ಪುಣ್ಯಕಥೆ ಮುಂದುವರಿಯಲಿ.

ರಾಮಚಂದ್ರದತ್ತ ಮತ್ತು ಮನಮೋಹನ ಮಿತ್ರ ಎಂಬಿಬ್ಬರು ಬಂಧುಗಳು ಕಲ್ಕತ್ತೆಯ ನಿವಾಸಿಗಳು. ಇಬ್ಬರಿಗೂ ಆಫೀಸುಗಳಲ್ಲಿ ಕೆಲಸವಿತ್ತು. ರಾಮಚಂದ್ರನು ವೈದ್ಯವಿದ್ಯೆಯಲ್ಲಿ ತರಬಿಯತ್ತಾಗಿ ಕಲ್ಕತ್ತಾ ಮೆಡಿಕಲ್ ಕಾಲೇಜಿನಲ್ಲಿ ಸ್ಥಾನ ಸಂಪಾದಿಸಿದ್ದನು. ಆಗಿನ ಕಾಲದ ಇತರ ಯುವಕರಂತೆ ಆತನೂ ನರೀಶ್ವರವಾದಿಯಾಗಿದ್ದನು. ಜಗತ್ತನ್ನು ವಿವರಿಸಲು ಪ್ರಕೃತಿಯೊಂದೇ ಸಾಕು. ಈಶ್ವರನು ಬೇಕಿಲ್ಲ; ಐಹಿಕಸುಖ ಭೋಗವೇ ಜೀವನದ ಪರಮ ಆದರ್ಶ ಎಂಬುದು ಅವರ ಮತವಾಗಿತ್ತು. ಒಂದು ದಿನ ಪತ್ರಿಕೆಯೊಂದರಲ್ಲಿ ದಕ್ಷಿಣೇಶ್ವರದಲ್ಲಿ ಪರಮಹಂಸನೊಬ್ಬನಿದ್ದಾನೆ ಎಂಬ ಸಮಾಚಾರ ಪ್ರಕಟವಾಗಿತ್ತು. ಬಂಧುಗಳಿಬ್ಬರೂ ಕುತುಹೂಲದಿಂದ ಪ್ರೇರಿತರಾಗಿ ದಕ್ಷಿಣೇಶ್ವರಕ್ಕೆ ಬಂದರು. ಕ್ರಿ. ಶ. ೧೮೭೯ರಲ್ಲಿ, ಕೊಠಡಿಯಲ್ಲಿ ಶ್ರೀರಾಮಕೃಷ್ಣರೊಬ್ಬರೆ ಇದ್ದರು. ಆಗಂತುಕರನ್ನು ಅತ್ಯಾದರದಿಂದ ಸ್ವೀಕರಿಸಿ ಮಾತುಕತೆಯಾಡಿದರು. ಅಂದಿನಿಂದ ಅವರಿಬ್ಬರೂ ಗುರುದೇವನ ಭಕ್ತರಾದರು.

ಒಂದು ದಿನ ಮನಮೋಹನನು ದಕ್ಷಿಣೇಶ್ವರಕ್ಕೆ ಹೊರಡಲು ಅವನ ಅತ್ತೆ ಹೋಗಬೇಡ ಎಂದು ತಡೆದಳು. ಆದರೂ ಅವನು ಹೋದನು. ಅವನನ್ನು ನೋಡಿ ಪರಮಹಂಸರು “ಭಕ್ತನೊಬ್ಬನನ್ನು ಇಲ್ಲಿಗೆ ಬರಲು ಯತ್ನಿಸಿದರೆ ಅತ್ತೆ ತಡೆಯುತ್ತಾಳೆ. ಅವನೆಲ್ಲಿ ಇಲ್ಲಿಗೆ ಬರುವುದನ್ನು ಬಿಡುತ್ತಾನೋ ಎಂದು ನನಗೆ ದುಃಖವಾಗುತ್ತದೆ.” ಎಂದರು. ಮತ್ತೊಂದು ದಿನ ಅವನ ಹೆಂಡತಿ ತಡೆದರೂ ಮನಮೋಹನನು ದಕ್ಷಿಣೇಶ್ವರಕ್ಕೆ ಹೋದನು. ಅವತ್ತೂ ಪರಮಹಂಸರು ವ್ಯಸನದಿಂದ “ಭಕ್ತನು ಇಲ್ಲಿಗೆ ಬರಲು ಪ್ರಯತ್ನಿಸಿದರೆ ಹೆಂಡತಿ ತಡೆಯುತ್ತಾಳೆ” ಎಂದರಂತೆ. ಇನ್ನೊಂದು ದಿನ ಪರಮಹಂಸರು ಇನ್ನೊಬ್ಬ ಭಕ್ತನನ್ನು ಕೊಂಡಾಡಲು ಮನಮೋಹನನು ತನ್ನನ್ನು ಅಲ್ಲಗಳೆದರೆಂಬ ದುರಭಿಮಾನದಿಂದ ದಕ್ಷಿಣೇಶ್ವರಕ್ಕೆ ಹೋಗುವುದನ್ನೆ ಬಿಟ್ಟನು. ಎಷ್ಟು ಹೇಳಿ ಕಳುಹಿಸಿದರೂ ಬರಲಿಲ್ಲ. ಕಡೆಗೆ ಪರಮಹಂಸರೇ ಹೋಗಿ ಸಮಾಧಾನ ಹೇಳಿ ಕರೆತಂದರು. ಮನಮೋಹನನು ಕಡೆಕಡೆಗೆ ಶ್ರೀರಾಮಕೃಷ್ಣರ ನೆಚ್ಚಿನ ಶಿಷ್ಯರಲ್ಲಿ ಒಬ್ಬನಾದನು.

ರಾಮಚಂದ್ರದತ್ತನ ನಿರೀಶ್ವರವಾದವು ಮಾಯವಾಯಿತು, ಭಕ್ತನಾದನು. ವೈರಾಗ್ಯವೂ ಹುಟ್ಟಿತು. ಕಡೆಗೊಂದು ದಿನ ತನಗೆ ಸಂನ್ಯಾಸ ಕೊಡಬೇಕೆಂದು ಕೇಳಲು ಪರಮಹಂಸರು ಇಂತೆಂದರು:

“ಅವಸರ ಅವಸರವಾಗಿ ಯಾವುದನ್ನೂ ಮಾಡಬಾರದು. ಯಾವನಿಂದ ಏನು ಮಾಡಿಸಬೇಕೆಂಬುದು ಈಶ್ವರನಿಗೆ ಗೊತ್ತು. ನೀನು ಸಂನ್ಯಾಸಿಯಾದರೆ ನಿನ್ನ ಹೆಂಡತಿ ಮಕ್ಕಳ ಗತಿಯೇನು? ದೇವರು ಮಾಡಿರುವ ಮನೆಯನ್ನು ಮುರಿಯಬಾರದು. ಸಮಯ ಬಂದಾಗ ಎಲ್ಲ ಆಗುತ್ತದೆ… ಸಂನ್ಯಾಸ ತೆಗೆದುಕೊಂಡ ಮಾತ್ರಕ್ಕೆ ಆಗುವುದೇನು? ಸಂಸಾರದೊಳಗಿರುವುದು ಕೋಟೆಯೊಳಗಿದ್ದಂತೆ.

ಕೋಟೆಯೊಳಗಿದ್ದು ಶತ್ರುವನ್ನು ಗೆಲ್ಲುವುದು ಸುಲಭ; ಅಪಾಯಕರವಲ್ಲ. ಮನಸ್ಸಿನಲ್ಲಿ ಮುಕ್ಕಾಲು ಪಾಲನ್ನಾದರೂ  ಈಶ್ವರನಿಗೆ ಕೊಡಲು ಸಮರ್ಥನಾದಾಗ ನೀನು ಸಂನ್ಯಾಸಿಯಾಗಬಹುದು.” ರಾಮಚಂದ್ರದತ್ತನು ತನಗುಂಟಾದ ಅನೇಕ ಅನುಭವಗಳ ಸಾಕ್ಷ್ಯದಿಂದ ಪರಮಹಂಸರನ್ನು ಅವತಾರವೆಂದು ನಂಬಿದನು. ನರೇಂದ್ರ, ರಾಖಾಲ ಮೊದಲಾದವರನ್ನು ದಕ್ಷಿಣೇಶ್ವರಕ್ಕೆ ಕರೆತಂದವನೂ ಆತನೆ.

ಸುರೇಂದ್ರನಾಥ ಮಿತ್ರನೂ, ಹೆಚ್ಚಾಗಿ ಧನಾರ್ಜನೆಮಾಡಿ ನೆಮ್ಮದಿಯಿಂದಿದ್ದರೂ, ಹಲಕೆಲವು ಮಾನಸಿಕ ದೌರ್ಬಲ್ಯ ದುರಭ್ಯಾಸಗಳಿಂದ ಪೀಡಿತನಾಗಿ ಮುಂಗಾಣದೆ ಆತ್ಮಹತ್ಯೆ ಮಡಿಕೊಳ್ಳುವ ಆಲೋಚನೆಯಲ್ಲಿ ಇದ್ದಾಗ ರಾಮಚಂದ್ರದತ್ತನು ಅವನನ್ನು ದಕ್ಷಿಣೇಶ್ವರಕ್ಕೆ ಕರೆತಂದನು. ಬರುವಾಗ ಸುಮ್ಮನೆ ಬರಲಿಲ್ಲ.”ನಿನ್ನ ಪರಮಹಂಸರು ಎಲ್ಲಿಯಾದರೂ ಆಷಾಢಭೂತಿಯಾಗಿದ್ದರೆ ಕಿವಿ ಹಿಂಡುತ್ತೇನೆ” ಎಂದು ಹೇಳಿಕೊಂಡೇ ಬಂದನಂತೆ. ಅವನು ಬಂದಾಗ ಪರಮಹಂಸರು ಒಬ್ಬ  ಭಕ್ತನೊಡನೆ ಮಾತಾಡುತ್ತ “ಮನುಷ್ಯನು ಮಂಗನ ಮರಿಯಂತೆ ಆಚರಿಸುವುದೇಕೆ? ಬೆಕ್ಕಿನ ಮರಿಯಂತೆ ಏಕೆ ಮಾಡಬಾರದು? ಮಂಗನ ಮರಿ ತನ್ನ ಸ್ವಂತ ಬಲದಿಂದಲೆ ತಾಯಿಯನ್ನು ಹಿಡಿದುಕೊಂಡು ಚರಿಸುತ್ತದೆ. ಬೆಕ್ಕಿನ ಮರಿಯಾದರೋ ಮ್ಯಾವ್ ಮ್ಯಾವ್ ಎಂದು ಕೂಗಿ ಕೂಗಿ ತಾಯಿಯನ್ನು ಕರೆಯಲು, ಅದು ಬಂದು ಮರಿಯನ್ನು ಕಚ್ಚಿಕೊಂಡು ಹೋಗುತ್ತದೆ. ಮಂಗನ ಮರಿ ಕೆಲವು ಸಲ ಮುಷ್ಟಿತಪ್ಪಿ ತಾಯಿಯಿಂದ ಜಾರಿಬಿದ್ದು ಮೈ ಮುರಿದುಕೊಳ್ಳುತ್ತದೆ. ಬೆಕ್ಕಿನ ಮರಿಗೆ ಅಂತಹ ಅಪಾಯವಾಗಲು ಅವಕಾಶವೆ ಇರುವುದಿಲ್ಲ; ಏಕೆಂದರೆ, ತಾಯಿಯೆ ಅದನ್ನು ಎತ್ತಿಕೊಂಡು ತಿರುಗುತ್ತದೆ. ಸ್ವಸಾಮರ್ಥ್ಯಕ್ಕೂ ಈಶ್ವರನಿರ್ಭರತೆಗೂ ಇರುವ ವ್ಯತ್ಯಾಸವೂ ಅದರಂತೆಯೆ” ಎಂದು ಹೇಳಿದರು. ಅದನ್ನು ಆಲಿಸಿ ನೊಂದೆದೆಯ ಸುರೇಂದ್ರನಿಗೆ ಕಣ್ಗತ್ತಲೆ ಹೋಗಿ ಬೆಳಕು ಬಂದಂತಾಯಿತು. ಈಶ್ವರ ನಿರ್ಭರತೆಯೆ ತನಗೂ ಮದ್ದು ಎಂದು ಭಾವಿಸಿದನು. ಹಿಂದಿರುಗಿ ಬರುವಾಗ ಸುರೇಂದ್ರನು ತನ್ನ ಮಿತ್ರನೊಡನೆ “ನಾನು ಕಿವಿ ಹಿಂಡುವುದಿರಲಿ. ಗುರುದೇವನೆ ನನ್ನ ಕಿವಿ ಹಿಂಡಿಬಿಟ್ಟನು. ಆತನು ಅಂತಹನೆಂದು ನನಗೇನು ಗೊತ್ತು? ನನ್ನ ಗುಟ್ಟೆಲ್ಲಾ ರಟ್ಟಾಗಿ ಹೋಯಿತು! ಈಗ ನನಗೆ ಜೀವನ ಸುಖಮಯವಾಗಿ ತೋರುತ್ತಿದೆ’ ಎಂದನು.

