ಶ್ರೀರಾಮಕೃಷ್ಣರೆಂಬ ಲೋಕದ್ಯೋತಕ ಸೂರ್ಯಮಂಡಲವು ಹಿಮಾಲಯದ ಧವಳಗಿರಿಯ ಮೇಲೆ ಮೈದೋರುವ ಮೊದಲು, ಭಾರತೀಯ ಉಷಃಕಾಲದ ನೀಲಾಕಾಶದಲ್ಲಿ ಕೆಲವು ಮಹಾನಕ್ಷತ್ರಗಳು ಮೂಡಿ ತಮ್ಮ ಮಿತದೀಪ್ತಿಯಿಂದ ಜಗತ್ತನ್ನು ಬೆಳಗುತ್ತಿದ್ದುವು ಎಂಬ ವಿಷಯ ಈ ಗ್ರಂಥದ ಪೀಟಿಕೆಯಲ್ಲಿ ವಿದಿತವಾಗಿದೆ. ಆ ಅಧ್ಯಾತ್ಮ ಗಗನದ ಯಾತ್ರಿಕರಲ್ಲಿ ರಾಮಮೋಹನ ರಾಯನು ಅಸ್ತನಾಗಿದ್ದನು. ಉಳಿದವರಲ್ಲಿ ಕೆಲವರನ್ನು ಪರಮಹಂಸರು ಹೋಗಿ ಕಂಡರು; ಕೆಲವರು ಪರಮಹಂಸರೆಡೆಗೆ ಬಂದು ಕಂಡರು. ಶ್ರೀರಾಮಕೃಷ್ಣರ ಸತ್ಯಾನ್ವೇಷಣೆಯಲ್ಲಿ ಕರುಬಿನ ಕುರುಹಾಗಲಿ, ಹೆಮ್ಮೆಯ ಔದಾಸೀನ್ಯವಾಗಲಿ ಇರಲಿಲ್ಲ. ಧರ್ಮ ಜೀವಿಗಳು ಯಾರೇ ಆಗಲಿ ಅವರಿಗೆ ಪೂಜ್ಯರಾಗಿದ್ದರು. ಈಶ್ವರನ ಅಸಂಖ್ಯ ಕಿರಣಗಳಲ್ಲಿ ತಮಗೆ ಕಾಣದುದು ಇತರರಿಗೆ ಕಂಡಿರಬಾರದೇಕೆ? ಎಂಬ ಭಾವನೆಯಿಂದ ಅನೇಕ ಸಾಧಕರನ್ನು ಸಂದರ್ಶಿಸಿದರು. ಅವರಲ್ಲಿ ಒಬ್ಬೊಬ್ಬರನ್ನೂ ವಿಷಮ ಪರೀಕ್ಷೆಗೆ ಗುರಿಮಾಡದಿರಲಿಲ್ಲ. ಒರೆಗಲ್ಲಿಗೆ ಹಚ್ಚಿ ನೋಡದೆ ಅವರು ಯಾವುದನ್ನೂ ಚಿನ್ನವೆಂದು ಪರಿಗ್ರಹಿಸುತ್ತಿರಲಿಲ್ಲ. ಎಷ್ಟೋಸಾರಿ ಅಂಧಜಗತ್ತು ಸ್ವರ್ಣವೆಂದು ಕೊಂಡಾಡುತ್ತಿದ್ದ ಲೋಹಮೂರ್ತಿಗಳನ್ನು ಪರಮಹಂಸರು ಪರೀಕ್ಷೆಮಾಡಿ ಕಾಗೆ ಬಂಗಾರವೆಂದು ತಿಳಿದು ಮಗುವಿನ ಮುಗುಳುನಗೆ ನಕ್ಕು ಹಿಂದಿರುಗಿದ್ದಾರೆ. ಅವರ ಔದಾರ್ಯವು ಸದಾ ಸಮುದ್ರವಾಗಿದ್ದಂತೆಯೆ ಅವರ ವಿಮರ್ಶಕ ಬುದ್ಧಿಯೂ ಸರ್ವದಾ ತೀಕ್ಷ್ಣವಾಗಿತ್ತು. ಬಾಹ್ಯಾಡಂಬರಕ್ಕಾಗಲಿ, ಲೌಕಿಕ ವಿಖ್ಯಾತಿಗಾಗಲಿ, ಮೇಧಾಶಕ್ತಿ ವಿದ್ವತ್ತುಗಳಿಗಾಗಲಿ ಅಥವಾ ಲೋಕವನ್ನೇ ಮಂತ್ರ ಮುಗ್ಧವನ್ನಾಗಿ ಮಾಡಿಬಿಡುವ ವಾಚಾಲತೆಗಾಗಲಿ ಅವರೆಂದಿಗೂ ಮರುಳಾದುದಿಲ್ಲ. ವ್ಯಕ್ತಿಯ ಹೃದಯದಲ್ಲಿ ಈಶ್ವರಜ್ಯೋತಿಯನ್ನು ಕಂಡಲ್ಲದೆ ಅವರು ಪ್ರಶಂಸೆಮಾಡುತ್ತಿರಲಿಲ್ಲ. ಖೋಟಾನಾಣ್ಯಗಳನ್ನು ಕಂಡು ಹಿಡಿಯುವುದರಲ್ಲಿ ಅವರು ಅದ್ವಿತೀಯ ಪಂಡಿತರಾಗಿದ್ದರು. ಅವರ ಅನ್ವೇಷಕ ದೃಷ್ಟಿ ವ್ಯಕ್ತಿಗಳ ದೇಹವನ್ನು ಭೇದಿಸಿ ಹೃದಯದ ರಹಸ್ಯಗಳನ್ನು ಕ್ಷಣಮಾತ್ರದಲ್ಲಿ ಅರಿಯಬಲ್ಲುದಾಗಿತ್ತು. ಧರ್ಮ ನಟತ್ವವನ್ನಾಗಲಿ ಬೂಟಾಟಿಕೆಯನ್ನಾಗಲಿ ಕಂಡ ಕೂಡಲೆ ದೊಡ್ಡ ಮನುಷ್ಯರೆನ್ನದೆ, ವಿದ್ವಾಂಸರೆನ್ನದೆ, ಕೀರ್ತಿವಂತರೆನ್ನದೆ, ಸಮಾಜಸನ್ನಿವೇಶವನ್ನೂ ಪರಿಗಣಿಸದೆ, ಮಕ್ಕಳಂತೆ ಚುಚ್ಚುಕೊಂಡಿ ಮೊನೆಯಿಲ್ಲದೆ ಗಹಗಹಿಸಿ ನಗೆದೋರಿ ಅಲ್ಲಿಂದ ಹೊರಟು ಹೋಗುತ್ತೊದ್ದರು. ಅಕುಟಿಲವಾದ ದೈವಿಕಭಾವವನ್ನು ಸಂದರ್ಶಿಸಿದಾಗ ಕೈಮುಗಿದು ಮುಕ್ತ ಕಂಠದಿಂದ ಸ್ತುತಿಸಿ ಬರುತ್ತಿದ್ದರು.

ದರಿದ್ರ ಪರಮಹಂಸರು ಶ್ರೀಮಂತ ಮಹರ್ಷಿಯಾದ ದೇವೇಂದ್ರನಾಥ ಠಾಕೂರನನ್ನು ಸಂದರ್ಶಿಸಿದ್ದು ಒಂದು ಸರಸವಿನೋದ ಕಥೆಯಂತಿದೆ.

