ಶ್ರೀರಾಮಕೃಷ್ಣರು ಸರ್ವಧರ್ಮಸಮನ್ವಯಾಚಾರ್ಯರು ಎಂಬುದು ಅವರು ಸಾಧಿಸಿದ ಭಿನ್ನ ಭಿನ್ನ ಮತಸಾಧನೆಗಳಿಂದ ತಿಳಿದು ಬರುವಂತೆ ಸರ್ವಭಾವಗಳ ಸಮನ್ವಯಮೂರ್ತಿ ಎಂಬುದೂ ಅವರು ಕೈಕೊಂಡು ಪೂರೈಸಿದ ವಿವಿಧ ಭಾವಸಾಧನೆಗಳಿಂದ ಗೊತ್ತಾಗುತ್ತದೆ. ಆದ್ದರಿಂದಲೇ ಅವರು ಮಕ್ಕಳಿಗೆ ಮಗುವಾಗಿ, ಭಕ್ತರಿಗೆ  ಭಕ್ತರಾಗಿ, ಜ್ಞಾನಿಯಾಗಿ ತೋರಲು ಸಾಧ್ಯವಾಯಿತು. ಮಧುರಭಾವ ಸಾಧನೆಯ ಕಾಲದಲ್ಲಿ ಹೆಣ್ಣುಗಳಂತೆ ಉಟ್ಟು ರಾಧೆಯ ಭಾವವನ್ನು ಆರೋಪಿಸಿಕೊಂಡು ಆಕೆಯಲ್ಲಿ ವಿಲೀನವಾಗಿ ಪರಮ ಪ್ರೇಮಿಕಪುರುಷನಾದ ಬೃಂದಾವನದ ಗೋಪಿನಾಥ ಶ್ರೀಕೃಷ್ಣನನ್ನು ಪ್ರತ್ಯಕ್ಷಮಾಡಿಕೊಂಡ ಅವರಿಗೆ ಸ್ತ್ರೀಭಾವವೂ ಇತರ ಭಾವಗಳಂತೆ ಸುಲಭವಾಗಿತ್ತು. ಆದ್ದರಿಂದ ಸ್ತ್ರೀಯರಿಗೆ ಸ್ತ್ರೀಯಾಗಿ ತೋರುತ್ತಿದ್ದರು. ಸ್ತ್ರೀತ್ವ ಪುರುಷತ್ವಗಳಿಗೆ ಅತೀತವಾಗಿ ಸ್ಫಟಿಕಶುಭ್ರ ಶೀಲರಾಗಿದ್ದ ಅವರಲ್ಲಿ ಹೆಂಗಸರಿಗೆ ಸಂಕೋಚವಿರುತ್ತಿರಲಿಲ್ಲ. “ಶ್ರೀ ರಾಮಕೃಷ್ಣರನ್ನು ನಾವು ಪುರುಷರೆಂದು ಭಾವಿಸಿಯೆ ಇರಲಿಲ್ಲ. ನಮ್ಮಲ್ಲಿಯೆ ಒಬ್ಬರೆಂದು ತಿಳಿದಿದ್ದೆವು. ಆದ್ದರಿಂದಲೆ ಅವರೆದುರು ನಮಗೆ ಸ್ವಲ್ಪವೂ ಸಂಕೋಚವಾಗುತ್ತಿರಲಿಲ್ಲ. ನಮಗವರು ಅಂತರಂಗದ ಸಖಿಯಾಗಿದ್ದರು” ಎಂದು ಅವರಲ್ಲಿಗೆ ಬಂದ ಸ್ತ್ರೀಯರೆಲ್ಲರೂ ಏಕಕಂಠದಿಂದ ಹೇಳಿದ್ದಾರೆ.

ಅವರ ಉಪದೇಶದಲ್ಲಿ ಕಾಮಿನೀಕಾಂಚನತ್ಯಾಗವೆಂಬುದು ಮಹಾಪಲ್ಲವಿಯಾಗಿದೆ. ಕಾಮಿನೀ ತ್ಯಾಗವೆಂದರೆ ಸ್ತ್ರೀದ್ವೇಷ ಅಥವಾ ತಿರಸ್ಕಾರ ಎಂದಲ್ಲವೆಂದು ಹಿಂದೆಯೇ ಸಂಕ್ಷೇಪವಾಗಿ ವಿವರಿಸಿದ್ದೇವೆ. ಕಾಮಿನಿ ಎಂಬ ಪದವನ್ನು ಕಾಮ ಎಂಬ ಪದಕ್ಕೆ ಪರ್ಯಾಯವಾಗಿ ಉಪಯೋಗಿಸಿದ್ದಾರೆ. ಅಲ್ಲದೆ ಸ್ತ್ರೀಯರಿಗೆ ಬೋಧಿಸುವಾಗ ಪುರುಷರ ಮೋಹಜಾಲಕ್ಕೆ ಸಿಲುಕವಾರದು ಎಂದು ಹೇಳುತ್ತಿದ್ದರು. ಸ್ತ್ರೀಯರಲ್ಲಿ ಕಾಮಿನಿಯನ್ನು ಕಾಣಬೇಡ, ಜಗನ್ಮಾತೆಯನ್ನು ಕಾಣು ಎಂಬುದೇ ಅವರ ಉಪದೇಶದ ತಾತ್ಪರ್ಯ.

ಧರ್ಮಕಾಂಕ್ಷಿಗಳಾದ ಅನೇಕ ಪುರುಷರು ದಕ್ಷಿಣೇಶ್ವರಕ್ಕೆ ಬಂದಂತೆಯೇ ಅನೇಕ ಸ್ತ್ರೀಯರೂ ಅಲ್ಲಿಗೆ ಬಂದು. ಅವರಲ್ಲಿ ಹಲವರು ಶಿಷ್ಯೆಯರಾದರು: ಕೆಲವರು ಅವರ ನೇತೃತ್ವದಲ್ಲಿ ಧರ್ಮಸಾಧನೆಗಳನ್ನೂ ಮಾಡಿ ಉತ್ತೀರ್ಣರಾದರು.

ಮನಮೋಹನ ಮಿತ್ರನ ತಾಯಿಯೂ ತನ್ನ ಮಗನಂತೆಯೆ ಶ್ರೀರಾಮಕೃಷ್ಣರ ಭಕ್ತಳಾದಳು. ಪತಿಪರಾಯಣೆಯಾದ ಆಕೆ ತನ್ನ ಪತಿ ಸ್ವರ್ಗಸ್ಥನಾದ ಮೇಲೆ ಪೂಜೆ ಜಪ ಧ್ಯಾನಗಳಲ್ಲಿ ನಿರತಳಾಗಿ ತನ್ನ ಕಾಲವನ್ನು ಕಳೆಯುತ್ತಿದ್ದಳು. ಆದರೆ ಆಕೆಯ ಆಚರಣೆಯಲ್ಲಿ ಒಂದು ವಿಶೇಷವಿತ್ತು. ವಿಧವೆಯಾದರೂ ಲೋಕರೂಢಿಗೆ ವಿರುದ್ದವಾಗಿ ಕೆಂಪು ಅಂಚಿನ ಸೀರೆಯನ್ನು ಉಟ್ಟುಕೊಂಡು ಕೈಯಲ್ಲಿ ಚಿನ್ನದ ಬಳೆಗಳನ್ನು ತೊಟ್ಟುಕೊಂಡು ಸಧವೆಯಂತೆ ಇರುತ್ತಿದ್ದಳು. ಇದರಿಂದ ಆಕೆ ಜನಗಳ ದೋಷಾರೋಪಣೆಗೆ ಗುರಿಯಾಗಿದ್ದಳು. ಆಕೆ ಮಾತ್ರ ಯಾವುದನ್ನೂ ಲೆಕ್ಕಿಸದೆ ಈಶ್ವರ ಧ್ಯಾನದಲ್ಲಿ ಆಸಕ್ತೆಯಾಗಿ ಇರುತ್ತಿದ್ದಳು. ಒಂದು ದಿನ ಆಕೆ ಇತರ ಸ್ತ್ರೀಯರೊಡನೆ ದಕ್ಷಿಣೇಶ್ವರಕ್ಕೆ ಬಂದಾಗ ಮಾತುಮಾತಿಗೆ ಆಕೆಯ ಆಚರಣೆಯ ವಿಚಾರ ಬಂದಿತು. ಶ್ರೀರಾಮಕೃಷ್ಣರು ಹೇಳಿದರು “ಸತಿ ಪತಿಯನ್ನು ಭಕ್ತಿ ಪ್ರೇಮಗಳಿಂದ ಸೇವಿಸಬೇಕು. ಪತಿವ್ರತೆಯಾದವಳು ಪತಿಯೇ ದೇವರೆಂದು ಭಾವಿಸುತ್ತಾಳೆ. ಪತಿ ತೀರಿಹೋದ ಮೇಲೆ ಆತನನ್ನು ಶ್ರೀಕೃಷ್ಣಪರಮಾತ್ಮನೆಂದು ಭಾವಿಸಿ ಆರಾಧಿಸಿದ ಸ್ತ್ರೀಯರೂ ಇದ್ದಾರೆ. ರಾಣೆಯೊಬ್ಬಳು  ತನ್ನ ಗಂಡನು ಜೀವಂತನಾಗಿದ್ದಾಗ ಚಿನ್ನದ ಆಭರಣಗಳನ್ನೇ ತೊಟ್ಟುಕೊಳ್ಳುತ್ತಿರಲಿಲ್ಲ. ಆಗಿನ ಪದ್ಧತಿಯಂತೆ ಒಂದು ಜೊತೆ ಕಬ್ಬಿಣದ ಬಳೆಗಳನ್ನು ಮಾತ್ರ ಹಾಕಿಕೊಂಡಿದ್ದಳು. ಬಂಧುಗಳು ಚಿನ್ನದ ಒಡವೆಗಳನ್ನು ಹಾಕಿಕೊ ಎಂದು ಎಷ್ಟು ಪೀಡಿಸಿದರೂ ಸಮ್ಮತಿಸಲಿಲ್ಲ. ಕಾಲಾನಂತರ ದೊರೆ ಸತ್ತು ಹೋದನು. ಆಗ ರಾಣಿ ಕಬ್ಬಿಣದ ಬಳೆಗಳನ್ನು ಮುರಿದು ಬಿಸಾಡಿ, ಅವುಗಳಿಗೆ ಬದಲಾಗಿ ಅಂದವಾದ ಚಿನ್ನದ ಬಳೆಗಳನ್ನು ಹಾಕಿಕೊಂಡಳು. ಅದನ್ನು ಕಂಡು ಜನಗಳಿಗೆ ಆಶ್ಚರ್ಯವಾಯಿತು. ಕಾರಣವೇನೆಂದು ಕೇಳಿದರು. ಅದಕ್ಕೆ ರಾಣಿ ಹೇಳಿದಳು: “ಇದುವರೆಗೆ ನನ್ನ ಪತಿ ನಶ್ವರ ಮಾನವ ದೇಹಧಾರಿಯಾಗಿ ನನ್ನ ಮುಂದಿದ್ದನು. ಆದ್ದರಿಂದಲೆ ನಾನು ಕೀಳಾದ ಕಬ್ಬಿಣದ ಬಳೆಗಳನ್ನು ಹಾಕಿಕೊಂಡಿದ್ದೆನು. ಈಗ ಆತನು ಅವಿನಶ್ವರವೂ ನಿತ್ಯವೂ ಆದ ಪರಮಾತ್ಮನಲ್ಲಿ ಐಕ್ಯವಾಗಿದ್ದಾನೆ.” – ಹಾಗೆಯೆ ಈಕೆಯ ಆಚರಣೆಯೂ ಅರ್ಥಪೂರ್ಣವಾಗಿದೆ. ತನ್ನ ಪತಿಯ ವಿಚಾರವಾಗಿ ಈಕೆಗೆ ಮಹೋನ್ಮತಭಾವವಿದೆ.” ಆಕೆಯ ಅಳಿಯನಾದ ರಾಖಾಲನು ಶ್ರೀರಾಮಕೃಷ್ಣರಲ್ಲಿಗೆ ಬಂದಾಗ ಆತನು ಸಂನ್ಯಾಸಿಯಾಗುವನೆಂಬ ಸುದ್ದಿ ಎಲ್ಲೆಲ್ಲಿಯೂ ಗುಸುಗುಸು ಹಬ್ಬಿತು. ಆಗ ಆಕೆ ಎಂದಳಂತೆ “ಈಶ್ವರಸಾಕ್ಷಾತ್ಕಾರಕ್ಕಾಗಿಯೂ ಸಾಧುಸಂತರ ಸೇವೆಗಾಗಿಯೂ ನನ್ನ ಅಳಿಯನು ಸಂಸ್ಕಾರತ್ಯಾಗಮಾಡಿದ ದಿನವನ್ನು ನಾನು ಶುಭದಿನವೆಂದೆ ಭಾವಿಸುತ್ತೇನೆ”. ತರುವಾಯ ಆ ಶುಭದಿನವೂ ಪ್ರಾಪ್ತವಾಗಿ ರಾಖಾಲನು ವಿಖ್ಯಾತರಾದ ಸ್ವಾಮಿ ಬ್ರಹ್ಮನಂದರಾದನು. ಅದನ್ನು ಮುಂದೆ ಕಾಣಲಿದ್ದೇವೆ.

ಶ್ರೀರಾಮಕೃಷ್ಣರ ಇನ್ನೊಬ್ಬ ಭಕ್ತೆ “ಜೋಗಿನ್ ಮಾ” ಎಂದು ಹೆಸರುಗೊಂಡಿದ್ದಾಳೆ. ಆಕೆ ವಿದ್ಯಾವತಿಯಾದ ಶ್ರೀಮಂತ ಸತಿ. ಪರಮಹಂಸರಿಂದ ಮಂತ್ರದೀಕ್ಷೇ ಕೈಕೊಂಡು ಶ್ರೀಶಾರದಾದೇವಿಯ ಅನವರತ ಸಂಗಿನಿಯಾದಳು. ಸ್ವಂತ ಆತ್ಮ ಕಲ್ಯಾಣವೊಂದನ್ನೆ ಬಯಸದೆ ಸ್ತ್ರೀಯರಿಗೆ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ ಸಾರ್ವಜನಿಕ ಕಾರ್ಯಗಳಲ್ಲಿಯೂ ಉದ್ಯುಕ್ತೆಯಾದಳು. ಜೋಗಿನ್ ಮಾತೆಯಂತೆಯೆ “ಗೋಲಾಪ್ ಮಾ”, “ಗೌರಿ ದಾಸಿ” ಮೊದಲಾದ ಸ್ತ್ರೀಭಕ್ತರೂ ಪರಮಹಂಸರಿಂದ ಅನುಗ್ರಹೀತರಾಗಿ ಧರ್ಮಜೀವನದಲ್ಲಿ ಮುಂದುವರಿದರು.

