ಮೂಡುವ ಸೂರ್ಯನಲ್ಲೊಂದು ಸಲಿಲಸೌಂದರ್ಯವಿದೆ. ಮಧ್ಯಾಹ್ನ ಸೂರ್ಯನಲ್ಲೊಂದು ಮಹಾತೇಜಸ್ಸಿದೆ. ಸೂರ್ಯಾಸ್ತದಲ್ಲೊಂದು ಗೌರವಮಯ ಗಾಂಭೀರ್ಯವಿದೆ. ಮಹಾಪುರುಷರ ಜೀವನದಲ್ಲಿಯೂ ಅದೇ ಗುಣಗಣಗಳು ತೋರಿಬರುತ್ತವೆ. ಅವರ ಶೈಶವದಲ್ಲಿ ಮಾಧುರ್ಯವೂ ಯೌವನದಲ್ಲಿ ತಪಸ್ಸೂ ಅವಸಾನಸಮಯದಲ್ಲಿ ಕಾರುಣ್ಯವೂ ಕಂಡುಬರುತ್ತವೆ, ಇದುವರೆಗೆ ಶ್ರೀರಾಮಕೃಷ್ಣ ಪರಮಹಂಸರ ಜೀವನಗಂಗೆಯನ್ನು ಜನ್ಮಸ್ಥಾನದಿಂದಲೂ ಅನುಸರಿಸಿ ಬಂದಿದ್ದೇವೆ. ಆ ಮಹಾನದಿಯ ಶೈಶವ ಕೌಮಾರ ಯೌವನಗಳನ್ನು ಮನವಾರೆ ಅವಲೋಕಿಸಿದ್ದೇವೆ. ಇನ್ನು ಸಮುದ್ರ ಬಳಿಸಾರುತ್ತಿದೆ. ಅದರ ಘೋಷ ದೂರದಿಂದ ಕೇಳಿ ಬರುತ್ತಿದೆ. ಬನ್ನಿ; ನದಿ ಸಮುದ್ರದಲ್ಲಿ ಸಮಾಧಿಹೊಂದುವ ಮಹಿಮಾಮಯ ದೃಶ್ಯವನ್ನು ಸಂದರ್ಶಿಸಿ!

ತುಂಬುಹೊನಲಿನ ಗಂಗೆ ತೆರೆನಗೆಯ ಮೊರೆಯೊಡನೆ ಸಾವಧಾನವಾಗಿ ಬಿಡುವಿಲ್ಲದೆ ಹರಿಯುತ್ತಿತ್ತು. ಸೂರ್ಯೋದಯ ಸೂರ್ಯಾಸ್ತಗಳು ದಿನ ದಿನವೂ ದಕ್ಷಿಣೇಶ್ವರದ ಉದ್ಯಾನವೃಕ್ಷಗಳಿಗೆ ಶೋಭೇಯಿತ್ತು, ಮರೆಯಾಗುತ್ತಿದ್ದುವು. ದಿನ ದಿನವೂ ಪ್ರಾತಃಕಾಲ ಸಾಯಂಕಾಲಗಳಲ್ಲಿ ಗುಡಿಯ ಗಂಟೆಗಳ ಟಿಂಟಿಣಿಯೂ ಮಂಗಳಾರತಿಯ ಜ್ಯೋತಿಯೂ ಕರ್ಣ ನಯನಗಳಿಗೆ ಮನೋಜ್ಞವಾಗಿ ಮೆರೆದು ಹೃದಯಕ್ಕೆ ಶಾಂತಿಯನ್ನು ದಾನಮಾಡುತ್ತಿದ್ದವು. ದಿನದಿನವೂ ಶ್ರೀರಾಮಕೃಷ್ಣರು ತಮ್ಮ ಕೊಠಡಿಯಲ್ಲಿ ನೆರೆದ ಭಕ್ತರಿಗೂ ಆಗಂತುಕರಿಗೂ ಧರ್ಮೋಪದೇಶ ಮಾಡುತ್ತಿದ್ದರು. ಆ ಮಾನವ ಮಹಾನದಿಯ ತೀರ್ಥಕ್ಷೇತ್ರದಲ್ಲಿ ಸ್ನಾನಮಾಡಿ ಪರಿಶುದ್ಧರಾಗಬೇಕೆಂದು ದೇಶದ ನಾನಾಭಾಗಗಳಿಂದ ನಾನಾಜನರು ತಂಡೋಪತಂಡವಾಗಿ ಬರುತ್ತಿದ್ದರು. ಗುರುದೇವನು ಶ್ರಮವರಿಯದೆ ವಿಶ್ರಾಂತಿಯಿಲ್ಲದೆ ಧರ್ಮ ಪಿಪಾಸುಗಳ ಹೃದಯತೃಷ್ಣೆಯನ್ನು ತನ್ನ ವಚನಾಮೃತದಿಮದ ನೀಗಲು ಅನವರತವೂ ಸಾಹಸಮಾಡುತ್ತಿದ್ದನು. ಸಾಮತಿ, ಕಥೆ, ಹಾಸ್ತ, ವಿನೋದ, ತತ್ತ್ವ ಬೋಧೆ ಮೊದಲಾದವುಗಳಿಂದ ಕೆಲವು ಸಾರಿ ಶಿಶುವಿನಂತೆಯೂ ಕೆಲವು ಸಾರಿ ಮಹಾಋಷಿಯಂತೆಯೂ ವರ್ತಿಸಿ ಸದಸ್ಯರಿಗೆ ಹೃದಯಭಾರವಾಗದಂತೆ, ಅವರ ಮನಸ್ಸಿನ ಮಾಧುರ್ಯ ಮಾಸದಂತೆ ತತ್ತ್ವೋಪದೇಶ ಸಾಗುತ್ತಿತ್ತು. ಆಶಾಪೂರ್ಣವಾಗಿದ್ದ ಆ ವಾಣಿಯು ಮಹಿಮೆಯಿಂದ ಜನರ ಕ್ಲೆಬ್ಯ ತೊಲಗಿಹೋಗಿ ಅವರೆದೆಗಳಲ್ಲಿ ಧೈರ್ಯ ಮೂಡುತ್ತಿತ್ತು.

ಕ್ರೈಸ್ತರಲ್ಲಿ ಕೆಲವರೂ ಮತ್ತು ಬ್ರಾಹ್ಮಸಮಾಜಿಗಳೂ ಮತಧರ್ಮದ ಸಾರಾಂಸವೆಲ್ಲ ಪಾಪಭಾವದಲ್ಲಿ ಪರಿಸಮಾಪ್ತಿಯಾಗುತ್ತದೆ ಎಂದು ತಿಳಿದಿದ್ದಾರೆ. ‘ಕರ್ತನೇ, ನಾನು ಪಾಪಿ! ನನ್ನ ಪಾಪವನ್ನು ಕ್ಷಮಿಸು!’ ಎಂದು ಬೇಡಿದರೆ ಭಕ್ತನ ಕೆಲಸವಾಯಿತೆಂದು ತಿಳಿದಿದ್ದಾರೆ. ಆದರೆ ಧರ್ಮಪ್ರಪಂಚದಲ್ಲಿ ಪಾಪೋಹಂ ಭಾವವು ಬಹಳ ಕೀಳಾದ ಅವಸ್ಥೆ. ಪಾಪೋಹಂ ಎಂದು ಯಾವಾಗಲೂ ಹೇಳುದತ್ತಿದ್ದರೆ ಮನುಷ್ಯನು ಪಾಪಿಯೆ ಆಗಿ ಬಿಡುತ್ತಾನೆ. ಅದಕ್ಕೆ ಬದಲಾಗಿ “ನಾನು ಅನಂತ; ನಾನು ಅಚ್ಯುತ; ನನಗ ಪಾಪವಿಲ್ಲ; ನಾನು ಈಶ್ವರನ ಶಿಶು!” ಎಂದುಹೇಳುವುದನ್ನು  ಅಭ್ಯಾಸ ಮಾಡಿದರೆ ಮನುಷ್ಯನು ಹಾಗೆಯೆ ಆಗುತ್ತಾನೆ, ನಾನು ಗುಲಾಮನೆಂದು ಹೇಳಿಕೊಳ್ಳುವ ಮನುಷ್ಯನು ಕಡೆಗೆ ಗುಲಾಮನೆ ಆಗುತ್ತಾನೆ; ನಾನು ಮುಕ್ತನೆಂದು ಹೇಳಿಕೊಳ್ಳುವವನಿಗೆ ಮುಕ್ತಿಯೆ ಲಭಿಸುತ್ತದೆ. ಮನಸ್ಸನಂತೆ ಮಾತೆ; ಮನಸ್ಸಿನಂತೆ ಮುಕ್ತಿ.”

“ಬರಿಯ ವೈದಿಕ ಕರ್ಮಕ್ರಿಯೆಗಳಲ್ಲಿ ಲೋಲರಾಗಿರುವುದೂ ಒಂದು ಕಾಯಿಲೆ. ಆ ಕಾಯಿಲೆ ಹಿಡಿದವರಿಗೆ ದೇವರ ಧ್ಯಾನಮಾಡಲೂ ಸಮಯ ಸಿಕ್ಕುವುದಿಲ್ಲ.

“ಮಾನವನ ಪವಿತ್ರತೆಯಿಂದ ಕ್ಷೇತ್ರ ಪವಿತ್ರವಾಗುತ್ತದೆ. ಹಾಗಿಲ್ಲದಿದ್ದರೆ ಕ್ಷೇತ್ರಮಾತ್ರದಿಂದ ಮನುಷ್ತನು ಹೇಗೆ ಪವಿತ್ರನಾಗುತ್ತಾನೆ?”

“ಈಶ್ವರನು ಸರ್ವವ್ಯಾಪಿ. ನಮ್ಮ ಹೃದಯದಲ್ಲಿ ಅಂತರ್ಯಾಮಿಯಾಗಿದ್ದಾನೆ. ಚೇತನಾಚೇತನ ಜಗತ್ತೆಲ್ಲವೂ ಆತನ ಕನಸು.”

“ಮುಳುಗು, ಮುಳುಗು ಮನವೇ; ಸೌಂದರ್ಯಸಾಗರದಲ್ಲಿ ಮುಳುಗು, ಸಮುದ್ರಕ್ಕಿಂತಲೂ ಅಗಾಧವಾದ ಆತ್ಮಸಮುದ್ರದಲ್ಲಿ ಮುಳುಗು. ಪ್ರೇಮರತ್ನ ಲಭಿಸುತ್ತದೆ… ಬೃಂದಾವನ ನಿನ್ನ ಹೃದಯದಲ್ಲಿದೆ. ವಿಶ್ವಪ್ರೇಮಿಕ ಪುರುಷನು ಅಲ್ಲಿ ವೇಣುಗಾನಮಾಡುತ್ತಿದ್ದಾನೆ. ಹೋಗಿಕಾಣು. ಹುಡುಕಿದರೆ ದೊರಕುವನು. ಅಲ್ಲಿ ಜ್ಞಾನದೀಪ ಉರಿಯುತ್ತಿದೆ.”

