ತೋತಾಪುರಿ ಎದೆತುಂಬಿ ಭಕ್ತನಾಗಿ ಹಿಂತಿರುಗಿದನು. ಅಂದು ಆತನಿಗೆ ನಿಜವಾದ ಜ್ಞಾನ ಲಭಿಸಿತು. ರಾತ್ರಿಯೆಲ್ಲಾ ಧುನಿಯ ಮುಂದೆ ಕುಳಿತು ದೇವಿಯ ನಾಮಸಂಕೀರ್ತನೆಮಾಡುತ್ತ ಧ್ಯಾನಮಾಡಿದನು. ಮರುದಿನ ಶ್ರೀರಾಮಕೃಷ್ಣರು ಗುರುವಿನ ಯೋಗಕ್ಷೇಮ ವಿಚಾರಣೆಗೆ ಬಂದಾಗ ಆತನ ರೀತಿಯೆ ಬೇರೆಯಾಗಿತ್ತು. ಮುಖಮಂಡಲ ಆನಂದದಿಂದ ತೇಜಸ್ವಿಯಾಗಿತ್ತು. ರೋಗದ ಚಿಹ್ನೆಯ ಕಾಣುತ್ತಿರಲಿಲ್ಲ. ಗುರು ಶಿಷ್ಯನಿಗೆ ರಾತ್ರಿ ನಡೆದುದೆಲ್ಲವನ್ನೂ  ಹೇಳಿ, ರೋಗವು ಮಾಯೆಯ ಶಾಪವಲ್ಲ, ಮಾತೆಯ ಆಶೀರ್ವಾದ ಎಂದನು. ಶ್ರೀರಾಮಕೃಷ್ಣರು ಮುಗುಳುನಗೆ ಬೀರಿ “ನೋಡಿದಿರಾ! ನಾನು ಹೇಳಿದರೆ ಜಗನ್ಮಾತೆ ಮಿಥ್ಯೆಯೆಂದು ನೀವು ವಾದಿಸುತ್ತಿದ್ದಿರಿ. ಈಗ ಗೊತ್ತಾಯಿತೆ ಆಕೆಯೂ ಸತ್ಯ ಎಂದು! ಹಿಂದೆಯೇ ತಾಯಿ ನನಗೆ ತೋರಿಸಿದ್ದಳು; ಬ್ರಹ್ಮ ಮತ್ತು ಶಕ್ತಿ ಎರಡೂ ಅಭೇದವಾದುದೆಂದು, ಬೆಂಕಿ ಮತ್ತು ಅದರ ಉರಿಯುವ ಗುಣದಂತೆ” ಎಂದರು.

ಇದನ್ನೆ ಕುರಿತು ಹೇಳುವ ಶ್ರೀರಾಮಕೃಷ್ಣರ ವಚನವಿದು:

“ಪರಮಬ್ರಹ್ಮವನ್ನು ಅಕರ್ಮಾವಸ್ಥೆಯಲ್ಲಿ ಅಲೋಚಿಸಿದರೆ – ಸೃಷ್ಟಿ ಸ್ಥಿತಿ ಲಯಕಾರಿಯಲ್ಲದ ಅವಸ್ಥೆಯಲ್ಲಿ – ಅದನ್ನು ಬ್ರಹ್ಮ, ಪುರುಷ, ನಿರ್ಗುಣ ಎಂದು ಕರೆಯುತ್ತೇನೆ. ಅದನ್ನೇ ಕರ್ಮಾವಸ್ಥೆಯಲ್ಲಿ ಅಲೋಚಿಸಿದರೆ – ಸೃಷ್ಟಿ ಸ್ಥಿತಿ ಲಯಕಾರಿಯಾದ ಅವಸ್ಥೆಯಲ್ಲಿ – ಶಕ್ತಿ, ಮಾಯೆ, ಪ್ರಕೃತಿ, ಈಶ್ವರ ಎಂದು ಕರೆಯುತ್ತೇನೆ. ಆದರೆ ನಿಜವಾಗಿ ನೋಡಿದರೆ, ಬ್ರಹ್ಮ ಮತ್ತು ಶಕ್ತಿಗಳಿಗಿರುವ ನಾಮಭೇದವು ವಸ್ತುಭೇದವಲ್ಲ. ನಿರ್ಗುಣ ಸಗುಣಗಳೆರಡೂ ಒಂದೇ, ಹಾಲೂ ಅದರ ಬಿಳಿಯ ಬಣ್ಣವೂ ಇರುವಂತೆ. ಹಾಲನ್ನು ಅದರ ಬಿಳಿಯ ಬಣ್ಣದಿಂದ ಪ್ರತ್ಯೇಕವಾಗಿ ಯಾರೂ ತಿಳಿಯಲಾರರು. ಅವರಡೂ ಒಂದೆ, ರತ್ನವೂ ಅದರ ಕಾಂತಿಯೂ ಇರುವಂತೆ. ಹಾವನ್ನು ಅದರ ವಕ್ರಗತಿಯನ್ನು ತಪ್ಪದೆ ಅಲೋಚಿಸಬೇಕಾಗುತ್ತದೆ. ಪರಬ್ರಹ್ಮಗೂ ಜಗನ್ಮಾತೆಗೂ ಅದೇ ಸಂಬಂಧವಿದೆ”.

ಕೆಲವು ದಿನಗಳಾದ ಬಳಿಕ ತೋತಾಪುರಿ ಮನಸ್ಸಿನಿಂದ ಶ್ರೀರಾಮಕೃಷ್ಣರನ್ನು ಬೀಳ್ಕೊಂಡು ದಕ್ಷಿಣೇಶ್ವರದಿಂದ ಹೊರಟುಹೋದನು. ಸಿಂಹವು ಮರಳಿ ಅರಣ್ಯ ಪ್ರವೇಶಮಾಡಿ ಇತಿಹಾಸದಿಂದ ಕಣ್ಮರೆಯಾಯಿತು. ತರುವಾಯ ಶ್ರೀರಾಮಕೃಷ್ಣರು ಆರು ತಿಂಗಳ ಕಾಲ ಅವಿಚ್ಛಿನ್ನವಾಗಿ ಅದ್ವೈತ ವಾರಿಧಿಯಲ್ಲಿ ಮಗ್ನರಾಗಿದ್ದರು.”ಸಾಧಾರಣ ದೇಹವಾಗಿದ್ದರೆ ಮೂರೇವಾರಗಳಲ್ಲಿ ತರಗೆಲೆಯಂತೆ ಉದುರುತ್ತಿತ್ತು. ಹಗಲಿರುಳುಗಳ ಅರಿವೇ ನನಗಿರುತ್ತಿರಲಿಲ್ಲ. ನೊಣಗಳು ಹೆಣದ ಮೂಗು ಬಾಯಿಗಳಲ್ಲಿ ಪ್ರವೇಶಿಸುವಂತೆ ನನ್ನ ಮೂಗು ಬಾಯಿಗಳಲ್ಲಿ ನಿರಾತಂಕವಾಗಿ ಹೋಗುತ್ತಿದ್ದುವು. ತಲೆಕೂದಲು ಪಿಣಿಲಾಗಿ ಹೆಣೆದುಕೊಂಡು ಜಡೆಕಟ್ಟಿ ಹೋಗಿತ್ತು. ಆಗ ದಕ್ಷಿಣೇಶ್ವರಕ್ಕೆ ಬಂದಿದ್ದ ಸಾಧುವೊಬ್ಬನು ನನ್ನ ಅವಸ್ಥೆಯನ್ನರಿತು ಶುಶ್ರೂಷೆ ಮಾಡದಿದ್ದರೆ ದೇಹ ಬಿದ್ದು ಹೋಗುತ್ತಿತ್ತು. ಆತನು ಬಹು ಶ್ರಮದಿಂದ ಒಂದೊಂದು ಸಾರಿ ಬಡಿಗೆಯಿಂದಲೂ ಬಡಿದು, ನನಗೆ ಪ್ರಜ್ಞೆ ಬರುವಂತೆ ಮಾಡಿ ಆಹಾರವನ್ನು ಬಾಯಿಗೆ ಇಡುಕುತ್ತಿದ್ದನು. ಅದರಲ್ಲಿ ಎಲ್ಲಾದರೂ ಒಂದು ಚೂರು ಹೊಟ್ಟೆಗೆ ಹೋಗುತ್ತಿತ್ತು. ಕಡೆಗೆ ಜಗನ್ಮಾತೆ ‘ಭಾವಮುಖದಲ್ಲಿರು! ’ ಎಂದು ಬೆಸಸಿದಳು. ಕಠೋರ ಸಾಧನೆಯಿಂದಲೂ ಹೊತ್ತು ಹೊತ್ತಿಗೆ ಸರಿಯಾದ ನಿದ್ರಾಹಾರಗಳು ತಪ್ಪಿದುದರಿಂದಲೂ ಶ್ರೀರಾಮಕೃಷ್ಣರಿಗೆ ಆಮಶಂಕೆರೋಗ ಪ್ರಾಪ್ತವಾಯಿತು. ಮಥುರನು ವೈದ್ಯರಿಂದ ಮದ್ದು ಕೊಡಿಸಿ ಶುಶ್ರೂಷೆ ಮಾಡಿದನು. ಆರು ತಿಂಗಳಾದ ಮೇಲೆ ರೋಗ ಶಮನವಾಯಿತು.

ಅದ್ವೈತಸಾಧನೆಯಿಂದ ಶ್ರೀರಾಮಕೃಷ್ಣರ ದೃಷ್ಟಿ ಎಂದಿಗಿಂತಲೂ ಹೆಚ್ಚಾಗಿ ಉದಾರವಾಯಿತು. ಸಮದರ್ಶಿತ್ವವು ನೆಲೆಗೊಂಡಿತು. ಮುಕ್ತಿಗೆ ಎಲ್ಲ ಮತಗಳೂ ವಿವಿಧಪಥಗಳೆಂದು ತಿಳಿದರು. ಅವುಗಳನ್ನು ತಿಳಿಯುವ ಕುತೂಹಲವೂ ಹೆಚ್ಚಿತು. ಅನ್ಯಮತಸಾಧನೆಗೂ ಕೈಹಾಕಿದರು, ಏಕೆಂದರೆ ಅವರ ಭಾಗಕ್ಕೆ ಸ್ವಾನುಭವವೇ ಉತ್ತಮೋತ್ತಮ ಪ್ರಮಾಣವಾಗಿತ್ತು. ಮಾತು ಮಡಕೆಯ ತೂತು!

