ಮಹಾಪುರುಷರ ಜನ್ಮಚರಿತ್ರೆ ಕಾಲದಲ್ಲಿ ಕೊನೆಗೊಂಡರೂ ಅವರ ಜೀವನ ಯಾತ್ರೆ ಕಾಲಕ್ಕಿಂತಲೂ ಚಿರಂಜೀವಿಯಾದುದು. ಅವರ ಮಾತುಕತೆಗಳು, ಅವರ ವಚನೋಪದೇಶಗಳು, ಅವರ ಜೀವನ ಉಪಾಖ್ಯಾನಗಳು, ಎಲ್ಲಿಕ್ಕಿಂತಲೂ ಅತಿಶಯವಾಗಿ ಅವರ ಚೈತನ್ಯ ಮತ್ತು ಆತ್ಮಶಕ್ತಿಗಳು ಜಗಜ್ಜೀವನದ ನಾಡಿಗಳನ್ನು ಪ್ರವೇಶಿಸಿ, ಅದರ ರಕ್ತನಾಳಗಳಲ್ಲಿ ಮೊರೆದು, ಅದರ ಒಂದೊಂದು ಧಮನಿಯಲ್ಲಿಯೂ ಪ್ರತಿಧ್ವನಿಗೈದು, ರಕ್ತದಲ್ಲಿ ರಕ್ತವಾಗಿ, ಮಾಂಸದಲ್ಲಿ ಮಾಂಸವಾಗಿ, ಅಸ್ಥಿಯಲ್ಲಿ ಅಸ್ಥಿಯಾಗಿ, ಜೀವನದ ಶ್ರೀಯೋಗಮನಕ್ಕೊಂದು ಶಾಶ್ವರಪ್ರೇರಕ ಶಕ್ತಿಯಾಗಿ, ಕಷ್ಟಸಂಕಟಗಳಲ್ಲೊಂದು ವಜ್ರಕವಚವಾಗಿ, ನಿರಾಶೆಯ ತಿಮಿರದಲ್ಲೊಂದು ಆಶಾಕಿರಣವಾಗಿ, ಅಧೈರ್ಯದ ಕಾಲದಲ್ಲೊಂದು ಪಾಂಚಜನ್ಯವಾಗಿ ಪರಿಣಮಿಸಿ ಚಿರಂತನವಾಗಿರುತ್ತವೆ. ಆದ್ದರಿಂದ ಮಹಾಪುರುಷನಿಗೆ ಮರಣವಿಲ್ಲ. ಆತನು ಚಿರಂಜೀವಿ. ಕರ್ಮಮಯ ಜಗತ್ತಿನಲ್ಲಿ ಆತನ ಚೈತನ್ಯನಿರ್ಝರಿಣಿ ಚಿರತರಂಗಿಣಿ.

ಅದರಲ್ಲಿಯೂ ಶ್ರೀರಾಮಕೃಷ್ಣ ಪರಮಹಂಸರಂತಹ ಅಸಂಖ್ಯ ಮುಖ ಚೈತನ್ಯಮೂರ್ತಿ ತನ್ನ ವ್ಯಕ್ತಿರೂಪವನ್ನು ವಿಸರ್ಜಿಸಿ ವಿರಾಡ್ರೂಪಿಯಾಯಿತೆಂದರೆ ಅಪ್ರತಿಹತವಾಗುತ್ತದೆ; ವ್ಯಷ್ಟಿ ಸಮಷ್ಟಿಯಲ್ಲಿ ಲೀನವಾಗಿ ಸಹಸ್ರರೂಪಿಯಾಗುತ್ತದೆ; ವಿಶ್ವರೂಪಿಯಾಗುತ್ತದೆ; ಸಮಧಿಕ ಶಕ್ತಿಯುಕ್ತವಾಗುತ್ತದೆ. ಪರಮಹಂಸರ ನಿರ್ಯಾಣಾನಂತರ ಅವರ ಚೈತನ್ಯಜಲರಾಶಿ ಶಿಷ್ಯಸಂಕುಲ ತರಂಗ ಸಮೂಹ ರೂಪಿಯಾಗಿ ಸ್ವಲ್ಪ ಕಾಲ ಅಜ್ಞಾತವಾಸದಲ್ಲಿತ್ತು. ತರುವಾಯ ಆ ತರಂಗಗಳಲ್ಲಿ ಒಂದು ವಿಸ್ಫಾರಿತವಾಗಲು ತೊಡಗಿ, ಕ್ರಮೇಣ ಬೃಹದಾಕಾರವನ್ನು ತಾಳಿ, ಪೂವಾರ್ಧ ಪಶ್ಚಿಮಾರ್ಧ ಗೋಲಗಳೆರಡರಲ್ಲಿಯೂ ವ್ಯಾಪಿಸಿ ಲೋಕಲೋಚನಗಳನ್ನು ತನ್ನೆಡೆಗೆ ಸೆಳೆದು ಸೆರೆಹಿಡಿಯಿತು. ಆ ಮಹಾತರಂಗತಾಡನದಿಂದ ಸಹಸ್ರಾರು ವೀಚಿಗಳೆದ್ದು ಎಲ್ಲೆಲ್ಲಿಯೂ ಮೊರೆಯತೊಡಗಿದುವು. ಕಡೆಗೆ ಆ ಹಿಲ್ಲೋಲ ಸಮ್ಮೇಲನದಿಮದ ಶ್ರೀರಾಮಕೃಷ್ಣ ಮಹಾಸಂಘ ನಿರ್ಮಾಣವಾಯಿತು. ಆ ಸಂಘವು ದೇಶವಿದೇಶಗಳಲ್ಲಿ ಹಬ್ಬಿ. ಶ್ರೀರಾಮಕೃಷ್ಣ ವಿವೇಕಾನಂದರ ಸಂದೇಶಗಳನ್ನು ಸಾರಿ. ಆರ್ಯಾವರ್ತದ ಧರ್ಮತೂರ್ಯವು ಮತ್ತೊಮ್ಮೆ ಪ್ರಪಂಚದ ಎಲ್ಲ ಮಾನವರ ಕರ್ಣಗಳಲ್ಲಿಯೂ ಪ್ರತಿಧ್ವನಿತವಾಗುವಂತೆ ಸಾಹಸ ಮಾಡುತ್ತಿದೆ. ಆ ಸಂಘವಲ್ಲದೆ ಭರತಖಂಡದ ಇತರ ಸ್ವಂತಂತ್ರವಾಣಿಗಳೂ ನವಯುಗದ ನವೋದಯದ ಶಾಂತಿಸಂದೇಶಗಳನ್ನು ಜಗತ್ತಿಗೆ ಸಾರುತ್ತಿವೆ. ಪ್ರಪಂಚವು ಮತ್ತೊಂಮ್ಮೆ ಪೂರ್ವದಕಡೆಗೆ ಕಣ್ಣು ತಿರುಗಿಸಿ ಬೆಳಕನ್ನು ನಿರೀಕ್ಷಿಸಿ ಆಹ್ವಾನಿಸುತ್ತದೆ.

ಅದನ್ನಿಲ್ಲಿ ಸಂಕ್ಷೇಪವಾಗಿ ವಿವರಿಸುತ್ತೇನೆ:

ಗುರುದೇವನ ನಿಧನಾನಂತರ ತರುಣಶಿಷ್ಯರು ಸಂಸಾರಕ್ಕೆ ಹಿಂದಿರುಗದೆ ಮುಂದೇನು ಮಾಡಬೇಕೆಂದು ಆಲೋಚಿಸಿದರು. ಗೃಹತ್ಯಾಗಮಾಡಿ, ಮನೆಯವರ ಮುನಿಸಿಗೆ ಪಾತ್ರರಾಗಿದ್ದ ಅವರಿಗೆ ಅರ್ಥಸಹಾಯ ದೊರೆಯುವುದು ದುರ್ಲಭವಾಯಿತು. ಆದರೆ ಪರಮಹಂಸರ ಸಂಸಾರಿ ಶಿಷ್ಯರು ಅವರಿಗೆ ನೆರವಾದರು. ಬಲರಾಮ ವಸು, ಸುರೇಂದ್ರನಾಥ ಮಿತ್ರ, ಮಹೇಂದ್ರನಾಥ ಗುಪ್ತ, ಗಿರೀಶಚಂದ್ರ ಘೋಷ –  ಈ ನಾಲ್ವರ ಸಹಾಯದಿಂದ ಕಲ್ಕತ್ತೆಯ ಬಳಿ ವರಾಹನಗರದಲ್ಲಿ ಪಾಳುಮನೆಯೊಂದನ್ನು ಬಾಡಿಗೆಗೆ ತೆಗೆದುಕೊಂಡು, ಅಲ್ಲಿಗೆ ಶ್ರೀರಾಮಕೃಷ್ಣರ ಪುಣ್ಯ ಶರೀರದ ಭಸ್ಮಾವಶೇಷವನ್ನು ಶಿರಸಾವಹಿಸಿಕೊಂಡು ಹೋಗಿ ಕುಮಾರ ಸಂನ್ಯಾಸಿಗಳು ಕಠೋರ ತಪಸ್ಸಾಧನೆಗೆ ಮೊದಲು ಮಾಡಿದರು. ಆಮೇಲೆ ಸ್ವಾಮಿ ವಿವೇಕಾನಂದರಾದ ನರೇಂದ್ರನು ಸೋದರ ಸಂನ್ಯಾಸಿಗಳಿಗೆ ದಳಪತಿಯಾಗಿ, ಮುಂದೆ ಕೈಕೊಳ್ಳಲಿರುವ ಮಹಾಕಾರ್ಯ ದೀಕ್ಷೆಗೆ ಅವರಿಗೆಲ್ಲ ಶಿಕ್ಷಣಕೊಟ್ಟನು.

ಸ್ವಾಮಿ ವಿವೇಕಾನಂದರು ಪರಿವ್ರಾಜಕರಾಗಿ ಆರ್ಯಾವರ್ತವನ್ನೆಲ್ಲ ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ  ಸಂಚರಿಸಿ, ದೇಶದ ದಾರಿದ್ರ‍್ಯ ದೌರ್ಬಲ್ಯ, ಮೌಢ್ಯಗಳನ್ನು ಕಣ್ಣಾರೆ ಕಂಡು ಎದೆನೊಂದು, ಅವುಗಳನ್ನು ಪರಿಹರಿಸಿ ಮಾತೃಭೂಮಿಯನ್ನು ಪುನರುಜ್ಜೀವನಗೊಳಿಸಲು ಕಾತರರಾಗಿ ಅಮೆರಿಕಾದ ಚಿಕಾಗೋ ನಗರದಲ್ಲಿ ನೆರೆದ ಧರ್ಮಮಹಾಸಭೆ‌ಗೆ ಹೋಗಿ. ಅಲ್ಲಿ ಆರ್ಯಧರ್ಮದ ಜಯಡಿಂಡಿಮವನ್ನು ಬಾರಿಸಿ, ಅಮೆರಿಕಾದ ಜನಗಳನ್ನೂ ಜಗತ್ತನ್ನೂ ತಮ್ಮ ವೇದಾಂತವಾಣಿಯಿಂದ ಬೆರಗುಗೊಳಿಸಿ. ಮಾತೃಭೂಮಿಗೆ ಕೀರ್ತಿಯನ್ನು ಸಂಪಾದಿಸಿ, ಪುನಃ ಭರತಖಂಡಕ್ಕೆ ಹಿಂದಿರುಗಿ ಬಂದು ಕೊಲಂಬೊದಿಂದ ಆಲ್ಮೋರದವರೆಗೆ ತಮ್ಮ ಅಮೃತ ಸಂದೇಶವನ್ನು ಸಿಂಹಕಂಠದಿಂದ ಸಾರಿ. ಜನರಲ್ಲಿ ಜಡಜೀವನ ನಶಿಸಿ ಚೈತನ್ಯ ಚಿಮ್ಮುವಂತೆ ಮಾಡಿ, ನವಯುಗಾಚಾರ್ಯರೆಂಬ ಬಿರುದಿಗೆ ಪಾತ್ರರಾದ ಮಹಾಕಥೆಯನ್ನು  ವಾಚಕರು ಅನ್ಯತ್ರ ಓದಬಹುದು.

[1] ಪ್ರಕೃತದಲ್ಲಿ ಅವರ ಸಂದೇಶವನ್ನು ಸಾರಾಂಶವಾಗಿ ಹೇಳಿ. ಶ್ರೀರಾಮಕೃಷ್ಣ ಮಹಾಸಂಘಸ್ಥಾಪನೆ, ನವಯುಗ ಸಂನ್ಯಾಸ, ಶ್ರೀರಾಮಕೃಷ್ಣ ಮಹಾಸಂಘದ ಕಾರ್ಯಕಲಾಪಗಳು, ಅದರ ಕ್ಷೇತ್ರಗಳು, ಅದರ ಧ್ಯೇಯಗಳು, ಅದು ಸಾಧಿಸಿರುವ ಮತ್ತು ಸಾಧಿಸಲಿರುವ ಕರ್ಮಸಮೂಹಗಳು – ಇವುಗಳನ್ನು ಕುರಿತು ತಿಳಿಸುವುದು ನಮ್ಮ ಕೆಲಸವಾಗಿದೆ.

