ತ್ರೈಲೋಕ್ಯನಾಥ ಸಂನ್ಯಾಲನು ಬ್ರಾಹ್ಮಸಮಾಜದ ಗಾಯಕ ಕವಿ. ಆತನ ಅನೇಕ ಕೀರ್ತನೆಗಳು ಪರಮಹಂಸರಿಂದ ಪ್ರೇರಿತವಾದುವು. ಆತನೂ ಇತರ ಬ್ರಾಹ್ಮ ಸಮಾಜಿಗಳಂತೆ ವೈರಾಗ್ಯದ್ವೇಷಿಯಾಗಿದ್ದನು. ಅವತಾರಗಳಲ್ಲಿ ನಂಬುಗೆಯಿರಲಿಲ್ಲ. ಒಂದು ದಿನ ಪರಮಹಂಸರು “ಬ್ರಹ್ಮಾನಂದದ ರುಚಿ ದೊರಕಿತೆಂದರೆ ಐಹಿಕ ಭೋಗಾಭಿಲಾಷೆ ಜಾರಿ ಬೀಳುತ್ತದೆ. ಕಾಶ್ಮೀರದ ಶಾಲು ಸಿಕ್ಕಿದರೆ ಸಾಧಾರಣ ಧೋತ್ರ ಬೇಡವಾಗುತ್ತದೆ.” ಎಂದರು.

ತ್ರೈಲೋಕ್ಯ – ಸಾಧುಗಳ ಮಾತಾಯಿತು! ಸಂಸಾರಿಗಳ ವಿಚಾರ?

ಪರಮಹಂಸರು – ನೀನು ಹೇಳುವದೇನು? ಅದು ದೊರಕಿತೆಂದರೆ ನಿನ್ನಂತಹರಿಗೂ ಐಹಿಕವು ಬೇಡವಾಗುತ್ತದೆ…. ಇಂದ್ರಿಯಸುಖ ಆತ್ಮಾನಂದದ ಛಾಯೆಯ ಛಾಯೆ…. ಚಾತಕಪಕ್ಷಿಗೆ ಮುಗಿಲ ಹನಿಯೆ ಅಮೃತ; ಸಮುದ್ರವೂ ಅದರ ಭಾಗಕ್ಕೆ ಕೆಸರಿನಂತೆ…. ಭೋಗಯೋಗಗಳ ಸಮನ್ವಯವಂತೆ! ಸ್ವಲ್ಪ ಸಾರಾಯಿ ಕುಡಿದವನು ವಸ್ತುಗಳನ್ನು ಇದ್ದಂತೆ ನೋಡಲು ಬಯಸುತ್ತಾನೆ. ಚೆನ್ನಾಗಿ ಕುಡಿದು ನೆತ್ತಿಗೇರಿತೆಂದರೆ ಏನೂ ಆಗುವುದಿಲ್ಲ.

ತ್ರೈಲೋಕ್ಯ – ಸಂಸಾರಿಯಾದವನು ದಾನಧರ್ಮ ಮಾಡಬೇಕಾದರೆ ಧನ ಸಂಗ್ರಹ ಮಾಡುವುದು ಬೇಡವೆ?

ಪರಮಹಂಸರು – ಏನೆಂದೆ! ಮೊದಲು ಧನಸಂಗ್ರಹ, ಆಮೇಲೆ ದೇವರೋ? ಆಹ, ಏನು ಧರ್ಮವೋ ಏನು ದಾನವೋ! ನೋಡಿದರೆ ಸಾಕು! ಮಗಳ ಮದುವೆಗೆ ಸಾವಿರಾರು ರೂಪಾಯಿ ಚೆಲ್ಲುತ್ತಾರೆ. ನೆರೆಹೊರೆಯವರಿಗೆ ಹೊಟ್ಟೆಗಿಲ್ಲವೋ ಎಂದೂ ವಿಚಾರಿಸುವುದಿಲ್ಲ. ಒಂದು ಕಾಸು ಬಿಚ್ಚಬೇಕಾದರೂ ಹಿಂದೆ ಮುಂದೆ ನೋಡುತ್ತಾರೆ! ಯಾರು ಸತ್ತರೇನು? ನಾನೂ ನನ್ನ ಹೆಂಡತಿ ಮಕ್ಕಳೂ ನೆಮ್ಮದಿಯಾಗಿದ್ದರಾಯಿತು! ಇದೇ ಅಲ್ಲವೇ ನೀವೆಲ್ಲ ಮಾತಾಡುವ ದಾನ, ಧರ್ಮ, ಕರುಣೆ ಎಲ್ಲ?

ಬ್ರಾಹ್ಮಸಮಾಜಿಗಳು ಅವತಾರವಾದಕ್ಕೆ ವಿರೋಧಿಗಳಾಗಿದ್ದರು. ಅನಂತನೂ ನಿರಾಕಾರನೂ ಸಮಸ್ತ ಬ್ರಹ್ಮಾಂಡವ್ಯಾಪಿಯೂ ಆದ ಭಗವಂತನು ಸಾಂತವೂ ಸಾಕಾರವೂ ಶರೀರಗತವೂ ಆಗಿ ಮನುಷ್ಯ ರೂಪದಲ್ಲಿ ಅವತರಿಸುವುದು ಹೇಗೆ? ಎಂದು ಅವರ ಪ್ರಶ್ನೆ. ಅವರ ಭಗವಂತನು ಸರ್ವಶಕ್ತನಾದರೂ ಮನುಷ್ಯ ಶರೀರಧಾರಣೆಮಾಡಿ ಭೂಮಿಗೆ ಬರುವಷ್ಟು ಶಕ್ತನಾಗಿರಲಿಲ್ಲ! ಸರ್ವವ್ಯಾಪಿಯಾದರೂ ಅವನು ಮೂರ್ತಿಗಳಲ್ಲಿ ಇಲ್ಲ! ತ್ರೈಲೋಕ್ಯನು ಈಶ್ವರನು ತನ್ನ ಭಕ್ತರಲ್ಲಿ ವ್ಯಕ್ತನಾಗುತ್ತಾನೆಯೆ ಹೊರತು ತಾನೇ ಬರುವುದಿಲ್ಲ. ಮಾನವನು ಎಂತಹ ಮಹಾತ್ಮನಾದರೂ ಅನಂತಶಕ್ತಿಗೆ ಆಗರವಾಗಲಾರನು” ಎಂದು ವಾದ ಹೂಡಿದನು.

ಪರಮಹಂಸರು – ಅನಂತದ ವಿಷಯ ಈಗೇಕೆ? ನಾನು ನಿನ್ನನ್ನು ಮುಟ್ಟಬೇಕಾದರೆ ನಿನ್ನ ದೇಹವನ್ನೆಲ್ಲ ಮುಟ್ಟಬೇಕೆ? ನಾನು ಗಂಗೆಯಲ್ಲಿ ಸ್ನಾನಮಾಡಬೇಕಾದರೆ ಹರಿದ್ವಾರದಿಂದ ಸಾಗರದ್ವೀಪದವರೆಗೂ ಹೊಳೆಯಲ್ಲಿ ಮುಳುಗಿ ಮುಳುಗಿ ಮೀಯಬೇಕೆ? ‘ನಾನು’ ಇರುವವರೆಗೆ ದ್ವೈತವಿರುತ್ತದೆ. ಕೇವಲ ಸಚ್ಚಿದಾನಂದ ಒಂದು ಸಮುದ್ರ. ಅದರಲ್ಲಿ ‘ನಾನು’ ಎಂಬ ಹೂಜಿಯಿದೆ. ಹೂಜಿಯ ಒಳಗಿನ ನೀರು, ಹೊರಗಿನ ನೀರು, ಹೂಜಿ ಒಡೆಯಿತೆಂದರೆ ಅಖಂಡ ಜಲರಾಶಿ – ಅದನ್ನು ಹೀಗೇ ಎಂದು ಹೇಳಲಾಗುವುದಿಲ್ಲ. ಯಾರು ತಾನೆ ಹೇಳಿಯಾರು? – ನೀನೀಗಾಗಲೆ ಬ್ರಹ್ಮಾನಂದದಲ್ಲಿರುವೆ, ಅಲ್ಲವೆ?

ತ್ರೈಲೋಕ್ಯ – ಇಲ್ಲ ಸ್ವಾಮಿ. ಇಲ್ಲಿಂದ ಹೋದಕೂಡಲೆ ಮೊದಲಿದ್ದಂತೆಯೆ ಆಗಿಬಿಡುತ್ತೇನೆ, ಈಗೇನೊ ಸನ್ಮತಿಯಾಗಿದ್ದೇನೆ.

ಪರಮಹಂಸರು – ಮೆಟ್ಟಿದ್ದರೆ ಕಾಲಿಗೆ ಮುಳ್ಳಿನ ಭಯವಿಲ್ಲ. ಈಶ್ವರನೊಬ್ಬನೇ ಸತ್ಯ, ಉಳಿದುದೆಲ್ಲವೂ ಮಿಥ್ಯೆ ಎಂಬ ಬುದ್ಧಿ ಸ್ಥಿರವಾಗಿದ್ದರೆ ಕಾಮಿನಿ ಕಾಂಚನಗಳಿಂದಲೂ ಅಪಾಯವಿಲ್ಲ.

ಮನುಷ್ಯರನ್ನು ಮಾರ್ಗಕ್ಕೆ ತರುವುದರಲ್ಲಿ ಶ್ರೀರಾಮಕೃಷ್ಣರಿಗೆ ಅಮಾನುಷ ಸಾಮರ್ಥ್ಯವಿತ್ತು. ಹೆಡೆಯೆತ್ತಿ ನಿಂತ ದುರಭಿಮಾನ ಸರ್ಪವು ಅವರ ವಚನಗಳ ಗಾರುಡಮಂತ್ರಕ್ಕೆ ಮಣಿದು ಸಾಧುವಾಗುತ್ತಿತ್ತು. ಯಾರ ಭಾವವನ್ನೂ ನಷ್ಟಮಾಡದೆ, ವಿರೋಧಿಸದೆ, ಅವರವರನ್ನು ಅವರವರ ಭಾವದಿಂದಲೆ ಮೇಲೆತ್ತುತ್ತಿದ್ದರು. ‘ಜ್ಞಾನಿ’ಗೆ ಭಕ್ತಿಯನ್ನು ಹೇಳಿದರೂ ಅದರಿಂದ ಆತನ ಭಾವಕ್ಕೆ ಭಂಗವಾಗುವುದಿಲ್ಲವೆಂದು ತಿಳಿದಿದ್ದರು. ಆದರೆ ‘ಭಕ್ತ’ನಿಗೆ ತಟಕ್ಕನೆ ಜ್ಞಾನವನ್ನು ಹೇಳುತ್ತಿರಲಿಲ್ಲ; ಏಕೆಂದರೆ, ಜಗತ್ತು ಮಿಥ್ಯೆ ಎಂಬುದು ಅವನಿಗೆ, ಭಯಂಕರವಾಗಿ ತೋರಿ, ರುಚಿಸುತ್ತಿರಲಿಲ್ಲ – ಹತಾಶನಾಗಲೂ ಬಹುದು.