“ಮಾನವ ಭ್ರಾತೃತ್ವವನ್ನು ಕುರಿತು ಸುಮ್ಮನೆ ಮಾತಾಡಿದರಾಗದು. ಅದನ್ನು ಸಾಕ್ಷಾತ್ಕಾರಮಾಡಿಕೋ. ಆ ವಾದ ಈ ವಾದಗಳನ್ನು ಕುರಿತು ಬರಿದೆ ವಾದಿಸಿ ಕಾಲ ಕಳೆಯಬೇಡ. ಸತ್ಯವಿರುವುದೊಂದೆ. ಹೊಳೆಗಳೆಲ್ಲ ಕಡಲಿಗೆ ಹರಿಯುತ್ತಿವೆ. ನೀನೂ ಹರಿ; ಇತರರಿನ್ನೂ ಹರಿಯಗೊಡು! ಹರಿಯುವ ನೀರೆಲ್ಲ ಒಂದಾಗಿರಲು ಎಲ್ಲವೂ ಕಡಲಿಗೆ ಹೋಗಿ ಬೀಳಲಿ! ”

ಅವರ ಜೀವನದಿಯೂ ಕಡಲಿಗೆ ಸಮೀಪವಾಗಿತ್ತು. ಸಮೀಪಿಸಿದಂತೆಲ್ಲಾ ಅದರ ಮಹಿಮೆಯೂ ಗಾಂಭೀರ್ಯವೂ ಹೆಚ್ಚುತ್ತಿದ್ದವು. ಮಹಾತ್ಮರ ಮಹಿಮೆ ತೋರುವುದು ಅವರ ಮರಣ ಸಮಯದಲ್ಲಿ ಎಂಬುದೊಂದು ಸುಭಾಷಿತವಾಗಿದೆ. ಅಂತೆಯೆ ಗುರುದೇವನ ಪ್ರಾನವೂ ಪ್ರಾಣೇಶನಲ್ಲಿ ಮಗ್ನವಾಗುವ ಸಮಯದಲ್ಲಿ ಅತೀವ   ಜಾಜ್ವಲ್ಯಮಾನವಾಗಿರುವುದನ್ನು ಕಾಣುತ್ತೇವೆ. ಸಲ ಸಲವೂ ಸಮಾಧ್ಯಗ್ನಿಯ ಉರಿಯಲ್ಲಿ ಸಿಕ್ಕಿ, ಅವಿಶ್ರಾಂತವಾದ ಉಪದೇಶ, ಸಂಭಾಷಣೆ ಮತ್ತು ಭಾವಾವೇಶಗಳ ಹೊಡೆತಕ್ಕೆ ಜರ್ಝರಿತವಾಗಿ ಪರಮಹಂಸರ ಶರೀರ ಮೆಲ್ಲಮೆಲ್ಲಗೆ ಶಿಥಿಲವಾಗತೊಡಗಿತು. ಒಂದೊಂದು ಸಾರಿ ಕ್ಲಾಂತಮನಸ್ಕರಾಗಿ” ಹೇ ಜಗನ್ಮಾತೆ. ಈ ಪಾಟಿ ಮಂದಿಯನ್ನೇಕೆ ಇಲ್ಲಿಗೆ ಕರೆತರುತ್ತೀಯೆ? ಅವರೋ ಒಂದು ಪಾಲು ಹಾಲಿಗೆ ಐದ ಪಾಲು ನೀರು ಸೇರಿಸದಂತೆಇದ್ದಾರೆ! ನೇತ್ರಗ್ನಿಯಿಮದ ಆ ನೀರನ್ನು ಬತ್ತಿಸಿ ಬತ್ತಿಸಿ ನನ್ನ ದೃಷ್ಟಿಯೇ ಮಂದವಾಗುವಂತಿದೆ. ನನ್ನ ಆರೋಗ್ಯವಂತೂ ಮಣ್ಣುಗೂಡಿದೆ. ಇನ್ನು ನನ್ನಿಂದಾಗದು. ನಿನಗೆ ಬೇಕಾದರೆ ನೀನೆ ಆ ಕೆಲಸವನ್ನು ಮಾಡಿಕೊ. ಅಯ್ಯೋ! ಈ ಒಡಕು ಮದ್ದಳೆಯನ್ನೇಕೆ ಹಗಲೆನ್ನದೆ ಇರುಳೆನ್ನದೆ ಸುಮ್ಮನೆ ಬಡಿಯುತ್ತಿದ್ದೀಯೆ? ಹೀಗೆ ಬಡಿದರೆ ಇನ್ನೆಷ್ಟು ದಿನವೆಂದು ಬಾಳೀತು! ಎಂದು ಮೊರೆಯಿಟ್ಟು ಉತ್ತರಕ್ಷಣದಲ್ಲಿಯೆ ಲೋಕದಲ್ಲಿರುವ ದುಃಖತಾಪಗಳನ್ನು ನೆನೆದು ಮರುಗಿ “ಒಂದೇ ಒಂದು ಜೀವಕ್ಕೆ ನೆರವಾಗುವೆನಾದರೆ ಕೋಟಿ ಕೋಟಿ ಶುನಕ ಜನ್ಮಗಳನ್ನಾದರೂ ಎತ್ತಿ ಬರುತ್ತೇನೆ. ಇಂತಹ ಇಪ್ಪತ್ತು ಸಹಸ್ರ ಶರೀರಗಳು ಸಮೆದರೂ ಚಿಂತೆಯಿಲ್ಲ; ಒಂದು ಕ್ರಿಮಿಗೆ ಸಹಾಯವಾದರೆ ಸಾಕು. ಒಬ್ಬನಿಗಾದರೂ ನೆರವಾದರೆ ಮಹದಾನಂದವಾಗುತ್ತದೆ” ಎಂದು ಹೇಳಿಕೊಟ್ಟವರು.

ಹಗಲಿರುಳು ಮಾತಾಡಿದುದರ ಫಲವಾಗಿಯೋ ಅಥವ ಅನೇಕರ ಪಾಪಗಳನ್ನು ತಾವೇ ಸ್ವೀಕರಿಸಿದುದರ ಫಲವಾಗಿಯೋ ಕ್ರಿ. ಶ. ೧೮೮೫ ನೆಯ ಸಂವತ್ಸರದಲ್ಲಿ ಪರಮಹಂಸರಿಗೆ ಕಂಠರೋಗ ಪ್ರಾಪ್ತವಾಯಿತು. ವೈದ್ಯರು ಮಾತಾಡಬಾರದೆಂದೂ ಉದ್ವೇಗಕರವಾದ ಭಾವಗಳಿಗೆ ಎಡೆಗೊಡಬಾರದೆಂದೂ ಹೇಳಿದರು. ಆದರೆ ಅವರು ಬಹುದೂರದಿಂದ ತಮ್ಮೆಡೆಗೆ ಬರುತ್ತಿದ್ದ ಜನಗಳಿಗೆ ಉಪದೇಶ ಮಾಡುವುದನ್ನು ನಿಲ್ಲಿಸಲಿಲ್ಲ; ಸಮಾಧಿಯ ಅವಸ್ಥೆಗಳಂತೂ ಹೇಳದೆ ಕೇಳದೆ ಬರುತ್ತಿದ್ದವು. ಹೀಗಾಗಿ ರೋಗ ವಿಷಮವಾಯಿತು.

ಶಿಷ್ಯರೆಲ್ಲರೂ ಸೇರಿ ಕಲ್ಕತ್ತೆಯಲ್ಲಿ ಒಂದು ಮನೆಯನ್ನು ಬಾಡಿಗೆಗೆ ತೆಗೆದುಕೊಂಡು ಗುರುದೇವನನ್ನು ಅಲ್ಲಿಗೆ ಸಾಗಿಸಿದರು. ನಗರದ ಸುಪ್ರಸಿದ್ಧ ವೈದ್ಯನಾಗಿದ್ದ ಡಾಕ್ಟರ್ ಮಹೇಂದ್ರಲಾಲ ಸರ್ಕಾರನು ಪರಮಹಂಸರಿಗೆ ಉಚಿತವಾಗಿ ಚಿಕಿತ್ಸೆ ಮಾಡಲು ಸಂತೋಷದಿಂದ ಒಪ್ಪಿಕೊಂಡನು. ಪಾಶ್ಚಾತ್ಯ ವಿದ್ಯಾಪಾರಂಗತನಾಗಿದ್ದ ಆತನು ವಿಚಾರ ಪಕ್ಷಪಾತಿಯಾಗಿದ್ದುದರಿಂದ ಮತ, ಧರ್ಮ, ಭಕ್ತಿ, ದೇವರು ಮೊದಲಾದವುಗಳನ್ನು ಅಷ್ಟೇನೂ ಗೌರವದಿಂದ ಕಾಣುತ್ತಿರಲಿಲ್ಲ. ಪರಮಹಂಸರಿಗೆ ಮುಖತಃ ತನ್ನ ಅಭಿಪ್ರಾಯಗಳನ್ನು ಹೇಳಲೂ ಹಿಂಜರಿಯಲಿಲ್ಲ. ಆದರೆ ಕ್ರಮೇಣ ಆತನಿಗೆ ಪರಮಹಂಸರಲ್ಲಿ ಅಸಾಧಾರಣ ಗೌರವವುಂಟಾಯಿತು.

ಒಂದು ಸಾರಿ ಅವರು ಮಹೇಂದ್ರಲಾಲನನ್ನು ಆತನು ಮಾಡಿದ ಉಪಕಾರಕ್ಕಾಗಿ ವಂದಿಸಲು ಆತನೆಂದು “ನಿಮಗಾಗಿ ಮಾತ್ರವೆ ನಾನಿಲ್ಲಿಗೆ ಬರುತ್ತಿದ್ದೇನೆ ಎಂದು ತಿಳಿಯಬೇಡಿ. ಅದರಲ್ಲೊಂದು ಸ್ವಾರ್ಥವಿದೆ. ನಿಮ್ಮ ಸಂಗದಲ್ಲಿ ನನಗೆ  ಅತ್ಯಾನಂದವಾಗುತ್ತದೆ. ಇದುವರೆಗೆ ನಿಮ್ಮ ನಿಕಟ ಸಂಗದಲ್ಲಿರಲು ನನಗೆ ಅವಕಾಶವೆ ದೊರಕಿರಲಿಲ್ಲ. ವಿಷಯಾಂತರಗಳಲ್ಲಿ ತಲ್ಲೀನನಾಗಿದ್ದೆ. ಬಾಯಿಬಿಟ್ಟು ಹೇಳಿಬಿಡುತ್ತೇನೆ ಮನಸ್ಸಿನಲ್ಲಿರುವುದನ್ನು. ನಿಮ್ಮನ್ನು ಕಂಡರೆ ನನಗೆ ಬಹಳ ಪ್ರೀತಿ. ಪ್ರಾಣಹೋದರೂ ನೀವು ಸತ್ಯವನ್ನು ಬಿಟ್ಟು ಒಂದು ಗೆರೆ ಆಚೆ ಹೋಗುವುದಿಲ್ಲ… ಮುಖಸ್ತುತಿ ಮಾಡುತ್ತೇನೆಂದು ತಿಳಿಯಬೇಡಿ. ನನ್ನ ತಂದೆಯಾದರೂ ಸರಿಯೆ ತಪ್ಪು ಮಾಡಿದರೆ ಆತನ ಎದುರಿಗೆ ಹೇಳಿಬಿಡುವುದು ನನ್ನ ಸ್ವಭಾವ. ಅಂತಹ ಒರಟುತನದಿಂದ ನನಗೆ ಅಪಕೀರ್ತಿ ಕೂಡ ಬಂದಿದೆ… ಆದರೆ ನಿಮ್ಮ ಶಿಷ್ಯರು ನಿಮ್ಮನ್ನು ಈಶ್ವರನ ಅವತಾರವೆಂದು ಭಾವಿಸಿ ಸಾರುತ್ತಿರುವುದು ನನಗೇಕೊ ಸರಿಯೆಂದು ತೋರುವುದಿಲ್ಲ. ಅನಂತನೂ ನಿರಾಕಾರನೂ ಆದ ದೇವರು ಮನುಷ್ಯ ಶರೀರಧಾರಣೆಮಾಡಿ ಅವತಾರ ಮಾಡುವನೆಂಬ ನಂಬುಗೆಯೆ ಮತಧರ್ಮಗಳ ಅಧೋಗತಿಗೆ ಮೂಲಕಾರಣವಾಗಿದೆ ಎಂದು ನನ್ನ ಭಾವನೆ.”

“ಹೌದು, ನೀನೆನ್ನುವುದೂ  ನಿಜವೆ. ನನ್ನನ್ನು ಅವತಾರವೆಂದು ಸಾರುತ್ತಿರುವುದು ನನಗೂ ಸರಿಬೀಳುವುದಿಲ್ಲ.” ಎಂದು ಪರಮಹಂಸರು ನಗುಮೊಗದಿಂದ ಹೇಳಿದರು.

