ರಾಗ ಶಂಕರಾಭರಣ ಏಕತಾಳ

ಇಷ್ಟು ಕೋಪವೇತಕಯ್ಯ | ಸೃಷ್ಟಿಪಾಲ ಕೇಳು ನಿನ್ನ |
ದಿಟ್ಟತನವು ಸಲ್ಲದೆಂದು | ತಟ್ಟನುಸಿರುವೆ     ||೯೨||

ತೃಣವ ಮುರಿದು ಸಾರುವೇ ನಿ | ನ್ನುಣುಗೆ ರತಿಯ ಸ್ಮರನಿಗೀಯ |
ದಣಕವಾಡಿದರೆ ಕೆಡುವೆ | ಕ್ಷಣದೊಳೆಂದಳು   ||೯೩||

ಇಷ್ಟಾದ ಮೇಲಿನ್ನು ಹರಿಯು | ಸಿಟ್ಟಿನಿಂದಿಲ್ಲಿಗಯ್ತಂದು |
ಕುಟ್ಟಿ ನಿನ್ನ ಬಳಿಕ ಸುತೆಯ | ತಟ್ಟನೊಯ್ವನು          ||೯೪||

ಕೊಟ್ಟ ಭಾಷೆ ನಡೆಸದಿಂತು | ಸೃಷ್ಟಿಗೊಡೆಯನಿರಲು ಕಂಡು |
ಬಟ್ಟೆದೋರದಾಗ ಪೊರ | ಮಟ್ಟಳು ಕೃಷ್ಣೆ     ||೯೫||

ವಾರ್ಧಕ

ಅರಸ ಕೇಳಿಂತು ದ್ರುಪದಜೆ ಪೊರಟು ಮಾರ್ಗದಲಿ |
ಹರಿಯೆ ನೀನೇ ಬಲ್ಲೆ ಕಾರ್ಯ ನಿನ್ನದೆನುತ್ತ |
ಭರದಿ ಕಂಗಳ ಮುಚ್ಚಿ ನಿಂದಿರ್ದಳಿತ್ತಲವಧರಿಸು ಪೂರ್ವದ ಕಥೆಯನು ||
ತರುಣಿ ರತಿದೇವಿ ತಾ ಪಿಂದೆ ಶಂಬರನಿಂಗೆ |
ಪರಿಪರಿಯ ಭೋಜ್ಯಗಳನಣಿಮಾಡುತಿರಲಿತ್ತ |
ಸ್ಮರನು ರುಕ್ಮಿಣಿಯುದರದೊಳಗುದಿಸುತಸುರನಂ ಕೊಂದು ರತಿಯೊಡನಿರುತಿರೆ  ||೯೬||
ಅರಿತು ನಾರದ ಮುನಿಪ ಬರಲು ದಂಪತಿಗಳತಿ |
ಹರುಷದಿಂದುಪಚರಿಸಲಾಗ ಋಷಿವರನೆಂದ |
ಹಿರಿಯಳಾಗಿಹ ರತಿಯನಗ್ನಿಯೊಳಗಿರಿಸೆಂದು ಪೇಳ್ದ ನುಡಿ ಕೇಳುತಾಗ ||
ವರಪತಿವ್ರತೆಯನಗ್ನಿಯೊಳಿಡಲು ಬಳಿಕ ತಾ |
ಧರೆಯೊಳತ್ಯಧಿಕವಾಗಿರುವ ಕಮಲಾವತಿಯ |
ಪುರದರಸ ಕಮಲಭೂಪನ ಕುವರಿಯಾಗಿ ಜನಿಸಿರ್ದಳತಿ ವೈಭವದೊಳು ||೯೭||

ರಾಗ ಭೈರವಿ ಝಂಪೆತಾಳ

ಧರೆಯಧಿಪ ಕೇಳಿಂತು | ವರಕಮಲಭೂಪನಿಗೆ |
ತರುಣಿಮಣಿ ರತಿಯುದಿಸಿ | ಮೆರೆದಿರಲ್ಕಂದು ||೯೮||

ಕುಂತಿಸುತರರಸಿಯೊಡ | ನಿಂತು ಪಿತನಾಡಿದುದ |
ನಂತರಂಗದಿ ತಿಳಿದು | ಚಿಂತಿಸಿದಳವಳು    ||೯೯||

ಬಂದು ತಾತನಿಗೆರಗಿ | ನಿಂದು ಕರಗಳ ಮುಗಿದು |
ಚಂದದಿಂದುಸಿರಿದಳು | ಬಂದ ಕಾರ್ಯವನು ||೧೦೦||

ರಾಗ ಸೌರಾಷ್ಟ್ರ ಅಷ್ಟತಾಳ

ಏನಿದು ಹೊಸಪರಿ ಸರಿರಾತ್ರೆಯೊಳು  ಸಭೆ | ತಂದೆ ಕೇಳು || ಈಗ
ನೀನೆನ್ನ ಮೇಲತಿ ದಯವಿಟ್ಟು ವಿನಯದಿ | ತಾತ ಪೇಳು         ||೧೦೧||

