ಇಂಗ್ಲಿಷರು ಭರತಖಂಡವನ್ನು ಜಯಿಸಲು ಉಪಕ್ರಮಿಸಿದಾಗ ದೇಶದ ಪರಿಸ್ಥಿತಿ ಶೋಚನೀಯವಾಗಿತ್ತು. ಔರಂಗಜೇಬನ ತರುವಾಯ ಮೊಗಲರ ಚಕ್ರಾಧಿಪತ್ಯ ಒರಲೆ ಹಿಡಿದ ಮುದಿಮರದಂತೆ ತತ್ತರಿಸುತ್ತಿದ್ದಿತು. ಮಹಾರಾಷ್ಟ್ರರೂ ಸಿಖ್ಖರೂ ಧರ್ಮರಕ್ಷಣೆಯ ಸಲುವಾಗಿ ರಾಜ್ಯಸ್ಥಾಪನೆಗೆ ಕೈಹಾಕಿ ಮಹಮ್ಮದೀಯರ ಬಲದರ್ಪಗಳನ್ನು ಸರ್ವವಿಧದಿಂದಲೂ ನಾಶಗೊಳಿಸುತ್ತಿದ್ದರು. ರಾಜಕೀಯ ಪ್ರಪಂಚದಲ್ಲಿದ್ದಂತೆಯೆ ಧರ್ಮಪ್ರಪಂಚದಲ್ಲಿಯೂ ಸಂಕುಚಿತಭಾಗಳೂ ಕುಂದು ಕೊರತೆಗಳೂ ಒಡಕುಬಿರುಕುಗಳೂ ಯಥೇಚ್ಛವಾಗಿದ್ದುವು. ಅರ್ಥಹೀನವಾದ ನೂರಾರು ದೇಶಾಚಾರ ಲೋಕಾಚಾರ ಮತಾಚಾರಗಳು ಐಕ್ಯಭಂಗಚಾರಿಗಳಾದ ಸಾವಿರರು ಸಾಂಕ್ರಾಮಿಕ ಜಾತಿಪದ್ಧತಿಗಳೂ ಕ್ಷುದ್ರವೂ ಶುಷ್ಕವೂ ಈರ್ಷ್ಯಾ ಮೂಲವೂ ಆದ ಅನೇಕ ವಾದವಿವಾದಗಳೂ ಭರತವರ್ಷವನ್ನು ಛಿದ್ರ ಛಿದ್ರ ಮಾಡಿದ್ದವು. ಭಾರತೀಯರು ಉಪನಿಷತ್ತುಗಳಿಂದಲೂ ಮಹರ್ಷಿಗಳಿಂದಲೂ ಆಚಾರ್ಯರಿಂದಲೂ ಪ್ರಣೀತವಾದ ಮಹಾಧರ್ಮದ ಅಂತರಾತ್ಮವನ್ನು ಸಂಪೂರ್ಣವಾಗಿ ಮರೆತು ಅದರ ಶವದ ಹಂಚಿಕೆಗಾಗಿ ಕಚ್ಚಾಡುತ್ತಿದ್ದರು. ಸರ್ವಧರ್ಮಗರ್ಭಿತವಾದ ವೇದಾಂತ ದರ್ಶನವು ಜನಸಮುದಾಯವನ್ನು ತ್ಯಜಿಸಿ ವಾದಪ್ರಿಯರಾದ ಹಲಕೆಲವು ಪಂಡಿತರ ಸ್ವತ್ತಾಗಿತ್ತು. ಆ ಪಂಡಿತರು ಅಧಿಕಾರವಾದವನ್ನು ಆಶ್ರಯಿಸಿ ಅಮೃತದಾಯಕವಾದ ವೇದಾಂತ ದರ್ಶನದ ದಿವ್ಯಜ್ಯೋತಿ ಪಾಮರಜನರ ಕಣ್ಣಿಗೆ ಬೇಶದಿರುವಂತೆ ಜಾಗರೂಕರಾಗಿದ್ದರು. ಅದಕ್ಕೆ ಫಲರೂಪವಾಗಿ ಜನರು ಉಪನಿಷತ್ತುಗಳ “ಏಕವೇವಾದ್ವಿತೀಯಂ ಬ್ರಹ್ಮ”ದ ಆರಾಧನೆಯನ್ನು ತ್ಯಜಿಸಿ, ಪುರಾಣೋಕ್ತ ದೇವತೆಗಳನ್ನು ಭಜಿಸಿ “ಏಕಂ ಸತ್ ವಿಪ್ರಾ ಬಹುಧಾ ವದಂತಿ” ಎಂಬುದನ್ನೂ ಮರೆತು, ಶಿವವಿಷ್ಣುಗಳಿಗೆ ಪಕ್ಷಪ್ರತಿಪಕ್ಷಗಳನ್ನು ಹೂಡಿ, ಕಕ್ಷಿ ಪ್ರತಿಕಕ್ಷಿಗಳಾಗಿ ನಿಂತು ಹೊಡೆದಾಡುವುದರಲ್ಲಿಯೆ ಮಗ್ನರಾಗಿದ್ದರು. ಜನರಲ್ಲಿ ರಾಜಕೀಯಬುದ್ಧಿಯಂತೆಯೆ ಆಧ್ಯಾತ್ಮಿಕಬುದ್ಧಿಯೂ ಲೋಪವಾಗಿತ್ತು. ಆರ್ಯಧರ್ಮದ ಉದಾರ ಚಿರಜಾಜ್ವಲ್ಯಮಾನವಾಗಿದ್ದ ಪ್ರದೀಪ ಜನರ ಭಾಗಕ್ಕೆ ನಂದಿಹೋಗಿತ್ತು.

ಆದ್ದರಿಂದಲೆ ಪಾಶ್ಚಾತ್ಯ ಸಂಸ್ಕೃತಿಯ ನವಕಾಂತಿಯನ್ನು ಸಂದರ್ಶಿಸಿದ ತರುಣಭಾರತೀಯರು ಆನಂದದಿಂದ ಉನ್ಮತ್ತರಾದರು!

ಆಂಗ್ಲೇಯರ ಪ್ರಭಾವ ಮೊದಲು ಹಬ್ಬಿದುದು ವಂಗದೇಶದಲ್ಲಿ. ಕ್ರಿಸ್ತಾಬ್ದ ೧೮೦೦ರಲ್ಲಿ ಕಲ್ಕತ್ತಾ ನಗರದಲ್ಲಿ ಒಂದು ಕಾಲೇಜು ಸ್ಥಾಪಿತವಾಯಿತು. ಕ್ರಮೇಣ ಪಾಶ್ಚಾತ್ಯರ ದರ್ಶನಶಾಸ್ತ್ರ ವಿಜ್ಞಾನಶಾಸ್ತ್ರ ರಾಜ್ಯಶಾಸ್ತ್ರ ಸಮಾಜಶಾಸ್ತ್ರಗಳೂ ಫ್ರಾನ್ಸ್ ದೇಶದ ಮಹಾ ವಿಪ್ಲದ ಇತಿಹಾಸ ಮತ್ತು ತತ್ತ್ವಗಳೂ ವಂಗಯುವಕರ ಹಸ್ತಗತವಾದುವು. ಡೇಕಾರ್ಟೆ, ಹ್ಯೂಮ್, ಕಾಂಟ್, ಫಿಷ್ಟೆ, ಸ್ಪಿನೋಸ, ಹೇಗೆಲ್, ಷೋಪನ್ಹಾರ್, ಆಗಸ್ಟ್ ಕಾಮಟೆ, ಡಾರ್ವಿನ್, ಗ್ರೀನ್, ಗಿಬ್ಬನ್, ಷೆಲ್ಲಿ, ವರ್ಡ್ಸ್‌ವರ್ತ್ ಮೊದಲಾದ ದಾರ್ಶನಿಕರ, ವೈಜ್ಞಾನಿಕರ ಮತ್ತು ಕವಿಗಳ ಮಹಾದಾಲೋಚನೆಗಳೂ ಭಾವಗಳೂ ಹಬ್ಬಿದುವು. ಐರೋಪ್ಯ ಅಧ್ಯಾಪಕರು ಭಾರತೀಯ ಯುವಕರ ಉದಾಸೀನ ಚಿತ್ತತೆಯನ್ನು ಮಥಿಸಿದರು. ಹಳೆಯ ನಂಬುಗೆಗಳು ಕಳಚಿ ಬಿದ್ದುವು. ಆರ್ಯಸಂಸ್ಕೃತಿಯ ನೈಜತತ್ತ್ವಗಳ ಪರಿಚಯವಿಲ್ಲದ ಅಧ್ಯಾಪಕರು ಆ ವಿಷಯದಲ್ಲಿ ತಮ್ಮಂತೆಯೆ ಅಜ್ಞಾನಿಗಳಾಗಿದ್ದ ಯುವಕರಿಗೆ ಬಾಹ್ಯದೃಷ್ಟಿಗೆ ಗೋಚರವಾಗುತ್ತಿದ್ದ ಹಿಂದೂಧರ್ಮದ ಅವಿವೇಕಗಳನ್ನೂ ಅನಾಚಾರಗಳನ್ನೂ ಎತ್ತಿಹಿಡಿದು ತೋರಿ, ಒತ್ತಿನುಡಿದು ಬೋಧಿಸಿ, ಆರ್ಯಧರ್ಮ ಅನಾಗರಿಕವೆಂದೂ ಮೌಢ್ಯಗಳ ಮುದ್ದೆಯೆಂದೂ ಉಪದೇಶಮಾಡಿದರು. ಇದರ ಪರಿಣಾಮವಾಗಿ ಕೃತವಿದ್ಯರಾದ ಯುವಕರು ಸ್ವಧರ್ಮಖಂಡನೆಗೆ ಕೈ ಇಟ್ಟರು. ಚೆನ್ನಾಗಿ ತಿಳಿದು ವಿಮರ್ಶೆಮಾಡಿದ ಹೊರತೂ ಯಾವುದನ್ನಾಗಲಿ ಸ್ವೀಕರಿಬಾರದೆಂದು ತಾವು ಪಾಶ್ಚಾತ್ಯರಿಂದ ಕಲಿತ ನೂತನ ತತ್ತ್ವವನ್ನು ತಮ್ಮ ಸ್ವಧರ್ಮ ಖಂಡನೆಯ ವಿಚಾರದಲ್ಲಿಯೂ ಪ್ರಯೋಗಿಸುವದನ್ನು ಅವರು ಮರೆತರು. ಪಾಶ್ಚಾತ್ಯರ ಅಂಧಾನುಕರಣೆ ನವಸಂಪ್ರದಾಯವಾಯಿತು. ರಭಸಮತಿಗಳಿಗೆ ವಿಮರ್ಶೆಮಾಡಲು ಸಮಯವೆಲ್ಲಿ? ಜೊತೆಗೆ ಕ್ರೈಸ್ತ ಪಾದ್ರಿಗಳು ಮತ ಪ್ರಚಾರ ಮಾಡಲು ಹೊರಟು ನಿರ್ದಾಕ್ಷಿಣ್ಯವಾಗಿ ಖಂಡನೆಯ ಕತ್ತಿಯನ್ನು ಬೀಸತೊಡಗಿದರು. ಹೀಗಾಗಿ ಅನೇಕ ಶತಮಾನಗಳ ಅನುಭವದಿಂದಲೂ ತಪಸ್ಸಿನಿಂದಲೂ ಆರ್ಯರು ಆರ್ಜಿಸಿದ ಸನಾತನ ಸಂಸ್ಕೃತಿ ಪಾಶ್ಚಾತ್ಯಸಂಸ್ಕೃತಿಯ ನೂತನ ಜಂಝಾವಾತಕ್ಕೆ ಸಿಕ್ಕಿ ಮುಳಗಿ ಸರ್ವನಾಶವಾಗುವಂತೆ ತೋರಿತು.