ಈ ಸಂಭಾಷಣೆ ನಡೆದ ಒಂದೆರಡು ದಿನಗಳಲ್ಲಿ ಮಹೇಂದ್ರಲಾಲನಿಗೆ ಶ್ರೀರಾಮಕೃಷ್ಣರ ಅದ್ಭುತ ವ್ಯಕ್ತಿತ್ವದ ಪರಿಷಯವಾಗುವಂತೆ ಒಂದು ಸಂಗತಿ ನಡೆಯಿತು. ವೈದ್ಯನ ಕಣ್ಣೆದುರಿನಲ್ಲಿಯೆ ಪರಮಹಂಸರು ಸಮಾಧಿಸ್ಥರಾದರು. ದೇಹ ಶವದಂತಿದ್ದರೂ ಮುಖದಲ್ಲಿ ಕಳೆಯಿತ್ತು. ಮಹೇಂದ್ರನು ತನ್ನ ಸ್ಟೆತೋಸ್ಕೋಪಿನಿಂದ ಪರೀಕ್ಷೆ ನಡೆಸಿದನು. ನಾಡಿಗಳ ಸಂಚಾರವೆ ಇರಲಿಲ್ಲ. ಹೃದಯ ಸ್ತಬ್ದವಾಗಿತ್ತು. ಕಣ್ಣು ಹರಳಿಗೆ ಕೈಬೆರಳುಗಳನ್ನು ಮುಟ್ಟಿಸಿ ನೋಡಿದನು. ಅದೂ ಹೆಣದ ಕಣ್ಣು ಹರಳಿನಂತೆ ನಿಶ್ಚಲವಾಗಿತ್ತು. ವೈದ್ಯನು ಬೆಪ್ಪುಬೆರಗಾದನು. ತಾನರಿತ ವಿಜ್ಞಾನಶಾಸ್ತ್ರವು ಆ ಸಮಾಧಿ ಸ್ಥಿತಿಗೆ ಉಪಪತ್ತಿ ಹೇಳಲು ಅಸಮರ್ಥವಾಗಿದೆ ಎಂದು ಒಪ್ಪಿಕೊಂಡನು. ಇದೇ ಸಮಯದಲ್ಲಿ ಪ್ರಭುದಯಾಲಮಿಶ್ರ ಎಂಬೊಬ್ಬ ಕ್ರೈಸ್ತಸಾಧು ಪರಮಹಂಸರನ್ನು ಸಂದರ್ಶಿಸಲು ಉತ್ತರಭಾರತದ  ಪ್ರಾಂತದಿಂದ ಬಂದನು. ಆತನು ಶ್ರೀರಾಮಕೃಷ್ಣರಲ್ಲಿ ತನ್ನ ಇಷ್ಟದೈವವನ್ನು ಕಂಡು ಕೃತಾರ್ಥನಾದನು.

ಪ್ರಭುದಯಾಲ: ಭಗಂವತನೆ ಎಲ್ಲಜೀವಿಗಳ ರೂಪವನ್ನು ಧಾರಣೆ ಮಾಡಿದ್ದಾನೆ.

ಪರಮಹಂಸರು: ಒಬ್ಬನೆ ಈಶ್ವರನಿಗೆ ಸಹಸ್ರನಾಮಗಳಿವೆ.

ಪ್ರಭುದಯಾಲನು ಅಲ್ಲಿ ನೆರೆದಿದ್ದ ಭಕ್ತವೃಂದವನ್ನು ನಿರ್ದೇಶಿಸಿ “ಕ್ರಿಸ್ತನು ಮೇರಿಯ ಪುತ್ರ ಮಾತ್ರವಲ್ಲ; ಸಾಕ್ಷಾತ್ ಈಶ್ವರನು” ಎಂದು ಪರಮಹಂಸರನ್ನು ತೋರಿಸುತ್ತ “ಈ ಸಮಯದಲ್ಲಿ ಇವರು ಹೀಗೆ ಕಾಣುತ್ತಿದ್ದಾರೆ. ಬೇರೆಯ ಸಮಯದಲ್ಲೊ ಇವರು ಈಶ್ವರನಲ್ಲದೆ ಬೇರೆಯಲ್ಲ; ನಿಮಗಿನ್ನೂ ಇವರ ಸಂಪೂರ್ಣ ಪರಿಚಯವಾಗಿಲ್ಲ. ಅನೇಕ ದಿನಗಳ ಹಿಂದೆ ನನಗಿವರು ದರ್ಶನದಲ್ಲಿ ಪ್ರತ್ಯಕ್ಷವಾಗಿದ್ದರು. ಇಂದು ವಸ್ತುತಃ ನೋಡುತ್ತಿದ್ದೇನೆ” ಎಂದನು.

ಪರಮಹಂಸರು: ನಿನಗೇನಾದರೂ ದರ್ಶನಗಳಾಗುತ್ತವೆಯೆ?

ಪ್ರಭುದಯಾಲ: ಹೌದು. ನಾನೊಂದು ಸಲ ದರ್ಶನದಲ್ಲಿ ಯೇಸುಕ್ರಿಸ್ತನನ್ನು ಕಂಡಿದ್ದೇನೆ.

ಪರಮಹಂಸರು ಸ್ವಲ್ಪಕಾಲ ಹೊರಗೆ ಹೋಗಿ ಹಿಂದಿರುಗಿ ಬಂದು “ಹೌದು; ನಾನಲ್ಲಿ ನಿನ್ನನ್ನು ಕಂಡಿದ್ದೆ…. ನಿನ್ನಿಚ್ಛೆ ನೆರವೇರುತ್ತದೆ” ಎಂದರು.

ಪ್ರಭುದಯಾಲನು ಕೈಮುಗಿದುಕೊಂಡು “ಅಂದಿನಿಂದ ನಾನು ನಿಮಗೆ ಸಂಪೂರ್ಣವಾಗಿ ಶರಣು ಹೋಗಿದ್ದೇನೆ. ನನ್ನ ತನುಮನ ಆತ್ಮಗಳನ್ನೆಲ್ಲ ನಿಮಗೆ ಅರ್ಪಿಸಿದ್ದೇನೆ.” ಎಂದು ನಮಸ್ಕಾರ ಮಾಡಿದನು.

ಇಂತು ದಿನಗಳು ಕಳೆದವು. ಗುರುದೇವನ ರುಜೆ ಗುಣವಾಗಲಿಲ್ಲ. ಕಡೆಗೆ ಡಾಕ್ಟರ್ ಸರ್ಕಾರನ ಸಲಹೆಯಂತೆ ಹವಾ ಬದಲಾಮಣೆಗಾಗಿಯೂ ಸನ್ನಿವೇಶ ಪ್ರಶಾಂತತೆಗಾಗಿಯೂ ಶಿಷ್ಯರೆಲ್ಲರೂ ಸೇರಿ ನಗರಕ್ಕೆ ಸಮೀಪವಾಗಿದ್ದ ಕಾಶಿಪುರದ ತೋಟದಮನೆಯೊಂದಕ್ಕೆ ಪರಮಹಂಸರನ್ನು ಸಾಗಿಸಿದರು. ಆ ಸ್ಥಳವು ವೃಕ್ಷಗಳಿಂದಲೂ ವನಲತಾನಿಕುಂಜಗಳಿಂದಲೂ ಪರಿವೃತವಾಗಿ ರಮಣೀಯವಾಗಿತ್ತು. ಶಾರದಾದೇವಿ ಗುರುದೇವನ ಶುಶ್ರೂಷೆಗಾಗಿ ಅಲ್ಲಿಗೆ ಬಂದು ನಿಂತರು. ನರೇಂದ್ರ, ರಾಖಾಲ, ಬಾಬುರಾಮ, ನಿರಂಜನ, ಯೋಗೀಂದ್ರ. ಲಾಟು. ತಾರಕ, ಹಿರಿಯ ಗೋಪಾಲ, ಕಾಲಿ, ಶಶಿ, ಶರತ್, ಕಿರಿಯಗೋಪಾಲ ಮೊದಲಾದ ಅಂತರಂಗದ ಶಿಷ್ಯರು ಪರಮಹಂಸರ ಪರಿಚರ್ಯೆಗಾಗಿ ತೋಟದಮನೆಯಲ್ಲಿಯೆ ವಾಸಿಸತೊಡಗಿದರು. ಗಿರೀಶ ಚಂದ್ರಘೋಷ, ಮಹೇಂದ್ರನಾಥಗುಪ್ತ. ರಾಮಚಂದ್ರದತ್ತ ಮೊದಲಾದ ಸಂಸಾರಿಶಿಷ್ಯರು ಪದೇ ಪದೇ ಅಲ್ಲಿಗೆ ಬಂದು ಸೇವೆ ಮಾಡುತ್ತಿದ್ದರು. ಡಾ. ಮಹೇಂದ್ರಲಾಲ ಸರ್ಕಾರನು ದಿನಕ್ಕೊಂದು ಬಾರಿ ತಪ್ಪದೆ ಬಂದು ನೋಡಿಕೊಂಡು ಹೋಗುತ್ತಿದ್ದನು ನವಯುಗಾವತಾರನ ದರ್ಶನಕ್ಕಾಗಿ ದೇಶ ವಿದೇಶಗಳಿಂದ ಬರುವ ಜನರ ಪ್ರವಾಹ ತುಂಡುಗಡಿಯದಿದ್ದತು.

ಈ ಮಧ್ಯೆ ನರೇಂದ್ರನು ತನ್ನ ಗುರುಭ್ರಾತೃಗಳನ್ನೆಲ್ಲ ಬಳಿಗೆ ಕರೆದು, ಅವರ ಭಕ್ತಿನಾಮಕವಾದ ರಾಗೋತ್ಕರ್ಷಗಳನ್ನೆಲ್ಲ ಖಂಡಿಸಿ, ಅವರಲ್ಲಿ ವಿಚಾರಬುದ್ದಿಯನ್ನು ಉದ್ದೀಪನಗೊಳಿಸಿ, ಮುಂದಿನ ಶ್ರೀರಾಮಕೃಷ್ಣ ಮಹಾಸಂಘಕ್ಕೆ ಅಸ್ತಿವಾರ ಹಾಕುತ್ತಿದ್ದನು. ಒಂದು ದಿನ ಅವರೆಲ್ಲರನ್ನೂ ನೆರವಿ “ಗುರುದೇವನ ರೋಗ ವಿಷಮಾವಸ್ಥೆಗೇರಿದೆ. ಯಾರು ಬಲ್ಲರು? ದೇಹತ್ಯಾಗ ಮಾಡಲು ಇದೊಂದು ನೆವವಿರಬಹುದು. ಅವಕಾಶವಿರುವಾಗಲೆ ಸೇವೆ, ಪ್ರಾರ್ಥನೆ, ಧ್ಯಾನಗಳಿಂದ ಆತ್ಮಸಾಕ್ಷಾತ್ಕಾರ ಪಡೆಯಲು ನಾವೆಲ್ಲರೂ ಪ್ರಯತ್ನಿಸಬೇಕು. ನಾವೀಗ ಉದಾಸೀನ ಮಾಡಿದರೆ ತರುವಾಯ ಪಶ್ಚಾತ್ತಾಪ ಪಡಬೇಕಾದೀತು. ನಾವೀಗ  ತೋರುತ್ತಿರುವ ಬರಿಯ ಭಾವೋದ್ರೇಕ ಶಾಶ್ವತ ಫಲಕಾರಿಯಾಗಲಾರದು. ನಾಳೆ ನಾಳೆ ಎನ್ನುತ್ತ ಕುಳಿತರೆ ಕೆಲಸವಾಗುವುದಿಲ್ಲ. ವಜ್ರಮನಸ್ಸಿನಿಂದ ಬಂಧನಗಳನ್ನೆಲ್ಲ ತುಂಡರಿಸಿ ಸಾಧನೆ ಮಾಡಬೇಕು” ಎಂದು ಬೋಧಿಸಿದರು. ಆ ದಿನ ರಾತ್ರಿಯೆ ಸಂನ್ಯಾಸಿಗಳು ಮಾಡುವಂತೆ “ಧುನಿ” ಯನ್ನು ಹೊತ್ತಿಸಿ ಶಿಷ್ಯರೆಲ್ಲರೂ ಬಹಳಕಾಲ ಧ್ಯಾನ ಮಾಡಿದರು.

ಒಂದು ದಿನ ಶ್ರೀರಾಮಕೃಷ್ಣರನ್ನು ನೋಡಲೆಂದು ಬಂದ ಪಂಡಿತ ಶಶಿಧರ ತರ್ಕಚೂಡಾಮಣಿ ಅವರನ್ನು ಕುರಿತು “ಮಹಾಶಯ ತಮ್ಮಂತಹ ಯೋಗಿಗಳು ಇಚ್ಛಾಮಾತ್ರದಿಂದ ರೋಗನಿವಾರಣೆ ಮಾಡಿಕೊಳ್ಳಲು ಸಮರ್ಥರೆಂದು ಶಾಸ್ತ್ರಗಳು  ಹೇಳುತ್ತವೆ. ನೀವೇಕೆ ಹಾಗೆ ಮಾಡಬಾರದು?” ಎಂದನು.

