ಬಾಗಿಲು ತೆರೆಯಿತು; ದರ್ಶನವಾಯಿತು!

ಆ ಕಥೆಯನ್ನು ಅವರೇ ಹೇಳಲಿ. ಅವರ ಮಹಾವಾಣಿ ನಮ್ಮೆದೆಗಳಲ್ಲಿ ಘೂರ್ಮಿಸಲಿ.

“ಒಂದು ದಿನ ಜಗದಂಬೆಯಾದ ಭವತಾರಿಣಿಯ ಮುಂದೆ ಆಕೆಯ ದರ್ಶನಲಾಭಕ್ಕಾಗಿ ನಿತಾಂತವ್ಯಾಕುಲತೆಯಿಂದ ಪ್ರಾರ್ಥಿಸಿ ಕೀರ್ತನೆಗಳನ್ನು ಹಾಡುತ್ತಾ ಅಳುತ್ತಿದ್ದೆ. ‘ತಾಯೆ, ಇಷ್ಟು ಕರೆದರೂ ನಿನಗೆ ಒಂದಿನಿತೂ ಕೇಳಿಸುವುದಿಲ್ಲವೆ? ರಾಮಪ್ರಸಾದನಿಗೆ ದರ್ಶನವಿತ್ತೆ. ನನಗೇಕೆ ಮೈದೋರದಿರುವೆ?’ ಹೃದಯದಲ್ಲಿ ಅಸಹನೀಯ ಯಾತನೆಯಾಯಿತು. ಜೀವಮಾನದಲ್ಲಿ ಎಂದೆಂದಿಗೂ ನನಗೆ ಆ ದಿವ್ಯ ದರ್ಶನದ ಭಾಗ್ಯ ದೊರೆಯದಿರಬಹುದೇ ಎಂದು ಆಲೋಚಿಸಿದಾಗಲಂತೂ ನನ್ನ ಮನಸ್ಸು ಭಯಂಕರೋನ್ಮಾದಗ್ರಸ್ತವಾಯಿತು. ಅಸ್ಥಿರನಾದೆ. ಹಾಗಾದರೆ ಈ ಜೀವವಿದ್ದು ಪ್ರಯೋಜನವೇನು? ಎಂದುಕೊಂಡೆ. ಇದ್ದಕ್ಕಿದ್ದ ಹಾಗೆ ನನ್ನ ಕಣ್ಣು ಗರ್ಭಗುಡಿಯಲ್ಲಿದ್ದ ದೇವಿಯ ಖಡ್ಗದ ಮೇಲೆ ಬಿತ್ತು. ಉಪಾಯ ಮಿಂಚಿನಂತೆ ಮನಸ್ಸಿನಲ್ಲಿ ಹೊಳೆಯಿತು. ‘ಆ ಖಡ್ಗ! ಅದೇ ಜೀವನಾಶಕ್ಕೆ ಮಹದುಪಾಯ!’ ಉನ್ಮತ್ತನಂತೆ ಓಡಿಹೋಗಿ ಆ ಆಯುಧವನ್ನು ತುಡುಕಿ ಹಿಡಿದುಕೊಂಡೆ. ಹಠಾತ್ತಾಗಿ ಮನೆ, ಬಾಗಿಲು, ಗೋಡೆ, ದೇವಾಲಯ ಎಲ್ಲವೂ ಎಲ್ಲಿಯೋ ಲುಪ್ತವಾದುವು. ಎಲ್ಲಿಯೂ ಏನೂ ಇಲ್ಲ! ಮಹಾಶೂನ್ಯ! ಅದಕ್ಕೆ ಬದಲಾಗಿ, ಅಸೀಮ ಅನಂತಜ್ಯೋತಿಯ ಸಮುದ್ರ! ಯಾವ ದಿಕ್ಕಿನಲ್ಲಿ ಎಷ್ಟು ದೂರ ನೋಡಿದರೂ ನಾಲ್ದೆಸೆಗಳಿಂದಲೂ ಆ ಉದಧಿಯ ಉಜ್ವಲ ಊರ್ಮಿಮಾಲೆಗಳು ತರ್ಜನೆ ಗರ್ಜನೆ ಮಾಡುತ್ತ ನುಂಗಿ ನೊಣೆಯುವಂತೆ ಮಹಾವೇಗದಿಂದ ನುಗ್ಗಿ ಬಂದುವು. ನೋಡೆ ನೋಡೆ ಪ್ರಲಯ ಮಹಾರವದೊಡನೆ ಭೀಷಣ ತರಂಗಗಳು ಮೇಲೆ ಮೇಲೆ ಹಾಯ್ದು ಬಂದು ನನ್ನ ಮೇಲಪ್ಪಳಿಸಿ ಮುಳುಗಿಸಿಬಿಟ್ಟುವು. ಉಸಿರು ಕಟ್ಟಿ ಸಂಜ್ಞಾಶೂನ್ಯನಾಗಿ ಬಿದ್ದುಬಿಟ್ಟೆ. ಆ ದಿನವೂ ಮರುದಿನವೂ ಏನಾಯಿತೆಂಬುದು ನನಗೆ ಗೊತ್ತಿಲ್ಲ. ಅಂತರಂಗದಲ್ಲಿ ಅನನುಭೂತವಾದ ಆನಂದಸ್ರೋತವು ಅಲ್ಲೋಲ ಕಲ್ಲೋಲವಾಗಿ ಪ್ರವಹಿಸುತ್ತಿತ್ತು. ಅಲ್ಲದೆ ಜಗನ್ಮಾತೆಯ ಸಾನ್ನಿಧ್ಯದ ಅನುಭವವನ್ನೂ ಪಡೆದೆ.”

ಚೇತನಜ್ಯೋತಿಯ ಸಮುದ್ರದಲ್ಲಿ ಪ್ರಥಮ ಅಗ್ನಿಸ್ನಾನ ದೊರೆಕೊಂಡಂದಿನಿಂದ ಪರಮಹಂಸರು ಚಿನ್ಮಯಮೂರ್ತಿ ಜಗದಂಬೆಯ ಆವಿರಾಮದರ್ಶನ ಲಾಭಕ್ಕಾಗಿ ಮತ್ತೂ ಆಕುಲಚಿತ್ತರಾದರು. ಆ ಸಾನ್ನಿಧ್ಯದ ಅನುಭವವಿಲ್ಲದ ಬದುಕು ಶೂನ್ಯವಾದಂತೆ ತೋರಿತು. ಹಿಂದಿನಂತೆ ಅಳುವುದು, ಮಣ್ಣಿನಲ್ಲಿ ಹೊರಳುವುದು ಮೊದಲಾದ ಬಾಹ್ಯಚೇಷ್ಟೆಗಳಿರದಿದ್ದರೂ ಅಂತರಂಗ ಸರ್ವದಾ ಉತ್ಕಂಠಿತವಾಗಿತ್ತು. ಕೆಲವು ಸಾರಿ ‘ತಾಯೇ, ಕೃಪೆ ಮಾಡು, ಮೈದೋರು’ ಎಂದು ಮೊರೆಯಿಡುತ್ತಿದ್ದರು. ಜನರು ಸುತ್ತಲೂ ಕುತೂಹಲಾವಿಷ್ಟರಾಗಿ ನೆರೆದರೆ ಅವರಿಗೆ ಬಿಂದುಮಾತ್ರವೂ ಅದರ ಅನುಭವವಾಗುತ್ತಿರಲಿಲ್ಲ. “ಸುತ್ತಲೂ ಜನರು ನಿಂತರೆ, ನನ್ನ ಕಣ್ಣಿಗೆ ಅವರೆಲ್ಲ ಬರಿಯ ಛಾಯೆಗಳಂತೆಯೊ ಅಥವಾ ಚಿತ್ರಾರ್ಪಿತ ಮೂರ್ತಿಗಳಂತೆಯೊ ತೋರುತ್ತಿದ್ದರು. ಆದ್ದರಿಂದ ನನಗೆ ಲಜ್ಜೆಯಾಗಲಿ ಸಂಕೊಚವಾಗಲಿ ಸ್ವಲ್ಪವೂ ಆಗುತ್ತಿರಲಿಲ್ಲ. ದರ್ಶನಾಕಾಂಕ್ಷೆಯ ಯಾತನೆಯಿಂದ ಬಾಹ್ಯ ಸಂಜ್ಞಾಶೂನ್ಯನಾಗಿ ನೋಡುತ್ತೇನೆ: ರಂಜಿಸುತ್ತಿದೆ, ತಾಯಿಯ ಆ ವರಾಭಯಕರಾಚಿನ್ಮಯೀ ಜ್ಯೋತಿರ್ಮಯೀ ಮೂರ್ತಿ! ನೋಡುತ್ತೇನೆ: ಆ ಮೂರ್ತಿ ನಗುತ್ತಿದೆ; ನುಡಿಯುತ್ತಿದೆ; ಸಂತವಿಡುತ್ತಿದೆ; ಬುದ್ಧಿ ಹೇಳುತ್ತಿದೆ!”