ಇವರೆಲ್ಲರಿಗಿಂತಲೂ ಅಘೋರಮಣಿದೇವಿ ಎಂಬಾಕೆಯ ಕಥೆ ವಿಚಿತ್ರವೂ ವಿಸ್ಮಯಕಾರಿಯೂ ಆಗಿದೆ. ಆಕೆ ತರುವಾಯ ಜೀವನದಲ್ಲಿ “ಗೋಪಾಲನ ತಾಯಿ” ಎಂದು ಪ್ರಸಿದ್ಧೆಯಾದಳು. ಕುಲೀನ ಬ್ರಾಹ್ಮಣ ವಂಶದಲ್ಲಿ ಜನಿಸಿದ ಆಕೆ ಬಾಲಿಕೆಯಾಗಿದ್ದಾಗಲೆ ವಿಧವೆಯಾದಳು. ದಕ್ಷಿಣೇಶ್ವರಕ್ಕೆ ಮೂರು ಮೈಲಿ ದೂರದಲ್ಲಿದ್ದ ರಾಧಾಗೋವಿಂದ ದೇವಾಲಯದಲ್ಲಿ ವಾಸಿಸುತ್ತ, ಬಳಿಯಲ್ಲಿಯೆ ಪ್ರವಹಿಸುತ್ತಿದ್ದ ಅಮರಾಪಗೆಯ ತೀರದಲ್ಲಿ ಧ್ಯಾನ ಜಪಾದಿಗಳಲ್ಲಿ ಕಾಲ ಕಳೆಯತ್ತ  ಕಠೋರ ತಪಸ್ವಿನಿಯಾಗಿದ್ದಳು. ವೈಷ್ಣವ ಭಾವಾಪನ್ನೆಯಾಗಿದ್ದ ಆಕೆ ಮಂತ್ರದೀಕ್ಷಿತೆಯಾಗಿ ವಾತ್ಸಲ್ಯಭಾವಸಾಧನೆಯನ್ನು ಕೈಕೊಂಡು ಶಿಶು ಶ್ರೀಕೃಷ್ಣನನ್ನು ತನ್ನ ಮಗುವೆಂದು ಭಾವಿಸಿ ಆರಾಧಿಸುತ್ತಿದ್ದಳು. ಇಂತು ಮೂವತ್ತು ಸಂವತ್ಸರಗಳು ಉಪಾಸನೆ ಮಾಡಿದ ಮೇಲೆ ಕ್ರಿ. ಶ. ೧೮೮೪ ರಲ್ಲಿ ಆಕೆಗೆ ಶ್ರೀರಾಮಕೃಷ್ಣರ ಸಂದರ್ಶನವಾಯಿತು. ಮೊದಲನೆಯ ಸಾರಿ ಕಂಡಾಗಲೆ ಪತಮಹಂಸರು ಅಘೋರಮಣಿದೇವಿಎ ತನ್ನ “ಇಷ್ಟ”ವಾದ ಶಿಶು ಗೋಪಾಲನಂತೆ ತೋರಿದರು. ತರುವಾಯ ಆಕೆಯ ಪರವಾದ ಅವರ ಆಚರಣೆಯೆಲ್ಲವೂ ಶಿಶುಭಾವಪೂರ್ಣವಾಗಿತ್ತು. ಎರಡನೆಯ ಸಾರಿ “ಗೋಪಾಲನ ತಾಯಿ” ಪರಮಹಂಸರಲ್ಲಿಗೆ ಬಂದಾಗ ಅವರು ಎಳೆಮಗುವಿನಂತೆ “ಬಂದೆಯಾ? ಅಮ್ಮಾ. ನನಗೇನು ತಿಂಡಿ ತಂದಿದ್ದೀಯಾ? ಇತ್ತ ಕೊಡು” ಎಂದು ಕೇಳಿದರು. ಅಘೋರಮಣಿ ತಾನು ತಂದಿದ್ದ ಮಿಠಾಯಿಗಳನ್ನು ಸ್ವಲ್ಪ ಸಂಕೋಚಪಟ್ಟುಕೊಂಡು ಕೊಡಲು, “ಅಂಗಡಿಯಿಂದ ಇವುಗಳನ್ನು ಕೊಂಡು ಕೊಳ್ಳಲು ದುಡ್ಡನ್ನೇಕೆ ಖರ್ಚುಮಾಡುತ್ತೀಯೆ? ನೀನೆ ಕಾಯುಂಡೆಗಳನ್ನು ತಯಾರುಮಾಡಿ ತರಬಾರದೆ? ಅಥವಾ ನೀನು ಊಟ ಮಾಡುವ ಪದಾರ್ಥಗಳಲ್ಲಿಯೆ ನನಗೂ ಸ್ವಲ್ಪ ತಂದರೆ ಸಾಕು. ನೀನೆ ಅಡುಗೆ ಮಾಡಿದ ಪದಾರ್ಥಗಳನ್ನು ತಿನ್ನಲು ನನಗೆ ತುಂಬ ಇಷ್ಟ” ಎಂದರು. ಹೀಗೆ ಸಲಸಲವೂ ದಿನದಿನವೂ ಅಘೋರಮಣಿ ತಮ್ಮೆಡೆಗೆ ಬಂದಾಗಲೆಲ್ಲ ಪರಮಹಂಸರು ತಿಂಡಿಗಾಗಿ ಪೀಡಿಸತೊಡಗಿದರು. ಇದನ್ನು ಕಂಡು ಆಕೆ “ಇವನೆಂತಹ ತಿಂಡಿಪೋತ ಸಾಧು! ದೇವರು, ಧರ್ಮ ಇವುಗಳನ್ನು ಕುರಿತು ಮಾತಾಡುವುದನ್ನು ಬಿಟ್ಟು ಮೂರುಹೊತ್ತು “ತಿಂಡಿ! ತಿಂಡಿ! ತಿಂಡಿ! ಎಂದು ಅರಚುತ್ತಾನೆ. ನಾನೋ ಬಡ ವಿಧವೆ! ದಿನಾಗಲೂ ಎಲ್ಲಿಂದ ತರಲಿ ಇವನಿಗೆ ತಿಂಡಿಯನ್ನು? ಸಾಕಪ್ಪಾ; ಸಹವಾಸ ಸಾಕು! ನಾನು ಇನ್ನು ಮೇಲೆ ಇಲ್ಲಿಗೆ ಬರುವುದಿಲ್ಲ” ಎಂದು ಕೊಂಡು ಹೋಗುವಳು. ಆದರೆ ಮತ್ತೆ ಏನೋ ಒಂದು ಅನಿವಾರ್ಯ ಆಕರ್ಷಣೆಯಿಂದ ಪ್ರೇರಿತಳಾಗಿ ದಕ್ಷಿಣೇಶ್ವರಕ್ಕೆ ಬರುವಳು. ಪರಮಹಂಸರು ಪುನಃ ತಿಂಡಿ, ಊಟ, ಅಡುಗೆ ಇವುಗಳ ವಿಚಾರವಾಗಿಯೆ ಮಾತಾಡುವರು! ಒಂದೊಂದು ಸಾರಿ ರೇಜಿಗೆ ಹಿಡಿದು ” ಅಯ್ಯೋ! ಗೋಪಾಲ, ನಿನ್ನ ಉಪಾಸನೆ ಮಾಡಿದ್ದಕ್ಕೆ ನನಗಿದೇ ಫಲವೆ? ಎಂಥ ತಿಂಡಿಪೋತ ಹೊಟ್ಟೆಬಾಕ ಸಂನ್ಯಾಸಿಯ ಬಳಿಗೆ ನನ್ನನ್ನು ತಂದುಬಿಟ್ಟೆ! ಎಂದು ಶಪಿಸುವಳು. ಆದರೆ ದಕ್ಷಿಣೇಶ್ವರಕ್ಕೆ ಬರುವುದನ್ನಾಗಲಿ ತಿಂಡಿ ತರುವುದನ್ನಾಗಲಿ ಬಿಡಲಿಲ್ಲ.

ಹೀಗೆಯೆ ಕೆಲವು ತಿಂಗಳು ಕಳೆದುವು. ಒಂದು ರಾತ್ರಿ ಮೂರು ಗಂಟೆಗೆ ಅಘೋರಮಣಿ ತನ್ನ ಪೂಜಾಮಂದಿರದಲ್ಲಿ ಧ್ಯಾನ ಮಾಡುತ್ತಿದ್ದಳು. ಇದ್ದಕ್ಕಿದ್ದ ಹಾಗೆ ಶ್ರೀರಾಮಕೃಷ್ಣ  ಪರಮಹಂಸರನ್ನು ಕಂಡಳು! “ಇದೇನು ಈತನೇಕೆ ಇಷ್ಟು ರಾತ್ರಿ ಇಲ್ಲಿಗೆ ಬಂದಿದ್ದಾನೆ?” ಎಂದು ಆಶ್ಚರ್ಯಪಡುತ್ತಿರುವಾಗಲೆ ಪರಮಹಂಸರು ಅದೃಶ್ಯರಾಗಿ ಆ ಮೂರ್ತಿಯಿಂದ ಶಿಶುಗೋಪಾಲನ ತ್ರಿಭುವನ ಮೋಹಕವಾದ ನವನೀತ ಸದೃಶ ಕೋಮಲ ಸಜೀವ ವಿಗ್ರಹವು ಹೊರಹೊಮ್ಮಿ ಅಂಬೆಗಾಲಿಕ್ಕುತ್ತ ಹರಿದು ಬಳಿಗೆ ಬಂದು ಕೈಯನ್ನು ಮೇಲೆತ್ತಿ ಅಘೋರಮಣಿಯನ್ನು ಎವೆಯಿಕ್ಕದೆ ನೋಡುತ್ತಾ “ಅಮ್ಮಾ ನನಗೆ ಬೆಣ್ಣೆ ಬೇಕು!” ಎಂದು ತೊದಲು ನುಡಿಯಿಂದ ಮುದ್ದಾಗಿ ಮಾತಾಡಿತು. ಅಘೋರಮಣಿ ಬೆರಗಾದಳು! ಹರ್ಷೋನ್ಮಾದದಿಂದ ಕೂಗಿಕೊಂಡಳು! “ಅಯ್ಯೋ, ನಾನು ಬಡವೆ. ನಿರ್ಗತಿಕೆ ವಿಧವೆ. ಬೆಣ್ಣೆಯನ್ನು ಎಲ್ಲಿಂದ ತರಲಿ? ನನ್ನ ಕಂದಾ!” ಎಂದಳು. ಆದರೂ ಶಿಶುಗೋಪಾಲನು ಹಟ ಮಾಡಿದನು.”ಏನಾದರೂ ಕೊಡು ತಿನ್ನುವುದಕ್ಕೆ” ಎಂದು. ಕಡೆಗೆ ಕೆಲವು ಕಾಯುಂಡೆಗಳನ್ನು ಕೊಟ್ಟಳು. ಗೋಪಾಲನು ಅವುಗಳನ್ನು ತಿನ್ನುತ್ತಾ ಆಕೆಯ ತೊಡೆಯ ಮೇಲೆ ಕೂತುಕೊಂಡನು. ಪ್ರಾತಃಕಾಲದಲ್ಲಿ ಅಘೋರಮಣಿ ತನ್ನ ಶಿಶುಗೋಪಾಲನನ್ನು ಎದೆಗಪ್ಪಿ ಎತ್ತಿಕೊಂಡು ಹುಚ್ಚಿಯಂತೆ ದಕ್ಷಿಣೇಶ್ವರಕ್ಕೆ ಧಾವಿಸಿದಳು. ಅಲ್ಲಿಗೆ ಹೋದಕೂಡಲೆ ಶಿಶುಗೋಪಾಲನು ಆಕೆಯ ಕೈಯಿಂದ ನುಣುಚಿಕೊಂಡು ಹೋಗಿ ಭಾವದಲ್ಲಿದ್ದ ಪರಮಹಂಸರಲ್ಲಿ ಲೀನವಾದನು! ಅಂದಿನಿಂದ ಅಘೋರಮಣಿ ಶ್ರೀರಾಮಕೃಷ್ಣರು ತನ್ನ ಇಷ್ಟದೇವತೆಯಲ್ಲದೆ ಬೇರೆಯಲ್ಲ ಎಂದು ಗೊತ್ತಾಗಿ ಪ್ರಸನ್ನಚಿತ್ತೆಯಾದಳು. ಆಗ ಆಕೆಗೆ ಅವರ ತಿಂಡಿಪೋತತನದ ಗುಟ್ಟು ಹೊಳೆಯಿತು.

