ರಾಗ ತುಜಾವಂತು ಝಂಪೆತಾಳ

ಅವಧರಿಸು ನಮ್ಮ ವಚ | ನವ ಬಭ್ರುಸೇನ ||
ವಿವರಿಸುವೆ ಮರುತೇಂದ್ರ | ಕುವರರನುಮಾನ || ಅವ || ಪ ||
ಈ ಕುರುಕ್ಷೇತ್ರದಲಿ | ಭೀಕರದ ಭಾರತ ಸ |
ಮಿಕ ನಡೆದುದು ಪಿಂತೆ | ಸಾಕಾರವಾಗಿ ||
ಲೋಕಕಂಟಕರಾದ | ನೇಕ ಭೂಪರು ಮಡಿದು |
ನಾಕವನು ಸೇರಿದರು | ವ್ಯಾಕುಲವನೀಗಿ || ಅವ ||     || ೭೬ ||

ಬರಿದೆ ದಾಯಾದ್ಯಮ | ತ್ಸರದಿ ಕೌರವ ಪಾಂಡು |
ತರಳರೊಳು ರಣವನನು | ಕರಿಸಿ ನಿರ್ದಯದಿ ||
ಭರದೊಳಿತ್ತಂಡ ಸಂ | ಗರದಿ ಹೊಡೆದಾಡಿದುದ |
ನಿರತ ಸಕಲವನು ಕಂ | ಡರಿವೆ ನಿಶ್ಚಯದಿ || || ೭೭ ||

ಆ ಸುಮಾರ್ಬಲವ ತೊಡೆ | ದೀ ಸಮರವನು ಗೆಲಿದು |
ಭೂಸತಿಯ ವಶವ ಗೆ | ಯ್ದಾ ಸುಭಟರಾರು ||
ವಾಸಿಪಂಥವ ಹಿಡಿದು | ಬೇಸರದೆ ಧುರವೆಸಗಿ |
ದೀಸರೊಳಗಾರೆಂದು | ಲೇಸಾಗಿ ತೋರು || || ೭೮ ||

ಈ ದುರಾಗ್ರಹ ಪಿಡಿದು | ವಾದಿಸಿ ಧನಂಜಯ ವೃ |
ಕೋದರರು ವಿಕ್ರಮದಿ | ಕಾದುವರುದ್ದಂಡ ||
ನೀದಯದೊಳಿದರ ಮೂ | ಲಾದಿಯನು ತಿಳುಹೆನೆ ವಿ |
ನೋದದಿಂದುಸಿರಿತು ಗ | ದಾಧರಗೆ ರುಂಡ ||         || ೭೯ ||

ವಾರ್ಧಕ

ಚಕ್ರಧಾರಿಯೆ ಕೇಳು ಭಾರತಾಹವದಿ ಕುರು |
ಚಕ್ರದೊಳ್ ನೆರೆದಿರ್ದ ಬಲದಿ ಕಾದಾಡಿರುವ |
ಚಕ್ರವರ್ತಿಗಳಾರನುಂ ಕಾಣೆ ನಿನ್ನ ಮಹಿಮೆಯನೊರೆಯಲಾರಿಗಳವು ||
ಚಕ್ರವೇ ಸರ್ವಸೈನಿಕವ ಸಂಹರಿಸಲಾ |
ಚಕ್ರದೆಡೆಗೊಂಡು ಚಂಡಿಕೆ ತಿರುಗುತಿಹುದು ರಣ |
ಚಕ್ರದೊಳ್ ಕಂಡರಿವೆನಲ್ಲದನ್ಯತ್ರರಂ ಕಾಣೆ ನಿಶ್ಚಯಮೆಂದುದು ||         || ೮೦ ||

ಭಾಮಿನಿ

ಪೊಡವಿಪಾಲಕ ಲಾಲಿಸೀ ಪರಿ |
ನುಡಿದ ರುಂಡದ ಮಾತ ಕೇಳಿದು |
ಕಡೆಯ ಕಲ್ಪದ ಶೂಲಿಯಂತಾರ್ಭಟಿಸಿ ಪವನಜನು ||
ಕಡುಗಿ ಮೆರೆವ ಗದಾಯುಧವ ನೆರೆ |
ಪಿಡಿದು ಹೂಂಕೃತಿಯಿಂದ ಕಣ್ಣೊಳು |
ಕಿಡಿಯ ಸೂಸುತ ನುಡಿದನತಿ ಭೋರ್ಗುಡಿಸುತೀ ತೆರದಿ        || ೮೧ ||

ರಾಗ ಮಾರವಿ ಏಕತಾಳ

ಫಡ ಫಡ ರುಂಡವೆ | ಬಿಡು ಬಾಯ್ಡಂಭವ | ನುಡಿಯದಿರಿದನೀಗ ||
ಬಿಡುವೆನೆ ನಿನ್ನನು | ಬಡೆದಪ್ಪಳಿಸುವೆ | ಪೊಡವಿಗೆ ಕಡು ಬೇಗ  || ೮೨ ||

ಭಾರತಯುದ್ಧದಿ | ಮಿರಿದ ಭೂಪರ | ವಾರವ ತಡೆಗಡಿದು ||
ಸಾರಸಸಖಸುತ | ನೂರನು ಪೊಗಿಸಿದೆ | ನಾ ರಣದೊಳು ಬಡೆದು       || ೮೩ ||

