ಹುಲುಸಾಗಿ ಬೆಳೆದ ಬಿತ್ತರದ ಗದ್ದೆ ಬಯಲುಗಳ ಹಸುರು ಹಬ್ಬುಗೆ, ತಾಲ ಖರ್ಜೂರ ಮಾವಿನ ತೋಪುಗಳ ಚೆಲುವಾದ ಬನಸಿರಿ, ಕಣ್ಣಿಗೆ ತಣ್ಣಗಿರುವ ತಿಳಿನೀರಿನ ಕೆರೆಕೊಳಗಳ ಸೊಬಗು ಇವುಗಳಿಂದ ಶೋಭಿಸುವ ಕಾಮಾರಪುಕುರವು ಬಂಗಾಲ ಪ್ರಾಂತದ ಹೂಗ್ಲಿ ಜಿಲ್ಲೆಯಲ್ಲಿ ಸಣ್ಣದೊಂದು ಮುದ್ದುಹಳ್ಳಿ. ಜನ್ಮತಃ ಸರಳ ಮನಸ್ಕನೂ ಸಜ್ಜನನೂ ಈ ಈಶ್ವರಭಕ್ತನೂ ಸತ್ಯನಿಷ್ಠನೂ ಆದ ಖುದಿರಾಮ ಚಟ್ಟೋಪಾಧ್ಯಾಯನು ಸುಳ್ಳು ಸಾಕ್ಷಿ ಹೇಳಲಾರದೆ ಶ್ರೀಮಂತನೊಬ್ಬನ ಮುನಿಸಿಗೆ ಒಳಗಾಗಿ ದೇರೆ ಎಂಬ ಗ್ರಾಮದಲ್ಲಿದ್ದ ತನ್ನ ಪೂರ್ವಿಕರ ಭೂಮಿಕಾಣಿಗಳನ್ನು ಕಳೆದುಕೊಂಡು ಮಿತ್ರನೊಬ್ಬನ ಸೌಜನ್ಯದಿಂದ ಕಾಮಾರಪುಕರಕ್ಕೆ ಬಂದು ತನ್ನ ಬಡ ಸಂಸಾರವನ್ನು ಹೂಡಿದ್ದನು. ಸಾಂಪ್ರದಾಯಿಕ ಬ್ರಾಹ್ಮಣನಾದ ಆತನು ಶೂದ್ರರಿಂದ ದಾನ ತೆಗೆದುಕೊಳ್ಳದೆ, ಶೂದ್ರರ ಮನೆಯಲ್ಲಿ ಪೂಜೆ ಪೌರೋಹಿತ್ಯಗಳನ್ನು ಮಾಡಿಸುತ್ತಿದ್ದ ಬ್ರಾಹ್ಮಣರ ಮನೆಗಳಿಗೆ ಊಟಕ್ಕೆ ಹೋಗದೆ, ತನ್ನ ಮನೆ ದೇವರಾದ ಶ್ರೀರಾಮಚಂದ್ರನನ್ನು ಭಕ್ತಿನಿಷ್ಠೆಗಳಿಂದ ಶಾಸ್ತ್ರೋಕ್ತವಾಗಿ ಆರಾಧಿಸುತ್ತ ಹಳ್ಳಿಗರ ಪ್ರೀತಿಗೌರವಗಳಿಗೆ ಪಾತ್ರನಾಗಿದ್ದನು. ಆತನ ಧರ್ಮಪತ್ನಿಯಾದ ಶ್ರೀಮತಿ ಚಂದ್ರಮಣಿದೇವಿಯೂ ತನ್ನ ಪತಿಯಂತೆಯೆ ಪವಿತ್ರ ಚರತ್ರೆಯುಳ್ಳವಳಾಗಿದ್ದಳು. ದರಿದ್ರರಿಗೂ ದೀನರಿಗೂ ಅನಾಥರಿಗೂ ಸಾಧುಸಂನ್ಯಾಸಿಗಳಿಗೂ ಆಕೆ ತಾಯಯಾಗಿದ್ದಳು. ಇಂತಿದ್ದ ಗಂಡ ಹೆಂಡಿರ ಬಡಮನೆ ಸಣ್ಣ ಗುಡಿಯೊಂದರಂತೆ ಶಾಂತಿಮಯವಾಗಿತ್ತು. ನೆಮ್ಮದಿ ಎಂಬುದು ಬಹಿರ್ಭೂತ ವಸ್ತುವಲ್ಲ, ಅಂತರ್ನಿಹಿತ ಸಂಪತ್ತು.

ಖುದಿರಾಮನಿಗೆ ರಾಮಕುಮಾರ, ರಾಮೇಶ್ವರ ಎಂಬಿಬ್ಬರು ಗಂಡು ಮಕ್ಕಳೂ ಕಾತ್ಯಾಯಿನಿ ಎಂಬೊಬ್ಬ ಹೆಣ್ಣುಮಗಳೂ ಇದ್ದರು. ಅವರಲ್ಲಿ ಹಿರಿಯವನಾದ ರಾಮಕುಮಾರನು ಮೇಧಾವಿಯಾಗಿದ್ದುದರಿಂದ ಸಾಹಿತ್ಯ, ವ್ಯಾಕರಣ, ಸ್ಮೃತಿ, ಶಾಸ್ತ್ರಗಳನ್ನು ಅಧ್ಯಯನಮಾಡಿ, ಸಂಸ್ಕೃತದಲ್ಲಿ ಒಳ್ಳೆಯ ಪಾಂಡಿತ್ಯ ಸಂಪಾದನೆ ಮಾಡಿ ಪ್ರಾಪ್ತ ವಯಸ್ಕನಾಗಿ ಸಂಸಾರವನ್ನು ಸಾಗಿಸಲು ಸಮರ್ಥನಾದನು. ಮೊದಲಿನಿಂದಲೂ ತೀರ್ಥಯಾತ್ರಾ ಪ್ರೇಮಿಯಾಗಿದ್ದ ಖುದಿರಾಮನು ಮನೆವಾರ್ತೆಯನ್ನು ಮಗನ ಮೇಲೆ ಹೊರಿಸಿ ಈಶ್ವರ ಚಿಂತನೆಯಲ್ಲಿ ಮಗ್ನನಾಗಿ, ನಿಶ್ಚಿಂತನಾಗಿ ಕ್ರಿ. ಶ. ೧೮೩೫ರಲ್ಲಿ ಗಯಾಕ್ಷೇತ್ರಕ್ಕೆ ಯಾತ್ರೆ ಹೋದನು. ಅಲ್ಲಿ ಅವನಿಗೊಂದು ಅಲೌಕಿಕವಾದ ಅನುಭವವುಂಟಾಯಿತು. ಇರುಳು ಕನಸಿನಲ್ಲಿ ತೇಜೋಮೂರ್ತಿಯೊಂದು ಕಾಣಿಸಿಕೊಂಡು ಖುದಿರಾನನ್ನು ಸಂಬೋಧಿಸಿ “ಮರಳಿ ನಾನು ಲೋಕ ಕಲ್ಯಾಣಾರ್ಥವಾಗಿ ನಿನ್ನ ಮನೆಯಲ್ಲಿ ಅವತಾರ ಮಾಡುವೆನು” ಎಂದಂತಾಯಿತು. ಖುದಿರಾಮನು “ಸ್ವಾಮಿ, ಅದು ನನಗೆ ಹೊರಲಾರದ ಭಾರದ ಗೌರವ. ನಾನು ಬಡವ, ನಾನೆಂತು ನಿನಗೆ ಉಚಿತವಾದ ಉಪಚಾರ ಮಾಡಲು ಸಮರ್ಥನಾಗುತ್ತೇನೆ?” ಎಂದನು. ಅದಕ್ಕೆ ಆ ದಿವ್ಯ ಮೂರ್ತಿ “ನೀನು ಕೊಡುವುದರಲ್ಲಿಯೆ ನಾನು ತೃಪ್ತನಾಗುವೆ, ಹೆದರದಿರು” ಎಂದಿತು. ಭಕ್ತನು ಮನದಲ್ಲಿಯೆ ಹಿಗ್ಗಿ ಕನಸು ನಿಜವಾಗುವವರೆಗೂ ಯಾರೊಡನೆಯೂ ಅದನ್ನು ಹೇಳಬಾರದೆಂದು ನಿಶ್ಚಯಿಸಿ ಊರಿಗೆ ಹಿಂದಿರುಗಿದನು.

