ರಾಗ ಸಾಂಗತ್ಯ ರೂಪಕತಾಳ

ಬಂದಿರೆ ಪಾಂಡವರೆಲ್ಲ ನೀವೆಮ್ಮಯ | ಮಂದಿರಕಾಗಿ ಪ್ರೀತಿಯಲಿ ||
ಮುಂದಣ ಕಾರ್ಯ ನಿಮ್ಮಿಂದಾಗಬೇಕೆಂದು | ಮಂದರಧರನುಸಿರಿದನು   ||೧೭೦||

ಅಂದು ಕೌರವಭೂಪನಿಂದತಿ ಬಳಲಿದಿ | ರಿಂದು ಕ್ಷೇಮಿಗಳೆ ಭಾವಯ್ಯ ||
ಮಂದಮತಿಗಳು ತಮ್ಮಿಂದ ತಾವಳಿದರು | ಮುಂದಿನ್ನು ಭಯವಿಲ್ಲ ನಿಮಗೆ         ||೧೭೧||

ತಂಗಿ ಬಂದುದರಿಂದ ಸಂತೋಷವಾಯಿತು | ಶೃಂಗಾರವನು ರಚಿಸೆನಲು ||
ಹಿಂಗದೆ ಭರದಿ ರುಕ್ಮಿಣಿ ಮುಖ್ಯ ಸ್ತ್ರೀಯರು | ಮಂಗಳಕನುಸರಿಸಿದರು    ||೧೭೨||

ಇಂತೀಪರಿಯೊಳಾಗ ಸಕಲ ಸನ್ನಾಹದಿ | ಕಂತುಜನಕನನುಜ್ಞೆಯಲಿ ||
ಅಂತಕಾಂತಕನನ್ನು ಸ್ಮರಿಸುತ್ತ ಬಂದರಾ | ನಂತ ಋಷಿಗಳು ಪ್ರೇಮದಲಿ ||೧೭೩||

ಮನ್ಮಥನಿಂಗಲಂಕರಿಸಿ ಬಾಸಿಗವನ್ನು | ಸನ್ಮತದಲಿ ಸುದತಿಯರು ||
ಸುಮ್ಮಾನದಲಿ ಕಟ್ಟಿ ತಳೆದಕ್ಷತೆಯನಾಗ | ಕಮ್ಮಗೋಲನ ಹರಸಿದರು    ||೧೭೪||

ಆ ಸಮಯದಿ ಭೇರಿಘೋಷ ದುಂದುಭಿಯಿಂದ | ಲೇಸಾದ ನಾಗವೇಣಿಯರ ||
ಭೂಸುರನಿವಹವನೊಡಗೊಂಡು ದಿಬ್ಬಣ | ತೋಷದಿಂದಲಿ ಪೊರಡುತಿರೆ  ||೧೭೫||

ವನಜಾಕ್ಷನಾಗಲೆ ವಿನತೆಯಾತ್ಮಜನನ್ನು | ಕನಿಕರದಲಿ ಕರೆದೆಂದ ||
ವಿನಯದಿ ದಿಬ್ಬಣಿಗರನೆಲ್ಲ ಪೊತ್ತು ನೀ | ಘನವೇಗದೊಳು ಗಮಿಸೆನಲು   ||೧೭೬||

ಭಾಮಿನಿ

ಮಂದರಾಧರನಾಜ್ಞೆಯಿಂದಲಿ |
ಚಂದದಲಿ ದಿಬ್ಬಣಿಗರೆಲ್ಲರು |
ಬಂದು ಗರುಡನ ಮೇಲೆ ಕುಳಿತರು ಬಳಿಕ ಮಾಧವನು ||
ಇಂದುಧರ ಕಮಲಾಸನಾದ್ಯರು |
ವೃಂದವಮರರವೆರಸಿ ಕುಂತೀ |
ನಂದನರು ಸಹಿತೇರಿ ಮಂಡಿಸಿದರು ವಿನೋದದೊಳು ||೧೭೭||

ವಾರ್ಧಕ

ಧರಣಿಪತಿ ಲಾಲಿಸೀಪರಿಯಿಂದ ದಿಬ್ಬಣಕೆ |
ನೆರೆದ ಜನವಂತಿರಲಿ ಬಳಿಕೀ ಭವಾಂಡಮಂ |
ಧರಿಸಿರ್ಪ ಹರಿಹರಬ್ರಹ್ಮಾದಿಗಳ ಭಾರವಿರದೆ ತಾನೊರ್ವನಂದು ||
ಗರುಡನಾಂತನು ಪಕ್ಕವೊಂದರೊಳಗಾ ಫಣೀ |
ಶ್ವರಗರಿದು ಪೊಗಳಲ್ಕೆ ಸತ್ತ್ವಮಿನ್ನೆಂತುಟೋ |
ಪರಮಾತ್ಮಭಕ್ತರಿಂಗಾವುದೈದೊಡ್ಡಿತೆನುತರುಹಿದನು ನೃಪಗೆ ಮುನಿಪ    ||೧೭೮||

