ರಾಗ ಬಿಲಹರಿ ಏಕತಾಳ
ಕಂದ ಕೌಂಡ್ಲಿಕ ನೀನು ಬಂದುದರಿಂದಲೆ |
ಚಂದವಾದುದು ನಮಗಿಂದು ಸರ್ವರಿಗೆ ||
ಮಂದಗಮನೆ ರತಿ ಕಂದರ್ಪನರಸಿ ಹೀ |
ಗೆಂದು ಪೇಳುವರಿನ್ನು ಸಂದೇಹವೇನು ||೨೫೦||
ಮಾವ ನೀ ಮರುಳಾದೆ ಸೋದರಳಿಯನಿರೆ |
ದೇವಕಿಯಣುಗಸುತನಿಗೆ ಹೆಣ್ಣು ||
ಈವುದುಚಿತವಲ್ಲ ಬೇಗದೊಳಾ ರತಿ |
ದೇವಿಯನೆನಗಿತ್ತು ಕರಣಿಪುದೀಗ ||೨೫೧||
ಮೊದಲೆ ನಿನಗೆ ಮನಸಿಹುದೆಂದು ತಿಳಿದರೆ |
ಮದನಗೆ ರತಿಯನೀವುದಕೊಪ್ಪೆನಯ್ಯ ||
ಚದುರೆ ದ್ರೌಪದಿಗೆ ಭಾಷೆಯನಿತ್ತ ಕಾರಣ |
ಬದಲು ಮಾತಿಲ್ಲ ನೀನದಕೆ ತೋಷಿಪುದು ||೨೫೨||
ಎನಗೊಂದು ಮಾತ ಪೇಳದೆ ಪರರಿಗೆ ಭಾಷೆ |
ಯನು ಕೊಡಬಹುದೆ ಮಾವಯ್ಯ ನೀವಿಂದು ||
ಇನಿತು ಚಾಳಿಸಿದರೆ ಬಿಡುವೆನೆ ತರಳೆಯ |
ನನಗಿತ್ತು ಹರುಷದಿ ಕರುಣಿಪುದಯ್ಯ ||೨೫೩||
ನೀ ಮುನ್ನ ಬಾರದೆ ಸುಮ್ಮನೆ ಬಂದೀಗ |
ಕಾಮಿನಿಮಣಿಯನ್ನು ಎನಗೀವುದೆನುತ ||
ಈ ಮಹೋತ್ಸವಕ್ಕೆ ವಿಘ್ನವನೆಸಗಲು ಪರಿ |
ಣಾಮವೆಂತಹುದೊ ನೀ ತಿಳಿದು ನೋಡಿದನು ||೨೫೪||
ಸಂತಸದಿಂದ ನಿನ್ನಣುಗೆಯನೆನಗೆ ನಿ |
ಶ್ಚಿಂತೆಯೊಳ್ ಮದುವೆಯನೆಸಗದೆ ಬರಿದೆ ||
ಅಂತೆ ಕಾರಣಗಳಿಂದೆನಗೊಡಬಡಿಸಿದ |
ರೆಂತು ಸೈರಿಪೆನು ಸ್ವತಂತ್ರವಲ್ಲಿನ್ನು ||೨೫೫||
ರಾಗ ಕೇದಾರಗೌಳ ಅಷ್ಟತಾಳ
ಎಷ್ಟು ಪೇಳಿದರೇನು ಕೊಟ್ಟ ಭಾಷೆಯ ತಪ್ಪಿ | ಹುಟ್ಟಿದಾತ್ಮಜೆಯನೀಗ ||
ಕೊಟ್ಟರೆ ತನಗಪಕೀರ್ತಿಯು ಬಪ್ಪುದು | ತಟ್ಟನೆ ನಡೆಯೆಂದನು ||೨೫೬||
ಭ್ರಷ್ಟ ಮಾತಾಡದಿರೀಗ ನಿನ್ನಣುಗೆಯ | ಬಿಟ್ಟೇಗ ಪೋದರಾನು ||
ಸೃಷ್ಟಿಪಾಲಕರಪಹಾಸ್ಯ ಮಾಳ್ಪರು ಮನ | ದಿಷ್ಟವ ಕರುಣಿಪುದು ||೨೫೭||
ಬಿಡು ಮನದಾಸೆಯ ಕೊಡುವವನಲ್ಲೆನ್ನ | ಹುಡುಗಿಯ ನಿನಗೆನಲು ||
ಕಿಡಿಸೂಸುತಲಿ ಧನು ಪಿಡಿದು ನಿಂದರೆ ಕಾಣು | ತೊಡನೆ ಭೂಮಿಪನೆಂದನು ||೨೫೮||
ರಾಗ ಶಂಕರಾಭರಣ ಮಟ್ಟೆತಾಳ
ಹುಡುಗನೆಂದು ಬಿಟ್ಟರೀಗ ಪಿಡಿದೆ ಧನುವನೆ |
ಹುಡುಗಿಯಾಸೆ ಬಿಟ್ಟು ಮನೆಗೆ ನಡೆಯೊ ಗಮ್ಮನೆ ||
ಬಿಡುವೆನಲ್ಲದಿರಲು ಶಿರವ ಕಡಿವೆನೀಗಲು |
ಫಡಫಡೆಂದು ಗರ್ಜಿಸಲ್ಕೆ ನುಡಿದನಾಗಲು ||೨೫೯||
ಮಂದಮತಿಯಿದೇಕೆ ಮಾವ ಚಂದವಲ್ಲಿದು |
ಇಂದು ನಿನ್ನ ಸುತೆಯನಿತ್ತು ಮುಂದೆ ಕಾವುದು ||
ಒಂದು ತೃಣವ ಮುರಿದು ಸಾರ್ದೆನೊಂದು ಬಾರಿಗೆ |
ಎಂದು ಪೇಳಲಾಗ ಭೂಪನೆಂದನಳಿಯಗೆ ||೨೬೦||
ಸಲುಗೆಯಿಂದಲೆಮ್ಮ ಕೆಣಕಿ ಬಲುಹ ನೋಳ್ಪೆಯ |
ಲಲನೆಯಾಸೆ ಪಿಡಿದು ಬರಿದೆ ಕಲಹ ಮಾಳ್ಪೆಯ |
