ಪುಣ್ಯ ಕ್ಷೇತ್ರವಾದ ಪ್ರಯಾಗದಲ್ಲಿ ಗಂಗೆ ಯಮುನೆಯರ ಸಂಗಮಕ್ಕೆ ತ್ರಿವೇಣೀ ಎಂಬ ಹೆಸರು ಪ್ರಸಿದ್ಧವಾಗಿದೆ. ಲೋಕಲೋಚನಗಳಿಗೆ ಅಲ್ಲಿ ಗೋಚರವಾಗುವುದು ದ್ವಿವೇಣಿ ಆದರೂ ಅಲೌಕಸ್ಪರ್ಶಿಯಾದ ಅಂತರ್ ದೃಷ್ಟಿಗೆ ಮತ್ತೊಂದು ಆಧ್ಯಾತ್ಮಿಕವಾದ ತರಂಗಿಣಿಯೂ ವೇದ್ಯವಾಗುತ್ತದೆ. ಅದೇ ಅಂತರ್ ಗಾಮಿಯೂ ಅವ್ಯಕ್ತವೂ ಆಗಿರುವ ಸರಸ್ವತಿ. ಆ ನಿಗೂಢ ತರಂಗಿಣಿಯ ಅರಿವಾಗದಿದ್ದವರಿಗೆ ಪ್ರಾಯಶಃ? ಆ ಕೂಡಲೊ ಬರಿಯ ಎರಡು ಹೊಳೆಗಳು ಸೇರುವ ಕೇವಲ ಒಂದು ಪ್ರಕೃತಿವ್ಯಾಪಾರ ಮಾತ್ರವಾಗಿ, ತನ್ನ ಸೌಂದರ್ಯದಿಂದ ಮನೋಹರತ್ವವನ್ನು ಪಡೆಯಬಹುದಾಗಿದ್ದರೂ? ಅಘಪರಿಹಾರಕ ತೀರ್ಥವಾಗಿ ಪಾವನತ್ವವನ್ನು ಪಡೆಯುತ್ತಿರಲಿಲ್ಲ. ಗಂಗೆ ಯಮುನೆಯರ ಲೌಕಿಕವಾದ ಸಂಗಮಕ್ಕೆ ಅವ್ಯಕ್ತವೂ ಅಂತರ್ಗಾಮಿಯೂ ಆದ ಸರಸ್ವತಿಯ ಅಲೌಕಿಕತೆಯೂ ಸಂಗಮವಾಗದಿದ್ದರೆ ಯಾವ ನೀರೂ ತೀರ್ಥವಾಗಲಾರದು ಎಂಬ ತತ್ತ್ವಕ್ಕೆ ಪ್ರತಿಮಾಸದೃಶವಾಗಿದೆ. ತ್ರಿವೇಣೀ ಸಂಗಮ.

ಶ್ರೀರಾಮಕೃಷ್ಣ ಮತ್ತು ವಿವೇಕಾನಂದರು ಗಂಗಾ ಯಮುನಾ ನದಿಗಳಂತೆ ಬಹಿರಂಗವಾಗಿ ಹರಿಯುತ್ತಾ ಜಗಚ್ಚಕ್ಷುಗಳನ್ನು ಆಕರ್ಷಿಸುತ್ತಿದ್ದರೆ ಲಜ್ಜಾಪಟಾವೃತಳಾದ ಶ್ರೀಮಾತೆ ಶಾರದಾ ದೇವಿ ಗುಪ್ತಗಾಮಿನಿಯಾದ ಸರಸ್ವತಿ ನದಿಯಂತೆ ಹರಿದು ಶ್ರೀ ಗುರುದೇವ ಮತ್ತು ಸ್ವಾಮಿಜಿಯವರ ಜೀವನಲೀಲೆಗೆ ತನ್ನ ಗೂಹ್ಯ ಜೀವನವನ್ನು ಸಮರ್ಪಿಸಿ ಒಂದು ದಿವ್ಯತರವಾದ ತ್ರಿವೇಣೀ ಸಂಗಮವನ್ನು ನಿರ್ಮಿಸಿದ್ದಾರೆ.

