ಮಾನಸ ಸರೋವರದಲ್ಲಿ ಅರಳಿದ ಮಹಾಪದ್ಮವು ಬಂಡಿನ ಬಿಣ್ಪಿನಿಂದ ಬಿರಿವರಿದು ಪರಮೆಗಳ ಬರವನ್ನೆ ಹಾರುತ್ತಿತ್ತು ಎಂದು ಹಿಂದೆಯೆ ಹೇಳಿದ್ದೇವೆ. ತಾವರೆಯ ಹಾರೈಕೆಯಂತೆ ಕೆಲವು ಅಳಿಗಳೇನೊ ಬಂದವು. ಆದರೆ ಅವುಗಳೆಲ್ಲ ಕಿರುಜೇನುಗಳಾಗಿದ್ದರಿಂದ ಕಮಲದ ಎದೆಯಂಚಿನಲ್ಲಿದ್ದ ಒಂದೆರಡು ಮಕರಂದ ಬಿಂದುಗಳನ್ನು ಪಾನಮಾಡಲು ಸಮರ್ಥವಾಗಿದ್ದುವೆ ಹೊರತು ಅದರ ಎದೆಯಾಳದ ಮಧುರ ಮಧು ಖನಿಯನ್ನು ಪ್ರವೇಶಿಸಿ ಘನತರ ಮಾಧುರ್ಯವನ್ನು ಹೀರುವಷ್ಟು ಧೀರವಾಗಿಲಿಲ್ಲ. ಆ ಸಾಹಸ ಮಾಡಲು ಹೆಜ್ಜೇನುಗಳೆ ಬರಬೇಕಾಯಿತು.

ಅವತಾರಪುರುಷರೆಲ್ಲರೂ ಭೂಮಿಗೆ ಬರುವಾಗ ತಮ್ಮ ಅಂತರಂಗದ ಗೋಷ್ಠಿಗೆ ಸೇರಿದ ಶಿಷ್ಯರೊಡಗೂಡಿಯೆ ಜನ್ಮವೆತ್ತುವರೆಂದು ಇತಿಹಾಸದಿಂದ ಗೊತ್ತಾಗುತ್ತದೆ. ಅನೇಕರು ಅವರಿಗೆ ಭಕ್ತರಾಗಬಹುದು: ಆದರೆ ಕೆಲವರು ಮಾತ್ರವೆ ಅಂತರಂಗದ ಶಿಷ್ಯರಾಗುತ್ತಾರೆ. ಜಹಜಿನ ಯಜಮಾನನು ಪ್ರಯಾಣಿಕರೆಲ್ಲರಿಗೂ ಕೆಲಸ ಕೊಡುವುದಿಲ್ಲ: ಹಾಗೆ ಕೊಟ್ಟರೆ ಜಹಜಿಗೆ ಅಪಾಯವಾಗುತ್ತದೆ. ತಾನೆ ಆಯ್ದು ನೇಮಿಸಿಕೊಂಡು ಯಂತ್ರ ಕರ್ಮಜ್ಞರಿಗೆ ಮಾತ್ರ ಆ ಕೆಲಸವನ್ನು ವಹಿಸುತ್ತಾನೆ. ಹಾಗೆಯೆ ಅವತಾರ ಪುರುಷನೂ ತನ್ನ ಧರ್ಮನಾವೆಯನ್ನು ಮರ್ಮವರಿತ ಅಂತರಂಗ ಶಿಷ್ಯರಿಗಲ್ಲದೆ ಇತರರಿಗೆ ವಹಿಸುವುದಿಲ್ಲ. ಬುದ್ದದೇವ, ಯೇಸುಕ್ರಿಸ್ತ, ಶ್ರೀ ಶಂಕರಾಚಾರ್ಯ ಮತ್ತು ಶ್ರೀಕೃಷ್ಣ ಚೈತನ್ಯ ಇ‌ವರುಗಳ ಚರಿತ್ರೆಯನ್ನು ನೋಡಿದರೆ ಮೇಲೆ ಹೇಳಿದ ವಿಷಯ ವಿಶದವಾಗುತ್ತದೆ.

ಇನ್ನೊಂದು ವಿಷಯವೇನೆಂದರೆ ಅವತಾರಪುರುಷರು ತಮ್ಮ ಅಂತರಂಗ ಶಿಷ್ಯರನ್ನು ಆಯುವ ವಿಧಾನವೂ ವಿಚಿತ್ರವಾದುದು. ಅವರು ಅಂತಹ ಶಿಷ್ಯರನ್ನು ಹೊಸದಾಗಿ ಕಂಡುಹಿಡಿಯುವುದಿಲ್ಲ. ಗುರುತು ಕಂಡುಹಿಡಿಯುತ್ತಾರೆ. ಅವರ ಆಯ್ಕೆಗೆ ಆಧಾರವಾವುದೊ ಅದು ಇತರರಿಗೆ ತಿಳಿಯುವಂತಿಲ್ಲ. ಅಂತೂ ಆ ಆಯ್ಕೆ ವಿದ್ಯೆ, ಸ್ಥಾನ ಮಾನ, ಕುಲ, ಐಶ್ವರ್ಯ ಮೊದಲಾದ ಯಾವ ಐಹಿಕ ಉಪಾಧಿಗಳಿಂದಲೂ ಬದ್ಧವಾಗಿಲ್ಲ ಎಂದು ಮಾತ್ರ ಗೊತ್ತಾಗುತ್ತದೆ. ಅಂತೂ ಶಿಷ್ಯರೂ ಆಚಾರ್ಯರೂ ಸಂಧಿಸಿದಾಗ ಅವರ ವರ್ತನೆಯನ್ನು ನೋಡಿದರೆ ಬಹುಕಾಲದ ಪರಿಚಿತರೆಂದು ತೋರುತ್ತದೆಯೆ ಹೊರತು ತತ್ಕಾಲದಲ್ಲಿ ಮಾತ್ರ ಸಂಧಿಸಿದವರೆಂದು ತೋರುವುದಿಲ್ಲ. ಒಂದು ವೇಳೆ ಶಿಷ್ಯ ಹಳೆಯ ಪರಿಚಯವನ್ನು ಮರೆತವನಂತೆ ಆಚರಿಸಿದರೂ ಆಚಾರ್ಯನಿಗೆ ಸ್ವಲ್ಪವೂ ಸಂದೇಹವಿರುವುದಿಲದಲ. ಏನಾದರೂ ಸ್ವಲ್ಪ ಸಂಶಯ ತಲೆದೋರಿದರೆ ಅದನ್ನು ಪರೀಕ್ಷಿಸಿ ಬಹುಬೇಗ ಪರಿಹಾರ ಮಾಡಿಕೊಳ್ಳುತ್ತಾನೆ. ಕ್ರಮೇಣ ಶಿಷ್ಯನಿಗೂ ಪೂರ್ವ ಪರಿಚಯದ ಅನುಭವವಾಗುತ್ತದೆ. ಶ್ರೀರಾಮಕೃಷ್ಣರ ಮತ್ತು ಅವರ ಅಂತರಂಗ ಶಿಷ್ಯರ ಸಂಬಂಧದಲ್ಲಿ ಪೂರ್ವೋಕ್ತ ವಿಚಾರ ಚೆನ್ನಾಗಿ ಒಡೆದುಮೂಡಿರುತ್ತದೆ.

ಹಸು ತನ್ನ ಕರುವಿನ ಬರವನ್ನೇ ಹಾರುವಂತೆ ಪರಮಹಂಸರು ತಮ್ಮ ಅಂತರಂಗ ಶಿಷ್ಯರ ಆಗಮನವನ್ನು ತೀವ್ರ ವ್ಯಾಕುಲತೆಯಿಂದ ನೀರಿಕ್ಷಿಸುತ್ತಿದ್ದರು. ಅವರ ದಿವ್ಯದೃಷ್ಟಿಗೆ ಶಿಷ್ಯರೆಲ್ಲರೂ ಮೊದಲೆ ಗೋಚರವಾಗಿದ್ದರು. ಎಂದಿಗೆ ಅವರು ತಮ್ಮೆಡೆಗೆ ಬಂದಾರು? ಎಂದಿಗೆ ಅವರಿಂದ ಸರ್ವಧರ್ಮ ಸಮನ್ವಯ ತತ್ತ್ವವನ್ನು ಲೋಕಕ್ಕೆ ಬೋಧಿಸಿ, ನಿರರ್ಥಕವಾದ ಮತದ್ವೇಷವನ್ನು ಪರಿಹಾರ ಮಾಡಿಯೇನು? ಎಂದಿಗೆ ತಪ್ತ ಜೀವಿಗಳಿಗೆ ನವಧರ್ಮಾಮೃತವನ್ನು ನೀಡಿಯೇನು? ಎಂಬುದು ಅವರ ದಿನದಿನದ ಹಂಬಲವಾಗಿತ್ತು.

ಅದನ್ನು ಕುರಿತು ಪರಮಹಂಸರು ಹೀಗೆ ಹೇಳಿದ್ದಾರೆ.

