“ನಾನು ಆಗ ಹುಡುಗಿ. ಹದಿಮೂರು ವರ್ಷ ವಯಸ್ಸಿರಬಹುದು. ಪ್ರತಿ ರಾತ್ರಿ ಮಲಗಿದ ಕೂಡಲೇ ನಾನು ನನ್ನ ದೇಹಬಿಟ್ಟು ಹೊರಗೆ ಬಂದು ಮೇಲಕ್ಕೆ, ಮಾಳಿಗೆ ಮೇಲೆ, ತರುವಾಯ ನಗರದ ಮೇಲಕ್ಕೆ, ಬಹು ಎತ್ತರಕ್ಕೆ ಹೋದಂತೆ ಅನಿಸುತ್ತಿತತು. ನನಗಿಂತಲೂ ಉದ್ಧವಾದ ಬಂಗಾರದ ಉಡುಪು ಧರಿಸಿದಂತೆ ಕಾಣುತ್ತಿತ್ತು. ನಾನು ಮೇಲೆ ಮೇಲೆಹೋದಂತೆ ಆ ಉಡುಪು ವೃತ್ತಾಕಾರವಾಗಿ ನನ್ನ ಸುತ್ತ ಸುತ್ತುವರಿದು ವಿಶಾಲವಾಗಿ ಹರಡಿಕೊಳ್ಳುತ್ತಿತ್ತು. ಇಡಿ ನಗರದ ಮೇಲೆ ಛಾವಣಿಯಂತೆ ಅವರಿಸುತ್ತಿತ್ತು.  ಆಗ ಹೆಂಗಸರು, ಗಂಡಸರು, ಮಕ್ಕಳು ಮುದುಕರು ರೋಗಿಗಳು, ದುಃಖಿಗಳು ನಾನಾ ದಿಕ್ಕುಗಳಿಂದ ಬಂದು ಹರಡಿಕೊಂಡಿದ್ದ ನನ್ನ ಉಡುಪಿನ ಆಸರೆ ಪಡೆಯುತ್ತಿದ್ದರು. ಅವರು ತಮ್ಮ ದುಃಖ ದುಮ್ಮಾನಗಳನ್ನು, ನೋವು ನರಳಿಕೆಯನ್ನು ತೋಡಿಕೊಂಡು ಸಹಾಯಕ್ಕಾಗಿ ಯಾಚಿಸುತ್ತಿದ್ದರು. ಅವರ ಮೊರೆಯನ್ನು ಕೇಳಿ ನನ್ನ ಉಡುಪು, ಮಿದುವಾಗಿ ಸಜೀವ ಎಂಬಂತೆ, ಒಬ್ಬೊಬ್ಬರ ಕಡೆಗೂ ಚಾಚಿ ಹೋಗುತ್ತಿತ್ತು. ನೆರೆದ ಆ ಆರ್ತರು ಅದನ್ನು ಮುಟ್ಟಿದೊಡನೆ ನಿರೋಗಿಗಳಾಗಿ ಸಾಂತ್ವನ ಹೊಂದಿ ಹಿಂದೆ ತಾವೆಂದು ಕಾಣದಿದ್ದ ಸುಖ ಸಂತೋಷ ತಮ್ಮ ತಮ್ಮ ದೇಹದೊಳಗೆ ಹಿಂದುರುಗಿ ಹೋಗುತ್ತಿದ್ದರು. ಇದಕ್ಕಿಂತ ಸುಂದರವಾದುದು, ಸಂತೋಷದಾಯಕವಾದುದು ಮತ್ತೊಂದಿಲ್ಲ ಅನಿಸುತ್ತಿತು. ಇದರ ಮುಂದೆ ಹಗಲು ಮಾಡುವ ಕೆಲಸಗಳೆಲ್ಲ ಕೇವಲ ನಿರ್ಜಿವ, ನಿಸ್ಸತ್ವ, ರಸಹೀನವೆಂದು ತೋರುತ್ತಿತ್ತು. ಹೀಗೆ ಒಂದು ವರ್ಷದ ತನಕ ಆಗುತ್ತಿತ್ತು”.

ಹೀಗೆಂದು ಶ್ರೀ ಅರವಿಂದಾಶ್ರಮದ ಮಾತಾಜಿ ತಮ್ಮ ಮೂವತ್ತೊಂಬತ್ತನೆ ವಯಸಿನಲ್ಲಿ ನೆನಪು ಮಾಡಿಕೊಳ್ಳುತ್ತಾರೆ. ಹದಿಮೂರು ವರ್ಷದ ಹುಡುಗಿ  ಅದಾಗಿನಿಂದ ತೊಂಬತ್ತೇದನೆಯ ವರ್ಷದಲ್ಲಿ ದೇಹ ತ್ಯಾಗ ಮಾಡುವವರೆಗೆ, ಹೀಗೆ ಮಾತಾಜಿ, ಈ ಲೋಕದ ದುಃಖತಪ್ತ ಜೀವಿಗಳಿಗೆ ಸುಖ ಶಾಂತಿ ನೆಮ್ಮದಿಯನ್ನು ತಂದು ಕೊಟ್ಟು, ಅವರ ಬಾಳನ್ನು ಬೆಳಗಿದರು. ಈ ಮಹಾತಾಯಿಯ ಜೀವನೋದ್ದೇಶದ ಸಾರ ಸರ್ವಸ್ವ- ಕರುಣೆ  ಮತ್ತು ಪ್ರೇಮವೇ ಆಗಿತ್ತು. “ಕಾಲದೇಶದ ನುಡಿಯ,ಜಾತಿಯ ವಿಭೇಧವನ್ನು”! ಎಣಿಸದೇ, ತಮ್ಮತ್ತ ಬಂದವರಿಗೆ , ಬಾರದವರಿಗೂ ಸಹ , ಕಂಡವರಿಗೆ, ತಮ್ಮ ಅಪಾರ ಕರುಣೆ, ಪ್ರೇಮ, ವಾತ್ಸಲ್ಯ, ಕೃಪೆಯನ್ನು ತೋರಿಸಿದರು ಶ್ರೀಮಾತಾಜಿ. ಅವರ ಪ್ರೇಮ ಕಾರುಣ್ಯಗಳನ್ನು ಪಡೆದು ಅಸಂಖ್ಯಾತ ಜೀವಿಗಳು ಜೀವನದಲ್ಲಿ ದುಖಃ ಸಂತೋಷ ಹೊಂದಿದವು.

ಭಾರತಕ್ಕೆ ಬಂದದ್ದೇಕೆ ?

ಕಳೆದ ಶತಮಾನದಲ್ಲಿ ಪ್ಯಾರಿಸ್ ನಲ್ಲಿ ಮಾರಿಸ್ ಅಲ್ ಫಾಸಾ ಎಂಬ ಒಬ್ಬ ಬ್ಯಾಂಕರ ಇದ್ದರು. ಅವರ ಹೆಂಡತಿ ಮತಿಲ್ದಾ ಎಂಬ ಸಾಧ್ವಿ. ಬಹು ಸುಸಂಸ್ಕೃತ ದಂಪತಿಗಳು. ಅವರ ಮಗಳು ಮೀರಾ. ೧೮೭೮ನೇ ಫೆಬ್ರವರಿ ೨೧ ರಂದು ಹುಟ್ಟಿದಳು. ಆ ಮಗುವೇ ಮುಂದೆ ಪಾಂಡಿಚೇರಿಯ ಶ್ರೀ ಅರವಿಂದಾಶ್ರಮದ ಶ್ರೀ ಮಾತಾ ಎಂದು ಲೋಕವಿಖ್ಯಾತವಾದುದು.

ಫ್ರಾನ್ಸ್ ದೇಶದಲ್ಲಿ ಹುಟ್ಟಿದ ಈ ತಾಯಿ ಭಾರತಕ್ಕೆ ಏಕೆ ಬಂದಳು? ಇಲ್ಲೇಕೆ ನೆಲೆಸಿದಳು ?

ಈ ಪ್ರಶ್ನಗಳಿಗೆ ಅವರೇ ಉತ್ತರ ಹೇಳಿದ್ದಾರೆ.

“ಹುಟ್ಟಿನಿಂದ ನಾನು ಫ್ರೆಂಚ್ ಮಹಿಳೆ. ಪ್ರಾರಂಭದ ಶಿಕ್ಷಾಧೀಕ್ಷೆಗಳು ಫ್ರೆಂಚ್. ಆದರೆ ಒಲವಿನಿಂದ ಮನದ ಆಯ್ಕೆ ಮತ್ತು ಇಚ್ಛೆಯಿಂದ ನಾನು ಭಾರತೀಯಳು. ನನ್ನ ದೃಷ್ಟಿಯಲ್ಲಿ , ಮನದಲ್ಲಿ , ಚೇತನದಲ್ಲಿ ಭಾರತ ಮತ್ತು ಫ್ರೆಂಚ್ ದೇಶಗಳಲ್ಲಿ ಒಂದಕ್ಕೊಂದಕ್ಕೆ ವಿರುದ್ಧವಿಲ್ಲ. ತದ್ ವಿರುದ್ಧವಾಗಿ ಅವೆರಡೂ ಒಂದಕ್ಕೊಂದು ಅನ್ಯೋನ್ಯವಾಗಿ ಹೊಂದಿಕೊಳ್ಳುತ್ತವೆ. ಒಂದು ಇನ್ನೊಂದನ್ನು ಪೂರ್ಣಗೊಳಿಸುತ್ತದೆ. ನನ್ನ ಜೀವನದ ಏಕಮೇವ ಉದ್ದೇಶ ಶ್ರೀ ಅರವಿಂದರ ಬೋಧನೆಗಳಿಗೆ ವಾಸ್ತವರೂಪ ಕೊಡುವದೇ ಆಗಿದೆ”.

ಶ್ರೀ ಮಾತಾಜಿಯ ಈ ಮಾತು ವಿಚಿತ್ರವಾಗಿ ಕಾಣುತ್ತದೆ. ಫ್ರಾನ್ಸದಲ್ಲಿ ಹುಟ್ಟಿ, ಫ್ರೆಂಚ್ ಸಂಸ್ಕೃತಿಯ ಶಿಕ್ಷಾಧೀಕ್ಷೆಗಳನ್ನು ಪಡೆದ ಮಹಿಳೆ ಭಾರತವನ್ನು ತನ್ನ ತಾಯ್ನಾಡನ್ನಾಗಿ ಏಕೆ ಮಾಡಿಕೊಂಡರು? ಶ್ರೀಮಾತಾಜಿ ಹೇಳುತ್ತಾರೆ.

“ನಾನು ಚಿಕ್ಕವಳಿದ್ದಾಗ ಧ್ಯಾನಕ್ಕೆ ಕುಳಿತಾಗ ಓರ್ವ ಮಹಾಪುರುಷನ ದರ್ಶನವಾಗುತ್ತಿತ್ತು. ಆ ಮಹಾಪುರುಷನ ರೂಪವನ್ನು ನಾನು ಚಿತ್ರಿಸಿ ಬರೆದಿಟ್ಟುಕೊಂಡೆ. ಆತನು ಯಾರು ?ಎಲ್ಲಿದ್ದಾನೆ? ಎಂಬುವುದು ನನಗೆ ಗೊತ್ತಿರಲಿಲ್ಲ. ಗೊತ್ತಿಲ್ಲದ ಆ ಮಹಾ ಪುರುಷನನ್ನು ನಾನು ಶ್ರೀಕೃಷ್ಣ ಎಂದು ಕರೆದೆ. ಭಾರತಕ್ಕೆ ಬಂದು ಶ್ರೀ ಅರವಿಂದರನ್ನು ಕಂಡಾಗ, ಚಿಕ್ಕಂದಿನಲ್ಲಿ ನಾನು ಕಾಣುತ್ತಿದ್ದ ಆ ಮಹಾಪುರುಷನೇ ಇವರೆಂದು ಥಟ್ಟನೆ ಗೊತ್ತಾಯಿತು”.

ಅವರು ಭಾರತೀಯ ನಾಗರಿಕತ್ವವನ್ನು ಪಡೆದ ದಿನ ೧೯೫೪ ಆಗಸ್ಟ್ ೧೫ ರಂದು ಹೀಗೆ ಹೇಳಿದರು:

“೧೯೧೪ರಲ್ಲಿ ನಾನು ಭಾರತಕ್ಕೆ ಮೊದಲ ಬಾರಿ ಬಂದಾಗಲೇ ಇದೇ ನನ್ನ ನಿಜವಾದ ದೇಶ, ಇದು ನನ್ನ ಆತ್ಮಕ್ಕೆ ಮತ್ತು ಸ್ವಭಾವಕ್ಕೆ ತಕ್ಕ ದೇಶ ಎಂಬುವುದು ದಿಟವಾಗಿತ್ತು. … ಶ್ರೀ ಅರವಿಂದರ ಅದರ್ಶದಂತೆ, ಸತ್ಯ ಏಕತೆಯಲ್ಲ ಎಂಬುವುದನ್ನು ತೋರಿಸಬೇಕಾಗಿತ್ತು. ಒಂದು ದೇಶದ ನಾಗರಿಕತ್ವವನ್ನು ಪಡೆಯಲು ಇನ್ನೊಂದನ್ನು ಬಿಡಬೇಕಾಗುವುದು ಆದರ್ಶ ಪರಿಹಾರವಲ್ಲ. ಆದ್ದರಿಂದ ಫ್ರೆಂಚ ನಾಗರಿಕತವ ಉಳಿಸಿಕೊಂಡು ಭಾರತೀಯ ನಾಗರಿಕತ್ವ ಸಾಧ್ಯವೆಂಬುವುದಕ್ಕಾಗಿ ಕಾದಿದ್ದೆ”.