ದ್ವಿಪದಿ
ಭೂಪಾಲ ಕೇಳಿಂತು ದಿಬ್ಬಣವ ಕೂಡಿ |
ಶ್ರೀಪತಿಯು ಪೊರಟನತಿ ಮುದದೊಳೋಲಾಡಿ        ||೧೭೯||

ವನಜಾಕ್ಷ ರುಕ್ಮಿಣಿಯು ಸಾಂಬಸಹಿತಾಗಿ |
ಅನುವರಿತು ಗರುಡನಲಿ ಕುಳಿತು ಲೇಸಾಗಿ   ||೧೮೦||

ಬಿರುದುಗಳ ಪೊಗಳುತೀ ಪರಿಯ ಪಾಠಕರ |
ವರಭೇರಿಯನು ಹೊಡೆಸಿ ನಡೆವ ನಾಟಕರ   ||೧೮೧||

ವಿನಯದಿಂದೊಡಗೂಡಿ ಮುಂದೆ ಮಾರ್ಗದೊಳು |
ಘನ ವೇಗದಿಂದ ಬರುತಿರಲಂಬರದೊಳು    ||೧೮೨||

ಘೋರ ಕಾನನವೊಂದು ಕಣ್ಗೆ ಗೋಚರಿಸಿ |
ತೋರುತಿರ್ದುದು ಬಹಳ ಭಯವನಾವರಿಸಿ  ||೧೮೩||
ಮೆರೆದಿರ್ಪುದಾ ವನಕ್ಕೊಡೆಯನಾಗಿರುವ |

ದುರುಳ ಮೇಘಾಸುರನು ತಿಳಿದನಿವರಿರವ    ||೧೮೪||
ಅವನನುಜೆ ಮೇಘಸ್ತನಿಯು ತಿಳಿದು ಬಂದು |
ಜವದಿ ದಿಬ್ಬಣ ತಡೆದಳಡಹಾಯ್ದು ನಿಂದು    ||೧೮೫||

ಪಕ್ಷಿಯನು ತಿಂಬೆನೆನ್ನುತ ಬಾಯ ಕಳೆದು |
ಆ ಕ್ಷಣದಿ ಬಂದಿರುವ ಬಗೆಯ ಹರಿ ತಿಳಿದು    ||೧೮೬||

ಕರದೊಳಗೆ ಚಕ್ರವನು ಧರಸಿ ತಾ ಬೇಗ |
ಬರಲು ಕಂಡವನೊಡನೆ ಪೇಳ್ದಳವಳಾಗ      ||೧೮೭||

ರಾಗ ಮಾರವಿ ಅಷ್ಟತಾಳ

ಆರೊ ಬಂದವನು | ಈ ವಿಪಿನಕಿ | ನ್ನಾರೊ ಬಂದವನು || ಪಲ್ಲವಿ ||
ಭೂರಿ ತೋಷದಿಂದಲಿಂಥ | ಘೋರ ಕಾನನಕ್ಕೆ ನಿಮ್ಮ |
ನಾರಿಯರನು ಸೇರಿ ಬಂದ | ಕಾರಣಂಗಳ ಬೇಗ ಪೇಳೈ || ಆರೊ        ||೧೮೮||

ನರರ ಮಾಂಸ ಮೆಲದೆ ತೊಡುವಿ | ಲಿರುವ ಸಮಯದಿ ಬಂದು ತನ್ನ |
ಕರದಿ ಸಿಕ್ಕಿದ ಮೇಲೆ ಬಿಟ್ಟರೆ | ಬರುವುದೆನಗಪಕೀರ್ತಿಯಿದರಲಿ || ಆರೊ  ||೧೮೯||

ತಂಡತಂಡದೊಳಿರುವ ಬಲವನು | ತುಂಡುತುಂಡುಗೆಯ್ವುತೆಣ್ಣೆಯ |
ಭಾಂಡದಲ್ಲಿ ಹುರಿದು ಕರಿದು | ಗಂಡನಿಂಗುಣಬಡಿಸಿ ತಿನುವೆನು ||೧೯೦||

ಎಂದ ನುಡಿಯ ಕೇಳುತಾಗ | ಮಂದರಾದ್ರಿಧರನು ರೋಷ |
ದಿಂದ ಪೇಳ್ದನವಳ ಮುಂದೆ | ನಿಂದು ಬಳಿಕ ಕೋಪಿಸುತ್ತಲಿ || ಆರೊ      ||೧೯೧||