ಆದರೆ ಯುಗಯುಗಗಳಿಂದ ಎಷ್ಟೋ ಪರಕೀಯ ಸಂಸ್ಕೃತಿಗಳ ಸಂಘಟ್ಟನೆಗೆ ಸಿಕ್ಕಿ ಸ್ವಲ್ಪವೂ ಅಚ್ಚಳಿಯದೆ ಧೀರವಾಗಿ ನಿಂತಿರುವ ವಜ್ರದೇಹಿಯಾದ ಹಿಮಾಲಯ ನವಜಾತ ಶಿಶುಪ್ರಹಾರದಿಂದ ಹುಡಿಯಾಗುವುದೆ? ಸ್ವಲ್ಪಕಾಲದಲ್ಲಿಯೆ ವಿವೇಕ ವಿಚಾರಪೂರ್ಣವಾದ ಆರ್ಯಧರ್ಮದ ಪ್ರಚಂಡ ಪ್ರತಿಭಟನೆಯ ಮಹಾವಾಣಿ ದಿಗ್ದಿಗಂತಗಳಲ್ಲಿ ಅನುರಣಿತವಾಯಿತು. ಆರ್ಯಮಾತೆಯ ಶಿಶುಗಳು ಮಂತ್ರಶಾಂತರಾದಂತೆ ಮೊಗವೆತ್ತಿ ಆಲಿಸುತ್ತ ನಿಂತರು. ಪಾಶ್ಚಾತ್ಯ ಪ್ರಭುಗಳೂ ಸ್ತಬ್ಧರಾಗಿ ಕಿವಿಗೊಟ್ಟರು.

ಆರ್ಯಧರ್ಮ ಇತರ ಮತಗಳಂತೆ ಏಕವ್ಯಕ್ತಿಯ ಅಧಿಕಾರವಾಣಿಯಲ್ಲ; ಅನೇಕ ಅಪೌರುಷೇಯ ತತ್ತ್ವಗಳ ಶ್ರೇಣಿ. ಆ ಮಹಾ ವಾಹಿನಿಗೆ ಅನೇಕ ಸಂಸ್ಕೃತಿಗಳು ಉಪನದಿಗಳಾಗಿವೆ. ಅದು ಯಾವ ಬೆಳಕನ್ನೂ ಅನ್ಯವೆಂದು ಹಳಿದುದಿಲ್ಲ. ಇಸ್ಲಾಂ ಸಂಸ್ಕೃತಿ ತನ್ನಲ್ಲಿಗೆ ಬಂದಾಗ ಅದರ ಉತ್ತಮಾಂಶಗಳನ್ನೂ ಹೀರಿಕೊಳ್ಳಲು ಪ್ರಯತ್ನಪಟ್ಟಂತೆಯೇ ಪಾಶ್ಚಾತ್ಯ ಸಂಸ್ಕೃತಿಯ ಉತ್ತಮಾಂಶಗಳನ್ನು ಸ್ವೀಕರಿಸಿ ತನ್ನ ಅಸ್ತಿತ್ವಕ್ಕೆ ಚ್ಯುತಿಬಾರದಂತೆ ನೋಡಿಕೊಳ್ಳುವ ಸಲುವಾಗಿ ಹೆಡೆಯೆತ್ತಿ ನಿಂತಿತು.

ಆರ್ಯ, ಇಸ್ಲಾಂ ಮತ್ತು ಪಾಶ್ಚಾತ್ಯ ಸಂಸ್ಕೃತಿಗಳ ಪರಸ್ಪರ ಕ್ರಿಯೆ ಪ್ರತಿಕ್ರಿಯೆಗಳಿಂದ ಮೈದೋರಿದ ಮೊದಲನೆಯ ಮಹಾವ್ಯಕ್ತಿಯೆಂದರೆ ರಾಜಾ ರಾಮ ಮೋಹನರಾಯ. ಐವತ್ತೊಂಬತ್ತು ವರ್ಷಗಳ (ಕ್ರಿ. ಶ. ೧೭೭೪ – ೧೮೩೩) ಕಾರ್ಯಮಯ ಜೀವಮಾನದಲ್ಲಿ ಆತನು ಎಸಗಿದ ಸುಧಾರಣೆಗಳಿಂದ ಭರತ ವರ್ಷದ ಸಾಮಾಜಿಕ ಮತ್ತು ಮಾನಸಿಕ ಜೀವನವೆ ಹೊಸದಾಯಿತು.

ವಂಗದೇಶದ ಶ್ರೀಮಂತವಂಶವೊಂದರಲ್ಲಿ ಜನಿಸಿದ ಆತನು ಮೊಗಲ ಚಕ್ರವರ್ತಿಯ ಆಸ್ಥಾನದ ಆವರಣದಲ್ಲಿ ಬೆಳೆದನು. ಅಲ್ಲಿ ಪಾರ್ಸೀ ಅರಬ್ಬೀ ಭಾಷೆಗಳನ್ನು ಕಲಿತು, ಪಾಟ್ನಾದ ವಿದ್ಯಾಶಾಲೆಯಲ್ಲಿ ಅರಬ್ಬೀ ಭಾಷೆಗೆ ಭಾಷಾಂತರವಾಗಿದ್ದ ಅರಿಸ್ಟಾಟಲ್ ಮತ್ತು ಯೂಕ್ಲಿಡ್ಡರ ಗ್ರಂಥಗಳನ್ನು ಅಧ್ಯಯನಮಾಡಿದನು. ಸಾಂಪ್ರದಾಯಿಕ ಬ್ರಾಹ್ಮಣರ ಕುಮಾರನಾಗಿದ್ದ ಆತನು ಇಸ್ಲಾಂ ಸಂಸ್ಕೃತಿಯಿಂದ ಪೋಷಿತನಾದನು. ಹದಿನಾಲ್ಕನೆಯ ವರ್ಷದಲ್ಲಿ ಕಾಶಿಯಲ್ಲಿ ಸಂಸ್ಕೃತವನ್ನು ಕಲಿತು ಹಿಂದೂ ಶಾಸ್ತ್ರಗಳನ್ನು ಓದಿದನು. ಅಂದಿನಿಂದ ಆರ್ಯಧರ್ಮದಂತೆ ಧ್ಯಾನ ಯೋಗಗಳನ್ನು ಅಭ್ಯಾಸ ಮಾಡತೊಡಗಿದನು. ಚಿಕ್ಕಂದಿನಿಂದಲೂ ಸೂಫಿ ಕವಿಗಳ ಭಕ್ತಿಮತದಲ್ಲಿಯೆ ಬೆಳೆದ ಆತನ ಆತ್ಮವು ವೇದಾಂತ ಜನನಿಯ ಅಮೃತಪಾನದಿಂದ ಪರಿಪುಷ್ಪವಾಯಿತು. ಸ್ವಭಾವತಃ ಯೋದ್ಧನಾಗಿದ್ದ  ರಾಯನು ಆರ್ಯಧರ್ಮ ಬೋಧಿಸುತ್ತಿದ್ದ ಉಚ್ಚಧ್ಯೇಯಕ್ಕೂ ಆರ್ಯರು ಅನುಸರಿಸುತ್ತಿದ್ದ ತುಚ್ಛ ಆಚಾರಗಳಿಗೂ ಇದ್ದ  ಅಂತರವನ್ನು ನೋಡಿ ಸಹಿಸಲಾರದೆ ಹೋದನು. ಮಲಗಿದ್ದವರನ್ನು ಎಚ್ಚರ ಮಾಡಲೆಂದು, ಅರಬ್ಬೀ ಭಾಷೆಯ ಒಂದು ಮುನ್ನುಡಿಯೊಡನೆ ಪಾರ್ಸೀ ಭಾಷೆಯಲ್ಲಿ ಆಗಿ ಸಂಪ್ರದಾಯದ ಹಿಂದೂಧರ್ಮವನ್ನು ಕಠಿನವಾಗಿ ವಿಮರ್ಶೆ ಮಾಡಿ ಒಂದು ಗ್ರಂಥವನ್ನು ಬರೆದು ಪ್ರಚುರಪಡಿಸಿದನು. ಅದರಿಂದ ಕುಪಿತನಾದ ಆತನ ತಂದೆ ರಾಯನನ್ನು ಮನೆಯಿಂದ ಓಡಿಸಿದನು. ಗೃಹಚ್ಯುತನಾದ ರಾಯನು ಭರತಖಂಡದಲ್ಲಿಯೂ ತಿಬೆಟ್ಟಿನಲ್ಲಿಯೂ ಸಂಚಾರಮಾಡಿ ಬೌದ್ಧಮತದ ತತ್ತ್ವಗಳನ್ನು ಚೆನ್ನಾಗಿ ತಿಳಿದುಕೊಂಡು, ಅನೇಕ ಕಷ್ಟಪರಂಪರೆಗಳನ್ನು ಸಹಿಸಿ ಹಿಂದುರುಗಿದನು. ತಂದೆ ಕಂದನನ್ನು ಕರುಣಿಸಿ ಮನ್ನಿಸಿ ಮನೆಗೆ ಕರೆದು, ತುಂಟ ಕುದುರೆಗೆ ಕಡಿವಾಣ ಹಾಕುವೆನೆಂದು ಬಯಸಿ ರಾಯನಿಗೆ ಮದುವೆ ಮಾಡಿದನು. ಆದರೂ ಕುದುರೆ ಪಳಗಲಿಲ್ಲ.