“ನಿನಗೇನು ಅನಿಸುತ್ತದೆ? ಹೇಗೆ ಆ ಅನುಭವ ಆಗುತ್ತದೆ? ಎಂಬುವುದನ್ನು ತಿಳಿಯಲು ಪ್ರಯತ್ನಿಸಿದ್ದೀಯಾ? ಉದಾಹರಣೆ ನೀನು ಯಾವುದಾದರೂ ನಿರ್ಧಾರವನ್ನು ಕೈಗೊಳ್ಳುತ್ತೀ ಎಂದಿಟ್ಟುಕೊ. ಆ ನಿರ್ಧಾರ ಹೇಗೆ ಆಯಿತು ಎಂಬುವುದನ್ನು ತಿಳಿಯಲು ಎಂದೂ ಪ್ರಯತ್ನಸಿಲ್ಲವೇ? ಆ ನಿರ್ಧಾರ ಎಲ್ಲಿಂದ ಬಂತು? ಇದಲ್ಲದೇ ಬೇರೆ ನಿರ್ಧಾರಕ್ಕೆ ಬರುವುದರಲ್ಲಿ ನಿನಗೆಷ್ಟು ಸ್ವಾತಂತ್ಯ್ರವಿದೆ? ಇದನ್ನಾಗಲಿ, ಅದನ್ನಾಗಲಿ, ಮತ್ತೆ ಮತ್ತೇ ಯಾವುದನ್ನೇಆಗಲಿ ಮಾಢುವುದರಲ್ಲಿ ನಿನಗೆಷ್ಟು ಸ್ವಾತಂತ್ಯ್ರವಿದೆ?  ಈ ವಿಚಾರಗಳ ಬಗ್ಗೆ ಯೋಚಿಸಿದ್ದೀಯಾ?… ಇಂಥ ವಿಚಾರಗಳನ್ನು ಕುರಿತು ನನ್ನ ಐದನೇ ವಯಸ್ಸಿನಲ್ಲಿಯೇ ಚಿಂತಿಸುತ್ತಿದ್ದೆ.

“ನಾನು ಐದಾರು ವರ್ಷದವಳಿದ್ದೆ. ನನ್ನನ್ನು ಬಹು ಪ್ರೀತಿಸುತ್ತಿದ್ದ ನನ್ನ ತಂದೆ “ರವಿವಾರ ಸರ್ಕಸ್ಸಿಗೆ ಹೋಗುತ್ತೇನೆ. ನನ್ನೊಡನೆ ಬಾ ಎಂದು ಕರೆದರು. ಅದಕ್ಕೆ ನಾನು “ಇಲ್ಲ. ಸರ್ಕಸ್ ನೋಡುವುದಕ್ಕಿಂತ ಪ್ರೀಯವಾಧ ಕೆಲಸ ಮಾಡುತ್ತಿದ್ದೇನೆ” ಎಂದು ಹೇಳೀದೆ… ಇದರಲ್ಲಿ ನಟನೆ ಏನೂ ಇರಲಿಲ್ಲ…”

ಮೀರಾ ಚಿಕ್ಕಂದಿನಿಂದಲ್ಲಿ ಬಹು ಗಂಭೀರ ಸ್ವಭಾವದ ಹುಡುಗಿ.  ಓರಗೆಯ ಗೆಳತಿಯರೊಡನೆ ಆಟಕ್ಕೂ ಹೋಗುತ್ತಿರಲಿಲ್ಲ. ತಂಟೆ, ಚಕ್ಕಂದದಲ್ಲಿವ ತೊಡಗಿದವಳೇ ಅಲ್ಲ. ಮಗಳ ಈ ಗಂಭೀರ ಸ್ವಭಾವವನ್ನು ನೋಡಿದ ಅವಳ ತಾಯಿ:

“ಏನು ಇಡೀ ಲೋಕದ ಹೊರೆಯನ್ನೇ ಹೊತ್ತು ಕೊಂಡವಳಂತೆ ಕಾಣುತ್ತದೆ” ಎಂದು ತಮಾಶೆ ಮಾಡುವಂತ ಕೇಳಿದರು.

“ಹೌದು” ಎಂದಳು ಮೀರಾ- ಬಹು ಗಂಭೀರವಾಗಿ.

ಐದಾರು ವರ್ಷದ ಹುಡುಗಿ ಹಿಂದು ಮುಂದು ನೋಡದೆ “ಹೌದು” ಎಂದು ಕೊಟ್ಟ ಉತ್ತರದ ಮರ್ಮ, ಶ್ರೀಮಾಜಿ ಮುಂದೆ ಈಲೋಕ ಸಂಗ್ರಹಾರ್ಥವಾಗಿ ತೊಂಬತ್ತೈದು ವರ್ಷಗಳ ತಮ್ಮ ಸುದಿರ್ಘ ಜೀವಿತ ಕಾಲದಲ್ಲಿ ಮಾಡಿದ ಕೆಲಸದಲ್ಲಿ ಕಾಣುತ್ತದೆ.  ಮಾತಾಜಿಯ ಮಹಾ ಕಾರ್ಯದ ಗುಟ್ಟು ದುಃಖತಪ್ತ ಜಗತ್ತಿನ ದುಃಖ  ನಿವಾರಣೆ ಎಂಬುವುದು ಮಗು ಮೀರಾ ಆಡಿದ ಮಾತಿನ ಮರ್ಮ.

ಬಾಲ್ಯ :

ಮೀರಾ ಅವರ ತಾಯಿ ಬಹು ಕಟ್ಟುನಿಟ್ಟಾದ ಮಹಿಳೆ. ಮುದ್ದು ಮಾಡಿ ಮಗುವನ್ನು ಕೆಡಿಸುವಂಥವರಲ್ಲ. ಮಕ್ಕಳ ಮೇಲೆ ಕಡು ಮಮತೆಯಿತ್ತು. ಆದರೆ ಅವರ ನಡತೆ ಶಿಸ್ತಿನ ಬಗ್ಗೆ ಬಹು ಕಾಳಜಿ. ಒಮ್ಮೆ ತಾಯಿ ಯಾವುದೋ ಅಡುಗೆ ಮಾಡಿದ್ದಳೂ, ಅದು ಮಕ್ಕಳಿಗೆ ರುಚಿಸಲಿಲ್ಲ. ಅವರು ಉಣ್ಣಲು ಒಪ್ಪಲಿಲ್ಲ.

“ಇವೊತ್ತಿಗೆ ಇದೇ.ಉಂಡರೆ ಉಣ್ಣಿ ಇಲ್ಲದಿದ್ದರೆ ಉಪವಾಸ ಇರಿ” ಎಂದರು ಆ ತಾಯಿ.

ಮಕ್ಕಳು ಸ್ವಲ್ಪ ಹೊತ್ತ ಹಠ ಮಾಡಿದರು. ಕಡೆಗೆ ಹೊಟ್ಟೆ ಸುಟ್ಟ ಮೇಲೆ ಸುಮ್ಮನೆ ಉಂಡರು. ಆಮೇಲೆ ತಾಯಿ ಹೇಳಿದಳು:

“ಊಟ ನಾಲಿಗೆ ರುಚಿಗಲ್ಲ. ದೇಹ ಪೋಷಣೆಗೆ, ರುಚಿಗೆ ಹೆಚ್ಚು ಪ್ರಾಮುಖ್ಯತೆ ಇರಕೂಡದು.ತಿಳಿಯಿತೇ?”

ಮೀರಾಳ ತಂದೆಯೂ ಅಷ್ಟೇ ಕಟ್ಟುನಿಟ್ಟಾದ ಮನುಷ್ಯ. ಆಗಿನ ಕಾಲದಲ್ಲಿ ಮಕ್ಕಳನ್ನು ಥಳಿಸುವುದು ತಂದೆಗೆ ಸಾಧಾರಣ. ಮೀರಾ ಅವರ ಅಣ್ಣ ಮಟೆಯೂ ಒಮ್ಮೆ ತಂದೆಯ ಬಡಿತಕ್ಕೆ ಬಲಿಯಾದ. ಆಗ ಮೀರಾ ಅಲ್ಲಿಗೆ ಬಂದಳು. ಬಡಿಯುತ್ತಿದ್ದ ತಂದೆಯ ಕಡೆಗೆ ತಿರುಗಿ, “ಇನ್ನೊಮ್ಮೆ ನೀವು ಬಡಿದಿರಾದರೆ ನಾನು ಮನೆ ಬಿಟ್ಟು ಹೋಗುತ್ತೇನೆ” ಎಂದು ಗಂಭೀರವಾಗಿ ಗುಡುಗಿದಳು. ಅಂದಿನಿಂದ ತಂದೆ ಮಗನನ್ನು ಬಡಿಯುವುದನ್ನು ಸಂಪೂರ್ಣ ನಿಲ್ಲಿಸಿಬಿಟ್ಟರು.

ಮೀರಾ ಏಳು ವರ್ಷದವಳಾಗುವವರೆಗೆ ಅಕ್ಷರಾಭ್ಯಾಸವನ್ನೇ ಮಾಡಿರಲಿಲ್ಲ. ಆದರೆ ಮತ್ತೊಂದು ಬಗೆಯ ಅಭ್ಯಾಸದಲ್ಲಿ ಪಾರಂಗತಳಾಗಿದ್ದಳು. ಕೇವಲ ನಾಲ್ಕು ವರ್ಷದವಳಿದ್ದಾಗಲೇ ತಾನು ಈ ಲೋಕದಲ್ಲಿ ಯಾವುದೋ ಒಂದು ಮಹತ್ಕಾರ್ಯ ಮಾಡಲಿಕ್ಕಾಗಿ ಬಂದಿದ್ದೇನೆ ಎಂದು ಅರಿತ್ತಿದ್ದಳು. ತಾನು ಮಾಡಲಿರುವ ಕೆಲಸಕ ಇಡೀ ಲೋಕದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ ಎಂಬುವುದು ಮಗು ಮೀರಾಗೆ ಹೇಗೋ ಗೊತ್ತಾಗಿತ್ತು. ನಾಲ್ಕು ವರ್ಷದ ಬಾಲಕಿ ಧ್ಯಾನಕ್ಕೆ ಕುಳಿತಾಗ,ಒಂದು ಜ್ಯೋತಿರ್ಧಾರೆಯೇ ಅವಳನ್ನು ಆವರಿಸಿಕೊಳ್ಳುತ್ತಿತ್ತು ಎಂಬುವುದಾಗಿ ಮಾತಾಜಿ  ಹೇಳುತ್ತಾರೆ.

ಏಳು ವರ್ಷದವಳಾದರೂ “ಅ ಆ ಇ ಈ ” ಕೂಡ ಬರುತ್ತಿರಲ್ಲಿಲ್ಲ ಮೀರಾಗೆ. ಒಮ್ಮೆ ತನ್ನ ಅಣ್ಣನೊಡನೆ ಬೀದಿಯಲ್ಲಿ ನಡೆದಿದ್ದಳೂ,. ಒಂದು  ದೊಡ್ಡ ಬೋರ್ಡನ್ನು ತೋರಿಸಿ ಅದನ್ನು ಓದಲು ಅವರಣ್ಣ ಹೆಳಿದ.ಅವಳಿಗೆ ಓದಲು ಬರಲಿಲ್ಲ. ಅವನು ಅವಳನ್ನು ಪರಿಹಾಸ್ಯ ಮಾಡಿದ. ಅವಳಿಗೆ ನೋವಾಯಿತು. ವಿದ್ಯಾಭ್ಯಾಸಕ್ಕೆ ತೊಡಗಿದಳು. ಶಾಲೆಗೆ ಸೇರಿಸಿದರು. ಕೇವಲ ಕೆಲವೇ ದಿನಗಳಲ್ಲಿ ಮೀರಾ ತನ್ನ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆದಳು.

 

ಏಳು ವರ್ಷದ ಫ್ರೆಂಚ್ ಹುಡುಗಿ"

ಮೀರಾ ಚಿಕ್ಕಂದಿನಲ್ಲಿಯೇ ಪ್ರಕೃತಿಯೊಡನೆ ತಾದಾತ್ಮ್ಯ ಹೊಂದುತಿತದ್ದಳು. ಗಿಡಮರಬಳ್ಳಿಗಳೊಡನೆ, ಪಶು ಪಕ್ಷಿ ಪ್ರಾಣಿಗಳೊಡನೆ ಮೀರಾ ಒಂದಾಗಿ ಬಿಡುತ್ತಿದ್ದಳು. ಪ್ಯಾರಿಸ್ ಬಳಿ ಒಂದು ಪುರಾತನ ಪ್ರಖ್ಯಾತ ವನವಿತ್ತು. ಅದರಲ್ಲಿ ೩೦೦೦ ವರ್ಷಗಳಷ್ಟು ಹಳೆಯ ಮರಗಳಿದ್ದುವು. ಅಂಥ ಒಂದು ಮರದ ಅಡಿಯಲ್ಲಿ ಅವಳ ಚೇತನ ಒಂದಾಗಿ ಬಿಡುತ್ತಿತ್ತು.