ರಾಗ ಶಂಕರಾಭರಣ ಮಟ್ಟೆತಾಳ

ದನುಜೆ ಕೇಳೆ ಕೂಗದೀಗ | ವಿನಯದಿಂದ ಸಾರು ಪಿಂದೆ |
ದಿನಪ ನಣುಗನಿಳೆಯ ತೋರ್ಪೆ | ನಿನಗೆ ನಿಮಿಷದಿ    ||೧೯೨||

ಎಲವೊ ಮನುಜ ಕೇಳು ನಿನ್ನ | ಬಲವನೆಲ್ಲ ತಿಂಬೆನೆಂದು |
ಛಲದಿ ಬಂದೆನಿಲ್ಲಿ ನಾನು | ಗೆಲವಿನಿಂದಲಿ    ||೧೯೩||

ಭ್ರಷ್ಟ ಮೂಳಿ ದೂರ ನಿಲ್ಲು | ಕುಟ್ಟಿ ನಿನ್ನ ಶಿರವನರಿವೆ |
ಪೆಟ್ಟು ತಿನದೆ ಪೋಗು ಮನೆಗೆ | ತಟ್ಟನೀಗಳೆ ||೧೯೪||

ಇಷ್ಟು ನುಡಿದ ಮೇಲೆ ನಿನ್ನ | ಬಿಟ್ಟು ಪೋಗೆ ನಾನೆನುತ್ತ |
ಮುಷ್ಟಿಯಿಂದ ತಿವಿದಳಾಗ | ದುಷ್ಟ ರಕ್ಕಸಿ    ||೧೯೫||

ಸೊಕ್ಕಿನಿಂದ ಮಿಕ್ಕುವರಿದ | ರಕ್ಕಸಿಯನು ಕಂಡು ಬಳಿಕ |
ಚಕ್ರದಿಂದ ಶಿರವನರಿದು | ನಕ್ಕು ನಿಂದನು    ||೧೯೬||

ಭಾಮಿನಿ

ದುರುಳೆ ಮೇಘಸ್ತನಿಯ ರಣದಲಿ |
ಹರಿಯು ತಾ ಸಂಹರಿಸಿ ಮತ್ತಾ |
ನಿರದೆ ಮುಂದಕೆ ತೆರಳಿ ದಿಬ್ಬಣಸಹಿತ ವಿಭವದಲಿ ||
ಭರದಿ ನಡೆತರಲದನು ಪರಿಕಿಸು |
ತುರುತರದ ಕೋಪದಲಿ ಮೇಘಾ |
ಸುರನು ನಡೆತಂದಾಗ ತಡೆದನು ಹರಿಯ ಭೋರ್ಗುಡಿಸಿ        ||೧೯೭||

ರಾಗ ಭೈರವಿ ಏಕತಾಳ

ಎಲವೊ ನರಗುರಿ ಕೇಳು | ನೀ | ನಿಲದಿಹುದೆನ್ನಿದಿರಿನೊಳು ||
ಸಲುವುದೆ ಪಂಥವು ನಿನಗೆ | ತವ | ತಲೆಯ ಕಡಿವೆನೀಗಳಿಗೆ    ||೧೯೮||

ಹರ ಮುನಿದರೆ ಭಯವಿಲ್ಲ | ಸುರ | ವರರೊಳಗೆನಗಿದಿರಿಲ್ಲ ||
ಧರೆಯೊಳಗಿಹ ಜನರುಗಳು ಗೆಲ | ಲರಿಯರೆನ್ನ ಸಮರದೊಳು  ||೧೯೯||

ಎನ್ನಯ ಹರಿಬಕೆ ನೀನು | ನಿಲೆ | ನಿನ್ನನು ಕೊಲುವೆನು ನಾನು ||
ಮುನ್ನ ನೀನಾರೆಂಬುದನು | ಪೇ | ಳೆನ್ನೊಳು ಸಂಶಯವೇನು   ||೨೦೦||

ನರಗುರಿ ನಿನ್ನನು ತಿನದೆ | ಬಿ | ಟ್ಟರೆ ಕೀರ್ತಿಯು ತನಗಿಹುದೆ ||
ಪರಿಕಿಸಿ ನೋಡೆಂದೆನುತ | ಖಳ | ನಿರೆ ಹರಿ ಪೇಳ್ದನು ನಗುತ   ||೨೦೧||

ರಾಗ ಪಂಚಾಗತಿ ಮಟ್ಟೆತಾಳ

ಎಲವೊ ದನುಜ ಕೇಳು ನೀನು | ಸಲುಗೆಯಿಂದ ಪ್ರಾಣವನ್ನು |
ಕಳೆಯ ಬೇಡ ಪೋಗು ನಿನ್ನ | ನಿಳೆಯಕೀಗಲೆ ||

ಖಳವಿರೋಧಿಯೆಂಬರೆನಗೆ | ಹಲವು ಮಾತನಾಡಿ ಬರಿದೆ |
ಫಲವದೇನು ಪೋಗದಿರಲು | ಕೊಲುವೆನೆಂದನು       ||೨೦೨||