ಒಂದು ಸಾರಿ ಪರಮಹಂಸರು ಮಥರನಾಥನೊಡನೆ “ದೇವೇಂದ್ರ ಠಾಕೂರನು ಮಹಾಭಕ್ತನೆಂದು ಕೇಳಿದ್ದೇನೆ. ನಾನು ಆತನನ್ನು ನೋಡಬೇಕು” ಎಂದರು. ಮಥುರನು ಕಲ್ಕತ್ತೆಯ ಹಿಂದೂ ಕಾಲೇಜಿನಲ್ಲಿ ದೇವೇಂದ್ರನಾಥನ ಸಹಾಧ್ಯಾಯಿಯಾಗಿದ್ದನು. ಕರೆಯದೆ ಮಥುರನು ಎಲ್ಲಿಗೂ ಹೋಗುತ್ತಿರಲಿಲ್ಲ. ಆದರೆ ಶ್ರೀರಾಮಕೃಷ್ಣರ ಮಾತು ಮೀರಲಾರದೆ ಅವರನ್ನೂ ಒಡಗೊಂಡು ದೇವೇಂದ್ರನಲ್ಲಿಗೆ ಹೋದನು. ಶ್ರೀರಾಮಕೃಷ್ಣರು ಅತಿ ಸಾಧಾರಣವಾಗಿ ಉಡುಪು ಧರಿಸಿದ್ದರು. ಮಥುರನು “ಈಶ್ವರೋನ್ಮತ್ತ ಸಾಧಕರು! ” ಎಂದು ಪರಿಚಯಮಾಡಿಕೊಟ್ಟನು. ದೇವೇಂದ್ರನು ಅತಿಥಿಗಳನ್ನು ಅತ್ಯಾದರದಿಂದ ಸ್ವೀಕರಿಸಿ ಸತ್ಕರಿಸಿದನು. ಆತನಲ್ಲಿ ಅಹಂಭಾವವಿದ್ದಂತೆ ತೋರಿತು. ಆತನಿಗೆ  ವಿದ್ಯೆ, ಖ್ಯಾತಿ, ಐಶ್ವರ್ಯ ಎಲ್ಲವೂ ಸಮೃದ್ಧಿಯಾಗಿದ್ದುವು. ಆದರೆ ಆತನಲ್ಲಿ ಯೋಗ ಭೋಗಗಳೆರಡೂ ಸಮನಾಗಿದ್ದುವು. ಕೆಲವು ಮಾತುಕತೆಗಳಾದ ಮೇಲೆ ಪರಮಹಂಸರು ಬಟ್ಟೆ ಬಿಚ್ಚಿ ಎದೆಯನ್ನು ತೋರಿಸುವಂತೆ ಹೇಳಿದರು. ದೇವೇಂದ್ರನು ಹಾಗೆಯೆ ಮಾಡಿದನು. ವಕ್ಷಸ್ಥಳ ಕೆಂಪಾಗಿತ್ತು. ದಕ್ಷಿಣೇಶ್ವರದ ಗುರುದೇವನು ಸಂತೃಪ್ತನಾಗಿ “ನಿಜವಾಗಿಯೂ ನೀನು ಕಲಿಯುಗದ ಜನಕಮಹಾರಾಜನೆ ಹೌದು. ಜನಕನೂ ಯೋಗಭೋಗಗಳೆರಡನ್ನೂ ಸಾಧಿಸುತ್ತಿದ್ದನು. ನಿನ್ನ ಆತ್ಮ ದೇವರಲ್ಲಿದೆ. ದೇಹ ಸಂಸಾರದಲ್ಲಿದೆ. ಆದ್ದರಿಂದಲೆ ನಾನು ನಿನ್ನ ದರ್ಶನ ಮಾಲು ಬಂದೆ. ಈಶ್ವರನ ವಿಷಯವಾಗಿ ನೀನು ನನಗೇನಾದರೂ ಹೇಳಬೇಕು.” ಎಂದರು. ದೇವೇಂದ್ರನು ವೇದಗಳಿಂದ ಹಲವು ಮಂತ್ರಗಳನ್ನು ಉಚ್ಚರಿಸಿದನು. ಮಹರ್ಷಿ ಪರಮಹಂಸರ ಕಣ್ಣಿನ ಕಾಂತಿಯನ್ನು ಕಂಡು ಬೇರಗಾದನು. ಅತಿಥಿಗಳು ಬೀಳ್ಕೊಡುವ ಸಮಯದಲ್ಲಿ ದೇವೇಂದ್ರನು ಮರುದಿನ ನಡೆಯಲಿದ್ದ ಬ್ರಾಹ್ಮಸಮಾಜದ ಒಂದು ಮಹೋತ್ಸವಕ್ಕೆ ಪರಮಹಂಸರನ್ನು ಆಹ್ವಾನಿಸಿದನು. ಅವರು “ಈಶ್ವರೇಚ್ಛೆ!” ಎಂದರು. ಮಹರ್ಷಿ “ದಯವಿಟ್ಟು ಇದಕ್ಕಿಂತಲೂ ಸ್ವಲ್ಪ ಒಳ್ಳೆ ಬಟ್ಟೆ ಹಾಕಿಕೊಂಡು ಚೆನ್ನಾಗಿ ಮೈಮುಚ್ಚಿಕೊಂಡು ಬನ್ನಿ!” ಎಂದನು.”ನಾನು ಬಾಬುಗಳಂತೆ ಉಡುಪು ಹಾಕಿಕೊಳ್ಳಲಾರೆ” ಎಂದರು. ಅದನ್ನು ಕೇಳಿ ಮಥುರನೂ ದೇವೇಂದ್ರನೂ ಅಲ್ಲಿದ್ದವರೆಲ್ಲರೂ ಗೊಳ್ಳೆಂದು ನಕ್ಕರು. ಮರುದಿನ ಮಥುರನಿಗೆ ದೇವೇಂದ್ರನಿಂದ ಒಂದು ಕಾಗದ ಬಂದಿತು. ಅದರಲ್ಲಿ ‘ಶ್ರೀರಾಮಕೃಷ್ಣರು ಬಟ್ಟೆಯಿಲ್ಲದೆ ಬರುವುದು ಚೆನ್ನಾಗಿಲ್ಲ; ಆದ್ದರಿಂದ ಬರುವುದು ಬೇಡ’ ಎಂದು ಬರೆದಿತ್ತು. ಶ್ರೀಮಂತ ಮಹರ್ಷಿಗೆ ದರಿದ್ರ ಪರಮಹಂಸನು ಸಾಕಾದಷ್ಟು ನಾಗರಿಕವಾಗಿರಲಿಲ್ಲ; ಅಥವಾ ನಾಟಕೀಯವಾಗಿರಲಿಲ್ಲ!

ಇದು ನಡೆದ ಕೆಲ ಕಾಲದ ಮೇಲೆ ಕೇಶವಚಂದ್ರಸೇನನು ಗುರುದೇವನನ್ನು ಕುರಿತು “ಯೋಗಭೋಗಗಳನ್ನು ಒಟ್ಟಿಗೆ ಸಾಧಿಸಲು ಸಾಧ್ಯವಿಲ್ಲವೆ? ಮಹರ್ಷಿ ದೇವೇಂದ್ರನಾಥರ ವಿಚಾರವಾಗಿ ಏನು ಹೇಳುತ್ತೀರಿ?” ಎಂದು ಕೇಳಲು, ಅವರು ನಿಧಾನವಾಗಿ “ದೇವೇಂದ್ರನಾಥಠಾಕೂರ… ದೇವೇಂದ್ರನಾಥ…. ದೇವೇಂದ್ರ….” ಎಂದು ಉಚ್ಚರಿಸಿ, ಯಾವನೋ ಅಶರೀರಿಗೆ ಪುನಃ ಪುನಃ ನಮಸ್ಕರಿಸಿ ಇಂತೆಂದರು:

“ಆತನ ವಿಚಾರವೇನು ಎಂಬೆಯಾ? ಒಬ್ಬನು ದುರ್ಗಾಪೂಜೆಯನ್ನು ಬಹಳ ಸಂಭ್ರಮದಿಂದ ನೆರವೇರಿಸುತ್ತಿದ್ದನು. ಬೆಳಗಿನಿಂದ ಬೈಗಿನವರೆಗೂ ಬೇಕಾದಷ್ಟು ಕುರಿಗಳು ಬಲಿಯಾಗುತ್ತಿದ್ದುವು. ಕೆಲವು ಕಾಲದ ಮೇಲೆ ಉತ್ಸಾಹ ಹಳಸಿಹೋಗಿ ಉತ್ಸವದ ತೇಜಸ್ಸು ಮಸುಳಾಯಿತು. ಯಾರೋ ಕೇಳಿದರಂತೆ ‘ಇದೇನು ಸ್ವಾಮಿ, ಉತ್ಸವದ ಸಂಭ್ರಮ ಇಷ್ಟರಮಟ್ಟಿಗೆ ಇಳಿದುಹೋಯಿತು?’ ಎಂದು. ಅದಕ್ಕೆ ಆತನು ‘ಅಯ್ಯೋ, ಇದ್ದ ಹಲ್ಲುಗಳೆಲ್ಲ ಉದುರಿಹೋದುವು!’ ಎಂದನು.

“ಅದರಂತೆಯೆ ಮುದುಕನಾದ ಮೇಲೆ ಈಶ್ವರಧ್ಯಾನ ಮಾಡುವುದು ದೇವೇಂದ್ರನಿಗೆ ಸ್ವಾಭಾವಿಕವಾದ್ದು…. ಆದರೆ ಆತನು ಮಹಾಪುರುಷನೆಂಬುದರಲ್ಲಿ ಸಂದೇಹವಿಲ್ಲ.”

ಶ್ರೀರಾಮಕೃಷ್ಣರು ಹೋಗಿ ಕಂಡ ಇನ್ನೊಬ್ಬ ಮಹಾವ್ಯಕ್ತಿ ದಯಾನಂದ ಸರಸ್ವತಿ. ಕ್ರಿ. ಶ. ೧೮೭೩ನೆಯ ಉತ್ತರಾರ್ಧದಲ್ಲಿ ಆ ಪ್ರತಿವಾದಿ ಭಯಂಕರನು ಕಲ್ಕತ್ತೆಗೆ ಬಂದನು. ಆರ್ಯಸಮಾಜ ಇನ್ನೂ ಸ್ಥಾಪಿತವಾಗಿರಲಿಲ್ಲ. ಪರಮಹಂಸರು ದೇವೇಂದ್ರನಾಥನ ವಕ್ಷಸ್ಥಳವನ್ನು ಪರೀಕ್ಷಿಸಿದಂತೆಯೆ ಆತನನ್ನೂ ಪರೀಕ್ಷಿಸಿ ಆತನಲ್ಲಿಯೂ “ಕಿಂಚಿತ್ ದಿವ್ಯಶಕ್ತಿ” ಇದೆಯೆಂದು ಹೇಳಿದರು. ಆದರೆ ಆತನ ವಾದಪ್ರಿಯತೆಯನ್ನೂ ಸ್ವಮತ ಭ್ರಾಂತಿಯನ್ನೂ ರಾಜಸವನ್ನೂ ಕಂಡು ಪರಮಹಂಸರು ಬಿಸುಸುಯ್ದರು. ಆತನು ನೂತನ ಪಂಥ ನಿರ್ಮಾಣದಲ್ಲಿ ದೃಢನಿಶ್ಚಯನಾಗಿದ್ದಂತೆ ತೋರಿತು.