ಒಂದು ದಿನ ಅರ್ಧ ನೀರಿಶ್ವರವಾದಿಯಾಗಿದ್ದ ನರೇಂದ್ರನಾಥನು ದಕ್ಷಿಣೇಶ್ವರಕ್ಕೆ ಬಂದಿದ್ದಾಗ “ಗೋಪಾಲನ ತಾಯಿಯೂ ಅಲ್ಲಿದ್ದಳು. ದರ್ಶನಗಳಿಗೆಲ್ಲ ಚಿತ್ತಭ್ರಮೆಯೆ ಕಾರಣವೆಂದು ವಾದಿಸುತ್ತಿದ್ದ ಆತನಿಗೆ ತನ್ನ ಅನುಭವದ ವೃತ್ತಾಂತವನ್ನು ತಿಳಿಸಲು ವಿನೋದಶೀಲರಾಗಿದ್ದ ಪರಮಹಂಸರು ಅಘೋರಮಣಿದೇವಿಗೆ ಬೆಸಸಿದರು. ಆಕೆ ಮೊದಲು ಹಿಂಜರಿದರೂ ಕಡೆಗೆ ಶ್ರೀರಾಮಕೃಷ್ಣರ ಉತ್ತೇಜನದಿಂದ ಧೈರ್ಯಗೊಂಡು ತನ್ನ “ಶಿಶುಗೋಪಾಲ ದರ್ಶನ”ದ ಕಥೆಯನ್ನು ಸವಿಸ್ತಾರವಾಗಿ ಹೇಳಿದಳು. ನಡುನಡುವೆ “ಅಪ್ಪಾ, ನರೇನ್, ನೀನು ಬುದ್ದಿಶಾಲಿ; ಶಾಸ್ತ್ರಗಳನ್ನು ಓದಿದದ್ದೀಯೆ. ನಾನೋ ಏನೂ ತಿಳಿಯದ ದರಿದ್ರ ಮೂರ್ಖ ವಿಧವೆ. ನನ್ನ ದರ್ಶನ ನಿಜವೊ ಸುಳ್ಳೋ ನೀನೇ ಹೇಳಬೇಕು” ಎಂದು ಹೇಳುತ್ತಿದ್ದಳು. ಕಂಬನಿತುಂಬಿ ಆಲಿಸುತ್ತಿದ್ದ ನರೇಂದ್ರ ಪ್ರತಿಸಲವೂ “ಸುಳ್ಳಲ್ಲ. ತಾಯಿ, ಸುಳ್ಳಲ್ಲ, ಅಕ್ಷರಶಃ ಸತ್ಯ; ಅಕ್ಷರಶಃ ಸತ್ಯ;!” ಎಂದು ಹೇಳಿದನು.

ಪರಮಹಂಸ ಗುರುದೇವನ ಸ್ತ್ರೀಭಕ್ತರಲ್ಲಿ ಸರ್ವಶ್ರೇಷ್ಠವೂ ಪ್ರಥಮ ಪ್ರಧಾನವೂ ಸುಪ್ರಸಿದ್ಧವೂ ಆದ ವ್ಯಕ್ತಿ ಎಂದರೆ ಅವರ ಸಹಧರ್ಮಿಣಿ ಶ್ರೀ ಶಾರದಾಮಣಿದೇವಿ. ಹಿಂದಿನ ಅಧ್ಯಾಯಗಳಲ್ಲಿ ಪ್ರಾಸಂಗಿಕವಾಗಿ ಆ “ಮಹಾಮಾತೆ”ಯ ವಿಚಾರವಾಗಿ ಅಲ್ಲಲ್ಲಿ ಪ್ರಸ್ತಾಪಿಸಿದ್ದೇವೆ. ಆದರೆ ಆಕೆಯ ವ್ಯಕ್ತಿತ್ವದ ಸಂಪೂರ್ಣ ನಿಷ್ಕೃಷ್ಟ ಪರಿಚಯಕ್ಕೆ ಅದು ಸಾಲದು ಜಗತ್ತು ಪರಮಹಂಸರ ಆತ್ಮಜ್ಯೋತಿಯ ನೀರವಧ್ಯಾನ ಜೀವನದ ನಮ್ರದೀಪ್ತಿಯನ್ನು ಅಲ್ಪಜ್ಞಾನದಿಂದಾಗಲಿ ನಿರ್ಲಕ್ಷತೆಯಿಂದಾಗಲಿ ಅನಾದರದಿಂದ ಕಾಣದಂತೆ ಮಾಡುವುದು ಪ್ರತಿಯೊಬ್ಬ ಜೀವನಚರಿತ್ರಕಾರನ ಕರ್ತವ್ಯವಾಗಿದೆ. ಸಿದ್ಧಪುರುಷರಾದ ಶ್ರೀರಾಮಕೃಷ್ಣರ ಮಹಾ ತ್ಯಾಗವು ಸಂಶಯಲೇಶವೂ ಇಲ್ಲದೆ ಸ್ವಾನುಭವಜ್ಞಾನದ ಶಾಶ್ವತ ಶಿಲಾಸ್ತಿಭಾರದ ಮೇಲೆ ನಿಂತಿದೆ. ಕೇವಲ ಬಾಲಿಕೆಯಾದ ಶ್ರೀ ಶಾರದಾಮಣಿಯ ಮಹತ್ತರ ತ್ಯಾಗವಾದರೂ ಪತಿಯ ಮೇಲಣ ಶ್ರದ್ಧೆಯ ಮೇಲೆ ನಿಂತಿದೆ. ಸೀತೆ, ಸಾವಿತ್ರಿ, ದಮಯಂತಿ ಮೊದಲಾದ ಭರತಖಂಡದ ಆದರ್ಶ ಸ್ತ್ರೀಯರಲ್ಲಿ ಕಂಡುಬರುವುದಕ್ಕಿಂತಲೂ ಅತಿಶಯವಾದ, ಏಕೆಂದರೆ ವಿಶೇಷತಃ ಅಂತರ್ಮುಖಿಯಾದ ಪೌರಾಣಿಕ ಗಾಂಭೀರ್ಯವು “ಶ್ರೀಮಾತೆ”ಯ ಜೀವನದಲ್ಲಿ ಮೂಡಿರುತ್ತದೆ. ಶಾರದಾದೇವಿಗೆ “ಶ್ರೀಮಾತೆ”ಎಂಬ ಬಿರುದು ಅನ್ವರ್ಥನಾಮವಾಗಿ ಸಲ್ಲುತ್ತದೆ. ಶ್ರೀಗುರುದೇವನ ನಿರ್ಯಾಣಾನಂತರ ಶ್ರೀಮಾತೆಯ ಭವ್ಯ ಜ್ಯೋತಿಯ ಆಶ್ರಯದಲ್ಲಿ ಅನೇಕ ಜೀವರು ತಮ್ಮ ಆತ್ಮ ಪ್ರದೀಪಗಳನ್ನು ಹೊತ್ತಿಕೊಂಡು ಧನ್ಯರಾದರು.

ಐದನೆಯ ವಯಸ್ಸಿನಲ್ಲಿ ಮದುವೆಯಾದದ್ದು, ಹತ್ತು ಹನ್ನೆರಡು ವರ್ಷಗಳ ತರುವಾಯ ಪತಿಯ ದರ್ಶನವಾದದ್ದು, ಹಳ್ಳಿಯಿಂದ ದಕ್ಷಿಣೇಶ್ವರಕ್ಕೆ ತಾಯಿಯ ಆಣತಿಯನ್ನು ಪಡೆದು ಕಾಲುನಡಿಗೆಯಲ್ಲಿಯೆ ಹೊರಟದ್ದು, ದಾರಿಯಲ್ಲಿ ಅಸ್ವಸ್ಥಳಾಗಿ ರಾತ್ರಿಯ ಸಮಯದಲ್ಲಿ ದಕ್ಷಿಣೇಶ್ವರಕ್ಕೆ ಬರಲು ಪರಮಹಂಸರು ಬಹಳ ನೊಂದು ಎದೆಗರಗಿ ಶುಶ್ರೂಷೆ ಮಾಡಿದ್ದು, ತರುವಾಯ ಪತಿಪತ್ನಿಯರಿಬ್ಬರೂ ಪರಸ್ಪರಾನುಮತಿಯಿಂದ ಆಜೀವ ಬ್ರಹ್ಮಚರ್ಯ ವ್ರತವನ್ನು ಗ್ರಹಣ ಮಾಡಿದ್ದು, ಪರಮಹಂಸರು ತಮ್ಮ ಅರ್ಧಾಂಗಿಯನ್ನು ದೇವಿಯ ಪೀಠದ ಮೇಲೆ ಕುಳ್ಳಿರಿಸಿ ಪೂಜೆಮಾಡಿ ತಮ್ಮ ತಪಃಫಲ ಜಪಮಾಲೆಗಳನ್ನು ಆಕೆಯ ಪದತಲದಲ್ಲಿ ವಿಸರ್ಜಿಸಿ ನಿವೇದಿಸಿದ್ದು, ಪತ್ನಿ ಪತಿಯನ್ನು ಗುರುವೆಂದು ಸ್ವೀಕರಿಸಿ ಮುಖ್ಯ ಕಥಾವಿಷಯಗಳು ಈಗಾಗಲೆ ವಾಚಕರಿಗೆ ಸುಪರಿಚಿತವಾಗಿವೆ. ಅಂದಿನಿಂದ ಶ್ರೀಮಾತೆ ಪರಮಹಂಸರನ್ನು “ಗುರುದೇವ”ನೆಂದು ಭಾವಿಸಿ, ಸಂಭಾವಿಸಿ, ಸಂಭೋಧಿಸಿ, ದೈಹಿಕ ಸಂಬಂಧ ವಿಹೀನವಾದ ದೈವಿಕ ಪ್ರೇಮಪಾಶಬದ್ಧಳಾಗಿ, ಐಹಿಕ ಪಾರಲೌಕಿಕ ವ್ಯಾವಹಾರಿದ ಪಾರಮಾರ್ಥಿಕ ಸಕಲ ವಿದ್ಯೆಗಳನ್ನು ಅವರಿಂದ ಕಲಿಯುತ್ತ ಆದರ್ಶ ಮಹಿಳೆಯಾಗಿ ಮಹಿಳೆಯರಿಗೆ ಆದರ್ಶವಾಗಿ ಬೆಳೆದಳು. ಸಂನ್ಯಾಸಿಯಾಗಿದ್ದರೂ ಕ್ರಮ, ನಿಯಮ, ಸೌಂದರ್ಯ ಮತ್ತು ನೈರ್ಮಲ್ಯ ಪಕ್ಷಪಾತಿಯಾಗಿಯೂ ಇದ್ದ ಪರಮಹಂಸರು ಆಡಂಬರವಿಲ್ಲದಂತೆ ಗಾಂಭೀರ್ಯ ಕೆಡದಂತೆ ಹೇಗೆ ಅಚ್ಚುಕಟ್ಟಾಗಿಯೂ ಚೊಕ್ಕಟವಾಗಿಯೂ ಬಾಳಬೇಕು ಎಂಬುದನ್ನು ಶ್ರೀಮಾತೆಗೆ ಪ್ರೇಮಪುರಸ್ಸರವಾಗಿ ಕಲಿಸಿದರು. ಶಾರದಾಮಣಿದೇವಿಯಲ್ಲಿ ಎಂದಾದರೂ ಸ್ತ್ರೀ ಸಹಜವಾದ ವಸ್ತ್ರಭೂಷಣಲಾಲಸೆ ಕಂಡುಬಂದಾಗ ಅದನ್ನು ಬಹು ಜಾಗರೂಕತೆಯಿಂದ ಅಭಿಮಾನ ಭಂಗವಾಗದ ರೀತಿಯಲ್ಲಿ ಖಂಡಿಸಿ ಉಪಾಯದಿಂದ ಆಚರಿಸುತ್ತಿದ್ದರು. ಒಂದು ಸಾರಿ ಕುಮಾರಿಯಾಗಿದ್ದ ಶ್ರೀ ಮಾತೆ ಎಂದಿಗಿಂತಲೂ ವಿಶೇಷವಾಗಿ ಅಲಂಕಾರ ಮಾಡಿಕೊಂಡು ಒಂದಿನಿರು ಹೆಮ್ಮೆಯಿಂದ ಪರಮಹಂಸರ ಬಳಿಗೆ ಹಣ್ಣು ಹಂಪಲುಗಳಿದ್ದ ತಟ್ಟೆಯನ್ನು ತರಲು, ಅವರು  ಆಕೆಯನ್ನು ಎವೆಯಿಕ್ಕದೆ ಗಂಭೀರವಾಗಿ ನೋಡಿ “ಅದೆಲ್ಲಾ ಸರಿಯೇ, ಆದರೆ ಇಷ್ಟೊಂದು ವೈತಾರವೇತಕ್ಕೆ?” ಎಂದರಂತೆ. ಶಿಶು ಹೃದಯದ ಕುಮಾರಿಗೆ ಆಘಾತವಾದಂತಾಗಿ ನಸು ಮುನಿದುಕೊಂಡು “ಇದ್ದರೇನಂತೆ! ನನಗಾಗಿ ಏನಲ್ಲ!…” ಎಂದು ತನ್ನೊಳಗೆ ತಾನೆ ಗೊಣಗುಟ್ಟುತ್ತ ನೀರವಾಗಿ ರೋಧಿಸುತ್ತ ಹೊರಟು ಹೋದಳು. ಅದನ್ನು ನೋಡಿ ಶ್ರೀರಾಮಕೃಷ್ಣರು ನೊಂದುಕೊಂಡು ಬಳಿಯಿದ್ದವರೊಂದಿಗೆ “ಯಾರಾದರೊಬ್ಬರು ಹೋಗಿಯಪ್ಪಾ! ಆಕೆಯನ್ನು ಕರೆದು ತನ್ನಿ. ಆಕೆ ಅಳುವುದನ್ನು ಕಂಡರೆ ನನ್ನ ಈಶ್ವರ ಭಕ್ತಿಯೆಲ್ಲ ಹಾರಿಹೋಗಿ ಬಿಡುತ್ತದೆ! ” ಎಂದರಂತೆ. ಯತಿಚಕ್ರವರ್ತಿಗೆ ಸತಿಯಲ್ಲಿ ಅಷ್ಟು ಅಕ್ಕರೆಯಿತ್ತು! ಸೋದರಿ ನಿವೇದಿತ ಹೀಗೆಂದು ಬರೆದಿದ್ದಾರೆ:

“ಶ್ರೀರಾಮಕೃಷ್ಣರಿಗೆ ಭರತಖಂಡದ ಆದರ್ಶ ಸ್ತ್ರೀತ್ವದ ವಿಚಾರವಾಗಿದ್ದ ಮಹೋನ್ನತವಾದ ಅಭಿಪ್ರಾಯವು ಶ್ರೀಮಾತೆಯಲ್ಲಿ ಮೂರ್ತಿಮತ್ತಾಗಿದೆ. ಆದರೆ ಆಕೆ ಪುರಾತನ ಸಂಪ್ರದಾಯದ ಭರತವಾಕ್ಯವೊ ಅಥವಾ ನೂತನ ಯುಗಧರ್ಮದ ನಾಂದಿಯೋ? ಆಕೆಯಲ್ಲಿ ಸರ್ವಸಾಮಾನ್ಯವಾದ ಮಹಿಳೆಯರಿಗೂ ಸುಲಭಸಾಧ್ಯವಾಗಬಹುದಾದ ಜಾಣ್ಮೆಯೂ ಮಾಧುರ್ಯವೂ ಒಂದುಗೂಡಿ ಮೂಡಿವೆ. ಆದರೂ ನನಗಂತೂ ಆಕೆಯ ರಾಜ್ಞೀಸ್ವಭಾವದ ಔದಾರ್ಯವೂ ಹೃದಯ ಮನೋ ವೈಶಾಲ್ಯವೂ ಆಕೆಯಲ್ಲಿ ಕಂಡುಬರುವ ದಿವ್ಯಭಾವದಂತೆಯೇ ಮಹದಾಶ್ಚರ್ಯಕರವಾಗಿದೆ. ಎಂತಹ ಬಿಕ್ಕಟ್ಟಾದ ಸಮಸ್ಯೆಯಾಗಲಿ ಎಂತಹ ತೊಡಕಾದ ಪ್ರಶ್ಮೆಯಾಗಲಿ ಆಕೆ ಒಂದಿನಿತೂ ತಡವರಿಸದೆ ಉದಾರವಾಣಿಯಿಂದ ಸಮರ್ಪಕವಾಗಿ ಉತ್ತರ ಹೇಳುವುದನ್ನು ನಾನೆನಿತೊ ಸಾರಿ ನೋಡಿದ್ದೇನೆ. ಆಕೆಯ ಜೀವನವೆಲ್ಲ ಒಂದು ಮಹಾ ನೀರವಧ್ಯಾನವಾಗಿದೆ.”

