ವಿವಾಹವಾದ ಮೇಲೆ ಪರಮಹಂಸರು ಸುಮಾರು ಒಂದೂವರೆ ವರ್ಷದವರೆಗೆ ತಾಯಿಯೊಡನೆ ಇದ್ದರು. ಚಂದ್ರಾದೇವಿ ಮಗನು ಸಂಪೂರ್ಣವಾಗಿ ಗುಣಹೊಂದುವ ತನಕ ಆತನನ್ನು ದಕ್ಷಣೇಶ್ವರಕ್ಕೆ ಹೋಗಗೊಡಲಿಲ್ಲ..

ಇದೇ ಸಮಯದಲ್ಲಿ ಶ್ರೀರಾಮಕೃಷ್ಣರ ಮೃದುಹಾಸ್ಯಶೀಲವನ್ನು ವ್ಯಕ್ತಿಗೊಳಿಸುವ ಒಂದು ಸಂಗತಿ ಜರುಗಿತು. ಹೊಸ ಸೊಸೆಯ ಸಿಂಗಾರಕ್ಕಾಗಿ ಚಂದ್ರಮಣಿ ದೇವಿ ಕೆಲವು ಆಭರಣಗಳನ್ನು ನೆರೆಯ ಸಾಹುಕಾರನಿಂದ ಎರವಲಾಗಿ ತಂದಿದ್ದಳು. ಕೆಲವು ದಿನಗಳಾದ ಮೇಲೆ ನಗಗಳನ್ನು ಹಿಂದಕ್ಕೆ ಕೊಡಬೇಕಾಗಿ ಬರಲು, ಅತ್ತೆ ಸೊಸೆಯನ್ನು ಹೇಗೆ ಕೇಳುವುದೆಂದು ಚಿಂತಿಸತೊಡಗಿದಳು. ಏಕೆಂದರೆ, ಶಾರದಾ ಮಣಿದೇವಿ ಆಭರಣಗಳನ್ನೆಲ್ಲ ತನ್ನವೆಂದೇ ಭಾವಿಸಿದ್ದಳು. ಅದನ್ನು ತಿಳಿದ ಶ್ರೀರಾಮಕೃಷ್ಣರು ತಾನೇ ಅವುಗಳನ್ನು ಈಸಿಕೊಡುವುದಾಗಿ ಹೇಳಿದರು. ಐದು ವರ್ಷದ ಹುಡುಗಿ; ಕೇಳಿದರೆ ಕೊಡುವಂತಿರಲಿಲ್ಲ. ಆದ್ದರಿಂದ ರಾತ್ರಿ ಆಕೆ ಮಲಗಿದ್ದಾಗ ಪರಮಹಂಸರೇ ನಗಗಗಳನ್ನೆಲ್ಲಾ ಹೆಂಡತಿಗೆ ತಿಳಿಯದಂತೆ ಕಳಚಿ ತಾಯಿಗೆ ಕೊಟ್ಟರು! ಹುಡುಗಿ ಎಚ್ಚರವಾದ ಮೇಲೆ ಮೈಮೇಲೆ ನಗಗಳಿಲ್ಲದಿರುವುದನ್ನು ನೋಡಿಕೊಂಡು ಅತ್ತೆಯ ಮುಇಂದೆ ಅತ್ತಳು. ಚಂದ್ರಾದೇವಿ ಸೊಸೆಯನ್ನು ತೋಳುಗಳಿಂದ ಬಿಗಿದಪ್ಪಿ ಮುದ್ದಿಸಿ ಸಂತೈಸುತ್ತ “ಅಳಬೇಡಮ್ಮ,, ಗದಾಧರ ನಿನಗೆ ಅವುಗಳಿಗಿಂತ ಉತ್ತಮವಾದ ಆಭರಣಗಳನ್ನು ತಂದುಕೊಡುತ್ತಾನೆ!” ಎಂದು ಕಂಬನಿಗರೆದಳು. ಆ ದಿನವೇ ಅಲ್ಲಿಗೆ ಬಂದ ಹುಡುಗಿಯ ಚಿಕ್ಕಪ್ಪನು ವಿಷಯವನ್ನೆಲ್ಲ ತಿಳಿದು ಬಹಳವಾಗಿ ಕೋಪಿಸಿಕೊಂಡು ಅದೇ ದಿನವೇ ಶಾರದಾಕಮಣಿದೇವಿಯನ್ನು ಜಯರಾಂಬಾಟಿಗೆ ಕರೆದುಕೊಂಡು ಹೋದನು. ಚಂದ್ರಾದೇವಿಗೆ ಅತಿ ದಾರುಣ ದುಃಖವಾಯಿತು. ಆದರೆ ಶ್ರೀರಾಮಕೃಷ್ಣರು ತಾಯಿಯ ಬಳಿಗೆ ಬಂದು “ಬಿಡಮ್ಮಾ, ಅವರು ಈಗ ಏನು ಹೇಳಿದರೇನು? ಏನು ಮಾಡಿದರೇನು? ಆದ ಮದುವೆಯನ್ನು ತಪ್ಪಿಸಲಾರರಷ್ಟೆ?” ಎಂದು ತಮಾಷೆ ಮಾಡಿದರಂತೆ!

ಹುಟ್ಟಿದ ಹಳ್ಳಿಯಲ್ಲಿ ಹೆತ್ತತಾಯಿಯ ಸಾನ್ನಿಧ್ಯದಲ್ಲಿ ಪರಮಹಂಸರು ಸುಖಿಗಳಾಗಿದ್ದರು. ಆದರೆ ಮನೆಯ ಬಡತನ ಅವರನ್ನು ಒಳಗೊಳಗೆ ನೋಯಿಸುತ್ತಿತ್ತು. ಮುದುಕಲಿಯಾದ ತಾಯಿಯ ಕಷ್ಟವನ್ನು ನೋಡಲಾರದೆ ಮೇಲೆ ಮೇಲೆ ಹಸನ್ಮುಖಿಗಳಾಗಿ ಮಾತೆಯನ್ನು ವಿನೋದದಿಂದ ಸಂತವಿಡಲು ಯತ್ನಿಸುತ್ತಿದ್ದರು. ಕಡೆಗೆ ಮನೆಯವರಿಗೆ ಏನಾದರೂ ಒಂದೆರಡು ಕಾಸಿನ ಸಹಾಯವಾಗುವುದೆಂದು ಆಲೋಚಿಸಿ ತಾಯಿಯ ಪಾವನ ಪಾದಗಳಿಗೆ ನಮಸ್ಕರಿಸಿ ಬೀಳ್ಕೊಂಡು ದಕ್ಷಿಣೇಶ್ವರಕ್ಕೆ ಹಿಂದಿರುಗಿ ಬಂದರು.

ಆದರೆ ಮಹಾಕಾಳಿ ಭಕ್ತನ ಆಗಮನವನ್ನು ಕಾದುಕೊಂಡೇ ಇದ್ದಳು. ಗುಡಿಯ ಹೊಸ್ತಿಲನ್ನು ದಾಟಿದುದೆ ತಡ ಹಾರಿ ಬಂದು ಹಿಡಿದುಕೊಂಡೇ ಬಿಟ್ಟಳು. ಪುನಃ ಹಿಂದಿನ ದಿವ್ಯೋನ್ಮಾದ ಎಂದಿಗಿಂತಲೂ ಅತಿಶಯವಾಗಿ ಕಾಣಿಸಿಕೊಂಡಿತು. ಆ ಹುಚ್ಚಿನ ಹೊಳೆಯಲ್ಲಿ ಹೆಂಡತಿ, ತಾಯಿ, ಮನೆ, ಸಂಪಾದನೆ ಎಲ್ಲವೂ ಕೊಚ್ಚಿಕೊಂಡು ಹೋದುವು. ಪೂರ್ವದ ಚಿಹ್ನೆಗಳೆಲ್ಲವೂ ತಲೆದೋರಿದುವು. ದಿವಾ ರಾತ್ರಿಗಳಲ್ಲಿಯೂ ಧ್ಯಾನ; ವಕ್ಷಸ್ಥಲ ಅರುಣಜಲ ಪ್ಲಾವಿತವಾಯಿತು; ನಿದ್ದೆ ತೊಲಗಿತು. ಪರಮಹಂಸರು ಪ್ರಜ್ವಲಿಸುವ ಜ್ವಾಲಾಮಯವಾದ ಸಜೀವ ಚಿತೆಯಂತಾದರು. ಎಲ್ಲದರಲ್ಲಿಯೂ ಎಲ್ಲ ಕಾಲದಲ್ಲಿಯೂ ಜಗನ್ಮಾತೆಯ ಅವಿರಳ ದರ್ಶನಕ್ಕಾಗಿ ತೀವ್ರ ವ್ಯಾಕುಲಗ್ರಸ್ತರಾದರು. ಮಥುರನಾಥನೇ ಮೊದಲಾದವರು ಉದ್ವಿಗ್ನರಾಗಿ ಪ್ರಸಿದ್ಧ ವೈದ್ಯನೊಬ್ಬನನ್ನು ಕರೆತಂದು ಪರೀಕ್ಷೆ ಮಾಡಿಸಿದರು. ಆತನು “ಇದು ಬರಿಯ ದೈಹಿಕವ್ಯಾಧಿಯಲ್ಲ. ಚಿಹ್ನೆಗಳೆಲ್ಲವೂ ದಿವ್ಯೋನ್ಮಾದವನ್ನೆ ಸೂಚಿಸುತ್ತವೆ. ಇದು ಯೋಗಾಭ್ಯಾಸದ ಪ್ರತಿಫಲವಾಗಿ ಬಂದಿರುವುದರಿಂದ ಔಷಧಿಗಳಿಂದ ಗುಣವಾಗದು” ಎಂದು ಹೇಳಿದನು. ಆದರೂ ಮಥುರನು ಮದ್ದು ಕೊಡಿಸಿದನು. ವ್ಯಾಧಿ ಪ್ರಬಲತರವಾಯಿತು.