ಶ್ರೀಮಾತೆಯ ಬದುಕು ದೂರದ ವೀಣಾಧ್ವನಿಯಂತೆ ಸುಮಧುರ, ಸುಪ್ರಶಾಂತ. ಕಿವಿಗೊಟ್ಟು ಆಲಿಸಿದಲ್ಲದೆ ಕೇಳುವುದೂ ಅಸಂಭವ: ಮನಮುಟ್ಟಿ ಕೇಳಿದಲ್ಲದೆ ಅದರ ಇಂಪು ಅನುಭವಕ್ಕೆ ಬರುವುದಿಲ್ಲ. ಹೆದ್ದಾರಿಗೆ ದೂರದಲ್ಲಿರುವ ಎಲೆಯ ಮರೆಯ ಹೂವಿನ ನರುಗಂಪಿನಂತೆ ಅವಸರದ ಪಯಣಿಗರಿಗೆ ಅದು ಆವೇದ್ಯ. ಅದು ದೈನಂದಿನ ಸಾಂಸಾರಿಕ ಜೀವನದ ಸಕಲ ಲಕ್ಷಣಗಳಿಂದ ಸಮನ್ವಿತವಾಗಿದೆ. ವೈಭವಪೂರ್ಣವಾದರೂ ವಿನಯ ದೀನ; ಸಾಹಸಪೂರ್ಣವಾದುದಾದರೂ ನೀರಸ ಸಾಮಾನ್ಯ; ಶ್ರದ್ಧಾ ಮಹಿಮೆಯಿಂದ ಧೀರವಾದರೂ ಕೌಟುಂಬಿಕ ಕಷ್ಟಕ್ಲೇಶಗಳಿಂದ ದುಃಖಪೂರ್ಣ; ಶತಶತ ಅಪಮಾನ ಅನ್ಯಾಯಗಳಿಂದ ತಾಡಿತವಾದರೂ ಸರ್ವದಾ ಕ್ಷಮಾಶೀಲ; ಆದಿಶಕ್ತಿಯ ಸರ್ವಶಕ್ತವಾದ ಬೆಂಬಲವಿದ್ದರೂ ಅಬಲದಂತೆ ವ್ಯವಹರಿಸುವ ಸಹಿಷ್ಣು. ಅಂತಹ ಬದುಕನ್ನು ಕುರಿತು ಉಪನ್ಯಾಸ ಮಾಡುವುದಿರಲಿ ಗಟ್ಟಿಯಾಗಿ ಮಾತನಾಡಿದರೂ ಅದಕ್ಕೆ ಅಪಚಾರಮಾಡಿದಂತಾಗುತ್ತದೆ. ಇನ್ನು ಜೀವನ ಚರಿತ್ರೆಯನ್ನು ಬರೆಯುವುದೆಂದರೆ.. … !

ಇದ್ದದ್ದರಲ್ಲಿ ಹಾಗೆ ಮಾಡುವುದೇ ಅತ್ಯಂತ ಕಡಮೆಯ ಅಪಚಾರವೆಂದು ತೋರುತ್ತದೆ. ಏಕೆಂದರೆ ಜೀವನಚರಿತ್ರಯಲ್ಲಿ ನಾವು ಹೇಳುವುದನ್ನೆಲ್ಲ ಹೇಳಿಬಿಡಬಹುದು; ಸ್ವಲ್ಪ ದೀರ್ಘವಾದರೂ ಚಿಂತೆಯಿಲ್ಲವೆಂದು ವಿವರಿಸಲೂಬಹುದು; ಇತರರಿಗೆ ಅಲ್ಪ. ಸರಸ, ಅರ್ಥಹೀನ ಎಂದು ತೋರುವ ಘಟನೆಗಳನ್ನು ನಮಗೆ ತೋರುವಂತೆ ಅನಲ್ಪ, ಸರಸ, ಅರ್ಥಪೂರ್ಣವೆಂದು ಸಮರ್ಥಿಸಲೂಬಹುದು. ಪುಸ್ತಕ ಓದುವವರ ಮೇಲೆ ಲೇಖಕನದು ಏನೂ ಬಲಾತ್ಕಾರವಿರುವುದಿಲ್ಲ. ಅವನಿಗೆ ಸ್ವಾರಸ್ಯವಾಗಿ ಕಂಡರೆ ಹಾಳೆ ಮಗಚುತ್ತಾನೆ; ಹಾಗೆ ಕಾಣಲಿಲ್ಲ ಮುಚ್ಚುತ್ತಾನೆ. ಅವನ ತಿರಸ್ಕಾರದ ಕಿರುನಗೆ ತನ್ನ ಕೊಂಕಿನಿಂದ ಲೇಖಕನನ್ನು ಇರಿಯುವುದಿಲ್ಲ. ವಾಚಕನ ಧಿಕ್ಕಾರದ ಕೋರೆಯ ವ್ಯಾಘಾತದಿಂದ ದೂರವಾಗಿ ಲೇಖಕ ಸಂಪೂರ್ಣವಾಗಿ ಸುರಕ್ಷಿತ. ‘ಯಾರಿಗೆ ಲಭ್ಯವಲ್ಲವೋ ಅವರಿಗೆ ಲಭ್ಯವಿಲ್ಲ’ –  ಎಂಬ ಸ್ವರ್ಣಾಕ್ಷರಗಳು  ಲೇಖಕನ ಗುರಾಣಿಯ ಮೇಲೆ ಥಳಥಳಿಸುವಂತೆ ಖಚಿತವಾಗಿ ಧಿಕ್ಕಾರದ ಬದ್ಧಭ್ರುಕುಟಿಯನ್ನು ಭಂಗಿಸಿ ಉಪಕಾರಮಾಡುತ್ತವೆ!