ಗ್ರಂಥದ ಪೀಠಿಕೆಯಲ್ಲಿ ಓದುಗರಿಗೆ ಕೇಶವಚಂದ್ರಸೇನನ ಪರಿಚಯವಾಗಿದೆ. ಶ್ರೀರಾಮಕೃಷ್ಣ ಮತ್ತು ಕೇಶವಚಂದ್ರಸೇನರ ಸಂಬಂಧ ಅತಿ ಮನೋಹರವಾದುದು; ಚಿರವಾದುದು. ಪ್ರಥಮತಃ ಮಿತ್ರನಂತೆ ಪರಮಹಂಸರ ಬಳಿಗೆ ಬಂದ ಕೇಶವನು ಬರಬರುತ್ತ ಭಕ್ತನಾಗಿ ಕಟ್ಟಕಡೆಗೆ ಶಿಷ್ಯನೂ ಆದನೆಂದು ಹೇಳಿದರೆ ಅತಿಶಯೋಕ್ತಿಯಾಗದು. ಕೇಶವನ ಉಗ್ರಾಭಿಪ್ರಾಯಗಳು ಪರಮಹಂಸರ ಸಾನ್ನಿಧ್ಯ ಸಹವಾಸ ಪ್ರಭಾವಗಳಿಂದ ಸೃಮ್ಯವಾದುವು. ಆತನಲ್ಲಿದ್ದ ಖಂಡನೆ ಸಹಾನುಭೂತಿಯಾಗಿ ಪರಿಣಮಿಸಿತು; ಹುಳಿ ಸಿಹಿಯಾಯಿತು; ಕಾಯಿ ಹಣ್ಣಾಯಿತು. ಕೇಶವನು ಸ್ವಾಮಿ ವಿವೇಕಾಂದ ಮೊದಲಾದವರಂತೆ ಪರಮಹಂಸರಿಂದ ಮಂತ್ರೋಪದೇಶ ಪಡೆದು, ಅವರನ್ನು ‘ಗುರು’ ಎಂದು ಸ್ವೀಕರಿಸಲಿಲ್ಲ ಎಂಬುದೇನೋ ನಿರ್ವಿವಾದವಾದುದು. ಆತನೇ ಬ್ರಾಹಮಸಮಾಜದ ಸಾವಿರಾರು ಮಂದಿಗೆ ಆಚಾರ್ಯನಾಗಿದ್ದನು. ಆದರೆ ಸಣ್ಣ ಸೊಡರು ಮಹಾಜ್ಯೋತಿಯನ್ನು ಅಸಡ್ಡೆ ಮಾಡುವನಿತು ಆತನು ಗರ್ವಿಯಾಗಿರಲಿಲ್ಲ. ಆದ್ದರಿಂದ ಆತನು ತನ್ನ ಕೆಲವರು ಶಿಷ್ಯರ ಆಗ್ರಹಕ್ಕೆ ಪಾತ್ರನದರೂ ಗಮನಿಸದೆ ದಕ್ಷಿಣೇಶ್ವರದ ದೇವಮಾನವನ ಪದತಲದಲ್ಲಿ ಕುಳಿತು ಪರಿಪಕ್ವವಾದನು.

ಕ್ರಿ. ಶ. ೧೮೭೫ರಲ್ಲಿ ಕಲ್ಕತ್ತೆಯಲ್ಲಿ, ಬ್ರಾಹ್ಮಸಮಾಜಕ್ಕೆ ಸೇರಿದಜಯಗೋಪಾಲಸೇನನ ತೋಟದ ಮನೆಯಲ್ಲಿ ಪರಮಹಂಸ ಮತ್ತು ಕೇಶರ ಭೇಟಿಯಾಯಿತು. ಶ್ರೀರಾಮಕೃಷ್ಣರು ಕೇಶವನಿಗೆ “ನಿನಗೆ ಈಶ್ವರ ದರ್ಶನವಾಗುತ್ತದೆ ಎಂದು ಕೇಳಿದ್ದೆ; ಅದನ್ನು ನೋಡಲು ಬಂದಿದ್ದೇನೆ” ಎಂದರು. ಮಾತುಕತೆಗೆ ಪ್ರಾರಂಭವಾಯಿತು. ನಡುವೆ ಶ್ರೀರಾಮಕೃಷ್ಣರು ಕಾಳಿಯ ಸ್ತುತಿಯನ್ನು ಹಾಡಿ ಸಮಾಧಿಮಗ್ನರಾದರು. ಕೇಶವನಿಗೂ ಇತರ ಶಿಷ್ಯರಿಗೂ ಅದೇನು ಅಷ್ಟು ರುಚಿಸಲಿಲ್ಲ. ಹೃದಯನು ಮಾವನ ಕಿವಿಯಲ್ಲಿ ‘ಓಂಕಾರ’ ಉಚ್ಚಾರಣೆ ಮಾಡಿ ಬಾಹ್ಯಪ್ರಜ್ಞೆ ಬರುವಂತೆ ಮಾಡಿದನು. ಅದನ್ನು ಕಂಡು ಅಲ್ಲಿದ್ದವರಿಗೆಲ್ಲಾ ಆಶ್ಚರ್ಯವಾಯಿತು. ಇದಾದ ತರುವಾಯ ಪರಮಹಂಸರು ಆವೇಶಾಗ್ನಿ ಪೂರ್ಣವಾದ ವಚನ ವರ್ಷವನ್ನು ಕರೆದರು. ಅವರ ಮುಖ ಉದ್ದೀಪ್ತವಾಗಿತ್ತು. ಅಲ್ಲಿದ್ದವರೆಲ್ಲರೂ ಶಿಶುಗಳಂತೆ ಮೂಕರಾಗಿ ಆಲಿಸಿದರು. ಕೇಶವನು ತನ್ಮಯನಾಗಿ ಕೇಳಿದನು. ಆನೆಯನ್ನು ನೋಡಲೆಂದು ಹೋದ ಕುರುಡರ ಕಥೆ ಹೇಳಿ, ಒಬ್ಬೊಬ್ಬರು ಈಶ್ವರನ ಒಂದೊಂದು ವಿಭೂತಿಯನ್ನು ದರ್ಶಿಸಿ ಈಶ್ವರನೆಲ್ಲವೂ ಅದೊಂದೇ ವಿಭೂತಿ ಎಂದುಬಿಡುತ್ತಾರೆ; ಆಯಾ ಅಂಶದೃಷ್ಟಿಯಿಂದ ಅವರವರ ಮಾತು ಸರಿ; ಪೂರ್ಣದೃಷ್ಟಿಯಿಂದ ಮಾತ್ರ ತಪ್ಪಾಗುತ್ತದೆ; ಮಾನವನ ಕ್ಷುದ್ರಮನಸ್ಸು ಈಶ್ವರನ ಅನಂತಭಾವಗಳನ್ನು ಗರಹಿಸಲರಿಯದು; ಸಕ್ಕರೆಯ ಪರ್ವತವನ್ನೆ ಎತ್ತಿಕೊಂಡು ಬಂದನೆಂದು ತಿಳಿಯುತ್ತದೆ. ಈಶ್ವರ ಕೃಪೆಯಿಲ್ಲದೆ. ಏನೂ ಸಾಧ್ಯವಿಲ್ಲ – ಎಂದು ನಾನಾ ವಿಧವಾಗಿ ಬೋಧಿಸಿದರು. ಅವರ ಮಾತಿನಲ್ಲಿ ಮಿಂಚಿನ ಶಕ್ತಿಯಿತ್ತು; ವ್ಯಕ್ತಿತ್ವದಲ್ಲಿ ಭವ್ಯವಾದ ಓಜಸ್ಸಿತ್ತು. ಬ್ರಾಹ್ಮಸಮಾಜದ ಪ್ರಧಾನಾಚಾರ್ಯನು ಸ್ತಂಭೀಭೂತನಾದನು. ಪರಮಹಂಸರ ಮುಂದೆ ತಾನೊಂದು ಶಿಶು ಎಂದು ಭಾವಿಸಿದನು. ಬೀಳ್ಕೊಳ್ಳುವಾಗ ಗುರುದೇವನ ಕೇಶವನನ್ನು ಕುರಿತು “ನಿನ್ನ ಬಾಲ ಬಿದ್ದು ಹೋಗಿದೆ” ಎಂದನು. ಅದನ್ನು ಕೇಳಿ ತಮ್ಮ ಆಚಾರ್ಯವರ್ಯನಿಗೆ ಅವಮಾನವಾಯಿತೆಂದು ಅಲ್ಲಿದ್ದರೆಲ್ಲರೂ ಅಪ್ರತಿಭರಾದರು. ಪರಮಹಂಸರು ಮುಗುಳುನಗೆ ನಕ್ಕು ತಮ್ಮ ಮಾತಿನ ಅಭಿಪ್ರಾಯವನ್ನು ವಿವರಿಸಿದರು.”ಕೆರೆಗಳಲ್ಲಿ ಗೊದಮಟ್ಟೆಗಳನ್ನು ನೀವು ನೋಡಿರಬಹುದು. ಬಾಲವಿರುವವರೆಗೆ ಅವು ನೆಲದಮೇಲೆ ಸಂಚರಿಸಲಾರವು. ಬಾಲ ಬಿದ್ದುಹೋದಮೇಲೆ ನೀರಿನಲ್ಲಿಯೂ ನೆಲದಲ್ಲಿಯೂ ಬದುಕಬಲ್ಲುವು. ಕೇಶವ, ನಿನ್ನ ಮನಸ್ಸು ಈಗ ಆ ಸ್ಥಿತಿಯಲ್ಲಿದೆ – ಪ್ರಪಂಚದಲ್ಲಿಯೂ ಇದ್ದು ಈಶ್ವರನಲ್ಲಿಯೂ ಇರಬಲ್ಲೆ.”