ಕ್ರಿ.ಶ. ೧೮೬೬ನೆಯ ವರ್ಷದ ತುದಿಯಲ್ಲಿ ಗೋವಿಂದರಾಯ ಎಂಬೊಬ್ಬ ಮುಸಲ್ಮಾನ ಫಕೀರನು ದಕ್ಷಿಣೇಶ್ವರಕ್ಕೆ ಬಂದನು. ರಾಣಿ ರಾಸಮಣಿ ಉದಾರ ಹೃದಯಳಾದುದರಿಂದ ಮತಭೇದವಿಲ್ಲದೆ ಸಾಧು ಸಂತರಿಗೆ ವಸತಿ ಮಾಡಿದ್ದಳು. ಗೋವಿಂದರಾಯನು ದಕ್ಷಿಣೇಶ್ವರದ ಶಾಂತ ಸನ್ನಿವೇಶವನ್ನು ನೋಡಿ ಅಲ್ಲಿಯೆ ಕೆಲವು ಕಾಲ ಧರ್ಮಸಾಧನೆಯಲ್ಲಿ ನಿರತನಾಗಿದ್ದನು. ಶ್ರೀರಾಮಕೃಷ್ಣರು ಆತನಿಂದ ಇಸ್ಲಾಂ ದೀಕ್ಷೆಯನ್ನು ಕೈಕೊಂಡು ಸಾಧನೆಗೆ ಪ್ರಾರಂಭಿಸಿದರು. ಕಾಳಿ ಮೊದಲಾದ ದೇವ ದೇವತೆಗಳನ್ನು ಸಂಪೂರ್ಣವಾಗಿ ಮರೆತುಬಿಟ್ಟರು. ದೇವಸ್ಥಾನದ ಹೊರಗಿದ್ದುಕೊಂಡು ಮುಸಲ್ಮಾನರ ಉಡುಪನ್ನೇ ಉಟ್ಟು, ‘ಅಲ್ಲಾ’ ಮಂತ್ರವನ್ನು ಜಪಮಾಡುತ್ತ ಮಹಮ್ಮದೀಯ ಪದ್ಧತಿಯನ್ನೇ ಚಾಚೂ ತಪ್ಪದೆ ಅನುಸರಿಸಿದರು. ಹಿಂದುಗಳು ಪವಿತ್ರವೆಂದು ಆರಾಧಿಸುವ ಗೋಮಾತೆಯ ಮಾಂಸವನ್ನು ತಿನ್ನಲೂ ಸಿದ್ಧರಾದರು! ಅದನ್ನು ಕೇಳಿದ ಮಥುರಬಾಬು ಭಯದಿಂದ ಮಿಂಚು ಮುಟ್ಟಿದವನಂತೆ ಗಡಗಡನೆ ನಡುಗಿದನು. ಉಪಾಯದಿಂದ ಶ್ರೀರಾಮಕೃಷ್ಣರಿಗೆ ಗೊತ್ತಾಗದಂತೆ ಗೋವಿಂದರಾಯನ ಅಧ್ಯಕ್ಷತೆಯಲ್ಲಿ ಬ್ರಾಹ್ಮಣನೊಬ್ಬನಿಂದ ಆಹಾರವನ್ನು ತಯಾರಿಸಿ ಕೊಡಿಸಿದನು. ಕೆಲವು ದಿನಗಳಲ್ಲಿ ಬಿಳಿಯ ಗಡ್ಡದ ಗಂಭೀರವದನದ ಪೈಗಂಬರನು ಪ್ರತ್ಯಕ್ಷನಾಗಿ ಪರಮಹಂಸರ  ದೇಹದಲ್ಲಿ ಐಕ್ಯವಾದನು. ಅಂತೂ ಮುಸಲ್ಮಾನರ ದೇವರೂ – ಸಗುಣ ಈಶ್ವರ – ಶ್ರೀರಾಮಕೃಷ್ಣರಿಗೆ ಸಾಕ್ಷಾತ್ಕಾರವಾದನು. ಅಲ್ಲಿಂದ ಆತನೂ ಉಳಿದೆಲ್ಲರಂತೆ ನಿರ್ಗುಣ ಬ್ರಹ್ಮದಲ್ಲಿ ಮುಳುಗಿಹೋದನು. ಇಸ್ಲಾಂವಾಹಿನಿಯೂ ಇತರ ನದಿಗಳಂತೆ ಪರಮಹಂಸರನ್ನು ಬ್ರಹ್ಮವಾರಿಧಿಗೆ ತೇಲಿಸಿತು.

ಇದಾದ ಏಳು ವರ್ಷಗಳ ಮೇಲೆ ಪರಮಹಂಸರಿಗೆ ಕ್ರಿಸ್ತನೂ ಪ್ರತ್ಯಕ್ಷನಾದನು. ಕ್ರಿ. ಶ. ೧೮೭೪ನೆಯ ನವಂಬರು ತಿಂಗಳಲ್ಲಿ ಶಂಭುಮಲ್ಲಿಕನೆಂಬೊಬ್ಬ ಭಕ್ತನು ಕಲ್ಕತ್ತೆಯಲ್ಲಿ ತನ್ನ ಮನೆಯಲ್ಲಿ ಶ್ರೀರಾಮಕೃಷ್ಣರಿಗೆ ಬೈಬಲ್ಲನ್ನು ಓದಿ ಹೇಳಿದನು. ಪರಮಹಂಸರಲ್ಲಿ ಕ್ರೈಸ್ತಭಾವ ಪ್ರಫುಲ್ಲಿತವಾಯಿತು. ಆ ಮಹಾ ಹುತಾತ್ಮನ ಜೀವನಚರಿತ್ರೆ ಅವರ ಸರ್ವಸ್ವವನ್ನೂ ಆಕ್ರಮಿಸಿಬಿಟ್ಟಿತು. ಆ ಗುರು ಮಾನವರ ಕಲ್ಯಾಣಕ್ಕಾಗಿ ಶಿಲುಬೆಯ ಮೇಲೆ ಚೆಲ್ಲಿದ ಪಾವನರಕ್ತವು ದಕ್ಷಿಣೇಶ್ವರದ ಯೋಗೀಶ್ವರನ ನಾಳನಾಳಗಳಲ್ಲಿ ಪ್ರವಹಿಸತೊಡಗಿತು. ಕ್ರೈಸ್ತಪ್ರೇಮದ ದಾವಾಗ್ನಿ ಹಿಂದೂ ದೇವದೇವತೆಗಳ ಮಹಾರಣ್ಯವನ್ನು ದಹಿಸಲಾರಂಭಿಸಿತು. ಹೀಗಿರುವಾಗಲೇ ಒಂದು ದಿನ ದಕ್ಷಿಣೇಶ್ವರಕ್ಕೆ ಸಮೀಪದಲ್ಲಿದ್ದ ಯದುಮಲ್ಲಿಕನೆಂಬೊಬ್ಬ ಭಕ್ತನ ಮನೆಯಲ್ಲಿ ಶ್ರೀರಾಮಕೃಷ್ಣರು ಶಿಶುವಾದ ಯೇಸುಕ್ರಿಸ್ತನು ದೇವಮಾತೆಯಾದ ಮೇರಿಯ ಪ್ರೇಮಾಲಿಂಗನದಲ್ಲಿ ಇರುವ ಚಿತ್ರಪಟವನ್ನು ನೋಡಿದರು. ನೋಡೆ ನೋಡೆ ಚಿತ್ರಾರ್ಪಿತ ವ್ಯಕ್ತಿಗಳು ಸಜೀವವಾ‌ದಂತೆ ತೋರಿದುವು. ಆ ಮಹದ್ವಕ್ತಿಗಳಿಂದ ಜ್ಯೋತಿಃಕಿರಣವೊಂದು ಹೊರಟು ಪರಮಹಂಸರ ಹೃದಯವನ್ನು ಪ್ರವೇಶಿಸಿತು. ಯೇಸುಕ್ರಿಸ್ತನ ಒಲುಮೆ ಹೊನಲಿನಲ್ಲಿ ಹಿಂದಿನ ದೇವತೆಗಳೆಲ್ಲ ಕೊಚ್ಚಿಹೋದರು. ಪರಮಹಂಸರು ದಕ್ಷಿಣೇಶ್ವರಕ್ಕೆ ಹಿಂದಿರುಗಿದರು. ಆದರೆ ಕಾಳಿಯ ಆರಾಧನೆಗೆ ಹೋಗಲಿಲ್ಲ. ಮೂರು ದಿನಗಳು ಹಗಲೂ ಇರುಳೂ ಕ್ರೈಸ್ತ ಭಾವವು ಅವರನ್ನು ನುಂಗಿಬಿಟ್ಟಿತು. ನಾಲ್ಕನೆಯ ದಿನ ಅವರು ಭಾದೀಪ್ತರಾಗಿ ಪಂಚವಟಿಯಲ್ಲಿ ತಿರುಗುತ್ತಿದ್ದಾಗ ಹಠಾತ್ತಾಗಿ ದಿವ್ಯಮೂರ್ತಿಯೊಂದು ಪ್ರತ್ಯಕ್ಷವಾಯಿತು. ಆ ಸುಂದರ ತೇಜೋಮೂರ್ತಿ ಅವರ ಬಳಿಸಾರಿ ತನ್ನ ಕರುಣಾಕಟಾಕ್ಷವನ್ನು ಬೀರಿತು. ವ್ಯಕ್ತಿ ವಿದೇಶೀಯನೆಂದು ಗೊತ್ತಾಯಿತು; ಆದರೆ ಅವರಿಗೆ ಪರಕೀಯನಾಗಿರಲಿಲ್ಲ. “ಈತನೇ ಮಹತ್ಮನಾದ ದೀನರಕ್ಷಕ ಯೇಸುಕ್ರಿಸ್ತ! ಜಗತ್ಕಲ್ಯಾಣಕ್ಕಾಗಿ ತನ್ನೆದೆಯ ರಕ್ತವನ್ನು ಸೂಸಿದ ಹುತಾತ್ಮ! ಪ್ರೇಮ ಘನಮೂರ್ತಿಯಾದ ನಜರೇತಿನ ಮಹಾಯೋಗಿ!” ಇಂತು ಶ್ರೀರಾಮಕೃಷ್ಣರು ಹೇಳಿಕೊಳ್ಳುತ್ತಿರಲು ಆ ಲಸದ್ರೂಪವು ಅವರ ಶರೀರವನ್ನು ಪ್ರವೇಶಿಸಿತು. ಪರಮಹಂಸರು ಸವಿಕಲ್ಪ ಸಮಾಧಿಮಗ್ನರಾದರು. ಭರತಖಂಡದ ನವಯುಗಾವತಾರನು ಕ್ರಿಸ್ರಾವತಾರವನ್ನು ಆಲಿಂಗಿಸಿದನು. ಯೇಸುವೂ ರಾಮ, ಕೃಷ್ಣ, ಬುದ್ಧ ಮೊದಲಾದವರಂತೆ ಅವತಾರ ಪುರಷನೆಂಬುದು ಅವರಿಗೆ ಸ್ವಾನುಭವ ವೇದ್ಯವಾಯಿತು.