ಎಂದ ಮಾತ ಕೇಳಿ ದೈತ್ಯ | ನೆಂದ ಲಕ್ಷ್ಮಿರಮಣನೊಡನೆ |
ಮುಂದುವರಿದರೀಗ ನಿನ್ನ | ಕೊಂದು ಕಳೆವೆನು ||
ಹಿಂದೆ ರಾಕ್ಷಸರನು ನೀನು | ಕೊಂದೆನೆಂಬ ಗರ್ವವೆನ್ನೊ |
ಳಿಂದು ನಡೆಯಲರಿದು ಹವಕೆ | ನಿಂದು ನೋಡೆಲ      ||೨೦೩||

ಖೂಳ ನಿನ್ನ ಜಯಿಸಲಿಂದು | ಮೌಳಿಕೃಪೆಯದೆಂತಿರುವುದೊ |
ಕಾಳಗದೊಳು ನೋಳ್ಪೆನೀಗ | ಲಾಳುತನವನು ||
ತಾಳು ತಾಳು ನಿಮಿಷದೊಳಗೆ | ಬೀಳಗೆಡವೆನೆನುತಲಸ್ತ್ರ |
ಜಾಲವನ್ನು ಸುರಿದನಾಗ | ಪೇಳಲೇನದ      ||೨೦೪||

ಮಿಸುನಿಭಾಂಗ ನೀನು ಧುರದೊ | ಳಸಮಸಹಸಿಯೆನುತ ಬರುವ |
ವಿಶಿಖಗಳನು ಖಂಡಿಸುತ್ತ | ಲೆಸೆದನು ಶರ ||
ಬಿಸಜನೇತ್ರ ರೋಷದಿಂದ | ಲಸುರನೆಚ್ಚ ಬಾಣಗಳನು |
ನಸುನಗುತ್ತ ಮಧ್ಯಪಥದಿ | ಕುಸುರಿ ತರಿದನು          ||೨೦೫||
ಬಳಿಕ ಹರಿಯು ಮನದೊಳಾಗ | ತಿಳಿದನಿವನ ಬೇಗ ರಣದಿ |
ಕೊಲುವೆನೆನುತ ಚಕ್ರವನ್ನು | ಸೆಳೆದು ಬಿಸುಟನು ||
ತಳುವದಾಗ ಕಿಡಿಯನುಗುಳಿ | ಖಳನ ಶಿರವನರಿದು ತಿರುಗಿ |
ನಳಿನನಾಭನೊಡನೆ ಬಂದು | ನೆಲಸಿತಾಗಲೆ ||೨೦೬||

ಭಾಮಿನಿ

ಧರೆಯಧಿಪ ಕೇಳಿಂತು ಸಮರದಿ |
ಹರಿಯು ಮೇಘಾಸುರನ ಕೆಡಹಲು |
ಸುರರು ಕಾಣುತ ಪುಷ್ಪವೃಷ್ಟಿಯ ಕರೆದರಾ ಕ್ಷಣದಿ ||
ಪರಿಪರಿಯ ವಿಭವದೊಳು ದಿಬ್ಬಣ |
ವೆರಸಿ ಕಮಲಾವತಿಗೆ ಬರಲದ |
ನರಿತು ಚರರಯ್ತಂದು ಬಿನ್ನವಿಸಿದರು ಭೂಪತಿಗೆ       ||೨೦೭||

ರಾಗ ದೇಶಿ ಅಷ್ಟತಾಳ

ಲಾಲಿಸೈ ಕಮಲಾವತಿದೊರೆಯೆ ನೀ |
ಜಾಲವಲ್ಲಿದು ಕೇಳು ಸದ್ಗುಣ | ಮಾಲನೇ ಪರಿತೋಷದಿ         ||೨೦೮||

ದ್ವಾರಕೆಯಿಂದ ದಿಬ್ಬಣಸಹಿತಲೆ |
ಮಾರಪಿತನಯ್ತಂದ ಕು | ಮಾರ ಸ್ಮರನ ವಿವಾಹಕೆ    ||೨೦೯||

ನಾರಿ ದ್ರೌಪದಿ ದ್ರುಪದರಾಯನ ಸುಕು |
ಮಾರಿ ಸಲೆ ವಯ್ಯಾರಿ ಬಲು ಶೃಂ | ಗಾರಿ ಬಂದಿಹಳಿಲ್ಲಿಗೆ        ||೨೧೦||

