ಒಂದು ಸಾರಿ ಪರಮಹಂಸರು ಮೀಯಲು ಗಂಗೆಗೆ ಹೋದಾಗ ರಾಮಲಾಲನೂ ಅವರ ಹಿಂದೆ ಬಂದು ನೀರಾಟವಾಡತೊಡಗಿದನಂತೆ. ಬೇಡ ಎಂದು ಹೇಳಿದರೆ ಕೇಳಲಿಲ್ಲ. ಅವರಿಗೆ ಸಿಟ್ಟುಬಂದು ಶಿಶುರಾಮನ ಕುತ್ತಿಗೆ ಹಿಡಿದು ನೀರಿನಲ್ಲಿ ಮುಳುಗಿಸಿ “ಆಡು! ಈಗ ಎಷ್ಟು ಬೇಕಾದರೂ ನೀರಾಡು!” ಎಂದರು. ಅವನು ನೀರಿನಲ್ಲಿ ಉಸಿರುಕಟ್ಟಿ ಒದ್ದಾಡಲು, ಮೇಲೆತ್ತಿದರಂತೆ. ರಾಮಲಾಲನು ಗೋಳೋ ಎಂದು ಅಳತೊಡಗಿದನು. ಪರಮಹಂಸರು ಸಂತೈಸಿದರು. ಆದರೆ ಅವನು ಅಲ್ಲಿ ಸಿಕ್ಕಲಾರದ ಯಾವುದೊ ತಿಂಡಿ ಕೇಳಲು ಪರಮಹಂಸರು ಕಾಟ ತಪ್ಪಲಿ ಎಂದು ಅವನನ್ನು ತಮ್ಮ ಕೋಣೆಗೆ ಕರೆತಂದು ಅರಳನ್ನು ಕೊಟ್ಟರಂತೆ. ಅದರಲ್ಲಿ ಉಮ್ಮಿ ಇತ್ತು. ಶಿಶುರಾಮನ ಕಟವಾಯಿಯಲ್ಲಿ ರಕ್ತಬಂದಿತು! ಪರಮಹಂಸರು ಅದನ್ನು ನೋಡಲಾರದೆ ಅತಿ ದುಃಖದಿಂದ ಅವನನ್ನು ಎತ್ತಿಕೊಂಡು “ತಾಯಿ ಕೌಸಲ್ಯೆ ನಿನಗೆ ಹಾಲು ಬೆಣ್ಣೆ ಕೊಟ್ಟು ಸಲಹಿದಳು. ಪಾಪಿ ನಾನಾದರೊ ಹೊಟ್ಟುಕೊಟ್ಟೆ!” ಎಂದು ಕಂಬನಿಗೆರೆದರಂತೆ. ಈ ವಿಷಯಗಳನ್ನು ತಮ್ಮ ಶಿಷ್ಯರಿಗೆ ಹೇಳುತ್ತಾ ಹೇಳುತ್ತಾ ಅವರ ಕಣ್ಣಿನಲ್ಲಿ ನೀರು ಬರುತ್ತಿತ್ತಂತೆ! ರಾಮಲಾಲನು ಪರಮಹಂಸರನ್ನು ಬಿಟ್ಟಿರುತ್ತಿರಲಿಲ್ಲ. ಆದ್ದರಿಂದ ಜಟಾಧಾರಿ ದಕ್ಷಿಣೇಶ್ವರದಿಂದ ಹೊರಡುವಾಗ ಕಂಬನಿತುಂಬಿ ರಾಮಲಾಲನನ್ನು ಶ್ರೀರಾಮಕೃಷ್ಣರಲ್ಲಿಯೆ ಬಿಟ್ಟು ಬೇಳ್ಕೊಂಡನು.

ಭಯಂಕರವಾದ ತಾಂತ್ರಿಕಸಾಧನೆಯೆಲ್ಲಿ? ಮೃದುಮಧುರ ಕೋಮಲವಾದ ಈ ವಾತ್ಸಲ್ಯಭಾವಸಾಧನೆಯೆಲ್ಲಿ? ಆದರೆ ಮಹಾಪುರುಷರು ಸಿಡಿಲಿನಂತೆ ಕಠೋರರು; ಹೂವಿನಂತೆ ಕೋಮಲರು!

ವಾತ್ಸಲ್ಯಭಾವಸಾಧನೆಯಲ್ಲಿ ಸಿದ್ಧಿಹೊಂದಿದ ಅನಂತರ ಶ್ರೀರಾಮಕೃಷ್ಣರು ಭಾವಸಾಧನೆಗಳಲ್ಲಿ ಸರ್ವೋಚ್ಛವೆಂದು ಪರಿಗಣಿತವಾದ ಮಧುರ ಭಾವಸಾಧನೆಯನ್ನು ಕೈಕೊಂಡರು. ಮಧುರಭಾವವನ್ನು ಕುರಿತು ಈ ಹಿಂದೆಯೆ ಕೆಲವು ವಿಷಯಗಳನ್ನು ವಿವರವಾಗಿ ಹೇಳಿದರೆ ಅಪ್ರಕೃತವಾಗಲಾರದು. ಭಕ್ತಿ ಪ್ರಥಮತಃ ಭಯದಿಂದ ಪ್ರಾರಂಭವಾಗುತ್ತದೆ. ವಿಶಾಲ ವಿಶ್ವವನ್ನೂ ವಿಶ್ವರಚನೆಯ ಯಾಂತ್ರಿಕ ಮಹಾ ಕುಶಲತೆಯನ್ನೂ ವಿಶ್ವಜೀವನದಲ್ಲಿ ತೋರಿಬರುವ ಬಿರುಮಳೆ, ಬಿರುಗಾಳಿ, ಬಿರುಬಿಸಿಲು, ಭೂಕಂಪ, ಪ್ರಲಯ, ಪ್ರವಾಹ, ಜ್ವಾಲಾಮುಖಿ, ಸಾಂಕ್ರಾಮಿಕ ರೋಗರುಜನೆಗಳು, ದುಃಖ ಮೃತ್ಯು ಮೊದಲಾದ ಭಯಂಕರ ವ್ಯಾಪಾರಗಳನ್ನೂ ಕಂಡು ಮಾನವನು ಸರ್ವಕರ್ತನಾದ ಜಗದೀಶ್ವರನನ್ನು ಆತನ ಅಪಾರ ಶಕ್ತಿ, ಅಪ್ರತಿಹ ಸಾಮರ್ಥ್ಯ, ಅನಂತ ಐಶ್ವರ್ಯಗಳಿಗಾಗಿ ಭಯ ಭಕ್ತಿಯಿಂದ, ಎಂದರೆ, ಭಯದಿಂದ ಪ್ರೇರಿತವಾದ ಭಕ್ತಿಯಿಂದ ದಾಸ್ಯ ಭಾವದಿಂದ ಸೇವೆ ಮಾಡಿ ಸಂತುಷ್ಟಿಗೊಳಿಸಿ ಕೃಪಾಪಾತ್ರನಾಗಿ ಕಷ್ಟ ಸಂಕಟಗಳಿಂದ ಪಾರಾಗಬೇಕೆಂದು ಪೂಜಿಸುತ್ತಾನೆ. ಆದರೆ ಬರಬರುತ್ತ ಭಯಭಾವವು ಕ್ರಮೇಣ ಪರಿಚಯದಿಂದ ಸಲಿಗೆಯಾಗಿ, ಸ್ನೇಹವಾಗಿ, ಪ್ರೇಮವಾಗಿ, ನೈಜಭಕ್ತಿಯಾಗಿ ಪರಿಣಮಿಸುತ್ತದೆ. ಆಗ  ಭಕ್ತನ ದೃಷ್ಟಿ ಭಗವಂತನ ಶಕ್ತಿ ಸಾಮರ್ಥ್ಯ ಐಶ್ವರ್ಯಗಳ ಕಡೆಯಿಂದ ಅವಮುಖವಾಗಿ ಆತನ ಮಹಾಘನ ಗೌರವ ಪ್ರೇಮದ ಕಡೆಗೆ ತಿರುಗುತ್ತದೆ. ಎಂದರೆ ಈಶ್ವರನು ಐಶ್ವರ್ಯದಿಂದ ಈಶ್ವರನಾಗದೆ ಆನಂದದಿಂದ ಈಶ್ವರನಾಗುತ್ತಾನೆ. ಆಗ ಭಕ್ತಿ ಅಹೇತುಕವಾಗಿ, ನಿಃಸ್ವಾರ್ಥವಾಗಿ, ತ್ಯಾಗಪೂರ್ಣವಾಗಿ, ಅತೀಂದ್ರಿಯ ಪ್ರೇಮ ಮಾತ್ರವಾಗಿ ಪರಿಣಮಿಸುತ್ತದೆ. ಇಂತಹ ಅತೀಂದ್ರಿಯ ಪ್ರೇಮಸಿದ್ಧಿಯೆ ಮಧುರಭಾವಸಾಧನೆಯ ಸರ್ವೋಚ್ಛಗಮ್ಯ. ಈ ಮಧುರಭಾವ ಸಾಧನೆಯನ್ನು ಅರ್ವಾಚೀನ ಕಾಲದಲ್ಲಿ ಹೆಚ್ಚು ಪ್ರಶಸ್ತಿಗೆ ತಂದವರು ಶ್ರೀಕೃಷ್ಣಚೈತನ್ಯ ಮತ್ತು ಆತನ ಅನುಯಾಯಿಗಳು. ಪ್ರಾಚೀನ ಪುರಾಣಗಳಲ್ಲಿ ಅದರಲ್ಲಿಯೂ ಭಾಗವತದಲ್ಲಿ ಬರುವ ಶ್ರೀಕೃಷ್ಣ ಗೋಪಿಯರ ಬೃಂದಾವನ ಲೀಲೆಯಲ್ಲಿ ಇದು ಸಮೀಚೀನವಾಗಿ ಉಕ್ತವಾಗಿದೆ. ಮಧುರಭಾವಸಾಧನೆಯನ್ನು ‘ಧರ್ಮಪ್ರಪಂಚದ ಸೌಂದರ್ಯೋಪಾಸನೆ’ ಎಂದು ಕರೆಯಬಹುದು. ಅದು ಭಾವಜೀವಿಯಾದ ಮಾನವನಿಗೆ ಅತ್ಯಂತ ಪ್ರಿಯವೂ ಹೌದು, ಹಿತವೂ ಹೌದು. ಕಾಮವು ತನ್ನ ಉತ್ತಮಾವಸ್ಥೆಯಲ್ಲಿ ಪ್ರೇಮವಾಗುತ್ತದೆ. ಕಾಮವು ಸರ್ವಜೀವ, ಅಷ್ಟೇಕೆ ಸರ್ವಸಸ್ಯ ಸಾಧಾರಣವಾದುದು. ಸ್ವಭಾವಗಳಲ್ಲಿ ಕ್ಷುಧೆಯನ್ನು ಬಿಟ್ಟರೆ ಕಾಮವೇ ಅತಿ ಪ್ರಬಲವೂ ಪ್ರಧಾನವೂ ಆದುದು. ಇಂತಹ ಸರ್ವಸಾಧಾರಣವೂ ಮಹಾ ಪ್ರಬಲವೂ ಆಗಿರುವ ಕಾಮಸ್ವಭಾವದ ಆದರ್ಶೀಕರಣವೆ ಮಧುರಭಾವ ಸಾಧನೆಯ ರಹಸ್ಯ ಮತ್ತು ಲಕ್ಷ್ಯ.