ಜಗತ್ತೆಲ್ಲ ಜಗನ್ಮಾತೆಯಾಯಿತು. ಜಡವೆಲ್ಲ ಚೇತನವಾಯಿತು. ಮೃಣ್ಮಯ ವಿಗ್ರಹ ಚಿನ್ಮಯವಾಯಿತು. ಶ್ರೀರಾಮಕೃಷ್ಣರ ಪೂಜೆ ವಿಚಿತ್ರ ತರವಾಯಿತು. ಯಾವಾಗಲೂ ಯಾರೋ ಅಶರೀರಿಯೊಡನೆ ಮಾತಾಡುವರು; ಹಾಸ್ಯ ಮಾಡುವರು; ನಗುವರು. ಜಗದಂಬೆಯ ತ್ರೈಲೋಕ್ಯ ಸೌಂದರ್ಯಮೂರ್ತಿ ಭಕ್ರನನ್ನು ಎಡೆಬಿಡದೆ ಆವರಿಸಿತು. ಪೂಜಸಮಯದಲ್ಲಿ ದೇವರಿಗೆ ಮುಡಿಸುವ ಹೂಗಳನ್ನು ಮೊದಲು ತಮ್ಮ ತಲೆ ಎದೆ ಪಾದಗಳಿಗೆ ಮುಟ್ಟಿಸಿಕೊಂಡು ತರುವಾಯ ಮೂರ್ತಿಗೆ ಮುಡಿಸುವರು. ನೈವೇದ್ಯ ಮಾಡುವಾಗ ಯಾರನ್ನೊ ತಡೆಯುವಂತೆ “ನಿಲ್ಲು, ನಿಲ್ಲು; ಸ್ವಲ್ಪ ನಿಲ್ಲು! ಅವಸರವೇಕೆ? ಮಂತ್ರ ಹೇಳಿದ ಮೇಲೆ ಉಣಬಹುದಂತೆ!” ಎಂದು ಕೂಗುವರು. ಕೆಲವು ಸಾರಿ ಬಹಳ ಮುದ್ದಿನಿಂದ ವಿಗ್ರಹದ ಮುಖದ ಬಳಿಗೆ ಅನ್ನದ ತುತ್ತನ್ನು ಹಿಡಿದು “ತಿನ್ನಮ್ಮಾ, ಚೆನ್ನಾಗಿದೆ ತಿನ್ನು!” ಎನ್ನುತ್ತ ತುಸುಹೊತ್ತಿನ ಮೇಲೆ, “ಹಾಗಾದರೆ ನಿನಗೆ ಬೇಡವೆ? ಏನೆಂದೆ? ನಾನೇ ತಿನ್ನಬೇಕೆ? ಹಾಗೆಯೆ ಆಗಲಿ!” ಎಂದು ತುತ್ತನ್ನು ತಮ್ಮ ಬಾಯಿಗೆ ಹಾಕಿಕೊಳ್ಳುವರು. ಉಳಿದುದನ್ನು ಪುನಃ ತಾಯಿಯ ಬಾಯಿಗೆ ಹಿಡಿದು “ಹು, ನಾನು ತಿಂದಾಯಿತು; ಇನ್ನು ನೀನು ತಿನ್ನು! ” ಎಂದು ಹಠ ಮಾಡುವರು. ದೇವಿಯ ಸಿಂಹಾಸನದ ಮೇಲೆ ಹತ್ತಿ ಗಾನಮಾಡುತ್ತಾ ಆಕೆಯ ಕೈಹಿಡಿದುಕೊಂಡು ಕುಣಿದಾಡುವರು. ದೇವಿಯನ್ನು ಬೆಳ್ಳಿಯ ಮಂಚದ ಮೇಲೆ ಮಲಗಿಸುವುದಕ್ಕೆ ಹೋಗಿ “ಏನೆಂದೆ? ನಾನೂ ಮಲಗಬೇಕೆ? ಆಗಲಮ್ಮ ನಿನ್ನಿಷ್ಟ! ” ಎಂದು ತಾವೂ ಮಲಗುವರು. ಶಿಲೆ ಚಿದ್ಘನಮೂರ್ತಿಯಾಯಿತು. ವಿಗ್ರಹ ಉಸಿರಾಡಿತು. ಭಕ್ತನು ಪರೀಕ್ಷೆಗಾಗಿ ಒಂದು ಹುಲ್ಲಿನ ಎಸಳನ್ನು ಮೂಗಿನ ಬಳಿ ಹಿಡಿದನು. ಶಿವ ಶಿವಾ! ಮೂಗಿನ ಉಸಿರು ಹುಲ್ಲೆಸಳನ್ನು ಅಲ್ಲಾಡಿಸಿತು! ರಾತ್ರಿ ದೀಪದ ಬೆಳಕಿನಲ್ಲಿ ನೋಡಿದರೆ ವಿಗ್ರಹಕ್ಕೆ ನೆರಳೇ ಇಲ್ಲ! ವಿಗ್ರಹ ಸ್ಥೂಲಶಿಲೆಯಾಗಿದ್ದರಲ್ಲವೆ ಅದಕ್ಕೆ ಛಾಯೆ ಇರುವುದು! ಸೂಕ್ಷ್ಮತಮ ಚೇತನವಾದರೆ ಅದಕ್ಕೆ ನೆರಳೆಲ್ಲಿ? ಸರ್ವ ಜ್ಯೋತಿಗೂ ಆಧಾರವಾದ ಜ್ಯೋತಿಗೆ ಛಾಯೆಯುಂಟೆ?

ಒಂದು ದಿನ ಸಂಜೆ. ದಿನದ ಪೂಜೆಯ ಕರ್ಮಕ್ರಿಯೆಗಳೆಲ್ಲಾ ಮುಗಿದುವು. ಪರಮಹಂಸರು ತಾಯಿಯನ್ನು ಪದ್ಧತಿಯಂತೆ ಹಾಸಿಗೆಯ ಮೇಲೆ ಮಲಗಿಸಿ ಗುಡಿಯ ಬಾಗಿಲು ಹಾಕಿಕೊಂಡು ತಮ್ಮ ಕೊಠಡಿಗೆ ಬಂದರು. ತಾವೂ ತಮ್ಮ ಶಯ್ಯೆಯ ಮೇಲೆ ಬಿದ್ದುಕೊಂಡರು. ನಿದ್ದೆ ಬರಲಿಲ್ಲ. ಹಠಾತ್ತಾಗಿ ಕೈಬಳೆಗಳ ಮತ್ತು ನೂಪುರಗಳ ಕಿಂಕಿಣಿ ಕೇಳಿಬಂದಿತು. ಹುಡುಗಿಯೊಬ್ಬಳು ಕುಣಿಕುಣಿದು ಮಹಡಿಯ ಮೇಲೆ ಏರುವಂತೆ ಸದ್ದಾಯಿತು. ಕನಸಿರಬಹುದು ಎಂದುಕೊಂಡರು. ಇಲ್ಲ; ಎಚ್ಚತ್ತಿದ್ದಾರೆ! ಎದೆ ಬಡಿದುಕೊಳ್ಳಲಾರಂಭಿಸಿತು. ಬಾಗಿಲು ತೆರೆದು ಹೊರಗೆ ಹೋದರು. ವಿಸ್ತಾರವಾದ ಅಂಗಳದಲ್ಲಿ ನಿಂತು ಮೇಲೆ ನೋಡಿದರು. ನೋಡುತ್ತಾರೆ: ಜಗನ್ಮಾತೆ ಮೊದಲನೆಯ ಮಹಡಿಯಲ್ಲಿ ಸುಂದರ ತರಳೆಯ ರೂಪನ್ನು ಧರಿಸಿ ಮಂಜುಳನಾದದಿಂದ ಹರಿಯುವ ಗಂಗಾನದಿಯ ಕಡೆ ನೋಡುತ್ತಿದ್ದಾಳೆ! ರಾತ್ರಿ ಮನೋಹರವಾಗಿದೆ! ಕಲ್ಕತ್ತೆಯ ದೀಪಸಮೂಹ ದೂರದ ದಿಗಂತದಲ್ಲಿ ಮಿಣುಕುತ್ತಿದೆ.

ಇದೆಲ್ಲವೂ ಎಂತಹ ವಿಚಿತ್ರ ದಿವ್ಯೋನ್ಮಾದ?

ಜಗತ್ತಿನ ಅನುಭಾವಿಗಳ, ಮಹಾಭಕ್ತರ ಮತ್ತು ರಸಋಷಿಗಳ ಜೀವನಚರಿತ್ರೆಗಳನ್ನು ಅರಿತವರಿಗೆ ಶ್ರೀರಾಮಕೃಷ್ಣರ ದಿವ್ಯೋನ್ಮಾದ ಅರ್ಥಹೀನವಾಗುವುದಿಲ್ಲ. ಪ್ರೇಮಮಯ ಭಗವಂತನ ವಿಯೋಗ ದುಃಖದಿಂದ ಅಗ್ನಿಸ್ನಾನ ಮಾಡಿದ ಭಕ್ತನ ಆತ್ಮ ಆತನ ದರ್ಶನದಿಂದ ಉನ್ಮತ್ತವಾಗುತ್ತದೆ. ಆಗ ಭಕ್ತನಿಗೆ ತನ್ನ ಇಷ್ಟದೈವದ ಹೊರತು ಉಳಿದುದೆಲ್ಲವೂ ಮಿಥ್ಯೆಯಾಗಿ ತೋರುತ್ತದೆ. ಇಷ್ಟದೈವ ಆತನನ್ನು ಸಂತತವಾಗಿ ಸುತ್ತುತ್ತದೆ. ಪ್ರಭಾತ ಸೂರ್ಯನ ತೇಜಸ್ಸು ಶ್ವೇತಜಲಧರವನ್ನು ತಪ್ತಕಾಂಚನ ರಾಗದಿಂದ ಸುತ್ತುವಂತೆ. ಆಗ ಭಕ್ತನು ಸಂಪ್ರದಾಯದ ವಿಧಿನಿಷೇಧಗಳನ್ನು ಅನೈಚ್ಛಿಕವಾಗಿಯೇ ಉಲ್ಲಂಘಿಸಿ ಭಗವಂತನೊಡನೆ ಸಲುಗೆಯಿಂದ ಆಚರಿಸುತ್ತಾನೆ. ಗಾಢಪ್ರೇಮವಿದ್ದಲ್ಲಿ ಸಂಪ್ರದಾಯದ ಸಂಕೋಲೆಗಳು ಕರಗಿ ಹೋಗುತ್ತವೆ. ಇಷ್ಟದೈವವು ಭಕ್ತನ ಮನದಲ್ಲಿರುವ ಬರಿಯ ಕಲ್ಪಿತ ಭಾವವಾಗಿರದೆ ರಕ್ತಮಾಂಸಗಳಿಂದ ಕೂಡಿದ ಮೂರ್ತಿಯಂತೆ ನಲಿಯುತ್ತದೆ. ಇದು ಬ್ರಹ್ಮಸಾಕ್ಷಾತ್ಕಾರಕ್ಕೆ ಪ್ರಥಮ ಸೋಪಾನ. ಈ ಅವಸ್ಥೆಯಲ್ಲಿ ಆರಾಧಕ ಆರಾಧ್ಯರು ಪ್ರಬಲ ಪ್ರೇಮಪಾಶ ಬದ್ಧರಾದರೂ ಭೇದಭಾವ ಸ್ವಲ್ಪ ಇದ್ದೇ ಇರುತ್ತದೆ. ಆದರೆ ನಿಜವಾದ ಆರಾಧನೆಯ ಗುರಿ ಆರಾಧಕ ಆರಾಧ್ಯರ ಭೇದಭಾವ ಲೇಶಮಾತ್ರವೂ ಇಲ್ಲದ ಅಖಂಡಾದ್ವೈತ ತಾದಾತ್ಮ್ಯತೆ ಎಂಬುದನ್ನು ಪರಮಹಂಸರ ಉತ್ತರೋತ್ತರ ಜೀವಮಾನದಿಂದ ತಿಳಿಯುತ್ತೇವೆ.

