಗಲಿಲ್ಲ  ||೧೪||

ಸರಸಿಜಗಂಧಿ ನೀ ಸುಮ್ಮನೆ ಚಿಂತಿಸ | ದಿರು ದಿನವೆಂಟರಲಿ ||
ತರಳೆಯ ಪುಡುಕಿ ತಂದಣುಗ ಕಂದರ್ಪಗೆ | ವಿರಚಿಪೆ ಮದುವೆಯನು     ||೧೫||

ಎನಲೆಂದಳೆಲೆ ನೀರ ನೀನೆಂದ ಮಾತಿನ | ಘನ ಭರವಸವೆನಗೆ ||
ಇನಿತಿಲ್ಲವೆನಲು ಚಕ್ರಾಂಕಿತ ನುಡಿದನು | ವಿನಯದೊಳಬಲೆಯೊಳು      ||೧೬||

ಕುಕ್ಷಿಯೊಳೀರೇಳು ಲೋಕವ ಧರಿಸಿಹ | ದಕ್ಷ ತಾನಾಗಿರುವೆ ||
ಈ ಕ್ಷಣ ನಿನ್ನಪೇಕ್ಷೆಯ ಸಲಿಸುವೆನೆನೆ | ಪಕ್ಷಿವಾಹನಗೆಂದಳು     ||೧೭||

ಕರುಣಾಬ್ಧಿ ಕೇಳು ನೀನುಸಿರಿದ ಮಾತಿದು |  ನಿರುತವೊ ಪುಸಿಯೋ ಪೇಳು ||
ಸ್ಮರನಿಗೆ ತಕ್ಕಂಥ ವಧುವೆಲ್ಲಿರುವಳೊ ನಾ | ನರಿಯೆನೀ ವೈವಾಹವ      ||೧೮||

ದ್ವಿರದಗಾಮಿನಿ ನೀನು ಮನೆಯೊಳಗಿರು ಪಂಚ | ಶರನಿಗೆ ಯೋಗ್ಯವಾದ ||
ವರಕನ್ಯಾರತುನವೆಲ್ಲಿರ್ದರು ತರಿಸಿ ನಾ | ಭರದಿ ಲಗ್ನವ ಮಾಳ್ಪೆನು      ||೧೯||

ಪದುಮನಾಭನೆ ಕೇಳು ನೀ ನುಡಿದವಧಿಯೊಳ್ | ಮದುವೆಯ ಮಾಡದಿರೆ ||
ಪದಿನಾರುಸಾಸಿರ ಸತಿಯರೊಡನೆ ನಿಮ್ಮ | ಪದವಗಲುವೆನೆಂದಳು      ||೨೦||

ತರುಣಿಯೆಂದುದ ಕೇಳಿ ಗೋವಿಂದ ಖಾತಿಯೊ | ಳರುಹಿದನವಳೊಡನೆ ||
ಭರದಿ ಲಗ್ನವ ಮಾಡದಿರೆ ನಿಮ್ಮೆಲ್ಲರ ಸ್ನೇಹ | ತೊರೆದಗಲುವೆನೆಂದನು   ||೨೧||

ವಾರ್ಧಕ

ಧರಣಿಪತಿ ಲಾಲಿಸೈ ಮುರಮಥನನೀ ತೆರದಿ |
ತರುಣಿಯರೊಳತಿ ಪಂಥವೆರಸಿ ವಿನಯದಿ ಸ್ವಾದು |
ತರದ ಭೋಜನಗೆಯ್ದು ಹರುಷದಲಿ ಸ್ಮರಿಸಿದನು ತ್ವರಿತದಿಂ ವಿನತೆಸುತನ ||
ಅರಿವುತವನಾ ಕ್ಷಣದಿ ಬರೆ ವಾಸುದೇವನುಪ |
ಚರಿಸುತಾತನ ಪೆಗಲನಿರದೇರಿ ಲಗ್ನಮಂ |
ವಿರಚಿಸುವೆನೆಂದೆನುತ ಧರಣಿಪರ ಭವನಗಳನರಸುತಲಿ ನಡೆತಂದನು   ||೨೨||

ರಾಗ ಮಾರವಿ ಏಕತಾಳ

ಧರಣಿಪ ಕೇಳೈ ಹರಿಯೀಪರಿಯಲಿ | ಭರದಿಂ ಗರುಡನಲಿ ||
ಹರುಷದಿ ಕುಳಿತಾಕ್ಷಣ ನಡೆದನು ತಾ | ದುರಧುರ ಶೌರ್ಯದಲಿ ||೨೩||