ಅಧ್ಯಾತ್ಮಸಾಮ್ರಾಜ್ಯದ ಜೈತ್ರಯಾತ್ರಿಕನು ಅತ್ಯಂತ ವಿಷಮ ಸನ್ನವೇಶದಲ್ಲಿ ಸಿಲುಕಿದನು. ಆತನ ಆತ್ಮ ನಡುಗಡಲಿನಲ್ಲಿ ಬಿರುಗಾಳಿಗೆ ಸಿಲುಕಿದ ನಾವೆಯಂತೆ ನೊರೆಗೆರೆದು ಮೊರೆಯುವ ಹೆದ್ದೆರೆಗಳಲ್ಲಿ ಸುತ್ತಿ ಸುತ್ತಿ ತತ್ತರಿಸಿತು. ಚಿತ್ರವಿಚಿತ್ರವಾದ ದರ್ಶನಗಳು ಒಂದರಮೇಲೊಂದು ಬರತೊಡಗಿದವು. ಅವುಗಳನ್ನು ಕುರಿತು ಪರಮಹಂಸರೆ ತರುವಾಯ ಹೀಗೆ ಹೇಳಿದ್ದಾರೆ: “ಒಂದು ದರ್ಶನವಾಗುವುದೆ ತಡ ಮತ್ತೊಂದು ಬರುತ್ತಿತ್ತು. ಆ ಜಂಝಾವಾತದಲ್ಲಿ ನನ್ನ ಜನಿವಾರ ಎಲ್ಲಿಯೋ ಹಾರಿಯೋಯಿತು. ಬಟ್ಟೆ ಕೂಡ ಸೊಂಟದ ಮೇಲಿರುತ್ತಿರಲಿಲ್ಲ. ಕೆಲವು ಸಾರಿ ಆಕಾಶಪಾತಾಳಗಳನ್ನು ಮುಟ್ಟುವುವೋ ಎಂಬಂತೆ ದವಡೆಗಳನದನು ವಿಸ್ತರಿಸಿ” ಅಮ್ಮಾ” ಎಂದು ಒರಲುತ್ತಿದ್ದೆ. ಬೆಸ್ತನು ಬಲೆಯೆಳೆದು ಮೀನು ಹಿಡಿಯುವಂತೆ ಆಕೆಯನ್ನು ಆಕ್ರಮಿಸಲು ಆಲೋಚಿಸುತ್ತಿದ್ದೆ. ಅಯ್ಯೋ, ಎಂತಹ ವಿಷಮ ಸ್ಥಿತಿಯಿಂದ ದಾಟಿ ಬಂದಿದ್ದೇನೆ! ಎಲ್ಲರೂ ನನಗೆ ಹುಚ್ಚು ಹಿಡಿದಿದೆ ಎಂದು ನಿರ್ಧರಿಸಿಬಿಟ್ಟರು. ಹೊರಗಡೆಯ ಒಂದೊಂದು ವಸ್ತುವೂ ನನ್ನಾತ್ಮದಲ್ಲಿ ಒಂದೊಂದು ತೆರನಾದ ಭಾವತರಂಗಗಳನ್ನು ಎಬ್ಬಿಸುತ್ತಿತ್ತು. ಬೀದಿಯಲ್ಲಿ ಹೋಗುವ ಹುಡುಗಿ ನನ್ನ ಕಣ್ಣಿಗೆ ಜಯಹೊಂದಿದ ಶ್ರೀರಾಮಚಂದ್ರನ್ನು ಎದುರುಗೊಳ್ಳಲು ಹೋಗುವ ಸೀತಾ ಮಾತೆಯಂತೆ ತೋರಿದಳು. ತ್ರಿಭಂಗಿಯಿಂದ ಮರವನ್ನು ಒರಗಿನಿಂತ ಆಂಗ್ಲೇಯ ಬಾಲಕನೊಬ್ಬನು ಶ್ರೀ ಕೃಷ್ಣನಂತೆ ತೋರಿಬಂದುದರಿಂದ ಧ್ಯಾನಮಗ್ನನಾಗಿಬಿಟ್ಟೆನು. ಕೆಲವು ಸಾರಿ ಭುಜದ ಮೇಲೆ ಬಿದಿರುಬೊಂಬನ್ನು ಹೊತ್ತುಕೊಂಡು ದೇವಾಲಯದ ಸುತ್ತಲೂ ತಿರುಗುತ್ತಿದ್ದೆ. ಕೆಲವು ಸಾರಿ ನಾಯಿಯ ಮೇಲೆ ಕುಳಿತುಕೊಂಡು. ಅದಕ್ಕಷ್ಟು ತಿಂಡಿ ತಿನ್ನಿಸಿ ಉಳಿದ ಎಂಜಲನ್ನು ನಾನೇ ತಿಂದು ಬಿಡುತ್ತಿದ್ದೆ. ಜಾತಿಗೀತಿಯೊಂದೂ ನನ್ನ ಮನಸ್ಸಿನಲ್ಲಿರಲಿಲ್ಲ. ಒಂದು ಸಾರಿ ಕನಿಷ್ಟಜಾತಿಯವನೊಬ್ಬನು ತನ್ನ ಮನೆಯಿಂದ ಸ್ವಲ್ಪ ಪಲ್ಯವನ್ನು ತಂದು ಕೊಟ್ಟನು. ಅದನ್ನು ಬಹಳ ರುಚಿಯೆಂದು ತಿಂದೆನು. ಪಂಚವಟಿಯಲ್ಲಿ ನಿಷ್ಪಂದನಾಗಿ ನಿಗೂಢ ಧ್ಯಾನದಲ್ಲಿ ಕುಳಿತು ಬಾಹ್ಯವನ್ನೆ ಮರೆಯುತ್ತಿದ್ದೆನು. ಆ ಸಮಯದಲ್ಲಿ ತೈಲೋಪಚಾರವಿಲ್ಲದೆ ನನ್ನ ತಲೆಕೂದಲು ಗಂಟುಗಂಟಾಗಿ ಶಿವನ ಜಡೆಯಾಗಿತ್ತು. ಹಕ್ಕಿಗಳು ತಲೆಯ ಮೇಲೆ ಕುಳಿತುಕೊಂಡು ಪೂಜಾಸಮಯದಲ್ಲಿ ಬಿದ್ದಿರುತ್ತಿದ್ದ ಅಕ್ಕಿಯ ಕಾಳುಗಳನ್ನು ಕುಟುಕಿ ತಿನ್ನುತ್ತಿದ್ದುವು. ಹಾವುಗಳು ನನ್ನ ನಿಷ್ಪಂದ ದೇಹದ ಮೇಲೆ ಹರಿದಾಡುತ್ತಿದ್ದುವು. ನನಗಾಗಲಿ ಅವುಗಳಿಗಾಗಲಿ ನಿಜಾಂಶ ತಿಳಿಯುತ್ತಿರಲಿಲ್ಲ. ಅಯ್ಯೋ. ಎಚ್ಚತ್ತು ಕಣ್ಣು ತೆರೆದಿರುವಾಗಲೆ ಏನೇನೋ ದರ್ಶನಗಳು ಸಾಗುತ್ತಿದ್ದುವು. ಒಂದು ದಿನ ನಾನು ಧ್ಯಾನಕ್ಕೆ ಕುಳಿತಿದ್ದಾಗ ನನ್ನ ದೇಹದಿಂದಲೆ ತೇಜಸ್ವಿಯಾದ ಸಂನ್ಯಾಸಿಯೊಬ್ಬನು ತ್ರಿಶೂಲಧಾರಿಯಾಗಿ ಹೊರಗೆ ಬಂದು ಏಕಾಗ್ರತೆಯಿಂದ ಧ್ಯಾನ ಮಾಡುವಂತೆ ನನಗೆ ಆಜ್ಞೆ ಮಾಡಿದನು. ಹಾಗೆ ಮಾಡದಿದ್ದರೆ ತ್ರಿಶೂಲದಿಮದ ತಿವಿಯುವೆನೆಂದೂ ಹೇಳಿದನು. ಅಷ್ಟರಲ್ಲಿ ಕರಿಯದೇಹದ ಪಾಪಪುರುಷನು ನನ್ನ ದೇಹದಿಮದ ಹೊರಕ್ಕೆ ಹಾರಿದನು. ತ್ರಿಶೂಲಧಾರಿಯಾದ ಸಂನ್ಯಾಸಿ ಅವನನ್ನು ಅಲ್ಲಿಯೆ ತಿವಿದು ಕೊಂದುಬಿಟ್ಟನು… ಸಾಧಾರಣ ಮನುಷ್ಯನ ದೇಹ ನನಗೆ ಬಂದ ದಿವ್ಯೋನ್ಯಾದದಲ್ಲಿ ತಿಲಮಾತ್ರವನ್ನಾದರೂ ತಾಳಲಾರದು. ಆ ಶಕ್ತಿಯ ಸ್ವಲ್ಪ ಪ್ರವಾಹವೆ ಸಾಕು ಆತನ ದೇಹವನ್ನು ಪುಡಿ ಪುಡಿ ಮಾಡಿಬಿಡುವುದಕ್ಕೆ ಜಗದಂಬೆಯ ಕೃಪೆಯಿಂದ ನನ್ನ ದೇಹ ಬಾಳಿತು. ಅಲ್ಲದೆ ನನಗಾಗ ದೇಹದ ಭಾವನೆಯೆ ಇರಲಿಲ್ಲ”…..