ಉನ್ನತ ಚಕ್ರದ | ಬೆನ್ನೊಳು ಚಂಡಿಕೆ | ಯನ್ನಿರ್ದುದನರಿವೆ ||
ನನ್ನಿಯಿಂದಲೆ | ಮ್ಮನ್ನು ನಿರೀಕ್ಷಿಸೆ | ಕಣ್ಣಿಲ್ಲವೆ ಶಿರವೆ   || ೮೪ ||

ಮರುತಜನೀಪರಿ | ಜರೆಯುತ ಗದೆಯಿಂ | ಶಿರಕೆರಗಲು ಜಡಿದು ||
ಧರೆಗುರುಳಿತು ಸಾ | ಸಿರ ಹೋಳಾಗುತ | ಭರದಿಂದಸುವುಡಿದು          || ೮೫ ||

ಭಾಮಿನಿ

ಅವನಿಪತಿ ಕೇಳಾ ಶಿರವ ಪರಿ |
ಭವಿಸೆ ಮಾರುತಿ ಕಾಣುತದ ಮಾ |
ಧವನು ನಸುನಗುತಿರಲು ಕಂಡಾಕ್ಷಣದಿ ನಾರದನು ||
ತವಕದಲಿ ನರಭೀಮರನು ಕರೆ |
ದವಘಡಿಸಿ ಬೋಧಿಸಿದನೀಪರಿ |
ಬವರವಿಕ್ರಮರಹುದು ನಿಮಗೀ ಕದನ ಬೇಡೆಂದು      || ೮೬ ||

ರಾಗ ಮಧುಮಾಧವಿ ತ್ರಿವುಡೆತಾಳ

ಕೇಳಿರನಿಲಸುರೇಂದ್ರಜಾತರು | ತಾಳದಿರಿ ಮತ್ಸರವ ಭಾರತ |
ಕಾಳಗವ ಗೆಲಿದಾ ಮಹಾತ್ಮರ | ಪೇಳಿದನು ವಿಸ್ತರದಲಿ | ಬಭ್ರುಸೇನ     || ೮೭ ||

ಚಕ್ರಚಂಡಿಕೆಯಲ್ಲದನ್ಯಥಾ | ವಿಕ್ರಮರು ಬಳಿಕಿಲ್ಲ ನಿಶ್ಚಯ |
ವಕ್ರರಾಗದಿರಕಟ ಜಗಳವ | ತಿಕ್ರಮಿಸದಿರಿ ಪಂಥದಿ | ಸುಜ್ಞರೆನಿಸಿ         || ೮೮ ||

ಶೌರಿತಂತ್ರವಿದೆಲ್ಲ ತಿಳಿಯಲು | ಗೌರಿರಮಣಗೆ ಸಾಧ್ಯವಲ್ಲವು |
ಪೌರುಷವ ನುಡಿದಿರ್ದ ನಿಮ್ಮಯ | ಕೌರವನ ಗತಿ ಯೋಚಿಸಿ | ವಿವರವಾಗಿ        || ೮೯ ||

ಕ್ಷೀರಸಾಗರ ವಾಸ ನಿಮ್ಮನು | ಸೇರಿಕೊಂಡಿರಲೆಂತು ಶೌರ್ಯೋ |
ದಾರತನದಲಿ ಸೆಣಸಿದರೆ ಬಲು | ವೀರರಪ್ಪಿರೆ ಬಿಡಿ ಬಿಡಿ | ಸಂಶಯವನು || ೯೦ ||

ಬರಿದೆ ನೀವು ವಿವಾದಗೆಯ್ಯಲು | ಧರಣಿಪತಿ ಧರ್ಮಜನ ಧರ್ಮಕೆ |
ಕೊರತೆ ಬಪ್ಪುದು ತೆರಳಿ ಹಸ್ತಿನ | ಪುರದೆಡೆಗೆ ಸ್ಥಿರಮನದೊಳು | ಬದಲೆಣಿಸದೆ     || ೯೧ ||

ವಾರ್ಧಕ

ದಂತಿನಗರೇಶ ಕೇಳಾಗ ಪರಮೇಷ್ಠಿಸುತ |
ನಿಂತು ನೀತಿಯನುಸಿರಿ ತೆರಳೆ ಸುಮನಸಪುರಕೆ |
ಕಂತುಪಿತನಿವರ ಸಂತಾಪಮಂ ಬಿಡಿಸಿ ದ್ವಾರಾವತಿಗೆ ನಡೆತಂದನು ||
ನಂತರ ವೃಕೋದರಧನಂಜಯರ್ ಬಲುವಾದ |
ಮಂತಳೆದು ನಾ ಗೆಲ್ದೆ ತಾ ಗೆಲ್ದೆನೆಂದೆನುತ |
ಪಂಥದಿ ವಿವಾದಿಸುತಲಿರಲು ಬಲು ಗರ್ಜಿಸುತಲಣ್ಣ ತಮ್ಮಂಗೆಂದನು     || ೯೨ ||