ಶ್ರೀರಾಮಕೃಷ್ಣ ಪರಮಹಂಸರ ಬದುಕು ಈಶ್ವರಪರವಾದ ವ್ಯಾಕುಲತೆ, ಸಾಧನೆ, ಸಿದ್ಧಿ ಇತ್ಯಾದಿ ವೈಭವಗಳಿಂದ ಸಾಹಸಪೂರ್ಣವಾಗಿ ಲೇಖನಿಯ ಓಜಸ್ಸನ್ನು ಮೆರೆಯಲು ಸಹಕಾರಿಯಾಗುತ್ತದೆ. ಸ್ವಾಮಿ ವಿವೇಕಾನಂದರ ಜೀವಿತವಾದರೂ ಪರಮಹಂಸರ ಆಧ್ಯಾತ್ಮಿಕ ಸಂಪತ್ತನ್ನು ಹೊತ್ತು ಜನಾಂಗ ಜನಾಂಗಗಳಿಗೂ ದೇಶವಿದೇಶಗಳಿಗೂ ಅದನ್ನು ವರ್ಣಮಯವಾಗಿ ಉಜ್ವಲವಾಗಿ ಸೋತ್ಸವವಾಗಿ ವಿತರಣಮಾಡುವ ಒಂದು ಪೌರಾಣಿಕವಾದ ಅದ್ಭುತ ಕಾಂತಿಯಿಂದ ಶೋಭಾಯಮಾನವಾಗಿ ಎಂತಹ ಹೆಳವ ಲೇಖಣಿಗೂ ಗರುಡರೆಕ್ಕೆ ಮೂಡಿಸುವನಿತು ಸಂಪದ್ಯುಕ್ತವಾಗಿದೆ. ಶ್ರೀಮಾತೆಯ ಬದುಕಿನಲ್ಲಿ ಮೊದಲನೆಯ ದರ ವೈಭವವಾಗಲಿ ಎರಡನೆಯದರ ಉಜ್ವಲತೆಯಾಗಲಿ ಎದ್ದು ಕಾಣಿಸುವುದಿಲ್ಲ. “ಅಯ್ಯೋ! ಇಲ್ಲೇನಿದೇ?” ಎಂಬನಿತು ಸಾಮಾನ್ಯವಾಗಿ ತೋರುತ್ತದೆ.

ಪರಮಹಂಸರು ಅಮರ್ತ್ಯದ ದಿವ್ಯನದಿಯನ್ನು ಮರ್ತ್ಯಕ್ಕೆಳೆತಂದರು. ಆ ತ್ರಿಪಥೆಗೆ ಭವ್ಯವಾದ ಅಣೆಕಟ್ಟು ಕಟ್ಟಿ, ಕಾಲುವೆಗಳನ್ನು ತೆಗೆದು, ಲೋಕದ ಮೇಲೆಲ್ಲಾ ಅದರ ಅಮೃತವಾರಿಯನ್ನು ಹರಿಯಬಿಟ್ಟು, ಅದರ ಲಾಲನ ಪಾಲನಾದಿಗಳ ಸುವ್ಯವಸ್ಥೆಗಾಗಿ ಕ್ರಮಬದ್ಧವಾದ ವಿಶ್ವಸಂಸ್ಥೆಯೊಂದನ್ನು ನಿರ್ಮಿಸಿ, ಲೋಕನೇತ್ರಗಳನ್ನು ಸೆಳೆಯುವಂತೆ ದೀಪಾಕ್ಷರೋಜ್ವಲವಾದ ನಾಮಾಂಕಿತದಿಂದ ಅದನ್ನು ಅಲಂಕರಿಸಿ, ಅದನ್ನು ಜಗನ್ಮನ್ಯವನ್ನಾಗಿ ಮಾಡಿ ತಾವೂ ಜಗದ್ವಿಖ್ಯಾತರಾದರು ಶ್ರೀವಿವೇಕಾನಂದರು. ಆದರೆ ಶ್ರೀಮಾತೆ? ಸೂರ್ಯ ಚಂದ್ರರ ಮುಂದೆ ಬಹುದೂರದ ಕಿರುತಾರೆಗೆಯಂತೆ “ಅರಿಯೆನು ನಾನೆಲೆ ನೀನಾರೊ” ಎಂಬ  ಪ್ರಶ್ನೆಗೂ ಪಾತ್ರರಾಗುತ್ತಾರೆ. ಆದರೂ ವೈಜ್ಞಾನಿಕನ ದೂರದರ್ಶಕ ಯಂತ್ರದ ನಿರ್ದಾಕ್ಷಿಣ್ಯವೂ ನಿಷ್ಪಕ್ಷಪಾತವೂ ಸೂಕ್ಷ್ಮತಮವೂ ಆದ ಸಮೀಕ್ಷೆಗೆ ಸಿಲುಕಿದಾಗ ಕಿರುತಾರೆಗೆಯೆ ಸೂರ್ಯಚಂದ್ರರಿಗೂ ಸಾವಿರಮಡಿ ಹಿರಿದಾಗುವ ಭವ್ಯತರ ಸತ್ಯ ಹೊರಬೀಳದೇನು? ಪರಮಹಂಸರು ಗಂಗೆಯನ್ನು ತಂದೂ ವಿವೇಕಾನಂದರು ಅದಕ್ಕೆ ಕಟ್ಟೆಯನ್ನು ಕಟ್ಟಿ ಕಾಲುವೆ ತೆಗೆದು ಅದನ್ನು ಭೂಮಿಯ ಮೇಲೆಲ್ಲಾ ಹರಿಸಿಯೂ ಲೋಕದ ಕಣ್ಣಿಗೆ ಬೀಳುತ್ತಿದ್ದಾರೆ. ಆದರೆ ಶ್ರೀಮಾತೆ ದೂರ ದೂರದ ಹಳ್ಳಿಗಳಲ್ಲಿ, ಗದ್ದೆಗಳಲ್ಲಿ ದಿನದಿನವೂ ಬೇಸರದೆ ಕೃಷಿಮಾಡುವ ಅಜ್ಞಾತ ರೈತನಂತೆ ಯಾರ ಕಣ್ಣಿಗೂ ಬೀಳದಿದ್ದರೂ ಪರಮಹಂಸರ ಮತ್ತು ವಿವೇಕಾನಂದರ ಗೆಯ್ಮೆಯ ಫಲಸ್ವರೂರಾಗಿ ನಮ್ಮ ಧ್ಯಾನದೃಷ್ಟಿಗೆ ಗೋಚರಿಸುತ್ತಾರೆ. ಪರಮಹಂಸರ ವ್ಯವಹಾರ ವಿಶೇಷವಾಗಿ ಅಧ್ಯಾತ್ಮ ಭೂಮಿಕೆಯಲ್ಲಿತ್ತು; ಶ್ರೀ ವಿವೇಕಾನಂದರದು ಜಗದ್ವಿಸ್ತಾರವಾದ ಪ್ರಸಾರ ಭೂಮಿಕೆಯಲ್ಲಿತ್ತು; ಶ್ರೀ ಮಾತೆಯ ವ್ಯವಹಾರವಾದರೊ ಅವೆರಡಕ್ಕಿಂತ ಹೆಚ್ಚಿನ ತಾಳ್ಮೆಯನ್ನೂ ಪಡಿಬಯಸದ ದುಡಿಮೆಯನ್ನೂ ಕೋರುವ, ದೈನ್ಯ ದಾರಿದ್ಯ್ರ ನೈರಾಶ್ಯ ಮೌಢ್ಯ ಮೂರ್ಖತ್ವ ಮಾತ್ಸರ್ಯ ಈರ್ಷ್ಯೆ ಅಸೂಯೆ ಶಠತ್ವ ಜಡತ್ವಾದಿ ನಾನಾ ತಮೋರಜೋಗುಣಗಳಿಂದ ಕಂಟಕಿತವಶದ ದೈನಂದಿನ ಭೂಮಿಕೆಯಲ್ಲಿ ಭಗವತ್ ರೀತಿಯಾದ ಸಾಮಾನ್ಯತಾಪಥದಲ್ಲಿ ಬಹುದೀರ್ಘಕಾಲ ಯಾತ್ರಿಯಾಗಬೇಕಾಯಿತು. ಶ್ರೀ ರಾಮಾಯಣ ಚಿತ್ರಿತವಾಗಿರುವ ಅಥವಾ ಆಗದಿರುವ ಊರ್ಮಿಳಾದೇವಿತ ಕ್ರಿಯೆಯಿಲ್ಲದ ಅನಂತ ನಿರೀಕ್ಷೆಯ ತಪಸ್ಯೆಯಂತೆ ಶ್ರೀಮಾತೆಯ ತಪಸ್ಯೆ ಅಮಂದ ಹೃದಯರ ಪೂಜೆ ಗೌರವಗಳನ್ನು ಸೂರೆಗೊಳ್ಳುತ್ತದೆ.