ಅಂಗವಂಗ ಕಳಿಂಗ ಕರ್ಣಾಟಕ | ವಿಂಗಡದರಮನೆಯ ||
ಹಿಂಗದೆ ತಾನೀ ಪರಿಯೊಳಗರಸಿದ | ಸಂಗಡಿಗರು ಸಹಿತ       ||೨೪||

ಬಂದನು ನಾನಾ ದೇಶದ ರಾಜರ | ಮಂದಿರವನು ಕಳೆದು ||
ಹೊಂದದೆ ಕಾರ್ಯವು ಮುಂದಕೆ ಬರುತಿರೆ | ಸಂದುದು ದಿನವಾರು       ||೨೫||

ಇಂತೀಪರಿಯಲಿ ಪುಡುಕುತ ಬರೆ ಶ್ರೀ | ಕಾಂತನು ಮನ್ಮನದಿ ||
ಎಂತೀಕೆಲಸವು ಘಟಿಸುವುದೆನುತಲಿ | ಚಿಂತಿಸಿದನು ಮನದಿ    ||೨೬||

ರಾಗ ಸಾಂಗತ್ಯ ರೂಪಕತಾಳ

ಹರ ಹರಾ ಪಟ್ಟದರಸಿ ರುಕ್ಮಿಣಿಯೊಳೇಕೆ | ಬರಿದೆ ಪಂಥವನೆಸಗಿದೆನು ||
ಸ್ಮರಗೆ ವಿವಾಹವ ವಿರಚಿಸಲಾರದೀ | ಪರಿಯಿಂದ ತೊಳಲುವುದಾಯ್ತು   ||೨೭||

ಉದಯವಾಗಲು ನಾಳೆ ಸತಿಯರಗಲುವರೀ | ವಿಧವನಿನ್ನಾರೊಳು ಪೇಳ್ವೆ ||
ವಿಧಿವಶವಲ್ಲ ಬೇರಿಲ್ಲವೆನುತಲಿ | ಮದನಜನಕನಳಲಿದನು       ||೨೮||

ನರಲೋಕದವರಿಂಗೆ ಹರಿಯು ನಾನೆಂದೆಂಬ | ಬಿರುದ ತೋರಿಸಲವತರಿಸಿ ||
ಪರರಿಗೇನೊಂದುಪಕಾರ ಗೆಯ್ಯದರಿಂದ | ಲರಸುವುದಾಯ್ತು ಕನ್ನಿಕೆಯನು         ||೨೯||

ದುರುಳ ದುಶ್ಶಾಸನ ದ್ರೌಪದಿಗವಮಾನ | ವಿರಚಿಸಲಾಗ ಮಾನಿನಿಯ ||
ಸೆರಗನು ಪಿಡಿದೆಳೆಯಲು ಸಭೆಯೊಳಗೆನ್ನ | ಸ್ಮರಿಸಿದಳಧಿಕ ಭಕ್ತಿಯಲಿ    ||೩೦||

ಸೀರೆಗಕ್ಷಯವಿತ್ತು ಸಲಹಿದೆನಿಂದೆಮ್ಮ | ಮಾರನ ಲಗ್ನಕೆನ್ನಿಂದ ||
ತೀರದೆ ತೊಳಲಿದೆನಿಂದಾಕೆ ಬರಲೆಂದಾ | ವಾರಿಜಾಕ್ಷಿಯ ಸ್ಮರಿಸಿದನು   ||೩೧||

ಭಾಮಿನಿ

ತಂಗಿ ದ್ರೌಪದಿ ಕೋಮಲಾಂಗಿಯೆ |
ಮಂಗಳಾತ್ಮಕಿ ಮಧುರಭಾಷಿಣಿ |
ಹಿಂಗದೆನ್ನಯ ಮಾನವನು ನೀ ಕಾಯಬೇಕೆಂದು ||
ಅಂಗಜನ ಪಿತನಿಂತು ದ್ಯಾನಿಸೆ |
ತುಂಗಕುಚಯುಗೆ ದ್ರುಪದನಂದನೆ |
ಸಿಂಗರದಿ ಮಲಗಿರಲು ಪಾರ್ಥಸಮೇತ ಸಜ್ಜೆಯೊಳು   ||೩೨||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಇತ್ತ ಗಜಪುರದೊಳಗೆ ದ್ರೌಪದಿ | ಯರ್ತಿಯಲಿ ಸರಿರಾತ್ರೆಯೊಳಗೆ |
ಚ್ಚರ್ತು ಸಜ್ಜಾಗೃಹದೊಳಿರಲಾ | ಹೊತ್ತಿನಲ್ಲಿ   ||೩೩||