ಮಲೆತು ನಿಂದರೀಗ ನಿನ್ನ ಕೊಲುವೆನೆನುತಲೆ |
ಸೆಳೆದು ಬಿಟ್ಟನಸ್ತ್ರಸಂಕುಲವನಾಗಲೆ ||೨೬೧||
ಎಸೆದ ಶರವ ತರಿದು ಮಾದ್ರವಸುಮತೀಶನು |
ಪೊಸ ಶರೌಘದಿಂದಲವನ ಮುಸುಕುತೆಂದನು ||
ಕುಸುಮನೇತ್ರೆಗಾಗಿ ಪಂಥವೆಸಗಿ ಸುಮ್ಮನೆ |
ವ್ಯಸನವಿಡಿದು ಸಾಯಬೇಡ ತೆರಳು ಧಿಮ್ಮನೆ ||೨೬೨||
ಎನುತಲೆಚ್ಚ ಶರವ ಕಂಡು ಕಮಲಭೂಪನು |
ಕಿನಿಸಿನಿಂದಲದನು ತರಿವುತವನೊಳೆಂದನು ||
ಇನಿತು ಗರ್ವ ಬಂತೆ ನಿನಗೆನುತ್ತ ರೋಷದಿ |
ಕನಲಿ ಗರ್ಜಿಸುತ್ತಲೆಚ್ಚ ಸುಪ್ರತಾಪದಿ ||೨೬೩||
ಬಂದ ಶರವ ತರಿದು ನಡುವೆ ಕೌಂಡ್ಲಿಕಾಖ್ಯನು |
ಮುಂದುವರಿವುತಾಗ ವಿಶಿಖದಿಂದಲೆಚ್ಚನು ||
ಬಂದು ನೃಪನ ಜಠರಕಾಗಲಂದು ಬಡೆಯಲು |
ಒಂದು ಕ್ಷಣದಿ ಮೂರ್ಛೆಯಿಂದಲೊರಗೆ ಧರೆಯೊಳು ||೨೬೪||
ರಾಗ ನಾದನಾಮಕ್ರಿಯೆ ಅಷ್ಟತಾಳ
ಧರಣೀಶನಂದು ಮೂರ್ಛಿತನಾಗೆ | ಕಂಡು | ಹರಿಕುಮಾರನನುವಾಗೆ ||
ದುರುಳನ ಕೊಲ್ಲುವೆನೆನುತಲೆ | ಬಂದು | ಶರವಿಡಿದುಸಿರಿದನಾಗಲೆ ||೨೬೫||
ಎಲವೊ ಕೌಂಡ್ಲಿಕನೆ ನೀ ಗರ್ವದಿ | ಬಂದು | ಛಲವಿಡಿದೆಮ್ಮೊಳತ್ಯುಗ್ರದಿ ||
ಲಲನೆಗೋಸುಗ ಪ್ರಾಣವ | ಕೊಡ | ದುಳುಹಿಕೊಳ್ಳೆನುತೆಚ್ಚ ಬಾಣವ ||೨೬೬||
ಧುರಧೀರನಹುದೊ ನೀನೆಂಬುದ | ಹಿಂದೆ | ಹರನ ಕಣ್ಗಿಚ್ಚಿನಿಂದುರಿದುದ ||
ಅರಿತಿಹೆನೆಂದವನಸ್ತ್ರವ | ಕಡಿ | ದುರುಳಿಚುತೆಚ್ಚನು ಶಸ್ತ್ರವ ||೨೬೭||
ಬರುವಸ್ತ್ರಗಳ ತರಿದೊಟ್ಟುತ | ಮಾದ್ರಾ | ಧರಣೀಶನಂದೌಡ ಕಚ್ಚುತ ||
ಶರವನುಗಿದು ಬಿಡೆ ಧರೆಯೊಳು | ಬಿದ್ದ | ನಿರದೆ ಮನ್ಮಥ ತಾನು ಭರದೊಳು ||೨೬೮||
ಇಂತು ಕುಸುಮಬಾಣನೊರಗಲು | ಬಲು | ಚಿಂತೆಯಿಂ ಸುರರೆಲ್ಲ ಮರುಗಲು ||
ಅಂತರಂಗದಿ ತಿಳುವುತದನು | ನರ | ರಂತೆ ಶ್ರೀಕೃಷ್ಣನಳಲ್ದನು ||೨೬೯||
ರಾಗ ನೀಲಾಂಬರಿ ರೂಪಕತಾಳ
ಏತಕೆ ಮಲಗಿದೆ ರಣದೊಳು | ಮಾತುಗಳಾಡದೆ ಸುಮ್ಮನೆ |
ನೀತಿಯೆ ನಿನಗಿದು ನೋಡಲು | ಪ್ರೀತಿಯೆ ಸರ್ವರಿಗೆ ||
ಪಾತಕಿಯುದರದಿ ನೀ ಬರಿ | ದೇತಕೆ ಜನಿಸಿದೆ ಕಲಹದಿ |
ಘಾತಕಿ ಕೌಂಡ್ಲಿಕನಿಂದೆಮ | ಗೀ ತೆರನಾಯ್ತಕಟಾ ||೨೭೦||
ಇಂದುಧರನ ಸತ್ಕರುಣಗ | ಳಿಂದಲಿ ನಿನ್ನನು ಪಡೆದೆನು |
ಬಂದುದು ನಿನಗೀ ವಿಧಿ ಶಿವ | ಮುಂದಿನ್ನೆಂತಹುದೊ ||
ಚಂದಿರಬಿಂಬವ ಪೋಲುವ | ಕಂದನೆ ನಿನ್ನಯ ವದನವು ||
ಕಂದುತ ಕಾಂತಿಗಳೆಲ್ಲವು | ಕುಂದಿದುದೇಕಿನಿತು ||೨೭೧||
ಭಾಮಿನಿ
ಅವನಿಪತಿ ಕೇಳಿಂತು ಮಾನುಷ |
ಭವದಿ ಜನಿಸಿದರಿಂದಲೀ ತ್ರೈ |
