ಯಾವಾಗಲೂ ತುಂಬುಹೊನಲಾಗಿ ಹರಿಯುವ ಗಂಗೆಯ ಎಡ ದಡದಲ್ಲಿ ಕಲ್ಕತ್ತೆಗೆ ನಾಲ್ಕು ಮೈಲಿ ದೂರ ಉತ್ತರ ದಿಕ್ಕಿನಲ್ಲಿ, ನಾಗರಿಕತೆಯ ಅಶ್ಲೀಲ ಅಟ್ಟಹಾಸದ ಗಲಿಬಿಲಿ ತಟ್ಟದ ಪವಿತ್ರ ಮೌನಮುದ್ರಿತ ರಮ್ಯ ಪ್ರದೇಶದಲ್ಲಿ ಉನ್ನತ ನಿಬಿಡಬಾಗಿ ಬೆಳೆದ ವಿವಿಧ ತರುಸಮೂಹದ ಮಧ್ಯೆ ದಕ್ಷಿಣೇಶ್ವರದ ಮಹಾಕಾಳಿಕಾದೇವಾಲಯವು ಧರ್ಮದ ವೈಜಯಂತಿಯಂತೆ ಧೀರಗಂಭೀರವಾಗಿ ನಿಂತಿದೆ. ಯಾತ್ರಿಕನು ನೌಕೆಯಿಂದಿಳಿದು ಹೊಳೆಗೆ ಕಾಲುಚಾಚಿಕೊಂಡಂತಿರುವ ಸುವಿಸ್ತೀರ್ಣ ಸೋಪಾನ ಶ್ರೇಣಿಯನ್ನು ಏರಿ ಪೂರ್ವಮುಖವಾಗಿ ಹೋದರೆ ದೇವಾಲಯಕ್ಕೆ ಹೆಬ್ಬಗಿಲಂತಿರುವ ಚಂದ್ರಶಾಲೆಗೆ ಮುಟ್ಟುತ್ತಾನೆ. ಚಂದ್ರಶಾಲೆಯ ಇಕ್ಕೆಲದಲ್ಲಿಯೂ ಆರಾರು ಶಿವಮಂದಿರಗಳು ಸಾಲಾಗಿ ಎದ್ದಿವೆ. ಚಂದ್ರಶಾಲೆಯನ್ನು ದಾಟಿದರೆ ಇಟ್ಟಿಗೆ ಹಾಸಿದ ವಿಸ್ತಾರವಾದ ಅಂಗಣ ಸಿಕ್ಕುತ್ತದೆ. ಅಂಗಣದ ನಡುವೆ ಪಕ್ಕಪಕ್ಕದಲ್ಲಿ ಪಂಚ ಕಲಶಗಳಿಂದ ಕೂಡಿರುವ ಎರಡು ದೇವ ಮಂದಿರಗಳಿವೆ. ಉತ್ತರ ದಿಕ್ಕಿನಲ್ಲಿರುವುದು ರಾಧಾಕಾಂತನ ಗುಡಿ; ದಕ್ಷಿಣಕ್ಕಿರುವುದು ಜಗನ್ಮಾತೆಯಾದ ಕಾಳಿಯ ಗುಡಿ ಸುಂದರವಾಗಿದೆ. ಶ್ವೇತ ಕೃಷ್ಣ ಮರ್ಮರ ಪ್ರಸ್ತರಾವೃತವಾದ ಮಂದಿರತಲ; ಸೋಪಾನಯುಕ್ತವಾದ ಉಚ್ಚವೇದಿಕೆ; ವೇದಿಕೆಯ ಮೇಲೆ ಬೆಳ್ಳಿಯಿಂದ ಮಾಡಿದ ಸಾವಿರ ಎಸಳಿನ ತಾವರೆ. ಆ ರೌಪ್ಯಮಯ ಸಯಸ್ರದಲ ಮಹಾಪದ್ಮದ ಮೇಲೆ ತೆಂಕಲಿಗೆ ತಲೆಯಾಗಿಯೂ ಬಡಗಲಿಗೆ ಕಾಲಾಗಿಯೂ ಬಿಳಿಯ ಹಾಲುಗಲ್ಲಿನ ಮಹಾ ಶಿವಮೂರ್ತಿ ಅವಯಕ್ತವೂ ನಿರ್ಗುಣವೂ ಅಕರ್ಮವೂ ನಿಷ್ಕಲಂಕವೂ ಚಿರಸುಪ್ತವೂ ಚಿರಶಾಂತವೂ ಸತ್ತ್ವಪೂರ್ಣವೂ ಆಗಿರುವ ಪರಬ್ರಹ್ಮದ ಪ್ರತೀಕವಾಗಿ ಶವದಂತೆ ಬಿದ್ದಿದೆ. ಆ ಶವ ಶಿವಮೂರ್ತಿಯ ಎದೆಯ ಮೇಲೆ ವ್ಯಕ್ತವೂ ಗುಣಮಯವೂ ಕರ್ಮಮಯವೂ ಚಿರ ಜಾಗ್ರತವೂ ರಜೋಗುಣಪೂರ್ಣವೂ ಆಗಿರುವ ಮಾಯೆಯ ಪ್ರತಿನಿಧಿಯಾಗಿ ನೀಲಪ್ರಸ್ತರ ನಿರ್ಮಿತ ತ್ರಿಯನಿಯಾದ ಸುಂದರ ಭರತಾರಿಣಿ ವಿವಿಧ ವಸ್ತ್ರ ಭೂಷಣ ಭೂಷಿತೆಯಾಗಿ ಸ್ವರ್ಣನಿರ್ಮಿತ ರುಂಡಮಾಲಿನಿಯಾಗಿ ನರಕರ ಮಾಲಾಕಟಿ ಬಂಧನ ರಂಜಿತೆಯಾಗಿ ಅಭಯಹಸ್ತೆಯಾಗಿ ನಾಟ್ಯಭಂಗಿಯಿಂದ ನಿಂತಿದ್ದಾಳೆ. ಆಕೆಯೆ ಜಗದ್ವಂದ್ಯ ಶ್ರೀರಾಮಕೃಷ್ಣರು ಆರಾಧಿಸಿದ ಜಗನ್ಮಾತೆ.

ದೇವಾಲಯದ ನಾಲ್ಕು ದಿಕ್ಕುಗಳಲ್ಲಿಯೂ ಮಹಾಪ್ರಾಕಾರಗಳಿವೆ. ಅವುಗಳೆಲ್ಲ ವಾಸಯೋಗ್ಯವಾದ ಕೊಠಡಿಗಳಿಂದ ಕೂಡಿವೆ. ಅಂಗಣದ ಒಂದು ಪಾರ್ಶ್ವದಲ್ಲಿ ನಾಟ್ಯಮಂದಿರವೂ ಬಲಸ್ಥಾನವೂ ಇವೆ. ಗುಡಿಯ ಉತ್ತರ ದಿಕ್ಕಿನ ಪ್ರಾಕಾರದ ಪಶ್ಚಿಮ ಮೂಲೆಯಲ್ಲಿ ಒಂದು ಪ್ರಶಸ್ತವಾದ ಕೋಣೆಯಿದೆ. ಅದೇ ಶ್ರೀರಾಮಕೃಷ್ಣ ಪರಮಹಂಸರು ತಮ್ಮ ಸಾಧನ ಮತ್ತು ಸಾಧನೋತ್ತ್ರ ಜೀವಮಾನದಲ್ಲಿ ವಾಸಮಾಡಿದ ಕೋಣೆ.