“ನನ್ನ ವ್ಯಾಕುಲತೆ ಅಸೀಮವಾಗಿತ್ತು. ಇತರರ ಮುಂದೆ ಅದನ್ನು ತೋರದೆ ಗುಟ್ಟುಮಾಡುತ್ತಿದ್ದೆ. ಪ್ರಾಪಂಚಿಕರ ನೀಚ ಕಥೋಪಕಥನಗಳನ್ನು ಕೇಳಿ ಕೇಳಿ ಅಸಹ್ಯವಾಗಿತ್ತು. ನನ್ನ ಗೋಷ್ಠಿಯ ಪ್ರಿಯ ಶಿಷ್ಯರು ಎಂದಿಗೆ ಬಂದಾರು? ಅವರು ಬಂದರೆ ನನ್ನ ಸಾಕ್ಷಾತ್ಕಾರ ಸಂಪತ್ತಿಯನ್ನೆಲ್ಲ ಅವರೆದುರು ಚೆಲ್ಲಿ ಹೃದಯದ ಭಾರವನ್ನು ಕಡಮೆಮಾಡಿಕೊಳ್ಳಬಹುದು ಎಂದು ಗೋಗರೆಯುತ್ತಿದ್ದೆ. ಪ್ರತಿಯೊಂದು ಸಣ್ಣ ಘಟನೆಯೂ ನನಗೆ ಅವರ ನೆನಪನ್ನೇ ತಂದುಕೊಡುತ್ತಿತ್ತು. ನನ್ನ ಮನಸ್ಸೆಲ್ಲ ಅವರ ಚಿಂತೆಯೊಂದರಿಂದಲೆ ತುಂಬಿಹೋಗಿತ್ತು. ನನ್ನ ಯೌಗಿಕ ದೃಷ್ಟಿಗೆ ಅವರೆಲ್ಲರೂ ಗೋಚರವಾಗುತ್ತಿದ್ದರು. ಯಾರು ಯಾರಿಗೆ ಯಾವ ಯಾವ ವಿಚಾರಗಳನ್ನು ಬೋಧಿಸಬೇಕೆಂದೂ ನಿರ್ಣಯಿಸಿದ್ದೆ. ಹಗಲುರುಳಿ ಇರುಳಿಳಿದು ಬರಲು ಯಾವುದೋ ಒಂದು ಯಾತನೆಯ ಭಾರದಿಂದ ನನ್ನೆದೆ ಸಿಡಿಯುತ್ತಿತ್ತು. ಮತ್ತೊಂದು ದಿನ ಕಳೆದುಹೋಯಿತು. ಅವರಿನ್ನೂ ಬರಲಿಲ್ಲ! ಎಂದು ಚಿಂತಿಸಿ ಜೀವ ಸಂತಾಪದಿಂದ ಕುದಿಯುತ್ತಿತ್ತು. ಸಂಧ್ಯಾಕಾಲದಲ್ಲಿ ಮಂಗಳಾರತಿಯ ಸಮಯವನ್ನು ಸೂಚಿಸುತ್ತಾ ಘಂಟೆಗಳು ರವಗೈಯುತ್ತಿರೆ, ವಾದ್ಯಗಳು ಮೊಳಗುತ್ತಿರೆ, ದೀಪಗಳು ಬೆಳಗುತ್ತಿರೆ, ನಾನೊಬ್ಬನೆ ಆ ಮಡಲಿರಿವ ಕತ್ತಲೆಯಲ್ಲಿ ದೇವಾಲಯದ ಮೇಲು ಮಾಡವನ್ನೇರಿ ಹೃದಯ ವಿದ್ರಾವಕವಾದ ದುಃಖಾತಿಶಯದಿಂದ “ಓ ನನ್ನ ವತ್ಸರಿರಾ, ಎಲ್ಲಿದ್ದೀರಿ? ನಿಮ್ಮನ್ನಗಲಿ ನಾನಿನ್ನು ಇರಲಾರೆ! ಬನ್ನಿ ಬನ್ನಿ, ಬೇಗನೆ ಬನ್ನಿ!” ಎಂದು ಉಚ್ಛಸ್ವರದಿಂದ ಉನ್ಮತ್ತನಂತೆ ಕೂಗುತ್ತಿದ್ದೆ. ನಾನು ನನ್ನ ಶಿಷ್ಯರ ಬರವಿಗಾಗಿ ಮರುಗಿ ಹಾರಿದಂತೆ ಮಾತೆ ಶಿಶುವಿಗಾಗಲಿ, ಸಖನು ಸಖನಿಗಾಗಲಿ, ಪ್ರಿಯನು ಪ್ರೇಯಸಿಗಾಗಿಯಾಗಲಿ ಕಾತರರಾಗಲಾರರು. ಅಯ್ಯೋ, ಆ ಯಾತನೆಯನ್ನು ಹೇಳಿ ಮುಗಿಸಲಾರೆ. ಅವರ ವಿಯೋಗದಿಂದ ನನ್ನ ಬಾಳು ಬೇಯುತ್ತಿತ್ತು.”

ಆತ್ಮದ ಈ ಮಹಾ ಆರ್ತವಾಣಿ ಅಂತರಿಕ್ಷಕ್ಕೇರಿ ಅಂತರಂಗದ ಶಿಷ್ಯರನ್ನು ಆಹ್ವಾನಿಸಿತು. ಆಕರ್ಷಿಸಿತು. ಏಕೆ? ಏನು? ಎಲ್ಲಿಂದ? ಎಂದರಿಯದೆ ಅದೃಶ್ಯ ಶಕ್ತಿಯಿಂದ ಆಕೃಷ್ಟರಾಗಿ ಅನೇಕ ದಿಕ್ಕುಗಳಿಂದ ಆತ್ಮ ಶಿಷ್ಯರೆಲ್ಲರೂ ಒಬ್ಬೊಬ್ಬರಾಗಿ ಬರತೊಡಗಿದರು. ಅವರಲ್ಲಿ ಸೇವಕರು, ಶ್ರೀಮಂತರು, ಅಕ್ಷರವಿದ್ಯಾಹೀನರೂ, ಕೃತವಿದ್ಯರು, ವಿವಾಹಿತರು, ಅವಿವಾಹತರು, ವಿದ್ಯಾರ್ಥಿಗಳು, ಅಧ್ಯಾಪಕರು, ವ್ಯಾಪಾರಿಗಳು, ಸಂಪ್ರದಾಯದ ಹಿಂದೂಗಳು, ಬಾಲಕರು, ಯುವಕರು, ವಯಸ್ಕರು, ಯುಕ್ತವಾದಿಗಳು, ಭಕ್ತಿವಾದಿಗಳು, ಸಂದೇಹವಾದಿಗಳು, ನಿರೀಶ್ವರವಾದಿಗಳು ಮೊದಲಾದ ಅನೇಕ ವಿಧದ, ಅನೇಕ ಶ್ರೇಣಿಯ, ಅನೇಕ ಪಂಥದ ಪ್ರತಿನಿಧಿಗಳಿದ್ದಾರೆ, ಜೀವಮಾನವೆಲ್ಲವೂ ಸಂಸಾರಿಗಳಾಗಿದ್ದ ಕೆಲವು ಜನ ಅಂತರಂಗ ಶಿಷ್ಯರ ವಿಚಾರವಾಗಿ ಹಿಂದಿನ ಅಧ್ಯಾಯಗಳಲ್ಲಿ ಪ್ರಸ್ತಾಪಿಸಿದ್ದೇವೆ. ಈ ಅಧ್ಯಾಯದಲ್ಲಿ ಸಂನ್ಯಾಸವನ್ನು ಕೈಕೊಂಡ ಶಿಷ್ಯರನ್ನು ಕುರಿತು ಹೇಳುತ್ತೇವೆ. ಪರಮಹಂಸರ ಶಿಕ್ಷಣಕ್ರಮ ಜನರ ಸಂಸ್ಕಾರಗಳಿಗನುಸಾರವಾಗಿ ಹೇಗೆ ಸರ್ವತೋಮುಖವಾಗಿತ್ತು ಎಂಬುದನ್ನು ವಾಚಕರು ಈಗಾಗಲೆ ತಿಳಿದಿರಬೇಕು ಅವರು ಸಂಸಾರಿ ಶಿಷ್ಯರಿಗೆ ಮಾಡಿದ ಬೋಧನೆ ಅದಕ್ಕಿಂತಲೂ ಸಮಧಿಕ ವೀರ್ಯವತ್ತಾದುದು. ಏಕೆಂದರೆ, ಸಂನ್ಯಾಸಿಯ ಜೀವನಕ್ರಮವೂ ಭಾವಗಳೂ ಉಗ್ರ ತಪೋಮಯವಾಗಿ ಇಲ್ಲದಿದ್ದರೆ ಆತನು ಪತಿತನಾಗುವನು. ಬಿಸಿಲಿನಲ್ಲಿ ಹೋಗುವವನಿಗೆ ಸಾಧಾರಣವಾದ ಒಂದು ಕೊಡೆಯ ಸಾಕು; ಬೆಂಕಿನಲ್ಲಿ ಮುಳುಗುವವನಿಗೆ ವಜ್ರಕವಚವೇಬೇಕು. ಇಲ್ಲದಿದ್ದರೆ ಆತನು ಬೇಗೆಗೆ ಅಂಜಿ ಹಿಂಜರಿಯುತ್ತಾನೆ ಅಥವಾ ಸುಟ್ಟು ಬೂದಿಯಾಗುತ್ತಾನೆ, ಸಂನ್ಯಾಸ ಜೀವನವೆಂದರೆ ಕೂರಲಗಿನ ಮೇಲೆ ನಡೆದಂತೆ ಎಂದು ಪರಮಹಂಸರೆ ಹೇಳಿದ್ದಾರೆ. ನಿಜವಾದ ತಪಸ್ಸಿನಲ್ಲಿ ಸತ್ಯ ಮಿಥ್ಯೆಗಳ ರಾಜಿಗೆ ಅವಕಾಶವೆ ಇಲ್ಲ.