ರಾಗ ಪಂಚಾಗತಿ ಮಟ್ಟೆತಾಳ

ಎಲವೊ ಹುಲು ಧನಂಜಯಾಖ್ಯ | ಸಲೆ ಮದಾಂಧನಾಗಿ ಬರಿದೆ |
ಕಲಹ ಗೆಲಿದ ವೀರನೆಂದು | ಛಲವ ತೋರ್ಪೆಯ ||
ಖಳ ಜಯದ್ರಥಾಖ್ಯ ಸತಿಯ | ನೆಳೆದುಕೊಂಡು ಪೋಗಲವನ |
ತಲೆಯ ಬೋಳುಗೆಯ್ದುದಾರು | ತಿಳುಹು ತೀವ್ರದಿ      || ೯೩ ||

ಧಿರುರೆ ಭೀಮ ಕೇಳು ಸಿಂಧು | ವರನ ಶಿರದ ಕುಂತಲವನು |
ತರಿದ ಸಹಿಸಿಯಾದರೇನು | ಶರಜಬಿಂಹದಿ ||
ಭರದಿ ಕೆಡಹುತವನ ಜವನ | ಪುರಕೆ ಕಳುಹಿದಾತ ನಾನು |
ಸರಿಯದಾರು ತನಗೆ ಹೇಳು | ಧುರಪರಾಕ್ರಮಿ         || ೯೪ ||

ನೀರಜಾಕ್ಷ ನಿನ್ನ ರಥಕೆ | ಸಾರಥಿತ್ವ ಗೆಯ್ದರಿಂದ |
ವೀರನಾದೆ ಕೇಳು ತನ್ನ | ಭೂರಿ ಶೌರ್ಯವ ||
ಚಾರುಕಾಮ್ಯಕಾಡವಿಯೊಳು | ಸೇರಿಕೊಂಡು ಮೆರೆದಿರುವ ಕಿ |
ಮಿರ ಖಳನನೊರಗಿಸಿದೆನು | ಧಾರಿಣಿಗೆ ಭಲಾ         || ೯೫ ||

ಪವನಜಾತ ಕೇಳು ಲಕ್ಷ್ಮೀ | ಧವನ ಸೂತ ತನಗಳಿರದೆ |
ದಿವಿಜಲೋಕಕಯ್ದಿ ಘೋರ | ಹವದಿ ಸೆಣಸುತ ||
ಭುವನ ಭಾರರಾ ನಿವಾತ | ಕವಚರನ್ನು ಗೆಲ್ದು ಬಲ್ ಜ |
ಸವನು ಪಡೆದೆನಾ ಪುಲೋಮಿ | ಧವನ ಲೋಕದಿ      || ೯೬ ||

ವಾರ್ಧಕ

ಕೇಳೆಲೆ ಧನಂಜಯ ವಿರಾಟನಗರದಿ ನಮ್ಮ |
ಮೇಳದಬಲೆಯನುಪದ್ರಿಸಿದ ಕೀಚಕನ ಗೋ |
ನಾಳಿಯಂ ಪಿಡಿದೊತ್ತಿ ಕೊಂದೆನೀ ಮೇದಿನಿಗೆ ತಾನೇ ಮಹಾವಿಕ್ರಮಿ ||
ತಾಳೆಲವೊ ಭೀಮ ಬಗುಳದಿರು ಗೋಗ್ರಹಣದೊಳ್ |
ಖೂಳ ಕುರುಭೂಮಿಪನ ವರಚಾತುರಂಗಮಂ |
ಗೋಳುಗುಡಿಸಿದೆ ತನ್ನ ಸರಿ ವೀರರಾರೆನಲ್ ಮರುತಸುತನಿಂತೆಂದನು  || ೯೭ ||

ರಾಗ ಕಾಂಭೋಜಿ ಝಂಪೆತಾಳ

ಧಿರುರೆ ಫಲುಗುಣ ಕೇಳು | ಬರಿದೆ ನೀ ಕಲಿಯೆಂದು | ಒರೆಯದಿರು ತೆತ್ತ ಮತ್ಸರದಿ ||
ಕೆರೆಯೊಳಡಗಿರ್ದ ಕುರು | ವರನನೆಬ್ಬಿಸುತ ಕೆಡ | ಹಿರುವೆ ಮೇದಿನಿಗೆ ಸತ್ವರದಿ    || ೯೮ ||

ರಾಗ ಸಾಂಗತ್ಯ ರೂಪಕತಾಳ

ಪವನಸಂಜಾತ ತ್ರೈ | ಭುವನದೊಳೆನ್ನಂಥಾ | ಹವಧೀರರಿಲ್ಲ ನಿಶ್ಚಯವು ||
ಬವರಮುಖದಿ ಭೂರಿ | ಶ್ರವನ ಸಂಹರಿಸುತ್ತ | ತವಕದಿ ಪಡೆದಿಹೆ ಜಯವು         || ೯೯ ||

ರಾಗ ಕಾಂಭೋಜಿ ಝಂಪೆತಾಳ

ಸುತ್ರಾಮನಂದನ ವಿ | ಚಿತ್ರ ನುಡಿಯದಿರೇಕ | ಚಕ್ರಾಗ್ರಹಾರದೊಳು ದಿತಿಯ ||
ಪುತ್ರ ಬಕನಂ ಮುರಿದು | ಮಿತ್ರಸುಕುಮಾರನ ಧ | ರಿತ್ರಿಗಟ್ಟಿದೆ ಕೇಳು ಸ್ಥಿತಿಯ     || ೧೦೦ ||

