ಆಚಂಡಾಲಪ್ರತಿಹತರಯಃ ಯಸ್ಯ ಪ್ರೇಮಪ್ರವಾಹಃ
ಲೋಕಾತೀತೋಪ್ಯಹಹ ನ ಜಹೌ ಲೋಕಕಲ್ಯಾಣ ಮಾರ್ಗಂ
ತ್ರೈಲೋಕ್ಯೇಪ್ಯಪ್ರತಿಮಮಹಿಮಾ ಜಾನಕೀ ಪ್ರಾಣಬಂಧಃ
ಭಕ್ತ್ಯಾ ಜ್ಞಾನಂ ವೃತತರವಪುಃ ಸೀತಯಾ ಯೋ ಹಿ ರಾಮಃ

ಸ್ತಬ್ದೀಕೃತ್ವಾ ಪ್ರಲಯಕಲಿತಮ್ಬಾಹವೋಹಂ ಮಹಾನ್ತಂ
ಹಿತ್ವಾದೂರಂ ಪ್ರಕೃತಿಸಹಜಾಮಂಧತಾಮಿಸ್ರಮಿಶ್ರಾಂ
ಗೀತಂ ಶಾಂತಂ ಮಧುರಮಪಿ ಯಃ ಸಿಂಹನಾದಂ ಜಗರ್ಜ
ಸೋಯಂ ಜಾತಃ ಪ್ರಥಿತಪುರುಷಃ ರಾಮಕೃಷ್ಣಾಸ್ತ್ವಿ ದಾನೀಂ

ಶ್ರುತಿ ಎಂಬ ಶಬ್ದದಿಂದ ಅನಾದಿಯೂ ಅನಂತವೂ ಆದುದು “ವೇದ” ಎಂದು ತಿಳಿಯುತ್ತೇವೆ. ಧರ್ಮಶಾಸನ ಪ್ರಪಂಚದಲ್ಲಿ ಸಮರ್ಥ ಮಾರ್ಗದರ್ಶಿಯಾಗಬಲ್ಲುದೆಂದರೆ ಈ “ವೇದ” ವೋಂದೇ.

ಪುರಾಣಾದಿ ಇತರ ಪುಸ್ತಕಗಳನ್ನು ಸ್ಮೃತಿ ಎಂಬ ಶಬ್ದದಿಂದ ನಿರ್ದೇಶಿಸುತ್ತೇವೆ. ಸ್ಮೃತಿ ಎಲ್ಲಿಯವರೆಗೆ ಶ್ರುತಿಯನ್ನು ಅನುಸರಿಸುತ್ತದೆಯೋ ಅಲ್ಲಿಯವರೆಗೆ ಮಾತ್ರ ಅದರ ಪ್ರಮಾಣ. ಸ್ಮೃತಿಗೂ ಶ್ರುತಿಗೂ ಭಿನ್ನಾಭಿಪ್ರಾಯ ಉಂಟಾದರೆ ಶ್ರುತಿಯ ಅಭಿಪ್ರಾಯವೇ ಗಣ್ಯವೆಂದು ಸ್ವೀಕೃತವಾಗುವುದು.

“ಸತ್ಯ” ದಲ್ಲಿ ಎರಡು ವಿಧಗಳುಂಟು. ಒಂದನೆಯದು, ಮಾನವ ಸಾಧಾರಣ ಪಂಚೇದ್ರಿಯ ಗ್ರಾಹ್ಯವಾದುದು ಮತ್ತು ತದುಪಸ್ಥಾಪಿತ ಅನುಮಾನದ ಮುಖಾಂತರ ಗೃಹೀತವಾದುದು. ಎರಡನೆಯದು, ಸೂಕ್ಷ್ಮಯೋಗಜಶಕ್ತಿಯಿಂದ ಗ್ರಾಹ್ಯವಾದುದು. ಒಂದನೆಯದರ ಸಹಾಯದಿಂದ ಸಂಗ್ರಹಿತವಾದ ಜ್ಞಾನಕ್ಕೆ “ವಿಜ್ಞಾನ” ಎಂದು ಹೇಳುತ್ತೇವೆ. ಎರಡನೆಯದರ ಸಹಾಯದಿಂದ ವೇದ್ಯವಾದ ಜ್ಞಾನಕ್ಕೆ “ವೇದ” ಎಂದು ಹೇಳುತ್ತೇವೆ.

ಅನಾದಿ ಅನಂತ ಅಲೌಕಿಕ ಸದಾಸ್ಥಿತಿ ಜ್ಞಾನರಾಶಿಗೆ” ವೇದ” ಎಂದು ನಾಮಧೇಯ. ಸ್ವಯಂ ಸೃಷ್ಟಿಕರ್ತನೇ ಅವುಗಳ ಸಹಾದಿಮದ ಈ ಜಗತ್ತಿನಲ್ಲಿ ಸೃಷ್ಟಿ ಸ್ಥಿತಿ ಪ್ರಲಯಗಳನ್ನು ಮಾಡುತ್ತಿದ್ದಾನೆ.