ಮೇಲೆ ವರ್ಣಿತವಾಗಿರುವುದನ್ನು ನೋಡಿ ಯಾರಾದರೂ ಶ್ರೀಮಾತೆಯನ್ನು ಕುರಿತು ಹೀಗೆಂದುಕೊಳ್ಳಬಹುದು.”ಅಂತಹ ಹೆಂಗಸರಯ ಭರತಖಂಡದಲ್ಲಿ ಸಾವಿರಾರೂ ಜನರಿದ್ದಾರೆ, ಅವರಿಗಿಂತಲೂ ಹೆಚ್ಚಿನ ಕಷ್ಟ ಕ್ಲೇಶಗಳಿಗೆ ಸಿಕ್ಕಿದವರೂ ಇದ್ದಾರೆ. ಆದ್ದರಿಂದ ಅವರಲ್ಲಿ ಏನೂ ಅಂತಹ ವಿಶೇಷತೆ ಇಲ್ಲ. ಪರಮಹಂಸರ ಪತ್ನಿಯಾದುದರಿಂದಲೂ ವಿವೇಕಾನಂದರ ಗುರುಪತ್ನಿಯಾದುದರಿಂದಲೂ ಲೋಕಕ್ಕೆ ಅವರ ಹೆಸರು ಮಾನ್ಯವಾಯಿತು. ಶಿಷ್ಯರು ತಮ್ಮ ಆರಾಧನಾ ವಸ್ತುವಿನ ಹಿರಿಮೆಯನ್ನು ಬೃಹತ್ತಾಗಿ ಚಿತ್ರಿಸಿರುವ ಉದ್ದೇಶದಿಂದ ಅಲ್ಪವನ್ನೂ ಭೂಮವನ್ನಾಗಿ ಪರಿಗಣಿಸಿ ವಿಕ್ಷೇಪಿಸಿದ್ದಾರೆ.”