ಭುವನವನು ರಕ್ಷಿಸುವ ಸಾಕ್ಷಾದ್ವಸ್ತುವೀ ತೆರದಿ ||
ಕುವರನನು ನೆನೆವುತ್ತಲಂತ |
ರ್ಯವನು ಕಾಣಿಸದಂತೆ ಮರುಗಲು |
ತವಕದಿಂ ನಡೆತಂದು ಕೌಂಡ್ಲಿಕ ಹರಿಯೊಳಿಂತೆಂದ ||೨೭೨||
ರಾಗ ಕೇದಾರಗೌಳ ಅಷ್ಟತಾಳ
ಏತಕೆ ಮರುಗುವೆ ಹರಿಯೆ ನೀ ರಣದೊಳು | ರೀತಿಯಲ್ಲಿದು ನಿನಗೆ ||
ಪ್ರೀತಿಯಿಂದುಸಿರುವೆ ಕಲಹಕಂಗಯ್ಸದೆ | ನೀ ತೆರಳೈ ಮನೆಗೆ ||೨೭೩||
ಮೊದಲೊಂದು ಬಾರಿ ಕಂಸಾಸುರನಾಗಿ ನಾ | ನುದಿಸಿದೆನವನಿಯೊಳು ||
ಚದುರತೆಯಲಿ ಬಿಲ್ಲಹಬ್ಬದ ನೆವದಿಂದ | ಸದೆಬಡೆದೈಯೆನ್ನನು ||೨೭೪||
ಎರಡನೆ ಜನ್ಮದಿ ತವ ಭಗಿನಿಯೊಳಾನು | ತರಳನೆಂದೆನಿಸಿದೆನು ||
ವರಚಕ್ರವ್ಯೂಹದೊಳೆನ್ನನು ಕೊಲಿಸಿದೆ | ಪರಮಘಾತಕಿಯೆ ನೀನು ||೨೭೫||
ಈಗ ಮಾದ್ರಾಧೀಶನುದರದಿ ಕೌಂಡ್ಲಿಕ | ನಾಗಿ ನಾ ಜನಿಸಿದೆನು ||
ಬೇಗದಿ ರಣಕಿದಿರಾಗಿ ನೀ ನಿಲ್ಲೆನು | ತಾಗಲಾರ್ಭಟಿಸಿದನು ||೨೭೬||
ಎಂದ ಮಾತನು ಕೇಳುತಂದು ಮನದಲಿ ಮು | ಕುಂದನು ಕೋಪ ತಾಳ್ದು ||
ಇಂದು ನಿನ್ನನು ಸಂಹರಿಸದಿರೆ ನಾನೆನು | ತೆಂದು ಚಕ್ರವ ಪಿಡಿದ ||೨೭೭||
ರಾಗ ದೇಶಿ ಮಟ್ಟೆತಾಳ
ಹರಿಯು ಕೋಪವ | ತಾಳಿ ಚಾಪವ |
ಭರದಿ ಪಿಡಿದು ಝೇಂಕರಿಸುತ | ಲೆಸೆದನಸ್ತ್ರವ ||೨೭೮||
ಬರುವ ಶರವನು | ಕಾಣುತಾತನು |
ತರಿದು ಪ್ರತಿಶರೌಘದಿಂದ | ಹರಿಯನೆಚ್ಚನು ||೨೭೯||
ಎಸೆದ ಬಾಣವು | ಮುಸುಕೆ ಹರಿಯನು |
ಕುಸುಮನಾಭನಾಗ ಮೂರ್ಛೆ | ವಶದಿ ಬಿದ್ದನು ||೨೮೦||
ಹರಿಯು ಬೀಳಲು | ಹರನು ಖತಿಯೊಳು |
ವರತ್ರಿಶೂಲಧಾರಿಯಾಗಿ | ಶರವನೆಸೆಯಲು ||೨೮೧||
ಹರನ ಶರದಲಿ | ಸೋಲದಾತನು |
ಮರಳಿ ಪ್ರತಿಶರೌಘದಿಂದ | ಭರದೊಳೆಚ್ಚನು ||೨೮೨||
ಭಕ್ತನೀತನು | ಎಂಬ ಬಿರುದನು |
ಯುಕ್ತಿಯಿಂದಲರಿವುತಾ ನಿ | ಶ್ಶಕ್ತನಾದನು ||೨೮೩||
ಹರನು ಮೂರ್ಛೆಗೆ | ಸಂದು ಮಲಗಿರೆ |
ಸರಸಿಜೋದ್ಭವನು ಬಂದು | ಶರವ ಪಿಡಿದನು ||೨೮೪||
ರಾಗ ನಾದನಾಮಕ್ರಿಯೆ ಅಷ್ಟತಾಳ
ಬೊಮ್ಮನ ತಾ ಕಂಡು ಕೋಪದಿ | ಬಲು | ಹೆಮ್ಮೆಯಿಂದಲಿ ಸುಪ್ರತಾಪದಿ ||
ನಮ್ಮೊಡನೀ ಪರಿ ಕಲಹಕೆ | ಬಂದ | ಹಮ್ಮ ನಿಲುಸುವೆನು ನಿಮಿಷಕೆ ||೨೮೫||
ಎಂದು ಬೊಬ್ಬಿರಿದಾಗ ಕನಲುತ್ತ | ಶರ | ದಿಂದೆಸೆಯಲು ಕಿಡಿ ಮಸಗುತ್ತ ||
ಬಂದವನುರಕಾಗಿ ತಾಗಲು | ಮೂರ್ಛೆ | ಯಿಂದೊರಗಿದನವನಾಗಲು ||೨೮೬||
ವಾಣಿಯ ರಮಣನು ಬೀಳಲು | ಮತ್ತೆ | ಕಾಣುತ್ತ ಬಲರಾಮ ಖತಿಯೊಳು ||
ಜಾಣತನದೊಳೆಮ್ಮ ಗೆಲಲೆಂದು | ಬಂದು | ಪ್ರಾಣವ ಕೊಡದಿರು ನೀನಿಂದು ||೨೮೭||