ಸ್ವಾಮಿ ವಿವೇಕಾನಂದರು ಧರ್ಮಮಹಾಸಭೆಯಲ್ಲಿ ಮಾಡಿದ ಉಪನ್ಯಾಸವು ಪರಮಹಂಸರ ಸರ್ವಧರ್ಮಸಮನ್ವಯಕ್ಕೆ ರನ್ನಗನ್ನಡಿಯಂತಿದೆ. ಆ ಪ್ರಸಿದ್ದ ಉನ್ಯಾಸದಲ್ಲಿ ಅನ್ಯಮತಸಹನೆ, ಸ್ವೀಕರಣೆ, ಭಿನ್ನಭಿನ್ನಮತಗಳ ಹೃದಯದಲ್ಲಿರುವ ಅಭಿನ್ನಭಾವ, ಮಾನವನ ದೇವತ್ವ, ಆತ್ಮಬ್ರಹ್ಮರ ಐಕ್ಯ, ಅನೇಕ ಪಥಗಳ ಏಕಗಮ್ಯ, ಸರ್ವಮಾನವರ ಸಮಾನತೆ, ಎಲ್ಲ ಸಂಸ್ಕೃತಿಗಳ ಶ್ರೇಷ್ಠತೆ, ಮೊದಲಾದ ವಿಷಯವನ್ನು ಕುರಿತು ಅನನುಕರಣೀಯವಾದ ವಾಗ್ಮಿತೆಯಿಂದ ಸಾರಿದ್ದಾರೆ.

“ಭಿನ್ನ ಭಿನ್ನ ಪರ್ವತಗಳಲ್ಲಿ ಉದಿಸಿದ ನದಿಗಳು ಭಿನ್ನ ಭಿನ್ನ ಮಾರ್ಗಗಳಲ್ಲಿ ಹರಿದು ಕಡೆಗೆ ಸಮುದ್ರವನ್ನು ಸೇರುವಂತೆ, ಹೇ ದೇವಾ, ಭಿನ್ನ ಭಿನ್ನ ಸ್ವಭಾವದ ಮನುಷ್ಯರೆಲ್ಲರೂ ಭಿನ್ನ ಭಿನ್ನ ಮತಮಾರ್ಗಗಳಿಂದ ಕಡೆಗೆ ನಿನ್ನನ್ನೆ ಸೇರುತ್ತಾರೆ.

ಯೇ ಯಥಾ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಂ |
ಮಮ ವತ್ಮಾನುವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ ||
(ಗೀ. ೪.೧೧)

“ಅನ್ಯ ಮತದ್ವೇಷವೂ ಸ್ವಮತಭ್ರಾಂತಿಯೂ ನಮ್ಮೀ ಸುಂದರ ವಸುಂಧರೆಯನ್ನು ಬಹುಕಾಲದಿಂದಲೂ ಆಕ್ರಮಿಸಿಕೊಂವೆ. ಅವುಗಳ ಹಿಂಸಾಕಾರ್ಯದಿಂದ ಭೂಮಿ ಎಷ್ಟೋ ಸಾರಿ ಮಾನವರಕ್ತದಿಂದ ಪ್ಲಾವಿತವಾಗಿದೆ. ಅವುಗಳ ದೆಸೆಯಿಂದಲೆ ಅನೇಕ ಸಂಸ್ಕೃತಿ ನಾಗರಿಕತೆಗಳು ವಿನಾಶ ಹೊಂದಿವೆ, ಆ ಪಿಶಾಚಗಳಿಲ್ಲಿದಿದ್ದರೆ ಮನುಷ್ಯ ಸಮಾಜವು ಈಗಿರುವುದಕ್ಕಿಂತಲೂ ಸಾವಿರ ಪಾಲು ಶ್ರೇಯಸ್ವಿಯಾಗಿರುತ್ತಿತ್ತು. ಆದ್ದರಿಂದ ಆ ಪಿಶಾಚಿಗಳಿಗೆ ಮರಣ ಕಾಲ ಸಮೀಪಿಸಿದೆ. ಈ ದಿನ ಪ್ರಾತಃಕಾಲ ಈ ಧರ್ಮಮಹಾಸಭೆಯ ಪ್ರಾರಂಭೋತ್ಸವವನ್ನು ಸಾರಿದ ಮಹಾ ಘಂಟಾರವವು ಮತದ್ವೇಷ ಮತಭ್ರಾಂತಿಗಳ ಮೃತ್ಯುತೂರ್ಯವಾಗುವುದೆಂದು ಹಾರೈಸುತ್ತೇನೆ..

“ಹಿಂದೂಧರ್ಮದಲ್ಲಿ ಸೂಕ್ಷ್ಮ ಸೂಕ್ಷ್ಮತಮವಾದ ನಿರ್ಗುಣ ಬ್ರಹ್ಮೋಪಾಸನೆಯಿಂದ ಹಿಡಿದು ಸ್ಥೂಲಸ್ಥೂಲತವಾದ ವಿಗ್ರಹಾರಾಧನೆಯವರೆಗೂ, ಬೌದ್ಧರ ಸಂದೇಹವಾದದಿಂದ ಹಿಡಿದು ಜೈನರ ನಿರೀಶ್ವರವಾದದವರೆಗೂ ಎಲ್ಲ ಮತಗಳಿಗೂ ಸ್ಥಾನವಿದೆ…..

“ಆರ್ಯನು ತಾನೊಂದು ಆತ್ಮವೆಂದು ನಂಬುತ್ತಾನೆ. ಆತ್ಮವನ್ನು ಕತ್ತಿ ಇರಿಯದು; ಬೆಂಕಿ ಸುಡದು; ನೀರು ತೋಯಿಸದು; ಗಾಳಿ ಒಣಗಿಸದು. ಆತ್ಮ ಅನಂತವಾದುದು. ಅಚ್ಯುತವಾದುದು. ಮರಣವೆಂದರೆ ಅವಸ್ಥಾಂತರವೆ ಹೊರತು ವಸ್ತು ನಾಶವಲ್ಲ. ಆತ್ಮವು ಜಡದ ಉಪಾಧಿಯಿಂದ ಬದ್ಧವಾಗಿಲ್ಲ. ಅದು ತತ್ತ್ವತಃ ನಿತ್ಯಶುದ್ಧವೂ ನಿತ್ಯಬುದ್ಧವೂ ನಿತ್ಯಮುಕ್ತವೂ ಆದುದು..

“ನೀವೆಲ್ಲರೂ ಅಮೃತಪುತ್ರರು. ಅಮೃತಪುತ್ರರಿರಾ, ಆರ್ಯನು ನಿಮ್ಮನ್ನೆಂದಿಗೂ ಪಾಪಿಗಳೆಂದು ಕರೆಯನು. ನೀವೆಲ್ಲರೂ ಈಶ್ವರನ ಶಿಶುಗಳು. ಆನಂದಾಂಶರು, ನಿತ್ಯಪವಿತ್ರರು, ನಿತ್ಯಮುಕ್ತರು. ಮಾನವನನ್ನು ಪಾಪಿಯೆಂದು ಕರೆಯುವುದಕ್ಕಿಂತಲೂ ಬೇರೊಂದು ಮಹಾಪಾಪವಿಲ್ಲ. ಹಾಗೆ ಕರೆಯುವುದು ಮನುಷ್ಯತ್ವಕ್ಕೇ ಒಂದು ಮಹಾನಿಂದೆ… ಸಿಂಹಗಳೇ, ಮೇಲೇಳಿ, ಕುರಿಗಳು ನಾವೆಂಬ ಮಾಯೆಯನ್ನು ಹರಿದುಬಿಸಾಡಿ…

“ಆರ್ಯಧರ್ಮವು ಬರಿಯ ನಂಬುಗೆಗಳ ಕಟ್ಟಲ್ಲ; ಸಿದ್ಧಾಂತಗಳ ಸಮೂಹ ಮಾತ್ರವಲ್ಲ. ಅದೊಂದು ಸಾಧನೆ, ಸಿದ್ಧಿ, ಸಾಕ್ಷಾತ್ಕಾರ….

“ಮೌಢ್ಯವು ಮಾನವನ ಮಹಾಶತ್ರು. ಮತಭ್ರಾಂತಿ ಅದಕ್ಕಿಂತಲೂ ಭಯಾನಕವಾದುದು. ಕ್ರೈಸ್ತನು ಚರ್ಚಿಗೆ ಹೋಗುತ್ತಾನೇಕೆ? ಶಿಲುಬೆ ಪಾವನವಾಗಿವುದೇಕೆ? ಮುಖವು ಆಕಾಶದ ಕಡೆಗೆ ತಿರುಗಬೇಕೇಕೆ? ಕ್ಯಾಥೋಲಿಕ್ ಚರ್ಚಿನಲ್ಲಿ ಅಷ್ಟೋಂದು ಪ್ರತಿಮೆಗಳೇಕೆ? ಪ್ರಾರ್ಥನೆ ಮಾಡುವಾಗ ಪ್ರೋಟೆಸ್ಟಾಂಟ್ ಕ್ರೈಸ್ತನ ಮನಸ್ಸಿನಲ್ಲೇಕೆ ನೂರಾರು ಚಿತ್ರಗಳಿರುತ್ತವೆ? ಸೋದರರೇ, ಯಾವುದಾದರೂ ಒಂದು ತೆರನಾದ ಮಾನಸಿಕ ಪ್ರತಿಮೆಗಳಿಲ್ಲದೆ ನಾವು ಆಲೋಚಿಸಲಾರೆವು, ಉಸಿರಾಡದಿದ್ದರೆ ಹೇಗೆ ಬದುಕಲಾರೆವೊ ಹಾಗೆ. ಪ್ರತಿಮೆಯಿಂದ ಭಾವವೂ ಭಾವದೊಡನೆ ಪ್ರತಿಮೆಯೂ ಯಾವಾಗಲೂ ಜೊತೆಗೂಡಿರುತ್ತದೆ. ಆದ್ದರಿಂದಲೆ ಹಿಂದುವು ಉಪಾಸನೆಗಳಲ್ಲಿ ಪ್ರತಿಮೆಗಳನ್ನು ಉಪಯೋಗಿಸುತ್ತಾನೆ….. ಮನುಷ್ಯನು ಸಾಕ್ಷಾತ್ಕಾರದಿಮದ ದಿವ್ಯನಾಗುತ್ತಾನೆ. ಪ್ರತಿಮೆ, ದೇವಾಲಯ, ಗ್ರಂಥಗಳೆಲ್ಲ ಬರಿಯ ಅವಲಂಬಿನೆಗಳು; ಧಾರ್ಮಿಕಜೀವನದ ಶೈಶವಕ್ಕೆ ಬೇಕಾಗುವ ಸಹಾಯಗಳು ಮಾತ್ರ. ಆದರೆ ಸೋಪಾನವು ಮಹಡಿಯಲ್ಲ; ದಾರಿ ಮನೆಯಲ್ಲ ಗುರಿ ದೊರಕುಬೇಕಾದರೆ ಮುಂದೆ ಮುಂದೆ ನಡೆಯಬೇಕು.

“ವಿಗ್ರಹಾರಾಧಕನನ್ನು ಹೋಗಿ ಕೇಳಿದರೆ ಆತನೆ ಹೇಳುತ್ತಾನೆ; ನಂತರ ಸೂರ್ಯೋ ಭಾತಿ, ನ ಚಂದ್ರ ತಾರಕಂ; ನೇವಾ ವಿದ್ಯುತೋ ಭಾಂತಿ, ಕುತೋಯಮಗ್ನಿಃ? ತಮೇವ ಭಾಂತಂ ಅನುಭಾತಿ ಸರ್ವಂ ತಸ್ಯ ಭಾಸಾ ಸರ್ವಮಿದಂ ವಿಭಾತಿ…..

