ಆ ಗುರು ಶಿಷ್ಯರ ವಿಚಿತ್ರ ಸಂಬಂಧ ವಿಸಮಯಮಯವಾಗಿದೆ. ಶ್ರೀರಾಮಕೃಷ್ಣರು ಅಡಿಗಡಿಗೆ ಭಾವವಶರಾಗುವರು; ಅಡಿಗಡಿಗೆ ಸಮಾಧಿಮಗ್ನರಾಗುವರು; ಅಡಿಗಡಿಗೆ ಭಕ್ತಿಯ ಉತ್ಕರ್ಷದಿಂದ ಕಂಬನಿಗರೆವರು. ನರೇಂದ್ರನಿಗಾದರೋ ಭಕ್ತಿಭಾವಾಶ್ರುಗಳೆಂದರೆ ಆಗದು. ಅವುಗಳೆಲ್ಲ ಆತನ ಭಾಗಕ್ಕೆ ದುರ್ಬಲತೆಯ ಚಿಹ್ನೆಗಳಾಗಿದ್ದವು. ಬುದ್ದಿಯನ್ನು ಶ್ರದ್ಧೆಗೆ ಶರಣಾಗಗೊಡುತ್ತಿರಲಿಲ್ಲ; ಶ್ರುತಿಯಿಂದ ಮತಿಯನ್ನು ಆಳಗೊಡುತ್ತಿರಲಿಲ್ಲ. ಗುರುದೇವನಾದರೋ ಶಿಷ್ಯನ ಚಿತ್ತವೃತ್ತಿಯನ್ನು ಕಂಡು ಒಂದಿನಿತೂ ಅಪ್ರತಿಭನಾಗದೆ, ಅದಕ್ಕಾಗಿಯೆ ಆತನನ್ನು ಪ್ರಶಂಸಿಸಿ ಹೆಚ್ಚಾಗಿ ಆದರಿಸುತ್ತಿದ್ದನು.

ನರೇಂದ್ರನು ತಮ್ಮೆಡೆಗೆ ಬರುವ ಮೊದಲು ಶ್ರೀರಾಮಕೃಷ್ಣರು ಜಗನ್ಮಾತೆಯನ್ನು ಕುರಿತು “ತಾಯಿ, ನನ್ನ ಅನುಭವಗಳನ್ನು ಪರೀಕ್ಷೀಸುವ ಶಿಷ್ಯನೊಬ್ಬನನ್ನು ದಯಪಾಲಿಸು.” ಎಂದು ಪ್ರಾರ್ಥಿಸುತ್ತಿದ್ದರು.

ಪ್ರಾರ್ಥನೆಗೆ ಉತ್ತರವಾಗಿ ಜಗನ್ಮಾತೆ ನರೇಂದ್ರನನ್ನು ಕಳುಹಿಸಿದಳು. ಆತನು ದೇವದೇವತೆಗಳನ್ನು ತಿರಸ್ಕರಿಸುತ್ತಿದ್ದನಲ್ಲದೆ, ಬ್ರಾಹ್ಮಸಮಾಜದ ಸಿದ್ಧಾಂತದಂತೆ ಅದ್ವೈತವನ್ನು ಶೂನ್ಯವಾದವೆಂದು ಪರಿಹಾಸ ಮಾಡುತ್ತಿದ್ದನು. ಹಿಂದೂ ಶಾಸ್ತ್ರಗಳನ್ನಂತೂ ಬಾಯಿಗೆ ಬಂದಂತೆ ಬಹಿರಂಗವಾಗಿ ಅಲ್ಲಗಳೆಯುತ್ತಿದ್ದನು. ಪರಮಹಂಸರನ್ನು ಕುರಿತು “ಲೋಕದ ಜನರೆಲ್ಲ ನಿಮ್ಮನ್ನು ಈಶ್ವರ ಅವತಾರವೆಂದು ಪೂಜೆ ಮಾಡಿದರೂ ಮಾಡಲಿ; ನಾನು ಬೇರೆ ವಿಚಾರಮಾಡಿ ನಿರ್ಣಯಿಸಿದಲ್ಲದೆ ಅದನ್ನು ಒಪ್ಪುವುದಿಲ್ಲ” ಎಂದು ಹೇಳುತ್ತಿದ್ದನು.

ಗುರು ಮುಗುಳುನಗೆ ಬೀರಿ ಶಿಷ್ಯರನ್ನು ಕುರಿತು “ನಾನು ಹೇಳಿದೆ ಎಂದು ನೀವು ಏನನ್ನೂ ನಂಬಬೇಡಿ. ಚೆನ್ನಾಗಿ ಪರೀಕ್ಷಿಸಿ; ತರುವಾಯ ನಂಬಿ” ಎಂದು ಬುದ್ಧಿಹೇಳುವನು.

ಒಂದೊಂದು ಸಲ ನರೇಂದ್ರನ ಬುದ್ದಿಶಕ್ತಿಯನ್ನು ನೋಡಿ ಹಿಗ್ಗಿ. ಗುರು ಅಲ್ಲಿನೆರೆದವರಿಗೆ “ನೋಡಿ, ನೋಡಿ, ಎಂತಹ ಜ್ಞಾನಜ್ಯೋತಿ ಆತನಲ್ಲಿದೆ! ಅವನೊಂದು ಮಹಾಪ್ರಲಯಾಗ್ನಿರಾಶಿ. ಮಹಾಮಾಯೆ ಕೂಡ ಅವನ ಬಳಿ ಸುಳಿಯಲು ಅಂಜುತ್ತಾಳೆ. ತಾನು ಹೊತ್ತಿಸಿದ ಬೆಂಕಿಗೆ ತಾನೇ ಅಂಜುತ್ತಾಳೆ!”

ಎಂದು ಹೇಳಿದನು.

ಒಂದೊಂದು ಸಾರಿ ನರೇಂದ್ರನ ಕ್ರೂರ ವಿಮರ್ಶೆ ಪರಮಹಂಸರಿಗೆ ಶೂಲದಿರಿತವಾಗುತ್ತಿತ್ತು. ಅವನು ನಿರ್ದಾಕ್ಷಿಣ್ಯವಾಗಿ “ಅಲೌಕಿಕ ಅನುಭವಗಳೆಲ್ಲ ಚಿತ್ತವಿಭ್ರಾಂತಿಯಿಂದ ಮೂಡಿಲ್ಲವೆಂಬುದು ನಿಮಗೆ ಹೇಗೆ ಗೊತ್ತು?” ಎಂದು ಕೇಳಿಬಿಡುತ್ತಿದ್ದನು. ಆಗ ಅವರು ಜಗನ್ಮಾತೆಯ ಬಳಿಗೆ ಹೋಗುವರು. ಆಕೆ “ತಾಳ್ಮೆ! ನರೇಂದ್ರನ ಕಣ್ಣು ತೆರೆಯಲು ಇನ್ನು ಹೆಚ್ಚು ಕಾಲ ಹಿಡಿಯುವುದಿಲ್ಲ” ಎಂದು ಸಮಾಧಾನ ಹೇಳುವಳು.