“ಪಂಡಿತನಾಗಿ ಇಂತಹ ಮಾತು ಆಡುತ್ತೀಯಲ್ಲಾ! ಈ ಮನಸ್ಸು ಸಂಪೂರ್ಣವಾಗಿ ಈಶ್ವರಾರ್ಪಿತವಾಗಿದೆ. ಅದನ್ನು ಹಿಂದಕ್ಕೆ ಕರೆದು ಈ ನಶ್ವರ ಶರೀರಕ್ಕೆ ದಾನಮಾಡಿಬಿಡಲೆ?” ಎಂದರು ಪರಮಹಂಸರು. ಶಶಧರನು ಸುಮ್ಮನಾದನು. ಆದರೆ ನರೇಂದ್ರನು ಮೊದಲಾದ ಶಿಷ್ಯರು ಬಿಡಲಿಲ್ಲ.

“ನಮಗಾಗಿಯಾದರೂ ರೋಗವನ್ನು  ಗುಣಮಾಡಿಕೊಳ್ಳಬೇಕು” ಎಂದರು.

ಪರಮಹಂಸರು: ನಾನೇನು ಬೇಕೆಂದು ರೋಗವನ್ನು ಬರಮಾಡಿಕೊಂಡಿದ್ದೇನೆಯೆ? ವಾಸಿಯಾಗಲಿ ಎಂದು ನನಗೂ ಆಸೆ. ಆದರೆ ಅದು ಹೇಗೆ ಸಾಧ್ಯ? ಎಲ್ಲಾ ಜಗನ್ಮಾತೆಯ ಕೈಯಲ್ಲಿದೆ.

ನರೇಂದ್ರ: ಹಾಗಾದರೆ ಆಕೆಯನ್ನು ಪ್ರಾರ್ಥಿಸಿ. ನಿಮ್ಮ ಪ್ರಾರ್ಥನೆಯನ್ನು  ಕೇಳಿಯೆ ಕೇಳುತ್ತಾಳೆ. ಪರಮಹಂಸರು: ನೀನೇನೂ ಸುಲಭವಾಗಿ ಹೇಳಿಬಿಡುತ್ತೀಯೆ. ಆದರೆ ನನ್ನ ಬಾಯಿಂದ ಅಂಥಾ ಪ್ರಾರ್ಥನೆ ಹೊರಡಲಾರದು.

ನರೇಂದ್ರ: ಉಹುಂ; ಅದಾಗದು. ನಮಗಾಗಿ ನೀವು ಪ್ರಾರ್ಥಸಲೇಬೇಕು.

ಪರಮಹಂಸರು: ಆಗಲಿ; ಪ್ರಯತ್ನಿಸುತ್ತೇನೆ.

ಸ್ವಲ್ಪ ಹೊತ್ತಾದಮೇಲೆ ನರೇಂದ್ರನು ತನ್ನ ಪ್ರಾರ್ಥನೆ ಏನಾಯಿತೆಂದು ವಿಚಾರಿಸಿದನು. ಪರಮಹಂಸರು “ಊಟಮಾಡುವುದಕ್ಕೆ ಆಗುವುದಿಲ್ಲ; ಏನಾದರೂ ಹೊಟ್ಟೆಗೆ ಹೋಗುವಂತೆ ಮಾಡು” ಎಂದು ತಾಯಿಯನ್ನು ಕೇಳಿದೆ. ಆಕೆ ನಿಮ್ಮನ್ನೆಲ್ಲ ತೋರಿಸಿ “ಏಕೆ? ಈ ಎಲ್ಲ ಬಾಯಿಗಳಿಂದಲೂ ನೀನು ಊಟಮಾಡುತ್ತಿದ್ದೀಯಲ್ಲಾ! ಎಂದಳು. ನನಗೆ ಅವಮಾನವಾದಂತಾಗಿ ಬೇರೆ ಉಸಿರೆತ್ತಲಿಲ್ಲ” ಎಂದರು.

ಇನ್ನೊಂದು ದಿನ ಸಂಧ್ಯಾಕಾಲ ಗುರುದೇವನು ತನ್ನವರೊಡನೆ ಮಾತನಾಡುತ್ತ “ನನ್ನ ಕೆಲಸವೆಲ್ಲ ಇನ್ನೇನು ಮುಗಿದಂತೆ, ನಾನಿನ್ನು ಉಪದೇಶ ಮಾಡಲಾರೆ. ಜಗತ್ತೆಲ್ಲವೂ ಬ್ರಹ್ಮಮಯವಾಗಿ ಕಾಣುತ್ತಿದೆ. ಎಲ್ಲವೂ ಈಶ್ವರನೇ, ನಾನು ಯಾರಿಗೆಂದು ಬೋಧಿಸಲಿ? ಎಂದನು.

ಕ್ರಿ.ಶ. ೧೮೮೬ನೆಯ ಜನವರಿ ಮೊದಲನೆ ತೇದಿ. ರೋಗ ಸ್ವಲ್ಪ ಶಮನವಾದಂತೆ ತೋರಿದುದರಿಂದ ಪರಮಹಂಸರು ಹೊರಗೆ  ಬಂದು ಉದ್ಯಾನದಲ್ಲಿ ತಿರುಗಾಡಲು ಬಯಸಿದರು. ಸಮಯ ಮಧ್ಯಾಹ್ನವಾಗಿತ್ತು. ರಜದ ದಿನವಾದ್ದರಿಂದ ಶಿಷ್ಯರೂ ಇತರರೂ ಸೇರಿ ಬಹಳ ಮಂದಿ ನೆರೆದಿತ್ತು. ಕೆಲವರು ಮನೆಯ ಒಳಗಿದ್ದರು. ಕೆಲವರು ಮರಗಳ ಕೆಳಗೆ ಕುಳಿತು ಮಾತಾಡುತ್ತಿದ್ದರು. ಪರಮಹಂಸರು ಉಪ್ಪರಿಗೆಯಿಂದ ಮೆಲ್ಲಗೆ ಕೆಳಗಿಳಿದು ತೋಟಕ್ಕೆ ಬಂದರು. ಗಿರೀಶ ಚಂದ್ರನೂ ರಾಮಚಂದ್ರನೂ ಮತ್ತು ಅಲ್ಲಿ ಕುಳಿತಿದ್ದವರೂ ಎದ್ದು ಬಂದು ನಮಸ್ಕಾರ ಮಾಡಿದರು. ಪರಮಹಂಸರು ಗಿರೀಶನನ್ನು ಕುರಿತು “ಗಿರೀಶ, ನೀನೇಕೆ ನನ್ನನ್ನು ಅವತಾರವೆಂದು ಸಾರುವುದು? ನನ್ನಲ್ಲಿ ಏನು ಕಂಡೆ?” ಎಂದು ಪ್ರಶ್ನೆ ಮಾಡಿದರು. ಗಿರೀಶನು ಹಿಂದುಮುಂದು ನೋಡದೆ “ವ್ಯಾಸವಾಲ್ಮೀಕಿಗಳೂ ಕೂಡ ಯಾರ ಮಹಿಮೆಯನ್ನು ಸಾರಲೆಳಸಿ, ಸಾರಿ ಮುಗಿಸಲಾರದೆ ಸೋತು ಹೋದರೋ ಆತನನ್ನು ನನ್ನಂತಹ ಅಲ್ಪಾತ್ಮನು ಏನೆಂದು ತಾನೆ ಸ್ತುತಿಸಬಲ್ಲನು!” ಎಂದನು “ನಾನೂ ಇನ್ನೇನು ಹೇಳಲಿ? ನಿಮಗೆಲ್ಲರಿಗೂ ಚೈತನ್ಯೋದಯವಾಗಲಿ ಎಂದು ಆಶೀರ್ವದಿಸುತ್ತೇನೆ.” ಎಂದು ಹೇಳಿ ಗುರುದೇವನು ಸಮಾಧಿಮಗ್ನನಾದನು. ಅಲ್ಲಿದ್ದವರೆಲ್ಲರೂ ಒಬ್ಬೊಬ್ಬರಾಗಿ ಕಾಲುಮುಟ್ಟಿ ನಮಸ್ಕರಿಸಿದರು. ಒಬ್ಬೊಬ್ಬರಿಗೂ ಒಂದೊಂದು ಅನುಭವವಾಗಿ ಎಲ್ಲರೂ ಹುಚ್ಚರಂತೆ ಕುಣಿದು ಕೂಗತೊಡಗಿದರು. ಕೆಲವರಿಗೆ ಜ್ಯೋತಿದರ್ಶನವಾಯಿತು. ಕೆಲವರಿಗರ ಇಷ್ಟ ದೈವ ಪ್ರತ್ಯಕ್ಷವಾಯಿತು. ಕೆಲವರಿಗೆ ಆನಂದದ ಮಿಂಚು ಮುಟ್ಟಿದಂತಾಯಿತು. ಕೆಲವರು ನಕ್ಕರು; ಕೆಲವರು ಅತ್ತರು; ಕೆಲವರು ಧ್ಯಾನಸ್ಥರಾಗಿ ಕುಳಿತುಬಿಟ್ಟರು; ಉಳಿದವರು ಜಯಗಾಘೋಷಮಾಡಿ ಕುಣಿಯತೊಡಗಿದರು. ಆ ದಿನ ಅವರೆಲ್ಲರಿಗೂ “ಕಲ್ಪತರು” ದಿನವಾಯಿತು. ನರೇಂದ್ರ ಮೊದಲಾದ ಕೆಲವರು ರಾತ್ರಿಯಲ್ಲಿ ನಿದ್ದೆಮಾಡದೆ ಶುಶ್ರೂಷೆ ಮಾಡಿದ್ದರಿಂದ ಆಗತಾನೆ ಮಲಗಿದ್ದರು. ಶರತ್, ಲಾಟು ಇಬ್ಬರೂ ಅದೇ ಸಮಯವೆಂದು ಗುರುದೇವನ ಕೊಠಡಿಯನ್ನು ಗುಡಿಸಿ. ಹಾಸಿಗೆಯನ್ನು ಕೊಡವಿ ಸಿದ್ಧಮಾಡುತ್ತಿದ್ದರು. ಅವರೆಲ್ಲರೂ ಕೋಲಾಹಲವನ್ನು ಕೇಳಿ ಹೊರಗೆ ಬಂದು ಆನಂದೋತ್ಸವದ ಆ ಅದ್ಭುತ ದೃಶ್ಯವನ್ನು ಕಂಡು ಬೆರಗಾದರು.

ನರೇಂದ್ರನ ಹೃದಯತೃಷ್ಣೆ ಮಾತ್ರ ಶಾಂತವಾಗಲಿಲ್ಲ. ದಿನ ಕಳೆದ ಹಾಗೆಲ್ಲ ಅವನಿಗೆ ನಿರ್ವಿಕಲ್ಪ ಸಮಾಧಿಯಲ್ಲಿ ಬ್ರಹ್ಮಸಾಕ್ಷಾತ್ಕಾರ ಮಾಡಬೇಕೆಂಬ ಅಭಿಲಾಷೆ ತೀವ್ರವಾಯಿತು. ಅದಕ್ಕಾಗಿ ದೀರ್ಘಕಾಲ ಧ್ಯಾನಮಗ್ನನಾಗಿರುತ್ತಿದ್ದನು. ಒಂದು ಸಾರಿ ಪರಮಹಂಸರಲ್ಲಿಗೆ ಬಂದು “ಪ್ರತಿಯೊಬ್ಬರೂ ತಮ್ಮಿಂದ ಅನುಗ್ರಹೀತರಾದರು. ನನಗೂ ಏನಾದರೂ ಅನುಗ್ರಹ ಮಾಡಬೇಕು” ಎಂದನು. ಅದಕ್ಕೆ ಪರಮಹಂಸರು “ನಿನ್ನ ಮನೆಯವರಿಗೆ ಏನಾದರೂ ಅನುಕೂಲ ಕಲ್ಪಿಸಿಕೊಟ್ಟು ಬಾ, ಆಮೇಲೆ ಎಲ್ಲವೂ ಲಭಿಸುತ್ತದೆ – ನಿನ್ನಿಚ್ಛೆ ಏನಿದೆ? ಹೇಳಿಬಿಡು” ಎಂದರು.”ನಿರಂತರ ಸಮಾಧಿಮಗ್ನನಾಗಿರಬೇಕೆಂಬುದು ನನ್ನಾಸೆ” ಎಂದ ಶಿಷ್ಯನ ಮಾತಿಗೆ ಗುರುಗಳು ತಟಕ್ಕನೆ “ನೀನು ಶುದ್ಧಮೂರ್ಖ, ಸಮಾಧಿಗಿಂತಲೂ ಉತ್ತಮತರವಾದ ಸ್ಥಿತಿಯೊಂದಿದೆ. ಇರುವುದೆಲ್ಲವೂ ನೀನೆ ಎಂದು ನೀನು ಕೀರ್ತನೆ ಮಾಡುವುದಿಲ್ಲವೆ? ನಿನ್ನ ಮನೆಯವರಿಗೆ ಅನುಕೂಲ ಕಲ್ಪಿಸಿಕೊಟ್ಟು ಬಾ. ಸಮಾಧಿಗಿಂತಲೂ ಒಂದು ಕೈ ಮೇಲಾದ ಸ್ಥಿತಿ ನಿನ್ನದಾಗುವುದು” ಎಂದರು.