ಮನ್ನಿಸೈ ದಿಬ್ಬಣಿಗರನೆಲ್ಲರ |
ಸನ್ಮತದೊಳಿದಿರ್ಗೊಂಡು ಕರೆತಂ | ದಿನ್ನು ಕಾರ್ಯವ ಮಾಳ್ಪುದು        ||೨೧೧||

ಎಂದ ಮಾತನು ಕೇಳುತ್ತ ಭೂಪನು |
ಚಂದದಿಂ ತನ್ನಾಪ್ತಜನಸಹ | ಬಂದನಿದಿರ್ಗೊಳಲೆನುತಲೆ       ||೨೧೨||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಕಲಶಗನ್ನಡಿ ಮುತ್ತಿನಾರತಿ | ತಳಿರತೋರಣದಿಂದ ಭೂಮಿಪ |
ಲಲನೆಯರನೊಡಗೊಂಡು ಪೊರಟನು | ನಲವಿನಿಂದ  ||೨೧೩||

ಹೊಡೆಸಿದನು ವರಭೇರಿ ದುಂದುಭಿ | ಯೊಡನೆ ನಾನಾ ಪರಿಯ ವಿಭವದಿ |
ಸಡಗರದೊಳಯ್ತಂದನಾ ಕ್ಷಣ | ದೃಢತರದೊಳು       ||೨೧೪||

ಬಂದುದನು ಕಾಣುತ್ತ ಹರಿ ತಾ | ನಂದು ಗರುಡನನಿಳಿದು ತನ್ನಯ |
ಬಂಧುಜನ ಸಹಿತಾಗಲತ್ಯಾ | ನಂದದಿಂದ   ||೨೧೫||

ಭಾಮಿನಿ

ಧರಣಿಪತಿ ಕೇಳಿಂತು ಕಮಲೇ |
ಶ್ವರನು ದಿಬ್ಬಣಿಗರನು ಮನ್ನಿಸಿ |
ಭರದಿ ಕರವಿಡಿದೊಳಗೆ ಕರೆತಂದಾಗ ಸಭೆಯೊಳಗೆ ||
ತರತರದಿ ಕುಳ್ಳಿರಿಸಿ ಬಾಗಿಲ |
ಹೊರಗೆ ನಿಲಿಸಿದ ಮೂರುಕೋಟಿಯ |
ಚರರ ಬಳಿಕಾ ಹರಿಯ ಕುಶಲವ ಕೇಳಿದನು ನೃಪತಿ    ||೨೧೬||

ರಾಗ ಸಾಂಗತ್ಯ ರೂಪಕತಾ

ಬಂದಿರೆ ದ್ವಾರಕೆಯಿಂದ ಶ್ರೀಲಕ್ಷ್ಮೀಶ | ಚಂದವೆ ಸರ್ವ ಮೋಹರಕೆ ||
ಇಂದು ನೀವಿಲ್ಲಿಗಯ್ತಂದುದರಿಂದಲಾ | ನಂದವಾದುದು ಸರ್ವಜನಕೆ      ||೨೧೭||

ಹರಿಹರಾದಿಗಳಿಗೆ ಸರಸಿಜಾಸನ ಮುಖ್ಯ | ಸುರನಾಥಾದ್ಯಮರರಿಂಗೆಲ್ಲ ||
ಪರಿತೋಷದಲಿ ಬಿಡಾರವನಿತ್ತು ಮನ್ನಿಸಿ | ಹರುಷದಿ ದಿಬ್ಬಣಿಗರನು       ||೨೧೮||

ಹಾಲು ಸಕ್ಕರೆ ಹಣ್ಣು ಎಳೆನೀರಿನಿಂದ | ಲೀಲೆಯೊಳುಪಚರಿಸುತಲಿ ||
ಮೇಲಾದ ಸಾಹಿತ್ಯಗಳನೆಲ್ಲ ಕೊಡಿಸಿ ಭೂ | ಪಾಲ ಮಾನಿನಿಯೊಳಿಂತೆಂದ         ||೨೧೯||

ನೀರೆ ನೀ ಕೇಳೆ ದಿಬ್ಬಣದೊಡನಯ್ತಂದ | ನಾರಿಯರನು ಕರೆತಂದು ||
ಓರಂತೆ ಮನ್ನಿಸಿ ಪರಿಪರಿಯಿಂದುಪ | ಚಾರವ ಗೆಯ್ವುದೆಂದೆನಲು        ||೨೨೦||

ರಾಗ ಕೇದಾರಗೌಳ ಅಷ್ಟತಾಳ

ಅರಸನಾಜ್ಞೆಯೊಳಾಗ ತರುಣಿಮಣಿಯು ಬಳಿ | ಕುರುತರ ಪ್ರೇಮದಲಿ ||
ಭರಿತ ವಿನೋದದಿಂದಿದಿರ್ಗೊಂಡು ಮನ್ನಿಸಿ | ತರುಣಿಯರೆಲ್ಲರಿಗೆ          ||೨೨೧||