ಕೇಶವಚಂದ್ರಸೇನರೇ ಮೊದಲಾದ ಬ್ರಾಹ್ಮಸಮಾಜಿಗಳ ಸಂಸರ್ಗದಿಂದ ಪರಮಹಂಸರಿಗೆ ಪ್ರಯೋಜನವಾಗದಿರಲಿಲ್ಲ. ಹಳ್ಳಿಯಲ್ಲಿ ಹುಟ್ಟಿ, ಬೆಳೆದು, ಸಾಧನೆ ತಪಸ್ಸುಗಳಲ್ಲಿ ಕಾಲಕಳೆದು, ನವೀನ ವಿದ್ಯಾಶಾಲೆಗಳ ಪರಿಚಯವಿಲ್ಲದ ಅವರಿಗೆ ಪಾಶ್ಚಾತ್ಯವಿದ್ಯೆ ಸಂಸ್ಕೃತಿಗಳ ಸಂಘರ್ಷಣೆಯಿಮದ ಭಾರತನಿವಾಸಿಗಳಲ್ಲಿ ಸಂಭವಿಸಿದ ಮಾನಸಿಕ ವಿಪ್ಲವವನ್ನು ತಿಳಿಯಲು ಅವಕಾಶವಿರಲಿಲ್ಲ. ಬ್ರಾಹ್ಮಸಮಾಜಿಗಳು ಅದನ್ನು ಕಲ್ಪಿಸಿಕೊಟ್ಟರು. ಅಲ್ಲದೆ ತಮ್ಮ ತ್ತ್ವ ಪ್ರಚಾರಕ್ಕೆ ಅವರಲ್ಲಿ ಅನೇಕರು ಸಹಾಯಕರಾದರು; ವಾಹಕರೂ ಆದರು. ಬ್ರಾಹ್ಮಸಮಾಜಿಗಳಿಂದ ಪರಮಹಂಸರಿಗೆ ಕೃತವಿದ್ಯರಾದ ನವೀನ ಸುಧಾರಕರ ಚಿತ್ತವೃತ್ತಿ ಚೆನ್ನಾಗಿ ಗೊತ್ತಾಯಿತು. ಅವರೆಲ್ಲರೂ ಪಾಶ್ಚಾತ್ಯ ತತ್ತ್ವಶಾಸ್ತ್ರಗಳನ್ನು ಅಧ್ಯಯನಮಾಡಿ, ತಮ್ಮ ಪೂರ್ವಿಕರಾದ ಮಹಾ ದಾರ್ಶನಿಕರ ಧರ್ಮಜ್ಯೋತಿಗೆ ಕಣ್ಣುಮುಚ್ಚಿ ನಿರ್ಲಕ್ಷಿಸಿ, ಭೋಗತ್ಯಾಗಗಳ ಮತ್ತು ಐಹಿಕ ಅಮುಷ್ಮಿಕಗಳ ವಿಚಿತ್ರ ಸಮುಚ್ಚಯ ಮತವೊಂದನ್ನು ಸೃಜಿಸಿಕೊಂಡು, ಅದರ ಅನುಯಾಯಿಗಳಾಗಿ ಕೂಗಾಡುತ್ತಿದ್ದುದರ ರಹಸ್ಯವು ಗುರುದೇವನಿಗೆ ಅರ್ಥವಾಯಿತು. ರೋಗಿಯ ಪರೀಕ್ಷೆಯಾಗಿ ಜಾಡ್ಯದ ಸ್ವಭಾವ ತಿಳಿದಮೇಲೆ ದಕ್ಷಿಣೇಶ್ವರದ ದೇವವೈದ್ಯನಿಗೆ ಚಿಕಿತ್ಸೆ ಮಾಡುವುದು ಕಷ್ಟವಾಗಲಿಲ್ಲ. ಆಯಾ ಕಾಯಿಲೆಗಳಿಗೆ ಆಯಾ ಮದ್ದು! ಬೇರೆ ಬೇರೆ ರೋಗಿಗಳಿಗೆ ಬೇರೆ ಬೇರೆ ಪಥ್ಯ!

ಕ್ರಿ. ಶ. ೧೮೮೧ರಲ್ಲಿ ಪ್ರಸಿದ್ಧ ದೇಶಭಕ್ತ ಅಶ್ವಿನೀಕುಮಾರದತ್ತನು ದಕ್ಷಿಣೇಶ್ವರಕ್ಕೆ ಬಂದನು. ಮೊದಲು ಶ್ರೀರಾಮಕೃಷ್ಣರನ್ನು ನೋಡಿದಾಗ “ಇವರೆಂತಹ ಪರಮಹಂಸರು?” ಎಂದುಕೊಂಡನಂತೆ. ಆ ದಿನ ಪರಮಹಂಸರು ಕೇಶವನ ಆಗಮನವನ್ನು ನಿರೀಕ್ಷಿಸುತ್ತಿದ್ದರು. ಕ್ಷಣ ಕ್ಷಣಕ್ಕೂ ಅಲ್ಲಿ ಕೂತಿದ್ದವರಿಗೆ “ಕೇಶವನು ಬರುತ್ತಿದ್ದಾನೆಯೆ? ನೋಡು” ಎಂದು ಹೇಳುತ್ತಿದ್ದರು. ಸಲಸಲಕ್ಕೂ “ಇಲ್ಲ, ಇಲ್ಲ,” ಎಂಬ ಉತ್ತರವೆ ಬರತ್ತಿದ್ದುದನ್ನು ಕಂಡು “ಎಲೆಗಳ ಮರ್ಮರವನ್ನು ಕೇಳಿ ರಾಧೆ ‘ನನ್ನ ಇನಿಯನು’ ಬಂದನು ಎನ್ನುತ್ತಾಳೆ. ಕೇಶವನೆಂದರೆ ನನಗೆ ಪ್ರಾಣ’ ಎಂದರು. ಸ್ವಲ್ಪ ಹೊತ್ತಿನ ಮೇಲೆ ಕೇಶವನೂ ಆತನ  ಅನುಯಾಯಿಗಳೂ ಬಂದರು. ಕೇಶವನು ಹಣೆಯಿಂದ ನೆಲಮುಟ್ಟಿ ನಮಸ್ಕಾರ ಮಾಡಲು ಶ್ರೀರಾಮಕೃಷ್ಣರು ಅದನ್ನೆ ಪ್ರತಿಬಿಂಬಿಸಿದರು. ಧರ್ಮವಿಷಯಕವಾದ ಕಥೋಪಕಥನಗಳಾದುವು.

ಪರಮಹಂಸರು – ಕೇಶವಾ, ನಿನ್ನ ಸಮಾಜಕ್ಕೆ ನಾನೊಂದು ಸಾರಿ ಬಂದಿದ್ದಾಗ ನೀನು ಹೇಳುತ್ತಾ ಇದ್ದೆ; “ಭಕ್ತಿವಾಹಿನಿಯಲ್ಲಿ ಮುಳುಗಿ ಸಚ್ಚಿದಾನಂದ ಸಮುದ್ರಕ್ಕೆ ಹೋಗಬೇಕು” ಎಂದು. ನಾನಾಗ ನಿನ್ನ ಹೆಂಡತಿ ಮಕ್ಕಳೂ ಮತ್ತು ಇತರ ಸ್ತ್ರೀಯರೂ ಕೂತಿದ್ದ ಗ್ಯಾಲರಿಯ ಕಡೆಗೆ ನೋಡಿ “ಅಯ್ಯೋ, ಇವರ ಗತಿಯೇನು?” ಎಂದುಕೊಂಡೆ. ಸಂಸಾರಿಗಳಾದ ನೀವು ತಟಕ್ಕನೆ ಸಚ್ಚಿದಾನಂದಕ್ಕೆ ಹೋಗುವುದೇನು ಹುಡುಗಾಟವೆ? ನೀವೆಲ್ಲ ಬಾಲಕ್ಕೆ ಕಲ್ಲುಕಟ್ಟಿದ ಮುಂಗುಸಿಗಳಂತೆ. ಅದು ಮೇಲೆ ಹಾರಿದರೆ ಕಲ್ಲು ಕೆಳಗೆಳೆಯುತ್ತದೆ. ನೀವೇನೋ ಸ್ವಲ್ಪ ಧ್ಯಾನ ಮಾಡಬಹುದು; ಆದರೆ ಹೆಂಡತಿ ಮಕ್ಕಳ ಭಾರ ಕೆಳಗೆಳೆಯದೆ ಬಿಡುವುದಿಲ್ಲ. ಭಕ್ತಿಯ ಹೊಳೆಯಲ್ಲಿ ಮುಳುಗಬಹುದು; ಆದರೆ ಮೇಲೇಳಲೇ ಬೇಕು – ಮುಳುಗುವುದು ಏಳುವುದು! ಒಂದೇ ಸಾರಿ ತಟಕ್ಕನೆ ಮುಳುಗಿಬಿಡುವುದಕ್ಕಾಗುತ್ತದೆಯೆ.

ತರುವಾಯ ಮಹರ್ಷಿ ದೇವೇಂದ್ರನಾಥನ ವಿಷಯ ಬಂದಿತು. ಪರಮಹಂಸರು ಆತನ ವಿಚಾರವಾಗಿ ಎರಡು ಮಾತು ಹೇಳಿ ಇಂತೆಂದರು.”ಮನುಷ್ಯನು ಮಾಯೆಯಲ್ಲಿರುವಾಗ ಹಸಿ ತೆಂಗಿನಕಾಯಿಯಂತೆ; ತಿರುಳು ಕರಟಕ್ಕೆ ಹಿಡಿದುಕೊಂಡಿರುತ್ತದೆ. ಮಾಯೆಯನ್ನು ದಾಟಿದವನು ಕೊಬ್ಬರಿ ಗಿಟುಕಿನಂತೆ; ತಿರುಳು ಕರಟಕ್ಕೆ ಅಂಟಿರುವುದಿಲ್ಲ, ಬೇರೆಯಾಗಿರುತ್ತದೆ. ಅಲ್ಲಾಡಿಸಿ ನೋಡಿದರೆ ಗೊತ್ತಾಗುತ್ತದೆ. ಹಾಗೆಯೇ ಆತ್ಮವೂ ಶರೀರದಿಂದ ಬೇರೆಯಾಗುತ್ತದೆ. ಅಂಟಿಕೊಂಡಿರುವುದಿಲ್ಲ…. ಅಹಂಕಾರವೇ ಸರ್ವ ದುಃಖದ ಮೂಲ. ಈ ಹಾಳು ‘ನಾನು’ ಹೋಗುವುದು ಬಹು ಕಷ್ಟ. ಹಾಳು ಮನೆಯ ಪಾಳಿನಲ್ಲಿ ಬೆಳೆಯುವ ಅರಳಿಯಂತೆ. ಇವೊತ್ತು ಕಡಿದು ಹಾಕಿದರೆ ನಾಳೆ ಮತ್ತೆ ಬೇರಿನಿಂದಲೆ ಚಿಗುರುತ್ತವೆ. ಅಹಂಕಾರವೂ ಹಾಗೆಯೆ, ನೀರುಳ್ಳಿ ಹಾಕಿದರೆ ಪಾತ್ರೆಯನ್ನು ಎಳೇಳು ಸಾರಿ ತೊಳೆದರೂ ವಾಸನೆ ಹೋಗುವುದಿಲ್ಲ”.

ಸ್ವಲ್ಪ ಹೊತ್ತಾದಮೇಲೆ ಕೀರ್ತನೆಗೆ ಪ್ರಾರಂಭವಾಯಿತು.”ನಾನಂದು ನೋಡಿದ್ದನ್ನು ಎಂದಿಗೂ ಮರೆಯಲಾರೆ.” ಎಲ್ಲರೂ ಭಾವಾವೇಶದಿಂದ ನರ್ತಿಸತೊಡಗಿದರು, ಕೇಶವಚಂದ್ರಸೇನ ಶ್ರೀರಾಮಕೃಷ್ಣರೂ ಕೂಡಿ! ನಡುವೆ ಪರಮಹಂಸರು ಸಮಾಧಿಮಗ್ನರಾಗಿ ನಿಶ್ಚಲವಾಗಿ ನಿಂತರು. ಎಲ್ಲವನ್ನೂ ಕೇಳಿ, ನೋಡಿ, ಅಶ್ವಿನಿಕುಮಾರದತ್ತನಿಗೆ ಶ್ರೀರಾಮಕೃಷ್ಣರಲ್ಲಿದ್ದ ಸಂದೇಹ ನಿವೃತ್ತಿಯಾಯಿತು. ಪುನಃ ಪುನಃ ದಕ್ಷಿಣೇಶ್ವರಕ್ಕೆ ಬರತೊಡಗಿದನು.