ಈ ಅತೀಂದ್ರಿಯ ಶಕ್ತಿ ಯಾವ ಪುರುಷನಲ್ಲಿ ಆವಿರ್ಭೂತವಾಗುವುದೋ ಅವನಿಗೆ “ಋಷಿ” ಎಂದು ಹೆಸರು. ಮತ್ತು ಈ ಶಕ್ತಿಯ ಸಹಾಯದಿಂದ ಅವನು ಯಾವ ಅಲೌಕಿಕ ಸತ್ಯವನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವನೋ ಆ ಸತ್ಯಕ್ಕೆ ” ವೇದ” ಎಂದು ಹೆಸರು.

ಈ ಋಷಿತ್ವ ಮತ್ತು ವೇದದೃಷ್ಟಿತ್ವವನ್ನು ಪಡೆಯುವುದೇ ಯಥಾರ್ಥ ಧರ್ಮಾನುಭೂತಿ. ಸಾಧಕನ ಜೀವನದಲ್ಲಿ ಇವು ಎಲ್ಲಿಯವರೆಗೆ ಉನ್ಮೇಷವಾಗುವುದಿಲ್ಲವೋ ಅಲ್ಲಿಯವರೆಗೆ” ಧರ್ಮ” ಎಂಬುದು ಕೇವಲ ಬಾಯಿಮಾತು. ಕಾಡು ಹರಟೆ; ಬರಿಯ ಕಟ್ಟುಕತೆ. ಧರ್ಮರಾಜ್ಯದ ಮೊದಲನೆಯ ಮೆಟ್ಟಿಲಿನ ಮೇಲೆಯೂ ಕೂಡ ಆತನು ಕಾಲಿಟ್ಟಿಲ್ಲ ಎಂದು ಹೇಳಬಹುದು.

ವೇದಶಾಸನವು ಸಮಸ್ತ ದೇಶಕಾಲಪ್ರಾತ್ರವ್ಯಾಪಿಯಾದುದು; ಅಂದರೆ ವೇದದ ಪ್ರಭಾವವು ಕಾಲದೇಶಪಾತ್ರ ವಿಶೇಷಗಳಿಂದ ಬದ್ಧವಾದುದಲ್ಲ.

ವಿಶ್ವಧರ್ಮದ ವ್ಯಾಖ್ಯಾನವೆಂದರೆ ವೇದವೋಂದೇ.

ನಮ್ಮ ದೇಶದ ಇತಿಹಾಸ ಪುರಾಣಗಳಲ್ಲಿಯೂ ಮತ್ತು ಮ್ಲೇಚ್ಛಾದಿ ದೇಶಗಳ ಧರ್ಮ ಪುಸ್ತಕ ಸಮೂಹದಲ್ಲಿಯೂ ಈ ಅಲೌಕಿಕ ಜ್ಞಾನವೇತೃತ್ವದ ಅಲ್ಪಸ್ವಲ್ಪ ಭಾಗ ಮಾತ್ರ ಇರುವುದಾದರೂ, ಈ ಅಲೌಕಿಕ ಜ್ಞಾನರಾಶಿ ಮೊಟ್ಟ ಮೊದಲು ಸಂಪೂರ್ಣವಾಗಿಯೂ ಅವಿಕೃತವಾಗಿಯೂ ಸಂಗ್ರಹವಾದುದು. ಆರ್ಯರಲ್ಲಿ ಪ್ರಸಿದ್ಧವಾಗಿರುವ ” ವೇದ” ದಲ್ಲಿ ಮಾತ್ರ ಎಂದು ಹೇಳಬಹುದು. ಆದ್ದರಿಂದ ಚತುರ್ವಿಭಾಗವಾಗಿರುವ ಈ ಅಕ್ಷರರಾಶಿಗೆ ಸರ್ವತೋಭಾವದಿಮದಲೂ ಸರ್ವೋಚ್ಚಸ್ಥಾನದಲ್ಲಿರುವ ಅಧಿಕಾರವಿದೆ. ಸಮಗ್ರ ಜಗತ್ತಿಗೂ ಪೂಜಾರ್ಹವಾಗಿದೆ. ಆರ್ಯರ ಮತ್ತು ಮ್ಲೇಚ್ಛರ ಸಮಸ್ತ ಧರ್ಮ ಪುಸ್ತಕಗಳಿಗೂ ಪ್ರಮಾಣ ಭೂಮಿಯಾಗಿದೆ.