ದೇಹಸ್ಥಿತಿ ‌ಗುಣಮುಖವಾದರೂ ಸಂಪೂರ್ಣವಾಗಿ ಗುಣವಾಗಲಿಲ್ಲ. ಹವದ ಬದಲಾವಣೆಯಿಂದ ಒಳ್ಳಿತಾಗುವುದೆಂದು ಊಹಿಸಿ ಮಧುರನಾಥನು ಶ್ರೀರಾಮಕೃಷ್ಣರನ್ನು ಕಾಮಾರಪುಕರಕ್ಕೆ ಕಳುಹಿಸಿದನು. ಅವರು ತಮ್ಮ ಹಳ್ಳಿಗೆ ಹೋಗದೆ ಎಂಟು ವರ್ಷಗಳಾಗಿತ್ತು. ತಮ್ಮ ಗದಾಧರನ ವಿಚಿತ್ರಾಚರಣೆಗಳ ಕಥೆಗಳನ್ನು ಕೇಳಿ ಉದ್ವಿಗ್ನರಾಗಿದ್ದ ಹಳ್ಳಿಯವರು ಪರಮಹಂಸರನ್ನು ಅತ್ಯಾನಂದದಿಂದ ಸ್ವೀಕರಿಸಿ ವಿಸ್ಮಿತರಾದರು. ಇಂದಿನ ಗದಾಧರನು ಅಂದಿನ ಗದಾಧರನಂತೆಯೇ ಇದ್ದನು. ಮಾತುಕತೆಗಳಲ್ಲಿ ಹುಚ್ಚಿನ ಚಿಹ್ನೆಯೇ ಇರಲಿಲ್ಲ. ಹಿಂದಿದ್ದ ಸರಳತೆ, ಹಿಂದಿದ್ದ ವಿನೋದಶೀಲತೆ, ಅದೇ ಸತ್ಯನಿಷ್ಠೆ, ಅದೇ ಭಕ್ತಿ, ಅದೇ ಭಾವ, ಅದೇ ಮೈಮರವು! ಎಲ್ಲವೂ ಹಿಂದಿನಂತೆಯೇ! ಹಳ್ಳಿಗರು ಪರಮಹಂಸರ ಮಾತು ಕೇಳಲು ರಾಮೇಶ್ವರನ ಮನೆಯಲ್ಲಿ ಕಿಕ್ಕಿರಿಯುತ್ತಿದ್ದರು. ಶ್ರೀರಾಮಕೃಷ್ಣರು ಗೃಹಕೃತ್ಯದ ಮಾತು ಕತೆಗಳೊಡನೆ ಧರ್ಮಜೀವನವನ್ನೂ ಪ್ರಿಯವಾಗುವಂತೆ ಬೋಧಿಸುತ್ತಿದ್ದರು. ಕಲ್ಕತ್ತೆಯ ವಿದ್ವಾಂಸರಿಗಿಂತಲೂ ದಕ್ಷಿಣೇಶ್ವರದ  ಪುರೋಹಿತರಿಗಿಂತಲೂ ಕಾಮಾರಪುಕುರದ ಹಳ್ಳಿಗರಿಗೇ ಪರಮಹಂಸರ ಮಾತು ಹೆಚ್ಚಾಗಿ ಅರ್ಥವಾಗುತ್ತಿತ್ತು.

ಇಲ್ಲಿ ನಾವು ಜಗತ್ತಿನ ಧರ್ಮಜೀವನದ ಇತಿಹಾಸದಲ್ಲಿ ಅಭೂತಪೂರ್ವವಾಗಿರುವ ಮಂಗಳಮಯ ಗೌರವಪೂರ್ಣವಾದ ಒಂದು ಮಹತ್ತರ ಸನ್ನಿವೇಶವನ್ನು ಎದುರುಗೊಳ್ಳುತ್ತೇವೆ. ಅದರ ಮಹಿಮೆ ಬಣ್ಣಿಸಲಸದಳವಾಗಿದೆ. ಶ್ರೀರಾಮಕೃಷ್ಣರು ತಮ್ಮ ಪಂಚವತ್ಸರದ ಶಿಶುಪತ್ನಿಯನ್ನು ಬಿಟ್ಟುಹೋಗಿ ಎಂಟು ವರ್ಷಗಳಾಗಿತ್ತು. ಶ್ರೀ ಶಾರದಾಮಣಿದೇವಿ ಹದಿನಾಲ್ಕು ವರ್ಷದ ಕುಮಾರಿಯಾಗಿ ಜಯರಾಮಬಾಟಿಯ ತನ್ನ ತಂದೆಯ ಮನೆಯಲ್ಲಿದ್ದಳು. ಆಕೆ ತನ್ನ ಪತಿಯ ವಿಚಾರವಾಗಿ ಚಿತ್ರ ವಿಚಿತ್ರವಾದ ಕಥೆಗಳನ್ನು ಕೇಳಿದ್ದಳು. ಕೆಲವರು ಆತನಿಗೆ ಹುಚ್ಚು ಹಿಡಿದಿದೆ. ಎನ್ನುವರು; ಕೆಲವರು ಪಿಶಾಚಿ ಅಮರಿದೆ ಎನ್ನುವರು; ಮತ್ತೆ ಕೆಲವರು ಮೂರ್ಛೆರೋಗ ಎನ್ನುವರು; ಕೆಲವರಂತೂ ಪುಟ್ಟ ಶಾರದೆಯನ್ನು ‘ಹುಚ್ಚನ ಹೆಂಡತಿ’ ಎಂದು ಕರೆದು ಪರಿಪರಿಯಾಗಿ ಹಾಸ್ಯ ಮಾಡುತ್ತಿದ್ದರು. ಇದನ್ನೆಲ್ಲ ಕೇಳಿ ಆ ಶಿಶು ಸರಳ ಹೃದಯದ ಬಾಲೆ ನೊಂದುಕೊಂಡು ತನ್ನ ಪತಿಗೆ ಕ್ಷೇಮವಾಗುವಂತೆ ಮಾಡು ಎಂದು ಭಗವಂತನನ್ನು ಪ್ರಾರ್ಥಿಸುತ್ತಿದ್ದಳು. ಆಕೆಯ ಮುಗ್ಧಹೃದಯದಲ್ಲಿ ವಯಸ್ಸಿಗೆ ಮೀರಿದ ಮಹತ್ತು ಮೊಳೆಯುತ್ತಿತ್ತು. ಪತಿ ಕಾಮಾರಪುರಕುರಕ್ಕೆ ಬಂದುದನ್ನು ಕೇಳಿ, ಆತನ ಸೇವೆಗೈದು ಪುನೀತೆಯಾಗುವೆನೆಂದು ಶಾರದಾದೇವಿಯು ಅಲ್ಲಿಗೆ ಬಂದಳು. ಈಶ್ವರ ಪ್ರೇಮೋನ್ಮತ್ತ ಪತಿಯನ್ನು ನೋಡಿ ಹಿಗ್ಗಿದಳು. ಕೆಲದಿನಗಳಲ್ಲಿಯೆ ಪತಿಯ ಹೃದಯದ ನಿಗೂಢ ಭಾವಗಳನ್ನು ಚೆನ್ನಾಗಿ ಅರಿತಳು. ತನ್ನ ಇನಿಯನು ಲೋಕಸಂಗ್ರಹ ಕಾರ್ಯಕ್ಕಾಗಿ ಅವತರಿಸಿರುವ ಜಗನ್ಮಹಾವ್ಯಕ್ತಿ ಎಂದು ಆಕೆಯ ಸೂಕ್ಷ್ಮಪ್ರತಿಭೆಗೆ ಹೊಳೆಯಿತು. ತನ್ನನ್ನು ಅಂತಹ ಮಹಾತ್ಮನ ಸಹಧರ್ಮಿಣಿಯನ್ನಾಗಿ ಮಾಡಿದ ವಿಧಿಯನ್ನು ಮನಮುಟ್ಟಿ ಕೊಂಡಾಡಿ, ತಾನು ಆತನ ಮಹಾಕಾರ್ಯಕ್ಕೆ ಪ್ರತಿಬಂಧಕವಾಗದೆ ಅನುಕೂಲೆಯಾಗುವೆನೆಂದು ನಿಶ್ಚಯಿಸಿದಳು. ಶ್ರೀರಾಮಕೃಷ್ಣರೂ ಪತ್ನಿಯನ್ನು ಆದರದಿಂದ ಸ್ವೀಕರಿಸಿದರು. ಸಂನ್ಯಾಸ ಗ್ರಹಣ ಮಾಡಿದ್ದರೂ ಕಾಮಿನೀ ಕಾಂಚನಗಳನ್ನು ಹೃತ್ಪೂರ್ವಕವಾಗಿ ತ್ಯಜಿಸಿದ್ದರೂ ಸರ್ವದಾ ಪಾರಲೌಕಿಕ ಜೀವಿಯಾಗಿದ್ದರೂ ಜಿತೇಂದ್ರಿಯರಾಗಿದ್ದರು ಅಜನ್ಮಬ್ರಹ್ಮಚರ್ಯದ ಕೈಬಿಡಲಿಲ್ಲ. ಆಕೆಯ ಮನಃಪೂರ್ವಕವಾದ ಸಮ್ಮತಿಯಿಂದಲ್ಲದೆ ಮುಂದಿನ ಜೀವನಕ್ರಮವನ್ನು ಕೈಕೊಳ್ಳಲಿಲ್ಲ. ವಿವಾಹಬಂಧನದ ಋಣವನ್ನು ಲೌಕಿಕವಾಗಿಯೂ ತೀರಿಸಲು ಸಿದ್ಧರಾಗಿದ್ದರು! ಪತ್ನಿಯನ್ನು ಕುರಿತು “ನಾನು ಸ್ತ್ರೀಯರನ್ನೆಲ್ಲಾ ಜಗನ್ಮಾತಾಸ್ವರೂಪಿಣಿಯರೆಂದು ನೋಡಲು ಕಲಿತಿದ್ದೇನೆ. ನಿಮ್ಮನ್ನೂ ಅದೇ ದೃಷ್ಟಿಯಿಂದಲ್ಲದೆ ಬೇರೆಯ ರೀತಿಯಿಂದ ನೋಡಲಾರೆ. ಆದರೆ ನೀವು ನನ್ನನ್ನು ಲೌಕಿಕ್ಕೆ (ಮಾಯೆಗೆ) ಎಳೆಯಲಾಶಿಸಿದರೆ ವಿವಾಹ ಧರ್ಮಕ್ಕೆ ಅನುಗುಣವಾಗಿ ನಿಮ್ಮಿಚ್ಛೆಯಂತೆ ನಡೆಯಲು ಸಿದ್ಧನಿದ್ದೇನೆ” ಎಂದರು. ಪತಿಯ ವಚನಗಳನ್ನು ಕೇಳಿ ಆ ಮಹಾಮಾತೆ “ನಾನು ನಿಮ್ಮ ಸಹಧರ್ಮಿಣಿ, ನಿಮ್ಮ ಧರ್ಮಜೀವನಕ್ಕೆ ಅನುಕೂಲೆಯಾಗುವುದೇ ನನ್ನ ಪರಮ ಕರ್ತವ್ಯ. ನಿಮ್ಮ ಮಹಾದರ್ಶನವೇ ನನ್ನ ಆದರ್ಶ. ನಿಮ್ಮನ್ನು ಮಾಯೆಗೆಳೆಯಲು ನಾನೆಂದೂ ಬಯಸೆನು. ನನಗೂ ನಿಮ್ಮ ಪಾದಾರವಿಂದದಲ್ಲಿ ಎಡೆಗೊಟ್ಟು ನಾನೂ ಮಾಯೆಯನ್ನು ದಾಟುವಂತೆ ಅನುಗ್ರಹಿಸಬೇಕೆಂದು ಬೇಡುತ್ತೇನೆ. ನಿಮ್ಮ ಸೇವೆಯೇ ನನ್ನ ಜೀವನದ ಪೂಜೆಯಾಗಿರಲಿ!” ಎಂದು ಆಶೀರ್ವಾದವಾಣಿಯನ್ನು ಬೀರಿದರು. ಸತಿಪತಿಗಳಿಬ್ಬರೂ ಎಂತಹ ತ್ಯಾಗಮೂರ್ತಿಗಳು! ಶ್ರೀ ಶಾರದಾದೇವಿ ತಮಗಿತ್ತ ಮಹಾಭಿಕ್ಷೆಗೆ ಪರಮಹಂಸರು ಕೃತಜ್ಞತೆಯಿಂದ ಕಣ್ಣೀರು ಕರೆದರು. ಮಹಾಭಿಕ್ಷೆಯನ್ನು ನೀಡುವ ಶಕ್ತಿ ಔದಾರ್ಯಗಳು ಮಹಾಮಾತೆಗಲ್ಲದೆ ಇನ್ನಾರಿಗಿರುವುವು?