ಲೋಕಕ್ಕೆ ಸಂನ್ಯಾಸೀ ಶಿಷ್ಯರಿಂದಲೇ ತನ್ನ ಸಮನ್ವಯಸಂದೇಶವನ್ನು ಬೋಧಿಸಲು ಸಾಧ್ಯ ಎಂದು ನಿರ್ಧಾರಮಾಡಿದ ಗುರುದೇವನು ಯೋಧನು ಆಯುಧಗಳನ್ನು ಮಸೆಯುವಂತೆ ಅವರನ್ನು ತರಬಿಯತ್ತು ಮಾಡಿದನು, ಸ್ವಂತ ಮುಕ್ತಿಯನ್ನು ಸಾಧಿಸುವುದಕ್ಕಾಗಲಿ, ಲೋಕ ಸಂಗ್ರಹಕಾರ್ಯಕ್ಕಾಗಲಿ ಸ್ಥಿತಪ್ರಜ್ಞತೆಬೇಕು. ತನ್ನ ಆತ್ಮದಲ್ಲಿಯೆ ಅಸ್ಥಿರವಾದವನು ಜನರಿಗೆ ಯಾವ ಶಾಶ್ವತ ಉಪಕೃತಿಯನ್ನೂ ಮಾಡಲಾರನು. ಅಂತರಂಗದಲ್ಲಿ ಘನ ತಪಸ್ಸಿದ್ದರೆ ಬಹಿರಂಗದಲ್ಲಿ ಮಹತ್ಕಾರ್ಯಗಳು ಸಾಧ್ಯವಾಗುತ್ತದೆ. ಒಳಗೆ ಟೊಳ್ಳಿದ್ದರೆ ಬರಿಯ ಬುಡಬುಡಕೆಯಾಗುತ್ತದೆ. ಪಾತ್ರದ ಸ್ಥೈರ್ಯದಿಂದಲೆ ನದಿ ಹರಿಯಲು ಸಾಧ್ಯ. ಫಿರಂಗಿ ಸ್ಥಿರನಾಗಿ ನಿಲ್ಲುವುದರಿಂದಲೆ ಸಿಡಿದ ಗುಂಡು ಬಹುದೂರು ಹೋಗುತ್ತದೆ; ಹಿಮಾಲಯದ ಸ್ಥಿತಪ್ರಜ್ಞೆಯಿಂದಲ್ಲವೆ ಗಂಗೆ, ಸಿಂಧು, ಬ್ರಹ್ಮಪುತ್ರ ಮೊದಲಾದ ನದಿಗಳು ಶಾಶ್ವತ ಲೋಕೋಪಕಾರದಲ್ಲಿ ನಿರತವಾಗಿರುತ್ತವೆ? ಮನುಷ್ಯನೂ ತಪಶ್ಯಕ್ಕಿಯನ್ನು ಆರ್ಜಿಸಿದಲ್ಲದೆ ಮಹಾಕಾರ್ಯವನ್ನು ನೆರವೇರಿಸುವುದು ಅಸಾಧ್ಯ. ಬಹುಕಾಲ ಏಕಾಂತವಾಸದಲ್ಲಿ ತಪಸ್ಸುಮಾಡಿದ ಮೇಲೆಯೆ ಯೇಸುಕ್ರಿಸ್ತನು ಶಿಲುಬೆಗೇರಲು ಸಮರ್ಥನಾದನು. ಸಿದ್ದಾರ್ಥನು ಕಾನನಾಂತರದಲ್ಲಿ  ಕಠೋರ ತಪಸ್ಸುಮಾಡಿದ ತರುವಾಯವೆ ಬುದ್ಧದೇವನಾಗಿ ಜಗದುದ್ಧಾರಮಾಡಿದನು. ಅದನ್ನರಿತೆ ಗುರುದೇವನು ತನ್ನ ಶಿಷ್ಯರಿಗೆ ಹೀಗೆಂದು ಹೇಳಿದ್ದು:

“ನಾವು ಮರಳಿನ ಮೇಲೆ ಮನೆ ಕಟ್ಟಬಾರದು; ಕಲ್ಲು ಬಂಡೆಗಳ ಮೇಲೆಯೇ ಕಟ್ಟಬೇಕು. ಆಸ್ತಿಭಾರ ಸ್ಥಿರವಾಗಿ ನಿಲ್ಲದಿದ್ದರೆ ಮಂದಿರ ಬಹುಬೇಗ ನಾಶವಾಗುತ್ತದೆ. ನಾವೀಗ ನಮ್ಮ ಅಂತರಂಗವನ್ನು ಶುದ್ಧಗೊಳಿಸಬೇಕು; ಸಾಧನೆಮಾಡಿ ಅಪ್ರತಿಹತವಾದ ತಪಶ್ಯಕ್ತಿಯನ್ನು ಆರ್ಜಿಸಬೇಕು. ಆ ತಪೋಜೀವನದಿಂದಲೇ ಸತ್ಯಜ್ಯೋತಿ ಹೊರಹೊಮ್ಮಿದ ಜಗತ್ತನ್ನು ಬೆಳಗಲು ಸಮರ್ಥವಾಗುತ್ತದೆ, ಪರ್ವತ ಎಷ್ಟು ಸ್ಥಿರವಾದರೆ ನದಿಗಳು ಅಷ್ಟು ವೇಗವಾಗಿ ದೃಢತರವಾಗಿ ಪ್ರವಹಿಸುತ್ತವೆ, ನದಿಗಳ ಸಾಮರ್ಥ್ಯಕ್ಕೆ ಪರ್ವತದ ಸ್ಥೈರ್ಯವೆ ಕಾರಣ. ಎಷ್ಟು ಕಾಲವಾದರೂ ಆಗಲಿ. ತಪಸ್ಸಿನಿಂದ ಮಹಾ ಬ್ರಹ್ಮಶೈಲವೋಂದನ್ನು ನಿರ್ಮಿಸೋಣ. ಆ ಶೈಲದಿಂದ ಜ್ಞಾನ ಭಕ್ತಿ ವೈರಾಗ್ಯ ಸೇವಾವಾಹಿನಿಗಳು ಹರಿದು. ಜೀವನದ ಮರುಭೂಮಿಯನ್ನು ಸ್ವರ್ಗದ ನಂದನವನವನ್ನಾಗಿ ಮಾಡುತ್ತವೆ. ನಮ್ಮಲ್ಲಿ ಸಾಕಾದಷ್ಟು ಸಹನೆ ಔದಾರ್ಯ ಪ್ರಯತ್ನಗಳಿರಲಿ.”

ಗುರುದೇವನ ಸಂನ್ಯಾಸಿ ಶಿಷ್ಯರಲ್ಲಿ ಮೊತ್ತಮೊದಲು ಆತನಲ್ಲಿಗೆ ಬಂದವನು ಲಾಟು. ಆತನು ಬೀಹಾರ್ ಪ್ರಾಂತದವನು. ತಂದೆತಾಯಿಗಳು ಬಹುಬಡವರು, ಚಿಕ್ಕಂದಿನಲ್ಲಿಯೆ ತೀರಿಕೊಂಡರು. ಲಾಟು ಕೂಲಿ ಮಾಡಿ ಬಾಳು ಹೊರೆಯಲು ತನ್ನ ಚಿಕ್ಕಪ್ಪನೊಂದಿಗೆ ಕಲ್ಕತ್ತೆಗೆ ಬಂದನು, ನಿರಕ್ಷರಕುಕ್ಷಿಯಾಗಿದ್ದ ಆತನು ರಾಮಚಂದ್ರದತ್ತನಲ್ಲಿ ಮನೆಗೆಲಸದ ಆಳಾಗಿ ನಿಂತನು. ರಾಮಚಂದ್ರದತ್ತನು ಪರಮಹಂಸರಲ್ಲಿಗೆ ಆಗಾಗಲೆ ಬಂದು ಅವರ ಭಕ್ರನಾಗಿದ್ದನೆಂಬುದು ಹಿಂದೆಯೆ ಸೂಚಿತವಾಗಿದೆ. ತನ್ನ ಯಜಮಾನನಿಂದ ಗುರುದೇವನ ವಿಚಾರವನ್ನು ಕೇಳಿ ತಿಳಿದ ಲಾಟು ಆತನ ದರ್ಶನ ಮಾಡಲು ಕ್ರಿ, ಶ. ೧೮೭೯ ರಲ್ಲಿ ದಕ್ಷಿಣೇಶ್ವರಕ್ಕೆ ಹೋದನು. ಪರಮಹಂಸರು ಚಾವಡಿಯಲ್ಲೊ ಶತಪಥ ತಿರುಗುತ್ತಿದ್ದದನ್ನು ಕಂಡು ಹೋಗಿ ಅಡ್ಡಬಿದ್ದು ನಮಸ್ಕಾರ ಮಾಡಿದನು.

ಶ್ರೀ ರಾಮಕೃಷ್ಣರು “ಎಲ್ಲಿಂದ ಬಂದೆ?” ಎಂದು ಕೇಳಿದರು.

“ರಾಮಚಂದ್ರದತ್ತರ ಮನೆಯಿಂದ” ಎಂದು ಹೇಳಲು ಪರಮಹಂಸರು ಆತನನ್ನು ತಮ್ಮ ಕೊಠಡಿಗೆ ಕರೆದುಕೊಂಡುಹೋಗಿ ಪ್ರಸಾದ ಕೊಟ್ಟು ಮಾತುಕತೆಯಾಡಿದರು. ಅವರು ಬಡಸೇವಕನಾದ ತನ್ನಲ್ಲಿ ತೋರಿದ ಅದರ ವಿಶ್ವಾಸಗಳನ್ನು ಕಂಡು ಲಾಟು ಎದೆಗರಗಿ ಹೋದನು. ಸಂಜೆಯಾಗಲು ಲಾಟು ಹೊರಡಲು ದ್ಯುಕ್ತನಾದನು.

ಪರಮಹಂಸರು “ನಡೆದುಕೊಂಡು ಹೋಗಬೇಡ, ದೋಣಿಯಲ್ಲಿ ಜಾಗ ಮಾಡಿಕೊಂಡು ಹೋಗು, ದುಡ್ಡಿಲ್ಲದಿದ್ದರೆ ದುಡ್ಡುಕೊಡುತ್ತೇನೆ” ಎಂದರು.