ಅದೇ ಕಾಲದಲ್ಲಿ ಚಂದ್ರಮಣಿದೇವಿಯೂ ಒಂದು ವಿಚಿತ್ರ ಸ್ವಪ್ನವನ್ನು ಕಂಡಳು. ಆ ಸ್ವಪ್ನದಲ್ಲಿ ಸಹಸ್ರ ಸೂರ್ಯಪ್ರಭೆಯ ಜ್ಯೋತಿಃಪುಂಜವೊಂದು ತನ್ನನ್ನು ಆಲಿಂಗಿಸಿದಂತೆ ಭಾಸವಾಯಿತು. ಅಂತೆಯೆ ಮತ್ತೊಂದು ದಿನ ಶಿವಮಂದಿರದಲ್ಲಿ ಕಾಂತಿಮಂಡಲವೊಂದು ಪೂಜಾ ವಿಗ್ರಹದಿಂದ ಮಿಂಚಿ ಬಂದು ತನ್ನ ಶರೀರದಲ್ಲಿ ಐಕ್ಯವಾದಂತಾಯಿತು. ಪತಿ ಮನೆಗೆ ಬಂದ ಮೇಲೆ ಆತನೊಡನೆ ನಡೆದ ಸಂಗತಿಗಳೆಲ್ಲವನ್ನೂ ಹೇಳಿದಳು. ಖುದಿರಾಮನು ಅದೆಲ್ಲವೂ ಈಶ್ವರ ಕೃಪೆಯ ಚಿಹ್ನೆ ಎಂದು ಹೇಳಿ ಸತಿಯನ್ನು ಸಂತೈಸಿ ಸುಮ್ಮನಿರುವಂತೆ ಹೇಳಿದನು. ಕೆಲವು ದಿನಗಳಲ್ಲಿ ಚಂದ್ರಾದೇವಿ ಪೂರ್ಣ ಗರ್ಭಿಣಿಯಾದಳು.

ಮಹಾಪುರುಷರ ಅವತರಣ ಸಮಯದಲ್ಲಿ ಅವರ ತಂದೆತಾಯಿಗಳಿಗೆ ಅಪೂರ್ವ ಅನುಭವಗಳಾಗುವುದು ಆಶ್ಚರ್ಯಕರವಾದರೂ ಅಸಂಭವವಾದುದಲ್ಲ. ಮಹಾಕಾರ್ಯಕ್ಕೆ ಮಹಾಕಾರಣಗಳಿರಬೇಕು. ಮಹಾಪುರುಷರು ಸೃಷ್ಟಿಶಕ್ತಿಯ ಮಹಾಕಾರ್ಯಗಳು. ಅವರ ಜೀವನದಲ್ಲಿ ಜನಸಾಮಾನ್ಯರಿಗೆ ಅಸಾಧ್ಯವೆಂದು ತೋರುವ ಎಷ್ಟೋ ಘಡನೆಗಳೊದಗುವುವು. ಹೀಗಿರಲು ಅವರ ಜನನದಲ್ಲಿಯೂ ಅಂತಹ ಅನನ್ಯಸಾಧಾರಣ ಘಟನೆಗಳಾಗುವುದು ಅಷ್ಟೇನೂ ಅಸಂಭವವಾದುದಲ್ಲ. ಸಾಧಾರಣ ಮಾನವರಲ್ಲಿರುವ ಅಲೌಕಿಕತಾ ಪ್ರೇಮವೂ ಕಲ್ಪನಾ ಶಕ್ತಿಯೂ ಮಹಾಪುರುಷರ ಜನ್ಮಕಥೆಗಳನ್ನು ಬಣ್ಣದ ಬಲೆಗಳಿಂದ ನೆಯ್ದಿದ್ದರೂ ಇರಬಹುದು. ಆದರೂ ಅವುಗಳನ್ನು ಸಂಪೂರ್ಣವಾಗಿ ಸುಳ್ಳೆಂದು ಅಲ್ಲಗಳೆಯುವುದು ಅಷ್ಟೇನೂ ವೈಜ್ಞಾನಿಕವಾದುದಲ್ಲ. ಅಂತಹ ವಿಷಯಗಳಲ್ಲಿ ಸಂದೇಹವು ನಿರ್ಣಯಕ್ಕಿಂತ ಹೆಚ್ಚು ಶ್ರೇಯಸ್ಕರವಾದುದು. ಎಲ್ಲ ಸೃಷ್ಟಿನಿಯಮಗಳೂ ನಮಗಿನ್ನೂ ವೇದ್ಯವಾಗಿಲ್ಲ. ತಿಳಿದ ಕೆಲವು ನಿಯಮಗಳಿಗೆ ವಿರೋಧವೆಂದು ತೋರಿಬರುವ ಘಟನೆಗಳು ಬಹುಶಃ ಮುಂದೆ ತಿಳಿಯಲಿರುವ ನಿಯಮಗಳಿಂದ ವಿಶದವಾಗಬಹುದು. ಅದೇನೇ ಇರಲಿ, ಇತಿಹಾಸವು ಅವತಾರ ಪುರುಷರ ಆವಿರ್ಭಾವವನ್ನು ಅಲೌಕಿಕತೆಯಿಂದ ಆವರಿಸಿಬಿಟ್ಟಿದೆ. ವಿವರಣೆಯ ಭಾರ ಮನಃಶಾಸ್ತ್ರದ್ದು. ನೂತನ ಜ್ಞಾನ ತನಗೆ ಅವೇದ್ಯವಾದುದರಿಂದ ಅಸತ್ಯವೆಂದು ಶಿಶು ಹಳಿದರೆ ಅವಿವೇಕವಾಗುವುದು.