“ಮಾನವನು ವಿಗ್ರಹದ ಸಹಾಯದಿಮದ ದಿವ್ಯತ್ವವನ್ನು ಸುಲಭವಾಗಿ ಪಡೆಯಬಹುದಾದರೆ. ಅದನ್ನು ಪಾಪವೆಂದೇಕೆ ಕರೆಯಬೇಕು? ಮನುಷ್ಯನು ಅಸತ್ಯದಿಂದ ಸತ್ಯಕ್ಕೇರುತ್ತಿಲ್ಲ. ಸತ್ಯದಿಂದ ಸತ್ಯಕ್ಕೆ –  ಕಿರಿಯ ಸತ್ಯದಿಂದ ಹಿರಿಯ ಸತ್ಯಕ್ಕೆ – ಏರುತ್ತಾನೆ. ಭೂತವಾದದಿಂದ ಹಿಡಿದು ನಿರ್ಗುಣ ಬ್ರಹ್ಮವಾದದವರೆಗೆ ಎಲ್ಲ ಮತಗಳೂ ತತ್ತ್ವಗಳೂ ಸತ್ಯವನ್ನು ಸ್ಪರ್ಶಿಸಲು ಪ್ರಯತ್ನಿಸುತ್ತಿವೆ….

“ದ್ವೈತದಲ್ಲಿ ಅದ್ವೈತವಿದೆ; ಭೇಧದಲ್ಲಿ ಅಭೇದವಿದೆ; ಅನೇಕದಲ್ಲಿ ಏಕವಿದೆ; ಇದನ್ನು ಆರ್ಯನು ಅರಿತಿದ್ದಾನೆ. ಇತರ ಮತಗಳು ತಮ್ಮ ಅನುಯಾಯಿಗಳ ಮೇಲೆ ನಿಯತವಾದ ಮತಭಾವಗಳನ್ನೂ ಆಚಾರಗಳನ್ನೂ ಬಲಾತ್ಕಾರವಾಗಿ ಹೇರುತ್ತಿವೆ. ವೆಂಕ ನಾಣ ಸೀನರಿಗೆ ಒಂದೇ ಅಂಗಿಯನ್ನು ತೊಡಿಸುವ ಪ್ರಯತ್ನ ನಡೆಯುತ್ತಿದೆ. ಆರ್ಯಧರ್ಮವಾದರೋ – ಏಕಮೇವಾದ್ವಿತೀಯವಾದ ಬ್ರಹ್ಮವೊಂದಿದೆ; ಅದನ್ನು ಸ್ವಾನುಭವದಿಂದ ಅರಿಯಬೇಕು; ಅದನ್ನು ಸಾಧಿಸಲು ಹಲವು ಮಾರ್ಗಗಳಿವೆ; ಆದ್ದರಿಂದ ಆ ಮಾರ್ಗಗಳೆಲ್ಲವೂ ಗೌರವಾರ್ಹವಾದುವು ಎಂದು ಬೋಧಿಸುತ್ತದೆ….

“ಯಾವ ಶಕ್ತಿಯನ್ನು ಹಿಂದುಗಳು ಬ್ರಹ್ಮವೆಂದೂ ಜೋರಾಸ್ತಮತಸ್ಥರು ಅಹುರಮಜ್ ದನೆಂದೂ ಬೌದ್ಧರೂ ಬುದ್ಧನೆಂದೂ ಕ್ರೈಸ್ತರು ಪರಲೋಕದಲ್ಲಿರುವ ತಂದೆಯೆಂದೂ ಸಂಬೋಧಿಸಿ ಆರಾಧಿಸುತ್ತಾರೋ ಆ ಪರಮಶಕ್ತಿ ಸರ್ವಧರ್ಮ ಸಮನ್ವಯವು ಎಲ್ಲರೆದೆಗಳಲ್ಲಿಯೂ ನೆಲಸುವಂತೆ ಹರಗೈಯಲಿ!”

ಸ್ವಾಮಿ ವಿವೇಕಾನಂದರು ಸುಮಾರು ಐದು ವರ್ಷಗಳ ಕಾಲ ಯೂರೋಪು ಅಮೆರಿಕಾ ಖಂಡಗಳಲ್ಲಿ ತಮ್ಮ ಸಿಂಹವಾಣಿಯಿಂದ ವೇದಾಂತ ಧರ್ಮವನ್ನು ಸಾರಿ ತಮ್ಮ ಮಾತೃಭೂಮಿಗೆ ಹಿಂದಿರುಗಿದರು. ಕನ್ಯಾಕುಮಾರಿಯಿಂದ ಹಿಮಾಲಯದವರೆಗೆ ಸಂಚರಿಸಿ, ವೀರವಾಣಿಯಿಂದ ನಾಡಿನ ನಾಡಿಗಳಲ್ಲಿ ಚೈತನ್ಯವು ಚಿಮ್ಮುವಂತೆ ಮಾಡಿದರು. ಈ ಸಂದೇಶವು ಬಹುಮುಖವಾದುದು; ಬೃಹತ್ತಾದುದು. ಅದರಲ್ಲಿ ಕೆಲವಂಶಗಳನ್ನು ಕೊಡುತ್ತೇವೆ.

“ಓ ನನ್ನ ಭರತಮಾತೆ. ಓ ನನ್ನ ಭಾರತೀಯ ಭ್ರಾತೃಗಳಿರಾ. ನಿದ್ದೆಯಿಂದ್ದೇಳೊ! ನವೋದಯವಾಗುತ್ತಿದೆ; ಕಣ್ದೆರೆದು ನೋಡಿ! ಅದೋ…

“ಸುಧರ್ಘರಾತ್ರಿ ಕಡೆಗಿಂದು ಕೊನೆಗಾಣುತ್ತಿದೆ. ಬಹುಕಾಲದ ಕೋಪ ತಾಪಗಳು ಕಡೆಗಿಂದು ಮಾಯವಾಗುತ್ತಲಿವೆ. ಇದುವರೆಗೆ ಶವದಂತೆ ಬಿದ್ದಿದ್ದ ಶರೀರವಿಂದು ಸಚೇತನವಾಗುತ್ತಿದೆ. ಅದೋ ಕಿವಿಗೊಡಿ; ತೂರ್ಯವಾಣಿಯೊಂದು ಕೇಳಿಬರುತ್ತಿದೆ – ಬಹು ಪುರಾತನಕಾಲದ ಇತಿಹಾಸ ಗರ್ಭದಿಮದ ಹೊಮ್ಮಿ ಪರ್ವತಶಿಖರಗಳಿಂದ ಮರುದನಿಯಾಗಿ ಚಿಮ್ಮಿ. ಅರಣ್ಯಾರಣ್ಯ ಕಂದರ ಕಂದರಗಳಲ್ಲಿ ಸಂಚರಿಸಿ. ಬರಬರುತ್ತ ಪ್ರಬಲವಾಗಿ, ಬಂದಂತೆಲ್ಲಾ ಅ ಪ್ರತಿಹತವಾಗಿ. ನಮ್ಮೀ ಪುಣ್ಯಭೂಮಿಯನ್ನು ನಿದ್ದೆಯಿಂದೊದ್ದೆದ್ದೆಬ್ಬಿಸಿ. ಜ್ಞಾನ ಭಕ್ತಿ ಕರ್ಮ ವೈರಾಗ್ಯ ಸೇವಾತತ್ತ್ವಗಳನ್ನು ಉಚ್ಚಕಂಠದಿಂದ ಸಾರುವ ತೂರ್ಯವಾಣಿಯೊಂದು ಕೇಳಿಬರುತ್ತಿದೆ. ಹಿಮಾಲಯಗಳಿಂದ ಬೀಸಿಬರುವ ಪುಣ್ಯಸಮೀರಣನಂತೆ ನಿರ್ಜೀವವಾದಂತಿದ್ದ ಅಸ್ಥಿ ಮಾಂಸಗಳಿಗೆ ಜೀವದಾನಮಾಡುತ್ತಿದೆ; ಜಡನಿದ್ದೆಯನ್ನು ಪರಿಹರಿಸುತ್ತಿದೆ. ಕಾರ್ಯೋತ್ಸಾಹ ಸ್ಥೈರ್ಯ ಧೈರ್ಯಗಳನ್ನು ಉದ್ರೇಕಿಸುತ್ತದೆ. ಕುರುಡರಿಗೆ ಕಾಣದು; ಮೂರ್ಖರಿಗೆ ತಿಳಿಯದು. ನಮ್ಮೀ ಭಾರತ ಭೂಮಿಯುಗಯುಗಳ ನಿದ್ರೆಯಿಂದ ಮೇಲೇಳುತ್ತಿದೆ. ಆಕೆಯನ್ನು ಇನ್ನಾರೂ ತಡೆಯಬಲ್ಲವರಿಲ್ಲ. ಇನ್ನಾಕೆ ನಿದ್ದೆಮಾಡುವುದಿಲ್ಲ. ಯಾವ ಶಕ್ತಿಯೂ ಆಕೆಯನ್ನು ಬಗ್ಗಿಸಲಾರದು. ಏಕೆಂದರೆ, ಅದೋ ನೋಡಿ; ಮಹಾಕಾಳಿ ಮತ್ತೊಮ್ಮೆ ಎಚ್ಚೆತ್ತು ಮೈಕೊಡವಿ ಉಸಿರೆಳೆದು ನಿಲ್ಲುತ್ತಿದ್ದಾಳೆ! …

“ಪ್ರತಿಯೊಂದು ಜನಾಂಗಕ್ಕೂ ಪ್ರತಿಯೊಬ್ಬ ವ್ಯಕ್ತಿಗಿರುವಂತೆಯೆ ಒಂದೊಂದು ಜೀವನೋದ್ದೇಶವಿದೆ. ಆ ಉದ್ದೇಶವೆ ಅದರ ಹೃದಯ; ಉಳಿದುದೆಲ್ಲವೂ ಗೌಣ. ಯಾವ ಜನಾಂಗವಾದರೂ ಶತಮಾನಗಳಿಂದ ತನ್ನ ನಾಡಿಗಳಲ್ಲಿ ಪ್ರವಹಿಸಿ ಬಂದ ಆದರ್ಶವನ್ನು ಕಿತ್ತಪಗೆಯಿತೆಂದರೆ ಸರ್ವನಾಶವಾಗುತ್ತದೆ. ರಾಜಕೀಯ ಒಂದರ ಹೃದಯ; ಕಲಾಜೀವನ ಮತ್ತೊಂದರದು; ಭರತಖಂಡದ ಹೃದಯವೆಂದರೆ ಧರ್ಮ. ಅದನ್ನು ವರ್ಜಿಸಿದೆವಾದರೆ ನಮ್ಮ ಸಂಸ್ಕೃತಿ ಅಳಿದು ಹೋಗುತ್ತದೆ….

“ಪ್ರಂಪಚಕ್ಕೀಗ ಬೇಕಾಗಿರುವುದು ಆತ್ಮದ ಅಮೃತತ್ತ್ವದ ಸಂದೇಶ; ಆತ್ಮದ ಐಕ್ಯದ ಸಂದೇಶ; ಆತ್ಮದ ಬ್ರಹ್ಮತ್ವದ ಸಂದೇಶ ಆ ಸಂದೇಶವನ್ನು ಸಾರುವ ಭಾರವು ಆರ್ಯವರ್ತದ ಮೇಲಿದೆ…

“ದ್ವೈತಭಾವದಿಂದಲೂ ಭಕ್ತಿಯಿಂದಲೂ ಬರುವ ಆನಂದದ ರುಚಿಯನ್ನು ನಾನು ಅರಿತಿದ್ದೇನೆ. ಆದರೆ ನಮಗಿಂದು ಕಂಬನಿಗರೆಯುತ್ತ ಕುಳಿತುಕೊಳ್ಳಲು ಸಮಯವಿಲ್ಲ; ಸಮಯವಿಲ್ಲ; ! ಭಕ್ತಿಯಿಂದ ಸಾಕಾದಷ್ಟು ಕಂಬನಿಗರೆದಿದದೇವೆ. ಮೃದುಹೃದಯ ಸಾಧನೆಗೆ ಇದು ಕಾಲವಲ್ಲ. ಭಕ್ತಿಯ ಹೆಸರಿನಲ್ಲಿ ನಾವು ಬೆಣ್ಣೆಯ ಮುದ್ದೆಗಳಾಗಿ ಹೋಗಿದ್ದೇವೆ. ನಮಗೀಗ, ಬೇಕಾಗಿರುವುದು ಕಬ್ಬಿಣದಂತಹ ಮೈಕಟ್ಟು; ಉಕ್ಕಿನಂತಹ ನರಗಳು; ವಜ್ರದಂತಹ ಮನಸ್ಸು; ಸಾವು ಬಂದರೂ ಸರಿಯೆ. ಹಿಡಿದುದನ್ನು ಮಾಡಿ ಮುಗಿಸುವಂತಹ ಸಿಡಿಲಿನಂತಹ ಇಚ್ಛೆ. ಅಂತಹ ಶಕ್ತಿ ಅದ್ವೈತದಿಂದಲೇ ಸಾಧ್ಯ. ಶ್ರದ್ದೆ ಬೇಕು ಆತ್ಮ ಶದ್ದೆ –  ಅಂಧ ಶದ್ದೆಯಲ್ಲ! ಎಷ್ಟು ದೇವರ ನೀನೆಷ್ಟು ನಂಬಿದರೇನು, ಒಂದಿಷ್ಟು ನೀ ನಂಬದಿರೆ ನಿನ್ನ ನೀನು? ಮೂವತ್ತುಕೋಟಿ ಮಾನವರು ದಾಸರಾಗಿರುವುದೇಕೆ? ಆತ್ಮ ಶ್ರದ್ದೇ ಇಲ್ಲದುದರಿಂದಲ್ಲವೇ? ನಮ್ಮ ಶ್ರೀಮಂತ ಪೂರ್ವಿಕರು ತಮ್ಮ ದರಿದ್ರ ಭ್ರಾತೃಗಳನ್ನು ಪದದಲಿತಮಾಡಿ ನಿರ್ವೀರ್ಯರನ್ನಾಗಿ ಮಾಡಿದ್ದಾರೆ. ಅವರಿಗೆ ತಮ್ಮ ಮನುಷ್ಯತ್ವವೇ ಮರೆತು ಹೋಗಿದೆ…

