ಶ್ರೀಯುತ ಕೇಶವಚಂದ್ರಸೇನ, ಸ್ವಾಮಿ ವಿವೇಕಾನಂದ ಮೊದಲಾದ ಪ್ರಖ್ಯಾತರಾದ ಮಹಾವ್ಯಕ್ತಿಗಳು ಕಾಲಾನಂತರದಲ್ಲಿ ಶ್ರೀರಾಮಕೃಷ್ಣರನ್ನು ಅವತಾರ ಪುರಷರೆಂದು ಕಂಡುಹಿಡಿದು ಆರಾಧಿಸಿದ ಸಂಗತಿ ಜಗತ್ತಿಗೆ ಗೊತ್ತಾಗಿದೆ. ಆದರೆ ಅದಕ್ಕೆ ಬಹು ಪೂರ್ವದಲ್ಲಿಯೆ ಕಾಮಾರಪುಕುರ ಗ್ರಾಮದಲ್ಲಿ ದರಿದ್ರನೂ ವೃದ್ಧನೂ ಅಜ್ಞಾತನಾಮನೂ ಆಗಿದ್ದ ಶ್ರೀನಿವಾಸ ಶಾಂಖಾರಿ ಗದಾಧರನನ್ನು ದೇವರೆಂದು ಪೂಜಿಸಿದ್ದುದು ಮಾತ್ರ ಆಡಂಬರ ಅಟ್ಟಹಾಸ ಪ್ರೇಮಿಯಗಿರುವ ಲೋಕದ ಗಮನಕ್ಕೆ ಬಾರದಿರಬಹುದು. ಆದರೂ ಆ ಘಟನೆ ವರ್ಣನೀಯವಾದುದು. ಕೀರ್ತಿ ಮಹತ್ತಿಗೆ ಸಾಕ್ಷಿಯಲ್ಲ. ಎಲ್ಲರ ಕಣ್ಣಿಗೂ ದಿನದಿನವೂ ಬೀಳುವ ಸೂರ್ಯನು ಕಣ್ಣಿಗೆ ಕಾಣದ ಬಹು ದೂರದ ನೀಹಾರಿಕೆಗಿಂತ ದೊಡ್ಡವನಲ್ಲ.

ಗದಾಧರನು ದೇವರ ಅವತಾರವೆಂದು ನಿಶ್ಚಯಿಸಿ ಶ್ರೀನಿವಾಸನು ಯಾರಿಗೂ ತಿಳಿಯದಂತೆ ಪೂಜೆಗೆ ಅಣಿಮಾಡಿದನು. ಒಂದು ದಿನ ವೃಕ್ಷ ಪರಿವೃತವಾಗಿದ್ದ ನಿರ್ಜನ ಪ್ರದೇಶಕ್ಕೆ ಬಾಲಕನನ್ನು ಕರೆದೊಯ್ದು, ದರ್ಭೆಯ ಪೀಠದ ಮೇಲೆ ಕುಳ್ಳಿರಿಸಿ ಮಿಠಾಯಿ ಮೊದಲಾದ ಮಧರು ನೈವೇದ್ಯಗಳನ್ನು ಮುಂದಿಟ್ಟು, ಆತನನ್ನು ಹೂಮಾಲೆಗಳಿಂದ ಅಲಂಕರಿಸಿ, ಸುಗಂಧದ್ರವ್ಯಗಳನ್ನು ಹಚ್ಚಿ ಪೂಜಿಸಿದನು. ತರುವಾಯ ಧ್ಯಾನಮೂರ್ತಿ ತರುಣ ಗದಾಧರನ ಮುಂದೆ ಭಕ್ತಿಮೂರ್ತಿ ವೃದ್ಧ ಶ್ರೀನಿವಾಸನು ಕೈ ಮುಗಿದು ನಿಂತುಕೊಂಡು ಕಂಬನಿಗರೆಯುತ್ತ “ಹೇ ದೇವದೇವ, ನಾನು ಮುದುಕನಾದೆ. ನನಗೆ ಅಂತ್ಯ ಸಮೀಪಿಸುತ್ತಿದೆ. ನೀನು ಜಗತ್ತಿನಲ್ಲಿ ಮುಂದೆ ಮಾಡುವ ಮಹಾಕಾರ್ಯಗಳನ್ನು ಕಣ್ಣಾರೆ ನೋಡುವ ಪುಣ್ಯ ನನಗಿಲ್ಲ. ಆದರೂ ನನ್ನದು ಇದೊಂದೇ ಪ್ರಾರ್ಥನೆ – ಈ ನಿನ್ನ ದರಿದ್ರ ಕಿಂಕರನ ಮೇಲೆ ನಿನ್ನ ಕೃಪಾಕಟಾಕ್ಷ ಯಾವಾಗಲೂ ತಪ್ಪದಿರಲಿ! ” ಎಂದು ಪ್ರಾರ್ಥಿಸಿದನು. ಸತ್ಯಮಿಥ್ಯೆಗಳೇನೆ ಇರಲಿ, ಎಂತಹ ದೃಶ್ಯ!

