ಕುವೆಂಪು ತಮ್ಮ ಶ್ರೀರಾಮಾಯಣದರ್ಶನಂ ಮಹಾಕಾವ್ಯವನ್ನು ಬರೆದು ಮುಗಿಸಲು ತೆಗೆದುಕೊಂಡ ಕಾಲಾವಧಿ ಒಂಬತ್ತು ವರ್ಷಗಳು. ಅದೊಂದು ರೀತಿಯಲ್ಲಿ ನಿರಂತರವಾಗಿ ಭಾವವೊಂದರಲ್ಲಿ ಬದುಕುವ ಕಲೆಗಾರಿಕೆ. ತಮ್ಮ ಮಹಾಕಾವ್ಯದ ಕೊನೆಯ ಸಂಚಿಕೆಯಾದ ‘ಅಭಿಷೇಕವಿರಾಟ್‌ದರ್ಶನಂ’ ಅನ್ನು ಬರೆಯುವಾಗ:

ಬಲವಂದುದೀ ಮೇದೀನೀಗೋಲಮೊಂಬತ್ತು ಸೂಳ್
ತಪೋನಿಧಿಯನಾದಿತ್ಯನಂ, ತವಕೃಪೆಯೊಳಾಂ
ಮಹಾಬ್ಧಿಯಾತ್ರೆಯನಿದಂ ತೊಡಗಿ ಗುರುಕಾವ್ಯಮಂ.
(ಶ್ರೀರಾ.ದ. ಸಂ.೧೩. ಪಂ.೧೦-೧೨. ಪು. )

ಎಂದು ಹೇಳುತ್ತಾರೆ. ಮಹಾಸಮುದ್ರಯಾನ ಸಾಹಸದ ಈ ಮಹಾಕಾವ್ಯ ನಿರ್ಮಿತಿಯ ಯಾತ್ರೆಯಲ್ಲಿ ತೊಡಗಿದಂದಿನಿಂದ ಈವರೆಗೆ ಈ ಭೂಮಂಡಲವು ತಪೋನಿಧಿಯಾದ ಸೂರ್ಯನನ್ನು ಒಂಬತ್ತು ಸಲ ಪ್ರದಕ್ಷಿಣೆ ಹಾಕಿದೆ ಅಥವಾ ಸುತ್ತಿದೆ–ಎಂಬ ವೈಜ್ಞಾನಿಕ ಪರಿಭಾಷೆಯಲ್ಲಿ, ಈ ಕಾವ್ಯ ರಚನೆಗೆ ತಾವು ತೆಗೆದುಕೊಂಡ ಕಾಲ ಒಂಬತ್ತು ವರ್ಷಗಳು ಎನ್ನುವುದನ್ನು ಸೂಚಿಸಿದ್ದಾರೆ. ಇದು ಕುವೆಂಪು ಇಪ್ಪತ್ತನೆ ಶತಮಾನದ ಸಾಹಿತ್ಯ ನಿರ್ಮಿತಿಯಲ್ಲಿ ವಿಜ್ಞಾನದ ತಿಳಿವಳಿಕೆಯನ್ನು ಬಳಸಿಕೊಳ್ಳುವ ಕ್ರಮ. ಅದರಲ್ಲೂ ಕುವೆಂಪು ತಮ್ಮ ಎಷ್ಟೋ ಬಿಡಿ ಬಿಡಿ ಕವಿತೆಗಳಲ್ಲಿ ಹೇಗೋ ಹಾಗೆ ತಮ್ಮ ಮಹಾಕಾವ್ಯದ ಒಳಗೂ ವಿಜ್ಞಾನದ ತಿಳಿವಳಿಕೆಯನ್ನು, ಉಪಮಾ-ರೂಪಕ ಹಾಗೂ ಪ್ರತಿಮಾ ನಿರ್ಮಿತಿಗಳಲ್ಲಿ, ಉಳಿದೆಲ್ಲರಿಗಿಂತ ಹೆಚ್ಚು ಪ್ರಮಾಣದಲ್ಲಿ ಅಭಿವ್ಯಕ್ತಿಸಿದ್ದಾರೆ. ಯೋಗವಿಜ್ಞಾನ, ಮನೋವಿಜ್ಞಾನ ಮತ್ತು ಖಗೋಲವಿಜ್ಞಾನಗಳು ಅವರ ವ್ಯುತ್ಪತ್ತಿಯ ಒಂದು ಭಾಗವಾಗಿವೆ. ಅದರಲ್ಲಿಯೂ ಖಗೋಲವಿಜ್ಞಾನದ ಪರಿಚಯದ ಹಿನ್ನೆಲೆಯಿಂದ ಮೂಡಿದ ‘ಅಲಂಕಾರ’ಗಳೆ ಅಧಿಕ ಸಂಖ್ಯೆಯಲ್ಲಿವೆ ಅವರ ಮಹಾಕಾವ್ಯವಾದ ‘ಶ್ರೀರಾಮಾಯಣದರ್ಶನಂ’ದಲ್ಲಿ.