ಜಗತ್ತಿನಲ್ಲಿ ತ್ಯಾಗಿಗಳನೇಕರು ಬಂದು ಸಂದಿದ್ದಾರೆ. ರಾಜ್ಯ ಪರಿತ್ಯಾಗ ಮಾಡಿದವರಿದ್ದಾರೆ, ಕಾಮೀನೀಕಾಂಚನ ತ್ಯಾಗಮಾಡಿದವರಿದ್ದಾರೆ; ಪತ್ನೀಪುತ್ರ ಬಂಧುಮಿತ್ರರನ್ನು ತ್ಯಾಗಮಾಡಿದವರಿದ್ದಾರೆ; ಐಹಿಕಭೋಗಗಳೆಲ್ಲವನ್ನೂ ತ್ಯಾಗ ಮಾಡಿದವರಿದ್ದಾರೆ; ಶರೀರ ಜೀವಗಳನ್ನೇ ತ್ಯಾಗಮಾಡಿದವರಿದ್ದಾರೆ. ಆದರೆ ತ್ಯಾಗವನ್ನೇ ತ್ಯಾಗಮಾಡಲು ಸಿದ್ಧರಾಗಿದ್ದವರು ಯಾರಿದ್ದಾರೆ? ನಿರಂತರ ಸಾಹಸದಿಂದ ಭಾವಸಾಧನೆಗಳಲ್ಲಿ ಸಿದ್ಧಿಹೊಂದಿ, ಸಂನ್ಯಾಸಗ್ರಹಣಮಾಡಿ, ವೇದಾಂತಸಾಧನೆಯಿಂದ ನಿರ್ವಿಕಲ್ಪ ಸಮಾಧಿಸ್ಥರಾಗಿ, ಬ್ರಹ್ಮ ಸಾಕ್ಷಾತ್ಕಾರ ಮಾಡಿದವರಾಗಿ, ಜಗತ್ತನ್ನೆಲ್ಲ ಮಿಥ್ಯೆಯೆಂದು ಸ್ವಾನುಭವದಿಂದ ಅರಿತವರಾಗಿ, ಕಾಮಿನೀ ಕಾಂಚನ ಮೋಹವನ್ನು ಸಂಪೂರ್ಣವಾಗಿ ಜಯಿಸಿದವರಾಗಿ ಉತ್ತಮೋತ್ತಮ ಆದರ್ಶಜೀವಿಗಳಾಗಿ ಬಹು ಕಠೋರ ತಪಸ್ಸಿನಿಂದ ಉಪಾರ್ಜಿಸಿದ ಮಹಾತ್ಯಾಗವನ್ನೇ ತ್ಯಾಗ ಮಾಡಲು ಸಿದ್ಧರಾಗಿದ್ದ ಶ್ರೀರಾಮಕೃಷ್ಣರಂತಹ ಜೀವಜ್ಯೋತಿಗಳು ಯಾರಿದ್ದಾರೆ? ಯಾರಿದ್ದಾರೆ! ಯಾರೂ ಇಲ್ಲ.

ಶ್ರೀರಾಮಕೃಷ್ಣ ಮತ್ತು ಶಾರದಾದೇವಿಯವರ ಪವಿತ್ರ ಸಂಬಂಧವು ಜಗಜ್ಜೀವನಜಾಲದಲ್ಲಿ ಒಂದು ನೂತನ ಜ್ಯೋತಿಸ್ಸೂತ್ರವಾಗಿದೆ. ಕಾಮವಾಸನೆ ಲೇಶಮಾತ್ರವೂ ಇಲ್ಲದ ಆ ಪಾವನ ಪ್ರೇಮಸ್ತೋತ್ರವು ಗಂಗೆಗೆ ಗಂಗೆಯಾಗಿದೆ. ಪರಮಹಂಸರು ತಮ್ಮ ಜೀವಮಾನದಲ್ಲೆಲ್ಲ ಶಾರದಾದೇವಿಯನ್ನು ತಂಗಿಯಂತೆ ಅಕ್ಕರೆಯಿಂದ ಲಾಲಿಸಿ ಪಾಲಿಸಿದರು; ಸಹೋದರನಂತೆ ವ್ಯವಹಾರದ ವಿಷಯಗಳನ್ನು ಪೂಜಿಸುವಂತೆ ಪೂಜಿಸಿಯೂ ಪೂಜಿಸಿದರು. ಅದರ ವೈಭವ ವೈಚಿತ್ರ್ಯಗಳನ್ನು ಮುಂದೆ ಕಾಣುತ್ತೇವೆ.

ಕಾಮಾರಪುಕುರ ಗ್ರಾಮದಲ್ಲಿ ಆರು ತಿಂಗಳು ಕಳೆದುವು. ಪರಮಹಂಸರು ಆರೋಗ್ಯಶಾಲಿಗಳಾದರು. ಕ್ರಿ. ಶ. ೧೮೬೭ನೆಯ ಸಂವತ್ಸರದ ಕಡೆಯ ಭಾಗದಲ್ಲಿ ದಕ್ಷಿಣೇಶ್ವರಕ್ಕೆ ಮರಳಿದರು.

ಕ್ರಿ. ಶ. ೧೮೬೮ನೆಯ ವರ್ಷದ ಪ್ರಥಮ ಭಾಗದಲ್ಲಿ ಮಥುರನಾಥನು ಶ್ರೀರಾಮಕೃಷ್ಣರನ್ನು ಕೂಡಿಕೊಂಡು ಕಾಶಿ, ಪ್ರಯಾಗ, ಬೃಂದಾವನ ಮೊದಲಾದ ಪವಿತ್ರ ಕ್ಷೇತ್ರಗಳಿಗೆ ತೀರ್ಥಯಾತ್ರೆ ಹೋದನು. ಆ ಸಮಯದಲ್ಲಿ ಪರಮಹಂಸರಿಗಾದ ಆನಂದಾತಿಶಯವನ್ನೂ ಭಾವಸಮಾಧಿಗಳನ್ನೂ ವಾಚಕರೆ ಊಹಿಸಿಕೊಳ್ಳಬಹುದು. ಕಾಶಿ ಅವರ ಕಣ್ಣಿಗೆ ಸಗ್ಗದಿಂದ ಇಳಿದುಬಂದು ಇಳೆಯಲ್ಲಿ  ವಜ್ರಮಯವಾಗಿ ನಿಂದ ಧರ್ಮಾಮೃತವೋ ಎಂಬಂತೆ ರಂಜಿಸಿತು. ಆ ಪವಿತ್ರಸ್ಥಾನದ ಶ್ಮಶಾನಗಳಲ್ಲಿ ಧವಳದೇಹಿಯಾದ ಶಿವನನ್ನೂ ಉರಿಯುವ ಸೂಡುಗಳ ಮೇಲೆ ಬಾಗಿ ಜೀವರ ಬಂಧುವಿಮೋಚನೆ ಮಾಡುವ ಜಗನ್ಮಾತೆಯನ್ನೂ ನೋಡಿ ಮೈ ಮರೆತರು. ಬೃಂದಾವನದಲ್ಲಿ ಸಂಜೆಯ ಹೊಮ್ಮಳೆಯಲ್ಲಿ ಮಿಂದು  ಮಿರುಗುವ ಹಸುರಾದ ಮನೋಹರ ನಿಕುಂಜವನಗಳಲ್ಲಿ ದನಗಳನ್ನು ಮೇಯಿಸುವ ದನಗಾಹಿಗಳನ್ನು ಕಂಡು “ಕೃಷ್ಣನೆಲ್ಲಿದ್ದಾನೆ? ಅಯ್ಯೋ ನನ್ನ ಕೃಷ್ಣನೆಲ್ಲಿದ್ದಾನೆ?” ಎಂದು ಭಾವೋನ್ಮಾದದಿಂದ ಕುಣಿದಾಡಿದರು. ಅಲ್ಲದೆ ಯಾತ್ರೆಯ ಕಾಲದಲ್ಲಿ ತ್ರೈಲಿಂಗಸ್ವಾಮಿಯೇ ಮೊದಲಾದ ಭಕ್ತಶ್ರೇಷ್ಠರನ್ನೂ ಸಿದ್ಧಪುರುಷರನ್ನೂ ಕಂಡು ಮಾತಾಡಿದರು.

ಎಲ್ಲಕ್ಕಿಂತಲೂ  ಅತಿಶಯವಾದುದೆಂದರೆ – ಪರಮಹಂಸರ ದರಿದ್ರ ನಾರಾಯಣ ಸೇವೆಯನ್ನು ತೋರಿಸುವ ಒಂದು ಘಟನೆ. ನಿರ್ವಿಕಲ್ಪ ಸಮಾಧಿಯಲ್ಲಿ ಜಗತ್ತು ಮಿಥ್ಯೆಯೆಂದು ತಿಳಿದಿದ್ದರೂ ಅವರು ಕೋಟಿ ಕೋಟಿ ಮಾನವ ಜೀವಿಗಳ ಕಷ್ಟಸಂಕಟಗಳಿಗೆ ಕಣ್ಣುಮುಚ್ಚಿರಲಿಲ್ಲ. ಜ್ಞಾನಜ್ಯೋತಿಯಿಂದ ಅಂಧರಾಗಿರಲಿಲ್ಲ. ತಮ್ಮ ಶ್ರೀಮಂತ ಮಿತ್ರನೊಡನೆ ಅವರು ದೇವಗಡಕ್ಕೆ ಬಂದಾಗ ಅಲ್ಲಿ ಪ್ರಬಲ ಕ್ಷಾಮವು ಕಾಲಿಟ್ಟಿದ್ದಿತು. ಹಸಿವಿನಿಂದ ಸೊರಗಿ ಕೊರಗಿ ನರಳಿ, ಉಡಲು ಬಟ್ಟೆಯಿಲ್ಲದೆ, ಬತ್ತಲೆಯಾಗಿ ಬಯಲಿನಲ್ಲಿ ಬಿದ್ದು ಸಾಯುತ್ತಲಿದ್ದ ಸಂತಾಲರೆಂಬ ಜಾತಿಯ ನೂರಾರು ಮಂದಿಗಳನ್ನು ಕಂಡು ಪರಮಹಂಸರು ಕರಗಿ ನೀರಾದರು. ಅವರೆಲ್ಲರಿಗೂ ಊಟಕೊಟ್ಟು, ಉಡಲು ಬಟ್ಟೆ ಕೊಡಬೇಕೆಂದು ಮಥುರನಿಗೆ ತಿಳಿಸಿದರು. ಮಥುರನು “ಲೋಕದ ಮೇಲಿರುವ ದರಿದ್ರರಿಗೆಲ್ಲ ಹೊಟ್ಟೆ ಬಟ್ಟೆಗೆ ಕೊಡಲು ನನ್ನಲ್ಲಿ ಹಣವಿಲ್ಲ” ಎಂದುಬಿಟ್ಟನು. ಪರಮಹಂಸರು “ಹಾಗಾದರೆ, ನಾನು ನಿನ್ನೊಡನೆ ಬರುವುದಿಲ್ಲ. ಇವರೊಂದಿಗೇ ಇರುತ್ತೇನೆ.” ಎಂದು ಹೇಳಿ ನರಳುತ್ತಿದ್ದ ಸಂತಾಲರ ನಡುವೆ ಹೋಗಿ ಕುಳಿತು ಅಳತೊಡಗಿದರು. ಇಕ್ಕುಳದ ನಡುವ ಸಿಕ್ಕಿದಂತಾದ ಮಥರನು ಮುಂದುಗಾಣದೆ ಶ್ರೀರಾಮಕೃಷ್ಣರ ಇಚ್ಛೆಯನ್ನು ನೆರವೇರಿಸಿ ಅವರೊಡನೆ ಮುಂದುವರಿದನು.