ಬಾಲೆ ದ್ರೌಪದಿಯ ನುಡಿಯ ಕೇಳ್ದೆ ನಾನೀಗ | ತಂದೆ ಕೇಳು || ಬಹು
ಲೀಲೆಯಿಂದವಳೇನನುಸಿರಿದಳೆಂಬುದ | ತಾತ ಪೇಳು ||೧೦೨||

ಪಂಥಪೌರುಷವಾಡಿದಂತರಂಗವಿದೇನು | ತಂದೆ ಕೇಳು || ನಿಶ್ಚಿಂ
ತೆಯೊಳ್ ಮಗಳೆಂಬ ಮಮತೆಯೊಳೆನಗೀಗ | ತಾತ ಪೇಳು    ||೧೦೩||

ರಾಗ ಸೌರಾಷ್ಟ್ರ ತ್ರಿವುಡೆತಾಳ

ತರಳೆಯೇಕೀ ಪರಿಯನುಸಿರುವೆ | ಧರಣಿಪಾಲಕನಾಗಿ ಸಭೆಗ |
ಯ್ದಿರಲು ಬೇರಿನ್ನಾರು ಬರುವರು | ಮರುಳುಮಾತೆ    ||೧೦೪||

ಈಗಲೀ ನಡುನಿಶಿಯೊಳೊಂದು | ದ್ಯೋಗ ಮಂತ್ರಿಗಳೊಡನೆ ಯೋಚಿಸ |
ಲಾಗಿ ತಾನೋಲಗವನಿತ್ತೆ ಸ | ರಾಗದಿಂದ   ||೧೦೫||

ಬರಿದೆ ನಿನಗೇಕಾ ವಿಚಾರವು | ತೆರಳು ಸಜ್ಜಾಗೃಹಕೆನಲು ಪದ |
ಕೆರಗಿ ಬಿನ್ನಹ ಮಾಡಿದಳು ತ | ನ್ನಿರವನಾಗ  ||೧೦೬||

ರಾಗ ಬಿಲಹರಿ ಏಕತಾಳ

ತಂದೆ ಲಾಲಿಸಿ ಕೇಳು ಸಂದೇಹಗೊಳದಿರು |
ಪಿಂದಣಾಗಮವ ನಾನಿಂದೆಂಬೆ ನಿನಗೆ ||
ಬಂದುದನರಿತೆಯಾ ದ್ರುಪದನಂದನೆ ತಾನು |
ಚಂದದಿ ಪೇಳುವೆನದನು ಲಾಲಿಪುದು         ||೧೦೭||

ದ್ವಾರಕೆಯೊಳು ಸಚ್ಚಿದಾನಂದನಿರುತಿಹ |
ಧೀರನಾತನ ಪುತ್ರ ಮಾರನೆಂಬುವಗೆ ||
ಧಾರೆಯನೆರೆಸೆನ್ನ ಮದುವೆಯನೆಸಗಲು |
ನಾರಿ ದ್ರೌಪದಿ ಬಂದಳೀ ರೀತಿಗಾಗಿ ||೧೦೮||

ಸಾರಸನಾಭ ಹಲಾಯುಧರೆಂದೆಂಬ |
ವೀರರೀರ್ವರು ಕೇಳು ಮಾವಂದಿರೆನಗೆ ||
ನಾರಿಯರ್ ಪದಿನಾರುಸಾವಿರದೆಂಟು ವಿ |
ಚಾರಿಸಲದರೊಳು ರೇವತಿ ಸಹಿತ   ||೧೦೯||

ರಾಣಿಯರೆನಗತ್ತೆಗಳುಬಳಿಕಾ ಪಂಚ |
ಬಾಣನು ಪತಿಯೆಂಬುದರಿಯೆಯ ತಾತ ||
ಪ್ರಾಣದೊಲ್ಲಭನನ್ನು ಕಾಣದೆನ್ನಯ ಮನ |
ಕಾನಂದವಾಗದಿನ್ನೇನೆಂದುಸಿರಲಿ   ||೧೧೦||

ಕರೆಸು ದ್ರೌಪದಿಯಳನಿರಿಸು ಲಗ್ನವ ಬೇಗ |
ಬರಿದೆ ಕೋಪಿಸದಿರೀಗೊರೆಯುವೆ ನಿನಗೆ ||
ಸ್ಮರಜನಕನ ಮೇಲೆ ಪರಿಭೇದವೀ ಪರಿ |
ತರವಲ್ಲ ಶೀಘ್ರದಿ ಪರಿಣಯವೆಸಗು  ||೧೧೧||