ಯಾರಲ್ಲಿಯಾದರೂ ಈ ಭಾವನೆ ಮೂಡಿದ್ದರೆ ಅದು ಸರ್ವಥಾ ತಪ್ಪು. ಲೀಲಾಸ್ಥತಿಯಲ್ಲಿ ಶ್ರೀಮಾತೆ ಅತಿ ಸಾಮಾನ್ಯೆಯಂತೆ ವರ್ತಿಸುತ್ತಿದ್ದರೂ ಆಗಾಗ ಅವರ ನಿತ್ಯಸ್ಥತಿಯ ಮಿಂಚು ಹೊರಹೊಮ್ಮಿ, ಅದನ್ನು ಅನುಭವಿಸಿದವರಿಗೆ ವಿಶ್ವರೂಪದರ್ಶನವಾದ ಅರ್ಜುನನಿಗೆ ಆದ ಅವಸ್ಥೆಯಾಗುತ್ತಿತ್ತು. ತಮ್ಮೆದುರಿಗೆ ಕಾಲುಚಾಚಿ ಕುಳಿತಿರುವ ಈ ಮುದಿ ಎಲುಬುಗೂಡಿನ ಅಜ್ಜಿ ಆದಿಶಕ್ತಿಸ್ವರೂಪಿಣಿಯಾದ ಜಗನ್ಮಾತೆಯೆಂದು ನಂಬುವುದು ಮಾನುಷ್ಯವಾದ ವಿಚಾರಬುದ್ದಿಗೆ ಹೇಗೆ ತಾನೆ ಸಾಧ್ಯ?

ಒಮ್ಮೆ ಸಂವಾದದ ಮಧ್ಯೆ ಶ್ರೀಮಾತೆ ಹೀಗೆಂದರಂತೆ;

“ಈಶ್ವರ ಸಾಕ್ಷಾತ್ಕಾರ? ಭಗವದ್ ದರ್ಶನ? ಅದು ನನಗೆ ಅಂಗೈ ಮೇಲಣ ನೆಲ್ಲಿಕಾಯಿ. ಬೇಕೆಂದಾಗ ಪಡೆಯಬಹುದು… ನನ್ನನ್ನು ನಿನ್ನ ಬಂಧುಮಾತ್ರಳೆಂದು ಭಾವಿಸಬೇಡ. ಯಾವಾಗ ಮನಸ್ಸು ಬಂದರೆ ಆವಾಗ ಈ ದೇಹ ಪರಿತ್ಯಾಗ ಮಾಡಬಲ್ಲೆನು… ನಾನು ಬದುಕಿರುವವರೆಗೂ ಯಾರೂ ನನ್ನ ಸ್ವಸ್ವರೂಪವನ್ನು ಅರಿಯಲು ಸಮರ್ಥರಾಗುವುದಿಲ್ಲ.”

“ಶ್ರೀರಾಮಕೃಷ್ಣರು ನನ್ನನ್ನು ಬಿಟ್ಟು ಹೋಗಿರುವುದೇತಕ್ಕೆ? ಭಗವತ್ ತತ್ತ್ವದ ಮಾತೃಸ್ವರೂಪವನ್ನು ಜಗತ್ತಿಗೆ ಮೆರೆಯುವುದಕ್ಕೆ.”

ಒಮ್ಮೆ ಸಂನ್ಯಾಸಿ ಶಿಷ್ಯರಲ್ಲೊಬ್ಬನು “ತಾಯಿ ನಿಮ್ಮನ್ನು ಸಂದರ್ಶಿಸಿದ ತರುವಾಯ ಜನರು ಇತರ ದೇವತೆಗಳನ್ನು ಪೂಜಿಸುವುದಿಲ್ಲ?” ಎಂದಾಗ ಶ್ರೀಮಾತೆ “ಏಕೆ ಪೂಜಿಸಬಾರದು? ಆ ದೇವತೆಗಳೆಲ್ಲರೂ ನನ್ನ ಅಂಶಗಳೆ” ಎಂದರಂತೆ.

ಇನ್ನೊಮ್ಮೆ ಶಿಷ್ಯನೊಬ್ಬನು ಕೇಳಿದನಂತೆ:

“ನಾವು ಪೂಜಿಸುವ ಈ ಚಿತ್ರದಲ್ಲಿ ಶ್ರೀ ಗುರು ನಿಜವಾಗಿಯೂ ಇದ್ದಾರೆಯೆ?”

ಶ್ರೀಮಾತೆ ಹೇಳಿದರು:

“ನಿಶ್ಚಯ. ಅದರಲ್ಲಿ ಸಂದೇಹ ಉಂಟೆ? ಇದ್ದೇ ಇದ್ದಾರೆ. ಕಾಯ ಛಾಯೆ ಎರಡೂ ಒಂದೆ. ಅವರ ಭಾವಚಿತ್ರ ಅವರ ಛಾಯೆಯಲ್ಲದೆ ಮತ್ತೇನು?”

ಶಿಷ್ಯ: “ಹಾಗಾದರೆ ಅವರ ಎಲ್ಲಾ ಚಿತ್ರಗಳಲ್ಲಿಯೂ ಅವರು ಇರುತ್ತಾರೆಯೆ?”