“ಸಮಾಜ ಸುಧಾರಕರಲ್ಲಿ ನನ್ನದೊಂದು ವಿಜ್ಞಾಪನೆ. ದೇಶದ ಶೋಚನೀಯ ಸ್ಥಿತಿಯನ್ನು ಕಂಡು ನಿಮ್ಮೆದೆ ಬೇಯುತ್ತದೆಯೆ? ಸೋದರನ ದುರವಸ್ಥೆಗೆ ನಿಮ್ಮೆದೆ ನೋಯುತ್ತದೆಯೆ? ಆರ್ಯ ಋಷಿಗಳ ಪುತ್ರರು ಪಶುಗಳಾಗಿರುವುದನ್ನು ನೋಡಿ ನಿಮ್ಮದೆ ಬೇಯುತ್ತದೆಯೆ? ಹೊಟ್ಟೆಗಿಲ್ಲದೆ ನರಳಿಸಾಯುವ ಸಹಸ್ರಾರು ಜನಗಳಿಗಾಗಿ ನಿಮ್ಮ ಮನಸ್ಸು ನೋಯುತ್ತದೆಯೆ? ನಿಮಗೆ ಶಾಂತಿಯಿಲ್ಲವೆ? ನಿದ್ದೆಯಿಲ್ಲವೆ? ನಿಮಗೆ ಹುಚ್ಚು ಹಿಡಿದಿದೆಯೆ? ಕೀರ್ತೀ, ಐಶ್ವರ್ಯ, ಮನೆ, ಹೆಂಡತಿ, ಮಕ್ಕಳು, ನಿಮ್ಮ ಶರೀರ ಎಲ್ಲವನ್ನೂ ಮರೆತು ದೇಶಕ್ಕಾಗಿ ಮರುಗುತ್ತಿದ್ದೀರಾ? ಇಷ್ಟಿದ್ದರೆ ದೇಶಭಕ್ತಿಗೆ ಪ್ರಥಮ ಸೋಪಾನ ಮಾತ್ರವೆಂದು ತಿಳಿಯಿರಿ.

“ಜಾತಿ ಮತ ದೇಶ ವರ್ಣ ಭೇದವಿಲ್ಲದೆ ಪ್ರತಿಯೊಬ್ಬನೂ ವೇದಾಂತಿಯಾಗಲಿ, ತಾನು ಅಮೃತತಾತ್ಮನೆಂದು ತಿಳಿಯಲಿ. ಆಗ ಇಲಿಗಳು ಹುಲಿಗಳಾಗುತ್ತವೆ. ಕುರಿಗಳು ಹರಿಗಳಾಗುತ್ತವೆ..

“ನಮಗೆ ಬೇಕಾದುದು ಪೌರಷಕಾರಿಯಾದ ಮತಧರ್ಮ…. ನಮಗೆ ಬೇಕಾದುದು ಪೌರುಷಕಾರಿಯಾದ ವಿದ್ಯಾಭ್ಯಾಸ… ದೈಹಿಕವಾಗಿಯಾಗಲಿ, ಮಾನಸಿಕವಾಗಿಯಾಗಲಿ. ಧಾರ್ಮಿಕವಾಗಿಯಾಗಲಿ ನಿಮ್ಮನ್ನು ದುರ್ಬಲರನ್ನಾಗಿ ಮಾಡುವುದನ್ನೆಲ್ಲ ವಿಷವೆಂದು ಭಾವಿಸಿ ವಿಸರ್ಜಿಸಿ. ವಿಷದಲ್ಲಿ ಜೀವವೂ ಇಲ್ಲ; ಸತ್ಯವೂ ಇಲ್ಲ. ಸತ್ಯ ಯಾವಾಗಲೂ ಬಲಕಾರಿಯಾದುದು; ಪ್ರಬೋಧಕಾರಿಯಾದುದು; ಉತ್ಸಾಹಕಾರಿಯಾದುದು ದುರ್ಬಲಕಾರಿಗಳಾದ ರಹಸ್ಯಗಳನ್ನೆಲ್ಲ ದೂರಮಾಡಿ ಶಕ್ತಿವಂತರಾಗಿ. ನಿಜವಾದ ಸತ್ಯವು ಅತ್ಯಂತ ಸರಳವಾದುದು. ಅಲ್ಲಿ ರಹಸ್ಯವಿಲ್ಲ; ಮುಚ್ಚುಮರೆಯಿಲ್ಲ; …. ಬೆಳಕಿಗೆ ಕತ್ತಲೆಯ ಮುಸುಗೇಕೆ?

“ಇನ್ನೊಂದು ನೂರು ವರ್ಷಗಳವರೆಗೆ ನಿಮ್ಮ ದೇವ ದೇವತೆಗಳನ್ನೆಲ್ಲ ಮನಸ್ಸಿನಿಂದ ತಳ್ಳಿಬಿಡಿ. ನಮ್ಮ ಭಾರತಾಂಬೆಯೆ ನಮ್ಮ ದೇವರಾಗಲಿ ನಿದ್ದೆ ಮಾಡುವ ಉಳಿದ ದೇವತೆಗಳನ್ನು ಕಟ್ಟಿಕೊಂಡು ನಾವು ಮಾಡುವುದೇನು? ನಿರ್ಜೀವ ವಿಗ್ರಹಾರಾಧನೆಯನ್ನು ಬಿಟ್ಟು ಸಜೀವ ಮಾನವಾರಾಧನೆಯನ್ನು ಕೈಕೊಳ್ಳಿ…..

“ದೇಶಸೇವೆಯೆ ಈಶಸೇವೆ! ನರನ ಸೇವೆಯೆ ಹರನ ಸೇವೆ!

“ಆರ್ಯಮಾತೆಯ ಅಮೃತಪುತ್ರರಿರಾ, ಮಹರ್ಷಿಕುಲ ಸಂಜಾತ ಧನ್ಯಾತ್ಮರಿರಾ, ಮರೆಯದಿರಿ – ನಿಮ್ಮ ಆದರ್ಶಮಾತೆಯರೆಂದರೆ – ಸೀತೆ, ಸಾವಿತ್ರಿ, ದಮಯಂತಿಯರು! ಮರೆಯದಿರಿ – ನಿಮ್ಮ ಆರಾಧನೆಯ ಮಹೇಶ್ವರನು ತ್ಯಾಗೀಕುಲ ಚೂಡಾಮಣಿ, ವೈರಾಗ್ಯನಿಧಿ, ಉಮಾನಾಥ ಶಂಕರನು! ನಿಮ್ಮ ವಿವಾಹ ಸಂಪತ್ತುಗಳು ಬರಿಯ ಇಂದ್ರಿಯ ಭೋಗಕ್ಕಲ್ಲ; ನಿಮ್ಮ ಸ್ವಾರ್ಥಪರ ಸುಖಕ್ಕಲ್ಲ, ಮರೆಯದಿರಿ – ಮಾತೆಯ ಬಲಿ ಪೀಠದ ಮೇಲೆ ಯಜ್ಞಶಿಶುಗಳಾಗಿ ಜನ್ಮವೆತ್ತಿರುವಿರಿ. ಮರೆಯದಿರಿ – ಶೂದ್ರರೂ ಅಂತ್ಯಜರೂ ದರಿದ್ರರೂ ಅಜ್ಞಾನಿಗಳೂ ಚಂಡಾಲ ಚಮ್ಮಾರರೆಲ್ಲರೂ ನಿಮ್ಮ ರಕ್ತಬಂದುಗಳಾದ ಸೋದರರು! ವೀರಾತ್ಮರೇ, ನೆಚ್ಚುಗೆಡದಿರಿ; ಧೀರರಾಗಿರಿ. ಭಾರತೀಯರು ನಾವೆಂಬ ಹೆಮ್ಮೆಯಿಂದ ಸಾರಿಹೇಳಿ –  ಭಾರತೀಯರು ನಾವು; ಭಾರತೀಯರೆಲ್ಲ ಸೋದರರು ನಮಗೆ. ಸಾರಿ ಹೇಳಿ –  ಅಜ್ಞಾನಿ ಭಾರತೀಯರೆಮ್ಮ ಸಹೋದರರು. ಛಿದ್ರಮಲಿನ ವಸನಧಾರಿಗಳಾದರೂ ಅಭಿಮಾನಪೂರ್ಣವಾದ ಮೇಘ ಗಂಭೀರವಾಣಿಯಿಂದ ಘೋಷಿಸಿರಿ – ಆರ್ಯರೆಮ್ಮ ಬಂಧುಗಳು; ಆರ್ಯರೆಮ್ಮ ಪ್ರಾಣ; ಆರ್ಯದೇವತೆಗಳೆಲ್ಲರೂ ನಮ್ಮ ದೇವರು; ಆರ್ಯಸಮಾಜವು ನಮ್ಮ ಶೈಶವದ ತೊಟ್ಟಿಲು, ತಾರುಣ್ಯದ ಉಯ್ಯಾಲೆ, ಯೌವನದ ಉದ್ಯಾನ, ವೃದ್ಧಾಪ್ಯದ ವಾರಣಾಸಿ! ಸೋದರರೇ, ಇಂತೆಂದು ಗಾನಮಾಡಿ – ಆರ್ಯಭೂಮಿಯೇ ನಮ್ಮ ಸ್ವರ್ಗ; ಆರ್ಯ ಭೂಮಿಯೇ ನಮಗೆ ಪರಮಪರಂಧಾಮ; ಆರ್ಯಮಾತೆಯ ಶುಭವೇ ನಮ್ಮ ಶುಭ; ಆಕೆಯ ಸುಖವೇ ನಮ್ಮ ಸುಖ. ದಿವಾರಾತ್ರಿಯೂ ಇದು ನಿಮ್ಮ ಪ್ರಾರ್ಥನೆಯಾಗಿರಲಿ – ಹೇ ಗೌರೀನಾಥ, ಹೇ ಜಗನ್ಮಾತೆ, ಪೌರುಷವನ್ನೆಮಗೆ ದಯಪಾಲಿಸು; ಹೇ ಸರ್ವಶಕ್ತಿಶಾಲಿನಿ, ನಮ್ಮ ದೌರ್ಬಲ್ಯವನ್ನು ದಹಿಸು. ಕ್ಲೈಬ್ಯವನ್ನು ಪರಿಹರಿಸು; ನಮ್ಮನ್ನು ಪೌರುಷವಂತರನ್ನಾಗಿ ಮಾಡು; ಪುರುಷಸಿಂಹರನ್ನಾಗಿ ಮಾಡು.”