ಹಿಂದೆ ಶಂಬರನೊಳು ಸೆರೆಯ ಸಿಕ್ಕಿದರೆನ್ನ |
ನಂದು ಬಿಡಿಸಿದನು ಕೊಂದು ರಕ್ಕಸನ ||
ಬಂದು ನಾರದ ಕಾಮಗೆಂದನು ನೀನವ |
ಳಿಂದ ಕಿರಿಯ ಕೀರ್ತಿ ಕುಂದುವುದೆನುತ      ||೧೧೨||

ಎಂದ ನುಡಿಯ ಕೇಳಿ ಬಂದಿಲ್ಲಿ ಜನಿಸಿದೆ |
ನಿಂದೇತಕೀಪರಿ ಸಂದೇಹ ನಿನಗೆ ||
ಚಂದದಿ ಮದುವೆಯನಿಂದು ನೀನೆಸಗಲು |
ಮುಂದೆ ರಕ್ಷಿಸುವ ಮುಕುಂದ ತಾನೊಲಿದು   ||೧೧೩||

ಪರಮ ಪತಿವ್ರತೆ ಚಂಡಿಸ್ವರೂಪದ |
ಮುರವೈರಿಯನುಜೆಯು ತರುಣಿ ದ್ರೌಪದಿಯು ||
ಅರಿಯದೆ ನೀನವಳಿರವನು ಗರ್ವದಿ |
ಬಿರುನುಡಿಯಾಡಿಹೆ ಕರೆಸು ಬೇಗೆನಲು        ||೧೧೪||

ಭಾಮಿನಿ

ಎಂದ ಸುತೆಯಳ ನುಡಿಗೆ ಭೂಪತಿ |
ನೊಂದು ಮನದಲಿ ದ್ರುಪದಜೆಯ ಬಳಿ |
ಗಿಂದು ತಾ ಪೋಗುವೆನೆನುತ ನಿಶ್ಚಯಿಸಿ ತ್ವರಿತದೊಳು ||
ಬಂದು ನುತಿಸುತಲೆರಗಿ ಪಾದಕೆ |
ಮುಂದಬುದ್ಧಿಯ ಬಿಟ್ಟೆನೀಗಳು |
ನಂದನೆಯ ತಾ ಕೊಡುವೆ ಪಾಲಿಸು ಕೋಪಿಸದಿರೆಂದ ||೧೧೫||

ರಾಗ ಸುರುಟಿ ಏಕತಾಳ

ಲಾಲಿಸು ದ್ರುಪದಸುತೆ | ಕರುಣದಿ | ಪಾಲಿಸು ವಿಖ್ಯಾತೆ ||
ನೀಲಾಂಗನ ವರ | ಬಾಲಗೆ ಕುವರಿಯ |
ಲೀಲೆಯೊಳೀವೆನು | ಕೇಳೀ ಮಾತನು || ಲಾಲಿಸು     ||೧೧೬||

ನಾಳೆಯೆ ಲಗ್ನವನು | ರಚಿಸಲಿ | ಕಾಲಸ್ಯವಿದೇನು ||
ಶ್ರೀಲೋಲನಿಗೆ | ನ್ನಾಲೋಚನೆಯನು |
ಪೇಳೀ ಹರಷೋ | ನ್ಮೂಲದ ವಾರ್ತೆಯ || ಲಾಲಿಸು   ||೧೧೭||

ನಿನ್ನಯ ಮಹಿಮೆಯನು | ತಿಳಿಯದೆ | ಮುನ್ನವಮಾನವನು ||
ಎನ್ನಿಂದಾಯ್ತದ | ನುನ್ನತ ಕೃಪೆಯೊಳು |
ಸನ್ಮತದಿಂದಲಿ | ಮನ್ನಿಸು ಕಾರ್ಯವ || ಲಾಲಿಸು      ||೧೧೮||

ಮನ್ಮಥಪಿತ ದಯದಿ | ಸ್ನೇಹವ | ನೆನ್ನೊಳಿಡುವ ತೆರದಿ ||
ಚೆನ್ನಾಗುಸಿರುತ | ಭಿನ್ನಭೇದಗಳ |
ನೆನ್ನೊಳಿಡದೆ ಕರೆ | ಸಿನ್ನಿವರ್ಗೆಂದನು || ಲಾಲಿಸು      ||೧೧೯||