ಸುರೇಂದ್ರನಿಗೆ ಮದ್ಯಪಾನ ಮೊದಲಾದ ಕೆಟ್ಟಚಾಳಿಗಳಿದ್ದುವು. ಪರಮಹಂಸರು ಅವುಗಳನ್ನೆಲ್ಲ ಒಡನೆಯೆ ಖಂಡಿಸಲಿಲ್ಲ. ಬರಿಯ ಖಂಡನೆಯಿಂದ ಮನಷ್ಯನು ತನ್ನ ಬಹುಕಾಲದ ಅಭ್ಯಾಸಗಳನ್ನು ಬಿಡಲಾರನೆಂದು ಅವರಿಗೆ ಗೊತ್ತು. ಒಂದು ದಿನ ಏನೋ ಮಾತು ಬಂದು ಹೇಳಿದರು: “ಮನಷ್ಯನು ಅಶ್ಲೀಲಸ್ಥಾನಗಳಿಗೇನೊ ಹೋಗುತ್ತಾನೆ; ಹೋಗಲಿ. ಆದರೆ  ಹೋಗುವಾಗ ಜಗನ್ಮಾತೆಯನ್ನೇಕೆ ಒಡಗೂಡಿ ಹೋಗಬಾರದು? ಹಾಗೆ ಮಾಡಿದರೆ ಅನೇಕ ಕೇಡುಗಳಿಂದ ಪಾರಾಗಬಹುದು.” ಸುರೇಂದ್ರನು ದುರಭ್ಯಾಸಗಳನ್ನು ಬಿಡಲು ಯತ್ನಿಸಿದನು. ಆದರೆ ಸಾಧ್ಯವಾಗಿರಲಿಲ್ಲ. ಹೀಗಿರಲು ಪರಮಹಂಸರ ಮಾತು ಕೇಳಿ ಆತನಿಗೆ ಸಂತೋಷವಾಯಿತು – ದೇವಿಯ ಹೆಸರು ಹೇಳಿಕೊಂಡು ತನ್ನ ದುರಾಚಾರಗಳನ್ನೆಲ್ಲ ನಿರ್ವಿಘ್ನವಾಗಿ ಮುಂದುವರಿಸಬಹುದು ಎಂದು. ಆದರೆ ದೇವಿಯ ಹೆಸರು ಸದಾಧರ್ಮ ಬುದ್ಧಿಯನ್ನು ಜಾಗ್ರತಗೊಳಿಸುತ್ತಿತ್ತು. ಆಗ ತಾನು ಮಾಡುವುದು ಅಧರ್ಮವೆಂದು ನಾಚಿ ಹೇಸುತ್ತಿದ್ದನು. ಹೀಗಾಗಿ ಕಡೆಕಡೆಗೆ ಆತನ ವಕ್ರತೆಯೆಲ್ಲವೂ ಮಾಯವಾಯಿತು. ಪರಮಹಂಸರು ಆತನ ಭಕ್ತಿಯನ್ನು ಹೊಗಳುತ್ತಿದ್ದರು. ಸುರೇಂದ್ರನು ಅಂತರಂಗದ ಶಿಷ್ಯರಲ್ಲಿ ಒಬ್ಬನೆಂದು ಪರಿಗಣಿತನಾದನು.

ಶ್ರೀರಾಮಕೃಷ್ಣರು ನಾಡಿ ನೋಡುವುದರಲ್ಲಿಯೂ ಮದ್ದು ಕೊಡುವುದರಲ್ಲಿಯೂ ಪಥ್ಯ ಮಾಡುವುದರಲ್ಲಿಯೂ ಎಂತಹ ಸಮರ್ಥ ದೇವವೈದ್ಯರಾಗಿದ್ದರೆಂಬುದು ಗಿರೀಶಚಂದ್ರ ಘೋಷನ ಚರಿತ್ರೆಯಿಂದ ಗೊತ್ತಾಗುತ್ತದೆ.

ಗಿರೀಶಚಂದ್ರನ ಹೆಸರು ವಂಗದೇಶದಲ್ಲಿ ಮನೆ ಮಾತಾಗಿದೆ. ಆತನು ಅನೇಕ ಪ್ರಸಿದ್ಧ ನಾಟಕಗಳನ್ನು ರಚಿಸಿ, ಅಭಿನಯಿಸಿ, ವಂಗದೇಶದ ರಂಗಭೂಮಿಯನ್ನು ಉಜ್ಜೀವಗೊಳಿಸಿ ಉತ್ತಮ ಸ್ಥಿತಿಗೆ ತಂದನು. ಆತನು ಪ್ರತಿಭಾಶಾಲಿಯಾಗಿದ್ದರೂ ದುರಾಚಾರಿ ಎಂಬ ದುಷ್ಕೀರ್ತಿ ಎಲ್ಲೆಲ್ಲಿಯೂ ಹಬ್ಬಿತ್ತು. ಪಾಶ್ಚಾತ್ಯ ವಿದ್ಯೆ ಸಂಸ್ಕೃತಿಗಳ ಜೊತೆಗೆ ಅದರ ಅನಾಚಾರಗಳೆಲ್ಲವನ್ನೂ ಚೆನ್ನಾಗಿ ಕಲಿತು ಪ್ರವೀಣನಾಗಿದ್ದನು. ವಂಗೀಯ ರಂಗಭೂಮಿಗೆ ಪ್ರತಿಷ್ಠಾಪನಾಚಾರ್ಯನೆಂದು ಹೆಸರು ಪಡೆದಿದ್ದ ಆತನಿಗೆ ನಟಿಯರು ನರ್ತಕಿಯರು ಚಿರಪರಿಚಿತರಾಗಿದ್ದರು. ದೇವರು ಧರ್ಮ ಭಕ್ತಿಗಳೆಂದರೆ ಆತನಿಗೆ ಆಗುತ್ತಿರಲಿಲ್ಲ. ಅವುಗಳನ್ನು ಕುರಿತು ನಾಟಕಗಳಲ್ಲಿ ಬರೆದಿದ್ದರೂ ಅದು ಸಾಹಿತ್ಯಭೂಷಣಮಾತ್ರವಾಗಿತ್ತು. ಆತನು ಚಾರ್ವಾಕನಾಗಿ, ಸಂಪೂರ್ಣ ನಿರೀಶ್ವರವಾದಿಯಾಗಿ ಹದಿನಾಲ್ಕು ಸಂವತ್ಸರಗಳನ್ನು ಕಳೆದನು. ಮನಸ್ಸು ಗಡಿಬಿಡಿಯ ಮುದ್ದೆಯಾಗಿತ್ತು.

ಸೊಗದೋಲಾಟದ ದಿನಗಳು ಕೊನೆಗೊಂಡು ಗಿರೀಶನಿಗೆ ರೋಗ ಮೊದಲಾದ ಕೋಟಲೆಗಳ ಪರಿಚಯವಾಯಿತು. ಯಾವ ಔಷಧದಿಂದಲೂ ರೋಗ ಗುಣವಾಗಿದಿದ್ದರೆ ತಾರಕೇಶ್ವರದ ಮಹಾದೇವನನ್ನು ಜನರು ಮರೆಹೋಗುತ್ತಾರೆ. ಅದರಿಂದ ಗುಣವಾಗುತ್ತದೆ ಎಂಬ ವಿಷಯವು ಆತನಿಗೆ ಗೊತ್ತಿತ್ತು. ಮಹಾಶಿವನಿಗೆ ಶರಣಾದನು. ಪ್ರಯತ್ನ ಫಲಕಾರಿಯಾಯಿತು. ತೊಂದರೆಗಳು ತೊಲಗಿದವು. ದೇವರಲ್ಲಿ ನಂಬುಗೆ ಮೊಳೆಯಿತು.”ಆತನ ದರ್ಶನವಾಗುವುದೆಂದು? ಈಶ್ವರದರ್ಶನವಾಗಲು ಗುರೂಪದೇಶ ಆವಶ್ಯಕವೆನ್ನುತ್ತಾರೆ. ಈಶ್ವರನಾಮವೆ ಗುರುವಾಗದೇನು? ಆದರೆ ಎಲ್ಲರೂ ಹೇಳುತ್ತಾರೆ – ಗುರು ಬೇಕೇಬೇಕಂತೆ. ಯಾರನ್ನು ಗುರುವೆಂದು ಭಾವಿಸಲಿ? ಗುರುವನ್ನು ದೇವರೆಂದೇ ಕಾಣಬೇಕಂತೆ! ನನ್ನಂತೆಯೇ ಮನುಷ್ಯನಾಗಿರುವವನನ್ನು ದೇವರೆಂದು ಭಾವಿಸುವುದಾದರೂ ಹೇಗೆ?” ಗಿರೀಶನ ಬಗೆ ಕದಡಿತು. ಮಾನವಗುರುವಿಗೆ ಎಂದಿಗೂ ಮಣಿಯುವುದಿಲ್ಲ ಎಂದು ನಿರ್ಧರಿಸಿದನು.

ಒಂದು ದಿನ ಪತ್ರಿಕೆಯೊಂದರಲ್ಲಿ ದಕ್ಷಿಣೇಶ್ವರದ ಪರಮಹಂಸರ ವಿಚಾರವಿತ್ತು. ಕೇಶವಚಂದ್ರಸೇನನು ತನ್ನ ಅನುಯಾಯಿಗಳ ಸಮೇತ ಅಲ್ಲಿಗೆ ದಿನವೂ ಹೋಗುತ್ತಾನೆ ಎಂದು ಬರೆದಿತ್ತು. ಗಿರೀಶ ಅದನ್ನು ಓದಿ ತನ್ನಲ್ಲಿ ತಾನೆ “ಸರಿ. ಈ ಬ್ರಾಹ್ಮಸಮಾಜಿಗಳಿಗೆ ದಿನಕ್ಕೊಂದು ತತ್ತ್ವ, ದಿನಕ್ಕೊಬ್ಬ ಪರಮಹಂಸ! ” ಎಂದು ಹಾಸ್ಯ ಮಾಡಿ ಸುಮ್ಮನಾದನು. ಇನ್ನೊಂದು ದಿನ ಪರಮಹಂಸರು ತನ್ನ ನೆರೆಮನೆಗೆ ಉತ್ಸವಕ್ಕಾಗಿ ಬಂದಿದ್ದಾರೆ ಎಂದು ಕೇಳಿ ಕುತೂಹಲದಿಂದ ನೋಡಲು ಹೋದನು. ಪರಮಹಂಸರು ಭಾವದಲ್ಲಿದ್ದರು. ಕತ್ತಲಾಗಿ ದೀಪಗಳು ಉರಿಯುತ್ತಿದ್ದರೂ ಅವರು “ಸಂಜೆಯಾಯಿತೆ?” ಎಂದು ಪ್ರಶ್ನೆ ಮಾಡಿದರು. ಗಿರೀಶನು “ಸಾಕು ಈ ಬೂಟಾಟಿಕೆ” ಎಂದುಕೊಂಡು ಹಿಂದಿರುಗಿದನು.

ಕೆಲವು ದಿನಗಳು ಕಳೆದ ಮೇಲೆ ಗಿರೀಶಚಂದ್ರನ ‘ಸ್ಟಾರ್ ಥಿಯೇಟರ್‌ನಲ್ಲಿ’ ಆತನೇ ಬರೆದ “ಚೈತನ್ಯಲೀಲಾ” ಎಂಬ ನಾಟಕದ ಅಭಿನಯವಾಗುತ್ತಿತ್ತು. ಪರಮಹಂಸರ ಭಕ್ತನೊಬ್ಬನು ಬಳಿಗೆ ಬಂದು “ಪರಮಹಂಸರು ನಾಟಕ ನೋಡಲು ಬಂದಿದ್ದಾರೆ. ದಯವಿಟ್ಟು ಅವರಿಗೊಂದು ಸೀಟ್ ಕೊಡುತ್ತೀರೋ ಅಥವಾ ಟಿಕೆಟ್ ತೆಗೆದುಕೊಳ್ಳಬೇಕೋ?” ಎಂದು ಕೇಳಿದನು. ರಂಗದ ಅಂಗಣದಲ್ಲಿ ಶತಪಥ ತಿರುಗುತ್ತಿದ್ದ ಗಿರೀಶ ಹುಬ್ಬುಗಂಟಿಕ್ಕಿ ನಿಂತು “ಅವರೊಬ್ಬರಿಗೇ ಒಂದು ಸೀಟ್ ಕೊಡಲಾಗುತ್ತದೆ. ಉಳಿದವರು ಟಿಕೆಟ್ ಕೊಂಡುಕೊಳ್ಳಬೇಕು.” ಎಂದನು ಅಷ್ಟರಲ್ಲಿ ಬಳಿಗೆ ಬಂದ ಪರಮಹಂಸರು ಗಿರೀಶನಿಗೆ ನಮಸ್ಕಾರ ಮಾಡಿದರು. ಗಿರೀಶ ಪ್ರತಿಯಾಗಿ ನಮಸ್ಕರಿಸಿದನು. ಆದರೆ ಪರಮಹಂಸರು ಮತ್ತೆ ನಮಸ್ಕಾರ ಮಾಡಿದರು. ಮತ್ತೆ  ಗಿರೀಶ ನಮಸ್ಕರಿಸಿದನು. ಮತ್ತೆ ಪರಮಹಂಸರು ನಮಸ್ಕಾರ ಮಾಡಿದರು! ಗಿರೀಶನಿಗೆ ಬೇಜಾರಾಯಿತು, ಹೀಗೆ ಮಾಡಿದರೆ ಕೊನೆಗಾಣುವುದಿಲ್ಲ ಎಂದು ಕೊಂಡು ಮನಸ್ಸಿನಲ್ಲಿಯೆ ನಮಿಸಿ, ಪರಮಹಂಸರನ್ನು ಒಂದು ಉತ್ತಮ ಸ್ಥಾನಕ್ಕೆ ಕರೆದೊಯ್ದು ಕೂರಿಸಿ, ಗಾಳಿಬೀಸಲು ಸೇವಕನೊಬ್ಬನನ್ನು  ಬಿಟ್ಟು, ಮೈ ಸರಿಯಿಲ್ಲದಿದ್ದುದರಿಂದ ಮನೆಗೆ ಹೊರಟುಹೋದನು.