ಇನ್ನೊಂದು ದಿನ ಅಶ್ವಿನಿಕುಮಾರನು ತನ್ನ ಕೆಲವು ತರುಣ ಮಿತ್ರರೊಡನೆ ಗುರುದೇವನಲ್ಲಿಗೆ ಹೋದನು. ಪರಮಹಂಸರು “ಅವರೆಲ್ಲ ಏಕೆ ಬಂದಿದ್ದಾರೆ?” ಎಂದು ಅಶ್ವಿನಿಯನ್ನು ಕೇಳಿದರು.

ಅಶ್ವಿನಿ – ನಿಮ್ಮನ್ನು ನೋಡಲೆಂದು.

ಪರಮಹಂಸರು – ನನ್ನಲ್ಲಿ ನೋಡಲು ಏನಿದೆ? ದೇವಾಲಯವನ್ನಾದರೂ ಹೋಗಿ ನೋಡಬಾರದೆ?

ಅಶ್ವಿನಿ – ಅದನ್ನೂ ನೋಡುತ್ತಾರೆ. ನಿಮ್ಮನ್ನೂ ನೋಡುತ್ತಾರೆ.

ಪರಮಹಂಸರು – ಅವರೆಲ್ಲ ಚಕ್ಕಮುಕ್ಕಿ ಕಲ್ಲುಗಳಂತೆ! ಎದೆಯಲ್ಲಿ ಬೆಂಕಿಯಿದೆ! ನೂರು ಶತಮಾನ ನೀರಿನಲ್ಲಿದ್ದರೂ ಉಜ್ಜಿದರೆ ಕಿಡಿಗೆದರುತ್ತಾರೆ. ಆದರೆ ನಮ್ಮಂತಹವರನ್ನು ಮಾತ್ರ ಬಡಿದರೂ ಏನೂ ಆಗುವುದಿಲ್ಲ.

ಇನ್ನೊಂದು ಸಾರಿ ಅಶ್ವಿನೀಕುಮಾರನು ಹೋದಾಗ ಶ್ರೀರಾಮಕೃಷ್ಣರು ಶುದ್ಧಗ್ರಾಮ್ಯವಾಗಿ ವರ್ತಿಸಿ ಎಲ್ಲರೂ ನಗುವಂತೆ ಮಾಡಿದರಂತೆ. ಅಶ್ವಿನಿಯನ್ನು ಕುರಿತು “ನನಗೆ ಅದನ್ನು ತಂದುಕೊಡುತ್ತೀಯಾ? ಅರ್ಧ ಹುಳಿ ಅರ್ಧ ಸಿಹಿಯಾಗಿರುತ್ತದಲ್ಲಾ ಅದು! ” ಎಂದರು.

ಅಶ್ವಿನಿ ಬೆಪ್ಪಾಗಿ “ಏನದು?” ಎಂದನು.

“ಅದೇ! ಅಮುಕಿದರೆ ಬುಸ್ಸೆಂದು ಗೋಲಿ ಕೆಳಗೆ ಹೋಗುತ್ತದಲ್ಲಾ ಅದು! ”

ಅಶ್ವಿನಿಗೆ ಸಮಸ್ಯೆ ಬಗೆಹರಿಯಲಿಲ್ಲ.

“ಬಣ್ಣ ಬಣ್ಣ ನೀರು ಇರುತ್ತದಲ್ಲಾ ಅದು! ”

“ಓಹೋ! ಲೆಮನೇಡೆ?”

“ಹೌದೂ! ! ಅದನ್ನು ತಂದುಕೊಡುತ್ತೀಯಾ?”

“ಆಗಲಿ”.

ಅಶ್ವಿನಿಗೆ ಸಾಧುವಾದವನು ಲೆಮನೇಡು ಕುಡಿಯುತ್ತಾನೆಯೆ ಎಂದು ಸಂದೇಹವಾಗಿ “ನೀವು ಜಾತಿಪದ್ಧತಿ ಇಟ್ಟುಕೊಂಡಿದ್ದೀರಾ?” ಎಂದು ಪ್ರಶ್ನೆ ಮಾಡಿದನು.

ಪರಮಹಂಸರು – ಏನೋ ಸ್ವಲ್ಪ ಸ್ವಲ್ಪ ಇದೆ. ಆದರೆ ಜಂಬ ಕೊಚ್ಚಿಕೊಳ್ಳುವಷ್ಟು ಇಲ್ಲ. ಕೇಶವನ ಮನೆಯಲ್ಲಿ ಊಟ ಮಾಡಿದ್ದೇನೆ. ಗಡ್ಡದವನು (ಮುಸಲ್ಮಾನರು) ಕೊಟ್ಟ ‘ಐಸ್ (ಹಿಮದ ಕೆನೆ) ತಿಂದಿದ್ದೇನೆ. ಏನುಮಾಡುವುದು ಹೇಳು! ಜಾತಿಯ ಕಟ್ಟುಗಳೆಲ್ಲ ಉದುರಿ ಹೋಗುತ್ತವೆ: ತೆಂಗಿನ ಮರ ಬೆಳೆದಂತೆಲ್ಲ ಹೆಡಲುಗಳು ತಮಗೆ ತಾವೆ ಬಿದ್ದು ಹೋಗುತ್ತವೆ: ಹಾಗೆಯೇ ಈ ನಿಯಮ ನಿಷ್ಠೆಗಳೂ. ಆದರೆ ಬಲಾತ್ಕಾರವಾಗಿ ಕಿತ್ತು ಬಿಸುಡಬಾರದು ಆ ಮೂರ್ಖರಂತೆ. (ಉಗ್ರ ಸುಧಾರಕರಂತೆ)

ಅಶ್ವಿನಿ – ಈಶ್ವರದರ್ಶನವಾಗಬೇಕಾದರೆ ಏನು ಮಾಡಬೇಕು?

ಪರಮಹಂಸರು – ಸೂಜಿಗಲ್ಲು ಕಬ್ಬಿಣವನ್ನು ಎಳೆಯುವಂತೆ ಈಶ್ವರನು ನಮ್ಮನ್ನು ಸದಾ ಎಳೆಯುತ್ತಿದ್ದಾನೆ. ಕಬ್ಬಿಣದ ಸುತ್ತ ಮಣ್ಣು ಮುಚ್ಚಿಕೊಂಡಿದ್ದರೆ ಅದು ಆಕರ್ಷಿತವಾಗುವುದಿಲ್ಲ. ಅಶ್ರುಜಲದಿಂದ ಕೊಳೆಯನ್ನು ಒಡನೆಯೆ ಈಶ್ವರನು ಆಕರ್ಷಿಸುತ್ತಾನೆ.

ಅಶ್ವಿನಿ ತನ್ನ ಡೈರಿಯಲ್ಲಿ ಶ್ರೀರಾಮಕೃಷ್ಣರ ವಚನಗಳನ್ನು ಬರೆದುಕೊಳ್ಳುತ್ತಿದ್ದುದನ್ನು ಕಂಡು ಅವರೆಂದರು: “ನೋಡಿಲ್ಲಿ! ‘ಗಾಂಜಾ ಗಾಂಜಾ’ ಎಂದು ಸುಮ್ಮನೆ ಕೂಗಿದರೆ ಮತ್ತು ಬರುವುದಿಲ್ಲ. ಗಾಂಜಾ ತಂದು ಪಾನಕ ಮಾಡಿ ಕುಡಿಯಬೇಕು…. ಆದರೆ ನೀನು ಸಂಸಾರದಲ್ಲಿ ಬದುಕಬೇಕು. ಆದ್ದರಿಂದ ‘ಮತ್ತು’ ಮೀರುವಂತೆ ರಾಮರಸ ಕುಡಿಯಬಾರದು. ಕೆಲಸ ಮಾಡುವಾಗ ಉತ್ಸಾಹಕ್ಕೆ ಎಷ್ಟುಬೇಕೊ ಅಷ್ಟನ್ನೆ ಕುಡಿ. ಶುಕದೇವನಂತೆ ಕುಡಿದೂ ಕುಡಿದೂ ಪ್ರಜ್ಞಾಶೂನ್ಯನಾಗುವುದೂ ನಿನ್ನಿಂದ ಅಸಾಧ್ಯ…. ಈಶ್ವರನಿಗೆ ವಕಾಲತ್ತು ವಹಿಸಿ ಸಂಸಾರ ಮಾಡು. ಅವನೇನು ಬೇಕಾದರೂ ಮಾಡಿಕೊಳ್ಳಲಿ”.

ಅಶ್ವಿನೀಕುಮಾರನು ಹೀಗೆಂದು ಬರದಿದ್ದಾನೆ –

“ನಾನು ಗುರುದೇವನನ್ನು ನಾಲ್ಕೈದುಸಾರಿ ನೋಡಿದೆ. ಅಷ್ಟು ಸ್ವಲ್ಪ ಅಂತರದಲ್ಲಿಯೆ ಜನ್ಮ ಜನ್ಮಾಂತರದ ಸ್ನೇಹವಾಯಿತು. ನಾನೆಷ್ಟು ಸಲುಗೆಯಿಂದ ಮಾತಾಡುತ್ತಿದ್ದೆ! ಆತನ ಸಾನ್ನಿಧ್ಯದಿಂದ ಈಚೆಗೆ ಬಂದ ಕೂಡಲೆ ‘ಶಿವಾ ಶಿವಾ! ನಾನಾರೊಡನೆ ನುಡಿಯುತ್ತಿದ್ದೆ! ಎಂದು ಮೈ ಜುಮ್ಮೆನ್ನುತ್ತಿತ್ತು. ಆತನ ಸಂಗದಿಂದ ನನ್ನ ಜೀವನವೆಲ್ಲ ಮಧುರಮಯವಾಯಿತು. ಚಿರಸುಖದಾಯಕವಾದ ಆ ಸ್ವರ್ಗೀಯ ಮಂದಸ್ಮಿತ ನನ್ನ ಸ್ಮೃತಿಮಂದಿರದಲ್ಲಿ ಶಾಶ್ವತ ಜ್ಯೋತಿಯಾಗಿದೆ.”

ಪರಮಹಂಸರು ಕ್ರಿ. ಶ. ೧೮೮೨ರಲ್ಲಿ ಮಹಾಪಂಡಿತ ಈಶ್ವರಚಂದ್ರ ವಿದ್ಯಾಸಾಗರನನ್ನು ಹೋಗಿ ಕಂಡರು. ಪಂಡಿತನು ಪರಮಹಂಸರನ್ನು ಸಾದರದಿಂದ ಸ್ವೀಕರಿಸಿದನು. ಅವರ ಸಂಭಾಷಣೆ ಸವಿಯೂಟದಂತಿದೆ.

ಪರಮಹಂಸರು – ನಾನು ಇದುವೆರೆಗೆ ತೊರೆ, ಕಾಲುವೆ, ಹೆಚ್ಚು ಎಂದರೆ ಹೊಳೆಗಳನ್ನು ನೋಡಿದ್ದೆ. ಆದರೆ ಇವತ್ತು ಸಾಗರ ದರ್ಶನವಾಯಿತು.

