ಶ್ರೀರಾಮಕೃಷ್ಣರು ತಮ್ಮ ಶಿಷ್ಯರ ಧ್ಯಾನ ತಪಸ್ಸು ಸಾಧನೆ ಸಿದ್ಧಿಗಳಿಗೆ ಹೇಗೆ ನೆರವಾದರು ಎಂಬುದು ಅವರ್ಣನೀಯವಾಗಿದೆ. ಏಕೆಂದರೆ ಆತ್ಮದ ಸಂಸರ್ಗ ಆಂತರಂಗಿಕವಾದುದು; ಸಂಪೂರ್ಣ ಮಾನಸಿಕವಾದುದು. ಸಾಹಸ ಕಥೆಯನ್ನು ಕುರಿತು ವಿಸ್ತಾರವಾಗಿ ಬರೆದಂತೆ ಅದನ್ನು ಬರೆಯುವುದು ಅಸಾಧ್ಯ. ಉಪದೇಶ ಮತ್ತು ವಾದಗಳಿಂದ ತಿಳಿಸಲು ಸಾಧ್ಯವಲ್ಲದ ದಿವ್ಯಾನುಭವಗಳನ್ನು ಕೆಲವುಸಾರಿ ಸ್ಪರ್ಶದಿಂದಲೂ ಮತ್ತೆ ಕೆಲವುಸಾರಿ ಇಚ್ಛೆಯಿಂದಲೂ ಅನುಭವ ವೇದ್ಯವಾಗುವಂತೆ ಮಾಡಿ ಶಿಷ್ಯರ ಹೃದಯಗಳಲ್ಲಿ ಹುದುಗಿದ್ದ ದಿವ್ಯಶಕ್ತಿ ಮತ್ತು ಚೈತನ್ಯಗಳನ್ನು ಜಾಗ್ರತಗೊಳಿಸಿದ್ದಾರೆ. ಎಂಬುದಕ್ಕೆ ಅನೇಕ ನಿದರ್ಶನಗಳಿವೆ. ಅವುಗಳಲ್ಲಿ ಒಂದೆರಡನ್ನು ಮಾತ್ರ ಇಲ್ಲಿ ಸೂಚಿಸಿ, ಮುಂದೆ ಅವರು ಮಾಡಿದ ಉಪದೇಶ. ಅವರ ಶಿಕ್ಷಣ ಕ್ರಮ. ಅವರ ತತ್ತ್ವ ಮತ್ತು ಅದರ ಪ್ರತಿಪಾದನೆಯ ರೀತಿ ಇವುಗಳನ್ನು ಕುರಿತು ಪ್ರಸ್ತಾಪಿಸುತ್ತೇವೆ.

ನರೇಂದ್ರನಿಗೆ ಗುರುದೇವನ ಸ್ಪರ್ಶಮಾತ್ರದಿಂದ ಎಂತಹ ಪ್ರಚಂಡವಾದ ಅನುಭವಗಳುಂಟಾದವು ಎಂಬುದನ್ನು ಹಿಂದೆಯೇ ಹೇಳಿದ್ದೇವೆ. ನೂರಾರುವಾದಗಳು ಮನಗಾಣಿಸಲರಿಯದೆ ಹೋದ “ಸರ್ವಂ ಖಲ್ವಿದಂ ಬ್ರಹ್ಮ” ಎಂಬ ತತ್ತ್ವವನ್ನು ಆತನು ಕ್ಷಣಮಾತ್ರದಲ್ಲಿ ಅನುಭವದಿಂದ ಅರಿತು ಅದ್ವೈತಿಯಾದನು! ಪರಮಹಂಸರ ದೃಷ್ಟಿಮಾತ್ರದಿಂದ ತಾರಕನ ಹೃದಯದಲ್ಲಿ ಅದ್ಭುತಶಕ್ತಿ ಸಂಚಾರವಾಗಿ, ಈಶ್ವರ ಸಾನ್ನಿಧ್ಯದ ಮಾಧುರ್ಯ ಮಹಿಮೆಯಿಂದ ದೇಹವೆಲ್ಲ ವಿಕಂಪಿಸಿದಂತೆ ಆತನಿಗೆ ಅನುಭವವಾಯಿತು. ಕಾಳೀಪ್ರಸಾದನು ಪರಮಹಂಸರಲ್ಲಿಗೆ ಮೊತ್ತಮೊದಲು ಹೋದಾಗ ಅವರನ್ನು ಮುಟ್ಟಿ ಅಂತರಂಗದಲ್ಲಿ ಉದ್ಭವಿಸಿದ ಮಹಾಶಕ್ತಿಯ ಆವೇಗಕ್ಕೆ ಬಾಹ್ಯಾಪ್ರಜ್ಞಶೂನ್ಯನಾಗಿಬಿಟ್ಟನು. ಲಾಟುವಿಗೆ ದಿವ್ಯಜ್ಞಾನವಾಗಲಿ ಎಂದು ವರಪ್ರದಾನಮಾಡಿದ ಮಾತ್ರದಿಂದ ಆತನಿಗೆ ಜ್ಞೋತಿಯ ದರ್ಶನವಾಯಿತು. ಸುಬೋಧನ ಎದೆಯನ್ನು ಮುಟ್ಟಿ “ಚೈತನ್ಯವಾಗಲಿ” ಎಂದು ಹೇಳಿ. ಆತನ ನಾಲಗೆಯ ಮೇಲೆ ಏನೋ ಮಂತ್ರವನ್ನು ಬರೆದಾಗ ಆತನಲ್ಲಿ ಮಹಾಜ್ಯೋತಿರ್ವಾಹಿನಿ ಪ್ರವಹಿಸಿದಂತಾಗಿ ನೂರಾರು ದೇವತೆಗಳು ಕಣ್ಣಿಗೆ ಮಿಂಚಿ ಬ್ರಹ್ಮಲೀನವಾದಂತಾಗಿ, ಅಹಂಭಾವವೆ ಲಯ ಹೊಂದಲು. ಗುರುದೇವನ ಸ್ಪರ್ಶದಿಮದ ಮೈತಿಳಿದನು. ಗಂಗಾಧರನನ್ನು ಒಂದು ಸಾರಿ ಕಾಳಿಯಗುಡಿಗೆ ಕರೆದೊಯ್ದು” ಇದೋ ನೋಡು ಸಜೀವ ಶಿವ! ” ಎಂದು ಹೇಳಿದಾಗ, ಆತನಿಗೆ ಸಾಕ್ಷಾತ್ ಪರಶಿವನ ದರ್ಶನವಾಯಿತು. ಪವಾಡಗಳಂತಿರುವ ಇಂತಹ ಘಟನೆಗಳು ಕೆಲವಿವೆ, ಆದರೆ ಸಾಮಾನ್ಯವಾಗಿ ಪರಮಹಂಸರು ತಮ್ಮ ಯೋಗಶಕ್ತಿಗಳನ್ನು ಉಪಯೋಗಿಸುತ್ತಿರಲಿಲ್ಲ, ಅವುಗಳನ್ನು ಪ್ರದರ್ಶಿಸುವುದು ಶ್ರೇಯಸ್ಕರವಲ್ಲವೆಂದು ಅವರ ಭಾವನೆಯಾಗಿತ್ತು. ಅಲ್ಲದೆ ಬರಿಯ ದೇವದೇವಿಯರ ದರ್ಶನಗಳಾಗುವುದು. ಉತ್ತಮಜ್ಞಾನದ ಲಕ್ಷಣವಲ್ಲವೆಂದು ಹೇಳಿದ್ದಾರೆ. ದೇವದೇವಿಯರ ದರ್ಶನಲೋಲುಪತೆಯಿದ್ದ ಶಿಷ್ಯರನ್ನು ಎಷ್ಟೋಸಾರಿ ಭಾವಮಾರ್ಗದಿಂದ ಜ್ಞಾನಮಾರ್ಗಕ್ಕೆ ಎಳೆದಿದ್ದಾರೆ. ತತ್ತ್ವಗಳನ್ನು ಪ್ರಯೊಗತಃ ತೋರಿಸಲೇಬೇಕಾದ ಅಗತ್ಯ ಒದಗಿದಾಗ ಮಾತ್ರವೆ ಅವರು ತಮ್ಮ ದಿವ್ಯಶಕ್ತಿಯನ್ನು ಉಪಯೋಗಿಸಿದ್ದಾರೆ. ಎಂಬುದನ್ನು ಜ್ಞಾಪಕದಲ್ಲಿಡಬೇಕು.