ದರಿದ್ರರನ್ನೂ ದುಃಖಿಗಳನ್ನೂ ಕಂಡರೆ ಶ್ರೀರಾಮಕೃಷ್ಣರಿಗೆ ಸಂತಾಪ ಮಿತಿ ಮೀರುತ್ತಿತ್ತು. ಶುಷ್ಕವೇದಾಂತಿಯಾದವನಂತೆ ಅಥವಾ ಹೊಟ್ಟೆ ತುಂಬಿದ ಪಂಡಿತನಂತೆ ಎಲ್ಲವೂ ಮಾಯೆ, ಅವರ ಕರ್ಮ ಫಲವನ್ನು ಅವರು ಅನುಭವಿಸುತ್ತಾರೆ ಎಂದು ಸುಮ್ಮನಿರುತ್ತಿರಲಿಲ್ಲ. ಒಂದು ಸಾರಿ ಮಥುರನು ತನ್ನ ಜಮೀನುದಾರಿಗೆ ಕಂದಾಯ ವಸೂಲು ಮಾಡಲು ಹೋಗುವಾಗ ಪರಮಹಂಸರನ್ನೂ ಜೊತೆಯಲ್ಲಿ ಕರೆದೊಯ್ದನು. ಮಳೆಯಾಗದೆ ಬೆಳೆ ಸರಿಯಾಗಿ ಬಂದಿರಲಿಲ್ಲ. ರೈತರು ಬಹಳ ಕಷ್ಟದಲ್ಲಿದ್ದರು. ಅದನ್ನು ಕಂಡು ಶ್ರೀರಾಮಕೃಷ್ಣರು ಕಂದಾಯವನ್ನು ಬಿಟ್ಟುಬಿಡುವಂತೆಯೂ ಅವರೆಲ್ಲರಿಗೂ ಧನಧಾನ್ಯಗಳನ್ನು ಹಂಚುವಂತೆಯೂ ಒಂದು ಸಮಾರಾಧನೆ ಮಾಡಿಸಿ ಅವರನ್ನು ಉಪಚರಿಸುವಂತೆಯೂ ಮಥುರನಿಗೆ ಬೆಸಸಿದರು. ಮಥುರಬಾಬು ಒಪ್ಪಲಿಲ್ಲ.

“ಹಾಗೆಂದರೇನು? ಈ ಭೂಮಿ ನಿನ್ನದೆ? ನೀನೇನು ದುಡಿಯುತ್ತೀಯೇನು? ಅವರಲ್ಲವೇ ಗೆಯ್ಯುವವರು? ನೀನು ಬರಿಯ ಜಗನ್ಮಾತೆಯ ಮೇಸ್ತ್ರಿ! ಅವರೆಲ್ಲ ಆಕೆಯ ಒಕ್ಕಲು! ಆಕೆಯ ಹಣವನ್ನು ಆಕೆಯ ಮಕ್ಕಳ ಕ್ಷೇಮಕ್ಕಾಗಿ ವ್ಯಯಮಾಡಲೇಬೇಕು. ಅವರೆಲ್ಲರೂ ಗೋಳಾಡುತ್ತಿದ್ದಾರೆ! ‘ಒಲ್ಲೆ’ ಎನ್ನಲು ನಿನಗೆ ಹೇಗೆ ಮನಸ್ಸು ಬರುತ್ತದೆ? ನೀನು ಮಾಡಲೇಬೇಕು!” ಎಂದು ಶ್ರೀರಾಮಕೃಷ್ಣರು ಗದರಿ ಹಠಹಿಡಿದರು. ಕಡೆಗೆ ಮಥುರನು ಅವರು ಹೇಳಿದಂತೆ ಮಾಡಬೇಕಾಯಿತು. ಯಾವ ಸಮತಾವಾದಿ ಇದಕ್ಕಿಂತ ಹೆಚ್ಚು ಹೇಳಿಯಾನು?

ಇನ್ನೊಂದು ಸಾರಿ ಬಡವರಿಗೆ ಉಪಕಾರಮಾಡಬೇಕು ಎಂದು ಹೇಳಿದ ಶಿಷ್ಯನೊಬ್ಬನನ್ನು ತರಾಟೆಗೆ ತೆಗೆದುಕೊಂಡು ಪರಮಹಂಸರು ಹೀಗೆಂದರು: “ಜೀವವೇ ಶಿವ; ಎಲ್ಲ ಜೀವದಲ್ಲಿಯೂ ಈಶ್ವರನಿದ್ದಾನೆ. ಹೀಗಿರಲು ‘ಉಪಕಾರ’ ಎನ್ನುವುದು ಎಂತಹ ಗರ್ವದ ಮಾತು! ‘ಉಪಕಾರ’ ಎನ್ನಬಾರದು! ‘ಸೇವೆ, ಸೇವೆ, ಸೇವೆ’ ಎನ್ನಬೇಕು; ನರನನ್ನೂ ನಾರಾಯಣ ಎಂದು ಭಾವಿಸಬೇಕು.

ಮಥುರನಾಥನು ಪರಮಹಂಸರನ್ನು ಎಡೆಬಿಡದೆ, ಗೊಣಗುಟ್ಟದೆ, ಜಿಪುಣನಾಗದೆ, ಮೂರ್ತಿಮತ್ತಾದ ತನ್ನ ಇಷ್ಟದೇವತೆಯನ್ನು ಅನನ್ಯ ಭಕ್ತಿವಿಶ್ವಾಸಗಳಿಂದ ಸೇವೆಮಾಡಿ, ಅವರ ಉಪದೇಶದಂತೆ ತನ್ನ ಅತುಲ ಶ್ರೀಯನ್ನು ದರಿದ್ರ ನಾರಾಯಣರ ಸೇವೆಯಲ್ಲಿ ಸಮೆಸಿ ಕೃತಾರ್ಥನಾದನು. ತೀರ್ಥಯಾತ್ರೆಯಿಂದ ಹಿಂದುರುಗಿ ಬಂದ ಮೇಲೆ ಮಥುರನು ಇದ್ದಕ್ಕಿದ್ದ ಹಾಗೆ ಅಸ್ವಸ್ಥನಾದನು. ಒಂದು ವಾರದೊಳಗೆ ರೋಗ ವಿಷಮಶೀತಜ್ವರವಾಗಿ ಪರಿಣಮಿಸಿತು. ಜೀವನ ನಾಟಕದ ಕೊನೆಯ ಅಂಕದ ಯವನಿಕೆ ತಮ್ಮ ಶ್ರೀಮಂತ ಭಕ್ತನ ಮೇಲೆ ಬೀಳುತ್ತಿರುವುದು ಪರಮಹಂಸರಿಗೆ ಗೊತ್ತಾಯಿತು. ರೋಗ ಪ್ರಬಲವಾಯಿತು. ಮಥುರಬಾಬುವನ್ನು ಕಾಳಿಘಟ್ಟಕ್ಕೆ ಸಾಗಿಸಿದರು. ಕ್ರಿ. ಶ. ೧೮೭೧ನೆಯ  ವರ್ಷದ ಜುಲೈ ತಿಂಗಳಲ್ಲಿ ಆತನು ಜಗನ್ಮಾತೆಯ ಹೃದಯಾದೀನವಾದನು. ಪರಮಹಂಸರ ಜೀವಮಾನರಂಗದಲ್ಲಿದ್ದ ಬಹುಮುಖ್ಯ ವ್ಯಕ್ತಿಯೊಂದು ಕಣ್ಮರೆಯಾಯಿತು. ಬಹು ಕಾಲದ ಮೇಲೆ “ಸ್ವಾಮೀ, ಮರಣಾನಂತರ ಆತನಿಗೆ ಯಾವ ಪದವಿ ಲಭಿಸಿತು? ಆತನಿಗಂತೂ ಪುನರ್ಜನ್ಮವಿಲ್ಲ?” ಎಂದು ಪ್ರಶ್ನೆಗೈದ  ಭಕ್ತನೊಬ್ಬನಿಗೆ ಪರಮಹಂಸರು ಹೀಗೆ ಹೇಳಿದರಂತೆ: “ಬಹುಶಃ ಆತನು ರಾಜವಂಶದಲ್ಲಿ ಜನಿಸಿದ್ದಾನೆ. ಮಥುರನಿಗೆ ಇನ್ನೂ ಅತಿಶಯವಾದ ಭೋಗಾಭಿಲಾಷೆಯಿತ್ತು.”