ಏಕಮೇವಾದ್ವಿತೀಯವಾದ ತಾದಾತ್ಮ್ಯವೆ ಮೂರ್ತಿಪೂಜೆಯ ಗಂತವ್ಯ ಲಕ್ಷ್ಯ. ಅದೇ ಸರ್ವಸಾಧನೆಗಳ ಚರಮ ಸಿದ್ಧಿ. ಅಲ್ಲಿ ಭಕ್ತ ಭಗವಂತರಿಗಿರುವುದು ಅಭೇದ ಭಾವ. ಆ ಮಹಾ ತಲ್ಲೀನತೆಯೊಂದಲ್ಲಿಯೆ ಮೂರ್ತಿ ಪೂಜೆಯ ಅಭಾವವು ಸಾಧ್ಯ. ಉಳಿದುದೆಲ್ಲವೂ ಮೂರ್ತಿಪೂಜೆ. ಅಹಂಕಾರದ ಸಂಪೂರ್ಣ ವಿನಾಶದಲ್ಲಿಯೇ ಮೂರ್ತಿಪೂಜೆಯ ವಿನಾಶವಿದೆ. ಏಕೆಂದರೆ, “ನಾನು” ಎಂಬ ಭಾವವೇ ನಾವು ಆರಾಧಿಸುವ ಒಂದು ಮಹಾಮೂರ್ತಿ. ಆ ಮೂರ್ತಿಭಜನೆಯಲ್ಲಿಯೆ ಸತ್ಯಸಾಕ್ಷಾತ್ಕಾರವಿರುವುದು; ಎಂದರೆ ಮೂರ್ತಿಭಜನೆ ಮೂರ್ತಿಭಜನೆಯಿಂದಲೇ ಸಾರ್ಥಕವಾಗುವುದು. ಭಕ್ತನು ಸ್ಥೂಲ ವಿಗ್ರಹಗಳ ಆರಾಧನೆಯಿಂದ ಸೂಕ್ಷ್ಮವಿಗ್ರಹಗಳ ಆರಾಧನೆಗೆ ಏರಿ, ತುತ್ತತುದಿಗೆ ಮೂರ್ತಿಪೂಜೆಯಿಂದ ಉತ್ತೀರ್ಣನಾಗಿ ಅತೀತವನ್ನು ಸೇರುತ್ತಾನೆ. ಮಣ್ಣಿನ ಕಲ್ಲಿನ ಬೊಂಬೆಗಳು ಮಾತ್ರವೇ ಮೂರ್ತಿಗಳಲ್ಲ. ಒಂದು ಪುಸ್ತಕ, ಒಂದು ಹೆಸರು, ಒಂದು ಸ್ಥಾನ, ಒಂದು ಮಂದಿರ, ಒಂದು ಭಾವ ಇವುಗಳೆಲ್ಲವೂ ಮೂರ್ತಿಗಳೆ. ಕೆಲವು ಸ್ಥೂಲ, ಮತ್ತೆ ಕೆಲವು ಸೂಕ್ಷ್ಮ. ವೇದ ಕೊರಾನ್ ಬೈಬಲ್ಲುಗಳನ್ನಾಗಲಿ, ಚರ್ಚು ಮಸೀದಿ ದೇವಾಲಯಗಳನ್ನಾಗಲಿ, ಕ್ರಿಸ್ತ ಶಿವ ಮಹಮ್ಮದರನ್ನಾಗಲಿ ಪವಿತ್ರವೆಂದು ಗೌರವಿಸುವುದೂ ಮೂರ್ತಿಪೂಜೆ. ಆದ್ದರಿಂದ ಎಲ್ಲ ಮತಗಳೂ ಎಲ್ಲ ಮಾನವರೂ – ಅಹಂಕಾರ ಎಂಬ ವಿಗ್ರಹವನ್ನು ನಾಶಮಡಿಕೊಂಡಿರುವ ಮುಕ್ತನ ಹೊರತು – ವಿಗ್ರಹರಾಧಕರೇ. ಅಹಂಭಾವವಿರುವವರೆಗೆ ಮನುಷ್ಯನ ಭಾಗಕ್ಕೆ ‘ನಿರಾಕಾರ’ ಎಂಬುದು ಒಂದು ಬರಿಯ ಮಾತು. ಎಂತಹ ಮೇಧಾವಿಗಾದರೂ ನಿರಾಕಾರವು ಆಲೋಚನೆಯ ವಸ್ತುವಾಗದು. ಕಡೆಗೆ ಆಕಾಶ ಕಾಲ ದೇಶಗಳಾದರೂ ಆತನ ಮನಸ್ಸಿನ ಮಹಾಮೂರ್ತಿಗಳಾಗಿ ಉಳಿಯುವುವು. ನಿರಾಕಾರವಾಗುವುದೇ ನಿರಾಕಾರವನ್ನು ಅರಿಯುವುದು; ಅರಿವು ಇರವಾಗುತ್ತದೆ. ಅಲ್ಲಿ ಮೂರ್ತಿಯೂ ಇರದು; ಪೂಜೆಯೂ ಇರದು. ಆರಾಧಕ ಆರಾಧ್ಯರಿಗೆ ಅದ್ವಯ ಭಾವವಿರುತ್ತದೆ. ಶ್ರೀರಾಮಕೃಷ್ಣ ಪರಮಹಂಸರ ಸಾಧನೆ ಸ್ಥೂಲ ವಿಗ್ರಹಾರಾಧನೆಯಿಂದ ಪರಾರಂಭವಾಗಿ ಸೂಕ್ಷ್ಮಭಾವದ ಆರಾಧನೆಗೆ ಏರಿ, ಕಡೆಗೆ ಸಿದ್ಧಿಯ ನಿರಾಕಾರತೆಯಲ್ಲಿ ಪರಿಸಮಾಪ್ತವಾಯಿತು ಎಂಬುದನ್ನು ಮುಂದೆ ತಿಳಿಯುತ್ತೇವೆ. ಬ್ರಹ್ಮದ ಪ್ರತೀಕವಾದ ಸಮಸ್ತ ಜಗತ್ತೇ – “ನಾನು” ಎಂಬ ಭಾವವನ್ನೂ ಒಳಕೊಂಡು – ಅಪ್ರತಿಹತವಾದ ಮಹಾಮೂರ್ತಿಯಾಗಿರಲು ಅದನ್ನು ಒಡೆಯುವವನೇ ನಿಜವಾದ ವಿಗ್ರಹಭೇದಕನು. ಉಳಿದವರೆಲ್ಲರೂ, ಮಣ್ಣು ಮರಗಳನ್ನು ಪೂಜಿಸುವ ಕಿರಾತರಿಂದ ಹಿಡಿದು ಕ್ರಿಸ್ತ ವಿಷ್ಣು ಅಲ್ಲರನ್ನು ಪೂಜಿಸುವ ಭಕ್ತರನ್ನೊಳಗೊಂಡು ಸಗುಣಸಾಕಾರದ ಬ್ರಹ್ಮೋಪಾಸಕರವರೆಗೂ, ವಿಗ್ರಹಾರಾಧಕರು.

[1]

ದಿವ್ಯೋನ್ಮಾದಗ್ರಸ್ತರಾದ ಮೇಲೆ ಪರಮಹಂಸರು ತಮ್ಮ ಪೂಜೆಯ ಕಾರ್ಯಗಳನ್ನು ಯಥಾವಿಧಿಯಾಗಿ ಮಾಡಲಾರದೆ ಹೋದರು. ದೇವಾಲಯದ ಅಧಿಕಾರಿಗಳೆಲ್ಲರೂ ಪೂಜಾರಿಗೆ ಹುಚ್ಚು ಹಿಡಿದಿದೆಯೆಂದು ತಿಳಿದು ವಿಷಯವೆಲ್ಲವನ್ನೂ ವಿವರವಾಗಿ ಬರೆದು ಯಜಮಾನರಿಗೆ ದೂರು ಕಳುಹಿಸಿದರು. ಅದಕ್ಕೆ ಉತ್ತರವಾಗಿ ಮಥುರನಾಥನು “ನಾನೇ ಬಂದು ವಿಚಾರಿಸುತ್ತೇನೆ. ಅದುವರೆಗೆ ಯಾರೂ ಪೂಜಾರಿಯ ಗೋಜಿಗೆ ಹೋಗಬಾರದು.” ಎಂದು ಕಾಗದ ಬರೆದನು. ಅದರಂತೆಯೆ ಒಂದು ದಿನ ಆತನು ರಹಸ್ಯವಾಗಿ ದಕ್ಷಿಣೇಶ್ವರಕ್ಕೆ ಬಂದು ಶ್ರೀರಾಮಕೃಷ್ಣರ ಆರಾಧನೆಯನ್ನು ಸಮೀಕ್ಷಿಸಿದನು. ನೋಡಿ ಆಶ್ಚರ್ಯದಿಂದ ಮೂಕನಾಗಿ ನಿಂತನು. ಪೂಜೆಯಲ್ಲಿ ತಲ್ಲೀನರಾಗಿದ್ದ ಶ್ರೀರಾಮಕೃಷ್ಣರು ಸಮೀಪದಲ್ಲಿದ್ದ ಆತನನ್ನು ಸ್ವಲ್ಪವೂ ಗಮನಿಸದೆ ಇದ್ದರು. ಎಲ್ಲವನ್ನೂ ಕಂಡು ಮಥುರನು ದೇವಾಲಯ ನಿರ್ಮಾಣವು ಸಾರ್ಥಕವಾಯಿತೆಂದು ಆನಂದಿತನಾಗಿ ಏನನ್ನೂ ಹೇಳದೆ ಹಿಂದುರುಗಿನು. ಮರುದಿನ ಗುಡಿಯ ಅಧಿಕಾರಿಗಳಿಗೆ ಒಂದು ಕಾಗದ ಬಂತು. ಅದರಲ್ಲಿ “ಅರ್ಚಕರು ಮನಬಂದಂತೆ ಪೂಜಿಸಲಿ. ಯಾರೂ ಅವರಿಗೆ ನಿರೋಧ ಮಾಡಬಾರದು” ಎಂದಿತ್ತು.