ರಾಗ ಸಾಂಗತ್ಯ ರೂಪಕತಾಳ

ಮಾರುತಸುತ ಕೇಳಂ | ಗಾರವರ್ಮನಿಗೆ ಪಿಂ | ದಾರೋಹಿತಾಶ್ವಾಂಬು ಬಿಟ್ಟು ||
ಭೂರಿ ವಿಕ್ರಮದಿ ಬಾ | ಯಾರಿಸಿರುವೆನು ವಿ | ಚಾರಿಸಿ ನೋಡೆನ್ನ ಗುಟ್ಟು || ೧೦೧ ||

ರಾಗ ಕಾಂಭೋಜಿ ಝಂಪೆತಾಳ

ಚಂದಿರಾನನೆ ದ್ರುಪದ | ನಂದನೆಯು ಬಯಸಲು ಸು | ಗಂಧ ಪುಷ್ಪವ ತರಲು ಪೋಗಿ ||
ಮಂದಹಾಸದಿ ಯಕ್ಷ | ವೃಂದವನು ಸದೆದಿರುವೆ | ನಿಂದದನು ತಿಳಿಯೊ ಲೇಸಾಗಿ  || ೧೦೨ ||

ರಾಗ ಸಾಂಗತ್ಯ ರೂಪಕತಾಳ

ಘನವಾಹನಾರಾಮ | ಹನನಗೆಯ್ಯಲು ದುರ್ಯೋ | ಧನ ಚಿತ್ರಸೇನನು ಬಂದು ||
ಜನಪಗೊಯ್ಯಲು ಖೇಚ | ರನ ಗೆಲ್ದು ಮಿಗೆ ಕೌರ | ವನ ಬಿಡಿಸಿದೆ ಗ್ರಹಿಸಿಂದು      || ೧೦೩ ||

ವಾರ್ಧಕ

ಫಡ ಮರುಳೆ ಕೌಂತೇಯ ವರಹಿಡಿಂಬಾವನದಿ |
ಧಡಿಗನಾದ ಹಿಡಿಂಬ ರಕ್ಕಸಂ ರಣಕೆಂದು |
ನಡೆತರಲ್ಕವನ ಸಂಹರಿಸಿ ನಿಮ್ಮನು ಕಾಯ್ದ ಪಟುಭಟಂ ತಾನಲ್ಲವೆ ||
ಬಿಡು ವೃಕೋದರ ಯಜ್ಞಸೇನೆಕಲ್ಯಾಣದೊಳ್ |
ಮೃಡನ ಧನುವಂ ಮುರಿದು ಪಾಂಚಾಲೆಯಂ ವರಿಸಿ |
ಸಡಗರದೊಳೈವರಿಂಗೊದಗಿಸಿದ ವೀರ ತನಗಿದಿರಾರು ಪೇಳೆಂದನು     || ೧೦೪ ||

ರಾಗ ನಾದನಾಮಕ್ರಿಯೆ ಅಷ್ಟತಾಳ

ಪೂತುರೆ ದೇವೇಂದ್ರಜಾತನೆ | ನೀನೀ | ಚಾತುರಂಗವ ಗೆಲ್ದ ಖ್ಯಾತನೆ ||
ನಾ ತಿಳಿಯೆನೆ ನಿನ್ನ ರೀತಿಯ | ಶೌರ್ಯ | ವೇತಕೆ ಬಿಡು ಬಿಡು ಖಾತಿಯ || ೧೦೫ ||

ಸಾಕೆಲೊ ಭೀಮ ಸಮಿಕವ | ಗೆಲ್ದು | ತಾ ಕೊಂದಿರುವೆ ನೃಪಾನೀಕವ ||
ಶಾಕಿನಿಗಣಕತಿರೇಕದಿ | ರಕ್ತ | ದೋಕುಳಿಗೆಯ್ವೆ ವಿವೇಕದಿ       || ೧೦೬ ||

ಖೋಡಿಯ ಮಾತೇತಕಾಡುವೆ | ನಿನ್ನ | ಗಾಢ ವಿಕ್ರಮಗಳ ನೋಡುವೆ ||
ಮೂಢನಾಗದಿರೆನುತಾಡಿದ | ಬಿಲ್ಗೆ | ಪೂಡಿ ಸರಳ ಮುಂದೆ ದೂಡಿದ      || ೧೦೭ ||

ಎಚ್ಚ ಶರೌಘವ ಕೊಚ್ಚುತ | ಖತಿ | ಪೆಚ್ಚಿ ದಿವ್ಯಾಸ್ತ್ರವ ಬಿಚ್ಚುತ ||
ಅಚ್ಯುತನಡಿ ನೆನೆದೆಚ್ಚನು | ಪೊಸ | ಪೊಚ್ಚ ಸರಳು ಸೂಸೆ ಕಿಚ್ಚನು       || ೧೦೮ ||