ಹಾಲು ಸಕ್ಕರೆ ಹಣ್ಣು ಎಳೆನೀರ ಕುಡಿಸುತ್ತ | ಮೇಲುಪಚಾರದಲಿ ||
ಸಾಲಿನೊಳವರ್ಗೆ ಬಿಡಾರವನೊದಗಿಸಿ | ಲೀಲೆಯಿಂದಯ್ತಂದಳು          ||೨೨೨||

ಕಮಲ ಭೂಪನು ದ್ರೌಪದಿಯ ಬಳಿಗಯ್ತಂದು | ನಮಿಸಲು ಕಾಣುತ್ತಲೆ ||
ಕಮಲಾಕ್ಷ ದಯೆದೋರಿದನು ನಿನಗೆನಲು ಭೂ | ರಮಣ ಮತ್ತಿಂತೆಂದನು ||೨೨೩||

ರಾಗ ಸುರುಟಿ ಏಕತಾಳ

ಲಾಲಿಪುದೆಲೆ ತಾಯೆ | ಸದ್ಗುಣ | ಶೀಲೆ ವಿಮಲಕಾಯೆ ||
ಶ್ರೀಲತಾಂಗಿರಮಣ | ಪರಮ ಕೃ | ಪಾಳು ದೀನೋದ್ಧರಣ       ||೨೨೪||

ನಿನ್ನ ಕೃಪೆಯೊಳೀಗ | ದೊರಕಿದ | ಚಿನ್ಮಯ ತಾ ಬೇಗ ||
ಎನ್ನ ದುರುಕ್ತಿಯನು | ಕ್ಷಮಿಸುವು | ದಿನ್ನೆನುತೆರಗಿದನು ||೨೨೫||

ರಾಗ ಸಾಂಗತ್ಯ ರೂಪಕತಾಳ

ಬಳಿಕ ಭೂಪಾಲನು ಲಲೆನಯರನು ಕರೆ | ದೊಲವಿನಿಂದಲಿ ಪೇಳ್ದನಾಗ ||
ಚೆಲುವೆ ನಮ್ಮಯ ಸುತೆಯಳ ಸಿಂಗರಿಸಿರೆನ | ಲುಲಿದವರೆಲ್ಲರೊಂದಾಗಿ  ||೨೨೬||

ಅರಸನಪ್ಪಣೆಯೊಳು ಸರಸಿಜಾಕ್ಷಿಯರೆಲ್ಲ | ತರುಣಿಯ ಶೃಂಗರಿಸಿದರು ||
ಹರುಷದೊಳಾಗಲಾ ತರಳೆಯ ಮಂಟಪ | ಕಿರದೆ ತಂದರು ವಿಭವದಲಿ   ||೨೨೭||

ಇಂತೀಪರಿಯೊಳಾಗ ದಂತಿಗಾಮಿನಿಯರ | ತ್ಯಂತ ಶೋಭಾನವಪಾಡಿ ||
ಮಂತ್ರಘೋಷದಿ ತೆರೆವಿಡಿದಾಗ ವಿಪ್ರರಾ | ನಂತ ಸಂಭ್ರಮದಿಂದಲಿರಲು ||೨೨೮||

ಭೇರಿ ನಗಾರಿ ದುಂದುಭಿ ವಾದ್ಯರವದಿಂದ | ಭೂರಿ ವೈಭವದೊಳಗಂದು ||
ಧಾರೆಯನೆರೆದುತ್ಸಹದೊಳಿರ್ದರಿಂತೆಂದು | ಭೂರಮಣನಿಗೆಂದ ಮುನಿಪ ||೨೨೯||

ಭಾಮಿನಿ

ಅರಸ ಕೇಳಿಂತಮಿತವಿಭವದಿ |
ಹರಿಸುತಗೆ ನಂದನೆಯನಿತ್ತತಿ |
ಕರುಣದಲಿ ಮನ್ನಿಸಿದ ಸರ್ವರ ಕಮಲಭೂಪಾಲ ||
ಪರಿಪರಿಯ ಧನ ಕನಕವಸನಾ |
ದ್ಯುರುತರದ ದಾನಂಗಳಲಿ ಭೂ |
ಸುರಕುಲವ ಸಂತುಷ್ಟಿಪಡಿಸುತ್ತಿರ್ದನುತ್ಸಹದಿ ||೨೩೦||