ಮತ್ತೊಂದು ದಿನ ಬಲರಾಮವಸು ಎಂಬಾತನ ಮನೆಗೆ ಉತ್ಸವದಲ್ಲಿ ಭಾಗಿಯಾಗಲು ಪರಮಹಂಸರು ಬಂದಿದ್ದಾರೆ ಎಂದು ಕೇಳಿ ಅಹೂತನಾಗದಿದ್ದರೂ ಅವರನ್ನು ನೋಡಲು ಗಿರೀಶನು ಅಲ್ಲಿಗೆ ಹೋದನು. ಆ ದಿನ ಅವರಿಬ್ಬರಿಗೂ ಸಂಭಾಷಣೆ ನಡೆಯಿತು.

ಗಿರೀಶ – ಗುರುವೆಂದರೇನು?

ಪರಮಹಂಸರು – ಭಕ್ತನಿಗೆ ಭಗವಂತನನ್ನು ಕಾಣಿಸುವ ಮಧ್ಯಸ್ಥ… ನಿನಗಾಗಲೆ ಗುರು ಸಿಕ್ಕಿದ್ದಾನೆ!

ಗಿರೀಶ – ಮಂತ್ರವೆಂದರೇನು?

ಪರಮಹಂಸರು – ದೇವರ ಹೆಸರು.

ಹಾಗೆಯೆ ಸಂಭಾಷಣೆ ನಾಟಕಶಾಲೆಗಳ ವಿಷಯಕ್ಕೆ ತಿರುಗಲು, ಶ್ರೀರಾಮಕೃಷ್ಣರು “ನಾನು ಇನ್ನೊಂದಾವರ್ತಿ ನಿನ್ನ ನಾಟಕ ನೋಡಬೇಕು” ಎಂದರು.

ಗಿರೀಶ – ಅದಕ್ಕೇನು? ಯಾವತ್ತು ಬೇಕಾದರೂ ಬರಬಹುದು.

ಪರಮಹಂಸರು – ಆದರೆ ನೀನು “ಫೀಜು” ತೆಗೆದುಕೊಳ್ಳಬೇಕು.

ಗಿರೀಶ – ಆಗಲಿ, ಎಂಟಾಣೆ ಕೊಟ್ಟರೆ ಸಾಕು.

ಪರಮಹಂಸರು – ಆದರೆ ಅದು ಗಲೀಜು ಸೀಟು!

ಗಿರೀಶ – ಇಲ್ಲ, ಇಲ್ಲ, ಆವೊತ್ತಿನಂತೆಯೆ ನಿಮಗೆ ಬಾಕ್ಸಿನಲ್ಲಿ ಜಾಗ ಕೊಡುತ್ತೇನೆ.

ಪರಮಹಂಸರು – ಹಾಗಾದರೆ ಒಂದು ರೂಪಾಯಿ ತೆಗೆದುಕೊಳ್ಳಬೇಕು. ಗಿರೀಶನು ಒಪ್ಪಿ ಮನೆಗೆ ನಡೆದನು. ದಾರಿಯಲ್ಲಿ ಶ್ರೀರಾಮಕೃಷ್ಣರು ಹೇಳಿದುದನ್ನೆ ನೆನೆದು “ನನಗಾಗಲೆ ಗುರು ಸಿಕ್ಕಿದ್ದಾನೆ! ಏನಾದರಾಗಲಿ ಮನುಷ್ಯನನ್ನು ಗುರು ಎಂದು ಕೈಮುಗಿಯುವುದು ತಪ್ಪಿತಲ್ಲಾ! ’ ಎಂದು ಹಿಗ್ಗಿದನು. ಸಿಕ್ಕಿದ ಗುರು ಪರಮಹಂಸರೆ ಎಂದು ಅವನಿಗೆ ತಿಳಿಯಲಿಲ್ಲ.

ಇನ್ನೊಂದು ಸಾರಿ ಪರಮಹಂಸರು ನಾಟಕ ನೋಡಲು ಹೋದಾಗ ಗಿರೀಶ ಅವರನ್ನು ಔದಾಸೀನ್ಯದಿಂದ ಸ್ವೀದರಿಸಿ, ಆಮೇಲೆ ತನ್ನ ಆಚರಣೆಗೆ ತಾನೆ ನೊಂದುಕೊಂಡು ಪರಿಹಾರಾರ್ಥವಾಗಿಯೊ ಎಂಬಂತೆ ಅವರ ಕೈಯಲ್ಲಿ ಒಂದು ಹೂವನ್ನು ಕೊಡಹೋದನು. ಅವರು ಅದನ್ನು ತೆಗೆದುಕೊಂಡು “ಹೂವು ದೇವರಿಗೆ ಅಥವಾ ಸೊಗಸುಗಾರರಿಗೆ; ನಾನು ಎರಡೂ ಅಲ್ಲ.” ಎಂದು ಹೇಳಿ ಹಿಂದಕ್ಕೆ ಕೊಟ್ಟು ಬಿಟ್ಟರು.. . .

“ನಿನ್ನ ಮನಸ್ಸು ವಕ್ರವಾಗಿದೆ.”

“ಪಾರಾಗುವುದು ಹೇಗೆ, ಮಹಾಶಯ?”

“ಶ್ರದ್ಧೆಯಿರಲಿ”.

ಗಿರೀಶನು ದಕ್ಷಿಣೇಶ್ವರಕ್ಕೆ ಹೋದನು. ಪರಮಹಂಸರು ಕೆಲವು ಬುದ್ಧಿವಾದಗಳನ್ನು ಹೇಳಲಾರಂಭಿಸಲು, ಗಿರೀಶನೆಂದನು: “ಈ ಬುದ್ಧಿವಾದಗಳೆಲ್ಲ ನನಗೆ ಬೇಡ. ನಾನೆ ಬೇಕಾದಷ್ಟು ಬರೆದಿದ್ದೇನೆ. ಅದರಿಂದ ಏನೂ ಉಪಯೋಗವಿಲ್ಲ. ಇನ್ನೇನಾದರೂ ರೀತಿಯಿಂದ ಸಹಾಯ ಮಾಡುವಂತಿದ್ದರೆ ಮಾಡಿ!”

ಮೇಲುನೋಟಕ್ಕೆ ಗಿರೀಶ ದುರಾಚಾರಿಯಾಗಿದ್ದರೂ ಅಂತರಂಗದಲ್ಲಿ ಅವನು ಮಹಾಭಕ್ತನೆಂಬುದು ಪರಮಹಂಸರಿಗೆ ಮೊದಲಿನಿಂದಲೂ ಗೊತ್ತಿತ್ತು. ಆದ್ದರಿಂದ ಅವನ ಅವಿವೇಕಗಳನ್ನೆಲ್ಲ ಸಹಿಸಿ, ಮೆಲ್ಲಮೆಲ್ಲಗೆ ತಿದ್ದಿದರು. ಒಂದು ದಿನ ಮದ್ಯಪಾನದಿಂದ ಉನ್ಮತ್ತನಾಗಿದ್ದ ಗಿರೀಶನು ಪರಮಹಂಸರನ್ನು ಬಾಯಿಗೆ ಬಂದಂತೆ ಬಯ್ದುಬಿಟ್ಟನು. ಅದನ್ನು ಕುರಿತು ಅವರು ರಾಮಚಂದ್ರದತ್ತನೊಡನೆ ಹೀಗೆಂದರು:

“ನೋಡಿದೆಯಾ, ಗಿರೀಶ ಎಲ್ಲರೆದುರಿಗೂ ನನ್ನನ್ನು ಬಾಯಿಗೆ ಬಂದಂತೆ ನಾಟಕಶಾಲೆಯಲ್ಲಿ ಬಯ್ದುಬಿಟ್ಟ.”

“ಅದನ್ನೆಲ್ಲ ನೀವು ಸಹಿಸಬೇಕು.”

“ಹೌದು, ಇನ್ನೊಂದುಸಾರಿ ಹೊಡೆದೇಬಿಟ್ಟರೆ?”

“ಅದನ್ನೂ ಸಹಿಸಬೇಕು. ಸರ್ಪವು ಕೃಷ್ಣನಿಗೆ ತನ್ನ ವಿಷವನ್ನಲ್ಲದೆ ಇನ್ನೇನನ್ನು ಕೊಡಬಲ್ಲುದು? ಅದರಂತೆಯೇ ಗಿರೀಶನೂ! ಅಲ್ಲದೆ ನೀವಲ್ಲದೆ ಇನ್ಯಾರು ಅದನ್ನೆಲ್ಲ ತಾಳಿಯಾರು?”

ಹೀಗೆಂದು ಮಾತನಾಡಿ ಯಾರು ಹೇಳಿದ್ದನ್ನೂ ಕೇಳದೆ ಗಾಡಿ ಮಾಡಿಕೊಂಡು ಗಿರೀಶನ ಮನಗೆ ಹೋದರು. ಅಲ್ಲಿ ಗಿರೀಶ ತಾನು ಮಾಡಿದ ಅಪರಾಧಕ್ಕಾಗಿ ಕೋಣೆ ಬಾಗಿಲು ಹಾಕಿಕೊಂಡು ರೋದಿಸುತ್ತಿದ್ದನು. ಅವನನ್ನು ಮೃದುವಾಕ್ಯಗಳಿಂದ ಸಂತೈಸಿದರು. ಇಂತು ಗಿರೀಶ ತಾನರಿಯದೆಯೆ ಶ್ರೀರಾಮಕೃಷ್ಣರ ಕರುಣೆ ತೊಟ್ಟಿಲ ಹಸುಳೆಯಾದನು.

ಒಂದು ದಿನ ಗಿರೀಶ ತನ್ನ ಕಂಪನಿಯ ನರ್ತಕಿಯೊಬ್ಬಳು ಕಾಯಿಲೆಯಾಗಿದ್ದಾಳೆಂದು ಕೇಳಿ ಅವಳನ್ನು ನೋಡಲು ಹೋದನು. ಚೆನ್ನಾಗಿ ಕುಡಿದುಬಿಟ್ಟು ರಾತ್ರಿಯನ್ನೂ ಅಲ್ಲಿಯೇ ಕಳೆದನು. ಬೆಳಗಾಗಲು ಪಶ್ಚಾತ್ತಾಪದಿಂದ ಕಂಬನಿಗರೆಯುತ್ತ ಒಂದು ಕೋಚಿನಲ್ಲಿ ಸಾರಾಯಿ ಶೀಸೆಗಳನ್ನು ಹಾಕಿಕೊಂಡು ದಕ್ಷಿಣೇಶ್ವರಕ್ಕೆ ಓಡಿದನು. ಪರಮಹಂಸರನ್ನು ಕಂಡವನೆ ಅವರ ಕಾಲುಗಳನ್ನು ಹಿಡಿದುಕೊಂಡು ಅಳತೊಡಗಿದನು. ಗುರದೇವನಿಗೆ ಎಲ್ಲವೂ ಗೊತ್ತಾಯಿತು. ಕರುಣವಾಣಿಯಿಂದ ಸಂತವಿಡುತ್ತ, ಬಳಿಯಿದ್ದ ಶಿಷ್ಯನೊಬ್ಬನಿಗೆ ಕೋಚಿನಲ್ಲಿದ್ದ ಮೆಟ್ಟು, ಧೋತ್ರ, ಸಾರಾಯಿ ಶೀಸೆಗಳನ್ನು ತರಹೇಳದರು. ಗಿರೀಶನಿಗೆ ತಲೆ ಇನ್ನೂ ನೆಟ್ಟಗಾಗಿರಲಿಲ್ಲ. ಕುಡಿಯಬೇಕೆಂದು ಮನಸ್ಸಾಗಿ ಸುತ್ತಲೂ ನೋಡಿದನು. ಅದನ್ನು ಅರಿತ ಗುರುದೇವನು ಶೀಸೆಗಳನ್ನು ಅವನ ಮುಂದೆ ಇಡಿಸಲು, ನೆರೆದಿದ್ದ ಜನರೆದುರಿಗೆ ನಾಚಿಕೆಯಿಲ್ಲದೆ ಶೀಸೆಗಳನ್ನು ಖಾಲಿಮಾಡಿಬಿಟ್ಟನು. ಪರಮಹಂಸರು “ಕುಡಿ, ಕುಡಿ! ಇನ್ನೆಷ್ಟು ದಿನ ತಾನೆ ಕುಡಿದೀಯೆ!” ಎಂದರು. ಸ್ವಲ್ಪ ಹೊತ್ತಾದ ಮೇಲೆ ಗಿರೀಶನಿಗೆ ಮತ್ತೆಲ್ಲ ಇಳಿಯಿತು. ತಾನು ಮಾಡಿದ್ದನ್ನು ನೆನೆದು ಪಶ್ಚಾತ್ತಾಪದಿಂದ ಎದೆ ಬಡಿದುಕೊಂಡು ಅತ್ತನು. ತನ್ನನ್ನು ಹೇಗಾದರೂ ಉದ್ಧಾರಮಾಡಬೇಕೆಂದು ಬೇಡಿದನು.