ಕೆಲವು ಸಾರಿ ಶಿಷ್ಯನ ವಾದಶೀಲತೆಯನ್ನು ಕಂಡು ಗುರುವರ್ಯನು “ಹೇ ಜಗನ್ಮಾತೆ, ನರೇಂದ್ರನ ಮೇಲೆ ಸ್ವಲ್ಪ ನಿನ್ನ ಮಾಯೆಯನ್ನು ಬೀಸು. ಅವನ ಉಗ್ರಬುದ್ದಿಯ ಬೆಂಕಿ ಕಡಮೆಯಾಗಿ ಹೃದಯಕ್ಕೆ ಈಶ್ವರಾನುಭವವಾಗಲಿ” ಎಂದು ಬೇಡಿದರು.

ಆದರೆ ನರೇಂದ್ರನು “ನನಗೆ ನಿಮ್ಮ ಈಶ್ವರನು ಬೇಡ. ನನಗೆ ಬೇಕಾದುದು ಶಾಂತಿ – ಕೇವಲ ಸಚ್ಚಿದಾನಂದ” ಎಂದು ಕೂಗುವನು.

ಈಶ್ವರನನ್ನು ತರ್ಕಬುದ್ದಿಯಿಂದಲೆ ಸಾಧಿಸಲು ಅಸಾಧ್ಯ ಎಂಬುದು ಅವನಿಗೆ ಗೊತ್ತಾಗಿರಲಿಲ್ಲ. ಈಶ್ವರನಿರುವುದು ಸತ್ಯವಾದರೆ ಅವನನ್ನು ಕಾಣಲೆ ಬೇಕು ಎಂಬುದು ಅವನ ವಾದವಾಗಿತ್ತು. ಪರಮಹಂಸರು ತನಗಿಂತಲೂ ಮಹತ್ತರವಾದ ಧೀಶಕ್ತಿಯುಳ್ಳ ಜ್ಞಾನಿ ಎಂಬುದೂ ಅವರ ಭಕ್ತಿ ಪ್ರದರ್ಶನದ ಹಿಂದೆ ಮಹಾತತ್ತ್ವ ವೇತನ ಮೇಧಾಶಕ್ತಿ ನಿರಂತರವೂ ಪ್ರೋಜ್ವಲವಾಗಿರುತ್ತದೆ ಎಂಬುದೂ ಆತನಿಗೆ ಕ್ರಮೇಣ ತಿಳಿದುಬಂದಿತು. ತರುವಾಯ ಆತನು ಶ್ರೀರಾಮಕೃಷ್ಣರನ್ನು ಕುರಿತು ಹೀಗೆ ಹೇಳಿದ್ದಾನೆ.

“ಬಾಹ್ಯದಲ್ಲಿ ಅವರು ಸಂಪೂರ್ಣ ಭಕ್ತರಂತೆ ಕಾಣುತ್ತಿದ್ದರೂ ಅಂತರಂಗದಲ್ಲಿ ಕೇವಲ ಜ್ಞಾನಿಗಳಾಗಿದ್ದರು. ನಾನು ಹೊರಗಡೆ ಜ್ಞಾನಿಯಂತೆ ತೋರಿದರೂ ಒಳಗಿರುವುದೆಲ್ಲ ಸಂಪೂರ್ಣ ಭಕ್ತಿ.”

ನರೇಂದ್ರನು ಅದ್ವೈತಜ್ಞಾನಕ್ಕೆ ಅರ್ಹನಾದ ಅಧಿಕಾರಿಯೆಂದು ತಿಳಿದು ಅವನಿಗೆ ಅದನ್ನು ಹೇಳಲು ಪರಮಹಂಸರು ಹವಣಿಸಿದರೆ ಆತನು ಅದನ್ನು ಶೂನ್ಯವಾದವೆಂದೂ ಬರಿಯ ಶಿಶುಪ್ರಲಾಪವೆಂದೂ ಹಾಸ್ಯಮಾಡಿ ತಿರಸ್ಕರಿಸುತ್ತಿದ್ದನು. ಒಂದುಸಾರಿ ಸ್ನೇಹಿತನೊಬ್ಬನೊಡನೆ ಅದ್ವೈತ ವೇದಾಂತವನ್ನು ಹಳಿಯುತ್ತ “ಈ ಹೂಜಿಯೂ ಬ್ರಹ್ಮ, ಈ ನೊಣಗಳೂ ಬ್ರಹ್ಮ, ಈ ಸಿಗರೇಟೂ ಬ್ರಹ್ಮ, ಹೊಗೆಯೂ ಬ್ರಹ್ಮ, ನಾನೂ ಬ್ರಹ್ಮ, ನೀನೂ ಬ್ರಹ್ಮ! ಎಂದು ಹೇಳಿ  ಗಹಗಹಿಸಿ ನಗುತ್ತಿದ್ದಾಗ ಗುರುದೇವನು ಅಲ್ಲಿಗೆ ಬಂದು ಆತನನ್ನು ಮುಟ್ಟಿದನು. ಆ ಕ್ಷಣವೆ ಬ್ರಹ್ಮವಲ್ಲದ ವಸ್ತುವೊಂದೂ ಇಲ್ಲವೆಂಬ ಅನುಭವ ಆತನಿಗೆ ಉಂಟಾಗಿ ಮೂರುದಿನಗಳ ತನಕ ತದ್ ಭಾವೋನ್ಮಾದಗ್ರಸ್ತನಾಗಿದ್ದನು. ಅಂದು ಮೊದಲಾಗಿ ಅವನು ಅದ್ವೈತವನ್ನು ಮೊದಲಿನಂತೆ ಹಳಿಯುತ್ತಿರಲಿಲ್ಲ.

ಕ್ರಿ.ಶ. ೧೮೮೪ ರಲ್ಲಿ ನರೇಂದ್ರನ ತಂದೆ ಸಾಯಲು ಸಂಸಾರವು ಹಠಾತ್ತಾಗಿ ದಾರಿರ್ದ್ರದ ಪೀಡೆಗೆ ಸಿಕ್ಕಿತು. ನರೇಂದ್ರನು ಬಂದೊದಗಿದ ಕಠೋರ ದುಃಖಗಳಿಂದ ಎದೆನೊಂದು ದೇವರ ಮೇಲೆ ದಂಗೆಯೆದ್ದನು.”ಈಶ್ವರನು ಕರುಣಾಶಾಲಿಯಾಗಿದ್ದರೆ ಜಗತ್ತಿನಲ್ಲಿ ಇಷ್ಟೊಂದು ದುಃಖವೇಕೆ? ಹೊಟ್ಟೆಗಿಲ್ಲದೆ ಲಕ್ಷಾಂತರ ಜನರು ಸಾಯುವುದೇಕೆ? ರೋಗರುಜಿನಗಳೇಕೆ?” ಎಂದು ಮೊದಲಾಗಿ ವಾದಿಸುತ್ತ, ತಾನು ನಾಸ್ತಿದನೆಂದು ಬಹಿರಂಗವಾಗಿ ಸಾರಿದನು. ಮಿತ್ರರೂ ಬಂಧುಗಳೂ ಆತನನ್ನು ತ್ಯಜಿಸಿದರು. ಆದರೆ ಗುರುದೇವನು ಕೈಬಿಡಲಿಲ್ಲ. ಚುಚ್ಚಿದ ಬಾಣಸಮೇತನಾಗಿ ತಮ್ಮೆಡೆಗೆ ಬಂದ ಶಿಷ್ಯನಿಗೆ ಐಶ್ವರ್ಯಪ್ರಾಪ್ತಿಗಾಗಿ ಜಗನ್ಮಾತೆಯನ್ನು ಬೇಡುವಂತೆ ಬೆಸಸಿದರು. ನರೇಂದ್ರನು ಕಾಳಿಯಗುಡಿಗೆ ಹೋಗಿ ಮೂರುಸಲವೂ ಭಕ್ತಿ ಜ್ಞಾನ ವೈರಾಗ್ಯಗಳನ್ನು ಭಿಕ್ಷೆ ಬೇಡಿದನೆ ಹೊರತು ಧನವನ್ನು ದಯಪಾಲಿಸೆಂದು ಕೇಳಲು ಸಮರ್ಥನಾಗಲಿಲ್ಲ, ಕಡೆಗೆ ದೇವಿಯ ಕೃಪೆಯಿಂದ ಎಲ್ಲವೂ ಸರಿ ಹೋಗುವುದೆಂದು ಗುರುದೇವನೆ ಭರವಸೆಯಿತ್ತು ಕಳುಹಿಸಿದನು. ದುಃಖದ ಆಘಾತದಿಂದ ನರೇಂದ್ರನ ಜ್ಞಾನವರ್ಗ ನಸುಕುಗ್ಗಿತು. ಹೃದಯದಲ್ಲಿ ಭಕ್ತಿಸಂಚಾರವಾಯಿತು. ಮೆಲ್ಲಮೆಲ್ಲನೆ ಶ್ರೀರಾಮಕೃಷ್ಣ ಪರಮಹಂಸರನ್ನು ಗುರುದೇವನೆಂದು ಭಾವಿಸತೊಡಗಿದರು. ಆ ಕಥೆಯ ವಿವರವನ್ನು ವಾಚಕರು ಬೇರೊಂದೆಡೆ ಕಾಣುವರು.