ಇಪ್ಪತ್ತನಾಲ್ಕನೆಯ ವಯಸ್ಸಿನಲ್ಲಿ ರಾಯನು ಇಂಗ್ಲೀಷು, ಹೀಬ್ರೂ, ಗ್ರೀಕ್, ಲ್ಯಾಟಿನ್ ಭಾಷೆಗಳನ್ನು ಚೆನ್ನಾಗಿ ಕಲಿತು ಪಾಶ್ಚಾತ್ಯರ ರಾಜ್ಯಶಾಸನ ಪದ್ಧತಿಗಳಲ್ಲಿ ಪರಿಚಯ ಹೊಂದಿದನು. ಪಾಶ್ಚಾತ್ಯರಲ್ಲಿ ಅದುವರೆಗೆ ಆತನಿಗಿದ್ದ ತಿರಸ್ಕಾರ ಮಾಯವಾಗಿ ಗೌರವಬುದ್ಧಿ ಉದ್ದೀಪ್ತವಾಯಿತು. ಭರತಖಂಡದ ಕಲ್ಯಾಣ ಇಂಗ್ಲಿಷರ ಸಹಕಾರದಿಂದಲೆ ಸಾಧ್ಯವೆಂದು ಮನಗಂಡು, ಅವರೊಡನೆ ಸಹಕರಿಸಿ, ಸಹಗಮನ ಮೊದಲಾದ ಅನಾಗರಿಕ ಕ್ರೂರ ಪದ್ಧತಿಗಳ ಮೇಲೆ ಪುನಃ ಖಂಡನೆಯ ಮಳೆಗರೆಯತೊಡಗಿ, ಮತ್ತೆ ಸಂಪ್ರದಾಯದ ಬ್ರಾಹ್ಮಣವರ್ಗದವರ ಉಗ್ರ ಕೋಪಕ್ಕೆ ಈಡಾದನು. ಕ್ರಿ. ಶ. ೧೭೯೯ರಲ್ಲಿ ಮರಳಿ ಗೃಹಚ್ಯುತಿಯಾಯಿತು. ತಾಯಿ, ಹೆಂಡತಿ ಮತ್ತು ಹತ್ತಿರದ ಬಂಧುಗಳೆಲ್ಲ ದೂರವಾದರು. ಪುನಃ ಹನ್ನೆರಡು ವರ್ಷಗಳು ತೊಳಲಿ ಬಳಲಿ ಕಡೆಗೆ ತೆರಿಗೆ ವಸೂಲಿಯ ಅಧಕಾರಿಯಾಗಿದ್ದು ಕ್ರಮೇಣ ಜಿಲ್ಲೆಯ ಮುಖ್ಯ ಸಚಿವನಾದನು.

ತಂದೆಯ ಮರಣಾನಂತರ ರಾಯನು ಪುನಃ ತನ್ನವರನ್ನು ಸೇರಿ ದೊಡ್ಡ ಜಮೀನುದಾರನಾದನು. ದೆಹಲಿಯ ಚಕ್ರವರ್ತಿ ಆತನಿಗೆ “ರಾಜಾ” ಎಂಬ ಬಿರುದನ್ನು ದಯಪಾಲಿಸಿದನು. ತರುವಾಯ ರಾಯನು ಕಲ್ಕತ್ತೆಯ ಪುಷ್ಪೋದ್ಯಾನ ಪರಿವೃತವಾದ ದಿವ್ಯಭವನವೊಂದರಲ್ಲಿ ಸುಖಿಯಾಗಿ ನಿಂತನು. ನಿಂತವನು ಪ್ರಚಂಡ ಸುಧಾರಣೆಯ ಕಾರ್ಯಕ್ಕೆ ಕೈಹಾಕಿದನು. ಉಪನಿಷತ್ತುಗಳ ನೈಜಜ್ಯೋತಿಯನ್ನು ಪುನಃ ಸ್ಥಾಪಿಸಬೇಕೆಂಬುದೆ ಆತನ ಮಹಾಧ್ಯೇಯವಾಯಿತು. ಅವುಗಳನ್ನು ವಂಗಭಾಷೆಗೆ ಭಾಷಾಂತರ ಮಾಡಿದನು. ಜೊತೆಗೆ ಬೈಬಲ್ಲನ್ನು ಓದಿದನು. ಕ್ರಿ. ಶ. ೧೮೨೦ರಲ್ಲಿ “ಸುಖಶಾಂತಿದಾಯಕ ಯೇಸುಕ್ರಿಸ್ತನ ಉಪದೇಶಾವಳಿ” ಎಂಬ ಗ್ರಂಥವನ್ನು ಪ್ರಕಟಿಸಿದನು. ಅದರಲ್ಲಿ ಹಿಂದೂಪುರಾಣಗಳ ಅವತಾರಗಳನ್ನು ಅಲ್ಲಗಳೆದಂತೆಯೇ ಕ್ರಿಸ್ತನ ಅವತಾರವನ್ನೂ ತಿರಸ್ಕರಿಸಿದನು. ರಾಯನಿಗೆ ಯೇಸುಕ್ರಿಸ್ತನು ನೀತಿವಂತನಾದ ಮಹಾಪುರುಷನಾಗಿದ್ದನೇ ಹೊರತು ಅತಾರವಾಗಿರಲಿಲ್ಲ. ಇದರ ಪರಿಣಾಮವಾಗಿ ಬ್ರಾಹ್ಮಣರೂ ಪಾದ್ರಿಗಳೂ ಎರಡು ವರ್ಗದವರೂ ಸೇರಿ ಆತನ ಮೇಲೆ ಕತ್ತಿ ಕಟ್ಟಿದರು. ಆದರೆ ವಜ್ರ ಮನಸ್ಕನಾದ ರಾಯನು ಸ್ವಲ್ಪವೂ ಎದೆಗೆಡದೆ ಏಕವೂ ಅದ್ವಿತೀಯವೂ ಅವಾಙ್ಮಾನಸಗೋಚರವೂ ಆದ “ಸತ್ಯಸ್ಯಸತ್ಯ” ದ, ಬ್ರಹ್ಮದ ಆರಾಧನೆಗಾಗಿ “ಆತ್ಮೀಯ ಸಭಾ” ಎಂಬೊಂದು ಧಾರ್ಮಿಕ ಸಂಸ್ಥೆಯನ್ನು ೧೮೧೫ರಲ್ಲಿ ಸ್ಥಾಪಿಸಿದನು. ೧೮೨೭ನೆಯ ಇಸವಿಯಲ್ಲಿ ಗಾಯತ್ರಿಯ ವಿಚಾರವಾಗಿ ಗ್ರಂಥವೊಂದನ್ನು ಹೊರಡಿಸಿದನು. ಮರುವರ್ಷವೆ ಠಾಕೂರ ವಂಶದವರೆ ಮೊದಲಾದ ಕೆಲವು ಜನ ಸನ್ಮಿತ್ರರೊಡಗೂಡಿ “ಬ್ರಾಹ್ಮಸಮಾಜ” ಸ್ಥಾಪನೆಮಾಡಿದನು. ಅಲ್ಲಿ ಸೃಷ್ಟಿ ಸ್ಥಿತಿ ಲಯ ಕರ್ತೃವಾದ ಸನಾತನ ಅನಿರ್ವಚನೀಯ ಬ್ರಹ್ಮತತ್ತ್ವದ ಯಪಾಸನೆಯೊಂದಲ್ಲದೆ ಬೇರೆ ಯಾವುದಕ್ಕೂ ಅವಕಾಶವಿಲ್ಲವೆಂದು ಸಾರಿದನು. ಅಲ್ಲಿ ಯಾವ ಮತದ ಯಾವ ದೇವರ ಯಾವ ಕರ್ಮಕ್ರಿಯೆಗಳಿಗೂ ಎಡೆಯಿರಲಿಲ್ಲ. ಮೂರ್ತಿಪೂಜೆ ಸಂಪೂರ್ಣವಾಗಿ ನಿಷಿದ್ಧವಾಯಿತು. ಜಾತಿ, ಮತ, ಜನಾಂಗ, ವರ್ಣ ಈ ಭೇದವಿಲ್ಲದೆ ಎಲ್ಲರಿಗೂ ಅಹ್ವಾನವಿತ್ತು. ಅನ್ಯಮತದ ದ್ವೇಷವಾಗಲಿ ನಿಂದೆಯಾಗಲಿ ಯಾವುದೂ ಅಲ್ಲಿ ಸುಳಿಕೂಡದೆಂದೂ ಕಟ್ಟಾಯಿತು. ಜ್ಞಾನಾತ್ಮಕ ಭಕ್ತಿಯೋಗವೆ ರಾಯನ ಮಹಾಮತ. ಶ್ರೀ ಚೈತನ್ಯ ಪ್ರಣೀತವಾದ ಭಕ್ತಿಮತವು ವಂಗದೇಶದ ಕ್ಲೈಬ್ಯ ದೌರ್ಬಲ್ಯಗಳಿಗೆ ಕಾರಣವೆಂದು ತಿಳಿದ ರಾಯನು ಯಾವ ವಿಧವಾದ ಅಶಕ್ತಿಗೂ ಎಡೆಗೊಡದ ವಿಚಾರಮತವನ್ನು ಬೋಧಿಸಿದನು. ಭಾವವು ವಿಚಾರದ ಅಧಿಕಾರ ಪರೀಕ್ಷೆಗಳಿಗೆ ಒಳಪಡದಿದ್ದರೆ ಹುಚ್ಚುಹೊಳೆಯಾಗಿ ಆತ್ಮನಾಶಕವಾಗುವುದೆಂದು ಆತನು ಅನುಭವದಿಂದ ತಿಳಿದಿದ್ದನು.

ಕಾರ್ಯದ ರಜೋಮಯರಂಗದಲ್ಲಿದ್ದ ರಾಯನು ದೆಹಲಿಯ ಚಕ್ರವರ್ತಿಯ ಇಷ್ಟದಂತೆ ೧೮೩೦ರಲ್ಲಿ ಹಠಾತ್ತಾಗಿ ಇಂಗ್ಲೆಂಡಿಗೆ ರಾಯಭಾರಿಯಾಗಿ ಹೋಗಬೇಕಾಯಿತು. ಅಲ್ಲಿ ಆಂಗ್ಲೇಯರು ಆತನನ್ನು ಪ್ರೀತಿ ಗೌರವಗಳಿಂದ ಬಹುವಾಗಿ ಸತ್ಕರಿಸಿದರು. ರಾಯನಿಗೆ ಪುನಃ ತನ್ನ ಮಾತೃಭೂಮಿಯ ಮುಖವನ್ನು ನೋಡುವ ಸುಯೋಗ ಲಭಿಸಲಿಲ್ಲ. ಕ್ರಿ. ಶ. ೧೮೩೩ನೆಯ ಸೆಪ್ಟೆಂಬರ್ ೨೭ನೆಯ ತೇದಿಯಲ್ಲಿ ಮೆದುಳಿನ ಜ್ವರದಿಂದ ಬ್ರಿಸ್ಟಲ್ ನಗರದಲ್ಲಿ ಕಾಲವಾದನು.

ರಾಯನ ಮರಣಾನಂತರ ಬ್ರಾಹ್ಮಸಮಾಜವು ರವೀಂದ್ರನಾಥ ಠಾಕೂರರ ಪಿತಾಮಹನಾದ ದ್ವಾರಕಾನಾಥ ಠಾಕೂರನ ಆಶ್ರಯದಲ್ಲಿತ್ತು. ತರುವಾಯ ಆತನ ಕುಮಾರ ದೇವೇಂದ್ರನಾಥ ಠಾಕೂರನು (೧೮೧೭ – ೧೯೦೫) ಬ್ರಾಹ್ಮ ಸಮಾಜಕ್ಕೆ ಅಧ್ಯಕ್ಷನಾದನು. ಆತನ ಪವಿತ್ರ ಜೀವನಕ್ಕಾಗಿ ಜನಗಳು ಆತನನ್ನು “ಮಹರ್ಷಿ” ಎಂದು ಕರೆದರು.