ಆರ್ಯರ ದಿವ್ಯದೃಷ್ಟಿಗೆ ಅವಿಷ್ಕೃತವಾದವುಗಳೆಂದು ಮೇಲೆ ಹೇಳಿದ ವೇದನಾಮಕ ಶಬ್ದರಾಶಿಯ ವಿಚಾರವಾಗಿ ಇನ್ನೊಂದು ವಿಷಯವನ್ನು ತಿಳಿದು ನೆನಪಿನಲ್ಲಿಡಬೇಕು. ಏನೆಂದರೆ, ಶಬ್ದ ರಾಶಿಯಲ್ಲಿ ಯಾವ ಭಾಗವು ಲೌಕಿಕವೋ, ಯಾವ ಭಾಗವು ಬರಿಯಅರ್ಥವಾದಅಥವಾ ಐತಿಹ್ಯ ಮಾತ್ರವೋ ಭಾಗಗಳುವೇದವಲ್ಲ. ದೇಶ, ಕಾಲ, ಪಾತ್ರಾತೀತವಾದ ಅತೀಂದ್ರಿಯ ಜನ್ಯವಾದ ಅಲೌಕಿಕ ಜ್ಞಾನಭಾಗಕ್ಕೆ ಮಾತ್ರ ವೇದಎಂದು ಹೆಸರು.

ಈ ವೇದರಾಶಿ ಜ್ಞಾನಕಾಂಡ ಮತ್ತು ಕರ್ಮಕಾಂಡ ಎಂದು ಎರಡು ಭಾಗವಾಗಿದೆ. ಕರ್ಮಕಾಂಡದಲ್ಲಿರುವ ಕ್ರಿಯೆ ಮತ್ತು ಅದರಿಂದ ಹುಟ್ಟುವ ಫಲ ಸಮೂಹಗಳು ಮಾಯಾಧಿಕೃತ ಜಗತ್ತಿನ ಮಧ್ಯೆ ಮಾತ್ರ ಸರ್ವದಾ ಚಲಿಸುವುದರಿಂದ ಅವುಗಳು ದೇಶ ಕಾಲ ಪಾತ್ರಾದಿ ನಿಯಮಾಧೀನವಾಗಿ ಹಿಂದೆ ಪರಿವರ್ತನೆ ಹೊಂದಿದವು; ಇಂದು ಹೊಂದುತ್ತಿವೆ; ಮುಂದೆಯೂ ಹೊಂದುವುವು. ಸಾಮಾಜಿಕ ರೀತಿನೀತಿಗಳೂ ಕೂಡ ಈ ಕರ್ಮಕಾಂಡದ ಮೇಲೆಯೆ ನಿಂತಿರುವುದರಿಂದ ಅವುಗಳು ಕಾಲಕಾಲಕ್ಕೆ ಪರಿವರ್ತನೆ ಹೊಂದುತ್ತಲೆ ಇರುವುವು; ಹೊಂದಲೇಬೇಕು. ಸತ್ ಶಾಸ್ತ್ರ ಮತ್ತು ಸದಾಚಾರಗಳಿಗೆ ಅವಿರೋಧಿಯಾಗಿರುವ ಲೋಕಾಚಾರಗಳು ಮಾತ್ರ ಆಯಾಕಾಲದಲ್ಲಿ ಸ್ವೀಕೃತವಾಗುತ್ತಿರುವುವು. ಸತ್ ಶಾಸ್ತ್ರವಿಗರ್ಹಿತವೂ ಸದಾಚಾರ ವಿರೋಧಿಯೂ ಆದ ಬರಿಯ ಲೋಕಾಚಾರಗಳಿಗೆ ಮಾತ್ರ ದಾಸರಾದುದು. ಆರ್ಯರ ಅಧಃಪತನಕ್ಕೆ ಒಂದು ಬಹು ಮುಖ್ಯ ಕಾರಣ.

ಜ್ಞಾನಕಾಂಡ ಅಥವಾ ವೇದಾಂತ ಭಾಗದಿಂದ, ಎಂದರೆ ನಿಷ್ಕಾಮ ಕರ್ಮ, ಯೋಗ, ಭಕ್ತಿ ಮತ್ತು ಜ್ಞಾನಗಳ ಸಹಾಯದಿಂದ ಮುಕ್ತಿಪದವು ಲಭಿಸುವುದು. ಬಹು ಪುರಾತನ ಕಾಲದಿಂದಲೂ ಜ್ಞಾನಕಾಂಡವೊಂದೇ ಮಾಯಾ ಪಾರನೇತೃತ್ವ ಪದವಿಯಲ್ಲಿ ಪ್ರತಿಷ್ಠಿತವಾಗಿರುವುದು. ಆದ್ದರಿಂದ ದೇಶಕಾಲಪಾತ್ರಾದಿಗಳಿಂದ ಸರ್ವಥಾ ಅಪ್ರತಿಹತವಾಗಿ ನಿಂತಿರುವ ವೇದಾಂತವೊಂದೇ ಸಾರ್ವಲೌಕಿಕ, ಸಾರ್ವಭೌಮಿಕ ಮತ್ತು ಸಾರ್ವಕಾಲಿಕ ವಿಶ್ವಧರ್ಮದ ಏಕಮಾತ್ರ ಗುರುವಾಗಿರುವುದು.