ಭಾಮಿನಿ

ತಾಯೆ ದ್ರೌಪದಿ ನಿನ್ನ ನಂಬಿದೆ |
ಮಾಯಕದ ಮಾತಲ್ಲ ನಿಜವಿದು |
ಕಾಯಬೇಕಿಂದೆನ್ನ ಮರೆದು ಶತಾಪರಾಧವನು ||
ಆಯತದಿ ದಯೆಯಿಟ್ಟು ಪಾಂಡವ |
ಜಾಯೆ ನೀನೀ ಕಾರ್ಯವೆಸಗಲು |
ತೋಯಜಾಂಬಕಗುಸಿರಿ ನಿರ್ವಿಘ್ನತೆಯ ಕರಣಿಪುದು   ||೧೨೦||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಇಂತು ನುತಿಸುವ ನೃಪನ ಕಾಣುತ | ಸಂತಸದಿ ದ್ರೌಪದಿಯು ಮನ್ನಿಸಿ |
ಚಿಂತೆಯನು ತೊರೆದುಸಿರಿದಳು ಭೂ | ಕಾಂತನೊಡನೆ          ||೧೨೧||

ಏಳರಸ ಬಿಡು ವ್ಯಾಕುಲತೆಯ ವಿ | ಶಾಳ ವೈಭವದಿಂದ ತವಕದಿ |
ನಾಳೆ ಕರೆಸುವೆ ಹರಿಯನಾ ಯದು | ಜಾಲಸಹಿತ     ||೧೨೨||

ಬರುವರೈ ದಿಬ್ಬಣದೊಡನೆ ಪಂ | ಕರುಹಸಂಭವ ರುದ್ರ ತ್ರಿದಶರು |
ಪುರವ ಸಿಂಗರಗೆಯ್ದು ಕರೆಸೈ | ಧರಣಿಪರನು ||೧೨೩||

ಲೀಲೆಯಿಂದಂಗಜಗೆ ನಿನ್ನಯ | ಬಾಲಿಕೆಯ ವೈವಾಹ ಮಾಡಿಸು |
ಪಾಲಿಸುವ ಸತ್ಕರುಣದಿಂದಲಿ | ಶ್ರೀಲಲಾಮ ||೧೨೪||

ಬಂದು ನೀ ದಿಬ್ಬಣಿಗರೊಡನಾ | ನಂದದಲಿ ನಡೆಸುವುದು ಕಾರ್ಯವ |
ನೆಂದೆನುತ ನುಡಿಯಲ್ಕೆ ಪೇಳಿದ | ಳಿಂದುವದನೆ       ||೧೨೫||

ಉಳಿದೆನಾದರೆ ಬರುವೆನಿಲ್ಲಿಗೆ | ನಳಿನನಾಭನು ಸಹಿತಲೆಂದೆನೆ |
ಕಳವಳಿಸಿ ಪಾಂಚಾಲೆಗುಸಿರಿದ | ನಿಳೆಯ ಪಾಲ       ||೧೨೬||

ನಾಳೆ ಮದುವೆಗೆ ನೀನು ಬಾರದೆ | ಶ್ರೀಲತಾಂಗಿಯ ರಮಣನಯ್ತರೆ |
ಬಾಲಿಕೆಯ ನಾ ಕೊಡೆನು ಮಾತಿದು | ಜಾಲವಲ್ಲ       ||೧೨೭||

ಬರುವೆ ನಿಶ್ಚಯವಾಗಿ ನಂಬಿಕೊ | ತೆರಳುವೆನು ತಾನೆನುತ ದ್ರೌಪದಿ |
ಪೊರಟು ತಾನಯ್ತಂದಳಾ ಕ್ಷಣ | ಹರುಷದಿಂದ         ||೧೨೮||
ಬಂದು ಕೃಷ್ಣನ ಪದಕೆರಗಿ ತಾ | ನಿಂದು ಲಕ್ಷ್ಮೀರಮಣ ಜಯ ಜಯ |
ವೆಂದು ನುತಿಸುತ್ತಿರ್ದಳತ್ಯಾ | ನಂದದಿಂದ   ||೧೨೯||

ರಾಗ ಸಾಂಗತ್ಯ ರೂಪಕತಾಳ

ಎರಗಿದ ದ್ರುಪದಜೆಯನು ಪಿಡಿದೆತ್ತುತ | ಕರುಣಾಳು ನುಡಿದ ತಾನವಳ್ಗೆ ||
ತರಳ ಮನ್ಮಥನಿಂಗೆ ವೈವಾಹವೆಸಗಲು | ಹರಿಣಾಕ್ಷಿ ದೊರೆತಳೇನವ್ವ    ||೧೩೦||
ನಿನ್ನ ಕಟಾಕ್ಷದಿ ಪೋಗಿ ನಾನೀಗಳು | ಮುನ್ನ ದೇಶವನೆಲ್ಲ ತಿರುಗಿ ||

ಚಿನ್ಮಯಾತ್ಮಕನೆ ಕೇಳ್ ಕಮಲಾವತೀಪುರ | ವನ್ನು ಸಾರಿದೆ ಹರುಷದಲಿ ||೧೩೧||
ಕಮಲಭೂಪನಾತ್ಮಜೆ ರತಿಯೆಂಬಳು | ವಿಮಲ ಕನ್ನಿಕೆಯೊರ್ವಳಿಹಳು ||
ಅಮರವಂದಿತ ನಿನ್ನ ಸುತಗೀಯಬೇಕೆಂದು | ಮಮತೆಯೊಳ್ ನಿಶ್ಚಯಗೆಯ್ದೆ       ||೧೩೨||