ನರೇಂದ್ರನು ಮನೆಗೆ ಹೋದನು. ಎದೆಯ ಬೇನೆ  ಅತಿಯಾಯಿತು. ಪುನಃ ಹಿಂತಿರುಗಿ ಕಾಶೀಪುರಕ್ಕೆ ಓಡಿಬಂದನು. ಆ ರಾತ್ರಿಯೆ ಗುರುದೇವನ ಸೂಚನೆಯಂತೆ ದಕ್ಷಿಣೇಶ್ವರಕ್ಕೆ ಹೋಗಿ ಸಾಧನೆಯಲ್ಲಿ ನಿರತನಾದನು.

ಇನ್ನೊಂದು ದಿನ ಶ್ರೀರಾಮಕೃಷ್ಣರು ತಮ್ಮ ಮುಖ್ಯ ಶಿಷ್ಯನನ್ನು ಬಳಿಗೆ ಕರೆದು “ನರೇನ್, ಈ ಬಾಲಕರನ್ನೆಲ್ಲ ನಿನ್ನ ವಶದಲ್ಲಿ ಬಿಡುತ್ತೇನೆ. ಅವರು ಆತ್ಮ ಸಾಧನೆಯಲ್ಲಿ ನಿರತರಾಗುವಂತೆ ಮಾಡು. ಪುನಃ ಸಂಸಾರಕ್ಕೆ ಮರಳದಂತೆ ನೋಡಿಕೋ” ಎಂದು ಹೇಳಿದರು. ಶಿಷ್ಯರಲ್ಲಿ ಅನೇಕರು ನರೇಂದ್ರನಿಗಿಂತಲೂ ವಯಸ್ಸಿನಲ್ಲಿ ಹಿರಿಯರಾಗಿಯೂ ಆತನ ನಾಯಕತ್ವವನ್ನು ಮುದದಿಂದ ಒಪ್ಪಿಕೊಂಡರು.

ಇದಾದ ಕೆಲವು ದಿನಗಳಲ್ಲಿ ಶಿಷ್ಯರಿಗೆ ಕಾಷಾಯ ವಸ್ತ್ರಗಳನ್ನು ಕೊಟ್ಟು ಸಂನ್ಯಾಸವನ್ನು ದಾನಮಾಡಿ ಮನೆಮನೆಗೂ ಹೋಗಿ ಭಿಕ್ಷೆಯೆತ್ತುವಂತೆ ಕಳುಹಿಸಿದರು. ಅವರೆಲ್ಲರೂ ಉತ್ಸಾಹದಿಂದ ಎತ್ತಿ ತಂದ ಭೀಕ್ಷೆಯನ್ನು ತಾವೂ ಸ್ವೀಕರಿಸಿ ಆಶೀರ್ವದಿಸಿದರು.

ಸಂಜೆಯಲ್ಲಿ ಶಿಷ್ಯರೆಲ್ಲರೂ ಧ್ಯಾನ ಮಾಡಲೆಂದು ತೋಟದ ಮರಗಳ ಕೆಳಗೆ ಅಲ್ಲಲ್ಲಿ ಕುಳಿತರು. ನರೇಂದ್ರನೂ ಕುಳಿತನು. ಇದ್ದಕ್ಕಿದ್ದಹಾಗೆ ಆತನ ಶಿರಸ್ಸಿನಲ್ಲಿ ಜ್ಯೋತಿಯ ಆವಿರ್ಭಾವವಾದಂತೆ ಭಾಸವಾಯಿತು. ಹಠತ್ತಾಗಿ ಅಲುಗಾಡಲಿಲ್ಲ. ಶರೀರವು ಶಿಲಾಪ್ರತಿಮೆಯಂತೆ ನಿಷ್ಪಂದವಾಗಿತ್ತು. ಶಿಷ್ಯರಲ್ಲಿ ಕೆಲವರು ಬೆದರಿ ಗುರುಗಳ ಬಳಿಗೆ ಹೋಗಿ ಸುದ್ದಿ ತಿಳಿಸಿದರು. ಭಾವದಲ್ಲಿದ್ದ ಪರಮಹಂಸರು “ಇನ್ನೂ ಸ್ವಲ್ಪ ಕಾಲ ಇರಲಿ, ಆ ಸ್ಥತಿಯಲ್ಲಿ! ಅದಕ್ಕಾಗಿ ಅವನು ನನ್ನನ್ನು ಬಹಳ ಪೀಡಿಸಿದ್ದಾನೆ!” ಎಂದರು. ಸ್ವಲ್ಪ ಸಮಯ ಕಳೆದ ತರುವಾಯ ನರೇಂದ್ರನು ಮೈತಿಳಿದನು.”ಅಯ್ಯೋ! ನನ್ನ ಶರೀವೆಲ್ಲಿ?” ಎಂದು ಕೂಗಿಕೊಂಡನು. ಹತ್ತಿರವಿದ್ದ ಗುರುಭ್ರಾತೃಗಳು “ಇಲ್ಲಿದೆ, ನೆರೇನ್, ಇಲ್ಲಿದೆ!” ಎಂದು ಅವನ ದೇಹವನ್ನು ಮುಟ್ಟಿ ಗಟ್ಟಿಯಾಗಿ ಹೇಳಿದರು. ಆ ಆನಂದಸಮುದ್ರಸ್ನಾನವಾದ ಮೇಲೆ ನರೇಂದ್ರನು ಪರಮಹಂಸರಲ್ಲಿಗೆ ಬಂದು ಪ್ರಸನ್ನಚಿತ್ತನಾಗಿ ಸಾಷ್ಟಾಂಗ ಪ್ರಣಾಮ ಮಾಡಿದನು. ಗುರುವರ್ಯನು ನಗುಮೊಗದಿಂದ “ನೆರೇನ್, ನಿನಗೀಗ ಜಗನ್ಮಾತೆ ಎಲ್ಲವನ್ನೂ ತೋರಿಸಿಬಿಟ್ಟಿದ್ದಾಳೆ. ಆದರೆ ಸದ್ಯಕ್ಕೆ ನಿನ್ನ ಅನುಭವಕ್ಕೆ ಬೀಗಮುದ್ರೆ ಹಾಕಿದೆ; ಬೀಗದಕೈ ನನ್ನಲ್ಲಿರುತ್ತದೆ. ಮಾತೆಯ ಕಾರ್ಯಗಳನ್ನೆಲ್ಲಾ ನೀನು ಮಾಡಿ ಮುಗಿಸಿದ ಮೇಲೆ ಬೀಗ ತೆಗೆಯುತ್ತೇನೆ” ಎಂದು ಹರಸಿದರು. ಜೊತೆಗೆ ಕೆಲವು ದಿನಗಳವರೆಗೆ ಸಾತ್ತ್ವಿಕ ಆಹಾರಗಳನ್ನೆ ನಿಯಮ ಪ್ರಕಾರ ಸ್ವೀಕರಿಸಬೇಕೆಂದು ಬುದ್ದಿ ಹೇಳಿದರು.

ಮರುದಿನ ಬೆಳಿಗ್ಗೆ ಕಂಠರೋಗದ ಯಾತನೆ ಸ್ವಲ್ಪ ಶಮನವಾದಂತೆ ಕಂಡು ಬಂದಿತು. ಗುರುದೈವನು ಬಳಿಯಿದ್ದ ಶಿಷ್ಯರನ್ನು ಕುರಿತು ಇಂತೆಂದನು.

“ನಿಮಗಾಗಿ ನೋವನ್ನೆಲ್ಲಾ ಕಷ್ಟದಿಂದ ಸಹಿಸಿದ್ದೇನೆ. ಇಲ್ಲದಿದ್ದರೆ ನೀವೆಲ್ಲ ಅಳುತ್ತೀರಿ. ನೋವಿನಿಂದ ನರಳುವುದಕ್ಕಿಂತಲೂ ಶರೀರ ಬಿದ್ದು ಹೋದರೆಲೇಸೆಂದು ನೀವೆಲ್ಲರೂ ಹಾರೈಸಿದರೆ ಆಗ ಇದು ಬಿದ್ದುಹೊಗಬಹುದು… ರೋಗ ಶರೀರಕ್ಕೆ ಮಾತ್ರ. ಹಾಗಾಗುವುದೂ ಸ್ವಾಭಾವಿಕ. ಅದು ಜಡದ ಮುದ್ದೆ ಎಂಬುದು ನನಗೆ ಚೆನ್ನಾಗಿ ವೇದ್ಯವಾಗುತ್ತಿದೆ… ಈಶ್ವರನು ನಾನಾ ರೂಪಗಳನ್ನು ಧರಿಸುತ್ತಾನೆ. ಅವುಗಳಲ್ಲಿ ಈ ಶರೀರವೂ ಒಂದು…. ನಮಗೇನು ಕಾಣುತ್ತಿದೆ. ನಿಮಗೆ ಗೊತ್ತೆ? ಎಲ್ಲವೂ ಅವನೇ ಆಗಿದ್ದಾನೆ. ಮನುಷ್ಯ, ಪ್ರಾಣಿ, ತೋಟ, ಮನೆ, ಬೀದಿ ಎಲ್ಲವೂ ಅವನೇ. ಯಜಮಾನ, ಯಜ್ಞ, ಯಜ್ಞಪಶು, ಯುಪಸ್ತಂಭ ಎಲ್ಲವೂ ಅವನೇ.”

[1]

ಹೇಳುತ್ತ ಹೇಳುತ್ತ ಸಮಾಧಿಸ್ಥರಾಗಿ, ಸ್ವಲ್ಪಕಾಲದ ಮೇಲೆ ಮೈತಿಳಿದು “ಈಗೇನೂ ಯಾತನೆ ಇಲ್ಲ. ಸಂಪೂರ್ಣ ಸುಖವಾಗಿದ್ದೇನೆ” ಎಂದರು.

ಮತ್ತೆ ದೂರದಲ್ಲಿ ಕೂತಿದ್ದ ಲಾಟುವನ್ನು ನೋಡಿ “ಲಾಟು ತಲೆಯ ಮೇಲೆ ಕೈಹೊತ್ತುಕೊಂಡು ಕುಳಿತಿದ್ದಾನೆ. ನನಗೆ ಭಗವಂತನೆ ಹಾಗೆ ಕೂತಂತೆ ಕಾಣಿಸುತ್ತಿದೆ” ಎಂದರು. [2]

ಮತ್ತೆ ಹೇಳಿದರು:

“ಈ ಶರೀರ ಇನ್ನೂ ಕೆಲವುಕಾಲ ಬಾಳಿದ್ದರೆ ಇನ್ನೆಷ್ಟೋ ಜನಗಳಿಗೆ ಚೈತನ್ಯೋದಯವಾಗುತ್ತಿತ್ತು. ಆದರೆ ತಾಯಿಯ ಇಷ್ಟ ಹಾಗಿಲ್ಲ. ನನ್ನ ಸರಳ ಶೀಲತೆಯ ದೆಸೆಯಿಂದ ಅನರ್ಹರಿಗೂ ಎಲ್ಲಿಯಾದರೂ ಐಶ್ವರ್ಯ ಲಭಿಸಿಬಿಟ್ಟೀತೆಂದೋ ಏನೋ ಆಕೆ ನನ್ನನ್ನು ಕರೆದೊಯ್ಯೊತ್ತಿದ್ದಾಳೆ.”

ರಾಖಾಲ: ದಯವಿಟ್ಟು ನಮಗಾಗಿ ದೇಹ ಬಾಳುವಂತೆ ಕೇಳಿಕೊಳ್ಳಿ.

ಪರಮಹಂಸರು: ಆಕೆಯ ಇಚ್ಛೆಯೊಡನೆ  ಮೇಲಿದೆ.

ನರೇಂದ್ರ: ನಿಮ್ಮಿಚ್ಛೆಯೂ ಆಕೆಯ ಇಚ್ಛೆಯೊಡನೆ ಕೂಡಿದೆ.