ಎಂದು ಮೂದಲಿಸುತ್ತ ಹಲಧರ | ಶರ | ವೊಂದೆಸೆಯಲು ಕಾಣುತ್ತ ಧೀರ ||
ಸಂಧಿಸಿ ಬಾಣವ ಚಾಪದಿ | ತರಿ | ದಂದಗೆಡಿಸಿದನು ಕೋಪದಿ ||೨೮೮||
ಕಾಣುತ್ತಲಾ ಬಲಭದ್ರನು | ಸರ್ಪ | ಬಾಣವ ಕೌಂಡ್ಲಿಕಗೆಚ್ಚನು ||
ಮಾಣದೆ ಗರುಡಾಸ್ತ್ರದಿಂದಲಿ | ಸು | ತ್ರಾಣಿ ಗೆಲಿದನೊಂದೆ ಕ್ಷಣದಲಿ ||೨೮೯||
ಪರಿಪರಿಯಸ್ತ್ರವನೆಸೆವುತ್ತ | ಕಾದು | ತಿರಲಾಗ ಖಳನತಿ ಕನಲುತ್ತ |
ತರುಬಿ ಶರೌಘವನೆಸೆಯಲು | ನೀಲಾಂ | ಬರನಾಗ ಮೂರ್ಛೆಯೊಳೊರಗಲು ||೨೯೦||
ವಾರ್ಧಕ
ಧರಣಿಪತಿ ಲಾಲಿಸೈ ಹಲಧರನು ರಣದಿ ಮೆಯ್ |
ಮರೆಯಲ್ಕೆ ಕಾಣುತುರಿಮಸಗಿ ಬಹು ಕೋಪದಿಂ |
ಸುರರೆಲ್ಲ ನಡೆತಂದು ನಿಲ್ಲಲಾಹವಕಾಗ ಕೌಂಡ್ಲಿಕಾಖ್ಯನು ಕಾಣುತ ||
ಉರಿಯನುಗುಳುತಲೊಡನೆ ಮೂದಲಿಸುತವರನೊಂ |
ದರೆಗಳಿಗೆಯೊಳು ಕೆಡಹಿ ಮುಂದಯ್ದಿ ಬರುತಿಪ್ಪ |
ದುರುಳ ಮಾದ್ರಾಧಿಪನ ಕಂಡು ಗದೆಯಂ ತಿರುಹಿ ಮರುತಸುತನಿದಿರಾದನು ||೨೯೧||
ರಾಗ ಭೈರವಿ ಏಕತಾಳ
ಗದೆಯನು ತಿರುಹುತ ಬಂದು | ಖಳ | ನುದರವ ತಿವಿಯಲ್ಕಂದು ||
ಕದನದಿ ಮೆಯ್ಮರೆದಾಗ | ನಿಮಿ | ಷದೊಳೆದ್ದನು ತಾ ಬೇಗ ||೨೯೨||
ಬಕನನು ಗಲಿದಂತಲ್ಲ | ನಿನ್ನ | ಯುಕುತಿಗೆ ಬೆದರುವುದಿಲ್ಲ ||
ಶಕುತಿಯ ನೋಡೆಂದೆನುತ | ಕೌಂ | ಡ್ಲಿಕ ಶರವೆಚ್ಚನು ನಗುತ ||೨೯೩||
ಬರುವಸ್ತ್ರವ ಗದೆಯಿಂದ | ತರಿ | ದುರೆ ಗರ್ಜಿಸಿ ಖಳಗೆಂದ ||
ತರುಣಿಯ ನೆವದಲಿ ಬಂದು | ಯಮ | ಪುರಕಯ್ದುವೆ ನೀನಿಂದು ||೨೯೪||
ಎಂದೆನುತಲಿ ಕಲಿ ಭೀಮ | ಗದೆ | ಯಿಂದೆರಗಲು ನಿಸ್ಸೀಮ ||
ಒಂದು ಕ್ಷಣದಿ ಮೂರ್ಛೆಯೊಳು | ಬಲು | ನೊಂದೊರಗಿದ ಧರಣಿಯೊಳು ||೨೯೫||
ಏಳುತ ಖತಿಯಿಂದಾಗ | ಶರ | ವೇಳರನೆಸೆಯಲು ಬೇಗ ||
ಬೀಳಲು ಮರುತಜ ನೊಂದು | ಯದು | ಪಾಳೆಯ ಮರುಗಿದುದಂದು ||೨೯೬||
ರಾಗ ಕೇದಾರಗೌಳ ಅಷ್ಟತಾಳ
ಮರುತಜ ರಣದೊಳು ಬೀಳಲು ಕಾಣುತ್ತ | ಧರಣಿಪ ಧರ್ಮಜನು ||
ದುರುಳನ ಪರಿಯನೀಕ್ಷಿಪೆನೆಂದು ಕೋಪದಿ | ಶರವಿಡಿದಯ್ತಂದನು ||೨೯೭||
ಧರ್ಮಜ ಸಮರಕಯ್ತಂದುದ ಕಾಣುತ್ತ | ದುರ್ಮತಿ ಕೌಂಡ್ಲಿಕನು ||
ವರ್ಮವಿಲ್ಲಿವಗೆ ನಿಷ್ಕಪಟಿ ಪುಣ್ಯಾತ್ಮ ದು | ಷ್ಕರ್ಮಕ್ಕೆ ಗುರಿಯಾಹೆನು ||೨೯೮||
ಎಂದು ತಿಳಿದು ದೂರದಿಂದಲಿ ಯಮಸುತ | ಗೆಂದ ತಾ ನಮಿಸುತಲಿ ||
ಸಂದೇಹವಿಲ್ಲದಯ್ತಂದಿರೇತಕೆ ರಣ | ಕೆಂದು ಮತ್ತುಸಿರಿದನು ||೨೯೯||
ಹಿರಿಯರು ನೀವು ಧರ್ಮಿಷ್ಠರು ನೋಡೆ ಸ | ತ್ಪುರುಷರಿಂದೆನ್ನೊಡನೆ ||