ನಾಳೆ ಲಗ್ನವನಿಟ್ಟು ನಾನಿಲ್ಲಿಗಯ್ತಂದೆ | ಜಾಲಮಾತಲ್ಲ ಕೇಳಿದನು ||
ನೀಲನಿಭಾಂಗ ದಿಬ್ಬಣಸಹ ತೆರಳುವು | ದಾಲಸ್ಯವೇಕಿನ್ನು ಬರಿದೆ         ||೧೩೩||

ಇಂತೆಂದು ಚರಣಕೊಂದಿಸುತಾಗ ದ್ರುಪದಜೆ | ದಂತಿಪುರಕೆ ನಡೆತರಲು ||
ಅಂತರಂಗದಿ ಪಾರ್ಥನೇಳ್ವುದರೊಳಗೆ ನಿ | ಶ್ಚಿಂತೆಯೊಳಯ್ದುವೆನೆನುತ  ||೧೩೪||

ದಂತಿಗಾಮಿನಿ ಹಲವೆಣಿಸುತ್ತ ಮನದೊಳು | ಚಿಂತಿಸುತಯ್ತರಲಾಗಿ ||
ಸಂತಸದೊಳು ಪಾಂಡುಸುತರೊಳಗಾದ ವೃ | ತ್ತಾಂತವ ಕೇಳು ಪೇಳುವೆನು      ||೧೩೫||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಇತ್ತ ಗಜಪುರದೊಳಗೆ ಪಾರ್ಥನು | ಮತ್ತೆ ತಾನೆಚ್ಚರ್ತ ಸಮಯದೊ |
ಳೊತ್ತಿನಲಿ ಸತಿ ಕಾಣದಿರಲರ | ಸುತ್ತ ಬಳಿಕ  ||೧೩೬||

ತರುಣಿ ದ್ರೌಪದಿಯೆತ್ತ ಪೋಗಿಹ | ಳಿರುಳಿನಲಿ ತಾ ನೋಳ್ಪೆನೆನುತಲಿ |
ಕರದಿ ಖಡ್ಗವ ಪಿಡಿದು ಪೊರಟನು | ಭರದೊಳಂದು    ||೧೩೭||

ಊರುಕೇರಿಯ ಮನೆಮನೆಗಳನು | ಸಾರುತರಸುತ ಕಾಣದೀಪರಿ |
ನಾರಿ ದ್ರೌಪದಿಯೆನುತ ಕರೆವುತ | ಲಾರು ಭಟಿಸಿ      ||೧೩೮||

ಇಂತು ರೋಷದೊಳಾ ಧನಂಜಯ | ನಿಂತು ಪೊರಬಾಗಿಲಲಿ ನೋಡುತ |
ನಿಂತಿರಲು ಬಂದಡಿಗೆ ಮಣಿದಳು | ದಂತಿಗಮನೆ       ||೧೩೯||

ರಾಗ ಮಾರವಿ ಏಕತಾಳ

ಚರಣದೊಳೆರಗಿದ ತರುಣಿಯ ಮುಡಿಯನು | ಕರದಲಿ ಪಿಡಿದಾಗ ||
ಶಿರವನು ಛೇದಿಸಿ ಪಂಥವ ಮೆರೆಸುವೆ | ಪುರಜನರೀಕ್ಷಿಸಲಿ      ||೧೪೦||

ಎಂದೆನುತೀ ಪರಿಯಿಂದಲಿ ಪಾರ್ಥನು | ತಂದಡಗೆಡವುತಿರೆ ||
ಮಂದಗಮನೆ ಕೂಗಲು ಧ್ವನಿ ಕೇಳಿದು | ದಂದನಿಲಜಗೊಡನೆ   ||೧೪೧||

ಆ ಯುವತಿಯ ಧ್ವನಿ ಕೇಳುತ ಬಂದನು | ವಾಯುಕುಮಾರಕನು ||
ಕಾಯದಿ ಕಳವಳಗೊಳುತಲುಸಿರಿದನು | ಪಾಯದೊಳಂದವಗೆ  ||೧೪೨||

ಪಾತಕಿ ಕೇಳ್ ನಮ್ಮಯ್ವರ ಸತಿಯ ನೀ | ಘಾತಿಸಬಹುದೇನೈ ||
ನೀತಿಯನುಳಿದೀರೀತಿಯನೆಸಗಲು | ಖ್ಯಾತಿಯು ನಿನಗಹುದೆ   ||೧೪೩||