[1] ಸದ್ಯಕ್ಕೆ ಇತರ ಶಿಷ್ಯರ  ಆಗಮನವನ್ನು ಕುರಿತು ಪ್ರಸ್ತಾಪಿಸುತ್ತೇವೆ.

ಕ್ರಿ. ಶ. ೧೮೮೨ರಲ್ಲಿ ಶ್ರೀರಾಮಕೃಷ್ಣರೆಡೆಗೆ ಇನ್ನಿಬ್ಬರು ಶಿಷ್ಯರು ಬಂದರು – ತಾರಕನಾಥ ಘೋಷಾಲ ಮತ್ತು ಯೋಗೇಂದ್ರನಾಥ ಚೌಧರಿ.

ಶ್ರೀಮಂತ ವಕೀಲನ ಪುತ್ರನಾದ ತಾರಕ ಕಲ್ಕತ್ತೆಯಲ್ಲಿ ವಿರ್ದ್ಯಾಜನೆ ಮಾಡಿದನು. ಬಾಲ್ಯದಿಂದಲೂ ಅಧ್ಯಾತ್ಮಜೀವನ ಪ್ರೇಮಿಯಾಗಿದ್ದ ಆತನಿಗೆ ಈಶ್ವರ ಸಾಕ್ಷಾತ್ಕಾರ ಮಾಡಬೇಕೆಂದು ಮನಸ್ಸಿನಲ್ಲಿ ವ್ಯಾಕುಲತೆ ಜನಿಸಿತು. ಆಗಿನ ಶಿಕ್ಷಿತ ತರುಣರ ಪದ್ದತಿಯಂತೆ ಆತನೂ ಕೇಶವಚಂದ್ರಸೇನನ ಬ್ರಹ್ಮಸಮಾಜಕ್ಕೆ ಸದಸ್ಯನಾದನು. ಆದರೆ ಬ್ರಾಹ್ಮಸಮಾಜದ ತತ್ತ್ವಗಳು ಅವನಿಗೆ ಸಮರ್ಪಕವಾಗಿ ತೋರಲಿಲ್ಲ. ಶಾಂತಿಗಾಗಿ ಎದೆ ಹಾತೊರೆಯುತ್ತಿತ್ತು. ಇಂತಿರಲು ಒಂದುದಿನ  ರಾಮಚಂದ್ರದತ್ತನ ಮನೆಯಲ್ಲಿ ಶ್ರೀರಾಮಕೃಷ್ಣರನ್ನು ಕಂಡನು. ಅವರ ಸಮಾಧಿಯನ್ನು ನೋಡಿ ವಚನಾಮೃತವನ್ನು ಸವಿದು ಆಕರ್ಷಿತನಾದನು. ಮರುದಿನ ಸಾಯಂಕಾಲ ದಕ್ಷಿಣೇಶ್ವರಕ್ಕೆ ಹೋಗಿ ಗುರುದೇವನನ್ನು ಕಂಡನು. ಪರಮಹಂಸರು ಆತನನ್ನು ಕುರಿತು “ನಿನಗೆ ಸಾಕಾರ ಈಶ್ವರನು ಇಷ್ಟವೋ? ನಿರಾಕಾರ ಈಶ್ವರನು ಇಷ್ಟವೋ? ಎಂದು ಕೇಳಿದರು. “ನಿರಾಕಾರ ಈಶ್ವರನು!” ಎಂದನು ತಾರಕ. “ಆದರೂ ಈಶ್ವರನ ಮಾಯಾಶಕ್ತಿಯನ್ನು ಒಪ್ಪಲೇಬೇಕಷ್ಟೆ?” ಎಂದು ಹೇಳಿ, ಆತನನ್ನು ಕಾಳಿಯ ಗುಡಿಗೆ ಕರೆದೊಯ್ದು, ಮೊದಲು ತಾವೇ ದೇವಿಯ ಮುಂದೆ ಸಾಷ್ಟಾಂಗ ಪ್ರಣಾಮ ಮಾಡಿದರು. ತಾರಕನಿಗೆ ರಗಳೆಗಿಟ್ಟುಕೊಂಡಿತು. ಬ್ರಾಹ್ಮಸಮಾಜಕ್ಕೆ ಸೇರಿದ್ದ ಆತನು ಮೂರ್ತಿಯ ಮುಂದೆ ತಲೆಬಾಗುವುದಿಲ್ಲವೆಂದು ಮಾತುಕೊಟ್ಟಿದ್ದನು. ಪಣತೊಟ್ಟಿದ್ದನು. ಕಲ್ಲಿನ ಮುಂದೆ ತಲೆಬಾಗುವುದು ಹೇಗೆ? ಉತ್ತರಕ್ಷಣದಲ್ಲಿಯೆ ಹೀಗೆ ಆಲೋಚಿಸಿದನು: ಸಂಕುಚಿಯ ಭಾವವೇಕಿರಬೇಕು? ಈಶ್ವರನು ಸರ್ವವ್ಯಾಪಿಯಂತೆ! ಹಾಗಾದರೆ ಕಲ್ಲಿನಲ್ಲೇಕೆ ಇರಬಾರದು?” ತಾರಕನೂ ವಿಗ್ರಹದ ಮುಂದೆ ಅಡ್ಡಬಿದ್ದನು. ಹೃದಯದಲ್ಲಿ ಆನಂದ ಸಂಚಾರವೂ ಆಯಿತು. ಅಂದಿನಿಂದ ಆತನು ಪರಮಹಂಸರಲ್ಲಿಗೆ ಬಂದು ಹೋಗಲಿ ತೊಡಗಿದನು. ಪಂಚವಟಿಯಲ್ಲಿ ಗುರುದೇವನ ನೇತೃತ್ವದಲ್ಲಿ ಧ್ಯಾನ ಮೊದಲಾದ ಸಾಧನೆಗಳಲ್ಲಿ ನಿರತನಾಗಿ ಜಯಶೀಲನಾದನು. ಕಡೆಗೆ ಆತನು ಸ್ವಾಮಿ ವಿವೇಕಾನಂದರಿಂದಲೆ “ಮಹಾಪುರುಷ” ಎನ್ನಿಸಿಕೊಂಡ ಅವರು ೧೯೨೨ರಲ್ಲಿ ಸ್ವಾಮಿ ಬ್ರಹ್ಮಾನಂದರ ಮಹಾಸಮಾಧಿಯ ತರುವಾಯ ಶ್ರೀರಾಮಕೃಷ್ಣ ಮಹಾಸಂಸ್ಥೆಯ ದ್ವಿತೀಯ ಅಧ್ಯಕ್ಷರಾಗಿ ಅದರ ಪ್ರಪಂಚವಿಶಾಲವಾದ ನೇತೃತ್ವವನ್ನು ವಹಿಸಿ ಆಧ್ಯಾತ್ಮಿಕ ತೇಜಸ್ಸನ್ನು ಬೆಳಗುತ್ತಿದ್ದಾರೆ.[2]