ಮಧುರಭಾವಸಾಧಕರಿಗೆ ಶ್ರೀರಾಧಾಕೃಷ್ಣರ ಶ್ರೀಪ್ರೇಮವೆ ಮಹಾದರ್ಶ. ಸಾಧಕನು ರಾಧೆಯ ಭಾವವನ್ನು ಆರೋಪಿಸಿಕೊಂಡು ಹಗಲಿರುಳು ಶ್ರೀಕೃಷ್ಣನ ಸುಂದರ ದರ್ಶನಕ್ಕಾಗಿ ತೀವ್ರ ವ್ಯಾಕುಲತೆಯಿಂದ ಇರುತ್ತಾನೆ. ಶ್ರೀರಾಮಕೃಷ್ಣರೂ ಸ್ತ್ರೀಯಂತೆ ವೇಷಭೂಷಣಗಳನ್ನು ಧರಿಸಿ ತಮಗೆ ಸಹಜವಾದ ಒಮ್ಮನಸ್ಸಿನಿಂದ ಸಾಧನೆ ಮಾಡಿದರು. ಫಲವಾಗಿ ದೈವಿಕ ಪ್ರೇಮಮೂರ್ತಿಯಾದ ಶ್ರೀರಾಧ ಪ್ರತ್ಯಕ್ಷಳಾಗಿ ಪರಮಹಂಸರ ದೇಹದಲ್ಲಿ ಐಕ್ಯವಾದಳು! ಅಂದಿನಿಂದ ಶ್ರೀರಾಮಕೃಷ್ಣರು ತಾವೇ ರಾಧೆ ಎಂದು ಸಂಪೂರ್ಣವಾಗಿ ಭಾವಿಸಲು ಸಮರ್ಥರಾದರು. ಭಕ್ತಿಶಾಸ್ತ್ರಗಳು ಹೇಳುವ “ಮಹಾಭಾವ” ಅವರಲ್ಲಿ ಪೂರ್ಣಪ್ರಕಾಶವಾಯಿತು. ಕೆಲವು ದಿನಗಳಲ್ಲಿ ಅನಂತ ಪ್ರೇಮಿಕ ಪುರುಷೋತ್ತಮನಾದ ಶ್ರೀಕೃಷ್ಣನು ಪರಮಹಂಸರಿಗೆ ದಿವ್ಯದರ್ಶನವಿತ್ತು. ಅವರ ದೇಹದಲ್ಲಿ ಲೀನವಾದನು. ಅಂದಿನಿಂದ ಪರಮಹಂಸರು ತಮ್ಮಲ್ಲಿಯೂ ಇತರರಲ್ಲಿಯೂ ಎಲ್ಲೆಲ್ಲಿಯೂ ಎಲ್ಲದರಲ್ಲಿಯೂ ಆ ಭಗವಂತನ ಮಂಗಳಮೂರ್ತಿಯನ್ನೆ ಕಾಣತೊಡಗಿದರು. ಇದೇ ಕಾಲದಲ್ಲಿ ವಿಷ್ಣುದೇವಾಲಯ ಒಂದರಲ್ಲಿ ಭಾಗವತ ಪುರಾಣ ಪಠಣವಾಗುತ್ತಿದ್ದಾಗ ಶ್ರೀರಾಮಕೃಷ್ಣರಿಗೆ ಮತ್ತೊಂದು ದರ್ಶನವಾಯಿತು. ಪ್ರತ್ಯಕ್ಷನಾದ ಶ್ರೀಕೃಷ್ಣನ ಪಾದದಿಂದ ಉದ್ಭವಿಸಿದ ಜ್ಯೋತಿಃಪ್ರವಾಹವೊಂದು ಭಕ್ತನನ್ನೂ ಭಾಗವತವನ್ನೂ ಸುತ್ತಿಕೊಂಡದ್ದು ಅವರಿಗೆ ತೋರಿತು. ತರುವಾಯ ಶ್ರೀರಾಮಕೃಷ್ಣರು “ಭಗವಾನ್, ಭಕ್ತ, ಭಾಗವತ ಇವೆಲ್ಲ ಬೇರೆ ಬೇರೆಯಾಗಿ ಕಂಡರೂ ತತ್ತ್ವತಃ ಒಂದೇ” ಎಂದು ಹೇಳುತ್ತಿದ್ದರು.

ಇದುವರೆಗೆ  ಶ್ರೀರಾಮಕೃಷ್ಣರ ಸಾಧನೆಯ ಚರಿತ್ರೆಯನ್ನು ಓದಿದ ವಾಚಕನು ಅದರ ವರ್ಣಪೂರ್ಣತೆಯನ್ನು ಕಂಡು ವಿಸ್ಮಿತನಾಗದಿರನು. ಭಾವಸಾಧನೆಯಲ್ಲಿ ಅವರಿಗೆ ದೊರೆತುಕೊಂಡ ವಿವಿಧ ವಿಚಿತ್ರವಾದ ಅದ್ಭುತ ದರ್ಶನಗಳೆಲ್ಲವೂ ಪವಿತ್ರವಾದುವು; ಗೌರವಾರ್ಹವಾದುವು; ಪೂಜ್ಯವಾದುವು. ಭಕ್ತಿಯ ಕಣ್ಣಿಗೆ ಅವುಗಳಲ್ಲಿ ಒಂದೊಂದೂ ಮಹಾ ಮಹಿಮವಾಗಿದೆ. ಧರ್ಮಜೀವನದಲ್ಲಿ ಅವುಗಳಿಂದ ಉಪಯೋಗವೂ ಆಗುವುದರಲ್ಲಿ ಸಂದೇಹವಿಲ್ಲದಿಲ್ಲ. ಆದರೆ ವೇದಾಂತಿಯ ಕ್ಷುರಸ್ಯಧಾರಾ ಸದೃಶವಾದ ಜ್ಞಾನದೃಷ್ಟಿ ಅವುಗಳನ್ನೆಲ್ಲ ನಿರ್ದಾಕ್ಷಿಣ್ಯವಾಗಿ ವಿಮರ್ಶಿಸದೆ ಬಿಡುವುದಿಲ್ಲ. ಆ ಕೆಲಸವನ್ನು ಶ್ರೀರಾಮಕೃಷ್ಣರೇ ಮಾಡಬೇಕಾಯಿತು. ಹಿಂಜರಿಯದೆ ಅದನ್ನು ಮಾಡಿಯೂ ಮಾಡಿದರು. ತಾವು ಬಹುಕಾಲದ ಶ್ರಮದಿಂದ, ಯಾತನೆಯಿಂದ, ಪ್ರೀತಿಯಿಂದ ಕಟ್ಟಿದ ಇಂದ್ರಧನು ವಿರಚಿತವಾದ ಸುಂದರ ಸುವರ್ಣ ಸ್ವಪ್ನಮಂದಿರಗಳನ್ನು ತಾವೇ ನಿಷ್ಕರುಣೆಯಿಂದ ಚೂರ್ಣಚೂರ್ಣ ಮಾಡಬೇಕಾಯಿತು. ಸತ್ಯ ಎಂದರೆ ಕೊರಳಿನಲ್ಲಿ ಧರಿಸಿದ ಹೂಮಾಲೆ ಮಾತ್ರವಲ್ಲ, ಎದೆಗೆ ಇರಿದುಕೊಳ್ಳಬೇಕಾಗಿರುವ ಹೊನ್ನಿನ ಕತ್ತಿಯೂ ಹೌದು. ಭಕ್ತಿ ಕೋಮಲಸಾಧನೆಯಾದರೆ, ಜ್ಞಾನ ಕಠೋರ ಸಾಹಸ. ಎದೆಗೆ ಇರಿದುಕೊಂಡ ಮೇಲೆ ಹೊನ್ನಿನ ಕತ್ತಿಯೆ ಹೂವಿನ ಹಾರವಾಗಬಹುದು. ಹಾಗಾಗುವುದೂ ಹೌದೆಂದು ಪರಮಹಂಸರ ಜೀವನದಿಂದ ಗೊತ್ತಾಗುತ್ತದೆ. ಆದರೆ ಮೊದಲು ಖಡ್ಗವನ್ನು ಎದೆಗಿರಿದುಕೊಳ್ಳುವ ಧೈರ್ಯದಾರ್ಢ್ಯಗಳು ಬೇಕು ಅದಕ್ಕೆ ಸ್ವಾರ್ಥ ತ್ಯಾಗವೊಂದಿದ್ದರೆ ಸಾಲದು; ‘ಸ್ವ’ ತ್ಯಾಗವೂ ಆವಶ್ಯಕ. ಇಂದ್ರಿಯಗಳಿಗೆ ಕ್ಷಣಕ್ಷಣವೂ ಗೋಚರವಾಗಿ ಅಪ್ರತಿಹತವಾದ ಪ್ರತಿಭಟನೆಯಿಂದ ತಮ್ಮ ಅಸ್ತಿತ್ವವನ್ನು ಸಾರಿ ಸಾರಿ ಚೀರಿ ಹೇಳುವ ಗ್ರಹ ಸೂರ್ಯ ನೀಹಾರಿಕಾಖಚಿತವಾದ ಕಾಲ – ದೇಶ ಪ್ರವಾಹದ ಈ ಚತುರ್ಮುಖ ಮಹಾ ವಿಶ್ವವನ್ನೆ ಬುದ್ಧಿಯ ತೀಕ್ಷ್ಣತೆಯಿಂದ ಭೇಧಿಸಿ ಅನಿತ್ಯ, ಅಸತ್ಯ, ಮಾಯೆ, ಮಿಥ್ಯೆ ಎಂದು ನಿರ್ದಾಕ್ಷಿಣ್ಯವಾಗಿ ಗುಡಿಸಿ ಬಿಸುಡುವ ಅದ್ವೈತವೇದಾಂತಿ ಸಾಧಕನ ಭಾವಜನ್ಯವಾದ ದೇವ ದೇವತೆಗಳ ದರ್ಶನಗಳನ್ನು, ಅವುಗಳೆಷ್ಟೇ ಪೂಜಾರ್ಹವಾದರೂ, ಶಸ್ತ್ರ ಪರೀಕ್ಷೆಮಾಡದೆ ಬಿಸುವುದಿಲ್ಲ; ಗುಳ್ಳೆಗಳನ್ನು ಚುಚ್ಚಿ ಒಡೆಯದಿರುವುದಿಲ್ಲ! ವೇದಾಂತಿಯ ದೃಷ್ಟಿಗೆ ಜಗತ್ತು ಎಷ್ಟರ ಮಟ್ಟಿಗೆ ಮಾಯೆಯೋ ಸಾಧಕನ ಭಕ್ತಿಯಿಂದ ಮೂಡುವ ಭಾವಮಯ ದರ್ಶನಗಳೂ ಅಷ್ಟರಮಟ್ಟಿಗೇ ಮಾಯೆ. ಆದ್ದರಿಂದ ಮಾಯೆಯನ್ನು ಸೀಳಿ ಬ್ರಹ್ಮ ಸಾಕ್ಷಾತ್ಕಾರ ಮಾಡಲೆಳಸುವ ಸಾಧಕನು, ಇನ್ನೊಂದು ಸೂಕ್ಷ್ಮತರದ ಮಾಯೆಯಿಂದ ಮೂಡುವ ಅದ್ಭುತದರ್ಶನಗಳನ್ನು ಸೀಳಿ ಮುಂಬರಿಯಬೇಕು. ಮೋಹವಶನಾಗಿ ಮುಂಬರಿಯಲಂಜಿದರೆ ಅವಿದ್ಯೆಯನ್ನು ಸಂಪೂರ್ಣವಾಗಿ ದಾಟಿದಂತಾಗುವುದಿಲ್ಲ. ಅಂತೆಯೆ ಪರಮಹಂಸರೂ ತಮ್ಮ ರಾಧೆ, ರಾಮ, ಕೃಷ್ಣ, ಕಾಳಿ, ಜಗನ್ಮಾತೆ ಎಲ್ಲರನ್ನೂ ಹಿಂದು ಮುಂದು ನೋಡದೆ, ಅಳುಕದೆ, ಸಂದೇಹಪಡದ ಅದ್ವೈತದ ವಜ್ರಪ್ರಹಾರದಿಂದ ಚೂರ್ಣೀಕೃತರನ್ನಾಗಿ ಮಾಡಿ ನಿರ್ವಿಕಲ್ಪ ಸಮಾಧಿಯಲ್ಲಿ ಏಕಮೇವಾದ್ವಿತೀಯವಾದ ಬ್ರಹ್ಮವಾಗಬೇಕಾಯಿತು. ಆ ಭವ್ಯ ಭಯಂಕರ ಗದಾಯುದ್ಧವು ದರ್ಶನೀಯವಾದುದು. ದೇವಶಿಶು ಮೊಲೆಯೂಡಿದ ಪೂತನಿಯನ್ನು ಜೀವಸಹಿತ ಹೀರಿ ಜಯಶೀಲವಾದ ಕಥೆ ರೋಮಾಂಚವಾಗುವಂತಿದೆ.