ಭಾಮಿನಿ

ಭೂಲಲಾಮನೆ ಚಿತ್ತವಿಸು ಸುರ |
ಪಾಲನಂದನನಸ್ತ್ರದಲಿ ಹರಿ |
ಬಾಲ ತಾ ಕಡುನೊಂದು ಧರಣಿಗೆ ಬಿದ್ದು ಕಾತರಿಸಿ ||
ಮೇಲೆ ಮೂರ್ಛೆಯ ತಿಳಿದು ಸಮರದಿ |
ಕೋಳುಹೋದೆನೆ ಶಿವ ಶಿವಾ ತ |
ನ್ನಾಳುತನವು ನಿರರ್ಥವಾಯ್ತೆಂದೆನುತ ಮರುಗಿದನು  || ೧೦೯ ||

ರಾಗ ನೀಲಾಂಬರಿ ಏಕತಾಳ

ಹರ ಹರಾ ಪಾರ್ಥನೊಳು | ಕಾದಲು ನೂರು | ಕರಿಗಳ ಸತ್ತ್ವಗಳು ||
ಸರಿದು ನಿಷ್ಫಲವಾಯಿತೆ | ಮುಂದಿನ್ನು ಬಾಳ್ವ | ಪರಿಗಳೆಲ್ಲವು ಹೋಯಿತೆ || ೧೧೦ ||

ಗುಹಜನಕನನು ತಾನು | ಸಹಸದೊಳರ್ಧ | ಪ್ರಹರದೊಳೊಲಿಸಿದೆನು ||
ಸಹಭವನೆನ್ನನಿಂದು | ಜಯಿಸಿದ ಮೇಲೆ | ಮಹಿಯೊಳಗಿರೆನು ಮುಂದು   || ೧೧೧ ||

ದುರುಳ ಮಾಗಧನ ಕೊಂದೆ | ಸ್ವರ್ಗಕೆ ಪೋಗಿ | ಸುರಸೌಗಂಧಿಕವ ತಂದೆ ||
ವರಜಟಾಸುರನ ಸೀಳಿ | ಮೆರೆದಿಹ ಶೌರ್ಯ | ಬರಿದಾಯ್ತೆ ಗರ್ವತಾಳಿ   || ೧೨೨ ||

ನಾರದಾಚ್ಯುತರ ಮಾತು | ಮಿರಿದರಿಂದ | ಲೀ ರಣದೊಳಗೆ ಸೋತು ||
ಧಾರಿಣಿಗೊರಗಿದೆನು | ತನ್ನಳಲನಿ | ನ್ನಾರೊಡನುಸಿರುವೆನು     || ೧೨೩ ||

ವಾರ್ಧಿಕ

ಧರಣೀಶ ಕೇಳಿಂತು ಪಾವಮಾನಿಯು ಮರುಗಿ |
ಕರಗಿಕೊಂಡಿರಲತ್ತ ಪಾತಾಳಲೋಕದೊಳ್ |
ದುರುಳ ಸಪ್ತಕರಣುಗನಾಗಿರುವ ಸೂರ್ಯವರ್ಮಂ ಭರಿತ ವೈಭವದೊಳು ||
ವರಚಂದ್ರವರ್ಮನೆಂಬನುಜನಿಂದೊಡಗೂಡಿ |
ಹರುಷದಿಂದೋಲಗವನಿತ್ತು ಮೆರೆದಿರಲು ಶಂ |
ಕರನ ಪದನಳಿನಮಂ ಧ್ಯಾನಿಸುತಲಾಸ್ಥಳಕೆ ನಡೆತಂದ ವಿಧಿಪುತ್ರನು     || ೧೨೪ ||

ರಾಗ ಸವಾಯ್ ಏಕತಾಳ

ಶ್ರೀಶಂಕರ ಗಿರಿ | ಜೇಶ ದಿಗಂಬರ | ಕ್ಲೇಶನಾಶ ಪರ | ಮೇಶ ನಮೋ |
ಕೇಶವಪ್ರಿಯ ರಜ | ತೇಶ ನಿರಘ ಭವ | ಪಾಶಹರಣ ಫಣಿ | ಭೂಷ ನಮೋ         || ೧೨೫ ||

ಖಂಡಪರಶು ಬ್ರ | ಹ್ಮಾಂಡದೊಡೆಯನಘ | ಖಂಡನ ಪಂಚಮ | ತುಂಡ ನಮೋ || ಖಂಡಲಮುಖಸುರ | ತಂಡವಿನುತ ಶಿವ | ದಂಡಧರಾರಿ ಪ್ರ | ಚಂಡ ನಮೋ   || ೧೨೬ ||

ದಕ್ಷಹನನ ಖಳ | ಶಿಕ್ಷ ಸುಜನಜನ | ಪಕ್ಷ ಗಿರೀಶ ತ್ರಿ | ಯಕ್ಷ ನಮೋ ||
ಅಕ್ಷಯಮೂರ್ತಿ ಮು | ಮುಕ್ಷುವಿಲಕ್ಷಸು | ರಕ್ಷವಳರ್ಕ್ಷಸ | ರಕ್ಷ ನಮೋ    || ೧೨೭ ||