ಧುರಕಿದಿರಾದರೆ ಬಹುದಪಕೀರ್ತಿಯು | ನರಕಭಾಜನವಾಹುದು ||೩೦೦||
ಎಂದು ನಾನಾಪರಿಯಿಂದ ಸಂಸ್ತುತಿಸುತಲಿ | ಕಂದು ಧರ್ಮಾತ್ಮಜನು ||
ಅಂದವನೊಳು ಕಾದುವಂದವ ಕಾಣದೆ | ಹಿಂದಕೆ ಮರಳಿದನು ||೩೦೧||
ಭಾಮಿನಿ
ಧರಣಿಪಾಲಕ ಲಾಲಿಸೀಪರಿ |
ಧುರಕೆ ನಿಲುವರ ಕಾಣದೆಲ್ಲರು |
ಮರುಗುತಿರೆ ಕಲಿ ಪಾರ್ಥ ಸ್ಮರಿಸಿದನಾಗ ಮಾರುತಿಯ ||
ಬರಲವನ ಸತ್ಕರಿಸಿರದೆ ಬಲು |
ಭರದಿ ರಥವೇರುತ್ತ ಬಿಲುಝೇಂ |
ಕರಿಸುತಾರ್ಭಟೆಯಿಂದ ಕೌಂಡ್ಲಿಕಗೆಂದ ಮೂದಲಿಸಿ ||೩೦೨||
ರಾಗ ಭೈರವಿ ಅಷ್ಟತಾಳ
ದುರುಳ ಕೌಂಡ್ಲಿಕನೆ ಕೇಳು | ಸಂಗರದಲಿ | ಹರಿಹರ ಸುರಪರೊಳು ||
ಮೆರೆಸಿದೆ ಪಂಥವನೆಂದು | ಗರ್ವಿಸದಿರು | ಬರಿಬಯಲಾಸೆಯೊಳು ||೩೦೩||
ಎನುತುರಗಾಸ್ತ್ರವನು | ಬಿಡಲು ಕಂಡು | ಕನಲುತ್ತ ಕೌಂಡ್ಲಿಕನು ||
ಕ್ಷಣದೊಳು ಗರುಡಾಸ್ತ್ರದಿಂದ ಖಂಡಿಸುತಲಿ | ಕಿನಿಸಿನೊಳಿಂತೆಂದನು ||೩೦೪||
ಧೀರ ನೀನಾಗಿರಲು | ನಪುಂಸಕ | ನಾರಿಯಾಕಾರದೊಳು ||
ಸೇರಿ ವಿರಾಟರ ಪುರದೊಳು ಮೆರೆದಿಹ | ವಾರತೆ ಕೇಳಿಹೆನು ||೩೦೫||
ಎಂದದ್ರಿಬಾಣವನು | ಬಿಡಲು ವಜ್ರ | ದಿಂದ ತರಿವುತೆಂದನು ||
ಇಂದುಮುಖಿಯ ನೆವದಿಂದ ನೀ ಕಲಹಕೆ | ನಿಂದು ಸಾಯದಿರೆಲವೊ ||೩೦೬||
ಎಂದಗ್ನಿ ಬಾಣವನು | ಬಿಡಲು ಕಾಣು | ತಂದು ಜಲಾಸ್ತ್ರವನು ||
ಸಂಧಿಸಿ ಚಾಪವ ಬಿಡಲುರಿಯಡಗಲಿಂ | ತೆಂದನು ಪಾರ್ಥನೊಳು ||೩೦೭||
ಗುರು ಭೀಷ್ಮಾದಿಗಳ ಹಿಂದೆ | ರಣಾಗ್ರದಿ | ಮರೆಮೋಸದಿಂದ ಕೊಂದೆ ||
ಪರಮಪಾತಕಿ ನಿನ್ನ ಪರಿಯ ನಾ ಬಲ್ಲೆನೆಂ | ದಿರದೆಚ್ಚ ನರನಿಗಂದು ||೩೦೮||
ಭಾಮಿನಿ
ಹಲವು ಮಂತ್ರಾಸ್ತ್ರಗಳ ಬಿಡಲದ |
ಗೆಲಿದು ಕೌಂಡ್ಲಿಕ ಮೆರೆವುತಿರಲಾ |
ಫಲುಗುಣನು ಚಿಂತಿಸಿದನಚ್ಚರಿಗೊಳುತ ಮನದೊಳಗೆ ||
ಇಳೆಯ ಪಾಲಕರೆನ್ನೊಳೀ ಪರಿ |
ಕಲಹದೊಳು ಜಯಿಸಿದುದು ಕಾಣೆನು |
ನಳಿನನಾಭನು ಮುನಿದನಿಂದಿಗೆನುತ್ತಲಳಲಿದನು ||೩೦೯||
ರಾಗ ಸಾಂಗತ್ಯ ರೂಪಕತಾಳ
ಹರ ಹರ ಸಮರದಿ ಕೈಸೋತೆನಲ್ಲ ನಾ | ನಿರದೆ ಕೌಂಡ್ಲಿಕನೊಡನಿಂದು ||
ಧುರಧೀರ ನಾನೆಂದು ಜಗದಿ ಕೊಂಡಾಡುವ | ಬಿರುದೆತ್ತಲಡಗಿತು ಶಿವನೆ ||೩೧೦||
ಸಾರಥಿಯಿಲ್ಲದೆ ಕೆಟ್ಟೆನಲ್ಲಯ್ಯೊ ನಾ | ನೀ ರೀತಿಯಿಂದಕಟಕಟಾ ||
ಮೂರುಲೋಕದೊಳೆಲ್ಲ ಧೀರ ತಾನೆಂದೆಂಬ | ವಾರತೆ ಕೊಂಡಾಡುತಿಹರು ||೩೧೧||
ಮಾತೆಗೋಸುಗ ಪುರಂದರನೈರಾವತವನೀ | ಭೂತಳಕಿಳಿಸಿ ತಂದಿಹೆನು ||