ಗುಡಿಗೆ ಬಡಗಲಲ್ಲಿ ವನಸದೃಶವಾದ ಒಂದು ಉದ್ಯಾನವಿದೆ. ಇದಕ್ಕೆ ಪಂಚವಟಿ ಎಂದು ಹೆಸರು. ಅಲ್ಲಿ ಜನಜೀವನದ ಗಡಿಬಿಡಿಯಿಲ್ಲ. ವನ್ಯ ಶಾಂತಿ ತುಂಬಿದೆ. ಆಲ, ಅರಳಿ, ಬೇವು, ನೆಲ್ಲಿ, ಬಿಲ್ವ ಮೊದಲಾದ ಮರಗಳು ಒಂದರೊಡನೆ ಒಂದು ಹೆಣೆದುಕೊಂಡು ನಿಬಿಡ ಪರ್ಣವಿತಾನವಾಗಿ ಒಂದು ಎಲೆವನೆಯಂತಿದೆ. ಆ ಮರಗಳ ಬುಡದಲ್ಲಿ ಸೋಪಾನಯುಕ್ತವಾದ ವೇದಿಕೆಯೊಂದು ಸುತ್ತಲೂ ಹಬ್ಬಿದೆ. ಅದು ಪರಮಹಂಸರ ಸಾಧನೆಗೆ ಮಂಗಳರಂಗವಾಗಿತ್ತು. ಅಂತೂ ದಕ್ಷಿಣೇಶ್ವರವು ಸ್ವಾಭಾವಿಕ ಸನ್ನಿವೇಶದಿಂದಲೂ ತರುಲತೆಗಳ ಸಹವಾಸದಿಂದಲೂ ಪುಣ್ಯಮಯಿಯಾದ ಭಾಗೀರಥಿಯ ಪಾವನ ಸಾನ್ನಿಧ್ಯದಿಂದಲೂ ಲೋಕ ಪೂಜಿತರೂ ಸರ್ವಧರ್ಮ ಸಮನ್ವಯಾಚಾರ್ಯರೂ ಯುಗಾವತಾರರೂ ಆದ ಶ್ರೀರಾಮಕೃಷ್ಣ ಪರಮಹಂಸರ ಜೀವನ ಮಹಾಲೀಲೆಯ ಸ್ಮೃತಿ ಸಂಗದಿಂದಲೂ ಯಾತ್ರಿಕರಿಗೆ ಒಂದು ಮಹಾ ಆನಂದ ನಿಕೇತನವಾಗಿದೆ.

ಪರಮಹಂಸರ ಆಧ್ಯಾತ್ಮಿಕ ಜೈತ್ರಯಾತ್ರೆಯನ್ನು ವರ್ಣಿಸುವ ಮೊದಲು ಸಾಧನೆಯ ವಿಚಾರವಾಗಿ ಒಂದೆರಡು ವಿಷಯಗಳನ್ನು ತಿಳಿದುಕೊಳ್ಳುವುದು ಲೇಸು. ವ್ಯಕ್ತಿ ಆದರ್ಶಸಿದ್ಧಿಗಾಗಿ ಮಾಡುವ ಸಾಹಸ ಪ್ರಯತ್ನಗಳಿಗೆ ಸಾಧನೆ ಎನ್ನಬಹುದು. ಆಧ್ಯಾತ್ಮಿಕ ಜೀವನಕ್ಕೆ ತುತ್ತ ತುದಿಯ ಗಂತವ್ಯಲಕ್ಷ್ಯವೆಂದರೆ ಪರಮಸತ್ಯ. ಆ ಸತ್ಯಸಾಕ್ಷಾತ್ಕಾರಕ್ಕಾಗಿ ಸಾಧಕನು ಕೈಕೊಳ್ಳುವ ಯಾತ್ರೆಯೆ ಸಾಧನೆ. ಶ್ರೀರಾಮಕೃಷ್ಣರ ವಚನದಂತೆ, ಸರ್ವಭೂತಗಳಲ್ಲಿಯೂ ಬ್ರಹ್ಮದರ್ಶನ ಮಾಡುವುದೆ ಸಾಧನೆಯ ಪರಮಾವಧಿ. ಶಾಸ್ತ್ರಗಳು ಹೇಳುತ್ತವೆ: ಎಲ್ಲವೂ ಬ್ರಹ್ಮ. ಸ್ಥೂಲ, ಸೂಕ್ಷ್ಮ, ಚೇತನ, ಅಚೇತನ, – ಕಲ್ಲುಮಣ್ಣುಗಳಿಂದ ಹಿಡಿದು ದೇವದೇವತೆಗಳವರೆಗೆ ಎಲ್ಲವೂ ಅದ್ವಯ ಬ್ರಹ್ಮವಸ್ತು. ಇಂದ್ರಿಯಗಳಿಗೆ ತೋರುವ ಭೇದವೆಲ್ಲ ಅಜ್ಞಾನಜನ್ಯವಾದುದು. ಜ್ಞಾನೋದಯವಾದರೆ ನಿಜವು ಗೊತ್ತಾಗುತ್ತದೆ. ಅವಿದ್ಯೆಯ ಯವನಿಕೆ ಜಗತ್ತನ್ನು ಆವರಿಸಿದೆ. ಆ ಅವಿದ್ಯೆ ಅನಾದಿಯಾದುದು. ಎಂದರೆ ಕಾಲಭಾವನೆಯೇ ಅವಿದ್ಯೆಯ ಶಿಶುವಾಗಿರುವುದರಿಂದ ಆವಿದ್ಯೆ ಕಾಲಾತೀತವಾದುದು. ಅದು ಹೇಗೆ ಯಾವಾಗ ಪ್ರಾರಂಭವಾಯಿತೆಂದು ಯಾರೂ ಹೇಳಲಾರರು. ಮಾಯೆಯ ಸ್ವರೂಪ ನಮ್ಮ ಈ ಚತುರ್ಮುಖ ಜಗತ್ತಿನ ಜ್ಞಾನ ಸೂತ್ರಗಳಿಗೆ ಸಿಲುಕುವುದಿಲ್ಲ. ಆದ್ದರಿಂದ ಅದು ಅಪ್ರಮೇಯವಾದುದು; ಅನಿರ್ವಚನೀಯವಾದುದು. ಕನಸು ನನಸಿನಲ್ಲಿ ಅಳಿಸಿಹೋಗಿ ಮಿಥ್ಯೆಯೆಂದು ತೋರುವಂತೆ ಈ ಮಾಯಾಮುದ್ರಿತ ಮಹಾವಿಶ್ವವು ಜಾಗ್ರದತೀತವಾದ ತುರೀಯಾವಸ್ಥೆಯಲ್ಲಿ ಅಥವಾ ನಿರ್ವಿಕಲ್ಪ ಸಮಾಧಿಯಲ್ಲಿ ಇಲ್ಲವಾಗಿ ಅದ್ವಯವೂ ಸಚ್ಚಿದಾನಂದವೂ ಆಗಿರುವ ಬ್ರಹ್ಮದ ಅನುಭವವಾಗುತ್ತದೆ. ಆ ಸಚ್ಚಿದಾನಂದ ಸಾಕ್ಷಾತ್ಕಾರವೆ ಮಾನವನ ಚರಮಗಮ್ಯ. ಆದ್ದರಿಂದ ಸತ್ಯದ ಜ್ಯೋತಿ ಕಾಣಬೇಕಾದರೆ ಮಿಥ್ಯಾಕಾರಿಯಾದ ಅವಿದ್ಯೆಯ ಅಂಧಕಾರ ತೊಲಗಬೇಕು. ಕತ್ತಲೆ ಹರಿಯುವಂತೆ ಮಾಡಲು ಎರಡು ಹಾದಿಗಳಿವೆ. ಒಂದನೆಯದು ಜ್ಞಾನಮಾರ್ಗ; ಎರಡನೆಯದು ಭಕ್ತಿಮಾರ್ಗ. ಜ್ಞಾನಮಾರ್ಗ ವಿಚಾರ ಪೂರ್ಣವಾದುದರಿಂದ ಮೇಧಾವಿಗಳಿಗೆ ಮಾತ್ರವೆ ಸಾಧ್ಯ. ಭಕ್ತಿಮಾರ್ಗ ಭಾವಮಯವಾದುದರಿಂದ ಸಾಧಾರಣ ಮಾನವರಿಗೂ ಸುಲಭವಾದುದು. ಮೊದಲನೆಯದು ‘ನೇತಿ ನೇತಿ’ಯ ಮಾರ್ಗ; ಎರಡನೆಯದು ‘ಇತಿ ಇತಿ’ಯ ಮಾರ್ಗ. ಈ ಎರಡು ದಾರಿಗಳೂ ಕಟ್ಟಕಡೆಗೆ ಒಂದೇ ನಿಲಯಕ್ಕೆ ಹೋಗುತ್ತವೆ. ಹೀಗೆ ನಾಮರೂಪ ಕಾಲದೇಶ ನಿಮಿತ್ತಾದಿಗಳಿಂದ ಬದ್ಧವಾದ ಮಾಯಾ ಜಗತ್ತನ್ನು ಉತ್ತರಿಸಿ ಅತೀಂದ್ರಿಯ ಬರಹ್ಮವಸ್ತುವನ್ನು ಪರಿಚಯ ಮಾಡಿಕೊಳ್ಳಬೇಕಾದರೆ ಅವಶ್ಯವಾಗಿ ಬೇಕಾಗುವ ಸಲಕರಣೆ ಸಾಹಸಗಳಿಗೆ ವೇದಶಾಸ್ತ್ರಗಳು “ಸಾಧನೆ” ಎಂಬ ಹೆಸರನ್ನು ಕೊಟ್ಟಿವೆ. ಅಂತಹ ಸಾಧನೆಯನ್ನು ಕೈಕೊಳ್ಳುವವನೆ ಸಾಧಕನು. ವೈರಾಗ್ಯವು ಸಾಧಕನು ಏರಬೇಕಾದ ಮೊದಲನೆಯ ಮೆಟ್ಟಲು. ವೈರಾಗ್ಯವೆಂದರೆ ರಾಗವಿಲ್ಲದಿರುವುದು; ಎಂದರೆ ನಿಷ್ಕಾಮತೆ, ನಿಸ್ವಾರ್ಥತೆ ಮತ್ತು ಸಮತೆ. ಲೋಕದ ಪ್ರಲೋಭನೆಗಳು ಸಾಧಕನಿಗೆ ದೊಡ್ಡ ಅಡಚಣೆ. ಅವುಗಳಿದ್ದರೆ ಆದರ್ಶದ ಪರವಾಗಿ ಏಕಾಗ್ರತೆ ಅಸಾಧ್ಯ. ಒಮ್ಮನಸ್ಸಿಲ್ಲದಿದ್ದರೆ ಸಾಮಾನ್ಯ ವಿಚಾರಗಳಲ್ಲಿಯೆ ಜಯ ಹೊಂದುವುದು ಕಠಿನ ಎಂದಮೇಲೆ ಅತ್ಯಮೂಲ್ಯವದ ಸತ್ಯವಾದರೂ ದೊರಕುವುದು ಹೇಗೆ? ಜೊತೆಗೆ ನಿತ್ಯಾನಿತ್ಯ ವಿವೇಕ ವಿಚಾರವೂ ಸತ್ಯ ಸಂದರ್ಶನಕ್ಕಾಗಿ ತೀವ್ರ ವ್ಯಾಕುಲತೆಯೂ ಅಭೀಪ್ಸೆಯೂ ಬೇಕು. ಇವುಗಳಿಂದ ಒಡಗೂಡಿದ ಸಾಧಕನು ಹತಾಶನಾಗದೆ ಬೇಸರಪಡದೆ ಉದಾಸೀನನಾಗದೆ ಅವಿಶ್ರಾಂತ ಸಾಹಸ ಮಾಡಿದರೆ ತುತ್ತತುದಿಯಲ್ಲಿ ಲಭಿಸುವುದು ಸಿದ್ಧಿ.