ಕಂದ

ಧಾರಿಣಿಪಾಲಕ ಲಾಲಿಸು |
ನಾರದನಯ್ತರುವುದನ್ನಿರೀಕ್ಷಿಸುತಾಗಂ ||

ಭೋರನೆ ಕರೆತಂದಾಸನ |
ವೇರಿಸಿ ಪೂಜಿಸುತಲಸುರನುಸಿರಿದ ಬೇಗಂ  || ೧೨೮ ||

ರಾಗ ವಸಂತ ಏಕತಾಳ

ಸ್ವಾರಿಯೆತ್ತ ಪೇಳು | ಕೃಪಾಳು | ಸ್ವಾರಿಯೆತ್ತ ಪೇಳು | ಪ |
ಸ್ವಾರಿಯೆತ್ತ ಪೇ | ಳೀ ರಸೆಯೊಳು ಪೊಸ |
ವಾರತೆಯಿರಲದ | ಭೋರನೆ ತನಗೊರೆ || ಸ್ವಾರಿ      || ೧೨೯ ||

ಚರಣದರ್ಶನದಿ | ಹರಿದುದೆಲ್ಲ ಮಮ |
ದುರಿತ ವಿಂದು ನಾ | ಪರಮ ಕೃತಾರ್ಥನು || ಸ್ವಾರಿ   || ೧೩೦ ||

ಚಂದವಾಯ್ತು ತ | ನ್ಮಂದಿರಕಿಂದಿಲಿ |
ಬಂದಿಹ ಪರಿಯೇ | ನೆಂದುಸಿರೆನ್ನೊಳು || ಸ್ವಾರಿ       || ೧೩೧ ||

ರಾಗ ಯರಕಲಕಾಂಭೋಜಿ ಅಷ್ಟತಾಳ

ಚಿತ್ತವಿಸೆಲೆ ರಾಕ್ಷ | ಸೋತ್ತಮ ನೀನು ||
ಬಿತ್ತರಿಸುವೆ ಬಂದ | ವೃತ್ತಾಂತಗಳನು || ಪ ||
ಪರಮಸಾಹಸಿ ನಿನ್ನ | ನಿರತ ಪೊಂದಿಹರು ದಿ |
ಗ್ವರರೆಲ್ಲ ತವ ಕೀರ್ತಿ | ಹರಡಿದೆ ಭುವನದಿ |
ಭರಿತ ವಿಖ್ಯಾತ ನೀನು || ನಿನ್ನಯ ಧರ |
ಧುರವ ನಾನೆಂಬುದೇನು | ತ್ರೈಲೋಕದೊ |
ಳರುತರ ಸಿರಿವಂತನು || ನೀ ಗೈದುಪ |
ಚರಣೆಗೆ ಸಂತಸ ತಳೆದಿರ್ಪೆ ನಾನು || ೧೩೨ ||

ಹಿಂದೆ ಭಾರತ ರಣ | ಕೆಂದು ಪೋಗಿಹ ನಿಮ್ಮ |
ತಂದೆ ಸಪ್ತಕರನಾ | ಸ್ಕಂದನದೊಳು ಪಾರ್ಥ |
ಕೊಂದಿಹ ಸತ್ವರದಿ || ನೀನವರಿಗೆ |
ಕಂದನೆನಿಸಿ ಜಗದಿ || ಸಾರ್ಥಕವೇನು |
ಮುಂದೆ ನರನ ಧುರದಿ || ಕೊಲ್ಲಲು ಕೀರ್ತಿ |
ಬಂದಪುದಿದನು ವಿಚಾರಿಸಾದರದಿ   || ೧೩೩ ||

ವರಮಹಾಭಾರತ | ಧುರ ಗೆಲ್ದ ವ್ಯಾಜದಿ |
ನರ ವೃಕೋದರರು ಮ | ತ್ಸರದಿ ಸೆಣಸುತಿರು |
ವರು ಕುರುಕ್ಷೇತ್ರದೊಳು || ವಾತಜ ಸೋತು |
ಒರಗಿಹ ಧರಣಿಯೊಳು | ನೀನೀಗಲೆ |
ತೆರಳುತ್ತ ಶೀಘ್ರದೊಳು || ಭೀಮನ ಪಕ್ಷ |
ವೆರಸಿ ಪಾರ್ಥನ ಕೊಲ್ಲಬಹುದು ಯುದ್ಧದೊಳು         || ೧೩೪ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಚಿತ್ತವಿಸು ಭೂನಾಥ ನಾರದ | ಬಿತ್ತರಿಸಿದಂದವನು ಕೇಳುತ |
ಮತ್ತೆ ದಾನವಕುಲತಿಲಕ ಖತಿ | ವೆತ್ತು ನುಡಿದ         || ೧೩೫ ||

ಲೇಸನಾಡಿದೆ ಮುನಿಪ ತಾತನ | ಘಾಸಿಗೆಯ್ದನೆ ಪಾರ್ಥನೆಂಬವ |
ವಾಸಿಪಂಥವಿದೇಕೆ ಸುಡು ಸುಡು | ಮಿಸೆಗಳನು       || ೧೩೬ ||

ಬಗೆವೆನೇ ಸುರನಾಥ ಮುಖ್ಯರ | ಬಿಗುಹಿಗಂಜುವೆನೇ ವಿಧಾತನ |
ಹಗರಣಕ್ಕಿದಿರಾಗಿ ಬರಲೆನ | ಗಗಜೆಯರಸ   || ೧೩೭ ||