ಪರಮಹಂಸರು ಹೇಳಿದರು: “ದಿನಕ್ಕೆರಡು ಸಾರಿ ದೇವರನ್ನು ನೆನೆ.”

“ನನಗೆ ಬಹಳ ಕೆಲಸವಿರುತ್ತದೆ, ನಿಯಮದಂತೆ ನಡೆಯಲು ನನ್ನಿಂದ ಸಾಧ್ಯವಿಲ್ಲ. ನಾನು ಹೇಗೆ ಮಾತು ಕೊಡಲಿ?”

“ಹೋಗಲಿ; ನಿದ್ರೆಮಾಡುವ ಮೊದಲು ಒಂದು ಸಾರಿ ನೆನೆ.”

“ನಾನು ಮಾತುಕೊಡಲಾರೆ.”

“ಇಷ್ಟು ಸ್ವಲ್ಪವನ್ನೂ ಕೂಡ ನೀನು ಮಾಡಲಾರೆ ಎನ್ನುತ್ತೀಯೆ, ಹೋಗಲಿ ಬಿಟ್ಟುಬಿಡು. ನನಗೆ ವಕಾಲತ್ತುನಾಮೆಯಿರಲಿ. ಇನ್ನು ಮೇಲೆ ನಿನ್ನ ಭಾರವೆಲ್ಲ ನನ್ನ ಮೇಲೆ. ನೀನು ಏನನ್ನೂ ಮಾಡಬೇಡ. ನಾನು ಎಲ್ಲಾ ನೋಡಿಕೊಳ್ಳುತ್ತೇನೆ.”

“ಹುಂ, ಅದನ್ನು ಮಾಡುತ್ತೇನೆ.”

“ಏನೆಂದೆ! ‘ಮಾಡುತ್ತೇನೆ.’ ಹಾಗೆ ಹೇಳಲು ನಿನಗೆ ಅಧಿಕಾರವಿಲ್ಲ. ಮಡುವುದೂ ಬಿಡುವುದೂ ನಿನ್ನಿಚ್ಛೆಯಲ್ಲ! ತಿಳಿಯಿತೊ? ನಾನು ನಿನ್ನ ಪ್ರತಿನಿಧಿ! ನಿನ್ನಲ್ಲಿರುವ ಈಶ್ವರನ ಚಿತ್ತವಿದ್ದಂತೆ ಆಗುತ್ತದೆ! ಆದ್ದರಿಂದ ‘ದೇವರು ನಡೆಸಿದರೆ ಮಾಡುತ್ತೇನೆ!’ ಎನ್ನಬೇಕು.”

ಗಿರೀಶ ಶರಣನಾಗಿ ಉದ್ಧಾರವಾದನು. ಆತನ ದುರ್ಗುಣಗಳೆಲ್ಲ ಕಳಚಿ ಬಿದ್ದವು. ಮಹಭಕ್ತನಾದನು. ಪರಮಹಂಸರ ಸಂಸಾರಿ ಶಿಷ್ಯರಲ್ಲಿ ಅಗ್ರಗಣ್ಯನಾದನು. ತಿರಸ್ಕೃತನಾಗಿದ್ದವನು ಗಂಗೆಯಲ್ಲಿ ಮಿಂದು ಪೂಜ್ಯನಾದನು. ಆತನು ಮೃತ್ಯುಶಯ್ಯೆಯಲ್ಲಿದ್ದಾಗ “ಹೇ ಗುರುದೇವ, ಈ ಕಠೋರ ಮಾಯಾಯವನಿಕೆಯನ್ನು ನನ್ನ ದೃಷ್ಟಿಯಿಂದ ಕಿತ್ತುಬಿಸುಡು! ” ಎಂದು ಹೇಳಿ ಪ್ರಾಣಬಿಟ್ಟನಂತೆ.

ದುರ್ಗಾಚರಣ ನಾಗನು ಶ್ರೀರಾಮಕೃಷ್ಣರ ಸಂಸಾರಿ ಶಿಷ್ಯರಲ್ಲಿ ಅದ್ವಿತೀಯನಾದವನು. ವಂಗದೇಶದಲ್ಲಿ ಸಾಧುವರ್ಯ ನಾಗಮಹಾಶಯ ಎಂದು ಆತನ ಹೆಸರು ಪೂಜ್ಯವಾಗಿದೆ. ಆತನು ಮಹಾ ತಿತಿಕ್ಷುವಾಗಿದ್ದನು. ಕ್ರಿ. ಶ. ೧೮೬೪ರಲ್ಲಿ ಆತನು ಜನಿಸಿದನು. ತಂದೆ ತಾಯಿಗಳು ಡಾಕಾ ಜಿಲ್ಲೆಯ ಒಂದು ಸಣ್ಣ ಹಳ್ಳಿಯಲ್ಲಿ ಬಡತನದಿಂದ ಜೀವನ ನಡೆಸುತ್ತಿದ್ದರು. ಆದ್ದರಿಂದ ಆತನಿಗೆ ವಿದ್ಯಾಶಾಲೆಗಳಲ್ಲಿ ಓದಿ ಪಾಶ್ಚಾತ್ಯ ವಿದ್ಯೆಯಲ್ಲಿ ಪ್ರವೀಣನಾಗಲು ಅವಕಾಶವಾಗಲಿಲ್ಲ. ಆದರೂ ತನ್ನ ಮನೆಗೆ ಹತ್ತು ಮೈಲಿ ದೂರವಿದ್ದ ಡಾಕಾ ನಗರದ ಹೈಸ್ಕೂಲಿಗೆ ದಿನವೂ ನಡೆದು ಹೋಗಿ ಉಪಾಯಾಂತರದಿಂದ ತರಗತಿಗಳಿಗೆ ನುಗ್ಗಿ ಉಪನ್ಯಾಸಗಳನ್ನು ಕೇಳಿ ಬರುತ್ತಿದ್ದನು. ತರುವಾಯ ದುರ್ಗಾಚರಣನು ವೈವಿದ್ಯೆಯನ್ನು ಅಭ್ಯಾಸ ಮಾಡಿ ವೈದ್ಯನಾದನು. ಬಾಲ್ಯದಿಂದಲೂ ಧರ್ಮಜೀವಿಯಾಗಿದ್ದ  ಆತನು ರೋಗಿಗಳು ಕೊಟ್ಟಷ್ಟನ್ನೆ ಸ್ವೀಕರಿಸಿ ತೃಪ್ತನಾಗುತ್ತಿದ್ದನು. ಅಲ್ಲದೆ ಕಷ್ಟದಲ್ಲಿರುವ ಜನರಿಗೆ ತನ್ನ ಶಕ್ತಿಮೀರಿ ಧನ ಸಹಾಯ ಮಾಡುತ್ತಿದ್ದುದರಿಂದ ಸಂಪಾದನೆ ಹೊಟ್ಟೆ ಬಟ್ಟೇಗೇ ಸಾಲುತ್ತಿರಲಿಲ್ಲ. ಆತನು ಆಜನ್ಮ ಅಹಿಂಸಾವಾದಿಯಾಗಿದ್ದನು. ಎಷ್ಟೋಸಾರಿ ಬೆಸ್ತರು ಹಿಡಿದ ಜೀವವಿರುವ ಮೀನುಗಳನ್ನೆಲ್ಲ ದುಡುಕೊಟ್ಟು ಕೊಂಡುಕೊಂಡು ಹೊಳೆಗೆ ಬಿಡುತ್ತಿದ್ದನು. ಒಂದು ಸಾರಿ ಹಕ್ಕಿಗಳನ್ನು ಸುಟ್ಟು ಕೊಲ್ಲುತ್ತಿದ್ದ ಐರೋಪ್ಯ ಜನರಿಂದ ಬಂದೂಕಗಳನ್ನು ಕಿತ್ತುಕೊಂಡು, ಹಕ್ಕಿ ಹೊಡೆಯುವುದಿಲ್ಲ ಎಂದು ಅವರು ಮಾತುಕೊಟ್ಟ ಮೇಲೆಯೆ ಬಂದೂಕಗಳನ್ನು ಹಿಂದಕ್ಕೆ ಕೊಟ್ಟನಂತೆ.

ಚಿಕ್ಕಂದಿನಲ್ಲಿಯೆ ಮದುವೆಯಾಗಿದ್ದರೂ ಆತನಿಗೆ ವೈವಾಹ ಜೀವನವು ರುಚಿಸಲಿಲ್ಲ. ಆಜೀವ ಬ್ರಹ್ಮಚರ್ಯ ಆತನ ವ್ರತವಾಗಿತ್ತು. ಮಾಯಾ ಬಂಧನವಗಳಿಂದ ಪಾರಾಗಿ ಈಶ್ವರ ಸಾಕ್ಷಾತ್ಕಾರ ಮಾಡದಿದ್ದರೆ ಜೀವನವು ವ್ಯರ್ಥ ಎಂದು ತಿಳಿದಿದ್ದ ಆತನು ಧ್ಯಾನ ಜಪಗಳಲ್ಲಿ ಬಹಳ ಕಾಲ ಕಳೆಯುತ್ತಿದ್ದನು. ಹಗಲೆಲ್ಲ ರೋಗಿಗಳಿಗೆ ಮದ್ದುಕೊಟ್ಟು ಉಪಚಾರಮಾಡುವುದು, ರಾತ್ರಿ ನಿರ್ಜನ ಪ್ರದೇಶಗಳಲ್ಲಿ ಭಗವಂತನನ್ನು ಧ್ಯಾನಿಸುವುದು, ಇದೇ ಆತನ ದಿನಚರಿಯ ಕೆಲಸವಾಗಿತ್ತು. ಒಂದು ದಿನ ಮಿತ್ರನೊಬ್ಬನಿಂದ ಪರಮಹಂಸರ ವಿಚಾರವನ್ನು ಕೇಳಿ ದಕ್ಷಿಣೇಶ್ವರಕ್ಕೆ ಬಂದನು. ಕಂಡಕೂಡಲೆ ನಾಗಮಹಾಶಯನು “ಅಗ್ನಿಜ್ವಾಲೆ” ಎಂಬುದು ಶ್ರೀರಾಮ ಕೃಷ್ಣರಿಗೆ ಗೊತ್ತಾಯಿತು. ಆತನಾದರೂ ಪರಮಹಂಸರಲ್ಲಿ ತನ್ನ ಇಷ್ಟ ದೈವವನ್ನು ಸಂದರ್ಶಿಸಿದನು. ಪದೇ ಪದೇ ದಕ್ಷಿಣೇಶ್ವರಕ್ಕೆ ಬಂದು ಗುರುದೇವನ ವಚನಾಮೃತ ಪಾನದಿಂದ ಅಮರನಾದನು. ಒಂದು ಸಾರಿ ನಾಗಮಹಾಶಯನು ತಾನು ಸಂನ್ಯಾಸಿಯಾಗಬೇಕೆಂದು ಹೇಳಲು, ಪರಮಹಂಸರು “ಜನರಿಗೆ ಆದರ್ಶವಾಗಿ ಸಂಸಾರದಲ್ಲಿರು” ಎಂದು ಬೆಸಸಿದರು. ಗುರುವಾಣಿಯನ್ನು ದೇವವಾಣಿಯೆಂದು ಭಾವಿಸಿ, ನಾಗಮಹಾಶಯನು ಬೆಂಕಿಯ ನಡುವೆ ಇದ್ದರೂ ಸುಟ್ಟುಕೊಳ್ಳದಂತೆ ಬಾಳಿ, ಸಾಧುವರ್ಯನೆಂಬ ಬಿರುದಿಗೆ ಪಾತ್ರನಾಗಿ ಸರ್ವಪೂಜ್ಯನಾದನು.