ವಿದ್ಯಾಸಾಗರ – ಹಾಗಾದರೆ, ಮಹಾಶಯ, ಕ್ಷಾರವಾರಿಯ ಪಾನದಿಂದಲೆ ತೃಪ್ತರಾಗಬೇಕೆಂದು ಪ್ರಾರ್ಥನೆ,

ಪರಮಹಂಸರು – ಹಾಗಲ್ಲ, ಹಾಗಲ್ಲ ನೀನು ಅಂತಹ ಸಾಗರವಲ್ಲ. ನೀನು ಅವಿದ್ಯಾಸಾಗರನಲ್ಲ; ವಿದ್ಯಾಸಾಗರ; ಪುರಾಣಗಳಲ್ಲಿ ಹೇಳಿರುವ ಕ್ಷೀರಸಾಗರ, ಕ್ಷಾರಸಾಗರವಲ್ಲ.

ಅಲ್ಲಿದ್ದವರೆಲ್ಲರೂ ಗೊಳ್ಳೆಂದು ನಕ್ಕರು.

ವಿದ್ಯಾಸಾಗರ – ಮಹಾಶಯ, ತಾವು ಆಡಿದಂತೆಯೆ ಆಗಲಿ.

ಪರಮಹಂಸರು – ನೀನು ಮಾಡುತ್ತಿರುವುದೆಲ್ಲ ಸಾತ್ತ್ವಿಕ ಕರ್ಮ. ಸತ್ತ್ವಸ್ಥಿತಿಯ ರಾಜಸಿಕತೆ. ಕರುಣೆ ಮೂಡುವುದು ಸತ್ತ್ವದಿಂದ. ಕರುಣೆಯಿಂದ ಮೂಡುವ ಕರ್ಮ ರಾಜಸಿಕವಾದುದು; ಆದರೆ ಆ ರಜಸ್ಸು ಸತ್ತ್ವಸಂಭವವಾದುದುರಿಂದ ಅದರಿಂದ ತೊಂದರೆಯಿಲ್ಲ. ಶುಕದೇವ ಮೊದಲಾದವರು ಅಧ್ಯಾತ್ಮ ವಿದ್ಯೆಯನ್ನು ಬೋಧಿಸಿದರೂ ಕರುಣೆಯನ್ನು ಬಿಡಲಿಲ್ಲ. ನೀನು ಜ್ಞಾನದಾನ, ಆಹಾರದಾನ ಎರಡನ್ನೂ ಮಾಡುತ್ತಿದ್ದೀಯೆ, ಬಹಳ ಒಳ್ಳೆಯದು. ಅದನ್ನೆ ಇನ್ನೂ ಸ್ವಲ್ಪ ಹೆಚ್ಚಾದ ನಿಷ್ಕಾಮದಿಂದ ಮಾಡಿದರೆ ನಿನಗೆ ಈಶ್ವರ ಸಾಕ್ಷಾತ್ಕಾರವಾಗಲು ಸಹಾಯವಾಗುತ್ತದೆ. ಕೆಲವರು ಯಶೋಲೋಭದಿಂದಲೊ ಅಥವಾ ಪುಣ್ಯಾರ್ಜನೆಗಾಗಿಯೊ ಕರ್ಮಮಾಡುತ್ತಾರೆ. ಅಂಥವರ ಕರ್ಮ ಅಸ್ವಾರ್ಥ ಕರ್ಮವಲ್ಲ. ಅದೂ ಅಲ್ಲದೆ ನೀನು ಈಗಾಗಲೆ ಸಿದ್ಧಪುರುಷನಾಗಿದ್ದೀಯೆ.

ವಿದ್ಯಾಸಾಗರ – ಹಾಗೆಂದರೇನು, ಮಹಾಶಯ?

ಪರಮಹಂಸರು – (ನಗುತ್ತ) ಉರುಳುಗಡ್ಡೆ ಮೊದಲಾದ ಪದಾರ್ಥಗಳು ಸಿದ್ಧ (ಬೆಂದ) ವಾದ ಮೇಲೆ ಮೃದುವಾಗುತ್ತದೆ. ನಿನ್ನದೂ ಮೃದುಹೃದಯ! ಕರುಣೆ ತುಂಬಿದೆ! (ನಕ್ಕರೆಲ್ಲರೂ).

ಪರಮಹಂಸರು – ಇಲ್ಲ, ಇಲ್ಲ, ನೀನು ಆ ಜಾತಿಗೆ ಸೇರಿಲ್ಲ. ಬರಿಯ ಪಂಡಿತರು ಹುಳು ಹಿಡಿದ ಕಾಯಿಗಳಂತೆ ಎಂದೆಂದಿಗೂ ಹಣ್ಣಾಗುವುದಿಲ್ಲ. ಅವರದೆಲ್ಲ ಅರ್ಧಂಬರ್ಧ. ರಣಹದ್ದು ಆಕಾಶದಲ್ಲಿ ಹಾರಾಡುತ್ತಿದ್ದರೂ ಅದರ ಕಣ್ಣೆಲ್ಲ ನೆಲದ ಮೇಲಿರುವ ಹೆಣದ ಮೇಲೆ. ಬರಿಯ ಪಂಡಿತರು ಹೆಸರಿಗೆ ಮಾತ್ರ ಪಂಡಿತರು; ಕಾಮಿನೀ ಕಾಂಚನ ಮೋಹಿತರಾಗಿರುತ್ತಾರೆ. ಅವರ ಕಣ್ಣುಗಳೂ ರಣಹದ್ದಿನ ಕಣ್ಣುಗಳಂತೆ ಹೆಣದ ಮೇಲಿರುತ್ತವೆ. ಮೋಹವು ಅವಿದ್ಯೆಗೆ ಸೇರಿದ್ದು; ಕರುಣೆ ಭಕ್ತಿ ವೈರಾಗ್ಯಗಳು ವಿದ್ಯೆಯಿಂದ ಮೂಡುವ ಕುಸುಮಮಂಜರಿ…. ಬ್ರಹ್ಮವು ವಿದ್ಯೆಗೂ ಅವಿದ್ಯೆಗೂ ಅತೀತವಾಗಿದೆ. ಮಾಯೆಯನ್ನು ಮೀರಿದೆ…. ಅದನ್ನು ಮಾತಿನಿಂದ ಹೇಳಲಾಗುವುದಿಲ್ಲ. ವೇದ, ಪುರಾಣ, ತಂತ್ರಶಾಸ್ತ್ರ, ಷಡ್ದರ್ಶನಗಳೆಲ್ಲವೂ ಮನುಷ್ಯನ ಬಾಯಿಗೆ ಬಂದು ಎಂಜಲಾಗಿವೆ. ಎಂಜಲಾಗದಿರುವುದು ಒಂದಿದೆ. ಬ್ರಹ್ಮ! ಬ್ರಹ್ಮವೇನು ಎಂದು ಇದುವರೆಗೆ ಯಾರೂ ಹೇಳಲಾಗಿಲ್ಲ.

ವಿದ್ಯಾಸಾಗರ – (ಅಲ್ಲಿದ್ದವರಿಗೆ) ನಿಜವಾಗಿಯೂ ಇದೊಂದು ಮಹಾವಚನ. ಇವೊತ್ತು ನನಗೊಂದು ಹೊಸ ವಿಚಾರ ಗೊತ್ತಾದ ಹಾಗಾಯಿತು.

ಪರಮಹಂಸರು – ಸಮಾಧಿಯಲ್ಲಿ ಬ್ರಹ್ಮಜ್ಞಾನೋದಯವಾಗುತ್ತದೆ. ಸಾಕ್ಷಾತ್ಕಾರವಾಗುತ್ತದೆ. ಮನಸ್ಸು ಬುದ್ಧಿಗಳು ಲಯವಾಗುತ್ತವೆ. ಮನುಷ್ಯನು ಮೂಕನಾಗುತ್ತಾನೆ…. ಉಪ್ಪಿನಗೊಂಬೆಯೊಂದು ಸಮುದ್ರದ ಆಳವನ್ನು ಕಂಡು ಹಿಡಿಯಲು ಹೋಯಿತಂತೆ! ಹಿಂತಿರುಗಿ ಬಂದು ಆಳದ ಲೆಕ್ಕ ಕೊಡಬೇಕೆಂದು ಅದರ ಬಯಕೆ! ನೀರಿಗಿಳಿಯಿತೊ ಇಲ್ಲವೊ ಕರಗಿ ಹೋಯಿತು. ವರ್ತಮಾನ ಹೇಳುವವರಾರು?

ಒಬ್ಬರು – ಸಮಾಧಿಯಿಂದ ಹಿಂತಿರುಗಿದವನು ಮಾತಾಡುವುದಿಲ್ಲವೆ?

ಪರಮಹಂಸರು – ಶಂಕರಾಚಾರ್ಯನು ಜಗತ್ಕಲ್ಯಾಣಕ್ಕಾಗಿ ಸಾತ್ವಿಕಹಂಕಾರವನ್ನು ಇಟ್ಟುಕೊಂಡಿದ್ದನು. ಬ್ರಹ್ಮಜ್ಞಾನಿ ಸರ್ವದಾ ಮೌನಿ. ಬುದ್ಧಿ ಸಾಕ್ಷತ್ಕಾರದಲ್ಲಿ ಲೀನವಾಗುತ್ತದೆ. ಬೆಣ್ಣೆ ಚೆನ್ನಾಗಿ ಕುದಿಯುವವರೆಗೂ ಚಟ್ ಪಟ್ ಎನ್ನತ್ತದೆ. ಅಮೇಲೆ ಸದ್ದಿಲ್ಲ. ಆದರೆ ಅದಕ್ಕೆ ಹಸಿಪೂರಿ ಹಾಕಿದರೆ ಪುನಃ ಸದ್ದುಮಾಡುತ್ತದೆ. ಹಾಗೆಯೆ ಇತರರಿಗೆ ಜ್ಞಾನದಾನ ಮಾಡಲೆಂದು ಬ್ರಹ್ಮಜ್ಞಾನಿ ಕೆಳಗಿಳಿದು ಬಂದು ಮಾತಾಡುತ್ತಾನೆ…. ದುಂಬಿ ಮಧುಪಾನ ಮಾಡುವವರೆಗೆ ಝೇಂಕರಿಸುತ್ತದೆ. ಪಾನಮಾಡಲು ತೊಡಗಿತೆಂದರೆ ಸುಮ್ಮನಾಗುತ್ತದೆ. ಆದರೆ ಕೆಲವು ಸಾರಿ ಕುಡಿದ ಮೇಲೆಯೂ ಆನಂದಾತಿಶಯದಿಂದ ಮೊರೆಯುವುದೂ ಉಂಟು. ಪಾತ್ರೆಯನ್ನು ನೀರಿಗದ್ದಿದಾಗ ಸದ್ದಾಗುತ್ತದೆ. ತುಂಬಲು ಸದ್ದಿಲ್ಲ. ಆದರೆ ಆ ಪಾತ್ರೆಯಿಂದ ನೀರನ್ನು ಮತ್ತೊಂದಕ್ಕೆ ಹುಯ್ಯುವಾಗ ಮತ್ತೆ ಸದ್ದಾಗುತ್ತದೆ…. ಬ್ರಹ್ಮಜ್ಞಾನಿಗೆ ಜಗತ್ತೆಲ್ಲ ಬ್ರಹ್ಮಮಯವಾಗುತ್ತದೆ. ಮಹರ್ಷಿಯೂ ಬ್ರಹ್ಮ, ಇರುವೆಯೂ ಬ್ರಹ್ಮ.

ವಿದ್ಯಾಸಾಗರ – ವ್ಯತ್ಯಾಸವೇ ಇಲ್ಲ?