ತರುಣ ಯೋಗೇಂದ್ರನಾಥನು ಒಂದುದಿನ ವಿಹಾರರ್ಥವಾಗಿ ದಕ್ಷಿಣೇಶ್ವರಕ್ಕೆ ಬಂದಾಗ  ಶ್ರೀರಾಮಕೃಷ್ಣರನ್ನು ಸಂಧಿಸಿದನು. ಸಂಪ್ರದಾಯದ ಬ್ರಾಹ್ಮಣ ಕುಲದಲ್ಲಿ  ಜನಿಸಿದವನಾದರೂ ನವೀನ ವಿದ್ಯಾರ್ಜನೆ ಮಾಡಿದ ಆತನ ವಿಶಾಲಬುದ್ದಿಗೆ ಪರಮಹಂಸರು ಅಸಾಧಾರಣ ವ್ಯಕ್ತಿ ಎಂಬುದು ಗೊತ್ತಾಗಿ ಅವರ ಭಕ್ತನಾದನು. ಬ್ರಹ್ಮಚರ್ಯವ್ರತದಿಂದ ಸತ್ಯಸಾಧನೆ ಮಾಡಬೇಕೆಂದಿದ್ದ ಆತನ ನಿಶ್ಚಿತವನ್ನು ಕೇಳಿ ಶ್ರೀರಾಮಕೃಷ್ಣರು ಅತ್ಯಂತ ಹರ್ಷಚಿತ್ತರಾದರು. ಆದರೆ ಯೋಗೇಂದ್ರನ ತಂದೆ ಮಗನಿಗೆ ತಿಳಿಯದಂತೆ ಮದುವೆಗೆ ಏರ್ಪಾಡುಮಾಡಿದನು. ವಿವಾಹದ ದಿನ ಬರಲು ಗುಟ್ಟು ಬಯಲಾಯ್ತು. ಯೋಗೇಂದ್ರ ಕಂಗೆಟ್ಟನು. ಪಿತನನ್ನು ಪ್ರತಿಭಟಿಸಿ ಮದುವೆಯಾಗುವುದಿಲ್ಲವೆಂದು ಹೇಳಿಬಿಟ್ಟನು. ಆದರೆ ಪಿತನು ಹೆಣ್ಣಿನವರಿಗೆ ಮಾತುಕೊಟ್ಟದ್ದರಿಂದ ತನಗೆ ಅವಮಾನವಾಗುವುದೆಂದು ಬಲಾತ್ಕಾರ ಮಾಡಿದನು. ಆದರೆ ಮಗನು ಜಗ್ಗಲಿಲ್ಲ. ಕಡೆಗೆ ತಾಯಿ ಗೋಳಾಡುತ್ತ ಬಂದು” ನಿನಗೆ ಬೇಡದಿದ್ದರೆ ಚಿಂತೆಯಿಲ್ಲ ನನಗಾಗಿ ಮದುವೆಯಾಗು!” ಎಂದು ಮಗನ ಕೈಕಾಲು ಕಟ್ಟಿಕೊಂಡಳು. ತಾಯ ಗೋಳು ಮಗನ ದೃಢ ನಿಶ್ಚಯವನ್ನು ಅಲ್ಲಾಡಿಸಿಬಿಟ್ಟಿತು. ವಿಧಿ ಮಾಡಿದಂತಾಗಲಿ ಎಂದು ಯೋಗೇಂದ್ರ ಮದುವೆಗೆ ಸಮ್ಮತಿಸಿದನು.

ವಿವಾಹವಾದ ಮೇಲೆ ಅವನು ಅತ್ಯಂತ ವ್ಯಾಕುಲಚಿತ್ತನಾದನು. ಪರಮಹಂಸರ ಬಳಿಗೆ ಹೋಗಲು ನಾಚಿದನು. ಗುರುದೇವನು ಯೋಗೇಂದ್ರನ ಮದುವೆಯ ವಿಚಾರವನ್ನು ಕೇಳಿ, ಅವನಿಗೆ ಬರುವಂತೆ ಹೇಳಿಕಳುಹಿಸಿದನು. ಆದರೂ ಯೋಗೋಂದ್ರನು ಹಿಂಜರಿದನು. ಅವರ ಜುಗುಪ್ಸೆಗೆ ಭಾಜನನಾಗುವೆನೆಂದು ವಿಷಾದಿಸಿದನು. ಕಟ್ಟಕಡೆಗೆ ದಕ್ಷಿಣೇಶ್ವರಕ್ಕೆ ಅಪರಾಧಿಯಂತೆ ಹೋದನು. ಪರಮಹಂಸರಿತ್ತ ಸ್ವಾಗತ ಎಂದಿಗಿಂತಲೂ ಉತ್ತೇಜನಕರವಾಗಿತ್ತು! ತಮ್ಮ ಪೀಠದಿಂದ ಎದ್ದು ಓಡಿಬಂದು ಶಿಷ್ಯನ ಕೈಹಿಡಿದು ಸಾಂತ್ವನ ವಾಣಿಯಿಂದ “ಮದುವೆಯಾದರೇನಂತೆ? ನಾನು ಮದುವೆಯಾಗಿಲ್ಲವೆ? ಅದಕ್ಕೇಕೆ ಭಯಪಡಬೇಕು? ನಾನು ಮದುವೆಯಾಗಿಲ್ಲವೆ? ಅದಕ್ಕೇಕೆ ಭಯಪಡಬೇಕು? ಹೃದಯಶುದ್ದಿಯಿದ್ದರೆ ನೂರು ಮದುವೆಗಳಿಂದಲೂ ಏನೂ ಆಗದು! ನಿನಗೆ ಸಂಸಾರದಲ್ಲಿರುವ ಇಚ್ಛೆಯಿದ್ದರೆ ನಿನ್ನ ಪತ್ನಿಯನ್ನು ಇಲ್ಲಿಗೆ ಕರೆದು ತಾ. ಧರ್ಮಜೀವನದಲ್ಲಿ ನಿನಗೆ ಸರ್ವದಾ ಸಹಕಾರಿಯಾಗುವಂತೆ ಆಕೆಯ ಮನಸ್ಸನ್ನು ತಿರುಗಿಸುತ್ತೇನೆ. ಸಂಸಾರಿಯಾಗಿರಲು ಇಷ್ಟವಿಲ್ಲದಿದ್ದರೆ ಹೇಳಿಬಿಡು! ನಿನ್ನ ಸಂಗ ಸಮುದಾಯವನ್ನೆಲ್ಲ ನುಂಗಿಬಿಡುತ್ತೇನೆ !” ಕಡೆಯ ಮಾತುಗಳನ್ನು ಹೇಳುತ್ತಿದ್ದಾ ಪರಮಹಂಸರ ಭಾವ ಭೀಷಣವಾಗಿತ್ತು. ಅವರ ಮುಖಮಂಡಲ ಪ್ರಬಲಯಾಗ್ನಿಯನ್ನೆ ಕಾರುತ್ತಿದ್ದಂತೆ ತೋರುತ್ತಿತ್ತು. ಯೋಗೇಂದ್ರನು ಮೊದಲು ಬೆಚ್ಚಿಬಿದ್ದನು. ಕಡೆಗೆ ಆಶಾರಶ್ಮಿಯನ್ನು ಕಂಡವನಂತೆ ಸುಯ್ದನು. ಸಂಸಾರಿಯಾಗಿದ್ದ ಮಹೇಂದ್ರನಾಥ ಗುಪ್ತನಿಗೆ “ಸಂಸಾರದಲ್ಲಿಯೇ ಇರು” ಎಂದು ಪರಮಹಂಸರು ಆಜ್ಞೆ ಮಾಡಿದ್ದನ್ನು ವಾಚಕರು ಈ ಸಂದರ್ಭದಲ್ಲಿ ಹೋಲಿಸಿನೋಡಲಿ!