ಮೇಲೆಹೇಳಿದ ಉದಾಹರಣೆಗಳಿಂದ ಯಾರಾದರೂ ಪರಮಹಂಸರ ಶಿಷ್ಯರೆಲ್ಲರೂ ಪ್ರಯತ್ನವಿಲ್ಲದೆ ಗುರುವರ್ಯನ ಅನುಗ್ರಹ ಮಾತ್ರದಿಂದಲೆ ಸಿದ್ಧರಾಗಿ ಬಿಟ್ಟರು ಎಂದು ಊಹಿಸಿದರೆ ತಪ್ಪಾಗುತ್ತದೆ. ಏಕೆಂದರೆ, ಸಾಧನೆಯಿಲ್ಲದೆ ಸಿದ್ಧಿಯಿಲ್ಲ ಎಂದು ಅವರು ಘಂಟಾಘೋಷವಾಗಿ ಹೇಳಿದ್ದಾರೆ. ಪ್ರಯತ್ನವಿಲ್ಲದೆ  ಯಾವುದೂ ಆಕಸ್ಮಿಕವಾಗಿ ಲಭಿಸುವುದಿಲ್ಲ. ಆಕಸ್ಮಿಕವೆಂದು ತೋರಿದುದೂ ಕೂಡ ಸ್ವಲ್ಪ ವಿಚಾರಿಸಿ ನೋಡಿದರೆ ಪ್ರಯತ್ನಪೂರ್ವಕವೆಂದು ತೋರಿಬರುತ್ತದೆ. ಗುರುದೇವನ ವಚನವಿದು “ಭಗವದನುಗ್ರಹವೆಂಬ ಮಾರುತ ಹಗಲೂ ಇರುಳೂ ಎಲ್ಲೆಲ್ಲಿಯೂ ಬೀಸುತ್ತದೆ. ನಿನ್ನ ಹೃದಯವೆಂಬ ದೋಣಿಯ ಭಕ್ತಿಪಟವನ್ನು ಪ್ರಯತ್ನದಿಂದ ಬಿಚ್ಚಿದಲ್ಲದೆ ಆ ಕೃಪೆಯ ಮಾರುತ ನಿನ್ನನ್ನು ಮುಂದೆ ಕೊಂಡೊಯ್ಯುವುದಿಲ್ಲ…. ಕರ್ಮವಿಲ್ಲದೆ ದರ್ಶವಿಲ್ಲ, ಈಶ್ವರ ಸಾಕ್ಷಾತ್ಕಾರಕ್ಕೆ ಧ್ಯಾನ ಜಪ ತಪಸ್ಸುಗಳೆ ಕರ್ಮ. ಹಾಲಿನಲ್ಲಿ ಬೆಣ್ಣೆ ಇದೆ ಎಂದು ಗಂಟಲು ಒಣಗುವವರೆಗೂ ಕೂಗಿಕೊಂಡಮಾತ್ರಕ್ಕೆ ಬೆಣ್ಣೆ ದೊರೆಯುವುದೇನು? ಬೆಣ್ಣೆ ಬೇಕಾದರೆ ಸಾಧನೆಮಾಡಬೇಕು “ಓ ಭಗವಂತ, ಓ ಭಗವಂತ” ಎಂದು ಸುಮ್ಮನೆ ಕೂಗಿ ಕಂಠಶೋಷಣೆ ಮಾಡಿಕಪಳ್ಳವುದರಿಂದ ಪ್ರಯೋಜನವಿಲ್ಲ…. ಸಮುದ್ರದಲ್ಲೇನೋ ಮುತ್ತುಗಳಿವೆ. ಮುಳುಗಿ ಗಂಡಾಂತರಗಳನ್ನು ದಾಟಿದಲ್ಲದೆ ಅವುಗಳು ಲಭಿಸುವುದಿಲ್ಲ. ದೇವರಿರುವುದು ಹಾಗೆಯೇ. ಆತನನ್ನು ಹುಡುಕಲು ಅನೇಕ ಕಷ್ಟಗಳಿಗೆ ಗುರಿಯಾಗಬೇಕು….‘ಗಾಂಜಾ, ಗಾಂಜಾ’ ಎಂದು ಸುಮ್ಮನೆ ಕೂಗಿ ಕೊಂಡಮಾತ್ರಕ್ಕೆ ಅಮಲು ಏರುವುದೇನು? ಅದನ್ನು ತಂದು ಅರೆದು ಸಿದ್ಧಮಾಡಿ ಕುಡಿದರೆ ಅಮಲೇರುತ್ತದೆ. ಅಂತೆಯೇ ಸುಮ್ಮನೆ ದೇವರನ್ನು ಕೂಗುವುದರಿಂದ ಪ್ರಯೋಜನವಿರುವುದಿಲ್ಲ. ತಪ್ಪದೆ ಕ್ರಮವಾಗಿ ಉಪಾಸನೆ ಮಾಡಿದರೆ ಆತನು ಪ್ರತ್ಯಕ್ಷನಾಗುತ್ತಾನೆ.

ಹಾಗಾದರೆ ಸಾಧನೆಯ ಬಗೆಯೇನು?

ಎಲ್ಲೆಲ್ಲಿಯೂ ಎಲ್ಲದರಲ್ಲಿಯೂ ಬ್ರಹ್ಮದರ್ಶನಮಾಡಲು ಅಭ್ಯಾಸಿಸುವುದು. ಕೆಲಸಕ್ಕೆ ಬಾರದ, ಕೊನೆಗಾಣದ, ಕಾಲಹರಣಕಾರಿಯಾದ ವಾದವಿವಾದಗಳಿಂದ ಅದು ಸಾಧ್ಯವಿಲ್ಲ.”ನನಗೆ ಬರಿಯ ವಾದಲೋಲುಪತೆಯನ್ನು ಕಂಡರಾಗದು. ಬ್ರಹ್ಮವು ಯುಕ್ತಿಗೆ ಅತೀತವಾದುದು. ಎಲ್ಲವೂ ಬ್ರಹ್ಮವೆಂಬುದೇ ನನ್ನ ನಿತ್ಯಾನುಭವವಾಗಿದೆ. ಹೀಗಿರಲು ವಾದದಿಂದ ಪ್ರಯೋಜನವೇನು? ಮಾವಿನ ತೋಪಿಗೆ ಹೋಗಿ ಹಣ್ಣುಗಳನ್ನು ತಿಂದು ಹೊರಟು ಹೋಗುತ್ತೀಯೆ; ಮರದ ಎಲೆಗಳನ್ನು ಲೆಕ್ಕಮಾಡುತ್ತ ಕುಳಿತುಕೊಳ್ಳುವುದಿಲ್ಲ. ಇಂತಿರಲು ಪುನರ್ಜನ್ಮ, ಮೂರ್ತಿಪೂಜೆ ಇವುಗಳನ್ನು ಕುರಿತು ಕಚ್ಚಾಡಿ ಕಾಲಹರಣ ಮಾಡಬೇಕೆ?” ಆದ್ದರಿಂದ ಮುಖ್ಯವಾಗಿ ಬೇಕಾದದ್ದು ಅಪರೋಕ್ಷಾನುಭೂತಿ. ಪ್ರತ್ಯಕ್ಷಾನುಭವವೆ ಪರಪ್ರಮಾಣ. ನಂಬಿ ಅನುಭವಿಸುವುದಕ್ಕಿಂತ ಅವುಭವಿಸಿ ನಂಬುವುದೇ ಶಾಶ್ವತ ಮತ್ತು ಸತ್ಯ. ಕುರುಡು ನಂಬಿಕೆಯ ಮೇಲೆ ನಿಂತ ಅನುಭವವೂ ಕುರುಡಾದುದೆ. ಸಾಧನೆಯಿಂದ ಬ್ರಹ್ಮ ಸಾಕ್ಷಾತ್ಕಾರವಾದ ತರುವಾಯ ಎಲ್ಲವೂ ಬ್ರಹ್ಮವೆಂಬುದು ಸ್ವಸಂವೇದ್ಯವಾಗುತ್ತದೆ. ಆ ಅನುಭವವು ಕಲ್ಲಿನ ಮೇಲೆ ಕಟ್ಟಿದ ಕಟ್ಟಡದಂತೆ ಸ್ಥಿರವಾಗಿರುತ್ತದೆ.

ವಜ್ರಚಿತ್ತವಿಲ್ಲದೆ ಬ್ರಹ್ಮಸಾಧನೆ ಅಸಾಧ್ಯ.”ನಾಯಮಾತ್ಮಾ ಬಲಹೀನೇನ ಲಭ್ಯಃ” –  ಬಲಹೀನರಿಗೆ ಆತ್ಮಪ್ರಸಾದ ಲಭಿಸುವುದಿಲ್ಲ. ಹಾಗಾಗಬೇಕಾದರೆ ವಜ್ರಶರೀರವೂ ವಜ್ರಚಿತ್ತವೂ ಎರಡೂ ಅವಶ್ಯಕ. ಎಂದರೆ ಬ್ರಹ್ಮಚರ್ಯವು ಅತ್ಯಾವಶ್ಯಕವಾದುದು. ವೀರ್ಯಧಾರಣೆಯೆ ಬ್ರಹ್ಮಚರ್ಯ. ಬ್ರಹ್ಮಚರ್ಯವಿಲ್ಲದೆ ಯಾವ ಶ್ರೇಯಸ್ಸೂ ಇಲ್ಲ ಎಂಬುದು ಶ್ರೀರಾಮಕೃಷ್ಣರ ದೃಢಸಿದ್ಧಾಂತವಾಗಿದೆ. ಬ್ರಹ್ಮಸಾಕ್ಷಾತ್ಕಾರದಲ್ಲಿ ಲೋಕಸೇವೆಗಾಗಲಿ ಅಥವಾ ಇನ್ನಾವ ಶಾಶ್ವತ ಕಾರ್ಯಕ್ಕಾಗಲಿ ಬ್ರಹ್ಮಚರ್ಯವೆ ಮೂಲಶಕ್ತಿ. ಅದರ ಸಾಧನೆಯಿಂದ ದುರ್ಬಲ ಮಾನವನು ಮಹಾ ಬಲಾನ್ವಿತನಾಗಿ ತೇಜಸ್ವಯಾಗಿ ದೇವನಾಗುತ್ತಾನೆ. ಸಿಂಹಬಲವೂ ಇಂದ್ರಿಯ ಸಂಯಮವೂ ಪ್ರಚಂಡ ಮೇಧಾಶಕ್ತಿಯೂ ಅಪ್ರತಿಹತ ಅಧಿಕಾರವಾಣಿಯೂ ಧೈರ್ಯ ಸ್ಥೈರ್ಯ ಸಹನೆ ಆನಂದ ಉತ್ಸಾಹ ಮತ್ತುಳಿದ ಪೌರುಷ ಗುಣಗಣಗಳೆಲ್ಲವೂ ವೀರ್ಯಧಾರಣೆಯಿಂದ ಪ್ರಾಪ್ತವಾಗುತ್ತವೆ. ಕಾಮಜಯದಿಂದ ಎಂತಹ ಅತ್ಯದ್ಭುತವಾದ ದೈವಿಕ ಓಜಸ್ಸು ಉದ್ಭವಿಸುತ್ತದೆ ಎಂಬುದು ಸರ್ವದೇಶದ ಸರ್ವಕಾಲದ ಯೋಗಿ ಮಹರ್ಷಿ ಸಿದ್ಧರೆಲ್ಲರಿಗೂ ತಿಳಿದ ವಿಷಯವಾಗಿತ್ತು ಎಂದು ಇತಿಹಾಸದಿಂದ ಗೊತ್ತಾಗುತ್ತದೆ. ಆದ್ದರಿಂದಲೆ ಮಹಾತ್ಮರೆಲ್ಲರೂ ಬ್ರಹ್ಮಚರ್ಯವನ್ನು ಬೊಧಿಸಿದ್ದಾರೆ.