ಶ್ರೀಮಾತೆ: “ಹೌದು. ಯಾವ ಚಿತ್ರದ ಮುಂದೆ ನೀನು ನಿತ್ಯವೂ ಪ್ತಾರ್ಥಿಸುತ್ತೀಯೊ ಆ ಚಿತ್ರದಲ್ಲಿ ಅಭಿವ್ಯಕ್ತವಾಗುತ್ತಾರೆ. ಅಂತಹ ಚಿತ್ರವಿರುವ ಸ್ಥಳವೇ ಮಂದಿರವಾಗುತ್ತದೆ. ನೋಡು ಓ ಆ ಬಯಲಿದೆಯಲ್ಲಾ, ಅಲ್ಲಿ ಯಾರಾದರೂ ಪೂಜಿಸಿದರೆ ಆ ಸ್ಥಳ ಅವರ ಸಾನ್ನಿಧ್ಯಭಾವದಿಂದ ತುಂಬುತ್ತದೆ.”

ಶಿಷ್ಯ: “ಹಾಗೆ ಎಲ್ಲಾ ಸ್ಥಳಗಳಿಗೂ ಒಳ್ಳೆಯ ಅಥವಾ ಕೆಟ್ಟಸ್ಮೃತಿ ಸಂಗವಿದ್ದೇ ಇರುತ್ತದೆ.

ಶ್ರೀಮಾತೆ: “ಹಾಗಲ್ಲ. ಅಂತಹ ಸ್ಥಳ ಶ್ರೀ ಗುರುವಿನ ವಿಶೇಷ ಕೃಪಾಕಟಾಕ್ಷಕ್ಕೆ ಪಾತ್ರವಾಗಿ ಅಲ್ಲಿ ಅವರ ವಿಭೂತಿ ವಿಶೇಷವಾಗಿ ಮೈದೋರುತ್ತದೆ.”

ಶಿಷ್ಯ: “ಶ್ರೀಗುರು ನೀವು ನೈವೇದ್ಯ ಮಾಡುವುದನ್ನೆಲ್ಲ ನಿಜವಾಗಿಯೂ ತಿನ್ನುತ್ತಾರೆಯೇ?

ಶ್ರೀ ಮಾತೆ: ಹೌದು. ನಿಜವಾಗಿಯೂ ಸ್ವೀಕರಿಸುತ್ತಾರೆ.”

ಶಿಷ್ಯ: “ಆದರೆ ನಮಗೆ ಅವರು ತಿನ್ನುವ ಕುರುಹು ಯಾವುದೂ ಗೋಚಾರವಾಗುವುದಿಲ್ಲವಲ್ಲಾ! ”

ಶ್ರೀ ಮಾತೆ: “ಅವರ ಕಣ್ಣಿನಿಂದ ಒಂದು ಕಾಂತಿಜಿಹ್ವೆ ಹೊಮ್ಮಿ ನೈವೇದ್ಯವನಲ್ಲ ನೆಕ್ಕುತ್ತದೆ. ಯಾಕೆ? ಅವರಿಗೇನು ಹಸಿವಾಗುತ್ತದೆಯೆ? ಭಕ್ತರಿಗಾಗಿ ನೈವೇದ್ಯ ಸ್ವೀಕಾರಮಾಡುತ್ತಾರೆ ಅಷ್ಟೆ. ಹಾಗೆ ನಿವೇದಿಸಿದ ಆಹಾರ ಪ್ರಸಾದವಾಗುತ್ತದೆ. ಪ್ರಸಾದ ಸ್ವೀಕಾರಮಾಡುವುದರಿಂದ ಹೃದಯ ಪರಿಶುದ್ಧವಾಗುತ್ತದೆ. ನಿವೇದಿಸದೆ ತಿನ್ನುವ ಆಹಾರದಿಂದ ಮನಸ್ಸು ಅಶುದ್ಧವಾಗುತ್ತದೆ.”

ಶಿಷ್ಯ: “ಶ್ರೀ ಗುರು ನಿಜವಾಗಿಯೂ ನೈವೇದ್ಯವನ್ನು ತಿನ್ನುತ್ತಾರೆಯೆ?

ಶ್ರೀಮಾತೆ: “ಹೌದು. ತಿನ್ನುತ್ತಾರೆ ಇಲ್ಲ ಎನ್ನುವುದು ನನಗೇನು ಕಾಣುವುದಿಲ್ಲವೆ? ಎಡೆ ಇರುವ ಎಲೆಯ ಮುಂದೆ ಮಣೆಯ ಮೇಲೆ ಕೂತುಕೊಂಡು ಊಟಮಾಡುತ್ತಾರೆ!”

ಶಿಷ್ಯ: “ಹಾಗೆ ನಿಮ್ಮ ಕಣ್ಣಿಗೆ ಕಾಣಿಸುತ್ತದೆಯೆ!”

ಶ್ರೀಮಾತೆ: “ಹೌದು. ಕೆಲವು ನೈವೇದ್ಯಗಳನ್ನು ಅವರು ಯಥಾರ್ಥವಾಗಿ ಭಕ್ಷಿಸುತ್ತಾರೆ. ಇನ್ನು ಕೆಲವನ್ನು ದೃಷ್ಟಿಯಿಂದ ಭೋಗಿಸುತ್ತಾರೆ. ನೀನಾದರೂ ಹಾಗೆ ಅಲ್ಲವ? ಎಲ್ಲ ಸಮಯಗಳಲ್ಲಿ ಎಲ್ಲ ಪದಾರ್ಥಗಳನ್ನೂ ಇಷ್ಟಪಡುವುದಿಲ್ಲ. ಮತ್ತೂ ಕಂಡಕಂಡವರು ಕೊಟ್ಟದ್ದನ್ನೆಲ್ಲ  ತಿನ್ನುವುದಿಲ್ಲ. ಅದರಂತೆಯೆ ಅವರೂ. ಎಂತೊ ಅಂತರ್ ಭಾವ ಅಂತೆ ಭಕ್ತಿ. ಯಾವುದಕ್ಕೂ ಭಕ್ತಿ ಮುಖ್ಯ.”