ನೋಡು ಸಾಹಸವನು ಕಿರೀಟಿಯ | ಕೂಡೆ ಯುದ್ಧವನೆಸಗಿ ಕರುಳನು |
ತೋಡಿ ಶಾಕಿನಿಗಣಕೆ ತೃಪ್ತಿಯ | ಮಾಡಿಸುವೆನು       || ೧೩೮ ||

ತಂದೆಯನು ಕೊಂದವನ ವರ್ಮವ | ನೆಂದಿಗಾದರು ಬಿಡುವೆನೇ ನೋ |
ಡೆಂದು ರೋಷದಿ ಪೊರಟ ಸೇನಾ | ವೃಂದ ಸಹಿತ     || ೧೩೯ ||

ವಾರ್ಧಕ

ಭೂತಳೇಶ್ವರ ಕೇಳು ರವಿವರ್ಮನಾ ಕ್ಷಣವೆ |
ಖಾತಿಯಿಂ ಚಂದ್ರವರ್ಮನ ಕೂಡಿಕೊಂಡು ನಿಜ |
ಚಾತುರಂಗವ ನೆರಹಿ ಪೊರಡಲಾ ನಾರದಂ ಸುರನಗರಿಗಯ್ದೆ ಬಳಿಕ ||
ಯಾತುಧಾನಂ ಭೂರಿ ವಿಕ್ರಮದಿ ರಕ್ಕಸರ |
ವ್ರಾತದೊಡನಯ್ದಿ ಕುರುಮಂಡಲದಿ ಚಿಂತಿಸುವ |
ವಾತಸಂಭವನ ಕಂಡಾ ಖಳಕುಲೋತ್ತಮಂ ಭೀಮನೊಡನಿಂತೆಂದನು   || ೧೪೦ ||

ರಾಗ ಕಾಂಭೋಜಿ ಝಂಪೆತಾಳ

ಏನಿದೇನೈ ಪವನ | ಸೂನು ತವ ಮನದಿ ದು | ಮ್ಮಾನ ತುಂಬಿರುವುದಾಶ್ಚರ್ಯ ||
ಈ ನಿರೋಧವಿದೇಕೆ | ನೀನದರನರುಹಿಸು ನಿ | ಧಾನದಿಂ ರಿಪು ತಿಮಿರಸೂರ್ಯ   || ೧೪೧ ||

ಯಾರಯ್ಯ ತನ್ನನು ವಿ | ಚಾರಿಸುವ ಧೀರ ನೀ | ನಾರ ಮಗ ನಿನ್ನ ಹೆಸರೇನು ||
ಊರದಾವುದು ತನ್ನೊ | ಳೀರೀತಿ ಕೇಳುವರೆ | ಕಾರಣವ ಮೊದಲರುಹು ನೀನು    || ೧೪೨ ||

ಕೇಳಿ ಬಲ್ಲೆಯ ಪಿಂತೆ | ಕಾಳಗದೊಳಮಿತ ಕ | ಟ್ಟಾಳು ಸಮಸಪ್ತಕರ ಪರಿಯ ||
ಹೇಳಲೇನವರ ಜಠ | ರಾಲಯಾಂಬುಧಿನಿಶಾ | ಪಾಲ ರವಿವರ್ಮ ತಾನರಿಯ     || ೧೪೩ ||

ಬಲ್ಲೆ ಸಪ್ತಕರ ಪರಿ | ಯೆಲ್ಲವನು ತಿಳಿದಿರುವೆ | ಮಲ್ಲಸಾಹಸರವರು ಧುರದಿ ||
ಖುಲ್ಲ ನರ ಕೊಂದಿರ್ಪ | ನಿಲ್ಲಿಗೇತಕೆ ಬಂದೆ | ಸೊಲ್ಲಿಸಾ ಸಂಗತಿಯ ಭರದಿ        || ೧೪೪ ||

ತಂದೆಯ ಧನಂಜಯನು | ಕೊಂದುದನು ಮಿಗೆ ನಿಮ್ಮ | ನಿಂದು ಜಯಿಸಿದನೆಂಬ ಹದನ ||
ಬಂದು ಸುರಮುನಿಪನೆನ | ಗೊಂದುಳಿಯದರುಹಲ | ಯ್ತಂದೆ ಕಳುಹಿಸು ಮಾಳ್ಪೆ ಕದನ     || ೧೪೫ ||

ಲೇಸಾಯ್ತು ದಾನವ ಕು | ಲಾಸಮುದ್ರ ಮೃಗಾಂಕ | ಬೇಸರದೆ ಬಲು ದಯವ ತೋರಿ ||
ನೀ ಸಹಾಯಕೆ ಬಂದೆ | ವಾಸವಕುಮಾರಕನ | ಘಾಸಿಮಾಡೀಕ್ಷಣದಿ ಸಾರಿ         || ೧೪೬ ||

ಬಿಡು ಬಿಡಾ ಚಿಂತೆಯನು | ಧಡಿಗ ಪಾರ್ಥನ ಶಿರವ | ಕಡಿದು ತಂದಿಳುಹುವೆನು ಪದದಿ ||
ಕೊಡು ನೇಮವೀಗೆನಗೆ | ತಡಮಾಡಲೇಕೆನುತ | ಘುಡುಘುಡಿಸಿ ನುಡಿದನತಿ ಮುದದಿ        || ೧೪೭ ||