ಮತ್ತೆ ಹರಿನುಡಿ ಶಬ್ದವಾಗಲು | ಭಕ್ತಿಯಲಿ ಪಾಂಚಾಲಿ ಕೇಳ್ದೆ |
ಚ್ಚರ್ತು ತಾನಾಲಿಸಿದಳತ್ಯಾ | ಸಕ್ತಿಯಿಂದ    ||೩೪||

ಅಣ್ಣನೆಂಬುದ ತಿಳಿದು ಮತ್ತಾ | ಬಣ್ಣಿಸುತ ಮಾನಿನಿಯು ಮನದಲ್ಲಿ |
ಮಿಣ್ಣನಾಲೋಚನೆಯ ಮಾಡಿದ | ಳಿನ್ನು ತಾನು        ||೩೫||

ಪಾರ್ಥ ನಿದ್ರಾಸಕ್ತನಾಗಿಹ | ರಾತ್ರೆಯೊಳಗಾನೆಬ್ಬಿಸಲು ಬಲು |
ಧೂರ್ತೆಯೆನ್ನದೆ ಬಿಡನು ಕೋಪೋ | ದ್ರಿಕ್ತನಾಗಿ        ||೩೬||

ಅಣ್ಣನೆನ್ನನು ಕರೆವ ನೀಗಳು | ಮನ್ನಿಸುತ ನಾ ಪೋಗದಿರೆ ಮು |
ಕ್ಕಣ್ಣಸಖ ಖತಿಗೊಳುವ ನೆಂದಳು | ಖಿನ್ನಳಾಗಿ         ||೩೭||

ಆದುದಾಗಲೆನುತ್ತ ಪೊರಟು ವಿ | ನೋದದಲಿ ನಡೆತಂದಳರಸುತ |
ಮಾಧವನ ನುತಿಸುತ್ತ ದ್ರೌಪದಿ | ಸಾದರದೊಳು       ||೩೮||

ಹರಿ ಜನಾರ್ದನ ಕೃಷ್ಣ ಕೇಶವ | ಪರಮಮಂಗಳಮೂರ್ತಿ ಲಕ್ಷ್ಮೀ |
ವರನೆ ಪಾಲಿಸೆನುತ್ತಲಾತನ | ಚರಣಕೆರಗೆ    ||೩೯||

ರಾಗ ಸಾಂಗತ್ಯ ರೂಪಕತಾಳ

ಅಡಿಗೆರಗಿದ ಸಹಭವೆಯ ಮಸ್ತಕವನ್ನು | ಪಿಡಿದೆತ್ತಿ ಬಳಿಕ ಮಾಧವನು ||
ಕಡುಕರುಣದೊಳುಪಚರಿಸುತ್ತ ತೋಷದಿ | ನುಡಿಸಿದನಾ ದ್ರೌಪದಿಯನು  ||೪೦||

ಬಂದೆಯಾ ತಂಗಿ ನಿನ್ನಯ ಪುರುಷರು ಸುಖ | ದಿಂದಲಿರುವರೆ ಮಂದಿರದಿ ||
ಚಂದದಿಂದಿಲ್ಲಿಗಯ್ತಂದುದು ಲೇಸಾಯಿ | ತೆಂದು ಶ್ರೀ ಹರಿಯು ಪೇಳಿದನು         ||೪೧||

ಮುರಮಥನನೆ ಲಾಲಿಸವರೆಲ್ಲ ಕ್ಷೇಮಿಗ | ಳರಿಕೆ ಮಾಡುವೆ ನಿನ್ನೊಳೊಂದು ||
ಇರುಳಿನೊಳೆನ್ನನು ಸ್ಮರಿಸಿದುದೇಕೆಂದು | ಚರಣಕೆರಗಲುಸಿರಿದನು       ||೪೨||

ತಂಗಿ ಕೇಳೆಂಟನೆ ದಿನದಿ ವೈವಾಹವ | ನಂಗಜನಿಗೆ ಮಾಳ್ಪೆನೆಂದು ||
ಅಂಗನೆ ರುಕ್ಮಿಣಿಯೊಡನೆ ಪೇಳಲು ಮತ್ತಾ | ತುಂಗಸ್ತನಿಯು ಪೇಳ್ದಳೆನಗೆ          ||೪೩||