ಇದೇ ಕಾಲದಲ್ಲಿ ಇನ್ನೊಂದು ಅದ್ಭುತ ನಡೆಯಿತು. ಪರಮಹಂಸರು ಒಂದು ದಿನ ತಮ್ಮ ಕೊಠಡಿಗೆ ಪೂರ್ವದಿಕ್ಕಿನಲ್ಲಿದ್ದ ವರಾಂಡದಲ್ಲಿ ಶತಪಥ ತಿರುಗುತ್ತಿದ್ದರು. ಮಥುರನಾಥನು ಅಲ್ಲಿಗೆ ಎದುರಾಗಿದ್ದ ತನ್ನ ಮಹಲಿನಲ್ಲಿ ಒಬ್ಬನೆ ಕುಳಿತು ಅವರನ್ನೆ ನೋಡುತ್ತಿದ್ದನು. ಶ್ರೀರಾಮಕೃಷ್ಣರಿಗೆ ಅದು ತಿಳಿದಿರಲಿಲ್ಲ. ಹಠಾತ್ತಾಗಿ ಮಥುರನು ಓಡಿಬಂದು ಪರಮಹಂಸರ ಮುಂದೆ ದಿಂಡುರುಳಿ ಅಡ್ಡ ಬಿದ್ದು ಕಾಲುಗಳನ್ನು ಹಿಡಿದುಕೊಂಡು ಶಿಶುವಿನಂತೆ ಅಳತೊಡಗಿದನು. ಶ್ರೀರಾಮಕೃಷ್ಣರು “ಇದೇನಯ್ಯಾ ಇದು? ನೀನು ರಾಣಿಯ ಅಳಿಯ! ನೀನು ಮಾಡುತ್ತಿರುವುದನ್ನು ನೋಡಿದರೆ ಜನರೇನೆಂದಾರು? ಶಾಂತನಾಗು; ಮೇಲೇಳು!” ಎಂದರು. ಮಥುರನು ಕೈ ಮುಗಿದುಕೊಂಡು ಹೇಳಿದನು; “ನೀವು ಶತಪಥ ತಿರುಗುತ್ತಿದ್ದಾಗ ಒಂದು ಸಾರಿ ಮಹಾದೇವನಂತೆಯೂ ಒಂದು ಸಾರಿ ಮಹಾಮಯೆಯಂತೆಯೂ ತೋರಿದಿರಿ! ನಾನು ಮೊದಲು ನೋಡಿದಾಗ ಏನೋ ನನ್ನ ಭ್ರಾಂತಿಯಿರಬೇಕೆಂದು ಊಹಿಸಿದೆ. ಕಣ್ಣುಜ್ಜಿಕೊಂಡು ಮರಳಿ ನೋಡಿದೆ. ಎಷ್ಟು ನೋಡಿದರೂ ಹಾಗೆಯೆ ತೋರಿತು,” ಹೀಗೆಂದು ಜಮೀನುದಾರನು ಭಾವಾವೇಗದಿಂದ ಕಂಬನಿಗರೆಯ ತೊಡಗಿದನು. ಪರಮಹಂಸರು “ಏನೋ? ನನಗದೊಂದೂ ತಿಳಿಯದು.” ಎಂದು ಶಾಂತವಾಣಿಯಿಂದ ನುಡಿದರು. ಈ ಸಂಗತಿ ನಡೆದ ಮೇಲೆ ಶ್ರೀರಾಮಕೃಷ್ಣರಲ್ಲಿದ್ದ ಮಥುರನ ಭಕ್ತಿ ಇಮ್ಮಡಿಯಾಯಿತು. ಕ್ರಿ. ಶ. ೧೮೬೧ ರಲ್ಲಿ ರಾಣಿ ರಾಸಮಣಿ ಸ್ವರ್ಗಸ್ಥಳಾದ ಮೇಲೆ ಮಥುರನು ತನ್ನ ಜೀವಮಾನವನ್ನೂ ಐಶ್ವರ್ಯವನ್ನೂ ಪರಮಹಂಸರ ಸೇವೆಯಲ್ಲಿ ಕೃಪಣತೆಯಿಲ್ಲದೆ ಸದ್ವಿನಿಯೋಗಮಾಡಿ ಕೃತಾರ್ಥನಾದನು.

ಎರಡು ವರ್ಷಗಳು ಕಳೆದುವು.

ಶ್ರೀರಾಮಕೃಷ್ಣರು ಏಕಾಂಗಸಾಹಸದಿಂದ ಆತ್ಮದ ಅನಂತ ವಿಸ್ತಾರವಾದ ಅಪರಿಚಿತ ಅರಣ್ಯಗಳಲ್ಲಿ ಮಾರ್ಗದರ್ಶಕರ ನೆರವನ್ನು ಹಾರೈಸದೆ ನುಗ್ಗುತ್ತಿದ್ದರು. ಆದರೆ ತಾವು ಹೋಗುತ್ತಿದ್ದ ಹಾದಿ ಸರಿಯೋ ತಪ್ಪೋ ಎಂದು ಹೇಳುವವರಿಲ್ಲದೆ ಕಾತರರಾಗಿದ್ದರು. ಕಂಡ ಕಂಡವರೆಲ್ಲರೂ ಹುಚ್ಚು ಹಿಡಿದಿದೆ ಎಂದು ಹೇಳುತ್ತಿದ್ದುದನ್ನು ಕೇಳಿ, ಅವರಿಗೂ ಕೆಲವು ಸಾರಿ ತಮ್ಮ ಯಾತ್ರೆಯ ವಿಚಾರದಲ್ಲಿ ಸಂದೇಹ ಉಂಟಾಗುತ್ತಿತ್ತು. ಹೀಗೆ ಶ್ರದ್ದೆ, ಸಂದೇಹ, ಉತ್ಸಾಹ, ನಿರಾಶೆ, ದರ್ಶನ, ಸಮಾಧಿಗಳ ಅವರ್ತಗರ್ತದಲ್ಲಿ ಸಿಕ್ಕಿ ಜಗನ್ಮಾತೆಯೆಂಬ ನೌಕಾಸ್ತಂಭವನ್ನು ಮಾತ್ರ ಕೈಬಿಡದೆ ಬಲವಾಗಿ ಹಿಡಿದಿರುತ್ತಿರಲು ಅನಿರೀಕ್ಷಿತವಾದ ದಿಕ್ಕಿನಿಂದ ಸಹಾಯ ಬಂದಿತು.