ಪರಮಹಂಸರು – ಸರ್ವವ್ಯಾಪಿಯಾದ ಶಕ್ತಿ ಎಲ್ಲ ಪ್ರಾಣಿಗಳಲ್ಲಿಯೂ ಅಂತರ್ಯಾಮಿಯಾಗಿದೆ. ವ್ಯತ್ಯಾಸವಿರುವುದೆಲ್ಲಾ ಶಕ್ತಿಯ ಪ್ರಕಾಶದಲ್ಲಿ. ಹಾಗಿಲ್ಲದಿದ್ದರೆ ಒಬ್ಬನು ಹತ್ತು ಮಂದಿಯನ್ನು ಸೋಲಿಸುವುದೂ ಇನ್ನೊಬ್ಬನು ಪರಾರಿಯಾಗುವುದೂ ಹೇಗೆ ಸಾಧ್ಯ? ಹಾಗಿಲ್ಲದಿದ್ದರೆ ಜನಗಳು ನಿನಗೇಕೆ ಗೌರವ ತೋರಿಸುತ್ತಿದ್ದರು? ನಿನಗೇನು ಎರಡು ಕೋಡುಗಳಿವೆಯೆ? ನಿನಗೆ ಔದಾರ್ಯವಿದೆ, ಪಾಂಡಿತ್ಯವಿದೆ. ಇತರರಿಗೆ ಇಲ್ಲ. ಅದಕ್ಕೇ ಜನಗಳು ನಿನಗೆ ಗೌರವ ಕೊಡುತ್ತಾರೆ. ಹೌದೋ ಅಲ್ಲವೋ ಹೇಳು!

ವಿದ್ಯಾಸಾಗರ ನಕ್ಕುಬಿಟ್ಟನು.

ಪರಮಹಂಸರು – ಬರಿಯ ಪಾಂಡಿತ್ಯದಲ್ಲಿ ಏನೂ ಇಲ್ಲ. ಬ್ರಹ್ಮ ಸಾಕ್ಷಾತ್ಕಾರವಾಗಲು ಪುಸ್ತಕ ಓದಬೇಕೆ? ಗೀತೆ ಏನು ಹೇಳುತ್ತದೆ? ತ್ಯಾಗವಿರಬೇಕು ಎನ್ನುತ್ತದೆ. ಸಾದುವಾಗಲಿ, ಸಂಸಾರಿಯಾಗಲಿ ವೀತಸಂಗನಾಗಿರಬೇಕು….. ಬ್ರಹ್ಮಜ್ಞಾನಿಗೆ ಭಕ್ತಿ ಏಕೆ ಎನ್ನುತ್ತೀಯೋ? ಅಹಂಕಾರ ಸಂಪೂರ್ಣವಾಗಿ ಹೋಗುವುದಿಲ್ಲ. ಅದೇ ಉತ್ತರ! ಸಮಾಧಿಯಲ್ಲಿ ಲಯವಾಗುತ್ತದೆ. ಆಮೇಲೆ ಮತ್ತೆ ಕಾಣಿಸಿಕೊಳ್ಳುತ್ತದೆ. ಕನಸಿನಲ್ಲಿ ಹುಲಿಯನ್ನು ಕಂಡು ಬೆಚ್ಚಿ ಎಚ್ಚತ್ತಮೇಲೆಯೂ ಎದೆ ಡವಡವ ಎನ್ನುವುದಿಲ್ಲವೆ?…. ರಾಮ ಕೇಳಿದನಂತೆ ಹನುಮಂತನನ್ನು “ಯಾವ ದೃಷ್ಟಿಯಿಂದ ನನ್ನನ್ನು ನೋಡುತ್ತೀಯೆ?” ಎಂದು. ಹನುಮಂತನು ಹೇಳಿದನು: “ಅಹಂಕಾರವಿರುವಾಗ ನೀನು ಪೂರ್ಣ, ನಾನು ಅಂಶ; ನೀನು ದೇ‌‌ವ; ನಾನು ದಾಸ. ಉತ್ತಮಜ್ಞಾನ ಬಂದಾಗ ನೀನೇ ನಾನು; ನಾನೇ ನೀನು” -…. ದಾಸನಂತೆ ದೇವನನ್ನು ಪೂಜಿಸು. ಸರ್ವಸ್ವವನ್ನೂ ಆತನಿಗೆ ನಿವೇದಿಸು – ನೀನು ಯಾವ ದೃಷ್ಟಿಯಿಂದ ದೇವರನ್ನು ಕಾಣುತ್ತೀಯೆ?

ವಿದ್ಯಾಸಾಗರ – (ನಗುತ್ತ) ಎಂದಾದರೂ ಗುಟ್ಟಾಗಿ ಹೇಳುತ್ತೇನೆ.

ಬಿಳ್ಕೊಳ್ಳುವಾಗ ಪರಮಹಂಸರು ವಿದ್ಯಾಸಾಗರನನ್ನು ದಕ್ಷಿಣೇಶ್ವರಕ್ಕೆ ಬರುವಂತೆ ಕೇಳಿಕೊಂಡರು. ವಿದ್ಯಾಸಾಗರನು “ಅಗತ್ಯವಾಗಿ! ನೀವು ಇಲ್ಲಿಯವರೆಗೆ ದಯಾಮಾಡಿಸಿದ್ದೀರಿ. ನಾನೂ ಬಂದು ನಿಮ್ಮ ದರ್ಶನ ಮಾಡುವುದು ನನ್ನ ಕರ್ತವ್ಯ” ಎಂದನು.

ಪರಮಹಂಸರು – ನನ್ನ ದರ್ಶನಮಾಡುವುದು? ದಯಮಾಡಿ ಹಾಗೆನ್ನಬೇಡ.

ವಿದ್ಯಾಸಾಗರ – ಏಕೆ ಹೇಳಬಾರದು, ಮಹಾಶಯ?

ಪರಮಹಂಸರು – (ನಗುತ್ತ) “ನಾವೆಲ್ಲ ಸಣ್ಣ ಸಣ್ಣ ತೆಪ್ಪಗಳಂತೆ ತೊರೆಯಲ್ಲಿ ಬೇಕಾದರೂ ಹೋಗಬಹುದು; ಹೊಳೆಯಲ್ಲಿ ಬೇಕಾದರೂ ಹೋಗಬಹುದು. ನೀನೋ ದೊಡ್ಡ ಜಹಜು. ನಮ್ಮಂತೆ ಸಾಹಸ ಮಾಡಲು ಹೋಗಿ ಎಲ್ಲಿಯಾದರೂ ನೆಲಕ್ಕೆ ತಗುಲಿ ಹೂತುಕೊಂಡರೆ?”

ಎಲ್ಲರೂ ನಕ್ಕರು. ವಿದ್ಯಾಸಾಗರನೂ ನಕ್ಕು ಸುಮ್ಮನಾದನು. ಪರಮಹಂಸರು ಮತ್ತೆ: “ಆದರೆ ಈಗ ಜಹಜುಗಳೂ ಹೋಗಬಹುದು; ಬಾಧಕವಿಲ್ಲ” ಎಂದರು. ವಿದ್ಯಾಸಾಗರನೂ ತಲೆದೂಗಿ “ಹೌದು, ಈಗ ಮಳೆಗಾಲವಾಗಿದೆ” ಎಂದನು. ಪುನಃ ಎಲ್ಲರೂ ನಕ್ಕರು. ಇಂತು ಪರಮಹಂಸವು ವಿದ್ಯಾಸಾಗರದಲ್ಲಿ ಈಜಾಡಿ, ತರಂಗಗಳನ್ನು ಎಬ್ಬಿಸಿ ದಕ್ಷಿಣೇಶ್ವರ ಮಾನಸಸರೋವರಕ್ಕೆ ಹಾರಿಹೋಯಿತು.

ಬಂಕಿಮಚಂದ್ರ ಚಟ್ಟೋಪಾಧ್ಯಾಯ ವಂಗದೇಶದ ಸುಪ್ರಸಿದ್ಧ ಕಾದಂಬರಿಕಾರ. ಕ್ರಿ. ಶ. ೧೮೮೪ರಲ್ಲಿ ಆತನು ಕಲ್ಕತ್ತೆಯ ಒಬ್ಬ ಮಿತ್ರನ ಮನೆಯಲ್ಲಿ ಪರಮಹಂಸರ ದರ್ಶನ ಮಾಡಿದನು. ಆ ಮಿತ್ರನು ಬಂಕಿಮಚಂದ್ರನನ್ನು ಪರಮಹಂಸರಿಗೆ ಪರಿಚಯಮಾಡುವ ಕಾಲದಲ್ಲಿ “ಮಹಾಶಯ, ಈತ ದೊಡ್ಡ ವಿದ್ವಾಂಸ. ಅನೇಕ ಗ್ರಂಥಗಳನ್ನು ರಚಿಸಿದ್ದಾನೆ. ಈತನ ಹೆಸರು ಬಂಕಿಮಬಾಬು”

ಪರಮಹಂಸರು – (ನಗುತ್ತ) “ಓಹೋ ಬಂಕಿಮ!

[1]  ಯಾರ ಪ್ರಭಾವ ನಿನ್ನನ್ನು ಕೊಂಕುಗೊಳಿಸಿದೆ?” ಎಂದರು.

ಬಂಕಿಮ – (ನಗುತ್ತಾ) “ಹಾ, ಮಹಾಶಯ, ಬ್ರಿಟಿಷರ ಬೂಟ್ಸಿನೇಟುಗಳಿಂದ ಹಾಗಾಗಿದ್ದೇನೆ”.

ಪರಮಹಂಸರು – ಅಲ್ಲ, ಅಲ್ಲ; ಆ ಅರ್ಥದಲ್ಲಲ್ಲ. ಶ್ರೀಕೃಷ್ಣ ರಾಧೆಯ ಪ್ರೇಮಪ್ರಭಾವದಿಂದ ಬಾಗಿದ್ದ. ಆತನ ದೇಹದ ಕಾಠಿನ್ಯ ಹೋಗಿ ಕೋಮಲವಾದುದರಿಂದಲೆ ತ್ರಿಭಂಗಮುರಾರಿಯಾದನು… ಅವನೇಕೆ ನೀಲವಾಗಿ ಸಣ್ಣಗಿದ್ದಾನೆ ಎಂಬೆಯಾ? ಈಶ್ವರನು ದೂರವಾಗಿರುವವರೆಗೆ ನೀಲವಾಗಿ ಕಾಣುತ್ತಾನೆ. ಸಾಂತದ ಕಣ್ಣಿಗೆ ಅನಂತವು ನೀಲವಾಗಿ ಕಾಣುತ್ತದೆ. ಆಕಾಶದಂತೆ, ಸಮುದ್ರದಂತೆ. ಆದರೆ ಹತ್ತಿರ ಹೋದರೆ ಬಣ್ಣವಿಲ್ಲ! ಕಡಲ ನೀರನ್ನು ಕೈಲಿ ತೆಗೆದುಕೊಂಡರೆ ಬಣ್ಣವಿರುತ್ತದೆಯೆ? ಸ್ಫಟಿಕದಂತೆ ನಿರ್ಮಲ! ಸೂರ್ಯನು ದೂರವಿರುವುದರಿಂದ ಸಣ್ಣಗೆ ಕಾಣುತ್ತಾನೆ. ಹಾಗೆಯೆ ಈಶ್ವರನೂ….

ಬಂಕಿಮ – ಮಹಾಶಯ, ನೀವೇಕೆ ಉಪನ್ಯಾಸಮಾಡಿ ಬೋಧನೆ ಮಡಬಾರದು?