ನೀನೆಂದ ತೆರದೊಳೆಂಟೇ ದಿನದೊಳಗೆನ್ನ | ಸೂನುಗೆ ಲಗ್ನವಾಗದಿರೆ ||
ಮಾನಿನಿಯರು ಪದಿನಾರುಸಾಸಿರವೆನ್ನಾ | ಧೀನದಿಂದಗಲುವುದೆನುತ    ||೪೪||

ಪಂಥವ ಗೆಯ್ದೆ ನಾನರಿಯದೀಪರಿಯಿಂದ | ಸಂತೀಗ ದಿನವೇಳರವಧಿ ||
ಎಂತಾದರೀ ಕಾರ್ಯವನು ನೀನೆ ಮುಂದೆ ನಿ | ಶ್ಚಿಂತೆಯೊಳೆಸಗಬೇಕೆಂದ         ||೪೫||

ರಾಗ ಸುರುಟಿ ಏಕತಾಳ

ಅಣ್ಣ ಲಾಲಿಸೆಲ್ಲ | ಪೇಳ್ವುದು | ಬಣ್ಣದ ಮಾತಲ್ಲ ||
ಬಣ್ಣಿಸುತೀ ಪರಿಯಿಂದ ನುಡಿದರೆ | ಹೆಣ್ಣು ನಾನು ಕೇಳೆನ್ನಿಂದಪ್ಪುದೆ || ಅಣ್ಣ         ||೪೬||

ನಿನ್ನೊಳಗಾಗದಿರೆ | ಮೇಣದ | ನೆನ್ನೊಳು ಪೇಳುವರೆ ||
ಚಿನ್ಮಯಮೂರುತಿ ನೀನೆಂದುದಕಾ | ನಿರ್ಣಯ ಮಾತೊಂದೊರೆಯುವೆ ಲಾಲಿಸು || ಅಣ್ಣ    ||೨||

ಹರಿಯದಿದೆನ್ನಿಂದ | ಈ ಪರಿ | ಯೊರೆದರೆ ಗೋವಿಂದ ||
ಹರಿ ಸರ್ವೋತ್ತಮ ನೀನೆಂದೆನುತಲಿ | ಚರಣಕೆರಗೆ ಮುರಹರ ತಾನುಸಿರಿದ || ಅಣ್ಣ          ||೪೭||

ರಾಗ ಸಾಂಗತ್ಯ ರೂಪಕತಾಳ

ತಂಗಿ ನೀ ಕೇಳು ಕೊರಳ ಕೊಯ್ಯದಿರ್ ಮಾನ | ಭಂಗವಿಂತೆಸಗದಿರಬಲೆ ||
ಅಂಗಜನಿಗೆ ತಕ್ಕ ವಧುವ ನೀನರಸುತ್ತ | ಹಿಂಗದೆ ಕೈಗೊಳಿಸೆನಲು       ||೪೮||

ಅಣ್ಣ ಕೇಳಿಷ್ಟು ನೀ ಪೇಳ್ವುದಾದರೆ ನಾಳೆ | ಎನ್ನಿಂದಾಗುವ ಪ್ರಯತ್ನವನು ||
ಮಿಣ್ಣನಯ್ತಂದು ನಾ ಮಾಳ್ಪೆ ನಿಶ್ಚಯವಿದ | ನೆಣ್ಣಿಸದಿರು ಮನದೊಳಗೆ    ||೪೯||

ದ್ರುಪದಜೆ ನೀನಿಂತೇಕಾಡುವುದೀ ಪರಿ | ವಿಪರೀತ ಮಾತೆನ್ನೊಡನೆ ||
ಶಪಥ ಗೆಯ್ದುದರಿಂದ ನೆನೆದೆನು ನಾ ನಿನ್ನ | ನಪಹಾಸ್ಯ ಮಾಡದಿರಿನ್ನು   ||೫೦||

ಮನ್ಮಥಜನಕ ಲಾಲಿಸಿ ಕೇಳು ನಾನೆಂಬ | ಸನ್ಮತ ನುಡಿಗಳನೀಗ ||
ನಿನ್ನ ಕಟಾಕ್ಷದೊಳೀ ಕಾರ್ಯವನು ಮಾಡ | ಲಿನ್ನೊಂದುಂಟದನು ಪೇಳುವೆನು     ||೫೧||