ಮನ್ವಾದಿ ತಂತ್ರಗಳು ಕರ್ಮಕಾಂಡವನ್ನು ಆಶ್ರಯಿಸಿ ದೇಶಕಾಲ ಪಾತ್ರ ಭೇಧಗಳಿಗನುಸಾರವಾಗಿ ಸಮಾಜಕಲ್ಯಾಣಗಳಾದ ಕಟ್ಟು ಕಟ್ಟಳೆಗಳನ್ನು ವಿರಚಿಸಿದವು. ಪುರಾಣಾದಿ ತಂತ್ರಗಳು ವೇದಾಂತಾಂತರ್ಗತ ತತ್ತ್ವಗಳನ್ನು ತೆಗೆದುಕೊಂಡು ಅವತಾರಾದಿ ಮಹಾಪುರುಷರ ಜೀವನ ಚರಿತ ವರ್ಣನೆಯಿಂದ ಆ ತತ್ತ್ವಗಳನ್ನು ಕುರಿತು ವಿಸ್ತಾರವಾಗಿ ವ್ಯಾಖ್ಯಾನ ಮಾಡಿರುವುವು; ಅನಂತ ಭಾವಮಯ ಪ್ರಭುವಾದ ಭಗವಂತನ ಅಗಣಿತಭಾವಗಳಲ್ಲಿ ಅಲ್ಪಸ್ವಲ್ಪವನ್ನು ಮಾತ್ರ ಪ್ರಧಾವಾಗಿಟ್ಟುಕೊಂಡು ಅವುಗಳನ್ನು ಉಪದೇಶಿಸಿರುವುವು.

ಆದರೆ ಯಾವಾಗ ಕಾಲವಶದಿಂದ ಸದಾಚಾರಭ್ರಷ್ಟರೂ ವೈರಾಗ್ಯ ವಿಹೀನರೂ ಏಕಮಾತ್ರ ಲೋಕಚಾರನಿಷ್ಠರೂ ಕ್ಷೀಣಬುದ್ದಿಯುತರೂ ಆದ ಆರ್ಯ ಸಂತಾನರು ಈಶ್ವರನ ಭಾವವಿಶೇಷಗಳನ್ನು ಕುರಿತು ಜನರಿಗೆ ತಿಳಿಸಲೋಸ್ಕರ ಪರಸ್ಪರ ವಿರೋಧಿಗಳಂತೆ ತೋರುವ ಮತ್ತು ಅಲ್ಪಬುದ್ದಿ ಮತಿಗಳಿಗೋಸ್ಕರ ಸ್ಥೂಲವಿಸ್ತೃತ ಭಾಷೆಯ ಸ್ಥೂಲಭಾವಗಳಿಂದ ವೈದಾಂತಿಕ ಸೂಕ್ಷ್ಮತತ್ತ್ವ ಪ್ರಚಾರಕಾರಿಗಳಾದ ಪುರಾಣಾಧಿಪ್ರಣೀತ ತತ್ತ್ವ ಮತ್ತು ಧರ್ಮಗಳನ್ನು ಗ್ರಹಿಸಲು ಅಸಮರ್ಥರಾಗಿ ಅನಂತ ಭಾವಸಷ್ಟಿಯಾದ ಅಖಂಡ ಸನಾತನ ಧರ್ಮವನ್ನು ಛಿದ್ರಛಿದ್ರಮಾಡಿ, ಸಾಂಪ್ರದಾಯಿಕ ಈರ್ಷ್ಯಕ್ರೋಧಗಳೆಂಬ ಲಯಾಗ್ನಿಯಿಂದ ಪ್ರಜ್ವಲಿತ ಮಾನಸರಾಗಿ, ನಿರಂತರ ಪರಸ್ಪರಾಹುತಿ ಸಂಕಲ್ಪ ದೀಕ್ಷಿತರಾಗಿ ಧರ್ಮ ಭೂಮಿಯಾದ ಭಾರತವರ್ಷವನ್ನು ನರಕ ಸದೃಶ್ಯವಾಗಿ ಮಾಡಿದರೋ ಆಗ – ಆರ್ಯರ ನೈಜಧರ್ಮವೇನು? ಸತತ ವಿವದಮಾನವೂ, ಮೇಲುನೋಟಕ್ಕೆ ಬಹುಧಾವಿಭಕ್ತವೂ, ಸರ್ವಥಾ ವಿಪರೀತ ಆಚಾರ ಸಂಕುಲ ಸಂಪ್ರದಾಯ ಸಮಾಚ್ಛನ್ನವೂ, ಸ್ವದೇಶಿ ಭ್ರಾಂತಿಸ್ಥಾನವೂ ವಿದೇಶೀಘೃಣಾಸ್ಪದವೂ, ಹಿಂದೂ ಧರ್ಮ ಎಂಬ ಹೆಸರಿನಿಂದ ಯುಗಯುಗಾಂತರ ವ್ಯಾಪಿಯಾದರೂ ದೇಶಕಾಲ ಮೋಹದಿಮದ ಇತಸ್ತತಃ ವಿಕ್ಷಿಪ್ತವಾದ ಧರ್ಮಖಂಡಸಮಷ್ಟಿಯ ಮಧ್ಯೆ ಯಥಾರ್ಥ ಏಕತೆ ಇರುವುದೆಲ್ಲಿ? –  ಎಂಬುದನ್ನು ತೋರಿಸಲು ಕಾಲವಶದಿಂದ ನಷ್ಟವಾದ ಈ ಸನಾತನ ಧರ್ಮದ ಸಾರ್ವಲೌಕಿಕ ಮತ್ತು ಸಾರ್ವದೈಶಿಕ ಸ್ವರೂಪವನ್ನು ಸ್ವೀಯ ಜೀವನದಲ್ಲಿ ನಿಹಿತಗೈದು. ಸನಾತನ ಧರ್ಮದ ಜೀವಂತ ಉದಾಹರಣ ಸ್ವರೂಪವಾಗಿ, ಲೋಕಕಲ್ಯಾಣಕ್ಕಾಗಿ ನಿಜ ಜೀವನ ಪ್ರದರ್ಶನ ಗೈಯಲೆಂದು ಶ್ರೀ ಭಗವಾನ್ ರಾಮಕೃಷ್ಣಪರಮಹಂಸದೇವನು ಅವತಾರ ಮಾಡಿರುತ್ತಾನೆ.