ಶಾರದಾದೇವಿ ತನ್ನ ತವರೂರಿನಿಂದ ಮೊದಲನೆಯ ಸಾರಿ ದಕ್ಷಿಣೇಶ್ವರಕ್ಕೆ ಬಂದ ಸಮಯದಲ್ಲಿ ಪರಮಹಂಸರ ಸಾನ್ನಿಧ್ಯಲಾಭ ಆಕೆಗೆ ಉಲ್ಲಾಸಕರವಾಗಿದ್ದರೂ ಭಯಮಿಶ್ರವಾಗಿತ್ತು. ಪತಿಯ ಬಿರುಹೊನಲ ಹುಚ್ಚುಹೊಳೆಯಲ್ಲಿ ಅರಿಯದ ಬಾಲೆ ಕಂಗಾಲಾದಳು. ಒಮ್ಮೆ ಮೌನ, ಒಮ್ಮೆಹಾಸ್ಯ, ಒಮ್ಮೆ ಧ್ಯಾನ, ಒಮ್ಮೆ ಉಪದೇಶ, ಒಮ್ಮೆಕೀರ್ತನೆ, ಒಮ್ಮೆನೃತ್ಯ, ಒಮ್ಮೆ ಅಗಾಧ ಗಭೀರಸಮಾಧಿ ಇಂತು ನಾನಾ ಭಾವಗಳಲ್ಲಿಯೂ ಭಾವ ಲಯಗಳಲ್ಲಿಯೂ ಹಾರಿ ಮುಳುಗಿ ಏಳುತ್ತಿದ್ದ ಈಶ್ವರೊನ್ಮತ್ತನ ಬಳಿ ತರಳೆ ದಿಗ್ಭ್ರಾಂತೆಯಾದಳು. ಆಕೆಗೆ ಸಮಾಧಿ ಮೂರ್ಛೆಗಳು ಅರ್ಥವಾಗುತ್ತಿರಲಿಲ್ಲ. ಒಂದು ದಿನ ಪರಮಹಂಸರು ಬಹಳ ಹೊತ್ತು ಸಮಾಧಿಸ್ಥರಾಗಿದ್ದುದನ್ನು ಕಂಡು ಶಾರದಾದೇವಿ ಬೆದರಿ ಅಳುತ್ತ  ಓಡಿಹೋಗಿ ಹೃದಯರಾಮನನ್ನು ಕರೆಯಲು, ಆತನು ಬಂದು ನೋಡಿ ಸಂತೈಸಿ ಮಾವನ ಕಿವಿಯಲ್ಲಿ ಮಂತ್ರಘೋಷವನ್ನು ಮಾಡಲು ಬಾಹ್ಯಪ್ರಜ್ಞೆಯುಂಟಾಯಿತು. ಸಹಧರ್ಮಿಣಿಯ ದುರವಸ್ಥೆಯನ್ನು ತಿಳಿದ ಶ್ರೀರಾಮಕೃಷ್ಣರು ಆಕೆಗೆ ರಹಸ್ಯ ಮಂತ್ರಗಳನ್ನು ಹೇಳಿಕೊಟ್ಟು, ತಮಗೆ ಸಮಾಧಿಯುಂಟಾದಾಗ ಆಯಾ ದೈಹಿಕ ಚಿಹ್ನೆಗಳಿಗನುಸಾರವಾಗಿ ಆಯಾಮಂತ್ರಗಳನ್ನು ಕಿವಿಯಲ್ಲಿ ಉಚ್ಚರಿಸುವಂತೆ ಬೆಸಸಿದರು. ತರುವಾಯ ಶ್ರೀಮಾತೆ ಭಯಪಡದೆ ಪತಿಯನ್ನು ಸಮಾಧಿಯಿಂದ ಕೆಳಗಿಳಿಸಲು ಸಮರ್ಥೆಯಾದಳು.

ಒಂದುಸಾರಿ ಶ್ರೀಮಾತೆ ಗುರುದೇವನ ಚರಣಶುಶ್ರೂಷೆಮಾಡುತ್ತ “ನೀವು ನನ್ನನ್ನು ಯಾವ ದೃಷ್ಟಿಯಿಂದ ಕಾಣುತ್ತೀರಿ!” ಎಂದು ಕೇಳಿದಳು. ಪರಮಹಂಸರು ಹೇಳಿದರು: “ಯಾವ ಮಾತೆಯನ್ನು ನಾನು ನಿತ್ಯವೂ ದೇವಾಲಯದಲ್ಲಿ ಪೂಜಿಸುತ್ತೇನೆಯೋ ಆ ಮಾತೆಯ ಈ ಶರೀರವನ್ನು ಹೆತ್ತಳು: ಆ ಮಾತೆಯೇ ನೌಬತ್ತುಖಾನೆಯಲ್ಲಿ ವಾಸಿಸುತ್ತಿದ್ದಳು: ಅದೇ ಮಾತೆಯೇ ಈಗ ಈ ಕ್ಷಣದಲ್ಲಿ ನನ್ನ ಚರಣಶುಶ್ರೂಷೆಯನ್ನೂ ಮಾಡುತ್ತಿದ್ದಾಳೆ. ನಾನು ನಿನ್ನನ್ನು  ಆನಂದಮಯಿಯಾದ ಜಗನ್ಮಾತೆಯ ಪ್ರತ್ಯಕ್ಷ ಪ್ರತಿನಿಧಿಯೆಂದು ಸರ್ವದಾ ಭಾವಿಸುತ್ತೇನೆ.”

ಪರಮಹಂಸರ ಜೀವನವು ಸರ್ವಧರ್ಮಗಳ ಸಮನ್ವಯತತ್ತ್ವವನ್ನು ಹೇಗೆ ನಿದರ್ಶಿಸುತ್ತಿದೆಯೊ ಹಾಗೆಯೆ ಸರ್ವಾಶ್ರಮಗಳ ಸಮನ್ವಯವನ್ನೂ ತೋರುತ್ತಿದೆ. ಸಂನ್ಯಾಸಿ ಸಂಸಾರಗಳ ಸಮನ್ವಯವೆಂದರೆ ವಿಚಿತ್ರವಾಗಿ ಕಾಣುತ್ತದೆ. ಆದರೂ ಗುರುದೇವನು ಸಂನ್ಯಾಸಿಗಳಿಗೆ ಆದರ್ಶವಾಗಿದ್ದಂತೆ ಸಂಸಾರಿಗಳಿಗೂ ಆದರ್ಶವಾಗಿರುತ್ತಾನೆ. ಎಂಬುದು ನಿಸ್ಸಂದೇಹವಾದುದು. ಸಾಧಾರಣವಾಗಿ ನೋಡಿದರೆ ಸಂನ್ಯಾಸಿಯಾದವನು ಎಂದಿಗೂ ಮದುವೆ ಮಾಡಿಕೊಳ್ಳುವುದಿಲ್ಲ. ಹಾಗೆ ವರ್ತಿಸಿದರೆ ಆತನು ಭ್ರಷ್ಟನಾಗುತ್ತಾನೆ. ಒಂದು ವೇಳೆ ಮೊದಲೇ ವಿವಾಹವಾಗಿದ್ದರೂ ಪತ್ನಿಯ ಸಹಿತ ಸರ್ವಸಂಬಂಧಗಳನ್ನೂ ವರ್ಜಿಸಿ, ಆಕೆಯನ್ನೂ ತ್ಯಜಿಸಿ, ಗೃಹತ್ಯಾಗಿಯಾಗುತ್ತಾನೆ. ಪರಮಹಂಸ ರಾಮಕೃಷ್ಣರು ಸಂನ್ಯಾಸಿ, ತಮ್ಮ ಇಪ್ಪತ್ತುಮೂರನೆಯ ವಯಸ್ಸಿನಲ್ಲಿ ಚೆನ್ನಾಗಿ ಬುದ್ಧಿ ಬಂದಮೇಲೆ ಸ್ವಸಮ್ಮತಿಯಿಂದಲೆ ಲಗ್ನವಾದರು. ಆದರೂ ಸಾಧಾರಣ ಮಾನವರಂತೆ ಹೆಂಡತಿಯೊಡನೆ ಸಂಸಾರ ಹೂಡಲೂ ಇಲ್ಲ; ಆಕೆಯನ್ನು ಹೊರದೂಡಲೂ ಇಲ್ಲ; ಸತಿಯೊಡನೆ  ಯಾವ ವಿಧವಾದ ದೈಹಿಕ ಸಂಬಂಧವನ್ನೂ ಇಟ್ಟುಕೊಳ್ಳದೆ ಆಕೆಯನ್ನು ಸ್ನೇಹವಚನಗಳಿಂದಲೂ ಉಪದೇಶಗಳಿಂದಲೂ ನಿಜಜೀವನದ ದೃಷ್ಟಾಂತಗಳಿಂದಲೂ ಉತ್ತಮೋತ್ತಮ ಜೀವನ ಶಿಖರಕ್ಕೆ ತಂದು ನಿಲ್ಲಿಸಿದರು. ಇದು ಅವರ ಜೀವನದಲ್ಲಿ ಒಂದು ವಿಶೇಷತೆ.

ಅಂತಹ ವಿಶೇಷತೆ ಶ್ರೀರಾಮಕೃಷ್ಣರ ಜೀವನದಲ್ಲಿ ಮಾತ್ರವಲ್ಲದೆ ಶಾರದಾಮಣಿದೇವಿಯ ಜೀವನದಲ್ಲಿಯೂ ಕಂಡುಬರುತ್ತದೆ. ಅರಿಯದ ಹುಡುಗಿ ಪತಿಯ ಮಹಾಜೀವನಕ್ಕಾಗಿ ತನ್ನ ಸರ್ವಸ್ವಭಾವವನ್ನೂ ತ್ಯಾಗಮಾಡಿದ್ದು ಸಾಮಾನ್ಯ ಘಟನೆಯಲ್ಲ. ಶ್ರೀಮಾತೆಯ ಜೀವನಯಾತ್ರೆ ರೌಚಕವಾದ ಮಹಾಘಟನೆಗಳಿಂದ ಕೂಡಿರದಿದ್ದರೂ ಭಗಿನೀ ನಿವೇದಿತೆಯ ಮಾತಿನಂತೆ “ಆಕೆಯ ಜೀವನವೆಲ್ಲ ಒಂದು ಮಹಾ ನೀರವಧ್ಯಾನವಾಗಿದೆ.” ಆದರೂ ಆಕೆಯ ಸವಿಸ್ತೃತ ಜೀವನ ಚರಿತ್ರೆಯೊಂದು ಇಲ್ಲದಿರುವುದು ಶೋಚನೀಯವಾದ ವಿಷಯವಾಗಿದೆ.

[1]

ಪರಮಹಂಸರ ಜೀವನಚರಿತ್ರೆಯಲ್ಲಿ ಅಲ್ಲಲ್ಲಿ  ಪ್ರಸಂಗಕ್ರಮವಾಗಿ ಬರುವ ಅಲ್ಪಸ್ವಲ್ಪ ವಿಷಯಗಳೆ ನಮಗೆ ದೊರೆಕೊಳ್ಳುವ ಕಥಾಸಾಮಾಗ್ರಿ. ಅದನ್ನು ಬಿಟ್ಟರೆ ಕೆಲವು ಭಕ್ತ ಭಕ್ತೆಯರು ಬರೆದಿಟ್ಟಿರುವ ದಿನಚರಿಯೆ ನಮಗೆ ಆಧಾರ. ಉಳಿದುದನ್ನು ವಾಚಕರು ತಮ್ಮ ಪ್ರತಿಭೆಗೆ ಸೂಕ್ತತೋರಿದಂತೆ ಕಲ್ಪಿಸಿಕೊಳ್ಳಬೇಕಾಗಿದೆ.

ಪರಮಹಂಸರ ಸಾನಿಧ್ಯದಿಂದ ಶ್ರೀಮಾತೆಯಲ್ಲಿ ಎಂತಹ ಧೈರ್ಯ ಸ್ಥೈರ್ಯ ವಿವೇಕಗಳು ಮೂಡಿದವು ಎನ್ನುವುದಕ್ಕೆ ದೃಷ್ಟಾಂತ ರೂಪವಾಗಿ ನಡೆದ ಸಂಗತಿಯನ್ನು ಹೇಳಿ ಮುಂದುವರಿಯುತ್ತೇವೆ.