ಪ್ರಥಮದರ್ಶನವಾದ ದಿನದಿಂದ ಕೇಶವನು ಗುದೇವನನ್ನು ಪುನಃ ಪುನಃ ನೋಡಲಾರಂಭಿಸಿದನು. ಬ್ರಾಹ್ಮಸಮಾಜದ ಉತ್ಸವಗಳಿಗೆ ಪರಮಹಂಸರನ್ನು ಎಷ್ಟೋ ಬಾರಿ ಆಹ್ವಾನಿಸಿದನು. ಅವರಿಬ್ಬರ ಮೈತ್ರಿ ಗಾಢವಾಯಿತು. ಕೇಶವನು ಶ್ರೀರಾಮಕೃಷ್ಣರ ಮಹಿಮೆಯನ್ನು ಪ್ರಾರ್ಥನಾಮಂದಿರಗಳಲ್ಲಿಯೂ ಉಪಾಸನೆಗಳಲ್ಲಿಯೂ ಉಪದೇಶಗಳಲ್ಲಿಯೂ ಉಪನ್ಯಾಸಗಳಲ್ಲಿಯೂ ಪತ್ರಿಕಾ ಲೇಖನಗಳಲ್ಲಿಯೂ ಮಿತ್ರರ ಸಂಭಾಷಣೆಗಳಲ್ಲಿಯೂ ಭಾವಪೂರ್ವಕವಾಗಿ ಪ್ರಚುರಪಡಿಸಿದನು. ಪರಮಹಂಸರ ಯಶಸ್ಸಿಗಾಗಿ ತನ್ನ ಕೀರ್ತಿಯನ್ನೆ ಸಂಚಕಾರಕೊಟ್ಟನು. ಬ್ರಾಹ್ಮಸಮಾಜಕ್ಕೆ ಮಹಾ ಆಚಾರ್ಯನಾಗಿ, ವಿದ್ವತ್ತಿನಲ್ಲಿಯೂ ಯಶಸ್ಸಿನಲ್ಲಿಯೂ ಮಹಾ ಶ್ರೀಮಂತನಾಗಿ, ಅನೇಕ ಶಿಷ್ಯಪರಿವೃತನಾಗಿದ್ದ ಕೇಶವನು ಹೆಸರಿಲ್ಲದ, ಗ್ರಂಥವಿದ್ಯೆಯಿಲ್ಲದ, ಗೀರ್ವಾಣಭಾಷೆಯು ಬಾರದ, ಬಂಗಾಳಿಭಾಷೆಯೂ ಕುರುಡುಕುರುಡಾಗಿದ್ದ ಪರಮಹಂಸರ ಪದತಲದಲ್ಲಿ ಕುಳಿತುದು ಆತನ ಔದಾರ್ಯದ ವೈಶಾಲ್ಯವನ್ನೂ ನಮ್ರತೆಯ ಅಗಾಧತೆಯನ್ನೂ ಸೂಚಿಸುತ್ತದೆ. ಆತನ ಮಹನುಭಾವತೆಗೆ ಪರಿಧಿಯೆಲ್ಲಿ? ಕಾರಣವೇನೆಂದರೆ – ಗುರುದೇವನಲ್ಲಿ ತಾನು ಬಹುಕಾಲದಿಂದ ಹುಡುಕುತ್ತಿದ್ದ ಪರಂಜ್ಯೋತಿಯ ದರ್ಶನವಾಯಿತು.

ಶ್ರೀರಾಮಕೃಷ್ಣರ ಸಂಸರ್ಗದಿಂದ ಕೇಶವನ ಬ್ರಾಹ್ಮಸಮಾಜದಲ್ಲಿ ನೂತನ ಚೇತನ ಸಂಚಾರವಾಯಿತು. ಈಶ್ವರನನ್ನು ಜಗನ್ಮಾತೆ ತಾಯಿಯೆಂಬ ಮಧುರನಾಮದಿಂದ ಸಂಬೋಧಿಸತೊಡಗಿದರು. ಪರಮತಖಂಡನೆ ಬಾಯಿ ಮುಚ್ಚಿತು. ಸರ್ವಧರ್ಮಸಮನ್ವಯತತ್ತ್ವ ಪ್ರಚುರವಾಯಿತು. ಅಷ್ಟೇ ಅಲ್ಲದೆ ಪರಮಹಂಸರ ವಿಮರ್ಶೆಯಿಂದಲೂ ಉಪದೇಶದಿಂದಲೂ ಬ್ರಾಹ್ಮಸಮಾಜಿಗಳು ಧನ್ಯರಾದರು. ಏಕೆಂದರೆ, ಅವರ ನಾಲಗೆಯಲ್ಲಿ ಬೆಂಕಿಯಿತ್ತು, ಮಳೆಯೂ ಇತ್ತು.

ಪರಮಹಂಸರು ಮೊದಲನೆಯ ಸಾರಿ ಬ್ರಾಹ್ಮಸಮಾಜಕ್ಕೆ ಹೋದಾಗ ಆಚಾರ್ಯನು “ಧ್ಯಾನಮಾಡೋಣ” ಎಂದು ನೆರೆದ ಶಿಷ್ಯರಿಗೆ ಹೇಳಿದನು. ಪರಮಹಂಸರು ಭಕ್ತರೆಲ್ಲರೂ ಬಹಳ ಕಾಲ ಧ್ಯಾನಲೀನರಾಗುವರೇನೊ ಎಂದು ತಿಳಿದಿದ್ದರು. ಆದರೆ ನಾಲ್ಕೈದು ನಿಮಿಷಗಳಲ್ಲಿಯೆ ಎಲ್ಲರೂ ಕಣ್ಣು ತೆರೆದು ಮೊದಲಿನಂತೆ ಮಾತಿಗೆ ತೊಡಗಿದರು. ಪರಮಹಂಸರಿಗೆ ಆಶ್ಚರ್ಯವಾಯಿತು. ಇಷ್ಟು ಸ್ವಲ್ಪದರಲ್ಲಿಯೆ ಯಾರಿಗಾದರೂ ಈಶ್ವರದರ್ಶನವಾಗುವುದೆ ಎಂದು! ಎಲ್ಲರೂ ಮಂದಿರವನ್ನು ಬಿಟ್ಟಮೇಲೆ ಕೇಶವನಿಗೆ ಹೇಳಿದರು: “ಎಲ್ಲರೂ ಕಣ್ಣು ಮುಚ್ಚಿ ಕುಳಿತುದನ್ನು ಕಂಡೆ. ನನಗೇನು ನೆನಪಿಗೆ ಬಂತು, ಹೇಳಲೇನು? ದಕ್ಷಿಣೇಶ್ವರದ ತೋಟದಲ್ಲಿ ಕೆಲವು ಸಾರಿ ನೂರಾರು ಕಪಿಗಳು ಮರದಮೇಲೆ ನಿಶ್ಚಲವಾಗಿ ಮುಗ್ಧತೆಯೆ ಮೂರ್ತಿವೆತ್ತಿರುವಂತೆ ಕುಳಿತಿರುವುದನ್ನು ನೋಡಿದ್ದೇನೆ. ಅವುಗಳೆಲ್ಲ ಇನ್ನು ಸ್ವಲ್ಪ ಹೊತ್ತಿನಲ್ಲಿ ಯಾವ ತೋಟದ ಯಾವ ಹಣ್ಣಿನ ಮರಗಳನ್ನು ಹೇಗೆ ಲೂಟಿ ಮಾಡಬೇಕು ಎಂಬುದನ್ನು ಅಲೋಚಿಸುತ್ತ ಇರುತ್ತವೆ. ನಿನ್ನ ಶಿಷ್ಯರ ಧ್ಯಾನವೂ ಅದಕ್ಕಿಂತ ಹೆಚ್ಚಾಗೇನೂ ಪ್ರಮಾದಕರವಾಗಿರುವಂತೆ ತೋರಲಿಲ್ಲ!”

ಇನ್ನೊಂದು ಸಾರಿ ಸಮಾಜದಲ್ಲಿ “ಸರ್ವದಾ ಈಶ್ವರಧ್ಯಾನ ಮಾಡಬೇಕು” ಎಂಬರ್ಥದ ಗೀತೆಯೊಂದನ್ನು ಹಾಡುತ್ತಿದ್ದರು. ಪರಮಹಂಸರು ನಡುವೆ ಬಾಯಿ ಹಾಕಿ “ನೀವು ಆ ಗೀತೆಯನ್ನು ಸ್ವಲ್ಪ ಬದಲಾಯಿಸಿಕೊಳ್ಳಬೇಕು. ದಿನಕ್ಕೆ ಎರಡೇ ಸಾರಿ ಆತನನ್ನು ಪ್ರಾರ್ಥಿಸಿ ಪೂಜಿಸಿ ಎಂದಿದ್ದರೆ ಸಾಕು. ನೀವೇನು ಮಾಡುತ್ತಿದ್ದೀರೊ ಅದನ್ನೇ ಹೇಳಿ. ಈಶ್ವರನೊಡನೆ ಈ ಚೌಕಾಸಿ ಏಕೆ?” ಎಂದರು.