ಅನಾದಿಯಿಂದಲೂ ಇರುವ ಸೃಷ್ಟಿಸ್ಥಿತಿಲಯ ಕರ್ತನ ಸಹಯೋಗಿಯಾದ ಶ್ರುತಿ. ಯಾವ ಪ್ರಕಾರ ಲುಪ್ತಪ್ರಾಯ  ಸಂಸ್ಕಾರವಾದ ಋಷಿ ಹೃದಯದಲ್ಲಿ ಆವಿರ್ಭೂತವಾಗುವುದು ಎಂಬುದನ್ನು ತೋರಿಸಲೂ, ಹಾಗೆ ಶ್ರುತಿ ಪ್ರಮಾಣೀಕೃತವಾದ ಧರ್ಮವು ಹೇಗೆ ಪುನುರುದ್ದಾರವಾಗಿ ಪುನಸ್ಥಾಪನೆಯಾಗಿ ಪುನಃ ಪ್ರಚಾರವಾಗುವುದು ಎಂಬುದನ್ನು ನಿದರ್ಶಿಸಲೂ ಈ ಕಳೇಬರದಲ್ಲಿ ಮೂಡಿರುವ ವೇದಮೂರ್ತಿಯಾದ ಜಗದೀಶ್ವರನು ಹೊರಗಿನ ವಿದ್ಯೆಯ ಆಡಂಬರವನ್ನು ಸ್ವಲ್ಪ ಹೆಚ್ಚುಕಡಿಮೆ ಸಂಪೂರ್ಣವಾಗಿಯೆ ಉಪೇಕ್ಷಿಸಿ ಅವತಾರ ಮಾಡಿರುತ್ತಾನೆ.

ವೇದದ ಎಂದರೆ ಶಾಶ್ವತಧರ್ಮದ, ಬ್ರಾಹ್ಮಣತ್ವದ ಎಂದರೆ ಧರ್ಮ ಶಿಕ್ಷಕತ್ವದ ರಕ್ಷಣೆಗಾಗಿ ಭಗವಂತನು ಹೇಗೆ ಬಾರಿಬಾರಿಗೂ ಶರೀರಧಾರಣೆ ಮಾಡಿದ್ದಾನೆ ಎಂಬುದು ಸ್ಮೃತ್ಯಾದಿಗಳಲ್ಲಿ ಪ್ರಸಿದ್ಧವಾಗಿದೆ.