ದಿನ ಕಳೆದು ಹಾಗೆಲ್ಲ ಬಾಲಕನ ಧರ್ಮಪ್ರಜ್ಞೆ ವಿಕಾಸವಾಯಿತು. ಐಹಿಕ ವಿಷಯಗಳಲ್ಲಿ ಔದಾಸೀನ್ಯವೂ ಹೆಚ್ಚಿತು. ಶಾಲೆಗೆ ಹೋಗುವುದು ವಿರಳವಾಯಿತು. ಹೊಟ್ಟೆ ಹೊರೆಯುವ ಅಕ್ಷರ ವಿದ್ಯೆಯಲ್ಲಿ ತಿರಸ್ಕಾರ ಹುಟ್ಟಿತು. ಅದಕ್ಕೆ ಬದಲಾಗಿ ಪುರಾಣಶ್ರವಣ, ಈಶ್ವರಾರಾಧನೆ, ದೇವದೇವಿಯರ ಮುರ್ತಿರಚನೆ, ಭಗವತ್ ಸಂಕೀರ್ತನೆ ಮೊದಲಾದವುಗಳಲ್ಲಿ ಆಸಕ್ತಿ ಹೆಚ್ಚಿತು. ಹಳ್ಳಿಯವರೆಲ್ಲ ಆತನಿಂದ ಪುರಾಣ ಕಥೆಗಳನ್ನು ಕೇಳಿ ಆನಂದಪಡುತ್ತಿದ್ದರು. ರಾಮಕುಮಾರನು ತಮ್ಮನಿಗೆ ಆಗಾಗ ಬರುತ್ತಿದ್ದ ಭಾವಸಮಾಧಿಯನ್ನು ಯಾವುದೊ ಒಂದು ವಿಧವಾದ ಮೂರ್ಛೆಯ ಚಿಹ್ನೆ ಎಂದು ತಿಳಿದು ಅವನನ್ನು ಯಾವ ಕಠಿನ ನಿಯಮಗಳಿಗೂ ಗುರಿ ಮಾಡದೆ ಸುಮ್ಮನಾದನು. ಮಧ್ಯೆ ಮನೆಯಲ್ಲಿ ಕೆಲವು ವಿಶೇಷ ಸಂಗತಿಗಳೊದಗಿದುವು. ಕಿರಿಯಣ್ಣನಾದ ರಾಮೇಶ್ವರನಿಗೂ ತಂಗಿಯಾದ ಸರ್ವಮಂಗಳೆಗೂ ವಿವಾಹಗಳಾದುವು. ರಾಮಕುಮಾರನ ಪತ್ನಿ ಒಂದು ಮಗುವನ್ನು ಹೆತ್ತು ತೀರಿಕೊಂಡಳು. ಹೆಚ್ಚಿದ ಸಂಸಾರಕ್ಕೆ ಆದಾಯ ಸಾಕಾಗುತ್ತಿರಲಿಲ್ಲ. ಆದ್ದರಿಂದ ಸ್ವಲ್ಪ ಸಾಲವೂ ಆಯಿತು. ಇವೆಲ್ಲ ಕಾರಣಗಳಿಂದ ರಾಮಕುಮಾರನು ಬೇರೊಂದು ಸಂಪಾದನೆಯ ಮಾರ್ಗವನ್ನು ಅಲೋಚಿಸಿ, ಕೆಲವು ಮಿತ್ರರ ಸಲಹೆಯಂತೆ ಕಲ್ಕತ್ತೆಗೆ ಹೋಗಿ ಒಂದು ಸಣ್ಣ ಪಾಠಶಾಲೆಯನ್ನು ತೆರೆದನು. ಗದಾಧರನು ಎಂದಿನಂತೆ ಬಯಲಾಟ, ಭಜನೆ, ಕೀರ್ತನೆ, ಧ್ಯಾನಗಳಲ್ಲಿ ನಿರತನಾಗಿದ್ದನು. ಅತ್ತ ಕಲ್ಕತ್ತೆಯಲ್ಲಿ ರಾಮಕುಮಾರನ ಪಾಠಶಾಲೆ ಅಭಿವೃದ್ಧಿ ಹೊಂದಿತು. ವರ್ಷ ವರ್ಷಕ್ಕೂ ಹುಡುಗರ ಸಂಖ್ಯೆ ಹೆಚ್ಚಿತು. ತಾನೊಬ್ಬನೆ ಎಲ್ಲ ಕೆಲಸಗಳನ್ನೂ ನಿರ್ವಹಿಸುವುದು ಕಷ್ಟವಾಯಿತು. ಸಹಾಯಕನೊಬ್ಬನು ಆವಶ್ಯಕವಾದುದರಿಂದಲೂ ತಮ್ಮನಿಗೆ ಅಕ್ಷರ ವಿದ್ಯೆಯಲ್ಲಿ ಆದರ ಹುಟ್ಟಿಸುವ ಆಕಾಂಕ್ಷೆಯಿಂದಲೂ ಗದಾಧರನನ್ನು ಕಳುಹಿಸುವಂತೆ ಮನೆಗೆ ಕಾಗದ ಬರೆದನು. ಗದಾಧರನೂ ಅಣ್ಣನ ಇಚ್ಛೆಗೆ ಸಂತೋಷದಿಂದ ತಲೆಬಾಗಿದನು. ಗೊತ್ತಾದ ಶುಭ ದಿವಸದಲ್ಲಿ ಮನೆದೇವರಾದ ರಘುವೀರನಿಗೆ ಅಡ್ಡಬಿದ್ದು, ಮಾತೆಯ ಆಶೀರ್ವಾದವನ್ನು ಪಡೆದು, ಹದಿನಾರು ವರ್ಷ ತನ್ನ ಜೀವನವನ್ನು ಸುಖಮಯವಾಗಿ ಮಾಡಿದ್ದ ಆಬಾಲ ವೃದ್ಧ ಬಂಧು ಮಿತ್ರರನ್ನು ಕಂಬನಿ ತುಂಬಿ ಬೀಳ್ಕೊಂಡು, ವಿಧಿಯ ಗುಪ್ತಗಾಮಿಯಾದ ಸಂವಿಧಾನಕ್ಕೆ ಅನುಸಾರವಾಗಿ ಗದಾಧರನು ಮುದ್ದು ಹಳ್ಳಿಯಾಗಿದ್ದ ಕಾಮಾರಪುಕುರವನ್ನು ಬಿಟ್ಟು ಮಹಾನಗರವಾದ ಕಲ್ಕತ್ತೆಗೆ ಹೊರಟು ಹೋದನು. ಹಳ್ಳಿಗೆ ಕತ್ತಲೆ ಬಿದ್ದಂತಾಯಿತು.

ರಾಮಕುಮಾರನಿಗೆ ಗದಾಧರನ ಆಗಮನದಿಂದ ಮಹೋಪಕಾರವಾಯಿತು. ಆದರೆ ತಮ್ಮನಿಗೆ ಅಕ್ಷರ ವಿದ್ಯೆಯ ಮೇಲಿದ್ದ ಜುಗುಪ್ಸೆ ಮುನ್ನಿನಂತೆಯೆ ನಿಶ್ಚಲವಾಗಿತ್ತು. ಏನು ಮಾಡುವುದಕ್ಕೂ ತೋರದೆ ಹತಾಶನಾದ ರಾಮಕುಮಾರನು ಒಂದು ದಿನ ಗದಾಧರನನ್ನು ಬಳಿಗೆ ಕರೆದು “ತಮ್ಮಾ, ನೀನು ಹೀಗೆ ವಿದ್ಯೆ ಕಲಿಯದೆ ಉದಾಸೀನಮಾಡಿದರೆ ಮುಂದೆ ನಿನ್ನ ಗತಿ ಏನಾಗುವುದು? ಸಂಸಾರದ ಗತಿಯೇನು?” ಎಂದು ಮೊದಲಾಗಿ ಗದರಿಸಿ ಬುದ್ಧಿ ಹೇಳಿದನು. ಪ್ರತ್ಯುತ್ತರ ಸಿಡಿಲಿನಂತೆ ಬಂದೆರಗಿತು. “ಮೂರು ಕಾಸಿನ ರೊಟ್ಟಿ ಕೊಟ್ಟು ಹೊಟ್ಟೆ ಹೊರೆಯುವ ವಿದ್ಯೆಯಿಂದ ನಗಾಗಬೇಕಾದುದೇನು? ನನಗೆ ಬೇಕಾದುದು ಎದೆಗೆ ಕಾಂತಿಯನ್ನೂ ಬಗೆಗೆ ಶಾಂತಿಯನ್ನೂ ಕೊಡುವ ಬ್ರಹ್ಮವಿದ್ಯೆ.” ತಮ್ಮನ ನುಡಿಗೆ ಅಪ್ರತಿಭನಾದ ಅಣ್ಣನು ಏನೊಂದುತ್ತರವನ್ನೂ ಕೊಡಲಾರದೆ ಸುಮ್ಮನಾಗಿಬಿಟ್ಟನು.