ಪಾರ್ಥ ನಿದ್ರೆಯೊಳಿರಲಯ್ತಂದೆನಿಲ್ಲಿಗೆ | ಚ್ಚೆರ್ತರಿನ್ನೇನಮಾಡುವನೊ ||
ಕೀರ್ತಿ ನಿನ್ನದು ಕರುಣಿಪುದೆನ್ನನೆನುತಲೆ | ಭಕ್ತಿಯೊಳೆರಗಿದಳಡಿಗೆ         ||೫೨||

ಭಾಮಿನಿ

ಮುಕ್ತಿದಾತನ ನೆನೆವುತಧಿಕ ವಿ |
ರಕ್ತಿಯಲಿ ದ್ರೌಪದಿಯು ಮನದಲಿ |
ಯುಕ್ತಿಯಲಿ ಮನ್ಮಥನ ರತಿಯಂತಿರ್ಪ ಕನ್ನಿಕೆಯ ||
ಶಕ್ತಿಯಿಂದಲಿ ನೋಳ್ಪೆನೆನುತಲಿ |
ಭಕ್ತಿಯಲಿ ಭಾವಿಸುತ ಹರಿಯನು |
ಭಕ್ತವತ್ಸಲ ಕಾಯೊ ನೀನೆಂದೆನುತಲೆರಗಿದಳು         ||೫೩||

ರಾಗ ಮಾರವಿ ಏಕತಾಳ

ಧರಣಿಪ ಕೇಳಗ್ರಜನಡಿಗೆರಗುತ | ಭರದಲಿ ದ್ರೌಪದಿಯು ||
ಅರಸುವೆ ತರುಣಿಯನೆನುತಾಕ್ಷಣ ತಾ | ಪೊರಟಳು ಧೈರ್ಯದೊಳು     ||೫೪||

ತಿರುಗಿಯೆ ಪುಡುಕಲು ದಿನವೊಂದರಲೀ | ದೊರಕದು ತನಗೆಂದು ||
ಹರಿಯ ಮನದಿ ನೆನೆದೀಕ್ಷಣ ನೋಡುವೆ | ಸ್ಮರಗೊಪ್ಪುವ ರತಿಯ         ||೫೫||

ಧರಿಸಿಯೆ ದಿವ್ಯ ದೃಷ್ಟಿಯನಾಕ್ಷಣ | ಧರಣಿಪರರಮನೆಯ ||
ನಿರುಕಿಸಲದರೊಳು ಕಂಡಳು ಮತ್ತಾ | ಪುರವೊಂದನು ಜವದಿ  ||೫೬||

ಬಂದಳು ಕೇಳ್ ಕಮಲಾವತಿ ಪಟ್ಟಣ | ಕಂದಿನ ರಾತ್ರೆಯೊಳು ||
ಚಂದದಿ ಚರರನು ಕರೆದಿಂತೆಂದಳು | ಮಂದಗಮನೆ ಕಡೆಗೆ     ||೫೭||

ರಾಗ ಶಂಕರಾಭರಣ ಏಕತಾಳ

ಯಾರಯ್ಯ ಬಾಗಿಲ ಕಾಯ್ವ | ಧೀರ ಚರರು ಪೇಳಿರಯ್ಯ |
ನಾರಿಯೊರ್ವಳ್ ಹೊರಗೆ ಬಂದ | ವಾರತೆಯನು      ||೫೮||

ನಾರಿಯಾದರೇನು ನಮಗೆ | ಮಾರಿಯಾದರೇನು ಕಡೆಗೆ |
ಸೂರ್ಯ ಉದಯವಾಗದನಕ | ವಾರು ಪೇಳ್ವರು      ||೫೯||

ಕೇಳಿರಪ್ಪ ಕಯ್ಯ ಮುಗಿವೆ | ಲಾಲಿಸುತ್ತಲೆನ್ನ ಮಾತ |
ಪೇಳಿರಯ್ಯ ಧರಣಿಪತಿಗೆ | ಚಾಳಿಸದಿರಿ       ||೬೦||

ಮಧ್ಯರಾತ್ರಿ ಕಾಲದಲ್ಲಿ | ಎದ್ದು ನೀನು ತಿರುಗಲೇಕೆ |
ಬದ್ಧವೇ ನಮ್ಮರಸನೊಡನೆ | ಸುದ್ದಿ ಯಾವುದು         ||೬೧||