“ದುಡ್ಡು ಬೇಡ, ಮಹಾಶಯ; ನನ್ನಲ್ಲಿದೆ.”

“ಇದೆಯೊ ಇಲ್ಲವೊ? ಇಲ್ಲದಿದ್ದರೆ ತೆಗೆದುಕೊಂಡು ಹೋಗು, ಸಂಕೋಚ ಮಾಡಬೇಡ.”

ಲಾಟು ಮುಗುಳುನಗೆ ನಗುತ್ತ ತನ್ನ ಜೇಬಿನಲ್ಲಿದ್ದ ಹಣವನ್ನು ಸದ್ದುಮಾಡಿ “ನೋಡಿ ಇಲ್ಲಿದೆ” ಎಂದನು.

ಪರಮಹಂಸರು “ಪುನಃ ಬಾ” ಎಂದರು.

“ಬರುತ್ತೇನೆ, ಮಹಾಶಯ; ಖಂಡಿತ ಬರುತ್ತೇನೆ.”

ಲಾಟು ಸ್ವಾಮಿ ಅದ್ಭುತಾನಂದರಾದರು. ಅವರ ತಪಸ್ಸನ್ನು ನೋಡಿ ಸ್ವಾಮಿ ವಿವೇಕಾನಂದರು “ಭಗವಾನ್ ಶ್ರೀರಾಮಕೃಷ್ಣರ ಅದ್ಭುತ ಶಕ್ತಿಯ ಮಹಿಮೆ ಗೊತ್ತಾಗಬೇಕಾದರೆ ಲಾಟುವನ್ನು ನೋಡಿ. ಅಂತಹ ತಪಸ್ವಿ ಅಪೂರ್ವ” ಎಂದರಂತೆ.

ರಾಖಾಲಚಂದ್ರ ಘೋಷನು ಕ್ರಿ.ಶ. ೧೮೬೭ರಲ್ಲಿ ಜನಿಸಿದನು. ಆತನ ತಂದೆ ದೊಡ್ಡ ಜಮೀನ್ದಾರನಾಗಿದ್ದನು. ಬಾಲಕನು ಸುಖದಲ್ಲಿ ಬೆಳೆದು ಕಲ್ಕತ್ತೆಯಲ್ಲಿ ನವೀನ ವಿದ್ಯಾಭ್ಯಾಸ ಮಾಡಿದನು. ಆಗಿನ ಕಾಲದ ಮೇಧಾವಿಗಳಾದ ತರುಣರಂತೆ ಆತನೂ ಬ್ರಾಹ್ಮಸಮಾಜಕ್ಕೆ ಸೇರಿದನು. ಸುಮಾರು ಹದಿನಾರನೆಯ ವಯಸ್ಸಿನಲ್ಲಿ ಆತನಿಗೆ ಮನಮೋಹನ ಮಿತ್ರನ ತಂಗಿಯನ್ನೂ ಕೊಟ್ಟು ಮದುವೆಯಾಯಿತು. ಮನಮೋಹನಮಿತ್ರನಿಂದಲೆ ಮೊತ್ತಮೊದಲು ಪರಮಹಂಸರ ವಿಚಾರವನ್ನು ತಿಳಿದು ಅವರನ್ನು ನೋಡಲು ಕ್ರಿ. ಶ. ೧೮೮೧ರಲ್ಲಿ ದಕ್ಷಿಣೇಶ್ವರಕ್ಕೆ ಬಂದನು. ಪ್ರಥಮದರ್ಶನದಲ್ಲಿಯೆ ಗುರುದೇವನು ತನ್ನ ಪ್ರಿಯಶಿಷ್ಯನ ಗುರುತು ಕಂಡುಹಿಡಿದನು. ರಾಖಾಲನು ಬರುವುದಕ್ಕರ ಕೆಲವು ದಿನಗಳ ಮೊದಲು ಪರಮಹಂಸರಿಗೆ ಒಂದು ದರ್ಶನವಾಗಿತ್ತು. ಆ ದರ್ಶನದಲ್ಲಿ ಜಗನ್ಮಾತೆ ಶಿಶುವೊಂದನ್ನು ತಂದು ಅವರ ತೊಡೆಯಮೇಲೆ ಇಟ್ಟು “ಇದು ನಿನ್ನ ಶಿಶು” ಎಂದಂತಾಯಿತು. ಪರಮಹಂಸರು ಬೆಚ್ಚಿಬಿದ್ದು “ಏನೂ? ನನಗೆಲ್ಲಿಯ ಶಿಶು!” ಎಂದರು. ಜಗನ್ಮಾತೆ ದರಸ್ಮಿತೆಯಾಗಿ “ಇದು ನಿನ್ನ ಧರ್ಮಶಿಶು!” ಎಂದು ಹೇಳಿ ಸಮಾಧಾನ ಮಾಡಿದಳು. ಇದಾದ ಸ್ವಲ್ಪದಿನಗಳಲ್ಲಿ ರಾಖಾಲನು ಬಂದಾಗ ಅವರು ಜಗನ್ಮಾತೆ ಕೊಟ್ಟ ತಮ್ಮ ಧರ್ಮಶಿಶುವನ್ನು ಗುರುತಿಸಿದರು. ಅವರಿಬ್ಬರ ಮೈತ್ರಿ ಅಸಾಧಾರಣವಾಗಿ ಬೆಳೆಯಿತು. ಶ್ರೀರಾಮಕೃಷ್ಣರಲ್ಲಿ ರಾಖಾಲನಿಗಿದ್ದ ಸಲಿಗೆ ಮತ್ತಾವ ಶಿಷ್ಯರಿಗೂ ಇರಲಿಲ್ಲವಂತೆ. ಅವರು ಆತನನ್ನು ನಿತ್ಯಸಿದ್ಧರ ಗುಂಪಿಗೆ ಸೇರಿಸಿದ್ದರು. ರಾಖಾಲನಿಗೆ ಮದುವೆಯಾಗಿದೆ ಎಂಬ ಸಮಾಚಾರವನ್ನು ಕೇಳಿ ಶ್ರೀರಾಮಕೃಷ್ಣರು ಉದ್ವಿಗ್ನರಾಗಿದ್ದರು. ಒಂದು ದಿನ ರಾಖಾಲನ ಪತ್ನಿಯಾದ ಬಾಲವಧು ಪರಮಹಂಸರ ಭಕ್ತರಲ್ಲಿ ಒಬ್ಬಳಾಗಿದ್ದ ತನ್ನ ಅತ್ತೆಯೊಡನೆ ದಕ್ಷಿಣೇಶ್ವರಕ್ಕೆ ಬಂದಳು. ಪರಮಹಂಸರು ಆಕೆಯನ್ನು ಪರೀಕ್ಷಿಸಿ ಆಕೆಯಿಂದ ಪತಿಯ ಧರ್ಮಜೀವನಕ್ಕೆ ಅಡಚಣೆಯಾಗದೆಂದು ತಿಳಿದು ಸಮಾಧಾನ ಹೊಂದಿದರು. ರಾಖಾಲನು ಗುರುವಿನ ಸಾನ್ನಿಧ್ಯದಲ್ಲಿ ದಕ್ಷಿಣೇಶ್ವರದಲ್ಲಿಯೆ ವಾಸಿಸತೊಡಗಿದನು. ಮುಂದೆ ರಾಖಾಲನು ಬ್ರಹ್ಮನಂದರಾಗಿ ಶ್ರೀರಾಮಕೃಷ್ಣ ಮಹಾಸಂಸ್ಥೆಯನ್ನು ಕಟ್ಟಿ ಪೋಷಿಸಿದುದನ್ನು ಕಾಣುತ್ತೇವೆ. ಅದರ ಮಹಾಧ್ಯಕ್ಷತೆ ವಹಿಸಿ.

ರಾಖಾಲ ಬಂದಕಾಲದಲ್ಲಿಯೆ ಮತ್ತೊಬ್ಬ ಶಿಷ್ಯನೂ ಪರಮಹಂಸರೆಡೆಗೆ ಬಂದನು. ಆತನನ್ನು ಗೋಪಾಲದಾದಾ ಎಂದು ಕರೆಯುತ್ತಿದ್ದರು. ಆತನು ಕಾಗದದ ವ್ಯಾಪಾರಿಯಾಗಿದ್ದನು. ತನ್ನ ಪತ್ನಿಯ ಮರಣದಿಂದ ದುಃಖತನಾಗಿ ಮಿತ್ರನೊಬ್ಬನ ಸಲಹೆಯಂತೆ ದಕ್ಷಿಣೇಶ್ಚರಕ್ಕೆ ಬಂದನು. ಬಂದವನು ಶಿಷ್ಯನಾಗಿ ನಿಂತು ಕಡೆಗೆ ಸಂನ್ಯಾಸಿ ಸ್ವೀಕಾರಮಾಡಿ ಸ್ವಾಮಿ ಅದ್ವೈತಾನಂದರಾದರು.