ಮಹರ್ಷಿಯು ರಾಯನಂತೆ ಇಸ್ಲಾಂ ಸಂಸ್ಕೃತಿಯಲ್ಲಿ ಬೆಳೆದವನಲ್ಲ. ರಾಯನಲ್ಲಿದ್ದ ರಜೋಗುಣಕ್ಕೆ ಬದಲಾಗಿ ಈತನಲ್ಲಿ ಸತ್ತ್ವವೆ ಪ್ರಧಾನವಾಗಿತ್ತು. ಈ ಶ್ರೀಮಂತರ ಕುಮಾರನು ಬಾಲ್ಯಕೌಮಾರಗಳಲ್ಲಿ ಜಗತ್ತಿನ ಪ್ರಲೋಭನಗಳಿಗೆ ಸಿಕ್ಕಿದ್ದನು. ಆದರೆ ಮನೆಯಲ್ಲಿ ಕೆಲವು ಇಷ್ಟರು ಮೃತರಾಗಲು ಮಹರ್ಷಿ ಚಿಂತಾಮಗ್ನನಾಗಿ ಧರ್ಮಜೀವನದ ಕಡೆಗೆ ತಿರುಗಿದನು. ಉಪನಿಷತ್ತುಗಳೆ ಆತನ ಕಣ್ಣಿಗೆ ಬೆಳಕಾದುವು. ಮಹರ್ಷಿ ಬ್ರಾಹ್ಮಸಮಾಜದಲ್ಲಿ ಪ್ರಚಾರಮಾಡಿದ ನಾಲ್ಕು ತತ್ತ್ವಗಳಿವು –

ಆದಿಯಲ್ಲಿ ಏನೂ ಇರಲಿಲ್ಲ. ಪರಮಪುರುಷನೊಬ್ಬನೇ ಇದ್ದನು. ಅವನೆ ವಿಶ್ವಕರ್ತನು.

ಅನಂತಸತ್ಯವೂ ಅಂತಜ್ಞಾನವೂ ಅನಂತಕಲ್ಯಾಣವೂ ಅನಂತಶಕ್ತಿಯೂ ನಿತ್ಯವೂ ಸರ್ವವ್ಯಾಪಿಯೂ ಏಕಮೇವಾದ್ವಿತೀಯವೂ ಆದ ಆತನೊಬ್ಬನೇ ಪೂಜ್ಯನು.

ಇಹಪರಗಳಲ್ಲಿಯೂ ಆತನಾರಾಧನೆಯೇ ನಮಗೆ ಮೋಕ್ಷದಾಯಕವಾದುದು.

ಅವನನ್ನು ಪೂಜಿಸಿ ಅವನ ಇಚ್ಛೆಯನ್ನು ನೆರವೇರಿಸುವುದೇ ನಿಜವಾದ ಶ್ರದ್ಧೆ.

ರಾಯನಂತೆಯೇ ಮೂರ್ತಿಪೂಜಾವಿರೋಧಿಯೂ ಜಾತಿಪದ್ಧತಿಯ ವಿದ್ವೇಷಿಯೂ ಆದ ಮಹರ್ಷಿಯೂ ಕ್ರೈಸ್ತ ಮತ್ತು ಹಿಂದೂ ಪುರೋಹಿತರ ಖಂಡನೆಗೆ ಒಳಗಾದನು. ಆಜನ್ಮಶ್ರೀಮಂತನೂ ಸ್ವಭಾವತಃ ಧ್ಯಾಶೀಲನೂ ಆದ ದೇವೇಂದ್ರನಾಥನು ಸಮರರಂಗದ ಕಾರ್ಯಭಾರವನ್ನು ಇತರರಿಗೆ ಬಿಟ್ಟು ೧೮೬೦ರಲ್ಲಿ ಧ್ಯಾನತಪಸ್ಸುಗಳಿಗಾಗಿ ಪ್ರಶಾಂತ ಮೌನಮುದ್ರಿತ ಹಿಮಾಲಯಗಳ ಏಕಾಂತವಾಸದಲ್ಲಿದ್ದು ಅನೇಕ ಧರ್ಮವಚನಗಳನ್ನು ಬರೆದನು. ತರುವಾಯ ಕಲ್ಕತ್ತೆಗೆ ಹಿಂದಿರುಗಿ ಬಂದು ಅನೇಕ ಧರ್ಮೋಪನ್ಯಾಸಗಳನ್ನು ಕೊಟ್ಟು ಜನರನ್ನು ಆಕರ್ಷಿಸಿದನು.

ಇದಾದ ಸ್ವಲ್ಪ ಕಾಲದಲ್ಲಿಯೆ ೧೮೬೨ರಲ್ಲಿ ಕೇಶವಚಂದ್ರಸೇನನೆಂಬ ಇಪ್ಪತ್ತುಮೂರು ವರ್ಷದ ಯುವಕನೊಬ್ಬನು ಮಹರ್ಷಿಯ ಸಹಕಾರಿಯಾಗಿ ಬ್ರಾಹ್ಮಸಮಾಜಕ್ಕೆ ಸೇರಿದನು. ಕೇಶವನು (೧೮೩೮ – ೧೮೮೪) ರಾಮಮೋಹನನಂತೆ ಮಹಾಮನೀಷಯೂ ಆಗಿರಲಿಲ್ಲ; ದೇವೇಂದ್ರನಾಥನಂತೆ ಮಹರ್ಷಿಯೂ ಆಗಿರಲಿಲ್ಲ. ರಾಯನಿಗೆ ಇಸ್ಲಾಂ ಸಂಸ್ಕೃತಿಯೂ ಮಹರ್ಷಿಗೆ ಆರ್ಯಸಂಸ್ಕೃತಿಯೂ ಪೀಠಿಕೆಗಳಾದಂತೆ ಕೇಶವನಿಗೆ ಕ್ರೈಸ್ತ ಸಂಸ್ಕೃತಿ ಪೀಠಿಕೆಯಾಗಿತ್ತು. ಮಹರ್ಷಿ ಮತ್ತು ರಾಯರಂತೆ ಆತನು ಶ್ರೀಮಂತನೂ ಆಗಿರಲಿಲ್ಲ; ಬ್ರಾಹ್ಮಣನೂ ಆಗಿರಲಿಲ್ಲ. ಸಾಧಾರಣ ವೈದ್ಯ ಜಾತಿಯ ಮನೆತನಕ್ಕೆ ಸೇರಿದವನಾಗಿದ್ದನು. ಆತನಿಗೆ ಸಂಸ್ಕೃತ ಭಾಷೆಯ ಪರಿಚಯವಿರಲಿಲ್ಲ. ಆತನ ಪ್ರಕೃತಿ ಕೋಮಲ ಚಂಚಲವಾಗಿತ್ತು. ಸ್ಫೂರ್ತಿ ಬಹಳವಿತ್ತು. ಮಹಾವಾಗ್ಮಿಯಾಗಿದ್ದನು. ಚಿಕ್ಕಂದಿನಲ್ಲಿಯೆ ತಂದೆತಾಯಿಗಳನ್ನು ಕಳೆದುಕೊಂಡ ಆತನು ಒಂದು ಇಂಗ್ಲಷ್ ಸ್ಕೂಲಿನಲ್ಲಿ ಬೆಳೆದನು. ಅಲ್ಲಿ ಬೈಬಲನ್ನು ಓದಿ ಕ್ರಿಸ್ತನನ್ನು ಒಲಿದನು. ಆತನಲ್ಲಿ ಸಮಾಜ ಸುಧಾರಣೆಯ ಆಸಕ್ತಿ ಬಹಳವಾಗಿತ್ತು. ಆದ್ದರಿಂದಲೇ ಬ್ರಾಹ್ಮಸಮಾಜವನ್ನು ಸೇರಿ ಆರ್ಯಧರ್ಮದ ಪುನರುಜ್ಜೀವನ ಕಾರ್ಯದಲ್ಲಿ ಬದ್ಧಕಂಕಣನಾಗಿ ನಿಂತನು. ಮೊದಮೊದಲು ಆತನು ದೇವೇಂದ್ರನಾಥನ ಕಣ್ಣಮಣಿಯಾಗಿದ್ದರೂ ತುದಿಯಲ್ಲಿ ಪ್ರಶಾಂತ ಮಹರ್ಷಿಗೆ  ಕೇಶವನ ಚಂಚಲತೆ ಅತ್ಯುತ್ಸಾಹಗಳು ಸರಿಬೀಳಲಿಲ್ಲ. ಅಲ್ಲದೆ ತನ್ನ ಪ್ರಿಯ ಶಿಷ್ಯನ ಮನಸ್ಸು ಕ್ರಸ್ತಪಕ್ಷಪಾತಿಯಾದುದೆಂದು ತಿಳಿಯಲು ಮಹರ್ಷಿಗೆ ಹೆಚ್ಚುಕಾಲ ಹಿಡಿಯಲಿಲ್ಲ. ಈ ಎಲ್ಲ ಕಾರಣಗಳಿಂದ ಬ್ರಾಹ್ಮಸಮಾಜ ಬಿರುಕುಬಿಟ್ಟಿತು. ೧೮೬೬ರಲ್ಲಿ ದೇವೇಂದ್ರನು ಆದಿ ಬ್ರಾಹ್ಮಸಮಾಜಕ್ಕೂ ಕೇಶವನು ಭಾರತವರ್ಷೀಯ ಬ್ರಾಹ್ಮಸಮಾಜಕ್ಕೂ ಅಧ್ಯಕ್ಷರಾದರು. ಇದಾದ ಮೂರು ತಿಂಗಳಲ್ಲಿಯೇ ಸಾರ್ವಜನಿಕ ಉಪನ್ಯಾಸವೊಂದರಲ್ಲಿ ಕೇಶವನು ಯೇಸುಕ್ರಿಸ್ತನ ಮೇಲೆ ತನಗಿದ್ದ ಪ್ರೇಮವನ್ನು ಸೂಚಿಸಿದನು. ಪಾಶ್ಚಾತ್ಯ ಕ್ರಿಸ್ತನನ್ನಲ್ಲದಿದ್ದರೂ ಪ್ರಾಚ್ಯ ಕ್ರಿಸ್ತನನ್ನು ಆರಾಧಿಸಬೇಕೆಂಬುದೇ ಉಪನ್ಯಾಸದ ಸಾರಾಂಶವಾಗಿತ್ತು. ಕೇಶವನು ಅನಾರ್ಯ ವಿಧರ್ಮಿ ಎಂಬ ಕೂಗು ಎಲ್ಲೆಲ್ಲಿಯೂ ಹಬ್ಬಿತು. ಆ ದೂರನ್ನು ದೂರಮಾಡುವುದಕ್ಕಾಗಿ ಅವನು “ಮಹಾಪುರುಷರು” ಎಂಬ ಉಪನ್ಯಾಸ ಮಾಡಿದನು. ಆ ಉಪನ್ಯಾಸದಲ್ಲಿ ಕ್ರಿಸ್ತನನ್ನು ಭಗವಂತನ ಅನೇಕ ದೂತರುಗಳಲ್ಲಿ ಒಬ್ಬನನ್ನಾಗಿ ಪರಿಗಣಿಸಿದನು. ಎಲ್ಲ ಮತಗ್ರಂಥಗಳೂ ವಂದನೀಯವೆಂದು, ಅದುವರೆಗೂ ವೇದೋಪನಿಷತ್ತುಗಳ ಮಂತ್ರಗಳಿಂದ ಮಾತ್ರವೇ ತುಂಬಿದ್ದ ಬರಾಹ್ಮಸಮಾಜದ ಪ್ರಾರ್ಥನೆಯ ಕೈಬುಟ್ಟಿಗೆ ಬೈಬಲ್, ಕೊರಾನ್, ಸೆಂದವೆಸ್ತಗಳಿಂದಲೂ ಮಂತ್ರಗಳನ್ನು ಆಯ್ದು ತುಂಬಿದನು. ಪ್ರತಿಭಟನೆಯ ಹಾಹಾಕಾರವು ಮತ್ತೂ ಪ್ರಬಲವಾಯಿತು. ಕೋಮಲ ಹೃದಯಿಯಾದ ದೇಶವನು ಬಹಳ ನೊಂದನು; ಆದರೂ ಎದೆಗೆಡಲಿಲ್ಲ. ಜನರು ದೂರಿದರು; ಮಿತ್ರರು ಕೈ ಬಿಟ್ಟರು; ವ್ಯವಹಾರದಲ್ಲಿಯೂ ತೊಂದರೆಗಳುಂಟಾದವು; ಎಲ್ಲಕ್ಕೂ ಮಿಗಿಲಾಗಿ ತನ್ನ ಸಂದೇಶದಲ್ಲಿಯೆ ತನಗೆ ಸಂದೇಹವುಂಟಾಗಿ ಮರುಗಿದನು. ಸುತ್ತಲೂ ಕತ್ತಲೆ ಕವಿದಂತಾಯಿತು. ಬೆಳಕಿಗಾಗಿ ಹಗಲಿರುಳೂ ಭಗವಂತನನ್ನು ಬೇಡಿದನು.