ಮಥುರನ ನಿಧನಾನಂತರ ಕ್ರಿ. ಶ. ೧೮೭೨ರಲ್ಲಿ ಶ್ರೀ ಶಾರದಾದೇವಿ ದಕ್ಷಿಣೇಶ್ವರಕ್ಕೆ ಬಂದರು. ಆಗ ರಾತ್ರಿ ಒಂಬತ್ತು ಗಂಟೆ ಹೊಡೆದಿತ್ತು. ಶಾರದಾದೇವಿಗೆ ಮೈ ಸ್ವಸ್ಥವಿರಲಿಲ್ಲ. ರೋಗವಿದ್ದರೂ ಸಹಿಸಿಕೊಂಡು ತಮ್ಮಲ್ಲಿಗೆ ಬಂದ ಸಹಧರ್ಮಿಣಿಯನ್ನು ಕಂಡು ಪರಮಹಂಸರಿಗೆ ಬಹು ದುಃಖವಾಯಿತು. ತಮ್ಮ ಕೊಠಡಿಯಲ್ಲಿಯೆ ಬೇರೊಂದು ಹಾಸಿಗೆ ಮಾಡಿ ರೋಗಿಯನ್ನು ಮಲಗಿಸಿ, ತಾವು ಇರುಳೆಲ್ಲ ಪಕ್ಕದಲ್ಲಿ ಕುಳಿತು ಶುಶ್ರೂಷೆ ಮಾಡಿದರು. ನಡುವೆ ನಡುವೆ ಅನೇಕಸಾರಿ “ಅಯ್ಯೋ, ನೀನು ತಡವಾಗಿ ಬಂದೆ. ನಿನ್ನನ್ನು ನೋಡಿಕೊಳ್ಳಲು ನನ್ನ ಮಥುರನಿಲ್ಲ! ” ಎಂದು ನಿಟ್ಟುಸಿರು ಬಿಡುತ್ತಿದ್ದರಂತೆ. ಮರುದಿನ ಪತ್ನಿಯನ್ನು ತಮ್ಮ ತಾಯಿಯ ಬಳಿಗೆ ಕಳುಹಿಸಿದರು. ಮೂರು ನಾಲ್ಕು ದಿನಗಳಲ್ಲಿ ರೋಗ ಗುಣವಾಯಿತು. ಶಾರದಾದೇವಿ ಹರ್ಷಚಿ‌ತ್ತೆಯಾದಳು. ಪರಮಹಂಸರು ಆಕೆಗೆ ಅಕ್ಕರೆಯಿಂದ ವಿದ್ಯಾಬುದ್ಧಿಗಳನ್ನು ಹೇಳಿಕೊಡತೊಡಗಿದರು. ಆಕೆಯ ಆತ್ಮವು ಸದಾ ಈಶ್ವರ ಚಿಂತನೆಯಲ್ಲಿ ನಿಲ್ಲುವಂತೆ ಮಾಡಿದರು. ಆ ದೇವದಂಪತಿಗಳ ಪವಿತ್ರ ಸಂಬಂಧದ ಮಹಿಮೆ, ಅದರ ಮಾಧುರ್ಯ, ಅದರ ಕರುಣೆ, ಅದರ ಗೌರವ, ಅದರ ದಿವ್ಯತೆ, ಅದರ ಭವ್ಯತೆ, ಅದರ ಕಾಮಗಂಧ ವಿಹೀನವಾದ ಅನಿರ್ವಚನೀಯ ಶುದ್ಧ ಪ್ರೇಮ – ಇವುಗಳನ್ನು ಲೇಖನಿ ಬರೆದು ಮುಗಿಸಲಾರದು ಎಂದು ಮತ್ತೆ ಮತ್ತೆ ಹೇಳಬೇಕಾಗಿದೆ.

ಅಲೋಚನೆಗೆ ಸಿಲುಕದ, ಕಲ್ಪನೆಗೂ ಅತೀತವಾದ ಅದರ ಮಹಾ ಆದರ್ಶವನ್ನು ಸೂಚಿಸಲು ಒಂದು ಉದಾಹರಣೆ ಮಾತ್ರ ಕೊಡುತ್ತೇವೆ:

ಕ್ರಿ. ಶ. ೧೮೭೨ನೆ ಸಂವತ್ಸರದ ಮೇ ತಿಂಗಳು ಜ್ಯೇಷ್ಠ ಬಹುಳ ಅಮಾವಾಸ್ಯೆಯ ಘನ ನಿಬಿಡ ರಾತ್ರಿ. ಕಾಳಿಕಾಪೂಜೆಗೆ ಪ್ರಶಸ್ತವಾದ ಶುಭಸಮಯಗಳಲ್ಲಿ ಅದೊಂದಾಗಿತ್ತು. ಪರಮಹಂಸರು ಪೂಜೆಗೆ ಬೇಕಾದ ಸಾಮಗ್ರಿಗಳನ್ನೆಲ್ಲ ಒಟ್ಟುಗೂಡಿಸಿದರು, ದೇವಿಯ ಮಂದಿರದಲ್ಲಲ್ಲ, ತಮ್ಮ ಕೊಠಡಿಯಲ್ಲಿ. ಪೂಜಾ ಕಾಲದಲ್ಲಿ ಬಂದಿರಬೇಕೆಂದು ಶಾರದಾದೇವಿಗೆ ಮೊದಲೇ ತಿಳಿಸಿದ್ದರು. ಆದ್ದರಿಂದ ಆಕೆ ರಾತ್ರಿ ಒಂಬತ್ತು ಗಂಟೆಯ ಹೊತ್ತಿಗೆ ಶ್ರೀರಾಮಕೃಷ್ಣರ ಕೊಠಡಿಗೆ ಬಂದರು. ಅಲ್ಲಿ ಪರಮಹಂಸರಲ್ಲದೆ ಬೇರೆ ಯಾರೂ ಇರಲಿಲ್ಲ. ಎಲ್ಲವೂ ಪೂಜೆಗೆ ಅಣಿಯಾಗಿತ್ತು. ದೇವಿಯನ್ನು ಕೂಡಿಸುವ ಪೀಠವೂ ಅಲಂಕೃತವಾಗಿ ಸಿದ್ಧವಾಗಿತ್ತು. ಆದರೆ ಪೀಠದ ಮೇಲೆ ದೇವಿಯ ವಿಗ್ರಹವಿರಲಿಲ್ಲ! ಆದರೂ ಪೂಜೆಗೆ ಪ್ರಾರಂಭವಾಯಿತು. ಕಲಶಾರ್ಚನೆ ಶಂಖಾರ್ಚನೆಗಳು ಪೂರೈಸಿದುವು. ತರುವಾಯ ಪರಮಹಂಸರು ತಮ್ಮ ಪತ್ನಿಯ ಕಡೆಗೆ ತಿರುಗಿ ದೇವಿಗೆಂದು ಸಮೆದಿದ್ದ ಪೀಠದ ಮೇಲೆ ಪದ್ಮಾಸನ ಹಾಕಿ ಕುಳಿತರು! ಇಷ್ಟರಲ್ಲಿ ದೀನನಾಥನೆಂಬೊಬ್ಬ ವಿಷ್ಣು ದೇವಾಲಯದ ಪೂಜಾರಿ ಪರಮಹಂಸರಿಗೆ ಕುಮಾರಿ ಪೂಜೆಯಲ್ಲಿ ಸಹಾಯ ಮಾಲು ಅಲ್ಲಿಗೆ ಬಂದನು. ನೋಡಿ ದಿಙ್ಮೂಢನಾದನು. ಪರಮಹಂಸರು ಯಥಾವಿಧಿಯಾಗಿ ಭವತಾರಿಣಿಯನ್ನು ಅರ್ಚಿಸುವಂತೆ ತಮ್ಮ ಸಹಧರ್ಮಿಣಿಗೆ ಷೋಡಶೋಪಚಾರ ಪೂಜೆಯನ್ನು ಮಾಡಿ ಮಂತ್ರಗಳನ್ನು ಹೇಳುತ್ತ ಸಮಾಧಿಮಗ್ನರಾದರು. ಶಾರದಾದೇವಿ ಪೀಠದ ಮೇಲೆ ಭಾವತಲ್ಲೀನರಾಗಿದ್ದರು. ಭಕ್ತನೂ ದೇವಿಯೂ ಇಂದ್ರಿಯಾತೀತ ಪ್ರೇಮದಲ್ಲಿ ಸಾಯುಜ್ಯಹೊಂದಿದ್ದರು. ಹೊತ್ತು ಕಳೆಯಿತು. ನಡುರಾತ್ರಿಯಲ್ಲಿ ಪರಮಹಂಸರು ಮರಳಿ ಮೈತಿಳಿದು ಮಂತ್ರೋಚ್ಚಾರಣೆ ಮಾಡುತ್ತ ಪೀಠಸ್ಥರಾಗಿದ್ದ ಮಹಾಮಾತೆಯ ಪದತಲದಲ್ಲಿ ಜಪಮಾಲೆ ಮೊದಲಾದ ಸಮಸ್ತ ಸಾಮಗ್ರಿಗಳನ್ನೂ ತಮ್ಮ ಎಲ್ಲಾ ಸಾಧನೆಗಳ ನಿಖಿಲ ಫಲವನ್ನೂ ನಿವೇದಿಸಿ:

ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ |
ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತುತೇ ||

ಎಂದು ಮಂಗಳ ಸಾಮಗಾನಮಾಡಿ ಸಾಷ್ಟಾಂಗಪ್ರಣಾಮ ಮಾಡಿದರು. ಆ ಕ್ಷಣದಿಂದ ದಿವ್ಯಮಾತೆಯ ಮಹಾಪೀಠದಲ್ಲಿ ಮಂಡಿಸಿ ನವಯುಗಾವತಾರ ಪರಮಹಂಸ ಶ್ರೀರಾಮಕೃಷ್ಣರಿಂದ ಪೂಜಿತರಾಗಿ ಶ್ರೀಶಾರದಾದೇವಿ ಲೋಕಕ್ಕೆಲ್ಲ “ಮಹಾಮಾತೆ”ಯಾದರು. ಮುಂದೆ ಆಕೆ “ಮಹಾಮಾತೆ” ಎಂಬ ಹೆಸರಿನಿಂದಲೆ ಲೋಕಪೂಜಿತೆಯಾದರು. ಸಾಧನೆಗಳಿಗೆಲ್ಲ ಕಿರೀಟಪ್ರಾಯವಾದ ಈ ಸಾಧನೆಯಲ್ಲಿ ಶ್ರೀರಾಮಕೃಷ್ಣರ ಜೈತ್ರಯಾತ್ರೆ ಜ್ಯೋತಿರ್ಮಯವಾಗಿ ಕೊನೆಮುಟ್ಟಿತು.

ಆದರೂ ಸಿಂಹಾಲೋಕನ ರೀತಿಯಿಂದ ಹೇಳಬಹುದಾದ ಕೆಲವು ವಿಷಯಗಳಿವೆ.

ಇದುವರೆಗೆ ಶ್ರೀರಾಮಕೃಷ್ಣರ ಸಾಧನೆಗಳ ಕಥೆಯನ್ನು ಆಲಿಸಿದ ಓದುಗರು ಇಷ್ಟನ್ನು ಮನಗಂಡಿರಬಹುದು: ಪರಮಹಂಸರು ಬರಿಯ ಸಿದ್ಧಾಂತ ಲೋಲುಪರಲ್ಲ: ಪ್ರಯೋಗಪ್ರವೀಣರು. ಸತ್ಯಪರೀಕ್ಷೆಗೆ ಸಾಕ್ಷಾತ್ಕರಣವೆ ಪರಮ ಪ್ರಮಾಣ. ಅವರಿವರ ಮಾತುಗಳಿಗಿಂತಲೂ ಧರ್ಮಗ್ರಂಥಗಳ ವಾಕ್ಯಗಳಿಗಿಂತಲೂ ಸ್ವಾನುಭವವೆ ಅತ್ಯುತ್ತಮ ಸಾಕ್ಷಿ ಪರೀಕ್ಷಿಸಿ ಸಾಧಿಸಿ ನೋಡದೆ ಯಾವುದನ್ನಾದರೂ ಅಲ್ಲಗೆಳೆಯುವುದಾಗಲಿ ಸ್ವೀಕರಿಸುವುದಾಗಲಿ ತಪ್ಪು. ಪ್ರಯತ್ನಶೀಲವಲ್ಲದ ಸಂಶಯವು ಅಂಧಶ್ರದ್ಧೆಯಂತೆಯೇ ನೀರಸವಾದದ್ದು. ಸ್ವಾನುಭವ ಸಿದ್ಧವಾದ ಜ್ಞಾನವೇ ಸರ್ವಶ್ರೇಷ್ಠವಾದದ್ದು. ಅದುವೆ ಸರ್ವೋಚ್ಚ ಪ್ರಮಾಣ, ಮತ್ತು ಸರ್ವೋತ್ತಮ ಅಧಿಕಾರಿ. ಉಳಿದುದೆಲ್ಲವೂ ಜಳ್ಳು.