ಒಂದು ದಿನ ಪ್ರಭಾತದಲ್ಲಿ ಶ್ರೀರಾಮಕೃಷ್ಣರು ಜಗನ್ಮಾತೆಯ ಆರಾಧನೆಗೆಂದು ದೇವಸ್ಥಾನದ ಹೂದೋಟದಲ್ಲಿ ಹೂಕೊಯ್ಯತ್ತಿದ್ದರು. ವಿಸ್ತೃತ ಗಂಭೀರ ಗಂಗಾ ಸ್ರೋತ್ರದಲ್ಲಿ ಸಣ್ಣ ದೋಣಿಯೊಂದು ತೇಲಿಬಂದು ಸೋಪಾನ ಘಟ್ಟದಲ್ಲಿ ನಿಂತಿತು. ಆ ದೋಣಿಯಿಂದ ಸ್ತ್ರೀಮೂರ್ತಿಯೊಂದು ಕೆಳಗಿಳಿಯಿತು. ಆಕೆಯ ಕೈಯಲ್ಲಿ ಒಂದು ಪುಸ್ತಕದ ಗಂಟಿತ್ತು. ಸುಮಾರು ಮೂವತ್ವೈದು ನಾಲ್ವತ್ತು ವಯಸ್ಸಿನವಳಾಗಿದ್ದರೂ ಇನ್ನೂ ಕಿರಿಯವಳಂತೆ ತೋರುತ್ತಿದ್ದಳು. ಸುಂದರಿಯಾದ ಆಕೆಯ ಕೇಶಪಾಶಗಳು ಮುಡಿಗಟಗಟ್ಟದಿದ್ದುದರಿಂದ ಬೆನ್ನಿನ ಮೇಲೆಯೂ ಭುಜದ ಮೇಲೆಯೂ ನೀಳವಾಗಿಜೋಲಾಡುತ್ತ ಗಾಳಿಗೆ ಅತ್ತಿತ್ತ ಒಲೆದಾಡುತ್ತಿದ್ದವು. ಉಟ್ಟಿದ್ದ ಗೈರಿಕ ವಸನದಿಂದ ಆಕೆ ಸಂನ್ಯಾಸಿನಿ ಎಂದು ಗೊತ್ತಾಯಿತು. ತೇಜಸ್ವಿನಿಯಾಗಿದ್ದ ಆಕೆಯ ಪ್ರಥಮ ಸಂದರ್ಶನದಿಂದಲೆ ಪರಮಹಂಸರು ಆಕರ್ಷಿತರಾದರು. ಹಾಗೆಯೇ ಹೂಕೊಯ್ಯವುದನ್ನು ನಿಲ್ಲಿಸಿ ತಮ್ಮ ಕೊಠಡಿಗೆ ಹೋಗಿ ಹೃದಯನನ್ನು ಕುರಿತು ಆಕೆಯನ್ನು ಕರೆದುಕೊಂಡು ಬಾ ಎಂದು ಹೇಳಿದರು.” ಹೆಂಗಸು, ಅಪರಿಚಿತಳು, ಕರೆದರೆ ಬರುತ್ತಾಳೆಯೆ?” ಎಂದು ಹೃದಯನು ಹೇಳಿದ ಮಾತಿಗೆ ಪರಮಹಂಸರು ” ಹೋಗು, ನನ್ನ ಹೆಸರು ಹೇಳಿ ನಾನು ಕರೆದೆ ಎಂದು ಹೇಳು” ಎಂದರು. ಹೃದಯನಿ ಹೋಗಿ ಕರೆದನು. ಆ ಸ್ತ್ರೀಮೂರ್ತಿ ಏನೊಂದು ಮಾತನ್ನೂ ಹೇಳದೆ ಪರಮಹಂಸರಿದ್ದೆಡೆಗೆ ಬಂದಿತು.

ಆಕೆಯ ಹೆಸರು ಭೈರವೀ ಬ್ರಾಹ್ಮಣಿ.

ಶ್ರೀರಾಮಕೃಷ್ಣರನ್ನು ನೋಡಿದೊಡನೆಯೆ ಭೈರವಿ ಗಳದಶ್ರೂಲೋಷನೆಯಾಗಿ ವಾತ್ಸಲ್ಯಪೂರ್ಣವಾದ ಮೃದುವಾಣಿಯಿಂದ “ಬಾಬಾ, ನೀನು ಇಲ್ಲಿದ್ದೀಯಾ! ನೀನೆಲ್ಲಿಯೋ ಗಂಗಾತೀರದಲ್ಲಿ ಇರುತ್ತಿರುವೆ ಎಂದು ತಿಳಿದು ಬಹುಕಾಲದಿಂದ ನಿನ್ನನ್ನೆ ಹುಡುಕುತ್ತಿದ್ದೆ. ಅಂತೂ ಕಡೆಗೆ ನಿನ್ನನ್ನು ಕಂಡಹಾಗಾಯ್ತು” ಎಂದಳು.

“ತಾಯಿ, ನಾನು ನಿನಗೆ ಹೇಗೆ ಗೊತ್ತು?” ಎಂದರು ಪರಮಹಂಸರು. ಬ್ರಾಹ್ಮಣಿ “ಜಗನ್ಮಾತೆಯ ಕೃಪೆಯಿಂದ” ಎಂದು ತನ್ನ ವೃತ್ತಾಂತವೆಲ್ಲವನ್ನೂ ಹೇಳಿದಳು.

ಭೈರವೀ ಬ್ರಾಹ್ಮಣಿ ವಂಗಪ್ರಾಂತದ ಯಶೋಹರ ಜಿಲ್ಲೆಯ ಕುಲೀನ ಬ್ರಾಹ್ಮಣ ವಂಶದವಳು. ವೈಷ್ಣವ ಸಂಪ್ರದಾಯಕ್ಕೆ ಸೇರಿದ ಆ ವಿದ್ಯಾವತಿ ಭಕ್ತಿಶಾಸ್ತ್ರಗಳಲ್ಲಿ ಅತಿಶಯವಾದ ಪಾಂಡಿತ್ಯ ಸಂಪಾದನೆ ಮಾಡಿದ್ದಳು. ದೈವಾಂಶಸಂಭೂತ ಮಹಾಪುರುಷನೊಬ್ಬನು ಅವತರಿಸಿದುದು ಆಕೆಯ ಅಂತರ್ದೃಷ್ಟಿಗೆ ಗೋಚರವಾಗಿ, ಆತನಿಗೆ ತನ್ನಿಂದ ಸಲ್ಲಬೇಕಾದ ಸಂದೇಶವನ್ನು ನಿವೇದಿಸಲು ಯಾತ್ರೆ ಹೊರಟಿದ್ದಳು.

ಇದನ್ನೆಲ್ಲ ಎವೆಯಿಕ್ಕದೆ ಆಲಿಸದ ಶ್ರೀರಾಮಕೃಷ್ಣರು ಶಿಶುಸಹಜವಾದ ಸರಳ ಭಾವದಿಂದ ಆಕೆಯ ಮುಂದೆ ತಮ್ಮ ಸಾಧನೆಯ ಇತಿಹಾಸವೆಲ್ಲವನ್ನೂ ವಿಸ್ತರಿಸಿದರು. ಅಲ್ಲದೆ ಜನಗಳೆಲ್ಲ ತಮಗೆ ಹುಚ್ಚು ಹಿಡಿದಿದೆ ಎಂದು ಹೇಳುತ್ತಿದ್ದುದನ್ನು ತಿಳಿಸಿ, ಮತ್ತೆ ಮತ್ತೆ ಉದ್ವೇಗದಿಮದ “ತಾಯಿ ನೀನಾದರೂ ಹೇಳಬಲ್ಲೆಯಾ? ನನಗೆ ನಿಜವಾಗಿಯೂ ಹುಚ್ಚು ಹಿಡಿದಿದೆಯೆ? ನನ್ನ ಸಾಧನೆ ಪ್ರಾರ್ಥನೆಗಳಿಗೆ ಇದೇ ಪ್ರತಿಫಲವೆ?” ಎಂದು ಪ್ರಶ್ನೆ ಮಾಡಿದರು. ಕೇಳಿ ಇಂತೆಂದಳು; “ಬಾಬಾ, ನಿನಗೆ ಹುಚ್ಚು ಎಂದು ಹೇಳುವವರಾರು? ಇದು ಹುಚ್ಚಲ್ಲ. ನೀನಿರುವ ಅವಸ್ಥೆಯನ್ನು ಶಾಸ್ತ್ರಗಳು “ಮಹಾಭಾವ” ಎಂದು ಕರೆಯುತ್ತವೆ. ಈ ದಿವ್ಯಾವಸ್ಥೆಯನ್ನು ಜನಗಳು ತಿಳಿಯಲಾರದೆ, ನಿನಗೆ ಹುಚ್ಚು ಎಂದು ಹೇಳುತ್ತಿದ್ದಾರೆ. ಶ್ರೀರಾಧೆ ಮತ್ತು ಶ್ರೀ ಕೃಷ್ಣ ಚೈತನ್ಯ ಮೊದಲಾದವರಲ್ಲಿ ಈ ಮಹಾಭಾವವಿತ್ತು. ಇದೆಲ್ಲವನ್ನೂ ಭಕ್ತಿಶಾಸ್ತ್ರಗಳು ಹೇಳುತ್ತವೆ. ನನ್ನ ಬಳಿ ಇರುವ ಈ ಗ್ರಂಥಗಳಿಂದ ನಿನಗೆಲ್ಲ ಓದಿ ಹೇಳುತ್ತೇನೆ. ಈಶ್ವರ ಸಾಕ್ಷಾತ್ಕಾರ ಮಾಡುವವರೆಲ್ಲರೂ ಈ ಭಾವವನ್ನು ಅನುಭವಿಸಲೇಬೇಕು.”  ಆಶಾಪೂರ್ಣವಾದ ಈ ಮಾತುಗಳನ್ನು ಕೇಳಿ ಶ್ರೀರಾಮಕೃಷ್ಣರ ಬೇಗುದಿಗೊಂಡ ಎದೆಗೆ ತಣ್ಣೆಲರು ತೀಡಿದಂತಾಯಿತು. ಅವರು ಭೈರವುಯೊಡನೆ ಚಿರಪರಿಚಿತರಂತೆ ವರ್ತಿಸುತ್ತಿದ್ದುದನ್ನು ಕಂಡು ಹೃದಯನು ಬೆರಗಾದನು.