ಶ್ರೀಮಾತೆಯ ಸ್ವಸ್ವರೂಪದ ವಿಚಾರವಾಗಿ ಅವರ ಬಾಯಿಂದಲೆ ಹೊಮ್ಮಿದ ಈ ಸಂವಾದಭಾಗವನ್ನು ಗಮನಿಸಿದರೆ ಅತ್ಯಾಶ್ಚರ್ಯಕರವಾಗುತ್ತದೆ.

ಶಿಷ್ಯ: “ಅಮ್ಮ, ಜನರು ಹೇಳುತ್ತಾರೆ: ಶ್ರೀಗುರು ಪರಮೇಶ್ವರನೇ ಎಂದು. ನಿಮ್ಮ ಅಭಿಪ್ರಾಯವೇನು?”

ಶ್ರೀಮಾತೆ: “ಹೌದು. ಅವರು ‘ನನಗೆ’ ಪರಮೇಶ್ವರ.”

‘ನನಗೆ’ ಎಂದು ಒತ್ತಿ ಹೇಳಿದ್ದನ್ನು ಗಮನಿಸಿ ಶಿಷ್ಯನೆಂದನು:

“ಅದು ನಿಜ: ಪ್ರತಿಯೊಬ್ಬ ಸತಿಗೂ ಪತಿ ಪರದೈವ. ಆ ಅರ್ಥದಲ್ಲಿ ನಾನು ಪ್ರಶ್ನೆ ಕೇಳುತ್ತಿಲ್ಲ.”

ಶ್ರೀಮಾತೆ: “ಹೌದು, ಅವರು ನನಗೆ ಪತಿಯಂತೆಯೂ ಪರಮ ಪುರುಷೋತ್ತಮ ಮತ್ತು ಪರಮೇಶ್ವರ. ಹಾಗೇಯೇ ವಿಶ್ವಸಾಮಾನ್ಯಕ್ಕೂ ಪರಮ ಪುರುಷೋತ್ತಮ ಮತ್ತು ಪರಮೇಶ್ವರ.”

ಆ ಮಾತನ್ನು ಕೇಳಿ ಶಿಷ್ಯನು ಬೆಕ್ಕಸಪಟ್ಟು ಆಲೋಚಿಸುತ್ತಾನೆ: “ಶ್ರೀರಾಮಕೃಷ್ಣರು ಸಾಕ್ಷಾತ್ ಪರಮೇಶ್ವರನಾದರೆ ಇವರು (ಶ್ರೀಮಾತೆ) ಯಾರಾಗಿರಬೇಕು? ಸಾಕ್ಷಾತ್ ಆದಿಶಕ್ತಿ ಜಗನ್ಮಾತೆಯಾಗಿರಬೇಕಲ್ಲವೆ! ಸೀತಾರಾಮರಿಗೂ ರಾಧಾಕೃಷ್ಣರಿಗೂ ಇರುವ ಅಭೇದ ಸಂಬಂಧದಂತೆ ಇವರಿಗೂ ಶ್ರೀಗುರುವಿಗೂ ಅಭೇದಭಾವವಿರಬೇಕಲ್ಲವೆ! ”

ಹಾಗೆ ಆಲೋಚಿಸಿ ಶಿಷ್ಯ ಮತ್ತೆ ಕೇಳುತ್ತಾನೆ:” ಹಾಗಾದರೆ ನಾನೇಕೆ ನಿಮ್ಮನ್ನು ಸಾಮಾನ್ಯ ಸ್ತ್ರೀಯಂತೆ ಈ ರೊಟ್ಟಿ ಬೇಯಿಸುತ್ತಿರುವ ಕೆಲಸದಲ್ಲಿ ಕಾಣುತ್ತಿದ್ದೇನೆ?

ಶ್ರೀಮಾತೆ:” ಮಾಯೆಯಲ್ಲವೆ, ಮಗು! ಇಲ್ಲದಿದ್ದರೆ ನೀನೆನ್ನುವಂತೆ ನಾನೇಕೆ ಈ ಸ್ಥರತಿಗಿಳಿಯಬೇಕು. ಆದರೆ ದೇವರಿಗೆ ನರಲೀಲೆಯಲ್ಲಿ ಇಷ್ಟ. ಶ್ರೀಕೃಷ್ಣ ದನಕಾಯುವವನಿಗೆ ಕಂದನಾಗಿ ಬರಲಿಲ್ಲವೆ? ಶ್ರೀರಾಮ ದಶರಥನಿಗೆ ಮಗನಾಗಿ ಬರಲಿಲ್ಲವೆ?”