ಈ ಅಧ್ಯಾಯದ ಕೊನೆಯಲ್ಲಿ ನಾವೀಗ ವರ್ಣಿಸಲಿರುವ ಪುರುಷನು ಅಂತ್ಯಗಣ್ಯನಾದರೂ ಅಗ್ರಮಾನ್ಯನಾಗಿದ್ದಾನೆ. ಶ್ರೀರಾಮಕೃಷ್ಣರ ಜೀವನದಲ್ಲಿಯೂ ಜೀವನ ಇತಿಹಾಸ ಪ್ರಚಾರದಲ್ಲಿಯೂ ಆತನಿಗೆ ಅಸಾಧಾರಣ ಪ್ರಮುಖಸ್ಥಾನ ದೊರೆತಿದೆ. ಆತನ ಡೈರಿ ಇಲ್ಲದಿದ್ದರೆ ಪರಮಹಂಸರ ಜೀವನಸಮುದ್ರದ ಅಮೂಲ್ಯ ರತ್ನರಾಶಿಯಲ್ಲಿ ಬಹುಭಾಗವು ಜಗತ್ತಿಗೆ ಸರ್ವದಾ ಅಜ್ಞಾತವಾಗುತ್ತಿತ್ತು. ಆದ್ದರಿಂದ ಲೋಕವು ಮಾಸ್ಟರ್ ಮಹಾಶಯನಿಗೆ ಚಿರಋಣಿಯಾಗಿದೆ. ಆತನ ನಿಜವಾದ ಹೆಸರು ಮಹೇಂದ್ರನಾಥಗುಪ್ತ. ಜನರಿಗೆ ಆತನಿ ಮಾಸ್ಟರ್ ಮಹಾಶಯ ಎಂಬ ಹೆಸರಿನಿಂದ ಪರಿಚಿತನಾಗಿದ್ದಾನೆ. ಆತನ ಮಹಾಗ್ರಂಥಗಳೆಲ್ಲ ಇಂಗ್ಲೀಷಿನಲ್ಲಿ “ಎಂ” ಬಂಗಾಳಿಯಲ್ಲಿ “ಮ” ಎಂಬ ಸಂಕೇತನಾಮದಿಂದ ಪ್ರಚುರವಾಗಿದೆ.

ಮಹೇಂದ್ರನಾಥನು ಬ್ರಾಹ್ಮಸಮಾಜದ ಸದಸ್ಯನಾಗಿ ಕಲ್ಕತ್ತೆಯ ವಿದ್ಯಾಸಾಗರ ಹೈಸ್ಕೂಲಿನಲ್ಲಿ ಮುಖ್ಯೋಪಾಧ್ಯಾಯನಾಗಿದ್ದನು. ಒಂದು ದಿನ ವಿಹಾರಾರ್ಥವಾಗಿ ದಕ್ಷಿಣೇಶ್ವರಕ್ಕೆ ಹೋದವನು ಪರಮಹಂಸರನ್ನು ಕಂಡನು, ೧೮೮೨ ನೆಯ ಇಸವಿ ಫೆಬ್ರುವರಿ ೨೬ನೆಯ ಭಾನುವಾರ.

ಆತನೇನು ಪರಮಹಂಸರನ್ನು ಕಾಣುವ ಉದ್ದೇಶದಿಂದ ದಕ್ಷಿಣೇಶ್ವರಕ್ಕೆ ಹೋಗಿರಲಿಲ್ಲ. ಭಾನುವಾರ ರಜಾದಿನವಾದ್ದರಿಂದ ತನ್ನ ಗೆಳೆಯ ಸಿಧು ಎಂಬಾತನೊಡನೆ ವರಾಹನಗರದ ಉದ್ಯಾನಗಳಲ್ಲಿ ತಿರುಗಾಡಿಕೊಂಡು ಹೋಗಲು ಬಂದಿದ್ದನು. ಸಿಧು ಹೇಳಿದನು: “ಗಂಗಾತೀರದಲ್ಲಿ ಬಹಳ ಮನೋಹರವಾದ ಒಂದು ಉದ್ಯಾನವಿದೆ. ಅದು ದಕ್ಷಿಣೇಶ್ವರ ದೇವಾಲಯಕ್ಕೆ ಸೇರಿದ್ದು. ಅದನ್ನು ರಾಣಿ ರಾಸುಮಣಿ ಕಟ್ಟಿಸಿದ್ದಾಳೆ. ಅಲ್ಲಿ ಪರಮಹಂಸರೊಬ್ಬರು ವಾಸಿಸುತ್ತಾರೆ. ಅಲ್ಲಿಗೆ ಹೋಗೋಣವೇ?”

ತನ್ನ ಬಾಳನ್ನೂ ಬದುಕಿನ ದಿಕ್ಕನ್ನೂ ಸಂಪೂರ್ಣವಾಗಿ ಪರಿವರ್ತಿಸುವ ಅಗ್ನಿತೀರ್ಥಕ್ಕೆ ವಿಧಿ ತನ್ನನ್ನು ಕೊಂಡೊಯ್ಯುತ್ತಿದೆ ಎಂಬುದನ್ನು ಒಂದಿನಿತೂ ಮುಂಗಾಣದೆ ಮಹೇಂದ್ರನು ಮಿತ್ರನ ಸೂಚನೆಗೆ ಸಮ್ಮತಿಸಿ ದಕ್ಷಿಣೇಶ್ವರದ ಕಾಳಿಕಾ ದೇವಾಲಯದತ್ತ ತಿರುಗಿ ಮುಂಬರಿದನು. ಮಿತ್ರರಿಬ್ಬರೂ ಹೆಬ್ಬಾಗಿಲ ಹತ್ತಿರ ಬರುವಷ್ಟರಲ್ಲಿ ಮುಂಬೈಗು ಕಾಲಿಕ್ಕುತ್ತಿತ್ತು. ನೇರವಾಗಿ ಪರಮಹಂಸರ ಕೊಠಡಿಗೆ ಮುಂಬರಿದು ನೋಡುತ್ತಾರೆ: ಪರಮಹಂಸರು ಸಣ್ಣ ಮಂಚದ ಮೇಲೆ ಕುಳಿತು ಮಾತನಾಡುತ್ತಿದ್ದಾರೆ. ಕೊಠಡಿ ಜನರಿಂದ ಕಿಕ್ಕಿರಿದಿದೆ. ಅವರೆಲ್ಲ ನೆಲದ ಮೇಲೆ ಕುಳಿತು ಆ ದೇವಮಾನವ ಅಮೃತವಾಣಿಗೆ ಮುಗ್ಧರಾಗಿ ಉತ್ಕಂಟಿತ ನೇತ್ರರಾಗಿ ಆಲಿಸುತ್ತಿದ್ದಾರೆ.

ತನ್ನ ಜೀವಮಾನದಲ್ಲಿಯೇ ಅಭೂತಪೂರ್ವವಾಗಿದ್ದ ಆ ಭವ್ಯದೃಶ್ಯವನ್ನು ಮಹೇಂದ್ರನು ಮಂತ್ರಮುಗ್ಧನೆಂಬಂತೆ ನೋಡುತ್ತಾ ನಿಂತನು; ಸಾಕ್ಷಾತ್ ಶುಕದೇವನೆ ಭಗವದ್ ವಿಷಯಕವಾಗಿ ನುಡಿಯುತ್ತಿರುವಂತೆ ತೋರಿತು. ಅಲ್ಲಿ ಆ ಸಣ್ಣ ಕೊಠಡಿಯಲ್ಲಿ ಎಲ್ಲ ಪುಣ್ಯತೀರ್ಥಗಳೂ ಎಲ್ಲ ದಿವ್ಯಕ್ಷೇತ್ರಗಳೂ ಸಮಾಗಮವಾಗಿರುವಂತೆ ಭಾಸವಾಯಿತು.

ಬಾಗಿಲ ಹೊರಗೆ ನಿಂತು ಆಲಿಸುತ್ತಿದ್ದ ಮಹೇಂದ್ರನಿಗೆ, ಕೃತವಿದ್ಯನಾಗಿ ಎನಿತೆನಿತೂ ವಾಗ್ಮಿಗಳಾದ ಪ್ರಾಧ್ಯಾಪಕರ ಉಪನ್ಯಾಸಗಳನ್ನು ಕೇಳಿದ್ದ ಮಹೇಂದ್ರನಿಗೆ, ಬ್ರಾಹ್ಮಸಮಾಮಾಜದ ವೇದಿಕೆಯಲ್ಲಿ ಆಚಾರ್ಯವರ್ಯರ ಉಪದೇಶ ಭಾಷಣಗಳ ಸ್ಪೂರ್ತಿಪ್ರವಾಹದಲ್ಲಿ ಜ್ಯೋತಿಃಸ್ನಾನ ಮಾಡಿದ್ದ ಮಹೇಂದ್ರನಿಗೆ ತಾನು ಹಿಂದೆಂದೂ ಅನುಭವಿಸದಿದ್ದ ಒಂದು ಅನಿರ್ವಚನೀಯವಾದ ಭಗವನ್ ಮಾಧುರ್ಯದ ಸವಿದೋರಿ ತಾನಿಂದು ಧನ್ಯನಾದೆ ಎಂದುಕೊಂಡನು. ಸುತ್ತ ಕಣ್ಣಿಟ್ಟಿದ್ದನು; ಎಂತಹ ರಮ್ಯಸ್ಥಾನವಿದು? ಎಂತಹ ಮೋಹಕವ್ಯಕ್ತಿ ಇವರು?

ಮೊದಲು ತಾನೆಲ್ಲಿಗೆ ಬಂದಿದ್ದೇನೆ ಎಂಬುದನ್ನು ನೋಡಿಕೊಂಡು ಆಮೇಲೆ ಇಲ್ಲಿಗೆ ಬಂದು ಕುಳಿತುಕೊಳ್ಳುತ್ತೇನೆ ಎಂದು ದೇವಾಲಯದ ದರ್ಶನಕ್ಕೆ ಹೊರಟನು. ಅಷ್ಟರಲ್ಲಿ ಸಂಧ್ಯಾರತಿಯ ಸನ್ನಿಹಿತವಾದ್ದರಿಂದ ದೇಗುಲದ ಕಡೆಯಿಂದ ಗಂಟೆ ಜಾಗಟೆ ತಾಳ ನಗಾರಿ ಶಂಖಗಳ ಮಂಗಳನಿನಾದವೂ ಬಳಿಯೆ ಇದ್ದ ನಹಬತ್ ಖಾನೆಯಿಂದ ಇಂಪಾದ ವಾದ್ಯ ಘೋಷವೂ ಹೊಮ್ಮಿ ಸನ್ನಿವೇಶದ ಪವಿತ್ರತೆಯನ್ನು ನೂರ್ಮಡಿಗೊಳಿಸಿದುವು. ಸುತ್ತಣ ಉದ್ಯಾನದ ಪುಷ್ಪಮೈ ಸುವಾಸನೆಯನ್ನು ವಸಂತ ಮಂದಮಾರುತ ಹೊತ್ತು ತಂದಿತು. ದೃಶ್ಯಕ್ಕೆ ಕಲಶವಿಟ್ಟಂತೆ ಚಂದ್ರೋದಯವೂ ಆಯಿತು. ಮಹೇಂದ್ರನು ಹನ್ನೆರಡು ಶಿವದೇವಾಯಗಳಲ್ಲಿಯೂ ನಡೆದ ಮಂಗಳಾರತಿಗಳನ್ನು ವೀಕ್ಷಿಸಿ ಮತ್ತೆ ಪರಮಹಂಸರ ಕೊಠಡಿಯ ಬಳಿಗೆ ಬಂದನು.

ಕೊಠಡಿಯ ಬಾಗಿಲು ಮುಚ್ಚಿಬಿಟ್ಟಿತ್ತು. ಕಿಕ್ಕಿರಿದು ಜನರೆಲ್ಲ ಹೊರಟು ಹೊಗಿದ್ದಂತೆ ತೋರಿ ನಿಶ್ಯಬ್ದವಾಗಿತ್ತು. ಆಗತಾನೆ ಧೂಪಹಾಕಿದ್ದ ನಲ್ಗಂಪು ಘ್ರಾಣಕ್ಕೂ ಪ್ರಾಣಕ್ಕೂ ಪವಿತ್ರವಾಗಿತ್ತು. ಬೃಂದೆ ಎಂಬ ಸೇವಕಿ ಬಾಗಿಲ ಹತ್ತಿರ ನಿಂತಿದ್ದಾಳೆ. ಆಂಗ್ಲೇಯರಿಂದ ಕಲಿತಿದ್ದ ಮಯಾದೆಯ ಮಹೇಂದ್ರನು ಏಕಾಏಕಿ ಕೋಣೆಯ ಒಳಕ್ಕೆ ಹೋಗಿಬಿಡಲು ಹಿಂಜರಿದು, ಬೃಂದೆಯನ್ನು ಕೇಳಿದನು:

“ಸಾಧುಗಳು ಒಳಗಿದ್ದಾರೆಯೆ?”

“ಹೌದು, ಒಳಗಿದ್ದಾರೆ, ” ಎಂದಳು ಬೃಂದೆ.

“ಇವರು ಇಲ್ಲಿ ಎಷ್ಟು ಕಾಲದಿಂದ ಇದ್ದಾರೆ?”

“ಬಹಳ ಕಾಲದಿಂದ.”

“ಒಳ್ಳೇದು, ಇವರೇನು ಬಹಳವಾಗಿ ಪುಸ್ತಕ – ಗಿಸ್ತಕ ಓದುತ್ತಾರೊ?”

