ಭಾಮಿನಿ

ಶ್ರೀರಮಾರಮಣೀಹೃದಯಪಂ |
ಕೇರುಹಾರ್ಕಾಮೃತವಿಲಾಸಿನಿ |
ನೀರ ಯತಿತತಿಚಕ್ರವರ್ತಿ ಸರಿತ್ಪತೀಶಯನ ||
ಘೋರ ಸಂಸೃತಿಮೋಹ ಮುದಿರ ಸ |
ಮಿರ ಗರುಡಾರೂಢ ಕಿಲ್ಬಿಷ |
ದೂರ ಶ್ರೀವೈಕುಂಠಮಂದಿರವಾಸ ಸಲಹೆಮ್ಮ         || ೧ ||

ಶಾರ್ದೂಲವಿಕ್ರೀಡಿತಂ

ಶ್ರೀಕಾಳೀಸುತನೇಕದಂತ ಗಣಪಂ ಸದ್ಭಕ್ತದುಃಖಾಪಹಂ |
ನಾಕೇಶಾದ್ಯಮರೌಘವಂದಿತಪದಂ ಪಾಪೌಘವಿಧ್ವಂಸಕಮ್ ||
ಸಾಕಾರಂ ಸೃಣಿಪಾಶಶೋಭಿತಕರಂ ವಿಘ್ನಾಬ್ಧಿಕುಂಭೋದ್ಭವಂ
ಲೋಕಾನಂತಸಹಾಯಕಂ ಗಜಮುಖಂ ಧ್ಯಾಯಾಮಿ ಚಿತ್ತೇ ಸದಾ       || ೨ ||

ಕಂದ

ಶ್ರೀವನಜೋದ್ಭವನರಸಿ ಕ |
ವೀವರಸಂಹೃತಿಸಂಸ್ತುತೆ ಸಾರಸಪದ್ಯಂ ||
ನಾ ವಿರಚಿಸುವೆನು ದಯದಿ ಸ |
ದಾ ವಾಸಿಸು ಶಾರದೆ ಮನ್ಮುಖದೊಳು ಸದ್ಯಂ        || ೩ ||

ವಾರ್ಧಕ

ರಜತಾದ್ರಿವಾಸನಂ ಖರಕರವಿಭಾಸನಂ |
ದ್ವಿಜರಾಜಚೂಡನಂ ವರ ವೃಷಾರೂಢನಂ |
ವೃಜಿನಾಪಹಾರನಂ ಸುರಕುಲೋದ್ಧಾರನಂ ಸಾರನಂ ಸಾಕಾರನಂ ||
ಅಜಶಿರಚ್ಛೇದನಂ ದಕ್ಷಮಖಭೇದನಂ |
ಸುಜನಪರಿಪಾಲನಂ ಕರುಣಾಲವಾಲನಂ |
ಗಜದೈತ್ಯನಾಶನಂ ಮೆರೆವ ಪರಮೇಶನಂ ನೆನೆದೊರೆವೆನೀ ಕೃತಿಯನು  || ೪ ||