[1] ಅದರಂರತೆಯೆ ಪರಮಹಂಸರೂ ಕೂಡ ಬ್ರಹ್ಮ ಸಾಕ್ಷಾತ್ಕಾರದಲ್ಲಿ ಇಚ್ಛೆಯುಳ್ಳವರೆಲ್ಲರೂ ಬ್ರಹ್ಮಚರ್ಯವನ್ನು ಕೈಕೊಳ್ಳಲೇ ಬೇಕೆಂದು ತಮ್ಮ ಶಿಷ್ಯರಿಗೆ ಬೋಧಿಸಿದರು. “ಬ್ರಹ್ಮಚರ್ಯಾಭ್ಯಾಸದಿಂದಲೆ ಪರಮ ಶ್ರೇಯೋಲಾಭವಾಗುತ್ತದೆ. ಹನ್ನೆರಡು ವರ್ಷ ಮನೋವಾಕ್ಕಾಯ ಕರ್ಮಗಳಲ್ಲಿ ಬ್ರಹ್ಮಚಾರಿಯಾಗಿದ್ದವನಿಗೆ ಅದ್ಭುತ ಯೋಗಸಿದ್ದಿಯಾಗುತ್ತದೆ. ಕುಂಡಲನೀಶಕ್ತಿ ಎಂಬ ಹೊಸದೊಂದು ಶಕ್ತಿ ಉದ್ದೀಪನವಾಗುತ್ತದೆ. ಅಂತಹವನು ಸರ್ವಜ್ಞನಾಗುತ್ತಾನೆ. ಹಾಗಾಗಲು ಕಾಮಿನೀಕಾಂಚನತ್ಯಾಗವು ಅತ್ಯಂತ ಪ್ರಧಾನವಾದುದು.”

ಎರಡನೆಯದಾಗಿ ನಿಷ್ಕಾಮಕರ್ಮ, ವೈರಾಗ್ಯ. ಲೋಕಸಂಗ್ರಹಕಾರ್ಯ ಮಾಡುವವರು ನಿಸ್ಸಂಗಿಗಳಾಗಿರಬೇಕು. ಎಂತಹ ಮಹತ್ಕಾರ್ಯವಾಗಲಿ ಫಲಾಪೇಕ್ಷೆಯಿಲ್ಲದೆ ರಾಗವಿಲ್ಲದೆ ಕೆಲಸದಲ್ಲಿ ತೊಡಗಬೇಕು. “ಕರ್ಮದಿಂದ ತಪ್ಪಿಸಿ ಕೊಳ್ಳಲಾರೆ.[2] ಏಕೆಂದರೆ, ಪ್ರಕೃತಿಯೆ ನಿನ್ನನ್ನು ಕೆಲಸಕ್ಕೆ ನೂಕುತ್ತದೆ. ಹಾಗಿರಲು ಕರ್ತವ್ಯಕ್ಕಾಗಿ ಕರ್ಮಮಾಡು. ಕಾಮವಿಲ್ಲದೆ ಕರ್ಮಮಾಡಿದೆಯಾದರೆ ಅದು ನಿನ್ನನ್ನು ಭಗವಂತನಲ್ಲಿಗೆ ಕೊಂಡೊಯ್ಯುತ್ತದೆ. ಈಶ್ವರನೆ ಪರಮಪುರುಷಾರ್ಥ.”[3] ನಿಸ್ಸಂಗವೆಂದರೆ ಮನಸ್ಸಿಲ್ಲದೆ ಕಾಟಾಚಾರಕ್ಕೆ ಕೆಲಸಮಾಡುವುದೆಂದು ಅರ್ಥವಲ್ಲ. ವೀತರಾಗನಾಗಿ ನಿಷ್ಕಾಮ ಕರ್ಮಮಾಡುವುದು ಎಂದರ್ಥ. ಆದ್ದರಿಂದ ಲೋಕ ಸಂಗ್ರಹಕ್ಕಾಗಿ ಕರ್ಮ ಮಾಡಬೇಕು.

ಲೋಕಸಂಗ್ರಹವೆಂದರೆ ಲೋಕೋಪಕಾರವೆಂದಲ್ಲ, ಲೋಕಸೇವೆ ಎಂದು. ಪರಮಹಂಸರಿಗೆ “ಉಪಕಾರ” ಎಂಬ ಶಬ್ದವು ಅಸಹನೀಯವಾಗಿತ್ತು ಅದಕ್ಕೆ ಬದಲಾಗಿ “ಸೇವೆ” ಎಂಬ ಪದವನ್ನೆ ಉಪಯೋಗಿಸುತ್ತಿದ್ದರು. ಸರ್ವವ್ಯಾಪಿಯಾದ ಭಗವಂತನಿಗೆ, ಎಲ್ಲರಲ್ಲಿಯೂ ನೆಲಸಿರುವ ಈಶ್ವರನಿಗೆ ಯಾರೂ ಉಪಕಾರ ಮಾಡಲಾರರು. ಸರ್ವಶಕ್ತನಿಗೆ ಉಪಕಾರ ಬೇಕಿಲ್ಲ. ಆದ್ದರಿಂದ ಸೇವೆ ಎಂದುಕೊಂಡು ಕೆಲಸಮಾಡಬೇಕು. “ಉಪಕಾರ” ಎನ್ನುವುದರಲ್ಲಿ ಅಹಂಭಾವವಿದೆ.”ಸೇವೆ” ಎನ್ನವುದು ನಮ್ರತೆಯ ಚಿಹ್ನ. ಲೋಕೋಪಕಾರ ಮಾಡುತ್ತೇವೆ. ಎಂದು ಯಶೋಲೋಭಿಗಳಾಗಿ ವಿಜೃಂಭಿಸಿ ಉಗ್ಗಡಿಸುತ್ತಿದ್ದ ಕೆಲವು ಉದ್ಧತ ಸಮಾಜ ಸುಧಾರಕರನ್ನು ಕಂಡು ಪರಮಹಂಸರು ಕನಿಕರ ಪಡುತ್ತಿದ್ದರು. ಆದ್ದರಿಂದ ತಮ್ಮ ಶಿಷ್ಯರಿಗೆ  ಸೇವಾತತ್ತ್ವವನ್ನೂ ಎಲ್ಲ ಮಾನವರ ದೇವತ್ವವನ್ನು ಸಾರುವ ದರಿದ್ರನಾರಾಯಣ ಸೇವೆಯನ್ನೂ ಉಪದೇಶಮಾಡಿದರು. ಏನು ಮಾಡಿದರೂ ಈಶ್ವರಸೇವೆ ಎಂದು ಎಲ್ಲವನ್ನೂ ಆತನಿಗೆ ಸಮರ್ಪಿಸಬೇಕು. [4]

ತಮ್ಮ ಶಿಷ್ಯರಲ್ಲಿ ಯಾವಾಗಲಾದರೂ ಯಾವುದಾದರೊಂದು ಭಾವದ ಆಧಿಕ್ಯವಾಗಲಿ. ಉತ್ಪ್ರೇಕ್ಷೆಯಾಗಲಿ, “ಅತಿ”ಯಾಗಲಿ ಕಂಡುಬಂದರೆ ಪರಮಹಂಸರು ಅದನ್ನು ಖಂಡಿಸಿ ತಿದ್ದದೆ ಬಿಡುತ್ತಿರಲಿಲ್ಲ. ಸಮನ್ವಯದಂತೆಯೆ ಸಮತ್ವವೂ ಅವರ ಜೀವನಗೀತದ ಮಹಾಪಲ್ಲವಿಯಾಗಿತ್ತು. “ಸಮತ್ವಂ ಯೋಗ ಉಚ್ಯತೇ… ಯೋಗಃ ಕರ್ಮಸುಕೌಶಲಂ….. ತಪಸ್ವಭ್ಯೋsಧಿಕೋ ಯೋಗೀ, ಜ್ಞಾನಿಭ್ಯೋsಪಿ ಮತೋಧಿಕಃ | ಕರ್ಮಿಭ್ಯಶ್ಚಾಧಿಕೋ ಯೋಗೀ ತಸ್ಮಾದ್ಯೋಗೀ ಭವಾರ್ಜುನ” ಎಂದು ಯೋಗೇಶ್ವರನಾದ ಶ್ರೀಕೃಷ್ಣನು ಅರ್ಜುನನಿಗೆ ಹೇಳಿದ್ದಾನೆ. ಮನುಷ್ಯನು ಮನಸ್ಸು, ಹೃದಯ, ಶರೀರಗಳ ಸಮಾವೇಶವಾಗಿದ್ದಾನೆ; ಎಂದರೆ ಆಲೋಚನೆ, ಸಂವೇದನೆ, ಕ್ರಿಯೆ – ಈ ಮೂರೂ ಆತನಲ್ಲಿ ಕೂಡಿವೆ. ಆಲೋಚನೆಯ ಮಾರ್ಗವು ಜ್ಞಾನಯೋಗ; ಸಂವೇದನೆಯ ಮಾರ್ಗವು ಭಕ್ತಿಯೋಗ; ಕ್ರಿಯೆಯ ಮಾರ್ಗವು ಕರ್ಮಯೋಗ. ಪರಮಹಂಸರು ಸರ್ವ ಧರ್ಮಗಳ ಸಮನ್ವಯವನ್ನು ಬೋಧಿಸಿದಂತೆ ಸರ್ವಯೋಗಗಳ ಸಮನ್ವಯವನ್ನೂ ಬೋದಿಸಿದ್ದಾರೆ. ಜ್ಞಾನಮಾರ್ಗವೊಂದರಿಂದಲೆ ಮನುಷ್ಯನು ಶುಷ್ಕನಾಗಬಹುದು. ಭಕ್ತಿಮಾರ್ಗವೊಂದನ್ನೆ ಹಿಡಿದರೆ ದುರ್ಬಲಚಿತ್ತನಾಗಿ ಕಂಡದ್ದಕ್ಕೆಲ್ಲ ಕಣ್ಣೀರು ಕರೆಯುತ್ತ ಶುದ್ಧಮೂರ್ಖನಾದರೂ ಆಗಬಹುದು; ಆಲೋಚನೆ ಸಂವೇದನೆಗಳಿಲ್ಲದ ಕರ್ಮಮಾರ್ಗವಂತೂ ಮನುಷ್ಯನನ್ನು ಯಂತ್ರವಾಗಿ ಮಾಡಿಬಿಡುತ್ತದೆ. ಆದ್ದರಿಂದ ಬುದ್ದಿಶಕ್ತಿ ಪ್ರೇಮಶಕ್ತಿ ಕ್ರಿಯಾಶಕ್ತಿಗಳು ಪರಸ್ಪರೋಪಜೀವಿಗಳಾಗಿ ಒಂದನ್ನೊಂದು ಕೈಬಿಡದೆ ಮುಂದುವರಿದರೆ ಶ್ರೇಯಸ್ಸು.