ಪರಮಹಂಸರು: ನಾನು ಹೇಳಿದರೂ ಆಗುವಂತಿಲ್ಲ. ನನ್ನಿಚ್ಛೆಯೆಲ್ಲ ಆಕೆಯ ಇಚ್ಛೆಯಲ್ಲಿ ಲೀನವಾಗಿ ಹೋಗಿದೆ.

ಶಿಷ್ಯರೆಲ್ಲರೂ ಚಿಂತೆಯ ಭಾರದಲ್ಲಿ ಮೌನವಾಗಿ ಕುಳಿತರು, ಹೊರಗಡೆ ಮರಗಳ ನಡುವೆ ಗಾಳಿ ಮರ್ಮರನಾದದಿಂದ ಚಲಿಸುತ್ತಿತ್ತು. ಪರಮಹಂಸರು ತಮ್ಮ ಎದೆಯನ್ನು ಮುಟ್ಟಿ ತೋರಿಸುತ್ತ “ಇಲ್ಲಿ ಇಬ್ಬರಿದ್ದಾರೆ. ಒಬ್ಬಾಕೆ ದೇವಿ; ಇನ್ನೊಬ್ಬನು ಆಕೆಯ ಭಕ್ತ. ಕೈಮುರಿದುಕೊಂಡು ಕಾಯಿಲೆ ಬಿದ್ದಿರುವವನು ಎರಡನೆಯವನು. ಅಯ್ಯೋ, ಇದನ್ನೆಲ್ಲಾ ಯಾರಿಗೆ ಹೇಳಲಿ? ತಿಳಿದುಕೊಳ್ಳುವವರು ಯಾರಿದ್ದರೆ?…. ಭಗವಂತನು ಭಕ್ತರೊಡನೆ ಮನುಷ್ಯನಾಗಿ ಅವತರಿಸುತ್ತಾನೆ. ಆಮೇಲೆ ಭಕ್ತರೆಲ್ಲ ಭಗವಂತನಲ್ಲಿ ಐಕ್ಯವಾಗುತ್ತಾರೆ” ಎಂದರು.

ರಾಖಾಲ: ನೀವು ನಮ್ಮನ್ನು ಬಿಟ್ಟು ಹೋಗಬಾರದು.

ಪರಮಹಂಸರು ನಗುನಗುತ್ತ:  “ಗಾಯಕರ ಗುಂಪೊಂದು ಮನೆಯ ಮುಂದೆ ಬರುತ್ತದೆ. ಹಾಡಿ, ಕುಣಿದು. ಬಂದಂತೆಯೆ ಹಠಾತ್ತಾಗಿ ಕಣ್ಮರೆಯಾಗುತ್ತಾರೆ.

ಒಬ್ಬರಿಗೂ ಅವರ ಗುರುತಾಗುವುದಿಲ್ಲ!” ಎಂದರು. ಶಿಷ್ಯರು ನಕ್ಕರು….

ಏಪ್ರಿಲ್ ೨೨ನೆಯ ತೇದಿ. ಸಿಂಧ್ ಪ್ರಾಂತಕ್ಕೆ ಸೇರಿದವನಾದ ಹೀರಾನಂದನು ಕಾಶೀಪುರಕ್ಕೆ ಬಂದನು. ಆತನು ಹಿಂದೆ ಕಲ್ಕತ್ತೆಯಲ್ಲಿ ವಿದ್ಯಾರ್ಥಿಯಾಗಿದ್ದಾಗ ಕೇಶವಚಂದ್ರಸೇನನ ಮುಖಾಂತರ ಶ್ರೀರಾಮಕೃಷ್ಣರ ಪರಿಚಯ ಮಾಡಿಕೊಂಡಿದ್ದನು, ಅವರಲ್ಲಿಗೆ ಆತನಿಗೆ ಬಹಳ ಭಕ್ತಿ. ಆ ದಿನ ಅವರು ಮಾತಾಡಲು ಅಸಮರ್ಥರಾಗಿದ್ದುದರಿಂದ ಹೀರಾನಂದನೊಡನೆ ಮಾತಾಡಲು ನರೇಂದ್ರನಿಗೆ ಬೆಸಸಿದರು.

ಹೀರಾನಂದ:  ಈಶ್ವರಭಕ್ತನೂ ದುಃಖಕ್ಕೀಡಾಗುವುದೇಕೆ?

ನರೇಂದ್ರ: ಸೃಷ್ಟಿರಚನೆ ಪೈಶಾಚಿಕವಾಗಿದೆ. ನಾನಾಗಿದ್ದರೆ ಇದಕ್ಕಿಂತಲೂ ಉತ್ತಮ ಪ್ರಪಂಚವನ್ನು ನಿರ್ಮಿಸುತ್ತಿದ್ದೆ.

ಹೀರಾನಂದ: ದುಃಖವಿಲ್ಲದೆ ಸುಖವಿರಲು ಸಾಧ್ಯವೆ?

ನರೇಂದ್ರ: ನಾನೇನು ವಿಶ್ವರಚನೆಗೆ ನವವ್ಯೂಹವನ್ನು ಸೂಚಿಸುತ್ತಿಲ್ಲ. ಈಗಿರುವುದನ್ನು ಕುರಿತು ನನ್ನ ಅಭಿಪ್ರಾಯ ಕೊಟ್ಟೆನಷ್ಟೆ. ಆದರೂ ಪಾರಾಗಲು ಒಂದು ಮಾರ್ಗವಿದೆ. ಅದ್ವೈತ: ನಾನೆ ಎಲ್ಲವನ್ನೂ ಮಾಡುತ್ತಿದ್ದೇನೆ.

ಹೀರಾನಂದ: ಬಾಯಲ್ಲಾಡುವುದೇನೊ ಸುಲಭವೆ.

ನರೇಂದ್ರನು ಶಂಕರಾಚಾರ್ಯರ ” ನಿರ್ವಾಣಷಟ್ಕಂ” ಎಂಬ ಕವನವನ್ನು ಧೀರವಾಣಿಯಿಂದ ಹಾಡಿದನು.

ಹೀರಾನಂದ: ಕೊಠಡಿಯನ್ನು ಅದರ ಒಂದು ಮೂಲೆಯಿಂದ ನೋಡಿದರೇನು? ಮಧ್ಯದಿಂದ ನೋಡಿದರೇನು? ದಾಸೋಹಂ ಎಂಬ ದ್ವೈತಭಾವವೂ ಸೋಹಂ ಎಂಬ ಅದ್ವೈತಭಾವದಂತೆಯೆ ಬ್ರಹ್ಮ ಸಾಕ್ಷಾತ್ಕಾರಕಾರಿಯಾದುದು.

ಎಲ್ಲರೂ ಮೌನವಾಗಿದ್ದರು. ಹೀರಾನಂದನು ನರೇಂದ್ರನನ್ನು ಏನನ್ನಾದರೂ ಹಾಡುವಂತೆ ಕೇಳಿಕೊಂಡನು. ನರೇಂದ್ರನು ಶಂಕರಾಚಾರ್ಯರು ‘ಕೌಪೀನ ಪಂಚಕಂ’ ಎಂಬ ಕವನವನ್ನು ಹಾಡಿದನು. ಮತ್ತೆ ಪರಮಹಂಸರ ಹೇಳಿಕೆಯಂತೆ ‘ಇರುವುದೆಲ್ಲ ನೀನೆ!’ ಎಂದರ್ಥದ ಒಂದು ಕೀರ್ತನೆಯನ್ನು ಹಾಡಿದನು.

ಹೀರಾನಂದ: ಹೌದು ‘ಇರುವುದೆಲ್ಲ ನೀನೆ! ನೀನೆ! ನಾನಲ್ಲ.’

ನರೇಂದ್ರ: ಏಕವೊಂದಿದ್ದರೆ ಅನೇಕವನ್ನು ಕೊಡಬಲ್ಲೆ. ನೀನೆ ನಾನು; ನಾನೆ ನೀನು. ಏಕಮೇವಾದ್ವಿತೀಯವಲ್ಲದೆ ಬೇರೊಂದಿಲ್ಲ.

ಪುನಃ ನರೇಂದ್ರನು ‘ಅಷ್ಟಾವಕ್ರ ಸಂಹಿತೆ’ಯಿಂದ ಶ್ಲೋಕಗಳನ್ನು ಹಾಡಿದನು. ಎಲ್ಲರೂ ನಿಶ್ಯಬ್ದರಾಗಿ ಆಲಿಸಿದರು.

ಪರಮಹಂಸರು: (ಹೀರಾನಂದನಿಗೆ ನರೇಂದ್ರನನ್ನು ತೋರಿಸಿ) ಅವನು ಒರೆಗಳಚಿದ ಕತ್ತಿ! (ಮಹೇಂದ್ರನಿಗೆ ಹೀರಾನಂದನನ್ನು ತೋರಿಸಿ) ಎಷ್ಟು ಸಾತ್ವಿಕತೆ! ಹಾವಾಡಿಗನ ಮುಂದೆ ಸರ್ಪ ಮಂತ್ರಮುಗ್ದವಾಗಿರುವಂತೆ! …

ಮತ್ತೆ ಮೂರು ಮಾಸಗಳು ಕಳೆದುವು. ಗುರುದೇವನ ಕಾಯಿಲೆ ಯಥಾಸ್ಥಿತಿಯಲ್ಲಿತ್ತು.

ಒಂದು ದಿನ ನಾಗಮಹಾಶಯನು ಬಂದನು. ಪರಮಹಂಸರು “ಹತ್ತಿರ ಬಾ. ಕುಳಿತಿಕೊ. ನಿನ್ನ ದೇಹಸ್ಪರ್ಶ ನನ್ನ ನೋವು ಕಡಮೆಯಗುತ್ತದೆ” ಎಂದುಹೇಳಿ, ಆತನನ್ನು ಅಪ್ಪಿಕೊಂಡು “ನೋಡಿಲ್ಲಿ, ದುರ್ಗಾಚರಣ, ವೈದ್ಯರೆಲ್ಲರೂ ಸೋತುಹೋದರು. ನೀನೆನಾದರೂ ಗುಣಮಾಡಬಲ್ಲೆಯ? ಎಂದರು. ನಾಗಮಹಾಶಯನು ಸ್ವಲ್ಪಹೊತ್ತು ಆಲೋಚಿಸಿ ಕಡೆಗೆ, ಗುರುಗಳ  ರೋಗವನ್ನು ತಾನು ಸ್ವೀಕರಿಸುವುದಾಗಿ ನಿಶ್ಚಯಿಸಿ” ಆಗಲಿ, ಮಹಾಶಯ, ತಮ್ಮ ಕೃಪೆಯಿಂದ ನಾನು ನಿಮ್ಮನ್ನು ಗುಣಮಾಡಬಲ್ಲೆ” ಎಂದು ಸಿದ್ದನಾದನು. ಕ್ಷಣಮಾತ್ರದಲ್ಲಿ ಪರಮಹಂಸರಿಗೆ ಸಕಲವೂ ವೇದ್ಯವಾಗಿ ಆತನನ್ನು ದೂರ ತಳ್ಳಿ”ಬೇಡ, ಬೇಡ! ನಿನ್ನಿಂದ ಸಾಧ್ಯವೆಂಬುದು ನನಗೆ ಗೊತ್ತು!” ಎಂದರು

ಮಹಾಸಮಾಧಿಗೆ ಮೂರು ದಿನಗಳು ಮೊದಲು ಒಂದು ದಿನ ನರೇಂದ್ರನನ್ನು ತಮ್ಮ ರುಗ್ಣಶಯ್ಯೆಯ ಪಕ್ಕಕ್ಕೆ ಕರೆದರು. ಕೊಠಡಿಯಲ್ಲಿ ಯಾರೂ ಇರಲಿಲ್ಲ ಗುರು ಶಿಷ್ಯರಿಬ್ಬರ ಹೊರತು. ಗುರುದೇವನು ನರೇಂದ್ರನನನು ತಮ್ಮೆದುರು ಕೂತುಕೊಳ್ಳುವಂತೆ ಮಾಡಿ. ಆತನನ್ನು ಎವೆಯಿಕ್ಕದೆ ನೋಡುತ್ತ ಸಮಾಧಿಸ್ಥರಾದರು ನರೇಂದ್ರನಿಗೆ ದೇಹದಲ್ಲಿ ವಿದ್ಯುತ್ ಪ್ರವಾಹವಾದಂತಾಯಿತು, ಕ್ರಮೇಣ ಆತನೂ ಬಾಹ್ಯಪ್ರಜ್ಞಾಶೂನ್ಯನನಾಗಿ ಕುಳಿತನು.