ಯೋಗೇಂದ್ರನ ಔದಾಸೀನ್ಯವನ್ನು ಕಂಡು ಆತನ ತಾಯಿ ತಂದೆಗಳು ಗೊಣಗತೊಡಗಿದರು. ಒಂದು ದಿನ ಅವನ ತಾಯಿ “ನೀನು ಹಣ ಸಂಪಾದನೆ ಮಾಡದಿದ್ದರೆ ಮದುವೆಯನ್ನೇಕೆ ಮಾಡಿಕೊಂಡೆ?” ಎಂದು ನಿಷ್ಠುರವಾಗಿ ನುಡಿದಳು.

ಯೋಗೇಂದ್ರ “ನಾನು ನಿನಗೆ ಮೊದಲೇ ಹೇಳಲಿಲ್ಲವೆ; ನನಗೆ ವಿವಾಹವಾಗಲು ಇಷ್ಟವಿಲ್ಲ ಎಂದು. ನಿನ್ನ ಕಣ್ಣೀರಿಗೆ ನಾನು ಕರಗಬೇಕಾಯಿತು.” ಎಂದನು. ತಾಯಿ ರೇಗಿಬಿಟ್ಟು “ಏನೆಂದೆ? ನಿಜವಾಗಿಯೂ ಇಷ್ಟವಿಲ್ಲದಿದ್ದರೆ ನೀನು ಮದುವೆಮಾಡಿಕೊಳ್ಳುತ್ತಿದ್ದೆಯೇನು? ಎಲ್ಲ ಬೂಟಾಟಿಕೆ! ” ಎಂದಳು.

ಯೋಗೇಂದ್ರನು ತನ್ನಲ್ಲಿಯೆ “ಅಯ್ಯೋ ದೇವರೇ, ತಾಯಿಯ ದುಃಖ ಶಮನಕ್ಕಾಗಿ ನಾನು ಒಪ್ಪಿದೆ. ಈಗ ಆಕೆಯೆ ಹೇಗೆ ವರ್ತಿಸುತ್ತಿದ್ದಾಳೆ! ಲೋಕವೇ ಹೀಗೆ! ತಂದೆಯಾದರೇನು? ತಾಯಿಯಾದರೇನು? ಆಡಿದಂತೆ ಮಾಡುವವನೆಂದರೆ ಶ್ರೀರಾಮಕೃಷ್ಣದೇವನೊಬ್ಬನೇ!” ಎಂದುಕೊಂಡು ಜುಗುಪ್ಸೆಯಿಂದ ಹೊರಟುಹೋದನು.

ಯೋಗೇಂದ್ರನು ಸ್ವಾಮಿ ಯೋಗಾನಂದರಾದನು.

ಕ್ರಿ.ಶ. ೧೮೮೩ ರಲ್ಲಿ ಶ್ರೀರಾಮಕೃಷ್ಣರೆಡೆಗೆ ಇನ್ನೂ ಐದು ಮಂದಿ ಶಿಷ್ಯರು ಬಂದರು – ಶಶಿಭೂಷಣ ಚಕ್ರವರ್ತಿ, ಶರಚ್ಚಂದ್ರ ಚಕ್ರವರ್ತಿ, ಕಾಳೀಪ್ರಸಾದ ಚಂದ್ರ, ಹರಿನಾಥ ಚಟ್ಟೋಪಾಧ್ಯಾಯ, ಹರಿಪ್ರಸನ್ನ ಚಟ್ಟೋಪಾಧ್ಯಾಯ.

ಶಶಿಭೂಷಣ ಶರಚ್ಚಂದ್ರರಿಬ್ಬರೂ ಹತ್ತಿರದ ಬಂಧುಗಳು; ಬ್ರಾಹ್ಮಣರು; ಕಲ್ಕತ್ತೆಯ ನಿವಾಸಿಗಳು; ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು; ಕೇಶವಚಂದ್ರ ಸೇನನ ಬ್ರಾಹ್ಮಸಮಾಜಕ್ಕೆ ಸೇರಿದ್ದರು. ಒಂದು ಸಾರಿ ಬ್ರಾಹ್ಮಸಮಾಜದವರು ಶ್ರೀರಾಮಕೃಷ್ಣರ ಪವಿತ್ರ ಸಂಗಲಾಭ ದೊರೆಕೊಳ್ಳುವುದೆಂದು ಹಾರೈಸಿ ತಮ್ಮ ವಾರ್ಷಿಕೋತ್ಸವವನ್ನು ದಕ್ಷಿಣೇಶ್ವರದ ಉದ್ಯಾನವನದಲ್ಲಿ ನಡೆಸಿದರು. ಆ ದಿನದ ಪ್ರಾತಃಕಾಲದಲ್ಲಿ ವಿನೋದ ಕ್ರೀಡೆಗಳಲ್ಲಿ ಕಳೆದು ಮಧ್ಯಾಹ್ನದಲ್ಲಿ ಶಶಿಭೂಷಣ ಶರಚ್ಚಂದ್ರರಿಬ್ಬರೂ ಪರಮಹಂಸರನ್ನು ಕಾಣಲು ಹೋದರು. ಅವರು ತರುಣರ ಹೆಸರು, ಸ್ಥಳ ಮೊದಲಾದ ವಿಷಯಗಳನ್ನು ಕೇಳಿ, ಕೇಶವನ ಸಮಾಜಕ್ಕೆ ಸದಸ್ಯರಾಗಿದ್ದಾರೆಂದು ಗೊತ್ತಾಗಲು ಬಹಳ ಸಂತೋಷಪಟ್ಟರು. ಮಾತಾಡುತ್ತ ಆಡುತ್ತ ಪರಮಹಂಸರೆಂದರು;