ಮುಂದೆ ಯಾರ ಮಹಾ ಸಮನ್ವಯ ಸಂದೇಶದಿಂದ ಜಗತ್ತು ಜಾಗ್ರತವಾಗಲಿದ್ದಿತೋ, ಯಾರು ಶ್ರೀರಾಮಕೃಷ್ಣ ಪರಮಹಂಸದೇವ ಎಂಬ ಹೆಸರಿನಿಂದ ಲೋಕಪೂಜ್ಯನಾದನೋ ಆ ಯುಗಾವತಾರನು ಕ್ರಿ. ಶ. ೧೮೩೬ನೆಯ ಫೆಬ್ರವರಿ ೧೮ನೆಯ ತೇದಿಯ ದಿ ಫಾಲ್ಗುಣಮಾಸದ ಸುಪ್ರಭಾತವು ಪೂರ್ವ ದಿಗಂತದಲ್ಲಿ ಮೊಳೆದೋರುತ್ತಿರಲು ಕಾಮಾರಪುಕುರದ ಹುಲ್ಲು ಜೋಪಡಿಯ ಬಡ ಹೆರಿಗೆಯ ಮನೆಯಲ್ಲಿ ಜನ್ಮವೆತ್ತಿದನು. ಶುಭ ಶಂಖಧ್ವನಿ ಶಿಶುವಿನ ಆಗಮನವನ್ನು ಜಗತ್ತಿಗೆ ಸಾರಲೆಂಬಂತೆ ಪ್ರಾತಃಸಮಯದ ಪವಿತ್ರ ಮೌನವನ್ನು ಮಥಿಸಿ ದಿಗ್ದಿಗಂತಗಳಲ್ಲಿ ಅನುರಣಿತವಾಯಿತು. ಎಚ್ಚತ್ತ ವಿಹಂತಮಗಳು ಸಾಮಗಾನವನ್ನು ತಾನ ತಾನವಾಗಿ ಹಡಿದುವು. ಸೃಷ್ಟಿಯ ಮಹಾ ಶರೀರವು ನವಚೇತನ ಸಂಚಾರದಿಂದ ವಿಕಂಪಿಸಿತು. ನೆರೆಹೊರೆಯ ಹೆಂಗಸರೆಲ್ಲರೂ ಬಂದು ಶಿಶುಶಿರೋಮಣಿಯ ಶುಭಗಾತ್ರವನ್ನು ನೋಡಿ ಕೊಂಡಾಡಿದರು. ಅವರಲ್ಲಿ ಒಬ್ಬಳಾದ ಧನಿಯೆಂಬವಳು ಶಿಶುಮಾತೆಯರಿಗೆ ಸಡಗರದಿಂದ ಶುಶ್ರೂಷೆ ಮಾಡಿದಳು. ತರುವಾಯ ಜೋಯಿಸರು ಬಂದು ಜನ್ಮಕುಂಡಲಿಯನ್ನು ಬರೆದು “ಇಂಥವನು ಧರ್ಮವೇತ್ತನೂ ಮಹನೀಯನೂ ಆಗುವನು. ಯಾವಾಗಲೂ ಪುಣ್ಯ ಕರ್ಮಾನುಷ್ಠಾನದಲ್ಲಿ ನಿರತನಾಗಿರುವನು. ಬಹುಶಿಷ್ಯಪರಿವೃತನಾಗಿ ದೇವಮಂದಿರದಲ್ಲಿ ವಾಸಮಾಡುವನು. ನಾರಾಯಣಾಂಶಸಂಭೂತನಾದ ಮಹಾಪುರುಷನೆಂದು ಜಗತ್ತಿನಲ್ಲಿ ಪ್ರಸಿದ್ದಿಪಡೆದು ಸರ್ವತ್ರ ಸರ್ವ ಜನರಿಂದಲೂ ಪೂಜಿತನಾಗುವನು.” ಎಂದು ಭವಿಷ್ಯ ಹೇಳಿದರು. ಖುದಿರಾಮನಿಗೆ ತನ್ನ ಕನಸು ನಿಜವಾಗುವಂತೆ ತೋರಿತು. ಅನಂತರ ಜಾತಕರ್ಮವನ್ನು ನೆರವೇರಿಸಿ ಶಿಶುವಿಗೆ ಗದಾಧರನೆಂದು ನಾಮಕರಣ ಮಾಡಿದರು.

ಗದಾಧರನು ಮನೆಯವರ ಮುದ್ದಾಗಿ, ನೆರೆಯವರ ಕಣ್ಣಾಗಿ, ಮಗುಗಳ ಮಾಣಿಕವಾಗಿ, ಚೆಲುವು ನಲುಮೆಗಳ ಚೈತ್ರದ ಚಿಲುಮೆಯಾಗಿ ಬೆಳೆದನು. ಶಿಶುವಿನಲ್ಲಿದ್ದ ಅಪ್ರಾಕೃತ ಅಸಾಧಾರಣತೆ ಹಳ್ಳಿಗರ ಸರಳ ದೃಷ್ಟಿಗೆ ಸ್ವಲ್ಪ ಸ್ವಲ್ಪವಾಗಿಯಾದರೂ ಗೋಚರವಾಗದಿರಲಿಲ್ಲ. ತಾಯಿಯಾದ ಚಂದ್ರಾದೇವಿಯಂತೂ ಕೆಲವು ಸಾರಿ ಭಯ ವಿಸ್ಮಯಗಳಿಂದ ತಲ್ಲಣಿಸುತ್ತಿದ್ದಳು. ಒಮ್ಮೆ ಪುಟ್ಟ ಶಿಶುವು ಬಹು ಭಾರವಾಗಿರಲು ಆಕೆ ಎತ್ತಿಕೊಳ್ಳಲಾರದೆ ಹೋಗಿ ಗಂಡನನ್ನು ಕರೆದಳು. ಆದರೆ ಬಂದು ನೋಡುವಲ್ಲಿ ಅದು ಹೂವಿನಂತೆ ಹಗುರವಾಗಿತ್ತು. ಇನ್ನೊಂದು ಸಾರಿ ಗದಾಧರನು ಎಂಟು ತಿಂಗಳ ಕೂಸಾಗಿದ್ದಾಗ ತಾಯಿ ಆತನನ್ನು ಸೊಳ್ಳೆಪರದೆಯೊಳಗೆ ಮಲಗಿಸಿ ತನ್ನ ಕೆಲಸದ ಮೇಲೆ ಹೋದಳು. ಬಂದು ನೋಡಿದರೆ, ಹಾಸಿಗೆಯ ಮೇಲೆ  ಕಂದನಿಗೆ ಬದಲಾಗಿ ತೇಜಸ್ವಿಯಾದ ದೊಡ್ಡ ಮನುಷ್ಯನೊಬ್ಬನಿದ್ದುದನ್ನು ಕಂಡು ಕಿಟ್ಟನೆ ಕಿರಿಚಿಕೊಂಡಳು. ಕೂಗನ್ನು ಕೇಳಿ ಖುದಿರಾಮನು ಓಡಿ ಬಂದನು. ಮಗವು ಮೊದಲಿನಂತೆ ಮುದ್ದಾಗಿ ಮಲಗಿತ್ತು. ಇದನ್ನೆಲ್ಲ ಕಂಡ ಚಂದರಮಣಿದೇವಿಯ ಮಾತೃಹೃಹಯವು ಕಂದನ ಕ್ಷೇಮಕ್ಕಾಗಿ ಕಾತರವಾಯಿತು. ಯಾವುದೊ ದುಷ್ಟಪಿಶಾಚಿಯ ಚೇಷ್ಟೆಯಾಗಿರಬೇಕೆಂದು ಗಂಡನೊಡನೆ ಹೇಳಿದಳು. ಶಿಶು ಗರ್ಭದಲ್ಲಿದ್ದಾಗಲೆ ತನಗೂ ಆಕೆಗೂ ಆದ ದಿವ್ಯಾನುಭವಗಳನ್ನು ಖುದಿರಾಮನು ನೆನಪಿಗೆ ತಂದುಕೊಟ್ಟು ದೇವಾಂಶ ಶಿಶುವಿನ ವಿಚಾರದಲ್ಲಿ ಹೀಗೆಲ್ಲ ಆಗುವುದು ಸಹಜವಾದುದರಿಂದ ಭಯಕ್ಕೇನೂ ಕಾರಣವಿಲ್ಲ ಎಂದು ಸತಿಯನ್ನು ಸಂತೈಸಿದನು.