ವೇಗದಿಂದ ಧುಮುಕಿದ ನದಿಯ ಜಲರಾಶಿಯು ಸಮಧಿಕತರ ವೇಗದಿಮದ ಪ್ರವಹಿಸುವುದು; ಪುನರುತ್ಥಿತ ತರಂಗವು ಸಮಧಿಕ ವಿಸ್ಛಾರಿತವಾಗುವುದು. ಅದೇ ರೀತಿ ಪ್ರತಿಯೊಂದು ಪತನದ ಅನಂತರದಲ್ಲಿಯೂ ಆರ್ಯ ಸಮಾಜವು ಶ್ರೀಭಗವಂತನ ಕಾರುಣಿಜ ನಿಯಂತ್ರತ್ವದಲ್ಲಿ ಹೇಗೆ ವಿಗತ ಜಾಡ್ಯವಾಗಿ, ನವಚೇತನ ಕಾರಿಯಾಗಿ, ಮೊದಲಿಗಿಂತಲೂ ಇಮ್ಮಡಿ ಯಶಸ್ವಿಯಾಗಿ ವೀರ್ಯವತ್ತಾಗಿರುತ್ತದೆ ಎಂಬುದು ಇತಿಹಾಸ ಪ್ರಸಿದ್ಧವಾದ ಸಂಗತಿಯಾಗಿದೆ.

ಒಂದೊಂದು ಪತನಾನಂತರವೂ ನಮ್ಮ ಪುನರುತ್ಥಿತ ಸಮಾಜವು ಅಂತರ್ನಿಹಿತವಾದ ತನ್ನ ಸನಾತನ ಪೂರ್ಣತ್ವವನ್ನು ಮತ್ತಷ್ಟು ಅಧಿಕವಾಗಿ ಪ್ರಕಾಶ ಪಡಿಸುತ್ತಿದೆ. ಅಂತೆಯೆ ಸರ್ವಭೂತಾಂತರ್ಯಾಮಿಯಾದ ಪ್ರಭುವೂ ಒಂದೊಂದು ಹೊಸ ಅವತಾರದಲ್ಲಿಯೂ ಹೆಚ್ಚು ಹೆಚ್ಚಾಗಿ ಆತ್ಮ ಸ್ವರೂಪವನ್ನು ಅಭಿವ್ಯಕ್ತಗೊಳಿಸುತ್ತಿದ್ದಾನೆ.

ಬಾರಿಬಾರಿಗೂ ಈ ಭಾರತಭೂಮಾತೆ ಮೂರ್ಛಾಪನ್ನೆಯಾಗುತ್ತಿರುವಳು; ಬಾರಿ ಬಾರಿಗೂ ಭಗವಂತನ ಆತ್ಮಾಭಿವ್ಯಕ್ತಿಯಿಂದ ಪುನರುಜ್ಜೀವಿತೆಯಾಗುತ್ತಿರುವಳು.

ಆದರೆ ಈಗಾಗಲೆ ಅರೆಪಾಲು ಕಳೆದಿರುವ, ತುದಿಮುಟ್ಟುತ್ತಿರುವ ಇನ್ನೇನು ದಿನಮುಖವಾಗುತ್ತಲಿರುವ ಈ ವರ್ತಮಾನ ಗಂಭೀರ ವಿಶಾಲ ರಜನಿಯನ್ನು ಹೋಲುವ ಮತ್ತಾವ ಅಮಾನಿಶೆಯೂ ಈ ಹಿಂದೆ ಈ ಭರತಭೂಮಿಯನ್ನು ಈ ರೀತಿ ಮುಚ್ಚಿ ಮುಸುಕಿರಲಿಲ್ಲ. ಈ ಪತನದ ಗಭೀರತೆಯ ಮುಂದೆ, ಈ ಅವನತಿಯಾಳದ ಮುಂದೆ, ಪ್ರಾಚೀನ ಪತನ ಸಮಸ್ತವೂ ಗೋಷ್ಪದತುಲ್ಯವೆಂದೇ ಹೇಳಿಬಿಡುಬಹುದು.

ಆದ್ದರಿಂದ ಈ ನವಜಾಗ್ರತಿಯ, ಈ ನವಚೈತನ್ಯದ, ಈ ಹೊಸ ಹುರುಪಿನ ಸಮುಜ್ವಲ ಜ್ಯೋತಿಯ ಮುಂದೆ ಪೂರ್ವಪೂರ್ವಯುಗಗಳ ಪ್ರಬೋಧನ ಸಮೂಹಗಳು ಸೂರ್ಯಾಲೋಕದಲ್ಲಿರುವ ತಾರಾವಳಿಗಳಂತೆ ಮಹಿಮಾನವಿಹೀನವಾಗಿಬಿಡುವುವು; ಹಾಗೆಯೆ ಈ ಪುನರುತ್ಥಾನದ ಈ ಮಹಾಶಕ್ತಿಯ ಸಮಕ್ಷದಲ್ಲಿ ಪೂರ್ವಪೂರ್ವ ಯುಗಗಳಲ್ಲಿ ಪುನಃಪುನರ್ಲಬ್ದವಾದ ಪ್ರಾಚೀನ ಶಕ್ತಿಗಳೆಲ್ಲವೂ ಬರಿಯ ಬಾಲಲೀಲೆಯಂತಾಗಿ ಮಸುಳಿ ಹೋಗುವುವು.