ಶಿಷ್ಯ: “ನಿಮಗೆ ಯಾವಾಗಲಾದರೂ ನಿಮ್ಮ ನಿಜಸ್ವರೂಜ್ಞಾನ ಉಂಟಾಗುತ್ತದೆಯೆ?”

ಶ್ರೀಮಾತೆ: “ಹೌದು, ಆಗಾಗ್ಗೆ ಉಂಟಾಗುತ್ತದೆ. ಅಂತಹ ಸಮಯಗಳಲ್ಲಿ ನಾನು ‘ಇದೇನು ನಾನಿಲ್ಲಿ ಮಾಡುತ್ತಿರುವುದು?’ ಎಂದುಕೊಳ್ಳುತ್ತೇನೆ. ಒಡನೆಯೆ ಈ ಮನೆ ಈ ಮಕ್ಕಳು ಎಲ್ಲವನ್ನೂ ನೆನಪಿಗೆ ತಂದುಕೊಂಡು ನನ್ನ ನಿಜಸ್ವರೂಪದ ಮೇಲೆ ತೆರೆಬೀಸಿ ಮುಚ್ಚಿ ಅದನ್ನು ಮರೆಯುತ್ತೇನೆ.”

ಶಿಷ್ಯ: “ಹಾಗಾದರೆ ನೀವು ಸರ್ವಲೋಕಮಾತೆಯೆ?”

ಶ್ರೀಮಾತೆ: “ಹೌದು.”

ಶಿಷ್ಯ: “ಕ್ರಿಮಿಕೀಟ ಪಶುಪಕ್ಷಿ ಪ್ರಾಣಿ ಮನುಷ್ಯ ಎಲ್ಲರಿಗೂ?”

ಶ್ರೀಮಾತೆ: “ಹೌದು, ಎಲ್ಲರಿಗೂ ತಾಯಿ.”

ಶಿಷ್ಯ: “ಹಾಗಾದರೆ ಅವುಗಳಿಗೆಲ್ಲ ಇಷ್ಟೋಂದು ಕ್ಲೇಶಕಷ್ಟಗಳೇಕೆ?”

ಶ್ರೀಮಾತೆ: “ಈ ಜನ್ಮದಲ್ಲಿ  ಅವಕ್ಕೆ ಈ ಅನುಭವಗಳಾಗಲೇಬೇಕು.”

ಮೇಲಿನ ಸಂವಾದಗಳು ಶ್ರೀಮಾತೆಯ ಅಲೌಕಿಕ ಪಕ್ಷಕ್ಕೆ ಕೊರೆದ ಅತೀಂದ್ರಿಯ ಗವಾಕ್ಷಗಳಂತಿವೆ. ಅವುಗಳನ್ನು ಆಲಿಸಿದರೆ ಎಂತಹ ಶ್ರದ್ಧಾಳುವಿಗೂ ವಿಚಾರಬುದ್ಧಿ ತತ್ತರಿಸದಿರುವುದಿಲ್ಲ. ಶ್ರೀಮಾತೆ ಸಾಮಾನ್ಯೆಯಂತೆ ತೋರಿದರೂ ಅತ್ಯಂತ ಅಸಾಧಾರಣೆಯಾಗಿರುವುದರಿಂದಲೆ ಬರಿಯ ವಿಚಾರ ಮಾತ್ರ ಸುಲಭರಲ್ಲ:

“ಅಲೋಕಸಾಮಾನ್ಯಮಚಿಂತ್ಯಹೇತುಕಂ
ದ್ವಿಷಂತಿ ಮಂದಾಶ್ಚರಿತಂ ಮಹಾತ್ಮನಾಂ.”

ಯಾರನ್ನು ಶ್ರೀರಾಮಕೃಷ್ಣ ಪರಮಹಂಸರು ಜಗಜ್ಜನನಿಗಾಗಿ ಸಮೆದ ದೇವಿ ಪೀಠದ ಮೇಲೆ ಕುಳ್ಳಿರಿಸಿ, ಪೂಜಿಸಿ, ತಮ್ಮ ತಪಃಫಲವೆಲ್ಲವನ್ನೂ ಸಮರ್ಪಿಸಿ, ಸರ್ವಮಂಗಲ ಮಾಂಗಲ್ಯೆ ಎಂದು ಸ್ತೋತ್ರಗೈದು ಸಾಷ್ಟಾಂಗವೆರಗಿದರೊ: “ಯಾರು ಕಾಳಿಕಾದೇವಾಲಯದಲ್ಲಿ ಭವತಾರಿಣಿ ಎಂದು ಪೂಜಿತೆಯಾಗಿದ್ದಾಳೆಯೊ, ನನ್ನನ್ನು ಹೆತ್ತ ಯಾವ ತಾಯಿ ನೌಬತ್ತುಖಾನೆಯಲ್ಲಿ ವಾಸಿಸು ಎಂದು ವೇದವಾಕ್ಯೋಪಮವಾಗಿ ಘೋಸಿದರೊ ಆ ಮಹಾಮಾತೆಯ ನಿಜ ಸ್ವರೂಪವನ್ನು ಯಾರು ತಾನೆ ಅರಿಯಬಲ್ಲರು. ಆಕೆಯೆ ಆ ಪ್ರತ್ಯಕ್ಷಾನುಭೂತಿಯನ್ನು ದಯಪಾಲಿಸದಿದ್ದರೆ?