ಐದು ವರ್ಷಗಳುರುಳಿಹೋದುವು. ಜನರು ಗದಾಧರನ ಜಾಣ್ಮೆಗೆ ಬೆರಗಾದರು. ಮುದ್ದಿನಿಂದ ನೆರೆಹೊರೆಯವರು ಹೇಳಿಕೊಡುತ್ತಿದ್ದ ಪುರಾಣ ಕಥೆಗಳನ್ನೂ ಸ್ತೋತ್ರಪಾಠಗಳನ್ನೂ ಆತನು ಬಹು ಬೇಗ ಕಲಿತುಕೊಂಡನು. ಅಲ್ಲದೆ ತನ್ನ ಓರಗೆಯರಿಗೆ ಅವುಗಳನ್ನೆಲ್ಲಾ ನೀರುಕುಡಿದಂತೆ ಹೇಳಿಕೊಡುತ್ತಿದ್ದನು. ಲೋಕ ಪದ್ಧತಿಯಂತೆ ಗದಾಧರನನ್ನು ಪಾಠಶಾಲೆಗೆ ಹಾಕಿದರು. ಓದುಬರಹಗಳು ಬೇಗನೆ ಬಂದುವು; ಗಣಿತವು ಬರಲಿಲ್ಲ. ಉಪಾಧ್ಯಾಯರಿಗೆ  ಹುಡುಗನು ಅಚ್ಚುಮೆಚ್ಚಾದಂತೆಯೆ ಇತರ ಬಾಲಕರಿಗೆ ಮುಖಂಡನಾದನು. ಅವರಿಗೆಲ್ಲಾ ಸೆರೆಯಂತಿದ್ದ ಶಾಲೆಯ ಜೀವನವು ಗದಾಧರನ ಪ್ರಭಾವದಿಂದ ಹೆಚ್ಚು ರುಚಿಕರವಾಯಿತು. ಏಕೆಂದರೆ ಅಭಿನಯಕಲೆಯಲ್ಲಿಯೂ ಸ್ವಲ್ಪ ಪರಿಶ್ರಮವಿದ್ದ  ಗದಾಧರನು ಮಾವಿನ ತೋಪಿನಲ್ಲಿ ಬಯಲಾಟಗಳನ್ನಾಡುವುದು, ದೇವದೇವಿಯರ ಮಣ್ಣು ಗೊಂಬೆಗಳನ್ನು ಮಾಡುವುದು ಇವೇ ಮೊದಲಾದ ಶಿಶುಲೀಲೆಗಳಿಂದ ಮಿತ್ರರಿಗೆಲ್ಲ ಉತ್ಸಾಹದಾಯಕನಾದನು. ಆತನ ಎದೆಗೆಚ್ಚಂತೂ ಹುಡುಗರಿಗೆ ಆಶ್ಚರ್ಯಕರವಾಗಿತ್ತು. ಹಿರಿಯರು ಯಾವಯಾವ ಸ್ಥಳಗಳಲ್ಲಿ ದುರುಳ ಪಿಶಾಚಿಗಳಿವೆಯೆಂದು ಹೇಳುತ್ತಿದ್ದರೋ ಅಲ್ಲಿಗೆಲ್ಲ ಗದಾಧರನು ತಾನೊಬ್ಬನೆ ನಿರ್ಭೀತಿಯಿಂದ ಹೋಗಿ ಅವುಗಳನ್ನು ಕಾಣದೆ ಹತಾಶನಾಗಿ ಹಿಂದಿರುಗುತ್ತಿದ್ದನು.

ವಯಸ್ಸಾದಂತೆಲ್ಲಾ ಶಿಶುವಿನ ಶೀಲವು ಪರಿವರ್ತನೆ ಹೊಂದಿತು. ನಿರ್ಜನ ಪ್ರಿಯತೆಯೂ ಧ್ಯಾನಸಕ್ತಿಯೂ ಸೃಷ್ಟಿಸೌಂದರ್ಯದಲ್ಲಿ ಪ್ರೇಮವೂ ಅತಿಶಯವಾದುವು. ಬಾಲಕನಲ್ಲಿ ಮಲಗಿದ್ದ ಮಹಾಕಲೋಪಾಸಕನು ಮೆಲ್ಲಮೆಲ್ಲಗೆ ಕಣ್ದೆರೆದನು. ತಂಗಾಳಿಗೆ ತೆರೆತೆರೆಯಾಗಿ ತಲೆದೂಗಿ ಬಾನ ಕರೆಯರೆಗೂ ಹಬ್ಬಿದ ಹಸುರುಗದ್ದೆಗಳು, ಹೊಳೆತೊರೆಗಳ ಕಲನಾದಮಯವಾದ ಅವಿರಳ ಅನಂತ ಸಲಿಲಯಾತ್ರೆ, ಸಹಸ್ರ ಪಕ್ಷಿ ಕೂಜನದ ರಹಸ್ಯಮಯ ಸುಮಧುರ ಸಂಧರ್ವಗಾನ, ಜಗನ್ಮಾತೆಯ ಮಹಾನ ನೀಲನಯನದಂತೆ ಮೇರೆಯಿಲ್ಲದೆ ಹಸರಿಸಿರುವ ಸುನೀಲ ಅಂತರಿಕ್ಷ, ಕ್ಷಣ ಕ್ಷಣಕ್ಕೂ ವಿವಿಧ ವೇಷಧಾರಿಗಳಾಗಿ ವಿಧವಿಧ ವರ್ಣಶೋಭಿಗಳಾಗಿ ಸುತ್ತುವ ಮುತ್ತುವ ವಲಿಸುವ ನಲಿಯುವ ಮುಗಿಲುಗಳ ಮೋಹದ ಮಾಯಾರಾಜ್ಯ, ನಿಶಾಗಗನದಲ್ಲಿ ನಿರಂತರವೂ ಕಣ್ಣುಮಿಟುಕಿಸುವ ಅಗಣಿತ ತಾರೆಗಳ ನಿಗೂಢಾಸ್ಪಷ್ಟ ಆಹ್ವಾನ, ಬೇಸಗೆಯ ಮಧ್ಯಾಹ್ನದ ಲಕ್ಷಲಕ್ಷ ಸ್ವಪ್ನಗರ್ಭಿತ ಸುಷುಪ್ತಿ, ದಿವಾನಿಶೆಗಳ ಆಲಿಂಗನಸಮಯದ ಮೌನಪೂರ್ಣ ವಾಙ್ಮಯಸಮಾಧಿ ಮೊದಲಾದ ಪ್ರಕೃತಿ ಸೌಂದರ್ಯದ ಕವನಚಿತ್ರಗಳು – ಇವೆಲ್ಲವೂ ಬಾಲಕನನ್ನು ಭಾವರಾಜ್ಯದ ಅನಿರ್ವಚನೀಯ ಅನುಭವ ಸಮುದ್ರದಲ್ಲಿ ಮುಳುಗಿಸಿಬಿಡುತ್ತಿದ್ದುವು. ಕಲೆ ನನ್ನಿಯ ನೆಲೆಗೆ ಹೆಬ್ಬಾಗಿಲು.

ಒಂದು ದಿನ ಆಷಾಢ ಮಾಸದಲ್ಲಿ ಆರು ವರ್ಷ ವಯಸ್ಸಿನ ಗದಾಧರನು ಹುರಿಗಡಲೆ ಮೆಲ್ಲುತ್ತಾ ಹುಲುಸಾಗಿ ಬೆಳೆದು ಹಬ್ಬಿದ ಗದ್ದೆಗಳ ನಡುವೆ ಕಾಲುದಾರಯಲ್ಲಿ ಹೋಗುತ್ತಿರಲು ಒಂದು ಅಲೌಕಿಕ ಅನುಭವವಾಯಿತು. ಅದನ್ನು ಕುರಿತು ಶ್ರೀರಾಮಕೃಷ್ಣರು ಹೀಗೆಂದು ಹೇಳಿದ್ದಾರೆ.