ಸ್ವಾಮಿಗಳ ಪವಿಧ್ವನಿಯಿಂದ ರಾಷ್ಟ್ರ ಮಹಾ ಶರೀರದಲ್ಲಿ ವಿದ್ಯುತ್ಸಂಚಾರವಾಯಿತು. ಜನರು ಜ್ವಾಲಾಗ್ರಸ್ಥರಾದರು. ಆದರೆ ಉಪನ್ಯಾಸಗಳಿಂದ ಉತ್ಪತ್ತಿಯಾಗುವ ಕ್ಷಣಿಕ ಉದ್ರೇಕವು ಶಾಶ್ವತ ಉತ್ಸಾಹವಾಗಿ ಕಾರ್ಯಕಾರಿಯಾಗಬೇಕಾದರೆ ಸಂದೇಶವಾಣಿ ಶಿಥಿಲವಾಗದೆ ಚಿರಸ್ಥಯಿಯಾಗಿರಬೇಕೆಂದು ಸ್ವಭಾವತಃ ದೂರದರ್ಶಿಯಾಗಿದ್ದ ವಿವೇಕಾನಂದರು ಮನಗಂಡು, ದೇಶಬಾಂಧವರಲ್ಲಿ ಸಂಜನಿಸಿದ ಶಕ್ತಿಸೂತ್ರಗಳನ್ನು ಸಂಘಬದ್ಧವಾಗಿ ಮಾಡಲೊಸುಗ ಮಹಾ ಸಂಸ್ಥೆಯೊಂದನ್ನು ನಿರ್ಮಿಸಿ ಸ್ಥಾಪುಸಲು ನಿಶ್ಚಯಿಸಿದರು.” ತರುಣರನ್ನು ತ್ಯಾಗ ಮೂರ್ತಿಗಳನ್ನಾಗಿಯೂ ಸೇವಾನಿರತರನ್ನಾಗಿಯೂ ಶಿಕ್ಷಣಮಾಡಿ, ಸ್ವದೇಶದಲ್ಲಿಯೂ ವಿದೇಶಗಳಲ್ಲಿಯೂ ಹರಡಬೇಕೆಂಬುದು ನನ್ನದೊಂದು ಮಹದಾಕಾಂಕ್ಷೆ. ಆ ಕೆಲಸಕ್ಕೆ ಧೀರರು ಬೇಕು. ಉಳಿದುದೆಲ್ಲ ಸುಲಭಸಾಧ್ಯ. ಆಶಿಷ್ಟ, ದೃಢಿಷ್ಠ, ಬಲಿಷ್ಠ, ಮೇಧಾವಿಗಳಾದ ವೀರತರುಣರು ಬೇಕು. ಅಂತಹ ನೂರು ಜನರು ಸಿಕ್ಕುವುದಾದರೆ ಪ್ರಪಂಚವನ್ನೆ ಬದಲಾಯಿಸಬಹುದು. ಮಾನವನ ಚಿಚ್ಛಕ್ತಿಗಿಂತಲೂ ಬಲವಾದ ಶಕ್ತಿ ಇನ್ನೊಂದಿಲ್ಲ. ಈಶ್ವರಾವಿಷ್ಟವಾದ ಚಿಚ್ಛಕ್ತಿಯ ಮುಂದೆ ಜಗತ್ತು ತಲೆಬಾಗುತ್ತದೆ. ಪರಿಶುದ್ಧವಾಗಿಯೂ ವೀರ್ಯವತ್ತಾಗಿಯೂ ಇರುವ ಚಿತ್ತವು ಅಪ್ರತಿಹತವಾದುದು. ಸರ್ವಶಕ್ತವಾದುದು.”

ಮೊದಲನೆಯದಾಗಿ, ಆಶಾಜನಕವೂ ಬಲಕಾರಿಯೂ ಆಗಿರುವ ಉಪನಿಷತ್ತುಗಳ ಧೀರಸಂದೇಶವನ್ನು ಮನೆ ಮನೆಗೂ ಗುಡಿಸಲು ಗುಡಿಸಲಿಗೂ ಹೋಗಿ ಸಾರಬೇಕು. ಜನಗಳ ಹೃದಯಕ್ಕೆ ವಜ್ರಸಾಣೆಯನ್ನು ಕೊಟ್ಟು ” ಮನುಷ್ಯ” ರನ್ನಾಗಿ ಮಾಡಬೇಕು. ಏಕೆಂದರೆ, ಹೃಚ್ಛಕ್ತಿಯಿಲ್ಲದೆ ಶ್ರೇಯಸ್ಸಿಲ್ಲ.

ಎರಡನೆಯದಾಗಿ ಸಂಕುಚಿತಭಾವಗಳನ್ನು ತೊಡೆದುಹಾಕಿ ಪರಮಹಂಸರಿಂದ ಪ್ರಣೀತವಾದ ಸರ್ವಧರ್ಮಸಮನ್ವಯವನ್ನು ಸಾರಿ ವಿಶಾಲ ದೃಷ್ಟಿಯನ್ನು ದಯಪಾಲಿಸಬೇಕು. ಏಕೆಂದರೆ, ಭರತಖಂಡದ ಅವನತಿಗೆ ಭಿನ್ನಬುದ್ದಿಯೆ ಮೂಲಕಾರಣವಾಗಿದೆ.

ಮೂರನೆಯದಾಗಿ, ವಿವೇಕಪೂರ್ವಕವಾದ ಮತ್ತು ಆರ್ಯಸಂಸ್ಕೃತಿಗೆ ಹಾನಿಕರವಲ್ಲದ ಸಮಾಜಸುಧಾರಣೆಯನ್ನು ಕೈಕೊಳ್ಳಬೇಕು. ಬದಲಾವಣೆಗಿಂತಲೂ ಬೆಳವಣಿಗೆಯೆ ಹಿತಕರವಾದುದು. ಸಂಪ್ರದಾಯ ಶರಣರನ್ನು ಖಂಡಿಸಿನಿಂದಿಸಿ ಮೈಮೇಲೆ ಹಾಕಿಕೊಳ್ಳದೆ ಪ್ರೀತಿಯಿಂದಲೂ ಎಚ್ಚರಿಕೆಯಿಂದಲೂ ಅವರನ್ನು ಗೆದ್ದು ಬೆಳಕಿನ ಹಾದಿಗೆ ಕರೆತರಬೇಕು. ಬೆಳಕು ಬಂದರೆ ಕತ್ತಲೆ ತನಗೆ ತಾನಾಗಿ ತೊಲಗುತ್ತದೆ.

ನಾಲ್ಕನೆಯದಾಗಿ, ವಿದ್ಯಾಪ್ರಚಾರ. ಅದಿಲ್ಲದೆ ದೇಶಕ್ಕೆ ಮುಕ್ತಿಯಿಲ್ಲ, ಮಾನವನಲ್ಲಿ ಮಲಗಿರುವ ಪೂರ್ಣತೆ ವಿಕಾಸವಾಗುವಂತೆ ಮಾಡುವುದೇ ಬೋಧನೆಯ ಗುರಿ. ಬರಿಯ ವಿಷಯ ಸಂಗ್ರಹಣೆ ಮಾಡಿ ಮೆದುಳನ್ನೊಂದು ಉಗ್ರಾಣದಂತೆ ಮಾಡಿಕೊಂಡರೆ ಅದು ವಿದ್ಯೆಯಲ್ಲ. ಜೀವನ ಪೋಷಕವೂ ಪೌರುಷಕಾರಿಯೂ ಸೌಶೀಲ್ಯಜನಕವೂ ಆದ ಭಾವಸಮನ್ವಯಕರಣವೇ ನಿಜವಾದ ವಿದ್ಯೆ.

ಐದನೆಯದಾಗಿ, ಸಾಮಾನ್ಯ ಜನರ  ಅಥವಾ “ಮಂದಿ”ಯ ಉತ್ಥಾಪನೆ. ಮಂದಿಯ ಅಧೋಗತಿಯೇ ಭಾರತವರ್ಷದ ದಾಸ್ಯದುಃಸ್ಥತಿಗಳಿಗೆ ಮುಖ್ಯ ಕಾರಣ. ಉಚ್ಚವರ್ಗದವರು ಅವರನ್ನು ಮೂಲೆಗೆ ತಳ್ಳಿ ತುಳಿದುದರಿಂದ ಅವರೆಲ್ಲರೂ ಕ್ರಿಮಿಗಳನ್ನೂ ಪುನಃ ದೇವತೆಗಳನ್ನಾಗಿ ಮಾಡಬೇಕು. ಭಾರತಾಂಬೆಯ ವಾಸಸ್ಥಾವನು ರಾಜನ ಅರಮನೆಯಲ್ಲಿ ಬಡವನ ಗುಡಿಸಲು. ಬಡವನ ನೋವಿಗೆ ಯಾರೆದೆ ಕುದಿಯುತ್ತದೆಯೋ ಆತನೇ ಮಹಾತ್ಮನು; ಉಳಿದವರೆಲ್ಲ ದುರಾತ್ಮರು.

ಆರನೆಯದಾಗಿ ಸ್ತ್ರೀಯರ ಉತ್ಥಾಪನೆ. ಭರತಖಂಡದ ಆದರ್ಶಸ್ತ್ರೀ ಸತಿಯಲ್ಲ. ಮಾತೆ. ಅವರ ವಿದ್ಯಾರ್ಜನೆಮಾಡುವಂತೆ ಅವಕಾಶ ಕಲ್ಪಿಸಿಕೊಟ್ಟರೆ, ಅವರ ಸಮಸ್ಯೆಗಳನ್ನು ಅವರೇ ಪರಿಹರಿಸಿಕೊಳ್ಳಲು ಸಮರ್ಥರಾಗುತ್ತಾರೆ. ಭಾವೀ ಭಾರತಸ್ತ್ರೀಯರ ಸೀತೆ, ಸಾವಿತ್ರಿ, ದಮಯಂತಿ, ಮೀರಾಬಾಯಿ ಮೊದಲಾದ ಪುಣ್ಯಮಾತೆಯರ ತನುಜಾತರಾಗುವಂತೆ ಮಾಡುವುದು ನಮ್ಮ ಕರ್ತವ್ಯ. ಸ್ತ್ರೀ ಪಾಕಶಾಲೆಯ ಮೂದೇವಿಯಲ್ಲ. ಆರ್ಯಾವರ್ತದ ಮಹಾದೇವಿ.

ಏಳನೆಯದಾಗಿ, ಜಾತಿಪದ್ಧತಿಯ ಸಮಸ್ಯೆ ವರ್ಣಾಶ್ರಮಧರ್ಮವು ಹಿತಕಾರಿ; ಆದರೆ ಜಾತಿಪದ್ಧತಿ ಲಯಕಾರಿ. ಧರ್ಮಪ್ರಪಂಚದಲ್ಲಿ ಜಾತಿ ಪದ್ಧತಿಯಲ್ಲ. ಕೀಳುಜಾತಿಯವನೂ ಮೇಲುಜಾತಿಯವನೂ ಸಂನ್ಯಾಸ ಸ್ವೀಕಾರ ಮಾಡಿದಾಗ ಸಮಾನರಾಗುತ್ತಾರಲ್ಲವೆ? ಜಾತಿಪದ್ಧತಿ ವೇದಾಂತಮತಕ್ಕೆ ವಿರುದ್ಧವಾದುದು. ಅದು ಒಂದು ಸಾಮಾಜಿಕ ವ್ಯವಸ್ಥೆ ಮಾತ್ರ. ಮಹಾಪುರುಷರೆಲ್ಲರೂ ಅದನ್ನು ಪ್ರತಿಭಟಿಸಿದ್ದಾರೆ. ವರ್ಣಾಶ್ರಮಧರ್ಮವು ಜಾತಿ ಪದ್ಧತಿಯಲ್ಲ. ವರ್ಣಾಶ್ರಮವಿಲ್ಲದ ದೇಶವಿಲ್ಲ. ಗುಣಸಂಸ್ಕಾರಗಳ ಆರ್ಜನೆಯಿಂದ ಎಲ್ಲರೂ ಬ್ರಾಹ್ಮಣ್ಯಕ್ಕೆ ಎಳಸಬೇಕು. ಬ್ರಾಹ್ಮಣ್ಯವು ನಮ್ಮ ಆದರ್ಶ, ಪಂಡಿತನ ಮಗನು ಪಂಡಿತನಾಗದಿರಬಹುದು. ಹಾಗೆಯೇ ಬ್ರಾಹ್ಮಣನ ಮಗನು ಬ್ರಾಹ್ಮಣನಾಗದಿರಬಹುದು. ಆದ್ದರಿಂದ ಹಕ್ಕುಬಾಧ್ಯತೆಗಳಿಗಾಗಿ ಹೊಡೆದಾಡುವ ಅನಿಷ್ಟವಾದ ಜಾತಿಪದ್ಧತಿಯನ್ನು ಒತ್ತರಿಸಿ, ಗುಣಸಂಸ್ಕಾರಗಳ ಸಾಧನೆಯಿಂದ ಶ್ರೇಯಸ್ಕರವಾಗುವ ವರ್ಣಾಶ್ರಮಧರ್ಮವನ್ನು ಕೈಕೊಂಡು ಎಲ್ಲರೂ ಬ್ರಾಹ್ಮಣರಾಗಬೇಕು.