ಶಾರದಾದೇವಿ ಕಾಮಾರಪುಕುರದಿಂದ ದಕ್ಷಿಣೇಶ್ವರಕ್ಕೆ ಬರಬೇಕಾದರೆ ನಡುವೆ ಹಬ್ಬಿದ ಕಾಡುಬಯಲುಗಳನ್ನು ಯಾನಾಭಾವವಿದ್ದುದರಿಂದ ಕಾಲುನಡಗೆಯಲ್ಲಿಯೆ ದಾಟಬೇಕಾಗಿತ್ತು. ಮಧ್ಯೆ ಕಳ್ಳಕಾಕರಿಂದಲೂ ಕಾಳೀಪೂಜಕರಾಗಿದ್ದ ಡಕಾಯಿತರಿಂದಲೂ ತುಂಬಿ ಅಪಾಯಕರವಾಗಿದ್ದ ಒಂದು ಪ್ರಾಂತರವಿತ್ತು. ಆ ಪ್ರಾಂತರದ ಮಧ್ಯಭಾಗದಲ್ಲಿ ಭೀಷಣವಾದ ಕಾಳಿಯ ಮೂರ್ತಿಯೊಂದು ಈಗಲೂ ಕಂಡುಬರುತ್ತದೆ. ಪ್ರಯಾಣಿಕರು ಗುಂಪುಗುಂಪಾಗಲ್ಲದೆ ಆ ಹಾದಿಯನ್ನೆ ತುಳಿಯುತ್ತಿರಲಿಲ್ಲ.

ಒಂದು ಸಾರಿ ಶಾರದಾದೇವಿ ಇತರ ಸ್ತ್ರೀ ಪುರುಷ ಬಂಧುಗಣದೊಡನೆ ಆ ಮಾರ್ಗವಾಗಿ ದಕ್ಷಿಣೇಶ್ಚರಕ್ಕೆ ಹೊರಟಳು. ದಾರಿಗರು ಆ ಪ್ರಾಂತರವನ್ನು ದಾಟುವ ಮೊದಲೆ ಬೈಗಾಯಿತು. ಸ್ವಲ್ಪ ಅಸ್ವಸ್ಥೆಯಾಗಿದ್ದ ಆಕೆ ದಾರಿ ನಡೆದು ಬಳಲಿ ಇತರ ದಾರಿಗರೊಡನೆ ಕಾಲುಹಾಕಲಾರದೆ ಹೋದಳು. ಅವರೆಲ್ಲರೂ ಸ್ವಲ್ಪದೂರಹೋಗಿ ನಿಲ್ಲುವುದು, ಪುನಃ ಆಕೆ ಬಂದು ಸೇರಿದೊಡನೆ ಮುಂದುವರಿಯುವುದು ಹೀಗೆ ಮಾಡುತ್ತ ಬಂದರು. ಅಷ್ಟರಲ್ಲಿಯೆ ಕತ್ತಲೆ ದಟ್ಟವಾಗಿ ಕವಿಯಿತು. ಅದನ್ನು ಕಂಡು ಆಕೆ ಹೇಳಿದಳು : “ನೀವು ನನಗಾಗಿ ನಿಲ್ಲಬೇಡಿ; ಮೆಲ್ಲಗೆ ಕಾಲುಹಾಕಿ. ನಾನು ಆದಷ್ಟು ಬೇಗ ಬೇಗನೆ ಬರುತ್ತೇನೆ. ನೀವು  ನಿಂತು ನಿಂತು ಹೋಗುವುದಾದರೆ ಎಲ್ಲರೂ ಡಕಾಯಿತರ ಪಾಲಾಗುತ್ತೇವೆ.” ಜೊತೆಯವರು ಮೆಲ್ಲಮೆಲ್ಲಗೆ ನಿಲ್ಲದೆ ನಡೆಯತೊಡಗಿದರು. ತುಸುಹೊತ್ತಿನಲ್ಲಿಯೆ ಕಣ್ಣರೆಯಾದರು. ಕಗ್ಗತ್ತಲೆ ಕವಿದ ಆ ಭಯಂಕರ ಪ್ರಾಂತರದಲ್ಲಿ ಶಾರದಾದೇವಿಯೊಬ್ಬಳೇ ಸಿಕ್ಕಿಬಿದ್ದಳು. ಕಾಲು ಸೋತುದರಿಂದ ಆಕೆ ಎಷ್ಟು ಸಾಹಸ ಮಾಡಿದರೂ ಬೇಗ ನಡೆಯಲಾರದೆ ಕಂಗೆಟ್ಟಳು. ಅಷ್ಟರಲ್ಲಿ ಯಾವುದೋ ಒಂದು ಛಾಯೆ ತಿಮಿರ ಗರ್ಭದಿಂದ ತನ್ನೆಡೆಗೆ ಚಲಿಸುತ್ತಿದ್ದುದು ಆಕೆಯ ಕಣ್ಣಿಗೆ ಬಿತ್ತು. ನೋಡಿದರೆ, ದೀರ್ಘಾಕಾರದ ಘೋರತರ ಕೃಷ್ಣವರ್ಣದ ಭೀಷಣ ಪುರುಷನೊಬ್ಬವು ಹೆಗಲಿನ ಮೇಲೆ ಲಾಠಿಯೊಂದನ್ನು ಹೇರಿಕೊಂಡು ಮುಂದೆ ನಿಂತಿದ್ದಾನೆ! ಪಲಾಯನವಾಗಲಿ ಚೀತ್ಕಾರವಾಗಲಿ ಉಪಯೋಗವಿಲ್ಲವೆಂದು ತಿಳಿದು ಶಾರದಾದೇವಿ ಸ್ಥಿರಚಿತ್ತೆಯಾಗಿ ನಿಂತುಬಿಟ್ಟಳು.

ಅಲ್ಲ ಕ್ಷಣದಲ್ಲಿಯೆ ಆ ಡಕಾಯಿತನು ಬಳಿಸಾರಿ ಕರ್ಕಶಸ್ವರದಿಂದ “ಯಾರಲ್ಲಿ? ಇಷ್ಟು ಹೊತ್ತಿನಲ್ಲಿ?” ಎಂದು ಪ್ರಶ್ನೆ ಮಾಡಿದನು.

“ಬಾಬಾ ನನ್ನ ಜೊತೆಯವರು ನನ್ನನ್ನು ಬಿಟ್ಟುಹೋದರು. ನಾನೂ ದಾರಿ ತಪ್ಪಿದೆ ಎಂದು ತೋರುತ್ತದೆ. ನನ್ನನ್ನು ಕರೆದುಕೊಂಡು ಹೋಗಿ ಅವರ ಹತ್ತಿರ ಬಿಟ್ಟರೆ ಬಹಳ ಉಪಕಾರವಾದೀತು. ನಿನ್ನ ಅಳಿಯ ದಕ್ಷಿಣೇಶ್ವರದ ರಾಣಿ ರಾಸಮಣಿಯ ಕಾಳಿಗುಡಿಯಲ್ಲಿದ್ದಾನೆ. ನಾನು ಅಲ್ಲಿಗೆ ಹೋಗುತ್ತಿದ್ದೇನೆ. ನೀನು ನನ್ನನ್ನು ಅಲ್ಲಿಯವರೆಗೆ ಕರೆದುಕೊಂಡು ಹೋದರೆ ಆತನು ನಿನಗೆ ಬೇಕಾದ ಉಪಚಾರ ಮಾಡುತ್ತಾನೆ.

ಅಷ್ಟರಲ್ಲಿಯೆ ಇನ್ನೊಂದು ವ್ಯಕ್ತಿಯೂ ಅಲ್ಲಿಗೆ ಬಂದಿತು. ಅದು ಸ್ತ್ರೀ ವ್ಯಕ್ತಿ. ಮಾತಾಡುತ್ತಿದ್ದ ಪುರುಷನ ಪತ್ನಿ. ಶಾರದಾಮಣಿ ಓಡಿ ಹೋಗಿ ಅವಳನ್ನು ಕೈಹಿಡಿದು ತಬ್ಬಿಕೊಂಡು” ಅಮ್ಮಾ ನಾ ನಿನ್ನ ಮಗಳು, ಶಾರದೆ. ಜೊತೆಯವರು ತಪ್ಪಿಹೋದರು; ವಿಷಮ ವಿಪತ್ತಿನಲ್ಲಿ ಸಿಕ್ಕಿದ್ದೇನೆ. ಏನೊ ಪುಣ್ಯವಶಾತ್ ಬಾಬಾ ನೀನೂ ಇಲ್ಲಿಗೆ ಬಂದಿರಿ. ಇಲ್ಲದಿದ್ದರೆ ನನ್ನಗತಿ ಏನಾಗುತ್ತಿತ್ತೊ ನಾ ಹೇಳಲಾರೆ” ಎಂದು ನಿಃಸಂಕೋಚ ಸರಳಭಾವದಿಂದ ಹೇಳಿದಳು. ತರಳೆಯ ಮಾತಿನ ಮಾಧುರ್ಯಕ್ಕೆ ಮರುಳಾಗಿ ಆ ಮನುಷ್ಯನು ಸ್ತ್ರೀಯೂ ಎದೆಗರಗಿದರು. ಅವರಿಬ್ಬರೂ ಕೀಳುಜಾತಿಯವರಾಗಿದ್ದರು. ಆದರೂ ಸಾಮಾಜಿಕ ಆಚಾರ ಮತ್ತು ಜಾತಿಯ ಪಾರ್ಥಕ್ಯಗಳನ್ನು ಮರೆತುಬಿಟ್ಟು, ಅವರಿಬ್ಬರೂ ಶಾರದಾಮಣಿಯನ್ನು ನಿಜವಾಗಿಯೂ ತಮ್ಮ ಕನ್ಯೆಯೆಂದೆ ಭಾವಿಸಿ ಸಂತವಿಟ್ಟು, ಕ್ಲಾಂತೆಯಾಗಿದ್ದ ಆಕೆಯನ್ನು ಮುಂದೆ ಹೋಗಗೊಡದೆ, ವಿಶ್ರಾಂತಿಗಾಗಿ ನಿಕಟಸ್ಥ ಗ್ರಾಮಕ್ಕೆ ಕರೆದು ಕೊಂಡು ಹೋಗಿ, ತಮಗೆ ಪರಿಚಿತರಾಗಿದ್ದ ಒಂದು ಅಂಗಡಿಮನೆಯಲ್ಲಿ ಸ್ವಲ್ಪ ಸ್ಥಳ ಸಂಪಾದನೆಮಾಡಿ, ಅಲ್ಲಿ ಮಲಗಿ ರಾತ್ರಿಯನ್ನು ಕಳೆಯುವಂತೆ ಮಾಡಿದರು. ಆ ಡಕಾಯಿತನು ಅಂಗಡಿಯಿಂದ ಪುರಿಯನ್ನು ತಂದು ಕೊಟ್ಟನು; ಆತನ ಸ್ತ್ರೀ ತನ್ನ ವಸ್ತ್ರಗಳಿಂದಲೆ ತನ್ನ ಹೊಸ ಮಗಳು ಶಾರದೆಗೆ ಹಾಸಗೆ ಮಾಡಿದಳು. ಇಂತು ರಾತ್ರಿಯೆಲ್ಲ ಕಾವಲಿದ್ದು ಪಿತಾಮಾತೆಯರಂತೆ ಆಕೆಯನ್ನು ಸಲಹಿದರು. ಬೆಳಗಾದ ಮೇಲೆ ಆಕೆಯನ್ನು ತಾರಕೇಶ್ವರದವರೆಗೂ ಕರೆದೊಯ್ದು ಅಲ್ಲಿ ಸ್ವಲ್ಪ ವಿಶ್ರಮಿಸಿ ಕೊಳ್ಳುವಂತೆ ಮಾಡಿದರು. ಆ ಸ್ತ್ರೀ ತನ್ನ ಪತಿಗೆ ಹೇಳಿದಳು; “ರಾತ್ರಿಯೆಲ್ಲ ನಮ್ಮ ಹುಡುಗಿ ಏನೂ ತಿಂದಿಲ್ಲ. ಬೇಗ ತಾರಕನಾಥನ ಪೂಜೆಮಾಡಿ. ಅಂಗಡಿಗೆ ಹೋಗಿ ಏನಾದರೂ ತೆಗೆದುಕೊಂಡು ಬನ್ನಿ. ಇವತ್ತು ಮಗಳಿಗೆ ಹಬ್ಬದೂಟ ಬಡಿಸಬೇಕು.

ಹೆಂಡತಿಯ ಹೇಳಿಕೆಯಂತೆ ಡಕಾಯಿತನು ಪೇಟೆಗೆ ಹೋದನು. ಅಷ್ಟು ಹೊತ್ತಿಗೆ ಶಾರದಾಮಣಿಯ ಬಂಧುಗಳು ಆಕೆಯನ್ನು ಹುಡುಕುತ್ತ ಹೊತ್ತ ದುಗುಡದಿಂದ ಅಲ್ಲಿಗೆ ಬಂದು ಆಕೆಯನ್ನು ಕಂಡು ಆನಂದಿತರಾದರು. ಶಾರದೆ ಬಂಧುಗಳಿಗೆ ತನ್ನ ಬಾಗದಿ (ಕೀಳು ಜಾತಿಯ ಹೆಸರು) ಮಾತಾಪಿತರ  ಪರಿಚಯ ಮಾಡಿಕೊಟ್ಟು “ಇವರು ನನ್ನ ಸಹಾಯಕ್ಕೆ ಬಾರದಿದ್ದರೆ ನನ್ನಗತಿ ಏನಾಗುತ್ತಿತ್ತೊ!” ಎಂದು ಹೇಳಿದಳು.

ಡಕಾಯಿತ ದಂಪತಿಗಳು ಶಾರದೆಯನ್ನು ಕಂಬನಿಗರದು ಬೀಳ್ಕೊಂಡರು. ಶಾರದೆಯೂ ಕಣ್ಣೀರು ಸುರಿಸಿದಳು. ಒಂದೇ ರಾತ್ರಿಯಲ್ಲಿ ಅವರ ಪರಸ್ಪರ ಬಾಂಧವ್ಯ ಅಷ್ಟರಮಟ್ಟಿಗೆ ಬೆಳೆದಿತ್ತು. ಶಾರದೆ ಅವರಿಬ್ಬರಿಗೂ ದಕ್ಷಿಣೇಶ್ವರಕ್ಕೆ ಬರುವಂತೆ ಆಹ್ವಾನಿವಿತ್ತಳು. ಆ ಸ್ತ್ರೀಯಂತೂ ಅಳುತ್ತಾ ಅಳುತ್ತಾ ಬಹುದೂರದವರೆಗೆ ಬಂದು ಕಳುಹಿ, ಹಾದಿಯ ಪಕ್ಕದ ಹೊಲದಲ್ಲಿದ್ದ ಬಟಾಣಿಗಳನ್ನು ಕೊಯ್ದು ಶಾರದೆಯ ಸೆರಗಿನಂಚಿನಲ್ಲಿ ಕಟ್ಟಿ” ತಾಯಿ ಶಾರದೆ, ಇವತ್ತು ರಾತ್ರಿ ಅವಲಕ್ಕಿ ತಿನ್ನುವಾಗ ಜೊತೆಗೆ ಇದನ್ನೂ ತಿನ್ನು” ಎಂದು ಹೇಳಿ ಮುದ್ದಿಸಿದಳು.