ದ್ವಿಪದಿ

ಜನಪ ಜನಮೇಜಯನಿಗೊಲಿದು ಸದ್ವಿಧದಿ |
ಮುನಿಕುಲಲಲಾಮ ವೈಶಂಪಾಯ ಮುದದಿ  || ೫ ||

ವಿಸ್ತರಿಸುತಿರೆ ಮಹಾಭಾರತದ ಕಥೆಯ |
ಹಸ್ತಿನಪುರೇಶನೊಂದಿನ ಕೇಳ್ದ ಯತಿಯ      || ೬ ||

ಅವಧರಿಸು ಮೌನಿ ಭಾರತಸಮಿಕವನು |
ಪವಮಾನಸುರಪಜರು ಗೆದ್ದ ವ್ಯಾಜ್ಯವನು     || ೭ ||

ಹಿಡಿದು ವಾದಿಸಿ ಭೀಮ ಸೋಲಲಾಕ್ಷಣದಿ |
ಜಡಜಲೋಚನೆ ದ್ರುಪದಸುತೆ ಪೋಗಿ ರಣದಿ || ೮ ||

ಶ್ವೇತಾಶ್ವ ಕೃಷ್ಣಾದಿ ಯದುಬಲವ ಗೆಲಿದು |
ಭೂತನಾಥನ ಪ್ರಮಥಗಣಗಳನು ಮುರಿದು  || ೯ ||

ಗಿರಿಸುತೆಯ ಜಜ್ಝರಿಸಿ ಚಂಡಿರೂಪವನು |
ಧರಿಸಿ ಸಕಲರ ಜಯಿಸಿ ಮೆರೆದ ಕಥನವನು  || ೧೦ ||

ಕೇಳಬೇಕೆಂಬ ಲವಲವಿಕೆಯಿಂ ಮನದಿ |
ಹೇಳದರ ಮೂಲ ವೃತ್ತಾಂತವನು ಘನದಿ     || ೧೧ ||

ಎಂದು ವಂದಿಸಿದವನಿಪಾಲಕನ ನೋಡಿ |
ಸಂದ ತೋಷದಿ ನುಡಿದ ಯೋಗಿ ದಯೆಗೂಡಿ          || ೧೨ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಲಾಲಿಸೈ ಜನಮೇಜಯ ಕ್ಷಿತಿ | ಪಾಲ ಪಾಂಡವರಕ್ಷಕನ ಶ್ರೀ |
ಲೋಲನುರುಚರಿತವನು ಪೇಳುವೆ | ಲೀಲೆಯಿಂದ      || ೧೩ ||

ಕುರುಕುಲವ ಸದೆ ಬಡಿದ ತದನಂ | ತರದೊಳಂತಕತನುಜ ಚಿಂತೆಯೊ |
ಳಿರಲರಿತು ಸಾರಸದಳಾಕ್ಷನು | ಭರದಿ ಬಂದು         || ೧೪ ||

ಹರಿಪದೋದ್ಭವೆಸುತನೆಡೆಗೆ ಕರೆ | ತರಲು ಭೀಷ್ಮಾಚಾರ್ಯನುಸಿರಿದ |
ವರಸುಬೋಧೆಯ ಕೇಳಿ ವ್ಯಾಕುಲ | ತೊರೆದು ಬಳಿಕ  || ೧೫ ||

ಮೃತರಿಗುತ್ತರಕ್ರಿಯೆ ರಚಿಸಿ ವಿಧಿ | ಪಿತನ ನೇಮದೊಳಾ ಯುಧಿಷ್ಠಿರ |
ಕ್ಷಿತಿಯನಾಳುತ್ತಿರ್ದ ನಿರ್ಜರ | ಪತಿಯ ತೆರದಿ          || ೧೬ ||

ವಾರ್ಧಕ

ಹಸ್ತಿನಪುರೇಶ ಕೇಳಾ ಧರ್ಮನಂದನಂ |
ವಿಸ್ತಾರವಾದ ಧರಣೀ ವಲಯಕರಸಾಗಿ |
ಸುಸ್ಥಿರದಿ ಸಕಲ ಪ್ರಜೆಪರಿವಾರಮಂ ಸಲಹಿ ಸತ್ಯಮಂ ಪರಿಪಾಲಿಸಿ ||
ಶಸ್ತಸತ್ಕೀರ್ತಿಯಂ ತಾಳಿದು ಸಹೋದರ ಸ |
ಮಸ್ತರಿಂದೊಡಗೂಡಿ ಪಾಂಚಾಲೆ ಸಹಿತ ನಿರ |
ವಸ್ಥೆಯಿಂದಿರುತೊಂದು ದಿನದಿ ಸಹಭವರೊಡನೆ ನಸುನಗುತಲಿಂತೆಂದನೂ       || ೧೭ ||

ರಾಗ ಭೈರವಿ ಝಂಪೆತಾಳ

ಹರುಷದಿಂ ಕೇಳಿ ಸೋ | ದರರು ಶ್ರೀಹರಿದಯದಿ |
ನಿರತ ಸುಖವೆಮಗಾಯ್ತು | ಕರಿಪುರದೊಳೀಗ || ೧೮ ||

ಆ ಕುರುಕುಲೇಶನತಿ | ರೇಕಬಾಧೆಯನಿತ್ತು |
ತಾ ಕಡೆಗೆ ರಣದಿ ಯಮ | ಲೋಕ ಸೇರಿದನು         || ೧೯ ||

ಹರಿಯೊಲಿದ ಶರಣರಿಗೆ | ದುರಿತ ಹೊದ್ದುವುದುಂಟೆ |
ಭರಿತ ಸೌಭಾಗ್ಯ ನೆಲೆ | ಸಿರುವುದೀಗೆಮಗೆ   || ೨೦ ||

ಆದರೊಂದುಂಟು ಮಮ | ಸೋದರರನಿಳೆಗಾಗಿ |
ಕಾದಿ ಸಂಹರಿಸಿದಪ | ವಾದ ಬೆಂಬಿಡದು     || ೨೧ ||

ಬರಿದೆ ದಾಯಾದ್ಯಮ | ತ್ಸರದಿ ಗುರುಹಿರಿಯರನು |
ತರಿದೆವೆಂದೆನೆ ನಕುಲ | ನೊರೆದನುಗ್ರಜಗೆ   || ೨೨ ||