ಪರಮಹಂಸರು – ಉಪನ್ಯಾಸ! ಬೋಧನೆ! ಅದೆಲ್ಲ ಅಹಂಕಾರದ ಮಾತು! ಮನುಷ್ಯನು ತೃಣಪ್ರಾಯನು. ದೇವನೊಬ್ಬನೇ ಬೆಳಕು ಕೊಡಲು ಸಮರ್ಥನು. ಉಪದೇಶವೆಂದರೆ ಅಷ್ಟು ಸುಲಭವೇ? ಈಶ್ವರನಿಂದ ಅಧಿಕಾರ ಪಡೆಯದಿದ್ದರೆ ನೀರಿನಲ್ಲಿ ಹೋಮಮಾಡಿದಂತೆ. ಜನರು ಈ ಕಿವಿಯಲ್ಲಿ ಕೇಳಿ, ಆ ಕಿವಿಯಲ್ಲಿ ಬಿಡುತ್ತಾರೆ. ನೀನು ವಾಗ್ಮಿಯಾಗಿ ಮತಾಡಿದರೆ “ಅರೆರೆರೆರೆ: ಏನು ಚೆನ್ನಾಗಿ ಮಾತಾಡುತ್ತಾನೆ!” ಎಂದು ಚಪ್ಪಾಳೆ ತಟ್ಟುತ್ತಾರೆ. ನೀನು ಮಾತು ನಿಲ್ಲಿಸಿದರೆ ನಿನ್ನ ಉಪದೇಶವೂ ನಿಂತಂತೆ? ಒಲೆಯಲ್ಲಿ ಬೆಂಕಿಯಿರುವ ತನಕ ಹಾಲು ಕುದಿದು ಉಬ್ಬುತ್ತದೆ. ಉರಿ ಆರಿದೊಡನೆ ಹಾಲು ಮೊದಲಿದ್ದ ಮಟ್ಟಕ್ಕೆ ಇಳಿಯುತ್ತದೆ…. ಎಲ್ಲಕ್ಕಿಂತ ಮೊದಲು ಸಾಧನೆಯಿಂದ ಶಕ್ತಿ ಪಡೆಯಬೇಕು… ನಿನ್ನ ಮನೆಯಲ್ಲಿ ನಿನಗೇ ಇರಲು ಜಾಗವಿಲ್ಲ; ಅತಿಥಿಗಳನ್ನು ಹೇಗೆ ಕರೆಯುವುದು?… ನೀನು ದೊಡ್ಡ ಕವಿ; ಗ್ರಂಥಗಳನ್ನು ಬರೆದಿರುವೆ…. ಮನಷ್ಯನು ಮರಣಾನಂತರ ಏನಾಗುತ್ತಾನೆ? ನೀನು ಜನ್ಮಾಂತರವನ್ನು ನಂಬುತ್ತೀಯಷ್ಟೆ?

ಬಂಕಿಮ – ಜನ್ಮಾಂತರ! ಹಾಗೆಂದರೆ?

ಪರಮಹಂಸರು – ಸಿದ್ಧನಾದ ಮೇಲೆ ಜನ್ಮಗಳಿಲ್ಲ. ಅದಕ್ಕೆ ಮೊದಲು ಜನ್ಮಜಾಲದಿಂದ ಬಿಡುಗಡೆಯಿಲ್ಲ…. ಕುಂಬಾರನು ಮಡಕೆಗಳನ್ನು ಮಾಡಿ ಬಿಸಿಲಿಗೆ ಹಾಕುತ್ತಾನೆ. ಕೆಲವು ಒಣಗುತ್ತವೆ; ಕೆಲವಿನ್ನೂ ಹಸಿಹಸಿಯಾಗಿರುತ್ತವೆ. ಆಗ ದನಗಳು ಬಂದು ಅವಗಳನ್ನೆಲ್ಲ ತುಳಿದುವೆಂದು  ಇಟ್ಟುಕೊ. ಎಲ್ಲವೂ ಚೂರು ಚೂರಾಗುತ್ತವೆ. ಕುಂಬಾರನು ಒಣಗಿ ಚೂರಾದವುಗಳನ್ನು ಬಿಟ್ಟುಬಿಡುತ್ತಾನೆ. ಹಸಿಹಸಿಯಾದವನ್ನು ಪುನಃ ಚಕ್ರಕ್ಕೆ ಹಾಕಿ ತಿರುಗಿಸುತ್ತಾನೆ. ಅವುಗಳನ್ನು ಹೊಸ ಮಡಕೆ ಮಾಡದೆ ಬಿಡುವುದಿಲ್ಲ… ನೀನು ಹಸಿಯಾಗಿರುವ ತನಕ, ಜ್ಞಾನಿಯಾಗುವತನಕ, ಕುಂಬಾರನು ನಿನ್ನನ್ನು ಪುನಃ ಪುನಃ ತಿಗುರಿಗೆ ಹಾಕಿ ತಿರುಗಿಸುತ್ತಾನೆ…. ಬೆಂದ ಕಾಳನ್ನು ಬಿತ್ತಿದರೆ ಬೆಳೆದು ಹಣ್ಣು ಕೊಡುವುದಿಲ್ಲ.

ಬಂಕಿಮ – ಮಹಾಶಯ, ಕೆಲವು ಗಿಡಗಳು ಏತಕ್ಕೂ ಬೇಡದವು. ಅವುಗಳಿಂದ ಯಾವ ಹಣ್ಣೂ ದೊರೆಯಲಾರದು.

ಪರಮಹಂಸರು – ಉಪಮಾನಗಳೆಲ್ಲ ಅಸಂಪೂರ್ಣ ಸಾಮ್ಯದ ಮೇಲೆ ನಿಂತಿವೆ. ನೀನು ವಿದ್ವಾಂಸ; ತರ್ಕಶಾಸ್ತ್ರ ಓದಿಲ್ಲವೆ? “ಸಿಂಹದಂತೆ ಭಯಂಕರನು” ಎಂದರೆ ಸಿಂಹದಂತೆ ದಪ್ಪಗೆ, ದುಂಡಗೆ ದೊಡ್ಡ ತಲೆ ಇದೆ ಎಂದು ಅರ್ಥವಾಗುತ್ತದೆಯೆ? (ಎಲ್ಲರೂ ನಕ್ಕರು)

ಪರಮಹಂಸರು – ಮನುಷ್ಯನ ಧರ್ಮವೇನು? ಹೇಳು!

ಬಂಕಿಮ – (ನಗುತ್ತ) ತಿನ್ನುವುದು, ಮಲಗುವುದು, ನಲಿಯುವುದು!

ಪರಮಹಂಸರು – ಥೂ! ನೀನು ಮಾಡುವುದನ್ನೆ ಹೇಳುತ್ತಿದ್ದೀಯೆ. ತೇಗಿನ ವಾಸನೆಯಿಂದಲೆ ಒಬ್ಬನು ಏನು ತಿನ್ನುತ್ತಾನೆ ಎಂದು ಹೇಳಿಬಿಡಬಹುದು…. ಪಾಂಡಿತ್ಯ ಸಂಪಾದನೆ ಮಾಡಿ, ಒಂದೆರಡು ಶ್ಲೋಕಗಳನ್ನು ಹೇಳಿಕೊಂಡು, ಕಾಮಿನೀಕಾಂಚನ ಕೀರ್ತಿಗಳೇ ಜೀವನ ಸರ್ವಸ್ವವೆಂದು ತಿಳಿದವನ ಬಾಳು ಹಾಳು.. . . ಕೆಲವರು “ದೇವರು ಎನ್ನುವರೆಲ್ಲ ಹುಚ್ಚರು. ನಾವೇ ಜಾಣರು. ಸುಖಿಗಳು” ಎಂದು ತಿಳಿದಿದ್ದಾರೆ. ಕಾಗೆಯೂ ತಾನು ಜಾಣನೆಂದು ತಿಳಿಯುತ್ತದೆ. ಆದರೆ ಅದರ ಜಾಣ್ಮೆಯೆಲ್ಲ ಬೆಳಗಾಯಿತೆಂದರೆ ಕೊಳಕನ್ನು ಹುಡುಕುವುದರಲ್ಲಿ ಪರಿಣಮಿಸುತ್ತದೆ.. . . ಭಕ್ತರಿಗೆ ಈಶ್ವರನೊಬ್ಬನೇ ಏಕಮಾತ್ರ ಪರಮಸಖ…. ಬಂಕಿಮಾ, ದಯವಿಟ್ಟು ಮುನಿದುಕೊಳ್ಳಬೇಡ ನನ್ನ ಮಾತಿಗೆ.

ಬಂಕಿಮ – ಮಹಾಶಯ, ಸವಿಮಾತುಗಳನ್ನು ಮಾತ್ರ ಕೇಳಲೆಂದು ನಾನಿಲ್ಲಿಗೆ ಬಂದಿಲ್ಲ.

ಪರಮಹಂಸರು – ಕಾಮಿನೀಕಾಂಚನಗಳನ್ನು ತ್ಯಾಗಮಾಡಬೇಕು. ನಾನು ಪಂಚವಟಿಯಲ್ಲಿ ಕುಳಿತು ಹೊನ್ನನ್ನೂ ಮಣ್ಣನ್ನೂ ಎರಡು ಸಮನೆಂದು ಭಾವಿಸಿ ಹೊಳೆಗೆ ಬಿಸಾಡುತ್ತದ್ದೆ….

ಬಂಕಿಮ – ಈಶ್ವರ ಸಾಕ್ಷಾತ್ಕಾರ ಮಾಡುವುದು ಹೇಗೆ?

ಪರಮಹಂಸರು – ಪ್ರಾರ್ಥಿಸು, ನಿನ್ನಲ್ಲಿ ಸರಳತೆಯಿದ್ದರೆ ಉತ್ತರ ಬರುತ್ತದೆ. ಸಜ್ಜನರ ಸಂಗ ಮಾಡಿಸುತ್ತಾನೆ ಅಥವಾ ಯಾವನಾದರೂ ಒಬ್ಬನಿಂದ ಮಾರ್ಗ ತೋರಿಸುತ್ತಾನೆ.

ಬಂಕಿಮ – ಗುರುವನ್ನು ದಯಪಾಲಿಸುತ್ತಾನೆ ಎಂದರೇನು? ಅವನು ಕಾಳನ್ನೆಲ್ಲ ತಾನೇ ಇಟ್ಟುಕೊಂಡು ಹೊಟ್ಟನ್ನು ಮಾತ್ರ ಕೊಡುತ್ತಾನೆ!

ಪರಮಹಂಸರು – ಹಾಗೇಕೆ ತಿಳಿಯುತ್ತೀಯೆ? ನಿನಗೆ ಬೇಕಾದುದು ಏನೆಂದು ಅವನಿಗೆ ಗೊತ್ತು. ರೋಗಿಯಾದ ಶಿಶುವಿಗೆ ತಾಯಿಯಾದವಳು ಗಂಜಿ ಕೊಟ್ಟ ಮಾತ್ರಕ್ಕೆ ಆಕೆಗೆ ಹಸುಳೆಯ ಮೇಲೆ ಅಕ್ಕರೆಯಿಲ್ಲವೇನು?

ಮಾತುಕತೆಗಳಾದ ಮೇಲೆ ತ್ರೈಲೋಕ್ಯನಾಥ ಸಂನ್ಯಾಲನು ಗಾಯನ ಮಾಡಲು ತೊಡಗಿದನು. ಪರಮಹಂಸರು ಸಮಾಧಿಮಗ್ನರಾದರು. ಬಂಕಿಮನು ಹತ್ತಿರ ಹೋಗಿ ನಿಂತು ವಿಸ್ಮಯದಿಂದ ಮೂಕನಾದನು. ಅವನೆಂದೂ ಅಂತಹ ಪುರುಷನನ್ನು ನೋಡಿರಲಿಲ್ಲ. ಪರಮಹಂಸರು ಮೈ ತಿಳಿದ ತರುವಾಯ ಬಂಕಿಮನು ಕೇಳಿದನು: “ಮಹಾಶಯ, ಭಕ್ತಿ ಬರುವುದು ಹೇಗೆ?”