ಮಹೇಂದ್ರ ನ ಅಜ್ಞಾನಕ್ಕೆಂಬಂತೆ ಬೃಂದೆ ತುಸು ನಗುಮೊಗಳಾಗಿ:” ಪುಸ್ತಕ ಗಿಸ್ತಕ? ಎಲ್ಲ ಅವರ ಬಾಯಲ್ಲೆ! ”

ಆಗತಾನೆ ವಿಶ್ವವಿದ್ಯಾನಿಲಯದಲ್ಲಿ ಡಿಗ್ರಿ ಸಂಪಾದಿಸಿ ಅಧ್ಯಾಪಕನಾಗಲು ಮಹೇಂದ್ರನಿಗೆ ಅಚ್ಚರಿಯೊ ಅಚ್ಚರಿ! ಗ್ರಂಥಾಧ್ಯಯನ ಮಾಡದೆ ಮನುಷ್ಯ ಜ್ಞಾನಿಯಾಗುವುದುಂಟೆ?

“ಬಹುಶಃ ಇವರು ಈಗ ಸಾಯಂ ಜಪತಪಾದಿಗಳಲ್ಲಿ ತೊಡಗಿರಬಹುದು, ನಾವು ಒಳಕ್ಕೆ ಹೋಗಬಹುದೆ? ವಿಚಾರಿಸಿ ಹೇಳುತ್ತೀಯಾ?

“ಒಳಗೆ ಹೋಗಿ, ಅಯ್ಯಾ. ಹೋಗಿ ಒಂದು ಕಡೆ ಕೂತುಕೊಳ್ಳಿ” ಎಂದು ಸೂಚಿಸಿದಳು ಬೃಂದೆ.

ಒಳಕ್ಕೆ ಹೋಗಿ ನೋಡುತ್ತಾನೆ: ಅಲ್ಲಿ ಬೇರೆ ಯಾರೂ ಇಲ್ಲ. ಪರಮಹಂಸರೊಬ್ಬರೆ ಮಂಚದ ಮೇಲೆ ಕುಳಿತಿದ್ದಾರೆ. ಕೊಠಡಿಗೆ ಧೂಪ ಹಾಕಿದೆ. ಕಿಟಕಿಗಳೆಲ್ಲ ಮುಚ್ಚಿವೆ.

ಮಹೇಂದ್ರ ಕೈಮುಗಿದು ಮಾತ್ರ ನಮಸ್ಕಾರ ಮಾಡಿದ. ಪಾಶ್ಚಾತ್ಯರಿಂದ ಕಲಿತ ಮರ್ಯಾದೆಯಂತೆ ಸಾಷ್ಟಾಂಗ ಪ್ರಣಾಮ ಮಾಡುವುದು ನಾಗರಿಕ ಲಕ್ಷಣವಾಗಿರಲಿಲ್ಲ! ಪರಮಹಂಸರು ಸನ್ನೆ ಮಾಡಿದಂತೆ ಮಿತ್ರರಿಬ್ಬರೂ ನೆಲದ ಮೇಲೆ ಕೂತುಕೊಂಡರಯ. ಎಲ್ಲಿದ್ದೀರಿ? ಏನು ಕೆಲಸ? ಎಂದಯ ಒಂದರೆಡು ಪ್ರಶ್ನೆ ಕೇಳಿದರೂ ಪರಮಹಂಸರು  ಮತ್ತೆ ಮತ್ತೆ ಅನ್ಯಮನಸ್ಕರಾಗುತ್ತಿದ್ದುದನ್ನು ಕಂಡು ಭಾವ ಸಮಾಧಿ ಮೊದಲಾದವುಗಳ ವಿಚಾರವಾಗಿ ಏನನ್ನೂ ತಿಳಿದಿರದಿದ್ದ ಮಹೇಂದ್ರ “ಬಹುಶಃ ತಾವು ಈಗ ಸಾಯಂ ಸಂಧ್ಯಾವಂದನಾದಿಗಳಲ್ಲಿ ತೊಡಗ ಬೇಕಾಗಿರಬಹುದು, ನಾವು ಹೋಗಿ ಬರಲು ಅನುಮತಿಯೆ?” ಎಂದು ಕೇಳಿದನು.

“ಸಂಧ್ಯಾವಂದನೆಯೆ? ಇಲ್ಲ, ಅಂಥದೇನಿಲ್ಲ” ಎಂದ ಪರಮಹಂಸರು ಇನ್ನೂ ಭಾವಸ್ಥರಾಗಿಯೇ “ಮತ್ತೆ ಬನ್ನಿ” ಎಂದರು. ಮಿತ್ರರಿಬ್ಬರೂ ನಮಿಸಿ ಬೀಳ್ಕೋಂಡರು.

ಮನೆಯ ಕಡೆ ನಡೆಯುತ್ತಾ ಮಹೇಂದ್ರನು ತಾನು ಆಗತಾನೆ ಕಂಡ ಅದ್ಭುತ ಪುರುಷನನ್ನು ಕುರಿತು ಆಶ್ಚರ್ಯಪಡುತ್ತಾ ಆಲೋಚಿಸಿದನಯ: ಆಃ ಎಂತಹ ದಿವ್ಯವ್ಯಕ್ತಿ! ಅವರನ್ನು ಬಿಟ್ಟುಬರುವುಕ್ಕೇ ಮನಸ್ಸಾಗಲಿಲ್ಲವಲ್ಲಾ? ಮತ್ತೆ ಮತ್ತೆ ನೋಡಲು ಮನಸ್ಸಾಗುತ್ತಿದೆ. ಪುಸ್ತಕ – ಗಿಸ್ತಕ ಓದದೆಯೆ ಮನುಷ್ಯ ಜ್ಞಾನಿಯಾಗಬಲ್ಲನೆ? ಮತ್ತೆ ಬನ್ನಿ ಎಂದು ಹೇಳಿದ್ದಾರೆ. ನಾಳೆಯೇ ನಾಳಿದ್ದೊ ಬೆಳಿಗ್ಗೆ ಮುಂಚೆಯೆ ಹೋಗಿ ನೋಡುತ್ತೇನೆ.

ಎರಡನೆಯ ಸಾರಿ ಮಹೇಂದ್ರನೊಬ್ಬನೆಯೆ ದಕ್ಷಿಣೇಶ್ವರಕ್ಕೆ ನಡೆದು ಹೋದನು. ಹೊತ್ತು ಬೆಳಗಿನ ಎಂಟು ಘಂಟೆಯಾಗಿತ್ತು. ಅವರ ಕೊಠಡಿಯ ಆಗ್ನೇಯ ಜಗಲಿಯ ಮೇಲೆ ಪರಮಹಂಸರು ಕ್ಷೌರ ಮಾಡಿಸಿಕೊಳ್ಳುವುದಕ್ಕೆ ಸಿದ್ಧರಾಗುತ್ತಿದ್ದಾರೆ. ಕ್ಷೌರಿಲ ಆಗತಾನೆ ಬಂದಿದ್ದಾನೆ. ಚಳಿಗಲವಾದ್ದರಿಂದ ಕೆಂಪಂಚಿನ ಒಂದು ಮಖಮಲ್ಲಿನ ಉಣ್ಣೆಯ ಶಾಲು ಹೊದ್ದುಕೊಂಡಿದ್ದಾರೆ. ಮೊಗದಲ್ಲಿ ಮಲ್ಲಿಗೆಯ ನೆನಪು ತರುವ ಸವಿನಗೆಯರಳಿದೆ. ಮಾತನಾಡುವಾಗ ತುಸು ಬಿಕ್ಕಳಿಸುತ್ತಾರೆ.

ಶ್ರೀರಾಮಕೃಷ್ಣರು ಮಹೇಂದ್ರ ಬಂದುದನ್ನು ಕಂಡು” ಬಂದೆಯಾ? ಒಳ್ಳೇದು, ಇಲ್ಲೇ ಕುಳಿತುಕೊ” ಎಂದು. ಮಹೇಂದ್ರನು ತುಂಬ ವಿನಯಭಂಗಿಯಿಂದ ಕುಳಿತುಕೊಂಡನು. ಕ್ಷೌರ ಮಾಡಿಸಿಕೊಳ್ಳುತ್ತಲೆ ಪರಮಹಂಸರು ಸಂವಾದ ಪ್ರಾರಂಭಿಸಿದರು.

“ನಿನ್ನ ಮನೆ ಎಲ್ಲಿ?”

ಕಲ್ಕತ್ತದಲ್ಲಿ.”

“ಇಲ್ಲಿ ಯಾರ ಮನೆಗೆ ಬಂದಿದ್ದೀಯೆ?”

“ಹಿರಿಯಕ್ಕನ ಮನೆಗೆ. ವರಾಹನಗರದಲ್ಲಿರುವ ಈಶಾನ್ಯ ಕವಿರಾಜನ ಮನೆಗೆ.”

ಕೇಶವಚಂದ್ರನ ಆರೋಗ್ಯದ ವಿಚಾರ, ಯಾವನೊ ಒಬ್ಬ ಕುಕ್ ಸಾಹೇಬನ ವಿಷಯ, ಪ್ರತಾಪನ ಗೃಹತ್ಯಾಗದ ಅವಿವೇಕದ ವಿಚಾರ ಹೀಗೆ ನಾಲ್ಕು ಮಾತು ಆಡಿದ ಬಳಿಕ ಪರಮಹಂಸರು ಕೇಳಿದರು:

“ನಿನಗೆ ಮದುವೆ ಆಗಿದೆಯೆ?”

“ಹೌದು, ಆಗಿದೆ”.

ಶ್ರೀರಾಮಕೃಷ್ಣರು ಬೆಚ್ಚಿಬಿದ್ದು “ಓ ರಾಮಲಾಲ! ಹೋಗು, ಈತ ಆಗಲೆ ವಿವಾಹ ಮಾಡಿಕೊಂಡಯ ಬಿಟ್ಟಿದ್ದಾನೆ! ”

ಕಾಳಿಕಾ ದೇವಾಲಯದಲ್ಲಿ ಅರ್ಚಕನಾಗಿ ಕೆಲಸಮಾಡುತ್ತಿದ್ದ ತಮ್ಮ ಅಣ್ಣನ ಮಗನನ್ನು ಹೆಸರು ಹಿಡಿದು ಕೂಗಿ ತನಗೆ ಛೀಮಾರಿ ಮಾಡುವ ರೀತಿಯಲ್ಲಿ ಉದ್ಗಾರವೆತ್ತಿದುದನ್ನು ಕೇಳಿ ಮಹೇಂದ್ರನು ಮಹಾಪರಾಧ ಮಾಡಿದವನಂತೆ ತತ್ತರಿಸಿ ತಲೆ ತಗ್ಗಿಸಿ ನೆಲದಿಟ್ಟಿಯಾಗಿ “ಏನು! ಮದುವೆಯಾಗುವುದು ಮಹಾಪರಾಧವೆ? ಎಂದು ಚಿಂತಿಸುತ್ತಿದ್ದಾನೆ.

ಪರಮಹಂಸರು ಮತ್ತೆ ಕೇಳಿದರು “ನಿನಗೆ ಮಕ್ಕಳಾಗಿವೆಯೆ?”

ಮಹೇಂದ್ರನ ಹೃದಯ ಡಬಡಬ ಹೊಡೆದುಕೊಳ್ಳಲಾರಂಭಿಸಿತು. ಹೆದರಿ ಹೆದರಿ ಉತ್ತರಿಸಿದ ಮೆಲ್ಲಗೆ: “ಹೌದು, ಆಗಿವೆ.”

ಶ್ರೀರಾಮಕೃಷ್ಣರು ಮಹಾದುಃಖವಾರ್ತೆಯನ್ನು ಕೇಳಿದವರಂತೆ ಸಂಕಟ ಧ್ವನಿಯಲ್ಲಿ ಹೇಳಿಕೊಂಡರು: “ಅಯ್ಯೋ, ಈತನಿಗೆ ಮಕ್ಕಳೂ ಆಗಿಬಿಟ್ಟಿವೆ! “ಅಹಂಕಾರವೆಲ್ಲ ಪುಡಿಪುಡಿಯಾಗಿ ಹೋದ ಮಹೇಂದ್ರನು ಮಾತಿಲ್ಲದೆ ಸ್ತಬ್ದಗೊಂಡಂತೆ ಕುಳಿತುಬಿಟ್ಟನು. ಒಂದೆರಡು ನಿಮಿಷದ ಮೇಲೆ ಮತ್ತೆ ಪರಮಹಂಸರು ತಮ್ಮ ಕೃಪಾದೃಷ್ಟಿಯನ್ನು ಬೀರಿ ಪ್ರೇಮಪೂರ್ಣಹೃದಯರಾಗಿ ಹೇಳಿದರು: “ನೋಡು, ನಿನ್ನಲ್ಲಿ ಒಳ್ಳೆ  ಚಿಹ್ನೆಗಳಿವೆ. ಕಣ್ಣು ಹಣೆ ಇವನ್ನೆಲ್ಲ ನೋಡಿಯೆ ಅರಿತುಕೊಳ್ಳಬಲ್ಲೆ. ಒಳ್ಳೇದು, ನಿನ್ನ ಹೆಂಡತಿ ಎಂಥವಳು? ವಿದ್ಯಾಶಕ್ತಿಯೋ ಅಥವಾ ಅವಿದ್ಯಾಶಕ್ತಿಯೊ?”