“ಬತ್ತದ ಗದ್ದೆಗಳ ನಡುವೆ ಇದ್ದ ಒಂದು ಕಾಲುದಾರಿಯಲ್ಲಿ ಹೋಗುತ್ತಿದ್ದೆ. ಹುರಿಗಡಲೆ ತಿನ್ನುತ್ತಲೆ ತಲೆಯೆತ್ತಿ ಆಕಾಶದ ಕಡೆ ನೋಡಿದೆ. ದೂರದ ದಿಗಂತದಲ್ಲಿ ಭೀಮಾಕಾರವಾಗಿದ್ದ ಒಂದು ಸಜಲ ಸುನೀಲ ಮೇಘ ಮೂಡುತ್ತಿದ್ದುದು ನನ್ನ ಕಣ್ಣಿಗೆ ಬಿತ್ತು. ನೋಡುತ್ತ ನೋಡುತ್ತ ಆ ಕರ್ಮುಗಿಲು ಹಬ್ಬಿ ಗಗನಮಂಡಲವನ್ನೆಲ್ಲ ಕವಿದುಬಿಟ್ಟಿತು. ಒಡನೆಯೆ ಹಠಾತ್ತಾಗಿ ಪಕ್ಕದ ಗದ್ದೆಯಿಂದ ಬೆಳ್ಳಕ್ಕಿಗಳ ಗುಂಪೊಂದು ಮೇಲೆ ಹಾರಿತು. ಕಪ್ಪು ಮೋಡಗಳ ಹಿನ್ನೆಲೆಗೆದುರಾಗಿ ಮಂಜಿನಂತೆ ಬಿಳುಪಾದ ಆ ಬಲಾಕ ಪಂಕ್ತಿ ಋಜುಕುಟಿಲ ನಾನಾ ರೇಖೆಯ ವಿನ್ಯಾಸದಿಂದ ನನ್ನೆದುರು ರಂಜಿಸಿತು. ಆ ಸುಂದರ ವರ್ಣತಾರತಮ್ಯದ ಧೀರ ವೈಖರಿಯನ್ನು ಕಂಡು ಸುದೂರಗಾಮಿಯಾದ ನನ್ನಾತ್ಮವು ಅನಂತತೆಯಲ್ಲಿ ವಿಲೀನವಾಗಲು ಪ್ರಜ್ಞೆ ತಪ್ಪಿ ಕೆಳಗುರುಳಿ ಬಿದ್ದೆ. ಸೆರಗಿನಲ್ಲಿದ್ದ ಹುರಿಗಡಲೆಯೆಲ್ಲ ಚೆಲ್ಲಾಪಿಲ್ಲಿಯಾಯಿತು! ದಾರಿಯಲ್ಲಿ ಹೋಗುತ್ತಿದ್ದ ಯಾರೋ ಪುಣ್ಯಾತ್ಮನೊಬ್ಬನು ನನ್ನನ್ನು ಎತ್ತಿತಂದು ಮನೆಯಲ್ಲಿ ಬಿಟ್ಟನು. ಮೈತಿಳಿದ ಮೇಲೆಯೂ ನನ್ನದೆಯಲ್ಲಿ ಯಾವುದೋ ಒಂದು ಅನಿರ್ವಚನೀಯ ಆನಂದ ಸಮುದ್ರವು ತುಳುಕಾಡುತ್ತಿತ್ತು…… ಅದೇ ನನಗುಂಟಾದ ಮೊದಲನೆಯ ಭಾವಸಮಾಧಿ”.

ಶ್ರೀರಾಮಕೃಷ್ಣರಿಗೆ ಮೊತ್ತಮೊದಲು ಬ್ರಹ್ಮಸಾಕ್ಷಾತ್ಕಾರಕ್ಕೆ ಮುನ್ನುಡಿಯಾದುದು ಸೌಂದರ್ಯದ ಸಾನ್ನಿಧ್ಯದಲ್ಲಿ. ಅವ್ಯಕ್ತವೂ ನಿರ್ಗುಣ ನಿರಾಕಾರವೂ ಆಗಿರುವ ಪರತತ್ತ್ವವು ಪ್ರಕಾಶವಾಗಬೇಕಾದರೆ ವ್ಯಕ್ತವೂ ಸಗುಣ ಸಾಕಾರವೂ ಆಗಿರುವ ಸೌಂದರ್ಯವಾಗಬೇಕು. ಏಕವೂ ಅಖಂಡವೂ ಆಗಿರುವ ಬ್ರಹ್ಮವು ಬುದ್ಧಿಯ ದೃಷ್ಟಿಗೆ ಸತ್ಯದಂತೆಯೂ ಭಾವದ ದೃಷ್ಟಿಗೆ ಸೌದರ್ಯದಂತೆಯೂ ತೋರುತ್ತದೆ. ಸತ್ಯಸೌಂದರ್ಯಗಳ ಸಂಗಮವೆ ಪರಮ ಸಿದ್ಧಿ. ಆ ಅನುಭವದಲ್ಲಿ ಸತ್ಯವೇ ಸೌಂದರ್ಯ, ಸೌಂದರ್ಯವೇ ಸತ್ಯ.

[1] ಕ್ರಿಯಾಶಕ್ತಿ ಬುದ್ಧಿಶಕ್ತಿ ಭಾವಶಕ್ತಿಗಳಿಂದ ಕೂಡಿದ ಮನುಷ್ಯನು ಅವುಗಳಲ್ಲಿ ಯಾವುದಾದರೂ ಒಂದರಿಂದ ಸಚ್ಚಿದಾನಂದವನ್ನು ಸಂಪೂರ್ಣವಾಗಿ ಅನುಭಸಲಾರನು. ಕ್ರಿಯೆಯಿಂದ ಸದಂಶವನ್ನೂ ಬುದ್ಧಿಯಿಂದ ಚಿದಂಶವನ್ನೂ ಭಾವದಿಂದ ಆನಂದಾಂಶವನ್ನೂ ತಾತ್ಕಾಲಿಕವಾಗಿ ಮತ್ತು ಆಂಶಿಕವಾಗಿ ಗ್ರಹಿಸಬಲ್ಲನು. ಆದರೆ ಪರತತ್ತ್ವವು ಸತ್, ಚಿತ್ ಮತ್ತು ಆನಂದಗಳ ರಾಶಿಯಲ್ಲ. ಅದು ಅಖಂಡವೂ ಅದ್ವೈತವೂ ಆದ ಸಚ್ಚಿದಾನಂದ. ಹೀಗಿರಲು ಅದನ್ನು ಆಂಶಿಕವಾಗಿ ಆಕ್ರಮಿಸುವುದು ಅಸಾಧ್ಯ. ಪೂರ್ಣವು ಪೂರ್ಣದಿಮದಲೇ ಗೃಹೀತ. ಮನುಷ್ಯನ ಆತ್ಮವೂ ಕ್ರಿಯ ಬುದ್ಧಿ ಭಾವಗಳ ಬರಿಯ ರಾಶಿಯಲ್ಲ; ಬ್ರಹ್ಮದಂತೆಯೆ ಅಖಂಡವಾದುದುದ. ಆದ್ದರಿಮದ ಅರಿವು ಇರವಾಗುವುದೇ ಸಾಕ್ಷಾತ್ಕಾರ.[2] ಇದು ಭಾವಮಯವಾದ ಲೆಗೆ ಸುಲಭ ಸಾಧ್ಯ. ಆದ್ದರಿಂದಲೆ ಯುಕ್ತಿ ತುದಿಯಲ್ಲಿ ಭಕ್ತಿಯಾಗುವುದು.[3] ಯುಕ್ತಿಯಾನದಲ್ಲಿ ತೊಳತೊಳಲಿ ಸೋತ ಆತ್ಮ ಭಕ್ತಿವಿಮಾನವನ್ನೇರುವುದು. ಇಂತಹ ಪರಾಜಯವೆ ಯುಕ್ತಿಗೆ ಪರಮಜಯ. ಪರಾಭಕ್ತಿ ಯುಕ್ತಿಗೆ ಅಪಕಾರಿಯಲ್ಲ; ಸಹಕಾರಿ ಮತ್ತು ಉಪಕಾರಿ. ಕಲೆ ನನ್ನಿಯ ನೆಲೆಗೆ ಹೆದ್ದಾರಿ. ಶ್ರೀರಾಮಕೃಷ್ಣರು ಬ್ರಹ್ಮದ ಭವನಕ್ಕೆ ಅನೇಕ ಮಾರ್ಗಗಳಿವೆ ಎಂಬುದನ್ನು ತರುವಾಯ ತಮ್ಮ ಜೀವನದಲ್ಲಿ ಕಂಡು ತಿಳಿದರು. ಆದರೆ ಮೊತ್ತ ಮೊದಲು ಅವರನ್ನು ಅಲ್ಲಿಗೆ ಕೊಂಡೊಯ್ದುದು ಸೌಂದರ್ಯದ ದಾರಿ. ಮಾಯೆಯ ಕೃಪೆಯಿಲ್ಲದೆ ಬ್ರಹ್ಮಸಾಕ್ಷಾತ್ಕಾರವಾಗದು ಎಂದು ಅವರು ತಮ್ಮ ಶಿಷ್ಯರಿಗೆ ಮತ್ತೆ ಮತ್ತೆ ಒತ್ತಿ ಹೇಳುತ್ತಿದ್ದರು.[4]  ಯಾವುದು ಕಲಾಕೋವಿದರ ಸೌಂದರ್ಯವೋ ತತ್ತ್ವವೇತ್ತರ ಮಾಯಯೋ ಅದು ಪರಮಹಂಸರಿಗೆ ಜಗನ್ಮಾತೆಯಾಗಿತ್ತು.[5]