ಜ್ಞಾನಭ್ರಾಂತನಾಗಿದ್ದ ಕಾಳೀಪ್ರಸಾದನು ಒಂದು ದಿನ ಗಾಳ ಹಾಕಿ ಮೀನು ಹಿಡಿಯುತ್ತಿದ್ದದನ್ನು ಕಂಡು ಪರಮಹಂಸರು” ಏಕಿಷ್ಟು ಕ್ರೂರ ಕರ್ಮಿಯಾಗಿದ್ದೀಯೆ?” ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಅವನು “ನಾನೇನು ಪಾಪ ಮಾಡುತ್ತಿಲ್ಲ. ಎಲ್ಲರಲ್ಲಿರುವುದೂ ಒಂದೇ ಆತ್ಮ; ಆತ್ಮ ಅಚ್ಯುತವಾದದ್ದು. ಆದ್ದರಿಂದ ನಾನೇನೂ ಮೀನುಗಳನ್ನು ನಿಜವಾಗಿಯೂ ಕೊಲ್ಲುತ್ತಿಲ್ಲ” ಎಂದು ಶಾಸ್ತ್ರಪಾಂಡಿತ್ಯ ಪ್ರದರ್ಶನ ಮಾಡಿದನು. ಪರಮಹಂಸರು “ವತ್ಸಾ, ನಿನ್ನನ್ನು ನೀನೆ ವಂಚಿಸಿಕೊಳ್ಳುತ್ತಿದ್ದೀಯೆ. ಎಲ್ಲವೂ ಆತ್ಮವೆಂದು ಅರಿತ ಸಿದ್ಧನು ಅನ್ಯರನ್ನು ಎಂದಿಗೂ ಹಿಂಸಿಸಲಾರನು. ಹಾಗೆ ಮಾಡಲು ಪ್ರಯತ್ನಿಸಿದರೂ ಅವನಿಂದಾಗದು. ತನ್ನ ಹೃದಯವನ್ನು ತಾನೆ ಇರಿದುಕೊಳ್ಳುವುದಿಲ್ಲ. ಹಿಂಸೆಯ ಆಲೋಚನೆಯೂ ಅವನಿಂದ ಅಸಾಧ್ಯ” ಎಂದು ಬುದ್ದಿಹೇಳಿ ಪಾಂಡಿತ್ಯದ ದುರುಪಯೋಗವನ್ನು ತೋರಿಸಿಕೊಟ್ಟರು. ಆದರೆ ಇನ್ನೊಂದು ಸಲ ಅತಿ ದುರ್ಬಲಹೃದಯದವನಾಗಿದ್ದ ಯೋಗೀಂದ್ರನಾಥನು ತಿಗಣೆಯನ್ನು ಕೊಲ್ಲದೆ ಬಿಟ್ಟುಬಿಡಲು ಹೃದಯ ದೌರ್ಬಲ್ಯವು ಕರುಣೆಯ ಚಿಹ್ನೆಯಲ್ಲ ಎಂದು ಎಚ್ಚರಿಕೆ ಕೊಟ್ಟರು.

ಶಾಸ್ತ್ರಜ್ಞಾನದ ತಪ್ಪುತಿಳುವಳಿಕೆಯಿಂದ ಆಗುವ ಪ್ರಮಾದವನ್ನು ಸೂಚಿಸಲು ಒಂದುಕಥೆ ಹೇಳಿದ್ದಾರೆ:

ಒಂದು ವನದಲ್ಲಿ ಸಾಧುವೊಬ್ಬನು ಆಶ್ರಮ ಮಾಡಿಕೊಂಡಿದ್ದನು. ಆತನಿಗೆ ಅನೇಕ ಶಿಷ್ಯರಿದ್ದರು. ಗುರು ಒಂದು ದಿನ ಶಿಷ್ಯರಿಗೆ ತತ್ತ್ವ ಬೋಧನೆಮಾಡುತ್ತ “ಸರ್ವವೂ ಬ್ರಹ್ಮ. ಆದ್ದರಿಂದ ಪ್ರತಿಯೊಂದು ವಸ್ತುವನ್ನೂ ಬ್ರಹ್ಮವೆಂದೇ ತಿಳಿದು ನಮಸ್ಕಾರಮಾಡಬೇಕು” ಎಂದು ಹೇಳಿದನು. ಉಪದೇಶವಾದ ತರುವಾಯ ಶಿಷ್ಯರಲ್ಲಿ ಕೆಲವರು ಸಮಿತ್ತುಗಳನ್ನು ಆಯ್ದುತರಲೆಂದು ಹೊರಗೆ ಹೋದರು. ಇದ್ದಕ್ಕಿದ್ದ ಹಾಗೆ “ದಾರಿಬಿಡಿ! ದಾರಿಬಿಡಿ!” ಎಂಬ ಸದ್ದು ಕೇಳಿಸಿತು. ತಲೆಯೆತ್ತಿ ನೋಡುತ್ತಾರೆ, ಮದಿಸಿದ ಆನೆಯೊಂದು ತಮ್ಮ ಕಡೆಗೆ ಧಾವಿಸಿ ಬರುತ್ತಿತ್ತು. ! ಅದರ ಮೇಲೆ ಕುಳಿತ ಮಾವಟಿಗನು ದಾರಿಯಲ್ಲಿದ್ದ ಜನರಿಗೆ “ದಾರಿಬಿಡಿ! ಅಪಾಯ!” ಎಂದು ಕೂಗಿ ಹೇಳುತ್ತಿದ್ದನು. ಒಬ್ಬ ಶಿಷ್ಯ ಹೊರತು ಉಳಿದವರೆಲ್ಲರೂ ದಾರಿಬಿಟ್ಟು ಓಡಿದರು. ನಿಂತವನು ಹೀಗೆಂದು ತರ್ಕಮಾಡಿದನು; ಆನೆಯೂ ಬ್ರಹ್ಮ, ನಾನೂ ಬ್ರಹ್ಮ. ಬ್ರಹ್ಮ. ಬ್ರಹ್ಮಕ್ಕೆ ಹೆದರಲೇಕೆ? ಗುರು ಹೇಳಿದಂತೆ ಸರ್ವವೂ ಬ್ರಹ್ಮವೆಂದು ನಮಸ್ಕಾರಮಾಡಬೇಕು ಎಂದು ಆಲೋಚಿಸಿ ಕೈಮುಗಿದು ನಿಂತನು. ಆನೆ ನುಗ್ಗಿ ಬಂದಿತು. ಮಾವಟಿಗನು “ದಾರಿಬಿಡು, ಸಾಯುತ್ತೀಯೆ” ಎಂದು ಕೂಗಿಕೊಂಡನು. ಆದರೂ ಅವನು ಕದಲಲಿಲ್ಲ. ಆನೆ ಅವನನ್ನು ಸೊಂಡಿಲಿನಿಂದ ಹಿಡಿದು ದೂರ ಎಸೆದು, ಮುಂದೆ ನುಗ್ಗಿ ನಡೆಯಿತು. ಪಾಪ, ಶಿಷ್ಯನು ಮೈಯೆಲ್ಲಾ ನುಗ್ಗುನುರಿಯಾಗಿ ಜ್ಞಾನತಪ್ಪಿ ರಕ್ತಮಯವಾಗಿ ಬಿದ್ದನು. ಗುರುಗಳಿಗೆ ಈ ಸುದ್ದಿ ಮುಟ್ಟಲು ಅವರು ಶಿಷ್ಯಸಮೇತರಾಗಿ ಅಲ್ಲಿಗೆ ಬಂದು ಜ್ಞಾನತಪ್ಪಿಹೋಗಿದ್ದ ಶಿಷ್ಯನನ್ನು ಎತ್ತಿಕೊಂಡು ಹೋಗಿ ಶುಶ್ರೂಷೆ ಮಾಡಿದರು. ಸ್ವಲ್ಪ ಹೊತ್ತಿನ ಮೇಲೆ ಆತನಿಗೆ ಎಚ್ಚರವಾಯಿತು. ಆಗ ಗುರುಗಳು”ವತ್ಸಾ, ಅದೇಕೆ ದಾರಿಬಿಟ್ಟು ಹೋಗದೆ ಅಪಾಯಕ್ಕೆ ಗುರಿಯಾದೆ? ಮಾವಟಿಗನು ಕೂಗಿದ್ದು ಕೇಳಿಸಲಿಲ್ಲವೆ? ಎಂದು ಕೇಳಲು. ಶಿಷ್ಯನೆಂದನು: “ಗುರುಗಳೆ, ಸರ್ವವೂ ಬ್ರಹ್ಮವೆಂದು ಉಪದೇಶ ಮಾಡಿದ್ದೀರಿ, ಆನೆಯನ್ನೂ ಬ್ರಹ್ಮವೆಂದು ಭಾವಿಸಿ ಅಲುಗಾಡದೆ ನಿಂತುಬಿಟ್ಟೆ”. ಅದನ್ನಾಲಿಸಿ ಗುರುಗಳು ವ್ಯಥೆಯಿಂದ “ವತ್ಸಾ ಓಡಿಬಂದುದೇನೊ ಗಜಬ್ರಹ್ಮವೆ ದಿಟ. ಆದರೆ ಅದರ ಮೇಲಿದ್ದ ಮಾವಟಿಗ ಬ್ರಹ್ಮವು ದಾರಿಬಿಡುವಂತೆ ನಿನಗೆ ಕೂಗಿ ಹೇಳಲಿಲ್ಲವೆ? ಸರ್ವವೂ ಬ್ರಹ್ಮವೆಂಬುದು ಸತ್ಯ. ಆದರೆ ಆನೆ ಬ್ರಹ್ಮವಾದರೆ ಮಾವಟಿಗನೂ ಬ್ರಹ್ಮವಲ್ಲವೆ? ಮಾವಟಿಗ ಬ್ರಹ್ಮನ ಮಾತನ್ನೇಕೆ ಕೇಳಲಿಲ್ಲ? ಎಂದರು.

ಈ ಸಾಮತಿಯಲ್ಲಿ ಶಾಸ್ತ್ರಪಾಂಡಿತ್ಯವನ್ನು ವಿವೇಕಶೂನ್ಯರಾಗಿ ಉಪಯೋಗಿಸಿದರೆ ಎಂತಹ ಪ್ರಮಾದವಾಗುತ್ತದೆ ಎಂಬ ನೀತಿ ಎಷ್ಟು ಚೆನ್ನಾಗಿ ಒಡೆದು ಮೂಡಿರುತ್ತದೆ! ಹಾಗೆಯೆ ಇನ್ನೊಂದು ಸಾರಿ” ಹುಲಿಯಲ್ಲಿಯೂ ಕೂಡ ಭಗವಂತನಿರುವುದೇನೊ ನಿಜವಾದರೂ ನಾವು ಅದರ ಮುಂದೆ ಹೋಗಿ ಹೇಗೆ ನಿಲ್ಲಲಾಗದೊ ಆ ತೆರನಾಗಿಯೆ ಅತ್ಯಂತ ದುಷ್ಟಾತ್ಮರಲ್ಲಿಯೂ ಕೂಡ ದೇವರಿರುವುದು ಸತ್ಯವಾದರೂ ಅಂತಹವರೊಡನೆ ಸಂಗ ಬೆಳೆಯಿಸುವುದು ಸರಿಯಲ್ಲ” ಎಂದು ಹೇಳಿದ್ದಾರೆ.