ರಾಗ ಕೇದಾರಗೌಳ ಅಷ್ಟತಾಳ

ಅರಸ ನೀನಿನಿತು ಬೇ | ಸರಿಸಲೇತಕೆ ಪೀತಾಂ | ಬರನೆಮಗನುದಿನದಿ ||
ದುರುಳ ಕೌರವನಿತ್ತ | ಪರಿಭವಗಳ ಪರಿ | ಹರಿಸಿ ಪೊರೆದ ಘನದಿ         || ೨೩ ||

ತೋರುವೀ ಧನಧಾನ್ಯ | ಧಾರಿಣಿ ಗೃಹ ಪಶು | ನಾರಿ ಮಕ್ಕಳ ಕಾಟವು ||
ಚಾರು ಮರೀಚಿಕೆ | ನೀರಿನಂತಿರುವುದು | ಮೂರು ದಿವಸದಾಟವು        || ೨೪ ||

ನೆಲೆಯಿಲ್ಲ ತನುವಿಗೆ | ಕೊಲುವರೆ ಕಾವರೆ | ಜಲಜನೇತ್ರನೆ ಬಾಧ್ಯನು ||
ನಲವಿಂದ ಮನದಿ ನಿ | ಶ್ಚಲನಾಗಿ ಸ್ಮರಿಸಲು | ಸಲಹುವ ಶ್ರುತಿವೇದ್ಯನು || ೨೫ ||

ಕರುಣಶರಧಿ ನಿನ್ನ | ಚರಣವ ಹೊಂದಿಕೊಂ | ಡಿರುತಿಹೆವೆಲ್ಲ ನಾವು ||
ಪರಮ ಸುಜ್ಞಾನಿಯಾ | ಗಿರುತಲೀ ಪರಿ ಕರ | ಕರೆಯ ತಾಳದಿರು ನೀನು || ೨೬ ||

ಭಾಮಿನಿ

ವನಧಿವಸನಾಧೀಶ ಕೇಳಿಂ |
ತೆನುವ ನಕುಲನ ಮಾತ ಲಾಲಿಸಿ |
ವಿನಯದಿಂ ತಲೆದೂಗಿ ಕಾಲಜನಂದು ಯೋಚಿಸುತ ||
ಘನಮಹಾ ಭಾರತಸಮಿಕವ |
ನನುವರದಿ ಜಯಗೆಯ್ದರಾರೆಂ |
ಬನುವ ನಿರ್ಧರಿಸಲು ಸಹೋದರರೊಡನೆ ಮಿಗೆ ನುಡಿದ         || ೨೭ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಕೇಳಿರಯ್ಯ ಸಹೋದರಾದ್ಯರು | ಖೂಳ ಕುರುನೃಪನೊಡನೆ ಗೆಯ್ದೆವು |
ಮೇಳವಿಸಿ ಹದಿನೆಂಟು ದಿವಸದ | ಕಾಳಗವನು         || ೨೮ ||

ಗುರು ನದೀಸುತ ಕರ್ಣ ಮಾದ್ರಾ | ಧರಣಿಪತಿ ದುರ್ಯೋಧನರು ಸಂ |
ಗರಕಧೀಶ್ವರರೆನಿಸಿ ಕಾದಿದ | ರರಿಬಲದೊಳು || ೨೯ ||

ದುರ್ವಹ ರಣಾಂಗಣದೊಳೆಸುಗೆಯ | ನಿರ್ವಹಿಸದೆ ಪರಾಕ್ರಮಿಗಳು ಸು |
ಪರ್ವಲೋಕಕೆ ಗಮನಿಸಿದರು ನಿ | ಗರ್ವರಾಗಿ          || ೩೦ ||

ಉದ್ಧತ ಸಮಿಕದಲಿ ಬಲು ಸ | ಮೃದ್ಧಿಯಿಂದಿಹ ಮಾರ್ಬಲವ ಛಲ |
ಬದ್ಧರಾಗುತ ಸಂಹರಿಸಿ ಹವ | ಗೆದ್ದುದಾರು    || ೩೧ ||

ಸರಸಿಜಾಕ್ಷನ ಮಹಿಮೆಯೋ ನಿ | ಮ್ಮುರುವ ವಿಕ್ರಮದಿರವೊ ಚಂಡಿಯ |
ಧುರದಿರವೊ ನಿರ್ಧರಿಸಿ ತನಗದ | ನರುಹಿ ಭರದಿ      || ೩೨ ||