ಸುಖಸಂತೋಷಪೂರ್ಣವಾಗಿದ್ದ ಗದಾಧರನ ಬಾಲ್ಯಜೀವನವು ಹಠಾತ್ತಾಗಿ ಒಂದು ಮಹಾದುಃಖ ತರಂಗದಿಂದ ತಾಡಿತವಾಯಿತು. ಸೋದರಳಿಯನ ಊರಿಗೆ ನವರಾತ್ರಿಯ ದುರ್ಗೋತ್ಸವಕ್ಕೆಂದು ಹೋಗಿದ್ದ ಖುದಿರಾಮನು ಪ್ರಬಲ ರೋಗ್ರಸ್ತನಾಗಿ ರಘುವೀರ ನಾಮಸ್ಮರಣೆ ಮಾಡುತ್ತ ದಿವಂಗತನಾದನು. ಏಳು ವರ್ಷ ವಯಸ್ಸಿನ ಗದಾಧರನು ತಂದೆಯ ಮರಣಕ್ಕಿಂತಲೂ ತಾಯಿಯ ರೋದನದಿಂದ ಬಹಳ ನೊಂದುಕೊಂಡನು. ಆಕೆಯ ದುಃಖಾಗ್ನಿಯನ್ನು ಶಮನಮಾಡಲು ತನ್ನ ಕೈಯಲ್ಲಾದಮಟ್ಟಿಗೆ ಪ್ರಯತ್ನ ಮಾಡತೊಡಗಿದನು. ಮೇಲೆ ಮೇಲೆ ನಗುಮೊಗನಾಗಿದ್ದರೂ ಎದೆಯಲ್ಲಿ ಚಿಂತೆ ತುಂಬಿದ್ದಿತು. ಜನನ, ಜೀವನ, ದುಃಖ, ಮರಣಗಳ ಸಮಸ್ಯೆ ಆತನನ್ನು ಬಹುವಾಗಿ ಪೀಡಿಸಿತು. ಶ್ಮಶಾನ ಮೊದಲಾದ ನಿರ್ಜನ ಪ್ರದೇಶಗಳಲ್ಲಿ ತಿರುಗುತ್ತಾ ಧ್ಯಾನಶಿಲನಾದನು. ಜೀವನ ನಶ್ವರವೆಂದು ಹಿರಿಯರಿಂದ ಕೇಳಿದ್ದ ವಿಷಯವು ಆತನಿಗೆ ಮತ್ತಷ್ಟು ಮನದಟ್ಟಾಯಿತು. ಮೊದಲಿಂದಲೂ ಉರಿಯುತ್ತಲೆ ಇದ್ದ ಭಕ್ತಿಪ್ರದೀಪವು ಮತ್ತೂ ಪ್ರಕಾಶಮಾನವಾಗಿ ಉರಿಯತೊಡಗಿತು. ಸ್ವಾಭಾವಿಕವಾಗಿಯೆ ಇದ್ದ ಅಪ್ರಾಪಂಚಿಕತೆ ಔದಾಸೀನ್ಯಗಳು ಗುರುತರವಾದುವು. ಉರಿಯುವ ಬೆಂಕಿಗೆ ಎಣ್ಣೆ ಹೊಯ್ದಂತೆ ಆತನಿಗೆ ಸಂನ್ಯಾಸಿಗಳ ಸಂಗವೂ ಲಭಿಸಿತು. ಜಗನ್ನಾಥಕ್ಕೆ ಹೋಗುವ ಹೆದ್ದಾರಿ ಹಳ್ಳಿಗೆ ಸಮೀಪದಲ್ಲಿತ್ತು. ಅಲ್ಲಿದ್ದ ಒಂದು ಸತ್ರದಲ್ಲಿ ಸಾಧುಗಳು ಬಂದಿಳಿದುಕೊಳ್ಳುವ ವಾಡಿಕೆಯಿತ್ತು. ಸಾಧುಸಂಗವು ಜೀವನದ ದುರ್ಲಭ ವಸ್ತುಗಳಲ್ಲಿ ಒಂದು ಎಂದು ಹರಿಕಥೆಗಳಲ್ಲಿ ಕೇಳಿ ತಿಳಿದಿದ್ದ ಬಾಲಕನು ಸತ್ಸಂಗಾಪೇಕ್ಷೆಯಿಂದ ಸತ್ರಕ್ಕೆ ಹೋಗಿ ಬರತೊಡಗಿದನು. ಸಾಧುಗಳ ನಿರ್ಲಿಪ್ತಜೀವನವೂ ಜ್ಞಾನ ಭಕ್ತಿ ವೈರಾಗ್ಯಗಳೂ ವಂದನೀಯವಾಗಿ ತೋರಿದುವು. ಬಾಲಕನ ಸರಳತೆಯನ್ನೂ ಸೌಜನ್ಯವನ್ನೂ ಕಂಡು ಆತನಿಗೆ ತಾವು ಅಡಿಗೆ ಮಾಡಿದ ಭಕ್ಷ್ಯಭೋಜ್ಯಗಳನ್ನು ಕೊಡುತ್ತಿದ್ದರು. ಆತನೊಡನೆ ಈಶ್ವರನ ಮಹಿಮೆಯ ವಿಚಾರವಾಗಿ ಮಾತಾಡುತ್ತಿದ್ದರು. ಮೊದಲು ಮೊದಲು ಪ್ರಶಂಸನೀಯವಾಗಿದ್ದುದು ಕ್ರಮೇಣ ಅನುಕರಣೀಯವಾಯಿತು. ಒಂದು ದಿನ ಗದಾಧರನು ಸಾಧುಗಳಂತೆ ಮೈತುಂಬ ಬೂದಿ ಬಳಿದುಕೊಂಡು ನಾಮ ಹಾಕಿಕೊಂಡು ಉಟ್ಟ ಪಂಚೆಯನ್ನು ಹರಿದು ಕೌಪೀನ ಕಟ್ಟಿಕೊಂಡು ತಾಯಿಯೆಡೆಗೆ ಬಂದು “ನೋಡಮ್ಮ, ನಾನು ಸಾಧುವಾಗಿದ್ದೇನೆ” ಎಂದನು. ಅದನ್ನು ನೋಡಿ ಚಂದ್ರಾದೇವಿ ಕಾತರೆಯಾದಳು. ಸಾಧುಗಳೆಲ್ಲಿಯಾದರೂ ತನ್ನ ಮುದ್ದು ಕಂದನನ್ನು ಎತ್ತಿಕೊಂಡು ಹೋಗಿಬಿಟ್ಟಾರು ಎಂದು ಮಗನಿಗೆ ಅವರ ಸಂಗವನ್ನು ತ್ಯಜಿಸುವಂತೆ ಬುದ್ಧಿ ಹೇಳಿದಳು. ಗದಾಧರನು ಆಕೆಯ ಸಂಶಯ ಭಯಗಳು ನಿರಾಧಾರವಾದುವೆಂದು ವಾದಿಸಿದನು. ಆದರೂ ತಾಯಿ ಒಪ್ಪಲಿಲ್ಲ. ಆಕೆಗೆ ನೋವಾಗಬಾರದೆಂದು ಬಾಲಕನು ಸತ್ರಕ್ಕೆ ಹೋಗುವುದನ್ನು ಬಿಟ್ಟುಬಿಟ್ಟನು. ಇದನ್ನೆಲ್ಲಾ ಕೇಳಿ ತಿಳಿದ ಸಾಧುಗಳು ಚಂದ್ರಾದೇವಿಯ ಹತ್ತಿರ ಬಂದು ಬಾಲಕನ ಕ್ಷೇಮಕ್ಕೆ ಭರವಸೆ ಕೊಟ್ಟರು. ತರುವಾಯ ಗದಾಧರನು ಮುನ್ನಿನಂತೆ ಸಾಧುಸಂಗನಿರತನಾದನು.