ಶ್ರೀ ಮಾತೆಯ ಆಹ್ವಾನವನ್ನು ಮನ್ನಿಸಿ ಆ ಡಕಾಯಿತ ದಂಪತಿಗಳು ಅನೇಕ ಸಾರಿ ದಕ್ಷಿಣೇಶ್ಚರಕ್ಕೆ ಬಂದರು. ಎಲ್ಲ ಕಥೆಯನ್ನೂ ಕೇಳಿ ತಿಳಿದುಕೊಂಡಿದ್ದ ಪರಮಹಂಸರು ಅವರಿಬ್ಬರನ್ನೂ ಅಳಿಯನಂತೆ ಉಪಚರಿಸುತ್ತಿದ್ದರು.”ಆದರೂ” ಶ್ರೀಮಾತೆ ಬಹುಕಾಲದ ಮೇಲೆ ಹೇಳುತ್ತಿದ್ದರು, “ನನ್ನ ಡಕಾಯಿತ ತಂದೆ ನನ್ನ ಭಾಗಕ್ಕೆ ಸರಳ ಸ್ವಚ್ಚರಿತ್ರಮೂರ್ತಿಯಾಗಿದ್ದರೂ ಪೂರ್ವದಲ್ಲಿ ಅನೇಕ ಸಾರಿ ಡಕಾಯಿತಿ ಮಾಡಿರಬೇಕೆಂದು ಭಾವಿಸುತ್ತೇನೆ.

ತವರೂರಿನಿಂದ ದಕ್ಷಿಣೇಶ್ವರಕ್ಕೆ ಬಂದ ಮೇಲೆ ಶಾರದಾದೇವಿ ಚಂದ್ರಮಣಿದೇವಿಯೊಡನೆ ನೌಬತ್ತು ಖಾನೆಯಲ್ಲಿ ವಾಸಿಸುತ್ತ ಅತ್ತೆ, ಪತಿ ಮತ್ತು ಇತರ ಭಕ್ತ ಅತಿಥಿಗಳ ಸೇವೆ ಶುಶ್ರೂಷೆ ಮಾಡತೊಡಗಿದರು. ಆದರೆ ಕೆಲವು ಕಾಲದಲ್ಲಿಯೆ ಮೃತ್ಯು ಚಂದ್ರಾದೇವಿಯನ್ನು ಕೊಂಡೊಯ್ದಿತು. ತರಳೆಯಾದ ಶಾರದೆ ಏಕಾಕಿನಿಯಾದರು. ಬೆಳಗಿನಜಾವ ಮೂರು ಅಥವಾ ನಾಲ್ಕು ಗಂಟೆಯ ಹೊತ್ತಿಗೆ ಎದ್ದು ಗಂಗೆಯಲ್ಲಿ ಮಿಂದು ಮಡಿಯುಟ್ಟು ದೇವರಪೂಜೆ ಧ್ಯಾನಗಳನ್ನು ಮಾಡಿ ಮುಗಿಸಿ, ಪತಿಗೂ ಬಂದ ಭಕ್ತರಿಗೂ ಅನ್ನಪಾನಾದಿಗಳನ್ನು ಸಿದ್ಧಪಡಿಸುವುದು ಆಕೆಯ ದೈನಂದಿನ ಕಾರ್ಯವಾಗಿತ್ತು. ಹಲವು ಸಾರಿ ಬಹಳ ಜನಗಳಿಗೆ ಅಡುಗೆ ಮಾಡುವ ಪ್ರಸಂಗವೂ ಒದಗುತ್ತಿತ್ತು. ಆದರೆ ಆಕೆ ಹಗಲಿರುಳೆನ್ನದೆ ಹೊತ್ತುಗೊತ್ತೆನ್ನದೆ ಒಂದುನಿತೂ ಬೇಸರಪಡದೆ ಗೊಣಗುಟ್ಟದೆ, ಭಕ್ತರ ಸೇವೆಯೆ ಸಾಧಕನ ತಪಸ್ಸೆಂದು ಭಾವಿಸಿ. ಮುದದಿಮದ ಕೆಲಸಮಾಡುತ್ತಿದ್ದರು. ಬಡತನದಲ್ಲಿ ಕಷ್ಟಜೀವನಮಾಡುತ್ತಿದ್ದರು. ಆಕೆಯಲ್ಲಿ ಧನಲೋಭವಾಗಲಿ, ಭೋ‌ಗಾಭಿಲಾಷೆಯಾಗಲಿ, ಕೆಲಸಮಾಡಲು ಕಿಂಕರರು ಬೇಕೆಂಬ ಆಸೆಯಾಗಲಿ ಎಳ್ಳನಿತೂ ಇರಲಿಲ್ಲ. ಪರಮಹಂಸರಲ್ಲಿದ್ದ ನಿರ್ಲೋಭತೆ ಆಕೆಯಲ್ಲಿಯೂ ಎದೆಯೊಳಗೆ ಬೇರೂರಿತ್ತು. ಒಂದುಸಾರಿ ಮಾರ್ವಾಡಿ ಭಕ್ತನೊಬ್ಬನು ಗುರುದೇವನಲ್ಲಿಗೆ ಬಂದು ಪಾದಕಾಣಿಕೆಯಾಗಿ ಹತ್ತು ಸಾವಿರ ರೂಪಾಯಿಗಳನ್ನು ಸ್ವೀಕರಿಸಬೇಕೆಂದು ಬಹಳವಾಗಿ ಬೇಡಿಕೊಂಡನು. ಅವರು “ಅದನ್ನು ಕಟ್ಟಿಕೊಂಡು ನಾನೇನು ಮಾಡಲಿ?” ಎಂದು ತಿರಸ್ಕರಿಸಿ ಸಹಧರ್ಮಿಣಿಯನ್ನು ಪರೀಕ್ಷಿಸಲೆಂದು ಹಣವನ್ನು ಆಕೆಯಲ್ಲಿಗೆ ತೆಗೆಯಿಸಿಕೊಂಡು ಹೋಗಿ “ಇದನ್ನೇಕೆ ಸ್ವೀಕರಿಸಬಾರದು? ಒಡವೆ ಬಟ್ಟೆ ಮಾಡಿಸಿಕೊಳ್ಳಬಹುದು. ನನ್ನ ದಾರಿದ್ರದಿಂದ ನಿನಗೆ ಅವುಗಳೊಂದೂ ಇಲ್ಲದಾಗಿದೆ” ಎಂದು ಹೇಳಿದರು. ಶ್ರೀಮಾತೆ ಸ್ವಲ್ಪವೂ ಹಿಂದುಮುಂದು ನೋಡದೆ “ಆ ಒಡವೆ ವಸ್ತುಗಳಿಂದ ನನಗೆ ಆಗಬೇಕಾದ್ದೇನು? ನನಗೆ ಬೇಡ!” ಎಂದು ಬಿಟ್ಟರು. ಮಾರ್ವಾಡಿ ಹತಾಶನಾಗಿ ಹಿಂದಿರುಗಿದನು. ಪರಮಹಂಸರು ಪತ್ನಿಯ ನಿರ್ಲೊಭತೆಯನ್ನು ಕಂಡು ಹಿಗ್ಗಿ ಹೋದರು.

ಪರಮಹಂಸರ ಖ್ಯಾತಿ ಹಬ್ಬಿದ ಮೇಲೆ ಪುರುಷ ಭಕ್ತರಂತೆ ಸ್ತ್ರೀ ಭಕ್ತರೂ ದಕ್ಷಿಣೇಶ್ಚರಕ್ಕೆ ಬರತೊಡಗಿದರು. ಅವರಲ್ಲಿ ಅನೇಕ ಮಹಿಳೆಯರು ಶ್ರೀ ಮಾತೆಯ ಸಾನ್ನಿಧ್ಯದಲ್ಲಿ ಕಾಲಕಳೆಯುತ್ತಿದ್ದರು. ಗುರುದೇವನ ಸಹಧರ್ಮಿಣಿಯಾದುದರಿಂದಲೂ ಕಠೋರತಪಸ್ವಿನಿಯಾದುದರಿಂದಲೂ ಆಕೆಯಲ್ಲಿ ಜನರಿಗೆ ಮಹಾ ಗೌರವವಿರುತ್ತಿತ್ತು. ಆದರೂ ಉದಾತ್ತರಾದ ಶಾರದಾದೇವಿ ಇತರ ಸಾಮಾನ್ಯ ಸ್ತ್ರೀಯರಂತೆ ದೀನಭಾವದಿಂದ ವರ್ತಿಸುತ್ತಿದ್ದರೆ ಹೊರತು ಔದ್ಧತ್ಯಕ್ಕೆ ಒಂದಿನಿತಾದರೂ ಅವಕಾಶ ಕೊಡುತ್ತಿರಲಿಲ್ಲ. ಆಕೆ ಯಾವಾಗಲೂ ತಾಯಿಯಾಗಿರುತ್ತಿದ್ದರೆ ಹೊರತು ರಮಣಿಯಂತಿರುತ್ತಿರಲಿಲ್ಲ.

ಕ್ರಿ.ಶ. ೧೮೮೬ರಲ್ಲಿ ಶ್ರೀರಾಮಕೃಷ್ಣರು ದೇಹತ್ಯಾಗಮಾಡಿದಾಗ ಶ್ರೀಮಾತೆಗೆ ಮೂವತ್ತು ಮೂರು ವರ್ಷ ವಯಸ್ಸಾಗಿತ್ತು. ಸ್ವಾಮಿಯ ತಿರೋಭಾವದ ಅನಂತರ ಆಕೆ ಪದ್ಧತಿಯಂತೆ ವಿಧವೆಯ ವೇಷಧಾರಣೆ ಮಾಡಲಿಲ್ಲ. ಕಾರಣವೇನೆಂದರೆ, ಪರಮಹಂಸರ ದೇಹಸಂಸ್ಕಾರ ಸಮಯದಲ್ಲಿ ಶ್ರೀಮಾತೆ ಸಂಪ್ರದಾಯದಂತೆ ತನ್ನ ಕೈಲಿದ್ದ ಬಳೆಗಳನ್ನು ಒಡೆದು ಹಾಕಲು ಉದ್ಯುಕ್ತಳಾದಾಗ ಗುರುದೇವನು ಅರೋಗಶರೀರಿಯಾಗಿ ಆಕೆಗೆ ಪ್ರತ್ಯಕ್ಷನಾಗಿ ಕೈಹಿಡಿದು ತಡೆದು ನಿಲ್ಲಿಸಿ “ಇದೇನು? ನಾನು ಮೃತನಾದೆನೆಂದು ತಿಳಿದು ಸಾಮಾನ್ಯ ಸ್ತ್ರೀಯಂತೆ ಕೈಬಳೆಗಳನ್ನು ಒಡೆದುಹಾಕುತ್ತಿದ್ದೀಯಾ?” ಎಂದು ಹೇಳಿ ಮಾಯವಾದನಂತೆ ತರುವಾಯ ಶ್ರೀಮಾತೆ ವಿಧವಾವೇಷಧಾರಣೆ ಮಾಡಲು ಶಕ್ತಳಾಗಲಿಲ್ಲ. ಆತ್ಮದ ಅಮರತ್ವದಲ್ಲಿ ಇಂತಹ ದೃಢವಿಶ್ವಾಸ ಎಲ್ಲರಲ್ಲಿಯೂ ಇರುವುದಾದರೆ ಸಂಸಾರ ದುಃಖ ಪಾಪ ತಾಪ ದುರ್ಗತಿಗಳು ದೂರವಾಗುವುದರಲ್ಲಿ ಸಂದೇಹವಿಲ್ಲ. ಗುರುದೇವನ ಮಹಾಸಮಾಧಿಯ ಅನಂತರ ಶ್ರೀಮಾತೆ ಮೂವತ್ತು ನಾಲ್ಕು ವರ್ಷಗಳು ಬದುಕಿದ್ದರು. ಆಕೆಯ ಆತ್ಮಜ್ಯೋತಿ ಸರ್ವದಾ ದೇದೀಪ್ಯಮಾನವಾಗಿದ್ದುಕೊಂಡು ಅನೇಕರಿಗೆ ಕಾಂತಿ ಶಾಂತಿಗಳನ್ನು ದಯಪಾಲಿಸಿತು. ಪರಮಹಂಸರ ಸಂನ್ಯಾಸಿ ಶಿಷ್ಯರೂ ಗೃಹಸ್ಥಭಕ್ತರೂ ಆಕೆಯನ್ನು ಮಾತೃಸ್ಥಾನದಲ್ಲಿ ಇಟ್ಟು ಪೂಜಿಸಿದರು. ಅವರೆಲ್ಲರೂ ಆಕೆಯ ಆಶೀರ್ವಾದವಿಲ್ಲದೆ ಯಾವ ಮಹಾಕಾರ್ಯವನ್ನೂ ಕೈಕೊಳ್ಳುತ್ತಿರಲಿಲ್ಲ. ಸ್ವಾಮಿ ವಿವೇಕಾನಂದರು ಆಕೆಯ ಆಶೀರ್ವಾದವನ್ನು ಪಡೆದ ಮೇಲೇಯೆ ಭರತ ಖಂಡದ ತೀರವನ್ನು ಬಿಟ್ಟು ಪಾಶ್ಚಾತ್ಯ ದೇಶಗಳಿಗೆ ಧರ್ಮಪ್ರಚಾರ ಮಾಡಲು ಹೋದುದು. ಭಾರತೀಯರಲ್ಲದೆ ಅನ್ಯದೇಶಿಯರೂ ಇಂಗ್ಲೆಂಡು ಮತ್ತು ಅಮೆರಿಕ ಮೊದಲಾದ ದೇಶಗಳ ರಮಣಿಯರೂ ಆಕೆಯಲ್ಲಿಗೆ ಬಂದು ಮಂತ್ರೋಪದೇಶ ಕೈಕೊಂಡು ಶಿಷ್ಯರಾದರು. ಆಕೆಯ ವಿಶಾಲ ಹೃದಯಕ್ಕೆ ರಾಷ್ಟ್ರ, ದೇಶ, ಜನಾಂಗ, ಮತ, ಭಾಷೆ ಯಾವ ಭೇದವೂ ಇರಲಿಲ್ಲ. ಸರ್ವರಿಗೂ ಆಕೆ ಜನನಿಯಾಗಿದ್ದರು. ಆಂಗ್ಲ ಮಹಿಳೆಯಾದ ಸೋದರಿ ನಿವೇದಿತೆ, ಅಮೆರಿಕದವಳಾಗಿ ಭಗಿನೀ ದೇವಮಾತೆ ಮೊದಲಾದವರು ಶ್ರೀಮಾತೆಯ ವಿಚಾರವಾಗಿ ಭಾವಮಯವೂ ವಿಚಾರಪೂರ್ಣವೂ ಆದ ಪ್ರಶಂಸೆಗಳನ್ನು ಬರೆದಿದ್ದಾರೆ. ಶ್ರೀಮಾತೆ ಕ್ರಿಸ್ತಾಬ್ದ ೧೯೨೦ ನೆಯ ಸಂವತ್ಸರದಲ್ಲಿ ತನ್ನ ಅರವತ್ತೇಳನೆಯ ವಯಸ್ಸಿನಲ್ಲಿ ಶರೀರ ತ್ಯಾಗ ಮಾಡಿದರು.