ಚಿಂತೆಗೆ ಅತೀತವಾಗಿ, ದ್ವಂದ್ವ ಸಾಮ್ರಾಜ್ಯದ ಎಲ್ಲೆ ಮೀರಿ, ವಿಕೃತಿ ಪ್ರಕೃತಿಗಳಿಂದ ಕೂಡಿರುವ ಮಾಯೆಯನ್ನು ಹಿಂದುಳಿದು, ಸೃಷ್ಟಿ ಸ್ಥಿತಿ ಲಯಜಾಲವನ್ನು ಉತ್ತರಿಸಿ, ಸುಖದುಃಖ ಸದಸತ್ತು ಪಾಪಪುಣ್ಯ ಮೊದಲಾದ ಭಾವಗಳನ್ನು ಕೊಚ್ಚಿಕೆಡಹಿ, ನಿತ್ಯತತ್ತ್ವವಾದ ಸಚ್ಚಿದಾನಂದ ಬ್ರಹ್ಮವು ನಿರ್ವಿಕಲ್ಪಸಮಾಧಿಯಲ್ಲಿ ಸ್ವಯಂ ಜ್ಯೋತಿಯಿಂದ ಪ್ರಜ್ವಲಿಸುತ್ತದೆ. ಜನನ ಜೀವನ ಮರಣಗಳು ಆ ಮಹಾಸತ್ತಿನಲ್ಲಿ ಮುಳುಗುತ್ತವೆ; ಜ್ಞಾನ ಜ್ಞೇಯ ಜ್ಞಾತೃಗಳು ಆ ಮಹಾ ಚಿತ್ತಿನಲ್ಲಿ ಲೀನವಾಗುತ್ತವೆ; ಪ್ರಿಯ ಪ್ರೇಮ ಪ್ರಿಯೆ ಎಲ್ಲವೂ ಆ ಮಹಾ ಆನಂದದಲ್ಲಿ ಐಕ್ಯವಾಗುತ್ತವೆ; ಕರ್ಮ ಧರ್ಮ ಶ್ರದ್ಧೆ ಸಂಶಯ ಈ ಚಿತ್ತವೃತ್ತಿಗಳೆಲ್ಲ ಅಲ್ಲಿ ಲಯವಾಗುತ್ತವೆ. ಆ ಅನಿರ್ವಚನೀಯ ನಿರ್ವಿಕಲ್ಪ ಸಮಾಧಿಯಲ್ಲಿ ಶರೀರದ ವ್ಯಾಪಾರಗಳು ನಿಲ್ಲುತ್ತವೆ; ಮನಸ್ಸಿನ ತರಂಗಗಳು ಸ್ತಬ್ಧವಾಗುತ್ತವೆ; ಅಹಂಕಾರವು ಬ್ರಹ್ಮಾನಂದದಲ್ಲಿ ಲಯ ಹೊಂದುತ್ತವೆ. ಕಾಲದೇಶ ನಿಮಿತ್ತಗಳು ಅನಂತ ಶೂನ್ಯದಲ್ಲಿ ಅಡಗುತ್ತವೆ. ಆ ಅನಿರ್ವಚನೀಯದ ಸ್ತಬ್ಧತೆಯ ನಿಃಶಬ್ದತೆಯ ಸವಿಯನ್ನು ಬಲ್ಲವನೆ ಬಲ್ಲ!

ಕ್ರಿ. ಶ ೧೮೬೪ನೆಯ ಸಂವತ್ಸರದ ಕೊನೆಯಭಾಗದಲ್ಲಿ, ಶ್ರೀರಾಮಕೃಷ್ಣರು ಭಾವಸಾಧನೆಗಳ ಪರಮಾವಧಿಯಾದ ಸಗುಣ ಸಾಕಾರ ಈಶ್ವರ ಸಾಕ್ಷಾತ್ಕಾರ ಮಾಡಿದ ಕಾಲದಲ್ಲಿ, ನಿರ್ಗುಣ ನಿರಾಕಾರ ಬ್ರಹ್ಮಸಾಕ್ಷಾತ್ಕಾರದ ಮಹಾ ಸಂದೇಶವಾಹಕನೊಬ್ಬನು ತನಗೆ ಬಂದೊದಗಲಿರುವ ಮಹತ್ಕಾರ್ಯದ ಸೂಚನೆಯನ್ನೂ ತಿಳಿಯದೆಯೆ ದಕ್ಷಿಣೇಶ್ವರಕ್ಕೆ ಬಂದನು. ಆತನೆ ನಗ್ನ ಸಂನ್ಯಾಸಿ ತೋತಾಪುರಿ. ಅಸಾಧಾರಣ ವೇದಾಂತಿಯಾದ ಆ ಭೀಮ ಸಂನ್ಯಾಸಿ ನರ್ಮದಾ ನದಿಯ ತೀರದಲ್ಲಿ ನಲ್ವತ್ತು ವರ್ಷಗಳ ಕಠೋರ ತಪಸ್ಸಿನಿಂದ ಮಾನವ ಸಾಧನೆಯ ಅತ್ಯಂತಿಕ ಆದರ್ಶವಾದ ನಿರ್ಗುಣ ಬ್ರಹ್ಮಸಾಕ್ಷಾತ್ಕಾರ ಮಾಡಿಕೊಂಡು ಮುಕ್ತಾತ್ಮನಾಗಿ ಜಗನ್ಮಹಾ ಸ್ವಪ್ನವನ್ನು ಪರಮ ಔದಾಸೀನ್ಯದಿಂದ ಕಾಣುತ್ತಿದ್ದನು. ಸಿಂಹ, ಗಜ ಮೊದಲಾದ ವನ್ಯ ಜಂತುಗಳನ್ನೂ ನಡುಗಿಸುವ, ಬೆದರಿಸುವ, ಕೊರಗಿಸುವ ಚಂಡ ಪ್ರಕೃತಿಯ ಪ್ರಚಂಡ ಆಘಾತಗಳನ್ನೂ ಈ ಶಿಲಾತಪಸ್ವಿ ದರಹಸಿತನಾಗಿ ಧಿಕ್ಕಾರಮಾಡುತ್ತಿದ್ದನು. ಆತನು ಮಳೆ ಬಿಸಿಲು ಚಳಿಗಳಲ್ಲಿಯೂ ಯಾವ ಗೃಹವನ್ನೂ ಪ್ರವೇಶಿಸುತ್ತಿರಲಿಲ್ಲ. ಆತನಿಗೆ ‘ಸುರಮಂದಿರ ತರುಮೂಲ ನಿವಾಸ’ವಾಗಿತ್ತು. ಆತನು ವಸ್ತ್ರಲೇಶವನ್ನೂ ಧರಿಸದೆ ನಗ್ನನಾಗಿರುತ್ತಿದ್ದನು; ಆತನಿಗೆ ಆಕಾಶವೆ ಅಂಬರವಾಗಿತ್ತು. ದುಃಖದಲ್ಲಿ ಅನುದ್ವಿಗ್ನ ಮನನಾಗಿಯೂ ಸುಖದಲ್ಲಿ ವಿಗಸ್ಪೃಹನಾಗಿಯೂ ಆ ಜೀವನ್ಮುಕ್ತನು ಮೂರು ದಿವಸ ನಿಂತಲ್ಲಿ ಇಲ್ಲದೆ ಪರಿವ್ರಾಜಕನಾಗಿ ಜಗದ ಹಂಗುದೊರೆದು, ಬಂಧನ ಮುಕ್ತ ಪಂಚಾನನನಂತೆ ಊರಿಂದೂರಿಗೆ ಸಂಚರಿಸುತ್ತದ್ದನು. ಇಂತಹ ಸಿಡಿಲಾಳು ಆ ತೋತಾಪುರಿ.