ಸತ್ಯವನೀಕ್ಷಿಸಲಗ್ನಿಯ ಕುಂಡವ | ವಿಸ್ತರಿಸುವುದೀಗ ||
ಚಿತ್ತದಿ ಸಂಶಯವೇಕೆನುತುಸಿರಲು | ಪಾರ್ಥನು ಕೇಳುತಲೆ      ||೧೪೪||

ರಾಗ ಶಂಕರಾಭರಣ ಮಟ್ಟೆತಾಳ

ವೀರ ಪಾರ್ಥ ಬಳಿಕಲು | ಬ್ಬೇರಿ ಪಾವಕಾಸ್ತ್ರವನ್ನು |
ಭಾರಿ ಧನುವಿಗೇರಿ ಯೆಚ್ಚ | ನಾರುಭಟಿಸುತ ||
ಭೋರನೆದ್ದುದಗ್ನಿ ಹೊಗೆಯು ಸೇರುತಂಬರವನು ಮುಸುಕಿ |
ತೋರಿತದರೊಳಾಗಲುರಿಯು | ಭೂರಿಪ್ರಭೆಯಲಿ      ||೧೪೫||

ಸುರಪಸುತನು ನುಡಿದ ಮನದಿ | ಹರುಷಗೊಳುತ ದ್ರುಪದಸುತೆಯ |
ಪರಿಕಿಸುವೆನೆನುತ್ತಲಾಗ | ಕರೆದು ಪೇಳ್ದನು ||
ತರುಣಿ ಕೇಳೆ ನೀನು ಮುಡಿದ | ಶಿರದ ಪುಷ್ಪ ಬಾಡೆ ನಿನ್ನ |
ಗುರಿಯ ಕೊಡುವೆ ಖಡುಗಕೀಗ | ಪರಿಯ ನೋಡೆಲೆ   ||೧೪೬||

ಎಂದು ಪೇಳ್ದ ಮಾತ ಕೇಳ್ದು | ಮಂದಗಮನೆ ಹರಿಯ ನೆನೆದು |
ತಂದೆ ನೀನೆ ರಕ್ಷಿಸೆನುತ | ನಿಂದು ಸ್ತುತಿಸುತ ||
ಒಂದೆ ಮನಸಿನಿಂದ ಲಾಗ | ಬಂದಳು ಪ್ರದಕ್ಷಿಣವನು |
ಸುಂದರಾಂಗಿ ಪೊಕ್ಕಳಗ್ನಿ | ಗಂದು ತವಕದಿ  ||೧೪೭||

ಭಾಮಿನಿ

ಹರಿಯೆ ನಿನ್ನಾಜ್ಞೆಯಲಿ ತಾನ |
ಯ್ದಿರಲು ಕೋಪಿಸಿ ಪಾರ್ಥನೆನ್ನನು |
ಪರಿಕಿಸುವ ನೀ ಕಾಯಬೇಕೆಂದನುತ ನುತಿಸುತಿರೆ ||
ಪರಮ ಮಂಗಲವಾಗಲಾಕೆಯು |
ಹರುಷದಲಿ ನಡೆತಂದು ಪತಿಗಳ |
ಚರಣಕೆರಗಲು ನುಡಿದ ಸಹಭವನೊಡನೆ ಮರುತಜನು          ||೧೪೮||

ರಾಗ ರೇಗುಪ್ತಿ ಏಕತಾಳ

ನೋಡಿದೆಯ | ತಮ್ಮ | ನೋಡಿದೆಯ      || ಪಲ್ಲವಿ ||
ಪುಣ್ಯಕುಲದಿ ಪುಟ್ಟಿ | ನಿನ್ನೊಳು ಗ್ರಹಿಸದೆ |
ಮಿಣ್ಣನೆ ಸ್ತ್ರೀಹತ್ಯ | ವನ್ನು ಮಾಡುವರೆ ||
ಪುಣ್ಯಾತ್ಮೆ ದ್ರೌಪದಿ | ಪರಮಪತಿವ್ರತೆ |
ನಿರ್ಣಯವರಿಯದೆ | ಕಣ್ಣಾರೆ ಕೊಲುತಿಹೆ || ನೋಡಿದೆಯ        ||೧೪೯||

ದಿನಚರಿಯಲಿ ಮತ್ತೀ | ವನಜಾಕ್ಷಿ ತಿರುಗುವ |
ಳನುಮಾನವಿಲ್ಲದೆ | ನಿನಗುಸಿರುವೆನು ||
ಸನುಮತದಲಿ ದುಷ್ಟ | ಜನರ ಸಂಹರಿಸುತ್ತ |
ಘನ ರಕ್ತಪಾನವ | ನನುದಿನ ಮಾಳ್ಪಳು || ನೋಡಿದೆಯ        ||೧೫೦||