ಪರಮಹಂಸರ ದಿವ್ಯೋನ್ಮಾದವನ್ನು ಕಣ್ಣಾರೆ ಕಂಡು ಹಿಂದಿರುಗಿದ ಮಥುರ ಬಾಬು ರಾಣಿ ರಾಸಮಣಿಗೆ ಎಲ್ಲ ಸಂಗತಿಗಳನ್ನೂ ಸವಿಸ್ತಾರವಾಗಿ ತಿಳಿಸಿದನು. ರಾಣಿಗೆ ಮೊದಲಿನಂದಲೂ ಪರಮಹಂಸರ ದಿವ್ಯಭಾವದಲ್ಲಿ ಸಂಪೂರ್ಣ ಶ್ರದ್ಧೆಯಿತ್ತು. ಅಳಿಯನ ಅನುಭವವನ್ನು ಕೇಳಿ ಆಕೆ ಉತ್ಸಾಹಗೊಂಡು ತಾನೇ ದಕ್ಷಿಣೇಶ್ವರಕ್ಕೆ ಬಂದಳು. ದಿವಿಜ ನದಿಯಲ್ಲಿ ಮಿಂದು ಮಡಿಯುಟ್ಟುಕೊಂಡು ಭವತಾರಿಣಿಯ ಮಂದಿರಕ್ಕೆ ಪೂಜೆಗಾಗಿ ನಡೆದಳು. ಪ್ರಾತಃಕಾಲದ ಪೂಜೆ ಪೂರೈಸಿತ್ತು. ಪರಮಹಂಸರು ಒಂದು ಧ್ಯಾನಾಸನದಲ್ಲಿ ಸುಮ್ಮನೆ ಕುಳಿತಿದ್ದರು. ರಾಣಿಯೂ ಒಂದೆಡೆ ಕುಳಿತುಕೊಂಡಳು. ಆಕೆ ತನ್ನ ಪದ್ಧತಿಯಂತೆ ಕೀರ್ತನೆಗಳನ್ನು ಹಾಡಬೇಕೆಂದು ಶ್ರೀರಾಮಕೃಷ್ಣರನ್ನು ಬೇಡಿದಳು. ಅವರು ಒಪ್ಪಿ ಭಾವಪೂರ್ಣವಾಗಿ ಭಕ್ತಿಗೀತೆಗಳನ್ನು ಹಾಡತೊಡಗಿದರು. ಮಂದಿರವೆಲ್ಲಾ ಅಪೂರ್ವ ಮಾಧುರ್ಯದಿಂದ ತುಂಬಿದಂತಾಯಿತು. ಹಾಡುತ್ತ ಹಾಡುತ್ತ ರಾಣಿಯ ಕಡೆ ನೋಡಿದರು. ರಾಣಿಯ ಗಮನ ಎಲ್ಲಿಯೋ ಹೋಗಿತ್ತು. ಪರಮಹಂಸರು ತಟಕ್ಕನೆ ಮೇಲೆದ್ದು “ಇಲ್ಲಿಯೂ ಅದೇ ಯೋಚನೆ?” ಎಂದು ಭರ್ತ್ಸನೆಮಾಡಿ ಹಿಂದು ಮುಂದು ನೋಡದೆ ಕಪಾಲಕ್ಕೆ ಎರಡು ಪೆಟ್ಟು ಕೊಟ್ಟರು! ಅಲ್ಲಿದ್ದವರೆಲ್ಲಿ ಗಾಬರಿಯಾದರು. ಗುಜುಗುಜು ಗುಲ್ಲು ಹಬ್ಬಿತು. ಪೆಟ್ಟುಕೊಟ್ಟವನು ಪೆಟ್ಟುತಿಂದವಳು ಇಬ್ಬರು ಹೊರತು ಉಳಿದ ಎಲ್ಲರೂ ಅಶಾಂತರಾದರು. ಆದರೆ ಯಾರಿಗೆ ಏನು ಹೇಳಲಿಕ್ಕೂ ಏನು ಮಾಡಲಿಕ್ಕೂ ಧೈರ್ಯಬರಲಿಲ್ಲ. ರಾಣಿಗೆ ಮಾತ್ರ ಆಶ್ಚರ್ಯವಾಯಿತು. ಆಕೆ ಯಾವುದೊ ಮೊಕದ್ದಮೆಯನ್ನು ಕುರಿತು ಆಲೋಚಿಸುತ್ತಿದ್ದಳು. ಕೀರ್ತನೆಯ ಮೇಲೆ ಗಮನವಿರಲಿಲ್ಲ. ತನ್ನ ಕೊಠಡಿಗೆ ಹಿಂದುರುಗಿದ ಮೇಲೆ ಪರಿವಾರದವರಿಗೆ ಹೇಳಿದಳು. “ನಿಮಗೆ ತಿಳಿಯದು. ಜಗನ್ಮಾತೆಯೆ ನನ್ನನ್ನು ಶಿಕ್ಷಿಸಿದವಳು. ಅದರಿಂದ ನನಗೆ ಬೆಳಕು ಬಂದಂತಾಯಿತು.” ತನ್ನ ಅಂತರಂಗವನ್ನೆ ಹೊಕ್ಕು ನೋಡಿದ ಅರ್ಚಕನಲ್ಲಿ ಆಕೆಗೆ ಉರುತರ ಭಕ್ತಿಯುಂಟಾಯಿತು.