ವಾರ್ಧಕ

ಧರಣೀಂದ್ರ ಕೇಳಿತ್ತ ಪರಿಪರಿಯ ವಿಭವದಲಿ |
ಮೆರೆಯುತ್ತಲಿರಲತ್ತ ಮಾದ್ರೇಶಸುತನಾದ |
ಧುರಧೀರನೆನಿಪ ಕೌಂಡ್ಲಿಕನೆಂಬ ವೀರ ತಾನುರುತರದ ಶೌರ್ಯದಿಂದ ||
ಲಿರುತಿರಲು ಕಮಲಾವತಿಯೊಳಾಹ ಲಗ್ನಮಂ |
ಚರರು ತಿಳಿದಾಗಲಯ್ತಂದು ತಮ್ಮಾಳಿದನ |
ಚರಣಕಾನತರಾಗಿ ಪೇಳಿದರು ವಿಸ್ತರಿಸಿ ಕಮಲಭೂಮಿಪನ ಕಥೆಯ       ||೨೩೧||

ರಾಗ ಮುಖಾರಿ ಏಕತಾಳ

ಲಾಲಿಸಿ ಕೇಳು ದೊರೆರಾಯ | ನಾವೆಂಬುದೀಗ | ಜಾಲಮಾತಲ್ಲವಿದು ಜೀಯ      || ಪ ||
ಉತ್ತಮವಾದ ವಾರ್ತೆಯೊಂದ | ಕೇಳ್ದುದ ನಿಮ್ಮೊ |
ಳರ್ತಿಯಿಂದೊರೆವೆ ಸಾಂಗದಿಂದ ||
ಚಿತ್ತವನಿಟ್ಟಿದನು ನೀ ಲಾಲಿಸು |
ಬಿತ್ತರಿಸುವೆವೈ ಹೊತ್ತಗಳೆಯದೆ || ಲಾಲಿಸಿ   ||೨೩೨||

ಕಮಲಾವತಿಯ ಪುರದಲ್ಲಿ | ನಡೆದಾ ವಾರ್ತೆಯ |
ಸಮನಾಗಿ ಪೇಳ್ವೆವೈ ನಾವಿಲ್ಲಿ ||
ಸುಮಶರನಿಗೆ ತನ್ನಣುಗೆಯನಾ ಭೂ |
ರಮಣನು ಮದುವೆಯ ಕ್ರಮದಿಂ ರಚಿಸುವ || ಲಾಲಿಸಿ ||೨೩೩||

ಸೋದರಳಿಯ ನೀನಿದ್ದಂತೆ | ಪರರರಿಗೆ ಹೆಣ್ಣು |
ತಾ ಧಾರೆಯೆರೆದು ಕೊಡುವನಂತೆ ||
ನೀ ದಯಮಾಡೆಂತಾದರು ಕಾರ್ಯವ |
ಸಾಧಿಸದಿರೆ ಮರ್ಯಾದೆ ಮುಂದಿಲ್ಲ || ಲಾಲಿಸಿ         ||೨೩೪||

ಭಾಮಿನಿ

ಚಾರರೆಂದುದ ಕೇಳುತಾಕ್ಷಣ |
ಧೀರ ಕೌಂಡ್ಲಿಕಭೂಪತಿಯು ತಾ |
ತೋರಮೀಸೆಯ ತಿರುಹಿ ದೂತರ ಮೊಗವನೀಕ್ಷಿಸುತ ||
ಭೂರಿಬಲಸಹ ತೆರಳ ಬೇಹುದು |
ಸಾರಸಾವತಿನಗರಕೆನುತಲಿ |
ಭೂರಮಣ ನೇಮಿಸುತ ಸಭೆಯೊಳಗೆಂದ ನಸುನಗುತ ||೨೩೫||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಏನು ಭ್ರಮೆಯೈ ಮಾವನವರಿಗೆ | ಸಾನುರಾಗದಿ ಮತ್ತೆ ರತಿಯನು |
ಮೀನಕೇತನಗಿತ್ತು ವ್ಯರ್ಥದಿ | ತಾನು ಕೆಟ್ಟ    ||೨೩೬||

ಸೋದರಳಿಯನು ತಾನಿರಲು ಹಗೆ | ಯಾದ ಕೃಷ್ಣನ ಸುತನಿಗೀ ಪರಿ |
ಭೇದದಿಂದಲಿ ಕೊಡುವನೆಂಬುದು | ಚೋದಿಗವಿದು     ||೨೩೭||

ಪೋಗಿ ಕೇಳುವೆನೊಂದು ಮಾತನು | ನಾಗವೇಣಿಯನೆನಗೆ ಕೊಡದಿರೆ |
ಭೋಗಿಭೂಷನು ತಡೆಯೆ ಬಿಡೆನು ಸ | ರಾಗದಿಂದ     ||೨೩೮||

ಹೊಡೆದು ದಿಗುಬಲಿಕೊಡುವೆ ಮಾವನ | ತಡೆಯದಯ್ತಹ ಭಟರ ಜಯಿಸುವೆ |
ನಡೆಯಲೈ ದಿಬ್ಬಣವು ಸಹಿತೆ | ಮ್ಮೊಡನೆ ಬೇಗ        ||೨೩೯||