ಸೋತವನಿಪರು ಬಿಟ್ಟಿಹ ಧನುವೆತ್ತಿ ಸಂ | ಪ್ರೀತಿಯಿಂ ಗೆಲಿದೆ ದ್ರೌಪದಿಯ ||೩೧೨||
ಹರನ ಮೆಚ್ಚಿಸಿ ಪಡೆದಿಹೆ ಪಾಶುಪತವೆಂಬ | ಶರವನ್ನು ಸಮರದೊಳಾನು ||
ತುರುವಿಗೋಸುಗ ಕುರುಕುಲವನ್ನು ಜಯಿಸಿದೆ | ದುರುಳ ರಕ್ಕಸರ ಮರ್ದಿಸಿದೆ ||೩೧೩||
ಎಂದು ನಾನಾಪರಿಯಿಂದ ದುಃಖಿಸುತಿರ | ಲಂದು ಕಾಣುತ ಮಾದ್ರಾಧಿಪನು ||
ಮುಂದುವರಿದು ನಡೆತಂದು ಪಾರ್ಥನ ಜರೆ | ದೆಂದನು ಕನಲಿ ಗರ್ಜಿಸುತ ||೩೧೪||
ರಾಗ ಭೈರವಿ ಮಟ್ಟೆತಾಳ
ಪಾರ್ಥನೆಂಬ ಬಿರುದ ನೀನು | ವ್ಯರ್ಥ ಕಳೆದೆಲಾ ||
ಧೂರ್ತತನದೊಳಾತ್ಮಸ್ತುತಿಯ | ಕೀರ್ತಿಸುವೆ ಭಲಾ ||೩೧೫||
ನಿನ್ನ ಸಲಹುತಿರುವ ಹರಿಯು | ಮುನ್ನ ಸೋತನು ||
ಇನ್ನು ತಡೆಯಲೇಕೆ ತೋರು | ನಿನ್ನ ಬಲುಹನು ||೩೧೬||
ಎಂದು ಮೂದಲಿಸಲು ಪಾರ್ಥ | ನಂದು ಖತಿಯೊಳು ||
ನಿಂದು ರಣಕೆ ಚಾಪ ಪಿಡಿವು | ತೆಂದನವನೊಳು ||೩೧೭||
ಕುಸುಮನೇತ್ರನನ್ನು ಜಯಿಸಿ | ದಸಮಬಲವನು ||
ಕುಸುರಿದರಿವೆನೆನುತಲಸ್ತ್ರ | ವಿಸರವೆಸೆದನು ||೩೧೮||
ಬರುವ ಶರವ ಕೌಂಡ್ಲಿಕಾಖ್ಯ | ತರಿವುತಾಕ್ಷಣ ||
ಮರಳಿ ಶರವನೆಸೆಯೆ ಮೆಯ್ | ಮರೆದ ಫಲುಗುಣ ||೧೧೯||
ಭಾಮಿನಿ
ವೀರಪಾರ್ಥನು ಬೀಳೆ ರಣದಲಿ |
ಧೀರ ಕೌಂಡ್ಲಿಕ ಮೆರೆವುತಿರಲದ |
ನಾರಿ ದ್ರುಪದಾತ್ಮಜೆಯು ಕಾಣುತಲಧಿಕ ರೋಷದಲಿ ||
ಘೋರಪಾತಕಿಯಿವನ ಕೆಡಹುತ |
ಮಾರಿಗೌತಣವೀವೆನೆನುತಲೆ |
ಕ್ರೂರಚಂಡಿಯ ರೂಪವಾಂತಳು ಜವದಿ ಬೊಬ್ಬಿಡುತ ||೩೨೦||
ರಾಗ ಮಾರವಿ ಏಕತಾಳ
ಘೋರಾಕಾರವ ತಾಳುತ ರೌದ್ರದೊ | ಳಾರುಭಟಿಸುತಾಗ ||
ಮಾರಿಯ ರೂಪದಿ ಭೋರಿಡುತಯ್ತರೆ | ಧಾರಿಣಿ ಕಂಪಿಸಿತು ||೩೨೧||
ಚಂಡಿಯ ರೂಪವನೀಕ್ಷಿಸುತಾ ಕ್ಷಣ | ಕೌಂಡ್ಲಿಕಭೂಪತಿಯು ||
ಭಂಡರ ತೆರದೊಳಗೋಡುತಲಿರಲದ | ಕಂಡವಳುಸಿರಿದಳು ||೩೨೨||
ಎಲ್ಲಿಗೆ ಪೋಗುವೆ ತಲ್ಲಣಗೊಳುತಲಿ | ನಿಲ್ಲೆಲೊ ಪಾತಕಿಯೆ ||
ಎಲ್ಲರ ಗೆಲಿದಂತಲ್ಲ ರಣಾಗ್ರದಿ | ಕೊಲ್ಲುವೆ ನಿನ್ನುವನು ||೩೨೩||
ಎಂದೆನುತಾಕ್ಷಣ ಬಂದತಿ ರೋಷದಿ | ಮುಂದಲೆಯನು ಪಿಡಿದು ||
ಮಂದಮತಿಯ ಸದೆಬಡೆವೆನೆನುತ | ಲಂದವನಳಲಿದನು ||೩೨೪||
ರಾಗ ನೀಲಾಂಬರಿ ಏಕತಾಳ
ಹರ ಹರಾ ರಣದೊಳಾನು | ಜಯಿಸಿದೆನಿಂದು | ಧರಣಿಪರೆಲ್ಲರನು ||
ತರುಣಿಯ ಕರದೊಳಗೆ | ಸುಮ್ಮನೆ ಸಿಕ್ಕಿ | ಸರಿವುದಾಯ್ತೆಮಪುರಿಗೆ ||೩೨೫||
ಏತಕಿಲ್ಲಿಗೆ ಬಂದೆನು | ಪಂಥವ ಮಾಡಿ | ಭೂತಳಾಧಿಪರೊಳಾನು ||
ಪಾತಕಕೊಳಗಾದೆನು | ಭವ ವಿರಿಂಚಿ ಶ್ರೀ | ನಾಥರ ಗೆಲ್ದು ತಾನು ||೩೨೬||