ಜಗನ್ಮಾತೆಯ ಪ್ರಥಮ ದರ್ಶನವಾದ ಮೇಲೆ ಪರಮಹಂಸರು ಅನೇಕ ಭಾವಸಾಧನೆಗಳನ್ನು ಕೈಕೊಂಡು ಎಲ್ಲದರಲ್ಲಿಯೂ ಉತ್ತೀರ್ಣರಾದರು. ಶಾಸ್ತ್ರಗಳು ಐದು ವಿಧವಾದ ಭಾವಸಾಧನೆಗಳನ್ನು ಕುರಿತು ಹೇಳುತ್ತವೆ. ಭಕ್ತನು ಈಶ್ವರನನ್ನು ಐದು ವಿಧವಾದ ಸಂಬಂಧಗಳಿಂದ ಆರಾಧಿಸಬಹುದು. ಮೊದಲನೆಯದು ಶಾಂತ ಭಾವ – ವೇದೋಪನಿಷತ್ತುಗಳೆ ಮೊದಲಾದ ಪವಿತ್ರ ಶಾಸ್ತ್ರಗಳನ್ನು ಅಧ್ಯಯನ ಮಾಡಿ, ಪರಮಾತ್ಮನು ಸರ್ವಾಂತರ್ಯಾಮಿಯಾಗಿರುವನೆಂದು ತಿಳಿದು ಸರ್ವೇಂದ್ರಿಯಗಳನ್ನೂ ವಸ್ತುವಿಷಯಗಳಿಂದ ಹಿಂದಿರುಗಿಸಿ, ಜಗತ್ತಿನ ಅಂತರಾತ್ಮವಾದ ಬ್ರಹ್ಮವೊಂದೇ ಪರಮ ಸತ್ಯವೆಂದು ಅದನ್ನೇ ಧ್ಯಾನಿಸುತ್ತಾ, ಸುಖ ದುಃಖ ಶೀತೋಷ್ಣ ಜಯಾಜಯಾಗಳಲ್ಲಿ ಸಮದೃಷ್ಟಿಯಿಂದ ವರ್ತಿಸುತ್ತಾ ಸದಾ ಶಾಂತಚಿತ್ತರಾಗಿರುವ ಧ್ಯಾನಜೀವಿಗಳೆ ಶಾಂತಭಾವ ಮಾರ್ಗಾನುಗಾಮಿಗಳು. ಇಂತಹ ಋಷಿಗಳು ಪ್ರಪಂಚದ ಗಲಿಬಿಲಿಗೆ ದೂರವಾಗಿದ್ದುಕೊಂಡು ಪ್ರಕೃತಿ ಮಾತೆ ದಾನ ಮಾಡುವ ಕಂದಮೂಲಗಳನ್ನು ಭಕ್ಷಿಸುತ್ತಾ ಆಡಂಬರವಿಲ್ಲದೆ ಜೀವನಯಾಪನೆ ಮಾಡುವರು. ಈ ಭಾವವು ಸ್ವಲ್ಪಮಟ್ಟಿಗೆ ಜ್ಞಾನಸಂಮಿಶ್ರವಾದುದೆಂದೆ ಹೇಳಬೇಕು. ಇದಕ್ಕೆ ವೇದಕಾಲದ ಋಷಿಗಳ ಉದಾಹರಣೆ. ಎರಡನೆಯದು ದಾಸ್ಯಭಾವ – ಎಂದರೆ ಸೇವಕನಿಗೆ ಯಜಮಾನನಲ್ಲಿರುವ ಸಂಬಂಧ. ಚಿತ್ರವಿಚಿತ್ರವಾದ ವಿಶ್ವ ರಚನೆಯನ್ನು ನೋಡಿದ ಯಾವನಿಗಾದರೂ ಯಾವನೋ ಒಬ್ಬ ಸರ್ವಶಕ್ತನೂ ಸರ್ವವ್ಯಾಪಿಯೂ ಸರ್ವಜ್ಞಾನಿಯೂ ಅಪಾರ ಕರುಣಾಶಾಲಿಯೂ ಆಗಿರುವ ಜಗದುದಯಕಾರಣನು ನಿಶ್ಚಿತ ನಿಯಮಗಳಿಗನುಸಾರವಾಗಿ ಅಧಿಕಾರ ಮಾಡುತ್ತಿರುವನೆಂದು ಮನಸ್ಸಿಗೆ ಹೊಳೆಯುವುದು. ಅಂತಹ ಅನಂತ ಪ್ರೇಮ ಸ್ವರೂಪಿಯಾದ ಪರಮಸ್ವಾಮಿಗೆ ಸ್ವಸುಖಾಭಿಕಲಾಷೆಗಳನ್ನೆಲ್ಲಾ ತ್ಯಜಿಸಿಯಾದರೂ ಸೇವೆ ಮಾಡಿ ಆತನನ್ನು ಒಲಿಸಿಕೊಂಡು ಕೃಪೆಗೆ ಪಾತ್ರರಾಗಬೇಕೆಂದು ಕೆಲವರ ಆಶೆ. ಅಂಥವರು ತಮಗೂ ತಮ್ಮ ಆ ಇಷ್ಟದೈವಕ್ಕೂ ಕಿಂಕರನಿಗೂ ರಾಜನಿಗೂ ಇರುವ ಸಂಬಂಧವನ್ನು ಕಲ್ಪಿಸುತ್ತಾರೆ. ಇದಕ್ಕೆ ಆದರ್ಶಪ್ರಾಯವಾದ ಉದಾಹರಣೆ ಎಂದರೆ ಹನುಮಂತನಿಗೂ ಶ್ರೀರಾಮಚಂದ್ರನಿಗೂ ಇರುವ ಸಂಬಂಧ. ಮೂರನೆಯದು ಸಖ್ಯಭಾವ – ಎಂದರೆ ಮಿತ್ರರಿಗಿರುವ ಪರಸ್ಪರ ಸಂಬಂಧ. ಇದರಲ್ಲಿ ಭಕ್ತನು ತನ್ನ ಇಷ್ಟದೈವವನ್ನು ಗೆಳೆಯನಂತೆ ಭಾವಿಸಿ ಆತನ ಸಾನ್ನಿಧ್ಯದಲ್ಲಿ ಸ್ವಲ್ಪವೂ ಭಯವಿಲ್ಲದೆ ಸಲುಗೆಯಂದಿರುತ್ತಾನೆ. ತನ್ನ ಮಿತ್ರನಿಗೆ ಸಂತೋಷದಾಯಕವಾಗಿರುವುದೆ ಭಕ್ತನಿಗೆ ಪರಮ ತೃಪ್ತಿ. ಅರ್ಜುನ ಶ್ರೀಕೃಷ್ಣರಿಗಿರುವ ಭಾವಸಂಬಂಧ ಇದಕ್ಕೆ ಉದಾಹರಣೆ. ನಾಲ್ಕನೆಯದು ವಾತ್ಸಲ್ಯಭಾವ – ಎಂದರೆ ಮಾತಾಪಿತೃಗಳಿಗೆ ತಮ್ಮ ಶಿಶುವಿನಲ್ಲಿರುವ ಮೃದು ಮಧುರವಾದ ಕೋಮಲ ಸಂಬಂಧ. ಇಲ್ಲಿ ಭಯಭಕ್ತಿಗಳಿಗೆ ಸ್ವಲ್ಪವೂ ಅವಕಾಶವಿಲ್ಲ. ಏಕೆಂದರೆ, ಭಕ್ತನು ಇಷ್ಟದೈವವನ್ನು ತನ್ನ ಮಗುವೆಂದೇ ಭಾವಿಸುತ್ತಾನೆ ಎಂದ ಮೇಲೆ ತನ್ನ ಪ್ರೀತಿಯ ವಸ್ತುವಿಗಿಂತ ತಾನೇ ಬಲಿಷ್ಟನಾಗಿರುತ್ತಾನೆ. ತನ್ನ ಶಿಶುವನ್ನು ಲಾಲಿಸಿ ಪಾಲಿಸಿ ಮುದ್ದು ಗೈವುದೊಂದೇ ಆತನ ಆಕಾಂಕ್ಷೆ. ಶ್ರೀಕೃಷ್ಣನ ತಂದೆತಾಯಿಗಳ ಭಕ್ತಿ ಇದಕ್ಕೆ ಉದಾಹರಣೆ. ಐದನೆಯದು ಮಧುರ ಭಾವ – ಎಂದರೆ ಪ್ರಿಯ ಪ್ರೇಯಸಿಯಲ್ಲಿರುವ ಪರಸ್ಪರ ಅನುರಾಗದ ಸಂಬಂಧ. ಈ ಪ್ರೇಮಬಂಧನ ವಜ್ರಸಮನಾದುದು. ಪ್ರಣಯಿನಿ ಪ್ರಣಯಿಯ ವಿಯೋಗವನ್ನು ಕ್ಷಣ ಮಾತ್ರವಾದರೂ ಸಹಿಸಳು. ವಾತ್ಸಲ್ಯಭಾವದಲ್ಲಿ ಕಂಡುಬರಬಹುದಾದ ಅಲ್ಪ ಸ್ವಲ್ಪ ಪೃಥಗ್ಭಾವವೂ ಮಧುರಭಾವದಲ್ಲಿ ಲಯ ಹೊಂದುತ್ತದೆ. ಈ ಭಾವ ಸಾಧನೆಯಲ್ಲಿ ಪರಮಾತ್ಮನು ಜೀವನಿಗೆ ಇನಿಯನಾಗುತ್ತಾನೆ, ಎಂದರೆ ತನ್ನ ಒಂದು ಬಹು ಮುಖ್ಯ ಅಂಶವೇ ಆಗಿಬಿಡುತ್ತಾನೆ. ಇತರ ಭಾವಗಳಿಗಿಂತ ಇದು ಮಹೋನ್ನತವಾದುದು. ಈ ಭಾವದಲ್ಲಿ ಇತರ ಎಲ್ಲ ಭಾವಗಳೂ ಐಕ್ಯವಾಗುತ್ತವೆ. ಜಗತ್ತಿನ ಅನೇಕ ರಸಋಷಿಗಳು ಮಧುರಭಾವ ಸಾಧಕರಾಗಿರುತ್ತಾರೆ. ಬೃಂದಾವನದ ಗೋಪಿಯರಿಗೆ ಶ್ರೀಕೃಷ್ಣನಲ್ಲಿದ್ದ ಸಂಬಂಧ ಇದಕ್ಕೆ ಉದಾಹರಣೆ.

ಶ್ರೀರಾಮಕೃಷ್ಣರು ಮೇಲೆ ಹೇಳಿರುವ ಐದು ಭಾವಗಳನ್ನೂ ಸಾಧಿಸಿ ಒಂದೇ ಗಮ್ಯವನ್ನು ಮುಟ್ಟಿದರು. ಪ್ರಕೃತದಲ್ಲಿ ಅವರ ದಾಸ್ಯಭಾವ ಸಾಧನೆಯನ್ನು ಸಮಾಲೋಚಿಸುತ್ತೇವೆ.