ಹಾಗೆ ಎಷ್ಟು ಹೊತ್ತು ಕುಳಿತಿದ್ದನೊ ಆತನಿಗೆ ತಿಳಿಯಲಿಲ್ಲ. ಕಣ್ಣು ತೆರೆದು  ನೋಡಲು ಪರಮಹಂಸರು ಬಿಕ್ಕಿ ಬಿಕ್ಕಿ ಅಳತೊಡಗಿದರು. ನರೇಂದ್ರನು ಕಾರಣವೇನೆಂದು ಪ್ರಶ್ನೆ ಮಾಡಿದನು. ಗುರುಗಳೆಂದರು;

“ಇಂದು ನಿನಗೆ ನನ್ನ ಸರ್ವಸ್ವವನ್ನೂ ದಾನಮಾಡಿದ್ದೇನೆ. ನಾನಿನ್ನು ಮೇಲೆ ರಿಕ್ತನಾದೊಬ್ಬ ದರಿದ್ರ ಫಕೀರನಂತೆ! ಈ ಶಕ್ತಿಯಿಂದ ನೀನು ಲೋಕಕ್ಕೆ ಮಹದುಪಕಾರಮಾಡುವೆ. ಎಲ್ಲವನ್ನೂ ಮಾಡಿ ಮುಗಿಸಿದ ಮೇಲೆಯೆ ನಿನಗೆ ಹಿಂದಿರುಗಲು ಸಾಧ್ಯವಾಗುತ್ತದೆ.

ನಾಳೆ ಮಹಾಸಮಾಧಿ. ಗುರುದೇವನ ರೋಗ ಉಲ್ಬಣಾವಸ್ಥೆಗೇರಿದೆ. ಶಿಷ್ಯರೆಲ್ಲರೂ ಸುತ್ತಲೂ ಕಟ್ಟೆ ಕಟ್ಟಿ ನಿಂತಿದ್ದಾರೆ. ಒಬ್ಬೊಬ್ಬರ ಮನಸ್ಸು ಒಂದೊಂದು ವಿಧವಾಗಿದೆ. ನರೇಂದ್ರನು “ಈಗಿರುವ ಇಂತಹ ಭಯಂಕರ ಯಾತನೆಯಲ್ಲಿಯೂ ಸಾಯುತ್ತಿರುವಾಗಲೂ ತಾವು ಅವತಾರಪುರುಷರೆಂದು ಹೇಳುವುದಾದರೆ ಸಂಪೂರ್ಣವಾಗಿ ನಂಬಿಬಿಡುತ್ತಿದ್ದೆ” ಎಂದು ಯೋಚಿಸುತ್ತಿದ್ದಾನೆ. ಕೆಲವು ಕ್ಷಣಗಳು ಗುರುದೇವನ ಮುಖವನ್ನು ಎವೆಯಿಕ್ಕದೆ ಈಕ್ಷಿಸಿದ್ದಾನೆ. ಮಾತಾದಲಾರದೆ ನರಳುತ್ತಿದ್ದ ಪರಮಹಂಸರು ಇದ್ದಕ್ಕಿದ್ದ ಹಾಗೆ ಶಕ್ತಿಪೂರ್ಣ ಅಧಿಕಾರವಾಣಿಯಿಂದ ಹೇಳಿದರು.

“ಓ ನರೇನ್, ನಿನಗಿನ್ನೂ ನಂಬಿಕೆ ಬರಲಿಲ್ಲವೆ? – ಯಾರು ರಾಮನೊ ಯಾರು ಕೃಷ್ಣನೊ ಆತನೆ ಇಂದು ಈ ಶರೀರದಲ್ಲಿ ರಾಮಕೃಷ್ಣನಾಗಿದ್ದಾನೆ – ನಿನ್ನ ವೇದಾಂತ ದೃಷ್ಟಿಯಿಂದಲ್ಲ.”

ನರೇಂದ್ರನು ಬೆಚ್ಚಿಬಿದ್ದನು. ಅನೇಕ ನಿದರ್ಶನಗಳು ಅನುಭವಕ್ಕೆ ಬಂದಿದ್ದರೂ ಮತ್ತೂ ಸಂದೇಹಪಟ್ಟುದಕ್ಕಾಗಿ ನಾಚಿಕೆಯಿಂದ ತಲೆಬಾಗಿದನು.

ಕ್ರಿ.ಶ. ೧೮೮೬ನೆಯ ಆಗಸ್ಟು ತಿಂಗಳು ಹದಿನೈದನೆಯ ತೇದಿಯ ಭಾನುವಾರ ಶ್ರಾವಣಮಾಸದ ತುತ್ತತುದಿ. ಸೂರ್ಯನು ಎಂದಿನಂತೆ ಪೂರ್ವದಿಗಂತದಿಂದ ಮೂಡಿಬಂದನು. ಆದರೆ ಆತನ ಮುಖಬಿಂಬ ಮ್ಲಾನವಾಗಿದೆ! ಸಮೀರಣನು ತರುಪಲ್ಲವ ಹಿಲ್ಲೋಲಗಳ ಮಧ್ಯೆ ಎಂದಿನಂತೆ ನುಸುಳಿ ಬಂದನು. ಆದರೆ  ಆತನ ಮರ್ಮದಲ್ಲಿ ಇದೇನು ನರಳುದನಿ? ಮನೆಯ ಹೊರಗೆ ತೋಟದಲ್ಲಿ ಮರಗಳ ಮೇಲೆ ನೂರಾರು ಹಕ್ಕಿ  ಹಾಡುತ್ತಿವೆ. ಆದರೆ ಆ ಗಾನದಲ್ಲಿ ರೋದನ ತುಂಬಿ ತುಳುಕುವಂತಿದೆ! ಮೇಲೆ ಅನಂತ ದೂರದ ಆಕಾಶದಲ್ಲಿ ಮೇಘಗಳು ತೇಲುತ್ತಿವೆ. ಆದರೆ ಅವುಗಳೆಲ್ಲವೂ ಮಹಾ ಅಪಶಕುನದ ಛಾಯೆಗಳಂತೆ ಭೀಮಾಕಾರವಾಗಿ ಭೀಕರವಾಗಿ ಪಿತೂರಿಗಾರರಂತಿವೆ! ಕಾಶೀಪುರದ ಉದ್ಯಾನ ಮಂದಿರ ಧ್ಯಾನಮೂರ್ತಿಯಂತಿದೆ. ಜನಗಳು ಭಯಾನ್ವಿತರಾಗಿ ಪಿಸು ಮಾತಾಡುತ್ತ ಹಿಂದಕ್ಕೂ ಮುಂದಕ್ಕೂ ಉದ್ವೇಗದಿಂದ ತಿರುಗಾಡುತ್ತಿದ್ದಾರೆ. ಗುರುದೇವನ ರೋಗ ಸ್ಥಿತಿ ವಿಷಮವಾಗಿದೆ!

ಜಗದಂಬೆಯ ಭಕ್ತನಾಗಿ ನಿರ್ವಿಕಲ್ಪ ಸಮಾಧಿಯಲ್ಲಿ ಬ್ರಹ್ಮಸಾಕ್ಷಾತ್ಕಾರ ಮಾಡಿದ ಮಹಾಪುರುಷನು ಹಾಸಗೆಯ ಮೇಲೆ ಮಲಗಿ ನರಳುತ್ತಿದ್ದಾನೆ. ಯಾತನೆ ಮಿತಿಮೀರಿ ಹೋಗಿದೆ. ನಾಡಿಗಳ ಚಲನೆಯೂ ಅಸ್ಥಿರವಾಗಿದೆ. ಶಿಷ್ಯರೆಲ್ಲರೂ ಶೋಕಾಕ್ರಾಂತರಾಗಿ, ನಿಸ್ಸಹಾಯಕವಾಗಿ ಸುತ್ತಲೂ ಕಂಬನಿದುಂಬಿ ನಿಂತಿದ್ದಾರೆ. ದೃಶ್ಯವು ಕ್ರಿ. ಸ್ತನ ಶಿಲುಬೆಯಂತೆಯೀ ಭೀಷ್ಮನ ಶರಶಯ್ಯೆಯಂತೆಯೂ ಭಯಾನಕವಾಗಿದೆ. ರಕ್ಷಕನು ತನ್ನನ್ನೇ ರಕ್ಷಿಸಿಕೊಳ್ಳಲಾರನೆ? ಡಾಕ್ಟರ್ ನವೀನಪಾಲನು ಬಂದು ಶರೀರ ಪರೀಕ್ಷೆ ಮಾಡಿದನು. ಆತನಿಂದ ಏನು ಹೇಳಲೂ ಸಾಧ್ಯವಾಗಲಿಲ್ಲ. ನಾಡಿಯ ಪರೀಕ್ಷೆಯಲ್ಲಿ ನಿಷ್ಣಾತನಾಗಿದ್ದ ಶಿಷ್ಯನೊಬ್ಬನು ಪರೀಕ್ಷಿಸಿದನು. ಆತನ ಮುಖ ಚಿಹ್ನೆ ನಿರಾಶಾಸೂಚಕವಾಯಿತು. ಸನ್ನೀವೇಶ ಪ್ರಮಾದಕರವಾಗಿದೆ ಎಂದುಹೇಳಿಬಿಟ್ಟನು. ಪ್ರಾತಃಕಾಲ ಕಳೆಯಿತು. ಮಧ್ಯಾಹ್ನವಾಯಿತು. ರೋಗಿಯ ಹೊಟ್ಟೆಗೆ ಒಂದು ತೊಟ್ಟು ಗಂಜಿಯೂ ಇಳಿಯಲಿಲ್ಲ. ಸಂಧ್ಯಾಕಾಲದಲ್ಲಿ ಗುರುದೇವನಿಗೆ ಉಸಿರಾಡುವುದೂ ಕಠಿನವಾಯಿತು. ದೃಶ್ಯವು ಹೃದಯವಿದ್ರಾವಕವಾಯಿತು. ಶಿಷ್ಯರೆಲ್ಲ ಶಿಶುಗಳಂತೆ ಬಿಕ್ಕಿ ಬಿಕ್ಕಿ ಅಳತೊಡಗಿದರು. ಅವರ ಜೀವನಜ್ಯೋತಿ ಇನ್ನೇನು ಮಾಯಾ ಜಗತ್ತಿನಿಂದ ಮಾಸಿಹೋಗುವುದರಲ್ಲಿದೆ. ತಮ್ಮ ತವನಿಧಿ ಸೂರೆ ಹೋಗುವುದರಲ್ಲಿದೆ. ಇದುವರೆಗೆ ಶ್ರೀಮಂತರಾಗಿದ್ದವರು ಇನ್ನು ದರಿದ್ರನಾಗಿ ಬಿಡುತ್ತಾರೆ. ಮರುದಿನ ಮುಗುಳುನಗೆಯಿಂದ ತಮಗೆ ಸ್ವಾಗತವೀಯುವವರಾರು? ತಮ್ಮ ಸಂದೇಹ ಸಂಕಟಗಳನ್ನು ಪರಿಹರಿಸುವವರಾರು? ತಮ್ಮ ಸುಖದುಃಖಗಳಲ್ಲಿ ಭಾಗಿಯಾಗುವರಾರು. ಚಿಂತಿಸಿದಷ್ಟೂ ಶೋಕ ದ್ವಿಗುಣಿತವಾಯಿತು. ಅತ್ತರು.