“ಒಳ್ಳೆಯವಳೆ, ಆದರೆ ಅವಿದ್ಯಾವಂತೆ.”

ಪರಮಹಂಸರು ತುಸು ಮೂದಲಿಸುವಂತೆ: “ನೀನು? ಮಹಾ ವಿದ್ಯಾವಂತನೊ?”

ಮಹೇಂದ್ರನಿಗೆ ಯಾವುದು ವಿದ್ಯೆ, ಯಾವುದು ಅವಿದ್ಯೆ ಎಂಬುದಿನ್ನೂ ಗೊತ್ತಾಗಿರಲಿಲ್ಲ. ಓದು ಬರಹ ಕಲಿಯುವುದೆ ವಿದ್ಯೆ, ಪುಸ್ತಕ ಓದುವುದಕ್ಕೆ ಬಂದರೆ ಜ್ಞಾನ ಸಂಪಾದನೆಯಾಗುತ್ತದೆ ಎಂಬುದು ಆತನ ಭಾವನೆಯಾಗಿತ್ತು. ಕ್ರಮೇಣ ಆ ಭಾವನೆಯಿಂದ ಅವನು ಮುಕ್ತನಾಗಿ, ಭಗವಂತನನ್ನು ಅರಿಯುವುದೆ ವಿದ್ಯೆ, ಉಳಿದುದೆಲ್ಲ ಅವಿದ್ಯೆ ಎಂಬುದನ್ನು ತಿಳಿದುಕೊಳ್ಳುತ್ತಾನೆ. ಆದರೆ ಪರಮಹಂಸರು “ನೀನು? ಮಹಾವಿದ್ಯಾವಂತನೊ?” ಎಂದು ಮೂದಲಿಸಿದುದು ಆತನ ಅಹಂಕಾರಕ್ಕೆ ಬಲವಾದ ಪೆಟ್ಟುಕೊಟ್ಟಿತ್ತು.

ಪರಮಹಂಸರು ಮತ್ತೆ ಕೇಳಿದರು: “ನಿನಗೆ ಸಾಕಾರದಲ್ಲಿ ಇಷ್ಷವೊ ನಿರಾಕಾರದಲ್ಲಿ ಇಷ್ಟವೊ?”

ಮಹೇಂದ್ರನಿಗೆ ಬಗೆಹರಿಯಲಿಲ್ಲ. ಪರಮಹಂಸರ ಮಾತು ವಿರೋಧಾ ಭಾಸವಾಗಿ ತೋರಿತು. ಈಶ್ವರನಲ್ಲಿ ಸಾಕಾರತೆ ನಿರಾಕಾರತೆ ಎರಡೂ ಒಟ್ಟಿಗೆ ಇರುವುದೆಂತು? ಆದರೂ ಹೇಳಿದನು: “ನಿರಾಕಾರದಲ್ಲಿ.”

“ಇರಲಿ ಯಾರಿಗೆ ಯಾವುದು ಇಷ್ಟವೊ ಅದೇ ಧ್ಯೇಯವನ್ನು ಅನುಸರಿಸುವುದು ಮೇಲು. ನಿರಾಕಾರದಲ್ಲಿ ನಿನಗೆ ನಂಬುಗೆ ಇರುವುದು ಬಹಳ ಶ್ಲಾಘ್ಯವಾದುದೆ. ಆದರೆ ನಿನ್ನ ಆದರ್ಶವೇ ಸರಿ, ಇತರರದು ತಪ್ಪು ಎನ್ನುವುದು ಮಾತ್ರ ಭ್ರಾಂತಿಮೂಲವಾದುದು. ಸಕಾರ ನಿರಾಕಾರಗಳೆರಡೂ ಸಮನಾಗಿ ಸತ್ಯವಾದುವೆ. ನಿನಗೆ ಇಷ್ಟವಾದುದನ್ನು ನೀನು ಅನುಸರಿಸು”.

ಮಹೇಂದ್ರನಿಗೆ ವಿಸ್ಮಯವಾಯಿತು, ಸಾಕಾರ ನಿರಾಕಾರಗಳೆರಡೂ ಸತ್ಯವಾಗಿರಲು ಹೇಗೆ ಸಾಧ್ಯ ಎಂದು. ಅವನರಿತ ಗ್ರಂಥವಿದ್ಯಗೆ ಅದೊಂದು ಬಗೆಹರಿಯದ ಒಗಟಾಗಿತ್ತು. ಆತನ ಅಹಂಕಾರಕ್ಕೆ ಮೂರನೆಯ ಸಾರಿ ಆಘಾತವಾಗಿತ್ತು; ಆದರೆ ಪೂರ್ತಿ ಅಪ್ಪಳಿಸಿರಲಿಲ್ಲ. ಗುರುದೇವನೊಡನೆ ವಾದಕ್ಕೆ ನಿಂತನು. ಮಹೇಂದ್ರ – ಒಂದು ವೇಳೆ ಈಶ್ವರನು ಸಾಕಾರನೆಂದರೂ ಅವನೇನು ಮಣ್ಣಿನ ಮೂರ್ತಿಯೆ?

ಪರಮಹಂಸರು – ಉಂಟೆ? ಅವನು ಚಿದ್ಘನಮೂರ್ತಿ.

ಮಹೇಂ‌ದ್ರ – ಹಾಗಾದರೆ, ದೇವರು ಮಣ್ಣಿನ ಮುದ್ದೆಯಲ್ಲ ಎಂಬ ವಿಷಯವನ್ನು ವಿಗ್ರಹಪೂಜಕರಿಗೆ ತಿಳಿಸುವುದು ನಮ್ಮ ಕರ್ತವ್ಯ.

ಅವನಿಗೆ ಚಿದ್ಘನಮೂರ್ತಿ ಅಂದರೇನೂ ಅರ್ಥವಾಗಿರಲಿಲ್ಲ.

ಪರಮಹಂಸರು – ಅಃ! ಕಲ್ಕತ್ತೆಯಲ್ಲಿರುವ ನಿಮಗೆಲ್ಲ ಉಪನ್ಯಾಸ ಮಾಡುವುದೆಂದರೆ ಒಂದು ಹವ್ಯಾಸವಾಗಿ ಹೋಗಿದೆ. ನಿನ್ನನ್ನು ನೀನೆ ಮೊದಲು ತಿದ್ದಿಕೊಳ್ಳಬಾರದೆ? ಇನ್ನೋಬ್ಬರನ್ನು ತಿದ್ದಲು ನೀನು ಯಾರು? ಅದನ್ನು ಈಶ್ವರನು ನೋಡಿಕೊಳ್ಳುತ್ತಾನೆ. ಇಷ್ಟೆಲ್ಲ ಮಾಡಿದ ಅವನಿಗೆ ಅದನ್ನು ಮಾಡಲು ತ್ರಾಣವಿಲ್ಲವೆ? ಅವನನ್ನು ಹೇಗೆ ಪೂಜಿಸಿದರೇನಂತೆ? ಒಟ್ಟು ಪೂಜಿಸಿದರಾಯ್ತು! ಮೊದಲು ನಿನ್ನನ್ನು ನೀನು ನೋಡಿಕೊ?    ಮೂರ್ತಿಪೂಜೆಯಿಂದಲೂ ಉಪಯೋಗವಿದೆ. ವಿವಿಧ ಭಾವದ ಭಕ್ತರಿಗೆ ವಿವಿಧವಾದ ಪೂಜಾ ಮಾರ್ಗಗಳಿವೆ. ತಾಯಿ ಮಕ್ಕಳ ಆರೋಗ್ಯ ಜೀರ್ಣಶಕ್ತಿಗಳಿಗೆ ಅನುಗುಣವಾಗಿ ಬೇರೆ ಬೇರೆ ಪಥ್ಯಕೊಡುತ್ತಾಳೆ.

ಈ ಸಾರಿ ಮಹೇಂದ್ರನ ಅಹಂಕಾರ ಅಪ್ಪಚ್ಚಿಯಾಯಿತು.”ನಿಜ, ಇವರು ಹೇಳುತ್ತಿರುವುದು ಸತ್ಯ. ನಾನೇನು ಭಗವಂತನ ಸಾಕ್ಷಾತ್ಕಾರ ಮಾಡಿಕೊಂಡಿದ್ದೇನೆಯೆ? ನನಗೇ ಭಗವಂತನ ವಿಚಾರ ಏನೆಂದರೆ ಏನೂ ಗೊತ್ತಿಲ್ಲ. ಇತರರಿಗೆ ತಿಳುವಳಿಕೆ ಕೊಡಲು ಹೋಗುತ್ತಿದ್ದೇನಲ್ಲ! ಶುದ್ಧ ನಾಚಿಕೆಗೇಡು! ಎಂತಹ ತಿಳಿಗೇಡಿ ನಾನು! ಇತರರಿಗೆ ಹೇಳಿಕೊಡಲು ಇದೇನು ಗಣಿತಶಾಸ್ತ್ರವೆ, ಇತಿಹಾಸವೆ? ಇದು ಭಗವತ್ ತತ್ತ್ವ!” ಪರಮಹಂಸರೊಡನೆ ಮಹೇಂದ್ರ ವಾದಿಸಿದ್ದು ಅದೇ ಮೊಟ್ಟ ಮೊದಲು; ಕೊಟ್ಟಕೊನೆಯದೂ ಆಯ್ತು.

ಮಹೇಂದ್ರ – ತುಂಬು ವಿನಯದಿಂದ ಮತ್ತೆ “ಸಂಸಾರದಲ್ಲಿ ಹೇಗಿರಬೇಕು?” ಎಂದು ಕೇಳಿದನು.

ಪರಮಹಂಸರು – ಕರ್ತವ್ಯಗಳನ್ನು ಮಾಡು; ಆದರೆ ಮನಸ್ಸು ಈಶ್ವರನಲ್ಲಿರಲಿ. ಹೆಂಡತಿ ಮಕ್ಕಳು ತಂದೆ ತಾಯಿ ಎಲ್ಲರೊಡನೆಯೂ ಬಾಳು. ಎಲ್ಲರ ಸೇವೆಯನ್ನೂ ಮಾಡು. ಆದರೆ ಹೃದಯದಲ್ಲಿ ಅವರು ನನ್ನವರಲ್ಲ ಎಂದು ನಿಸ್ಸಂಗಿಯಾಗಿರು….. ಶ್ರೀಮಂತರ ಮನೆಯ ದಾದಿ ಎಲ್ಲ ಕೆಲಸಗಳನ್ನೂ ಮಾಡುತ್ತಾಳೆ. ಆದರೆ ಪ್ರಾಣವೆಲ್ಲಾ ಇರುವುದು ತನ್ನ ಮನೆಯಲ್ಲಿ, ಯಜಮಾನನ ಮಕ್ಕಳನ್ನು “ನನ್ನ ರಾಮು,” “ನನ್ನ ಹರಿ” ಎಂದು ಆಡಿಸುತ್ತಾಳೆ. ಆದರೆ ಅವರಾರೂ ತನ್ನವರಲ್ಲ ಎಂಬುದು ಆಕೆಗೆ ಗೊತ್ತು…. ಭಕ್ತಿ ಬಲವಾಗುವ ಮೊದಲೇ ಜಗಜ್ಜಾಲದಲ್ಲಿ ಸಿಲುಕಿದರೆ ತೊಂದರೆ…… ಕೈಗೆ ಎಣ್ಣೆ ಬಳಿದುಕೊಂಡು ಹಲಸಿನಕಾಯನ್ನು ಸುಲಿ, ಇಲ್ಲದಿದ್ದರೆ ಕೈಯೆಲ್ಲ ಅಂಟಾಗುತ್ತದೆ. ಈಶ್ವರಭಕ್ತಿ ತೈಲದಂತೆ…… ಭಕ್ತಿ ಬಲವಾಗಬೇಕಾದರೆ ಏಕಾಂತ ಅವಶ್ಯಕ. ಹಾಲು ಗಟ್ಟಿಮೊಸರಾಗಬೇಕಾದರೆ ಹೆಪ್ಪುಹಾಕಿ ಅದನ್ನು ಅಲುಗಾಡದಂತೆ ಇರಿಸಬೇಕು. ಹೆಚ್ಚಾಗಿ ಅಲುಗಾಡಿಸಿದರೆ ಮೊಸರು ಗಟ್ಟಿಯಾಗುವುದಿಲ್ಲ. ಗಟ್ಟಿಯಾದ ಮೇಲೆ ಕಡೆದರೆ ಬೆಣ್ಣೆ ಬರುತ್ತದೆ….. ಪ್ರಪಂಚ ನೀರಿನಂತೆ, ಮನಸ್ಸು ಹಾಲಿನಂತೆ. ನೀರಿಗೆ ಹಾಲು ಹಾಕಿದರೆ ಎರಡೂ ಮಿಶ್ರವಾಗಿ ಬೇರೆ ಮಾಡಲು ಆಗುವುದಿಲ್ಲ. ಆದರೆ ಹಾಲನ್ನು ಮೊಸರುಮಾಡಿ ಕಡೆದು ಬಂದ ಬೆಣ್ಣೆಯನ್ನು ನೀರಿನಲ್ಲಿಟ್ಟರೆ ಅದು ಮಿಶ್ರವಾಗದೆ ತೇಲುತ್ತದೆ. ಅದರಂತೆ ಏಕಾಂತದಲ್ಲಿ ಧ್ಯಾನಸಾಧನೆ ಮಾಡಿ, ಜ್ಞಾನ ಭಕ್ತಿಗಳ ನವನೀತವನ್ನು ಸಂಪಾದಿಸಬೇಕು. ಆಮೇಲೆ ಅದನ್ನು ಸಂಸಾರಜಲದಲ್ಲಿ ಹಾಕಿದರೆ ಕದಡಿ ಮಿಶ್ರವಾಗುವುದಿಲ್ಲ, ತೇಲುತ್ತದೆ…. ನಿಜವಾದ ವ್ಯಾಕುಲತೆ ಇದ್ದರೆ ಈಶ್ವರನು ತೋರಿಯೇ ತೋರುತ್ತಾನೆ. ಜನರು ಹೊನ್ನು ಹೆಣ್ಣು ಮಣ್ಣುಗಳಿಗಾಗಿ ಕೊಡಗಟ್ಟಲೆ ಕಣ್ಣೀರು ಕರೆಯುತ್ತಾರೆ. ಆದರೆ ದೇವರಿಗಾಗಿ ಯಾರು ಅಳುತ್ತಾರೆ? ಕೈಲಾಸ ವೈಕುಂಠ ಮುಕ್ತಿಗಳೆಲ್ಲ ಕಣ್ಣಿನ ಹನಿಯಲ್ಲಿ ಮನೆಮಾಡಿಕೊಂಡಿವೆ!