ರಘವೀರನು ಖುದಿರಾಮನ ಮನೆದೇವರಾಗಿದ್ದನು. ಗದಾಧರನೂ ರಘುವೀರನಲ್ಲಿ ಮಹಾಭಕ್ತಿಯನ್ನಿಟ್ಟಿದ್ದನು. ಜಗನ್ಮಾತೆಯಾದ ಕಾಳಿಯ ದರ್ಶನವಾದ ಮೇಲೆ ಪರಮಹಂಸರ ದೃಷ್ಟಿ ಶ್ರೀರಾಮಚಂದ್ರನ ಕಡೆಗೆ ತಿರುಗಿತು. ಶ್ರೀರಾಮನನ್ನು ಹೊಂದಬೇಕಾದರೆ ‘ಮಹಾವೀರ’ನಾಗಬೇಕೆಂದು ನಿರ್ಧರಿಸಿದರು. ಅಂದಿನಿಂದ ತಮ್ಮಲ್ಲಿ ಹನುಮಂತನ ದಾಸ್ಯಭಾವವನ್ನು ಆರೋಪಿಸಿಕೊಳ್ಳತೊಡಗಿದರು. ಅವರೇ ಹೀಗೆಂದು ಹೇಳಿದ್ದಾರೆ: “ಹನುಮಂತದೇವನ ಮಹಾಮೂರ್ತಿಯನ್ನು ಧ್ಯಾನಮಾಡುತ್ತ ಮಾಡುತ್ತ ನನ್ನ ವೈಶಿಷ್ಟ್ಯವೆ ಸಂಪೂರ್ಣವಾಗಿ ವಿಸ್ಮೃತವಾಯಿತು. ದೈನಂದಿನ ಆಹಾರ ಆಚಾರಗಳಲ್ಲಿ ಹನುಮಂತನಂತೆ ಆಡತೊಡಗಿದೆನು. ನಾನು ಅನುಕರಣ ಮಾಡಲಿಲ್ಲ, ಸ್ವಾಭಾವಿಕವಾಗಿಯೆ ಹಾಗೆ ಆಯಿತು. ನಡೆಯುವುದಕ್ಕೆ ಬದಲಾಗಿ ನೆಗೆಯುತ್ತಿದ್ದೆ. ಸೊಂಟಕ್ಕೆ ಬಿಗಿದ ಬಟ್ಟೆಯ ತುದಿ ಬಾಲದಂತೆ ಜೋಲಾಡುತ್ತಿತ್ತು. ಹಣ್ಣು ಗೆಡ್ಡೆಗಳನ್ನೇ ತಿನ್ನುತ್ತಿದ್ದೆ. ಸಿಪ್ಪೆ ಸುಲಿಯುತ್ತಲೂ ಇರಲಿಲ್ಲ. ಮರಗಳ ಮೇಲೆ ‘ರಘುವೀರ! ರಘುವೀರ! ’ ಎಂದು ಕಿರಿಚುತ್ತ ಬಹುಕಾಲ ಕಳೆಯುತ್ತಿದ್ದೆ. ನನ್ನ ಕಣ್ಣುಗಳು ಮಂಗನ ಕಣ್ಣುಗಳಂತೆ ಚಂಚಲವಾಗಿದ್ದುವು. ಎಲ್ಲದಕ್ಕಿಂತಲೂ ಆಶ್ಚರ್ಯವಾದುದೆಂದರೆ – ನನ್ನ ಬೆನ್ನು ಮೂಳೆಯ ತುದಿ ಒಂದಂಗುಲ ಉದ್ದವಾಯಿತು! ಆ ಸಾಧನೆ ಪೂರೈಸಿದ ಮೇಲೆ ಕ್ರಮೇಣ ಮೊದಲಿನಂತೆಯೆ ಆಯಿತು. ಎಲ್ಲ ವಿಧದಲ್ಲಿಯೂ ಕಪಿಯನ್ನೆ ಹೋಲುತ್ತಿದ್ದೆ.” ದಾಸ್ಯಭಾವ ಸಾಧನೆಯ ತುದಿಯಲ್ಲಿ ಅವರಿಗೆ ಒಂದು ಅಪೂರ್ವ ದರ್ಶನವಾಯಿತು. ಒಂದು ದಿನ ಪಂಚವಟಿಯಲ್ಲಿ ಸುಮ್ಮನೆ ಕುಳಿತಿದ್ದರು. ಧ್ಯಾನಗೀನ ಮಾಡುತ್ತಿರಲಿಲ್ಲ. ಹಠಾತ್ತಾಗಿ ನಿರುಪಮ ಜ್ಯೋತಿರ್ಮಯೀ ಸ್ತ್ರೀಮೂರ್ತಿಯೊಂದು ಪ್ರತ್ಯಕ್ಷವಾಯಿತು. ನೋಡುತ್ತಾರೆ, ಆಕೆಯ ಪಾದದೆಡೆ ಹನುಮಂತದೇವನು ಕೂಮುಗಿದು ಕುಳಿತಿದ್ದಾನೆ! ಆಜನ್ಮದುಃಖಿನಿಯಾದ ಸೀತಾಮಾತೆಯೆಂದು ಗೊತ್ತಾಗಿ ಅಡ್ಡಬೀಳುವುದರಲ್ಲಿಯೆ ಆ ಮೂರ್ತಿ ಪರಮಹಂಸರ ದೇಹವನ್ನು ಪ್ರವೇಶಮಾಡಿಬಿಟ್ಟಿತು. ಆಗ ಅವರು ಆನಂದ ವಿಸ್ಮಯಗಳಿಂದ ಬಾಹ್ಯಜ್ಞಾನ ಶೂನ್ಯರಾಗಿ ನೆಲದ ಮೇಲೆ ಬಿದ್ದುಬಿಟ್ಟರು.

ಸದಾ ತದೇಕಧ್ಯಾನಸ್ಥರಾಗಿಯೂ ಪದೇ ಪದೇ ಭಾವಸಮಾಧಿಗ್ರಸ್ತರಾಗಿಯೂ ಆಗುತ್ತಿದ್ದ ಶ್ರೀರಾಮಕೃಷ್ಣರಿಗೆ ಭವತಾರಿಣಿಯ ಪೂಜೆಯನ್ನು ಪದ್ಧತಿಯಂತೆ ಮಾಡಲಾಗದೆ ಹೋಯಿತು. ಆದ್ದರಿಂದ ಅವರ ಕೋರಿಕೆಯಂತೆ ಮಥುರನಾಥನು ಹೃದಯನನ್ನು[2] ಆ ಕೆಲಸಕ್ಕೆ ನೇಮಿಸಿದನು. ಅದಕ್ಕೆ ಇನ್ನೊಂದು ಕಾರಣವೂ ಇತ್ತು. ಕಠಿನಸಾಧನೆಗಳನ್ನು ಕೈಕೊಂಡ ಪರಮಹಂಸರ ದೇಹ ಶಿಥಿಲವಾಯಿತು. ಯಾವುದೊ ನರಗಳ ಜಾಡ್ಯವಿರಬಹುದೆಂದು ಮಥುರನೂ ಕೂಡ ಸಂದೇಹಪಟ್ಟು ಕಲ್ಕತ್ತೆಯಿಂದ ವೈದ್ಯನೊಬ್ಬನನ್ನು ಕರೆಯಿಸಿ ಔಷಧಿ ಕೊಡಿಸತೊಡಗಿದನು. ಇದೇ ಸಂದರ್ಭದಲ್ಲಿ ಆತನು ಹದ್ದುಮೀರಿ ಸಾಧನೆ ಮಾಡಬಾರದೆಂದೂ ಪ್ರಕೃತಿಯ ನಿಯಮಗಳನ್ನು ಉಲ್ಲಂಘಿಸಬಾರದೆಂದೂ ಶ್ರೀರಾಮಕೃಷ್ಣರನ್ನು ಕೇಳಿಕೊಳ್ಳುವ ಸಮಯದಲ್ಲಿ “ದೇವರಿಗೂ ತನ್ನ ನಿಯಮಗಳನ್ನು ಮೀರಲು ಶಕ್ತಿಯಿಲ್ಲ” ಎಂದು ಹೇಳಿದ ಮಾತಿಗೆ ಪರಮಹಂಸರು “ಛೀ, ಎಂತಹ ಮೂರ್ಖ ಸಿದ್ಧಾಂತ ನಿನ್ನದು! ನಿಯಮಗಳನ್ನು ಮಾಡಲಾರನೆ?” ಎಂದರು. ಅದಕ್ಕೆ ಮಥುರನು “ಅದು ಹೇಗೆ? ಯಾವಾಗಲೂ ಕೆಂಪು ಹೂಗಳೇ ಬಿಡುವ ಗಿಡದಲ್ಲಿ ಬಿಳಿಯ ಹೂ ಬರುತ್ತದೇನು?” ಎಂದನು. “ಅದನ್ನು ಕೂಡ ಆತನು ಸುಲಭವಾಗಿ ಮಾಡಬಲ್ಲನು. ಎಲ್ಲವೂ ಆತನ ಇಚ್ಛೆ” ಎಂದರು ಪರಮಹಂಸರು. ಮಥುರನಾಥನಿಗೆ ಸಮಾಧಾನವಾಗಲಿಲ್ಲ. ಮರುದಿನ ದೇವಸ್ಥಾನದ ತೋಟದಲ್ಲಿ ಕೆಂಪು ದಾಸವಾಳದ ಗಿಡದಲ್ಲಿ ಒಂದು ಬಿಳಿಯ ಹೂ ಬಿಟ್ಟಿತ್ತು. ಪರಮಹಂಸರು ಅದನ್ನು ಮಥುರನಾಥನಿಗೆ ತೋರಿಸಿ ಅವನ ಸಂದೇಹ ಪರಿಹಾರ ಮಾಡಿದರಂತೆ.

ವೈದ್ಯನ ಔಷಧಿಯಿಂದ ಪರಮಹಂಸರ ಭಾವಸಮಾಧಿ ಗುಣವಾಗದಿದ್ದುದನ್ನು ಕಂಡು, ಕಠಿನ ಬ್ರಹ್ಮಚರ್ಯ‌ವ್ರತವು ರೋಗಕ್ಕೆ ಕಾರಣವಾಗಿರಬಹುದೆಂದು ಬಗೆದು ಮಥುರನು ಸದ್ಭಾವದಿಂದಲೆ ಒಂದು ಅವಿವೇಕವಾದ ಅಚಾತುರ್ಯವನ್ನು ಆಲೋಚಿಸಿದನು. ಒಂದು ದಿನ ಪರಮಹಂಸರನ್ನು ಯಾವದೊ ನೆವದಿಂದ ಕಲ್ಕತ್ತೆಗೆ ಕರೆದೊಯ್ದು ವೇಶಾಗೃಹ ಪ್ರವೇಶ ಮಾಡಿಸಿದನು. ಆದರೆ ಲಲನೆಯರು “ವಿಟಪುರುಷ’ನ ಶಿಶುಭಾವವನ್ನು ಆತನ ಬಾಯಿಂದೆ ಎಡೆಬಿಡದೆ ಹೊರಡುತ್ತಿದ್ದ “ತಾಯಿ! ತಾಯಿ!” ಎಂಬ ಮಹಾಮಂತ್ರವನ್ನೂ ನೋಡಿ ಆಲಿಸಿ, ಲಜ್ಜೆಯಿಂದಲೂ ಪಶ್ಚಾತ್ತಾಪದಿಂದಲೂ ಕ್ಷಮೆ ಬೇಡಿದರು. ಗಲಭೆಯನ್ನು ಕೇಳಿ ಅಲ್ಲಿಗೆ ಹಿಂತಿರುಗಿ ಬಂದ ಸಂಚುಗಾರ ಮಥುರನಾಥನು ಮಹಾಪರಾಧವಾಯಿತೆಂದು ತಿಳಿದು ಶ್ರೀರಾಮಕೃಷ್ಣರನ್ನು ಅಲ್ಲಿಂದ ಕರೆದೊಯ್ದನು. ವೇಶ್ಯೆಯರು ಜಮೀನುದಾರನನ್ನು ಬಾಯಿಗೆ ಬಂದಂತೆ ಬಯ್ದರು. ಅಂತೂ ಶ್ರೀರಾಮಕೃಷ್ಣರ ಸಾಧನೆ, ದರ್ಶನ, ಭಾವಸಮಾಧಿಗಳ ವಿಚಾರವಾಗಿ ಹಲವರು ಹಲವು ರೀತಿಯಾಗಿ ಆಲೋಚಿಸಿದರು. ಹಲಧಾರಿ ಅವುಗಳಿಗೆಲ್ಲ ಚಿತ್ತಭ್ರಮೆಯೆ ಕಾರಣವೆಂದು ಸೂಚಿಸಿದನು. ಜಗನ್ಮಾತೆ ಭಕ್ತನನ್ನು ಹೀಗೆಲ್ಲ ವಂಚಿಸುವಳೆ ಎಂದು ವಿಷಾದಪಟ್ಟು ಪರಮಹಂಸರು ಎಂದಿನಂತೆ ಗುಡಿಗೆ ಹೋಗಿ ಭವತಾರಿಣಿಯನ್ನು ಕೇಳಿದರು. ಆಗ ಗುಡಿಯೆಲ್ಲ ಮಂಜಿನಿಂದ ತುಂಬಿದಂತಾಗಿ ಅದರ ಮಧ್ಯೆ ಒಂದು ಮೂರ್ತಿ ಗೋಚರಿಸಿತು. ತೇಜಸ್ವಿಯಾದ ವದನ; ಶಾಂತಿ ತುಂಬಿತ್ತು; ನೀಳವಾದ  ಗಡ್ಡದಿಂದ ಶೋಭಿಸುತ್ತಿತ್ತು. ಆ ಮೂರ್ತಿ ತನ್ನ ಅನಿಮಿಷ ನಯನಗಳಿಂದ ಪರಮಹಂಸರನ್ನು ಈಕ್ಷಿಸುತ್ತ “ಭಾವಮುಖದಲ್ಲಿರು! ಭಾವಮುಖದಲ್ಲಿರು! ಭಾವಮುಖದಲ್ಲಿರು”[3] ಎಂದು ಮೂರು ಸಾರಿ ಗಂಭೀರವಾಣಿಯಿಂದ ಹೇಳಿ ಅದೃಶ್ಯವಾಯಿತು. ಪರಮಹಂಸರು ಎಂದಿನಂತೆ ನಿರ್ಭರತೆಯಿಂದ ಹಿಂದಿರುಗಿದರು.