ಅನಿರೀಕ್ಷಿತವಾದ ದಿಕ್ಕಿನಿಂದ ಬೆಳಕು ಬಂದಿತು. ೧೮೭೫ರಲ್ಲಿ ಕೇಶವನಿಗೆ ದಕ್ಷಿಣೇಶ್ವರದ ಮಹಾಜ್ಯೋತಿಯ ದರ್ಶನವಾಯಿತು. ಪ್ರಥಮ ದರ್ಶನವು ಅನೇಕಾನೇಕ ಸ್ನೇಹಪೂರ್ವ ಸಂದರ್ಶನಗಳಿಗೆ ಪೀಠಿಕೆಯಾಯಿತು. ಆ ಕಥೆಯ ವಿವರಣೆಯೂ ಆ ಸಂಬಂಧದ ಮಾಧುರ್ಯ ರಹಸ್ಯಗಳ ವರ್ಣನೆಯೂ ಮುಂದಕ್ಕಿರಲಿ.

ಅಂತೂ ಕೇಶವಚಂದ್ರನ ಜೀವನ ಭಾವನೆ ಬೋಧನೆಗಳು ರೂಪಂತರ ಹೊಂದಿದುವು. ಖಂಡನೆ ಕೊಂಡಿಮುರಿದು ಸಹಾನುಭೂತಿಯಾಯಿತು. ಬ್ರಾಹ್ಮಸಮಾಜದಲ್ಲಿ ಅಭೂತಪೂರ್ವ ಜೀವ ಸಂಚಾರವಾಯಿತು. ಆರ್ಯ ಸಂಸ್ಕೃತಿ ಪಾಶ್ಚಾತ್ಯ ಸಂಸ್ಕೃತಿಯನ್ನು ಜೀರ್ಣಿಸಿಕೊಂಡು ಪುನಃ ಜಯಶೀಲವಾಗಿ ಆರೋಗ್ಯಶಾಲಿಯಾಯಿತು; ಭಾಗ್ಯಶಾಲಿಯೂ ಆಯಿತು. ಅದುವರೆಗೆ ಮೂರ್ತಿಪೂಜೆ, ದೇವದೇವತೆಗಳ ಆರಾಧನೆ ಮೊದಲಾದುವನ್ನು ನಿಷಕರುಣವಾದ ಅನುದಾರತೆಯಿಂದ ಖಂಡಿಸುತ್ತಿದ್ದ ಕೇಶವನು ಅವುಗಳನ್ನು ವಿವರಿಸಿ ಅವುಗಳ ಪರವಾಗಿ ಮಾಸಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದನು. ಪರತತ್ತ್ವವನ್ನು ಜಗನ್ಮಾತೆಯೆಂದು ಸಂಬೋಧಿಸಲಾರಂಭಿಸಿದನು. ಬ್ರಾಹ್ಮಸಮಜದ ಪ್ರಾರ್ಥನಾಮಂದಿರವು ಚೈತನ್ಯ ಮೊದಲಾದ ವೈಷ್ಣವ ಭಕ್ತರ ಕೀರ್ತನೆಗಳಿಂದ ಪತಿಧ್ವನಿತವಾಯಿತು! ಅದೇ ಅರ್ಷವೆ “ಅದೋ ನೋಡಿ, ಸ್ವರ್ಗದ ಜ್ಯೋತಿ ಭಾರತ ಭೂಮಿಯಲ್ಲಿ ಮೂಡಿದೆ! ” ಎಂಬ ಉಪನ್ಯಾಸದಲ್ಲಿ ತನ್ನ ನವವಿಧಾನ ತತ್ತ್ವಗಳನ್ನು ಘಂಟಾಘೋಷವಾಗಿ ಸಾರಿಬಿಟ್ಟನು. ಹೀಗೆ ಮಹಾಪುರುಷನಾದರೂ ಚಂಚಲಪ್ರಕೃತಿಯ ಕೇಶವನು ಹೂವಿಂದ ಹೂವಿಗೆ ಹಾರುವ ದುಂಬಿಯಂತೆ ಜೀವಮಾನವನ್ನೆಲ್ಲಾ ಸಾಧಕನಾಗಿಯೆ ಕಳೆದನು. ಆತನ ಹೃದಯದಲ್ಲಿ ಪ್ರಾಚ್ಯ ಮತ್ತು ಪಾಶ್ಚಾತ್ಯಗಳ ಆದರ್ಶಗಳೂ ಸಂಸ್ಕೃತಿಗಳೂ ಯಾವಾಗಲೂ ಹೋರಾಡುತ್ತಲೆ ಇದ್ದುವು. ಆತನ ಮನಸ್ಸು ತೂಗುಯ್ಯಾಲೆಯಾಗಿತ್ತು. ಈ ಸತ್ಯಶೋಧಕನ ಮರಣಶಯ್ಯೆಯ ಬಳಿ ಎಲ್ಲ ಮತದವರೂ ಸೇರಿದ್ದರು. ಕ್ರಿ. ಶ. ೧೮೮೪ರಲ್ಲಿ ಆತನ ಜೀವನಯಾತ್ರೆ ಕೊನೆಗೊಂಡಿತು.

ಕೇಶವಚಂದ್ರಸೇನನ ಪ್ರಭಾವವು ವಂಗದೇಶವೊಂದರಲ್ಲಿಯೆ ಅಲ್ಲದೆ ಎಲ್ಲ ಕಡೆಯೂ ಹಬ್ಬಿತು. ಕ್ರಿ. ಶ. ೧೮೭೦ರಲ್ಲಿ ಇಂಗ್ಲೆಂಡಿನಲ್ಲಿ ಆತನು ಮಾಡಿದ ಭಾಷಣ ಪರಂಪರೆಯೆಲ್ಲ ಒಂದು ಜೈತ್ರಯಾತ್ರೆಯಂತಿತ್ತು. ಅಲ್ಲಿ ಎಲ್ಲರೂ ಆತನನ್ನು ಪ್ರಾಚ್ಯದ ಕ್ರೈಸ್ತದೂತನೆಂದು ಹೊಗಳಿದರು. ಅದರಂತೆಯೆ ೧೮೭೯ರಲ್ಲಿ ಭಾರತ ವರ್ಷದಲ್ಲೆಲ್ಲಾ ಒಂದು ಪ್ರಚಾರಯಾತ್ರೆ ಮಾಡಿದನು. ಆಗ ಆತನು ಹೊಸದಾಗಿ ದಕ್ಷಿಣೇಶ್ವರದ ಗುರುದೇವನಿಂದ ಕಲಿತ ಸರ್ವಧರ್ಮ ಸಮನ್ವಯದ ಭಾವಗಳನ್ನೆ ಉಪದೇಶ ಮಾಡಿದನು. ಆದರೆ ಈ ಸ್ವಯಮಾಚಾರ್ಯನ ಮನದಲ್ಲಿಯೆ ಸಮನ್ವಯದ ಅಭಾವವಿದ್ದುದರಿಂದಲೂ ಅದಕ್ಕೆ ಬೇಕಾದ ಅನನುಭವದ ಆಧಾರವಿಲ್ಲದಿದ್ದುದರಿಂದಲೂ ಜನಗಳಿಗೆ ಆತನ ಚಂಚಲತೆ ಅರ್ಥವಿಲ್ಲದ ಸಮಸ್ಯೆಯಾಯಿತು. ಕೇಶವನ ವಾಣಿ ಸಿದ್ಧನ ಅಧಿಕಾರವಾಣಿಯಾಗಿರಲಿಲ್ಲ.