ಭೈರವಿ ದೇವಾಲಯ ಪ್ರದಕ್ಷಿಣೆ ಮಾಡಿ, ಶ್ರೀರಾಮಕೃಷ್ಣರು ಕೊಟ್ಟ ಕಾಳಿಕಾಲಯದ ಪ್ರಸಾದವನ್ನು ಸ್ವೀಕರಿಸಿ ಅಡುಗೆ ಮಾಡಿಕೊಳ್ಳಲು ಪಂಚವಟಿಗೆ ಹೋದಳು. ಪಾಕವೆಲ್ಲ ಪೂರೈಸಿದ ತರುವಾಯ ತನ್ನ ಇಷ್ಟದೇವತೆಯಾದ ರಘುವೀರನ ಮುಂದೆ ನೈವೇದ್ಯಗಳನ್ನು ಇಟ್ಟು ತಾನು ಧ್ಯಾನ ಮಾಡುತ್ತ ಕುಳಿತಳು. ಕಣ್ದೆರೆದು ನೋಡಿದರೆ, ಶ್ರೀರಾಮಕೃಷ್ಣರು ಎದುರಿಗೆ ಕುಳಿತುಕೊಂಡು ನೈವೇದ್ಯವನ್ನೆಲ್ಲ ಮುಕ್ಕುತ್ತಿದ್ದಾರೆ! ಅವರ ಕ್ರಿಯೆಯಲ್ಲಿ ಬಾಹ್ಯಪ್ರಜ್ಞೆ ಇರುವಂತೆ ತೋರುತ್ತಿತಲಿಲ್ಲ. ಬ್ರಾಹ್ಮಣಿಗೆ ಅದನ್ನು ಕಂಡು ಆಶ್ಚರ್ಯವೂ ಆನಂದವೂ ಒಂದರೊಡನೆ ಒಂದು ಸ್ಪರ್ಧೆ ಹೂಡಿದುವು. ಸ್ವಲ್ಪಹೊತ್ತಿನಲ್ಲಿ ಪರಮಹಂಸರು ಫಕ್ಕನೆ ಮೈ ತಿಳಿದವರಾಗಿ ದೀನಸ್ವರದಿಮದ “ತಾಯಿ, ನಾನೇಕೆ ಹೀಗೆ ಮಾಡಿದೆನೊ ನನಗೆ ತಿಳಿಯದು. ಕ್ಷಮಿಸು” ಎಂದರು. ಭೈರವಿ ಶಾಂತವಾಣಿಯಿಂದ “ಬಾಬಾ ನೀನು ಮಾಡಿದ್ದು ಲೇಸಾಯಿತು. ಅದನ್ನು ಮಾಡಿದ್ದು ನಿಜವಾಗಿಯೂ ನೀನಲ್ಲ; ನಿನ್ನಲ್ಲಿರುವಾತನು. ಅವನು ಯಾವಾಗಲೂ ಹೀಗೆಯೆ ಮಾಡುತ್ತಾನೆ. ನಾನು ಧ್ಯಾನಮಾಡುತ್ತಿದ್ದಾಗ ಅದನ್ನು ಮಾಡಿದವರಾರೆಂಬುದನ್ನು ತಿಳಿದುಕೊಂಡೆ. ಇನ್ನು ನನಗೆ ಈ ವಿಗ್ರಹಪೂಜೆಯ ಅವಶ್ಯಕತೆ ಇಲ್ಲ. ನನ್ನ ಇಷ್ಟದೇವತೆ ನನಗೆ ದೊರಕಿದ್ದಾನೆ. ಎಂದು ಹೇಳುತ್ತ ಶ್ರೀರಾಮಕೃಷ್ಣರು ತಿಂದುಬಿಟ್ಟ ನೈವೇದ್ಯವನ್ನೂ ತಾನು ಬಹುಕಾಲದಿಂದ ಆರಾಧಿಸಿದ ರಘುವೀರನ ವಿಗ್ರಹವನ್ನೂ ಗಂಗಾಪ್ರವಾಹದಲ್ಲಿ ವಿಸರ್ಜಿಸಿಬಿಟ್ಟಳು.

ಭೈರವೀ ಬ್ರಾಹ್ಮಣಿ ಮಾತೃಸಹಜವಾದ ವಾತ್ಸಲ್ಯಭಾವದಿಂದ ಶ್ರೀರಾಮಕೃಷ್ಣರಿಗೆ ಮಾರ್ಗದರ್ಶಿನಿಯಾದಳು. ಇದುವರೆಗೆ ಪರಮಹಂಸರು ಮಾರ್ಗದರ್ಶಕರಿಲ್ಲದೆ ತಮ್ಮ ಸ್ವಂತ ಸಾಹಸೋತ್ಸಾಹಗಳಿಂದಲೆ ಆಧ್ಯಾತ್ಮಿಕ ಅನುಭವಗಳ ಮಹಾರಣ್ಯದಲ್ಲಿ ಏಕಾಕಿಯಾಗಿ ತಿರುತಿರುಗಿ ಅನೇಕ ಸತ್ಯಗಳನ್ನು ಮುಟ್ಟಿದ್ದರು. ಆದರೆ ತಮ್ಮ ಸ್ವಾನುಭವದ ಸತ್ಯಗಳಿಗೆ ಪರಾನುಭವದ ಸಾಕ್ಷ್ಯವಿಲ್ಲದೆ ಕೆಲವು ಸಾರಿ ಸಂಶಯ ಪಡುತ್ತಿದ್ದರು. ಭೈರವಿಯ ಶಾಸ್ತ್ರಜ್ಞಾನದ ಪ್ರಾಮಾಣ್ಯವು ದೊರಕಿದ ಮೇಲೆ ಅವರಿಗೆ ಭರವಸೆಯುಂಟಾಯಿತು. ಭೈರವಿ ಪೂರ್ವಕಾಲದ ಮಹಾಭಕ್ತರ ಮತ್ತು ಅವತಾರಗಳ ಚರಿತ್ರೆಗಳನ್ನು ಚೆನ್ನಾಗಿ ಅಧ್ಯಯನ ಮಾಡಿದವಳಾದುದರಿಂದಲೂ  ಭಕ್ತಿಸಾಧಕರ ವಿವಿಧ ಅವಸ್ಥೆಗಳನ್ನು ಸ್ವಲ್ಪಮಟ್ಟಿಗೆ ತಿಳಿದವಳಾದುದರಿಂದಲೂ ಶ್ರೀರಾಮಕೃಷ್ಣರ ಅನುಭವಗಳೆಲ್ಲ ಅರ್ಥಪೂರ್ಣವಾದುದೆಂದು ಸಾರಿದಳು. ಅಲ್ಲದೆ ಭಕ್ತಿಯ ಆವೇಗದಿಂದ ಸಾಧಕನಿಗೆ ಬಂದೊದಗಬಹುದಾದ ಕಷ್ಟಗಳಿಗೂ ದೈಹಿಕ ಮಾನಸಿಕ ಯಾತನಗಳಿಗೂ ಪರಿಹಾರವನ್ನು ಅರಿತಿದ್ದಳು. ಆದ್ದರಿಂದ ಪರಮಹಂಸರಿಗೆ ಎಂದಿನಂತೆ ಮೈಯಲ್ಲಿ ಬೆಂಕಿಯುರಿ ತೋರಲು ಅವರಿಗೆ ಗಂಗಾಸ್ನಾನ ಮಾಡಿಸಿ. ಮೈತುಂಬಾ ಗಂಧಲೇಪನ ಮಾಡಿ ಹೂವಿನ ಮಾಲೆಗಳನ್ನು ತೊಡಿಸಿದಳು. ಮೊದಲು ಇದನ್ನು ನೋಡಿದ ಜನರು ಹಾಸ್ಯ ಮಾಡಿದರು. ಆದರೆ ಶ್ರೀರಾಮಕೃಷ್ಣರಿಗೆ ಸಂಪೂರ್ಣ ಗುಣವಾದುದನ್ನು ಕಂಡು ವಿಸ್ಮಿತರಾದರು. ಅನೇಕ ವೈದ್ಯರಿಂದಾಗದಿದ್ದ ಕಾರ್ಯ ಬ್ರಾಹ್ಮಣಿಯ ವಿಚಿತ್ರ ಔಷಧಿಯಿಂದ ಸಾಧ್ಯವಾಯಿತು. ಕೆಲವು ದಿನಗಳ ಮೇಲೆ ಪರಮಹಂಸರಿಗೆ ಹಿಂದೆ ಎಂದೂ ತೋರದಿದ್ದ ಮತ್ತೊಂದು ರೋಗ ಪ್ರಾಪ್ತವಾಯಿತು. ಅದಾವುದೆಂದರೆ – ಯಾವ ಎಷ್ಟು ಆಹಾರದಿಂದಲೂ ತಣಿಯದ ಹಸಿವು. ಬ್ರಾಹ್ಮಣಿ ಮಥುರನಾಥನ ಸಹಾಯದಿಂದ ತಿನ್ನುವ ಪದಾರ್ಥಗಳನ್ನು ಒಂದು ಕೋಣೆಯೊಳಗೆ ಯಥೇಚ್ಛವಾಗಿ ರಾಶಿಹಾಕಿ ಪರಮಹಂಸರನ್ನು ಅದರಲ್ಲಿ ಬಿಟ್ಟು ಹಗಲೂ ಇರುಳೂ ತಿನ್ನುವಂತೆ ಹೇಳಿದಳು. ಮೂರು ದಿನಗಳ ಮೇಲೆ ವ್ಯಾಧಿ ಮಾಯವಾಯಿತು.