ಆದ್ದರಿಂದಲೆ ಅವರು ಸರ್ವಮತ ಸಿದ್ಧಾಂತಗಳನ್ನೂ ಸಾಧನೆಯ ಶಾಲೆಯಲ್ಲಿ ಅಸಮಸಾಹಸದಿಂದಲೂ ವಿಶಾಲ ಹೃದಯದಿಂದಲೂ ಪರೀಕ್ಷಿಸಿ ಸಮನ್ವಯತ್ತ್ವಸಿದ್ಧರಾದರು; ಸರ್ವಧರ್ಮಸಮನ್ವಯಾಚಾರ್ಯರಾದರು. ಎಲ್ಲ ಮತಗಳೂ ಒಂದೇ ಸತ್ಯದೆಡೆಗೆ ಹೋಗುವ ಬೇರೆಬೇರೆ ಹಾದಿಗಳೆಂಬುದನ್ನು ಅವರು ಬರಿಯ ಗ್ರಂಥಾಧ್ಯಯನದಿಂದ ಸಂಗ್ರಹಿಸಲಿಲ್ಲ; ಅದು ಅವರಿಗೆ ಪುಸ್ತಕದ ಬದನೆಕಾಯಿ ಆಗಿರಲಿಲ್ಲ. ಪ್ರತ್ಯಕ್ಷವಾದ ಸತ್ಯಸತ್ಯವಾಗಿತ್ತು. ಆದ್ದರಿಂದಲೆ ಅವರಿಗೆ ಈ ಪರಿ ಹೇಳಲು ಸಾಧ್ಯವಾಯಿತು: “ನಾನು ಎಲ್ಲ ಮತಗಳನ್ನೂ ಹಿಂದೂ ಕ್ರೈಸ್ತ ಇಸ್ಲಾಂ ಧರ್ಮಗಳನ್ನೂ ಇನ್ನುಳಿದ ಅನೇಕ  ವಿಧವಿಧವಾದ ಪಂಥಗಳನ್ನೂ ಸಾಧಿಸಿದ್ದೇನೆ. ಭಿನ್ನ ಭಿನ್ನ  ಮಾರ್ಗಗಳಿಂದ ಸರ್ವರೂ ಏಕ ಮಾತ್ರ ಸತ್ಯದೆಡೆಗೆ ಹೋಗುತ್ತಿದ್ದಾರೆ ಎಂಬುದನ್ನು ಕಂಡು ತಿಳಿದಿದ್ದೇನೆ. ನೀವು ಎಲ್ಲ ಮತಗಳನ್ನೂ ಪರೀಕ್ಷಿಸಬೇಕು; ಒಂದು ಸಾರಿಯಾದರೂ ಎಲ್ಲ ಹಾದಿಗಳಲ್ಲಿಯೂ ತಿರುಗಾಡಿ ಬರಬೇಕು. ಎಲ್ಲಿ ನೋಡಿದರೂ ಜನರು ಮತದ ಹೆಸರಿನಲ್ಲಿ ಹೊಡೆದಾಡುತ್ತಿದ್ದಾರೆ. ಹಿಂದುಗಳು, ಮುಸಲ್ಮಾನರು, ಬ್ರಾಹ್ಮಸಮಾಜಿಗಳು, ವೈಷ್ಣವಪಂಥಿಗಳು ಎಲ್ಲರೂ ಸುಮ್ಮನೆ ಕಚ್ಚಾಡುತ್ತಿದ್ದಾರೆ. ಆದರೆ ಅವರಲ್ಲಿ ಯಾರೊಬ್ಬರೂ ಸ್ವಲ್ಪವಾದರೂ ಆಲೋಚಿಸುವುದಿಲ್ಲ. ಯಾವನು ಕೃಷ್ಣನೋ ಅವನೇ ಶಿವನು; ಅದೇ ಕಾಳಿ, ಆದಿಶಕ್ತಿ; ಆತನೇ ಯೇಸು, ಆತನೇ ‘ಅಲ್ಲ’ – ಒಬ್ಬ ರಾಮನಿಗೆ ನೂರು ನಾಮಗಳು. ಸರೋವರಕ್ಕೆ ಅನೇಕ ಘಟ್ಟಗಳಿವೆ. ಒಂದು ಘಟ್ಟದಲ್ಲಿ ಹಿಂದುಗಳು ಕಲಶಗಳಲ್ಲಿ ನೀರು ಮೊಗೆದು ಅದನ್ನು ‘ಜಲ’ ಎಂದು ಕರೆಯುತ್ತಾರೆ; ಮತ್ತೊಂದರಲ್ಲಿ  ಮುಸಲ್ಮಾನರು ಪಕಾಲಿಗಳಲ್ಲಿ ನೀರು ತುಂಬಿಕೊಂಡು ಅದನ್ನು ‘ಪಾನಿ’ ಎಂದು ಕರೆಯುತ್ತಾರೆ. ಮೂರನೆಯದರಲ್ಲಿ ಕ್ರೈಸ್ತರು ‘ವಾಟರ್’ ಎಂದು ಕರೆಯುತ್ತಾರೆ. ಹೀಗಿರಲು ನೀರು ‘ಜಲ’ವಲ್ಲ ‘ಪಾನಿ’ ಎಂದಾಗಲಿ ಅಥವಾ ‘ಪಾನಿ’ ‘ಜಲ’ವಲ್ಲ ‘ವಾಟರ್’ ಎಂದಾಗಲಿ ಹೇಳಬಹುದೆ? ಎಂತಹ ತಿಳಿಗೇಡಿತನ! ಬೇರೆ ಬೇರೆ ಹೆಸರುಗಳಿದ್ದರೂ ವಸ್ತುವೊಂದೇ; ಆ ಒಂದೇ ವಸ್ತುವನ್ನೇ ಎಲ್ಲರೂ ಅರಸುತ್ತಿರವುದು. ಭೇದವೆಂಬುದೆಲ್ಲ ಹೆಸರಿನಲ್ಲಿ, ರುಚಿಯಲ್ಲಿ, ಭಾವದಲ್ಲಿ, ಒಬ್ಬೊಬ್ಬನೂ ಅವನವನ ದಾರಿಯನ್ನೇ ಹಿಡಿದು ನಡೆಯಲಿ, ಈಶ್ವರನನ್ನು ಸಂದರ್ಶಿಸಬೇಕೆಂಬ ನೈಜವ್ಯಾಕುಲತೆ ತೀವ್ರವಾಗಿದ್ದರೆ ಆತನೆ ಧನ್ಯ! ಅಂಥವನಿಗೆ ಈಶ್ವರ ಸಾಕ್ಷಾತ್ಕಾರ ಕಟ್ಟಿಟ್ಟ ಬುತ್ತಿ.”

ಓದುಗರಿಗೆ ಇನ್ನೊಂದು ವಿಷಯ ಹೊಳೆದಿರಬಹುದು. ಅದಾವುದೆಂದರೆ – ಶ್ರೀರಾಮಕೃಷ್ಣರಲ್ಲಿ ಕಂಡುಬರುವ ಜ್ಞಾನ ಭಕ್ತಿ ಕರ್ಮಗಳ ಸಮನ್ವಯ. ಪರಮಹಂಸರು ಜ್ಞಾನಗಂಗೆಯ ಮತ್ತು ಭಕ್ತಿ ಯಮುನೆಯ ಪ್ರಯಾಗ ಕ್ಷೇತ್ರವಾಗಿದ್ದರು. ವಿಚಾರವೂ ಪ್ರೇಮವೂ ಅವರಲ್ಲಿ ಕೂಡಿದ್ದುವು. ನಿರ್ಗುಣ ಬ್ರಹ್ಮ ಸಾಕ್ಷಾತ್ಕಾರ ಮಾಡಿದ ಮೇಲೆಯೂ ಅವರು ಕೀರ್ತನೆಗಳನ್ನು ಹಾಡುತ್ತ ಭಕ್ತಿಭಾವಾವಿಷ್ಟರಾಗುತ್ತಿದ್ದರು. ನಿರ್ಗುಣವೆನ್ನ ತಂದೆ, ಸಗುಣವೆನ್ನ ತಾಯಿ ಎಂದು ಹೇಳುತ್ತಿದ್ದರು. ಅವರ ದೃಷ್ಟಿಗೆ ದ್ವೈತ ವಿಶಿಷ್ಟಾದ್ವೈತ ಅದ್ವೈತಗಳು ಪರಸ್ಪರ ಶಕ್ತಿಯೇ ಬ್ರಹ್ಮ. ‘ನೇತಿ ನೇತಿ’ ಎಂದು ಹೇಳಿದಂತೆಯೆ ‘ಇತಿ ಇತಿ’ ಎಂದೂ ಸಾರಿದರು.” ಅದ್ವೈತವು ಸಾಧನೆಯ ಕಟ್ಟಕಡೆಯ ಮಾತು ಅಥವಾ ಮೌನ. ಅದನ್ನು ಬಾಯಿಂದಾಡಲು ಆಗುವುದಿಲ್ಲ. ಸಮಾಧಿಯಲ್ಲಿ ಅನುಭವಿಸಬೇಕು. ಏಕೆಂದರೆ ಅದು ಮನಸ್ಸಿಗೂ ಮಾತಿಗೂ ಮೀರಿದೆ.” “ಮನಸ್ಸು ಬುದ್ಧಿಗಳಿಗೆ ವಿಶಿಷ್ಟಾದ್ವೈತವೇ ತುತ್ತತುದಿಯ ಸಿದ್ಧಿ. ಮುಕ್ತಿಯಲ್ಲಿ ನಿರ್ಗುಣ ಸಗುಣಗಳೆರಡೂ ನಿಜವೆಂಬುದು ಗೊತ್ತಾಗುತ್ತದೆ. ಈಶ್ವರ ನಿವಾಸವೂ ಈಶ್ವರನಾಮವೂ ಈಶ್ವರನೂ ಎಲ್ಲವೂ ಚೈತನ್ಯ.” “ಇಂದ್ರಿಯ ಬದ್ಧನಾದ ಸಾಧಾರಣ ಮಾನವನಿಗೆ ದ್ವೈತವಲ್ಲದೆ ಸ್ಥೂಲಗೂ ಬೇರೆ ಸಾಧ್ಯವಿಲ್ಲ. ಆತನಿಗೆ ಮೂರ್ತಿಪೂಜೆ, ಸಂಕೀರ್ತನೆ, ಸಂಗೀತ ಮೊದಲಾದ ಸ್ಥೂಲಗಳು ಬೇಕಾಗುತ್ತವೆ.” ಕರ್ಮದ ವಿಚಾರದಲ್ಲಿ ಹೀಗೆ ಹೇಳಿದ್ದಾರೆ: “ಕೇವಲ ಸಾತ್ತ್ವಿಕನು ಕರ್ಮಕ್ಕೆ ಅತೀತನಾಗುತ್ತಾನೆ. ಕರ್ಮಮಾಡಲು ಪ್ರಯತ್ನಿಸಿದರೂ ಅವನಿಂದ ಆಗುವುದಿಲ್ಲ; ಅಥವಾ ಈಶ್ವರನು ಕರ್ಮಮಾಡಲು ಬಿಡುವುದಿಲ್ಲ. – ಸೊಸೆ ಮನೆಗೆ ಬಂದಾಗ ಚೆನ್ನಾಗಿ ಕೆಲಸ ಮಾಡಿಸುವರು. ಗರ್ಭಿಣಿಯಾಗುತ್ತಲೆ ಕೆಲಸ ಕಡಿಮೆಯಾಗುತ್ತ ಬಂದು ಕಡೆಗೆ ನಿಂತೇ ಹೋಗುವುದು. ಮಗುವನ್ನು ಹಡೆದ ಮೇಲೆ ಆಕೆ ಮನೆಗೆಲಸವನ್ನು ಸಂಪೂರ್ಣವಾಗಿ ಬಿಟ್ಟು ಹಸುಳೆಯ ಲಾಲನೆಪಾಲನೆಗಳಲ್ಲಿ ಮಾತ್ರವೆ ತೊಡಗುತ್ತಾಳೆ. ಮನೆಗೆಲಸ ಮಾಡಲು ಅಪೇಕ್ಷೆಪಟ್ಟರೂ ಸಮಯವಿರುವುದಿಲ್ಲ ಅಥವಾ ಮಗು ಬಿಡುವುದಿಲ್ಲ. ಆದರೆ ಸಾಧಾರಣನು ಈಶ್ವರ ನಿರ್ಭರನಾಗಿ ನಿಷ್ಕಾಮಬುದ್ಧಿಯಿಂದ ಕರ್ತವ್ಯ ಕರ್ಮವನ್ನು ಮಾಡಬೇಕು, ತನ್ನ ಮನೆಯಲ್ಲವೆಂದು ಗೊತ್ತಿದ್ದರೂ ಯಜಮಾನನ ಮನೆಯ ಎಲ್ಲ ಕೆಲಸಗಳನ್ನೂ ಶ್ರದ್ಧೆಯಿಂದ ಮಾಡುವ ದಾಸಿಯಂತೆ. ಅದನ್ನೆ ಕರ್ಮಯೋಗ ಎನ್ನುತ್ತಾರೆ. ಮನುಷ್ಯನು ದೇವರ ಹೆಸರಿನಲ್ಲಿ ಎಲ್ಲ ಕರ್ತವ್ಯಗಳನ್ನೂ ನಿಸ್ಸಂಗಿಯಾಗಿ ನಿರ್ವಹಿಸಬೇಕು.”