ಸಿದ್ಧಿ ಬೇಕೆನ್ನುವ ಯಾರಿಗೂ ಸಾಧನೆ ತಪ್ಪಿದುದಲ್ಲ. ಅವತಾರ ಪುರುಷರಿಗೂ ತಪ್ಪಿದುದಲ್ಲ. ಈಶ್ವರನು ಜಗತ್ತಿನಲ್ಲಿ ಮನುಷ್ಯಶರೀರ ಧಾರಣೆಮಾಡಿ ಜನ್ಮವೆತ್ತಿದ ಮೇಲೆ ಮನುಷ್ಯನಂತೆಯೇ ಆಚರಿಸಿ ಸಾಧನೆ ಮಾಡಬೇಕು. ಇಲ್ಲದಿದ್ದರೆ ಆತನು ಮಾರ್ಗದರ್ಶಿಯಾಗಲಾರನು. ಜನರು ಆತನನ್ನು ಅನುಸರಿಸುವ ಬದಲು ಆಶ್ಚರ್ಯಪಟ್ಟು ಕೈಮುಗಿದು ಸುಮ್ಮನಾಗುವರು. ಏಕೆಂದರೆ, ಸರ್ವಶಕ್ತನಿಗೆ ಎಲ್ಲವೂ ಸಾಧ್ಯ; ನಾವು ಸಾಧಾರಣ ಮಾನವರೆ, ನಾವೂ ಅವನಂತೆ ಮಾಡುವುದು ದುಸ್ಸಾಧ್ಯ ಎಂದು ಬಿಡುತ್ತಾರೆ. ಪರಮಹಂಸರು ಹೀಗೆ ಹೇಳಿದ್ದಾರ: “ದೇವರು ನರನಾಗಿ ಬಂದಮೇಲೆ ನರನಂತೆಯೇ ಸುಖದುಃಖಗಳನ್ನು ಅನುಭವಿಸಿ, ಮಾನವನ ಸಮಸ್ಯೆಗಳನ್ನು ಮಾನವನಂತೆಯೇ ಸಾಹಸಪಟ್ಟು ಬಿಡಿಸಿ, ಮನುಷ್ಯನಂತೆಯೇ ಕಷ್ಟಪಟ್ಟು ತಪಸ್ಸುಮಾಡಿ ಮುಕ್ತನಾಗಬೇಕು.” ಇಲ್ಲದಿದ್ದರೆ ಅವನ ಆಗಮನದಿಂದ ಲೋಕಕ್ಕಾಗುವ ಪ್ರಯೋಜನವೆಲ್ಲಿಯದು?

ಅನೇಕ ಅವತಾರಪುರುಷರ ಜೀವನಚರಿತ್ರೆಗಳನ್ನು ಬರೆದ ಭಕ್ತರು ಅವರ ಸಾಧನೆಯ ಕಥಾಭಾಗವನ್ನು ಕಣ್ಣಿಗೆ ಕಾಣದಂತೆ ನುಂಗಿಬಿಟ್ಟಿದ್ದಾರೆ. ಅದಕ್ಕೆ ಭಕ್ತರ ದುರ್ಬಲತೆಯೇ ಕಾರಣ. ಭಗವಂತನಲ್ಲಿ ಮನುಷ್ಯ ಸುಲಭವಾದ ದುರ್ಬಲತೆ, ಅಶಕ್ತಿ ಮತ್ತು ಹೋರಾಟಗಳನ್ನು ಕಾಣಿಸಲು ಅಂಜಿಯೋ ಅಥವಾ ಆರೋಪಿಸಲು ಇಷ್ಟವಿಲ್ಲದೆಯೋ ಅಥವಾ ಅತಾರದ ಮಹತ್ತಿಗೆ ಕುಂದು ಬರಬಹುದು ಎಂಬ ಭಯದಿಂದಲೋ ಹಾಗೆ ಮಾಡಿದ್ದಾರೆ. ಆದರೆ ಇವೆಲ್ಲವೂ ನಿರಾಧಾರವಾದುವು. ಭಗವಂತನ ಐಶ್ವರ್ಯ ಮಾತ್ರದಿಂದ ಮೋಹಿತವಾದ ಭಕ್ತಿ ಉತ್ತಮ ಭಕ್ತಿಯಲ್ಲ. ಉತ್ತಮ ಭಕ್ತಿ ಅಹೇತುಕವಾದುದು. ಯಶೋದೆಯ ವಾತ್ಸಲ್ಯಭಾವವೂ ಗೋಪಿಯರ ಮಧುರ ಭಾವವೂ ಶ್ರೀಕೃಷ್ಣನ ಶಕ್ತಿ ಐಶ್ವರ್ಯಗಳ ಮೇಲೆ ನಿಂತಿರಲಿಲ್ಲ.