ಆಕೆ ತನ್ನಲ್ಲಿಗೆ ಬಂದ ಮತ್ತು ತನ್ನೊಡನೆ ವಾಸಿಸುತ್ತಿದ್ದ ಭಕ್ತರೊಡನೆಯೂ ಇತರರೊಡನೆಯೂ ನಡೆಸಿದ ಸಂಭಾಷಣೆಗಳು ಗ್ರಂಥರೂಪವಾಗಿ ವಂಗಭಾಷೆಯಲ್ಲಿ ಮುದ್ರಿತವಾಗಿವೆ. ಆಕೆಯ ವ್ರತ, ತ್ಯಾಗ, ನಿಷ್ಠೆ, ಸಮಯ, ಸವಿನುಡಿ, ದೇವಾಪರಾಯಣತೆ, ತನ್ನ ಸುಖದುಃಖಗಳಲ್ಲಿ ಸಂಪೂರ್ಣ ಔದಾಸೀನ್ಯ, ಶರಣತೆ, ನಿರಭಿಮಾನ, ಸಹಿಷ್ಣುತೆ, ದಯೆ, ಕ್ಷಮೆ, ಸಹಾನುಭೂತಿ, ನಿಸ್ವಾರ್ಥಪರತೆ, ಪರದುಃಖಕಾತರತೆ, ಪತಿತಪಾವನಕಾಂಕ್ಷೆ, ಕೃತವಿದ್ಯರಾದವರಲ್ಲಿಯೂ ಅಪೂರ್ವವಾಗಿರುವ ಹೃದಯವೈಶಾಲ್ಯ ಇವುಗಳೆಲ್ಲವೂ ಆಕೆಯ ಪುಣ್ಯವಾಕ್ಯಗಳಲ್ಲಿ ಒಡೆದು ಮೂಡಿರುತ್ತವೆ. ನಿದರ್ಶನ ರೂಪವಾಗಿ ಅವುಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ಉದಾಹರಿಸುತ್ತೇವೆ.

ಶ್ರೀಮಾತೆ ಪ್ರಾಚೀನ ಸಂಪ್ರದಾಯದ ಬ್ರಾಹ್ಮಣರ ಕುಲದಲ್ಲಿ ಜನಿಸಿದವರು. ಶಾಲೆಗಳಲ್ಲಿ ಓದಲಿಲ್ಲ. ಆದರೂ ಆಕೆಯಲ್ಲಿ ಎಂತಹ ಸುಧಾರಕ ಚಿತ್ತವಿತ್ತು ಎಂಬುದು ಕೆಳಗೆ ಹೇಳುವ ಸಂಗತಿಯಿಂದ ಗೊತ್ತಾಗುತ್ತದೆ.

ಭಕ್ತೆಯೊಬ್ಬಳು ಮಾತೆಯಲ್ಲಿಗೆ ಬಂದು “ನನಗೆ ಐದು ಮಂದಿ ಹೆಣ್ಣು ಮಕ್ಕಳಿದ್ದಾರೆ. ಅವರಿಗೆ ವಿವಾಹಮಾಡುವುದೆ ಕಠಿಣವಾಗಿ ನನಗೆ ಚಿಂತೆ ಹಿಡಿದು ಕೊಂಡಿದೆ” ಎಂದಳು.

ಶ್ರೀಮಾತೆ ಹೇಳಿದಳು; “ಮದುವೆ ಮಾಡುವುದಕ್ಕೆ ಆಗದಿದ್ದರೆ ಚಿಂತೆಯೇಕೆ? ನಿವೇದಿತಾ ಸ್ಕೂಲಿಗೆ ಕಳುಹಿಸು. ಓದುಬರಹ ಕಲಿಯಲಿ. ಆಮೇಲೆ ಸ್ತ್ರೀವಿದ್ಯಾ ಪ್ರಚಾರಮಾಡಿ ದೇಶಸೇವೆಮಾಡುತ್ತಾರೆ. ಅದರಿಂದ ಆತ್ಮೋದ್ಧಾರವೂ ಆಗುತ್ತದೆ.”

ಅಲ್ಲಿದ್ದ ಇನ್ನೋಬ್ಬರು ಹೇಳಿದರು; “ಈಗ ಗಂಡು ಸಿಕ್ಕುವುದು ಕಷ್ಟವಾಗಿದೆ. ಅನೇಕ ಹುಡುಗರು ಮದುವೆಗೆ ಒಪ್ಪುವುದಿಲ್ಲ.”

“ಈಗ ಅವರಿಗೂ ಸ್ವಲ್ಪ ಬುದ್ಧಿ ಬಂದಿದೆ. ಸಂಸಾರದ ಅನಿತ್ಯತೆ ಅಸುಖಗಳು ಅವರಿಗೂ ತಿಳಿದುಬಂದಿದೆ. ಎಷ್ಟು ದೂರವಾಗಿದ್ದರೆ ಅಷ್ಟು ಒಳ್ಳೆಯದು ಅವರಿಗೆ. ಏಕಾಗ್ರತೆಯಿಂದ ದೇಶಸೇವೆಮಾಡಲು ಸಾಧ್ಯವಾಗುತ್ತದೆ” ಎಂದು ಶ್ರೀಮಾತೆ ಹೇಳಿದರು.

ಒಂದು ದಿನ ನೆರೆದ ಗೃಹಿಣೀ ಭಕ್ತೆಯರೊಡನೆ ಮಾತೆಯಿಂತೆಂದರು: “ವಿವಾಹಿತ ಸ್ತ್ರೀ ಪುರುಷರು ಒಂದೆರಡು ಮಕ್ಕಳಾದ ಮೇಲೆ ಸಂಯಮಿಗಳಾಗಿ ಬಾಳಬೇಕು ಎಂದು ಧನಸಂಪತ್ತಿಯನ್ನು ಮೀರಿ ಸಂತಾನ ಪಡೆಯುವುದಿಲ್ಲವಂತೆ, ನಮ್ಮಲ್ಲಿ ತಂದೆತಾಯಿಗಳಿಗೆ ಹೊಟ್ಟೆಗಿರಲಿ ಇಲ್ಲದಿರಲಿ ಮಕ್ಕಳಾಗುವುದೇನೋ ತಪ್ಪುವುದಿಲ್ಲ. ಪಾಪ, ಆ ಮಕ್ಕಳೊ ಆಜನ್ಮ ದರಿದ್ರರಾಗಿ ನರದಜೀವನ ಮಾಡುತ್ತಾರೆ. ಹುಡುಗಿಯನ್ನು ನೋಡಿದರೆ ಚೋಟುದ್ದ ಇರುತ್ತಾಳೆ. ಆಗಲೆ ಹಿಂದೆ ಮುಂದೆ ಸೊಂಟದ ಮೇಲೆ ಮಕ್ಕಳು! ಆಮೇಲೆ ಸಂಸಾರದಲ್ಲಿ ಸುಖವಿಲ್ಲ ಎಂದು ಹತಾಶರಾಗಿ ಜುಗುಪ್ಸೆಯಿಂದ ಜೀವನವನ್ನೆ ಹಳಿಯುತ್ತಾರೆ.”

ಅಲ್ಲಿದ್ದವರೊಬ್ಬರು – ಆದರೆ ಪತಿಯೇ ಪರದೈವವೆಂದು ಶಾಸ್ತ್ರಗಳು ಹೇಳುತ್ತವೆ. ಹೀಗಿರಲು ಪತಿಯ ಮತಕ್ಕೆ ವಿರುದ್ಧವಾಗಿ ಸಂಯಮಿಯಾಗಲು ಪ್ರಯತ್ನಿಸುವುದು ಸ್ತ್ರೀಗೆ ಪಾಪವಲ್ಲವೆ?

ಶ್ರೀಮಾತೆ – ಭಗವಂತನಿಗಾಗಿ ಹಾಗೆ ಮಾಡಿದರೆ ಪಾಪವೆಲ್ಲಿಂದ ಬರುತ್ತದಮ್ಮಾ? ಇಂದ್ರಿಯ ಸಂಯಮ ಅವಶ್ಯಕ. ಹಾಗೆ ಮಾಡಿದರೆ ಪತಿ ಉದ್ಧಾರವಾಗಿ ನಿಜವಾಗಿಯೂ ಪರದೈವವಾಗುತ್ತಾನೆ.

ಪರಿಶುದ್ಧವಾದುದು ಯಾರಲ್ಲಿಯೆ ಇರಲಿ, ಎಲ್ಲಿಯೆ ಇರಲಿ ಪೂಜ್ಯವಾದುದು ಎಂಬುದನ್ನು ಶ್ರೀಮಾತೆ ತನ್ನವರಿಗೆ ಹೇಗೆ ಭೋದಿಸುದ್ದಾರೆ ಎಂಬುದಕ್ಕೆ ಎರಡು ನಿದರ್ಶನಗಳನ್ನು ಕೊಡುತ್ತೇವೆ.

ಒಂದು ಸಾರಿ ವೈದ್ಯಜಾತಿಗೆ ಸೇರಿದ ಭಕ್ತನೊಬ್ಬನು ಮಾತೆಯಲ್ಲಿಗೆ ಬಂದನು. ಆತನ ಪವಿತ್ರಭಾವ ಎಲ್ಲರಿಗೂ ತಿಳಿದ ವಿಷಯವೆ ಆಗಿತ್ತು. ಶ್ರೀಮಾತೆ ತನ್ನ ಅಣ್ಣನ ಮಗಳಾದ ರಾಧು ಎಂಬಾಕೆಯನ್ನು ಕುರಿತು ವೈದ್ಯನಿಗೆ ನಮಸ್ಕಾರ ಮಾಡುವಂತೆ ಬೆಸಸಲು, ತರಳೆ ಹಾಗೆಯೆ ಮಾಡಿದಳು. ವೈದ್ಯನು ಅಲ್ಲಿಂದ ಹೊರಟು ಹೋದಮೇಲೆ ಅಲ್ಲದ್ದವರಲ್ಲಿ ಒಬ್ಬರು ಶ್ರೀಮಾತೆಯನ್ನು ಕುರಿತು “ಆತನು ಬ್ರಾಹ್ಮಣನೆ?” ಎಂದು ಪ್ರಶ್ನೆ ಮಾಡಿದರು.

ಶ್ರೀಮಾತೆ – ಅಲ್ಲ :ವೈದ್ಯ.

ಒಬ್ಬರು – ಹಾಗಾದರೆ, ನಮಸ್ಕಾರ ಮಾಡಲು ಹೇಳಿದಿರಿ?

ಶ್ರೀಮಾತೆ – ಮಾಡಬಾರದೆ? ಆತನೆಂತಹ ಪರಿಶುದ್ಧಾತ್ಮನು! ಆತನು ಬ್ರಾಹ್ಮಣನಿಗೆ ಸರಿಸಮ. ಆತನಲ್ಲದೆ ಮತ್ತಾರು ಬ್ರಾಹ್ಮಣ? ಆತನಿಗಲ್ಲದೆ ಮತ್ತಾರಿಗೆ ಪ್ರಣಾಮಮಾಡಬೇಕು? ನೀನೆ ಹೇಳಮ್ಮಾ!

ಇನ್ನೊಂದು ಸಾರಿ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿಬಾರದ ಭಕ್ತನೊಬ್ಬನು ಅಡುಗೆಮನೆಯಿಂದ ದೂರ ನಿಂತುಕೊಂಡು ಮೇಲ್ವಚಾರಣೆ ನಡೆಸುತ್ತಿದ್ದುದನ್ನು ನೋಡಿ ಶ್ರೀಮಾತೆ ಅವನನ್ನು ಒಳಕ್ಕೆ ಬಂದು ಹತ್ತಿರ ನಿಲ್ಲುವಂತೆ ಕರೆದು, ಅಲ್ಲಿದ್ದ ಬ್ರಾಹ್ಮಣಪಾಚಕನನ್ನು ಕುರಿತು” ಅವನೇಕೆ ಹೊರಗೆ ನಿಂತುಕೊಳ್ಳಬೇಕು? ಏನು ಜನಿವಾರ ಇಲ್ಲ ಎಂತಲೆ? ಅವನೂ ನಿಮ್ಮಂತೆ ಈಶ್ವರಭಕ್ತನಲ್ಲವೆ? ಎಂದು ಬುದ್ದಿ ಹೇಳಿದರಂತೆ.