ಎಂಟನೆಯದಾಗಿ, ಆರ್ಯಸಂಸ್ಕೃತಿಯ ಸಂರಕ್ಷಣೆ ಮತ್ತು ಪ್ರಚಾರ ಆರ್ಯಸಂಸ್ಕೃತಿ ಸಜೀವ ಸಂಸ್ಕೃತಿಗಳೆಲ್ಲೆಲ್ಲ ಅತ್ಯಂತ ಪುರಾತನವಾದುದು, ಶಕ್ತಿ ಪೂರ್ಣವಾದುದು ಮತ್ತು ಸರ್ವಗ್ರಾಸಿಯಾದುದು. ಅದರಲ್ಲಿ ಔದಾರ್ಯವಿರುವಂತೆಯೆ ವೈಶಿಷ್ಟ್ಯವೂ ಇದೆ. ಆದ್ದರಿಂದ ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಗೆ ಕೈಹಾಕದೆ, ಅದರಲ್ಲಿರುವ ಸತ್ಯಾಂಶಗಳನ್ನು ಹೀರಿಕೊಂಡು ನಮ್ಮ ಲೌಕಿಕ ಜೀವನವನ್ನು ಉದ್ಧಾರ ಮಾಡಿಕೊಳ್ಳುವುದಲ್ಲದೆ, ವಿನಿಮಯವಾಗಿ ಯಂತ್ರ ಪಿಶಾಚಗ್ರಸ್ತರಾಗಿ ಲೋಭಗ್ನಿಯಿಂದ ಬೆಂದು ನರಳುತ್ತಿರುವ ಅವರಿಗೆ ಉಪನಿಷತ್ ಪ್ರಣೀತವಾದ ಆತ್ಮದ ಸಂದೇಶವನ್ನು ದಾನಮಾಡಿ ಜಗತ್ತಿನಲ್ಲಿ ಸೌಹಾರ್ದವೂ ನೆಮ್ಮದಿಯೂ ಶಾಂತಿಯೂ ನೆಲಸುವಂತೆ ಕೈಯಲ್ಲಾದ ಸೇವೆ ಮಾಡುವುದು ನಮ್ಮ ಕರ್ತವ್ಯ.

ಈ ಮಹೋದ್ದೇಶಗಳನ್ನು ನಿರುತಮಾಡಕೋಸುಗ ಒಂದು ಸಂಸ್ಥೆಯನ್ನು ನಿರ್ಮಿಸಿ, ನಾವೆಲ್ಲರೂ ನಮ್ಮ ಪ್ರಾಣಾರ್ಪಣೆ ಮಾಡಬೇಕೆಂದು ವಿವೇಕಾನಂದರು ತಮ್ಮ ಗುರುಭ್ರಾತೃಗಳಿಗೆ ತಿಳಿಸಲು ಅವರೆಲ್ಲ ದಿಗಿಲು ಬಿದ್ದರು. ಏಕಾಂತವಾಸವನ್ನೂ ಧ್ಯಾನಜೀವನವನ್ನೂ ಆತ್ಮಸಾಕ್ಷಾತ್ಕಾರದ ಮಧುರ ರುಚಿಯನ್ನೂ ತ್ಯಜಿಸಿ, ಮಾಯಾಜಗತ್ತಿನ ಕರ್ಮರಂಗಕ್ಕೆ ಪ್ರವೇಶ ಮಾಡಿ ಅಶಾಂತತೆಯನ್ನು ಕಟ್ಟಿಕೊಳ್ಳುವುದು ಅವರ ಮನಸ್ಸಿಗೆ ಸರಿ ಬೀಳಲಿಲ್ಲ. ಆದ್ದರಿಂದ ಎಲ್ಲವನ್ನೂ ಬಿಟ್ಟ ಸಂನ್ಯಾಸಿಗಳು ಪುನಃ ಕರ್ಮದಾಸರಾಗುವುದು ಹಿತವಲ್ಲ ಎಂದು ವಾದ ಮಾಡಿದರು. ಆದರೆ ವಿವೇಕಾನಂದರು ಅವರ ವಾದವನ್ನೂ ಆತ್ಮಸಾಕ್ಷಾತ್ಕಾರದ ಸ್ವಾರ್ಥತೆಯನ್ನೂ ಕಠಿಣವಾಗಿ ವಿಮರ್ಶೆ ಮಾಡಿ ಖಂಡಿಸಿ, ಒಡಂಬಡುವಂತೆ ಮಾಡಿದರು.

ಕ್ರಿ. ಶ. ೧೮೯೭ ನೆಯ ಮೇ ೧ನೆಯ ತಾರೀಖಿನ ದಿನ ಶ್ರೀರಾಮಕೃಷ್ಣ ಮಹಾಸಂಘ ನಿರ್ಮಾಣವಾಯಿತು. ಅದರ ಉದ್ದೇಶಗಳನ್ನು ಇಲ್ಲಿ ಸಂಕ್ಷೇಪವಾಗಿ ಕೊಟ್ಟಿದೆ.

೧. ಪ್ರಪಂಚದಲ್ಲಿರುವ ಎಲ್ಲ ಮತಗಳೂ ಏಕವೂ ಅಖಂಡವೂ ಆಗಿರುವ ಸನಾತನ ಧರ್ಮದ ರೂಪಾಂತರಗಳೆಂದು ಭಾವಿಸಿ, ಭಿನ್ನ ಭಿನ್ನ ಮತಾವಲಂಬಿಗಳ ಮಧ್ಯೆ ಆತ್ಮೀಯತೆಯನ್ನು ಸ್ಥಾಪಿಸಿವುದಕ್ಕಾಗಿ ಶ್ರೀರಾಮಕೃಷ್ಣರಿಂದ ಪ್ರಣೀತವಾದ ಸರ್ವಧರ್ಮಸಮನ್ವಯವನ್ನು ಪ್ರಚಾರ ಮಾಡುವುದು ಈ ಸಂಘದ ಉದ್ದೇಶ.

೨. ಮಾನವರ ಲೌಕಿಕ, ಸಾಂಸಾರಿಕ ಮತ್ತು ಆಧ್ಯಾತ್ಮಿಕ ಉನ್ನತಿಗಾಗಿ ಶ್ರೀರಾಮಕೃಷ್ಣರ ಜೀವನ ಮತ್ತು ಉಪದೇಶಗಳಿಗೆ ಅನುಗುಣವಾಗಿ ಜನರಿಗೆ ವಿದ್ಯಾದಾನ ಮಾಡುವುದು ಈ ಸಂಘದ ಕರ್ತವ್ಯ.

೩. ಸಂಘದ ಕಾರ್ಯವಿಧಾನಗಳೆಂದರೆ – (೧) ಇಹಪರಗಳೆರೆಡಕ್ಕೂ ಕ್ಷೇಮವಾಗುವಂತಹ ಜ್ಞಾನ ಮತ್ತು ವಿಜ್ಞಾನ ವಿದ್ಯೆಯನ್ನು ಮಂದಿಯಲ್ಲಿ ಹರಡಲು ಸಮರ್ಥರಾದ ಶಿಕ್ಷಕರನ್ನು ತರಬಿಯತ್ತು ಮಾಡುವುದು; (೨) ಕಲೆ ಮತ್ತು ಕೈಗಾರಿಕೆಗಳ ಅಭಿವೃದ್ಧಿಗೆ ಸಹಾಯಮಾಡುವುದು; (೩) ಶ್ರೀರಾಮಕೃಷ್ಣರ ಜೀವನದಲ್ಲಿ ತೋರಿಬಂದಂತೆ ವೇದಾಂತವನ್ನೂ ಇತರ ಮತ ಧರ್ಮಗಳನ್ನೂ ಜನರಿಗೆ ಬೋಧಿಸುವುದು.

೪. ಭಾರತವರ್ಷದ ನಗರ ನಗರಗಳಲ್ಲಿಯೂ ಆಶ್ರಮಗಳನ್ನೂ ಮಠಗಳನ್ನೂ ಸ್ಥಾಪಿಸಿ, ಸಂನ್ಯಾಸಿಗಳನ್ನೂ ಪ್ರಚಾರಕಾರ್ಯಗಳನ್ನು ಕೈಕೊಳ್ಳಲು ಇಷ್ಟವಿರುವ ಗೃಹಸ್ಥರನ್ನೂ ಲೋಕಸೇವೆಗೆ ಸಿದ್ದಮಾಡುವುದು. ಇದು ಭಾರತ ವರ್ಷೀಯ ಕಾರ್ಯ.

೫. ವಿದೇಶಗಳಿಗೆ ಸಂಘದ ಸದಸ್ಯರನ್ನು ಕಳುಹಿಸಿ, ಅಲ್ಲಿಯೂ ಕಾರ್ಯ ಕ್ಷೇತ್ರಗಳನ್ನೂ ಆಶ್ರಮಗಳನ್ನೂ ನಿರ್ಮಿಸಿ, ಜನಾಂ‌ಗಗಳಲ್ಲಿ ಪರಸ್ಪರ ಮೈತ್ರಿ ಹೆಚ್ಚುವಂತೆ ಮಾಡುವುದು. ಇದು ಸಂಘದ ವಿದೇಶೀಯ ಕಾರ್ಯ.

ಶ್ರೀರಾಮಕೃಷ್ಣ ಮಹಾಸಂಘ ಸ್ಥಾಪನೆಯಾದ ದಿನವೇ ನವಯುಗದ ನವ ಸಂನ್ಯಾಸವು ಸ್ಥಾಪಿತವಾಯಿತು. ಭಾರತವರ್ಷಕ್ಕೆ ಅದೊಂದು ಮಹಾ ಮುಹೂರ್ತವೆಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ಏಕೆಂದರೆ ಅಂದು ರಾಷ್ಟ್ರದ ಶ್ರೇಷ್ಠ ವ್ಯಕ್ತಿಗಳು ಸ್ವಂತ ಮೋಕ್ಷದ ಸಲುವಾಗಿ ಸಮಾಜ ತ್ಯಾಗ ಮಾಡಿ ಅರಣ್ಯಕ್ಕೆ ಹೋಗುವುದನ್ನು ಬಿಟ್ಟು ರಾಷ್ಟ್ರಸೇವಾಕಾರ್ಯದಲ್ಲಿ ನಿರತರಾಗಲು ಕಂಕಣ ಬದ್ಧರಾದರು.”ಆತ್ಮನೋ ಮೋಕ್ಷಾರ್ಥಂ ಜಗದ್ದಿತಾಯಚ” ಎಂದು ವೀರತ್ಯಾಗಪೂರ್ಣವಾದ ಸೇವೆಯ ತಪಸ್ಸು. ದರಿದ್ರ ನಾರಾಯಣನ ಸೇವೆಯೆ ಶ್ರೀಮನ್ನಾರಾಯಣನ ಸೇವೆ. ಸೇವೆಯೆ ಪೂಜೆ. ನವಯುಗದ ಸಂನ್ಯಾಸದ ಧ್ಯೇಯ, ಆದರ್ಶ ಮತ್ತು ಕಾರ್ಯಗಳನ್ನು ಕುರಿತು ಸ್ವಾಮಿಗಳು ತಮ್ಮ ಶಿಷ್ಯರಿಗೆ ಹೀಗೆಂದು ಹೇಳಿದ್ದಾರೆ;