ಒಂಭತ್ತನೆಯ ವಯಸ್ಸಿನಲ್ಲಿ ಗದಾಧರನಿಗೆ ಉಪನಯನವಾಯಿತು. ಆಗ ನಡೆದ ಒಂದು ಸಂಗತಿ ಗಮನಾರ್ಹವಾದುದು. ಅದರಿಂದ ಗದಾಧರನ ಬಾಲ ಶರೀರದಲ್ಲಿ ಪತಿತಪಾವನ ಯುಗಾವತಾರ ಶ್ರೀರಾಕೃಷ್ಣರು ಮಲಗಿದ್ದುದು ಗೊತ್ತಾಗುತ್ತದೆ. ಮಗುವಿನಿಂದಲೂ ಗದಾಧರನನ್ನು ಎತ್ತಿ ಆಡಿಸಿ ಸಲಹಿದ ಧನಿ ಆತ ಉಪನಯನ ಕಾಲದಲ್ಲಿ ತಾನೇ ಪ್ರಥಮ ಭಿಕ್ಷಾಮಾತೆಯಾಗಬೇಕೆಂದು ಕೇಳಿಕೊಂಡಿದ್ದಳು. ಹುಡುಗನು ಮಾತು ಕೊಟ್ಟಿದ್ದನು. ಬಡವಳಾದ ಧನಿ ಬಹು ಪ್ರಯತ್ನದಿಂದ ಕಾಸಿಗೆ ಕಾಸು ಗಂಟುಹಾಕಿ ತನಗೊದಗುವ ಆ ಪುಣ್ಯ ಮುಹೂರ್ತವನ್ನೆ ನಿರೀಕ್ಷಿಸುತ್ತಿದ್ದಳು. ಗದಾಧರನು ಈ ವಿಷಯವನ್ನು ರಾಮಕುಮಾರನಿಗೆ ತಿಳಿಸಿ ತಾನು ಧನಿಯಿಂದಲ್ಲದೆ ಇತರರಿಂದ ಮೊದಲ ಭಿಕ್ಷೆಯನ್ನು ಸ್ವೀಕರಿಸೆನೆಂದು ಹೇಳಿಬಿಟ್ಟನು. ಧನಿ ಶೂದ್ರಸ್ತ್ರೀಯಾದುದರಿಂದ ಅಣ್ಣನು ಅದಕ್ಕೆ ಸಮ್ಮತಿಸಲಿಲ್ಲ. ಕೊಟ್ಟ ಮಾತಿಗೆ ತಪ್ಪಲಾರೆನೆಂದೂ ಮಿಥ್ಯಾವಾದಿ ಉಪನಯನಕ್ಕೆ ಅರ್ಹಲ್ಲವೆಂದೂ ತಮ್ಮನು ಹಟಹಿಡಿದನು. ಕಡೆಗೆ ಗದಾಧರನ ಹಟವೇ ಗೆದ್ದಿತು. ಧನಿಯಾದರೋ ಭಿಕ್ಷಾಮಾತೆಯಾಗಿ ಹೆಮ್ಮೆಯಿಂದ ಹಿಗ್ಗಿ ಸುಖದ ಕಣ್ಣೀರು ಕರೆದಳು. ಪ್ರೀತಿಯೊಂದಿದ್ದರೆ ಜಾತಿಯಿಂದೇನು? ಸಮಾಜದ ರೀತಿನೀತಿಗಳೂ ಸಂಪ್ರದಾಯಕ ಕಟ್ಟುನಿಟ್ಟುಗಳೂ ಎದೆಯ ಸರಳತೆಗೆ ಶರಣಾಗಲೇಬೇಕು. ಮುಖ್ಯವಾದುದು ಆವೇಶವಲ್ಲದ ವೇಷವಲ್ಲ.

ಉಪನಯನವಾದ ಸ್ವಲ್ಪ ಕಾಲದಲ್ಲಿಯೆ ಬಾಲಕನ ಅಸಾಧಾರಣ ಮೇಧಾಶಕ್ತಿಯನ್ನು ಪ್ರದರ್ಶಿಸುವ ಮತ್ತೊಂದು ಘಟನೆ ಸಂಭವಿಸಿತು. ಗ್ರಾಮದ ಶ್ರೀಮಂತನೊಬ್ಬನ ಮನೆಯಲ್ಲಿ ಯಾವುದೊ ಒಂದು ವಿಶೇಷ ದಿವಸ ಪಂಡಿತರನೇಕರು ಸೇರಿದ್ದರು. ಊಟವಾದ ಮೇಲೆ ರೂಢಿಯಂತೆ ಶಾಸ್ತ್ರ ವಿಷಯಕವಾದ ಚರ್ಚೆಗಾರಂಭವಾಯಿತು. ಉಬ್ಬರದಲ್ಲಿದ್ದ ವಾಗ್ಯುದ್ದದ ಗದ್ದಲವು ಸಮೀಪದಲ್ಲಿ ಆಟವಾಡುತ್ತಿದ್ದ ಬಾಲಕರನ್ನು ತನ್ನೆಡೆಗೆ ಸೆಳೆಯಿತು. ಇತರ ಬಾಲಕರು ಅಣಕ ಹಾಸ್ಯ ಪರಿಹಾಸ್ಯಗಳಲ್ಲಿ ತೊಡಗಿದರು. ಗದಾಧರನು ಪಂಡಿತರ ವಾಗ್ವಾದದ ವಿಷಯದಲ್ಲಿ ಮಗ್ನನಾದನು. ಚರ್ಚೆ ಕೊನೆಮುಟ್ಟುವಂತೆ ತೋರಲಿಲ್ಲ; ನಿರ್ಣಯವಂತೂ ಬಹುದೂರವಾಗಿತ್ತು. ಇದನ್ನೆಲ್ಲಾ ಮನಸ್ಸಿಟ್ಟು ಆಲಿಸುತ್ತ ನಿಂತಿದ್ದ  ಗದಾಧರನು ತನ್ನ ಬಳಿಯಿದ್ದ ಭಟ್ಟಾಚಾರ್ಯನೊಬ್ಬನ ಕಿವಿಯಲ್ಲಿ ಏನನ್ನೊ ಉಸುರಿದನು. ಆತನು ಹುಡುಗನ ಪ್ರತಿಭೆಯನ್ನು ಕಂಡು ಅಪ್ರತಿಭನಾದನು. ಗದಾಧರನು ಸೂಚಿಸಿದ ನಿರ್ಣಯವು ಸರ್ವಾನುಮೋದಿತವಾಗಿ ಚರ್ಚೆ ಕೊನೆಗೊಂಡಿತು. ಎಲ್ಲರೂ ಬಾಲಕನನ್ನು ಹೊಗಳಿ ಆಶೀರ್ವಾದ ಮಾಡಿದರು.