ಚಾರಕರಿರ ನಿಮಗೇಕಿಷ್ಟು | ಪಾರುಪತ್ಯವೆನ್ನೊಳಿಂತು |
ಧಾರಿಣೀಶಗರುಹಿದರೆ ವಿ | ಚಾರಿಸುವನು     ||೬೨||

ಭ್ರಷ್ಟಮೂಳಿ ಸಲುಗೆಯೇನೆ | ಮುಟ್ಟಲಂಜುವೆವು ಕೇಳು |
ಗುಟ್ಟಿನಿಂದ ನೀ ಪೋಗದಿರೆ | ತಟ್ಟನೊಯ್ವೆವು ||೬೩||

ಕಳ್ಳೆಯಲ್ಲ ಕೇಳಿರಯ್ಯ | ಪಳ್ಳುಮಾತನಾಡಬೇಡಿ |
ಖುಲ್ಲ ತನವಿದೆನ್ನೊಳೀಗ | ಸಲ್ಲದು ನೋಡಿ   ||೬೪||

ಛೀ ಛೀ ಹೆಣ್ಣು ಮೂಳಿ ನಿನಗೆ | ನಾಚಿಕಿಲ್ಲವೇನೆ ಕಡೆಗೆ |
ಯೋಚನೆಯಿಲ್ಲದೆ ಪೋಪು | ದಾಚೆಗೆಂದರು  ||೬೫||

ಹುಚ್ಚುನಾಯಿಗಳಿರ ನಿಮ್ಮ | ಕೊಚ್ಚಿ ಬಲಿಯ ಕೊಡುವೆ ಹೀಗೆ |
ತುಚ್ಛಗೊಳುವಿರೇಕೆನುತ್ತ | ಲುಚ್ಚರಿಸಿದಳು     ||೬೬||

ಮೃತ್ಯುವೋ ಮಾರಿಯೋ ಎಂದು | ಮತ್ತೆ ಚರರು ಕಮಲನೃಪನ |
ಹತ್ತಿರಕಯ್ತಂದು ಬೊಬ್ಬಿ | ಡುತ್ತ ನುಡಿದರು   ||೬೭||

ರಾಗ ಸಾರಂಗ ಅಷ್ಟತಾಳ

ಕೇಳಯ್ಯ ದೊರೆಯೆ ನೀನು | ನಾವೆಂಬುದ | ಲಾಲಿಸಬೇಕಿದನು ||
ಪೇಳಲೆಮ್ಮಳವಲ್ಲ ಲೋಕದೊಳಿದಿರಿಲ್ಲ |
ಪಾಲಿಸೊ ನಮ್ಮ ಕೃಪಾಳು ನೀ ದಯವಿಟ್ಟು   ||೬೮||

ಪುರವಲಯದೊಳೊರ್ವಳು | ತರುಣಿ ಬಂದು | ಪರಿತೋಷದಿಂದಿಹಳು ||
ಪರಿಯ ನೋಡಿದರೆಮ್ಮ ರತಿಯಂತೆ ತೋರ್ಪಳು |
ಸುರನರೋರಗರಲ್ಲಿ ಸರಿಯಿಲ್ಲವವಳಿಗೆ        ||೬೯||

ನೋಡಲು ನಾರಿಯಂತೆ | ತೋರ್ಪಳು ಮಾತ | ನಾಡಲು ಮೃತ್ಯುವಂತೆ ||
ರೂಢಿಯೊಳವಳಂಥ ಪಾಡಿನ ಪೆಣ್ಗಳ |
ವಾಡಿಕೆಯಿಂದಲಿ ನೋಡಲಿಲ್ಲೆಂದರು ||೭೦||

ಎಂದ ಮಾತನು ಕೇಳಿದ | ಕಮಲಭೂಪ | ನಂದು ತೋಷವ ತಾಳಿದ ||
ಮಂದಗಮನೆಯನ್ನು ಕರೆಯಿರೆಂದೆನುತಲಿ |
ಚಂದದಿಂದೋಲಗವಿತ್ತು ಕುಳಿತನಾಗ         ||೭೧||