ಶ್ರೀರಾಮಕೃಷ್ಣರ ಕಾಯಲಕ್ಷಣಗಳನ್ನೂ ಬಾಹ್ಯಾಚರಣೆಗಳನ್ನೂ ಆತ್ಮಾನುಭವಗಳನ್ನೂ ಚೆನ್ನಾಗಿ ಅವಲೋಕಿಸಿ ಭೈರವಿ ಅವರನ್ನು ಮಹಾಭಕ್ತ ಮಾತ್ರರಲ್ಲದೆ ಅವತಾರಪುರುಷರೆಂದೂ ನಿರ್ಧರಿಸಿದಳು. ಆಕೆಯ ಸಿದ್ಧಾಂತಕ್ಕೆ ಬೇಕಾದಷ್ಟು ವಾದಗಳೂ ಇದ್ದವು. ಈ ವಿಷಯವನ್ನು ಆಕೆ ಶ್ರೀರಾಮಕೃಷ್ಣ ಮತ್ತು ಹೃದಯರಲ್ಲಿ ಮಾತ್ರವಲ್ಲದೆ ಕಂಡಕಂಡವರಿಗೆಲ್ಲ ಹೇಳತೊಡಗಿದಳು. ಒಂದು ದಿನ ಪರಮಹಂಸರೇ ಮಥುರನೊಡನೆ “ಬ್ರಾಹ್ಮಣಿ ತನ್ನನ್ನು ಅವತಾರಪುರುಷನೆಂದು ಹೇಳುತ್ತಿದ್ದಾಳೆ” ಎಂದು ಹೇಳಿದರು. ಅದಕ್ಕೆ ಮಥುರನು “ಎಲ್ಲಿಯಾದರೂ ಉಂಟೆ? ಅವತಾರಗಳು ಹತ್ತಕ್ಕಿಂತ ಹೆಚ್ಚಿಲ್ಲ” ಎಂದನು. ಅಷ್ಟರಲ್ಲಿ ಅಲ್ಲಿಗೆ ಬಂದ ಭೈರವಿ ಶಾಸ್ತ್ರಾಧಾರದಿಂದ ತನ್ನ ಸಿದ್ಧಾಂತವನ್ನು ಸಮರ್ಥಿಸಿದಳು. ಈ ವಿಷಯ ದೇವಾಲಯದಲ್ಲಿ ಹಬ್ಬಿತು. ಎಲ್ಲರೂ ಇದುವರೆಗೆ ಯಾರನ್ನು ಹುಚ್ಚನೆಂದು ತಿಳಿದಿದ್ದರೋ ಆತನು ಈಗ ಅವತಾರವಾದನೇ! ಎಲ್ಲರಿಗೂ ಇದೊಂದು ಬಿಡಿಸಲಾರದ ಸಮಸ್ಯೆಯಾಯಿತು. ಮಥುರನಾಥನು ವಿಷಯ ನಿರ್ಣಯಕ್ಕಾಗಿಯೂ ಸಮಸ್ಯೆಯ ಪರಿಹಾರಾರ್ಥವಾಗಿಯೂ ಪ್ರಸಿದ್ಧರಾದ ಪಂಡಿತರು ಮತ್ತು ಶಾಸ್ತ್ರಿಗಳನ್ನು ಆಹ್ವಾನಿಸಿ ಒಂದು ಸಭೆ ಸೇರಿಸಿದನು. ವಾದದಲ್ಲಿ ಭೈರವಿ ಜಯಶೀಲಳಾದಳು. ನೆರೆದ ವಿದ್ವಾಂಸರು ಆಕೆಯ ಸಿದ್ಧಾಂತವನ್ನು ಮನಃಪೂರ್ವಕವಾಗಿ ಸಮ್ಮತಿಸಿದರು. ಕೆಲವರು ಶ್ರೀರಾಮಕೃಷ್ಣರ ಭಕ್ತರಾದರು. ಇದನ್ನೆಲ್ಲ ಕೇಳಿ ಪರಮಹಂಸರು ಮುಗಳ್ನಗೆಯಿಂದ “ಸದ್ಯಕ್ಕೆ ನಾನು ಅವತಾರವೋ ಅಲ್ಲವೋ ಅದು ಹೇಗಾದರೂ ಇರಲಿ, ಹುಚ್ಚನಲ್ಲ ಎಂದು ಗೊತ್ತಾಯಿತಲ್ಲಾ, ಅಷ್ಟೇ ಸಾಕು” ಎಂದರು.

ಭೈರವಿಯ ಆಗಮನದಿಂದ ಶ್ರೀರಾಮಕೃಷ್ಣರ ಸಾಧನೆಗೆ ಸಹಾಯವಾದುದೊಂದೆ ಅಲ್ಲ, ಅವರ ವಿಚಾರವಾಗಿ ಜನರಲ್ಲಿದ್ದ ತಪ್ಪು ಭಾವನೆಗಳು ಮೆಲ್ಲನೆ ತೊಲಗಿದುವು. ಅದುವರೆಗೆ ಅರ್ಥಹೀನವಾಗಿಯೂ ಹುಚ್ಚು ಹುಚ್ಚಾಗಿಯೂ ಕಾಣುತ್ತಿದ್ದ ಅವರ ಆಚರಣೆ ಅನುಭವಗಳು ಬ್ರಾಹ್ಮಣಿಯ ವ್ಯಾಖ್ಯಾನ ಜ್ಯೋತಿಯಿಂದ ಸಾರ್ಥಕವಾಗಿಯೂ ದಿವ್ಯವಾಗಿಯೂ ತೋರಿಬಂದುವು. ಶ್ರೀರಾಮಕೃಷ್ಣರ ಮಹಾಮಹಿಮೆಯನ್ನು ಶಾಸ್ತ್ರೀಯವಾಗಿಯೂ ಬುದ್ಧಿಪೂರ್ವಕವಾಗಿಯೂ ಅರಿತವರಲ್ಲಿ ಭೈರವಿಯೆ ಮೊದಲನೆಯವಳೆಂದು ಹೇಳಬಹುದು.

ಇವರಿಬ್ಬರ ಸಂಬಂಧದಿಂದ ಮತ್ತೊಂದು ವಿಷಯ ಮೈದೋರುವುದು, ಸಾಧಾರಣವಾಗಿ ತ್ಯಾಗ, ಸಂನ್ಯಾಸ, ಈಶ್ವರಸಾಧನೆ – ಎಂದರೆ ಅನೇಕರ ಮನಸ್ಸಿನಲ್ಲಿ ಸ್ತ್ರೀ ತಿರಸ್ಕಾರವು ಮೂಡದಿರುವುದಿಲ್ಲ. ಅಲ್ಲದೆ ಪರಮಹಂಸರೂ ತಮ್ಮ ಜೀವಮಾನದಲ್ಲಿ ಈಶ್ವರಸಾಕ್ಷಾತ್ಕಾರಕ್ಕೆ ಕಾಮಿನೀ ಕಾಂಚನ ತ್ಯಾಗ ಅತ್ಯಾವಶ್ಯಕ ಎಂಬುದನ್ನು ನಿಷ್ಕೃಷ್ಟವಾಗಿ ಸಾರಿರುತ್ತಾರೆ. ಅಂದರೆ ಕಾಮಿನೀತ್ಯಾಗವೆಂದರೆ ಸ್ತ್ರೀ ತಿರಸ್ಕಾರವೆಂದಲ್ಲ; ಕಾಮ ಮೂಲವಾದ ಮೋಹದ ತ್ಯಾಗ ಎಂದರ್ಥ. ಅವರು ಸ್ತ್ರೀ ಜಗನ್ಮಾತೆ ಎಂದು ಹೇಳುತ್ತಿದ್ದರು. ಸ್ತ್ರೀಯನ್ನು ಮಾತೃಸ್ಥಾನದಲ್ಲಿಟ್ಟು ಪೂಜೆಸುವುದರಿಂದಲೇ ಕಾಮಿನೀತ್ಯಾಗ ಸುಲಭವಾಗುತ್ತದೆ. ಎಂಬುದು ಅವರ ಮತವಾಗಿತ್ತು. ಅವರು ಸ್ತ್ರೀಯನ್ನು ಗುರುವಾಗಿ ಸ್ವೀಕರಿಸಿದುದೇ ಅದಕ್ಕೆ ಸಾಕ್ಷಿ. ಮುಂದೆ ತಮ್ಮ ಸಹಧರ್ಮಿಣಿಯಾದ ಶ್ರೀ ಶಾರದಾಮಣಿದೇವಿಯನ್ನು ಎಂತು ಮಾತೃಸ್ಥಾನದಲ್ಲಿ ನಿಲ್ಲಿಸಿ ಆರಾಧಿಸಿದರೆಂಬುದನ್ನು ವಾಚಕರು ಕಾಣಬಹುದು.