ಕ್ರಿ.ಶ. ೧೮೮೧ನೆಯ ಸಂವತ್ಸರದಲ್ಲಿ ದಕ್ಷಿಣೇಶ್ವರದ ಮಹಾಜ್ಯೋತಿಯ ಬಳಿಗೆ ಮತ್ತೊಂದು ಮಹಾಜ್ಯೋತಿ ಬಂದಿತು. ಆ ಜ್ಯೋತಿಯೆ ಮುಂದೆ ಸ್ವಾಮಿ ವಿವೇಕಾನಂದರೆಂದು ಪ್ರಸಿದ್ಧರಾದ ನರೇಂದ್ರನಾಥ ದತ್ತ. ಶ್ರೀರಾಮಕೃಷ್ಣ ಮತ್ತು ನರೇಂದ್ರರ ಪರಸ್ಪರ ಸಂದರ್ಶನವು ಭೂಮಂಡಲದ ಧರ್ಮಚರಿತ್ರೆಯಲ್ಲಿ ಒಂದು ಮಹಾಸಂಘಟನೆ. ಅದರಿಂದ ಪ್ರಾಚೀನ ಅರ್ವಾಚೀನಗಳೆರಡೂ ಅಭಿಮಾನದ ವಿಷಯವಾದ ಒಂದು ದಿಗ್ವಿಜಯ ಸಂಭವಿಸಿತೆಂದೇ ಹೇಳಬಹುದು. ಆ ಮಹಾ ಸಂದರ್ಶನದ ಅರ್ಥ, ವೈಭವ ಮತ್ತು ಪರಿಣಾಮಗಳು ಪರಮಹಂಸರಿಗೆ ಚೆನ್ನಾಗಿ ತಿಳಿದಿತ್ತು. ಆದ್ದರಿಂದಲೆ ಅವರು ನರೇಂದ್ರನ ಆಗಮನವನ್ನು ವಿಶೇಷರೀತಿಯಿಂದ ಕಂಡರು. ತಮ್ಮ ಅಂತರಂಗ ಶಿಷ್ಯರಲ್ಲಿ ಅಗ್ರಗಣ್ಯನಾದ ಆತನನ್ನು ಕಂಡಕೂಡಲೆ ಕಂಡು ಹಿಡಿದರು. ಹೆಚ್ಚೇನು? ನರೇಂದ್ರನ ಆಗಮನವನ್ನೆ ಕಾತರರಾಗಿ ನಿರೀಕ್ಷಿಸುತ್ತಿದ್ದರು. ಎಂಬುದು ಅವರ ಆಚರಣೆಯಿಂದಲೆ ಗೊತ್ತಾಗುತ್ತದೆ.

ನರೇಂದ್ರನು ಪರಮಹಂಸರೆಡೆಗೆ ಬರುವ ಮೊದಲು ಅವರು ಕಂಡ ಒಂದು ಅದ್ಭುತ ದರ್ಶನವನ್ನು ಅವರ ಮಾತಿನಿಂದಲೆ ವರ್ಣಿಸುತ್ತೇವೆ. ಇಂದಿನ ಕನಸು ನಾಳೆಯ ನನಸು. ಮಹಾತ್ಮರ ಮಹಾಸ್ವಪ್ನಗಳಿಂದಲೆ ಭವಿಷ್ಯತ್ತಿನ ವಾಸ್ತವ ಸಿದ್ಧವಾಗುತ್ತದೆ. ಅದನ್ನು ಕುರಿತು ಅವರು ಹೀಗೆ ಹೇಳಿದ್ದಾರೆ.

“ಒಂದು ಸಾರಿ ಸಮಾಧಿಯಲ್ಲಿದ್ದಾಗ ನನ್ನಾತ್ಮ ಯಾವುದೋ ಒಂದು ಜ್ಯೋತಿಃಪಥದಲ್ಲಿ ಊರ್ಧ್ವಮುಖವಾಗಿ ಹೋಗುತ್ತಿದ್ದಂತೆ ಭಾಸವಾಯಿತು. ಸ್ವಲ್ಪ ಕಾಲದಲ್ಲಿಯೆ ಭವಪ್ರಪಂಚದಿಂದ ಅತೀತನಾಗಿ ಭಾವಪ್ರಪಂಚವನ್ನು ಸೇರಿದೆ. ಮೇಲಮೇಲಕ್ಕೆ ಹೋಗುತ್ತ ಹೋಗುತ್ತ ಹಾದಿಯ ಇಕ್ಕೆಲಗಳಲ್ಲಿಯೂ ಭಾವಶರೀರಿಗಳಾದ ದೇವದೇವತೆಗಳು ಹೊಳೆಯುತ್ತಿದ್ದದು ನನ್ನ ಕಣ್ಣಿಗೆ ಬಿತ್ತು. ಕಡೆಗೆ ಶಾಂತಿಮುದ್ರಿತವಾದ ಭಾವಪ್ರಪಂಚವನ್ನು ದಾಟಿ ನಿರ್ಗುಣವನ್ನು ಪ್ರವೇಶಿಸಿದೆ. ಅಲ್ಲಿ ಯಾವ ವಿಧವಾದ ಸಶರೀರ ಭಾವವೂ ಇರಲಿಲ್ಲ. ದೇವತೆಗಳಿಗೂ ಕೂಡ ಅದು ಅಗಮ್ಯವಾದುದು. ಅತ್ತಕಡೆ ದೃಷ್ಟಿ ಪ್ರಸಾರಮಾಡಲು ಕೂಡ ಅವರು ಹೆದರುತ್ತಾರೆ. ಅಲ್ಲಿ ಇದ್ದಕ್ಕಿದ್ದ ಹಾಗೆ. ಸಮಾಧಿಮಗ್ನರಾಗಿ ಕುಳಿತ ಸಪ್ತ ಋಷಿಗಳು ನನಗೆ ಕಾಣಿಸಿದರು. ಎಲ್ಲ ಮನುಷ್ಯರನ್ನೂ ಎಲ್ಲ ದೇವತೆಗಳನ್ನೂ ಮೀರಿದ ಆತ್ಮದೀಪ್ತಿ ಅವರಲ್ಲಿ ರಂಜಿಸಿತ್ತು. ಅವರನ್ನು ನೋಡಿ ಮನದಲ್ಲಿಯೆ ಸ್ತೋತ್ರ ಮಾಡುತ್ತ ನಿಂತಿರಲು, ಹಠಾತ್ತಾಗಿ ಅಲ್ಲಿ ಅಖಂಡವಾಗಿ ಪ್ರಸರಿಸಿದ್ದ ಜ್ಯೋತಿ ಘನೀಭೂತವಾಗಿ ಒಂದು ದಿವ್ಯ ಶಿಶುವಿನ ಆಕಾರ ತಾಳಿ ಶೋಭಿಸಿತು. ಆ ಶಿಶು ಸಪ್ತರ್ಷಿಗಳಲ್ಲಿ ಒಬ್ಬಾತನ ಬಳಿಗೆ ಬಂದು ತನ್ನ ಮೃದುಕೋಮಲಬಾಹುಗಳಿಂದ ಆತನ ಕುತ್ತಿಗೆಯನ್ನು ಕಟ್ಟಿಕೊಂಡು ಸವಿಗೊರಲಿನಿಂದ ಕರೆಕರೆದು ಋಷಿಯನ್ನು ಸಮಾಧಿ ಸ್ಥಿತಿಯಿಂದ ಕೆಳಗೆಳೆಯಲು ಪ್ರಯತ್ನಿಸಿತು. ಆ ಶಿಶುವಿನ ಮಂತ್ರಸ್ಪರ್ಶಕ್ಕೆ ಋಷಿ ಸಮಾಧಿಯಿಂದ ಜಗುಳ್ದು ತನ್ನ ಪದ್ಮಸದೃಶ ವಿಶಾಲ ನೇತ್ರದ್ವಯಗಳಿಂದ ಹಸುಳೆಯನ್ನು ಅನಿಮೇಶನಾಗಿ ನೋಡಿದನು. ತನ್ನ ಇಷ್ಟಮೂರ್ತಿಯನ್ನು ಸಂದರ್ಶಿಸಿದನೋ ಎಂಬಂತೆ ಆತನ ಮುಖಬಿಂಬ ಪ್ರಫುಲ್ಲ ತೇಜಸ್ವಿಯಾಯಿತು. ಆ ಶಿಶು ಮುಗುಳುನಗೆದೋರಿ “ನಾನು ಕೆಳಗೆ ಹೋಗುತ್ತೇನೆ. ನೀನೂ ಬರಬೇಕು” ಎಂದಿತು. ಋಷಿ ಮಾತಾಡಲಿಲ್ಲ. ಆದರೆ ಸಮ್ಮತಿ ತೋರುವ ಕರುಣಾಮಯ ದೃಷ್ಟಿಯನ್ನು ಬೀರಿ ಹಸುಳೆಯನ್ನು ನೋಡುತ್ತ ನೋಡುತ್ತ ಪುನಃ ಸಮಾಧಿಮಗ್ನನಾದನು. ಆದರೆ ಆತನ ಅಂಶವೊಂದು ಜ್ಯೋತಿರೂಪದಿಂದ ಧರಾಭಿಮುಖವಾಗಿ ಅವತರಿಸುತ್ತಿದ್ದುದನ್ನು ಕಂಡು ವಿಸ್ಮಿತನಾದೆ ನರೇಂದ್ರನನ್ನು ನೋಡಿದಾಕ್ಷಣವೆ ಆ ಋಷಿಯೆಂದು ಗುರುತು ಹಿಡಿದೆ.”