ಕಲ್ಕತ್ತೆಗೆ ಬಂದ ಮೇಲೆ ಗದಾಧರನ ಧರ್ಮಭಾವನೆಗಳು ಇನ್ನೂ ಪರಿಪುಷ್ಟಿ ಹೊಂದಿದುವು. ಹಳ್ಳಿಯಲ್ಲಿದ್ದಾಗಲೆ ಸಾಮಾನ್ಯ ಜನರ ಜೀವನವು ಸಂಪೂರ್ಣವಾಗಿ ವಿಷಯೇಂದ್ರಿಯ ಮುದ್ರಿತವಾದುದೆಂದು ಅವನಿಗೆ ತಿಳಿದು ಬಂದಿತ್ತು. ನಗರಕ್ಕೆ ಬಂದ ಮೇಲೆ ಆ ಅಭಿಪ್ರಾಯ ಪ್ರಬಲತರವಾಯಿತು. ಮಂದಿಯ ಆಶೆ, ಅಭಿಲಾಷೆ, ಆಕಾಂದ್ಷೆ, ಸ್ವಭಾವ, ಮನೋರಥ, ಚಿತ್ತವೃತ್ತಿಗಳೆಲ್ಲವೂ ನಶ್ವರವಾದ ಐಹಿಕಭೋಗಗಳ ಬೆಂಕಿಯೆಡೆಗೆ ನುಗ್ಗುತ್ತಿದ್ದುದನ್ನೂ ಜನರು ಯಶಸ್ಸು ಐಶ್ವರ್ಯಗಳಿಗಾಗಿ ಪ್ರಣಬಿಡುತ್ತಿದ್ದುದನ್ನೂಅ ಬಲಿಷ್ಠ ಧೂರ್ತರು ದುರ್ಬಲ ನಮ್ರರಾದವರನ್ನು ಮೂಲೆಗೊತ್ತುತ್ತಿದ್ದುದನ್ನೂ ಈಶ್ವರ, ಧರ್ಮ, ಸದಾಚಾರಗಳೆಂಬುವು ಮರೆತಮಾತಾಗಿ, ಪವಿತ್ರ ಗ್ರಂಥಗಳೆಲ್ಲ ‘ಮೌಢ್ಯನಿಧಿ’ಗಳಾಗಿದ್ದದನ್ನೂ ಪ್ರತ್ಯಕ್ಷವಾಗಿ ನೋಡಿದ ಬಾಲಕನಲ್ಲಿ ಐಹಿಕ ಅನಾಸಕ್ತಿಯೂ ಪೌರಲೌಕಿಕ ಭಕ್ತಿಯೂ ವಿಷಯ ವಿರಕ್ತಿಯೂ ಒಡನೊಡನೆ ಮೂಡಿ ಬೆಳೆದುವು. ಜೀವನದ ಧ್ಯೇಯೋದ್ದೇಶಗಳು ಆಶಾಶ್ವತ ಭೊಗಲಾಲಸೆಗಳಿಗಿಂತಲೂ ಮಹತ್ತರವೂ ಅಗಾಧತರವೂ ಗಹನ ತರವೂ ಆದುವೆಂಬುದು ಆತನಿಗೆ ದಿನ ದಿನವೂ ಹೆಚ್ಚು ಹೆಚ್ಚಾಗಿ ವೇದ್ಯವಾಯಿತು. ಅಲ್ಲದೆ ಹೃದಯದ ಅಂತರಾಳದಲ್ಲಿ ತನ್ನ ಜೀವನದ ಮಹೋದ್ದೇಶವೂ ಮೆಲ್ಲ ಮೆಲ್ಲನೆ ಮೊರೆಯತೊಡಗಿತು. ಬಟ್ಟೆಗೆಟ್ಟ ಮಾನವರಿಗೆ ತಾನು ಮಾರ್ಗದರ್ಶಕ ಜ್ಯೋತಿಯಾಗಿ ಅವರಿಗೆ ಚಿರ ಕಲ್ಯಾಣಮಯವೂ ಪರಮಾನಂದಮಯವೂ ಆಗಿರುವ ಸರ್ವೋತ್ತಮ ಆದರ್ಶವನ್ನು ತೋರಿ ಸೇವೆಮಾಡಬೇಕೆಂದು ನಿರ್ಧರಿಸಿದನು. ತನಗೆ ತಾನೆ ಪ್ರಶ್ನೆ ಹಾಕಿಕೊಂಡು: ಅಕ್ಷರವಿದ್ಯೆಯಿಂದ ದಿವ್ಯ ಭಾವ ಭಕ್ತಿಗಳು ಅಭಿವೃದ್ಧಿಹೊಂದುವುವೆ? ಅದರಿಂದ ಧರ್ಮಜೀವನ ಹೆಚ್ಚು ಪ್ರಕಾಶಮಾನವಾಗುವುದೆ? ಸತ್ಯಪಕ್ಷಪಾತಿಯಾಗುವೆನೆ? ಇಂದ್ರಿಯ ಬಂಧನವನ್ನೂ ಅವಿದ್ಯೆಯನ್ನೂ ದಾಟುವೆನೆ? ಬ್ರಹ್ಮ ಸಾಕ್ಷಾತ್ಕಾರವಾಗುವುದೆ? “ಇಲ್ಲ; ಆವಶ್ಯಕವಿಲ್ಲ” ಎಂಬ ಮಾರುತ್ತರ ಹೃದಯದಲ್ಲಿ ವಜ್ರನಾದದಂತೆ ಕೇಳಿಸಿತು. ಹಾಗಾದರೆ ನಾನು ನಿರಕ್ಷರಕುಕ್ಷಿಯಾಗಿಯಾದರೂ ಇರುವೆನೇ ಹೊರತು ಮಹಾದರ್ಶ ಸಾಧನೆಯನ್ನು ಎಂದಿಗೂ ತ್ಯಜಿಸಲಾರೆನು ಎಂದು ದೃಢನಿಶ್ಚಯ ಮಾಡಿಕೊಂಡನು. ಮನುಷ್ಯನ ಬಾಳಿನ ಕಡೆಯ ಗುರಿ ಬರಿಯ ಅನ್ನ ಚಿನ್ನಗಳ ಸಂಪಾದನೆಯಲ್ಲ! ಅವುಗಳಿಂದ ಮಾನವನು ಜರಾಮರಣಗಳನ್ನು ದಾಟಲಾರನು. ಹೊನ್ನಿನ ಪೂಜೆಯಿಂದಲೆ ಮಾನವನು ದೇವರಿಂದ ದೂರನಾಗಿದ್ದಾನೆ. ಇಂತೆಲ್ಲ ಚಿಂತಿಸಿದ ಬಾಲಕನು ಜನನ ಮರಣ ತರಂಗಕ್ಷುಬ್ಧವಾದ ಸಂಸಾರ ಸಾಗರವನ್ನು ದಾಟಿಸುವ ಬ್ರಹ್ಮವಿದ್ಯೆಯ ಕಡೆಗೆ ತಿರುಗಿದನು.

ಎರಡು ವರ್ಷಗಳುರುಳಿದವು. ರಾಮಕುಮಾರನ ಆರ್ಥಿಕಸ್ಥಿತಿ ಬರಬರುತ್ತ ಹೀನತರವಾಯಿತು. ಮುಂದು‌ಗಾಣದೆ ರಘುವೀರನು ಮಾಡಿಸಿದಂತಾಗಲಿ ಎಂದು ಸಾಗತೊಡಗಿದನು. ಅಂತಹ ವಿಷಮಾವಸ್ಥೆಯಲ್ಲಿದ್ದಾಗಲೆ ಅನೀರೀಕ್ಷಿತವಾದ ದಿಕ್ಕಿನಿಂದ ಸಹಾಯ ಬಂದಿತು. ಈಶ್ವರ ಹಸ್ತವು ರಾಮಕುಮಾರನನ್ನು ಎಳೆಯುವ ನೆವದಿಂದ ದಾಧರನನ್ನು ಎಳೆಯುತ್ತಿತ್ತು. ಆಗತಾನೆ ದಕ್ಷಿಣೇಶ್ವರದ ಕಾಳಿಕಾ ದೇವಾಲಯವನ್ನು ಕಟ್ಟಿ ಪೂರೈಸಿದ್ದ ಶ್ರೀಮತಿ ರಾಣಿ ರಾಸಮಣಿ ತನಗೆ ಬಂದೊದಗಿದ ಕಷ್ಟವನ್ನು ನಿವಾರಿಸಬೇಕೆಂದು ರಾಮಕುಮಾರನನ್ನು ಪ್ರಾರ್ಥಿಸಿದಳು.