“ಇಟ್ಟಿಗೆಯನ್ನಾಗಲಿ ಹೆಂಚುಗಳನ್ನಾಗಲಿ ವಾಣಿಜ್ಯ ಮುದ್ರೆಯೊತ್ತಿದ ಮೇಲೆ ಚೆನ್ನಾಗಿ ಸುಟ್ಟರೆ ಆ ಮುದ್ರೆ ಮಾಸದೆ ನಿಲ್ಲುತ್ತದೆ. ಹಾಗೆಯೆ ನೀವೂ ಧರ್ಮಜೀವನದಲ್ಲಿ ಸ್ವಲ್ಪ ಮುಂದುವರಿದ ಮೇಲೆಯೆ ಸಂಸಾರದಲ್ಲಿ ಪ್ರವೇಶಿಸಬೇಕು. ಹಾಗೆ ಮಾಡಿದರೆ ಪ್ರಂಪಚದ ಕೆಸರಿನಲ್ಲಿ ಹೂತುಕೊಳ್ಳುವುದಿಲ್ಲ. ಆದರೆ ಈಗ ತಂದೆ ತಾಯಿಗಳು ತಮ್ಮ ಮಕ್ಕಳು ಚಿಕ್ಕವರಾಗಿದ್ದಾಗಲೆ ಮದುವೆ ಮಾಡಿ ಅವರ ಶ್ರೇಯಸ್ಸನ್ನೆ ಹಾಳುಮಾಡಿಬಿಡುತ್ತಿದ್ದಾರೆ, ಹುಡುಗನಿ ಓದು ಪೂರೈಸಿ ಶಾಲೆಯಿಂದ ಹೊರಬೀಳುವುದೆ ತಡ, ತಾನು ಏಳುಮಕ್ಕಳ ತಂದೆಯಾಗಿರುವುದನ್ನು ಕಂಡು ದಿಗಿಲುಬೀಳುತ್ತಾನೆ. ಚಾಕರಿಗಾಗಿ ಅಲೆಯುತ್ತಾನೆ. ಕೆಲಸ ಸಿಕ್ಕಿದರೂ ಅಲ್ಪ ಸಂಪಾದನೆಯಿಂದ ಸಂಸಾರವನ್ನು ನಿರ್ವಹಿಸುವುದೆ ಕಠಿಣವಾಗುತ್ತದೆ, ಹೀಗಾಗಿ ಮೂರು ಹೊತ್ತು ಹೊಟ್ಟೆಪಾಡಿನ ಚಿಂತೆಯೆ ಹಿಡಿದುಬಿಟ್ಟು ಉತ್ತಮ ಚಿಂತನೆಗಳಿಗೆ ಅವಕಾಶವೆ ಇರುವುದಿಲ್ಲ.”

ತರುಣರಲ್ಲೊಬ್ಬನು ಕೇಳಿದನು; “ಮಹಾಶಯ, ಹಾಗಾದರೆ ಮದುವೆ ಮಾಡಿಕೊಳ್ಳುವುದು ತಪ್ಪೆ? ಅದು ಈಶ್ವರೇಚ್ಛೆಗೆ ವಿರುದ್ಧವಾದುದೆ?”

ಶ್ರೀರಾಮಕೃಷ್ಣರು ಗೋಡೆಯ ಗೂಡುನಲ್ಲಿದ್ದ ಒಂದು ಗ್ರಂಥವನ್ನು ತೆಗೆದು ಅದರಲ್ಲಿ ಮದುವೆಯ ವಿಚಾರವಾಗಿದ್ದ ಯೇಸುಕ್ರಿಸ್ತನ ಮತವನ್ನು ಓದುವಂತೆ ಹೇಳಿದರು. ಅದರಲ್ಲಿ ಹೀಗಿತ್ತು.[3]

“ಕೆಲವರು ತಾಯಿಯ ಹೊಟ್ಟೆಯಿಂದ ಹುಟ್ಟುವಾಗಲೆ ನಪುಸಕರಾಗಿರುತ್ತಾರೆ; ಕೆಲವರು ಹುಟ್ಟಿದಮೇಲೆ ಮಾನವರಿಂದ ನಪುಂಸಕರಾಗುತ್ತರೆ; ಕೆಲವರು ಈಶ್ವರ ರಾಜ್ಯದ ಸಲುವಾಗಿ ನಪುಂಸಕ ಜೀವನವನ್ನು ಕೈಕೊಳ್ಳುತ್ತಾರೆ. ಅದನ್ನು ಪಡೆಯಲು ಶಕ್ತಿಯುಳ್ಳವನಿದ್ದರೆ ಪಡೆಯಲಿ….. ಆದ್ದರಿಂದ ಅವಿವಾಹಿತರಿಗೂ ವಿಧವೆಯರಿಗೂ ನಾನು ಹೇಳುವುದೇನೆಂದರೆ ನನ್ನಂತೆಯೆ ಅವರಿರುವುದಾದರೆ ಶುಭವಾಗುತ್ತದೆ. ಸಮರ್ಥರಲ್ಲದಿದ್ದರೆ ಮದುವೆಮಾಡಿಕೊಳ್ಳಲಿ; ಏಕೆಂದರೆ, ಎದೆ ಬೇಯುವುದಕ್ಕಿಂತ ಮದುವೆಮಾಡಿಕೊಳ್ಳವುದು ಲೇಸು.”

ಓದಿದಮೇಲೆ ಪರಮಹಂಸರು ” ವಿವಾಹವೆ ಬಂಧನದ ಬೇರು” ಎಂದರು. ಸದಸ್ಯರಲ್ಲೊಬ್ಬನು” ಮಹಾಶಯ, ವಿವಾಹವು ಈಶ್ವರೇಚ್ಛೆಗೆ ವಿರುದ್ಧವೆಂಬುದು ನಿಮ್ಮರ್ಥವೆ? ವಿವಾಹ ನಿಂತುಹೋದರೆ ಸೃಷ್ಟಿ ಮುಂದುವರಿಯುವುದಾದರೂ ಹೇಗೆ?” ಎಂದು ಸೃಷ್ಟಿಕರ್ತನ ಯೋಗಕ್ಷೇಮಕಾರಿಯೊ ಎಂಬಂತೆ ಪ್ರಶ್ನೆ ಮಾಡಿದನು.

ಪರಮಹಂಸರು ನಗುನಗುತ್ತ ಹೇಳಿದರು. “ಅದರ ಚಿಂತೆ ನಿನಗೇಕೆ? ಇಷ್ಟವಿದ್ದವರು ಬೇಕಾದಹಾಗೆ ಮದುವೆಮಾಡಿಕೊಳ್ಳಲಿ. ಅದಕ್ಕೇನೂ ಅಡ್ಡಿಯಿಲ್ಲ! ನಾನು ಹೇಳಿದುದು ನನ್ನ ನಿನ್ನ ಮಾತು. ಪ್ರಕೃತವನ್ನು ಕುರಿತು ಮಾತ್ರ ಹೇಳುತ್ತಿದ್ದೇನೆ. ನಿನಗೆ ಬೇಕಾದಷ್ಟನ್ನೆ ಸ್ವೀಕರಿಸಿ; ಉಳಿದುದನ್ನು ಬಿಟ್ಟುಬಿಡು.”

ತರುವಾಯ ಶಶಿಭೂಷಣನನ್ನು ಕುರಿತು “ಸಾಕಾರ ನಿರಾಕಾರಗಳಲ್ಲಿ ನಿನಗೆ ಯಾವುದರಲ್ಲಿ ನಂಬುಗೆ?” ಎಂದು ಕೇಳಿದರು.