ಪರಮಹಂಸರು – ನಾನು ಹೇಳಲಿಲ್ಲವೇ? ವ್ಯಾಕುಲತೆ ಬೇಕು. ಮಗು ತಾಯಿಯನ್ನು ಕರೆಯುವಂತೆ ದೇವರನ್ನು ಕೂಗಬೇಕು…. ಮೇಲೆ ಮೇಲೆ ತೇಲುವುದರಿಂದ ಉಪಯೋಗವಿಲ್ಲ. ಆಳವಾಗಿ ಮುಳುಗಬೇಕು. ಅನರ್ಘ್ಯ ರತ್ನಗಳು ಬೇಕಾದರೆ ಸಮುದ್ರತಲಕ್ಕೇ ಹೋಗಬೇಕು.

ಬಂಕಿಮ – ಏನು ಮಾಡುವುದು, ಮಹಾಶಯ? ಬೆನ್ನಿಗೆ ಬೆಂಡು ಕಟ್ಟಿದೆಯಲ್ಲಾ!

ಪರಮಹಂಸರು – ಈಶ್ವರನನ್ನು ನೆನೆ. ಎಲ್ಲ ಬಂಧನಗಳೂ ಕಳಚಿ ಬೀಳುತ್ತವೆ.

ಬಂಕಿಮ – ತಮ್ಮೊಡನೆ ಕೆಲವು ಮಾತುಗಳನ್ನು ವಿನೋದಕ್ಕೆಂದು ಹೇಳಿದೆ. ಮನ್ನಿಸಬೇಕು. ನನ್ನ ಬಡಮನೆಗೆ ತಾವು ದಯಮಾಡಿಸಬೇಕು.

ಪರಮಹಂಸರು – ಈಶ್ವರೇಚ್ಛೆ!

ಬಂಕಿಮ – ಅಲ್ಲಿಗೂ ಭಕ್ತರು ಬರುತ್ತಾರೆ.

ಪರಮಹಂಸರು – ಎಂತಹ ಭಕ್ತರೋ ನಾನು ಬೇರೆ ಕಾಣೆ!

ಪರಮಹಂಸರೂ ಬಂಕಿಮನೂ ಪುನಃ ಸಂಧಿಸಲಿಲ್ಲ. ಆದರೂ ಶ್ರೀರಾಮಕೃಷ್ಣರು ಆತನ ಕಾದಂಬರಿಗಳನ್ನು ಓದಿಸಿ ಕೇಳುತ್ತಿದ್ದರು. ಆತನ ಸುವಿಖ್ಯಾತ ಕದಂಬರಿಯಾಗಿರುವ “ದೇವೀ ಚೌಧುರಾಣಿ”ಯನ್ನು ಬಹಳವಾಗಿ ಪ್ರೀತಿಸುತ್ತಿದ್ದರು. ನರೇಂದ್ರ ಮೊದಲಾದ ಮೇಧಾವಿಗಳಾದ ತಮ್ಮ ಶಿಷ್ಯರನ್ನು ಆತನಲ್ಲಿಗೆ ಕಳುಹಿಸುತ್ತಿದ್ದರು.

ಪಂಡಿತ ಶಶಧರ ತರ್ಕ ಚೂಡಾಮಣಿ ವಾಚಾಲತೆಯಲ್ಲಿಯೂ ವಿದ್ವತ್ತಿನಲ್ಲಿಯೂ ಹಿಂದೂ ಆಚಾರ್ಯರಲ್ಲಿ ಅಪ್ರತಿಮನೆಂದೆನಿಸಿಕೊಂಡು ವಂಗದೇಶದ ಉದಯ ನಕ್ಷತ್ರವಾಗಿದ್ದನು. ಧರ್ಮಶಾಸ್ತ್ರಗಳನ್ನೆಲ್ಲಾ ವೈಜ್ಞಾನಿಕವಾಗಿ ವ್ಯಾಖ್ಯಾನ ಮಾಡುವುದರಲ್ಲಿ ವಿಚಕ್ಷಣನಾಗಿದ್ದನು. ಕ್ರಿ. ಶ. ೧೮೮೪ರಲ್ಲಿ ಕಲ್ಕತ್ತೆಯಲ್ಲಿ ಶಶಧರನಿಗೆ ಪರಮಹಂಸರ ದರ್ಶನವಾಯಿತು. ಅಂದಿನಿಂದ ಆತನು ಗುರುದೇನಿಂದ ಆಕರ್ಷಿತನಾಗಿ ಪದೇ ಪದೇ ದಕ್ಷಿಣೇಶ್ವರಕ್ಕೆ ಹೋಗಿ ಅವರನ್ನು ಕಾಣುತ್ತಿದ್ದನು. ಅವರಿಬ್ಬರಿಗೆ ನಡೆದ ಸಂಭಾಷಣೆಯಲ್ಲಿ ಮುಖ್ಯಾಂಶವನ್ನು ಇಲ್ಲಿ ಕೊಡುತ್ತೇವೆ –

ಪರಮಹಂಸರು – ಯಾವುದನ್ನು ಕುರಿತು ಉಪನ್ಯಾಸಮಾಡುತ್ತೀಯೆ?

ಶಶಧರ – ಶಾಸ್ತ್ರಗಳಿಗೆ ವ್ಯಾಖ್ಯಾನಮಾಡುತ್ತೇನೆ.

ಪರಮಹಂಸರು – ಕಲಿಯುಗಕ್ಕೆ ಭಕ್ತಿಯೆ ಸರ್ವೋತ್ತಮವಾದುದು. ಶಾಸ್ತ್ರಗಳಲ್ಲಿ ಹೇಳಿರುವ ಕರ್ಮಕ್ರಿಯೆಗಳನ್ನು ಯಥಾವಿಧಿಯಾಗಿ ಮಾಡಲು ಸಮಯ ಸಾಲದು. ಈ ಕಾಲದ ಜ್ವರಕ್ಕೆ ಹಿಂದಿನ ಮದ್ದುಗಳು ಹಿಡಿಯುವುದಿಲ್ಲ; ಆಸ್ಪತ್ರೆಯ ನೀರೌಷಧಿಯೆ ಲೇಸು. ಹಿಂದಿನ ಮದ್ದುಗಳು ಕೆಲಸ ಮಾಡುವುದರಲ್ಲಿಯೆ ರೋಗಿ ಪ್ರಾಣ ಬಿಡುತ್ತಾನೆ. ಆದ್ದರಿಂದ ನೀನು ಕರ್ಮಕ್ರಿಯೆಗಳನ್ನು ಬೋಧಿಸುವುದರಲ್ಲಿ ಮಿತವಾಗಿರಬೇಕು. ನಿನ್ನ ಉಪನ್ಯಾಸಗಳು ಪ್ರಾಪಂಚಿಕ ಮನಸ್ಕರ ಮೇಲೆ ಏನೂ ಪರಿಣಾಮಕಾರಿಯಾಗುತ್ತಿಲ್ಲ. ಕ್ರಮೇಣ ನಿನಗದು ಗೊತ್ತಾಗುತ್ತದೆ…. ಸಾಕ್ಷಾತ್ಕಾರಕ್ಕೆ ಮೊದಲು ಕರ್ಮಗಳನ್ನು ಯಾರೂ ಬಿಡಬಾರದು. ಕಾಯಿಯಾದ ಕೂಡಲೆ ಹೂವು ಉದುರುತ್ತದೆ. ಭಕ್ತಿಯೆ ಫಲ, ಕರ್ಮಕ್ರಿಯೆಗಳೆ ಹೂವು. ಸಂಧ್ಯೆ ಗಾಯತ್ರಿಯಲ್ಲಿ, ಗಾಯತ್ರಿ ಓಂಕಾರವು ಸಮಾಧಿಯಲ್ಲಿ, ಘಂಟಾನಾದವು ಕ್ರಮಕ್ರಮೇಣ ಮೌನದಲ್ಲಿ ಮುಳುಗಿಹೋಗುವಂತೆ ಲಯವಾಗುತ್ತವೆ…. ವತ್ಸಾ, ನೀನಿನ್ನೂ ಸ್ವಲ್ಪ ಶಕ್ತಿ ಸಂಗ್ರಹ ಮಾಡಿಕೊ. ಇನ್ನೂ ಕೆಲವು ಕಾಲ ಸಾಧನೆ ಮಾಡು. ಆಚಾರ್ಯತ್ವವನ್ನು ಸಕಾಲಕ್ಕೆ ಮೊದಲೇ ಕೈಕೊಂಡಿದ್ದೀಯೆ. ಆದರೆ ನಿನ್ನದು ಸದಾಕಾಂಕ್ಷೆ…. ಈಶ್ವರನಿಂದ ಅಧಿಕಾರ ಪಡೆಯದೆ ಉಪದೇಶಕ್ಕೆ ಹೊರಡಬಾರದು. ಉಪದೇಶ ಮಾಡಲು ನಿನಗೆ ಈಶ್ವರಾಜ್ಞೆ ಬಂದಿದೆಯೆ?

ಶಶಧರ – ಹಾಗಾಗಿದೆ ಎಂದು ಹೆಮ್ಮೆ ಪಡಲಾರೆ, ಮಹಾಶಯ.

ಪರಮಹಂಸರು – ಅಮೃತಸಮುದ್ರಕ್ಕೆ ಅನೇಕ ಹಾದಿಗಳಿವೆ. ಹೇಗಾದರೂ ಅದರಲ್ಲಿ ಮುಳುಗಬೇಕು. ನೀನೇ ಧುಮುಕಬಹುದು ಅಥವಾ ನಿಧಾನವಾಗಿ ಮೆಟ್ಟಲಿಳಿದು ಹೋಗಿ ಅಮೃತಪಾನ ಮಾಡಬಹುದು; ಅಥವಾ ಇನ್ನಾರಾದರೂ ನಿನ್ನನ್ನು ಆ ಕಡಲಿಗೆ ತಳ್ಳಿದರೂ ಸರಿಯೆ. ಒಂದು ಬಿಂದು ಅಮೃತಪಾನಮಾಡಿದರೆ ನೀನು ಅಮರನಾಗುವೆ. ಜ್ಞಾನ, ಭಕ್ತಿ, ಕರ್ಮ ಮಾರ್ಗದಲ್ಲಿ ಯಾವುದರಲ್ಲಾದರೂ ಪ್ರಯಾಣಮಾಡು…. ವೈದ್ಯರು ಮೂರು ವಿಧವಾಗಿದ್ದಾರೆ. ರೋಗಿಯ ನಾಡಿಯನ್ನು ಪರೀಕ್ಷಿಸಿ ಇಂತಹ ಮದ್ದನ್ನು ತೆಗೆದುಕೊ ಎಂದು ಹೇಳಿ ಹೋಗುವರು ಮೊದಲನೆಯ ಜಾತಿ. ಇದು ಅಧಮ ಜಾತಿ. ಹಾಗೆಯೆ ಶಿಷ್ಯನಿಗೆ ಉಪದೇಶಮಾಡಿ ಅವನು ಅದರಂತೆ ಆಚರಿಸುತ್ತಾನೆಯೊ ಇಲ್ಲವೊ ಎಂದು ನೋಡದೆ ಹೋಗುವ ಆಚಾರ್ಯರಿದ್ದಾರೆ. ಇನ್ನೊಂದು ಜಾತಿಯ ವೈದ್ಯರು ಮದ್ದನ್ನು ಕೊಟ್ಟು ತೆಗೆದುಕೊಳ್ಳುವಂತೆ ಹೇಳುತ್ತಾರೆ. ರೋಗಿ ಒಲ್ಲೆನೆಂದರೆ ಅವನೊಡನೆ ವಾದಮಾಡುತ್ತಾರೆ. ಇದು ಮಧ್ಯಮ ಜಾತಿ. ಅದರಂತೆಯೆ ಕೆಲವು ಆಚಾರ್ಯರು ಶಿಷ್ಯನಿಗೆ ಉಪದೇಶಮಾಡಿ ಅದರಂತೆ ನಡೆಯಬೇಕೆಂದು ಬಹು ವಿಧವಾಗಿ ಕೇಳಿಕೊಳ್ಳುತ್ತಾರೆ. ಮೂರನೆಯ ಜಾತಿಯ ವೈದ್ಯರು ಬಲಾತ್ಕಾರವಾಗಿ ರೊಗಿಗೆ ಮದ್ದು ಕುಡಿಸುತ್ತಾರೆ. ಅದರಂತೆಯೆ ಉತ್ತಮ ಗುರುಗಳು ಶಿಷ್ಯನನ್ನು ಸನ್ಮಾರ್ಗಕ್ಕೆ ಹಿಡಿದೆಳೆಯುತ್ತಾರೆ…. ಪಠನ ಮಾಡುವುದಕ್ಕಿಂತ ಶ್ರವಣಮಾಡುವುದು ಲೇಸು. ಗುರುವಿನ ಬಾಯಲ್ಲಿ ಬಂದರೆ ಸ್ವಲ್ಪ ಹೆಚ್ಚಾಗಿ ಅರ್ಥವಾಗುತ್ತದೆ. ಅಲ್ಲದೆ ಅನಾವಶ್ಯಕವಾದ ವಿವರಣೆಗೆ ಗಮನ ಕೊಡುವುದೂ ತಪ್ಪುತ್ತದೆ. ಸ್ವತಃ ನೋಡುವುದು, ಕೇಳುವುದಕ್ಕಿಂತಲೂ ಉತ್ತಮವಾದುದು. ಎಂದರೆ ಸಾಕ್ಷಾತ್ಕಾರವು ಸರ್ವಶ್ರೇಷ್ಠವಾದುದು. ಬರಿಯ ಶಾಸ್ತ್ರಾಧ್ಯಯನದಿಂದ ಏನೂ ಆಗುವುದಿಲ್ಲ. ಮುಂದಿನ ವರ್ಷ ಎಷ್ಟು ಮಳೆಯಾಗುತ್ತದೆ ಎಂದು ಭವಿಷ್ಯ ಹೇಳುವ ಪಂಚಾಂಗವನ್ನು ಎಷ್ಟು ಹಿಂಡಿದರೂ ಒಂದು ಹನಿಯೂ ಹನಿಯದು.