ಬ್ರಾಹ್ಮಸಮಾಜಿಗಳು ವಿಗ್ರಹಾರಾಧನೆಯನ್ನು ಹಳಿಯುತ್ತಿದ್ದರೂ ಈಶ್ವರನ ಐಶ್ವರ್ಯಗಳ ನಾಮಮಾಲಿಕೆಯನ್ನು ಕೀರ್ತಿಸಿ ಸ್ತುತಿಸುತ್ತಿದ್ದರು. ಒಂದು ದಿನ ಪರಮಹಂಸರು ಕೇಶವನು ಹಾಗೆ ಮಾಡುವುದನ್ನು ಆಲಿಸಿ ಇಂತೆಂದರು:

“ಅಯ್ಯೋ, ಈ ಮಾರುದ್ದ ಲೆಕ್ಕದ ಪಟ್ಟಿ ಏಕಯ್ಯಾ? ಪುತ್ರನೆಲ್ಲಿಯಾದರೂ ಪಿತನನ್ನು ಕುರಿತು: ‘ಅಪ್ಪಾ ನಿನಗೆ ನೂರು ಮನೆಗಳಿವೆ; ಇನ್ನೂರು ಎಕರೆ ಜಮೀನಿದೆ; ಸಾವಿರ ಕುದುರೆಗಳಿವೆ’ ಎಂದು ಕೀರ್ತನೆ ಮಾಡುತ್ತಾನೆಯೆ? ತಂದೆ ಮಗನಿಗೆ ತನ್ನ ಐಶ್ವರ್ಯವನ್ನು ಕೊಡುವುದು ಸ್ವಾಭಾವಿಕ. ನೀನು ಯಾವಾಗಲೂ ಈಶ್ವರನ ದಾನಗಳನ್ನೇ ಅತಿಶಯವೆಂದು ಹೊಗಳುತ್ತಿದ್ದರೆ ಎಂದಿಗೂ ಆತನೊಡನೆ ಸಲಿಗೆಯಿಂದರಲಾರೆ; ಎಂದಿಗೂ ಸಾಮೀಪ್ಯ ಪಡೆಯಲಾರೆ. ಅವನು ನಿನ್ನಿಂದ ದೂರವಾಗಿದ್ದಾನೆ ಎಂದು ಆಲೋಚಿಸಬೇಡ. ಅತಿ ನಿಕಟನಾಗಿದ್ದಾನೆ ಎಂದು ಚಿಂತಿಸು! …. ಅವನ ಐಶ್ವರ್ಯವನ್ನು ಆರಾಧಿಸಿದರೆ ವಿಗ್ರಹರಾಧನೆ ಮಾಡಿದಂತಾಗುವುದಿಲ್ಲವೆ?”

ಕೇಶವನು ತಾನು ವಿಗ್ರಹಾರಾಧಕನಲ್ಲವೆಂದೂ ತನ್ನ ದೇವರು ನಿರಾಕಾರನೆಂದೂ ಪ್ರತಿಭಟಿಸಿದನು. ಪರಮಹಂಸರು ಮೆಲ್ಲಗೆ ಹೇಳಿದರು:

“ದೇವರು ನಿರಾಕಾರನೂ ಹೌದು; ಸಾಕಾರನೂ ಹೌದು. ವಿಗ್ರಹಗಳೂ ಇತರ ಪ್ರತೀಕಗಳೂ ನೀನು ಆರಾಧಿಸುವ ಈಶ್ವರನ ಗುಣಗಳಷ್ಟೇ ಸತ್ಯ. ಗುಣಗಳ ಆರಾಧನೆಗೂ ವಿಗ್ರಹಗಳ ಆರಾಧನೆಗೂ ಹೆಚ್ಚು ಅಂತರವಿಲ್ಲ. ವಿಗ್ರಹ ಎಂದರೆ ಘನೀಭೂತವಾದ ಗುಣವಲ್ಲದೆ ಬೇರೆಯಲ್ಲ.”

ಇನ್ನೊಂದು ಸಾರಿ ಹೀಗೆಂದರು:

“ನೀನೇನೋ ಈಶ್ವರನ ಒಂದು ಪಕ್ಷವನ್ನೇ ವಹಿಸಿಕೊಂಡು ಪಕ್ಷಪಾತ ಮಾಡುತ್ತಿದ್ದೀಯೆ. ಆತನನ್ನು ನಾನಾವಿಧವಾಗಿ ಪೂಜಿಸಬೇಕೆಂದು ನನ್ನಾಸೆ. ಕೋಟಿ ವಿಧದಿಂದ ಪೂಜಿಸಿದರೂ ನನಗೆ  ತೃಪ್ತಿಯಾಗದು. ಹೂವು ಹಣ್ಣುಗಳನ್ನು ನಿವೇದಿಸಿ, ನಾಮಸಂಕೀರ್ತನೆಮಾಡಿ, ಏಕಾಂತದಲ್ಲಿ ಧ್ಯಾನಿಸಿ, ದಿವ್ಯಾನಂದದಲ್ಲಿ ಮುಳುಗಿ ತೇಲಿ ನಲಿದಾಡಿ ಆತನನ್ನು ಪೂಜಿಸಬೇಕು ಎಂದು ನನ್ನ ಬಯಕೆ. ಈಶ್ವರನು ನಿರಾಕಾರನೆಂದು ನಂಬುವವರೂ ಸಾಕಾರವನ್ನು ಪೂಜಿಸುವರಂತೆ ಆತನನ್ನು ಹೊಂದುತ್ತಾರೆ. ಮುಖ್ಯವಾಗಿ ಬೇಕಾದುದೆಂದರೆ – ಶ್ರದ್ಧಾಭಕ್ತಿ.”

“ನೀರಿಗೇನೊ ರೂಪವಿಲ್ಲ, ನಿಜ. ಆದರೇ ಅದು ಶೈತ್ಯದಿಂದ ಗಡ್ಡೆ ಗಟ್ಟಿದರೆ ಆಗ ರೂಪವಿದೆ. ಹಾಗೆಯೆ ನಿರಾಕಾರಬ್ರಹ್ಮವು ಸಾಧಕನ ಭಕ್ತಿಯ ಪ್ರಭಾವದಿಂದ ವಿವಿಧ ರೂಪಗಳನ್ನು ತಾಳುತ್ತದೆ. ಗೊಂಬೆಯ ಹಣ್ಣು ನಿಜವಾದ ಹಣ್ಣನ್ನು ಮನಸ್ಸಿಗೆ ತರುವಂತೆ, ಭಾವಚಿತ್ರವು ತೀರಿಹೋದ ತಂದೆಯ ನೆನಪು ತರುವಂತೆ, ಮೂರ್ತಿಗಳೂ ಪ್ರತೀಕಗಳೂ ಭಕ್ತನಿಗೆ ನಿಜವಾದ ದೇವರ ದರ್ಶನವಾಗಲು ನೆರವಾಗುತ್ತವೆ.”

ಕೇಶವನು ಸಾಯಂಕಾಲದ ಹೊತ್ತು ತನ್ನ ನೌಕೆಯಲ್ಲಿ ದಕ್ಷಿಣೇಶ್ವರಕ್ಕೆ ಬಂದು ಪರಮಹಂಸರನ್ನು ಕರೆದುಕೊಂಡು ಗಂಗಾನದಿಯಲ್ಲಿ ಸಂಚಾರ ಹೋಗುತ್ತಿದ್ದರು. ಅವನೊಡನೆ ಶಿಷ್ಯರೂ ಬರುತ್ತಿದ್ದರು. ಎಲ್ಲರೂ ಪರಮಹಂಸರ ವಚನಗಳನ್ನು ಬಾಯಿಬಿಟ್ಟುಕೊಂಡು ಎವೆಯಿಕ್ಕದೆ ಕೇಳುತ್ತಿದ್ದರು. ಒಂದೊಂದು ಸಾರಿ ಮಂದಿಗೆ ದೋಣಿಯೆ ಸಾಕಾಗುತ್ತಿರಲಿಲ್ಲ. ಗುರುದೇವನ ಸಾನ್ನಿಧ್ಯ, ತೇಜಸ್ಸು, ಮಧುರವಾಣಿ, ಮುಗ್ಧನಯನ ದೃಷ್ಟಿ, ಮರಳುಮಾಡುವ ಮುಗುಳ್ನಗೆ, ಪ್ರೌಢವಾಕ್ಯ ಸರಣಿ – ಇವುಗಳ ಜೇನಿನಲ್ಲಿ ಮರೆತು ಮುಳುಗುತ್ತಿದ್ದರು.