ಆವ ಜನ್ಮದ ಫಲದೀ | ಹೆಂಗುಸಿನೊಳು | ಸಾವುದಾಯ್ತೀತೆರದಿ ||
ಕಾವ ದೇವರ ಕರುಣ | ತಪ್ಪಿದಮೇಲಿ | ನ್ನಾವ ದೊಡ್ಡಿತು ಮರಣ ||೩೨೭||
ಭಾಮಿನಿ
ಧಾರಿಣೀಪತಿ ಕೇಳು ಬಳಿಕಾ |
ಭೂರಿ ರೋಷದಿ ದ್ರುಪದನಂದನೆ |
ವೀರ ಕೌಂಡ್ಲಿಕನುರವ ಬಗಿದಾ ಭೂತಗಣಗಳಿಗೆ ||
ಪಾರಣೆಯ ಗೆಯ್ಸುತ್ತ ಮತ್ತಾ |
ಘೋರರೂಪವನುಳಿದು ರಣದಲಿ |
ಮಾರುತಿಯು ಕುಳ್ಳಿರಲು ಕರೆದಿಂತೆಂದಳವನೊಡನೆ ||೩೨೮||
ರಾಗ ಭೈರವಿ ಝಂಪೆತಾಳ
ಕೇಳಯ್ಯ ಹನುಮಂತ | ಶೀಲಸದ್ಗುಣವಂತ |
ಕಾಲಕರ್ಮವಿದೂರ | ಕಾಳಗದಿ ಶೂರ ||೩೨೯||
ರಣದಿ ಕೌಂಡ್ಲಿಕನೊಡನೆ | ಸೆಣಸಿ ಮೂರ್ಛಿಸಿದ ಫಲು |
ಗುಣ ಹರಿಹರಾದ್ಯಮರ | ಗಣಸಹಿತಲಿಂದು ||೩೩೦||
ಇವರ ಜೀವಿಸುವ ಯ | ತ್ನವ ಕಾಣೆ ಬದಲೇನು ತವ |
ಕರುಣವಿರಲು ಬದು | ಕುವರು ತತ್ ಕ್ಷಣದಿ ||೩೩೧||
ಹಿಂದೆ ಲಂಕೆಯಲಿ ರಘು | ನಂದನನ ಮಾರ್ಬಲವ |
ನಿಂದ್ರಾರಿ ಕಪಟದಲಿ | ಕೊಂದ ವೇಳೆಯೊಳು ||೩೩೨||
ತಂದು ಸಂಜೀವನದೊ | ಳಂದವರನೆಬ್ಬಿಸಿದೆ |
ಇಂದು ನೀ ಹೊರತನ್ಯ | ರಿಂದಲೇನಹುದು ||೩೩೩||
ರಾಗ ಕೇದಾಳಗೌಳ ಅಷ್ಟತಾಳ
ಇಂತು ದ್ರೌಪದಿ ಪೇಳಿದಂತರವರಿತಾಗ | ಸಂತಸದಲಿ ಬಳಿಕ ||
ಪಿಂತಣ ತೆರದಲೌಷಧವನೆ ತರುವೆ ಶ್ರೀ | ಕಾಂತನ ಕರುಣದಲಿ ||೩೩೪||
ಎಂದು ಪಾಂಚಾಲೆಯೊಳುಸಿರುತ್ತಲಾಕ್ಷಣ | ಗಂಧವಾಹಾತ್ಮಜನು ||
ನಿಂದು ರಾಮನ ಸ್ತುತಿಸುತ ಬೆಳೆದಾಕ್ಷಣ | ದಿಂದ ಕ್ಷೀರಾಂಬುಧಿಗೆ ||೩೩೫||
ಅಲ್ಲಿ ಗಯ್ತಂದು ತಾನರಸಲು ಕಂಡನು | ಚೆಲ್ವ ಮಹೌಷಧಿಯ ||
ಮೆಲ್ಲನೆ ಕೊಂಡದ ಮರಳಿದನಾಕ್ಷಣ | ಫುಲ್ಲನಾಭನ ದೂತನು ||೩೩೬||
ದ್ರುಪದ ತನುಜೆ ಕಂಡು ಹರುಷದೊಳಾತನ | ನುಪಚರಿಸುತಲೆಂದಳು ||
ನಿಪುಣ ನಿನ್ನಯ ಬಾಲತುದಿಗದ್ದುತಿವರ ಜೀ | ವಿಪುದಯ್ಯ ವೀರ ನೀನು ||೩೩೭||
ದ್ವಿಪದಿ
ಇಂತೆಂದು ದ್ರೌಪದಿಯು ಪೇಳುತಿರಲಾಗ |
ಸಂತೋಷದೊಳೌಷಧವ ತಾ ತಂದು ಬೇಗ ||೩೩೮||
ಅರೆದು ಬಾಲದೊಳದ್ದಿ ಬಿದ್ದವರಿಗೆಲ್ಲ |
ಪರಮ ಸಂಜೀವನವ ತಾನಿತ್ತನಲ್ಲ ||೩೩೯||
ನಿದ್ದೆಗೆಯ್ದವರು ತಮ್ಮೊಳಗೆಯೆಚ್ಚರ್ತು |
ಎದ್ದ ತೆರದೊಳಗೇಳಲಾಶ್ಚರ್ಯವಾಯ್ತು ||೩೪೦||
ಧನುಶರಾಯುಧವಿಡಿದು ನೋಡಿದರು ಸುತ್ತ |
ಕನಸುಬಿದ್ದಂತಾಗೆ ಕೇಳಿದರು ಮತ್ತ ||೩೪೧||
ಕೌಂಡ್ಲಿಕನ ದೇಹ ಬಿದ್ದಿಹುದು ರಣದೊಳಗೆ |
ಚಂಡವಿಕ್ರಮರಾರು ಕೊಂದರೀ ಖಳಗೆ ||೩೪೨||
ಎಂದು ತಮ್ಮೊಳು ಮಾತನಾಡುತಿರಲಾಗ |
ಬಂದು ಹರಿಯೊಳು ಯಮಜ ತಾನೆಂದ ಬೇಗ ||೩೪೩||