ಪರಮಹಂಸರು ಬರಿಯ ಶಾಸ್ತ್ರಪಾಂಡಿತ್ಯದಿಂದ ಸಂಭವಿಸುವ ಅವಿವೇಕವನ್ನು ಖಂಡಿಸಿದ್ದಾರೆಯೆ ಹೊರತು ನಿಜವಾದ ಜ್ಞಾನವನ್ನು ಖಂಡಿಸಿಲ್ಲ. ಶುದ್ಧಬುದ್ದಿಯ ವಿಚಾರಮಾರ್ಗವು ಶ್ರೇಷ್ಠತವೆಂದು ಅವರ ಅಭಿಪ್ರಾಯ. ಮತಿ ಸರ್ವೋತ್ಕೃಷ್ಟವಾದ ಆಯುಧ. ನಿಜವಾದ ಭಕ್ತಿ ಜ್ಞಾನಮಿಶ್ರಿತವಾಗಿರಬೇಕು. ಮತಿಹೀನವಾದ ಭಕ್ತಿ ದುಷ್ಪರಿಣಾಮಕಾರಿ. ವಿವೇಕವಿಚಾರ ವಿರಹಿತವಾದ ಬುದ್ದಿ ವಿಹೀನತೆ, ಚಿತ್ತೋನ್ಮಾದ, ಹೃದಯೋದ್ರೇಕ ಅಥವಾ ಸ್ವಮತಭ್ರಾಂತಿಗೆ ಧರ್ಮಾವೇಶವೆಂದೂ ಶ್ರುತಿಭಕ್ತಿಯೆಂದೂ ಅಂತಃಸ್ಫೂರ್ತಿಯೆಂದೂ ಅಥವಾ ಈಶ್ವರವಾಣಿಯೆಂದೂ ಹೆಸರಿಟ್ಟುಕೊಂಡು ಮಂದಮತಿಗಳನೇಕರು ಮತದ ಹೆಸರಿನಲ್ಲಿಯೂ ದೇವರ ಹೆಸರಿನಲ್ಲಿಯೂ ಧರ್ಮದ ಹೆಸರಿನಲ್ಲಿಯೂ ನಾಗರಿಕತೆಗೆ ಹಾನಿಕರವಾದ ಅನೇಕ ಮಹಾಪರಾಧಗಳನ್ನು ಹಿಂದೆ ಮಾಡಿರುತ್ತಾರೆ; ಇಂದೂ ಮಾಡುತ್ತಿದ್ದಾರೆ; ಸನ್ನಿವೇಶವನ್ನು ಪರೀಕ್ಷಿಸಿದರೆ ಮುಂದೆಯೂ ಮಾಡುತ್ತಾರೆಂದು ತೋರುತ್ತದೆ. ಮನುಷ್ಯನು ಸಾಧಾರಣವಾಗಿ ರಾಗಜೀವಿ, ಹೃದಯವು ಪ್ರೇರಿಸಿದಂತೆ ಕೆಲಸಮಾಡುವವರೇ ಬಹಳಮಂದಿ. ಮತಿ ವಿಚಾರಮಾಡಿ ತೋರಿದಂತೆ ಕೆಲಸಮಾಡುವವರು. ಅತಿವಿರಳ. ಅವಿವೇಕಕ್ಕೂ ಭಕ್ತಿಗೂ ಕೆಲವು ವೇಳೆ ಭೇದವೆಇರುವುದಿಲ್ಲ. ಯೆಹೂದ್ಯರ ಶ್ರುತಿಮತ ಭಕ್ತಿಯಿಂದಲ್ಲವೆ ಯೇಸುಕ್ರಿಸ್ತನು ಶಿಲುಬೆಗೇರಿದುದು? ಗ್ರೀಕ್ ಜನರ ಮತಿ ಭ್ರಾಂತಿಯಿಂದಲ್ಲವೆ ಮತಿಯನ್ನೆ ಅನುಸರಿಸಿದ ಮಹಾಜ್ಞಾನಿ ಸಾಕ್ರಟೀಸನು ವಿಷಪಾನಮಾಡಿ ಮಡಿಯಬೇಕಾದುದು? ಕ್ರೈಸ್ತರ ಬೈಬಲ್ – ಭಕ್ತಿಯಿಂದಲ್ಲವೆ ನೂತನ ಸತ್ಯಗಳನ್ನು ಕಂಡುಹಿಡಿದ ವಿಜ್ಞಾನ ಶಾಸ್ತ್ರಜ್ಞರು ಜೀವಸಹಿತ ಅಗ್ನಿ ಸಂಸ್ಕಾರ ಹೊಂದಬೇಕಾದದ್ದು? ಭರತಖಂಡದಲ್ಲಿಯೂ ಕೂಡ ವಿವೇಕಹೀನರೂ ಸ್ವಾರ್ಥಪರರೂ ಸಂಪ್ರದಾಯ ಶರಣರೂ ಆದ” ವೈದಿಕ” ರ ಸಂಕುಚಿತಭಾವ ಮೂಲವಾದ ಧರ್ಮ ಶಾಸ್ತ್ರದಾಸ್ಯದಿಂದಲೆ ಸಹಸ್ರಾರು ಅಮೃತ ಪುತ್ರ ಸಮಾನ ಮಾನವರು ಪಶುಗಳಿಗಿಂತಲೂ ನೀಚವೆಂದು ಪರಿಗಣಿತರಾಗಿ ಅಂತ್ಯಜರಾಗಿರುವುದು? ಸರ್ವಮಾನವ ಭ್ರಾತೃತ್ವವನ್ನು ಸಾರುವ ಮುಸಲ್ಮಾನರೂ ಜಗದೀಶ್ವರನ ಹೆಸರಿನಿಂದಲ್ಲವೆ ಕಾಫರನ ಕೊಲೆ ಸ್ವರ್ಗದಾಯಕವೆಂದು ತಿಳಿದಿರುವುದು? ಮನುಷ್ಯನು ಬುದ್ದಿಗೆ ಸ್ವಲ್ಪ ಪ್ರಾಧಾನ್ಯಕೊಟ್ಟಿದ್ದರೆ ಅಂಧಶ್ರದ್ದೆಯಿಂದ ಜರುಗುವ ಇಂತಹ ಅನಾಹುತಗಳು ಬಹುಮಟ್ಟಿಗ ಕಡಮೆಯಾಗುತ್ತಿದ್ದವು. ಈಶ ರಾಜ್ಯಕ್ಕೆ ಈಶಭಕ್ತಿಯೆ ಕಂಟಕವಾಗಿರುವುದು ಶೋಚನೀಯ ವಿಷಯವಾಗಿದೆ! ಇದನ್ನು ಚೆನ್ನಾಗಿ ಮನಗಂಡ ಶ್ರೀರಾಮಕೃಷ್ಣರು ವಿಚಾರವಿಲ್ಲದ ಭಕ್ತಿ ವಿನಾಶಕಾರಿಯಾದುದೆಂದು ಸಾರಿದ್ದಾರೆ.

ವಿಚಾರವಿಲ್ಲದ ಭಕ್ತಿ ಸಮಷ್ಟಿದೃಷ್ಟಿಯಿಂದ ಮಾತ್ರವಲ್ಲದೆ ವ್ಯಷ್ಟಿ ದೃಷ್ಟಿಯಿಂದಲೂ ಹಾನಿಕರವಾದುದು. ವೇದವಾಗಲಿ ಶಾಸ್ತ್ರವಾಗಲಿ, ಗುರುವಾಗಲಿ ಅವತಾರವಾಗಲಿ, ಯಾರೆ ಆಗಲಿ ಹೇಳಿದ ವಾಕ್ಯಗಳನ್ನು ವಿಮರ್ಶೆಮಾಡುವ ಹಕ್ಕು ಮಾನವನದಾಗಿದೆ. ಹಾಗಲ್ಲದಿದ್ದರೆ ಆತನಿಗೆ ಮೆದುಳು ಬೇಕಿರಲಿಲ್ಲ; ಬೆನ್ನುಮೂಳೆಯೊಂದೇ ಸಾಕಿತ್ತು. ಆಚಾರ್ಯರಲ್ಲಿಯೂ ಕೂಡ ಮೇಧಾವಿಗಳಾದ ಕೆಲವರು ಶಬ್ದಪ್ರಾಮಾಣ್ಯವನ್ನು ತುದಿಗೆ ಹಾಕಿದ್ದಾರೆ. ಭಗವಾನ್ ಶ್ರೀಕೃಷ್ಣನೂ ಕೂಡ ಉತ್ತಮ ಪುರುಷ ಏಕವಚನದ ವಾಣಿಯಿಂದ ಅಧಿಕಾರಯುಕ್ತವಾಗಿ ಪಾರ್ಥನಿಗೆ ಭಗವದ್ಗೀತೆಯನ್ನು ಬೋಧಿಸಿ ತುದಿಯಲ್ಲಿ;

