ಕನ್ನಡ ಸಾಹಿತ್ಯವನ್ನು ಅಭಿವೃದ್ಧಿಪಡಿಸಬೇಕೆಂಬ ಘನೋದ್ದೇಶದಿಂದ ಮೈಸೂರು ವಿಶ್ವವಿದ್ಯಾನಿಲಯದ ಅಧಿಕಾರಿಗಳು ಒಂದು “ಕನ್ನಡ ಪ್ರಕಟನ ಸಮಿತಿ”ಯನ್ನು ನಿಯಮಿಸಿ, ಪ್ರತಿವರ್ಷವೂ ಪ್ರಸಿದ್ಧರಾದ ಗ್ರಂಥಕರ್ತರನ್ನು ನಿಷ್ಕರ್ಷಿಸಿ ಅವರಿಂದ ಗ್ರಂಥಗಳನ್ನು ಬರೆಯಿಸಿ ಪ್ರಕಟನೆಗೆ ಸಿದ್ಧಪಡಿಸುವುದಕ್ಕೆ ತಕ್ಕ ಏರ್ಪಾಡುಗಳನ್ನು ಮಾಡಿರುತ್ತಾರೆ.

ಈ ಗ್ರಂಥಗಳು ಎರಡು ಬಗೆಯವು –

೧. ಈ ನವೀನ ಕಾಲಕ್ಕೆ ಬೇಕಾದ ಮತ್ತು ಜನಸಾಮಾನ್ಯಕ್ಕೆ ಜ್ಞಾನವನ್ನು ಹರಡಬಲ್ಲ ಸಾಹಿತ್ಯ, ಕಲೆ, ವಿಜ್ಞಾನ, ತತ್ತ್ವ, ಚರಿತ್ರೆ, ಧರ್ಮ, ನೀತಿ, ಸಂಸ್ಕೃತಿ ಮುಂತಾದ ವಿಷಯಗಳನ್ನು ಲಲಿತವಾದ ಹೊಸಗನ್ನಡ ಶೈಲಿಯಲ್ಲಿ, ವಿವಾದಾಸ್ಪದವಲ್ಲದ ನಿಷ್ಕೃಷ್ಟವಾದ ರೀತಿಯಲ್ಲಿ ತಿಳಿಸತಕ್ಕುವು. ಇವು ಸ್ವತಂತ್ರ ಗ್ರಂಥಗಳಾಗಿರಬಹುದು ಅಥವಾ ಭಾಷಾಂತರಗಳಾಗಿರಬಹುದು, ಸಂಕಲನಗಳಾಗಿರಬಹುದು.

೨. ಕನ್ನಡದಲ್ಲಿ ಪೂರ್ವದ ಸಾಹಿತ್ಯವನ್ನು ಜನರಲ್ಲಿಯೂ ವಿದ್ಯಾರ್ಥಿವರ್ಗದಲ್ಲಿಯೂ ಹೆ‌ಚ್ಚು ಪ್ರಚಾರಕ್ಕೆ ತರುವುದಕ್ಕಾಗಿ ಉತ್ತಮ ಕಾವ್ಯಗಳ ಸಂಗ್ರಹಗಳು, ಇವು ವಿದ್ಯಾರ್ಥಿಗಳ ಪಾಠಕ್ಕೆ ಅನುಕೂಲವಾಗಿರಬೇಕು; ಮೂಲ ಪ್ರತಿಗಳನ್ನು ಪರಿಶೋಧಿಸಿದ ಶುದ್ಧ ಪಾಠಗಳನ್ನು ಒಳಗೊಂಡು ಪೀಠಿಕೆ, ಶಬ್ದಕೋಶ, ಆವಶ್ಯಕವಾದ ಟಿಪ್ಪಣಿಗಳು – ಇವುಗಳೊಡನೆ ಕೂಡಿರಬೇಕು.