ಹೀಗೆ ಪ್ರಾಚ್ಯಪಾಶ್ಚಾತ್ಯ ಸಂಸ್ಕೃತಿಗಳು ಒಂದನ್ನೊಂದು ನುಂಗಲು ಪ್ರಯತ್ನಿಸುತ್ತಿದ್ದಾಗಲೆ ಭರತವರ್ಷದ ಪಶ್ಚಿಮ ಭಾಗದಲ್ಲಿ ಮತ್ತೊಂದು ಭೀಮಮೂರ್ತಿ ಸಿಂಹಸದೃಶವಾಗಿ ಪ್ರತಿಭಟನೆಯ ಗರ್ಜನೆಯನ್ನು ಬೀರುತ್ತ ಮೂಡಿತು. ಆತನೆ ಮಹಾಪುರುಷನಾದ ದಯಾನಂದ ಸರಸ್ವತಿ (೧೮೨೪ – ೧೮೮೩). ಆತನ ಜನ್ಮಸ್ಥಾನ ಗುಜರಾತು; ತಂದೆ ತಾಯಿಗಳು ಸಾಮವೇದಿಗಳಾದ ಶ್ರೇಷ್ಠ ಬ್ರಾಹ್ಮಣರು. ದಯಾನಂದನು ಸಂಪೂರ್ಣವಾಗಿ ಹಿಂದೂ ಸಂಪ್ರದಾಯದಲ್ಲಿಯೇ ಬೆಳೆದನು. ಹದಿನಾಲ್ಕನೆಯ ವಯಸ್ಸಿನಲ್ಲಿ ತನ್ನ ತಂದೆಯೊಡನೆ ಒಂದು ಶಿವದೇವಾಲಯದ ಉತ್ಸವದಲ್ಲಿ ಭಾಗಿಯಾಗಿ ರಾತ್ರಿ ಜಾಗರಣೆ ಮಾಡುತ್ತಿರಲು ಇಲಿಯೊಂದು ದೇವರ ಮೇಲೆ ಹರಿದಾಡಿದ್ದಲ್ಲದೆ ನೈವೇದ್ಯವನ್ನೂ ತಿನ್ನುತ್ತಿದ್ದುದು ಬಾಲಕನ ಕಣ್ಣಿಗೆ ಬಿತ್ತು. ವಿಗ್ರಹದಲ್ಲಿ ಹುಡುಗನಿಗಿದ್ದ ನಂಬುಗೆ ಹುಡಿಹುಡಿಯಾಯಿತು. ಕುಮಾರನು ದೇವಾಲಯವನ್ನು ತ್ಯಜಿಸಿ ಕತ್ತಲೆಯಲ್ಲಿಯೆ ಮನೆಗೆ ಹೋದನು. ತರುವಾಯ ಆತನು ಯಾವ ಪೂಜಾಕರ್ಮದಲ್ಲಿಯೂ ಭಾಗಿಯಾಗಲಿಲ್ಲ. ತಂದೆಗೂ ಮಗನಿಗೂ ಕದನಕ್ಕಾರಂಭವಾಯಿತು. ತಂದೆಯಂತೆಯೆ  ಮಗನದೂ ವಜ್ರಮನಸ್ಸಾದುದರಿಂದ ಇಬ್ಬರಲ್ಲೊಬ್ಬನೂ ತಗ್ಗಲಿಲ್ಲ. ಹತ್ತೊಂಬತ್ತನೆಯ ಬಯಸ್ಸಿನಲ್ಲಿ ಬಲಾತ್ಕಾರದ ಮದುವೆಯನ್ನು ತಪ್ಪಿಸಿಕೊಳ್ಳುವದಕ್ಕಾಗಿ ದಯಾನಂದನು ಮನೆ ಬಿಟ್ಟು ಓಡಿದನು. ಹಿಡಿದು ಸೆರೆಯಿಟ್ಟರು. ಪುನಃ ೧೮೪೫ರಲ್ಲಿ ಹೋದವನು ಮನೆಗೆ ಹಿಂದಿರುಗಲಿಲ್ಲ. ತಂದೆಯ ಮುಖವನ್ನು ನೋಡಲಿಲ್ಲ. ಅಲ್ಲಿಂದ ಹದಿನೈದು ಸಂವತ್ಸರಗಳವರೆಗೆ ಬಾಲಕನು ಗೈರಿಕವಸನಧಾರಿಯಾಗಿ ಭಿಕ್ಷೆಯಿಂದ ಜೀವನ ಮಾಡುತ್ತ ವೇದಭೂಮಿಯ  ಬಹುಭಾಗಗಳಲ್ಲಿ ಸಂಚರಿಸಿದನು. ಆ ನಡುವೆ ಪಂಡಿತ ಸಾಧು ಸಂನ್ಯಾಸಿಗಳನ್ನು ಹುಡುಕಿ ಸಂದರ್ಶಿಸಿದನು. ವೇದಗಳನ್ನೂ ದರ್ಶನಗಳನ್ನೂ ಅಧ್ಯಯನ ಮಾಡಿದನು. ಯೋಗ ಸಿದ್ದಾಂತವನ್ನು ಚೆನ್ನಾಗಿ ಅರಿತು ಯೋಗಸಾಧನೆಗಳನ್ನು ಅಭ್ಯಾಸ ಮಾಡಿದನು. ಪವಿತ್ರ ಕ್ಷೇತ್ರಗಳಿಗೆ ಹೋಗಿ ಅಲ್ಲಿ ವಿದ್ವಾಂಸರ ವಾದಗಳಲ್ಲಿ ಭಾಗಿಯಾದನು. ಕಷ್ಟ, ನಷ್ಟ, ಅಪಾಯ, ಅನ್ಯಾಯ, ಅವಮಾನಗಳೆಲ್ಲವನ್ನೂ ಹೇಸದೆ, ಹೆದರದೆ ಸಹಿಸಿದನು. ಆದರೆ ಪರಿವ್ರಾಜಕನಾದ ದಯಾನಂದನಿಗೆ ಜನಸಾಮಾನ್ಯರ ಜೀವನದ ಪರಿಚಯ ಚೆನ್ನಾಗಿ ದೊರೆಯಲಿಲ್ಲ. ಏಕೆಂದರೆ, ಆತನು ಆ ಕಾಲದಲ್ಲೆಲ್ಲಾ ಗೀರ್ವಾಣ ಭಾಷೆಯನ್ನಲ್ಲದೆ ಮಾತಾಡುತ್ತಿರಲಿಲ್ಲ. ದಯಾನಂದನಿಗೆ ಎಲ್ಲಿ ನೋಡಿದರೂ ಮೌಢ್ಯ, ಅಜ್ಞಾನ, ಅನಾಚಾರ, ಹೇಯವಾದ ಮೂರ್ತಿಪೂಜೆಗಳೆ ಕಣ್ಣಿಗೆ ಬಿದ್ದುವು. ಕೃಷ್ಣಪಕ್ಷವನ್ನು ನೋಡಿದ ಆತನು ಶುಕ್ಲಪಕ್ಷವನ್ನು ನೋಡಲು ಇಚ್ಛಿಸಲೂ ಇಲ್ಲ. ಕಟ್ಟಕಡೆಗೆ ೧೮೬೦ರಲ್ಲಿ ಮಥುರಾಪುರಿಯಲ್ಲಿ ಹುಟ್ಟು ಕುರುಡನಾಗಿಯೂ, ಹನ್ನೊಂದನೆಯ ವಯಸ್ಸಿನಿಂದಲೂ ಏಕಾಂತವಾಸಿಯಾಗಿಯೂ ಸರ್ವ ಮೌಢ್ಯ ದೌರ್ಬಲ್ಯ ವಿದ್ವೇಷಿಯಾಗಿಯೂ ತನಗಿಂತಲೂ ಮಹಾಪಂಡಿತನೂ ಧೃಷ್ಣುವೂ ಶಿಲಾಶೈಲೋಪಮ ಭಯಂಕರನೂ ಆಗಿದ್ದ ಸಂನ್ಯಾಸಿಯೊಬ್ಬನು ದಯಾನಂದನಿಗೆ ಗುರುವಾಗಿ ದೊರಕಿದನು. ಆತನ ಹೆಸರು  ವಿರಜಾನಂದ ಸರಸ್ವತಿ. ಶಿಷ್ಯನು ಆ ಪರ್ವತಪ್ರಕೃತಿಯ ಸಾಧುವನ್ನು ಎರಡೂವರೆ ವರ್ಷಗಳವರೆಗೆ ಸೇವೆಮಾಡಿ ಅನುಸರಿಸಿದನು. ಶಿಷ್ಯತ್ವವನ್ನು ಪೂರೈಸಿ, ವೇದಧರ್ಮವನ್ನು ಉದ್ಧಾರಮಾಡಬೇಕೆಂಬ ಗುರುವಿನ ಕಠೋರಾಜ್ಞೆಯನ್ನು ಶಿರಸಾವಹಿಸಿ ದಯಾನಂದ ಸರಸ್ವತಿ ದೃಢಮನಸ್ಸಿನಿಂದ ಕಾರ್ಯರಂಗಕ್ಕೆ ಧುಮುಕಿದನು.

ದಯಾನಂದನು ಇತರರ ಮತವನ್ನಾಗಲಿ, ಸತ್ಯವನ್ನಾಗಲಿ, ಭಿನ್ನಾಭಿಪ್ರಾಯವನ್ನಾಗಲಿ ಆಲಿಸಿ ವಿಚಾರಮಾಡುವ ಗೋಜಿಗೆ ಹೋಗದೆ ತನ್ನ ಸತ್ಯದ ಗದೆಯನ್ನು ನಿರ್ದಾಕ್ಷಿಣ್ಯವಾಗಿ ಭೀಮನಂತೆ ಬೀಸತೊಡಗಿದನು. ಪೆಟ್ಟು ಯಾರಿಗೆ ಬೀಳುತ್ತದೆ, ಎಲ್ಲಿಗೆ ಹೋಗುತ್ತದೆ, ಎಷ್ಟುದೂರ ಹಬ್ಬುತ್ತದೆ ಎಂಬುದಾವುದನ್ನೂ ಆತನು ಗಣನೆಗೆ ತಂದುಕೊಳ್ಳಲೆ ಇಲ್ಲ. ಈ ಭೀಮಸಂನ್ಯಾಸಿ ಎಷ್ಟರಮಟ್ಟಿಗೆ ಜಯಶೀಲನಾದನೆಂದರೆ, ಐದೇ ವರ್ಷಗಳಲ್ಲಿ ಉತ್ತರ ಹಿಂದೂಸ್ಥಾನವೆ ಬದಲಾಯಿಸಿ ಹೋಯಿತು. ಮತಭ್ರಾಂತರಾದ ದುಷ್ಟರು ಆತನನ್ನು ನಾಲ್ಕೈದಯ ಸಾರಿ ಕೊಲೆ ಮಾಡಲು ಯತ್ನಿಸಿದರು; ಕೆಲವು ಸಾರಿ ವಿಷಪ್ರಯೋಗದಿಂದ. ಒಂದು ಸಾರಿ ಒಬ್ಬನು ವಿಷಸರ್ಪವೊಂದನ್ನು ಆತನ ಮುಖಕ್ಕೆ ಎಸೆದನು. ದಯಾನಂದನು ಅದನ್ನು ಹಿಸುಕಿ ಬಿಸುಟನು. ಗೀರ್ವಾಣ ಭಾಷೆಯಲ್ಲಿಯೂ ವೇದವಿದ್ಯೆಯಲ್ಲಿಯೂ ಅಸಾಧಾರಣ ಮನೀಷಿಯಾದ ಆತನನ್ನು ಸೋಲಿಸುವುದು ಯಾರಿಂದಲೂ ಸಾಧ್ಯವಾಗಲಿಲ್ಲ. ಸಾಂಪ್ರದಾಯಿಕ ಬ್ರಾಹ್ಮಣರೂ ಕುಪಿತರಾದರು. ಕಾಶಿಯಲ್ಲಿ ಮಹಾಸಭೆಯನ್ನು ಸೇರಿಸಿ ದಯಾನಂದನನ್ನು ವಾದಕ್ಕೆ ಕರೆದರು. ಸಂಪ್ರದಾಯದ ಗುಹೆಯಲ್ಲಿಯೆ ವಾದದ ಕುರುಕ್ಷೇತ್ರಯುದ್ಧ ಜರುಗಿತು. ಶತ್ರುವನ್ನು ಸಂಹರಿಸಲೇಬೇಕೆಂದು ದೃಢಮನಸ್ಸಿನಿಂದ ನೆರೆದ ವಾದಿಸಿಂಹ ಪ್ರತಿವಾದಿಭಯಂಕರರಾದ ಸಾವಿರಾರು ಪಂಡಿತರೊಡನೆ ದಯಾನಂದನು ಏಕಾಂಗಿಯಾಗಿ ಮಾರಾಂತು ಆಚಾರದಲ್ಲಿರುವ ವೇದಾಂತವು ವೇದಮತಕ್ಕೆ ಸಂಪೂರ್ಣವಾಗಿ ವಿರೋಧವಾದುದೆಂದು ಸಿಂಹವಾಣಿಯಿಂದ ಘೋಷಿಸಿದನು. ಮೂರ್ತಿಪೂಜೆ ಜಾತಿಪದ್ಧತಿ ಮೊದಲಾದುವು ವೇದಬಾಹಿರವಾದ ಅನಾಆರಗಳೆಂದು ಗುಡುಗಿದನು. ಪಂಡಿತರೆಲ್ಲರಿಗೂ ತಾಳ್ಮೆ ತಪ್ಪಿ, ಮನುಷ್ಯ ಗೌರವವನ್ನು ಕೂಡ ಮರೆತು, ಸುಮ್ಮನೆ  ಕೂಗೆಬ್ಬಿಸಿ, ಎದುರಾಳಿಯ ಸದ್ದನ್ನು ತಮ್ಮ ಗದ್ದಲದಿಂದ ಗೆದ್ದುದರಿಂದ ಆತನ ವಾದವನ್ನು ಗೆದ್ದೆವೆಂದು ಸಾರಿ ದಯಾನಂದನಿಗೆ ಬಹಿಷ್ಕಾರ ಹಾಕಿದರು! ಆತನ ಕೀರ್ತಿ ಮತ್ತೂ ಜಾಜ್ವಲ್ಯಮಾನವಾಯಿತು.