ವರ್ತಮಾನ ಪತನಾವಸ್ಥೆಯ ಕಾಲದಲ್ಲಿ ಸನಾತನ ಧರ್ಮದ ಸಮಗ್ರ ಭಾವಸಮಷ್ಟಿಯು ಅಧಿಕಾರಿಹೀನತೆಯಿಂದ ಇತಸ್ತತಃ ವಿಕ್ಷಿಪ್ತವಾಗಿ, ಕ್ಷುದ್ರ ಕ್ಷುದ್ರ ಸಂಪ್ರದಾಯಗಳಲ್ಲಿ ಪರಿಣಮಿಸಿ, ಎಲ್ಲಿಯೋ ಕೆಲವೆಡೆಗಳಲ್ಲಿ ಆಂಶಿಕ ಭಾವದಲ್ಲಿ ಮಾತ್ರ ಪರಿರಕ್ಷಿತವಾಗಿ, ಮತ್ತೆ ಕೆಲವೆಡೆಗಳಲ್ಲಿ ಸಂಪೂರ್ಣವಾಗಿ ಕುರುಪಿಲ್ಲದೆ ವಿಲುಪ್ತವಾಗಿ ಹೋಗಿದ್ದವು.

ಈ ನವೋತ್ಸಾಹದಲ್ಲಿ, ನವಬಲ ಬಲಾನ್ವಿತರಾದ ಮಾನವರು ಹೇಗೆ ಈ ವಿಖಂಡಿತವಾದ ವಿಕ್ಷಿಪ್ತವಾದ ಅಧ್ಯಾತ್ಮವಿದ್ಯೆಯನ್ನು ಸಮಷ್ಟೀಕೃತವನ್ನಾಗಿ ಮಾಡಿ. ತಮ್ಮ ಜೀವನದಲ್ಲಿ ಧಾರಣ ಮಾಡಿ, ಅಭ್ಯಾಸಮಾಡಿ, ಲುಪ್ತವಿದ್ಯೆಯನ್ನು ಪುನರಾವಿಷ್ಕಾರಗೊಳಿಸಲು ಸಮರ್ಥರಾಗುವರೊ ಎಂಬುದಕ್ಕೆ ನಿದರ್ಶನಸ್ವರೂಪವಾಗಿ ಪರಮ ಕಾರುಣಿಕ ಶ್ರೀ ಭಗವಂತನು ಈ ಆಧುನಿಕ ಯುಗದಲ್ಲಿ ಪೂರ್ವ ಯುಗಗಳಿಗಿಂತಲೂ ಸಮಧಿಕ ಸಂಪೂರ್ಣವೂ ಸರ್ವಭಾವ ಸಮನ್ವಿತವೂ ಸರ್ವವಿದ್ಯಾ ಸಹಾಯವೂ ಆದ ಪುರ್ವೋಕ್ತ ಯುಗಾವತಾರರೂಪವನ್ನು ಪ್ರಕಾಶಗೊಳಿಸಿರುತ್ತಾನೆ.

ಆದ್ದರಿಂದ ಈ ಮಹಾಯುಗದ ಪ್ರತ್ಯುಷೆಯಲ್ಲಿ ಸರ್ವಭಾವಗಳ ಸಮನ್ವಯವು ಪ್ರಚಾರವಾಗುವುದು; ಈ ಅಸೀಮ ಅನಂತಭಾವವು, ಸನಾತನಶಾಸ್ತ್ರ ಮತ್ತು ಧರ್ಮಗಳಲ್ಲಿ ನಿಹಿತವಾಗಿದ್ದರೂ ಕೆಲವು ಕಾಲ ಮಾತ್ರ ಪ್ರಚ್ಛನ್ನವಾಗಿದ್ದ ಈ ಅಸೀಮ ಅನಂತಭಾವವು, ಈ ಯುಗಾವತಾರನಿಂದ ಪುನರಾವಿಷ್ಕೃತವಾಗಿ ಪಾಂಚಜನ್ಯಸದೃಶವಾದ ಉಚ್ಚನಿನಾದದಿಂದ ಮಾನವ ಸಮಾಜದಲ್ಲಿ ಘೋಷಿತವಾಗುವುದು.