ಭಾಮಿನಿ

ಸಹಜರಿರ ಸಮ್ಮುದದಿ ಲಾಲಿಸಿ |
ರಹಹ ತನ್ನಯ ಸಂಶಯವ ನಿ |
ರ್ವಹಿಸಲೋಸುಗ ಪ್ರಶ್ನೆಗೆಯ್ದೆನು ಸಾವಧಾನದೊಳು ||
ವಿಹಿತಮತಿಗಳು ಚೇತನದಿ ಸಲೆ |
ಗ್ರಹಿಸಿ ತನುಗುತ್ತರವ ಕೊಡಿರೆನೆ |
ಮಿಹಿರಜಾತಾತ್ಮಜನಿಗುಸಿರಿದನಾ ಧನಂಜಯನು      || ೩೩ ||

ರಾಗ ಭೈರವಿ ಅಷ್ಟತಾಳ

ಕೇಳಗ್ರಭವ ಮುದದಿ | ನಿನ್ನೊಡನೀಗ | ಪೇಳುವೆನುತ್ಸಹದಿ ||
ಮೇಳವಿಸಿದ ನೃಪ | ರೋಳಿಯ ಕದನದಿ | ಕೋಳುಗೊಂಡೆನು ಶೌರ್ಯದಿ          || ೩೪ ||

ಪದಿನೆಂಟು ದಿವಸದೊಳು | ರಣದಿ ಹೋರಾ | ಡಿದೆನತಿ ಸಹಸದೊಳು ||
ಪದುಮಾಪ್ತಭವ ಗುರು | ನದಿಸುತರನು ನಿಲಿ | ಸಿದೆನಿಂದ್ರ ಲೋಕದೊಳು          || ೩೫ ||

ಅವರಿವರೆಂದು ನೀನು | ಭಾವಿಸದಿರು | ಬವರ ಚೌಪಟನು ತಾನು ||
ಭುವನದಿ ಭಾರತ | ಹವ ಗೆಲ್ದ ವಿಕ್ರಮಿ | ವಿವರಿಸಲೇನದನು     || ೩೬ ||

ರಾಗ ಶಂಕರಾಭರಣ ಏಕತಾಳ

ಎನಲು ಕೇಳುತನಿಲಜಾತ | ಕನಲಿ ನುಡಿದ ಸಕಲ ನೃಪರ |
ಹನನ ಗೆಯ್ದ ವೀರ ನೀನೆಂ | ದೆನುವೆಯಾ ಪಾರ್ಥ ||
ಮನದಿ ಗರ್ವಿಸದಿರು ಬರಿದೆ | ದಿನಕರಾತ್ಮಭವನ ಗೆಲಿದ |
ಘನ ಪ್ರಥನವ ಗೆಲಿದೆ ನಿನ | ಗಣಕವೇ ಭೀಮ || ೩೭ ||

ಬಿಡು ಬಿಡೆಲವೊ ನಳಿನವ್ಯೂಹ | ಕೊಡನ ಕುವರ ರಚಿಸಲವಗೆ |
ಪೊಡಮಡುತ್ತ ಪೋದೆ ನೀ ನಾ | ಪುಡಿಗೆಯ್ದೆ ಪಾರ್ಥ ||
ಕಡುಹನಹುದೊ ಸಪ್ತಕಾದಿ | ಧಡಿಗ ಖಳರ ಕೊಂದು ಜಸವ |
ಪಡೆದು ರಿಪುಸಂಕುಲವ ಗೋಳು | ಗುಡಿಸಿದೆ ಭೀಮ   || ೩೮ ||

ಮರುಳೆ ಬಗುಳದಿರು ದುಶ್ಶಾಸ | ನುರವ ಬಗಿದು ಕರುಳ ತೆಗೆದು |
ಪುರವಿನಾಶನಂತೆ ಮೆರೆದು | ದರಿಯೆಯಾ ಪಾರ್ಥ ||
ಧಿರುರೆ ಭಗದತ್ತನೊಳು ಸಿಲುಕಿ | ಸೆರೆಯ ಬಿದ್ದ ಸಮಯ ನಿನ್ನ |
ಭರದಿ ಬಂದು ರಕ್ಷಿಸಿದುದ | ಮರೆತೆಯಾ ಭೀಮ        || ೩೯ ||

ಕಕ್ಷಿಮಾತ ನುಡಿಯದಿರು ತ್ರಿ | ಯಕ್ಷನರ್ಧ ಪ್ರಹರದೊಳು ಪ್ರ |
ತ್ಯಕ್ಷನಾದನೆನಗೆ ಬವರ | ಲಕ್ಷ್ಯವೇ ಪಾರ್ಥ ||
ದಕ್ಷಶಿಕ್ಷನೊಡನೆ ಲೋಕ | ಮೆಚ್ಚುವಂತೆ ರಣದಿ ಸೆಣಸಿ |
ರೂಕ್ಷಮಾರ್ಗಣವನು ಪಡೆದೆ | ನೀಕ್ಷಿಸೊ ಭೀಮ        || ೪೦ ||