ಅವತಾರ ಪುರುಷರ ಸಾಧನೆ ಬರಿಯ ನಟನೆಯೂ ಅಲ್ಲ. ಅದನ್ನು ಲೀಲೆ ಎಂದು ಕರೆದರೆ ಮಾನವನ ಸಾಧನೆಯನ್ನೂ ಲೀಲೆ ಎಂದು ಕರೆಯಬೇಕಾಗುತ್ತದೆ. ಏಕೆಂದರೆ, ಸಮಸ್ತ ಜಗತ್ತೇ ಒಂದು ಮಹಾಲೀಲೆ. ಬ್ರಹ್ಮದೃಷ್ಟಿಯಿಂದ ಸುಖ, ದುಃಖ, ತಪಸ್ಸು, ಸಾಧನೆ, ಮುಕ್ತಿಸಂಪಾದನೆ ಎಲ್ಲವೂ ಬರಿಯ ಲೀಲೆ ಅಥವಾ ತೋರಿಕೆ. ಆದ್ದರಿಂದ ಅವತಾರ ಪುರುಷನ ಕಂಬನಿ ಸಧಾರಣ ಮಾನವನ ಕಣ್ಣೀರಿನಷ್ಟೇ ಬಿಸಿಯಾಗಿರುತ್ತದೆ. ಆತನ ಬಿಸುಸುಯ್ಲೂ ನಮ್ಮ ನಿಟ್ಟುಸಿರಿನಂತೆಯೇ ಬೆಂದೆದೆಯಿಂದ ಬರುತ್ತದೆ. ಆತನ ಶರೀರವೂ ಮೇಘಮಧ್ಯೆ ಹಠಾತ್ತಾಗಿ ಹಾರಿ ಮಾಯವಾಗದೆ ನಮ್ಮ ದೇಹದಂತೆಯೇ ಮಣ್ಣುಗೂಡಿ ಅದೃಶ್ಯವಾಗುತ್ತದೆ. ಭಗವಂತನು ತನ್ನ ನಿಯಮಗಳನ್ನು ತಾನೇ ಉಲ್ಲಂಘಿಸುವುದಿಲ್ಲ. ತನ್ನ ಮನೆಗಾದರೂ ಅಕ್ರಮ ಪ್ರವೇಶ ಮಾಡುವುದು ಸೌಜನ್ಯದ ಚಿಹ್ನೆಯಲ್ಲ. ಲೋಕಾನುಗ್ರಹಮಾಡುವ ಮಾರ್ಗದರ್ಶಿಗಂತೂ ಅದು ಸ್ವಲ್ಪವೂ ಒಪ್ಪುವುದಿಲ್ಲ. ಒಂದು ವೇಳೆ ನಿಯಮೋಲ್ಲಂಘನೆಗೆ ನಮಗೆ ಅವಕಾಶವೀಯದೆ ತಾನೊಬ್ಬನೇ ಹಾಗೆ ಮಾಡಿದರೆ ಅದರಿಂದ ನಮಗೆ ಪ್ರಯೋಜನವೂ ಇಲ್ಲ; ಧರ್ಮ ಜೀವನದಲ್ಲಿ ಅದು ನಮ್ಮ ಲಕ್ಷ್ಯಕ್ಕೆ ಯೋಗ್ಯವೂ ಅಲ್ಲ. ಪವಾಡಗಳೆಂದರೆ ಹೊಟ್ಟೆಯ ಪಾಡಿಗಾಗಿ ಮೋಸಗಾರರು ಹೂಡುವ ಕುತಂತ್ರ. ಅಂತಹರಿಂದಲೇ ಧರ್ಮ ಜೀವನಕ್ಕೆ ಕಲಂಕವೂ ಅಪವಾದವೂ ಬಂದೊದಗಿದೆ. ಪರಮಹಂಸರ ವಚನವಿದು; “ಅತಿ ಮಾನುಷ ಕರ್ಮಗಳನ್ನು ಎಂದರೆ ಆಶ್ಚರ್ಯವನ್ನುಂಟುಮಾಡುವ ವಿದ್ಯೆಗಳನ್ನು ಗೋರಿಸುವವರ ಹತ್ತಿರ ಸುಳಿಯಬೇಡ. ‘ಏಕೆ’?ಎನ್ನುವೆಯೋ? ಅವರು ಸತ್ಯಮಾರ್ಗದಿಂದ ಎಳೆಯುವ ‘ಸಿದ್ಧಿ’ಗಳೆಂಬ ಬಲೆಯಲ್ಲಿ ಸಿಲುಕಿಕೊಂಡಿರುವುದು. ಆ ಸಿದ್ಧಿಗಳ ವಿಷಯದಲ್ಲಿ ಬಹಳ ಜಾಗರೂಕನಾಗಿರುವುದಲ್ಲದೆ ಅವುಗಳನ್ನು ಬಯಸದಿರು.”

ಅವತಾರಪುರುಷರು ಪ್ರಾಕೃತರಂತೆ ಸಾಧನೆಮಾಡಿದರೂ ಅವರ ಬೆನ್ನಿನ ಮೇಲೆ ಬಹುಜನ್ಮಸಂಸ್ಕಾರಗಳ ಹೊರೆಯೂ ಆಕರ್ಷಣೆ ವಿಕರ್ಷಣೆಗಳ ತೊಂಡು ಗೊಳಸೂ ಇಲ್ಲದಿರುವುದರಿಂದಲೂ ಜೀವನದ ಮಹೋದ್ದೇಶ ಅವರಲ್ಲಿ ಸರ್ವದಾ ಜಾಗ್ರತವಾಗಿರುವುದರಿಂದಲೂ ನಡೆಯಬೇಕಾಗಿರುವ ಹಾದಿಯ ಅರವು ಚೆನ್ನಾಗಿರುವುದರಿಂದಲೂ ನಡೆಯಬೇಕಾಗಿರುವ ಹಾದಿಯ ಅರಿವು ಚೆನ್ನಾಗಿರುವುದರಿಂದಲೂ ಪ್ರಾಕೃತರು ಕಲ್ಪಾಂತರಗಳಲ್ಲಿ ಮಾಡಿ ಮುಗಿಸುವುದನ್ನು ಅವರು ಅಲ್ಪಾಂತರದಲ್ಲಿಯೆ ಸಾಧಿಸಿಬಿಡುತ್ತಾರೆ. ಅಲ್ಲದೆ ಅವರು ಇತರ ಋಷಿಗಳು ಮಹರ್ಷಿಗಳು ಯೋಗಿಗಳು ಸಿದ್ಧರಂತಲ್ಲದೆ ಅನೇಕ ಮಾನವರನ್ನು ಉದ್ಧಾರಮಾಡಲು ಸಮರ್ಥರಾಗುತ್ತಾರೆ. ಪರಮಹಂಸರು ಹೀಗೆಂದು ಹೇಳಿದ್ದಾರೆ:

“ಈಶ್ವರನು ನರಜನ್ಮವನ್ನು ಎತ್ತುವುದಕ್ಕಾಗಿ ಮಾಡಬೇಕಾದ ಪರಿತ್ಯಾಗದ ಮಹತ್ವವನ್ನು ಯಾರೂ ಅರಿಯರು.”