ರಾಯಾ ರಾಜಚಂದ್ರದಾಸನು ಸ್ವರ್ಗಸ್ಥನಾಗಲು ಆತನ ದೊಡ್ಡ ಜಮೀನು ದಾರಿಯ ಆಡಳಿತವೆಲ್ಲ ಆತನ ಧರ್ಮಪತ್ನಿಯಾದ ರಾಸಮಣಿಯ ಕೈಸೇರಿತು. ಬೆಸ್ತರವಳಾದರೂ ಆಕೆಯ ಸೌಜನ್ಯ ಔದಾರ್ಯಗಳಿಂದ ಆಕೆಗೆ “ರಾಣಿ” ಎಂಬ ಬಿರುದು ಬಂದಿತ್ತು. ವೈಧವ್ಯ ಪ್ರಾಪ್ತಿಯಾಗಲು ಆಕೆಯಲ್ಲಿದ್ದ ಈಶ್ವರಭಕ್ತಿ ಇಮ್ಮಡಿಯಾಯಿತು. ಆದ್ದರಿಂದ ಕಾಶಿಯಾತ್ರೆ ಮಾಡಬೇಕೆಂದು ನಿಶ್ಚಯಿಸಿದಳು. ಆದರೆ ಕನಸಿನಲ್ಲಿ ಇಷ್ಟದೇವತೆಯಾದ ಕಾಳಿಕಾಮೂರ್ತಿ ಪ್ರತ್ಯಕ್ಷಳಾಗಿ ಆಜ್ಞಾಪಿಸಿದಂತೆ ರಾಣಿ ಕಾಶಿಯತ್ರೆಯನ್ನು ನಿಲ್ಲಿಸಿ, ಕಲ್ಕತ್ತೆಗೆ ಸ್ವಲ್ಪ ದೂರದಲ್ಲಿ ಭಾಗೀರಥಿಯ ತೀರದಲ್ಲಿ ಒಂದು ಮಹಾ ದೇವಾಲಯವನ್ನು ನಿರ್ಮಿಸತೊಡಗಿದಳು. ಬಹುಧನವ್ಯಯದ ಆ ಪವಿತ್ರ ನಿರ್ಮಾಣ ಕಾರ್ಯ ಕ್ರಿ. ಶ. ೧೮೫೫ರಲ್ಲಿ ತುದಿಮುಟ್ಟಿತು. ಆದರೆ ಶೂದ್ರಳ ದೇವಾಲಯಕ್ಕೆ ಬ್ರಾಹ್ಮಣ ಪೂಜಾರಿ ದೊರಕುವುದು ದುರ್ಲಭವಾಯಿತು. ಅನೇಕ ಶಾಸ್ತ್ರಜ್ಞರ ಸಲಹೆಗಳನ್ನು ಕೇಳಿದಳು. ಏನೂ ಬಗೆಯರಿಯಲಿಲ್ಲ. ಕಡೆಗೆ ರಾಮಕುಮಾರನಿಗೆ ಕಾಗದ ಬರೆದಳು. ಆತನು ದೇವಾಲಯವನ್ನು ಬ್ರಾಹ್ಮಣರಿಗೆ ದಾನಮಾಡಿ ದೇವಿಯ ಪ್ರತಿಷ್ಠೆ ಮಾಡಿದರೆ ಶಾಸ್ತ್ರಸಮ್ಮತವಾಗುವುದೆಂದೂ ಆಮೇಲೆ ಉಚ್ಚವರ್ಣದವರು ಪೂಜಾರಿಗಳಾಗಿ ಪ್ರಸಾದ ಸ್ವೀಕಾರಮಾಡಬಹುದೆಂದೂ ಉತ್ತರ ಬರೆದನು. ರಾಣಿ ತನ್ನ ಕುಲಪುರೋಹಿತರಿಗೆ ದೇವಾಲಯವನ್ನು ದಾನಮಾಡಿ ಮೂರ್ತಿ ಸ್ಥಾಪನೆಯ ಕಾರ್ಯವನ್ನು ನೆರವೇರಿಸಿದಳು. ಆದರೆ ಜಗನ್ಮಾತೆಯ ಪೂಜೆಗೆ ಅರ್ಚಕರು ದೊರೆಯಲಿಲ್ಲ. ಪುನಃ ರಾಮಕುಮಾರನ ಸಹಾಯವನ್ನು ಬೇಡಿದಳು. ತಾಂತ್ರಿಕಸಾಧಕನೂ ಶಕ್ತಿ ಮಂತ್ರೋಪದಿಷ್ಟನೂ ದೇವಿಯ ಪರಮಭಕ್ತನೂ ಆಗಿದ್ದ ಆತನು ಪ್ರತಿಷ್ಠಾಪನೆಯ ಪುಣ್ಯ ಕಾರ್ಯಕ್ಕೆ ಸಮ್ಮತಿಸಿದನು. ಆ ಮಹೋತ್ಸವದ ದಿನ ಗದಾಧರನೂ ಅಣ್ಣನೊಂದಿಗೆ ಹೋದನು. ಆದರೆ ಪ್ರಸಾದ ಸ್ವೀಕರಮಾಡಲಿಲ್ಲ. ಕಲ್ಕತ್ತೆಗೆ ಹೋಗಿ ಮನೆಯಲ್ಲಿಯೇ ಊಟಮಾಡಿದನು. ಮರುದಿನವೂ ಹಾಗೆಯೇ ಆಯಿತು. ಅಣ್ಣನು ವಿಗ್ರಹ ಪ್ರತಿಷ್ಠೆಮಾಡಿ ಹಿಂದಿರುಗುವನೆಂದು ತಿಳಿದಿದ್ದ ಗದಾಧರನು ಮೋಸ ಹೋದನು. ರಾಮಕುಮಾರನು ಅಲ್ಲಿಯೇ ಅರ್ಚಕನಾಗಿ ನಿಂತುಬಿಟ್ಟನು. ತಮ್ಮನು ಅಣ್ಣನನ್ನು ಹಿಂದಿರುಗಿಸಲು ಬಹಳ ಸಾಹಸ ಮಾಡಿದನು. ನಿಷ್ಠಾವಂತರಾದ ಬ್ರಾಹ್ಮಣರಿಗೆ ಶೂದ್ರಳು ಕಟ್ಟಿಸಿದ ದೇವಾಲಯದಲ್ಲಿ ಪೂಜಾರಿಯಾಗಿರುವುದು ಅಯೋಗ್ಯವೆಂದು ವಾದಿಸಿದನು. ಶಾಸ್ತ್ರಯುಕ್ತಿಗಳ ಸಹಾಯದಿಂದ ರಾಮಕುಮಾರನೂ ವಾದಿಸಿದನು. ಕಡೆಗೆ ಯಾವ ನಿರ್ಣಯಕ್ಕೂ ಬರಲಾರದೆ ಚೀಟಿಹಾಕಿ ನೋಡಿದರು. ಚೀಟಿಯೂ ರಾಮಕುಮಾರನಂತೆಯೆ ವಾದಿಸಿಬಿಟ್ಟಿತು. ಮುಂದೇನೂ ತೋರದೆ ತಮ್ಮನು ಅಣ್ಣನೊಡನೆ ದಕ್ಷಿಣೇಶ್ವರದಲ್ಲಿಯೆ ನಿಲ್ಲಬೇಕಾಯಿತು. ಆದರೆ ಗದಾಧರನು ದೇವಸ್ಥಾನದ ಪ್ರಸಾದವನ್ನು ಸ್ವೀಕರಿಸಲು ಏನು ಹೇಳಿದರೂ ಸಮ್ಮತಿಸಲಿಲ್ಲ. ಗಂಗಾತೀರದಲ್ಲಿ ಸ್ವಯಂಪಾಕ ಮಾಡಿಕೊಂಡೇ ಊಟ ಮಾಡತೊಡಗಿದನು.