ಪರಮಹಂಸರ ಸಾಧನೆಗಳಲ್ಲಿ ಕಂಡುಬಂದಿರುವ ಮತ್ತೊಂದು ವಿಷಯವೆಂದರೆ – ಹೊನ್ನು ಹೆಣ್ಣು ಮಣ್ಣುಗಳ ತ್ಯಾಗ. ಕಾಮಿನಿಯ ತ್ಯಾಗ ಎಂದರೆ ಸ್ತ್ರೀ ದ್ವೇಷ ಅಥವಾ ತಿರಸ್ಕಾರ ಎಂದು ಅವರು ತಿಳಿಯಲಿಲ್ಲ. ಹಾಗಿದ್ದರೆ ಅವರು ತಮ್ಮ ಸಹಧರ್ಮಿಣಿಯನ್ನು ಆದರಿಸಿ ಪೂಜಿಸುತ್ತಿರಲಿಲ್ಲ. ಕಾಮಿನೀ ತ್ಯಾಗವೆಂದರೆ ಕಾಮ ತ್ಯಾಗ ಅಥವಾ ಇಂದ್ರಿಯ ನಿಗ್ರಹ. ಸ್ತ್ರೀಯನ್ನು ದ್ವೇಷಿಸುತವುದರಿಂದಾಗಲಿ ಅಥವಾ ದೂರಮಾಡುವುದರಿಂದಾಗಲಿ ಕಾಮಜಯ ಸಾಧ್ಯವಲ್ಲ; ಆಕೆಯನ್ನು ಜಗನ್ಮಾತೆಯ ಸ್ವರೂಪವೆಂದು ಆರಾಧಿಸುವುದರಿಂದಲೇ ಅದು ಸುಲಭಸಾಧ್ಯ ಎಂಬುದು ಅವರ ಮತವಾಗಿದೆ. ಪುರುಷರಿಗೆ ಕಾಮಿನೀತ್ಯಾಗವನ್ನು ಬೋಧಿಸಿದರೆ ಸ್ತ್ರೀಯರಿಗೆ ಪುರುಷತ್ಯಾಗವನ್ನು ಅವರು ಬೋಧಿಸುತ್ತಿದ್ದರು.

ಅಂತೆಯೆ ಕಾಂಚನತ್ಯಾಗವೆಂದರೆ ದಾರಿದ್ರ‍್ಯಲೋಲುಪತೆ ಎಂದು ತಿಳಿಯಬಾರದು; ಐಶ್ವರ್ಯವನ್ನು ಸನ್ಮಾರ್ಗದಿಂದ ಆರ್ಜಿಸಿ, ಸದುಪಯೋಗ ಪಡಿಸುವುದು ಎಂದು ತಿಳಿಯಬೇಕು. ದೇವರು ಕೊಟ್ಟ ಧನವನ್ನು ದೇವರ ಸೇವೆಗೆ ಉಪಯೋಗಿಸಬೇಕು. ದುಃಖಾರ್ತರಾದವರ ಸೇವೆಯೂ ದೇವರ ಸೇವೆಯೆ. ಈ ಸಂದರ್ಭದಲ್ಲಿ ಪರಮಹಂಸರು ಮಥುರನಾಥನಿಗೆ ಹೇಳಿದ ಮಾತುಗಳು ನೆನಪಿಗೆ ಬಾರದಿರವು.

ಕಡೆಯದಾದರೂ ಬಹು ಮುಖ್ಯವಾದುದೆಂದರೆ – ದರಿದ್ರನಾರಾಯಣನ ಸೇವೆ. ಶ್ರೀರಾಮಕೃಷ್ಣರು ಕೆಲವು ಜ್ಞಾನಪಾಷಂಡಿಗಳಂತೆ ಶುಷ್ಕಹೃದಯರಾಗಿರಲಿಲ್ಲ. ದುಃಖಿಗಳನ್ನು ಕಂಡರೆ ದುಃಖಪಡುತ್ತಿದ್ದರು. ಅಳುವವರೊಡನೆ ಅಳುತ್ತಿದ್ದರು. ಅವರಿಗೆ ಜೀವವೇ ಶಿವವಾಗಿತ್ತು. ಮಥುರನೊಡನೆ ಯಾತ್ರೆಗೆ ಹೋಗಿ ದಾರಿಯಲ್ಲಿ ಕ್ಷಾಮಪೀಡಿತರನ್ನು ಕಂಡಾಗ ಅವರು ಹೇಗೆ ವರ್ತಿಸಿದರೆಂಬುದು ಇದಕ್ಕೆ ಸಾಕ್ಷಿ. ಉಪಕಾರ ಮಾಡುತ್ತೇನೆ. ಸಹಾಯ ಮಾಡುತ್ತೇನೆ ಕಾಪಾಡುತ್ತೇನೆ ಎಂದು ಹೆಮ್ಮೆಪಡುವುದು ಈಶ್ವರನಿಂದೆಗೆ ಸಮನಾದುದು. ಆದುದರಿಂದ ಸೇವೆ ಮಾಡುತ್ತೇನೆ ಎಂದು ನಮ್ರಭಾವದಿಂದ ಕೆಲಸ ಮಾಡಬೇಕು. ಪರಮಹಂಸರು “ಲೋಕವೆಲ್ಲ ಮಾಯೆ, ರೋಗ ರುಜನೆ ದುಃಖಗಳೆಲ್ಲ ಮಾಯೆ, ಕಷ್ಟಪಡುವುದು ಅವರವರ ಕರ್ಮ, ನಾವೇನು ಮಾಡಲಾಗುತ್ತದೆ, ಎಲ್ಲವೂ ಜಗದೀಶ್ವರನ ಇಚ್ಛೆ” ಎಂದು ತತ್ತ್ವಪ್ರತಿಪಾದನೆ ಮಾಡುತ್ತ, ಹೆರರ ನೆತ್ತರು ಹೀರಿ ಕೊಬ್ಬಿ ಬೆಳೆದು ಭೋಗಲೋಲುಪರಾಗಿ ಚಕ್ಕಂದದಿಂದ ಅಶ್ಲೀಲವಾದ ಆಮೋದ ಪ್ರಮೋದಗಳಲ್ಲಿ ಮಗ್ರಾಗಿರುವ ಜ್ಞಾನಾಂಧರಂತೆ ಉಪಾಯ ವೇದಾಂತಿಯಾಗಿರಲಿಲ್ಲ. ಓ ಒಣ ವೇದಾಂತಿ, ದುಃಖ ಮಾಯೆಯಾದರೆ ನಿನ್ನ ಜ್ಞಾನ ಮಾಯೆಗಿಂತಲೂ ಮಾಯೆ!

ಪರಮಹಂಸರು ಜೈತ್ರಯಾತ್ರೆಯಲ್ಲಿ ಜಯಶೀಲರಾದರು. ಮುಕ್ತರಾದರು; ಭಕ್ತರಾದರು; ಪರಿಪಕ್ವವಾದರು; ಸಿದ್ಧರಾದರು; ಸರ್ವಮತ ಸಾಧನೆಗಳಲ್ಲಿ ಸಿದ್ಧಿ ಹೊಂದಿ ಸರ್ವಧರ್ಮಸಮನ್ವಯಾಚಾರ್ಯರಾದರು; ನವಯುಗಾವತಾರರಾದರು. ‘ಒಂದೆಡೆಯೊಳುಂ ತನಗೆ ನಿಲವಿಲ್ಲದತಿವೇಗದಿಂದೆ’ ತಂಗಾಳಿ ತೀಡಿತು. ಮರಗಿಡಗಳೆಲ್ಲ ತಳಿತು ನನೆಕೊನೆಯೇರಿದುವು. ದಿಕ್ಕುಗಳು ಪ್ರಸನ್ನವಾದುವು. ನೂತನ ವಸಂತಚೇತನ ಭೂಮಿಯಲ್ಲಿ ಸಂಚರಿಸಿತು. ಯುಗ ಯುಗಾಂತರದ ತಪಸ್ವಿಯಾದ ತುಷಾರಧವಳ ದುಕೂಲಶೋಭಿತವಾದ ಹಿಮಾಚಲದ ಪಾವನ ಶಿರಸ್ಸಿನಲ್ಲಿ, ಸರ್ವದಾ ಸಂಪೂರ್ಣವಾದ ಗಂಭೀರ ಗಂಭೀರ ಮಾನಸ ಸರಸ್ಸಿನಲ್ಲಿ, ತರುಣಾರುಣರಾಗ ರಂಜಿತ ಭುವನಮನಮೋಹನ ಮಹಾಪದ್ಮವು ಸಹಸ್ರದಲ ಸೌಂದರ್ಯದಿಂದ ವಿಕಸಿತವಾಯಿತು.

ದುಂಬಿಗಳೆಲ್ಲಿ? ಮಕರಂದ ಪಾನಮಾಡುತ್ತ ಮತ್ತ ಮಧುಕರಗಳೆಲ್ಲಿ?