ವೈಷ್ಣವಸಾಧನೆಗಳಲ್ಲಿ ಪರಮಹಂಸರು ಉತ್ತೀರ್ಣರಾದ ತರುವಾಯ ಬ್ರಾಹ್ಮಣಿ ಅವರಿಗೆ ತಾಂತ್ರಿಕ ಸಾಧನೆಗಳನ್ನು ಉಪದೇಶಿಸಿದಳು. ಸಂಪೂರ್ಣವಾದ ಇಂದ್ರಿಯ ನಿಗ್ರಹವೆ ತಾಂತ್ರಿಕ ಸಾಧನೆಯ ಗುರಿ. ಸ್ವಾಭಾವಿಕವಾಗಿ ಮಾನವನು ಭೋಗಾಭಿಲಾಷಿ; ತ್ಯಾಗ ಅವನಿಗೆ ರುಚಿಸದು. ನಿಷ್ಕಲ್ಮಷ ಚಿತ್ತನಾಗಿ ಈಶ್ವರನನ್ನು ಕುರಿತು ಧ್ಯಾನಮಾಡುವುದು ಅವನಿಗೆ ಕಷ್ಟಸಾಧ್ಯ. ಆದ್ದರಿಂದಲೆ ಹೊನ್ನಿನಲ್ಲಿ ಕಾಳಿಕೆ ಬೆರೆತಿರುವಂತೆ ಮಾನವನ ಹೃದಯದಲ್ಲಿ ನೈರ್ಮಲ್ಯದೊಂದಿಗೆ ಮಾಲಿನ್ಯವೂ ಕೂಡಿರುತ್ತದೆ. ಮಾಯೆಯ ವಜ್ರೋಪಮವಾದ  ಆಲಿಂಗನವು ಆತ್ಮನನ್ನು ಸದಾ ಬಿಗಿದಿರುತ್ತದೆ. ಮಾಯೆಯನ್ನು ‘ಇಲ್ಲಮಾಡಲು’ ಅಸಾಧ್ಯವಾದುದರಿಂದ, ಅದನ್ನು ಬ್ರಹ್ಮಮುಖವಾಗಿ ತಿರುಗಿಸು, ಬ್ರಹ್ಮದಲ್ಲಿ ಐಕ್ಯವಾಗುವಂತೆ ಮಾಡಿದರೆ ಮೋಕ್ಷವಾಗುತ್ತದೆ. ಇದೇ ತಾಂತ್ರಿಕ ಸಾಧನೆಯ ನಿಜವಾದ ಧ್ಯೇಯ. ಇಂದ್ರಿಯಗಳನ್ನು ವಜ್ರಬಂಧನಗಳಿಂದ ಬಿಗಿದು ಆಕರ್ಷಿಸುವ ಬ್ರಹ್ಮಮುಖವಾಗಿ ಮಾಡುವ ವಿಷಮ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಜಯಶೀಲನಾಗುವದೇ ತಾಂತ್ರಿಕ ಸಾಧಕನ ಸಾಹಸ. ಎಂದರೆ ಭೀಷಣ ಜ್ವಾಲಾಮಯವಾದ ದಾವಾಗ್ನಿಯ ಮಧ್ಯೆ ಧುಮುಕಿ ಅಕ್ಷತವಾಗಿ ಪಾರಾಗುವುದೇ ತಂತ್ರಸಾಧನೆಯ ಸಿದ್ಧಿ. ತಾಂತ್ರಿಕ ಸಾಧಕನು ಪಾಪ ಪುಣ್ಯ ಶಾಶ್ವತ ನಶ್ವರ ಎಲ್ಲದರಲ್ಲಿಯೂ ಏಕಾದ್ವಯ ಬ್ರಹ್ಮವಸ್ತುವನ್ನು ಕಾಣಲು ಸಮರ್ಥನಿರಬೇಕು. ಸ್ವಲ್ಪ ದುರ್ಬಲನಾದರೂ ಸಾಕು, ಸ್ವರ್ಗದ ಉನ್ನತೋನ್ನತ ಶಿಖರ ಸಿಂಹಾಸನದಿಂದ ಪತಿತನಾಗಿ ಪಾತಾಳದ ಅಗಾಧವಾದ ನರಕಕೂಪದಲ್ಲಿ ಬಿದ್ದು ಹೋಗುತ್ತಾನೆ. ಆದ್ದರಿಂದ ಮಹಾಕಠೋರವಾದ ಇಂದ್ರಿಯ ನಿಗ್ರಹವು ತಾಂತ್ರಿಕ ಸಾಧನೆಗೆ ಅತ್ಯಾವಶ್ಯಕವಾದುದು. ಇದನ್ನರಿಯದೆ ಅನೇಕ ದುರ್ಬಲ ಮಾನವರು ತಾಂತ್ರಿಕಸಾಧನೆಗೆ ಕೈಹಾಕಿ ಸರ್ವನಾಶವಾಗಿದ್ದಾರೆ. ಸಮುದ್ರ ಲಂಘನವು ಶ್ರೀರಾಮಚಂದ್ರನ ಕೃಪಾಬಲ ಬಲಾನ್ವಿತನಾದ ಹನುಮಂತ ದೇವನಿಗಲ್ಲದೆ ಇತರರಿಗೆ ಸಾಧ್ಯವಿಲ್ಲ. ಸ್ವತಃ ಸಾಧಕಳಾಗಿದ್ದ ಭೈರವಿಯ ಮಾರ್ಗದರ್ಶಿತ್ವದಲ್ಲಿ ತುಷಾರಧವಳಿಮ ಹೃದಯರಾದ ಶ್ರೀರಾಮಕೃಷ್ಣರು ಜಗನ್ಮಾತೆಯ ಆಶೀರ್ವಾದದಿಂದ ತಂತ್ರ ಸಾಧನೆಯೆಂಬ ಅಗ್ನಿಕುಂಡದಲ್ಲಿ ಮುಳುಗಿ, ಮಿಂದು, ಅಕ್ಷತರಾಗಿ, ಸುರಕ್ಷಿತರಾಗಿ, ಸಮಧಿಕ ತೇಜಸ್ವಿಗಳಾಗಿ ಹೊರಬಿದ್ದರು. ಅಣಿಮಾದಿ ಅಷ್ಟಸಿದ್ಧಿಗಳೂ ಅವರ ಸ್ವಾಧೀನವಾದುವು. ಆದರೆ ಆ ಸಿದ್ಧಿಗಳನ್ನು ಅವರು ಯಾವಾಗಲೂ ಹೇಯವೆಂದು ಪರಿಗಣಿಸುತ್ತಿದ್ದರು. ಅಲ್ಲದೆ ಮುಂದೆ ತಮ್ಮ ಶಿಷ್ಯರಿಗೂ ಯೋಗಸಿದ್ಧಿಗಳನ್ನು ಹೇಯವೆಂದು ಭಾವಿಸಬೇಕೆಂದು ಬೋಧಿಸಿದರು. ಏಕೆಂದರೆ, ಈ ಸಿದ್ಧಿಗಳು ಬ್ರಹ್ಮಸಾಕ್ಷತ್ಕಾರಕ್ಕೆ ಕಾಮಿನೀ ಕಾಂಚನಗಳಿಗಿಂತಲೂ ಪ್ರಬಲತರವಾದ ಅಡಚಣೆಗಳೆಂಬುದು ಅವರ ಮತವಾಗಿತ್ತು.