ಒಂದು ಸಂಜೆ ನೌಕಾಯಾತ್ರೆಯಲ್ಲಿ ಪರಮಹಂಸರು ಅದು ಇದು ಮಾತಾಡುತ್ತ ನಿರಾಕಾರಬ್ರಹ್ಮದ ವಿಷಯಕ್ಕೆ ಬಂದರು. ಎರಡು ಮೂರು ಸಾರಿ ‘ನಿರಾಕಾರ’ ‘ನಿರಾಕಾರ’ ಎಂದು ನುಡಿದು ಸಮಾಧಿಸ್ಥರಾದರು.”ಮೊದಲು ದೇಹವು ಸಡಿಲವಾದಂತೆ ತೋರಿ ಕಡೆಗೆ ನಿಷ್ಪಂದ ಸ್ಥಿರವಾಯಿತು. ಅಂಗೋಪಾಂಗಗಳಲ್ಲಿ ಎಲ್ಲಿಯೂ ಯಾವ ಚಲನೆಯೂ ಕಂಡುಬರಲಿಲ್ಲ. ಕೈಗಳೆರಡೂ ತೊಡೆಯ ಮೇಲೆ ಮಲಗಿದ್ದವು; ಬೆರಳು ನಸು ಹೆಣೆದುಕೊಂಡಿದ್ದವು. ದೇಹ ಸಂಪೂರ್ಣ ಅಚಲವಾಗಿದ್ದರೂ ಪದ್ಮಾಸನವು ಸುಲಭವಾಗಿತ್ತು. ಮುಖಮಂಡಲ ಸ್ವಲ್ಪ ಊರ್ಧ್ವಮುಖವಾಗಿ ಪ್ರಶಾಂತವಾಗಿತ್ತು. ಕಣ್ಣುಗಳು ಮುಚ್ಚಿದಂತೆ ಕಂಡರೂ ನಸು ಬಿಟ್ಟಿದ್ದುವು. ದೃಷ್ಟಿ ಅತ್ತಿತ್ತ ಅಲುಗದೆ ಸ್ಥಿರವಾಗಿತ್ತು. ತುಟಿಗಳು ಒಂದಿನಿತು ತೆರೆದುಕೊಂಡು ಯಾವುದೋ ಅನಿರ್ವಚನೀಯ  ಆನಂದದಿಂದ ಮಂದಸ್ಮಿತವಾದಂತಿದ್ದವು. ಧವಳ ದಂತಪಂಕ್ತಿ ಸ್ವಲ್ಪ ತೋರುತ್ತಿತ್ತು. ಯಾವ ಭಾವಚಿತ್ರವೂ ಪ್ರತಿಬಿಂಬಸಲರಿಯದ ಕಮನೀಯತೆ  ಆ ವಿಸ್ಮಿತ ಸ್ಮಿತದಲ್ಲಿ ರಂಜಿಸಿತ್ತು.” ಉಳಿದವರೆಲ್ಲರೂ ಭಗವನ್ನಾಮಸಂಕೀರ್ತನೆ ಮಾಡಿದರು. “ಕಣ್ಣು ತೆರೆದು ಎಲ್ಲಿಯೋ ಇದ್ದಂತೆ ಬೆರಗಾಗಿ ನೋಡಿದರು, ಕೀರ್ತನೆ ನಿಂತಿತು. ಪರಮಹಂಸರು ನಮ್ಮನ್ನೆಲ್ಲ ನೋಡಿ ‘ಯಾರಿವರು?’ ಎಂದರು. ತರುವಾಯ ತಮ್ಮ ನೆತ್ತಿಯನ್ನು ತಾವೇ ತಟ್ಟಿಕೊಳ್ಳುತ್ತ ‘ಕೆಳಗಿಳಿ! ಕೆಳಗಿಳಿ!’ ಎಂದುಕೊಂಡರು. ಸ್ವಲ್ಪಹೊತ್ತಾದ ಮೇಲೆ ಬಾಹ್ಯಪ್ರಜ್ಞೆಯುಂಟಾಗಿ ಕಾಳಿಯನ್ನು ಕುರಿತು ಸವಿದನಿಯಲ್ಲಿ ಒಂದು ಕೀರ್ತನೆ ಹಾಡಿದರು.”

ಕಡೆಗೆ ಹೇಳಿದರು:

“ಜಗತ್ತು ಮಾತೆಯ ಲೀಲೆ, ಹಾರಾಡುವ ಸಾವಿರಾರು ಗಾಳಿಪಟಗಳಲ್ಲಿ ಒಂದೆರಡನ್ನು ದಾರ ಕಡಿದುಬಿಡುವುದು ಆಕೆಯ ಲೀಲೆ. ಕಣ್ಣು ಮಿಟುಕಿಸಿ ಹೇಳುತ್ತಾಳೆ ಮನುಷ್ಯನಿಗೆ: ‘ಹೋಗು, ಸಂಸಾರಮಾಡು; ನಾನು ಬೇರೆ ಕೆಲಸ ಹೇಳುವವರೆಗೆ ಅದನ್ನು ಮಾಡು’ – ಕೇಶವಾ, ನೀನು ಸಂಸಾರದಲ್ಲಿದ್ದೀಯೆ. ಇರು ಅಲ್ಲಿಯೆ! ಅದನ್ನು ಬಿಡಲು ನಿನಗೆ ಹಕ್ಕಿಲ್ಲ. ನೀನು ಏನಾಗಿದ್ದೇಯೋ ಅದೇ ಲೇಸು! ತುಸು ಹಿತ್ತಾಳೆ ಮಿಶ್ರವಾದ ಹೊನ್ನು!…. ಪಗಡೆ ಆಡುವುದಿಲ್ಲವೇ ಕಾಯಿಗಳೆಲ್ಲ ಹಣ್ಣಾಗುವವರೆಗೆ? ನನ್ನ ಕಾಯಿಗಳೆಲ್ಲ ಹಣ್ಣಾಗಿವೆ. ನನ್ನಾಟ ಪೂರೈಸಿದೆ. ಆದರೆ ನೀವೆಲ್ಲ ಜಾಣರು. ಎಲ್ಲ ಕಾಯಿಗಳನ್ನೂ ಹಣ್ಣಿನ ಮನೆಗೆ ಸೇರಿಸಿಲ್ಲ. ಆದ್ದರಿಂದ ಇನ್ನೂ ಆಡಬಹುದು…. ನಿಜವಾಗಿ ನೋಡಿದರೆ, ಸಂಸಾರದಲ್ಲಿ ಇದ್ದರೆ ತಾನೆ ಏನು? ಈಶ್ವರ ಚಿಂತನೆ ಇದ್ದರಾಯಿತು.”

ಶ್ರೀರಾಮಕೃಷ್ಣರು ಇಂತಹ ನೂರಾರು ಹಿತವಚನಗಳಿಂದ ಯುಕ್ತಿವಾದವೆಂಬ ಕುಳಿರ್ಗಾಳಿಯಲ್ಲಿ ಮರವಟ್ಟು ಹೋಗಿದ್ದ ಕೇಶವನ ಮತ್ತು ಆತನ ಅನುಯಾಯಿಗಳ ಅಂಗೋಪಾಂಗಗಳಿಗೆ ಸೆಕೆ ಕೊಟ್ಟು ಅವುಗಳಲ್ಲಿ ಚೇತನ ಸಂಚಾರವಾಗಿ ಸಜೀವವಾಗುವಂತೆ ಮಾಡಿದರು. ಕೇವಲ ವಾದನಿರತರಾಗಿದ್ದ ಅವರನ್ನು ಸ್ಮೃತಿವಿಭ್ರಮಕಾರಿಯಾದ ಶಬ್ದಜಾಲ ಮಹಾರಣ್ಯದಿಂದ ಹೊರಗೆ ತಂದರು. ರಾಮ, ಕೃಷ್ಣ, ಬುದ್ಧ, ಯೇಸು, ಚೈತನ್ಯ ಎಲ್ಲರೂ ಅಭಿನ್ನ ವಿಶ್ವಶಕ್ತಿಯ ಭಿನ್ನರೂಪಗಳೆಂದು ಮನಗಾಣಿಸಿದರು. ಕೇಶವಚಂದ್ರಸೇನನಂತೂ ತನ್ನ ಅಂತ್ಯಕಾಲದಲ್ಲಿ ಸಂಪೂರ್ಣವಾಗಿ ವ್ಯತ್ಯಾಸ ಹೊಂದಿದ್ದನು. ಪರಮಹಂಸರ ಜಗನ್ಮಾತೆ ಅವನನ್ನು ನುಂಗಿಬಿಟ್ಟಿದ್ದಳು. ಕೇಶವನು ರೋಗಶಯ್ಯೆಯಲ್ಲಿ ಮೃತ್ಯುಮುಖನಾಗಿದ್ದಾಗ ಪರಮಹಂಸರು ಅವನನ್ನು ನೋಡಲು ಹೋದರು.”-ಆಚಾರ್ಯನು ಯಾವಾಗಲೂ ಜಗನ್ಮಾತೆಯ ಹತ್ತಿರ ಏನೇನೋ ಮಾತಾಡುತ್ತಿರುತ್ತಾನೆ” ಎಂದು ಹೇಳಿದ ಅನುಯಾಯಿಗಳ ಮಾತು ಕೇಳಿ ಪರಮಹಂಸರು ಆನಂದ ನಿಮಗ್ನರಾದರು. ತರುವಾಯ ಜರುಗಿದ ಹೃದಯವಿದ್ರಾವಕವಾದ ದೃಶ್ಯವು ಕೇಶವ ಪರಮಹಂಸರ ಸಂಬಂಧದಲ್ಲಿ ಒಂದು ಅನರ್ಘ್ಯರತ್ನದಂತಿದೆ. ಶ್ರೀರಾಮಕೃಷ್ಣರು ಕೇಶವನ  ರುಗ್ಣ ಶಯ್ಯೆಯಿದ್ದ ಕೊಠಡಿಗೆ ಹೋದರು. ಮೃತ್ಯಮುಖನಾದ ಕೇಶವ ಚಂದ್ರನು ಅತಿ ದಾರುಣವಾಗಿ ಕೆಮ್ಮುತ್ತ ಕೆಮ್ಮುತ್ತ ಏಳಲಾರದೆ ಎದ್ದು ಗೋಡೆಯನ್ನು ಆತುಕೊಳ್ಳುತ್ತ ತೂಗಿ ತೊನೆದು ತತ್ತರಿಸುತ್ತ ಬಂದು ಗುರುದೇವನ ಚರಣತಲದಲ್ಲಿ ಮಣಿದು ಉರುಳಿಬಿಟ್ಟನು. ಗುರುದೇವನು ಇನ್ನೂ ಭಾವದಲ್ಲಿಯೆ ಇದ್ದನು ತನ್ನೊಳಗೆ ತಾನೆ ಏನನ್ನೋ  ಹೇಳಿಕೊಳ್ಳುತ್ತಿದ್ದನು. ರೋಗಸಂತಪ್ತನಾದ ಕೇಶವನು ಮೌನವಾಗಿ ಆ ದೇವಮಾನವನ ಸುಖಶೀತಲ ವಚನಾಮೃತವನ್ನು ಪಾನ ಮಾಡಿದನು. ಸ್ವಲ್ಪ ಹೊತ್ತಿನಲ್ಲಿ ಪರಮಹಂಸರು ಎಚ್ಚತ್ತು ಸುತ್ತಲೂ ಕಣ್ಣುತಿರುಗಿಸಿ ಅಲಂಕೃತವಾಗಿದ್ದ ಸುಂದರ ಮಂದಿರವನ್ನು ನೋಡಿ ಮುಗುಳುನಗೆ ನಕ್ಕು, ತಮ್ಮಲ್ಲಿಯೆ “ಹೌದು, ಆಗ ಇವೆಲ್ಲ ಬೇಕಾಗಿತ್ತು; ಈಗ ಅವುಗಳಿಂದ ಏನೂ ಉಪಯೋಗವಿಲ್ಲ…. ತಾಯಿ, ನೀನೂ ಇಲ್ಲಿಗೆ ಬಂದಿರುವಿಯೇನು? ನಿನ್ನದೆಂತಹ ಭುವನಮೋಹನ ಮೂರ್ತಿ!…” ಎನ್ನುತ್ತಿರಲು ಕೇಶವನು ನಮಸ್ಕರಿಸಿ “ನಾನಲ್ಲಿಯೆ ಇದ್ದೇನೆ” ಎಂದನು. ಪರಮಹಂಸರು ಆತನ ಹೃದಯದಲ್ಲಿ ನಿಗೂಢವಾಗಿದ್ದ ಪ್ರಚ್ಛನ್ನ ತುಮುಲತೆಯನ್ನು ನಿಮಿಷಾರ್ಧದಲ್ಲಿ ತಿಳಿದುಕೊಂಡು ಮೃದುವಾಗಿ ಹೇಳಿದರು:

‘ನಿನಗೆ ಕಾಯಿಲೆಯಾಗಿದೆ. ಅದು ಸುಮ್ಮನೆ ಬಂದಿಲ್ಲ. ನಿನ್ನ ಶರೀರವು ಈಶ್ವರಪ್ರೇಮದ ಪ್ರಚಂಡತರಂಗಗಳಿಂದ ತಾಡಿತವಾಗಿದೆ. ನಿನ್ನ ಭಾವ ತೀಕ್ಷ್ಣತೆಗೆ ನಿನಗೆ ಬಂದಿರುವ ರೋಗವೆ ಸಾಕ್ಷಿ. ಭಾವಾವೇಗದಿಂದ ಶರೀರಕ್ಕೆ ಎಷ್ಟು ಅಪಾಯವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಗಂಗಾ ನದಿಯಲ್ಲಿ ಒಂದು ನಾವೆ ಹೋದರೆ ಆಗ ಏನೂ ಗೊತ್ತಾಗುವುದಿಲ್ಲ. ತುಸು ಹೊತ್ತಿನ ಮೇಲೆ ಅಲೆ ದಡವನ್ನು ಅಪ್ಪಳಿಸುತ್ತದೆ. ಕೊರೆದು ಕೆಡಹುತ್ತದೆ. ಈಶ್ವರ ಭಕ್ತಿಯ ಬೆಂಕಿ ಬಿದ್ದಿತೆಂದರೆ ಮೊದಲು ರಾಗ ದ್ವೇಷಗಳನ್ನು ಸುಡುತ್ತದೆ. ಆಮೇಲೆ ಅಹಂಕಾರವನ್ನು ದಹಿಸುತ್ತದೆ, ಕಡೆಗೆ ನಶ್ವರ ಶರೀರವನ್ನೆ ಭಸ್ಮಮಾಡಿಬಿಡುತ್ತದೆ.. . ನಿನ್ನ ರುಜೆ ಇನ್ನೂ ಕೊನೆಗೊಂಡಿಲ್ಲ.. . ರೋಗ ಗುಣವಾದ ಮೇಲೆಯೆ ವೈದ್ಯನು ನಿನ್ನನ್ನು ಹೊರಗೆ ಬಿಡುತ್ತಾನೆ. ಆಸ್ಪತ್ರೆಗೆ ಸೇರಿದ ಮೇಲೆ ಹೊರಗೆ ಬರಲು ರೋಗಿಯ ಇಚ್ಛೆಯಲ್ಲ. ರೋಗ ಸಂಪೂರ್ಣ ಗುಣಹೊಂದಿದ ಮೇಲೆಯೆ ರೋಗಿಗೆ ಮುಕ್ತಿ. ತೋಟಗಾರನು ಗುಲಾಬಿ ಗಿಡದ ಬುಡವನ್ನು ಅಗೆಯುತ್ತಾನೆ ಬೇರಿಗೆ ಇಬ್ಬನಿ ಬೀಳಲಿ ಎಂದು. ನಿನ್ನ ವಿಷಯವೂ ಹಾಗೆಯೆ ಎಂದು ಕಾಣುತ್ತದೆ. ’

ಕೇಶವನು ರೋಗದ ಯಾತನೆಯನ್ನು ಮರೆತು ಸಂತೋಷಚಿತ್ತನಾದನು. ಗುರುದೇವನ ವಚನಾಮೃತ ಮತ್ತು ಮಂದಸ್ಮಿತಗಳ ಮಾಯಾಮಯ ಗಾಂಭೀರ್ಯ ಮಂದಿರವನ್ನೆಲ್ಲ ಬೆಳಗಿತ್ತು.

ಪರಮಹಂಸರು ಮತ್ತೆ ಹೇಳಿದರು –

“ನಿನಗೆ ಕಾಯಿಲೆಯಾದಾಗಲೆಲ್ಲ ನಾನು ಉದ್ವಿಗ್ನನಾಗುತ್ತೇನೆ. ಹಿಂದೊಂದು ಸಾರಿ ನೀನು ಕಾಯಿಲೆ ಬಿದ್ದಾಗ ನಾನು ಕಂಬನಿಗರೆದು ಮಾತೆಯನ್ನು ಕುರಿತು ‘ಅಮ್ಮಾ, ನಾನು ಇನ್ನಾರೊಡನೆ ಮಾತಾಡಲಿ ಕೇಶವನಿಗೆ ಏನಾದರೂ ಕೇಡಾದರೆ?’ ಎಂದು ಅಳುತ್ತಿದ್ದೆ”.

ಬೀಳ್ಕೊಳ್ಳುವಾಗ ಗುರುದೇವನು ಆಚಾರ್ಯನನ್ನು ಕುರಿತು ಗಂಭೀರವಾಣಿಯಿಂದ “ಹೆಂಗಸರು ಮಕ್ಕಳೊಡನೆ ಹೆಚ್ಚಾಗಿರಬೇಡ, ರೋಗವಿನ್ನೂ ಪ್ರಬಲವಾಗುತ್ತದೆ. ಈಶ್ವರ ವಿಷಯಕವಾದ ಮಾತುಕತೆಗಳನ್ನೆ ಕೇಳುತ್ತಿರು; ಅದರಿಂದ ಒಳ್ಳೆಯದಾಗುತ್ತದೆ.” ಎಂದು ಬುದ್ಧಿ ಹೇಳಿದನು. ಇಹಲೋಕವನ್ನು ಬಿಟ್ಟು ಹೋಗುವ ಸಮಯದಲ್ಲಿ ಶ್ರೀರಾಮಕೃಷ್ಣ ಪರಮಹಂಸರ ಸಾನ್ನಿಧ್ಯ ಸಂವಾದ ಸದುಪದೇಶಗಳು ಲಭಿಸುದುದೇ ಶ್ರೀಯುತ ಕೇಶವ ಚಂದ್ರಸೇನನ ಗಾಢಭಕ್ತಿಗೆ ದೊಡ್ಡ ಸಾಕ್ಷಿಯಲ್ಲವೆ?

ಕೇಶವನಲ್ಲದೆ ಇತರ ಬ್ರಾಹ್ಮಸಮಾಜಿಗಳೂ ಪರಮಹಂಸರಲ್ಲಿಗೆ ಬಂದು ಅವರ ಪುಣ್ಯಸಂಗದಿಂದ ಕೃತಾರ್ಥರಾದರು. ಅವರಲ್ಲಿ ಮುಖ್ಯರಾದವರೆಂದರೆ – ಪ್ರತಾಪಚಂದ್ರ ಮುಜುಮದಾರ, ವಿಜಯಕೃಷ್ಣ ಗೋಸ್ವಾಮಿ, ಪಂಡಿತ ಶಿವನಾಥಶಾಸ್ತ್ರಿ, ತ್ರೈಲೋಕ್ಯನಾಥ ಸಂನ್ಯಾಲ.

ಪ್ರತಾಪಚಂದ್ರನು ಪಾಶ್ಚಾತ್ಯದೇಶಗಳ ವಿಶ್ವವಿದ್ಯಾನಿಲಯಗಳಲ್ಲಿ ಓದಿ ಕೃತವಿದ್ಯನಾಗಿದ್ದನು. ಯುಕ್ತಿವಾದಿಯಾಗಿದ್ದ ಆತನು ಭಕ್ತಿಯನ್ನು ಸಂಯಮ ಹೀನ ಭಾವೋನ್ಮಾದವೆಂದು ಪರಿಗಣಿಸಿ ಹೇಸಿದ್ದನು. ಆದರೆ ಶ್ರೀರಾಮಕೃಷ್ಣರ ಸಂಸರ್ಗದಿಂದ ಆತನ ಅಭಿಪ್ರಾಯಗಳೆಲ್ಲವೂ ವ್ಯತ್ಯಾಸ ಹೊಂದಿದುವು. ಆತನಿಗೆ ಗುದೇವನಲ್ಲಿದ್ದ ಗೌರವವು ಆರಾಧನೆಗೆ ಸಮನಾಗಿತ್ತು. ಶ್ರೀ ರಾಮಕೃಷ್ಣರ ವಿಷಯಕವಾದ ತನ್ನ ಅನುಭವಗಳನ್ನು ಭಾವಪೂರ್ಣವಾದ ಉದ್ದಾಮ ಭಾಷೆಯಲ್ಲಿ ಲೇಖನವಾಗಿ ಬರೆದು ಇಂಗ್ಲೀಷ್ ಮಾಸಪತ್ರಿಕೆಯೊಂದರಲ್ಲಿ ಪ್ರಕಟಿಸಿದನು.