ಇಂತು ದಕ್ಷಿಣೇಶ್ವರದಲ್ಲಿ ಹೊರೆಯೇರಿ ಹರಿಯಲು ತೊಡಗಿದ ಪರಮಹಂಸರ ಈಶ್ವರೋನ್ಮಾದ ವಾಹಿನಿಯ ಕಾಹಿನಿ ದೂರದ ಕುಗ್ರಾಮವಾದ ಕಾಮಾರಪುಕುರಕ್ಕೆ ತಲುಪಿತು. ಚಂದ್ರಮಣಿದೇವಿ ಬೆಚ್ಚಿದಳು – ಗದಾಧರನಿಗೆ ಹುಚ್ಚು ಹಿಡಿದಿದೆ, ಆಗಾಗ ಮೂರ್ಛೆ ಬೀಳುತ್ತಾನೆ. ಸರಿಯಾಗಿ ನಿದ್ರಾಹಾರಗಳಿಲ್ಲದೆ ಸೊರಗಿದ್ದಾನೆ. ಜನಿವಾರವನ್ನು ಬಿಸಾಡುತ್ತಾನೆ. ದೇವಿಯ ಪೀಠದ ಮೇಲೆ ಹತ್ತಿ ಕುಣಿಯುತ್ತಾನೆ. ರಾಣಿ ರಾಸಮಣಿಯನ್ನು ಹೊಡೆದನಂತೆ! ಚಿನ್ನವನ್ನೂ ಮಣ್ಣನ್ನೂ ಹಿಡಿದುಕೊಂಡು ಗಂಗೆಯ ತಡಿಯಲ್ಲಿ ಕುಳಿತು “ಅದೇ ಇದು! ಇದೇ ಅದು!” ಎಂದು ಹೇಳುತ್ತಾ ಎರಡನ್ನೂ ಹೊಳೆಗೆ ಎಸೆಯುತ್ತಾನೆ ತಿರುಕರು ತಿಂದುಬಿಟ್ಟ ಎಂಜಲೆಲೆಗಳನ್ನು ನೆಕ್ಕುತ್ತಾನೆ. ಬೇಡವೆಂದರೆ ಎಲ್ಲವೂ ದೇವಿಯ ಪ್ರಸಾದವೆಂದು ಆರ್ಭಟಿಸುತ್ತಾನೆ! ಹಲಾಲುಕೋರರು ತೊಳೆಯುವ ಅಶುಚಿಯನ್ನು ತಾನೇ ತೊಳೆಯುತ್ತಾನೆ! ಹುಚ್ಚು ಮಿತಿಮೀರಿ ಹೋಗಿದೆ. ವೈದ್ಯರ ಪ್ರಯತ್ನವೂ ಸಾಗಲಿಲ್ಲ – ಇದನ್ನೆಲ್ಲ ಕೇಳಿ ತಾಯಿಯ ಮುದ್ದಿನ ಹೂವೆದೆ ನೊಂದಿತು; ಬೆಂದಿತು; ನಿಡುಸುಯ್ದು “ರಘುವೀರ!” ಎಂದಿತು. ತನ್ನ ಮುದ್ದು ಕುವರನನ್ನು ಮುದ್ದಿನ ಹಳ್ಳಿಗೆ ಕರೆಯಿಸಿಕೊಂಡು ಮದ್ದು ಕೊಟ್ಟು ಶುಶ್ರೂಷೆ ಮಾಡಬೇಕೆಂದು ಆಕೆಯ ಮಾತೃ ಹೃದಯ ಹಾತೊರೆಯಿತು. ಹಿರಿಯ ಮಗನನ್ನು ಕಳೆದುಕೊಂಡಿದ್ದ ತಾಯಿಗೆ ಕಿರಿಯ ಮಗನ ಚಿಂತೆ ದಾರುಣವಾಯಿತು. ದಕ್ಷಿಣೇಶ್ವರಕ್ಕೆ ಮೇಲಿಂದ ಮೇಲೆ ರಾಮೇಶ್ವರನಿಂದ ಕಾಗದ ಬರೆಯಿಸಿದಳು. ಪರಮಹಂಸರು ಜನನಿಯ ಕರೆಯನ್ನು ಮನ್ನಿಸಿ ಕಾಮಾರಪುಕುರಕ್ಕೆ ಹೋದರು. ಮಾತೆ ಮಗನನ್ನು ಕಂಡು ಸಂತೋಷಪಟ್ಟರೂ ಆತನ ಸ್ಥಿತಿಯನ್ನು ನೋಡಿ ಮರುಗಿದಳು. ಮಗನು ಮೊದಲಿನ ಮಗನಾಗಿರಲಿಲ್ಲ. ಪ್ರಾಪಂಚಿಕ ವಿಷಯಗಳಲ್ಲಿ ಔದಾಸೀನ್ಯವು ಎಂದಿಗಿಂತಲೂ ಅತಿಶಯವಾಗಿತ್ತು. ಹಿಂದಿದ್ದ ಮುಗ್ಧಮುಖಕಾಂತಿ ಮಾಸಿಹೋಗಿ ಚಿಂತೆಯ ಕರಿದೆರೆ ಮುಸುಗಿತ್ತು. ಬಾಲ್ಯದ ಸ್ನೇಹಿತರಲ್ಲಿ ಹಿಂದೆ ಆತನಿಗಿದ್ದ ಕುತೂಹಲ ಮಂದವಾಗಿತ್ತು. ಹಿಂದೆ  ಆತನ ಕಣ್ಣಿಗೆ ಮನೋಹರವಾಗಿದ್ದ ಗ್ರಾಮದ ರಮಣೀಯ ದೃಶ್ಯಗಳು ಈಗ ಸಾಧಾರಣವಾಗಿ ತೋರಿದುವು. ಅಲ್ಲದೆ ನಡುನಡುವೆ ಕಾತರ ಕಂಠದಿಂದಲೂ ಕ್ರಂದನ ಧ್ವನಿಯಿಂದಲೂ “ಜನನೀ! ಜನನೀ!” ಎಂದು ಕೂಗುತ್ತಿದ್ದನು. ಚಂದ್ರಮಣಿದೇವಿ ವೈದ್ಯರಿಂದ ಔಷಧಿ ಕೊಡಿಸಿದಳು. ತನ್ನ ತಾಯ್ತನವನ್ನೆಲ್ಲ ಸೂರೆಮಾಡಿ ಶುಶ್ರೂಷೆ ಮಾಡಿದಳು. ದೇವರಿಗೆ ಹೇಳಿಕೊಂಡು ಶಾಂತಿ ಮಾಡಿಸಿದಳು. ಯಾವುದಾದರೂ ದುಷ್ಟಪಿಶಾಚದ ಕಾಟವಿರಬಹುದು ಎಂದುಕೊಂಡು ಮಂತ್ರವಾದಿಗಳಿಂದ ಯಂತ್ರ ಕಟ್ಟಿಸಿದಳು. ಕ್ರಮೇಣ ದೈಹಿಕ ಪರಿಸ್ಥಿತಿ ಗುಣಮುಖವಾಯಿತು. ಆದರೆ ಮಾನಸಿಕ ಸ್ಥಿತಿ ಎಂದಿನಂತೆಯೇ ಇತ್ತು. ಕಡೆಗೆ ಮದುವೆಮಾಡಿದರೆ ಮಗನ ಮನಸ್ಸು ಶಾಂತವಾಗುವುದೆಂದು ತಾಯಿಯ ಮುಗ್ಧಹೃದಯ ಹಾರೈಸಿತು. ಸುಂದರಿಯಾದ ಲಲನೆ ಪತ್ನಿಯಾಗಿ ಮನೆಗೆ ಬಂದರೆ ಮಗನ ಮನಸ್ಸು ಸಂಸಾರದ ಕಡೆ ತಿರುಗಿ ಆಕಾಶವಿಹಾರ ತಪ್ಪುವುದೆಂದು ಆಕೆ ಆಲೋಚಿಸಿದಳು. ಆದರೆ ಹುಚ್ಚು ಗಂಡಿಗೆ ಹೆಣ್ಣು ಕೊಡುವವರಾರು? ಕೆಲವರು ಬಹಳ ಕನ್ಯಾ ಶುಲ್ಕ ಕೇಳಿದರು. ಅಂತೂ ಕಡೆಗೆ ಎಲ್ಲಿಯೂ ಹೆಣ್ಣು ದೊರಕಲಿಲ್ಲ. ತಾಯಿಯೂ ಅಣ್ಣನೂ ಹತಾಶರಾದರು. ಇಂತಿರುತ್ತಿರಲು ಒಂದು ದಿನ ಶ್ರೀರಾಮಕೃಷ್ಣರು ಭಾವಾವಿಷ್ಟರಾಗಿ “ಅಲ್ಲಿ ಇಲ್ಲಿ ಹುಡುಕಿ ಪ್ರಯೋಜನವಿಲ್ಲ. ಜಯರಾಂಬಾಟಿಯ ರಾಮಚಂದ್ರ ಮುಖ್ಯೋಪಾಧ್ಯಾಯನ ಮನೆಯಲ್ಲಿ ವಿಧಿ ನನಗಾಗಿ ಎಳೆಕಟ್ಟಿ ಮೀಸಲಾಗಿರಿಸಿರುವ ಹುಡುಗಿಯಿದ್ದಾಳೆ; ಹೋಗಿ ನೋಡಿ!” ಎಂದು ಹೇಳಿದರು. ಮೊದಮೊದಲು ಪರಮಹಂಸರ ಮಾತಿನಲ್ಲಿ ಯಾರಿಗೂ ನಂಬುಗೆ ಹುಟ್ಟಲಿಲ್ಲ. ಕಡೆಗೆ ಏನಾದರೂ ಆಗಲಿ ನೋಡುವುದು ಎಂದು ಜಯರಾಂಬಾಟಿಗೆ ಒಬ್ಬನನ್ನು ಕಳುಹಿಸಿ ವಿಚಾರಿಸಿದರು. ಹುಡುಗಿಯೇನೊ ಇದ್ದಾಳೆ; ಹುಡುಗನಿಗೆ ಯೋಗ್ಯಳೂ ಅಹುದು; ಆದರೆ ಆಕೆಗೆ ಇನ್ನೂ ಐದೇ ವರ್ಷ ವಯಸ್ಸು ಎಂಬ ಉತ್ತರ ಬಂದಿತು. ಚಂದ್ರಾದೇವಿ ಏನಾದರಾಗಲಿ ಹುಡುಗಿ ಸಿಕ್ಕಿದಳು; ಅಷ್ಟೇ ಸಾಕು ಎಂದು ಒಪ್ಪಿದಳು. ಕ್ರಿ.ಶ. ೧೮೫೯ರಲ್ಲಿ ಶ್ರೀಯುತ ಖುದಿರಾಮ ಚಟ್ಟೋಪಾಧ್ಯಾಯನ ಕನಿಷ್ಠ ಪುತ್ರನಾದ ಶ್ರೀ ಗದಾಧರ ಚಟ್ಟೋಪಾಧ್ಯಾಯನೆಂಬ ವರನಿಗೆ ಜಯರಾಂಬಾಟಿಯ ಶ್ರೀ ಯುತ ರಾಮಚಂದ್ರ ಮುಖ್ಯೋಪಾಧ್ಯಾಯನ ಪ್ರಿಯ ಪುತ್ರಿಯಾದ ಶ್ರೀಮತಿ ಶಾರದಾ ಮಣಿದೇವಿ ಎಂಬ ಕನ್ನೆಯನ್ನು ತಮದು ವಿವಾಹ ಮಹೋತ್ಸವ ನೆರವೇರಿತು! ರಾಮೇಶ್ವರನು ಮುನ್ನೂರು ರೂಪಾಯಿ ತೆರ ಕೊಡಬೇಕಾಯಿತು .