ಹೀಗೆಯೇ ಪಶು ಪಕ್ಷಿ ಪ್ರಾಣಿಗಳೊಡನೆ ಮೀರಾ ತಾದಾತ್ಮ್ಯ ಹೊಂದುತ್ತಿದ್ದಳು. ಪ್ಯಾರಿಸ್ ಬಳಿ ಒಂದು ಉದ್ಯಾನವನದಲ್ಲಿ ಮೃಗಗಳನ್ನು ಸಾಕಿದ್ದರು. ಹೊಸದಾಗಿ ಒಂದು ಮೃಗರಾಜ (ಸಿಂಹ)ನನ್ನು ತಂದಿದ್ದರು. ಅದು ಪಂಜರದಲ್ಲಿ ಅಡಗಿಕೊಂಡಿತ್ತು. ಜನ ಬಂದರೆ ಮುಖ ತೋರಿಸದೇ ಅಡಗಿಕೊಂಡಿತ್ತು. ಜನ ಬಂದರೆ ಮುಖ ತೋರಿಸದೇ ಬಚ್ಚಿಟ್ಟುಕೊಳ್ಳುತ್ತಿತ್ತು. ಮೀರಾ ಆ ಸಿಂಹವನ್ನು ಕುರಿತು ಬಹು ಮೃದು ಮಾತಿನಲ್ಲಿ ಎಂದಳು.”

“ಓ!  ನೀನೆಷ್ಟು ಸುಂದರವಾಗಿದ್ದ! ಅದೇಕೆ ಬಚ್ಚಿಟ್ಟುಕೊಳ್ಳುತ್ತೀ? ನಾವು ನಿನ್ನನ್ನೇ ನೋಡಲೆಂದೇ ಬಂದಿದ್ದೇವೆ. ನಮಗೆ ಎಷ್ಟು ಅಪೇಕ್ಷೆ…. ”

“ಈ ಮಾತನ್ನು ಕೇಳಿದ್ದೇ ತಡ. ಸಿಂಹ ನಿಧಾನವಾಗಿ ಬಾಗಿಲ ಹಿಂದಿನಿಂದ ಇಣುಕಿ ಹಾಕತೊಡಗಿತು. ಕತ್ತುಚಾಚಿ ನನ್ನನ್ನು ನೋಡತೊಡಗಿತು. ಮೇಲೆದ್ದು ಬಂದು ಬಾಗಿಲು ಸರಳುಗಳಿಗೆ ತನ್ನ ಮೂತಿ ತಾಗಿಸಿ ನಿಂತಿತು. ಬಹುಶಃ ಅದು ಅಂದುಕೊಂಡಿರಬೇಕು: “ಅಂತೂ ನನ್ನನ್ನೂ ತಿಳಿದುಕೊಳ್ಳುವ ಒಬ್ಬರಾದರೂ ಇದ್ದಾರಲ್ಲ” ಎಂದು”.

ಗಟ್ಟಿ ಮನಸ್ಸಿನ ಹುಡುಗಿ :

ಮೀರಾ ಬಹು ಗಂಭೀರ ಸ್ವಭಾವದ ಹುಡುಗಿ. ಮಾತಿನಲ್ಲಿ ಮಿತ. ನಡತೆಯಲ್ಲಿ ಪರಿಶುದ್ಧ. ಬಹು ಸ್ಫುರದ್ರೂಪಿ. ಕಡು ಜಾಣೆ. ಆದ್ದರಿಂದ ತರಗತಿಒಯಲ್ಲಿ ಅವಳನ್ನು “ರಾಜಕುಮಾರಿ” ಎಂದು ಕರೆಯುತ್ತಿದ್ದರು.

ಒಮ್ಮೆ ಶಾಲೆಯ ಬಾಲಕ ಬಾಲಕಿಯರಲ್ಲಿ ಏನೋ ಜಗಳವುಂಟಾಯಿತು. ಹುಡುಗರೆಲ್ಲಾ ಪುಂಡಾಟಕ್ಕೆ ತೊಡಗಿದರು. ಹುಡುಗಿಯರು ಅಂಜಿ ಶಾಲೆಯ  ಕೊಠಡಿಯಲ್ಲಿ ಅವಿತುಕೊಂಡರು. ಹೊರಗೆ ಹುಡುಗರು ಶಾಲಾ ಕೊಠಡಿಯಲ್ಲಿ ಸುತ್ತುವರಿದು ವಿಪರೀತ ಗದ್ದಲ ಮಾಡತೊಡಗಿದರು. ಆಗ ಮೀರಾ ಕೊಠಡಿಯಿಂದ ಹೊರಗೆ ಹೋಗಲು ಹವಣಿಸಿದಳು. ಗೆಳತಿಯರು ಬೇಡಬೇಡವೆಂದು ಎಷ್ಟು ಹೇಳಿದರೂ ಕೇಳದೇ ಬಾಗಿಲು ತೆಗೆದು ಪುಂಡು ಹುಡುಗರ ಮಧ್ಯೆ ಠೀವಿಯಿಂದ ನಡೆದಳು. ಹುಡುಗಿಯರನ್ನು ಹೊರಗೆ ಬಿಡದೆ ಸುತ್ತುಗಟ್ಟಿ ಕಾಡುತ್ತಿದ್ದ ಆ ಪುಂಡರು ಮೀರಾ ಬಂದೊಡನೆಯೇ ದಾರಿ ಬಿಟ್ಟು ರಾಜಕುಮಾರಿಗೆ ವಂದನೆ  ಮಾಡುವಂತೆ ಇಕ್ಕೆಲದಲ್ಲಿ ನಿಂತುಕೊಂಡರು. ಮೀರಾ ಕೈ ಬೀಸಿಕೊಂಡು ಅವರ ಮಧ್ಯದಲ್ಲಿ ಗಂಭೀರವಾಗಿ ಸರಸರ ನಡೆದುಬಿಟ್ಟಳು. ಒಮ್ಮೆ ಹುಡುಗರು ಕೀಟಲೆ ಮಾಡುತ್ತಾರೆಂದು ಹುಡುಗಿಯರು ಮಾತಾಜಿಯ ಮುಂದೆ ದೂರಿಕೊಂಡರು. ಅದಕ್ಕೆ ಮಾತಾಜಿ ಹೇಳಿದರು:

“ಹುಡುಗಿಯರು ನಿಜವಾಗಿಯೂ ಗಟ್ಟಿ ಮನಸ್ಸಿನವರಾದರೆ ಹುಡುಗರು ಏನೂ ಮಾಡಲಾರರು. ತನ್ನತ್ತ ಎಲ್ಲರೂ ನೋಡಬೇಕೆಂಬ ಒಂದು ತರದ ರುಚಿ ಇದ್ದರೆ ಮಾತ್ರ ಹುಡುಗರು ದಾರಿ ತಪ್ಪಿ ನಡೆಯಲು  ಉತ್ತೇಜನ ದೊರೆಯುತ್ತದೆ”.

ಮೀರಾ ಬಹು ಸ್ಪುರದೂರಪಿ ಎಂದು ಹಿಂದೆ ಹೇಳಿದೆ. ಪ್ಯಾರಿಸ್ ಶಹರದಂಥ ವಿಲಾಸಜೀವನ ಜಗತ್ತಿನಲ್ಲಿ ಎಲ್ಲಿಯೂ ಇದ್ದಿರಲಾರದು. ಹೀಗಿದ್ದರೂ ಆ ವಿಲಾಸ ಜೀವನದಿಂದ ಒಂದಿಷ್ಟೂ ಆಕರ್ಷಿತಳಾದವಳಲ್ಲ. ಹೀಗೆ ವಿಲಾಸ ಜೀವನದ ಮಧ್ಯದಲ್ಲಿದ್ದರೂ, ಅದರಿಂದ ದೂರವಿರುವುದು ತನಗೆ ಸಾಧ್ಯವಾದರೆ ಇತರರಿಗೂ ಏಕೆ ಸಾಧ್ಯವಿಲ್ಲ ಎಂದು  ಹೇಳುತ್ತಿದ್ದಳು ನಡತೆ ಶುದ್ಧವಾಗಿಲ್ಲದಿದ್ದರೆ, ನೀತಿ ಗೆಟ್ಟರೆ ಏನೊಂದು ಒಳ್ಳೆಯದನ್ನು ಮಾಡಲು ಸಮರ್ಥರಾಗುವುದಿಲ್ಲ ಎನ್ನತ್ತಾರೆ, ಮಾತಾಜಿ.

ಪ್ರತಿಭೆ :

ಮೀರಾ ಪರಿಶುದ್ಧ ನಡತೆಯಿಂದ ಬಾಳೀದ ಬಹು ಒಳ್ಳೆಯ ಹುಡುಗಿ. ಒಳ್ಳೆಯವರು ಜಾಣರಾಗಿರುವುದು ವಿರಳ. ಆದರೆ ಮೀರಾ ಅಸಾಧಾರಣ ಬುದ್ಧಿವಂತೆ. ಆ ಚಿಕ್ಕ ವಯಸ್ಸಿನಲ್ಲಿ- ಹದಿಮೂರು ಹದಿನಾಲ್ಕು ವರ್ಷದವಳಿದ್ದಾಗ-ಅತ್ಯುತ್ತಮ ಸಣ್ಣಕತೆ, ಪ್ರಬಂಧಗಳನ್ನು ರಚಿಸುತ್ತಿದ್ದಳು.

ಭಾಷಾಜ್ಞಾನ , ಪ್ರಬಂಧ ರಚನೆ, ಕಥಾರಚನೆಗೇ ಮೀರಾಳ ಪ್ರತಿಭೆ ಸೀಮಿತವಾಗಿರಲಿಲ್ಲ. ಆ ಚಿಕ್ಕ ವಯಸ್ಸಿನಲ್ಲಿಯೇ ಅತ್ಯುತ್ತಮ ಚಿತ್ರಗಳನ್ನು ಬರೆಯುತ್ತಿದ್ದಳು. ಪ್ಯಾರಿಸ್ನಲ್ಲಿ ಆಗ ಇದ್ದ ಪ್ರಖ್ಯಾತ ಚಿತ್ರಕಾರರನ್ನೆಲ್ಲ ಕಂಡಿದ್ದಳು. ಅವರ ಚಿತ್ರಗಳ ಕಲಾ ಕೌಶಲವನ್ನು ಮೆಚ್ಚುವಷ್ಟು ಕಲಾಭಿರುಚಿ ಕಲಾವಿಮರ್ಶೆ ಬೆಳೆದಿತ್ತು. ಬಾಳೆಲ್ಲವೂ ಒಂದು ಕಲೆ ಎಂಬಂತೆ ಮಾತಾಜಿ ಸ್ವತಃ ತಮ್ಮ ಜೀವನವನ್ನು ಬಾಳಿದರು. ಮುಂದೆ ಅವರು ಪಾಂಡಿಚೇರಿಯಲ್ಲಿ ನೆಲೆಸಿದ ಮೇಲೆ ಶ್ರೀ ಅರವಿಂದಾಶ್ರಮ ರೂಪಿಸಿದಾಗ ಅವರ ಕಲಾದೃಷ್ಟಿ ಕಲಾನೈಪುಣ್ಯ ಪ್ರತಿಯೊಂದರಲ್ಲೂ ಪ್ರತಿಬಿಂಬಿತವಾದುದನ್ನು ಕಾಣುತ್ತೇವೆ.

ಮೀರಾ ಸಂಗೀತದಲ್ಲಿ ಅದ್ಭುತ ಪ್ರಾವಿಣ್ಯ ಪಡೆದಿದ್ದಳು. ವಾದ್ಯಗಳನ್ನು ನುಡಿಸುವುದರಲ್ಲಿ ಹೇಗೋ ಹಾಡುವುದರಲ್ಲಿಯೂ ಹಾಗೆಯೇ ಅಗಾಧ ನೈಪುಣ್ಯತೆಯಿತ್ತು. ಮಾತಾಜಿ ಭಾರತದಲ್ಲಿ ನೆಲೆಸಿದ ಮೇಲೆ ಭಾರತೀಯ ಸಂಗೀತವನ್ನು ತಿಳಿದುಕೊಂಡರು. ಸಂಗೀತ ಕಲೆ ಪ್ರಾಚ್ಯ ಪಾಶ್ಚತ್ಯಗಳ ಸಂಗೀತದ ಮಧುರ ಮಿಲನ ಆಗಿದ್ದುದನ್ನು ಸಂಗೀತಬಲ್ಲವರು ಕಂಡಿದ್ದಾರೆ. ಸಂಗೀತದ ಮೂಲಕ  ಯೋಗ ಸಾಧನೆ ಮಾಡುವುದನ್ನು ಮಾತಾಜಿ ಬಹುವಾಗಿ ಪ್ರೋತ್ಸಾಹಿಸಿದ್ದರು.

ಮೀರಾ ನಾಟಕ ಕಲೆಯನ್ನು ಸಾಧಿಸಿದ್ದಳು. ಬಾಲಕಿ ಮೀರಾಳ ಅಭಿನಯಚಾತುರ್ಯವನ್ನು ಮೆಚ್ಚಿ ಸುಪ್ರಸಿದ್ದ ಕಾಮೆಡಿ ಫ್ರಾಂಕಾಯ್ಸ್ ಸಂಸ್ಥೇಯನ್ನು ಸೇರಲು ಆಮಂತ್ರಣ ಬಂತು. ಸಹಜವಾಗಿ ಮೀರಾ ಅವರ ಕರೆಯನ್ನು ಮನ್ನಿಸಲಿಲ್ಲ.