“ಕೆಲವು ಋತುಗಳಲ್ಲಿ ನೀರು ಬಹಳ ಆಳವಾದ ಬಾವಿಗಳಲ್ಲಿ ಮಾತ್ರ ಅತಿ ಪ್ರಯಾಸದಿಂದ ದೊರೆಯುತ್ತದೆ. ಆದರೆ ಮಳೆಗಾಲದಲ್ಲಿ ದೇಶವೆಲ್ಲಾ ಜಲಮಯವಾಗಲು ನೀರು ಎಲ್ಲೆಲ್ಲಿಯೂ ಸಿಕ್ಕುತ್ತದೆ. ಸಾಮಾನ್ಯವಾಗಿ ಸಿದ್ಧರು ಬಹು ಶ್ರಮ ಸಾಧ್ಯವಾದಂತಹ ತಪಸ್ಸು, ಮಂತ್ರ, ಪ್ರಾರ್ಥನೆಗಳ ಮೂಲಕ ಭಗವತ್ಸಾಕ್ಷಾತ್ಕಾರವನ್ನು ಪಡೆಯುವರು. ಆದರೆ ಅವತಾರ ರೂಪವಾದ ಪ್ರವಾಹ ಭೂಮಿಯ ಮೇಲೆ ಹರಿದಾಗ ಭಗವದ್ವ್ಯಕ್ತಿವು ಎಲ್ಲೆಲ್ಲಿಯೂ ತೋರಿಬರುತ್ತದೆ. ಆಗ ಆತನ ಕೃಪಾಪ್ರವಾಹದಿಂದ ಪ್ರತಿಯೊಬ್ಬನೂ ಉದ್ಧಾರವಾಗುತ್ತಾನೆ.”

“ದೊಡ್ಡದೂ ಬಲವಾದುದೂ ಆದ ಹೊಗೆಯ ಜಹಜು ತನ್ನ ಹಿಂದೆ ತೆಪ್ಪಗಳನ್ನೂ ದೋಣಿಗಳನ್ನೂ ಎಳೆದುಕೊಂಡು ಸಮುದ್ರದಲ್ಲಿ ಬೇಗನೆ ಮುಂದೆ ಹೋಗುವಂತೆ ರಕ್ಷಕನು ಅವತರಿಸಿದಾಗ ಆತನು ಸಾವಿರಾರು ಜನರ ಕೈಹಿಡಿದು ಅವರನ್ನು ಸುಲಭವಾಗಿ ಮಾಯಾಸಮುದ್ರದಿಂದ ದಾಟಿಸುತ್ತಾನೆ.

“ದೊಡ್ಡ ತೆಪ್ಪವು ನೂರಾರು ಮಂದಿಯನ್ನು ಹೊತ್ತುಕೊಂಡು ಹೊನಲಿನಲ್ಲಿ ತೇಲಿಹೋಗುವುದು. ಆದರೆ ತೇಲುವ ಲಾಳದ ಕಡ್ಡಿಯಾದರೋ ಒಂದು ಕಾಗೆಯ ಭಾರವನ್ನೂ ಕೂಡ ತಾಳಲಾರದೆ ಮುಳುಗಬಹುದು. ಹಾಗೆಯೇ ರಕ್ಷಕನು ಅವತರಿಸಿದಾಗ ಆತನನ್ನು ಮರೆಹೊಕ್ಕ ಸಾವಿರಾರು ಮಂದಿಗೆ ಅವನು ಮುಕ್ತಿ ತೋರುವನು. ಸಿದ್ಧನಿಗಾದರೋ ತಾನು ಮುಕ್ತನಾಗುವುದೇ ಬಹು ಪ್ರಯಾಸವಾಗುವುದು.

“ಒಂದೇ ಅವತಾರವೇ ಜೀವಸಮುದ್ರದಲ್ಲಿ ಮುಳುಗಿ ಒಂದು ಕಡೆ ಎದ್ದರೆ  ಕೃಷ್ಣಾವತಾರ; ಮರಳಿ ಮುಳುಗಿ ಮತ್ತೊಂದೆಡೆ ಬಂದರೆ ಕ್ರಿಸ್ತಾವತಾರ.”

“ಸಮುದ್ರದ ಅಲೆಗಳಿಗೂ ಸಮುದ್ರಕ್ಕೂ ಇರುವ ಪರಸ್ಪರ ಸಂಬಂಧವೇ ರಾಮ, ಕೃಷ್ಣ, ಬುದ್ಧದೇವ, ಕ್ರಸ್ತರಂತಹ ಅವತಾರಗಳಿಗೂ ಪರಬ್ರಹ್ಮನಿಗೂ ಇರುವ ಸಂಬಂಧ.”

ಸಾಧನೆ ಎಂದರೇನು? ಸಾಧಕನಾರು? ಅವತಾರಪುರುಷರ ಸಾಧನೆಯ ರೀತಿ ಎಂತಹುದು? ಎಂಬುದನ್ನು ಕುರಿತು ಸಂಕ್ಷೇಪವಾಗಿ ಪರಿಶೀಲಿಸಿದ್ದಾಯಿತು. ಇನ್ನು ದಕ್ಷಿಣೇಶ್ವರದ ದೇವಮಾನವನ ಸಹಸ್ರ ವರ್ಣಪೂರ್ಣವೂ ಮಹಾಗೌರವಮಯವೂ ವಿಸ್ಮಯಕರವೂ ಆಗಿರುವ ಆಧ್ಯಾತ್ಮಿಕ ಜೈತ್ರಯಾತ್ರೆಯನ್ನು ಮನವಾರೆ ನೋಡುವುದು ನಮ್ಮ ಪ್ರಕೃತ ಕರ್ತವ್ಯ. ಅದು ಅನಂತದಂತೆ ಅಸಂಖ್ಯಮುಖವಾದುದು; ವೈವಿಧ್ಯಪೂರ್ಣವಾದುದು; ಸರ್ವಗ್ರಾಸಿಯಾದುದು. ಅಲ್ಲಿ ಸಂಕುಚಿತ ಭಾವಕ್ಕೆ ಎಡೆಯಿಲ್ಲ; ಈರ್ಷ್ಯೆ, ಅಸೂಯೆ, ಮತಭ್ರಾಂತಿ ದುರಭಿಮಾನಗಳಿಗೆ ತಾವಿಲ್ಲ. ಅದು ಬ್ರಹ್ಮಾಂಡದಂತೆ ಮಹಾ ಭೂಮವಾದುದು. ಅಲ್ಲಿರುವುದು ಒಂದು ಸ್ವರವಲ್ಲ; ಅದೊಂದು ಮಹಾ ಸ್ವರಮೇಳ. ಆ ಸ್ವರ್ಗೀಯ ಸುಮಧುರ ಸಂಗೀತ ಸಂಗಸ್ರೋತದಲ್ಲಿ ಸರ್ವದೇಶದ ಸರ್ವಕಾಲದ ಸರ್ವ ಸಂಸ್ಕೃತಿಯ ವಿವಿಧ ಸಂಸ್ಕಾರಗಳ ಮಾನವರ ಭಾವಗಳೆಲ್ಲವೂ ತರಂಗ ತರಂಗಗಳಾಗಿ ಗರ್ವಿತ ವಿನ್ಯಾಸದಿಂದ ಉರುಳಿ ಹೊರಳಿ, ಎದ್ದು ಬಿದ್ದು, ಹೊಮ್ಮಿಹಾರಿ, ಉಕ್ಕಿಹರಿದು, ಅತೀತದ ಅಸೀಮದ ಸಮುದ್ರದೆಡೆಗೆ ಅವಿರಳವಾಗಿ ನುಗ್ಗುತ್ತಿವೆ, “ಮೂಢಭಕ್ತಿ”ಯ ಕಣ್ಣೀರಿನಿಂದ ಹಿಡಿದು ಮಹಾವಿಜ್ಞಾನಿಯ ಇರ್ವಿಕಲ್ಪಸಮಾಧಿಯವರೆಗೆ!