[1] ಆಟದ ಹಣ್ಣೂ ಆಟದ ಆನೆಯೂ ನಿಜವಾದ ಹಣ್ಣನ್ನೂ ಜೀವದ ಆನೆಯನ್ನೂ ನಮ್ಮ ನೆನಪಿಗೆ ತರುವಂತೆ ನಾವು ಆರಾಧಿಸುವ ವಿಗ್ರಹಗಳು ಶಾಶ್ವತನೂ ನಿರಾಕಾರನೂ ಆದ ಭಗವಂತನನ್ನು ನಮ್ಮ ಜ್ಞಾಪಕಕ್ಕೆ ತರುತ್ತವೆ.

[2] ಶ್ರೀರಾಮಕೃಷ್ಣರ ಸೋದರಳಿಯ – ತಂದೆಯ ತಂಗಿ ರಾಮಶೀಲಾಳ ಮಗಳಾದ ಹೇಮಾಂಗಿನಿಯ ಮಗ. ಇವನು ಬಹಳ ಕಾಲ ಶ್ರೀರಾಮಕೃಷ್ಣರ ಸೇವೆ ಮಾಡಿದನು.

[3] ಶ್ರೀರಾಮಕೃಷ್ಣರಲ್ಲಿ ಕೆಲವು ಸಾರಿ “ನಾನು” ಎಂಬುದು ಸಂಪೂರ್ಣವಾಗಿ ವಿಲುಪ್ರವಾಗಿ ಮತ್ತೆ ಕೆಲವು ಸಾರಿ ಸ್ವಲ್ಪ ತೋರುತ್ತಿತ್ತು. ಆ “ನಾನು – ತ್ವ”ವು ಈಷದುನ್ವೇಷವಾದಾಗ ಪರಮಹಂಸರಿಗೆ ಜಗತ್ತು ಜನಸಾಮಾನ್ಯರಿಗೆ ತೋರುವಂತೆ ತೋರುತ್ತಿರಲಿಲ್ಲ. ಒಂದು ಮಹಾ ವಿರಾಟ್ ಮನದಲ್ಲಿ ನಾನಾಭಾವತರಂಗಗಳು ಮೂಡಿ, ಆಡಿ, ಮರಳಿ ಮಡಿಯುವಂತೆ ತೋರುತ್ತಿತ್ತು. ಇತರ ವಸ್ತಗಳೇ ಅಲ್ಲದೆ ತಮ್ಮ ಸ್ವಂತ ದೇಹ ಮನಸ್ಸು ಮತ್ತು “ನಾನು-ತ್ವ”ಗಳೂ ಆ ವಿರಾಣ್ಮನದಲ್ಲಿ ತರಂಗಮಾತ್ರಗಳಾಗಿ ತೋರುತ್ತಿದ್ದವು. ಆಬ್ರಹ್ಮಸ್ತಂಬಪರ್ಯಂತವಾಗಿ ಇಚ್ಛೆ, ಕ್ರಿಯೆ, ಜೀವಂತ, ಜಾಗ್ರತ ಎಲ್ಲವೂ ಏಕಮೇವಾದ್ವಿತೀಯವಾದ ವಿರಾಟ್ ಅಹಂಕಾರದಲ್ಲಿ ವಿಕಸಿತವಾಗಿರುತ್ತಿದ್ದವು. ಈ ವಿರಾಟ್ ಅಹಂಕಾರವಿರುವಾಗಲೇ ವಿರಾಟ್ ಮನದಲ್ಲಿ ಅನಂತ ಭಾವತರಂಗವು ತೋರುವುದು. ಆ ಮಹಾ ಭಾವತರಂಗದಲ್ಲಿ ಸಣ್ಣ ಸಣ್ಣ ಭಾವತರಂಗಗಳು ತೋರಿದಾಗಲೇ ನಾವು ಬಹಿರ್ಜಗತ್ತನ್ನೂ ಕ್ಷುದ್ರಕ್ಷುದ್ರ ಅಹಂಕಾರಗಳನ್ನೂ ಅವುಗಳ ಪರಸ್ಪರ ಕ್ರಿಯೆ ಪ್ರತಿಕ್ರಿಯೆಗಳನ್ನೂ ನೋಡುತ್ತೇವೆ. ಸಣ್ಣಸಣ್ಣ “ನಾನು”ಗಳು “ದೊಡ್ಡ ನಾನನ್ನು” ನೋಡಲು ಎಲ್ಲವೂ ಅದರ ಕ್ರಿಯೆ ಎಂಬುದು ಗೊತ್ತಾಗುತ್ತದೆ. ಈ ಸಣ್ಣ “ನಾನು”ಗಳ ಭ್ರಾಂತಿಯೆ ಅವಿದ್ಯೆ ಎಂದು ಶಾಸ್ತ್ರದಲ್ಲಿ ಪ್ರಸಿದ್ಧವಾಗಿದೆ. ನಿಸ್ತರಂಗ ವಿರಾಟವೆ ನಿರ್ಗುಣ ಬ್ರಹ್ಮ; ಸತರಂಗ ವಿರಾಟವೆ ಸಗುಣ ಬ್ರಹ್ಮ. ನಿರ್ಗುಣ ಸಗುಣಗಳ ಮಧ್ಯೆ ಇರುವ ವಿರಾಟ್ ಅಹಂಕಾರವೆ “ಭಾವಮುಖ.” ಪರಮಹಂಸರು ಭಾವಮುಖದ ಗಡಿಯನ್ನು ದಾಟಿದಾಗ ವಿರಾಟ್ ಅಹಂಕಾರವು – “ನಾನು”, ಜಗತ್ತು ಎಲ್ಲವೂ ಸಂಪೂರ್ಣವಾಗಿ ಅಳಿಸಿ ಹೋಗುತ್ತಿತ್ತು. ಭಾವಮುಖದಲ್ಲಿದ್ದಾಗ ಯಾವುದು ಬ್ರಹ್ಮವೋ ಅದೇ ಶಕ್ತಿ, ಯಾವುದು ನಿರ್ಗುಣವೊ ಅದೇ ಸಗುಣ, ಯಾವುದು ಪುರುಷವೋ ಅದೇ ಪ್ರಕೃತಿ, ಅಥವಾ ಯಾವುದು ಸ್ವರೂಪತಃ ನಿರ್ಗುಣವೋ ಅದೇ ಲೀಲೆಯಿಂದ ಸಗುಣ ಎಂಬುದು ಅನುಭವವಾಗುತ್ತಿತ್ತು.