ಚಿಕ್ಕಂದಿನಲ್ಲಿಯೇ ಮೀರಾ ಸಾಧಿಸಿದ ಸಕಲ ಕಲಾ ಪ್ರಾವಿಣ್ಯತೆಯನ್ನು ನೋಡಿದರೆ, ಇದೇನು ಕಟ್ಟು ಕತೆಯೋ, ದೊಡ್ಡವರ ಬಗ್ಗೆ ಸಾಧಾರಣವಾಗಿ ಹುಟ್ಟಿಕೊಳ್ಳುವ ದಂತಕತೆಯೋ ಎನಿಸಬಹುದು. ಇಷ್ಟೆಲ್ಲ ಅಂಥ ಚಿಕ್ಕ ಹುಡುಗಿಗೆ ಸಾಧ್ಯವಾಗಿದ್ದಿರಬಹುದೆ? ಇದಕ್ಕೆ ಮಾತಾಜಿಯವರೇ ಒಂದು ಕಡೆ, ಇನ್ನೊಂದು ಸಂದರ್ಭದಲ್ಲಿ ಉತ್ತರ ಕೊಟ್ಟಿದ್ದಾರೆ.

“ಏಕಾಗ್ರತೆಯನ್ನು ಸಾಧಿಸಲು ಗೊತ್ತಿಲ್ಲದ್ದವರಿಗೆ ಯಾವುದು ಅಸಾಧ್ಯವಲ್ಲ. ಕೇವಲ ಇಚ್ಛಾ ಮಾತ್ರದಿಂದ ಏನನ್ನಾದರೂ ಕರಗತಮಾಡಿಕೊಳ್ಳಬಹುದು. ಸಕಲ ವಿದ್ಯೆಗಳಲ್ಲಿಯೂ ಪಾರಂಗತರಾಗುವುದು ಕಷ್ಟವಲ್ಲ” ಎಂಬುವುದಾಗಿ ಹೇಳಿದ್ದಾರೆ.

ಈ ಮಾತನ್ನು ತಮ್ಮ ಜೀವನದಲ್ಲಿ ಬಹುಚಿಕ್ಕವರಿದ್ದಾಗಲೇ ಮಾತಾಜಿ ದಿಟಮಾಡಿ ತೋರಿಸಿದರು. ಅವರು ಯಾವುದೇ ವಿಷಯವನ್ನು ಕೈಗೆತ್ತಿಕೊಂಡರೂ ಅದನ್ನು ಸಂಪೂರ್ಣವಾಗಿ ಸಾಧಿಸುತ್ತಿದ್ದರು.

ಆತ್ಮವಿದ್ಯೆಯ ಬೀಜ

ಮೀರಾ ಚಿಕ್ಕಂದಿನಲ್ಲಿ ಲೌಕಿಕ ವಿದ್ಯೆ, ಕಲೆಗಳಲ್ಲಿ ಪರಿಣಿತಿ ಪಡೆದುದನ್ನು ಕಾಣುತ್ತೇವೆ. ಹಾಗಾದರೆ ಆತ್ಮವಿದ್ಯೆಯ ಕಡೆಗೆ ಯಾವಾಗ ಗಮನ ಹರಿಸಿದರು? ಏಕೆ ಹರಿಸಿದರು? ಹೇಗೆ ಮುಂದುವರೆಸಿದರು? ತನ್ನಷ್ಟಕ್ಕೆ ತಾನು ಕುಳಿತುಕೊಂಡವಳಲ್ಲ. ಇಹವನ್ನು ಮರೆತೂ ಅಥವಾ ತಿರಸ್ಕರಿಸಿ ಪರವನ್ನು ಅರಸಿದವಳಲ್ಲ. ಅದು ಅಧ್ಯಾತ್ಮವೇ ಆಲ್ಲ. ಆದ್ದರಿಂದಲೇ ಮೀರಾ ಎಲ್ಲಾಲೌಕಿಕ ವಿದ್ಯೆಗಳನ್ನೂ ಕಲಿತಳು. ಹಾಗೆಯೇ ಆ ಚಿಕ್ಕ ವಯಸ್ಸಿಹಲ್ಲಿಯೇ ಪ್ಯಾರಿಸ್ ನಗರದಲ್ಲಿ ಓರಗೆಯ ಗೆಳೆಯ ಗೆಳೆತಿಯರೊಡನೆ ಕೂಡಿಕೊಂಡು ಆತ್ಮ ಚಿಂತನೆಯಲ್ಲಿ ತೊಡಗುತ್ತಿದ್ದಳು. ಅವರಿಗೆ ಅದೃಶ್ಯ ಶಕ್ತಿಯ ಕುರಿತು ಜಿಜ್ಞಾಸೆ. ಅದನ್ನು ಕುರಿತು ಚರ್ಚೆ ಮಾಡುತ್ತಿದ್ದರು.  ತಮ್ಮ ತಮ್ಮ ಅನುಭವಗಳನ್ನು ಹೇಳಿಕೊಳ್ಳುತ್ತಿದ್ದರು. ಆ ಚರ್ಚೆ, ಅನುಭವಗಳ ಕೇಂದ್ರ ಮತ್ತು ಆತ್ಮ” ಮೇಡಂ ಮೀರಾ.”. ಆ ವ್ಯಾಸಂಗ ಗೋಷಿಠಯಲ್ಲಿ ಆತ್ಮಚಿಂತಕರು ಸೇರುತ್ತಿದ್ದರು. ಮೀರಾ ತನ್ನ ಅನುಭವಗಳನ್ನು ದೃಷ್ಟಾಂತ ಕಥಾ ರೂಪದಲ್ಲಿ ಪ್ರಬಂಧಗಳಲ್ಲಿ ಬರೆದು ಆ ಗೋಷ್ಠಿಗಳಲ್ಲಿ ಓದುತ್ತಿದ್ದರು. ಅವರ ಆ ಬರಹಗಳನ್ನು  ಮುಂದೆ “ವರ್ಡ್ಸ ಅರ್ಫ  ಲಾಂಗ್ ಎಗೋ” ಎಂಬ ಹೆಸರಿನಿಂದ ಶ್ರೀ ಅರವಿಂದಾಶ್ರಮವು ಪ್ರಕಟಿಸಿತು.

ಅಂಥಾ ಒಂದು ಸಣ್ಣ ಕತೆ ಹೀಗಿದೆ: ವಿದ್ಯಾರ್ಥಿಯೊಬ್ಬ ನಿದ್ದೆ ಹೋಗುತ್ತಾನೆ. ಕನಸು ಬೀಳುತ್ತದೆ. ಎಲ್ಲಿಗೋ ಹೊರಟಿದ್ದಾನೆ. ಶುಭ್ರ ಆಕಾಶ, ಹೊಂಬಿಸಿಲು ಬಿದ್ದಿದೆ. ಹಕ್ಕಿಗಳು ಉಲಿಯುತ್ತಿವೆ. ಅತ್ಯಂತ ಹರ್ಷ ತುಂಬಿದೆ. ಹರ್ಷದ ಹೆದ್ದಾರೆಯ ಮೇಲೆ ತೇಲಿ ತೇಲಿ ಹೋಗುತ್ತಾನೆ. ಅದಾಗ್ಯೂ ಯಾವುದೋ ಒಂದು, ಬಾಯಿಂದ ಹೇಳಲು ಬಾರದ, ಅತೃಪ್ತಿ, ಬಾಯ್ದೆರೆದುಕೊಂಡಿದೆ.  ತನ್ನ ಮನದ ಆಳದಲ್ಲಿ “ನಾನಾರು? ಎಲ್ಲಿಗೆ ಹೋಗುತ್ತಿದ್ದೇನೆ? (ಅವನಿಗೆ ಅನಿಸುತ್ತದೆ,) ಅದರ ಗೊಡವೆ ಏಕೆ?  ಚಿಂತೆ ಏಕೆ?  ಎನನ್ನಾದರೂ ಏಕೆ ಮಾಡಬೇಕು? ಕೊನೆ ಇಲ್ಲದ ಈ ಹಾದಿಯಲ್ಲಿ ಕರೆದತ್ತ ಹೋಗೋಣ.ನಾಳೆ ಯೋಚಿಸಿದರೆ ಆಯಿತು… ಕೊನೆಗೆ ಹೋಗುತ್ತಾನೆ ಸಾವಿನ ಸಾಮ್ರಾಜ್ಯಕ್ಕೆ. ಆಗ ದಿಗ್ಗನ್ನೆದ್ದು ಕಣ್ ಪಿಳುಕಿಸಿ, ಕಣ್ ಅರಳಿಸಿ ನೋಡುತ್ತಾನೆ. ಏನು ಎಲ್ಲಿಗೆ ಬಂದೆ? ಮುಂದೆಲ್ಲಿಗೆ ? ನಾಳೆ ನಾಳೆ ಎನ್ನುತ್ತ ಕೊನೆಯ ಗಳಿಗೆಗೆ  ಬಂದುಬಿಟ್ಟಿದೆ. ನಾಟಕ ನೋಡಲೆಂದು ಬಂದವನು, ನಾಟಕ ಶುರುವಾಗಿಲ್ಲವೆಂದು ಚಾಪೆ ಹಾಸಿಕೊಂಡು ಮಲಗಿದನಂತೆ. ಅವನಿಗೆ ಎಚ್ಚರವಾದಾಗ ನಟಕ ಮುಗಿದುಹೋಗಿತ್ತಂತೆ! ವಯಸ್ಸಾದ ಮೇಲೆ ಆತ್ಮ ಚಿಂತೆ ಮಾಢೋಣ ಎಂದವನ ಗತಿ ಇದು. ನಾಳೆ ಎಂದವನು ಬಾಳು ಹಾಳು”.

ದಿ ಐಡಿಯ

ಪ್ಯಾರಿಸ್ ನಗರದಲ್ಲಿ ಸೇರುತ್ತಿದ್ದ ಆ ಜಿಜ್ಞಾಸೆಗಳ ಬಳಗಕ್ಕೆ “ಧ್ಯೇಯ” (ದಿ ಐಡಿಯ)” ಎಂಬ ಹೆಸರು. ಅಲ್ಲಿ ಗೀತೆ, ಉಪನಿಷತ್ತು, ಪಾತಂಝಲಿ ಯೋಗಸೂತ್ರ, ನಾರದನ ಭಕ್ತಿಸೂತ್ರ ಧರ್ಮಪರ ಮುಂತಾದ ಭಾರತೀಯ ತತ್ವಶಾಸ್ತ್ರ ಗ್ರಂಥಗಳ ಅನುವಾದಗಳನ್ನು ವ್ಯಾಸಂಗ ಮಾಡುತ್ತಿದ್ದರು. ಆ ವ್ಯಾಸಂಗ ಗೋಷ್ಠಿಗಳ ಕೊನೆಯಲ್ಲಿ ಯಾವುದಾದರೂ ಒಂದು ಪ್ರಶ್ನೆಯನ್ನು ಯಾರಾದರೂ  ಕೇಳುತ್ತಿದ್ದರು. ಆ ಪ್ರಶ್ನೆಗೆ ಅಲ್ಲಿದ್ದವರೆಲ್ಲ ತಮ್ಮ ತಮ್ಮ ಉತ್ತರ ಕೊಡುತ್ತಿದ್ದರು. ಆ ಉತ್ತರಗಳನ್ನು ಬರೆದುಕೊಂಡು, ಮುಂದಿನ ಗೋಷ್ಟಿ ಸೇರಿದಾಗ ಮತ್ತೇ ಅವುಗಳನ್ನು ಓದಿ ಮನನ ಮಾಡುತ್ತಿದ್ದರು. ಆ ಪ್ರಶ್ನೋತ್ತರಗಳು ಮುಗಿದ ಮೇಲೆ ಸಣ್ಣದೊಂದು ಪ್ರಬಂಧವನ್ನು ಓದುತ್ತಿದ್ದರು.

ಅಂಥ ಒಂದು ಗೋಷ್ಠಿಯಲ್ಲಿ  ಮೀರಾ ಕೇಳಿದ ಮೊಟ್ಟ ಮೊದಲ ಪ್ರಶ್ನೆ : ಈ ವಿಶ್ವಕರ್ಮದಲ್ಲಿ ನನ್ನ ಪಾತ್ರವೇನು?” ಎಂಬುವುದು. ಅದಕ್ಕೆ ಉತ್ತರ ಕೊಡುತ್ತಾರೆ: ಕರ್ಮ ಮಾಡಲೇಬೇಕು. ಅದನ್ನು ಬಿಡುವಂತಿಲ್ಲ. ಕಾಯಕ ಅನಿವಾರ್ಯ: ಕೇವಲ  ಅಗತ್ಯ. ಹಾಗಾದರೆ ನಾವು ಮಾಡಬೇಕಾದ ನಿರ್ಧಿಷ್ಟ ಕರ್ಮ ಯಾವುದು? ಕೆಲವು ಕೆಲಸ ಮೇಲು, ಕೆಲವು ಕೀಳೂ ಎಂದೂ: ಮತ್ತೇ ಕೆಲವು ಆಗಲಾರದ ಅವ್ಯವಹಾರ ಕರ್ಮ ಎಂದೂ, ಕೆಲವು ಕೆಲಸಗಳಿಗೆ ಹೆಚ್ಚಿನ ಸಂಭಾವನೆ: ಹೆಚ್ಚು ಗೌರವ ಏಕೆ?