ದಯಾಂದನು ೧೮೭೨ರಲ್ಲಿ ಕಲ್ಕತ್ತೆಗೆ ಹೋಗಿ ಐದು ತಿಂಗಳು ಅಲ್ಲಿದ್ದನು. ಕೇಶವಚಂದ್ರಸೇನನೂ ಇತರ ಬ್ರಾಹ್ಮಸಮಾಜಿಗಳೂ ಆತನನ್ನು ಸಂಧಿಸಿದರು. ದಯಾನಂದನು ಅವರ ಪಾಶ್ಚಾತ್ಯ ಭಾವನೆಗಳನ್ನೆಲ್ಲಾ ನಿರ್ದಾಕ್ಷಿಣ್ಯವಾಗಿ ಖಂಡಿಸಿ ಬಿಟ್ಟನು. ಬ್ರಾಹ್ಮಸಮಾಜಿಗಳು ಭಿನ್ನಾಭಿಪ್ರಾಯಗಳಿಗೆ ಕಣ್ಣುಮುಚ್ಚಿದರು. ಏಕೆಂದರೆ, ಅವರಿಗೆ ಯಾರಾದರೇನಂತೆ, ಮೂರ್ತಿಪೂಜೆ ಜಾತಿಪದ್ಧತಿಗಳನ್ನು ವಿರೋಧಿಸಿದರೆ ಸಾಕಾಗಿತ್ತು. ದಯಾನಂದನಿಗೆ ವೇದಪ್ರಾಮಾಣ್ಯವನ್ನೂ ಜನ್ಮಾಂತರವನ್ನೂ ನಂಬದ ಯಾರೂ ವಂದನೀಯರಾಗಿರಲಿಲ್ಲ. ಆದ್ದರಿಂದ ಬ್ರಾಹ್ಮಸಮಾಜಿಗಳಿಂದ ತನಗೆ ಬೇಕಾಗಿದ್ದ ಪ್ರಚಾರವಿಧಾನಗಳನ್ನು ಕಲಿತುಕೊಂಡು ಬೊಂಬಾಯಿಗೆ ಬಂದು ಕೆಲವು ದಿನಗಳಲ್ಲಿಯೆ ೧೮೭೫ನೆಯ ಏಪ್ರಿಲ್ ೧೦ರಲ್ಲಿ “ಆರ್ಯಸಮಾಜ”ವನ್ನು ಸ್ಥಾಪಿಸಿದನು. ಅದು ಬೇಗನೆ ಗುಜರಾತು ಪಂಜಾಬು ಮಧ್ಯಪ್ರಾಂತ್ಯ ರಾಜಪುತ್ರ ಸ್ಥಾನ ಅಯೋಧ್ಯೆ ಮೊದಲಾದ ಭಾಗಗಳಲ್ಲಿ ಹಬ್ಬಿತು.

ಇನ್ನೂ ಕಾರ್ಯರಂಗದಲ್ಲಿರುವಾಗಲೆ ತಾನು ಸನ್ಮಾರ್ಗಕ್ಕೆಳೆಯಲು ಪ್ರಯತ್ನಿಸಿದ ಒಬ್ಬ ಮಹಾರಾಜನ ಕುಪಿತ ವೇಶ್ಯೆಯ ಘೋರ ವಿಷ ಪ್ರಯೋಗದಿಂದ ದಯಾನಂದನ ಜೀವಜ್ಯೋತಿ ೧೮೮೯ನೆಯ ಅಕ್ಟೋಬರ್ ೩೦ನೆಯ ತಾರೀಖಿನಲ್ಲಿ ಅಜಮೀರು ನಗರದಲ್ಲಿ ನಂದಿಹೋಯಿತು. ಆದರೆ ಆ ಮಹಾ ಪುರುಷನು ಹೊತ್ತಿಸಿದ ಜೀವನದ ಜ್ಯೋತಿ ಆತನ ರಕ್ತತೈಲದಿಂದಲೇ ಪೋಷಿತವಾಗಿ ಮತ್ತೂ ದೇದಿಪ್ಯಮನವಾಯಿತು. ಆರ್ಯ ಸಂಸ್ಕೃತಿಯನ್ನು ಸಂಪೂರ್ಣವಾಗಿ ಮುಳುಗೆ ಮಾಯಮಾಡಿಬಿಡುವುದೋ ಎಂಬಂತೆ ರಭಸದಿಂದ ನುಗ್ಗಿ ಬಂದ ಪಾಶ್ಚಾತ್ಯ ಸಂಸ್ಕೃತಿಯ ಪ್ರಚಂಡ ಪ್ರವಾಹವನ್ನು ತಡೆದು ಸುಮುಖವಾಗಿಸಿದ ಮಹನೀಯರಲ್ಲಿ ಸ್ವಾಮಿ ದಯಾನಂದ ಸರಸ್ವತಿಯೂ ಸುಮಾನನೀಯನು. ಆತನಲ್ಲಿ ಸ್ವಮತಾಭಿಮಾನದಿಂದ ಪ್ರೇರಿತವಾದ ಅಸಹನೆ ತೋರಬಹುದು. ಆದರೆ ಅದು ಇತರ ಮತಾಭಿಮಾನಿಗಳ ಅಸಹನೆಯನ್ನು ಪ್ರತಿಭಟಿಸಲು ಅವಶ್ಯಕವಾಗಿತ್ತು. ಆತನು ಮಾಡಿದ ಕ್ರೈಸ್ತಾದಿ ಮತಗಳ ಖಂಡೆ ಅನ್ಯಾಯವೆಂದೂ ಅಪೂರ್ಣಜ್ಞಾನಜನ್ಯವಾದುದೆಂದೂ ತೋರಬಹುದು. ಅಂತೆಯೆ ಇತರ ಮತಸ್ಥರ ಆರ್ಯಮತ ಖಂಡನೆಯೂ ಅನ್ಯಾಯವೂ ಅಜ್ಞಾನಮೂಲವೂ ಆದುದೆಂಬುದನ್ನು ಮರೆಯಬಾರದು. ಕೈಗೆ ಕೈ, ಮೈಗೆ ಮೈ ಎಂದು ಮುಯ್ಯಿಗೆ ಮುಯ್ಯಾಗಿ ನಿಂತ ಯೋಧನು ದಯಾನಂದನು! ಧರ್ಮ ಮತ್ತು ತತ್ತ್ವಪ್ರಪಂಚಗಳ ಮಾತು ಏನೇ ಇರಲಿ, ಸಾಮಾಜಿಕ ಪ್ರಪಂಚದಲ್ಲಿ ಆತನು ಬೋಧಿಸಿರುವ ಸುಧಾರಣೆಗಳೂ ತತ್ತ್ವಗಳೂ ಎಲ್ಲರೂ ಒಪ್ಪತಕ್ಕುವು.

ಆರ್ಯಾವರ್ತದ ಉತ್ತರಭಾಗದಲ್ಲಿ ವಂಗ ಪಂಜಾಬು ದೇಶಗಳಲ್ಲಿ ಆಂದೋಲನಗಳು ನಡೆಯುತ್ತಿದ್ದಾಗಲೆ ದಕ್ಷಿಣಭಾರತದಲ್ಲಿಯೂ ಒಂದು ನವೀ ಸಂಸ್ಥೆ ತಲೆಯೆತ್ತಿತು. ಆರ್ಯಸಮಾಜ ಸ್ಥಾಪಿತವಾದ ಸಂವತ್ಸರದಲ್ಲೆಯೆ, ಎಂದರೆ ೧೮೭೫ರಲ್ಲಿ “ಥಿಯಾಸೊಫಿ” ಎಂಬ ಸಂಸ್ಥೆ ಮದರಾಸಿನಲ್ಲಿ ಅಂಕುರಿಸಿತು. ಅದರ ಅನುಯಾಯಿಗಳು ಅದನ್ನು “ಬ್ರಹ್ಮವಿದ್ಯಾ ಸಮಾಜ” ಎಂದು ಕರೆದರೂ ಅದು ಇತರ ಸಮಾಜಗಳಂತಲ್ಲದೆ ಸಂಪೂರ್ಣವಾಗಿ ಪಾಶ್ಚಾತ್ಯ ಪ್ರಣೀತವಾದುದು. ರಷ್ಯಾದೇಶದ ಮ್ಯಾಡಂ ಬ್ಲಾವಟ್‌ಸ್ಕಿ ಎಂಬ ಮೇಧಾವಿನಿಯೂ ಅಮೇರಿಕಾ ದೇಶದ ಕರ್ನಲ್ ಆಲ್ಕಾಟ್ ಎಂಬ ಚತುರನೂ ಅದಕ್ಕೆ ಅಧಿನೇತೃಗಳು. ಅವರ ತತ್ತ್ವಗಳು ಅಂತರಂಗವೂ ಗುಹ್ಯವೂ ಆದುದರಿಂದ ಸಾಮಾನ್ಯರಿಗೆ ತಿಳಿಯಲವಕಾಶವಿಲ್ಲ. ಅದೇನೇ ಇರಲಿ, ಥಿಯಾಸೊಫಿ ಆರ್ಯರ ಧರ್ಮಗ್ರಂಥಗಳನ್ನು ಪ್ರಚಿರಪಡಿಸಿ ಜನರಿಗೆ ಅವಿಗಳಲ್ಲಿ ಅಭಿರುಚಿ ಹುಟ್ಟುವಂತೆ ಮಾಡಿತು. ಮುಟ್ಟುವರು ಮುಟ್ಟದವರೆಂಬ ಭೇದವಿಲ್ಲದೆ ಎಲ್ಲರಿಗೂ ಶಾಲೆಗಳನ್ನು ತೆರೆದು ಶಿಕ್ಷಣ ಪ್ರಚಾರ ಮಾಡಿತು. ಎಲ್ಲಕ್ಕೂ ವಿಶೇಷವಾಗಿ ಇತರ ಸಮಾಜಗಳಂತಲ್ಲದೆ ರಾಷ್ಟ್ರೀಯ ಮತ್ತು ರಾಜಕೀಯ ಚಲನೆಗಳಲ್ಲಿ ಭಾಗ ತೆಗೆದುಕೊಂಡು ಬಹಳ ಉಪಕಾರಮಾಡಿತು.