ಕ್ರಿ.ಶ. ೧೮೫೫ರಲ್ಲಿ ಶ್ರೀರಾಮಕೃಷ್ಣ ಪರಮಹಂಸರು ದಕ್ಷಿಣೇಶ್ವರದ ಭರತಾರಿಣಿಯ ಅರ್ಚಕರಾಗಿ ನಿಂತಂದಿನಿಂದ ಅರ ಜೀವನದಲ್ಲಿ ಒಂದು ನವಪ್ರಕರಣ ಪ್ರಾರಂಭವಾಯಿತು. ಆಧ್ಯಾತ್ಮಿಕ ಪ್ರಯೋಗ ಮಂದಿರದಲ್ಲಿ ಗೀರ್ವಾಣ ವೈಜ್ಞಾನಿಕನು ಬ್ರಹ್ಮವಸ್ತು ಸಾಕ್ಷಾತ್ಕಾರಕ್ಕಾಗಿ ವಿವಿಧ ಪ್ರಯತ್ನ ಪರೀಕ್ಷೆಗಳನ್ನು ವಿಶೇಷವಾಗಿ ಮಾಡತೊಡಗಿದನು. ಅವರ ಪೂಜೆಯ ರೀತಿಯೆ ಅನನ್ಯ ಸಾಧಾರಣವಾಗಿತ್ತೆಂದು ಹಿಂದೆಯೆ ಹೇಳಿದ್ದೇವೆ. ಆರಾಧನೆ ಮುಗಿದ ಮೇಲೆ ತಾಯಿಯ ವಿಗ್ರಹದ ಎದುರು ಅಲುಗಾಡದೆ ಬಹುಕಾಲ ಧ್ಯಾನಸ್ಥರಾಗಿ ಕುಳಿಗು ಬಿಡುವರು. ಕೆಲವು ಸಾರಿ ರಾಮಪ್ರಸಾದ; ಕಮಲಾಕಾಂತ ಮೊದಲಾದ ವಂಗ ದೇಶದ ಭಕ್ತ ಕವಿಗಳ ಕೀರ್ತನೆಗಳನ್ನು ಹಾಡಿ ಹಾಡಿ ಹರುಷದಲ್ಲಿ ಮೈ ಮರೆತುಬಿಡುವರು. ಹಿಂದಿನಂತೆ ಜನಗಳ ಮಾತುಕತೆಗಳಲ್ಲಿ ಭಾಗಿಯಾಗುವುದನ್ನು ನಿಲ್ಲಿಸಿಬಿಟ್ಟರು. ನಡುಹಗಲಿನಲ್ಲಿಯೂ ನಡುರಾತ್ರಿಯಲ್ಲಿಯೂ ಮಂದಿಯ ಮಂದೆಯಿಂದ ಹೊರಬಿದ್ದು ಧ್ಯಾನಕ್ಕಾಗಿ ಪಂಚವಟಿಯ ಅರಣ್ಯಕ್ಕೆ ಹೋಗುತ್ತಿದ್ದರು. ಇದೆಲ್ಲ ಹೃದಯರಾಮನಿಗೆ ಸರಿಬೀಳಲಿಲ್ಲ. ಸುಮ್ಮನೆ ಬಿಟ್ಟರೆ ಮಾವನು ಆರೋಗ್ಯ ಕೆಟ್ಟು ಕಾಯಿಲೆ ಬೀಳುವನೆಂದು ಹೆದರಿ, ಆತನ ವಿಚಿತ್ರ ವ್ಯಾಪಾರಗಳನ್ನು ತಡೆಗಟ್ಟಲು ಸಾಹಸ ಮಾಡಿದನು. ಒಂದು ರಾತ್ರಿ ಪರಮಹಂಸರು ಹೊರಬೀಳುವುದನ್ನೆ ಕಾಯ್ದುಕೊಂಡಿದ್ದು ಹೃದಯನು ಅವರನ್ನು ಗುಟ್ಟಾಗಿ ಹಿಂಬಾಲಿಸಿದನು. ಪರಮಹಂಸರು ಅರಣ್ಯ ಪ್ರವೇಶ ಮಾಡಿ ಆಮಲಕವೃಕ್ಷವಿದ್ದ ಕಡೆಗೆ ಹೋದರು ಮಾವನನ್ನು ಹಿಂಬಾಲಿಸಿದರೆ, ಆತನಿಗೆ ಸಿಟ್ಟು ಬರಬಹುದೆಂದು ತಿಳಿದು ಹೃದಯನು ಹಿಂದೆಯೆ ಉಳಿದು, ಬೆದರಿಸುವುದಕ್ಕಾಗಿ ಕಲ್ಲು ಬೀರಿದನು. ಆದರೂ ಪ್ರಯತ್ನ ವಿಫಲವಾಯಿತು. ಮಾನು ಒಂದಿನಿತೂ ಅಳುಕಲಿಲ್ಲ. ಬೇಸತ್ತು ಹಿಂದಿರುಗಿದನು. ಅಂದಿನಿಂದ ಪರಮಹಂಸರು ಕಾಡಿಗೆ ಧ್ಯಾನಕ್ಕೆ ಹೋದಾಗಲೆಲ್ಲ ಸುತ್ತಲೂ ಕಲ್ಲು ಬೀಳುತ್ತಿದ್ದವು. ಶಿಲಾವರ್ಷವನ್ನು ಕರೆಯುವ ಇಂದ್ರನು ತಮ್ಮ ಅಳಿಯನೇ ಎಂಬುದು ಪರಮಹಂಸರಿಗೆ ಗೊತ್ತಾಗಿ ಸುಮ್ಮಿರುತ್ತಿದ್ದರು. ಎಷ್ಟು ಪ್ರಯತ್ನಪಟ್ಟರೂ ಜಯಶೀಲನಾಗದ ಹೃದಯನು ಕುಪಿತನಾಗಿ ಕಡೆಗೆ ಒಂದು ದಿನ ಮಾವನು ಏನು ಮಾಡುತ್ತಾನೆ ಎಂಬುದನ್ನು ನೋಡಿಯೇ ಬಿಡುವೆನೆಂದು ನಿಶ್ಚಯಿಸಿ ನುಗ್ಗಿದನು. ಕಣ್ಣಿಗೆ ಬಿದ್ದ ದೃಶ್ಯದಿಂದ ದಿಗ್ಭ್ರಾಂತನಾದನು. ಪರಮಹಂಸರು ನೆಲ್ಲಿಯ ಮರದ ಬುಡದಲ್ಲಿ ನಿಷ್ಪಂದ ಧ್ಯಾಮೂರ್ತಿಯಾಗಿ ಕುಳಿತಿದ್ದರು. ಬಾಹ್ಯಪ್ರಜ್ಞೆಯೇ ಇರಲಿಲ್ಲ. ಸಂಪೂರ್ಣ ನಗ್ನರಾಗಿದ್ದರು. ಬಟ್ಟೆಯೆಲ್ಲ ದೂರ ಬಿದ್ದಿದ್ದುವು. ಜನಿವಾರವೂ ಕೂಡ ದೂರಬಿದ್ದಿತ್ತು! ಹೃದಯನು ಮಾವನಿಗೆ ನಿಜವಾಗಿಯೂ ಹುಚ್ಚು ಹಿಡಿದಿರಬೇಕೆಂದು ನಿರ್ಧರಿಸಿ ಬಳಿಗೆ ನುಗ್ಗಿ ಹೋಗಿ ಗಟ್ಟಿಯಾಗಿ ಸಿಡುಕಿದನು! “ಸರಿಹೋಯ್ತು! ಇದೇನಿದು ನೀನು ಮಾಡುತ್ತಿರುವುದು? ಇದೇಕೆ ಬತ್ತಲೆಯಾಗಿದ್ದೀಯೆ? ಜನಿವಾರವನ್ನೂ ಕೂಡ ಬಿಸಾಡಿದ್ದೀಯೆ! ” ಶ್ರೀರಾಮಕೃಷ್ಣ ಪರಮಹಂಸರು ಮೊದಲು ಮತಾಡಲೇ ಇಲ್ಲ. ಹೃದಯನು ಬೊಬ್ಬೆಯಿಡುತ್ತಿರಲು ಕಣ್ದೆರೆದು ನೋಡಿ “ನಿನಗೇನು ಗೊತ್ತೋ? ಧ್ಯಾನಮಾಡುವಾಗ ಬಂಧನಗಳೊಂದೂ ಇರಬಾರದು. ಮನುಷ್ಯನು ಹುಟ್ಟಿದಂದಿನಿಂದ ದ್ವೇಷ, ಲಜ್ಜೆ, ಕುಲ, ಶೀಲ, ಭಯ, ಜಾತಿ, ಮಾನ, ಅಭಿಮಾನಗಳೆಂಬ ಅಷ್ಟಪಾಶಗಳಿಂದ ಬದ್ಧನಾಗಿರುತ್ತಾನೆ. ಜನಿವಾರವೂ ಒಂದು ಪಾಶ – ನಾನು ಬ್ರಾಹ್ಮಣ, ಎಲ್ಲರಿಗಿಂತಲೂ ಹೆಚ್ಚಿನವನು ಎಂಬ ಅಹಂಕಾರಕ್ಕೆ ಅದೊಂದು ಚಿಹ್ನೆ. ದಿವ್ಯಮಾತೆಯನ್ನು ಧ್ಯಾನಿಸುವಾಗ ಈ ಬಂಧನಗಳನ್ನೆಲ್ಲ ತೆಗೆದೊಗೆಯಬೇಕು. ಆದ್ದರಿಂದಲೇ ಜನಿವಾರ, ಬಟ್ಟೆ ಎಲ್ಲವನ್ನೂ ತೆಗೆದು ಬಿಸುಟು ಬತ್ತಲೆಯಾಗಿ ಧ್ಯಾನಮಾಡುತ್ತಿದ್ದೇನೆ. ಹಿಂದಿರುಗುವಾಗ ಅವುಗಳನ್ನೆಲ್ಲಾ ಮತ್ತೆ ಹಾಕಿಕೊಂಡು ಬರುತ್ತೇನೆ” ಎಂದು ಗಂಭೀರವಾಣಿಯಿಂದ ಹೇಳಿದರು. ಛೀಮಾರಿ ಮಾಡಬೇಕೆಂದು ಹೋಗಿದ್ದ ಹೃದಯನು ಮರುಮಾತಾಡದೆ ಹಿಂದಿರುಗಿದನು.