ಸಾಕು ಸಾಕು ಭಾರತಾಸ | ಮಿಕ ಗೆಲ್ದ ವೀರ ತಾನೆ |
ಪೋಕ ನಿನಗಿನ್ನಾ ವಿಚಾರ | ವೇಕೆಲಾ ಪಾರ್ಥ ||
ಭೀಕರಿಸದಿರಮಮ ಜಯಿಸಿ | ದಾಕೆವಾಳ ನಾನಾಗಿರಲು |
ಕಾಕು ಶೌರ್ಯವಾಡುವುದಿದು | ಸಾಕೆಲಾ ಭೀಮ       || ೪೧ ||

ವಾರ್ಧಕ

ಛೀ ಮರುಳೆ ನರ ಪಿಂತೆಯರಗಿನಾಲಯದಿ ಕುರು |
ಭೂಮಿಶ್ವರಂ ನಮ್ಮನಿಕ್ಕಲದರಿಂ ಪೊರಟು |
ಪ್ರೇಮದಿಂ ನಿಮ್ಮ ಸಲಹಿದ ಭೀಮ ರಿಪುಭೀಮ ತಾನಲ್ಲದಾರಿರ್ಪರು ||
ಹೇ ಮರುತಜಾತ ಸಂಗರದಿ ಕಾದಾಡಿ ಭೂ |
ವ್ಯೋಮ ಪಾತಾಳಲೋಕದಿ ಪರಾಕ್ರಮದೊಳು |
ದ್ದಾಮನೆನಿಸಿದ ವಿಜಯ ಮೂರ್ಲೋಕವಿಜಯ ತನಗಿದಿರುಂಟೆ ಸರಿವೀರರು        || ೪೨ ||

ಭಾಮಿನಿ

ಅರಸ ಕೇಳಿಂತರ್ಜುನನು ಸಂ |
ಗರವ ತಾನೇ ಗೆಲ್ದೆನೆಂದೆನ |
ಲುರಿ ಯುಗುಳಿ ಕೋಪದಿ ಸದಾಗತಿಪುತ್ರನುರಿದೆದ್ದು ||
ಧುರವ ಗೆಲ್ದವ ತಾನೆನುತ ಕರ |
ಕರನೆ ಪಲ್ಗಡಿವುತ್ತ ಕಾದು |
ತ್ತಿರಲು ಶ್ರೀಹರಿಪದವ ನುತಿಸುತ ಬಂದ ನಾರದನು    || ೪೩ ||

ರಾಗ ಧನಾಸರಿ ಏಕತಾಳ

ನಮೋ ಕೇಶವ | ಸುಜನಬಾಂಧವ | ರಮಾರಮಣಿಪ್ರಿಯ ||
ಯಮಿ ಕುಲಾಳಿಹೃ | ತ್ಕಮಲಭ್ರಮರ ಸುರ | ನಮಿತ ಚಕ್ರಧಾರಿ || ಮುರಾರಿ        || ೪೪ ||

ಪರಮಪುರುಷ ಹರಿ | ಜನನಮರಣಭಯ | ಹರಣ ಕುಮುದ ನಯನ ||
ಗರುಡಗಮನ ಕರಿ | ವರದ ಚರಣಕಿಂ | ಕರರ ಪೊರೆವ ದೇವ || ಸಂಜೀವ          || ೪೫ ||

ದೋಷನಾಶ ಜಗ | ದೀಶ ತರಣಿ ಸಂ | ಕಾಶ ವಾಸುದೇವ ||
ಶೇಷಶಯನ ಪರ | ಮೇಶಮಿತ್ರ ಹೃಷೀ | ಕೇಶ ಭಕ್ತಪ್ರೇಮಿ || ಮಹಾಸ್ವಾಮಿ        || ೪೬ ||

ಕಂದ

ವಾರಣಪುರಪತಿ ಲಾಲಿಸು |
ನಾರದನೀ ಪರಿ ಹರಿಯಂ ಧ್ಯಾನಿಸಿ ಬಂದಂ ||
ಹೋರಾಡುತಲಿಹ ಫಲುಗುಣ |
ಮಾರುತಿಯರ ಕಂಡತಿ ವಿಸ್ಮಯಬಡುತೆಂದಂ         || ೪೭ ||

ರಾಗ ಘಂಟಾರವ ಏಕತಾಳ

ಭಲಾ ಭಲಾ ಬಲ್ | ಕಳವಳಗೊಳದಿರಿ |
ತಿಳುಹಿ ತಿಳುಹಿರೆ | ನ್ನೊಳಗೀಗ ||
ಸಲೆ ಮೂರ್ಖಾಟಿಕೆ | ಯೊಳು ಮುನಿಸಿನ ಕೊಳು |
ಗುಳ ಗೆಯ್ಯುವ ಪರಿ | ಗಳ ಬೇಗ    || ೪೮ ||