ತೋತಾಪುರಿ ನೌಕೆಯಿಂದಿಳಿದು ದಕ್ಷಿಣೇಶ್ವರದ ಸ್ನಾನಘಟ್ಟದ ಸೋಪಾನಾವಳಿಯನ್ನು ಏರುತ್ತ, ಅಲ್ಲಿಯೆ ಒಂದು ಮೆಟ್ಟಲಿನ ಮೇಲೆ ಇಪ್ಪತ್ತೆಂಟು ವರ್ಷದ ದೇವಶಿಶುವಿನಂತೆ ಭಾವಲೀನವಾಗಿ ಕುಳಿತ ಶ್ರೀರಾಮಕೃಷ್ಣರನ್ನು ಕಂಡು ಹೆ‌ಜ್ಜೆ ಕೀಳಲಾರದೆ ನಿಂತುಬಿಟ್ಟನು. ತರುಣ ಪೂಜಾರಿಯಲ್ಲಿದ್ದ ಯಾವುದೋ ಒಂದು ಅಲೌಕಿಕತೆ ತೋತಾಪುರಿಯಂತಹ ಸಾಕಾರಶೂನ್ಯತೆಯನ್ನು ಕೂಡ ಬೆರಗುಗೊಳಿಸಿ ಬಿಟ್ಟಿತು. ಈ ಅನಿರ್ವಚನೀಯ ಆಕರ್ಷಣೆಯೆ ಆತನನ್ನು, ತನ್ನ ಪೂಣ್ಕೆಗೆ ವಿರುದ್ಧವಾಗಿ, ಬಹುಕಾಲ ದಕ್ಷಿಣೇಶ್ವರದಲ್ಲಿ ಹಿಡಿದಿಟ್ಟಿತು.

ತೋತಾಪುರಿ ಮೆಲ್ಲನೆ ಮೊಳಗಿದನು: “ಬಾಬಾ, ನೀನು ಸಾಧನೆಯ ಮಾರ್ಗದಲ್ಲಿ ಬಹುದೂರ ಹೋಗಿರುವ ಉತ್ತಮ ಅಧಿಕಾರಿಯಂತೆ ತೋರುತ್ತೀಯೆ. ನೀನು ಒಪ್ಪಿದರೆ ಮುಂದಿನ ಹಾದಿ ತೋರುತ್ತೇನೆ. ವೇದಾಂತ ಸಾಧನೆ ಮಾಡಿಸುತ್ತೇನೆ.”

ಶ್ರೀರಾಮಕೃಷ್ಣರು ಕಣ್ಣರಳಿಸಿ ನೋಡಿದರು. ಎದುರುಗಡೆ ಗಂಗಾಸಲಿಲ ಪಟಕ್ಕೆದುರಾಗಿ ನಿಂತಿದೆ, ಸಿಂಹಾಕೃತಿಯ ಮಹಾ ರೂಕ್ಷ ಶಿಲಾ ಶೈಲದಂತೆ ಭೀಮ ಸಂನ್ಯಾಸಿಯ ನಗ್ನ ಭಯಂಕರ ಘನಮೂರ್ತಿ! ಸಿಡಿಲ ದನಿಗೆ ಅವರು ಮರುದನಿಗೈದಿತು: “ಅದೊಂದೂ ನನಗೆ ತಿಳಿಯದು. ಎಲ್ಲಾ ನನ್ನ ತಾಯಿಯ ಒಪ್ಪಿಗೆಯ ಮೇಲಿದೆ. ಆಕೆ ಸಮ್ಮತಿಸಿದರೆ ನಾನೂ ಸಮ್ಮತಿಸಿದಂತೆ.”

“ಹಾಗಾದರೆ, ಹೋಗಿ ತಾಯಿಯನ್ನು ಕೇಳಿಕೊಂಡು ಬಾ. ನಾನಿಲ್ಲಿ ಹೆಚ್ಚು ಕಾಲ ಇರುವುದಿಲ್ಲ.”

ಶ್ರೀರಾಮಕೃಷ್ಣರು ಕಾಳಿಯ ಗುಡಿಗೆ ಹೋಗಿಬಂದು ತಾಯಿ ಒಪ್ಪಿದಳೆಂದು ತಿಳಿಸಿದರು. ಪರಮಹಂಸರ ಮುಗ್ಧ ಸರಳತೆಯನ್ನು ನೋಡಿ ತೋತಾಪುರಿಯ ಪಾರ್ವತಗಾಂಭೀರ್ಯವೂ ಮುಗುಳುನಗೆದೋರಿತು. ಮಹೋಗ್ರ ವೇದಾಂತಿಯಾದ ಆತನಿಗೆ ಜಗನ್ಮಾತೆ ಇತ್ಯಾದಿ ದೇವತೆಗಳು ಮಿಥ್ಯಾಮೂರ್ತಿಗಳಾಗಿದ್ದುವು. ಬ್ರಹ್ಮಸಾಕ್ಷಾತ್ಕಾರ ಮಾಡುವ ಸಾಧಕನಿಗೆ ಪೂಜೆ ಪ್ರಾರ್ಥನೆ ಮೊದಲಾದ ಮೂರ್ಖತೆಯ ಚಿಹ್ನೆಗಳು ಹೇಯವೆಂದು ಆತನ ಭಾವನೆಯಾಗಿತ್ತು. ಶ್ರೀರಾಮಕೃಷ್ಣರು ಯಾವುದನ್ನು ಶಕ್ತಿ, ಮಾಯೆ, ಜಗನ್ಮಾತೆ ಎಂದು ಆರಾಧಿಸುತ್ತಿದ್ದರೋ ನಿರ್ಗುಣ ಬ್ರಹ್ಮದ ಆ ಸಗುಣಾಭಾಸವು ತೋತಾಪುರಿಯ ದೃಷ್ಟಿಗೆ ಬರಿಯ ಮಿಥ್ಯೆಯಾಗಿತ್ತು / ಮಿಥ್ಯೆಯಿಂದ ಪಾರಾಗಲೆಳಸುವಾತನು ಮಿಥ್ಯೆಯನ್ನು ಪೂಜಿಸುವುದರಿಂದ ಪ್ರಯೋಜನವೇನು? ತನ್ನ ಅವಿದ್ಯೆಯಿಂದಲೆ ಬಂಧಿತನಾಗಿರುವ ಮನುಷ್ಯನು ಸ್ವಪ್ರಯತ್ನದಿಂದಲೆ ಪಾರಾಗಬಲ್ಲನೆಂಬುದು ಆತನ ಭಾವನೆಯಾಗಿತ್ತು ಆದ್ದರಿಂದ ಪರಮಹಂಸರ ನುಡಿಗೆ ಮುಗುಳುನಗೆ ತೋರಿದರೂ ಬೇರೆ ಯಾವುದನ್ನೂ ಹೇಳದೆ, ಶಿಷ್ಯನು ತನ್ನ ಗುರುತ್ವದಲ್ಲಿ ಮಹಾ ಮೌಢ್ಯವನ್ನು ಗುಡಿಸಿ ಬಿಸುಡುವನೆಂದು ಬಗೆದು ಸುಮ್ಮನಾದನು.

ವೇದಾಂತಸಾಧನೆಯಲ್ಲಿ ದೀಕ್ಷಿತರಾಗುವ ಮೊದಲು ಶ್ರೀರಾಮಕೃಷ್ಣರು ಪದ್ಧತಿಯಂತೆ ಪೂರ್ವಾಶ್ರಮದ ಚಿಹ್ನೆಗಳಾದ ಜುಟ್ಟು ಜನಿವಾರಗಳು ಪರಿತ್ಯಜಿಸಿ ಶಾಸ್ತ್ರೀಯವಾಗಿ ಸಂನ್ಯಾಸಗ್ರಹಣ ಮಾಡಬೇಕಾಯಿತು. ಪರಮಹಂಸರು ಮೊದಮೊದಲು ಸ್ವಲ್ಪ ಹಿಂದೆ ಮುಂದೆ ನೋಡಿದರು. ಕಡೆಗೆ ಗುಟ್ಟಾಗಿ ಸಂನ್ಯಾಸ ಕೊಡುವುದಾದರೆ ಆಗಬಹುದು ಎಂದರು. ಏಕೆಂದರೆ, ಅವರ ತಾಯಿ ಒಂದು ವರ್ಷದ ಹಿಂದೆ ಕಾಮಾರಪುಕುರವನ್ನು ಬಿಟ್ಟು ಬಂದು ಪವಿತ್ರಸ್ಥಾನವಾದ ದಕ್ಷಿಣೇಶ್ವರದಲ್ಲಿ ವಾಸಿಸುತ್ತಿದ್ದರು. ಮಾತೆಯ ಮನಸ್ಸಿಗೆ ನೋವಾಗುವಂತೆ ಮಾಡುವುದು ಅವರಿಗೆ ಸರಿಬೀಳಲಿಲ್ಲ. ಅವರ ಸಂಕಟವನ್ನು ತಿಳಿದುಕೊಂಡು ತೋತಾಪುರಿಯೂ ಗುಟ್ಟಾಗಿ ಸಂನ್ಯಾಸ ಕೊಡಲು ಸಮ್ಮತಿಸಿದನು.