ಗದಾಧರನನ್ನು ದಕ್ಷಿಣೇಶ್ವರಕ್ಕೆ ಉಪಾಯಾಂತರದಿಂದ ಸಾಗಿಸಿದ ಜಗನ್ನಿಯಂತೃವಾದ ವಿಧಿ ತನ್ನ ಮಹಾಖನಿಯ ಅನರ್ಘ್ಯರತ್ನವನ್ನು ಕಡೆಯಲು ತೊಡಗಿತು. ರತ್ನವು ಮಣ್ಣಿನ ಹೊದಿಕೆಯಲ್ಲಿ ತನ್ನ ಮಹಾಕಾಂತಿಯನ್ನು ಹುದುಗಿಸಿಕೊಂಡು ಅಜ್ಞಾತವಾಗಿರಲು ಎಷ್ಟು ಪ್ರಯತ್ನಪಟ್ಟರೂ ಫಲಕಾರಿಯಾಗಲಿಲ್ಲ. ಆ ಪ್ರಯತ್ನವೇ ಅದರ ಭಾಗಕ್ಕೆ ಶತ್ರುವಾಗಿ ಅಂತರ್ನಿಹಿತ ತೇಜಸ್ಸನ್ನು ಪ್ರದರ್ಶಿಸತೊಡಗಿತು. ಭಾಗೀರಥಿಯ ತೀರದಲ್ಲಿ ದಿನದಿನವೂ ಜರುಗುತ್ತಿದ್ದ ಸ್ವಯಂಪಾಕದ ನೀಲ ಧೂಮವು ತನಗೆ ಕಾರಣಕರ್ತನಾದ ದೇವಕುಮಾರನೆಡೆಗೆ ಎಲ್ಲರ ಕಣ್ಣುಗಳನ್ನೂ ಸೆಳೆಯಿತು. ರಾಣಿ ರಾಸಮಣಿಯ ಅಳಿಯನಾದ ಮಥುರನಾಥನು ನಿಷ್ಠೆಯಿಂದ ಬೆಳಗುತ್ತಿದ್ದ ಗದಾಧರನ ತರುಣ ಮೂರ್ತಿಯನ್ನು ಕಂಡು ಆಕರ್ಷಿತನಾದನು. ಆತನ ದೇಹದ ಸೌಂದರ್ಯ, ವಾಣಿಯ ಮಾದುರ್ಯ, ಮುಗುಳ್ನಗೆಯ ಗಾಂಭೀರ್ಯ, ಆಚಾರ ವ್ಯವಹಾರಗಳ ಸಭ್ಯತೆ – ಇವುಗಳನ್ನು ನೋಡಿ ಮೊದಮೊದಲು ಕುತೂಹಲ ಮಾತ್ರವಾಗಿದ್ದ ಮಥುರನ ಚಿತ್ತವೃತ್ತಿ ಬರಬರುತ್ತಾ ಪ್ರಶಂಸಾಪೂರ್ಣವಾಯಿತು. ತರುಣನು ತಮ್ಮ ದೇವಾಲಯದ ಪ್ರಧಾನಾರ್ಚಕನ ತಮ್ಮನೆಂದು ತಿಳಿದ ಮೇಲಂತೂ ಆತನ ಸಂತಸ ಇಮ್ಮಡಿಯಾಯಿತು. ದೇವಸ್ಥಾನದಲ್ಲಿ ಅವನಿಗೆ ಏನಾದರೊಂದು ಕೆಲಸ ಕೊಡಬೇಕೆಂದು ನಿಶ್ಚಯಿಸಿ ರಾಮಕುಮಾರನೊಡನೆ ಪ್ರಸ್ತಾಪಿಸಿದನು. ಶ್ರೀಮಂತನ ಅಭಿಮಾನಪೂರ್ವಕವಾದ ಉತ್ಸಾಹಕ್ಕೆ ಮಾಗಿಮುಟ್ಟಿದಂತಾಯ್ತು. ರಾಮಕುಮಾರನು ತನ್ನ ಸೋದರನ ಮನೋವೈಚಿತ್ಯ್ರವನ್ನೂ ಸ್ವಾತಂತ್ಯ್ರಪ್ರಿಯತೆಯನ್ನೂ ಲೌಕಿಕ ಪರವಾದ ಔದಾಸೀನ್ಯವನ್ನೂ ವಿವರಿಸಿ ಹೇಳಿ ಶ್ರೀಮಂತನ ಸಾಹಸವು ನಿರರ್ಥಕವಾಗುವುದೆಂದೇ ಸೂಚಿಸಿದನು. ಸದ್ಯಕ್ಕೆ ಆಶಾಭಂಗವಾದರೂ ಸರಿಯಾದ ಸನ್ನಿವೇಶವೊದಗಿದಾಗ ತನ್ನ ಆಕಾಂಕ್ಷೆಯನ್ನು ಸಾಧಿಸಬೇಕೆಂದು ಮಥುರನಾಥನು ಸಮ್ಮನಾದನು. ಈ ವಿಷಯ ಗದಾಧರನ ಕಿವಿಗೆ ಬಿತ್ತು. ಸ್ವಲ್ಪ ಗಾಬರಿಯೂ ಆಯಿತು. ಎಲ್ಲಿಯಾದರೂ ಆ ಸಾಹುಕಾರನು ತನ್ನೊಡನೆಯೇ ಪ್ರಸ್ತಾಪ ತೆಗೆದರೆ ಏನು ಮಾಡುವುದೆಂದು ಚಿಂತಿಸಿ ಮಥುರನ ಕಣ್ಣಿಗೆ ಬೀಳದಂತೆ ಇರತೊಡಗಿದನು.

ಈ ಮಧ್ಯೆ ಶ್ರೀರಾಮಕೃಷ್ಣರ ಜೀವನ ಲೀಲೆಯಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸಲಿರುವ ಒಂದು ವ್ಯಕ್ತಿ ದಕ್ಷಿಣೇಶ್ವರಕ್ಕೆ ಬಂದಿತು. ಆತನೇ ಗದಾಧರನ ನಿಕಟಬಂಧುವೂ ಬಾಲ್ಯಸ್ನೇಹಿತನೂ ಆದ ಹೃದಯರಾಮ ಚಟ್ಟೋಪಾಧ್ಯಾಯ. ಹೃದಯನಿಗೆ ಆಗ ಹದಿನಾರು ವರ್ಷವಾಗಿತ್ತು. ಚಿಕ್ಕಂದಿನಿಂದಲೂ ತನ್ನ ಸೋದರಮಾವನ ವಿಚಿತ್ರ ಮಾನಸಿಕ ವ್ಯಾಪಾರಗಳನ್ನು ಕಂಡು ತಿಳಿದಿದ್ದನು. ಮಾವನ ಮಹಾದೈವಿಕ ವ್ಯಕ್ತಿತ್ವದಲ್ಲಿ ಅಸಾಧಾರಣ ಪೂಜ್ಯ ಬುದ್ಧಿಯನ್ನಿಟ್ಟಿದ್ದ ಆತನು ಶ್ರೀರಾಮಕೃಷ್ಣರನ್ನು ಯಾವಾಗಲೂ ನೆರಳಿನಂತೆ ಅನಸರಿಸಿ ಸೇವಿಸಿದನು. ಆತನ ಪ್ರೇಮಮಯ ಶುಶ್ರೂಷೆಯಿಲ್ಲದಿದ್ದರೆ ಶ್ರೀರಾಮಕೃಷ್ಣರ ದೇಹವು ಕಠಿನ ಸಾಧನೆಗಳಿಂದ ಪಾರಾಗುವುದು ಬಹು ಕಷ್ಟವಾಗುತ್ತಿತ್ತು.

ದಿನ ಕಳೆದ ಹಾಗೆಲ್ಲ ಮಥುರಬಾಬುವಿಗೆ ಗದಾಧರನಲ್ಲಿ ಆಸಕ್ತಿಯೂ ಪೂಜ್ಯ ಬುದ್ಧಿಯೂ ಹೆಚ್ಚಿದುವು. ಹಣ ಸಂಪಾದನೆಯ ಹಾದಿ ತೋರಿಸಿದರೆ ಒಲ್ಲೆ ಎನ್ನುವಂತಹನು ಮಹಾಪುರುಷನಾಗಿರಬೇಕೆಂದು ಆತನು ನಿರ್ಧರಿಸಿದನು. ಒಂದು ದಿನ ಗದಾಧರನು ತಾನೇ ತಯಾರಿಸಿ ಪೂಜಿಸಿದ ಶಿವಮೂರ್ತಿಯ ಸೌಂದರ್ಯ ದಿವ್ಯಭಾವಗಳನ್ನು ನೋಡಿ ಅದನ್ನು ಹೃದಯನಿಂದ ಕಾಣಿಕೆಯಾಗಿ ಪಡೆದು ರಾಸಮಣಿಗೆ ತೋರಿಸಿದನು. ಆಕೆಯೂ ಬಹವಾಗಿ ಮೆಚ್ಚಿದಳು. ಹೇಗಾದರೂ ಮಾಡಿ ತೇಜಸ್ವಿಯಾದ ತರುಣನನ್ನು ಜಗನ್ಮಾತೆಯ ಪೂಜೆಗೆ ನಿಯಮಿಸಿದರೆ ತನಗೆ ಮಂಗಳವೆಂದು ಬಗೆದು ಅವಕಾಶವನ್ನೆ ಎದುರುನೋಡುತ್ತಿದ್ದನು. ಆದರೆ ಗದಾಧರನು ಅವನ ಕಣ್ಣಿಗೆ ಬೀಳದಂತೆ ನುಸುಳಿಕೊಂಡಿದ್ದನು. ಒಂದು ದಿನ ದೇವಮಂದಿರದ ಅಂಗಣದಲ್ಲಿ ಹೃದಯ ಗದಾಧರರು ಮಾತಾಡುತ್ತಿದ್ದಾಗ ಮಥುರನಾಥನು ಅಕಸ್ಮಾತ್ತಾಗಿ ಅಲ್ಲಿಗೆ ಬಂದು ಗದಾಧರನಿಗೆ ಹೇಳಿ ಕಳುಹಿಸಿದನು. ಗದಾಧರನಿಗೆ ಎಂದಿನಂತೆ ಕಣ್ಮರೆಯಾಗುವುದಕ್ಕೆ ಅವಕಾಶ ದೊರಕಲಿಲ್ಲ. ಏನು ಮಾಡಬೇಕೆಂದು ತಿಳಿಯದೆ ಅತ್ತಿತ್ತ ನೋಡತೊಡಗಿದನು.