“ಮಹಾಶಯ, ದೇವರಿದ್ದಾನೆಯೊ ಇಲ್ಲವೊ ಅದೇ ನನಗೆ ಸಂದೇಹ ಎಂದಮೇಲೆ ಸಾಕಾರ ನಿರಾಕಾರಗಳ ವಿಚಾರವಾಗಿ ನಾನು ಏನೂ ಹೇಳಲಾರೆ” ಎಂದುಬಿಟ್ಟನು ಶಶಿ. ಮನಸ್ಸಿನಲ್ಲಿ ಇದ್ದುದನ್ನು ಮರೆಮಾಚದೆ ಹೇಳಿಬಿಟ್ಟ ತರುಣನನ್ನು ಕಂಡು ಗುರುದೇವನಿಗೆ ಹರ್ಷವಾಯಿತು.

ಶಶಿಭೂಷಣ ಶರಚ್ಚಂದ್ರರಿಬ್ಬರೂ ಪರಮಹಂಸರಲ್ಲಿಗೆ ಆಗಾಗ ಹೋಗ ತೊಡಗಿದರು. ಕಡೆಗೆ ಅಂತರಂಗದ ಶಿಷ್ಯರ ಗುಂಪಿಗೂ ಸೇರಿದರು. ಅವರಿಬ್ಬರೂ ಮುಂದೆ ರಾಮಕೃಷ್ಣಾನಂದ ಮತ್ತು ಶಾರದಾನಂದರೆಂದು ಪ್ರಸಿದ್ಧರಾದುದನ್ನು ನೋಡುತ್ತೇವೆ.

ಅಧ್ಯಾಪಕನ ಮಗನಾಗಿದ್ದ ಕಾಳೀಪ್ರಸಾದಚಂದ್ರನು ವಿದ್ಯಾಶಾಲೆಯಲ್ಲಿ ಓದುತ್ತಿದ್ದಾಗಲೆ ಭಗವದ್ಗೀತೆ, ಶಿವಸಂಹಿತೆ, ಪಾತಂಜಲ ದರ್ಶನ ಮೊದಲಾದ ಗ್ರಂಥಗಳನ್ನು ಓದಿ ವೇದಾಂತಿಯಾಗಿದ್ದನು. ವೇದಶಾಸ್ತ್ರಗಳಲ್ಲಿ ಆತನಿಗೆ ಬಹಳ ಮಮತೆ. ಆದರೆ ಗುರುವಿಲ್ಲದೆ ಯಾರೂ ಯೋಗಿಯಾಗಲಾರರು ಎಂಬುದನ್ನು ಶಾಸ್ತ್ರಗಳಲ್ಲಿ ಓದಿ. ಅಲ್ಲಿ ಇಲ್ಲಿ ಗುರುವನ್ನು ಹುಡುಕಿ, ಕಡೆಗೆ ಪರಮಹಂಸರಲ್ಲಿಗೆ ಬಂದು ಅವರನ್ನು ಮಹಾಯೋಗಿಶ್ವರರೆಂದು ತಿಳಿದು ಗುರುವಾಗಿ ಸ್ವೀಕರಿಸಿದನು. ಸಾಧನೆಯಲ್ಲಿ ಮುಂದುವರಿದು ಅನೇಕ ದಿವ್ಯಾನುಭವಗಳನ್ನು ಪಡೆದನು. ಮುಂದೆ ಸ್ವಾಮಿ  ಅಭೇದಾನಂದರೆಂದು ಪ್ರಸಿದ್ಧನಾದನು. ಸ್ವಾಮಿ ವಿವೇಕಾನಂದರ ತರುವಾಯ ಅಮೆರಿಕಾಕ್ಕೆ ಹೋಗಿ ಇಪ್ಪತ್ತು ವರ್ಷಗಳ ಕಾಲ ಅಲ್ಲಿ ವೇದಾಂತಧರ್ಮವನ್ನು ಪ್ರಚಾರಮಾಡಿ ಹಿಂದಿರುಗಿದರು. ಆಂಗ್ಲೇಯ ಭಾಷೆಯಲ್ಲಿಯೂ ಬಂಗಾಳಿಯಲ್ಲಿಯೂ ಅನೇಕ ಧರ್ಮಗ್ರಂಥಗಳನ್ನೂ ತತ್ವ್ತಗ್ರಂಥಗಳನ್ನೂ ರಚಿಸಿದ್ದಾರೆ.

ಹರಿನಾಥ ಚಟ್ಟೋಪಾಧ್ಯಾಯನು ಸಂಪ್ರದಾಯದ ಬ್ರಾಹ್ಮಣ ಕುಮಾರನಾಗಿದ್ದನು. ದೈನಂದಿನ ಕರ್ಮಕ್ರಿಯೆಗಳನ್ನು ಚಾಚೂ ತಪ್ಪದೆ ನಡೆಸುತ್ತಿದ್ದನು. ದಿನಕ್ಕೆ ಮೂರುಸಲವಾದರೂ ಮೀಯದೆ ಇರುತ್ತಿರಲಿಲ್ಲ, ತನ್ನ ಆಹಾರವನ್ನು ತಾನೆ ಅಡಿಗೆಮಾಡಿ ದೇವರಿಗೆ ನಿವೇದಿಸಿದ ತರುವಾಯ ಪ್ರಸಾದ ಸ್ವೀಕಾರಮಾಡುತ್ತಿದ್ದನು. ಭಗವದ್ಗೀತೆ ಮೊದಲಾದ ವೇದಾಂತ ಗ್ರಂಥಗಳನ್ನು ತಪ್ಪದೆ ಪಾರಾಯಣ ಮಾಡುತ್ತ ಶಾಂಕರಾದ್ವೈತಿಯಾಗಿದ್ದನು. ಪರಮಹಂಸರನ್ನು ನೋಡಿದಂದಿನಿಂದ ಅವರ ಮಹತ್ತನ್ನು ಅರಿತು ಆಗಾಗ್ಗೆ ಅವರ ಬಳಿ ಹೋಗಿ ಬರುತ್ತಾ ಕಡೆಗೆ ಶಿಷ್ಯನಾದನು. ಒಂದುದಿನ ಹರಿನಾಥನು ಸ್ತ್ರೀಯರನ್ನು ತಿರಸ್ಕರಿಸಿ ಮಾತಾಡಲು, ಪರಮಹಂಸರು” ಚಿಃ ಎಂತಹ ಮಾತು! ಸ್ತ್ರೀಯರಲ್ಲಿ ತಿರಸ್ಕಾರ! ಏತಕ್ಕೆ! ಜಗನ್ಮಾತೆಯ ಪ್ರತಿಕೃತಿಗಳಲ್ಲವೆ ಅವರು? ಅವರನ್ನು ನಮಸ್ಕರಿಸಬೇಕೆ ಹೊರತು ತಿರಸ್ಕರಿಸಬಾರದು. ದ್ವೇಷ ಹೆಚ್ಚಿದಂತೆಲ್ಲ ಅವರ ಮಾಯೆಗೆ ಬೀಳುತ್ತೀಯೆ ಎಚ್ಚರಿಕೆ! ಎಂದರು. ಹರಿನಾಥನು ತುರೀಯಾನಂದರಾದನು.