ಇನ್ನೊಂದು ದಿನ ಶಿವರಾತ್ರಿಯಲ್ಲಿ ಹಳ್ಳಿಯವರು ಜಾಗರಣೆಗಾಗಿ ಬಯಲಾಟ ಹೂಡಿದರು. ಆಟದಲ್ಲಿ ವೇಷಹಾಕುವ ಭಕ್ತರೆಲ್ಲ ಪೂಜೆ ಉಪವಾಸಗಳಲ್ಲಿ ಹಗಲು ಕಳೆಯುವುದು ವಾಡಿಕೆಯಾಗಿತ್ತು. ಗದಾಧರನು ಪಾತ್ರಧಾರಿಯಲ್ಲದಿದ್ದರೂ ನಿಯಮನಿಷ್ಠೆಗಳಿಂದ ಉಪವಾಸಮಾಡಿ ರಾತ್ರಿ ಶಿವಪೂಜೆಯಲ್ಲಿ ನಿರತನಾಗಿದ್ದನು. ಗೆಳೆಯನೊಬ್ಬನು ಓಡಿಬಂದು “ಸೀತಾನಾಥನ ಮನೆಗೆ ಕೂಡಲೆ ಬರಬೇಕು. ನಿನಗಾಗಿ ಎಲ್ಲರೂ ಕಾದುಕೊಂಡಿದ್ದಾರೆ” ಎಂದನು.

ಮಿತ್ರನ ಉದ್ವಿಗ್ನಭಾವವನ್ನು ಕಂಡು ಗದಾಧರನು ಗಾಬರಿಯಿಂದ “ಏಕೆ? ಏನಾಯ್ತು?” ಎಂದು ಕೇಳಿದನು.

“ಆಟದಲ್ಲಿ ಶಿವನ ಪಾತ್ರ ವಹಿಸುವವನು ಹಠಾತ್ತಾಗಿ ಅಸ್ವಸ್ಥನಾಗಿ ಬಿಟ್ಟಿದ್ದಾನೆ. ಆಟವೆ ನಿಂತುಹೋಗುವಂತಿದೆ. ಅದಕ್ಕಾಗಿ ಊರಿನ ದೊಡ್ಡವರೆಲ್ಲರೂ ನಿನ್ನನ್ನು ಶಿವನ ಪಾತ್ರ ವಹಿಸುವಂತೆ ಕೇಳಿಕೊಳ್ಳುತ್ತಿದ್ದಾರೆ. ನಿನ್ನನ್ನು ಬಿಟ್ಟರೆ ಮತ್ತಾರೂ ಯೋಗ್ಯರಲ್ಲ.”

“ನಾನು ಶಿವಪೂಜೆ ಬಿಟ್ಟು ಬರಲಾರೆ”.

“ಶಿವನ ಪಾತ್ರ ವಹಿಸುವುದು ಶಿವಪೂಜೆಯಂತೆಯೆ ಪುಣ್ಯಕರವಲ್ಲವೆ? ಯಾವಾಗಲೂ ಶಿವನನ್ನೇ ಧ್ಯಾನಮಾಡಬೇಕಾಗುತ್ತದೆ. ನಾವೂ ಕೂಡ ಶಿವರಾತ್ರಿಗಾಗಿಯೇ ಆಟವಾಡುತ್ತಿದ್ದೇವೆ”.

ಗದಾಧರನು ಒಪ್ಪಿದನು. ನೇಪಥ್ಯಮಂದಿರದಲ್ಲಿ ಸಿಂಗಾರವಾಯಿತು. ಜಟಾಭಸ್ಮತ್ರಿಶೂಲಧಾರಿಯೂ ರುದ್ರಾಕ್ಷಮಾಲಾಮಂಡಿತನೂ ಸರ್ಪಧರನೂ ಚರ್ಮಾಂಬರನೂ ಆದ ಬಾಲಕನು ಶಿವನಂತೆ ಶೋಭಿಸಿದನು. ಮಿತ್ರರ ಸಹಾಯದಿಂದ ಮೆಲ್ಲಮೆಲ್ಲನೆ ಹೆಜ್ಜೆಯಿಡುತ್ತ ಗಂಭೀರಮೂರ್ತಿ ರಂಗಪ್ರವೇಶ ಮಾಡಿತು. ಪ್ರೇಕ್ಷಕರು ಪ್ರತ್ಯಕ್ಷ ಮಹಾದೇವನನ್ನೆ ಕಂಡಂತೆ ಸ್ತಬ್ಧರಾದರು. ಶಿವಮೂರ್ತಿ ಕಂಡರಿಸಿದ ಪ್ರತಿಮೆಯಂತೆ ಅಲುಗಾಡದೆ ನಿಂತಿತು. ಗದಾಧರನು ಸಮಾಧಿಸ್ಥನಾಗಿದ್ದನು. ಮುಖದಲ್ಲಿ ಜ್ಯೋತಿ ಹೊಮ್ಮುತ್ತಿತ್ತು. ಎಡೆಬಿಡದೆ ಕಣ್ಣೀರು ಹರಿಯುತ್ತಿತ್ತು. ಜನಗಳು ಬೆಚ್ಚಿದರು. ಶಿಶಿರೋಪಚಾರ ಮಾಡಿದರು. ಶಿವನ ಧ್ಯಾನದಲ್ಲಿ ತನ್ಮಯನಾಗಿದ್ದ ಬಾಲಕನಿಗೆ ಬಾಹ್ಯಪ್ರಜ್ಞೆ ಇರಲಿಲ್ಲ. ಆಟ ನಿಂತುಹೋಯಿತು. ಜನಗಳು ಗದಾಧರನ ಮಹಿಮೆಯನ್ನು ಕುರಿತು ಮಾತನಾಡುತ್ತ ಪ್ರಸನ್ನಚಿತ್ತರಾಗಿ ತಮ್ಮ ತಮ್ಮ ಮನೆಗಳಿಗೆ ತೆರಳಿದರು.


[1] ಭಕ್ತಿಜ್ಞಾನಗಳೆರಡೂ ಪರಿಣಾಮದಲ್ಲಿ, ಎಂದರೆ, ಕೊನೆಗೆ ಒಂದೇ. ಶುದ್ಧ ಜ್ಞಾನಕ್ಕೂ ಶುದ್ಧಭಕ್ತಿಗೂ ಭೇದವಾವುದೂ ಇಲ್ಲ. – ಉಪದೇಶ ವಾಕ್ಯಾವಳಿ.

[2] ಬ್ರಹ್ಮವಿತ್ ಬ್ರಹ್ಮೈವ ಭವತಿ – ಮುಂಡಕೋಪನಿಷತ್ತು.             ೩೨.೯

[3] ಕ್ಲೇಶೋಧಿಕತರಸ್ತೇಷಾಮವ್ಯಕ್ತಾಸಕ್ತ ಚೇತಸಾಂ |
ಅವ್ಯಕ್ತಾ ಹಿ ಗತಿರ್ದುಃಖಂ ದೇಹವದ್ಭಿರವಾಪ್ಯತೇ||       – ಗೀತೆ, ೧೨.೫

[4] ಮಾಯೆಯೂ ಅದರ ಶಕ್ತಿಸ್ಫೂರ್ತಿಯೂ ಇಲ್ಲದ ಪಕ್ಷಕ್ಕೆ ಯಾವನಿಗಾದರೂ ಬ್ರಹ್ಮ ಸಾಕ್ಷಾತ್ಕಾರ ಮಾಡಿಕೊಳ್ಳುವುದಕ್ಕೆ ಆಗುತ್ತಿತ್ತೇನು?

[5] ಅನಿತ್ಯವಾದುದರ ಮೂಲಕ ನಿತ್ಯವಾದುದನ್ನೂ, ಅಸತ್ತಿನ ಮುಖೇನ ಸತ್ತನ್ನೂ ವ್ಯಕ್ತವಾದುದರ ದ್ವಾರಾ ಅವ್ಯಕ್ತವನ್ನೂ ಉಪದೇಶಮಾಡಬೇಕು.       – ಉಪದೇಶ ವಾಕ್ಯಾವಳಿ.