ಜೊತೆಯಲ್ಲಿದ್ದ ಹೃದಯನು “ಇದೇನು ಮಾವ! ಹಿಂದೆ ಮುಂದೆ ನೋಡುತ್ತಿದ್ದೀಯೆ?” ಎಂದು ಕೇಳಿದನು.

“ಅವನಲ್ಲಿಗೆ ಹೋದಕೂಡಲೆ ಪೂಜಾರಿ ಕೆಲಸ ಮಾಡು ಅನ್ನುತ್ತಾನೆ” ಎಂದನು ಗದಾಧರನು.

“ಅದರಿಂದ ನಷ್ಟವೇನು? ಆತನೂ ಈಶ್ವರಭಕ್ತನು. ಭಕ್ತನ ಕೈ ಕೆಳಗೆ ಕೆಲಸ ಮಾಡಲು ದೋಷವೇ?”

“ಹಾಗಲ್ಲ; ನನಗೆ ಯಾರ ಹಂಗಿಗೂ ಯಾವ ಬಂಧನಕ್ಕೂ ಸಿಕ್ಕಿಕೊಳ್ಳು ಮನಸ್ಸಿಲ್ಲ. ಅಲ್ಲದೆ ಪೂಜಾರಿಯಾದರೆ ಒಡವೆ ವಸ್ತುಗಳನ್ನು ನೋಡಿಕೊಳ್ಳಬೇಕಾಗುತ್ತದೆ. ಆ ಕೆಲಸ ನನ್ನಿಂದ ಅಸಾಧ್ಯ. ನೀನದಕ್ಕೆ ಹೊಣೆಯಾಗುವುದಾದರೆ ಮಥುರಬಾಬುವಿನ ಬಳಿಗೆ ಹೋಗುತ್ತೇನೆ.”

ಹೃದಯನಿಗೆ ಅಷ್ಟೇ ಬೇಕಾಗಿತ್ತು. ಒಡನೆಯೆ ಸಮ್ಮತಿಸಿದನು. ಗದಾಧರನೂ ಹೋದನು. ಮಥರನಾಥನು ಬಹಳ ನಮ್ರತೆಯಿಂದ ಬೇಡಿಕೊಂಡುದರ ಮೇರೆಗೆ ಗದಾಧರನು ದೇವಿಯ ಮೂರ್ತಿಯನ್ನು ಅಲಂಕರಿಸುವ ಸೇವೆಗೆ ಒಪ್ಪಿಕೊಂಡನು. ಹೃದಯನು ಮಾವನಿಗೆ ಸಹಾಯಕನಾದನು. ಅವರಿಬ್ಬರೂ ಮುಂಜಾನೆಯಲ್ಲಿ ಎದ್ದು ನದಿಯಲ್ಲಿ ಸ್ನಾನ ಮಾಡಿ ತಮ್ಮ ತಮ್ಮ ಕರ್ತವ್ಯಗಳಲ್ಲಿ ಸುಖದಿಂದ ತನ್ಮಯರಾಗುವರು. ಯಾವಾಗಲೂ ಜೊತೆಯಗಲುತ್ತಿದ್ದಿಲ್ಲ. ಆದರೆ ಸಂಧ್ಯಾಸಮಯದಲ್ಲಿ ಗದಾಧರನು ಎಲ್ಲಿಯೋ ಮಾಯವಾಗಿಬಿಡುತ್ತಿದ್ದನು. “ಎಲ್ಲಿಗೆ ಹೋಗಿದ್ದೆ?” ಎಂದು ಕೇಳಿದರೆ “ಎಲ್ಲಿಗೂ ಇಲ್ಲ; ಇಲ್ಲೇ ಇದ್ದೆ” ಎನ್ನುತ್ತಿದ್ದನು. ಮಾವನ ಮಾರ್ಗವನ್ನರಿತಿದ್ದ ಹೃದಯನು ಸುಮ್ಮನಾಗಿಬಿಡುತ್ತಿದ್ದನು.

ಒಂದು ದಿನ ಪೂಜಾರಿಯೊಬ್ಬನು ರಾಧಾಗೋವಿಂದ ಮಂದಿರದ ಶ್ರೀ ಕೃಷ್ಣವಿಗ್ರಹವನ್ನು ಗಂಗೆಯಲ್ಲಿ ಸ್ನಾನಮಾಡಿಸುತ್ತಿದ್ದಾಗ ಅದು ಕೈತಪ್ಪಿ ಕೆಳಗೆ ಬಿದ್ದು ಕಾಲು ಮುರಿದು ಊನವಾಯಿತು. ಮುಂದೆ ಆ ವಿಗ್ರಹವು ಪೂಜೆಗೆ ಅರ್ಹವೋ ಅಲ್ಲವೋ ಎಂಬುದು ದೊಡ್ಡ ಸಮಸ್ಯೆಯಾಯಿತು. ರಾಸಮಣಿ ಮಥುರನಾಥರು ಶಾಸ್ತ್ರಿಗಳನ್ನು ವಿಚಾರಿಸಿದರು. ಅವರು ಶಾಸ್ತ್ರರೀತಿಯಾಗಿ ವಿಗ್ರಹವು ಪೂಜೆಗೆ ಅರ್ಹವಲ್ಲ ಎಂದು ನಿರ್ಣಯ ಮಾಡಿದರು. ಆದರೆ ಭಕ್ತಳಾದ ರಾಣಿಗೆ ಅನೇಕ ದಿನಗಳಿಂದ ಪೂಜಿಸಿದ ವಿಗ್ರಹವನ್ನು ಹೊಳೆಗೆ ಹಾಕಲು ಮನಸ್ಸೊಪ್ಪಲಿಲ್ಲ. ಕಡೆಗೆ ಗದಾಧರನ ಭಾವಸಮಾಧಿಗಳನ್ನು ಆಗಾಗ ಕಂಡು ಆತನು ದೈವಿಕಪುರುಷನೆಂದು ಗೊತ್ತು ಮಾಡಿದ್ದ ಮಥುರನು ಆತನ ಅಭಿಪ್ರಾಯದಂತೆ ನಡೆಯುವುದು ಮಂಗಳವೆಂದು ಸೂಚಿಸಿದನು. ರಾಣಿಯೂ ಒಪ್ಪಿದಳು. ಗದಾಧರನೂ ಕಥೆಯೆಲ್ಲವನ್ನೂ ಆಲಿಸಿ, “ಶಾಸ್ತ್ರಿಗಳ ನಿರ್ಣಯ ಹಾಸ್ಯಾಸ್ಪದವಾದುದು. ರಾಣಿಯ ಅಳಿಯ ಅಕಸ್ಮಾತ್ತಾಗಿ ಬಿದ್ದು ಕಾಲು ಮುರಿದುಕೊಂಡರೆ ರಾಣಿ ಮೊದಲಿನ ಅಳಿಯನನ್ನು ಹೊಳೆಗೆಸೆದು ಮತ್ತೊಬ್ಬನನ್ನು ಬದಲಿಗೆ ತರುವಳೇನು? ಕಾಲು ಮುರಿದವನ ಶುಶ್ರೂಷೆಯ ಮುಖ್ಯ ಕರ್ತವ್ಯ, ಅವನನ್ನು ತಿರಸ್ಕರಿಸುವುದಲ್ಲ. ಅದರಂತೆಯೆ ವಿಗ್ರಹವನ್ನು ಸರಿಮಾಡಿಸಿ ಪೂಜಿಸಿದರಾಯ್ತು” ಎಂದು ನಿರ್ದಾಕ್ಷಿಣ್ಯವಾಗಿ ಹೇಳಿ ಬಿಟ್ಟನು. ಎಲ್ಲರೂ ಈ ತರ್ಕಕ್ಕೆ ಮಾರು ಹೋಗಿ ನಿರ್ಣಯಕ್ಕೆ ಒಪ್ಪಿದರು. ಗದಾಧರನೆ ಸ್ವಲ್ಪವೂ ಊನತೋರದಂತೆ ಮೂರ್ತಿಯನ್ನು ಸರಿಮಾಡಿದನು. ರಾಣಿಯ ಆನಂದಕ್ಕೂ ಮಥುರ ಹೆಮ್ಮೆಗೂ ಪಾರವೆ ಇರಲಿಲ್ಲ. ವಿಗ್ರಹವನ್ನು ಒಡೆದ ಪೂಜಾರಿ ಕೆಲಸದಿಂದ ನಿವೃತ್ತನಾದನು. ಪೂಜೆಯ ಭಾರ ಗದಾಧರನ ಮೇಲೆ ಬಿತ್ತು. ಜಗನ್ಮಾತೆಯನ್ನು ಅಲಂಕರಿಸುವ ಕೆಲಸ ಹೃದಯನಿಗಾಯಿತು.