ಇತಿ ತೇ ಜ್ಞಾನಮಾಖ್ಯಾತಂ ಗುಹ್ಯಾದ್ಗುಹ್ಯತರಂ ಮಯಾ |
ವಿಮೃಆಶ್ಯೈತದಶೇಷೇಣ ಯಥೇಚ್ಛಸಿ ತಥಾ ಕುರು |

ಇಂತು ರಹಸ್ಯಕ್ಕಿಂತಲೂ ರಹಸ್ಯವಾದ ಜ್ಞಾನವನ್ನು ನಾನು ನಿನಗೆ ತಿಳಿಸಿದ್ದೇನೆ; ಅದನ್ನು ಕೂಲಂಕಷವಾಗಿ ವಿಮರ್ಶೆಮಾಡಿ ಸೂಕ್ತತೋರಿದಂತೆ ವರ್ತಿಸು!” ಎಂದು ತನ್ನ ಮಹಾವಾಣಿಯನ್ನು ಕೂಡ ವಿಚಾರದ ಒರೆಗಲ್ಲಿಗೆ ಹಚ್ಚಿ ಪರೀಕ್ಷಿಸುವಂತೆ ಹೇಳಿದ್ದಾನೆ. ಅಂತೆಯೆ ಪರಮಹಂಸರೂ ತಮ್ಮ ಅನುಭವಗಳನ್ನು  ಅಂಧಶ್ರದ್ಧೆಯಿಂದ ಅನುಸರಿಸುವ ಶಿಷ್ಯರನ್ನು ಬಿಟ್ಟು ತೀಕ್ಷ್ಣ ಬುದ್ದಿಯಿಂದ ಪರೀಕ್ಷಿಸುವ ಶಿಷ್ಯರನ್ನೆ ಬಯಸಿರೆಂದು ಹಿಂದೆ ಹೇಳಿದ್ದೇವೆ. ಆದ್ದರಿಂದ ಕಂಡ ಕಂಡ ಪುರೋಹಿತರ ಕುಜ್ಞಾನಜನ್ಯವಾದ ಗೊಡ್ಡುಹರಟೆಗಳನ್ನು ವೇದವಾಕ್ಯವೆಂದು ನಂಬಿದರೆ ಅನರ್ಥಕರವಾಗುತ್ತದೆ. ಎಷ್ಟೋಜನರು ಮೂರ್ಛೆರೋಗ, ನರಗಳ ಜಾಡ್ಯ, ಎದೆಗೇಡಿನ ಮೊದಲಾದ ರೋಗ ರುಜೆಗಳನ್ನು ಈಶ್ವರಭಕ್ತಿಯಿಂದ ಪ್ರಾಪ್ತವಾದ ಮಹಾಭಾವಗಳೆಂದು ಭ್ರಮಿಸಿ ಆರಾಧಿಸುತ್ತಿದ್ದಾರೆ. ವೈದ್ಯರ ಔಷಧಿಗಳಿಂದ ಸುಲಭವಾಗಿ ಗುಣವಾಗುವ ಜಾಡ್ಯಗಳನ್ನು ದೇವರಿಗೆ ಕಾಣಿಕೆ ಕಟ್ಟಿ ಅಥವಾ ಪೂಜಾರಿಗಳಿಗೆ ದುಡ್ಡು ಕೊಟ್ಟು ಉಲ್ಬಣಾವಸ್ಥೆಗೆ ಬರುವಂತೆ ಮಾಡಿಕೊಳ್ಳುತ್ತಾರೆ. ಮತ್ತೆ ಕೆಲವರು ಭಕ್ತಿಯ ಹೆಸರಿನಲ್ಲಿ ಶುದ್ಧ ಮೂರ್ಖರಾಗುತ್ತಾರೆ. ವ್ಯವಹಾರದ ಜೀವನದಲ್ಲಿ ಪೆದ್ದುಪೆದ್ದಾಗಿ ವರ್ತಿಸುವುದು ಅಲೌಕಿಕ ಭಕ್ತಿಯ ಮತ್ತು ಧರ್ಮ ಜೀವನದ ಚಿಹ್ನೆಗಳೆಂದು ತಿಳಿದು ಮೋಸಹೋಗುತ್ತಾರೆ. ಕೆಲವರಿಗಂತೂ ಅಜಾಗರೂಕತೆಯೆ ಅಧ್ಯಾತ್ಮ ಜೀವನದ ಲಕ್ಷಣವಾಗಿ ಹೋಗಿದೆ! ಇಂತಹ ಶೋಚನೀಯ ಸ್ಥಿತಿಯನ್ನು ಪರಮಹಂಸರು ಉಗ್ರವಾಗಿ ಖಂಡಿಸಿದ್ದಾರೆ.

ಒಂದು ದಿನ ಶಿಷ್ಯನಾದ ಯೋಗೀಂದ್ರನಾಥನು ಗುರುದೇವನಿಗಾಗಿ ಒಂದು ತಟ್ಟೆಯನ್ನು ಕೊಂಡುಕೊಂಡು ಬರಲು ಪೇಟೆಗೆ ಹೋದನು. ಆತನದು ಸ್ವಭಾವತಃ ಮೃದುಹೃದಯವಾಗಿತ್ತು. ಜನರೆಲ್ಲರೂ ತನ್ನಂತೆಯೆ ಮಹಾಭಕ್ತರೆಂದು ತಿಳಿದಿದ್ದನು. ಅಂಗಡಿಗೆ ಹೋಗಿ ಮಾರುವವನ ಧರ್ಮಬುದ್ದಿಗೆ ಅಹವಾಲು ಮಾಡಿ ಒಂದು ಒಳ್ಳೆಯ ತಟ್ಟೆಯನ್ನು ಕೊಡುವಂತೆ ಪ್ರಾರ್ಥಿಸಿ, ಅವನು ಕೊಟ್ಟುದನ್ನು ತೆಗೆದುಕೊಂಡು ಬಂದನು. ಕಡೆಗೆ ನೋಡುವಲ್ಲಿ ಆ ತಟ್ಟೆ ಬಿರುಕು ಬಿಟ್ಟಿತ್ತು! ಪರಮಹಂಸರು “ಭಕ್ತನಾಗು ಎಂದರೆ ಮೂರ್ಖನಾಗಬೇಕೆ? ಹಣ ಸಂಪಾದನೆಗೆಂದು ವ್ಯಾಪಾರ ಮಾಡುವವನು ಧರ್ಮಾಧರ್ಮಗಳನ್ನು ನೋಡುತ್ತಾನೆಯೆ? ನೀನು ಅವನನ್ನು ನಂಬಿದ್ದು ಮುಟ್ಟುಹಾಳ ಕೆಲಸ! ತಟ್ಟೆಯನ್ನು ಚೆನ್ನಾಗಿ ಪರೀಕ್ಷಿಸಿ ಕೊಂಡು ಕೊಳ್ಳಬೇಕಾಗಿತ್ತು. ಮುಂದೆಯಾದರೂ ಹೀಗೆ ಮೋಸಹೋದೀಯೆ! ಎಚ್ಚರಿಕೆ! ಏನಾದರೂ ಕೊಂಡುಕೊಳ್ಳಬೇಕಾದರೆ ಮೊದಲು ನಾಲ್ಕೈದು ಕಡೆ ಅದರ ಬೆಲೆಯನ್ನು ವಿಚಾರಿಸಿ, ಪದಾರ್ಥವನ್ನು ಚೆನ್ನಾಗಿ ಪರೀಕ್ಷಿಸಿ, ಚೌಕಾಸಿ ಮಾಡಿ ಕೊಂಡು ಕೊಳ್ಳಬೇಕು. ಧರ್ಮಶ್ರವಣ ಮಾಡಿಸಿ ಕೇಳಿದಷ್ಟು ಬೆಲೆಕೊಟ್ಟು ಒಡಕಲು ಬಿರುಕಲನ್ನು ಕೊಂಡು ಪೆಚ್ಚಾಗಬಾರದು. ಸಿಕ್ಕುವುದಾದರೆ ಕೊಸರನ್ನು ಕೂಡ ಬಿಡಬಾರದು!” ಎಂದು ಬುದ್ದಿಹೇಳಿ ಭರ್ತ್ಸನೆ ಮಾಡಿದರು; ಬಹುಶಃ ಅರ್ಧಕ್ಷಣದ ಹಿಂದೆ ಸಮಾಧಿಮಗ್ನನಾಗಿದ್ದ ಗುರುದೇವನ ಬಾಯಲ್ಲಿ ಇಂತಹ ಲೊಕ ವ್ಯವಹಾರದ ವಚನಗಳು ಬಂದುದು ಸೋಜಿಗವಾಗಿದೆ! ಆದರೂ ಅದು ಅವರ ಸರ್ವತೋಮುಖವಾದ ವಿಶಾಲ ದೃಷ್ಟಿಗೆ ಸಾಕ್ಷಿಯಾಗಿದೆ.