ಪ್ರಶ್ನೆ ಕೇಳಿದ ಮೇಲೆ ಜಿಜ್ಞಾಸೆ, ಚಿಂತನೆ ನಡೆಯುತ್ತದೆ. ಮಥನವಾಗಿ ಕೊನೆಗೆ ಮೀರಾ  ಉತ್ತರ ಕೊಡುತ್ತಾರೆ:

“ನಾನು ದೊಡ್ಡವನಾಗಬೇಕು: ದೊಡ್ಡವನಾಗಲು, ಯಾವ ಕೆಲಸವನ್ನು ಆರಿಸಿಕೊಳ್ಳಬೇಕು ಎಂಬ ಭಾವನೆ ಎಂದೆಂದಿಗೂ ಬಾರದಿರಲಿ. ಆ ಮಾತನ್ನು ಎಂದಿಗೂ ಬಿಚ್ಚು ಮಾತಿನಲ್ಲಿ ಅಥವಾ ಮುಚ್ಚು ಮರೆಯಲ್ಲಿ ಆಡದಿರಲಿ. ಅದರ ಬದಲು ಏನೇ ಕೆಲಸವನ್ನಾಗಲಿ, ಅತಿ ವಿನಯವಿಲ್ಲದೆ ಇಲ್ಲವೆ ಅತಿ ಜಂಭವಿಲ್ಲದೆ, ಉಸಿರಾಡಿದಷ್ಟು ಸಹಜವಾಗಿ ಮಾಡೋಣ. ಹೂವು ಪರಿಮಳ ಕೊಡುವಂತೆ ಸರಳವಾಗಿ ಸಹಜವಾಗಿ ಯಾವ ಕಾರ್ಯವನ್ನಾದರೂ ಮಾಡೋಣ. ನಾವೆಲ್ಲರೂ ದೈವಿಶಕ್ತಿಯ ಅಭಿವ್ಯಕ್ತಿ. ಯಾರಿಗಿಂತ ಉತ್ತಮವಾಗಿ ಯಾವುದೇ ಕೆಲಸವನ್ನಾದರೂ ಮಾಡೋಣ ಎಂಬುವುದಾಗಿ ಭಾವಿಸಿಕೊಳ್ಳೀ.

ಮೀರಾ ಬಾಲಕಿಯಾಗಿ ಆಡಿದ ಮಾತು ಅವರ ಯೋಗಪದ್ಧತಿಯ ಅಡಿಪಾಯ.  ಈತಳಹದಿಯ ಮೇಲೆ ಅವರು ಶ್ರೀ ಅರವಿಂದಾಶ್ರಮವನ್ನು ಕಟ್ಟಿದರು. ಶ್ರೀ ಅರವಿಂದ ದರ್ಶನದ ಸಾರಸರ್ವಸ್ವ ಎಂದರೆ, ಆತ್ಮ ಸಾಕ್ಷತ್ಕಾರಕ್ಕೆ ಲೋಕತ್ಯಾಜ್ಯ ಅಗತ್ಯವಿಲ್ಲ, ಮುಕ್ತಿ ಎಂಬುವುದು ಸತ್ತಮೇಲೆ ಸಿಗುವ ಸ್ಥಿತಿಯಲ್ಲ. ಬದುಕಿರುವಾಗಲೇಲೋಕದಲ್ಲಿದ್ದೇ ಪಡೆಯಬೇಕಾಧ ಸ್ಥಿತಿ. ಅದಕ್ಕೆ ಕಾಯಕ-ಬದುಕಿರಲು ಉಸಿರಾಡುವಂತೆ, ಅನಿವಾರ್ಯ. ಶ್ರೀ ಅರವಿಂದರ ಈ ದರ್ಶನಕ್ಕೆ ಮೂರ್ತ ಸ್ವರೂಪ ಕೊಡಲು ಕ್ರಿಯಾಶಕ್ತಿಯಾಗಿ ಮಾತಾಜಿ ಬಂದರು. ಆಶ್ರಮವನ್ನು ಕಟ್ಟಿದರು.

ಅಲೌಕಿಕ ಶಕ್ತಿಯ ಅಧ್ಯಯನ :

ಆಧ್ಯಾತ್ಮಿಕ ಸಾಧನೆ ಎಂದೋಡನೆ ಅಲೌಕಿಕ ಶಕ್ತಿ ಸಂಗ್ರಹ ಎಂಬೊಂದು ಭಾವನೆ ಸಾರ್ವತ್ರಿಕವಾಗಿ ಎಲ್ಲ ಕಾಲ ದೇಶದಲ್ಲೂ ಸರ್ವ ಸಾಧಾರಣವಾಗಿ ಬಲವಾಗಿ ಬೇರೂರಿದೆ. ಯೋಗಸಾಧನೆ ಎಂದರೆ ಅಲೌಕಿಕ ಶಕ್ತಿಗಳ ಸಿದ್ಧಿಸಾಧನೆ ಎಂದೇ ನಂಬಿದ್ದಾರೆ. ಆದರೆ ಮಾತಾಜಿ ಹೇಳುತ್ತಾರೆ, “ಸಿದ್ದಿಗಳಿಗೂ  ಅಧ್ಯಾತ್ಮಕ ಪ್ರಗತಿಗೂ ಏನೇನೂ ಸಂಬಂಧವಿಲ್ಲ. ಯಾವ ಸಿದ್ಧಿಗಳನ್ನೂ ಪಡೆಯದವರು ಅಧ್ಯಾತ್ಮಿಕಕ್ಕೆ ಬಹುದೂರ ಇರಬಹುದು”.

ಜೀವದ ಮೂಲ ಸಮಸ್ಯೆ ಏನು? ಅದರ ಸಂಕಟವೇನೂ? ಅದರಿಂದ ಪಾರಾಗುವುದು ಹೇಗೆ ? ನಾನು ನನ್ನದು ಎಂಬ ಸಂಕುಚಿತ ಅಡಕೊತ್ತಿನಲ್ಲಿ ಸಿಕ್ಕಿ ಬಿದ್ದಿರುವುದೇ ಜೀವದ ಮಹಾಸಂಕಟ. ಆ ಅಡಕೊತ್ತಿನಿಂದ ಪಾರಾಗುವುದೇ ಅದಕ್ಕಿರುವ ಪರಿಹಾರ. ಅದರಿಂದ ಪಾರಾಗಲು ಜೀವ “ಜಗದಗಲ, ಮುಗಿಲಗಲ, ನಿಮ್ಮಗಲ, ಆಗಬೇಕು. ಈ ಜೀವಾತ್ಮ ವಿಶ್ವದೊಡನೆ, ವಿಶ್ವೋತ್ತೀರ್ಣದೊಡನೆ ಒಂದಾಗಬೇಕು. ಹಾಗೆ ಒಂದಾದರೆ ನಾನು ನೀನು, ಆತ್ಮ ಅನಾತ್ಮ, ಎಂಬ ಭೇದವಳಿದು ಸರ್ವವೂ ತಾನೇ: ತನ್ನಲ್ಲಿಯೆ ಸರ್ವ ಎಂಬ ಸ್ಥಿತಿ ಉಂಟಾಗುತ್ತದೆ.  ಆಗ ಕಾಲ ದೇಶದ ಎಲ್ಲೆ  ಮೀರಿ ಎಲ್ಲೆಲ್ಲಿಯೂ ಎಲ್ಲದರಲ್ಲೂ ತಾದಾತ್ಮ, ಅನುಸಂದಾನ ಎಡೆಬಿಡದೆ ನಡೆಯುತ್ತದೆ.

ಮೀರಾ ಚಿಕ್ಕವಳಿದ್ದಾಗ, ಬಾಲ್ಯ ಕಳೆದು ಯೌವನ ಪ್ರಾಪ್ತಿ, ಆದಾಗ- ಈ ಆಲೌಕಿಕ ಶಕ್ತಿಯ, ರಹಸ್ಯ ವಿದ್ಯೆಯ (ಅಕ್ಕಲ್ಟಿಸಮ್) ಗುಟ್ಟೇನು) ಎಂಬುವುದನ್ನು ತಿಳಿಯುವ ಜಿಜ್ಞಾಸೆ. ಆಯಿತು.  ೧೯೦೨ರಲ್ಲಿ ಮೀರಾ ಆಲ್ಜೀರಿಯಾ ದೇಶದ ಕ್ಲೇಮಸೆಲ್ ನಗರಕ್ಕೆ ಹೋದರು. ಅಲ್ಲಿ ಗುಪ್ತವಿದ್ಯೆಯಲ್ಲಿ ಪಾರಂಗತನಾದ ದಿಯೋನ್ ಎಂಬ ಸಿದ್ಧಪುರುಷನಲ್ಲಿ ಆ ವಿದ್ಯೆಯ ಬಗ್ಗೆ ಹೆಚ್ಚು ತರಬೇತಿ ಪಡೆದರು. ಅವರ ಮಾರ್ಗದರ್ಶನದಲ್ಲಿ ಮೀರಾ ಬಹು ದೂರ ಮುಂದೆ ಸಾಗಿದರು. ಸಿದ್ಧಿಗಳು ಕೈವಶವಾದವು. ಗರಿಮಾ ಲಘಮಾ ಸಿದ್ಧಿಗಳು ಲಭಿಸಿದವು. ಮುಂದೆ ಅವರೇ ಹೇಳಿದಂತೆ.

“ಎದ್ದೇಳಬೇಕೆಂದು ನಾನು ನಿರ್ಧರಿಸಿದೊಡನೆ ಯಾವ ಶ್ರಮವೂ ಇಲ್ಲದೆ ಎತ್ತಿ ಎಸೆದಂತೆ ನೆಗೆದು ಮೇಲೆಳುತ್ತಿದ್ದೆ. ಅವರು (ನನ್ನ ಗೆಳತಿಯರು) “ಅದು ಹೇಗೆ ಸಾಧ್ಯ”ಎಂದು ಕೇಳುತ್ತಿದ್ದರು.  ಅವರಿಗೆ ಅಷ್ಟೊಂದು ಆಶ್ಚರ್ಯ. ನನಗೇನಾದರೂ ಅವರು ಪಡುವ ಶ್ರಮ ಆಶ್ಚರ್ಯಕರವಾಗಿ ಕಾಣುತ್ತಿತು.

ಇಂಥ ಎಷ್ಟೋ ಪವಾಡದಂಥ ಸಿದ್ದಿ ಲಭಿಸಿದರೂ, ಮೀರಾ ಅವುಗಳ ಪ್ರಯೋಜನವೇನು, ಯಾವಾಗ,  ಎಷ್ಟು ಏತಕ್ಕಾಗಿ ಆ ಶಕ್ತಿಯನ್ನು ಬಳಸಬೇಕು ಎಂಬುವುದನ್ನು ಅರಿತುಕೊಂಡರು. ಸಿದ್ಧಪುರುಷರಿಗೆ ಇತರರ ರೋಗ ನಿವಾರಣಾಶಕ್ತಿ ಇರುವುದು ಸಾಧಾರಣ.ನಿಜವಾದ ಯೋಗಿಗಳು ಈ ಸಿದ್ಧಿಗಳನ್ನು ಬಳಸುವುದಿಲ್ಲ. ಬಳಸಿಕೊಂಡವರು ಅಹಂಕಾರ  ತುಂಬಿ ಸ್ವಪ್ರತಿಷ್ಠೆಯ ಕುಣಿಗೆ ಬಿದ್ದು ಹೋಗುತ್ತಾರೆ. ಸಿದ್ಧಿಗಳ ನಿಜವಾದ ಬೆಲೆ ಮೀರಾಗೆ ಗೊತ್ತಿತ್ತು. ಹಾಗೂ ಅವುಗಳ ಬಳಕೆಯ ಔಚಿತ್ಯವೂ ಗೊತ್ತಾಯಿತು. ಆದ್ದರಿಂದಲೇ ಮೀರಾ ಮಾತಾಜಿ ಆಗಿ ಲೋಕ ಶೋಕದ ನಿವಾರಣೆಯ ಹೊಣೆ ಹೊತ್ತುಕೊಂಡ ಮೇಲೆ ಈ ಗುಪ್ತ ವಿದ್ಯಾಶಕ್ತಿಯನ್ನು ದೈವಕಾರ್ಯಕ್ಕಾಗಿ ಉಪಯೋಗಿಸಿದಳು.

ಒಮ್ಮೆ ಆಶ್ರಮದ ಸಾಧಕರೊಬ್ಬರು ಮಾತಾಜಿಯವರನ್ನು ಕೇಳಿದರು. “ನಮ್ಮ ಪ್ರಾಪಂಚಿಕ ಅವಶ್ಯಕತೆಗಳನ್ನು ಈಡೇರಿಸೆಂದು ದೈವವನ್ನು ಪ್ರಾರ್ಥಿಸಬಹುದು.

“ಯಾಕೆ ಪ್ರಾರ್ಥಿಸಬಾರದು? ನಮ್ಮ ಮನದ ಮಾಲಿನ್ಯವನ್ನು ಕಳೆಯಿರೆಂದು ಪ್ರಾರ್ಥಿಸುವುದಿಲ್ಲವೇ? ಹಾಗಾದರೆ ದೈಹಿಕಬಾಧೇ ನೀಗಲೆಂದು ಬೇಡುವುದರಲ್ಲಿ ತಪ್ಪೇನಿದೆ? ದೈವಿಕಾರ್ಯಕ್ಕಾಗಿ ಸೇವೆ ಮಾಡಲು, ಸಾಧನೆಗೆ ನೆರವಾಗಲು ದೇಹ ನಿರೋಗಿಯಾಗುವಂತೆ ಮಾಡೆಂದು ಪ್ರಾರ್ಥಿಸುವುದರಲ್ಲಿ ತಪ್ಪೇನೀಲ್ಲ. “ಮಾತಾಜಿ” ತಾವು ಪಡೆದ ಸಿದ್ಧಿಗಳನ್ನು, ಭಕ್ತರ ದುಃಖ ದುಮ್ಮಾನ, ನೋವು ನರಳಿಕೆಗಳ ನಿವಾರಣೆಗಾಗಿ ಉಪಯೋಗಿಸುವುದನ್ನು ಅವರ ಜೀವನದ ಉದ್ದಗಲಕ್ಕೂ ಕಾಣುತ್ತೇವೆ. ಆದರೆ ಆ ಸಿದ್ಧಿಗಳನ್ನು ಪ್ರದರ್ಶಿಸುವ ಕೆಲಸ ಅವರಿಂದ ಎಂದೂ ಆಗಲಿಲ್ಲ. ಆದ್ದರಿಂದಲೇ ಶ್ರೀ ಅರವಿಂದಾಶ್ರಮದಲ್ಲಿ ಶ್ರೀ ಮಾತಾಜಿ ಮಾಡಿದ ಅನೇಕ ಪವಾಡಗಳ ಬಗ್ಗೆ ಮಾತನ್ನೂ ಆಡುವುದಿಲ್ಲ.