ರಾಗ ಮಾಧವಿ ಏಕತಾಳ
ದೇವ ಲಾಲಿಪುದು ನಾ ಪೇಳ್ವ ಬಿನ್ನಪವ |
ಭೂವರ ಕೌಂಡ್ಲಿಕನುರು ಪರಾಕ್ರಮವ ||೩೪೪||
ನೀವೆಲ್ಲ ಸೋತಿರೆಂದೆನುತಲರ್ಜುನನು |
ತಾವೊಬ್ಬನುಳಿಯಲೇಕೆನುತ ಕಾದಿದನು ||೩೪೫||
ಆ ಪಾರ್ಥ ಸೋತು ಮೆಯ್ಮರೆಯೆ ತಾ ಕಂಡು |
ದ್ರೌಪದಿಯು ಖಳನ ಕಾಣುತ ಖತಿಗೊಂಡು ||೩೪೬||
ಚಂಡಿ ರೂಪವನಾಂತು ಕನಲುತಯ್ತಂದು |
ಕೌಂಡ್ಲಿಕನನು ಕದನದೊಳುರೆ ಕೊಂದು ||೩೪೭||
ಆ ಪತಿವ್ರತೆಯವನನು ಭೂತಗಣಕೆ |
ಕೋಪದಿ ತೃಪ್ತಿಬಡಿಸಿದಳು ಕ್ಷಣಕೆ ||೩೪೮||
ಮುನ್ನಿನ ರೂಪವನಾಂತು ಮಾರುತಿಯ |
ಕನ್ಯೆ ತಾ ಕರೆದು ಪೇಳಿದಳೊಂದ್ಯುಕುತಿಯ ||೩೪೯||
ಇನ್ನು ತಡೆಯಲೇಕೌಷಧಿಯನು ತಂದು |
ಚೆನ್ನಾಗಿ ಜೀವಿಸವರನೀಗಲೆಂದು ||೩೫೦||
ಪೇಳಲಿಕಾ ಸಂಜೀವನಭೇಷಜವನು |
ಗಾಳಿಯಣುಗ ಪೂಸಿ ತಾನೆಬ್ಬಿಸಿದನು ||೩೫೧||
ಮಂದರಧರ ನಿನ್ನ ಮಹಿಮೆಯಿದೆಲ್ಲ
ಇಂದಿಗೆಮ್ಮಿಷ್ಟಾರ್ಥ ಸಿದ್ಧಿಸಿತಲ್ಲ ||೩೫೨||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಯಮಜನೆಂದುದ ಕೇಳುತಾಕ್ಷಣ | ಕಮಲನಾಭನು ಕರೆಯೆ ಮದಗಜ |
ಗಮನೆ ದ್ರೌಪದಿ ಬಂದು ಚರಣಕೆ | ನಮಿಸುತಿರಲು ||೩೫೩||
ಹರಿ ವಿರಿಂಚಾದಿಗಳು ಮತ್ತಾ | ಪರಮಋಷಿಗಳು ದಿವಿಜರೆಲ್ಲರು ||
ಹರಿಯೊಳಪ್ಪಣೆಗೊಂಡು ತಮ್ಮಯ | ಪುರಕೆ ತೆರಳೆ ||೩೫೪||
ಬಳಿಕ ಲಕ್ಷ್ಮೀರಮಣ ಯಾದವ | ಬಲದೊಡನೆ ದ್ವಾರಕೆಗೆ ಬಂದತಿ |
ಗೆಲುವಿನಿಂದಲಿ ರಂಜಿಸಿದ ಕೇ | ಳಿಳೆಯಪಾಲ ||೩೫೫||
ಭಾಮಿನಿ
ಪರಮಪಾವನ ಪುಣ್ಯವೀ ಶುಭ |
ಚರಿತೆಯನು ಕೀರ್ತಿಸುತ ಕೇಳುವ |
ಶರಣುಜನರಾಪತ್ತುಗಳ ಪರಿಹರಿಸುತನವರತ ||
ಕರುಣಿಸುವ ಮನದಿಷ್ಟವನು ಶ್ರೀ |
ಹರಿಯೆನುತ ಜನಮೇಜಯಂಗಾ |
ಪರಮ ವೈಶಂಪಾಯಮುನಿಪತಿ ಪೇಳ್ದನೀ ಕಥೆಯ ||೩೫೬||
ಮಂಗಲ
ಮಂಗಲಂ ಜಯ ಮಂಗಲಂ || ಪಲ್ಲವಿ ||
ಮತ್ಸ್ಯವತಾರಗೆ ಕೂರ್ಮನಿಗೆ | ಉತ್ತಮ ವರಹಗೆ ನರಹರಿಗೆ ||
ಮತ್ತೆ ವಾಮನನಾಗಿ ಬಲಿಯ ವಂಚಿಸಿದಗೆ | ಕ್ಷತ್ರಿಕುಲಾಂತಕ ರಾಮನಿಗೆ ||೩೫೭||
ದಶಕಂಠನ ಸಂಹರಿಸಿದಗೆ | ಕುಸುಮಬಾಣನ ಪಿತ ಕೃಷ್ಣನಿಗೆ ||
ವಸನವ ನೆಗಹಿದ ಬೌದ್ಧವತಾರಗೆ | ಪೊಸತುರಗವನೇರ್ದ ಕಲ್ಕ್ಯನಿಗೆ || ಮಂಗಲಂ ||೩೫೮||
ಮಂಗಲಂ ವೆಂಕಟ ರಮಣನಿಗೆ | ಮಂಗಲ ಸಂಕಟಹರಣನಿಗೆ ||
ಮಂಗಲಂ ಮೂಕಾಂಬಿಕೆ ಸರ್ವೇಶಗೆ | ಮಂಗಲ ಶ್ರೀಲೋಕನಾಥನಿಗೆ ||
ಮಂಗಲಂ ಜಯ ಮಂಗಲಂ ||೩೫೯||
ಯಕ್ಷಗಾನ ರತಿಕಲ್ಯಾಣವು ಮುಗಿದುದು
Leave A Comment