ಭಾಮಿನಿ

ಭೂಮಿಪತಿ ಕೇಳಿಂತು ಶೌರ್ಯದಿ |
ಭೀಮದಿನಕರವರ್ಮರತಿ ಸು |
ಪ್ರೇಮದಿಂ ಮಾತಾಡುತಿರಲದ ಕೇಳ್ದು ಭೋರ್ಗುಡಿಸಿ ||
ಕಾಮಹರನಂತುಗ್ರತಾಳುತ |
ಸೋಮವರ್ಮನು ಬರೆ ರಣಕೆ ಸು |
ತ್ರಾಮಸುತ ಕಂಡಾಗ ಗರ್ಜಿಸುತೆಂದನೀ ವಿಧದಿ       || ೧೪೮ ||

ರಾಗ ಶಂಕರಾಭರಣ ಮಟ್ಟೆತಾಳ

ಆರೆಲೋ ಧುರಾಗ್ರಗಣ್ಯ | ಘೋರ ದಾನವ |
ಭೂರಿ ವಿಕ್ರಮದಲಿ ರಣಕೆ | ಸಾರಿ ಬಂದವ ||
ಮೂರು ಭುವಿಯೊಳಿಲ್ಲ ನಮ್ಮ | ಗಾರುಗೆಡಿಪರು |
ಶೂರ ದನುಜ ಸಾಯದಿರು ವಿ | ಚಾರದೊಳಗಿರು      || ೧೪೯ ||

ಧಿರುರೆ ಪಾರ್ಥ ಕೇಳು ಸಪ್ತ | ಕರ ಕುಮಾರನು |
ಸರಸಿಜಾರಿವರ್ಮನೆಂದು | ಕರೆವರೆನ್ನನು ||
ಮರುತಸುತನ ಹರಿಬಕಾಗಿ | ತೆರಳಿ ಬಂದಿಹೆ |
ಸರಸವಲ್ಲ ಬೇಡ ನಿನಗೆ | ಧುರವು ಸಾರಿಹೆ   || ೧೫೦ ||

ಎಲವೊ ಪವನಭವನ ಬೆಂ | ಬಲಕೆ ಬಂದೆಯ |
ಸಲೆ ಪರಾಕ್ರಮದೊಳು ನಿನ್ನ | ಗ್ಗಳಿಕೆ ತೋರ್ಪೆಯ ||
ಖಳನೆ ನಿನ್ನ ಜನಕನನ್ನು | ಮುಳಿದು ಕೊಂದೆನು |
ಬಲು ಸಮರ್ಥ ನಾನು ನಿನ್ನ | ನುಳಿಸಲರಿಯೆನು       || ೧೫೧ ||

ತಾತನನ್ನು ಕೊಂದ ಘೋರ | ಪಾತಕಿಯು ಖರೆ |
ನೀತಿವಂತ ಪ್ರಾಣದಾಸೆ | ಯೇತಕಿದು ತೊರೆ ||
ಮಾತಿನಲ್ಲಿ ಚಪಲನಹುದು | ವಾತ ಜಾತನ |
ಘಾತಿಸಿದ ವಿಲಾಸವಲ್ಲ | ಕೋತಿಕೇತನ       || ೧೫೨ ||

ಕುಣಪಹಾರಿ ಕೇಳು ನಿನ್ನ | ನೆಣದ ಕೊಬ್ಬನು |
ಕ್ಷಣದಿ ಮುರಿದು ಭೂತಗಡಣ | ಕುಣಿಸಿ ಬಿಡುವೆನು ||
ಪಣವನಾಡಲೇತಕೀಗ | ಬಣಗೆ ಸುಮ್ಮನೆ |
ಗುಣದಿ ಪೋಗೆನುತ್ತ ಸುರಿದ | ಕಣೆಯ ಗಮ್ಮನೆ        || ೧೫೩ ||

ಭಂಡ ನರನೆ ನೀನು ಬರಿದೆ | ಪುಂಡ ನಾಡಿದೆ |
ಚಂಡ ಮಾರ್ಗಣವನು ಪಥದಿ | ತುಂಡುಮಾಡಿದೆ ||
ಗಂಡುಸಾದರೀಗ ನಾ ಕೋ | ದಂಡಕೇರಿಸಿ |
ಹಿಂಡುಶರವನೆಸೆವೆ ತಾಳು | ದ್ದಂಡ ಸಾಹಸಿ || ೧೫೪ ||

ಕಿಡಿಯನುಗುಳಿ ಬರುವ ಶರವ | ಕಡಿದು ಫಲುಗುಣ |
ಕಡುಹಿನಿಂದ ಬಿಲ್ಗೆ ಪೂಡಿ | ಬಿಡಲು ಶರಗಣ ||
ಒಡನೆ ಸಹಿಸದವನಿಗುರುಳಿ | ಧಡಿಗ ದೈತ್ಯನು |
ತಡೆಯದಾಗ ಹಂಸಭವನ | ಪೊಡವಿ ಸೇರ್ದನು       || ೧೫೫ ||