ಆಗಸ್ಟ ೧೫ ನೆಯ ಭಾನುವಾರವೆಲ್ಲ ಪರಮಹಂಸರ ದೇಹಸ್ಥಿತಿ ಇಳಿಮುಖವಾಗಿ ಕುಗ್ಗುತ್ತಲೆ ಇತ್ತು. ಸಂಜೆ ಬೈಗುಗಪ್ಪು ಮುಸುಗುತ್ತಿದ್ದ ಸಮಯದಲ್ಲಿ ಶ್ರೀ ಶಾರದಾದೇವಿಯವರು ಲಕ್ಷ್ಮಿಯೊಡನೆ ಬಂದು ಪತಿಯ ರುಗ್ಣಶಯ್ಯೆಯ ಪಕ್ಕದಲ್ಲಿ ಕುಳಿತರು. ಶೋಕಭಾರದಿಂದ ಕುಸಿದಂತೆ. ಪರಮಹಂಸರು ಅತ್ಯಂತ ಪ್ರೀತಿಯಿಂದ ಸಕರುಣಧ್ವನಿಯಲ್ಲಿ ” ಕೇಳಿ, ನಾನೆಲ್ಲಿಗೋ ದೂರ ಹೋಗಬಾಕಾಗಿದೆಯೆಂದು ತೋರುತ್ತದೆ, ಮಹಾ ಜಲರಾಶಿಯನ್ನು ದಾಟಿ” ಎಂದರು. ಶಾರದಾದೇವಿ ಅದನ್ನಾಲಿಸಿ ಅಳತೊಡಗಿದರು. ಪರಮಹಂಸರು ಮತ್ತೆ ಸಂತೈಸುತ್ತಾ ಮುಂದುವರಿದರು; ” ನೀವು ದುಃಖಿಸಬಾರದು. ಏನೂ ಭಯವಿಲ್ಲ. ನಿಮ್ಮ ಬದುಕು ಹಿಂದಿದ್ದಂತೆಯೆ ಮುಂದುವರಿಯುತ್ತದೆ. ನರೇನ್ ಮತ್ತು ಇತರರು ನಿಮ್ಮ  ಯೋಗ ಕ್ಷೇಮ ನೋಡಿಕೊಳ್ಳುತ್ತಾರೆ. ನನ್ನನ್ನು ಹೇಗೆ ನೋಡಿಕಳ್ಳುತ್ತಿದ್ದರೊ ಹಾಗೆಯೆ ನಿಮ್ಮನ್ನು ನೋಡಿಕೊಳ್ಳುತ್ತಾರೆ. ಲಕ್ಷ್ಮಿಯನ್ನು ಚೆನ್ನಾಗಿ ನೋಡಿಕೊಳ್ಳಿ.. .

ನಿಶಿ ಪ್ರಾರಂಭವಾಯಿತು. ಪರಮಹಂಸರಿಗೆ ತುಸು ಹಸಿವು ತೋರಿದ್ದರಿಂದ ಸ್ವಲ್ಪ ಗಂಜಿಯನ್ನು ಕುಡಿಸಲು ಪ್ರಯತ್ನಪಟ್ಟರು. ಆದರೆ ಒಂದು ಹನಿಯೂ ಹೊಟ್ಟೆಗೆ ಹೋಗಲಿಲ್ಲ. ನಿರಂತರವೂ ಶುಶ್ರೂಷೆಯ ಕಾರ್ಯದಲ್ಲಿಯೆ ತನ್ಮಯನಾಗಿದ್ದ ತಮ್ಮ ಪ್ರಿಯ ಶಿಷ್ಯ ಶಶಿಯ ಎದೆಯ ಮೇಲೆ ಒರಗಿಕೊಂಡು ಮಲಗಿದರು. ಇನ್ನಿಬ್ಬರು ಶಿಷ್ಯರು ಬೀಸಣಿಗೆಯಿಂದ ಗಾಳಿಬೀಸುತ್ತಿದ್ದರು. ಹಠಾತ್ತಾಗಿ ಪರಮಹಂಸರು ಸಮಾಧಿಸ್ಥರಾದರು. ದೇಹ ನಿಷ್ಪಂದಸ್ಥಿರವಾಯಿತು. ಆ ಸಮಾಧಿಯಲ್ಲಿ ಏನೋ ಒಂದು ಅಪೂರ್ವತೆ ಕಂಡುಬಂದುದರಿಂದ ಶಶಿ ಬೆಚ್ಚಿ ಬೆದರಿ ಗುರುದೇವನ ಕಳೇಬರವನ್ನು ಮೆಲ್ಲಗೆ ಓಸರಿಸಿ ತಲೆದಿಂಬಿನ ಮೇಲೆ ಇಟ್ಟನು. ಇಟ್ಟವನೆ ಗಟ್ಟಿಯಾಗಿ ಅಳತೊಡಗಿದನು. ಶಿಷ್ಯರಿಗೆ ಕೈಕಾಲು ಬರಲಿಲ್ಲ. ಇಬ್ಬರು ವೈದ್ಯರನ್ನು ಕರೆತರಲು. ಮತ್ತಿಬ್ಬರು ಗಿರೀಶ ರಾಮಚಂದ್ರರನ್ನು ಕರೆತರಲು ಓಡಿದರು.

ಮಧ್ಯರಾತ್ರಿ ಕಳೆದಮೇಲೆ ಪರಮಹಂಸರಿಗೆ ಪ್ರಜ್ಞೆ ಮರಳಿತು. ಬಹಳ ಹಸಿವಾಗುತ್ತದೆ ಎಂದೂ ಹೇಳಿದರು. ನರೇಂದ್ರ ಮೊದಲಾದವರು ಬಹಳ ಎಚ್ಚರಿಕೆಯಿಂದ ದಿಂಬುಗಳ ಆಲಂಬನೆಯಲ್ಲಿ ಅವರನ್ನು ಕುಳ್ಳಿರುವಂತೆ ಮಾಡಿ, ಒಂದು ಬಟ್ಟಲು ಗಂಜಿಕೊಟ್ಟರು. ಗುರುದೇವನು ಅದಷ್ಟನ್ನೂ ನಿರಾತಂಕವಾಗ ಕುಡಿದನು. ಬಹಳ ದಿನಗಳಿಂದ ಅಷ್ಟು ಸುಲಭವಾಗಿ ಪಥ್ಯ ಹೊಟ್ಟೆಗೆ ಹೋಗಿರಲಿಲ್ಲ. ತರುವಾಯ ನೋವೂ ಸ್ವಲ್ಪ ಶಮನವಾದಂತೆ ತೋರಿತು. ಮಲಗಿ ನಿದ್ದೆ ಮಾಡಿದರೆ ಒಳ್ಳೆಯದೆಂದು ನರೇಂದ್ರನು ಸೂಚಿಸಲು ಅವರು ಎಂದಿನಂತಲ್ಲದೆ ಮೂರು ಬಾರಿ ಜಗದಂಬೆಯ ನಾಮವನ್ನು ಧೀರವಾಗಿ ಉಚ್ಚರಿಸಿ ಮೆಲ್ಲಗೆ ಮಲಗಿದರು.

ರಾತ್ರಿ ಒಂದು ಗಂಟೆ ಎರಡು ನಿಮಿಷವಾಗಿತ್ತು. ಶ್ರೀ ರಾಮಕೃಷ್ಣ ಪರಮಹಂಸ ಗುರುದೇವನ ಮಂಗಲಕಾಯವು ಮಿಂಚಿನ ಹೊನಲಿಗೆ ಸಿಕ್ಕಿದಂತೆ ವಿಕಂಪಿಸಿತು. ಮೈನವಿರು ನಿಮಿರಿನಿಂತಿತು. ನಯನದೃಷ್ಟಿ ಭ್ರೂಮಧ್ಯಸ್ಥವಾಯಿತು. ಮುಖದಲ್ಲಿ ಮಂದಹಾಸವೊಂದು ಲಾಸ್ಯವಾಡಿತು; ಸುಳಿದು ನಲಿದು ಗಾಂಭೀರ್ಯ ಸಮುದ್ರದಲ್ಲಿ  ಮಿಳುಗಿಹೋಯಿತು.

ಕ್ರಿ. ಶ. ೧೮೮೬ ನೆಯ ಆಗಸ್ಟು ೧೬ ನೆಯ ಸೋಮವಾರ ಬ್ರಾಹ್ಮಮೂಹೂರ್ತದಲ್ಲಿ ಹತ್ತೊಂಬತ್ತನೆಯ ಶತಮಾನದ ಮಹಾಪುರುಷನು ಮಹಾ ಸಮಾಧಿಯಲ್ಲಿ ಬ್ರಹ್ಮಲೀನವಾದನು.[3]

ಅಪರಾಹ್ನ ಐದು ಗಂಟೆಗೆ ಪರಮಹಂಸರ ಶ್ರೀ ಕಳೇಬರವನ್ನು ಉಪ್ಪರಿಗೆಯಿಂದ ಕೆಳಗೆ ತಂದು ಒಂದು ಮಂಚದ ಮೇಲೆ ಮಲಗಿಸಿದರು. ಅದಕ್ಕೆ ಕಾವಿಬಟ್ಟೆ ಉಡಿಸಿ. ಶ್ರೀಗಂಧಲೇಪನ ಮತ್ತು ಹೂವಿನ ಹಾರಗಳಿಂದ ಸಿಂಗರಿಸಿದರು. ಡಾ. ಸರ್ಕಾರನ ಸಲಹೆಯಂತೆ ಶಿಷ್ಯವೃಂದ ಸಹಿತ ಒಂದು ಫೋಟೊ ತೆಗೆಯಲಾಯಿತು. ಒಂದು ಗಂಟೆಯ ಅನಂತರ ಶಿಷ್ಯರು ಭಜನೆಮಾಡುತ್ತಾ ಶ್ರೀಗುರುವಿನ ಪವಿತ್ರ ಶರೀರವನ್ನು ಗಂಗಾನದಿಯ ದಡದಲ್ಲಿದ್ದ ವರಾಹ ನಗರದ ಶ್ಮಶಾನಘಟ್ಟಕ್ಕೆ ಅಂತ್ಯ ಸಂಸ್ಕಾರವೆಸಗಲು ಹೊತ್ತುಕೊಂಡು ಹೋದರು. ಪವಿತ್ರ ಮಂತ್ರಘೋಷದೊಡನೆ ಮೇಲೆದ್ದ ಅಗ್ನಿದೇವನು ಆ ದಿವ್ಯ ಮಿಥ್ಯೆಯನ್ನು ಭಸ್ಮೀಭೂತವಾನ್ನಾಗಿ ಮಾಡಿದನು. ಅದುವರೆಗೂ ತಮ್ಮ ಬದುಕನ್ನೆಲ್ಲ ತುಂಬಿದ್ದ ಏನೊ ಒಂದರ ವಿನಷ್ಟಿಯಿಂದುಂಟಾದ ಶೂನ್ಯಾನುಭವಭಾರದಿಂದ ಬಾಗಿ ಶಿಷ್ಯರು ಹಿಂತಿರಗಿದರು.

ಆದರೂ ಅವರೆಲ್ಲರೂ ಮನಃಸ್ಥಿತಿಯ ಆಧ್ಯಾತ್ಮಿಕ ಪ್ರಜ್ಞಾಗೌರವ ಯಾವ ಸ್ವರೂಪದ್ದಾಗಿತ್ತೆಂದರೆ ಅವರಲ್ಲಿ ಯಾರೊಬ್ಬರೂ ಕಣ್ಣೀರು ಸುರಿಸಲಿಲ್ಲ. ಕಾಯಕ್ಕಿಂತಲೂ ಸತ್ಯತರವಾದ ಶ್ರೀ ಗುರುದೇವನ ಅಧ್ಯಾತ್ಮ ಅವರ ಚೇತನದಲ್ಲಿ ಘನೀಭೂತವಾಗಿತ್ತು. ಏಕಮತರಾಗಿ, ನವಯುಗಾವತಾರನ ವಿಶ್ವಧರ್ಮ ಸಂದೇಶವನ್ನು ಜಗತ್ತಿಗೆ ಸಾರಲುಕಂಕಣಬದ್ಧರಾಗಿ, ಶಿಷ್ಯರೆಲ್ಲರೂ ಒಕ್ಕೊರಲಿನಿಂದ ದಿಗ್ದಿಗಂತವ್ಯಾಪಿಯಾಗುವಂತೆ ಉಚ್ಚಕಂಠದಿಂದ ಜಯಧ್ವನಿಗೈದರು; “ಜಯ್ ಶ್ರೀರಾಮಕೃಷ್ಣಪರಮಹಂಸದೇವನಿಗೆ ಜಯ್!”


[1] ಅನುಬಂಧ  ೨, ನೋಡಿ.

[2] ಅನುಬಂಧ  ೨, ನೋಡಿ.

[3] ಕ್ಯಾಲೆಂಡರಿನಂತೆ ರಾತ್ರಿ ೧೨ ಗಂಟೆಯ ಮೇಲೆ ತಾರೀಖು ೧೬ ಆಗುತ್ತದೆ. ಪಂಚಾಂಗದಂತೆ ಸೂರ್ಯೋದಯದಿಂದ ಸೂರ್ಯೋದಯದವರೆಗೆ ಒಂದುದಿನ ಎಂದು ಪರಿಗಣಿತವಾಗುವುದರಿಂದ ಗುರುದೇವನ ಮಹಾ ಸಮಾಧಿಸ್ಥನಾದದ್ದು ೧೫ ನೆಯ ತಾರೀಖಾಗುತ್ತದೆ.