ಮಹೇಂದ್ರನು ಶ್ರೀರಾಮಕೃಷ್ಣರ ಅಂತರಂಗದ ಶಿಷ್ಯಮಂಡಲಿಗೆ ಸೇರಿದನು. ಗುರುವಿನ ಆದೇಶ ಮನ್ನಿಸಿ ಆತನು ಸಂಸಾರವನ್ನೂ ಐಹಿಕ ಕರ್ತವ್ಯಗಳನ್ನೂ ತ್ಯಜಿಸಲಿಲ್ಲ. ಲೌಕಿಕದಲ್ಲಿ ಇದ್ದುಕೊಂಡೇ ಪಾರಲೌಕಿಕವನ್ನು ಸಾಧಿಸಿದನು. ಆತನು ರಜೆ ಇದ್ದಾಗಲೆಲ್ಲ ತಪ್ಪದೆ ದಕ್ಷಿಣೇಶ್ವರಕ್ಕೆ ಹೋಗಿ ಪರಮಹಂಸರ ಮಾತುಕತೆಗಳನ್ನೆಲ್ಲ ತನ್ನ ಡೈರಿಯಲ್ಲಿ ಬರೆದುಕೊಂಡನು. ಅವುಗಲ ಮಹಾಸಮಾಧಿಯ ಅನಂತರ ಅವುಗಳನ್ನೆಲ್ಲ ಗ್ರಂಥರೂಪದಲ್ಲಿ ಪ್ರಕಟಿಸಿ, ಸಂತಪ್ತಜೀವರಿಗೆ ಸುಧಾದಾನ ಮಾಡಿದನು. ನಾಲ್ಕು ವಹಿಗಳಲ್ಲಿ ವಂಗ ಭಾಷೆಯಲ್ಲಿ ಪ್ರಕಟಿತವಾಗಿರುವ ಆತನ ಮಹಾಕೃತಿಯಾಗಿರುವ “ಶ್ರೀರಾಮಕೃಷ್ಣ ವಚನಾಮೃತ” ಜಗತ್ತಿನ ಸರ್ವಶ್ರೇಷ್ಠ ಧರ್ಮಗ್ರಂಥಗಳಲ್ಲಿ ಮಾನವೀಯ ಸ್ಥಾನಕ್ಕೆ ಸರ್ವಾರ್ಹವಾಗಿದೆ.

[1]

ಈಗಲೂ ಕಲ್ಕತ್ತೆಯಲ್ಲಿರುವ ಆತನ ಮನೆ ಪ್ರಾಚ್ಯ ಪಾಶ್ಚಾತ್ಯ ಯಾಂತ್ರಿಕರಿಗೆ ಒಂದು ದರ್ಶನೀಯ ಪುಣ್ಯಸ್ಥಳವಾಗಿದೆ. ಸಾವಿರಾರು ಜನರು ಆತನಲ್ಲಿಗೆ ಬಂದು ಪರಮಹಂಸರ ಪುಣ್ಯಚರಿತ್ರೆಯನ್ನು ಆತನ ಶ್ರೀಕಂಠದಿಂದಲೆ ಕೇಳಿ ಧನ್ಯರಾಗಿ ಹೋಗುತ್ತಾರೆ.

ಎರಡು ವರ್ಷಗಳ ಹಿಂದೆ ಎಂದರೆ ಕ್ರಿ. ಶ. ೧೯೨೯ನೆಯ ಅಕ್ಟೋಬರ್ ತಿಂಗಳು ಒಂಬತ್ತುನೆಯ ತೇದಿಯ ದಿನ ಆ ಮಹಾಪುರುಷನನ್ನು ಕಲ್ಕತ್ತೆಯ ಆತನ ಮನೆಯಲ್ಲಿ ಸಂದರ್ಶಿಸಿ ಎರಡು ಗಂಟೆಗಳ ಕಾಲ ಸಂಭಾಷಣೆ ಮಾಡುವ ಸುಯೋಗ ಈ ಗ್ರಂಥಕರ್ತನಿಗೆ ಲಭಿಸಿತ್ತು. ನಾವು ಅಲ್ಲಿಗೆ ಹೋದಾಗ ಸಂಜೆಗಪ್ಪಾಗಿತ್ತು. ಮಾಸ್ಟರ್ ಮಹಾಶಯನು ತನ್ನ ಉನ್ನತ ಸೌಧದ ಶಿಖರ ವೇದಿಕೆಯಲ್ಲಿ ಧ್ಯಾನಾಸಕ್ತನಾಗಿದ್ದನು. ನಮ್ಮನ್ನು ಜನ್ಮ ಜನ್ಮಾಂತರದ ಬಂಧುಗಳಂತೆ ಸ್ವೀಕರಿಸಿ ಆದರಿಸಿದನು. ಶಾಂತನೂ ಸತ್ಯಶೀಲನೂ ಮಧುರಭಾಷಿಯೂ ಆಗಿರುವ ಆತನಲ್ಲಿ ಪರಮಹಂಸ ಶ್ರೀರಾಮಕೃಷ್ಣರ ಪ್ರಭಾವವು ಪ್ರಸ್ಫುಟವಾಗಿತ್ತು. ನೀಳವಾದ ಗಡ್ಡದಿಂದಲೂ ನರೆತ ಬೆಳ್ಳಿಗೂದಲಿಂದಲೂ ಜರಾಶೀರ್ಣ ಶರೀರದಿಂದಲೂ ಆ ವೃದ್ಧಮೂರ್ತಿಯ ಮಂಗಳದೃಶ್ಯ ಪೂರ್ವಕಾಲದ ಮಹರ್ಷಿಗಳನ್ನು ಮನಸ್ಸಿಗೆ ತರುತ್ತಿತ್ತು. ಅತಿ ಸಾಧಾರಣ ವಸ್ತ್ರಧಾರಿಯಾಗಿದ್ದ ಆತನು ಗಾಂಭೀರ್ಯ ನಿರಹಂಕಾರತೆಗಳು ರೂಪುಗೊಂಡಂತಿದ್ದನು.

“ಸಾಧಾರಣ ಮನುಷ್ಯರು ಈಶ್ವರನನ್ನು ಪತ್ಯಕವಾಗಿ ನೋಡಲು ಸಾಧ್ಯ ಎಂಬುದನ್ನು ನಂಬಲಾರರು. ಆದರೆ ಸದಾ ಈಶ್ವರನಲ್ಲಿಯೇ ಬಾಳಿ, ಆತನನ್ನು ಕಂಡು ಮಾತಾಡುತ್ತಿದ್ದ ಮಹಾ ದೇವಮಾನವನೊಬ್ಬನನ್ನು ಸೇವಿಸುವ ಮಹಾ ಪುಣ್ಯ ನಮ್ಮದಾಗಿತ್ತು.” ಎಂದ ಆತನು ತಾನೆ ಅದಕ್ಕೆ ಸಾಕ್ಷಿಯಾಗಿದ್ದನು.

ನಮ್ಮ ಜೊತೆಯಲ್ಲದ್ದವರೊಬ್ಬರು, ತಾವು ಧರ್ಮಜೀವನವನ್ನು ಕೈಕೊಂಡು ಧರ್ಮಸಂಸ್ಥೆಯಲ್ಲಿದ್ದರೂ ತಮಗಿನ್ನೂ ಏಕೆ ಬೆಳಕು ಬರಲಿಲ್ಲ ಎಂದು ಕೇಳಿದರು. ಅದಕ್ಕೆ ಉತ್ತರವಾಗಿ ಮಹಾಶಯನು ಹೀಗೆಂದನು.

“ಯಾವಾಗಲೂ ಬೆಳಕಿನಲ್ಲಿಯೆ ಇರುವವರಿಗೆ ಅದರ ಮಹಿಮೆ ಗೊತ್ತಾಗದಿರಬಹುದು; ಕತ್ತಲೆಗೆ ಹೋಗಿ ಬಂದರೆ ಆಗ ಗೊತ್ತಾಗುವುದು. ಮೀನು ಒಂದು ಸಾರಿ ದಡಕ್ಕೆ ನೆಗೆದರೆ ಆಗ ಅದಕ್ಕೆ ನೀರಿನ ಕೃಪಾಮಹಿಮೆ ತಿಳಿಯುತ್ತದೆ.”

“ಅವತಾರ ಇತಿಹಾಸವನ್ನು ರಚಿಸುತ್ತದೆ. ಇತಿಹಾಸ ಅವತಾರವನ್ನು ಸೃಜಿಸುತ್ತದೆ.”

“ಹಂದಿಯ ಮುಂದೆ ಮುತ್ತು ಚೆಲ್ಲಬಾರದು ಎಂಬ ಗಾದೆಯಂತೆ ಅನಧಿಕಾರಿಗಳಿಗೆ ಅಧ್ಯಾತ್ಮ ಹೇಳಿದರೆ ಅವರಿಗೆ ಅರ್ಥವಾಗದೆ ಧಿಕ್ಕರಿಸುತ್ತಾರೆ.” ಆತನಿಗೆ ನಮಸ್ಕರಿಸಿ, ಹಸ್ತಲಾಘವವಿತ್ತು ಬೀಳ್ಕೊಂಡು ಮೇಲೆ ಮಹಾವ್ಯಕ್ತಿಯೊಬ್ಬನ ದರ್ಶನವಾಯಿತೆಂದು ಮನದಲ್ಲಿಯೆ ಹಿಗ್ಗಿದೆವು. ಕಲ್ಕತ್ತೆಯ ಚಂಚಲ ದ್ರುತ ಜೀವನಸಮುದ್ರದಲ್ಲಿ ಮಾಸ್ಟರ್ ಮಹಾಶಯನು ಸ್ಥಿರ ಶಾಂತದ್ವೀಪವಾಗಿದ್ದಾನೆ.[2]


[1] ಈ ಮಹಾಕೃತಿ “ಶ್ರೀರಾಮಕೃಷ್ಣ ವಚನವೇದ” ಎಂಬ ಹೆಸರಿನಲ್ಲಿ ಈಗ ಸಂಪೂರ್ಣವಾಗಿ ಭಾಷಾಂತರವಾಗಿ ಕನ್ನಡದಲ್ಲಿ ಪ್ರಚುರವಾಗಿದೆ. ಅದು ಇಂಗ್ಲಿಷಿನಲ್ಲಿಯೂ ಇತರ ಐರೋಪ್ಯ ಭಾಷೆಗಳಲ್ಲಿಯೂ ಭಾರತೀಯ ಭಾಷೆಗಳಲ್ಲಿಯೂ ಭಾಷಾಂತರವಾಗಿ ಲೋಕದ ಕೋಟ್ಯಂತರ ಜೀವರುಗಳಿಗೆ ಆಧ್ಯಾತ್ಮಿಕವಾದ ಅಮೃತಪಾನ ಮಾಡಿಸುತ್ತಿದೆ. ಹೆಸರು ಮಾತ್ರ “ಮ” ಎಂದು ಗ್ರಂಥಕರ್ತನ ಅಹಂಕಾರ ವಿನಷ್ಟಿಗೆ ಸಾಕ್ಷಿಯಾಗಿದೆ.

[2] ಮಾಸ್ಟರ್ ಮಹಾಶಯನ ಮಂಗಳಾತ್ಮವು ೧೯೩೨ನೆಯ ಜೂನ್ ತಿಂಗಳು ೪ನೆಯ ತಾರೀಖು ತನ್ನ ಇಹಯಾತ್ರೆಯನ್ನು ಪೂರೈಸಿ ಬ್ರಹ್ಮಲೀನವಾಯಿತು.