ನಿಯಮಿತ ಶುಭದಿನ ಸಾರಿಬಂದಿತು. ಶ್ರೀರಾಮಕೃಷ್ಣರು ಗುರುವಿನ ಹೇಳಿಕೆಯಂತೆ ಪಿತೃಗಳ ಶ್ರಾದ್ಧವನ್ನೂ ತಮ್ಮ ಸ್ವಂತ ಶ್ರಾದ್ಧವನ್ನೂ ಮಾಡಿದರು. ಏಕೆಂದರೆ, ಸಂನ್ಯಾಸಿ ಲೋಕದ ಭಾಗಕ್ಕೆ ಮೃತನಾದಂತೆಯೆ. ಸಂನ್ಯಾಸಿಯಾದವನು ಶ್ರಾದ್ಧ ಮೊದಲಾದ ಕಾಮ್ಯಕ್ರಿಯೆಗಳಲ್ಲಿ ಎಂದೆಂದಿಗೂ ಭಾಗಿಯಾಗಲಾರನು. ಅದಾದ ತರುವಾಯ ಸಂನ್ಯಾಸ ದೀಕ್ಷಾಕ್ರಿಯೆಗೆ ಬೇಕಾದ ಸಾಮಗ್ರಿಗಳನ್ನು ಒಟ್ಟುಮಾಡಿ, ಉಪವಾಸ ವ್ರತವನ್ನು ಕೈಕೊಂಡು ಪಂಚವಟಿಯಲ್ಲಿದ್ದ ತಮ್ಮ ಧ್ಯಾನಶಾಲೆಯಲ್ಲಿ  ದೀಕ್ಷಾಮಹೂರ್ತವನ್ನೆ ಆನಂದದಿಂದ ಎದುರುನೋಡುತ್ತಿದ್ದರು. ರಾತ್ರಿಯಲ್ಲಿ ಮುಕ್ಕಾಲು ಪಾಲು ಕಳೆದುಹೋಗಿತ್ತು. ಜಗತ್ತು ಪಾವನಮೌನದಲ್ಲಿ ಮುಳುಗಿ ಸಮಾದಿಯಲ್ಲಿತ್ತು. ಶುಭಮಹೂರ್ತದಲ್ಲಿ ಗುರು ಪರ್ಣಶಾಲೆಗೆ ಬಂದನು. ಗುರುಶಿಷ್ಯರಿಬ್ಬರೂ ಹೋಮಾಗ್ನಿಯ ಮುಂದೆ ಕುಳಿತರು. ತೋತಾಪುರಿ ಪವಿತ್ರ ಮಂತ್ರಗಳನ್ನು ಉಚ್ಚರಿಸಿದಂತೆ ಶ್ರೀರಾಮಕೃಷ್ಣರೂ ಉಚ್ಚರಿಸಿ ಹೋಮವಸ್ತುಗಳನ್ನು ಅಗ್ನಿಗೆ ನಿವೇದಿಸಿದರು. ಐಹಿಕ ಆಮುಷ್ಮಿಕ ಭೋಗಾಭಿಲಾಷೆಗಳನ್ನೂ ತ್ಯಜಿಸಿದರು. ಕಡೆಗೆ ಜುಟ್ಟು ಜನಿವಾರಗಳನ್ನು ಅಗ್ನಿಗೆ ಸಮರ್ಪಿಸಿ, ಗುರುವಿನಿಂದ ಕೌಪೀನ ಕಾವಿಗಳನ್ನು ಸ್ವೀಕರಿಸಿ ಸಂನ್ಯಾಸಿಯಾದರು. ಅದನ್ನು ನೋಡಿ ಜಗತ್ತು ಆನಂದದಿಂದ ಮೂಕವಾಗಿತ್ತು.

ಮುಂಬೆಳಕು ಮೂಡಿತು; ತಂಬೆಲರು ತೀಡಿತು; ಪ್ರಭಾತದ ಮೌನ ಸಮುದ್ರವು ಲಕ್ಷ ಲಕ್ಷ ಪಕ್ಷಿಕೂಜನ ತರಂಗ ತಾಡಿತವಾಯಿತು. ಶ್ರೀರಾಮಕೃಷ್ಣರು ಗುರವಿಗೆ ಸಾಷ್ಟಾಂಗ ಪ್ರಣಾಮಮಾಡಿ ಉಪದೇಶ ಪಡೆಯಲು ಪದ್ಮಾಸನದಲ್ಲಿ ಕುಳಿತರು. ತೋತಾಪುರಿ ಅದ್ವೈತ ವೇದಾಂತದ ಮಹಾ ನಿಗೂಢ ತತ್ತ್ವಗಳನ್ನು ಸಾರಾಂಶವಾಗಿ ಉಪದೇಶಿಸತೊಡಗಿದನು. “ಏಕಮೇವಾದ್ವಿತಿಯವೂ ನಿತ್ಯ ಶುದ್ಧ ಬುದ್ಧ ಮುಕ್ತವೂ ಕಾಲದೇಶ ನಿಮಿತ್ತಾತೀತವೂ ಆದ ಬ್ರಹ್ಮವೊಂದೇ ಏಕಮಾತ್ರ ಸತ್ಯ. ಅಘಟನಘಟನಕಾರಿಯಾದ ಮಾಯೆಯ ಅನಿರ್ವಚನೀಯ ನಿಮತ್ತದಿಂದ ನಾಮರೂಪ ಭೇದಗಳನ್ನು ಧರಿಸಿರುವಂತೆ ತೋರಿದರೂ ಬ್ರಹ್ಮವು ತತ್ತ್ವತಃ ಏಕಾಖಂಡವಾದುದು. ಏಕೆಂದರೆ, ಸಾಧಕನು ನಿರ್ವಿಕಲ್ಪ ಸಮಾಧಿಯಲ್ಲಿ ಲಯ ಹೊಂದಿದಾಗ ಮಾಯಾಜನ್ಯವಾದ ಕಾಲದೇಶ ನಿಮಿತ್ತಾದಿಗಳ ಛಾಯೆಯೂ ಕೂಡ ಅನುಭವಕ್ಕೆ ಬರುವುದಿಲ್ಲ. ಮಾಯಾಪ್ರಪಂಚದಲ್ಲಿ ಇರುವುದೆಲ್ಲವೂ ಅಸತ್ಯ; ಅದನ್ನು ತ್ಯಜಿಸಿಬಿಡು. ಜ್ಞಾನವೆಂಬ ವಜ್ರಗದೆಯಿಂದ ಮಾಯೆಯ ಸೆರೆಮನೆಯ ನಾಮರೂಪಗಳೆಂಬ ಭಿತ್ತಿಗಳನ್ನು ಕುಟ್ಟಿ ಒಡೆದು ಪುಡಿಗೈದು ಸಿಂಹದಂತೆ ಹೊರಗೆ ನುಗ್ಗಿಬಾ. ಆತ್ಮದುರ್ಗವನ್ನು ಪ್ರವೇಶಿಸಿ ಸಮಾಧಿಯಲ್ಲಿ ಸ್ಥಿತಪ್ರಜ್ಞನಾಗು. ಆಗ ನಿನಗೆ ಗೊತ್ತಾಗುತ್ತದೆ – ನಾಮರೂಪ ಜಗತ್ತು ಶೂನ್ಯವಾಗುತ್ತದೆ; ಕ್ಷುದ್ರ ಅಹಂಕಾರವು ಮಹಾಬ್ರಹ್ಮ ಚೈತನ್ಯದಲ್ಲಿ ವಿಲೀನವಾಗುತ್ತದೆ. ಸಚ್ಚಿದಾನಂದವಾದ ಕೇವಲ ಬ್ರಹ್ಮದಲ್ಲಿ ನೀನು ಅದ್ವಯನಾಗುವೆ. ತತ್ತ್ವಮಸಿ! ತತ್ತ್ವಮಸಿ!! ತತ್ತ್ವ ಮಸಿ!!!”

ಮುಂದೆ ನಡೆದುದನ್ನು ಪರಮಹಂಸರೆ ಹೇಳುತ್ತಾರೆ:

“ನಗ್ನನು ವೇದಾಂತವನ್ನು ಉಪದೇಶಮಾಡಿದ ಮೇಲೆ, ಮನಸ್ಸನ್ನು ವಿಷಯಗಳಿಂದ ಪ್ರತ್ಯಾಹಾರಮಾಡಿ ನಿರ್ಗುಣನಿರಾಕಾರ ಅವ್ಯಕ್ತ ಬ್ರಹ್ಮದಲ್ಲಿ ಧಾರಣೆ ಮಾಡುವಂತೆ ಹೇಳಿದನು. ಆದರೆ ನಾನು ಎಷ್ಟು ಪ್ರಯತ್ನ ಮಾಡಿದರೂ ನಾಮರೂಪಗಳ ಎಲ್ಲೆಯನ್ನು ದಾಟಿ ನಿರ್ವಿಕಲ್ಪದಲ್ಲಿ ನಿಲ್ಲಲಾರದೆ ಹೋದೆ. ಇತರ ಎಲ್ಲ ವಿಷಯಗಳಿಂದಲೂ ಪಾರಾಗಲು ಸುಲಭ ಸಾಧ್ಯವಾಯಿತು; ಆದರೆ ಸತ್ತ್ವಜ್ಞಾನ ಸಾರ ಸ್ವರೂಪಿಣಿಯಾದ ಜಗನ್ಮಾತೆಯ ಚಿರಪರಿಚಿತ ತೇಜೋಮಯ ಮೂರ್ತಿಯನ್ನು ಮೀರಿ ಮುಂಬರಿಯಲಾಗಲಿಲ್ಲ. ಏನು ಮಾಡಿದರೂ ಆಕೆ ಸಜೀವ ಸತ್ಯದಂತೆ ಸುಳಿದು ಅತೀತಕ್ಕೆ ಅಡ್ಡವಾಗುತ್ತಿದ್ದಳು. ಸಲಸಲವೂ ನಾನು ಅದ್ವೈತ ತತ್ತ್ವದಲ್ಲಿ ಮನಸ್ಸನ್ನು ನಿಲ್ಲಿಸಲು ಯತ್ನಿಸಿದಂತೆಲ್ಲ ಮಾತೆಯ ಮೂರ್ತಿ ಅಡ್ಡ ಬರುತ್ತಿತ್ತು. ಕಡೆಗೆ ಹತಾಶನಾಗಿ ಹೇಳಿದೆ: ‘ಇಲ್ಲ, ನನ್ನಿಂದಾಗದು. ಏನು ಮಾಡಿದರೂ ಮನಸ್ಸು ನಿರ್ವಿಕಲ್ಪಕ್ಕೆ ಹೋಗದು. ನಿರ್ಗುಣಬ್ರಹ್ಮಸಾಕ್ಷಾತ್ಕಾರ ನನ್ನಿಂದ ಅಸಾಧ್ಯ! ‘….. ನನ್ನ ಮಾತು ಕೇಳಿ ಆತನು ನಸುಕಿನಿಸಕೊಂಡು ಗಂಭೀರವಾಣಿಯಿಂದ ‘ಏನು! ನಿನ್ನಿಂದಾಗದೆ? ಆಗಬೇಕು’ ಎಂದು ಹೇಳುತ್ತ ಸುತ್ತ ನೋಡಿ ಅಲ್ಲಿ ಬಿದ್ದಿದ್ದ ಒಂದು ಗಾಜಿನ ಚೂರನ್ನು ತೆಗೆದುಕೊಂಡು ನನ್ನ ಭ್ರೂಮಧ್ಯಕ್ಕೆ ತಿವಿದು ‘ಇಲ್ಲಿ ಮನಸ್ಸನ್ನು ಧಾರಣೆಮಾಡಿ ಧ್ಯಾನಮಾಡು’ ಎಂದನು. ನನ್ನ ಸಾಹಸವೆಲ್ಲವನ್ನೂ ಉಪಯೋಗಿಸಿಬಿಡಲು ಮನಸ್ಸುಮಾಡಿ ಮತ್ತೊಮ್ಮೆ ಧ್ಯಾನಕ್ಕೆ ಕುಳಿತೆ. ಮರಳಿ ಜಗದಂಬೆಯ ರೂಪ ಆವಿರ್ಭವಿಸಿತು. ವಿವೇಕ ಖಡ್ಗದಿಂದ ಅದನ್ನು ಎರಡಾಗಿ ಸೀಳಿದೆ. ಕಟ್ಟಕಡೆಯ ಬಂಧನ ಹರಿದುಹೋಯಿತು. ಆತ್ಮವು ಸವಿಕಲ್ಪಾವಸ್ಥೆಯನ್ನು ದಾಟಿ ನಿರ್ವಿಕಲ್ಪ ಸಮಾಧಿಯಲ್ಲಿ ಲಯಹೊಂದಿತು.”

ತೋತಾಪುರಿ ಶಿಷ್ಯನ ನಿಷ್ಪಂದ ದೇಹವನ್ನು ನೋಡುತ್ತ ಕುಳಿತನು. ಸ್ವಲ್ಪ ಹೊತ್ತಾದ ಮೇಲೆ ಪರ್ಣಶಾಲೆಯ ಬಾಗಿಲನ್ನು ಹಾಕಿಕೊಂಡು ಹೊರಗೆ ಬಂದನು. ಎಷ್ಟು ಹೊತ್ತಾದರೂ ಶ್ರೀರಾಮಕೃಷ್ಣರು ಕರೆಯಲೆ ಇಲ್ಲ. ಹಗಲುರುಳಿ ಇರುಳಾಯಿತು. ಮರುದಿನವಾಯಿತು. ಮತ್ತೊಂದು ದಿನವೂ ಕಳೆಯಿತು! ಮೂರು ದಿನಗಳಾದ ಮೇಲೆ ತೋತಾಪುರಿ ಬೆಕ್ಕಸದಿಂದೇನಾಗಿದೆಯೊ ನೋಡುತ್ತೇನೆಂದು ಬಾಗಿಲು ತೆರೆದನು. ಶ್ರೀರಾಮಕೃಷ್ಣರು ತಾನು ಅವರನ್ನು ಬಿಟ್ಟಾಗ ಕುಳಿತಂತೆಯೆ ಕಲ್ಲಾಗಿ ಕುಳಿತಿದ್ದರು. ದೇಹದಲ್ಲಿ ಜೀವದ ಸೂಚನೆ ಇರಲಿಲ್ಲ; ವದನ ಮಾತ್ರ ಪ್ರಶಾಂತ ತೇಜೋಮಂಡಿತವಾಗಿತ್ತು. ತೋತಾಪುರಿ ಬೆರಗಾಗಿ ನಿಂತು ತನ್ನಲ್ಲಿ ತಾನೇ. “ಇದು ನಿಜವೆ? ನಾನು ನಾಲ್ವತ್ತು ವರ್ಷಗಳ ಕಠೋರತಪಸ್ಸಿನಿಂದ ಸಾಧಿಸಿದ್ದನ್ನು ಈತನು ದಿನವೊಂದರಲ್ಲಿ ಸಾಧಿಸಲು ಸಾಧ್ಯವೇ?” ಎಂದುಕೊಂಡನು. ಶರೀರದ ಚಿಹ್ನೆಗಳನ್ನು ಚೆನ್ನಾಗಿ ಪರೀಕ್ಷಿಸಿದನು. ಸಂದೇಹ ನಿವೃತ್ತಿಯಾಯಿತು. ಶಿಷ್ಯನಿಗೆ ಅದ್ವೈತಸಾಧನೆಯ ಉತ್ತಮೋತ್ತಮ ಸಿದ್ಧಿಯಾದ ನಿರ್ವಿಕಲ್ಪ ಸಮಾಧಿಯಾಗಿತ್ತು. “ಶಿವ ಶಿವಾ, ಎಂತಹ ಪವಾಡವಿದು!” ಎಂದು ಕೂಗಿಕೊಂಡನು.

ತರುವಾಯ ನಗ್ನ ಸಂನ್ಯಾಸಿಯ ಗಂಭೀರಕಂಠದಿಂದ ಹೊರಟ ‘ಹರಿಃ ಓಂ!’ ‘ಹರಿಃ ಓಂ!’ ಎಂಬ ಮಹಾ ಮಂತ್ರಘೋಷಣ ಪರ್ಣಶಾಲೆಯನ್ನು ತುಂಬಿ ತುಳುಕಿತು. ಮೆಲ್ಲಮೆಲ್ಲಗೆ, ಬಹು ಮೆಲ್ಲಗೆ, ಸಮಾಧಿಯಿಂದ ಕೆಳಗಿಳಿದು ಬಂದು ಶ್ರೀರಾಮಕೃಷ್ಣರು ಕಣ್ಣುತೆರೆದರು. ಗುರು ಪರಮಾನಂದದಿಂದ ಶಿಷ್ಯನನ್ನು ಆಲಿಂಗಿಸಿದನು.

ಮೂರು ದಿನಗಳು ಒಂದೆಡೆ ನಿಲ್ಲದ ಆತನು ದಕ್ಷಿಣೇಶ್ವರದಲ್ಲಿ ಹನ್ನೊಂದು ತಿಂಗಳು ವಾಸಿಸಿದನು.

ತೋತಾಪುರಿ ಮಹಾಮೇಧಾವಿಯಾದ ಸಿದ್ಧನಾದರೂ ಬ್ರಹ್ಮಮಂದಿರಕ್ಕೆ ಅನೇಕ ಮಾರ್ಗಗಳಿವೆ ಎಂಬುದು ಆತನಿಗೆ ತಿಳಿದಿರಲಿಲ್ಲ. ಜ್ಞಾನಮಾರ್ಗವಲ್ಲದ ಮಾರ್ಗ ಆತನಿಗೆ ತಿರಸ್ಕೃತವಾಗಿತ್ತು. ಭೈರವಿ ಭಕ್ತಿ ಸಂಭ್ರಾಂತೆಯಾಗಿದ್ದಂತೆ ತೋತಾಪುರಿ ಜ್ಞಾನಸಂಭ್ರಾಂತನಾಗಿದ್ದನು. ತೋತಾಪುರಿ ಗುರುತ್ವದಲ್ಲಿ ಅದ್ವೈತ ಸಾಧನೆ ಮಾಡುತ್ತೇನೆ ಎಂದು ಶ್ರೀರಾಮಕೃಷ್ಣರು ಹೇಳಿದಾಗ, ಭೈರವಿ ಅದ್ವೈತವೂ ಜ್ಞಾನವೂ ಶುಷ್ಕವಾದುವುಗಳೆಂದೂ ಅದ್ವೈತಿಗಳೆಲ್ಲ  ಪ್ರಚ್ಛನ್ನ ಶೂನ್ಯವಾದಿಗಳೆಂದೂ ಬೋಧಿಸಿ ಪರಮಹಂಸರನ್ನು ಹಿಂದಕ್ಕೆ ತಿರುಗಿಸಲು ಪ್ರಯತ್ನಮಾಡಿದಳು. ಹಾಗೆಯೆ ತೋತಾಪುರಿ ತನ್ನ ಶಿಷ್ಯನ ಭಕ್ತಿ ಪ್ರದರ್ಶಕವಾದ ಆಚರಣೆಗಳನ್ನೆಲ್ಲ ಮೌಢ್ಯ ಮೂಲವಾದುವುಗಳೆಂದು ಪರಿಹಾಸ್ಯಮಾಡುತ್ತಿದ್ದನು. ಆದರೆ ಕೆಲದಿನಗಳಲ್ಲಿಯೆ ಶಿಷ್ಯನು ಗುರುವಿಗೆ ಗುರುವಾದನು. ತೋತಾಪುರಿ ಶ್ರೀರಾಮಕೃಷ್ಣರಿಂದ ಅನೇಕ ವಿಷಯಗಳನ್ನು ಕಲಿತು ಪರಿಪಕ್ವವಾದನು.