ಈ ನವಯುಗ ಧರ್ಮವು, ಸಮಗ್ರ ಜಗತ್ತಿನ, ಅದರಲ್ಲಿಯೂ ಭಾರತ ವರ್ಷದ ಕಲ್ಯಾಣಮಾರ್ಗವಾಗಿರುವುದು. ಅಲ್ಲದೆ ಈ ನವಯುಗ ಧರ್ಮ ಪ್ರವರ್ತಕನಾದ ಶ್ರೀಭಗವಾನ್ ರಾಮಕೃಷ್ಣನು ಹಿಂದೆ ಅವತರಿಸಿದ ಯುಗಧರ್ಮ ಪ್ರವರ್ತಕ ಸಮೂಹದ  ಪುನಃ ಸಂಸ್ಕೃತಿ ಮಹಾಪ್ರಕಾಶವಾಗಿರುತ್ತಾನೆ! – ಹೇಮಾನವ, ಇದನ್ನು ನಂಬು ನಂಬಿ ಬಾಳು.

ಹೇ ಮಾನವ, ಮೃತವ್ಯಕ್ತಿ ಪುನರಾಗತನಾಗಲಾರನು; ಕಳೆದ ಇರುಳು ಮರಳಲಾರದು; ಬೀಸಿದು; ಜೀವನ ಕೂಡ ಒಂದೇ ದೇಹವನ್ನು ಎರಡು ಸಾರಿ ಹೊಂದುವುದಿಲ್ಲ. ಆದ್ದರಿಂದ, ಓ ಮಾನವ, ಅತೀತದ ಪೂಜೆಯಿಂದ ಪ್ರತ್ಯಕದ ಪೂಜೆಗೆ, ನಿನಗಿದೋ ಆಹ್ವಾನ! ಗತಾನುಶೋಚನೆಯಿಂದ ಆಧುನಿಕ ನವಪ್ರಯತ್ನಕ್ಕೆ, ನಿನಗಿದೋ ಆಹ್ವಾನ! ಲುಪ್ತಪಂಥದ ಪುನರುದ್ದಾರ ಸಾಹಸದ ವೃಥಾ ಶಕ್ತಿಕ್ಷಯದಿಂದ ಸದ್ಯೋನಿರ್ವಿಯ ವಿಶಾಲ ಸನ್ನಿಕಟ ಪಥಕ್ಕೆ, ನಿನಗಿದೋ ಆಹ್ವಾನ! ಓ ಬುದ್ದಿಮಾನ್ ಮಾನವಾ, ಇದನ್ನು ತಿಳಿ, ಸಿದ್ಧನಾಗು, ಪ್ರಬುದ್ಧನಾಗು!

ಯಾವ ಶಕ್ತಿಯ ಉನ್ಮೇಷಮಾತ್ರದಿಮದಲೆ ದಿಗ್ದಿಂಗಂತ ವ್ಯಾಪಿಯಾದ ಪ್ರತಿ ಧ್ವನಿಯಿಂದ ಜಗತ್ತು ಜಾಗ್ರತವಾಗುತ್ತಿರುವುದೋ ಆ ಶಕ್ತಿಯ ಪೂರ್ಣತ್ವವನ್ನು ಭಾವಿಸಿ; ಅನುಭವಿಸು; ವೃಥಾ ಸಂದೇಹಬೇಡ; ದುರ್ಬಲತೆ ಬೇಡ; ದಾಸಜಾತಿ ಸುಲಭವಾದ ಈರ್ಷ್ಯಾದ್ವೇಷಗಳನ್ನು ದೂರಮಾಡಿ ಈ ಮಹಾ ಯುಗಚಕ್ರ ಪರಿವರ್ತನೆಯ ಸಹಾಯಾರ್ಥವಾಗಿ ಹೆಗಲುಕೊಟ್ಟುನಿಲ್ಲು; ಸೊಂಟಕಟ್ಟಿ ನಿಲ್ಲು; ಧೀರನಾಗಿ ನಿಲ್ಲು!

ನಾವು ಪ್ರಭುವಿನ ದಾಸರು, ಪ್ರಭುವಿನ ಪುತ್ರರು, ಪ್ರಭುವಿನ ಲೀಲೆಗೆ ಸಹಾಯಕರು ಎಂಬುದನ್ನು ತಿಳಿ. ವಿಶ್ವಾಸಹೃದಯದಿಂದ ದೃಢಭಾವಧಾರಿಯಾಗಿ ಕಾರ್ಯಕ್ಷೇತ್ರಕ್ಕೆ ಧುಮುಕು! ನಿರ್ಭರತೆಯಿಂದ ಧುಮುಕು!