ಭರತವರ್ಷದ ಧರ್ಮ ಸಂಸ್ಕೃತಿ ಸಾಹಿತ್ಯಗಳನ್ನು ಕುರಿತು ಬರೆಯಲು ಉದ್ದೇಶಿಸಿರುವ ಗ್ರಂಥಗಳಲ್ಲಿ ಮೊದಲನೆಯದಾಗಿ ಈ ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆಯನ್ನು ಉಜ್ಜ್ವಲ ಸ್ಫೂರ್ತಿಯಿಂದ ರಚಿಸಿದುದಕ್ಕಾಗಿ ಪ್ರಸಿದ್ಧ ಕವಿಗಳೂ ಸಾಹಿತಿಗಳೂ ಆದ ಶ್ರೀಮಾನ್ ಕೆ.ವಿ. ಪುಟ್ಟಪ್ಪನವರಿಗೆ ಕನ್ನಡಿಗರೆಲ್ಲರೂ ಕೃತಜ್ಞರು. ಪರಮಹಂಸರ ಮಹಾ ಪ್ರಭಾವದಿಂದಲೂ ದಿವ್ಯಚರಿತೆಯಿಂದಲೂ ಘನವಾದ ಉಪದೇಶ ಸಾರಾವಳಿಯಿಂದಲೂ ಕನ್ನಡಿಗರಲ್ಲಿ ಧರ್ಮಸಮನ್ವಯ ಬುದ್ಧಿಯೂ ವಿಶಾಲ ಹೃದಯವೂ ವೀರಚೈತನ್ಯವೂ ಉಂಟಾಗಬೇಕೆಂಬುದೇ ನಮ್ಮ ಆಶಯ. ಹೊಸ ಭಾರತದಲ್ಲಿ ಹೊಸ ಕರ್ಣಾಟಕವು ಶ್ರೇಷ್ಠಪದವಿಗೇರಲೆಂಬುದೇ ನಮ್ಮ ಹಾರೈಕೆ. ಈಗಾಗಲೇ ಅಚ್ಚಾಗಿರುವ ಶ್ರೀಮಾನ್ ಎ.ಎನ್. ಮೂರ್ತಿರಾಯರ ಸಾಕ್ರೆಟೀಸ್ ಮಹಾನುಭಾವನ ಚರಿತ್ರೆಯಲ್ಲಿ ಕಾಣುವ ಧರ್ಮಾನ್ವೇಷಣೆಯೂ ಆತ್ಮಯಜ್ಞವೂ, ಭಾರತ ಪುತ್ರನಾದ ಈ ಮಹಾಜ್ಯೋತಿಯ ಆತ್ಮವಿಕಾಸದೊಡನೆ ಬೆರೆತು ಕನ್ನಡ ಮಕ್ಕಳನ್ನು ಪವಿತ್ರ ಚರಿತರನ್ನಾಗಿಯೂ ಸೇವಾತತ್ಪರರನ್ನಾಗಿಯೂ, ಧೀರರನ್ನಾಗಿಯೂ ಮಾಡಲೆಂಬುದೇ ಸದಾ ಪ್ರಾರ್ಥನೆ.

ಭಗವತ್ಕೃಪೆಯಿಂದಲೂ ಕನ್ನಡಿಗರ ಸೌಹಾರ್ದ ಸಹಕಾರಗಳಿಂದಲೂ ನಮ್ಮ ವಿಶ್ವವಿದ್ಯಾನಿಲಯದ ಕನ್ನಡ ಗ್ರಂಥಮಾಲೆ ಬೆಳೆಯುತ್ತಾ ಬರಲಿ.

ಬಿ. ಎಂ. ಶ್ರೀಕಂಠಯ್ಯ
ಸಮಿತಿಯ ಅಧ್ಯಕ್ಷ ಮತ್ತು ಪ್ರಧಾನ ಸಂಪಾದಕ
ಬೆಂಗಳೂರು
೧೮-೧೨-೧೯೩೪