ವಿಜಯಕೃಷ್ಣ ಗೋಸ್ವಾಮಿ ಸಂಪ್ರದಾಯ ಬ್ರಾಹ್ಮಣಕುಲದಲ್ಲಿ ಬೆಳೆದವನು. ಚಿಕ್ಕಂದಿನಲ್ಲಿಯೆ ಆತನಿಗೆ ಧರ್ಮತೃಷ್ಣೆಯುಂಟಾಗಿ ಮಹರ್ಷಿ ದೇವೇಂದ್ರನಾಥ ಠಾಕೂರನ ಪ್ರೇರಣೆಯಿಂದ ಬ್ರಾಹ್ಮಸಮಾಜಕ್ಕೆ ಸೇರಿದನು. ಆತನ ಮೇಲೆ ಕೇಶವಚಂದ್ರಸೇನನ ಪ್ರಭಾವ ಚೆನ್ನಾಗಿತ್ತು. ಕಡೆಗೆ ಕೇಶವನ ಅನುಯಾಯಿಯಾದನು. ಕೇಶವನಿಗೂ ಆತನಿಗೂ ಭಿನ್ನಾಭಿಪ್ರಾಯಗಳುಂಟಾಗಿ ವಿಜಯಕೃಷ್ಣನು  ಬೇರೊಂದು ಬ್ರಾಹ್ಮಸಮಾಜವನ್ನು ಸ್ಥಾಪಿಸಿ ತಾನು ಅಧ್ಯಕ್ಷನಾದನು. ಪರಮಹಂಸರನ್ನು ಕಂಡ ಮೇಲೆ ಆತನ ಬ್ರಾಹ್ಮಭಾವನೆಗಳೆಲ್ಲವೂ ರೂಪಾಂತರ ಹೊಂದಿದ್ದವು. ಆದ್ದರಿಂದ ಬ್ರಾಹ್ಮಸಮಾಜವನ್ನೆ ತ್ಯಜಿಸಿ ಸ್ವತಂತ್ರವಾಗಿ ಧರ್ಮಸಾದನೆಗೆ ಕೈಹಾಕಿದನು. ಪರಮಹಂಸರಲ್ಲಿ ಆತನ ಪೂಜ್ಯಬುದ್ಧಿ ಬೆಳೆದು ಬಂದು ಕಟ್ಟಕಡೆಗೆ ಅವರ ಭಕ್ತನಾದನು.

ವಿಜಯಕೃಷ್ಣ ಗೋಸ್ವಾಮಿ ಅಧ್ಯಕ್ಷಪದವಿಗೆ ರಾಜಿನಾಮೆ ಕೊಡಲು ಪಂಡಿತ ಶಿವನಾಥಶಾಸ್ತ್ರಿ ಪಟ್ಟವೇರಿದನು. ಶಾಸ್ತ್ರಿ ಪಾಶ್ಚಾತ್ಯ ವಿದ್ಯೆ ಸಂಸ್ಕೃತಿಗಳಲ್ಲಿ ಪ್ರವೀಣನಾಗಿದ್ದು ಅದರ ಆರಾಧಕನಾಗಿದ್ದನು. ವಿಚಾರದ ಹೆಸರಿನಲ್ಲಿ ಅರ್ಧ ಸಂದೇಹವಾದಿಯಾಗಿದ್ದನು. ಈಶ್ವರಸಾಕ್ಷಾತ್ಕಾರಕ್ಕೆ ವೈರಾಗ್ಯ ಅನಾವಶ್ಯಕವೆಂದು ಆತನ ಮತವಿತ್ತು. ಒಂದು ಸಾರಿ ಪರಮಹಂಸರಲ್ಲಿ ಈ ವಿಚಾರವನ್ನು ವಾದಿಸಿ ಸಾಧಿಸುತ್ತಿರಲು ಅವರೆಂದರು: “ತೋಟಗಾರನು ಒಂದು ಗಿಡವನ್ನು ನೆಡುವನೆಂದು ಊಹಿಸು. ಅವನೇನು ಮಾಡುತ್ತಾನೆ? ದನಗಳು ಅದನ್ನು ಹಾಳುಮಾಡದಂತೆ ಸುತ್ತಲೂ ಬೇಲಿ ಕಟ್ಟವುದಿಲ್ಲವೆ? ಗಿಡ ಮರವಾದ ಮೇಲೆ ದನಗಳು ಅದನ್ನೇನೂ ಮಾಡಲಾರವೆಂದು ತಿಳಿದು ಬೇಲಿಯನ್ನು ಕಿತ್ತೊಗೆಯುತ್ತಾನೆ. ಧರ್ಮಜೀವನ ವೃಕ್ಷದ ರಕ್ಷಣೆಯೂ ಹಾಗೆಯೆ. ಮೊದಲು ಮೊದಲು ಕಾಮಿನಿಯರಿಂದ ದೂರವಾಗಿರಬೇಕು. ಧರ್ಮದ ಗಿಡ ಚೆನ್ನಾಗಿ ಬೆಳೆದು ಮರವಾಗಿ ಬಲಿಷ್ಠವಾದ ಮೇಲೆ ಕಾಮಿನಿಯರೊಡನೆ ಇದ್ದರೂ ಅಪಾಯವಿಲ್ಲ.” ಇನ್ನೊಂದು ಸಾರಿ ಶಾಸ್ತ್ರಿ ಪರಮಹಂಸರ ಸಮಾಧಿ ಒಂದು ವಿಧವಾದ ಮೂರ್ಛೆಯಲ್ಲದೆ ಬೇರೆ ಏನೂ ಅಲ್ಲ; ಅದೊಂದು ನರಗಳ ಜಾಡ್ಯ ಎನ್ನಲು ಶ್ರೀರಾಮಕೃಷ್ಣರು ತಲೆಯಲ್ಲಾಡಿಸಿ, “ಅಲ್ಲವಯ್ಯಾ, ಶಿವನಾಥ, ನೀನು ಹಗಲಿರುಳೂ ಐಹಿಕ ಜಡವಸ್ತುಗಳನ್ನೇ ಕುರಿತು ಧ್ಯಾನ ಮಾಡುತ್ತೀಯೆ; ನಾನಾದರೂ ಚಿದ್ಘನರೂಪಿಯಾದ ಬ್ರಹ್ಮಧ್ಯಾನ ಮಾಡುತ್ತೇನೆ. ಆದರೂ ನನ್ನ ಮನೋಭಾವ ಜಾಡ್ಯ, ನಿನ್ನದು ಪರಮಜ್ಞಾನ! ಆಹಾ ಎಂತಹ ತರ್ಕಚೂಡಾಮಣಿ!” ಎಂದರು. ಶಾಸ್ತ್ರಿ ನಿರುತ್ತರನಾದನು. ಆತನು ಕ್ರಮೇಣ ಸರಿಹೋದನು. ಪರಮಹಂಸರ ಅಪ್ರತಿಮ ಜ್ಞಾನ ಭಕ್ತಿ ವೈರಾಗ್ಯಗಳು ಆತನ ವಕ್ರತೆಯನ್ನು ತಿದ್ದಿದುವು. ಆತನು ಹೀಗೆ ಬರೆದಿದ್ದಾನೆ: “ಅಂತಹ ಬೇರೊಬ್ಬ ವ್ಯಕ್ತಿಯನ್ನು ನಾನು ಎಲ್ಲೆಲ್ಲಿಯೂ ಕಂಡಿಲ್ಲ. ಆತನ ಈಶ್ವರ ದರ್ಶನಾಕಾಂಕ್ಷೆ ನಿರುಪಮವಾದುದು. ಧರ್ಮಕ್ಕಾಗಿ ಆತನು ತಪಸ್ಸು ಮಾಡಿದಂತೆ ಮಾಡುವುದು ಇತರರಿಗೆ ಅಸಾಧ್ಯ. ಆತನು ಸಾಧಕಮಾತ್ರನಲ್ಲ, ಸಿದ್ಧಪುರುಷ. ಆತನಿಗೆ ಸತ್ಯ ಸಾಕ್ಷಾತ್ಕಾರವಾಗಿರುವುದರಲ್ಲಿ ಲೇಶಮಾತ್ರವೂ ಸಂದೇಹವಿಲ್ಲ. ಆತನ ಸಾನ್ನಿಧ್ಯದಲ್ಲಿ ನನಗೆ ಧರ್ಮಜ್ಯೋತಿ ಲಭಿಸಿತು. ನಾನಾತನಿಗೆ ಚಿರಋಣಿ. ನನ್ನ ಜೀವಮಾನದಲ್ಲಿ ನನಗೆ ಅಂತಹ ಮತ್ತೊಬ್ಬ ದೇವಮಾನವನ ದರ್ಶನವಾಗಿಲ್ಲ ಎಂದು ಮುಕ್ತಕಂಠದಿಂದ ಸಾರುತ್ತೇನೆ.”