ವನಿತೆಯಿವಳು ನಮ | ಗೆನುತ ಗ್ರಹಿಸುತಿಹೆ |
ಕ್ಷಣದಿ ಚಂಡಿಯ ರೂಪ | ವನುಕರಿಸುವಳು ||
ಕಿನಿಸಿನಿಂದಿವಳನ್ನು | ಕನಲಿಸಬೇಡಿನ್ನು |
ಮನೆಗೊಯ್ದು ಮನ್ನಿಸೀ | ಗನುಮಾನವಿಡದೆ || ನೋಡಿದೆಯ    ||೧೫೧||

ಎಂದು ಮಾರುತಿ ಪೇಳ | ಲಂದು ನರನು ಮತ್ತಾ |
ಮಂದಗಮನೆಯಳ | ಚಂದದಿ ಕರೆದು ||
ಮಂದಿರಕಾಗಲ | ಯ್ತಂದು ಸುಖದೊಳಿರ |
ಲಂದವರಿತು ಭೀಮ | ಬಂದನು ಮನೆಗೆ || ನೋಡಿದೆಯ        ||೧೫೨||

ಭಾಮಿನಿ

ಧರಣಿಪತಿ ಕೇಳಿಂತು ಪಾಂಡವ |
ರಿರಲಿಕಿತ್ತಲು ಸೂರ್ಯನುದಯಕೆ |
ಪುರದ ಜನರೆಚ್ಚರ್ತು ತಮ್ಮಯ ನಿತ್ಯವಿಧಿಗಳನು ||
ವಿರಚಿಸುತಲಿರಲಾಗ ಮನದಲಿ |
ಹರುಷವಾಂತು ವಿವಾಹವೆಸಗಲು |
ಪರಮಪುರುಷನು ಬಂದು ಪೊಕ್ಕನು ದ್ವಾರಕಾಪುರವ  ||೧೫೩||

ಕಂದ

ಖಗವಾಹನ ಪ್ರತ್ಯೂಷದಿ |
ನಗರವ ಪೊಗುತಂದು ಜವದೊಳೋಲಗವಿತ್ತುಂ ||
ಮಿಗುವರಿವಾನಂದದಿ ನಸು |
ನಗುತಲಿ ರುಕ್ಮಿಣಿಯ ಕರೆದು ಬಳಿಕಿಂತೆಂದಂ ||೧೫೪||

ರಾಗ ಸುರುಟಿ ಏಕತಾಳ

ಹರಿಣಾಕ್ಷಿಯೆ ಕೇಳು | ಮನಸಿನೊ | ಳುರೆ ಸಂತಸ ತಾಳು ||
ಸ್ಮರನಿಗೆ ಲಗ್ನವ ವಿರಚಿಸಲೋಸುಗ |
ವರಕನ್ನಿಕೆಯನು ಸ್ಥಿರಗೊಳಿಸಿದೆನು  ||೧೫೫||

ಅದಕಾಗುವುದೆಲ್ಲ | ಸನ್ನಹ | ಒದಗಿಸಬೇಕಲ್ಲ ||
ಮುದದಲಿ ಮಗನಿಗೆ ಮದುವಣಿಶಾಸ್ತ್ರದ |
ವಿಧಿಯೆಸಗೆಲೆ ನೀ ಪದುಮದಳಾಂಬಕಿ        ||೧೫೬||

ಹದಿನಯ್ದನೆ ಗಳಿಗೆ | ಲಗ್ನವು | ಒದಗಿಹುದದರೊಳಗೆ ||
ಮುದದಲಿ ಕಮಲಾವತಿಪುರಕೀಗಲೆ |
ಯದುಪರಿವಾರವು ಸುದತಿಯರೆಲ್ಲರು         ||೧೫೭||

ತೆರಳುವುದೀಕ್ಷಣದಿ | ದಿಬ್ಬಣಿ | ಗರು ಸಹಿತದಿ ಮುದದಿ ||
ತರುಣಿಯೊಳಿಂತೀಪರಿಯಲಿ ನುಡಿದಾ |
ಮುರಹರನಯ್ದಿದನರಮನೆಗಾಗಲೆ  ||೧೫೮||

ಭಾಮಿನಿ

ಅರಸನೆಂದುದ ಕೇಳುತಾಕ್ಷಣ |
ಭರದಿ ರುಕ್ಮಿಣಿ ಬಂದು ತನ್ನಯ |
ತರಳನಿಗೆ ನೀರೆರೆದು ವಿದ್ಯುಕ್ತಪ್ರಕಾರದಲಿ ||
ವಿರಚಿಸಲು ಬಳಿಕಿತ್ತ ಲಕ್ಷ್ಮೀ |
ವರನು ಮನದಲಿ ಗರುಡನನು ತಾ |
ಸ್ಮರಿಸಲದನರಿತಾಗಲಯ್ತಂದನು ಸರಾಗದಲಿ          ||೧೫೯||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಹರಿ ನಮೋ ಎಂದಾ ಸುಪರ್ಣನು | ಚರಣಸಾರಸಕೆರಗುತೆಂದನು |
ಭರದೊಳೆನ್ನನು ಸ್ಮರಿಸಿದಂಥಾ | ಪರಿಯದೇನು       ||೧೬೦||