ಅರವಿಂಧರ ಸನ್ನಿಧಿಗೆ :

೧೯೧೦ರ ಹೊತ್ತಿಗೆ ಮೀರಾ ಅಧ್ಯಾತ್ಮಿಕ ಸಾಧನೆಯಲ್ಲಿ ಬಹುದೂದ ಮುಂದುವರೆದಿದ್ದಳು. ಆ ವರ್ಷ ಪಾಲ ರಿಚರ್ಡ ಎಂಬ ಮತ್ತೊಬ್ಬ ಸಾಧಕರನ್ನು ಮದುವೆ ಆದರು. ರಿಚರ್ಡ ೧೯೧೦ರಲ್ಲಿ ಫ್ರೆಂಚ್ ಪಾರ್ಲಿಮೆಂಟಿಗೆ ನಡೆದ ಚುನಾವಣೆಗೆ ಫ್ರೆಂಚ ಇಂಡಿಯ ಕ್ಷೇತ್ರದಿಂದ ಸ್ಪರ್ಧಿಸಿದರು.  ಚುನಾವಣೆ ಪ್ರಚಾರಾರ್ಥವಾಗಿ ರಿಚರ್ಡ ಪಾಂಡಿಚೆರಿಗೆ ಬಂದರು. ಅವರೊಡನೆ  ಪತ್ನಿ, ಮೀರಾ, ಸ್ಟಾರ್ ಅಫ್ ಡೇವಿಡ್, ಎಂಬ ಪ್ರತಿಮಾ ಯಂತ್ರವನ್ನು ಕೊಟ್ಟು ಭಾರತದಲ್ಲಿ ಇದನ್ನು ತೋರಿಸಿ, ಇದರ ಅರ್ಥವೇನೆಂದು ತಿಳಿದುಕೊಳ್ಳಿ” ಎಂದು ತಿಳಿಸಿದರು. ಇದರ ಅರ್ಥವನ್ನು ತಮಗೆ ತೃಪ್ತಿಯಾಗಉವಂತೆ ಯಾರೂ  ವಿವರಿಸುವರೋ ಅವರನ್ನು ತಮ್ಮ ಗುರುವಾಗಿ ಅಂಗೀಕರಿಸುವುದಾಗಿ  ನಿರ್ಧರಿಸಿದ್ದರು. ರಿಚರ್ಡ ಏಪ್ರೀಲ್ ಮಧ್ಯಭಾಗದಲ್ಲಿ ಪಾಂಡಿಚೇರಿಗೆ ಬಂದರು. ಶ್ರೀ ಅರವಿಂದರಿಗೆ ಅದರ ಇಂಗಿತವನ್ನು ವಿವರಿಸಿದರು. ರಿಚರ್ಡ ಅದನ್ನು ಪತ್ನಿಗೆ ತಿಳಿಸಿದರು.  ಆ ವಿವರಣೆ ಮೀರಾಳ ಮನಸ್ಸಿಗೆ ಬಂತು. ಶ್ರೀ ಅರವಿಂದರೇ ತಮ್ಮ ಧರ್ಮಗುರು ಎಂದು ನಿರ್ಧರಿಸಿದರು. ಅಲ್ಲಿಂದ ಮೀರಾ ಮತ್ತು ಪಾಲ್ ರಿಚರ್ಡ ಶ್ರೀ ಅರವಿಂದರೊಡನೆ ಪತ್ರವ್ಯವಹಾರದಲ್ಲಿ ತೊಡಗಿದರು. ಶ್ರೀ ಅರವಿಂದರ ಪತ್ರಗಳಿಂದ ಪ್ಯಾರಿಸ್ನಲ್ಲಿ ಸೇರುತ್ತಿದ್ದ ಜಿಜ್ಞಾಸುಗಳ ಕೂಟಗಳಿಗ ಬಹು ಪ್ರಯೋಜನವಾಯಿತು.

ಆದರೆ ಪತ್ರ ವ್ಯವಹಾರದಿಂದಲೇ ಆತ್ಮೋದ್ದಾರ ಹೇಗೆ ಸಾಧ್ಯ?  ಕೊನೆಗೆ ರಿಚರ್ಡ ದಂಪತಿಗಳು ಪಾಂಡಿಚೇರಿಗೆ ಬಂದರು.೧೯೧೪ನೇ ಮಾರ್ಚ ೨೯ ರಂದು ಸಂಜೆ ಅವರು ಶ್ರೀ ಅರವಿಂದರ ಪದತಲದಲ್ಲಿ ಕುಳಿತು ಕಣ್ಮುಚ್ಚಿದರು,. ತಮ್ಮ ಮನದಲ್ಲಿದ್ದ ಎಲ್ಲ ಆಲೋಚನೆಗಳನ್ನು ಬದಿಗೊತ್ತಿ ಮುಕ್ತ ಮನಸ್ಸಿನಿಂದ ಮೌನವಾಗಿ ಕುಳಿತರು. ಸ್ವಲ್ಪ ಹೊತ್ತಿನಲ್ಲಿ ಮೇಲಿನಿಂದ ಒಂದು ಪ್ರಶಾಂತಿಯ ಧಾರೆ ಸುರಿದ ಅನುಭವ ಆಯಿತು. ಆ ದರ್ಶನವಾದ ಮರುದಿನ ಮೀರಾ, ತಮ್ಮ ದಿನಚರಿಯಲ್ಲಿ ಹೀಗೆ ಬರೆಯುತ್ತಾಳೆ.

“ನೂರಾರು ಜೀವಿಗಳು ಅತ್ಯಂತ ಘೋರವಾದ ಅವಿದ್ಯೆಯಲ್ಲಿ ಮುಳುಗಿದ್ದರೂ ಚಿಂತೆಯಿಲ್ಲ. ನೆನ್ನೆ ನಾವು ನೋಡಿದ ಆತ ಲೋಕದಲ್ಲಿದ್ದಾರೆ. ದಟ್ಟವಾಗಿ ಕವಿದ ಕತ್ತಲೆ ಜ್ಯೋತಿಯಾಗಿ ಮಾರ್ಪಡುತ್ತದೆ ಎಂಬುವುದಕ್ಕೆ  ಅವರು ಇರುವುದೇ ಸಾಕು?!

“ನಾನೊಂದು ಜನಜನ್ಮದಲ್ಲಿ ಜನಿಸಿದಂತೆ ನನಗೆ ತೊರುತ್ತದೆ. ನನ್ನ ಪೂರ್ವ ಸಂಸ್ಕಾರಗಳು, ಅಭ್ಯಾಸಗಳು ಪದ್ಧತಿಗಳು, ಇನ್ನು ಮೇಲೆ ಪ್ರಯೋಜನಕ್ಕೆ ಬಾರವು. ಬಹುಕಾಲದಿಂದ ನಾನು ಅರಸುತ್ತಿದ್ದ ತಾಣದ ಹೊಸ್ತಿಲ ಬಳಿಗೆ ಬಂದಿದ್ದೇನೆ. ಎಂದು ಕಾಣುತ್ತದೆ…”

ರಿಚರ್ಡ ಚುನಾವಣೆಯಲ್ಲಿ ಸೋತರು. ಆದರೆ ಆಧ್ಯಾತ್ಮ ಸಾಧನೆಯಲ್ಲಿ ಗೆದ್ದು ಬಿಟ್ಟರು. ಪಾಂಡಿಚೇರಿಯಲ್ಲಿಯಲ್ಲಿಯೇ ನಿರ್ಧರಿಸಿದರು. ಭಾರತೀಯ ಧರ್ಮ ಮತ್ತು ವೇದಾಂತವನ್ನು ಪ್ರಚಾರ ಮಾಢಲು ಶ್ರೀ ಅರವಿಂದರೊಡನೆ ಕಂಕಣತೊಟ್ಟರು.  ಅದರ ಫಲವಾಗಿ “ಆರ್ಯ” ಎಂಬ ಮಾಸಪತ್ರಿಕೆಯನ್ನು ಪ್ರಾರಂಭಿಸಿದರು.  ೧೯೧೪ರ ಅಗಸ್ಟ್ ೧೫ ರಂದು “ಆರ್ಯದ” ಪ್ರಥಮ ಸಂಚಿಕೆ ಹೊರಬಿತ್ತು.

ಪ್ರವಾಸ :

ಯೂರೋಪ್‌ನಲ್ಲಿ ಪ್ರಥಮ ಜಾಗತಿಕ ಯುದ್ಧ ಪ್ರಾರಂಭವಾದ್ದರಿಂದ ರಿಚರ್ಡ ಯುದ್ಧದಲ್ಲಿ ಸೇವೆ ಸಲ್ಲಿಸಲು ಹಿಂದಿರುಗಬೇಕಾಯಿತು.ರಿಚರ್ಡ ದಂಪತಿಗಳು ೧೯೧೫ರ ಫೆಬ್ರವರಿಯಲ್ಲಿ ಪ್ರಾನ್ಸ್ ದೇಶಕ್ಕೆ ಹಿಂದಿರುಗಿದರು. ಶ್ರೀ ಅರವಿಂದರೊಡನೆ ಪತ್ರ ವ್ಯವಹಾರ ಮುಂದುವರೆದಿತ್ತು.  ೧೯೧೫ರ ಡಿಸೆಂಬರನಲ್ಲಿ ತಮಗಾದ ಒಂದು ಅನುಭಾವ ಸ್ಥಿತಿಯನ್ನು ವರ್ಣಿಸಿ ಶ್ರೀ ಅರವಿಂದರಿಗೆ ಬರೆದರು: ತಮ್ಮ ದೇಹವೇ ಕರಗಿ ಹೋಗಿ, ತಾವು ಇಡೀ ಭೂಮಿಯಲ್ಲಿ ಲೀನನವಾದಂತೆ ಅನುಭವವಾಯಿತಂತೆ. ಈ ಪತ್ರಕ್ಕೆ ಉತ್ತರವಾಗಿ ಶ್ರೀ ಅರವಿಂದರು ಮೀರಾಗೆ ಪತ್ರ ಬರೆದು ” ಈ ಅನುಭವವನ್ನು ವೇದಗಳಲ್ಲಿ ಹೇಳಲಾಗಿದೆ.  ಇದು ನಿಜವಾಗಿಯೂ ಅಧ್ಯಾತ್ಮಿಕ ಅನುಭವ” ಎಂದು ಭರವಸೆ ನೀಡಿದರು.

೧೯೧೬ರಲ್ಲಿ ಪಾಲ್ ರಿಚರ್ಡ ಜಪಾನ ದೇಶಕ್ಕೆ ಹೋಗಬೇಕಾಗಿತ್ತು. ಅಲ್ಲಿ ೧೯೧೯ರ ವರೆಗೆ ಇದ್ದು, ಜಪಾನರ ಜನಜೀವನವನ್ನು  ಬೌದ್ಧಧರ್ಮವನ್ನು ಅಳವಾಗಿ ಅಭ್ಯಾಸ ಮಾಡಿದರು.  ಮಾತಾಜಿಯ ಕಾರುಣ್ಯ ಬುದ್ಧ ದೇವನ ಕಾರುಣ್ಯದಷ್ಟು ವಿಶಾಲ. ಅಲ್ಲಿಯೂ ಅವರು ಅನೇಕ ಆಧ್ಯಾತ್ಮಿಕ ಅನುಭವಗಳನ್ನು ಪಡೆದರು.