ಆ ದಿವ್ಯಶಿಶು ಯಾರೆಂದು ಸಂದೇಹಪಡಬೇಕಾಗಿಲ್ಲ, ಪರಮಹಂಸರು ಅದನ್ನು ಬಹಿರಂಗವಾಗಿ ಹೇಳದಿದ್ದರೂ ತಮ್ಮ ಅಂತರಂಗ ಶಿಷ್ಯರೊಡನೆ ತಾವೇ ಆ ಶಿಶುವೆಂದು ಸೂಚನೆಕೊಟ್ಡಿದ್ದಾರೆ. ಅವರು ಜೀವಮಾನವೆಲ್ಲವೂ ಶಿಶುವಾಗಿಯೇ ಇದ್ದರು. ಕಠೋರಸಾಧನೆ ತಪಸ್ಸುಗಳನ್ನು ಮಾಡಿ ಸಮನ್ವಯತತ್ತ್ವವನ್ನೇನೊ ಅನುಭವದಿಂದ ಕಂಡುಹಿಡಿದರು. ಆದರೆ ಅದನ್ನು ಲೋಕದಮೇಲೆ ಪ್ರಯೋಗಮಾಡಲು ಉತ್ಸವಮೂರ್ತಿಯೊಂದು ಬೇಕಾಗಿತ್ತು. ಆ ಉತ್ಸವ ಮೂರ್ತಿಗೆ ಅದ್ಭುತ ಮೇಧಾಶಕ್ತಿ, ವೀರ್ಯವತ್ತಾದ ವಾಕ್ಯಕ್ತಿ, ವಜ್ರಸಮನಾದ ಶರೀರಶಕ್ತಿ, ಮಹಾತತ್ತ್ವಗಳನ್ನು ಜೀರ್ಣಿಸಿಕೊಳ್ಳುವ ತಪಸ್ಸು. ಜಗತ್ತನ್ನು ಆಕರ್ಷಿಸುವ ತೇಜಸ್ಸು, ನಾಯಕನಾಗಿ ಅಧಿಕಾರಮಣಿಯಿಂದ ಜನರನ್ನು ನಡೆಸು ಓಜಸ್ಸು, ಎಲ್ಲಕ್ಕಿಂತಲೂ ಮಿಗಿಲಾಗಿ ವಿಶಾಲಹೃದಯ, ಹೃದಯಮಾರ್ದವ, ವಿಶ್ವಪ್ರೇಮ, ಕರುಣೆ, ದಯೆ ಮೊದಲಾದ ಮಹಾಗುಣಗಳು ಅವಶ್ಯಕವಾಗಿದ್ದವು. ನರೇಂದ್ರನು ಮೇಲೆ ಹೇಳಿದ ಗುಣಗಳಿಗೆ ಗಣಿಯಾಗಿದ್ದನು. ಆದ್ದರಿಂದಲೆ ಗುರುದೇವನ ಕಣ್ಮಣಿಯಾದನು.

ಶ್ರೀಮಂತ ಕ್ಷತ್ರಿಯವಂಶದಲ್ಲಿ ಜನಿಸಿ, ರಾಜರಾಜ್ಞಿಸದೃಶ್ಯರಾದ ಪಿತಾಮಾತೆಯರ ಗೌರವಮಯ ನೇತೃತ್ವದಲ್ಲಿ ಬೆಳೆದು, ಪಾಶ್ಚಾತ್ಯ ಸಂಸ್ಕೃತಿಯ ನವೀನ ವಿದ್ಯಾಬ್ಯಾಸಮಾಡಿ ನರೇಂದ್ರನು ಕಲ್ಕತ್ತೆಯ ತರುಣರಲ್ಲಿ ಕೇಸರಿಯಾಗಿದ್ದನು. ಆತನಲ್ಲಿ ಸಿಂಹಸೌಂದರ್ಯವೂ ಹರಿಣಲಾಲಿತ್ಯವೂ ಒಂದುಗೂಡಿದ್ದುವು. ವ್ಯಾಯಾಮ ಶಾಲೆಗಳಲ್ಲಿಯೂ ಕ್ರೀಡಾಸ್ಥಾನಗಳಲ್ಲಿಯೂ ಆತನು ಮುಂದಾಳಾಗಿದ್ದಂತೆಯೆ ಸಂಗೀತ ಸಾಹಿತ್ಯ ದರ್ಶನಶಾಸ್ತ್ರಗಳಲ್ಲಿಯೂ ಆತನು ಅದ್ವತೀಯನಾಗಿದ್ದನು. ತರ್ಕದಲ್ಲಿಯೂ ವಾದದಲ್ಲಿಯೂ ಯಾರಿಗೂ ಬಿಟ್ಟುಕೊಡುತ್ತಿರಲಿಲ್ಲ. ಇಂತಹ ಸರ್ವತೋಮುಖತೆಯ ಫಲವಾಗಿಯೊ ಎಂಬಂತೆ ನಾನಾ ಭಾವರಾಗಗಳಿಂದ ತಾಡಿತವಾದ ಆತನ ಹೃದಯದಲ್ಲಿ ತುಮುಲವೆದ್ದಿತು. ಆಗಿನ ಪ್ರಗತಿಗಾಮಿಗಳಾದ ಯುವಕರ ಪದ್ಧತಿ ಅಥವಾ ಹವ್ಯಾಸದಂತೆ ಆತನೂ ಬ್ರಾಹ್ಮಸಮಾಜಕ್ಕೆ ಸೇರಿ ಅಲ್ಲಿಯೂ ಎಲ್ಲರ ಕಣ್ಣಿಗೆ ಬಂದನು. ಏನುಮಾಡಿದರೂ ಯಾವ ಗ್ರಂಥಗಳನ್ನು ಓದಿದರೂ ಯಾವ ಸಂಸ್ಥೆಗೆ ಸದಸ್ಯನಾದರೂ ಯಾರೊಡನೆ ಎಷ್ಟು ತರ್ಕಮಾಡಿದರೂ ಸೃಷ್ಟಿಯ ಸಮಸ್ಯೆ ಪರಿಹಾರವಾಗಲಿಲ್ಲ. ಹೃದಯದ ಅಶಾಂತಿ ತೊಲಗಲಿಲ್ಲ; ಬೇಗ ಆರಲಿಲ್ಲ; ಜೀವ ಜೀವನ, ಸುಖ, ದುಃಖ, ಜಗತ್ತು, ಈಶ್ವರ ಮೊದಲಾದ ಸಮಸ್ಯೆಗಳು ಬರಬರುತ್ತ ಕರ್ಕಶವಾಗುತ್ತ ಬಂದವು. ಬೆಳಕನ್ನು ಹುಡುಕಿದಷ್ಟೂ ಕತ್ತಲೆ ಹೆಚ್ಚಿದಂತಾಯಿತು. ಕೇಶವಚಂ‌ದ್ರಸೇನ, ಮಹರ್ಷಿದೇವೇಂದ್ರನಾಥ ಠಾಕೂರ ಮೊದಲಾದವರನ್ನು ನಿರ್ದಾಕ್ಷಿಣ್ಯವಾಗಿ ಪ್ರಶ್ನೆ ಮಾಡುದನು. ಅವರ ಉತ್ತರ ಉಪನ್ಯಾಸಗಳಲ್ಲಿ ಯಾವುದೂ ಸಮರ್ಪಕವಾಗಿ ತೋರಲಿಲ್ಲ. ಎದೆಯ ಕುದಿ ನಿಲ್ಲಲಿಲ್ಲ. ಕೊಠಡಿಯ ಬಾಗಿಲುಗಳನ್ನು ಮುಚ್ಚಿಕೊಂಡು ಧ್ಯಾನಮಾಡಿದನು. ಕತ್ತಲೆ ಹೆಚ್ಚಿತೇ ಹೊರತು ಕಡಮೆಯಾಗಲಿಲ್ಲ. ಕಡೆಗೆ ಹತಾಶನಾಗಿ ಸಂದೇಹವಾದಿಯಾಗಲು ಪ್ರಯತ್ನಿಸಿದನು. ಆದರೆ ಅಂತರಂಗದ ವಾಣಿ ಅದನ್ನು ಒಪ್ಪಲಿಲ್ಲ. ನಿಷ್ಪ್ರಯೋಜಕವಾದ ಸೃಷ್ಟಿಯ ಸಮಸ್ಯೆಯ ಪ್ರಶ್ನೆಗಳನ್ನೆಲ್ಲ ಮನಸ್ಸಿನಿಂದ ಆಚೆ ನೂಕಿ ಧನಮಾಜನೆ ಮಾಡಿ ಐಹಿಕಸಂಪದ್ಯುಕ್ಯನಾಗಿ ಕೀರ್ತಿ ಭಾಜನನಾಗುವೆನೆಂದು ಆಲೋಚಿಸಿದನು. ಹೃದಯ ಅದನ್ನೂ ಒಪ್ಪಲಿಲ್ಲ. ಹಾಗಾಗಿ ಹೀಗಾಗಿ ನರೇಂದ್ರನು ತೂಗುಯ್ಯಲೆಯಾದನು.

ಆಗಿನ ತಮ್ಮಸ್ಥಿತಿಯನ್ನು ಕುರಿತು ವಿವೇಕಾನಂದರು ಹೀಗೆ ಹೇಳಿದ್ದಾರೆ – “ರಾತ್ರಿ ನಿದ್ರೆ ಮಾಡುವ ಮೊದಲು ದಿನದಿನವೂ ಎರಡು ಜೀವನ ಚಿತ್ರಗಳು ನನ್ನ ಕಣ್ಣಿನ ಮುಂದೆ ಸುಳಿಯುತ್ತಿದ್ದವು. ಒಂದು ಚಿತ್ರದಲ್ಲಿ, ನಾನು ಶ್ರೀಮಂತನಾಗಿ ಯಶಸ್ವಿಯಾಗಿ ಅಧಿಕಾರ ಮತ್ತು ಗೌರವಗಳಿಂದ ಕೂಡಿದವನಾಗಿ ಲೋಕದ ದೊಡ್ಡ ಮನುಷ್ಯರಲ್ಲಿ ಗಣ್ಯನಾಗಿರುವುದನ್ನು ಕಾಣುತ್ತಿದ್ದೆ. ಅದರಂತಾಗಲು ನನಗೆ ಶಕ್ತಿಯಿರುವುದೂ ಅನುಭವವಾಗುತ್ತಿತ್ತು. ಆದರೆ ಉತ್ತರ ಕ್ಷಣದಲ್ಲಿಯೆ ಮತ್ತೊಂದು ಮಹತ್ತರವಾದ ಚಿತ್ರ ಶೋಭಿಸುತ್ತಿತ್ತು. ಅದರಲ್ಲಿ ನಾನು ಸಂನ್ಯಾಸಿಯಾಗಿ ಕೌಪೀನಧಾರಿಯಾಗಿ ಮಾಧುಕರೀ ಭಿಕ್ಷೆಯಿಂದ ತರುತಲಗಳಲ್ಲಿ ವಾಸಿಸುವಂತೆ ತೋರುತ್ತಿತ್ತು. ಪೂರ್ವಕಾಲದ ಋಷಿಗಳಂತೆ ಹಾಗೆ ಜೀವಿಸುವುದೂ ನನ್ನಿಂದ ಸಾಧ್ಯವೆಂದು ಭಾಸವಾಯಿತು. ಆ ಎರಡು ಚಿತ್ರಗಳಲ್ಲಿ ಎರಡನೆಯದೇ ನನ್ನ ಮನಸ್ಸನ್ನು ಹೆಚ್ಚು ಹೆಚ್ಚಾಗಿ ಆಕರ್ಷಿತು. ಸಂನ್ಯಾಸವಿಲ್ಲದೆ ಸಚ್ಚಿದಾನಂದವು ದುರ್ಲಭವೆಂದು ತೋರಿತು. ಆ ಆಲೋಚನೆಯ ಆನಂದವನ್ನು ಅನುಭವಿಸುತ್ತ ನಿದ್ದೆಹೋಗುತ್ತಿದ್ದೆ. ದಿನ ದಿನವೂ ತಪ್ಪದೆ ಹೀಗಾಗುತ್ತಿತ್ತು.