ಖಾಡಾಖಾಡಿಯೊ | ಳಾಡಂಬರದಲಿ |
ಮೂಢರಾಗಿ ಹೋ | ರಾಡದಿರಿ ||
ಬೇಡ ಬೇಡ ನಗೆ | ಗೇಡಾದುದು ಹೊಡೆ |
ದಾಡದಿರತಿ ಹಟ | ಮಾಡದಿರಿ       || ೪೯ ||

ಧಾರಿಣಿಯೊಳು ಬಲು | ಶೂರರು ಬವರಕೆ |
ಬಾರರು ಹರಿ ಮದ | ನಾರಿಯಜ ||
ಕ್ಷೀರ ನೀರು ಸಮ | ದೋರುವ ಸಹಜರಿ |
ಗೇರಿತೆ ಪಿತ್ತವಿ | ಕಾರ ನಿಜ || ೫೦ ||

ಅಲ್ಲದಿರಲು ಬರಿ | ಖುಲ್ಲರಂತೆ ರಣ |
ಮಲ್ಲರಾಗುವಿರೆ | ಬಲ್ಲವರು ||
ಸಲ್ಲದು ನಿಮಗೊಳಿ | ತಲ್ಲವು ನಗುವರು |
ನಿಲ್ಲದೆ ಧರಣಿಯೊ | ಳೆಲ್ಲವರು       || ೫೧ ||

ಆದರೆ ನಿಮ್ಮ ವಿ | ವಾದವನೀಗನು |
ಮೋದಿಸಿರೆನಗೆ ವಿ | ನೋದದಲಿ ||
ಶೋಧಿಸಿ ಹೇಳುವೆ | ವಾದಿಸದಿಹುದು ಸ |
ಹೋದರರಧಿಕ ವಿ | ರೋಧದಲಿ     || ೫೨ ||

ರಾಗ ಸಾಂಗತ್ಯ ರೂಪಕತಾಳ

ವಾರಿಜಭವನ ಕು | ಮಾರಕನಾಡಿದ | ಚಾರು ವಾಕ್ಯವನಿಂದ್ರ ಸುತನು ||
ಭೋರನಾಲಿಸಿ ನಮ | ಸ್ಕಾರ ಮಾಡುತಲಂದು | ನಾರದನೊಡನುಸಿರಿದನು       || ೫೩ ||

ಕರುಣಿ ಮುನಿಪನವ | ಧರಿಸಿಂದು ಯಮಸೂನು | ನೆರೆ ಕೇಳ್ದನೊಂದು ಸಂಗತಿಯ ||
ಮೆರೆದಿಹ ಭಾರತ | ಧುರ ಗೆಲ್ದ ಭಟರ್ಯಾರೆಂ | ದರುಹಲೊರೆದೆ ಸತ್ಯ ಸ್ಥಿತಿಯ     || ೫೪ ||

ದಿನಕರಸುತ ನದೀ | ತನಯ ದ್ರೋಣರನಾಯೋ | ಧನದಿ ಸಂಹರಿಸುತೀಬವರ ||
ಘನ ವಿಕ್ರಮದಿ ಜಯಿಸಿ | ದನುಪಮ ವೀರ ತಾ | ನೆನಲು ರೋಷದಿ ಹರಿಕುವರ    || ೫೫ ||

ತಾ ಸಕಲರ ಗೆಲ್ದೆ | ನಾ ಸಮರದೊಳೆನು | ತೀ ಸಮಿರಾತ್ಮಜನಿಂದು ||
ಸೂಸಿದ ರಣವೆನ | ಲಾ ಸುಭಟರಿಗೆಂದ | ನಾ ಸುರಮುನಿಪ ತಾನಂದು  || ೫೬ ||

ರಾಗ ಸಾವೇರಿ ರೂಪಕತಾಳ

ಸಾಕು ತಡಿ ತಡಿ | ಜಗಳ | ವೇಕೆ ಬಿಡಿ ಬಿಡಿ ||
ವಾಕು ಕೇಳಿರಿ | ಬಲು ವಿ | ವೇಕ ತಾಳಿರಿ     || ೫೭ ||

ವೀರರೈ ಮಜಾ | ಬವರ | ಶೂರರೈ ನಿಜ ||
ಸಾರವಲ್ಲಿದು | ಸಂಪ್ರ | ಹಾರಗೆಯ್ವುದು       || ೫೮ ||

ನಿರತ ಭಾರತ | ಯುದ್ಧ | ದಿರವ ಖಗರಥ ||
ನಿರುಕಿಸಿರ್ಪನು | ಸಕಲ | ಪರಿಯನರಿವನು   || ೫೯ ||

ವನರುಹೇಕ್ಷಣ | ನಡಿಯೊ | ಳೆನುವುದೀಕ್ಷಣ ||
ಮನದ ಸಂಶಯ | ಬಿಡಿಸು | ವನು ರಮಾಪ್ರಿಯ       || ೬೦ ||