ರಿಚರ್ಡ್ ದಂಪತಿಗಳು ಜಪಾನಿನಲ್ಲಿ ಡಾಕ್ಟರ ಓ ಒಖಾವ, ಎಂಬ ಓರ್ವ ಜಿಜ್ಞಾಸುಗಳ ಪರಿಚಯ ಮಾಢಿಕೊಂಡರು. ಆ ಒಖಾವ, ಮೀರಾ, ಅವರ ವಿಚಾರವಾಗಿ ನೆನಪು ಮಾಡಿಕೊಳ್ಳುತ್ತಾ “ಮೀರಾ ಅತ್ಯಂತ ವ್ಯವಹಾರಿಕವಾಗಿಕ ಕುಶಲಿ” ಎಂಬುವುದಾಗಿ  ಹೇಳುತ್ತಾರೆ. ಇದರ ಇಂಗಿತವೇನೆಂದರೆ, ಆಧ್ಯಾತ್ಮಿಕ ಅನುಭವಿಗಳು ವ್ಯವಹಾರ ಜ್ಞಾನಕ್ಕೆ ವಿಮುಖರಾಗಿರುವುದಕ್ಕೆ ಸಾಮಾನ್ಯವಾದರೂ, ಮೀರಾ ಹಾಗಿರಲಿಲ್ಲ ಎಂಬುವುದು. ಶ್ರೀ ಅರವಿಂದಾಶ್ರಮದಲ್ಲಿ ಕಂಡು ಬರುವ ಶಿಸ್ತು, ಸೌಂಧರ್ಯ ಪ್ರಜ್ಞೆ, ಪ್ರಶಾಂತಿ, ಓರಣ, ಆಶ್ರಮವಾಸಿಗಳ ನಗುಮೊಗದ ನಡವಳೀಕೆ ಎಲ್ಲವೂ ಮಾತಾಜಿಯ ಮನದ ಮೇಲೆ ಜಪಾನ್ ಜೀವನ ಮೂಡಿದ್ದರ ಫಲ ಎನ್ನಬಹುದು. ಹಾಗೆಯೇ ಆಶ್ರಮ ವಾಸಿಗಳ ನಗುಮೊಗದ ನಡವಳಿಕೆ ಎಲ್ಲವೂ ಮಾತಾಜಿಯ ಮನದ ಮೇಲೆ ಜಪಾನ್ ಜೀವನ ಮೂಡಿದ್ದರ ಫಲ ವೆನ್ನಬಹುದು. ಹಾಗೆಯೇ ಆಶ್ರಮದಲ್ಲಿ ಸ್ಥಾಪಿತವಾಗಿರುವ  ಔದ್ಯೋಗಿಕ ಸಂಸ್ಥೆಗಳಲ್ಲಿ, ವಿಜ್ಞಾನ ಮತ್ತು ಅಧ್ಯಾತ್ಮದ ಸಾಮರಸ್ಯಗಳ ಮಧುರ ಸಂಗಮ ಆಶ್ರಮದ ಪ್ರತಿಯೊಂದು ವ್ಯವಸ್ಥೆಯಲ್ಲಿಯೂ ಕಂಡು ಬರುತ್ತದೆ.

ಶ್ರೀ ಅರವಿಂದರ ಆಶ್ರಮದಲ್ಲಿ :

ಮೀರಾ ಮತ್ತು ಪಾಲ್ ರಿಚರ್ಡ, ೧೯೨೦ ಏಪ್ರೀಲ್, ೨೪ ರಂದು ಪಾಂಡಿಚೆರಿಗೆ ಮರಳಿ ಬಂದರು. ಅಂದಿನಿಂದ ಮೀರಾ ಪಾಂಡಿಚೇರಿಯಲ್ಲಿ ಶಾಶ್ವತವಾಗಿ ನೆಲೆಸಿದರು. ಆದರೆ ಅವರ ಗಂಡ ಪಾಲ್ ರಿಚರ್ಡ , ಶ್ರೀ ಅರವಿಂದರ ಮಹತ್ತನ್ನು ದೈವಿಕ ಶಕ್ತಿಯನ್ನು ಒಪ್ಪಿಕೊಂಡರೂ, ಅವರಿಗೆ ಸಂಪೂರ್ಣ ಶರಣಾಗತರಾಗಿ ಅವರ ಶಿಷ್ಯತ್ವವನ್ನು ಒಪ್ಪಿಕೊಳ್ಳುವುದಾಗಲಿಲ್ಲ. ಆದ್ದರಿಂದ ಪಾಲ್ ಪಾಂಡಿಚೇರಿಯಿಂದ ಹಿಂದಿರುಗಿ ಕಡೆಗೆ ಅಮೇರಿಕೆಯಲ್ಲಿ ನೆಲೆಸಿದರು.  “ಏಷ್ಯಾ ಅಧ್ಯಯನದ ಭಾರತೀಯ ಕೇಂದ್ರ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ತಮ್ಮದೇ ಆದ ರೀತಿಯಲ್ಲಿ ಭಾರತದ ಪುನರುತ್ಥಾನಕ್ಕಾಗಿ ಕೆಲಸ ಮಾಡಿದರು.

೧೯೨೦ರಿಂದ ಈಚೆಗೆ ಮೀರಾ ಶ್ರೀ ಅರವಿಂದರ ಆಶ್ರಮದ ಅಧಿದೈವವಾಗಿ ಮಾತಾಜಿ ಎನಿಸಿದ ಪುಣ್ಯ ಕಥೆಯೇ ಶ್ರೀಮಾತೆಯ ಮುಂದಿನ ಜೀವನ ಕಥೆ.

ಮಾತಾಜಿ ಪಾಂಡಿಚೇರಿಗೆ ಬರುವುದಕ್ಕಿಂತ ಮೊದಲೇ ಆತ್ಮವಿದ್ಯೆಯಲ್ಲಿ ಪಾರಂಗತರಾಗಿದ್ದರು. ಅಧ್ಯಾತ್ಮ ಸಾಧನೆಯಲ್ಲಿ ಬಹು ಮುಂದುವರೆದಿದ್ದರು.  ಆದರೂ ಶ್ರೀ ಅರವಿಂದರನ್ನು ಕಂಡ ಮೇಲೆ ಅವರಿಗೆ ಸಂಪೂರ್ಣ ಶರಣಾಗತರಾದರು. ಶರಣಾಗತಿ ಎಂದರೆ ಏನೆಂಬುವುದನ್ನು ತಿಳಿಯಬೇಕಾದರೆ ಮಾತಾಜಿಯನ್ನು ನೋಡಬೇಕಾಗಿತ್ತು. ಹಾಗೆಯೇ ಶ್ರೀ ಅರವಿಂದರಾದರೂ ಶ್ರೀ ಮಾತಾಜಿಯನ್ನು ಸಾಕ್ಷಾತ್ ಶಕ್ತಿ ಸ್ವರೂಪಿಣಿ ಎಂಬುವುದಾಗಿ ಭಾವಿಸಿ ಗೌರವಿಸುತ್ತಿದ್ದರು.

ಶ್ರೀ ಅರವಿಂದರೊಡನೆ

೧೯೨೬ರ ನವೆಂಬರ ೨೪. ಶ್ರೀ ಅರವಿಂದರ ಜೀವನದಲ್ಲಿ ಒಂದು ಪರ್ವ ದಿನ. ಅವರು ಸಿದ್ಧಿ ಪಡೆದ ದಿನ. ಅಂದಿನಿಂದ ಅವರು ಬಾಹ್ಯ ಸಂಪರ್ಕವನ್ನು ಸಂಪೂರ್ಣವಾಗಿ ಬಿಟ್ಟು ಬಿಟ್ಟರು. ಆಶ್ರಮವಾಸಿಗಳಿಗೆ ಮತ್ತು ಸಾಧಕರಿಗೆ ಅವರ ದರ್ಶನ ಬಹು ವಿರಳವಾಯಿತು. ಆಗ ಸಹಜವಾಗಿ ಅವರ ಗುರು, ಮಾರ್ಗದರ್ಶಿನಿ, ಸಕಲವೂ ಬಿಟ್ಟು ಬಿಟ್ಟರು.  ಆಶ್ರಮವಾಸಿಗಳ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವ ಪೂರ್ಣ ಹೊಣೆ  ಮಾತಾಜಿಯ ಮೇಲೆಯೇ ಬಿತ್ತು. ಸಾಧಕರ ಆತ್ಮೋದ್ದಾರದಿಂದ ಹಿಡಿದು ಅವರ ದೈನಂದಿನ ಅವಶ್ಯಕತೆಗಳನ್ನು ಒದಗಿಸುವವರೆಗೆ ಎಲ್ಲವೂ ಮಾತಾಜಿಯ ಹೊಣೆ ಆಯಿತು.

ಮಾತಾಜಿ ಈ ಆಶ್ರಮವನ್ನು ಶ್ರೀ ಅರವಿಂದರ ದರ್ಶನಕ್ಕೆ, ಯೋಗ ಪದ್ಧತಿಗೆ ಅನುಗುಣವಾಗಿ ಕಟ್ಟಿದರು.

ಶ್ರೀ ಅರವಿಂದರ ದರ್ಶನ-ಸಿದ್ಧಾಂತವನ್ನೂ ಯೋಗ ಪದ್ಧತಿಯನ್ನೂ ಅನುಷ್ಠಾನದಲ್ಲಿ ತರಲು ಕಟ್ಟಿದ ಪ್ರಯೋಗಶಾಲೆಯೇ ಶ್ರೀ ಅರವಿಂದಾಶ್ರಮ ಎನ್ನಬಹುದು. ಆತ್ಮಸಿದ್ಧಿಗೆ ದೇಹತ್ಯಾಗ ಅನಾವಶ್ಯಕ. ಸ್ವರ್ಗಪ್ರಾಪ್ತಿಗೆ ಮರ್ತ್ಯಲೋಕ ತ್ಯಾಜ್ಯ ಅಗತ್ಯವಿಲ್ಲ. ಆಧ್ಯಾತ್ಮ ಜೀವನ ಎಂದರೆ ಇಹಲೋಕ ವಿಮುಖತೆಯಲ್ಲ. ಈ ಮಾನವ ಜೀವನದಲ್ಲಿಯೇ,  ಈ ಲೋಕದಲ್ಲಿ ಬದುಕಿರುವಾಗಲೇ ಆತ್ಮ ಸಾಕ್ಷಾತ್ಕಾರವನ್ನು ಪಡೆಯಬೇಕು. ಸರ್ವವೂ ಬ್ರಹ್ಮವೇ. ಹಾಗಾದರೆ ಈ ಜಗತ್ತು, “ಅಬ್ರಹ್ಮ” ಹೇಗಾದಿತು? ಬ್ರಹ್ಮಸಾಕ್ಷಾತ್ಕಾರ ಎಂದರೆ, ಈ ಜಗತ್ತಿನ ತಿರಸ್ಕಾರ ಎಂದಲ್ಲ. ಅದನ್ನು ಪಡೆಯಲು ಇದನ್ನು ಬಿಡಬೇಕಾಗಿಲ್ಲ. ಇಡೀ ಬಾಳೆಲ್ಲ ಯೋಗವಾಗಬೇಕು. ಉಸಿರಾಡುವುದರಿಂದ ಹಿಡಿದು, ಮಾಡುವುದೆಲ್ಲ ಅವನ ಪೂಜೆ. ಇದು ಶ್ರೀ ಅರವಿಂದ ದರ್ಶನದ ಸಾರ ಸರ್ವಸ್ವ.

ಮಾರ್ಗದರ್ಶನ:

ಈ ದರ್ಶನ ಸಿದ್ಧಿಗೆ ಮಾರ್ಗವೇನು? ಅದನ್ನು ತೋರಿಸುವ ಹೊಣೆ ಮಾತಾಜಿಯದು. ಸಾಧಕರನ್ನು ಅವರವರ ಮನದ ಒಲವಿಗೆ ತಕ್ಕಂತೆ ಸಾಧನ ಪಥದಲ್ಲಿ ಕಾಯಕದ ಮೂಲಕ ನಡೆಸಿಕೊಂಡು ಬಂದರು. ಅವರ ಈ ಪ್ರಯೋಗವೇ ಆಶ್ರಮವಾಗಿ ಅರಳಿತು.

ಮಾತಾಜಿ ಆಶ್ರಮವಾಸಿಗಳ ಊಟ ವಸತಿ ಬಟ್ಟೆ ಬರೆಯ ಅವಶ್ಯಕತೆಯನ್ನು ಪೂರೈಸುವುದಲ್ಲದೇ, ಅವರ ಆತ್ಮೋನ್ನತಿಯನ್ನೂ ಸಾಧಿಸಿದರು.  ಹಡೆದ ತಾಯಿಗಿಂತ ಸಹಾನೂಭೂತಿ ಸಹನೆಯಿಂದ ಸಾಧಕರ ತನು ಮನ ಪ್ರಾಣದ ಯೋಗಕ್ಷೇಮವನ್ನು ನೋಡಿಕೊಂಡರು. ಸಾಧಕರು ಕೇಳುವ ಪ್ರಶ್ನೆಗಳಿಗೆ ಉತ್ತರ ಬರೆಯಲು ಮಧ್ಯರಾತ್ರಿ ಮೀರುವವರೆಗೆ ಎದ್ದಿರುತ್ತಿದ್ದರು.  ಮತ್ತೇ ಬೆಳಗಿನ ಜಾವಕ್ಕೆ ಎದ್ದು ಮುಂದಿನ ದಿನದ ಕಾರ್ಯಕ್ರಮಕ್ಕೆ ಸಿದ್ಧ. ಮಾತಾಜಿ ದಿನಕ್ಕೆ ಇಪ್ಪತ್ತು- ಇಪ್ಪತ್ತೊಂದು ಗಂಟೆಗಳ ಕಾಲ ಸೆಣಸಾಡಿದರು. ಹೀಗೆ ಶ್ರಮಿಸಿದ ಪರಿಣಾಮವೇ ಮತ್ತಾವುದೋ ೧೯೩೧ರಲ್ಲಿ ದೊಡ್ಡ ಕಾಯಿಲೆ ಬಂತು. ದೀರ್ಘ ಕಾಲ ಬಳಲಿ ಮತ್ತೇ ಚೇತರಿಸಿಕೊಂಡರು. ೧೯೩೮ರಲ್ಲಿ ಶ್ರೀ ಅರವಿಂದರು ಬಿದ್ದು ತಮ್ಮ ತೊಡೆಯ ಮೂಳೆ ಮುರಿದುಕೊಂಡಾಗ, ಮಾತಾಜಿ ಮಾಡಿದ ಸೇವೆಯನ್ನು ಯಾರೂ ಮಾಡಿರಲಾರರು.