ನರೇಂದ್ರನು ಇಂತಹ ವಿಷಮಾವಸ್ಥೆಯಲ್ಲಿದ್ದಾಗಲೆ ಕ್ರಿ.ಶ. ೧೮೮೧ ನೆಯ ವರ್ಷದ ನವಂಬರು ತಿಂಗಳಲ್ಲಿ ಮಿತ್ರನೊಬ್ಬನ ಮನೆಯಲ್ಲಿ ನಡೆದ ಒಂದು ಉತ್ಸವದಲ್ಲಿ ಮೊದಲು ಪರಮಹಂಸರ ಕಣ್ಣಿಗೆ ಬಿದ್ದನು. ಅಲ್ಲಿ ನರೇಂ‌ದ್ರನು ಕೆಲವು ಕೀರ್ತನಗಳನ್ನು ಹಾಡಿದನು. ಆ ಕಂಠದಲ್ಲಿ ಆತ್ಮದ ಅತೃಪ್ತಿ ವ್ಯಾಕುಲತೆ ಹಾರೈಕೆಗಳು ಚೆನ್ನಾಗಿ ಹೊರಹೊಮ್ಮುತ್ತಿದ್ದವು. ಪರಮಹಂಸರ ಸುತೀಕ್ಷ್ಣವೈನತೇಯ ದೃಷ್ಟಿ ತಮ್ಮ ಆಗಾಮಿ ಶಿಷ್ಯನನ್ನು ಗೊತ್ತುಹಚ್ಚಿತು. ಆತನನ್ನು ದಕ್ಷಿಣೇಶ್ವರಕ್ಕೆ ಆಹ್ವಾನಿಸಿದರು.

ಕೆಲವು ದಿನಗಳು ಕಳೆದ ಬಳಿಕ ನರೇಂದ್ರನು ತನ್ನ ಕೆಲವು ನಿರಾಲೋಚನೆಯ ಚಂಚಲಸ್ವಭಾವದ ಮಿತ್ರರೊಡಗೂಡಿ ದಕ್ಷಿಣೇಶ್ವರಕ್ಕೆ ಬಂದನು. ಬಂದವನು ಚಿಂತಾಮುದ್ರಿತ ಅಂತರ್ಮುಖಿಯಾಗಿ ಒಂದು ಮೂಲೆಯಲ್ಲಿ ಕುಳಿತನು. ಅಂತರಂಗದ ಮಹಾಶಕ್ತಿಯನ್ನು ಹೊರಸೂಸುತ್ತಿದ್ದ ಆತನ ಸಮುಜ್ವಲ ವಿಶಾಲನೇತ್ರ ದೀಪ್ತಿಯನ್ನು ನೋಡಿ ಪರಮಹಂಸರು “ಕಲ್ಕತ್ತೆಯಲ್ಲಿಯೂ ಇಂಥವನಿದ್ದಾನೆಯೆ?” ಎಂದು ಬೆರಗಾದರು. ಆತನಿಗೆ ಕೀರ್ತನೆಯೊಂದನ್ನು ಹಾಡುವಂತೆ ಹೇಳಿದರು. ನರೇಂದ್ರನು ತನ್ನ ಸ್ವರ್ಗೀಯ ವಾಣಿಯಿಂದ ಹಾಡಿದನು. ಗುರುದೇವನು ಭಾವವಶನಾಗಿ ತಟಕ್ಕನೆ ಮೇಲೆದ್ದು ಆತನ ಕೈಹಿಡಿದು ಉತ್ತರ ದಿಕ್ಕಿನ ವರಾಂಡಕ್ಕೆ ಕರೆದೊಯ್ದು ಬಾಗಿಲು ಹಾಕಿದನು. ಅಲ್ಲಿ ಯಾರೂ ಇರಲಿಲ್ಲ. ಪರಮಹಂಸರು ಆನಂದದಿಂದ ಕಂಬನಿಗರೆಯುವುದನ್ನು ನೋಡಿ ನರೇಂದ್ರನಿಗೆ ಆಶ್ಚರ್ಯವಾಯಿತು. ಬಹುಕಾಲದ ಮಿತ್ರನಿಂತೆ ಆತನನ್ನು ಸಂಭೋದಿಸಿ “ಆಹಾ! ಇಷ್ಟು ತಡಮಾಡಿ ಬಂದೆಯಾ? ನಿನಗಾಗಿ ನಾನೆಷ್ಟು ಕಾದೆ! ನಿನಗೆ ಸ್ವಲ್ಪವೂ ಮರುಕವಿಲ್ಲವೆ? ಐಹಿಕ ವಿಷಯಗಳನ್ನು ಕೇಳಿ ಕೇಳಿ ನನಗೆ ಸಾಕಾಗಿದೆ. ನನ್ನ ಅಂತರಂಗದ ಅನುಭವಗಳನ್ನು ನೀಡಲು ಅಧಿಕಾರಿಯೊಬ್ಬನಿಗಾಗಿ ಕಾಯುತ್ತಿದ್ದೇನೆ” ಎಂದು ಬಿಕ್ಕಿಬಿಕ್ಕಿ ಅಳುತ್ತಾ ಕೈಮುಗಿದುಕೊಂಡು “ದೇವಾ, ನೀನು ನಾರಾಯಣನ ಅಂಶನಾದ ನರಮಹರ್ಷಿ ಎಂದು ನಾನು ಬಲ್ಲೆ. ಜಗತ್ತಿನ ದುಃಖಪರಿಹಾರಕ್ಕಾಗಿ ಅವತಾರ ಮಾಡಿದ್ದೀಯೆ” ಎಂದು ಮೊದಲಾಗಿ ಹೇಳಿದರು. ನರೇಂದ್ರನು ದಿಗ್ಭ್ರಾಂತನಾದನು.”ಇದೇನು ಇವನು ಹೇಳುವುದು? ವಿಶ್ವನಾಥದತ್ತನ ಮಗನಾದ ನನ್ನನ್ನು ನರಮಹರ್ಷಿಯೆಂದು ಕರೆಯುತ್ತಿದ್ದಾನೆ!” ಎಂದು ಸುಮ್ಮನೆ ನಿಂತಿರಲು, ಗುರುದೇವನು ಆತನ ಕೈಹಿಡಿದು ನೀನೊಬ್ಬನೆ ಒಂಟಿಯಾಗಿ ಇಲ್ಲಿಗೆ ಬೇಗ ಬರುತ್ತೇನೆ ಎಂದು ಮಾತುಕೊಡು ಎಂದು ಕಾತರಕಂಠದಿಂದ ಕೇಳಿದನು. ನರೇಂದ್ರನು ಆಗಲಿ ಎಂದು ಮಾತು ಕೊಟ್ಟಮೇಲೆ ಇಬ್ಬರೂ ಹಿಂದಿರುಗಿದರು.

[1]