ಭಾಮಿನಿ

ಧರಣಿಪತಿ ಕೇಳಿಂತು ವಿಭವದೊ |
ಳಿರೆ ಕಮಲಭೂಪಾಲನಾಗಲೆ |
ಭರದಿ ಚರರಿಗೆ ನೇಮವಿತ್ತಬಲೆಯನು ಕರೆಸಿದನು ||
ಪರಮ ಸಂತೋಷದಲಿ ಮತ್ತಾ |
ತರುಣಿಗಾಸನವಿತ್ತು ರಾತ್ರೆಯೊ |
ಳಿರದೆ ಬಂದುದ ಪೇಳೆನುತ ಬೆಸಗೊಂಡನಾಕೆಯನು  ||೭೨||

ರಾಗ ಕೇದಾರಗೌಳ ಅಷ್ಟತಾಳ

ತರುಣಿ ನೀನೆಲ್ಲಿಂದ ಬಂದುದೀ ರಾತ್ರೆಯೊ | ಳುರುತರ ತೋಷದಲಿ ||
ವರನಾರು ದೇಶವಾವುದು ಪೇಳೆಂದೆನುತಲೆ | ಧರಣಿಪ ಬೆಸಗೊಂಡನು  ||೭೩||

ಎಂದ ಮಾತನು ಕೇಳಿ ದ್ರುಪಪನಂದನೆಯೆದ್ದು | ನಿಂದು ಮುದದಿ ನಗುತ ||
ಬಂದ ಕಾರ್ಯವನೀವುದಾದರೆ ನಿನಗದ | ರಂದ ಪೇಳುವೆನೆಂದಳು       ||೭೪||

ತರುಣಿ ಸಂಶಯ ಬೇಡ ತಿಳುಹು ನೀ ಬಂದಿಹ | ಪರಿಯನೀಗೆನ್ನೊಡನೆ ||
ಹರುಷದಿ ಪೇಳ್ದರೆ ಕರುಣಿಸಿ ಕೊಡುವೆನು | ಭರದಿಂದಲೀಗ ನಾನು        ||೭೫||

ಕೊಡುವುದಾದರೆ ಎನ್ನ ಕರದಿ ಭಾಷೆಯ ನೀಡು | ದೃಢವಾಗಿ ಪೇಳ್ವೆನಿಂದು ||
ಸಡಗರದಿಂದಲಿ ದ್ರೌಪದಿಯುಸಿರಲು | ನುಡಿದ ಕಮಲಭೂಪನು ||೭೬||

ಕ್ಷತ್ರಿಯ ನೃಪರಾಡಿದ ಮಾತು ಪುಸಿಯಲ್ಲ | ಚಿತ್ತಶುದ್ಧದೊಳು ನೀನು ||
ಸತ್ಯದಿ ಬೇಡಿದರಿತ್ತಪೆನೆನಲಾಗ | ಪೃಥ್ವಿಪಾಲಕಗೆಂದಳು         ||೭೭||

ಸೃಷ್ಟೀಶ ಕೇಳಿದು ದಿಟವಿದಾದರೆ ನೀ ಕೈ | ತಟ್ಟಿ ಪೇಳಿದರೆ ನಾನು ||
ತಟ್ಟನೆ ಪೇಳುವೆನೆಂದೆನುತುಸಿರಲು | ಕೊಟ್ಟನು ಭಾಷೆಯನು   ||೭೮||

ಇಷ್ಟಾದ ಮೇಲೆ ನಾ ಪೇಳುವೆ ನೀ ಕಿವಿ | ಗೊಟ್ಟು ಲಾಲಿಪುದಿದನು ||
ಸೃಷ್ಟಿಗಧಿಕವಾದ ವರ ಹಸ್ತಿನಾವತಿ | ಪಟ್ಟಣದರಸುಗಳ          ||೭೯||

ಪಂಚಪಾಂಡವರಿರುತಿಹರವರಂಗನೆ | ಪಾಂಚಾಲಿ ದ್ರೌಪದಿಯು ||
ಪಾಂಚಾಲರಾಜನ ಕುವರಿಯೆಂದೆನ್ನ ಪ್ರ | ಪಂಚದಿ ಕರೆಯುವರು          ||೮೦||

ದ್ವಾರಕೆಯೊಳು ಸಚ್ಚಿದಾನಂದನಾಗಿಹ | ಧೀರನೆನ್ನಗ್ರಜನು ||
ವಾರಿಜಾಂಬಕನಿಗೆ ತರಳನಾಗಿರುತಿಹ | ಮಾರನೆಂಬುವನು ತಾನು      ||೮೧||