ಪಾಶ್ಚಾತ್ಯವಿದ್ಯೆ ಸಂಸ್ಕೃತಿಗಳು ಭರತಖಂಡಕ್ಕೆ ತಂದ ಕಾರ್ಯೋತ್ಸಾಹ ಚೈತನ್ಯಗಳು ಬರಿಯ ಧರ್ಮಜೀವನದಲ್ಲಿಯೆ ಪರ್ಯವಸಾನವಾಗಲಿಲ್ಲ. ಕರ್ಮಜೀವನದಲ್ಲಿಯೂ ಅವುಗಳ ಪ್ರಭೆ ಪ್ರಚಂಡವಾಗಿ ಮಿಂಚತೊಡಗಿತು. ಭಾರತ ವರ್ಷವನ್ನೆಲ್ಲಾ ಏಕಚಕ್ರಾಧಿಪತ್ಯವನ್ನಾಗಿ ಮಾಡಿದ ಆಂಗ್ಲೇಯರು ಭಾರತೀಯರಲ್ಲಿ ಏಕರಾಷ್ಟ್ರ ಭಾವನೆಯನ್ನೂ ಉದ್ರೇಕಿಸಿದರು. ತಮ್ಮ ದೇಶದ ಚರಿತ್ರೆಯನ್ನೂ ರಾಜಕೀಯ ವಿಚಾರಗಳನ್ನೂ ನಮ್ಮವರಿಗೆ ಬೋಧಿಸಿದರು. ಅವರಲ್ಲಿದ್ದ ಸ್ವಾತಂತ್ರ್ಯಾಭಿಲಾಷೆ ಭಾರತೀಯರಲ್ಲಿಯೂ ಪ್ರಜ್ವಲಿಸಿತು. ಪ್ರತಿಫಲವಾಗಿ ಕ್ರಿ. ಶ. ೧೮೮೫ನೆಯ ಡಿಸೆಂಬರ್ ೨೮ನೆಯ ತಾರೀಖಿನ ಮಧ್ಯಾಹ್ನದಲ್ಲಿ ಬೊಂಬಾಯಿ ನಗರದಲ್ಲಿ ರಾಷ್ಟ್ರೀಯ ಮಹಾಸಭೆಯ ಮೊದಲನೆಯ ಆಧಿವೇಶನ ಉಮೇಶಚಂದ್ರ ಬ್ಯಾನರ್ಜಿಯವರ ಅಧ್ಯಕ್ಷತೆಯಲ್ಲಿ ನೆರೆಯಿತು.

ಹೀಗೆ ದೇಶದಲ್ಲಿ ಸಮಾಜಗಳೂ ಸಂಸ್ಥೆಗಳೂ ಆಂದೋಲನಗಳೂ ಭಿನ್ನಾಭಿಪ್ರಾಯಗಳೂ ತುಮುಲವಾಗುತ್ತಿದ್ದವು. ಭರತಖಂಡ ಕುಲುಮೆಯ ಮೇಲಿನ ಮೂಷೆಯಂತಿತ್ತು. ಬ್ರಾಹ್ಮಸಮಾಜದವರು ಮೂರ್ತಿಪೂಜೆ, ದೇವದೇವತೆಯರ ಆರಾಧನೆ, ಅತಾರವಾದ, ಜನ್ಮಾಂತರ ಮೊದಲಾದುವುಗಳನ್ನು ಖಂಡಿಸಿ ಜನರನ್ನು ದಂಡಿಸಿದ್ದರು. ಆರ್ಯಸಮಾಜವು ವೇದವನ್ನು ಮೇಲೆತ್ತಿ, ವೇದಾಂತವನ್ನು ಹಳಿದು, ಕ್ರೈಸ್ತಾದಿ ಮತಗಳನ್ನು ದೂಷಿಸಿ, ಮೂರ್ತಿಪೂಜೆಯನ್ನು ಧಿಕ್ಕರಿಸಿ, ವರ್ಣಭೇದವನ್ನು ಮೇಲ್ವಾಯ್ದು ವಿರೋಧಿಸಿ ಸಂಪ್ರದಾಯವನ್ನು ನೋಯಿಸಿತ್ತು. ಕ್ರೈಸ್ತ ಪಾದ್ರಿಗಳು ಹಿಂದೂಮತ ಖಂಡನೆಯಿಂದ ಜನರ ಜುಗುಪ್ಸೆಗೆ ಪಕ್ಕಾಗುತ್ತಿದ್ದರು. ಥಿಯಾಸೊಫಿ ವರ್ಣಮಿಶ್ರಣ ಮಾಡುತ್ತಿದೆ. ಎಂಭ ನಿಂದೆಗೆ ಗುರಿಯಾಗಿತ್ತು. ಈ ಸಂಸ್ಥೆಗಳಲ್ಲದೆ ನೂರಾರು ದೊಡ್ಡ ಸಣ್ಣ ಸುಧಾರಕರು ಸ್ವಯಂ ಆಚಾರ್ಯರಾಗಿ ತಮಗೆ ಸೂಕ್ತತೋರಿದಂತೆ ಸಮಾಜದ ರೀತಿ ನೀತಿ ಧರ್ಮಗಳನ್ನು ವಿರೋಧಿಸಿ ಆರ್ಯಧರ್ಮವೆಂಬ ಅತಿ ಪುರಾತನ ಮಹಾ ವಟವೃಕ್ಷವನ್ನು ಬೇರು ಸಹಿತವಾಗಿ ಕಿತ್ತು ಹಿಂದುಮುಂದಾಗಿ ನೆಡಲು ಹವಣಿಸುತ್ತಿದ್ದರು. ಎಲ್ಲರೂ ಖಂಡನೆಯ ಖಡ್ಗವನ್ನು ಬೀಸಿ ರೋಗಕ್ಕೆ ಶಸ್ತ್ರಚಿಕಿತ್ಸೆ ಮಾಡುವ ಸಾಹಸದಲ್ಲಿದ್ದರೇ ಹೊರತು, ರೋಗವನ್ನು ಪರೀಕ್ಷಿಸಿ ರೋಗಿ ಕಠಿನ ಶಸ್ತ್ರಚಿಕಿತ್ಸೆಯನ್ನು ಹೊಂದಿ ಪಾರಾಗಲು ಶಕ್ತನಾಗಿದ್ದಾನೆಯೇ ಎಂಬುದನ್ನು ಒಬ್ಬರಾದರೂ ಯೋಚಿಸಲಿಲ್ಲ; ವಿಚಾರಿಸಲೂ ಇಲ್ಲ. ಪ್ರತಿಭಟನೆ ಎದುರಾಳಿಯನ್ನು ರೇಗಿಸಿ ಪ್ರತಿಭಟನೆಯನ್ನೆ ತರುತ್ತದೆ; ಸಹಾನುಭೂತಿಯಾದರೋ ಎದುರಾಳಿಯನ್ನು  ಸಂಮೋಹಿಸಿ ಕೈವಶ ಮಾಡಿಕೊಳ್ಳುತ್ತದೆ. ಅದಕ್ಕನುಗುಣವಾಗಿ ಹಿರಿಯ ಸಂಪ್ರದಾಯದಲ್ಲಿ ಬೆಳೆದ ಆರ್ಯರು ಸುಧಾರಕರ ಖಂಡನೆಗೆ ಪ್ರತಿಖಂಡನೆಗಳನ್ನು ತಂದೊಡ್ಡತೊಡಗಿದರು. ಆತ್ಮರಕ್ಷಣೆಯ ಸಲುವಾಗಿ ಅವರೂ ಸಮಾಜಗಳನ್ನೂ ಸಂಸ್ಥೆಗಳನ್ನೂ ಸಭೆಗಳನ್ನೂ ನಿರ್ಮಿಸಿ ಯುದ್ಧಕ್ಕೆ ಸಿದ್ಧರಾದರು. ಇಂತಹ ವಿಷಮ ಸಮಯದಲ್ಲಿ ಇತಿಹಾಸವು ಸಮನ್ವಯಾಚಾರ್ಯನೊಬ್ಬನನ್ನು ನಿರೀಕ್ಷಿಸುತ್ತದೆ. ಆ ಇತಿಹಾಸದ ಪ್ರಾರ್ಥನೆ ವ್ಯರ್ಥವಾಗಲಿಲ್ಲ. ವಿಶ್ವಗರ್ಭದ ನಿಗೂಢ ಅಂತರಾಳದಲ್ಲಿ ಸರ್ವದಾ ಸುಪ್ತವಾಗಿದ್ದರೂ ಚಿರ ಜಾಗ್ರತವಾಗಿರುವ ತ್ರೈಲೋಕ್ಯಕಂಪನಕಾರಿಯಾದ ಮಹಚೈತನ್ಯ ಶಕ್ತಿ ಭರತವರ್ಷದಲ್ಲಿ ಗಂಗಾಪುಣ್ಯಜಲಪ್ಲಾವಿತ ವಂಗದೇಶದಲ್ಲಿ ದ್ವಿರೂಪಧಾರಣೆ ಮಾಡಿ ಅವತರಿಸಿತು: ಆ ಮಹಾ ಚೈತನ್ಯಶಕ್ತಿಯ ಮೂಲಮೂರ್ತಿಯೆ ಶ್ರೀರಾಮಕೃಷ್ಣ ಪರಮಹಂಸರು; ಉತ್ಸವಮೂರ್ತಿಯೆ ಸ್ವಾಮಿ ವಿವೇಕಾನಂದರು.