ಭಾಮಿನಿ

ಆದರಿಂತು ಪರಾಕ್ರಮದೊಳು ವಿ |
ರೋಧ ಹಿಡಿದುರೆ ನೀವೆ ನಿಮ್ಮಲಿ |
ಕಾದಿದರೆ ಫಲವಿಲ್ಲವಿದನಾ ಹರಿಗೆ ಬಿನ್ನಯಿಸಿ ||
ಸಾದರದಿ ನಿರ್ಧರಿಸಿಕೊಳಿರೆನು |
ತಾ ದಿವಸ್ಪತಿಯಾತ್ಮಜಾತವೃ |
ಕೋದರರನೊಡಗೊಂಡು ಬಂದನು ಮುನಿಪ ದ್ವಾರಕೆಗೆ         || ೬೧ ||

ವಾರ್ಧಕ

ಹೇ ಮಹಿಮ ಕೇಳು ವಿಧಿಸುತ ಭೀಮ ನರರಯ್ದಿ |
ಪ್ರೇಮದಿಂ ಶರ ನಿಧಿಯ ಮಧ್ಯದಿ ವಿರಾಜಿಸುವ |
ಸೋಮಾರ್ಕನಿಭಕೋಟಿತೇಜದ ಮುರಾಂತಕನ ಪುರವರವ ಪೊಕ್ಕದರೊಳು ||
ಶ್ರೀಮನೋಹರ ಯಾದವವ್ರಾತದಿಂದಷ್ಟ |
ಕಾಮಿನಿಯರೊಡಗೂಡಿ ಮೆರೆದಿರಲು ಹರಿಪಾದ |
ತಾಮರಸಕೊಂದಿಸಲ್ಕವರ ಮನ್ನಿಸಿ ಮುನಿಪನೊಡನೊರೆದ ಶ್ರೀಕೃಷ್ಣನು  || ೬೨ ||

ರಾಗ ನವರೋಜು ಏಕತಾಳ

ತಾಪಸಾಂಬುಜದಿನಪ | ಸುಕ | ಲಾಪ ಸದ್ಗುಣ ಮುನಿಪ ||
ಭಾಪುಭಯಂಕರ | ಪಾಪವಿದೂರ ದ | ಯಾಪರ ಲಾಲಿಸು | ನಾ ಪೇಳುವ ನುಡಿ   || ೬೩ ||

ಭೂಸುರಾಗ್ರಣಿ ಸುದಯ | ಮಮ | ವಾಸವು ನಿಮ್ಮಯ ಹೃದಯ ||
ಲೇಸಾಯಿತು ನಿ | ಮಿ ಸಚ್ಚರಣಕು | ಶೇಶಯ ಕಂಡೆನಿ | ನ್ನೇಸು ಕೃತಾರ್ಥನೊ    || ೬೪ ||

ನೂರು ವತ್ಸರ ತಪವ | ಮಾಡಿ | ಚಾರು ಪಾದದ ರಜವ ||
ಸೇರುವರುಂಟೆ ವಿ | ಚಾರಿಸೆ ಕರುಣಾ | ವಾರಿಧಿ ನಿಮ್ಮ ಸ | ವಾರಿ ವಿಚಿತ್ರವು       || ೬೫ ||

ನಿರತ ಪಾವನಮೂರ್ತಿ | ಶುಭ | ಚರಿತ ನಿಮ್ಮಯ ಕೀರ್ತಿ ||
ಧರೆಯೊಳು ತುಂಬಿದೆ | ನರ ಮರುತಜರನು | ಕರೆಕೊಂಡಯ್ದಿಹ | ಪರಿ ತನಗರುಹಿಸಿ        || ೬೬ ||

ರಾಗ ಮಧುಮಾಧವಿ ಏಕತಾಳ

ಲಾಲಿಸು ಸಜ್ಜನಪಾಲ ಮುರಾರಿ | ಪೇಳುವೆನಿವರ ಕಂಗಾಲನು ಶೌರಿ || ಪ ||
ಸಾರಸಸಖಜಕುಮಾರಕನಿಂದು | ಭಾರತಾಹವ ಗೆಲ್ದ ವೀರರಾರೆಂದು ||
ಸೇರಿ ಸೋದರರ ವಿಚಾರಿಸೆ ಮುದದಿ | ಸ್ವಾರಾಜಸುತನೆಂದ ಭೋರನೀ ವಿಧದಿ   || ೬೭ ||