ಶ್ರೀ ಮಾತೆಯಲ್ಲಿ ಪತಿತಪಾವನೆಯ ಗುಣ ಸಂಪೂರ್ಣವಾಗಿ ವ್ಯಕ್ತವಾಗಿತ್ತು. ಲೋಕದಲ್ಲಿ ಕರ್ಮವಿಪಾದದಿಂದಲೊ ವಿಧಿವಶದಿಂದಲೊ ಸ್ತ್ರೀಯ ಹೃದಯ ದೌರ್ಬಲ್ಯದಿಂದಲೊ ಅಥವಾ ಸನ್ನೀವೇಶ ಸಹವಾಸ ದೋಷಗಳಿಂದಲೊ ಪ್ರಲೋಭನೆಗಳಿಗೆ ಶರಣಾಗಿ ದಾರಿ ತಪ್ಪಿದವರನ್ನು “ಎಲೈ ಪಾಪಿಗಳೆ” ಎಂದು ಸಂಭೋದಿಸಿ, ನರಕಭಯವನ್ನು ತೋರಿ, ಪುಕ್ಕಟೆಯಾಗಿ ಬುದ್ದಿ ಹೇಳಿ  ಉಪದೇಶ ಮಾಡುವ ಮೂರ್ಖಚಾರ್ಯರು ಎಷ್ಟೋಮಂದಿ ಇದ್ದಾರೆ. ಆದರೆ ಪಾಪಿಗಳನ್ನು ಆಲಂಗಿಸಿ, ಧೈರ್ಯ ಹೇಳಿ, ಸಹಾನುಭೂತಿ ತೋರಿಸಿ ಅವರನ್ನು ಉದ್ಧಾರಮಾಡುವವರು ಎಲ್ಲಿಯೋ ಬಹು ಸ್ವಲ್ಪ ಪುಣ್ಯಾತ್ಮರು. ಅಂತಹವರೆ ಪತಿತಪಾವನರು.

ಒಂದು ಸಾರಿ ಸಂಭ್ರಾಂತ ಕುಲಮಹಿಯೊಬ್ಬಳು ಕರ್ಮವಿಪಾಕದಿಂದ ದುಷ್ಪ್ರವೃತ್ತಿ ಪರಾಯಣೆಯಾಗಿ, ತರುವಾಯ ಬಹಳ ಪಶ್ಷಾತ್ತಾಪ ಹೊಂದಿ ಶ್ರೀಮಾತೆಯಲ್ಲಿಗೆ ಬಂದಳು. ಬಂದವಳು ಮಾತೆಯಿದ್ದ ಮಂದಿರವನ್ನು ಪ್ರವೇಶಿಸದೆ ಬಾಗಿಲಾಚೆ ನಿಂತು ಕಂಬನಿಗರೆಯತ್ತ ತನ್ನ ಪಾಪದ ಸಮಸ್ತ ಕಥೆಯನ್ನೂ ಸವಿಸ್ತಾರವಾಗಿಹೇಳಿ ಬಿಕ್ಕಿ ಬಿಕ್ಕಿ ಅತ್ತಳು. ಮಾತೆಯ ಹೃದಯ ಕರಗಿ ನೀರಾಯಿತು. ತಟಕ್ಕನೆ ಎದ್ದು ಹೋಗಿ ಆಕೆಯ ಕುತ್ತಿಗೆಯನ್ನು ತಬ್ಬಿಕೊಂಡು ಸಸ್ನೇಹವಾಣಿಯಿಂದ “ಬಾಮಾ, ಒಳಗೆ ಬಾ. ಪಾಪವನ್ನು ಒಪ್ಪಿಕೊಂಡು ಅನುತಪ್ತೆಯಶಗಿದ್ದೀಯೆ. ಅನುತಾಪವೇ ಹಿರಿಯ ಪ್ರಾಯಶ್ಚಿತ್ತ. ಅದೇ ಗಂಗಾಸ್ನಾನ. ಬಾ ನಿನಗೆ ಮಂತ್ರೋಪದೇಶ ಕೊಡುತ್ತೇನೆ. ಗುರುದೇವನ ಅಡಿಯಲ್ಲಿ ಎಲ್ಲವನ್ನೂ ಅರ್ಪಿಸಿಬಿಡು, ಭಯವೇಕೆ?” ಎಂದು ಹೇಳುತ್ತ ಆಕೆಯನ್ನು ಕರೆದುಕೊಂಡು ಹೋಗಿ ಸ್ನಾನಮಾಡಿಸಿ, ಮಂತ್ರದೀಕ್ಷೆಯನ್ನು ದಾನ ಮಾಡಿದರು. ಇದನ್ನು ಕುರಿತು ಯಾರೋ ಒಬ್ಬರು ತರುವಾಯ ಪ್ರಶ್ನೆ ಮಾಡಲು ಶ್ರೀಮಾತೆ “ಗುರುದೇವನು ಅವತಾರಮಾಡಿದ್ದು ಇನ್ನೇತಕ್ಕೆ? ರಸಗುಳ್ಳ ತಿನ್ನುವುದಕ್ಕೇನು? ಪುಣ್ಯತ್ಮರಿಗೆ ಅವತಾರಗಳ ಅವಶ್ಯಕತೆ ಇಲ್ಲ. ಪರಮಾತ್ಮನು ಅವತರಿಸುವುದು ಪಾಪಿಗಳಿಗಾಗಿ. ನಾವೇ ಅವರನ್ನು ದೂರ ಮಾಡಿದರೆ ಅವರು ಉದ್ಧಾರವಾಗುವುದು ಹೇಗೆ?!”

ಎಂದರಂತೆ.

ಶ್ರೀಮಾತೆ ವ್ಯವಹಾರ ಆಚಾರಗಳ ವಿಚಾರವಾಗಿ ಎಂತಹ ಉದಾರ ಗಹನಭಾವಗಳನ್ನು ಹೊರಪಡಿಸುತ್ತಿದ್ದರೊ ಹಾಗೆಯೆ ತತ್ತ್ವಧರ್ಮಗಳ ವಿಚಾರವಾಗಿಯೂ ಸೂಕ್ಷ್ಮ ಭಾವಗಳನ್ನು ವ್ಯಕ್ತಗೊಳಿಸುತ್ತಿದ್ದರು. ಒಂದುಸಾರಿ ಮೂರ್ತಿ ಪೂಜೆಯ ವಿಚಾರವಾಗಿ ಮಾತಾಡುತ್ತ “ಹಣ್ಣಿನ ಮರದಲ್ಲಿ ನೂರಾರು ಹಕ್ಕಿಗಳು ಕಲೆತು, ನೂರಾರು ವಿಧವಾಗಿ ತಮತಮಗೆ ಸಹಜವಾದ, ಸುಲಭವಾದ ರೀತಿಯಲ್ಲಿ ಇಂಚರಗೈದರೂ ನಾವು ಎಲ್ಲವನ್ನೂ ಕುರಿತು “ಹಕ್ಕಿ ಹಾಡುತ್ತವೆ” ಎಂದು ಹೇಳುತ್ತೇವೆ. ಹಾಗೆಯೆ ಭಕ್ತರು ಅನೇಕ ಮಾರ್ಗಗಳಲ್ಲಿ ಭಗವಂತನನ್ನು ಪೂಜಿಸಿದರೂ ಅವರೆಲ್ಲರೂ ಭಕ್ತರಲ್ಲದೆ ಬೇರೆಯಲ್ಲ” ಎಂದು ಹೇಳಿದರು.

ಸಂನ್ಯಾಸಿ ಮತ್ತು ಗಾರ್ಹಸ್ಥ್ಯಗಳ ವಿಚಾರವಾಗಿ ಮಾತಾಡುತ್ತಾ ಮಾತೆ ಇಂತೆಂದು ಹೇಳಿದ್ದಾರೆ: “ಸಂನ್ಯಾಸವಿಲ್ಲದೆ ಮುಕ್ತಿಯಿಲ್ಲ ಎಂಬುದೇನೊ ನಿಜ. ಆದರೆ ಗೃಹಸ್ಥರಾದವರು ಭಯಪಡುವುದು ಬೇಡ; ಸಂನ್ಯಾಸಿಗಳಾದವರು ಹಿಗ್ಗುವುದೂ ಬೇಡ. ಏಕೆಂದರೆ, ಸಂನ್ಯಾಸಿ ಎಂದರೆ ಕಾವಿಬಟ್ಟೆ ತೊಡುವುದು ಎಂದು ಮಾತ್ರ ಅರ್ಥವಲ್ಲ; ಮಾನಸಿಕ ಸಂನ್ಯಾಸಿ ಎಂದರ್ಥ. ಕಾವಿಯುಟ್ಟಿರಲಿ, ಸಂಸಾರಿಯಾಗಿರಲಿ, ಬೇಕಾದುದು ನಿಷ್ಕಾಮತೆ. ಅದಿದ್ದವರು ಯಾವ ಆಶ್ರಮದಲ್ಲಿಯೆ ಇರಲಿ ಸಂನ್ಯಾಸಾಶ್ರಮದಲ್ಲಿ ಇದ್ದಂತೆಯೆ. ಅಂಥವರಿಗೆ ಮೋಕ್ಷಲಭಿಸಿಯೆ ಲಭಿಸುತ್ತದೆ.”

ಜಗಜ್ಜೀವನದಲ್ಲಿ ಬರುವ ಶೋಕತಾಪಗಳನ್ನು ಕುರಿತು ಹೇಳುತ್ತಿದ್ದಾಗ ಮಾತೆ ಇಂತೆಂದಳು: ” ಜನರು ‘ಈಶ್ವರ ಕೃಪೆ’ ಎಂದರೆ ತಮಗೊದಗುವ ಸುಖ ಎಂದು ತಿಳಿದುಕೊಂಡಿದ್ದಾರೆ. ಅದು ಸರಿಯಾದ ಜ್ಞಾನವಲ್ಲ. ಈಶ್ವರನ ಕೃಪೆ ಸುಖದ ವೇಷವನ್ನು ತಳೆದಂತೆಯೆ ದುಃಖದ ವೇಷವನ್ನೂ ತಾಳುತ್ತದೆ. ದುಃಖವೂ  ಈಶ್ವರ ಕೃಪೆಯ ಒಂದುರೂಪ ಎಂದು ಭಾವಿಸಿ ಶಾಂತರಾಗುವುದೇ ಶ್ರೇಯಸ್ಸು.”

“ಕೃಪೆ ಕಾರ್ಯಕಾರಣವಾದಕ್ಕೆ ಸಿಲುಕಿಲ್ಲ. ಅದು ಸ್ವತಂತ್ರವಾದುದು. ಹುಡುಗನ ಕೈಯಲ್ಲಿರುವ ಮಿಠಾಯಿಯಂತೆ. ಅನೇಕರು ನನಗೆ ಮಿಠಾಯಿ ಕೊಡು. ನನಗೆ ಮಿಠಾಯಿ ಕೊಡು ಎಂದು ಗೋಗರೆಯುತ್ತಾರೆ. ಹುಡುಗನು ಕೊಡುವುದಿಲ್ಲ. ಆದರೆ ಇದ್ದಕ್ಕಿದ್ದ ಹಾಗೆ ಯಾರಾದರೊಬ್ಬರಿಗೆ ಬೇಡವಾದರೂ ಸರಿಯೆ, ತಿಂಡಿಯನ್ನು ಕೊಟ್ಟುಬಿಡುತ್ತಾನೆ. ಹಾಗೆಯೆ ಈಶ್ವರನ ಕೃಪೆಯೂ ಕೂಡ ತರ್ಕಕ್ಕೆ ಕಟ್ಟುಬೀಳದೆ ಯಾರಿಗಾದರೂ ದೊರಕಿಬಿಡುತ್ತದೆ”.

ಇಂತಹ ಅನೇಕ ಘಟನೆಗಳೂ ವಚನಗಳೂ ಮಾತೆಯ ಜೀವನದಲ್ಲಿ ಕಂಡು ಬರುತ್ತದೆ. ಪರಮಹಂಸರ ಸಹಧರ್ಮಿಣಿ ಅಕ್ಷರಶಃ, ತತ್ತ್ವಶಃ, ಅವರ ಅರ್ಧಾಂಗಿಯಾಗಿದ್ದರೆಂಬುದರಲ್ಲಿ ಸಂಶಯ ಲೇಶವಿಲ್ಲ.

ಶ್ರೀಮಾತೆ ಕ್ರಿ. ಶ. ೧೯೨೦ ರಲ್ಲಿ ತನ್ನ ೬೭ ನೆಯ ವಯಸ್ಸಿನಲ್ಲಿ ದೇಹತ್ಯಾಗ ಮಾಡಿದರು. ಆಕೆ ಭರತಖಂಡದಲ್ಲೆಲ್ಲಾ ಸಂಚರಿಸಿ ಅನೇಕ ಶಿಷ್ಯರ ಭಕ್ತಿಗೆ ಪಾತ್ರರಾಗಿದ್ದರಲ್ಲದೆ ವಿದೇಶಗಳಲ್ಲಿಯೀ ಆಕೆಯ ನೀರವಧ್ಯಾನಜೀವನದ ತೇಜಸ್ಸು ತಪಸ್ಸೂ ಹಬ್ಬಿತ್ತು. ಈಗಲೂ ಹಬ್ಬುತ್ತಾ ಇದೆ. ಹಬ್ಬಬೇಕಾದ ಜೀವನವದು. ಆ ಮೌನ ಮಹಾ ಜೀವನದಲ್ಲಿ ರೋಮಾಂಚ ಮಾಡುವ ರೌಚಕ ಘಟನೆಗಳಿಲ್ಲ: ಆದರೆ ನಿಜವಾದ ತಪಸ್ಸು ರೋಚಕಮಯವಾದುದಲ್ಲ. ಮಹಾ ಔದಾರ್ಯವು ಮಹಾತ್ಮೆಗೆ ಕುರುಹಾದ ಪಕ್ಷದಲ್ಲಿ ಆಕೆಯೂ ಭರತಖಂಡದ ಜೀವಜ್ಯೋತಿಗಳ ಶ್ರೇಣಿಗೆ ಸೇರಿದ್ದಾರೆ. ಶ್ರೀಮಾತೆ ನವಯುಗದ ಆದರ್ಶ ತಪಸ್ವಿನಿ.


[1] ಈಗ ೧೯೭೩ ರಲ್ಲಿ ಆ ಕೊರತೆ ಇಲ್ಲ.