ತೋತಾಪುರಿ ಕಾಲಕ್ಕೆ ಸರಿಯಾಗಿ ಪ್ರತಿದಿನವೂ ಧ್ಯಾನಮಾಡದೆ ಇರುತ್ತಿರಲಿಲ್ಲ. ಒಂದು ದಿನ ಪರಮಹಂಸರು “ನೀವು ಮಹಾಜ್ಞಾನಿಗಳು; ಸಿದ್ಧ ಪುರುಷರು; ಆದರೂ ನಿಮಗೇಕೆ ಈ ಧ್ಯಾನಮಾಡುವ ಕರ್ಮದ ಕಟ್ಟು?” ಎನ್ನಲು, ತೋತಾಪುರಿ ತನ್ನ ಹತ್ತಿರವಿದ್ದ ಹಿತ್ತಾಳೆಯ ಕಲಶವನ್ನು ತೋರಿಸಿ “ನೋಡು, ಇದೆಷ್ಟು ಬೆಳ್ಳಗೆ ಹೊಳೆಯುತ್ತಿದೆ? ದಿನವೂ ಇದನ್ನು ಉಜ್ಜದಿದ್ದರೆ ಕಾಂತಿ ಕೆಡುವುದು. ಮನಸ್ಸಿನ ವಿಚಾರದಲ್ಲಿಯೂ ಹಾಗೆಯೆ, ಅದನ್ನು ದಿನವೂ ಧ್ಯಾನದಿಂದ ಉಜ್ಜದಿದ್ದರೆ ಮಸುಕಾಗುವುದು” ಎಂದನು. ಪರಮಹಂಸರು ಆ ಮಾತಿನ ಸತ್ಯವನ್ನು ಒಪ್ಪಿಕೊಂಡು “ಆದರೆ, ಅದು ಚಿನ್ನದ್ದಾಗಿದ್ದರೆ! ದಿನವೂ ಉಜ್ಜಬೇಕೆ ಅದನ್ನು?” ಎಂದು ಕೇಳಿದರು. ಗುರು ಮುಗುಳುನಗೆಯಿಂದ ಒಪ್ಪಿಗೆ ಸೂಚಿಸಿ ಸುಮ್ಮನಾದನು.

ಒಂದು ದಿನ ಪರಮಹಂಸರು ಕೈಯಲ್ಲಿ ತಾಳಹಾಕುತ್ತ ದೇವರ ನಾಮಗಳನ್ನು ಹೇಳುತ್ತಿರಲು, ತೋತಾಪುರಿ ಜ್ಞಾನಿಯೂ ಮುಕ್ತನೂ ಆದವನು ಬದ್ಧಜೀವರಂತೆ ವರ್ತಿಸುವುದನ್ನು ಕಂಡು ವಿಸ್ಮಿತನಾಗಿ “ಏನಿದು ಚಪಾತಿ ತಟ್ಟುತ್ತಿದ್ದೀಯಾ?” ಎಂದು ಕೇಳಿದನು. ಶ್ರೀರಾಮಕೃಷ್ಣರು ಮುನಿದುಕೊಂಡು “ಛೇ ಎಂತಹ ಮಾತಿದು! ದೇವರ ನಾಮಗಳನ್ನು ಹೀಗೆ ಹಾಸ್ಯ ಮಾಡುವುದೆ?” ಎಂದು ಗದರಿಸಿದರು. ಗುರು ಸ್ಮಿತವದನನಾಗಿ ಸುಮ್ಮನಾದನು. ಆಮೇಲೆ ಹಾಗೆ ಹೇಳುತ್ತಿರಲಿಲ್ಲ.

ಮತ್ತೊಂದು ದಿನ ತೋತಾಪುರಿ ತನ್ನ ‘ಧುನಿ’ಯ (ಅಗ್ನಿಕುಂಡ) ಮುಂದೆ ಕುಳಿತಿದ್ದಾಗ ಸೇವಕನೊಬ್ಬನು ಹುಕ್ಕಾ ಹಚ್ಚಿಕೊಳ್ಳಲು ಅದರಿಂದ ಕೆಂಡ ತೆಗೆದುಕೊಂಡನು. ನಗ್ನ ಸಂನ್ಯಾಸಿಗೆ ಕೋಪ ಬಂದು ಅವನನ್ನು ಹೊಡೆಯುತ್ತೇನೆ ಎಂದು ಬೆದರಿಸಿದನು. ಶ್ರೀರಾಮಕೃಷ್ಣರು ಅದನ್ನು ಕಂಡು ಗಹಗಹಿಸಿ ನಕ್ಕುಬಿಟ್ಟರು. ತೋತಾಪುರಿ ನಗಲು ಕಾರಣವೇನೆಂದು ಕೇಳಿ, ಸೇವಕ ಮಾಡಿದ್ದು ತಪ್ಪಲ್ಲವೇ ಎಂದನು. ಪರಮಹಂಸರು ನಗುನಗುತ್ತ: “ಅದೇನೋ ಸರಿಯೆ. ಆದರೆ ನಾನು ನಿಮ್ಮ ಜ್ಞಾನದ ಆಳವನ್ನು ಅಳೆಯುತ್ತಿದ್ದೆ. ಈಗತಾನೇ ನನಗೆ ಹೇಳುತ್ತಿದ್ದಿರಿ, ಬ್ರಹ್ಮಸತ್ಯಂ ಜಗನ್ಮಿಥ್ಯಾ ಎಂದು. ಮರುಕ್ಷಣವೆ ಅದನ್ನೆಲ್ಲಾ ಮರೆತುಬಿಟ್ಟು ಸೇವಕನನ್ನು ಹೊಡೆಯಲು ಹೋಗಿದ್ದಿರಿ! ಮಾಯೆಯ  ಮಹಾಶಕ್ತಿಯನ್ನು ನೋಡಿ ನಕ್ಕು ಬಿಟ್ಟೆ!” ಎಂದರು. ತೋತಾಪುರಿ ಗಂಭೀರವಾಗಿ “ಹೌದು, ನೀನು ಹೇಳುವುದು ಸತ್ಯ. ಕೋಪದಲ್ಲಿ ಎಲ್ಲಾ ಮರೆತುಬಿಟ್ಟೆ. ನಾನು ಕೋಪಗೊಳ್ಳುವುದನ್ನು ಇನ್ನು ಮುಂದೆ ನೀನು ನೋಡುವುದಿಲ್ಲ” ಎಂದನು.

ಒಮ್ಮೆ ಕಗ್ಗತ್ತಲೆಯ ನಟ್ಟಿರುಳಿನಲ್ಲಿ ತೋತಾಪುರಿ ಧುನಿ ಹೊತ್ತಿಸಿ ಇನ್ನೇನು ಧ್ಯಾನಕ್ಕೆ ಕುಳಿತುಕೊಳ್ಳುವುದರಲ್ಲಿದ್ದನು. ಸುತ್ತಲೂ ಕಡಲಾಡುತ್ತಿತ್ತು. ಸಾಂದ್ರ ಶಿಲಾ ನಿಶ್ಯಬ್ದತೆ. ಆಗೊಮ್ಮೆ ಈಗೊಮ್ಮೆ ದೇವಾಲಯದ ಶಿಖರಗಳ ಮೇಲೆ ಕುಳಿತಿದ್ದ ಗೂಬೆಗಳ ಕೂಗು ಆ ನಿಶ್ಯಬ್ದತೆಯನ್ನು ಕದಡಿಯೂ ಅದನ್ನು ಮತ್ತೂ ಹೆಚ್ಚಿಸುತ್ತಿತ್ತು. ಗಾಳಿ ಒಂದಿನಿತೂ ಇರಲಿಲ್ಲ; ಆದರೂ ಯಾವ ಮರದಡಿ ತೋತಾಪುರಿ ಕುಳಿತಿದ್ದನೋ ಆ ಮರದ ಹರೆಗಳು ಅಲ್ಲಾಡತೊಡಗಿದುವು. ತೋತಾಪುರಿ ನೋಡುತ್ತಾನೆ: ದೀರ್ಘಕಾಯದ ಪುರುಷ ಮೂರ್ತಿಯೊಂದು ಮರದಿಂದಿಳಿದು ಬರುತ್ತಿದೆ! ಬಿಟ್ಟ ಕಣ್ಣು ಮುಚ್ಚದೆ ತನ್ನನ್ನೆ ದುರುಗುಟ್ಟಿ ನೋಡುತ್ತಾ ದೃಢಗಮನದ ಹೆಜ್ಜೆಗಳನ್ನಿಡುತ್ತಾ ಆ ಭೀಮಾಕೃತಿ ಧುನಿಯ ಬಳಿಗೆ ಮುಂಬರಿದು ಕುಳಿತುಕೊಂಡಿತು. ತನ್ನಂತೆಯೆ ಅದೂ ಸಂಪೂರ್ಣವಾಗಿ ನಗ್ನವಾಗಿತ್ತು! ತೋತಾಪುರಿ ಒಂದಿನಿತೂ ಅಪ್ರತಿಭನಾಗದೆ ಬಂದ ಅಪರಿಚಿತನನ್ನು ಕುರಿತು “ಯಾರು ನೀನು?” ಎಂದನು. “ನಾನು ಶಿವಗಣಗಳಲ್ಲೊಬ್ಬ ಭೈರವ! ಈ ಮರದಲ್ಲಿ ವಾಸಿಸುತ್ತಿದ್ದೇನೆ ಈ ಪ್ರದೇಶ ರಕ್ಷಣೆಗಾಗಿ” ಎಂಬ ಉತ್ತರ ಮೊಳಗಿತು. ತೋತಾಪುರಿ ವಿಸ್ಮಯ ಲವಲೇಶವಿಲ್ಲದೆ ದಿಟ್ಟ ಭಂಗಿಯಲ್ಲಿ ‘ಒಳ್ಳೆಯದು. ನೀನೂ ನಾನೂ ಎಲ್ಲಾ ಒಂದೇ – ಒಂದೇ ಬ್ರಹ್ಮದ ಎರಡು ತೋರಿಕೆಗಳು. ಒಟ್ಟಿಗೆ ಧ್ಯಾನಮಾಡೋಣ’ ಎಂದನು. ಆದರೆ ಆ ರೂಪು ಗಟ್ಟಿಯಾಗಿ ನಕ್ಕು ಅಂತರ್ಧಾನವಾಯಿತು! ತೋತಾಪುರಿ ಎಂದಿನಂತೆ ಧ್ಯಾನಕ್ಕೆ ಕುಳಿತನು – ಏನೂ ನಡೆದಿಲ್ಲ ಎಂಬಂತೆ. ಮರುದಿನ ಬೆಳಿಗ್ಗೆ ಶ್ರೀರಾಮಕೃಷ್ಣರು ಅಲ್ಲಿಗೆ ಬಂದಾಗ ರಾತ್ರಿ ನಡೆದುದನ್ನೆಲ್ಲ ಅವರಿಗೆ ಹೇಳಿದನು. ಅವರಿಗೂ ಅದೇನು ಆಶ್ಚರ್ಯದ ಸುದ್ದಿಯಾಗಿರಲಿಲ್ಲ.” ಹೌದು, ಆತ ಭೈರವ ಇಲ್ಲಿಯೇ ವಾಸಿಸುತ್ತಾನೆ. ನಾನೆ ಅವನನ್ನು ಅನೇಕಸಾರಿ ಕಂಡಿದ್ದೇನೆ. ಕೆಲವು ಸಲ ಮುಂದೆ ನಡೆಯಲಿರುವ ಘಟನೆಗಳನ್ನು ನನಗೆ ತಿಳಿಸುತ್ತಾನೆ. ಒಂದು ಸಲ ಮುಂದೆ ನಡೆಯಲಿರುವ ಘಟನೆಗಳನ್ನು ನನಗೆ ತಿಳಿಸುತ್ತಾನೆ. ಒಂದು ಸಲ ಅವನು ಹೇಳಿದ, – ದೇವಾಲಯದ ತೋಟದ ಜಾಗವನ್ನೆಲ್ಲ ಮದ್ದುಗುಂಡಿನ ಉಗ್ರಾಣ ಕಟ್ಟುವುದಕ್ಕಾಗಿ ಇಂಗ್ಲೀಷಿನವರು ಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು. ನನ್ನ ಮನಸ್ಸಿಗೆ ವ್ಯಥೆಯಾಯಿತು. ಇನ್ನು ಮುಂದೆ ನಾನು ಇಲ್ಲಿದ್ದುಕೊಂಡು ತಾಯಿಗೆ ಪೂಜೆ ಸಲ್ಲಿಸುವುದು ತಪ್ಪಿಹೋಗುತ್ತದಲ್ಲಾ ಎಂದು. ಆದರೆ ಮಥುರಬಾಬು ರಾಣಿಯ ಪರವಾಗಿ ಇಂಗ್ಲಿಷರ ವಿರುದ್ಧ ಕೋರ್ಟಿನಲ್ಲಿ ವ್ಯವಹಾರ ಹೂಡಿದನು. ಆಗಲೂ ಮತ್ತೊಮ್ಮೆ ಮರದ ಕೆಳಗೆ ಕೂತಿದ್ದ ಭೈರವ ಕಾಣಿಸಿಕೊಂಡು ಸನ್ನೆಮಾಡಿ ಹೇಳಿದನು, ಇಂಗ್ಲಿಷರಿಗೆ ವಿರದ್ಧವಾಗುತ್ತದೆ. ಕೇಸು, ಅವರಿಗೆ ತೋಟದ ಜಾಗ ದಕ್ಕುವುದಿಲ್ಲ ಎಂದು. ಕಡೆಗೂ ಅವನು ಹೇಳಿದ್ದೇ ನಿಜವಾಯ್ತು.