ಮೇಲೆ ಹೇಳಿದ ಹನ್ನೊಂದುಜನ ಶಿಷ್ಯರಲ್ಲದೆ ಇನ್ನೂ ಆರುಜನರು ಪರಮಹಂಸರ ಅಂತರಂಗದ ಶಿಷ್ಯಗೋಷ್ಠಗೆ ಸೇರಿದರು. ಗಂಗಾಧರ (ಸ್ವಾಮಿ ಅಖಂಡಾನಂದ); ಸುಭೋಧ ಘೋಷ (ಸ್ವಾಮಿ ಸುಭೋಧಾನಂದ); ಶಾರದಾಪ್ರಸನ್ನ ಮಿತ್ರ (ತ್ರಿಗುಣಾತೀತಾನಂದ); ನಿತ್ಯನಿರಂಜನ ಸೇನ (ಸ್ವಾಮಿ ನಿರಂಜನಾನಂದ); ಬಾಬುರಾಂ ಘೋಷ (ಸ್ವಾಮಿ ಪ್ರೇಮಾನಂದ); ತುಲಸೀಚರಣ ದತ್ತ (ಸ್ವಾಮಿ ನಿರ್ಮಲಾನಂದ).

ಪೂವೋಕ್ತಕಥನದಿಂದ ಪರಮಹಂಸರಲ್ಲಿಗೆ ಬಂದ ಶಿಷ್ಯರು ಎಂತಹ ವಿವಿಧ ಪ್ರಕೃತಿಯುಳ್ಳವರಾಗಿದ್ದರು. ಎಂಬುದು ಗೊತ್ತಾಗುತ್ತದೆ. ಕೆಲವರು ಕಗ್ಗಲ್ಲಿನಂತೆ, ಕೆಲವರು ಬಳಪದಕಲ್ಲಿನಂತೆ; ಕೆಲವರು ಹಾಲ್ಗಲ್ಲಿನಂತೆ, ಕೆಲವರು ಹಿಟ್ಟುಗಲ್ಲಿನಂತೆ. ಹಲವು ತೆರನಾದ ಅರೆಗಳಿಂದ ವಿಗ್ರಹಗಳನ್ನು ಕೆತ್ತುವ ಶಿಲ್ಪಿ ಕಲ್ಲಿನ ಗುಣಗಳನ್ನು ತಿಳಿದುಕೊಳ್ಳದೆ ಎಲ್ಲಕ್ಕೂ ಒಂದೇ ನಿಯಮದಂತೆ ಶಕ್ತಿಪ್ರಯೋಗ ಮಾಡಿದರೆ ಅಪಾಯವಾಗದಿರುವುದಿಲ್ಲ. ಕಗ್ಗಲ್ಲಗೆ ಹೊಡೆಯುವ ಪೆಟ್ಟನ್ನು ಹಿಟ್ಟುಗಲ್ಲಿಗೆ ಹೊಡೆದರೆ ವಿಗ್ರಹಕ್ಕೆ ಬದಲಾಗಿ ರಂಗವಲ್ಲಿಯ ಚೂರ್ಣವಾಗಿ ಬಿಡುತ್ತದೆ. ಅದನ್ನು ಚೆನ್ನಾಗಿ ಅರಿತಿದ್ದ ದೇವಶಿಲ್ಪಿ ಶ್ರೀರಾಮಕೃಷ್ಣರು ಬಹು ಎಚ್ಚರಿಕೆಯಿಂದ  ತಮ್ಮ ಚಾಣವನ್ನು ಉಪಯೋಗಿಸಿದ್ದಾರೆ. ಶಿಷ್ಯರ ಎದೆಯ ಭಾವಗಳನ್ನು ನಷ್ಟುಗೊಳಿಸುವ ಗೊಡವೆಗೆ ಹೋಗದೆ ಅವರ ಅಂತರಂಗದಲ್ಲಿ ಸರ್ವದಾ ಸುಪ್ತವಾಗಿದ್ದ ಪರಿಪೂರ್ಣತೆ ವಿಕಾಸಹೊಂದಿ ಪ್ರಕಾಶವಾಗಲು ಎಷ್ಟು ಕೆಲಸಮಾಡಬೇಕಾಗಿತ್ತೋ ಅಷ್ಟನ್ನೇ ಮಾಡಿದ್ದಾರೆ. ಸ್ಪರ್ಶ ಮಾತ್ರದಿಂದ ಅಥವಾ ಇಚ್ಛಾಮಾತ್ರದಿಂದ ಒಂದು ಭಾವವು ಸಂಪೂರ್ಣವಾಗಿ ಲಯವಾಗುವಂತೆ ಮಾಡಿ ಅದರ ಸ್ಥಾನದಲ್ಲಿ ಬೇರೋಂದ ಶ್ರೇಷ್ಠರ ಮತ್ತು ಶ್ರೇಯಸ್ಕರವಾದ ಭಾವ ಆವಿರ್ಭವಿಸುವಂತೆ ಮಾಡುವ ಅಪಾರ್ಥಿವ ದೈವಿಶಕ್ತಿ ಅವರಲ್ಲಿದ್ದುದೇನೊ ನಿಜ. ಒಂದೆರಡು ಪ್ರಸಂಗಗಳಲ್ಲಿ ಆ ಶಕ್ತಿಯನ್ನು ಪ್ರಯೋಗಿಸಿಯೂ ಇದ್ದಾರೆ. ಆದರೆ ಅದು ಅತಿವಿರಳ. ಇತರರ ಭಾವನಷ್ಟ ಮಾಡಬಾರದು ಎಂದು ತಮ್ಮ ಶಿಷ್ಯರಿಗೆ ಅವರು ಆಜ್ಞೆ ಮಾಡಿದ್ದಾರೆ: “ಮಧುಕರಗಳು ನಿನ್ನ ಹೃದಯಕಮಲದ ಮಕರಂದವನ್ನೇನೊ ಪಾನಮಾಡಲಿ; ಆದರೆ ಕಮಲವೆ ಅವುಗಳಿಗೆ ಕಾರಾಗೃಹವಾಗದಂತೆ ಎಚ್ಚರಿಕೆಯಿರಲಿ.


[1] ಶ್ರೀ ಕುವೆಂಪು ಅವರ “ಸ್ವಾಮಿ ವಿವೇಕಾನಂದ” ನೋಡಿ.

[2] ಕ್ರಿ. ಶ. ೧೯೩೪ ನೆಯ ಫೆಬ್ರುವರಿ ತಿಂಗಳು ೨೦ ನೆಯ ತೇದಿಯ ದಿನ ಸ್ವಾಮಿ ಶಿವಾನಂದರು ಇಹಯಾತ್ರೆಯಿಂದ ಮುಕ್ತರಾದರು. ಸ್ವಾಮಿ ಶಿವಾನಂದರನ್ನು ಕುರಿತು ಹೆಚ್ಚಿನ ವಿಷಯ ತಿಳಿಯಲೆಳಸುವವರು ಶ್ರೀ ಕುವೆಂಪು ಅವರಿಂದ ಅನುವಾದವಾಗಿರುವ ಅವರ ಮಾತುಕತೆಯ ಗ್ರಂಥ ಗುರುವಿನೊಡನೆ ದೇವರಡಿಗೆ” ಎಂಬುದನ್ನು ನೋಡಬಹುದು.

[3] “For there are some eunchs, which were so born from the mother’s womb; there are some eunuchs, which were made eunuchs of men; and there be enuchs, which have made themselves enuchs for kingdom of Heaven’s sake.. . . I say therefore to the unmarried and the widows. it is good for them if they abide even as I. But if they cannot contain. let them marry; for it is better to marry than to burn.”