“ಸನ್ಯಾಸವೆಂದರೇನು? ತ್ಯಾಗ, ಮೃತ್ಯುಪ್ರೇಮ. ಎಂದರೆ ಕೊಂಡುಕೊಳ್ಳುವುದಲ್ಲ. ಕೊಂಡುಕೊಳ್ಳುವವನು ಮೃತ್ಯುಪ್ರೇಮಿಯಲ್ಲ; ಅವನು ಜೀವನದ್ವೇಷಿ. ಅದೂ ಕೂಡ ತಾತ್ಕಾಲಿಕವಾದುದು. ಅವನನ್ನು ಒಂದುಸಾರಿ ಆತ್ಮಹತ್ಯದಿಮದ ತಪ್ಪಿಸಿದರೆ ಮತ್ತೆ ಪ್ರಯತ್ನಿಸುವುದಿಲ್ಲ. ಆದರೆ ಸಂನ್ಯಾಸವು ಸ್ವಾರ್ಥತ್ಯಾಗ, ಸ್ವ – ತ್ಯಾಗ. ಮಹೋದ್ದೇಶಕ್ಕಾಗಿ ಸ್ವ – ತ್ಯಾಗ! ಎಂದಿದ್ದರೂ ಸಾಯುತ್ತೇವೆ; ಮಹಾಕಾರ್ಯದಲ್ಲಿ ಸತ್ತರೆ ಲೇಸು. ಇತರರ ಸೇವೆಗಳಲ್ಲದೆ ಶರೀರವನ್ನು ಆಹಾರದಿಂದ ಪೋಷಿಸಿದರೆ ಏನು ಫಲ? ಅಧ್ಯಯನ ಮಾಡಿ ಬುದ್ದಿಶಾಲಿಗಳಾಗಬೇಕು. ಆದರೆ ಜ್ಞಾನದಾನ ಮಾಡದಿದ್ದರೆ ಅದು ವ್ಯರ್ಥ! …. ಸೋದರ ಮಾನವರ ಸೇವೇಯೇ ಸ್ವರ್ಗ, ಮೋಕ್ಷ; ಉಳಿದುದೆಲ್ಲ ನರಕ.. ಆದರ್ಶವಿರಬಾರದು. ಅಸಾಧ್ಯ ಆದರ್ಶವು ದೇಶವನ್ನು ದುರ್ಬಲಗೊಳಿಸಿ ಅಧೋಗತಿಗೆಳೆಯುತ್ತದೆ…. ಹಾಗೆಂದು ಆದರ್ಶವನ್ನು ಕಾಲಡಿಗೆಳೆಯಬಾರದು. ಅತಿ ಭಾವಜೀವಯಾಗಿರುವುದೂ ಅತಿಕಾರ್ಯಜೀವಿಯಾಗಿರುವುದೂ ಎರಡೂ ಶ್ರೇಯಸ್ಕರಲ್ಲ. ಆದ್ದರಿಂದ ಆದರ್ಶವು ಆಕಾಶದಲ್ಲಿಯೇ ಹಾರದಂತೆಯೂ ಭೂಮಿಯಲ್ಲಿಯೇ ಹೊರಳದಂತೆಯೂ ನೋಡಿಕೊಳ್ಳುವುದು ಸಂನ್ಯಾಸಿಯ ಕರ್ತವ್ಯ.. . ಗುಹೆಗಳಲ್ಲಿ ಕುಳಿತು ಧ್ಯಾನಮಾಡಿ ಸಾಯವುದು  ಹಳೆಯರ ಪದ್ಧತಿಯಾಗಿತ್ತು. ಮುಕ್ತಿಗಾದರೂ ಕೂಡ ಇತರರೊಡನೆ ಸ್ಪರ್ದೆಹೂಡುವುದು ತಪ್ಪು ಎಂಬುದು ಹಿಂದಿನವರ ಭಾವನೆಯಾಗಿತ್ತು.. ಇಂದಾಗಲಿ ನಾಳೆಯಾಗಲಿ ಸೋದರರ ಮುಕ್ತಿಗೂ ಪ್ರಯತ್ನಮಾಡದವನಿಗ ಮುಕ್ತಿಯಿಲ್ಲ ಎಂದು ತಿಳಿಯುತ್ತದೆ…. ನಿಮ್ಮ ಜೀವನದಲ್ಲಿ ಕರ್ಮ ಧರ್ಮಗಳು ಸಮತೂಕವಾಗಿರಬೇಕು. ಈ ಕ್ಷಣದಲ್ಲಿ ಸಮಾಧಿಮಗ್ನರಾಗಿದ್ದಕೊಂಡು, ಮರುಕ್ಷಣದಲ್ಲಿ ತೋಟದಲ್ಲಿ ಅಗೆಯುವ ಕಾರ್ಯಕ್ಕೆ ಸಿದ್ಧರಾಗಬೇಕು; ಈ ಕ್ಷಣದಲ್ಲಿ ವೇದಿಕೆಯ  ಮೇಲೆ ನಿಂತು ಅತ್ಯಂತ ಕಠಿನವಾದ ಶಾಸ್ತ್ರ ವಿಷಯಗಳನ್ನು ಕುರಿತು ಉಪನ್ಯಾಸ ಮಾಡಿ, ಮರುಕ್ಷಣದಲ್ಲಿ ಮಾರ್ಕೆಟ್ಟಿಗೆ ಹೋಗಿ ತರಕಾರಿ ಮಾರಲು ಸಿದ್ಧರಾಗಬೇಕು… ಸಂಘದ ಉದ್ದೇಸವು “ಪುರುಷಸಿಂಹ” ನಿರ್ಮಾಣ. ನೀವು ಪೂರ್ವಕಾಲದ ಋಷಿಗಳು ಹೇಳಿದ್ದನ್ನೆ ಓದಿಕೊಂಡರೆ ಸಾಲದು…. ನವನವೀನ ವಿಜ್ಞಾನಶಾಸ್ತ್ರಗಳನ್ನೂ ಅಧ್ಯಯನ ಮಾಡಬೇಕು…. ಆ ಪೂರ್ವಕಾಲದ ಋಷಿಗಳು ಈಗೆಲ್ಲಿ? ಅವರ ಕಾಲವಾಗಿ ಹೋಯ್ತು. ಅವರ ಜೊತೆಗೆ ಅವರ ಮತಗಳೂ ಹೋದುವು. ನೀವೇ ಋಷಿಗಳಾಗಬೇಕು. ನೀವೂ ಮಹಾತ್ಮರೇ. ಹಳೆಯ ಮಹಾತ್ಮರಿಗಿಂತಲೂ ನೀವೇನೂ ಕಡಮೆಯಲ್ಲ. ಅವತಾರಗಳಿಗೂ ಕೂಡ ನೀವೇನು ಕೀಳಲ್ಲ…. ಬರಿಯ ಪಾಂಡಿತ್ಯದಿಂದೇನು? ಬರಿಯ ಧ್ಯಾನದಿಂದಾದರೂ ಏನು? ಮಂತ್ರಗಳೂ ತಂತ್ರಗಳೂ ಏಕೆ? ನಿಮ್ಮ ಕಾಲುಗಳ ಮೇಲೆಯೇ ನೀವು ನಿಲ್ಲಬೇಕು… ನಿಜವಾದ ಮಹಾತ್ಮನು ವಜ್ರದಂತೆ ಕಠೋರವು ಕುಸುಮದಂತೆ ಕೋಮಲವೂ ಆಗಿರುತ್ತಾನೆ…”ವೈರಾಗ್ಯ, ಬ್ರಹ್ಮಚರ್ಯ, ತಪಸ್ಸು, ಸೇವೆ – ಇವು ನವಸಂನ್ಯಾಸದ ಧ್ಯೇಯೋಕ್ತಿಗಳು.

ತಮ್ಮ ಜೀವಮಾನದಲ್ಲಿಯೆ ತಮ್ಮ ಉಪದೇಶವು ಫಲಕಾರಿಯಾಗುತ್ತಿರುವುದನ್ನು ಕಣ್ಣಾರೆ ಕಂಡು ವಿವೇಕಾನಂದರು ಸಂತೋಷಪಟ್ಟರು. ಕ್ರಿ. ಶ. ೧೮೯೯ ರಲ್ಲಿ ಭಯಂಕರ ಕ್ಷಾಮವು ಉತ್ತರ ಹಿಂದೂಸ್ಥಾವನ್ನೆಲ್ಲಾ ವ್ಯಾಪಿಸಲು ಸಂಘದ ಸಂನ್ಯಾಸಿಗಳು ಕ್ಷಾಮಪೀಡಿತರಿಗೆ ಕೈಯಲ್ಲಾದ ಮಟ್ಟಿಗೆ ಅನ್ನವಸ್ತ್ರಗಳನ್ನು ಕೊಟ್ಟು ಸಹಾಯ ಮಾಡಿದರು. ೧೯೦೦ ರಲ್ಲಿ ಮಧ್ಯ ಪ್ರಾಂತದಲ್ಲಿ ೧೩, ೮೩೭ ಜನಗಳು ಸಂನ್ಯಾಸಿಗಳಿಂದ ಸೇವಿತರಾಗಿ ಕ್ಷಾಮಮಾರಿಯಿಂದ ತಪ್ಪಿಸಿಕೊಂಡರು. ಸ್ವಾಮಿ ಅಖಂಡಾನಂದರು ಮುರ್ಷಿದಾಬಾದಿಗೆ ಹೋಗಿ ಸೇವಾಕ್ಷೇತ್ರವೋಂದನ್ನು ತೆರೆದು ಪ್ರವಾಹದ ಕಷ್ಟಕ್ಕೆ ಸಿಕ್ಕಿದ ಜನರನ್ನು ಬದುಕಿಸಿದರು. ಕಲ್ಕತ್ತಾ ನಗರದಲ್ಲಿ ಪ್ಲೇಗು ಕಾಲರಾ ರೋಗಗಳು ಪ್ರಾಪ್ತವಾಗಲು ಸಂಘದ ಸಂನ್ಯಾಸಿಗಳು ರೋಗಿಗಳಿಗೆ ಶುಶ್ರೂಷೆಮಾಡಿ ಚರಂಡಿಗಳನ್ನು ಗುಡಿಸಿದರು. ಕಾರ್ಯಭಾರವು ಹೆಚ್ಚಾದಂತೆಲ್ಲ ಅನೇಕ ತರುಣರು ಸಂನ್ಯಾಸಿಗಳಾಗಿ ಸಂಘಕ್ಕೆ ಸೇರತೊಡಗಿದರು. ಸಾವಿರಾರು ಗೃಹಸ್ಥ ಭಕ್ತರೂ ಸಂಘಕ್ಕೆ ನೆರವಾದರು.

ಕ್ರಿ.ಶ. ೧೯೦೨ನೆಯ ಜುಲೈ ೪ನೆಯ ಶುಕ್ರವಾರ ನವಯುಗಾಚಾರ್ಯ ಮಾನವಮಿತ್ರ ಮಹಾಯೋಗಿ ಶ್ರೀ ಸ್ವಾಮಿ ವಿವೇಕಾನಂದರು ಬ್ರಹ್ಮಲೀನವಾದರು. ಆದರೆ ಅವರ ವಾಣಿ ಚಿರಸ್ಥಾಯಿಯಾಗಿದೆ. ಅವರ ಆತ್ಮ ಕೋಟ್ಯನುಕೋಟಿ ಮಾನವರ ಆತ್ಮಗಳನ್ನು ಹುರಿದುಂಬಿಸುತ್ತಿದೆ. ಅವರ ಜೀವನ ಮತ್ತು ಉಪದೇಶಗಳ ವ್ಯಾಖ್ಯಾನವಿಲ್ಲದಿದ್ದರೆ ಶ್ರೀರಾಮಕೃಷ್ಣರು ಅನೇಕರಿಗೆ ಅರ್ಥವಾಗುತ್ತಿರಲಿಲ್ಲ. ಗುರುಶಿಷ್ಯರಿಬ್ಬರೂ ವಿರಾಟ್ ಶರೀರಗಳಾಗಿ, ಶ್ರೀರಾಮಕೃಷ್ಣ ಮಹಾಸಂಘದಲ್ಲಿಯೂ, ಅವರಿಂದ ಪ್ರೇರಿತವಾಗಿ ಹುಟ್ಟಿದ ಲಕ್ಷಾಂತರ ಸಣ್ಣ ದೊಡ್ಡ ಸಂಸ್ಥೆಗಳಲ್ಲಿಯೂ, ಯಾವ ಸಂಸ್ಥೆಗೂ ಸೇರದೆ ಅವರ ಉಪದೇಶಾಮೃತವನ್ನು ಸವಿದು ಲೋಕಸೇವಾ ನಿರತರಾಗಿರುವ ಮತ್ತು ಆಗುತ್ತಿರುವ ಕೋಟ್ಯನುಕೋಟಿ ಇತರ ವ್ಯಕ್ತಿಗಳಲ್ಲಿಯೂ ಜಗಜ್ಜೀವನವನ್ನು ಶಾಂತಿಮಂದಿರಕ್ಕೆ ಕರೆದೊಯ್ಯತ್ತಿದ್ದಾರೆ.

ಸ್ವಾಮಿ ವಿವೇಕಾನಂದರು ತೀರಿಹೋಗಿ ಇಂದಿಗೆ (೧೯೩೨) ಮೂವತ್ತು ಸಂವತ್ಸರಗಳಾದುವು. ಇಷ್ಟು ಸ್ವಲ್ಪಕಾಲದಲ್ಲಿಯೇ ಶ್ರೀರಾಮಕೃಷ್ಣ ಸಂಘವು ಬೃಹದಾಕಾರವನ್ನು ತಾಳಿದೆ. ಮೆಲ್ಲಮೆಲ್ಲಗೆ ವಿರಾಡ್ರೂಪಿಯಾಗುತ್ತಿದೆ. ಅದರ ಮಹಿಮೆಯನ್ನೂ ಉಪಕಾರವನ್ನೂ (ಸಂಘವು” ಸೇವೆ” ಎಂದುಕೊಳ್ಳಲಿ; ನಮಗದು ಉಪಕಾರ) ತಿಳಿಯಬೇಕಾದರೆ ಪ್ರಪಂಚದ ನಾನಾ ಭಾಗಗಳಲ್ಲಿ  ಸ್ಥಾಪಿತವಾಗಿರುವ ಅದರ ಕೇದ್ರಸ್ಥಾನಗಳು ಪ್ರತಿವರ್ಷವೂ ಹೊರಡಿಸುತ್ತಿರುವ ಗಣನೆಯಿಲ್ಲದ ವರದಿಗಳನ್ನು ನೋಡಬೇಕು. ಸಂಶಯವುಳ್ಳವರು ಆಯಾ ಸ್ಥಳಗಳಿಗೆ ಹೋಗಿ ನೋಡಿದರೆ ಅದರ ಕಾರ್ಯಕಲಾಪಗಳು ದಿಗ್ಭ್ರಮೆ ಹುಟ್ಟಿಸದಿರುವುದಿಲ್ಲ.