ಹದಿನೆಂಟು ದಿನದ ಯುದ್ಧದಿ ಹೊಡೆದಾಡಿ | ಸದೆದೆನು ನೃಪರ ಶೌರ್ಯದಿ ರೋಷಗೂಡಿ ||
ಕದನ ಚೌಪಟ ತಾನೆಂಬುದ ಕೇಳ್ದು ಭೀಮ | ಮದನಾರಿಯಂತೆ ಕೋಪದೊಳು ನಿಸ್ಸೀಮ    || ೬೮ ||

ಧುರ ಗೆಲ್ದೆನೆಂದುರುತರ ಪರಾಕ್ರಮದಿ | ನರವೃಕೋದರರು ಕಾದಿರಲು ವಿಕ್ರಮದಿ ||
ತೆರಳಿ ನಾನವರ ಶ್ರೀಹರಿಯೆ ನಿನ್ನೆಡೆಗೆ | ಕರೆತಂದೆನಿದನು ನಿರ್ಧರಿಸಯ್ಯ ಕಡೆಗೆ   || ೬೯ ||

ವಾರ್ಧಕ

ಕ್ಷೋಣೀಂದ್ರ ಕೇಳು ಮುನಿವರನಿಂತರುಹೆ ಚಕ್ರ |
ಪಾಣಿ ತಾನಾಲೋಚಿಸಿದ ಬಭ್ರುಬಾಹುವಿನ |
ಗೋಣಕೀ ಮರುತಸಂಜಾತನಿಂದಳಿವಲ್ಲದನ್ಯರಿಂ ಮೃತಿಯಾಗದು ||
ಕಾಣಲೀಗಲೆ ಸಮಯ ಬಂದಿರ್ಪುದದರನತಿ |
ಜಾಣತನದಿಂ ನಾಶಿಸುವೆನೆನುತ ಶತಗಜ |
ತ್ರಾಣಿಹರಿಜಾತನಾರದಧನಂಜಯರೊಡನೆ ಮಂದಹಾಸದೊಳೆಂದನು   || ೭೦ ||

ರಾಗ ಸಾವೇರಿ ಅಷ್ಟತಾಳ

ಲಾಲಿಸು ಬೊಮ್ಮಕುಮಾರ | ವಾಯು | ಬಾಲ ಬೀಭತ್ಸುವೀಸಾರ ||
ಜಾಲವಲ್ಲಿದು ಪೇಳ್ವೆ | ಮೂಲಸಂಗತಿಯ ಸು | ಶೀಲರಾಲೋಚಿಸಿರಿ | ವಿಚಾರಿಸಿರಿ || ೭೧ ||

ಅರಿಯೆ ನಾ ಸಂಪೂರ್ಣವಾಗಿ | ನಿತ್ಯ | ನರನ ರಥಕೆ ಸೂತನಾಗಿ ||
ತುರಗ ನಡೆಸುವವ | ಸರದಿಂದ ಸಂಗರ | ನಿರುಕಿಸಿದಾತನಲ್ಲ | ಪೇಳಲೇನೆಲ್ಲ     || ೭೨ ||

ನಾ ತಿಳಿದುದ ಪೇಳಲಿಂದು | ಪಕ್ಷ | ಪಾತವಾಡಿದ ಕೃಷ್ಣನೆಂದು ||
ಭೂತಳದೊಳು ದೊಡ್ಡ | ಮಾತು ಬಪ್ಪುದರಿಂದ | ಭೀತಿಯ ತಾಳುವೆನು | ಇನ್ನೇನು         || ೭೩ ||

ಧುರವನ್ನು ಕಂಡ ವಿಸ್ತರವು | ಪೂರಾ | ವರ ಬಭ್ರುಸೇನನ ಶಿರವು ||
ಅರಿತಿಹುದೀಗ ಕಂ | ಧರದೊಳೀ ಹದನವ | ನೊರೆದರುಹಿಸುವೆ ಪೋಗಿ | ವಿವರವಾಗಿ       || ೭೪ ||

ಭಾಮಿನಿ

ಧಾತ್ರಿಪತಿ ಕೇಳಿಂತು ಸರಸಿಜ |
ನೇತ್ರ ಕಮಲಾಸನ ಪ್ರಭಂಜನ |
ಗೋತ್ರವೈರಿಕುಮಾರರೊಡನುಸಿರುತ್ತ ಸಂತಸದಿ ||
ಆ ತ್ರಿವಿಕ್ರಮನಾಕ್ಷಣವೆ ಕುರು |
ಕ್ಷೇತ್ರಕಿವರೊಡನಯ್ದಿ ಬಳಿಕಾ |
ಗಾತ್ರವಿಲ್ಲದ ಬಭ್ರುಸೇನನ ಶಿರವ ಕಂಡೆಂದ  || ೭೫ ||