ರಾಗ ಶಂಕರಾಭರಣ ಮಟ್ಟೆತಾಳ
ಧೀರ ಮಾದ್ರಪತಿಯು ರಥವನೇರಿ ಖತಿಯೊಳು |
ವಾರಿನಿಧಿಯ ಘೋಷದಿಂದಲಾರುಭಟೆಯೊಳು ||
ಭೂರಿಬಲವು ಸಹಿತ ನಡೆದನಾಗ ನಲಿವುತ |
ನಾರಿಯರ ಸಮೂಹವೆರಸಿ ಬಂದ ಕನಲುತ  ||೨೪೦||

ಬಂದು ಮುಸುಕಿ ಕಮಲಾವತಿಯ ಪುರದ ದ್ವಾರದಿ |
ನಿಂದ ಚರರ ಕಾಣುತಾಗಲಂದು ಕೋಪದಿ ||
ಎಂದನೆಲವೊ ನಮ್ಮ ದಿಬ್ಬಣಿಗರ ಬೇಗದಿ |
ಮುಂದೆ ಬಿಡದೆ ತಡೆಯೆ ನಿಮ್ಮನೀ ರಣಾಗ್ರದಿ ||೨೪೧||

ಕೊಂದು ಕಳೆವೆನೆನುತಲಾರುಭಟಿಸುತಿರುತಿರೆ |
ಮುಂದುವರಿದು ಮೂರುಕೋಟಿ ಬಲವು ಬರುತಿರೆ ||
ಸ್ಯಂದನದಲಿ ಕುಳಿತು ಸುರನಿಂದಲವರನು |
ಒಂದು ಬಾರಿ ಗೆಲಿದನೆರಡು ಕೋಟಿ ಬಲವನು          ||೨೪೨||

ಬಲವು ನಾಶವಾಗೆ ಕಾಣುತುಳಿದ ಚಾರರು |
ಸುಲಭವಲ್ಲ ರಣವಿದೆನುತಲೋಡುತಿರ್ದರು ||
ಬಳಿಕ ಕೋಟೆಕೊತ್ತಳಗಳ ಮುರಿದು ನಿಮಿಷದಿ |
ಒಳಗೆ ಪೊಕ್ಕರೇನನೆಂಬೆನೈ ಸರಾಗದಿ        ||೨೪೩||

ಭರದಿ ಬಂದು ಸಭೆಯನಾಗ ಪೊಕ್ಕು ನಗುತಲಿ |
ಹರಿಯ ದಿಬ್ಬಣವನು ಕಂಡು ದೂರದಿಂದಲಿ ||
ಭರಿತ ವಿಭವದಿಂದ ಮಂಟಪದೊಳು ಕುಳಿತನು |
ಕರೆದು ಕಮಲಭೂಪನೊಡನೆ ಪೇಳ್ದನಾತನು ||೨೪೪||

ರಾಗ ಭೈರವಿ ಏಕತಾಳ

ಲಾಲಿಪುದೆಲೆ ಭೂವರನೆ | ಈ | ಖೂಳತನವನಾರೊಡನೆ ||
ಚಾಳಿಸಿ ಕಲಿತೆಯೊ ನೀನು | ಮನ | ದಾಲೋಚನೆಗಳಿದೇನು    ||೨೪೫||

ಸೋದರಳಿಯ ತಾನಿರಲು | ಬಿ | ಟ್ಟಾದರಿಸಿದೆ ನೀ ಬದಲು ||
ಮಾಧವನಣುಗಗೆ ರತಿಯ | ನೀ | ಮೋದದೊಳೀವೆಯ ಜೀಯ  ||೨೪೬||

ನಡೆವಳಿಕೆಯ ಪದ್ಧತಿಯ | ನೀ | ಬಿಡಬಹುದೇ ಸನ್ಮತಿಯ ||
ಪೊಡವಿಪನೆಂಬರೆ ನಿನಗೆ | ಈ | ಕಡು ದ್ರೋಹವ ನೀನೆಸಗೆ     ||೨೪೭||

ಕರೆಸೈ ಮಗಳನ್ನೀಗ | ಸಿಂ | ಗರಿಸೈ ನೀ ಬಲು ಬೇಗ ||
ಬರಿದೇತಕೆ ತಡವಿನ್ನು | ಈ | ಪರಿಯನುಮಾನಗಳೇನು         ||೨೪೮||

ಮಾವನು ನೀನೆಂಬುದಕೆ | ಸ | ದ್ಭಾವದಿ ನಾ ಪೇಳ್ವುದಕೆ ||
ನೀವೊಲಿದೀ ಕ್ಷಣ ಸುತೆಯ | ಎನ | ಗೀವುದುಚಿತವಿದು ರಾಯ  ||೨೪೯||