೧೯೩೯ರಲ್ಲಿ ಪ್ರಾರಂಭವಾದ ದ್ವೀತಿಯ ಜಾಗತಿಕ ಯುದ್ಧದಲ್ಲಿ ಶ್ರೀ ಅರವಿಂದರು ತಮ್ಮ ಯೋಗಶಕ್ತಿಯನ್ನು ಮಿತ್ರ ರಾಷ್ಟ್ರಗಳ ಗೆಲುವಿಗಾಗಿ ಪ್ರಯೋಗ ಮಾಡಿದರು. ಆಗ ಮಾತಾಜಿ ಕೂಡ ಅವರೊಡನೆ ಸಹಕರಿಸಿದರು.

ಆಶ್ರಮದ ನಿರ್ವಹಣೆ :

ಆ ಯುದ್ಧ ಕಾಲದಲ್ಲಿ ಆಹಾರ ಧಾನ್ಯ ಅಭಾವ ಹೆಚ್ಚಾಯಿತು.  ಬೆಳೆದದ್ದೆಲ್ಲ ಸೈನ್ಯದ ಹೊಟ್ಟೆಗೆ ಬೇಕಾಗುತ್ತಿತು.  ಆಹಾರ ಧಾನ್ಯ ನಿಯಂತ್ರಣ ಕಾಯದೆ ಜಾರಿಯಲ್ಲಿ ಬಂತು. ಆಶ್ರಮವಾಸಿಗಳಿಗೆ ಬೇಕಾಗುವ ಅಕ್ಕಿ, ಗೋಧಿ, ಸಕ್ಕರೆಯ ಅಭಾವ ಬಂತು. ಆಗ ಮಾತಾಜಿ ಆಶ್ರಮಕ್ಕಾಗಿ ಹೊಲಗದ್ದೆ ಕೊಂಡು ಅದರಲ್ಲಿಯೇ ಆಶ್ರಮಕ್ಕೇ ಬೇಕಾಗುವ ಆಹಾರ ಧಾನ್ಯಗಳನ್ನು ಬೆಳೆಸತೊಡಗಿದರು. ಹೈನಕ್ಕಾಗಿ ಹಸು ಸಾಕಿದರು. ತರಕಾರಿಗಾಗಿ ತೋಟ ಮಾಡಿಸಿದರು.

ಆಶ್ರಮಕ್ಕೆ ಬಂದು ಸೇರುವವರ ಸಂಖ್ಯೆ  ಹೆಚ್ಚಾಯಿತು. ಅವರಲ್ಲಿ ನಿವೃತ್ತ ನ್ಯಾಯಾಧೀಶರು, ಎಂಜಿನಿಯರಗಳು, ವೈದ್ಯರುಗಳೂ, ವರ್ತಕರು, ಇರುತ್ತಿದ್ದರು. ಅವರಿಗೆ, ಅವರವರ  ಪ್ರವೃತ್ತಿಗೆ ಅನುಗುಣವಾದ ಕಾಯಕ ಕೊಡಬೇಕಾಯಿತು. ಮಾತಾಜಿ ಒಂದು  ಉಪಾಯ ಮಾಢಿದರು. ಎಂಜಿನಿಯರುಗಳಿಗೆ ಉದ್ದಿಮೆಗಳನ್ನು ಪ್ರಾರಂಭಿಸಲು ಅನುವು ಮಾಡಿಕೊಟ್ಟರು. ವೈದ್ಯರು ಆಶ್ರಮದಲ್ಲಿ ದವಾಖಾನೆಗಳನ್ನು ನಡೆಸಲು ಏರ್ಪಾಟು ಮಾಡಿದರು.

ಮೊದಮೊದಲು ಆಶ್ರಮದಲ್ಲಿ ಮಕ್ಕಳನ್ನು ಸೇರಿಸಿಕೊಳ್ಳುತ್ತಿರಲಿಲ್ಲ. ಒಮ್ಮೆ ಮಗುವೊಂದು ಶ್ರೀಮಾತಾರವಿಂದರ ದರ್ಶನಕ್ಕೆ ಬಂತು. ದರ್ಶನದ  ನಂತರ ಮಗು ಆಶ್ರಮ ಬಿಡಲು ಒಪ್ಪಲಿಲ್ಲ. ಹೆತ್ತವರು ಬಲಾತ್ಕಾರ ಮಾಡಿದರೂ ಕದಲಿಲ್ಲ.  ಮಾತಾಜಿಯ ಮುಂದೆ ಈ ಸಮಸ್ಯೆ ಒಡ್ಡಿದರು. ಮಗುವನ್ನು ಆಶ್ರಮದಲ್ಲಿ ಉಳಿಸಿಕೊಳ್ಳಲು  ಒಪ್ಪಿದರು.   ಒಂದು ಮಗು ಸೇರಿದ ಮೇಲೆ ಬರುವ ಮಕ್ಕಳ ಸಂಖ್ಯೆ ಹೆಚ್ಚಾಯಿತು. ಅವರ ಅನ್ನ ಬಟ್ಟೆಯ ಅವಶ್ಯಕತೆಯನ್ನು ಪೂರೈಸುವುದು ಅಷ್ಟೇನೂ ಕಷ್ಟವಾಗಿರಲಿಲ್ಲ. ಆದರೆ ಅವರ ಮನಸ್ಸಿನ ಆರೈಕೆ ಹೇಗೆ? ಆಗ ಮಾತಾಜಿ ಆಶ್ರಮದಲ್ಲಿಯೇ ಮಕ್ಕಳಿಗಾಗ ಶಾಲೆಯನ್ನು ಪ್ರಾರಂಭಿಸಿದರು. ಆ  ಶಾಲೆ ಈಗ ಶ್ರೀ ಅರವಿಂದರ ಅಂತರರಾಷ್ಟ್ರೀಯ ಶಿಕ್ಷಣ ಕೇಂದ್ರವಾಗಿ ಬೆಳೆದಿದೆ.

ಹೀಗೆ ಶ್ರೀ ಮಾತಾಜಿ ಆಶ್ರಮವನ್ನು ವಿಸ್ತರಿಸುತ್ತಾ ಹೋದರು. ಈಗ ಪಾಂಡಿಚೇರಿಯ ಬಹುಭಾಗವೆಲ್ಲ ಆಶ್ರಮವೇ ಆಗಿದೆ. ಇದನ್ನೆಲ್ಲ ನೋಡಿದರೆ, “ಇದೆಂಥ ಆಶ್ರಮ? ಎಂದು ಆಶ್ಚರ್ಯಪಟ್ಟಾರು. ಏಕೆಂದರೆ ಅಲ್ಲಿ ಸಾಧಕರು ಕಾವಿಕಾಷಾಯ ಧರಿಸುವುದಿಲ್ಲ. ಮೂಗು ಮುಚ್ಚಿ ಜಪ ಮಾಡುತ್ತ ಮೂಲೆಯಲ್ಲಿ ಕೂಡುವುದಿಲ್ಲ. ಉಪವಾಸ ವನವಾಸ ಈ ಸಾಧಕರು ಮಾಡುವುದಿಲ್ಲ.

ಶ್ರೀ ಮಾತಾಜಿ ಹೇಳುತ್ತಾರೆ :”ಬಡತನ, ಇಹಲೋಕ ತಿರಸ್ಕಾರ ಆಧ್ಯಾತ್ಮಿಕತೆಯ ಲಕ್ಷಣ ಎಂದೇ ಲೋಕದಲ್ಲಿರುವ ನಂಬುಗೆ. ಆದರೆ ಅದು ಸರಿಯಲ್ಲ… ಇಂಥಾದ್ದೂ ಬೇಕೆಂಬುವುದು  ಹೇಗೆ ಆಧ್ಯಾತ್ಮಿಕತೆ ಅಲ್ಲವೋ, ಇಂಥಾದ್ದೂ ಬೇಡ ಎಂಬುವುದು ಸಹ ಅಧ್ಯಾತ್ಮಿಕತೆಯಲ್ಲ. ಈ ಬೇಕು ಬೇಡಗಳ  ಆಚಿನ ಸ್ಥಿತಿಗೆ ಮುಟ್ಟುವುದೇ ಆಧ್ಯಾತ್ಮಿಕತೆ … ಆದ್ದರಿಂದ ಉಣ್ಣದಿರುವುದು, ಉಡದಿರುವುದು ಆಧ್ಯಾತ್ಮಿಕತೆಯ ಲಕ್ಷಣವಲ್ಲ. ಆದರೆ,. ಮಾಡುವುದೆಲ್ಲ ದೈವಕ್ಕೆ ಅರ್ಪಿಸಿ, ಸರ್ವ ಸಮರ್ಪಣಾ ಭಾವದಿಂದ ಕಾಯಕ ನಿರತರಾಗಬೇಕು.

ಹೀಗೆ ಕಾಯಕ  ಮಾರ್ಗದಿಂದ ಸಾಧಕರನ್ನು ಆತ್ಮೋನ್ನತಿಯ ಮಾರ್ಗದಿಂದ ಕರೆದೊಯ್ಯುತ್ತಾರೆ. ಜೊತೆಗೆ ಶ್ರೀ ಮಾತಾಜಿ, ನಿರ್ಧಿಷ್ಟ ದಿನಗಳಲ್ಲಿ ಸಾಧಕರನ್ನು ತಮ್ಮ ಸುತ್ತ ಕೂಡಿಸಿಕೊಂಡು, ಅಧ್ಯಾತ್ಮಕ ಚಿಂತನೆ ನಡೆಸುತ್ತಾರೆ. ಪ್ರಶ್ನೋತ್ತರಗಳನ್ನು ನಡೆಸುತ್ತಾರೆ. ಸಾಧಕರ ಸಮಸ್ಯೆಗಳಿಗೆ ಸಮಾಧಾನ ಕೊಡುತ್ತಾರೆ. ಅವರ ಮಾತುಕತೆ, ಪ್ರಶ್ನೋತ್ತರ ಧರ್ಮವಿವರಣೆಗಳ ಬರವಣಿಗೆ ಹದಿನೈದು ಬೃಹತ್ ಹೊತ್ತಿಗೆಗಳನ್ನು ತುಂಬಿದೆ.

ಶ್ರೀಅರವಿಂದರು ೧೯೫೦ನೇ ಡಿಸೆಂಬರ ೫ ರಂದು ಮಹಾಸಮಾಧಿ ಹೊಂದಿದರು. ಅವರು ದೇಹಬಿಟ್ಟ ಮೇಲೆ ಮಾತಾಜಿಯ ಕೆಲಸ ಇನ್ನೂ ಹೆಚ್ಚಾಯಿತು. ಶ್ರೀ ಅರವಿಂದರು ಕೈಗೊಂಡಿದ್ದ ಮಹಾತ್ಕಾರ್ಯವನ್ನು ಪೂರ್ಣಗೊಳಿಸುವುದೇ ಆವರ ಶಿಷ್ಯರ ಕರ್ತವ್ಯ ಎಂದು ಮಾತಾಜಿ ಹೇಳಿದ್ದಾರೆ. ಮಾತಾಜಿ ೧೯೧೪ರಲ್ಲಿ ಭಾರತಕ್ಕೆ ಬಂದಾಗ, ಶ್ರೀ ಅರವಿಂದರ ದರ್ಶನ ಮತ್ತು ಸಿದ್ಧಾಂತಗಳಿಗೆ ಮೂರ್ತ ಸ್ವರೂಪವನ್ನು ಕೊಡುವುದೇ ನನ್ನ ಜೀವನದ ಗುರಿ ಎಂದು ಹೇಳಿದ ಮಾತಿನಂತೆ, ಇನ್ನೂ ಕಾರ್ಯಕ್ಷೇತ್ರವನ್ನು ವಿಸ್ತರಿಸಿದರು.  ಈ ಕಾರ್ಯದ ಕುರುಹು “ಆರೋವಿಲ್” ಎಂಬ ನಗರ.  ಪಾಂಡಿಚೇರಿಗೆ   ೮ ಕಿ.ಮೀ. ದೂರದಲ್ಲಿ ಕಟ್ಟುತ್ತಿರುವ ಈ ನಗರ ಶ್ರೀ ಅರವಿಂದರು ಕಂಡ ದಿವ್ಯ ಜೀವನಕ್ಕೊಂದು ನಿದರ್ಶನವಾಗಿ ರೂಪುಗೊಳ್ಳುತ್ತಿದೆ.  ಈ ನಗರದ ಶಂಕುಸ್ಥಾಪನೆಯನ್ನು ೧೯೬೮ ಫೆಬ್ರವರಿ ೨೮ ರಂದು ನೆರವೇರಿಸಲಾಯಿತು.

ಮಾತಾಜಿ ಮುಂದೆ ಐದು ವರ್ಷ ಜೀವಿಸಿದ್ದರು. ೧೯೭೫ನೇ ನವೆಂಬರ್ ೧೭ ರಂದು, ತಮ್ಮ ತೊಂಬತ್ತೈದನೆಯ ವಯಸ್ಸಿನಲ್ಲಿ ದೇಹತ್ಯಾಗ ಮಾಡಿದರು. ಅವರ ಪ್ರಾರ್ಥಿವ ಶರೀರವನ್ನು ಅರವಿಂದರ ಸಮಾಧಿಯ ಜೊತೆಗೆ ಇಡಲಾಗಿದೆ. ಈ ಸಮಾಧಿ ಶ್ರೀ ಮಾತಾರವಿಂದರ ಚಿತ್ ಶಕ್ತಿಯ ಸಜೀವ ನೆಲೆ. ಇಷ್ಟಾರ್ಥಗಳನ್ನು ಈಡೇರಿಸುವ ಕಲ್ಪತರು.