ಗರುಡ ಲಾಲಿಸಿ ಕೇಳು ನಮ್ಮಯ | ತರಳನಹ ಮನ್ಮಥಗೆ ಲಗ್ನವ |
ವಿರಚಿಸಲ್ಕೆಂದೆನುತ ನೆನೆದಿಹೆ | ಹರುಷದಿಂದ          ||೧೬೧||

ಅದಕೆ ತನ್ನಿಂದಾಹ ಸೇವೆಯ | ವಿಧವನರಿತೀಗುಸಿರಿದರೆ ತಾ |
ನೊದಗಿಸುವೆ ಬೇಗೆನಲು ಪೇಳಿದ | ಮದನಜನಕ      ||೧೬೨||

ಗರುಡ ಕೇಳೈ ಸಕಲ ದೇಶದ | ಧರಣಿಪಾಲರಿಗಿಂದು ಲಿಖಿತವ |
ಬರೆಸಿ ಕೊಡುವೆನು ತೋರುತವರಿಗೆ | ಕರೆತರುವುದು  ||೧೬೩||

ಎಂದು ಲಿಖಿತವ ಬರೆಸಿಕೊಡಲಾ | ನಂದದಲಿ ವಿನತಾಸುತನು ಬಲ |
ಬಂದು ಹರಿಯಡಿಗೆರಗಿ ಪೊರಟನು | ಚಂದದಿಂದ      ||೧೬೪||

ಭಾಮಿನಿ

ಸಿರಿಯರಸನಪ್ಪಣೆಯನಾಂತಾ |
ಗರುಡದೇವನು ತನ್ನ ಮನದಲಿ |
ಹರಿಯ ಸ್ಮರಿಸುತ ಗಮಿಸಿ ಲಿಖಿತವನಿತ್ತು ಸರ್ವರಿಗೆ ||
ಸರಸಿಜೋದ್ಭವ ರುದ್ರ ಮತ್ತಾ |
ಸುರಪ ಮುಖ್ಯಾದ್ಯಮರರೆಲ್ಲರ |
ಕರೆತರುತ ನಡೆತಂದು ಪೊಕ್ಕನು ದ್ವಾರಕಾಪುರವ     ||೧೬೫||

ವಾರ್ಧಕ

ಧರೆಯಧಿಪ ಕೇಳಿಂತು ನಡೆತಂದ ಬೊಮ್ಮಾದಿ |
ಸುರರ ಸತ್ಕರಿಸುತ್ತ ಶ್ರೀಕೃಷ್ಣ ಬಳಿಕ ಸ |
ತ್ವರದಿ ಪಾಂಡವರಿಂಗೆ ಪ್ರತ್ಯೇಕ ಲಿಖಿತಮಂ ಬರೆದದಂ ಕಳುಹಲಂದು ||
ಚರರು ನಡೆತಂದಾ ಯುಧಿಷ್ಠಿರಂಗೀಯಲತಿ |
ಹರುಷದಿಂ ಲೇಖನವ ವಾಚಿಸಿ ಸಹೋದರರ |
ಕರೆದಾಗ ಮನ್ಮಥನ ಲಗ್ನವೃತ್ತಾಂತಮಂ ಸಾಂಗಮೆನೆ ವಿವರಿಸಿದನು     ||೧೬೬||

ರಾಗ ಕೇದಾರಗೌಳ ಅಷ್ಟತಾಳ

ಶ್ರೀಮನೋಹರರತ್ನ ತರಳ ಮನ್ಮಥನಿಗೆ | ಪ್ರೇಮದಿ ಲಗ್ನವನು ||
ನಾ ಮಾಳ್ಪೆ ನೀವೆಲ್ಲ ಬಹುದೆಂದು ಬರೆದಿಹ | ನೀ ಮಹಲಿಖಿತವನು       ||೧೬೭||

ಪೋಗಲೇಬೇಕು ನಾವೀಗಲೆನುತ್ತತಿ | ವೇಗದಿ ಧರ್ಮಜನು ||
ನಾಗವೇಣಿಯನೊಡಗೊಂಡನುಜರು ಸಹಿ | ತಾಗ ತಾವಯ್ತಂದರು       ||೧೬೮||

ಬಂದರು ಪಾಂಡವರೆಂದೆನುತಲೆ ಚರ | ರಂದು ಸೂಚಿಸೆ ಹರಿಯು ||
ಚಂದದಿಂದಿದಿರಾಗುತರಮನೆಗೊಯ್ದು ತಾ | ನಂದುಪಚರಿಸಿದನು         ||೧೬೯||