ಇನ್ನೊಂದು ಸಾರಿ ಯೋಗೀಂದ್ರನಾಥನು ಗುರುನಿಂದೆಯನ್ನು ಕೇಳಿಯೂ ಸುಮ್ಮನಿದ್ದುದನ್ನು ತಿಳಿದು ಶ್ರೀಗುರು “ಅವನ ನನ್ನನ್ನು ನಿಷ್ಕಾರಣವಾಗಿ ನಿಂದಿಸಿದರೂ ನೀನು ಸುಮ್ಮನಿದ್ದುದೇಕೆ? ಗುರುನಿಂದೆ ಮಾಡಿದವನು ವಧೆಗೆ ಅರ್ಹನೆಂದು ಶಾಸ್ತ್ರಗಳು ಹೇಳುತ್ತವೆ! ನೀನು ಮಾತ್ರ ಮಾತಿನಿಂದಲೂ ಪ್ರತಿಭಟಿಸದೆ ಸುಮ್ಮನಿದ್ದೆ! ನಿನ್ನ ಪೌರುಷಕ್ಕೆ ಬೆಂಕಿಹಾಕಲಿ!” ಎಂದರಂತೆ. ಇದು ಅತಿ ಮೃದುವಾಗಿದ್ದ ಶಿಷ್ಯನ ಎದೆಗೆ ಉಕ್ಕಿನ ಹದ ಹಾಕಲು ಹೇಳಿದ ಮಾತೆಂದು ನಾವು ತಿಳಿಯಬೇಕು. ಏಕೆಂದರೆ, ಇನ್ನೊಂದು ಸಾರಿ ತಮ್ಮ ಶಿಷ್ಯನಾದ ನಿರಂಜನಸೇನನಿಗೆ ಬೇರೆ ರೀತಿಯಾಗಿ ಉಪದೇಶಮಾಡಿದರು. ನಿರಂಜನನು ಭೀಮಕಾಯನೂ ರಾಜಸಿಕ ಗುಣಾನ್ವಿತನೂ ಆಗಿದ್ದನು. ಒಂದು ಸಾರಿ ಅವನು ದೋಣಿಯಲ್ಲಿ ಕುಳಿತು ದಕ್ಷಿಣೇಶ್ವರಕ್ಕೆ ಬರುತ್ತಿದ್ದಾಗ ದೋಣಿಯಲ್ಲಿದ್ದ ಇತರ ಜನರು ಪರಮಹಂಸರ ಮೇಲೆ ಇಲ್ಲದ ಸಲ್ಲದ ದೋಷಾರೋಪಣೆಮಾಡಿ ನಿಂದಿಸಿದರು. ಅದನ್ನು ಕೇಳಿ ನಿರಂಜನನು ಉಗ್ರಮೂರ್ತಿಯಾಗಿ ಗರ್ಜಿಸುತ್ತ ದೋಣಿಯತುದಿಗೆ ಹೋಗಿ ಅದರ ಎರಡು ಪಕ್ಕಗಳ ಮೇಲೆ ತನ್ನೆರಡು ಕಾಲುಗಳನ್ನಿಟ್ಟು ದೋಣಿ ಮುಳುಗುವ ರೀತಿಯಲ್ಲಿ ಬದಲಾಗಿ ಜಗ್ಗಿಸುತ್ತ “ನಿಮಗೆಲ್ಲ ಇಲ್ಲಿಯೆ ಗಂಗೆಯಲ್ಲಿ ಜಲಸಮಾಧಿ ಮಾಡಿಬಿಡುತ್ತೇನೆ. ನೀವು ಮಾಡಿದ ನಿಂದೆಯ ಪಾಪಕ್ಕೆ ಅದೇ ಪ್ರಾಯಶ್ಚಿತ್ತ!” ಎಂದು ಕೂಗಿ, ಕೆಲಸಕ್ಕೆ ಪ್ರಾರಂಭಿಸಿದನು. ಸಣ್ಣ ದೋಣಿ ಇನ್ನೇನು ಮುಳುಗಬೇಕು! ಅಷ್ಟರಲ್ಲಿ ಜನರೆಲ್ಲ ಆ ತಾಂಡವಮೂರ್ತಿಯ ಮಹಾಶರೀರವನ್ನೂ ಪ್ರಲಯ ಕೋಪವನ್ನೂ ನೋಡಿ, ಹೆದರಿ, ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮಾಪಣೆ ಬೇಡಿದರು. ಆಮೇಲೆ ತಾಂಡವ ನಿಂತು, ದೋಣಿ ಸುರಕ್ಷಿತವಾಗಿ ದಡ ಸೇರಿತು. ಆ ಕಥೆಯನ್ನೆಲ್ಲ ಕೇಳಿ ಶ್ರೀರಾಮಕೃಷ್ಣರು ತಮ್ಮ ಶಿಷ್ಯನನ್ನು ಬಯ್ದು “ಕೋಪ ವಿಷಸದೃಶ್ಯವಾದ ಮಹಾಪಾಪ! ನೀನೇಕೆ ಅದಕ್ಕೆ ಒಳಗಾಗಬೇಕು? ಸಾತ್ತ್ವಕನ ಕೋಪ ನೀರಿನ ಮೇಲೆ ಎಳೆದ ಗೆರೆಯಂತೆ ಮಿಂಚಿ ಮಾಯವಾಗುತ್ತದೆ. ಮೂರ್ಖ ಮಂದಿ ಏನೇನೋ ಹೇಳಿಕೊಳ್ಳುತ್ತಾರೆ. ಅದನ್ನು ಗಣನೆಗೆ ತಂದು ಕೊಳ್ಳದೆ ಬಿಟ್ಟು ಬಿಡಬೇಕು. ಹಾಗೆ ಮಾಡದೆ ಜಗಳಕ್ಕೆ ಹೋದರೆ ಜೀವಮಾನವನ್ನೆಲ್ಲ ಜಗಳದಲ್ಲಿಯೆ ಕಳೆಯಬೇಕಾಗುತ್ತದೆ. ಸ್ವಲ್ಪ ಊಹಿಸಿನೋಡು, ನಿನ್ನ ಕೋಪದ ಆವೇಗದಲ್ಲಿ ಎಂತಹ ಅನಾಹುತವಾಗುತ್ತಿತ್ತು!” ಎಂದು ಸಾತ್ತ್ವಿಕ ಹೇಳಿದರು.

ಮೇಲಿನ ದೃಷ್ಟಾಂತಗಳಿಂದ ಪರಮಹಂಸರು ಹೇಗೆ ಮಾರ್ದವ ಕಾಠಿನ್ಯಗಳ ಮಧ್ಯಮಾರ್ಗವನ್ನು ತಮ್ಮ ಶಿಷ್ಯರಿಗೆ ಬೋಧಿಸಿದ್ದಾರೆ ಎಂಬುದು ಗೊತ್ತಾಗುತ್ತದೆ. ಹಾಗೆಯೆ ಹಿಂಸೆ ಅಹಿಂಸೆಗಳ ತತ್ತ್ವವನ್ನು ಒಂದು ಮನೋಹರವಾದ ಸಾಮತಿಯಿಂದ ತಿಳಿಸಿದ್ದಾರೆ!

ಒಂದು ಹಾದಿಯ ಪಕ್ಕದ ಬಯಲಿನಲ್ಲಿದ್ದ ಹುತ್ತಿನಲ್ಲ ಸರ್ಪವೊಂದು ವಾಸವಾಗಿತ್ತು. ಅದೇ ಬಯಲಿನಲ್ಲಿ ದನಕಾಯುವ ಹುಡುಗರು ನಿತ್ಯವೂ ದನ ಮೇಯಿಸುತ್ತಿದ್ದರು. ಒಂದು ದಿನ ಸಾಧುವೊಬ್ಬನು ಆ ಮಾರ್ಗವಾಗಿ ಹೋಗುತ್ತಿದ್ದುದನ್ನು ಕಂಡು ಗೋಪ ಬಾಲಕರು ಕೂಗಿ ಕರೆದು ಅವನ ಬಳಿಗೆ ಓಡಿ ಬಂದು “ಸ್ವಾಮಿ, ಆ ದಾರಿಯಲ್ಲಿ ಹೋಗಬೇಡಿ, ಅಲ್ಲೊಂದು ಸರ್ಪವಿದೆ. ಅನೇಕರನ್ನು ಕಚ್ಚಿಕೊಂದಿದೆ. ತಮಗೆ ಅಪಾಯವಾದೀತು” ಎಂದರು. ಸಾಧು “ಮಕ್ಕಳಿರಾ ಚಿಂತೆಯಿಲ್ಲ. ನನಗೆ ಮಂತ್ರಬಲವಿದೆ. ಸರ್ಪ ನನ್ನನ್ನೇನೂ ಮಾಡಲಾರದು” ಎಂದು ಮುಂದೆ ಹೋದನು. ಸಾಧುವನ್ನು ನೋಡಿ ಸರ್ಪ ತನ್ನ ಭಯಂಕರವಾದ ಹೆಡೆಯನ್ನು ಎತ್ತಿಕೊಂಡು ಕಚ್ಚಲೆಂದು ಓಡಿಬಂದಿತು. ಆದರೆ ಅದು ಮಂತ್ರಮುಗ್ಧವಾಗಿ ಶಕ್ತಿಗುಂದಿ ಸಾಧುವಿನ ಪಾದಗಳ ಮೇಲೆ ಬಿತ್ತು. ಸಾಧು ಅದನ್ನು ಕುರಿತು “ಮಿತ್ರನೆ, ಇತರರಿಗೆ ಅನ್ಯಾಯವಾಗಿ ಹಿಂಸೆಮಾಡುವುದೇಕೆ? ನಾನು ನಿನಗೆ ಮಂತ್ರೋಪದೇಶ ಮಾಡುತ್ತೇನೆ. ಅದನ್ನು ಜಪಿಸಿದರೆ ನಿನಗೆ ಈಶ್ವರಭಕ್ತಿ ಪ್ರಾಪ್ತವಾಗುತ್ತದೆ. ಕಡೆಗೆ ಈಶ್ವರನು ಪ್ರತ್ಯಕ್ಷನಾಗುತ್ತಾನೆ. ಹಿಂಸಾಬುದ್ದಿಯೂ ಸಂಪೂರ್ಣವಾಗಿ ತೊಲಗುತ್ತದೆ” ಎಂದು ಹೇಳಿ, ಹಾವಿನ ಕಿವಿಯಲ್ಲಿ  ಮಂತ್ರೋಪದೇ ಮಾಡಿದನು. ಸರ್ಪ ನಮಸ್ಕಾರಮಾಡಿ “ಗುರುವೇ, ನನ್ನ ಆತ್ಮೋದ್ಧಾರವಾಗಬೇಕಾದರೆ ನಾನೇನು ಮಾಡಬೇಕು?” ಎಂದು ಕೇಳಿತು. ಸಾಧು “ಮಂತ್ರವನ್ನು ಜಪಿಸು. ಯಾವ ಜೀವಿಗೂ ಹಿಂಸೆ ಮಾಡಬೇಡ. ನಾನು ಹಿಂದಿರುಗಿ ಬಂದು ಎಲ್ಲವನ್ನೂ ವಿಚಾರಿಸಿ  ತಿಳಿಯುತ್ತೇನೆ” ಎಂದು ಹೇಳಿ ಹೊರಟುಹೋದನು. ಅಂದಿನಿಂದ ಎಲ್ಲರಿಗೂ ಸರ್ಪದ ಕಾಟ ತಪ್ಪಿತು. ಹುಡುಗರೆಲ್ಲರೂ ಸರ್ಪಮುದಿಯಾಯಿತು, ಇನ್ನೇನು ಅದರ ವಿಷವೆಲ್ಲ ಹೋಯಿತು ಎಂದೆಣಿಸಿ, ಅದನ್ನು ಪೀಡಿಸಲು ಪ್ರಾರಂಭಮಾಡಿದರು. ಮೊದಮೊದಲು ದೂರದಿಂದ ಕಲ್ಲು ಎಸೆದು ನೋಡಿದು. ಹಾವು ಎಂದಿನಂತೆ ಹೆಡೆಯೆತ್ತಿ ಅಟ್ಟಿಸಿಕೊಂಡು ಬರದೆ ಸಾಧುವಾಗಿತ್ತು. ಹೀಗಿರಲು ಒಂದು ದಿನ ಧೂರ್ತ ಬಾಲಕನೊಬ್ಬನು ಸರ್ಪದ ಬಾಲವನ್ನು ಹಿಡಿದುಕೊಂಡು ತಲೆಯಮೇಲೆ ಗಿರ‍್ರನೆ ತಿರುಗಿಸಿ ಒಂದು ಬಂಡೆಗೆ ಅಪ್ಪಳಿಸಿ ಬಿಟ್ಟನು. ಹಾವು ರಕ್ತವನ್ನು ಕಾರುತ್ತ ಮೈಮರೆಯಲು ಸತ್ತುಹೋಯಿತೆಂದು ತಿಳಿದು ಹುಡುಗರು ಬಿಟ್ಟುಹೋದರು. ರಾತ್ರಿಯಾಯಿತು; ತಂಗಾಳಿ ಬೀಸಿತು; ಹಾವು ಮೈತಿಳಿಯಿತು. ನುಗ್ಗುನುರಿಯಾದ ದೇಹವನ್ನು ಮೆಲ್ಲಮೆಲ್ಲಗೆ ಎಳೆದುಕೊಂಡು ಹುತ್ತವನ್ನು ಸೇರಿತು. ಕೆಲವು ದಿನ ನೋವಿಗೆ ನರಳುತ್ತ ಆಹಾರ ಸಂಪಾದನೆ ಮಾಡುವುದಕ್ಕೂ ತ್ರಾಣವಿಲ್ಲದೆ ಅಸ್ಥಿಪಂಜರವಾಯಿತು. ಆಮೇಲೆ ಹುಡುಗರಿಗೆ ಬೆದರಿ ಹಗಲು ಹೊರಗೆ ಹೋಗುತ್ತಿರಲಿಲ್ಲ. ರಾತ್ರಿ ಸಂಚಾರ ಹೊರಟು ಅಹಿಂಸಾ ವ್ರತವನ್ನು ಕೈಕೊಂಡದ್ದರಿಂದ ಹುಲ್ಲು ತರಗು ಕಸ ಕಡ್ಡಿಗಳನ್ನು ತಿನ್ನುತ್ತಿತ್ತು. ಇಂತಿರಲು ಕೆಲವು ದಿನಗಳ ಮೇಲೆ ಸಾಧು ಆ ಮಾರ್ಗವಾಗಿ ಹಿಂದಿರುಗೆ ಬಂದನು. ತನ್ನ ಸರ್ಪಶಿಷ್ಯನನ್ನು ನೋಡಲೆಂದು ಅಲ್ಲೆಲ್ಲಾ ಹುಡುಕಿದನು. ಎಲ್ಲಿಯೂ ಕಾಣಲಿಲ್ಲ. ದನಗಾಹಿ ಹುಡುಗರನ್ನು ಕೇಳಿದನು. ಅವರು ಅದು ಸತ್ತು ಹೋಯಿತೆಂದು ಹೇಳಿದರು. ಸಾಧುವಿಗೆ ಆರ್ಶ್ಚಯವಾಯಿತು. ದೇವರು ಪ್ರತ್ಯಕ್ಷನಾಗದೆ, ಜೀವನ ಸಮಸ್ಯೆ ಬಗೆಹರಿಯದೆ ಹಾವು ಸಾಯಲಾರದೆಂದು ಆತನಿಗೆ ಗೊತ್ತಿತ್ತು. ಆದ್ದರಿಂದ ಪುನಃ ಅಲ್ಲೆಲ್ಲಾ ಹುಡುಕಿ ಕಡೆಗೆ ಕೂಗಿ ಕರೆದನು. ಸರ್ಪ ಹುತ್ತಿನಿಂದ ಹೊರಗೆ ಬಂದು ಗುರುವಿಗೆ ನಮಸ್ಕಾರಮಾಡಿತು.