ಆದರೆ ವಾಚಕರಲ್ಲೋಂದು ವಿಜ್ಞಾಪನೆ. ಸಾಮಾನ್ಯವಾಗಿ ಸಂಘವನ್ನೂ ಅದರ ಸಂನ್ಯಾಸಿಗಳನ್ನೂ ಅವರು ಮಾಡುವ ಲೋಕಸೇವೆಯ ಗಾತ್ರಕ್ಕೆ ತಕ್ಕಂತೆ ಪ್ರಶಂಸಿಸುವುದು ವಾಡಿಕೆಯಾಗಿದೆ. ಆದರೆ ಆ ಸೇವೆಗೆ ಅತ್ಯಾವಶ್ಯಕವಾದ ಅಸೀಮ ಸ್ಫೂರ್ತಿಯೂ ನಿರಂತರೋತ್ಸಾಹವೂ ಅಕ್ಷಯ ಶಕ್ತಿಯೂ ಇರುವುದೆಲ್ಲಿ? ಅವರಕರ್ಮಮಯ ಜೀವನದ ಹಿಂದಿರುವ ಧರ್ಮಜೀವನದಲ್ಲಿ! ಅವರ ಧ್ಯಾನದಲ್ಲಿ! ಅವರ ತಪಸ್ಸಿನಲ್ಲಿ! ಇವುಗಳು ಹೊರಗಿನ ಜನರಿಗೆ  ಕಾಣುವುದಿಲ್ಲ. ಆದ್ದರಿಂದ ಇಲ್ಲವೆಂದಲ್ಲ. ಸೇವಾಕಾರ್ಯವು ಅವರಿಗೆ ಗೌಣವಾದುದು. ಆತ್ಮದ ಸಾಧನೆಗೆ ಅದು ಅಡ್ಡ ಬಂದರೆ ಅದನ್ನು ತ್ಯಜಿಸಿಬಿಡಲೂ ಸಿದ್ಧರಾಗಿದ್ದಾರೆ. ಆದ್ದರಿಂದಲೆ ಅವರು ಸರದಿಯಂತೆ ಕೆಲವು ಕಾಲ ಕೆಲಸದಿಂದ ನಿವೃತ್ತರಾಗಿ, ಆಲ್ಮೋರ ಮೊದಲಾದ ಪ್ರಶಾಂತ ಪ್ರದೇಶಗಳಿಗೆ ಹೋಗಿ ಹುರುಪಿನಿಂದ ನುಗ್ಗುತ್ತಾರೆ. ಪಾವನ ಭಾವನೆಯಿಂದ ಮಾಡಿದ ಸೇವಾಕರ್ಮಕ್ಕೂ ಬೆಲೆ ಕಟ್ಟಿ ತಲೆದೂಗುವ ಮಾನವ ಕಾರ್ಪಣ್ಯವು ಒಂದಿನಿತು ಎಚ್ಚರಿಕೆಯಿಂದಿರುವುದು ಲೇಸು.

ಈ ಮಧ್ಯೆ ಶ್ರೀರಾಮಕೃಷ್ಣ ವಿವೇಕಾನಂದರ ಕೀರ್ತಿವಲಯವೂ ಪ್ರಭಾವವೂ ದಿನೇ ದಿನೇ ವಿಸ್ತಾರವಾಗುತ್ತಿರುವುದೊಂದು ಶುಭಸೂಚನೆ. ಅನೇಕ ಭಾಷೆಗಳಲ್ಲಿ ಉದ್ದಾಮಪಂಡಿತರು ಅವರ ಜೀವನ ಚರಿತ್ರಗಳನ್ನೂ ಉಪದೇಶಗಳನ್ನೂ ಬರೆದು ಜನಜೀವನದಲ್ಲಿ ನವೋದಯವಾಗುವಂತೆ ಮಾಡುತ್ತಿದ್ದರು. ನಮ್ಮೀ ಪೃಥ್ವಿಯ ಸುಂದರ ವದನವೂ ಮಾನವನ ಈರ್ಷ್ಯಾದ್ವೇಶಗಳಿಂದಲೂ ಸಂಕುಚಿತ ಬುದ್ದಿ ಮತಭ್ರಾಂತಿಗಳಿಂದಲೂ ತಾಡಿತವಾಗಿ ಕುರೂಪವಾಗಿದೆ. ಮಾನವನ ಉನ್ಮಾದಾಗ್ನಿಯಿಂದ ಭೂದೇವಿಯ ಎದೆ ಬೆಂದುಹೋಗಿದೆ. ಶ್ರೀರಾಮಕೃಷ್ಣರ ಸಮನ್ವಯ ಸಂದೇಶವನ್ನು ಸ್ವೀಕಿಸಿದಲ್ಲದೆ ಜಗತ್ತಿಗೆ ಶಾಂತಿಯಿಲ್ಲ. ವ್ಯಕ್ತಿಶಃ ಅಲ್ಲದಿದ್ದರೂ ತತ್ತ್ವತಃ ಆಗಿಯಾದರೂ ಶ್ರೀರಾಮಕೃಷ್ಣರು ನವಯುಗದ ದೇವಮೂತಿಘ. ಆಲಿಸಿ! ದಿಕ್ಕು ದಿಕ್ಕುಗಳಲ್ಲಿ ಹಬ್ಬಿ, ಬೆಟ್ಟಬೆಟ್ಟಗಳಲ್ಲಿ ಮರುದನಿಯಾಗಿ. ಕಡಲ ಮೊರೆಯಲ್ಲಿ ಬೆರೆತು. ಹಕ್ಕಿಗಳಿಂಚರದಲ್ಲಿ ಕಲೆತು. ಭೂಮ್ಯಾಕಾಶಗಳನ್ನು ತುಂಬಿ ಕೇಳಿಬರುತ್ತಿದೆ. ಶ್ರೀ ಸ್ವಾಮಿ ವಿವೇಕಾಂನಂದರ ಸಿಂಹವಾಣಿ;

“ಈ ಮಹಾಯುಗದ ಪ್ರತ್ಯುಷೆಯಲ್ಲಿ ಸರ್ವಭಾವಗಳ ಸಮನ್ವಯವು ಪ್ರಚಾರವಾಗುವುದು; ಈ ಅಸೀಮ ಅನಂತಭಾವವು, ಸನಾತನ ಶಾಸ್ತ್ರ ಮತ್ತು ಧರ್ಮಗಳಲ್ಲಿ ನಿಹಿತವಾಗಿದ್ದರೂ ಕೆಲವುಕಾಲ ಮಾತ್ರ ಪ್ರಚ್ಛನ್ನವಾಗಿದ್ದ ಈ ಅಸೀಮ ಅನಂತಭಾವವು, ಈ ಯುಗಾವತಾರದಿಂದ ಪುನರಾವಿಷ್ಕೃತವಾಗಿ ಪಾಂಚಜನ್ಯ ಸದೃಶವಾದ ಉಚ್ಚನಿನಾದದಿಂದ ಮಾನವ ಸಮಾಜದಲ್ಲಿ ಘೋಷಿತವಾಗುವುದು.

ಈ ನವಯುಗ ಧರ್ಮವು ಸಮಗ್ರ ಜಗತ್ತಿನ, ಅದರಲ್ಲಿಯೂ ಭಾರತ ವರ್ಷದ, ಕಲ್ಯಾಣಮಾರ್ಗವಾಗಿರುವುದು. ಅಲ್ಲದೆ ಈ ನವಯುಗ ಧರ್ಮ ಪ್ರವರ್ತಕನಾದ ಶ್ರೀಭಗವಾನ್ ರಾಮಕೃಷ್ಣನು ಹಿಂದೆ ಅವತರಿಸಿದ ಯುಗಧರ್ಮ ಪ್ರವರ್ತಕ ಸಮೂಹದ ಪುನಃಸಂಸ್ಕೃತ ಮಹಾ ಪ್ರಕಾಶವಾಗಿರುತ್ತಾನೆ! ಹೇ ಮಾನವ, ಇದನ್ನು ನಂಬು! ನಂಬಿ ಬಾಳು!

“ಹೇ ಮಾನವ, ಮೃತವ್ಯಕ್ತಿ ಪುನರಾಗತವಾಗನು; ಕಳೆದ ಇರುಳು ಮರಳಲಾರದು; ಬೀಸಿದ ಗಾಳಿ ಮೊದಲಿನಂತೆ ಮರಳಿ ಬೀಸದು; ಜೀವನೂ ಕೂಡ ಒಂದೇ ದೇಹವನ್ನು ಎರಡು ಸಾರಿ ಹೊಂದುವುದಿಲ್ಲ. ಆದ್ದರಿಂದ, ಓ ಮಾನವ, ಅತೀತದ ಪೂಜೆಯಿಂದ ಪ್ರತ್ಯಕದ ಪೂಜೆಗೆ ನಿನಗಿದೋ ಆಹ್ವಾನ! ಹೋದ ದುಃಖದಿಂದ ಬರುವ ಸುಖಕ್ಕೆ ನಿನಗಿದೋ ಆಹ್ವಾನ! ಗತಾನು ಶೋಚನೆಯಿಂದ ಆಧುನಿಕ ನವಪ್ರಯತ್ನಕ್ಕೆ ನಿನಗಿದೋ ಆಹ್ವಾನ! ಲುಪ್ತಪಂಥದ ಪುನರುದ್ಧಾರ ಸಾಹಸದ ವೃಥಾ ಶಕ್ತಿಕ್ಷಯದಿಂದ ಸದ್ಯೋನಿರ್ಮಿಯ ವಿಶಾ ಸನ್ನಿಕಟ ಪಥಕ್ಕೆ ನಿನಗಿದೋ ಆಹ್ವಾನ! ಓ ಬುದ್ದಿಮಾನ್ ಮಾನವಾ. ಇದನ್ನು ತಿಳಿ, ಸಿದ್ಧನಾಗು, ಪ್ರಬುದ್ಧನಾಗು!

“ಯಾವ ಶಕ್ತಿಯ ಉನ್ಮೇಷ ಮಾತ್ರದಿಂದಲೆ ದಿಗ್ದಿಗಂತ ವ್ಯಾಪಿಯಾದ ಪ್ರತಿಧ್ವನಿಯಿಂದ ಜಗತ್ತು ಜಾಗ್ರತವಾಗುತ್ತಿರುವುದೋ ಆ ಶಕ್ತಿಯ ಪೂರ್ಣತ್ವವನ್ನು ಭಾವಿಸಿ ಅನುಭವಿಸು; ವೃಥಾ ಸಂದೇಹಬೇಡ ದುರ್ಬಲತೆ ಬೇಡ; ದಾಸಜಾತಿ ಸುಲಭವಾದ ಈರ್ಷ್ಯಾದ್ವೇಷಗಳನ್ನು ದೂರಮಾಡಿ ಈ ಮಹಾ ಯುಗಚಕ್ರ ಪರಿವರ್ತನೆಯ ಸಹಾಯರ್ಥವಾಗಿ ಹೆಗಲು ಕೊಟ್ಟು ನಿಲ್ಲು; ಸೊಂಟಕಟ್ಟಿ ನಿಲ್ಲು; ಧೀರನಾಗಿ ನಿಲ್ಲು!

“ನಾವು ಪ್ರಭುವಿನ ದಾಸರು, ಪ್ರಭುವಿನ ಪುತ್ರರು; ಪ್ರಭುವಿನ ಲೀಲೆಗೆ ಸಹಾಯಕರು ಎಂಬುದನ್ನು ತಿಳಿ. ವಿಶ್ವಾಸ ಹೃದಯದಿಂದ ದೃಢಭಾವಧಾರಿಯಾಗಿ ಕಾರ್ಯಕ್ಷೇತ್ರಕ್ಕೆ ಧುಮುಕು! ನಿರ್ಭರತೆಯಿಂದ ಧುಮುಕು!”[2]

ಓಂ ಶಾಂತಿಃ ಶಾಂತಿಃ ಶಾಂತಿಃ


[1] ಮೈಸೂರು ಶ್ರೀರಾಮಕೃಷ್ಣಾಶ್ರಮದಿಂದ ಪ್ರಕಟವಾಗಿರುವ ಇದೇ ಗ್ರಂಥಕರ್ತನ “ಸ್ವಾಮಿ ವಿವೇಕಾನಂದ”ವನ್ನು ಓದಿ.

[2] ಸ್ವಾಮಿ ವಿವೇಕಾನಂದರ ಈ ಲೇಖನದ ಪೂರ್ತಿ ಪಾಠವನ್ನು ಅನುಬಂಧದಲ್ಲಿ ಕೊಡಲಾಗಿದೆ.