ತಾಂತ್ರಿಕ ಸಾಧನೆ ಪೂರೈಸಿದ ತರುವಾಯ ಪರಮಹಂಸರ ಪ್ರಸಿದ್ಧಿ ಮೆಲ್ಲಮೆಲ್ಲಗೆ ಹಬ್ಬಿತು. ಅನೇಕ ಸಾಧು ಸಂತರೂ ಇತರ ಭಕ್ತರೂ ದಕ್ಷಿಣೇಶ್ವರಕ್ಕೆ ಬಂದು ಅವರ ಸಾನ್ನಿಧ್ಯದಿಂದ ಪುನೀತರಾದರು. ಅದರ ವಿವರಣೆ ಮುಂದೆ. ಪರಮಹಂಸರ ದಾಸ್ಯಭಾವಸಾಧನೆಯನ್ನು ಕುರಿತು ಹಿಂದೆ ಹೇಳಿದ್ದೇವೆ. ಅವರ ವಾತ್ಸಲ್ಯಭಾವ ಸಾಧನೆ ಅದಕ್ಕಿಂತಲೂ ಮನೋಹರವಾದುದು. ಅದರ ಸರಳತೆ, ಅದರ ಕರುಣೆ, ಆದರ ಅಕ್ಕರೆ, ಅದರ ಮಾಧುರ್ಯಗಳು ಅದನ್ನೊಂದು ಸುಮಧುರಗಾನವನ್ನಾಗಿ ಮಾಡಿದೆ. ಅದರ ಆಳ ಸಾಮಾನ್ಯ ಮಾನವನ ಅನುಭವಕ್ಕೆ ಅತೀತವಾಗಿದ್ದರೂ ಅದರ ಭಾವ ಮಾನವಸಾಧಾರಣವಾದುದು. ಕ್ರಿ. ಶ. ೧೮೬೪ – ೬೫ನೆಯ ವರ್ಷದಲ್ಲಿ ಜಟಾಧಾರಿ ಎಂಬೊಬ್ಬ ಭಕ್ತಸಂನ್ಯಾಸಿ ದಕ್ಷಿಣೇಶ್ವರಕ್ಕೆ ಬಂದನು. ಶ್ರೀರಾಮಚಂದ್ರನ ಉಪಾಸಕನಾಗಿದ್ದ ಆತನಲ್ಲಿ ಶಿಶುರಾಮಚಂದ್ರನ ಪುಟ್ಟ ಪ್ರತಿಕೃತಿಯೊಂದಿತ್ತು. ಅದನ್ನು ಆತನು ‘ರಾಮಲಾಲ’ ಎಂದರೆ ‘ರಾಮಹುಡುಗ’ ಎಂದು ಕರೆಯುತ್ತಿದ್ದನು. ವಾತ್ಸಲ್ಯ ಭಾವಸಾಧಕನಾದ ಜಟಾಧಾರಿಗೆ ಶಿಶುರಾಮನು ಪ್ರತ್ಯಕ್ಷನಾಗಿದ್ದನು. ಎಂದರೆ ರಾಮನು ಆತನೊಡನೆ ಮಾತನಾಡುತ್ತಿದ್ದನು; ಹೋದಲ್ಲಿಗೆ ಹೋಗುತ್ತಿದ್ದನು. ಆತನು ಕೊಟ್ಟ ಸವಿಯಾದ ತಿಂಡಿಗಳನ್ನು ತಿನ್ನುತ್ತಿದ್ದನು; ಆತನನ್ನು ಮಕ್ಕಳಂತೆ ಪೀಡಿಸಿ ಆನಂದಪಡಿಸುತ್ತಿದ್ದನು! ಆದರೆ ಇತರರಿಗೆ ಅದೊಂದೂ ಕಾಣುತ್ತಿರಲಿಲ್ಲ. ಇತರರು ಜಟಾಧಾರಿ ಮೂರ್ತಿಯನ್ನೇ ಭಕ್ತಿಯಿಂದ ಆದರಿಸುತ್ತಿದ್ದನೆಂದು ತಿಳಿದಿದ್ದರು. ಭಕ್ತ ಸಂನ್ಯಾಸಿ ಗುಟ್ಟನ್ನು ಯಾರಿಗೂ ಬಿಟ್ಟುಕೊಟ್ಟಿರಲಿಲ್ಲ. ಆದರೆ ಶ್ರೀರಾಮಕೃಷ್ಣರ ತೀಕ್ಷ್ಣದೃಷ್ಟಿಯಿಂದ ಗುಟ್ಟನ್ನು ಬೈತಿಡಲಾಗಲಿಲ್ಲ. ರಾಮಲಾಲನ ಆಟ, ನೋಟ ನಡೆ ನುಡಿ ಎಲ್ಲವೂ ಪರಮಹಂಸರಿಗೆ ಗೊತ್ತಾಗಿ ಅವರೂ ಶಿಶುರಾಮನ ನೆಚ್ಚಿನ ಸಂಗಾತಿಯಾದರು. ಹೀಗಾಗಿ ರಾಮಲಾಲನು ಅಗಾಗ್ಗೆ ಜಟಾಧಾರಿಯ ಕೊಠಡಿಯಿಂದ ಪರಮಹಂಸರ ಕೊಠಡಿಗೆ ಬರತೊಡಗಿದನು. ಪರಮಹಂಸರೊಡನೆ ಸಲಿಗೆ ಹೆಚ್ಚಿತು. ಪರಮಹಂಸರು ಹೀಗೆಂದು ಹೇಳಿದ್ದಾರೆ: “ನಿಮ್ಮನ್ನೆಲ್ಲ ನಾನು ನೋಡುವಂತೆಯೇ ರಾಮಲಾಲನನ್ನು ನೋಡುತ್ತಿದ್ದೆ. ಕೆಲವು ಸಾರಿ ನನ್ನ ಮುಂದೆ ಕೇಕೆಹಾಕಿ ಕುಣಿಯುವನು; ಕೆಲವು ಸಾರಿ ನನ್ನ ಬೆನ್ನಿನ ಮೇಲೆ ಹತ್ತಿ ಕೂದಲು ಹಿಡಿದೆಳೆದು ಪೀಡಿಸುವನು; ಕೆಲವು ಸಾರಿ ‘ಎತ್ತಿಕೋ’ ಎಂದು ಅಳುವನು. ಎಷ್ಟೋ ಸಾರಿ ನಾನವನನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಸಂತವಿಟ್ಟಿದ್ದೇನೆ. ಇಲ್ಲಿ ಬಹಳ ಹೊತ್ತು ಇರುತ್ತಿರಲಿಲ್ಲ. ಇದ್ದಕ್ಕಿದ್ದ ಹಾಗೆ ತೋಟಕ್ಕೆ ಓಡುವನು. ಬಿಸಿಲಿನಲ್ಲಿ ಅಲೆದು, ಹೂಗಳನ್ನು  ಕೊಯ್ದು, ಕಡೆಗೆ ಗಂಗೆಯ ಘಟ್ಟದಲ್ಲಿ ನೀರಾಟವಾಡುವನು. ನಾನು ಎಷ್ಟೋ ಸಾರಿ ಅವನನ್ನು ಚೆನ್ನಾಗಿ ಗದರಿಸಿ ಬೈದಿದ್ದೇನೆ; – ‘ನೋಡುತ್ತಿರು, ನೀನು ಹೀಗೆಲ್ಲಾ ಬಿಸಿಲಿನಲ್ಲಿ ಸುತ್ತಿದರೆ ಮೈಮೇಲೆ ಗುಳ್ಳೆ ಬರುತ್ತದೆ! ನೀರಿನಲ್ಲಿ ಮುಳುಗಿ ಆಟವಾಡಬೇಡವೋ, ಶೀತವಾಗಿ ಜ್ವರಬರುತ್ತದೆ. ಎಂದು! ಆದರೆ ರಾಮಲಾಲನು ನನ್ನ ಮಾತು ಕೇಳುತ್ತಲೆ ಇರಲಿಲ್ಲ. ಪ್ರೇಮಮಯ ‌ವಿಶಾಲ ಸುಂದರ ನೇತ್ರದ್ವಯಗಳಿಂದ ನನ್ನನ್ನೆ ನಿಟ್ಟಿಸಿ ನೋಡಿ, ಬಳ್ಳಿಯ ತುದಿಯ ಹೂವಿನಂತೆ ತಲೆದೂಗಿ ಮುಗುಳುನಗೆ ನಗುವನು; ಇಲ್ಲವೆ ಹಲ್ಲುಕಿರಿದು ನನ್ನನ್ನು ಹಾಸ್ಯಮಾಡುವನು. ಕೆಲವು ಸಾರಿ ನನ್ನ ತಾಳ್ಮೆಯೆಲ್ಲಾ ಮಾಯವಾಗಿ ಸಿಟ್ಟು ರೇಗಿ ‘ಇರು, ಇರು, ಕೆಟ್ಟ ಹುಡುಗ; ನಿನ್ನ ಮೈಯೆಲ್ಲಾ ಹಸುರು ಗಟ್ಟುವಂತೆ ಹೊಡೆಯುತ್ತೇನೆ’ ಎಂದು ಹೆದರಿಸುತ್ತಿದ್ದೆ. ಒಂದು ಸಾರಿ ಅವನನ್ನು ರಟ್ಟೆಹಿಡಿದು ನೀರಿನಿಂದ ದರದರದರ ಎಳೆದುಕೊಂಡು ಬಂದು ‘ನೀರಿಗೆ ಹೋಗಬೇಡ’ ಎಂದು ಏನೇನೊ ಉಪಾಯಮಾಡಿ ತಿಂಡಿ ಕೊಟ್ಟು ಬೋಳೈಸಿ ನನ್ನ ಕೊಠಡಿಯಲ್ಲಿಯೆ ಆಡುತ್ತಿರು’ ಎಂದು ಹೇಳಿದೆ. ಆದರೆ ಕೇಳದೆ ಇರಲು ಕೋಪ ಬಂದು ಒಂದೇಟು ಕೊಟ್ಟೆ. ಅವನು ಹನಿಗಣ್ಣಾಗಿ ನಡುಕು ತುಟಿಗಳಿಂದ ನನ್ನನ್ನೆ ಎವೆಯಿಕ್ಕದೆ ದೈನ್ಯದಿಂದ ನೋಡಿದನು. ಅಯ್ಯೋ ನನ್ನ ಹೊಟ್ಟೆಯಲ್ಲಿ ಬೆಂಕಿ ಬಿದ್ದಂತಾಯಿತು! ಅವನನ್ನು ಬಾಚಿ ತಬ್ಬಿ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಮುಖದಲ್ಲಿ ಮುಖವಿಟ್ಟು‘ದಮ್ಮಯ್ಯ! ನನ್ನ ತಂದೆ! ದಮ್ಮಯ್ಯ! ಅಳಬೇಡ! ನನ್ನ ಕಂದಾ, ತಪ್ಪಾಯಿತು! ನನ್ನ ಕೈಗೆ ಬೆಂಕಿ ಹಾಕಲಿ! ’ ಎಂದು ನಾನಾ ವಿಧವಾಗಿ ಸಂತವಿಟ್ಟೆ. ಇವೆಲ್ಲವೂ ಕಣ್ಣಾರೆ ಕಂಡ ಸಂಗತಿಗಳು! “.