ಸಾಧು: “ಕ್ಷೇಮವೇ? ” ಎಂದು ಕೇಳಿದನು.

ಸರ್ಪವು: “ಗುರುವೇ, ದೇವರ ದಯೆಯಿಂದ ಕ್ಷೇಮವಾಗಿದ್ದೇನೆ” ಎಂದಿತು.

ಸಾಧು: ಹಾಗಾದರೆ, ಇದೇನು? ಎಲುಬು ಚರ್ಮ ಎರಡೇ ಇವೆಯಲ್ಲಾ ನಿನ್ನ ಮೈಯಲ್ಲಿ ? ಏನಾಯಿತು! ?

ಸರ್ಪ: ಗುರುವೆ, ತಮ್ಮ ಆಜ್ಞೆಯಂತೆ ನಾನು ಅಹಿಂಸಾವ್ರತವನ್ನು ಕೈಕೊಂಡು ಕಸಕಡ್ಡಿ ತರಗೆಲೆಗಳನ್ನು ತಿಂದು ಬದುಕುತ್ತಿದ್ದೇನೆ. ಆದ್ದರಿಂದ ದೇಹ ಕೃಶವಾಗಿರಬಹುದು.

ಸಾಧು: ಇಲ್ಲ: ಬರಿಯ ಆಹಾರ ವ್ಯತ್ಯಸದಿಂದ ಹೀಗಾದಂತಿಲ್ಲ ಇನ್ನೇನೋ ನಡೆದಿರಬೇಕು, ಹೇಳು!

ಸರ್ಪ: ಹೌದು, ಹೌದು ಮರೆತಿದ್ದೆ, ಈಗ ನೆನಪಿಗೆ ಬಂತು. ಒಂದು ದಿನ ದನಕಾಯುವ ಹುಡುಗರು ನನ್ನೊಡನೆ ಸ್ವಲ್ಪ ನಿಷ್ಕರುಣೆಯಿಂದ ವರ್ತಿಸಿಬಿಟ್ಟರು. ನನ್ನನ್ನು ಬಾಲ ಹಿಡಿದು ಗಿರ‍್ರನೆ ಸುತ್ತಿಸಿ ಕಲ್ಲಿಗೆ ಅಪ್ಪಳಿಸಿ ಬಿಟ್ಟರು. ಪಾಪ, ಮಕ್ಕಳು: ಅವರಿಗೇನು ಗೊತ್ತು? ನಾನು ಕಚ್ಚುವುದಿಲ್ಲ; ಅಹಿಂಸಾವ್ರತವನ್ನು ಕೈಕೊಂಡಿದ್ದೇನೆ ಎಂದು ಅವರಿಗೆ ತಿಳಿಯುವುದಾದರೂ ಹೇಗೆ?

ಸಾಧು:  ಅಯ್ಯೋ ಪೆಚ್ಚೆ! ಹುಚ್ಚೆ! ಅವರು ನಿನ್ನನ್ನು ಪೀಡಿಸದಂತೆ ನೋಡಿ ಕೊಳ್ಳುವ ಉಪಾಯ ಗೊತ್ತಾಗಲಿಲ್ಲವೆ ನಿನಗೆ? ಎಂತಹ ಮೂರ್ಖತನ ಮಾಡಿಬಿಟ್ಟೆ? ಯಾರನ್ನೂ ಹಿಂಸೆ ಮಾಡಬೇಡ ಅಂದರೆ ಕಚ್ಚಿ ಕೊಲ್ಲಬೇಡ ಎಂದೆನಷ್ಟೆ! ಬುಸ್ಸೆಂದು ಹೆದರಿಸಿ ಓಡಿಸಬೇಡ ಎಂದೆನೆ? ನೀನು ಸುಮ್ಮನೆ ಬುಸ್ ಎಂದಿದ್ದರೆ ಸಾಕಾಗಿತ್ತು. ಹುಡುಗರು ನಿನ್ನ ಗೋಜಿಗೆ ಬರುತ್ತಿರಲಿಲ್ಲ.

ಈ ಸಾಮತಿಯನ್ನು ಹೇಳಿ ಪರಮಹಂಸರು ತಮ್ಮ ಶಿಷ್ಯರಿಗೆ “ಈ ಪ್ರಪಂಚದಲ್ಲಿ ಬದುಕುವವನು ಯಾರಿಗೂ ಹಿಂದೆ ಮಾಡಬಾರದು. ಆದರೆ ದುಷ್ಟರನ್ನು ದೂರವಿಡುವುದಕ್ಕಾಗಿ ಹಿಂಸೆಯನ್ನು ಪ್ರತಿಭಟಿಸುವಂತೆ ನಟಿಸಬೇಕು. ಆದರೆ ಹಿಂಸೆಗೆ ಪ್ರತಿಯಾಗಿ ಹಿಂಸೆಮಾಡುದಂತೆ ಎಚ್ಚರಿಕೆಯಿಂದಿರಬೇಕು.” ಎಂದು ಬೋಧಿಸಿದ್ದಾರೆ.

ಇಂತಹ ನೂರಾರು ಸಾಮತಿಗಳಿಂದಲೂ ತತ್ತ್ವೋಪದೇಶಗಳಿಂದಲೂ ತಮ್ಮ ಸ್ವಂತ ಜೀವನದ  ಉದಾಹರಣೆಗಳಿಂದಲೂ ಪರಮಹಂಸರು ಗರುಡಿಯಾಚಾರ್ಯನಂತೆ ತಮ್ಮ ಶಿಷ್ಯರನ್ನು ತರಬಿಯಿತ್ತು ಮಾಡಿದರು. ಅದರ ಪರಿಣಾಮವನ್ನು ಮುಂದೆ ಸ್ವಾಮಿ ವಿವೇಕಾನಂದರ ಜೀವನ ಮತ್ತು ಸಂದೇಶಗಳಲ್ಲಿಯೂ ಶ್ರೀರಾಮಕೃಷ್ಣ ಮಹಾಸಂಘದ ಕಾರ್ಯಕಲಾಪಗಳಲ್ಲಿಯೂ ಕಾಣಲಿದ್ದೇವೆ.


[1] ಅಂಸಯತಾತ್ಮನಾ ಯೋಗೋ ದುಷ್ಪ್ರಾಪ ಇತಿ ಮೇ ಮತಿಃ | – ಭಗವದ್ಗೀತೆ.

[2] ಯಜ್ಞಾರ್ಥತ್ ಕರ್ಮಣೋಸsನ್ಯತ್ರ ಲೋಕೋ.. ಯಂ ಕರ್ಮಬಂಧನಃ |
ತದರ್ಥಂ ಕರ್ಮ ಕೌಂತೇಯ ಮುಕ್ತಸಂಗಃ ಸಮಾಚಾರ || – ಭಗವದ್ಗೀತೆ.

[3] ತಸ್ಮದಸಕ್ತಃ ಸತತಂ ಕಾರ್ಯಂ ಕರ್ಮ ಸಮಾಚಾರ |
ಅಸಕ್ತೋ ಹ್ಯಾಚರನ್‌ಕರ್ಮ ಪರಮಾಪ್ನೋತಿ ಪೂರುಷಃ|| – ಭಗವದ್ಗೀತೆ.

[4] ಯತ್ ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್ |
ಯತ್ ತಪಸ್ಯಸಿ ಕೌಂತೇಯ ತತ್ ಕುರುಷ್ವ ಮದರ್ಪಣಮ್ || – ಭಗವದ್ಗೀತೆ.