ಶಶಧರ – ಈಶ್ವರ ದರ್ಶನವಾಗಲು ಎಂತಹ ಭಕ್ತಿ ಬೇಕು?

ಪರಮಹಂಸರು – ಅವರವರ ಸ್ವಭಾವಾನುಗುಣವಾಗಿ ಭಕ್ತಿಯಲ್ಲಿ ಮೂರು ವಿಧಗಳಿವೆ. ಸಾತ್ತ್ವಿಕ, ರಾಜಸ, ತಾಮಸಿಕ, ಸಾತ್ತ್ವಿಕ ಭಕ್ತಿ ಈಶ್ವರನೊಬ್ಬನಿಗೇ ಗೊತ್ತಾಗುತ್ತದೆ. ಏಕೆಂದರೆ ಸಾತ್ತ್ವಿಕ ಭಕ್ತನು ಯಾರೂ ಕಾಣದಂತೆ ರಹಸ್ಯವಾಗಿ ಪೂಜಿಸಿ ಧ್ಯಾನಿಸುತ್ತಾನೆ. ರಾಜಸಿಕ ಭಕ್ತಿ ಪ್ರದರ್ಶಕ ಶೀಲವಾದುದು. ರಾಜಸಿಕ ಭಕ್ತನು ಮಡಿಪಂಚೆ ಉಟ್ಟು, ರುದ್ರಾಕ್ಷಿಮಾಲೆ ತೊಟ್ಟು, ಚಿನ್ನದ ಜಪಮಣಿ ಮಾಲೆ ಹಿಡಿದು ದೇವಮಂದಿರಕ್ಕೆ ಹೋಗಿ ರಾಜಠೀವಿಯಿಂದ ಪೂಜಿಸುತ್ತಾನೆ. ತಾಮಸಿಕ ಭಕ್ತಿ ಮನೆಮುರಿಯುವ ಡಕಾಯಿತನಂತೆ. ಒನಕೆಯಿಂದ ಬಡಿಯುವುದು; ಪೋಲಿಸರ ಮೇಲೆ ಬಿದ್ದು “ಹೊಡಿ! ಹೊಡಿ” ಎಂದು ಕೂಗುವುದು. ತಾಮಸಿಕ ಭಕ್ತನು “ಹರ! ಹರ! ಹರ! ಭಂ! ಭಂ! ಕಾಳೀಕಿ ಜೈ! ” ಎಂದು ಕೂಗಿ ಅಬ್ಬರಿಸುತ್ತಾನೆ; ಅದರಲ್ಲಿ ಪ್ರಚಂಡ ಶಕ್ತಿಯೂ ಉಜ್ವಲ ಶ್ರದ್ಧೆಯೂ ಇರುತ್ತವೆ. ಶಾಕ್ತಭಕ್ತರು ಈ ಗುಂಪಿಗೆ ಸೇರಿದವರು. ವೈಷ್ಣವ ಭಕ್ತರ ಭಾವವು ಇದಕ್ಕೆ ಸಂಪೂರ್ಣ ವಿರುದ್ಧವಾದುದು. ಅವರು ಸದಾ ಅಡ್ಡಬೀಳುವುದು, ಕೈಮುಗಿಯುವುದು, ತಮ್ಮನ್ನು ತಾವೇ ಅಲ್ಲಗಳೆದುಕೊಳ್ಳುವುದು ಮೊದಲಾದ ಕೃತ್ಯಗಳಿಂದ “ದೇವರೇ, ನನ್ನ ಮೇಲೆ ದಯೆಯಿಡು. ನಾನು ಕ್ರಿಮಿ, ನಾನು ಪಾಪಿ!” ಎಂದು ಮೊರೆಯಿಡುತ್ತಾ ಯಾವಾಗಲೂ ದೇವರಿಗೆ ಅರ್ಜಿ ಹಾಕುತ್ತಲೆ ಇರುತ್ತಾರೆ…. ಈಶ್ವರನಾಮವು ಸರ್ವ ಪಾಪಗಳನ್ನೂ ದಹಿಸಿ ಭಸ್ಮ ಮಾಡುತ್ತದೆ ಎಂಬ ತೀವ್ರ ಶ್ರದ್ದೆಯಿರಬೇಕು. ಹಗಲೂ ಇರುಳೂ ದೇವರ ಹೆಸರು ಹೇಳುತ್ತಿರುವುದು! ಅದೇ ಉಸುರಿನಲ್ಲಿ “ನಾನು ಕ್ರಿಮಿ, ನಾನು ಪಾಪಿ!” ಎಂದು ಒರಲುವುದು! ನಾಚಿಕೆಗೇಡು!

ಹೀಗೆಂದು ಪರಮಹಂಸರು “ತಾಯೀ, ನಿನ್ನ ನಾಮೋಚ್ಚಾರಣೆ ಮಾಡುತ್ತ ನಾನು ಮಡಿದರೆ, ನನ್ನನೆಂತು ಕಷ್ಟಕಾಲದಲ್ಲಿ ಕೈಬಿಡುವೆಯೋ ನೋಡಿಬಿಡುತ್ತೇನೆ! ” ಎಂಬರ್ಥದ ಗೀತೆಯೊಂದನ್ನು ಹಾಡಿದರು. ಶಶಧರನು ಭಾವವಶನಾಗಿ ಕಣ್ಣೀರು ಸುರಿಸಿದನು.

ಈ ಅಧ್ಯಾಯದಲ್ಲಿ ಪೂರ್ವೋಕ್ತವಾಗಿರುವ ವ್ಯಕ್ತಿಗಳೆಲ್ಲ ಶ್ರೀರಾಮಕೃಷ್ಣರನ್ನು ಗುರುವೆಂದು ಅಕ್ಷರಶಃ ಸ್ವೀಕರಿಸಿದವರಲ್ಲ. ಅವರೆಲ್ಲರೂ ಪರಮಹಂಸರ ಉಪದೇಶಾಮೃತವನ್ನು ಸವಿದು, ಅವರ ಸಂಗ ಮಹಿಮೆಯಿಂದ ಪುನೀತರಾಗಿ ಅವರಲ್ಲಿ ಪೂಜ್ಯಬುದ್ಧಿಯನ್ನಿಟ್ಟಿದ್ದರು. ಆದ್ದರಿಂದಲೆ ಕಾಲಕ್ರಮವನ್ನು ಉಲ್ಲಂಘಿಸಿ, ಕಾಲಕ್ರಮವನ್ನೆ ಅನುಸರಿಸಿ, ಅಂಥವರಲ್ಲಿ ಮುಖ್ಯರಾದವರನ್ನು ಒಟ್ಟುಗೂಡಿ ವರ್ಣಿಸಿದ್ದಾಯಿತು. ಇನ್ನು ಮುಂದೆ ಬರುವ ವ್ಯಕ್ತಿಗಳು ಶ್ರೀರಾಮಕೃಷ್ಣರನ್ನು ಅಕ್ಷರಶಃ ಅರ್ಥಶಃ ಗುರುಭಾವದಿಂದ ಕಂಡವರು. ಅವರಲ್ಲಿ ಸಂಸಾರಿಗಳಾಗಿ ಸಂಸಾರದಲ್ಲಿಯೆ ಇದ್ದುಕೊಂಡು ಪ್ರಸಿದ್ಧರಾದವರನ್ನು ಮಾತ್ರ ಈ ಅಧ್ಯಾಯದಲ್ಲಿ ವರ್ಣಿಸುತ್ತೇವೆ. ಏಕೆಂದರೆ, ಪರಮಹಂಸರು ಅನೇಕ ಮುಖ ದರ್ಪಣದಂತೆ ಅನೇಕ ಕಿರಣಗಳನ್ನು ಅನೇಕ ರೀತಿಯಾಗಿ ಪ್ರತಿಬಿಂಬಿಸಿದ ಮಹಾವ್ಯಕ್ತಿ. ಯಾರ ಭಾವವನ್ನೂ ನಷ್ಟಗೈಯದೆ, ಯಾರ ಸ್ಥಿತಿಯನ್ನೂ ಚ್ಯುತಿಗೊಳಿಸದೆ ಅವರವರ ಸಂಸ್ಕಾರಗಳಿಗೆ ಅನುಗುಣವಾಗಿ ಆಯಾ ಉಪದೇಶಗಳನ್ನು ದಾನ ಮಾಡುತ್ತಿದ್ದರು. ಸಂನ್ಯಾಸೀ ಶಿಷ್ಯರಿಗೆ ಕೊಡುತ್ತಿದ್ದ ಕಠಿಣ ಪಥ್ಯವನ್ನು ಸಂಸಾರಿ ಭಕ್ತರಿಗೆ ಕೊಡುತ್ತಿರಲಿಲ್ಲ. ನಿಪುಣನೂ ದಯಾಳೂವೂ ಸಮರ್ಥನೂ ಅನುಭವಶಾಲಿಯೂ ಆದ ಅಂತಹ ಮತ್ತೊಬ್ಬ ದೇವವೈದ್ಯನನ್ನು ಜಗತ್ತು ಇದುವರೆಗೂ ಸಂದರ್ಶಿಸಿಲ್ಲ.


[1] “ಬಂಕಿಮ” ಎಂದರೆ ಕೊಂಕಿರುವುದು ಎಂದರ್ಥವಾಗುತ್ತದೆ.