ಬ್ರಹ್ಮಜ್ಞಾನಿಯಾದ ತೋತಾಪುರಿಯೂ ದಕ್ಷಿಣೇಶ್ವರವನ್ನು ಬಿಟ್ಟು ಹೋಗುವ ಮೊದಲು ಶ್ರೀರಾಮಕೃಷ್ಣರ ಜಗನ್ಮಾತೆಯ ಮಹಾಶಕ್ತಿಯನ್ನು ಒಪ್ಪಿಕೊಂಡು ಮಣಿದು ನಮ್ರತೆಯಿಂದ ಹೋಗಬೇಕಾಯಿತು. ವಂಗದೇಶದ ಹವಕ್ಕೆ ಪಂಜಾಬಿಯಾದ ಆತನ ವಜ್ರದೇಹವೂ ಶಿಥಿಲವಾಯಿತು. ಆತನು ಹಿಂದೆ ಎಂದೂ ರೋಗಗ್ರಸ್ತನಾಗಿರಲಿಲ್ಲ. ಆತನ ಧೀರಗತಿಗೆ ಯಾವ ಅಡರೂ ಅಡ್ಡ ಬಂದಿರಲಿಲ್ಲ. ಜಗದಂಬೆಯ ಕೃಪೆಯಿಂದ ಹಾದಿ ಸರಾಗವಾಗಿತ್ತು. ಆದರೆ ಆತನು ಜಗದಂಬೆಯ ಕೃಪೆಯನ್ನು ಲಕ್ಷ್ಯಕ್ಕೆ ತಂದುಕೊಂಡಿರಲಿಲ್ಲ. ಎಲ್ಲವನ್ನೂ ಸ್ವಪ್ರಯತ್ನದಿಂದಲೆ ಸಾಧಿಸಿದೆನೆಂದು ತಿಳಿದಿದ್ದನು. ಬ್ರಹ್ಮಜ್ಞಾನಿಗೆ ಪರ್ವತವೂ ಹಾದಿಬಿಡುವುದೆಂದು ಆತನ ಭಾವನೆಯಾಗಿತ್ತು. ಜ್ಞಾನಗರ್ವಿಷ್ಠನಿಗೆ ಬುದ್ಧಿಗಲಿಸಲೋ ಎಂಬಂತೆ ತೋತಾಪುರಿಗೆ ಆಮಶಂಕೆ ಹಿಡಿಯಿತು. ಹಗಲಿರುಳೂ ಯಾತನೆ ಅತಿ ತೀವ್ರತರವಾಯಿತು. ಆತನ ಮನಸ್ಸು ಬ್ರಹ್ಮಧ್ಯಾನದಿಂದ ಶರೀರದ ಚಿಂತೆಗೆ ಇಳಿಯಿತು. ಏನು ಔಷಧಿ ಮಾಡಿದರೂ ಗುಣವಾಗಲಿಲ್ಲ. ದೇಹಪ್ರಜ್ಞೆಯಿಂದ ಮನಸ್ಸನ್ನು ಜಾರಿಸಿ ನಿರ್ವಿಕಲ್ಪ ಸಮಾಧಿಯಲ್ಲಿಡಲು ಸಾಹಸ ಮಾಡಿದನು. ಆಗಲಿಲ್ಲ! ಕಡೆಗೆ, ಈ ದರಿದ್ರ ದೇಹದಿಂದಲ್ಲವೆ ನನ್ನ ಮುಕ್ತಾತ್ಮವೂ ಮಾಯೆಗೆ ಶರಣಾಗಬೇಕಾಯಿತು, ಎಂದು ಅಲೋಚಿಸಿ, ದೇಹತ್ಯಾಗಮಾಡಲು ಒಂದು ರಾತ್ರಿ ಯಾರಿಗೂ ತಿಳಿಯದಂತೆ ಗಂಗೆಗೆ ಇಳಿದನು! ಎಷ್ಟು ದೂರ ಹೋದರೂ ನೀರು ಅವನು ಮುಳುಗುವಷ್ಟು ಇರಲಿಲ್ಲ! ಇದೇನು! ತೋತಾಪುರಿ ವಿಸ್ಮಿತನಾದನು. ಇರುಳಿನಲ್ಲಿ ಗಂಗೆ ಬತ್ತುವುದೆ? ಅಥವಾ ಇಂದ್ರಜಾಲವೋ? ಹೋಗುತ್ತ ಹೋಗುತ್ತ ಆಚೆಯ ದಡವೂ ಬಳಿಸಾರಿತು. ಅಯ್ಯೋ ತೋತಾಪುರಿಯನ್ನು ಮುಳುಗಿಸುವಷ್ಟು ನೀರೂ ಇಲ್ಲವೆ ಹಿಮಾಲಯದಿಂದ ಹುಟ್ಟುವ ಗಂಗೆಯಲ್ಲಿ? ಬ್ರಹ್ಮಜ್ಞಾನಿ “ಇದೇನು, ಮಾಯಾಲೀಲೆ!” ಎಂದುಕೊಂಡನು. ಜ್ಞಾನಸೂರ್ಯನ ತಾಪದಿಂದ ಒಣಗಿಹೋಗಿದ್ದ ಆತನ ಹೃದಯಸರೋವರದಲ್ಲಿ ಭಕ್ತಿಜಲ ಹಠಾತ್ತಾಗಿ ಚಿಮ್ಮಿತು. ನೋಡುತ್ತಾನೆ, ಎಲ್ಲೆಲ್ಲಿಯೂ ಜಗನ್ಮಾತೆ! ನೆಲವೂ ಆಕೆ. ಜಲವೂ ಆಕೆ. ದೇಹವೂ ಆಕೆ; ಮನಸ್ಸೂ ಆಕೆ, ಸುಖವೂ ದುಃಖವೂ ಜ್ಞಾನವೂ ಅಜ್ಞಾನವೂ ಮೃತವೂ ಅಮೃತವೂ ಎಲ್ಲವೂ ಆಕೆ. ನೋಡಿದರೆ ಆಕೆ; ಕೇಳಿದರೆ ಆಕೆ; ಅಲೋಚಿಸಿದರೆ ಆಕೆ; ಅನುಭವವೆಲ್ಲವೂ ಆಕೆ. ಸತ್ತನ್ನು ಅಸತ್ತಾಗಿ ಮಾಡುವಳಾಕೆ; ಅಸತ್ತನ್ನು ಸತ್ತಾಗಿ ಮಾಡುವಳಾಕೆ. ದೇಹಬದ್ಧವಾದ ಜೀವವು ಆಕೆಯ ಇಚ್ಛೆಯಿಲ್ಲದೆ ಯಾವ ಎಲ್ಲೆಯನ್ನೂ ಮೀರಲಾರದು. ಸಾಯಲು ಕೂಡ ತೋತಾಪುರಿ ಸ್ವತಂತ್ರನಲ್ಲ! ಹಾ ಮತ್ತೆ ಇದೇನು! ಸಗುಣಾತೀತವಾದ ನಿರ್ಗುಣ ಬ್ರಹ್ಮವೂ ಆಕೆಯೆ! ಯಾವುದನ್ನು ನಿರ್ಗುಣಬ್ರಹ್ಮವೆಂದು ತನ್ನ ಜೀವಮಾನದಲ್ಲೆಲ್ಲ ಅರ್ಚಿಸುತ್ತಿದ್ದನೋ ಅದೂ ಆಕೆಯೇ! ಬ್ರಹ್ಮವೇ ಶಕ್ತಿ, ಸತ್ಯವೇ ಮಾಯೆ! ಬ್ರಹ್ಮ ಮತ್ತು ಶಕ್ತಿ ಎರಡೂ ಒಂದೇ ಸತ್ಯದ ತೋರಿಕೆಗಳು! ಎರಡೂ ಒಂದೇ!