ಬರಬರುತ್ತ ಪರಮಹಂಸರಿಗೆ ದೇವರ ಹುಚ್ಚು ಹೆಚ್ಚಿತು. ಜಗನ್ಮಾತೆಯ ದರ್ಶನೋತ್ಸುಕತೆಯಿಂದ ನಿದ್ರಾಹಾರಗಳು ಬೇಕಿಲ್ಲವಾದುವು. ತಾಯಿಯನ್ನು ಅಗಲಿದ ಶಿಶುವಿನಂತೆ ರೋದಿಸತೊಡಗಿದರು. “ಹೇ ಜನನೀ, ನೀನೆಲ್ಲ? ನನಗೆ ಕಾಣಿಸದೆ ಏಕಿರುವೆ? ಸುಖ ಸಂಪತ್ತು ಬಂಧು ಬೋಗಗಳೊಂದೂ ನನಗೆ ಬೇಡ. ನನಗಿರುವುದು ನಿನ್ನನ್ನು ದರ್ಶಿಸುವ ಒಂದೇ ಆಕಾಂಕ್ಷೆ” ಹೀಗೆಲ್ಲ ಬೇಡುವರು. ಹೃದಯದ ವ್ಯಸನಭಾರವೆಲ್ಲ ಕಣ್ಣಿನಿಂದ ಅವಿರಳಧಾರೆಯಾಗಿ ಹರಿಯುತ್ತಿತ್ತು. ಹಗಲು ಕಳೆದು ಸಂಜೆ ಬರಲು ಸಾಯಂಪೂಜೆಯ ಗಂಟೆಗಳ ಟಿಂಟಿಣಿ ಗುಡಿಯ ಪವಿತ್ರ ಪ್ರಶಾಂತತೆಯಲ್ಲಿ ತೆರೆತೆರೆಯಾಗಿ ನಲಿಯಲು ಶ್ರೀರಾಮಕೃಷ್ಣರು ಅತಿ ದುಃಖಿತರಾಗಿ ಕಣ್ಣೀರು ಸುರಿಸುತ್ತ “ಮತ್ತೊಂದು ದಿನ ಕಳೆದುಹೋಯಿತು. ತಾಯೇ, ನಾನಿನ್ನೂ ನಿನ್ನನ್ನು ಕಾಣಲಿಲ್ಲ! ಈ ಮೂರು ದಿನದ ಬಾಳಿನಲ್ಲಿ ದಿನವೊಂದಳಿದುದು; ತಾಯೇ, ನನಗಿನ್ನೂ ಸತ್ಯದರ್ಶನವಾಗಿಲ್ಲ!” ಎಂದು ಮೊರೆಯಿಡುತ್ತಿದ್ದರು. ಒಂದೊಂದು ಸಾರಿ ದುಃಖೋತ್ಕರ್ಷದಿಂದ ಮೋರೆಯನ್ನು ನೆಲಕ್ಕೆ ತೀಡುತ್ತಿದ್ದರು! ಜನರು ಬಳಿಗೆ ಬಂದು ಅಳುವ ತರುಣನನ್ನು ಕಂಡು ಸಹಾನುಭೂತಿಯಿಂದ “ಅಯ್ಯೋ ಪಾಪ, ಏನಾಗಿದೆ ಆ ಹುಡುಗನಿಗೆ? ನಿಜವಾಗಿಯೂ ಅವನಮ್ಮ ತೀರಿಕೊಂಡಳೆ? ಅಥವಾ ಹೊಟ್ಟೆಗಿಟ್ಟೆಬೇನೆಯೋ? ಅವನು ಗೋಳಾಡುವುದು ನೋಡಿದರೆ ನಮಗೂ ಎದೆ ಬೇಯುತ್ತದೆ” ಎನ್ನುವರು. ಇನ್ನೊಮ್ಮೆ ಭವತಾರಿಣಿಯ ವಿಗ್ರಹದ ಮುಂದೆ ಕುಳಿತು “ಅಮ್ಮಾ, ನೀನು ಇರುವುದಾದರೆ ನಾನೇಕೆ ನಿನ್ನನ್ನು ನೋಡಲಾಗುವುದಿಲ್ಲ? ಧರ್ಮವೆಂಬುದು ಬರಿಯ ಭ್ರಾಂತಿಯೇ? ಗಾಳಿಗೋಪುರವೇ?” ಎಂದು ಸಂದೇಹಪಟ್ಟು, ಒಡನೆಯೆ ರಾಮಪ್ರಸಾದ ಮೊದಲಾದ ಮಹಾ ಭಕ್ತರಿಗೆ ದೇವಿ ಪ್ರತ್ಯಕ್ಷಳಾದುದನ್ನು ನೆನೆದುಕೊಂಡು “ಇಲ್ಲ; ನೀನು ಬರಿಯ ಕವಿಕಲ್ಪನೆಯಲ್ಲ. ನಿನ್ನನ್ನು ಕಣ್ಣಾರೆ ಕಂಡವರಿದ್ದಾರೆ. ನಾನೂ ಅವರಂತೆ ನೋಡಬಾರದೇಕೆ? ಬಾಳಿನ ಹೊಳೆ ನಿಲ್ಲದೆ ಹರಿಯುತ್ತಿದೆ. ದಿನದ ಮೇಲೆ ದಿನಗಳುರುಳಿ ನಿತ್ಯತೆಯ ಅಜ್ಞಾತವಾಸದಲ್ಲಿ ಲಯವಾಗುತ್ತಿವೆ. ಹೋದ ದಿನ ಮರಳಿಬಾರದು. ಕ್ಷಣಕ್ಷಣಕ್ಕೂ ಮೃತ್ಯು ಸನ್ನಿಹಿತವಾಗುತ್ತಿದೆ. ಆದರೆಲ್ಲಿ ನನ್ನ ತಾಯಿ? ಶಾಸ್ತ್ರಗಳು ಈಶ್ವರನೆ ಪರಮಪುರುಷಾರ್ಥವೆಂದು ಸಾರುತ್ತಿವೆ. ಅವನಿಲ್ಲದ ಜೀವನ ಅಸಹ್ಯ, ಅರ್ಥಹೀನ. ಅವನಿದ್ದರೆ ಸರ್ವವೂ ಅರ್ಥಪೂರ್ಣ ಆನಂದಪೂರ್ಣ. ಆದ್ದರಿಂದಲೆ ಭಕ್ತರು ಪರಪಂಚದ ಸುಖಗಳನ್ನು ತ್ಯಜಿಸಿ ಈಶ್ವರನ ದರ್ಶನಕ್ಕಾಗಿ ಜೀವಮಾನವನ್ನೆ ಧಾರೆಯೆರೆಯುತ್ತಾರೆ. ಆ ಸನಾತನ ಅಮೃತಾನಂದ ವಾರಿಧಿಯನ್ನು ಸವಿಯದಿದ್ದರೆ ನಾನು ಬದುಕಿ ಏನು ಫಲ?” ಎಂದು ಚಿಂತಿಸುವರು. ತಮ್ಮ ಆ ದಿನಗಳನ್ನು ಕುರಿತು ಪರಮಹಂಸರು ಶಿಷ್ಯರಿಗೆ ಹೀಗೆಂದು ಹೇಳಿದ್ದಾರೆ: “ಅಯ್ಯೋ, ಎಷ್ಟು ದಿವ್ಯೋನ್ಮತ್ತನಾಗಿದ್ದೆ! ನನ್ನಲ್ಲಿ ಆಗಿದ್ದ ಜನನೀವಿಯೋಗ ದುಃಖವನ್ನು ನೀವು ಎಷ್ಟು ಮಾತ್ರವೂ ಊಹಿಸಲಾರಿರಿ. ನನಗೇನೋ ಅದು ಸ್ವಾಭಾವಿಕವಾಗಿತ್ತು. ಈಗ ಒಂದು ಕೋಣೆಯಲ್ಲಿ ಒಂದು ಚಿನ್ನದ ನಿಧಿ ಇದೆ ಎಂದುಕೊಳ್ಳಿ. ಅದನ್ನರಿತ ಕಳ್ಳನು ಪಕ್ಕದ ಕೋಣೆಯಲ್ಲಿದ್ದಾನೆಂದುಕೊಳ್ಳಿ. ಆ ಕಳ್ಳನಿಗೆ ನಿದ್ದೆ ಬರುತ್ತದೆಯೇ? “ಎಂದಿಗೆ ಗೋಡೆ ಒಡೆದೇನು? ಎಂದಿಗೆ ಚಿನ್ನ ಕದ್ದೇನು?” ಎಂದು ಹುಚ್ಚಾಗುವುದಿಲ್ಲವೇ? ನನ್ನ ಅವಸ್ಥೆಯೂ ಹಾಗೆಯೆ ಆಗಿದ್ದಿತು. ಜಗನ್ಮಾತೆ ನನಗೆ ಅತಿ ಸಮೀಪದಲ್ಲಿದ್ದಾಳೆ. ಆನಂದಮಯಿಯಾದ ಆಕೆಯ ಮುಂದೆ ಐಹಿಕ ಸುಖಭೋಗಗಳು ದರಿದ್ರವಸ್ತುಗಳು ಎಂಬುದು ನನಗೆ ತಿಳಿದಿತ್ತು. ಹೀಗಿರಲು ಆಕೆಯನ್ನು ದಾಣದೆ ಹೇಗೆ ತಾನೆ ಸುಮ್ಮನಿರಲಾಗುತ್ತದೆ? ಆದ್ದರಿಂದ ಹುಚ್ಚನಾದೆ!”