ಪರಮಹಂಸರು ಅಲ್ಲಿ ನೆರೆದಿದ್ದವರೊಡನೆ ಮಾತನಾಡತೊಡಗಿದರು. ನರೇಂದ್ರನು ಸ್ಥಬ್ದನಾಗಿ ಕುಳಿರತು ಪರೀಕ್ಷಿಸಿದನು. ಆತನ ಆಚರಣೆಯಲ್ಲಿ ಉನ್ಮಾದದ ಚಿಹ್ನೆ ಲವಲೇಶವೂ ಕಾಣಲಿಲ್ಲ. ಅಲ್ಲದೆ ಆತನ ವಚನಗಳಿಂದ ಆತನು ಜ್ಞಾನ ಭಕ್ತಿ ವೈರಾಗ್ಯಗಳ ಮೂರ್ತಿಯಾಗಿ ತೋರಿದನು. ನರೇಂದ್ರನು “ದೇವರಿದ್ದಾನೆಯೆ? ನೀವು ನೋಡಿದ್ದೀರಾ?” ಎಂದು ಪ್ರಶ್ನೆಮಾಡಲು, ಅವರು “ಹೌದು, ನೋಡಿದ್ದೇನೆ. ಆತನನ್ನು ತ್ರಿಕಾಲದಲ್ಲಿಯೂ ನೋಡುತ್ತಿದ್ದೇನೆ. ಈ ಜಗತ್ತನ್ನೂ ನಿಮ್ಮೆಲ್ಲರನ್ನೂ ನೋಡುತ್ತಿರುವುದಕ್ಕಿಂತಲೂ ಸತ್ಯತರವಾಗಿ ಆತನನ್ನು ನೋಡುತ್ತಿದ್ದೇನೆ. ದೇವರನ್ನು ಎಲ್ಲರೂ ಸಾಕ್ಷಾತ್ಕಾರ ಮಾಡಿಕೊಳ್ಳಬಹುದು. ಆದರೆ ಯಾರು ಪ್ರಯತ್ನಮಾಡುತ್ತಾರೆ? ಹೊನ್ನು ಹೆಣ್ಣು ಮಣ್ಣುಗಳಿಗಾಗಿ ಕೊಡಗಟ್ಟಲೆ ಕಣ್ಣೀರು ಸುರಿಸುತ್ತಾರೆ. ಈಶ್ವರನಿಗಾಗಿ ಆಳುವವರು ಯಾರಿದ್ದಾರೆ?” ಎಂದು ಭಾವಪೂರ್ವಕವಾಗಿ ಹೇಳಿದರು. ಗುರುದೇವನ ಉನ್ಮತ್ತನೀ ಜ್ಞಾನಿಯೋ ಒಂದೂ ಅರ್ಥವಾಗಲಿಲ್ಲ. “ಅರ್ಧ ಉನ್ಮತ್ತನಿರಬೇಕು. ಆದರೂ ಮಹಿಮೆಯಿಲ್ಲದೆ ಇಲ್ಲ. ಹುಚ್ಚನಾಗಿದ್ದರೂ ಚಿಂತೆಯಿಲ್ಲ. ಗೌರವಾರ್ಹವಾದ ವ್ಯಕ್ತಿ” ಎಂದು ಕೊಂಡು ನಾನಾ ವಿಧವಾಗಿ ಆಲೋಚಿಸುತ್ತ ಕಲ್ಕತ್ತೆಗೆ ಹಿಂದಿರುಗಿದನು.

ಒಂದು ತಿಂಗಾಳಾದ ಮೇಲೆ ನರೇಂದ್ರನು ಪುನಃ ದಕ್ಷಿಣೇಶ್ವರಕ್ಕೆ ಹೋದನು. ಪರಮಹಂಸರೊಬ್ಬರ ತಮ್ಮ ಮಂಚದ ಮೇಲೆ ಕುಳಿತಿದ್ದರು. ನರೇಂದ್ರನನ್ನು ಆದರಿಂದ ಕರೆದು ತಮ್ಮ ಪಕ್ಕದಲ್ಲಿಯೆ ಕುಳಿತುಕೊಳ್ಳುವಂತೆ ಮಾಡಿದರು. ಉತ್ತರಕ್ಷಣದಲ್ಲಿಯೆ ಭಾವಾವಿಷ್ಟರಾಗಿ ಆರನನ್ನು ಎವೆಯಿಕ್ಕದೆ ನೋಡುತ್ತ ಮೆಲ್ಲನೆ ಬಳಿಸಾರಿ ತಮ್ಮ ದಕ್ಷಿಣ ಪಾದವನ್ನು ಆತನ ಮೈಮೇಲಿಟ್ಟರು. ಅದರಿಂದೊದಗಿದ ಅದ್ಭುತ ಅನುಭವದಿಂದ ನರೇಂದ್ರನು ತತ್ತರಿಸಿದನು.”ಕೊಠಡಿಯಲ್ಲಿದ್ದ ವಸ್ತುಗಳು, ಬಾಗಿಲು, ಗೋಡೆ, ಸಮಸ್ತ ಭವನ. ನನ್ನ ಅಹಂಕಾರ ಎಲ್ಲವೂ ನಡನಡುಗಿ ಕನಸಿನಂತೆ ತೆಳ್ಳಗಾಗಿ ಶೂನ್ಯದಲ್ಲಿ ಲೀನವಾದಂತೆ ತೋರಿದವು. ನಾನು ಸಾಯುತ್ತೇನೆಂದು ಭಾವಿಸಿದೆ. ‘ಅಯ್ಯೋ ನೀವೇನು ಮಾಡುತ್ತಿದ್ದೀರಿ? ನನಗೆ ತಾಯಿತಂದೆಗಳಿದ್ದಾರೆ!’ ಎಂದು ಕೂಗಿಕೊಂಡೆ. ಆಗ ಆತನು ಗಹಗಹಿಸಿ ನಕ್ಕು ನನ್ನೆದೆಯ ಮೇಲೆ ಕೈ ಆಡಿಸಿ “ಸದ್ಯಕ್ಕಿರಲಿ! ಕಾಲ ಬರಲು ಎಲ್ಲ ಬರುತ್ತದೆ” ಎಂದು ಸುಮ್ಮನಾದನು. ಒಡನೆಯೆ  ಆ ಅದ್ಭುತ ಭಯಂಕರ ದರ್ಶನ ಮಾಯವಾಗಿ ಎಲ್ಲವೂ ಮೊದಲಿದ್ದಂತೆಯೆ ಸ್ಥಿರಶಾಂತವಾಯಿತು. ನಾನು ನಾನಾದೆ”.

ತರುವಾಯ ಪರಮಹಂಸರು ಎಂದಿನಂತೆಯೆ ಮಾತುಗಳನ್ನಾಡಿ ನರೇಂದ್ರನನ್ನು ಕಳುಹಿಸಿದರು. ನಾನು ಕನಸಿನಲ್ಲಿ ಕಂಡ ನರಮಹರ್ಷಿ ಈತನೇ ನಿಜವೆ? ನಿಜವಾಗಿದ್ದರೆ ಸಮಾಧಿಯ ಅನುಭವಕ್ಕೆ ಬೆದರಿನೇಕೆ? ಎಂಬ ಸಂದೇಶ ಅವರಿಗೆ ತಲೆದೋರಿತು. ಇನ್ನೋಂದು ಸಾರಿ ನರೇಂದ್ರನು ಬಂದಾಗ ಅದನ್ನು ಪರಿಹಾರ ಮಾಡಿಕೊಂಡರು.

ಇದಾದ ಒಂದು ವಾರದ ಅನಂತರ ನರೇಂದ್ರನು ಮೂರನೆಯ ಸಾರಿ ಅವರಲ್ಲಿಗೆ ಹೋದನು. ಪರಮಹಂಸರು ಆತನನ್ನು ಮುಟ್ಟಿ ಬಾಹ್ಯಪ್ರಜ್ಞಾಶೂನ್ಯನನ್ನಾಗಿ ಮಾಡಿ, ಅವನು ಯಾರು? ಅವನ ನಿಜ ಸ್ವರೂಪವೇನು? ಅವನು ಎಂಲ್ಲಿಂದ ಬಂದದ್ದು? ಈ ಪ್ರಪಂಚದಲ್ಲಿ ಎಷ್ಟು ಕಾಲ ಇರುತ್ತಾನೆ? ಇತ್ಯಾದಿ ಅನೇಕ ಪ್ರಶ್ನೆಗಳನ್ನು ಕೇಳಿ ಸಂಶಯ ಪರಿಹಾರ ಮಾಡಿಕೊಂಡರು. ಎಲ್ಲವನ್ನೂ ನಿರ್ಧಾರ ಮಾಡಿಕೊಂಡು ಮೇಲೆ ದೇವಶಿಲ್ಪಿ ತನ್ನ ಉತ್ಸವ ಮೂರ್ತಿಯನ್ನು ಸಾವಧಾನವಾಗಿ ಕೆತ್ತತೊಡಗಿದನು.

ಇಷ್ಟಾದರೂ ನರೇಂದ್ರನು ಬೇರೆ ಶರಣು ಹೋಗಲಿಲ್ಲ. ಪಾಶ್ಚಾತ್ಯ ವಿಜ್ಞಾನ, ತತ್ತ್ವ, ಮನಶಾಸ್ತ್ರಗಳನ್ನು ಅಧ್ಯಯನಮಾಡಿ, ಜನ್ಮತಃ ಸೂಕ್ಷ್ಮ ಧೀಮತಿಯೂ ವಜ್ರಚಿತ್ತಾನ್ವಿತನೂ ಆಗಿದ್ದ ಆತನು ವಿಚಾರದ ಒರೆಗಲ್ಲಿಗೆ ಹಚ್ಚಿ ನೋಡಿದಲ್ಲದೆ ಅಂಧಶ್ರದ್ದೆಯಿಂದಾಗಲಿ ಭಾವಾವೇಗದಿಂದಾಗಲಿ ಯಾವಿದನ್ನೂ ಸತ್ಯವೆಂದು ಸ್ವೀಕರಿಸುವವನಾಗಿರಲಿಲ್ಲ. ತನ್ನಂತಹ ದೃಢಚಿತ್ತನಿಗೆ ಇಚ್ಛಾಮಾತ್ರದಿಂದ ಅದ್ಭುತ ಅನುಭವಗಳಾಗುವಂತೆ ಮಾಡಬಲ್ಲ ಮನುಷ್ಯನು ಅಸಾಧಾರಣನೆಂದೇನೋ ಭಾವಿಸಿದನು. ಆದರೆ ಆತನನ್ನು ಗುರುವೆಂದು ಒಪ್ಪಲಿಲ್ಲ. ಯಾರ ಶಿಷ್ಯನಾಗಲೂ ಆತನ ಶ್ರೀಮಂತ ಪೌರುಷಕ್ಕೆ ಮನಸ್ಸಿರಲಿಲ್ಲ. ಆದರೂ ನರೇಂದ್ರನು ದಕ್ಷಿಣೇಶ್ವರಕ್ಕೆ ಪದೇ ಪದೇ ಹೋಗುತ್ತಿದ್ದನು.


[1] ಹೆಚ್ಚಿನ ವಿವರಕ್ಕೆ ಶ್ರೀ ಕುವೆಂಪು ಅವರ ‘ಸ್ವಾಮಿ ವಿವೇಕಾನಂದ’ ನೋಡಿ.