ಗದಾಧರನ ಪೂಜೆಯ ವಿಧಾನವೆ ಬೇರೊಂದು ಪರಿಯಗಿದ್ದುದು ಮಥುರಬಾಬುವಿಗೆ ಬಹುಬೇಗನೆ ತಿಳಿಯಿತು. ಇತರ ಅರ್ಚಕರಿಗೆ ಯಾವುದು ಶಿಲಾವಿಗ್ರಹ ಮಾತ್ರವಾಗಿದ್ದಿತೋ ಅದು ಗದಾಧರನ ಭಾವಮಯ ದೃಷ್ಟಿಗೆ ಘನೀಭೂತವಾದ ಚೈತನ್ಯವಾಗಿತ್ತು. ಆತನು ಪೂಜೆಗೆ ಕುಳಿತನೆಂದರೆ ಬಾಹ್ಯಜಗತ್ತಿನ ಪ್ರಜ್ಞೆಯಿರುತ್ತಿರಲಿಲ್ಲ. ಕೆಲವು ಸಾರಿ ನಿಷ್ಪಂದನಾಗಿ ಕುಳಿತನೆಂದರೆ ಯಾರು ಎಷ್ಟು ಕರೆದರೂ ಮೈತಿಳಿಯುತ್ತಿರಲಿಲ್ಲ; ಮಂತ್ರಗಳನ್ನು ಉಚ್ಚರಿಸುವಾಗ ಮಂತ್ರೋಪದಿಷ್ಟಭಾವಗಳು ಆತನಿಗೆ ಸಾಕರವಾಗಿ ಕಾಣುತ್ತಿದ್ದುವಂತೆ. ಅಂತಹ ಸಮಯಗಳಲ್ಲಿ ಅಗ್ನಿಭಿತ್ತಿಯೊಂದು ತನ್ನನ್ನೂ ದೇವಮಂದಿರವನ್ನೂ ಸುತ್ತುವರಿದ ಹಾಗೆ ತೋರುತ್ತಿತ್ತಂತೆ. ಅಲ್ಲದೆ ಕುಂಡಲಿನಿ ಸುಷುಮ್ನಾ ನಾಡಿಯ ಮರ್ಗವಾಗಿ ಸಹಸ್ರಾರಕ್ಕೆ ಏರುವುದು ಚೆನ್ನಾಗಿ ಅನುಭವವಾಗುತ್ತಿತ್ತಂತೆ. ಪೂಜಾಸಮಯದಲ್ಲಿ ಆತನ ದೇಹಸಮಸ್ತವೂ ತಪ್ತಕಾಂಚನವರ್ಣವಾಗಿ ಮುಖ ತೇಜಸ್ಸಿನಿಂದ ರಂಜಿಸುತ್ತಿತ್ತು. ಅಲೌಕಿಕ ಅರ್ಚಕನ ಮಹಿಮಾಮಯಸಾನ್ನಿಧ್ಯದಲ್ಲಿ ನೆರೆದ ಭಕ್ತರ ಹೃದಯಕಮಲಗಳಲ್ಲಿ ನವಚೇತನ ಸಂಚಾರವಾಗುತ್ತಿತ್ತು.