ಮಂದರಧರನ ಕುಮಾರಗೆ ನಿನ್ನಯ | ನಂದನೆ ರತಿಯನೀಗ ||
ಚಂದದಿ ಲಗ್ನವ ಮಾಡಲೋಸುಗ ನಡೆ | ತಂದಿಹೆ ತಾನೆಂದಳು ||೮೨||

ವಿಸ್ತಾರದಲಿ ನಾಳೆ ರಚಿಸು ವೈವಾಹವ | ಸ್ವಸ್ಥಾನವಹುದೆಲ್ಲರ್ಗೆ |
ಮತ್ತೆ ನಿಮ್ಮೆಲ್ಲರ ಪೊರೆವ ಶ್ರೀಹರಿಯೆಂದು | ಬಿತ್ತರಿಸಿದಳವಗೆ    ||೮೩||

ಭಾಮಿನಿ

ಕರಿಪುರಾಧಿಪ ಕೇಳು ದ್ರುಪದಜೆ |
ಯೊರೆಯೆ ಲಾಲಿಸುತಾ ಕಮಲನೃಪ |
ನುರುತರದ ರೋಷದಲಿ ಕಂಗಳೊಳಾಗ ಕಿಡಿಗೆದರಿ ||
ಭರದಿ ಹುಂಕರಿಸುತ್ತಲಾಕ್ಷಣ |
ತರುಣಿ ಪಾಂಚಾಲಿಯನು ನೋಡುತ |
ಲಿರದೆ ಪಲ್‌ಮೊರೆದೆಂದನೊಂದುತ್ತರವನವಳೊಡನೆ   ||೮೪||

ರಾಗ ಮಾರವಿ ಏಕತಾಳ

ಕೆಟ್ಟ ಗೋವಳನ ಕುಮಾರಗೆ  ಕೊಡುವೆನೆ | ಹುಟ್ಟಿದ ಕುವರಿಯನು ||
ಎಷ್ಟೆಂದರು ಮನಮುಟ್ಟಿದು ಸುಮ್ಮನೆ | ಸಿಟ್ಟಾಗದಿರಿನ್ನು         ||೮೫||

ಮಾತನು ಕೊಟ್ಟಿಹೆ ಮೊದಲೆನಗೀ ಪರಿ | ನೀತಿಯ ತಪ್ಪಿದರೆ ||
ಏತರ ನೃಪ ನೀನೇನುತಲಿ ಜರೆವರು | ಭೂತಳದವರೆಲ್ಲ         ||೮೬||

ದ್ರುಪದಾತ್ಮಜೆ ನೀ ಲಾಲಿಸಿ ಕೇಳೀ | ವಿಪರೀತದ ನುಡಿಗೆ ||
ಗುಪಿತದಿ ಕೊಡೆನೆನ್ನಣುಗೆಯ ನುಡಿಯದಿ | ರಪಹಾಸ್ಯದ ಮಾತ ||೮೭||

ಧರಣಿಪನೀ ಪರಿಯೊಳಗೇಕಾಡುವೆ | ಕೊರೆತೆಯಲ್ಲವೆ ನೀನು ||
ಒರೆದಿಹ ಭಾಷೆಯ ತಪ್ಪುವುದುಂಟೇ | ಸರಿಯಲ್ಲಿದು ನಿನಗೆ       ||೮೮||

ಗೊಲ್ಲರ ಮನೆಗಳ ಪೊಗುತಲಿ ಪಾಲ್ ಮೊಸ | ರೆಲ್ಲವ ಸವಿದುಂಡ ||
ಕಳ್ಳನ ಸುತನಿಗೆ ಕೊಡೆ ನಾ ಪುತ್ರಿಯ | ಸುಳ್ಳಲ್ಲಿದು ನಿಜವು      ||೮೯||

ಕ್ಷತ್ರಿಕುಲಜ ನೀನಾಡಿದ ಭಾಷೆಯ | ವ್ಯರ್ಥದಿ ಕಳೆಯದಿರು ||
ಸ್ವಾರ್ಥದಿ ಪರಗತಿ ಕೆಡುವುದು ನಿನಗಪ | ಕೀರ್ತಿಯು ಬಂದಪುದು        ||೯೦||

ಚಾರಕರೆತ್ತಲು ಪೋದರೊ ಮತ್ತೀ | ನಾರಿಯ ಕರ ಪಿಡಿದು ||
ಭೋರನೆ ನೂಕಿರೆನುತ್ತಿರೆ ಪೇಳ್ದಳು | ಭೂರಮಣನೊಳವಳು     ||೯೧||