ಕಾಮಾರಪುಕುರದ ಗುಡಿಸಲು

ಯೋಗಿ ಶಿವ ಮಂದಿರ

ದಕ್ಷಿಣೇಶ್ವರ ಕಾಳಿ ಮಂದಿರ

ಕಾಳಿ ಮಾತೆ

ರಾಣಿ ರಾಸಮಣಿ

ಮಥುರನಾಥ ವಿಶ್ವಾಸ

ಪಂಚವಟಿ

ಶ್ರೀರಾಮಕೃಷ್ಣರ ಕೊಠಡಿ

ಶ್ರೀಮಾತೆ ಶಾರದಾದೇವಿ

ಕೇಶವಚಂದ್ರ ಸೇನನ ಮನೆಯಲ್ಲಿ ಶ್ರೀರಾಮಕೃಷ್ಣರು

ಕಾಶೀಪುರ ಉದ್ಯಾನಗೃಹ

ಬೇಲೂರು ಮಠದಲ್ಲಿರುವ ಶ್ರೀರಾಮಕೃಷ್ಣ ಮಂದಿರ

ಸ್ವಾಮಿ ವಿವೇಕಾನಂದ

ದೇವರ ಹುಚ್ಚು ಹೆಚ್ಚಿದಂತೆ ದೇವರ ಪೂಜೆ ಹುಚ್ಚುಹುಚ್ಚಾಯಿತು. ಪೂಜಾರಿ ವಿಗ್ರಹಕ್ಕೆ ಹೂಮುಡಿಸಿದಂತೆ ತನಗೂ ಹೂಮುಡಿಸಿಕೊಳ್ಳುವನು. ಆರತಿಯನ್ನು ಬೆಳಗುವಾಗ ಹೊತ್ತು ಗೊತ್ತೇ ಇರುತ್ತಿರಲಿಲ್ಲ. ನಿವೇದನ ಕಾಲದಲ್ಲಿ ತಾಯಿ ಊಟಮಾಡುತ್ತಿರುವಳೆಂಬಂತೆ ಸುಮ್ಮನೆ ಕುಳಿತು ನೋಡುವನು. ಪೂಜಾರಿಯ ಹುಚ್ಚು ದೇವಾಲಯದ ಅಧಿಕಾರಿಗಳ ಕಿವಿಗೆ ಬಿತ್ತು. ಆದರೆ ಮಥುರನಾಥನು ಅರ್ಚಕನ ಭಕ್ತಿಯ ಅಗಾಧತೆಯನ್ನು ಸ್ತುತಿಸಿ ಸುಮ್ಮನಾದನು. ಪರಮಹಂಸರ ಸ್ಥಿತಿ ವಿಷಮವಾಯಿತು. ಊಟ ನಿದ್ದೆಗಳನ್ನೂ ಮರೆಯುತ್ತಿದ್ದರು. ಮುಖವೂ ಎದೆಯೂ ಯಾವಾಗಲೂ ರಕ್ತಸ್ನಾತವಾದಂತೆ ತೋರುತ್ತಿದ್ದುವು. ಅತ್ಯುದ್ವೇಗದಿಂದ ಕಣ್ಣುಗಳು ಕೆಂಪಗೆ ಉಬ್ಬಿಕೊಂಡಿರುತ್ತಿದ್ದವು. ಆಚರಣೆಗಳಲ್ಲಿ ನಿರಂತರ ಅವಿಶ್ರಾಂತಿ ತೋರುತ್ತಿತ್ತು. ಹೀಗಿರುತ್ತಿರಲು ಒಂದು ದಿನ ಜಗನ್ಮಾತೆಯ ದರ್ಶನಾಕಾಂಕ್ಷೆಯ ಉನ್ಮಾದವು ಮೇರೆ ಮುಟ್ಟಿ, ಭಯಂಕರ ಕಾರ್ಯದೀಕ್ಷಿತರಾಗಿ ಪರಮಹಂಸರು ಭವತಾರಿಣಿಯ ಮುಂದೆ ನಿಂತರು. ಮೃತ್ಯು ಅಥವಾ ಸತ್ಯ ದರ್ಶನ!