ತಮ್ಮನು ಪೂಜಾರಿಯ ಕೆಲಸಕ್ಕೆ ಒಪ್ಪಿಕೊಂಡುದರಿಂದ ರಾಮಕುಮಾರನು ಬಲು ಹಿಗ್ಗಿದನು. ತನ್ನ ಸಂಸಾರಕ್ಕೆ ಆದಾಯ ಹೆಚ್ಚುವುದೆಂದು ಸಮಾಧಾನವಾಯಿತು. ಆದರೆ ತಮ್ಮನು ಎಂದಿಗಿಂತಲೂ ಹೆಚ್ಚಾಗಿ ನಿರ್ಜನತಾಪ್ರೇಮಿಯಾದುದೂ ವ್ಯಾವಹಾರಿಕ ವಿಚಾರಗಳಲ್ಲಿ ಉದಾಸೀನನಾದುದೂ ಆತನಿಗೆ ಗೊತ್ತಾಗದೆ ಇರಲಿಲ್ಲ. ಜನರೆಲ್ಲ ಭಜನೆ ಉತ್ಸವಗಳಲ್ಲಿ ನೆರೆದರೆ ಗದಾಧರನು ಒಂಟಿಯಾಗಿ ಚಿಂತಾಮಗ್ನನಾಗಿ ಗಂಗೆಯ ತೀರದಲ್ಲಿ ತಿರುಗಾಡುತ್ತಿರುವನು. ಪ್ರಾತಃಕಾಲ ಸಂಧ್ಯಾಕಾಲಗಳಲ್ಲಿ ದೇವಾಲಯದ ಆರಾಧನೆಗಳಲ್ಲಿ ಭಾಗಿಯಾಗದೆ ಸಮೀಪದ ತೋಟದಲ್ಲಿ ಮರಗಳ ಬುಡದಲ್ಲಿ ಕುಳಿತು ಬಾಹ್ಯವಿಸ್ಮೃತನಾಗಿ ಏನನ್ನೊ ಧ್ಯಾನಮಾಡುವನು. ಕಾಮಾರಪುಕುರದ ಬಾಲಕನಲ್ಲಿದ್ದ ವಿನೋದ ಲೀಲೆಗಳು ಮಾಯವಾಗಿ ಧಾರ್ಮಿಕ ಗಾಂಭೀರ್ಯ ಮೈದೋರಿತು. ಇವುಗಳನ್ನೆಲ್ಲಾ ನೋಡಿದ ರಾಮಕುಮಾರನಿಗೆ ತಮ್ಮನು ಸದ್ಯಕ್ಕೆ ಕೈಕೊಂಡ ಕೆಲಸದಲ್ಲಿ ಶಾಶ್ವತವಾಗಿರುವನೆಂಬ ನೆಚ್ಚಿಕೆ ಇರಲಿಲ್ಲ. ಆದ್ದರಿಂದ ಹೇಗಾದರೂ ಮಾಡಿ ಏನಾದರೊಂದು ಹವ್ಯಾಸವನ್ನು ಹಚ್ಚಿ ಆತನ ಮನಸ್ಸನ್ನು ಲೌಕಿಕದ ಕಡೆಗೆ ಎಳೆಯಬೇಕೆಂದು ಹವಣಿಸಿ ಆತನಿಗೆ ಆತನಿಗೆ ಕಾಳೀ ಪೂಜೆಯ ವಿಧಾನವನ್ನು ಕಲಿಸಲು ನಿಶ್ಚಯಿಸಿದನು. ಎಲ್ಲಕ್ಕೂ ಮೊದಲು ಶಕ್ತಿ ಮಂತ್ರೋಪದೇಶವಾಗಬೇಕಾಗಿತ್ತ. ಆ ಕಾಲದಲ್ಲಿ ಶಕ್ತಿಸಾಧಕನೆಂದು ವಂಗದೇಶದಲ್ಲೆಲ್ಲ ಪ್ರಸಿದ್ಧನಾಗಿದ್ದ ಕೇನರಾಮ ಭಾಟ್ಟಾಚಾರ್ಯನಿಂದ ಗದಾಧರನಿಗೆ ಮಂತ್ರೋಪದೇಶ ಮಾಡಿಸಿದನು. ತರುವಾಯ ರಾಮಕುಮಾರನು ಆಗಾಗ್ಗೆ ಜಗನ್ಮಾತೆಯ ಪೂಜೆಯನ್ನು ತಮ್ಮನಿಗೆ ವಹಿಸಿ ತಾನು ರಾಧಾಗೋವಿಂದನ ಪೂಜೆಗೆ ಹೋಗುತ್ತಿದ್ದನು. ಇದು ಮಥುನಾಥನ ಕಣ್ಣಿಗೂ ಒಂದೆರೆಡುಸಾರಿ ಬಿತ್ತು. ಆತನು ಗದಾಧರನನ್ನು ಜಗನ್ಮಾತೆಯ ಅರ್ಚಕನಾಗುವಂತೆ ಕೇಳಿಕೊಂಡನು. ಅದಕ್ಕೆ ಗದಾಧರನನ್ನು “ಮಹಾಶಯ, ನನಗೆ ಪೂಜೆಯ ವಿಧಾನವೆ ಸರಿಯಾಗಿ ಬರುವುದಿಲ್ಲ. ಹೀಗಿರಲು ಶಾಸ್ತ್ರೀಯವಾಗಿ ಮಾಡಬೇಕಾದ ಪವಿತ್ರ ಕಾರ್ಯವು ನನ್ನಿಂದ ಹೇಗೆ ತಾನೆ ಸಾಗುವುದು?” ಎಂದನು. ಅದಕ್ಕೆ ಮಥರನು “ತಮಗೆ ಯಾವ ಶಾಸ್ತ್ರ ವಿಧಿಯೂ ಅವಶ್ಯವಿಲ್ಲ. ತಮ್ಮ ಮಹಾಭಕ್ತಿಯೊಂದೇ ಸಾಕು ದೇವಿಯ ತೃಪ್ತಿಗೆ. ತಾವು ಏನನ್ನು ಹೇಗೆ ನಿವೇದಿಸಿದರೂ ಜಗದಂಬೆ ಸಂತೋಷದಿಂದ ಸ್ವೀಕರಿಸುತ್ತಾಳೆ. ತಮ್ಮ ಪೂಜೆಯಿಂದ ಸಂತೃಪ್ತಳಾದ ಮಹೇಶ್ವರಿ ಈ ವಿಗ್ರಹದಲ್ಲಿ ಆನಂದದಿಂದ ಆವಿರ್ಭವಿಸುವಳು” ಎಂದನು. ಶ್ರೀಮಂತನ ಅಕೃತ್ರಿಮವಾದ ಉತ್ತರ ಗದಾಧರನ ಮನಸ್ಸನ್ನು ಸೂರೆಗೊಂಡಿತು. ಆದ್ದರಿಂದ ಸಮ್ಮತಿಸಿದನು. ರಾಮಕುಮಾರನಿಗೆ ರಾಧಾಗೋವಿಂದನ ಮಂದಿರಕ್ಕೆ ವರ್ಗವಾಯಿತು. ಅದರಿಂದ ಆತನಿಗೆ ಮಹಾನಂದವೂ ಆಯಿತು.

ಆದರೆ ರಾಮಕುಮಾರನಿಗೆ ರಾಧಾಗೋವಿಂದನ ಪೂಜೆ ಮಾಡುವ ಪುಣ್ಯ ಬಹುಕಾಲ ಲಭಿಸಲಿಲ್ಲ. ವಯಸ್ಸಾಗಿದ್ದ ಆತನ ಮೈಯಲ್ಲಿ ಅಸ್ವಸ್ಥತೆ ಅಂಕುರಿಸಿತು. ಹವ ಬದಲಾವಣೆಗಾಗಿಯೂ ಸ್ವಲ್ಪ ದಿನಗಳ ವಿಶ್ರಾಂತಿಗಾಗಿಯೂ ಆತನು ತನ್ನ ಬಾಲ್ಯದ ಬೀಡಾದ ಕಾಮಾರಪುಕುರಕ್ಕೆ ಹೊರಟ ಹೋಗಲು ಮನಸ್ಸು ಮಾಡಿದನು. ಆದರೆ ವಿಧಿ ಬೇರೊಂದು ನಿಶ್ಚಯಮಾಡಿತ್ತು. ಕಲ್ಕತ್ತೆಯ ಬಳಿಯ ಒಂದು ಊರಿಗೆ ಯಾವುದೊ ಕಾರ್ಯಗೌರವದಿಂದ ಹೋದವನು ಹಠಾತ್ತನೆ ಕಾಲವಾದನು.

ಅಣ್ಣನ ನಿಧನವಾರ್ತೆ ಗದಾಧರನ ಎದೆಯಲ್ಲಿ ಸಿಡಿಲಿನಂತೆ ಎರಗಿತು. ಚಿಕ್ಕಂದಿನಲ್ಲಿಯೆ ತಂದೆಯನ್ನು ಕಳೆದುಕೊಂಡ ಆತನಿಗೆ ಅಣ್ಣನೆ ಸರ್ವಸ್ವನಾಗಿದ್ದನು. ಆದ್ದರಿಂದ ಪ್ರೀತಿಯ ಸಹೋದರನ ಸಾವು ತಮ್ಮನ ಕಣ್ಣಿನಲ್ಲಿ ಹೊಳೆಹರಿಸಿಬಿಟ್ಟಿತು. ಲೋಕದ ನಶ್ವರತೆಯಲ್ಲಿದ್ದ ನಂಬುಗೆ ಮತ್ತೂ ದೃಢತರವಾಯಿತು. ಜನನ ಮರಣ ಸುಖದುಃಖಗಳನ್ನು ಉತ್ತರಿಸಿ ಆನಂದಾಮೃತವನ್ನು ಸವಿಯದಿದ್ದರೆ ಮಾನವಜನ್ಮ ವ್ಯರ್ಥವೆಂದು ತೋರಿತು. ಈಶ್ವರಪರವಾದ ವ್ಯಾಕುಲತೆ ನೂರ್ಮಡಿಯಾಯಿತು. ಚಿಂತೆ ಅಗಾಧವಾಯಿತು. ಸಾಹಸ ಕಂಕಣಧಾರಿಯಾಯಿತು. ಮಹಾಹಂಸವು ಪರ್ವತೋಪಮ ಭೀಷಣ ತರಂಗಮಯವಾದ ಅನಂತವಾದ ಸರ್ವದಾ ವಿಕ್ಷುಬ್ಧ ಸಂಸಾರ ಸಮುದ್ರವನ್ನು ಹಾರಿ ದಾಟಲೆಂದು ತನ್ನ ಶ್ವೇತವಿಶಾಲ ಪಕ್ಷವಿಸ್ಫಾಲನೆಗೈದು ಮಹಾಯಾತ್ರೆಗೆ ಸಿದ್ಧವಾಯಿತು.