೧. ದಶರಥನು ಸಂತಾನಕ್ಕಾಗಿ ಪುತ್ರಕಾಮೇಷ್ಟಿಯಾಗವನ್ನು ಮಾಡಲು ಸಂಕಲ್ಪಿಸಿ ಸರಯೂ ನದೀತೀರದಲ್ಲಿ ವಿರಚಿಸಿದ ಯಜ್ಞಶಾಲೆಯೊಳಗಿನ ಅಗ್ನಿಕುಂಡದ ಉರಿ ದೇದೀಪ್ಯಮಾನವಾಗಿ, ದೂರಕ್ಕೆ ಹೀಗೆ ಕಾಣಿಸಿತಂತೆ.

ದೂರದರ್ಶಕ ಯಂತ್ರದಕ್ಷಿಯೊಳ್ ಕಣ್ಣಿಟ್ಟು
ಗಗನ ವಿಜ್ಞಾನಿ ತಾಂ ರಾತ್ರಿಯಾಕಾಶದಿ
ಕಾಣ್ಬೊಂದು ತಾರಾಗರ್ಭದಂತೆ….
(ಶ್ರೀ.ರಾ.ದ. ಸಂ.೧. ಪಂ.೨೭೧-೨೭೫. ಪು.೧೩.)

೨. ಮಂಥರೆಯ ಉಪದೇಶದ ಮೇರೆಗೆ, ಕೈಕೆಯ ಹಠದಿಂದ ರಾಮನು ಹದಿನಾಲ್ಕು ವರ್ಷಗಳ ಕಾಲ ವನವಾಸಕ್ಕೆ ಹೋದನಂತರ, ಭರತನು ಅಯೋಧ್ಯೆಯ ಅರಮನೆಗೆ ಬಂದು, ಆದ ಅನಾಹುತಗಳಿಗೆ ನೊಂದು, ಇದಕ್ಕೆಲ್ಲ ಕಾರಣಳಾದ ಮಂಥರೆಯನ್ನು ಹಿಡಿದು ಬಡಿಯುತ್ತಾನೆ. ಆಗ ಮಂಥರೆ ನೆಲಕ್ಕೆ ಕುಸಿದಳಂತೆ:

ರವಿಯಾಕರ್ಷಣೆಯನುಳಿಯೆ
ನಿಚ್ಚ ನೇಮಂಗೆಟ್ಟು, ಬಟ್ಟೆನಿಟ್ಟೆಗೆ ತಪ್ಪಿ
ತತ್ತರಿಸಿ ನೀಲಶೂನ್ಯಕ್ಕುರುಳುವಿಳೆಯಂತೆ
(ಶ್ರೀರಾ.ದ. ಸಂ.೬. ಪಂ. ೭೩-೭೫. ಪು.೧೧೬)

೩. ಆಂಜನೇಯನು ಮಹೇಂದ್ರಾಚಲದ ಮೇಲೆ ಸಾಗರೋಲ್ಲಂಘನಕ್ಕಾಗಿ ನೆಗೆದಾಗ ಅವನು, ಕಂಡದ್ದು ಹೀಗೆ:

ಪೃಥ್ವಿಯಾಕರ್ಷಣೆಯ ಶಕ್ತಿ
ಗತಿಸಲ್ಕೆ ಬಾಂದಳಕೆ ಸಿಡಿವ ಪೃಥುಲಾಚಲದ
ಕೂಟದಂದದೊಳೇರ್ದುದಾಂಜನೇಯನ ಮಹಾ
ರಿಪುಭಯಂಕರ ವಿಪುಲವಪು ಪರ್ವತಂ!
(ಶ್ರೀರಾ.ದ. ಸಂ.೧೧. ಪಂ. ೧೦೮-೧೧೧. ಪು.೪೧೧)

೪. ಆಂಜನೇಯನು ಕಡಲ ಮೇಲೆ ಹಾರಿ ಹೋಗುತ್ತಿರುವಾಗ, ಸಿಂಹಿಕೆ ಎಂಬ ರಾಕ್ಷಸಿಯು ಆಂಜನೇಯನನ್ನು ಆತನ ನೆರಳಿನ ಮೂಲಕವಾಗಿಯೇ ಸೆಳೆಯುವ ತನ್ನ ವಿದ್ಯೆಯಿಂದ ಅವನ ನಡೆಯನ್ನು ದಿಗ್‌ಬಂಧನಗೊಳಿಸುತ್ತಾಳೆ. ಆಂಜನೇಯನು ತನ್ನ ಸಾಮರ್ಥ್ಯದಿಂದ ಅವಳ ಬೃಹದ್ಗಾತ್ರವನ್ನು ಎಳೆದರೆ, ಅತ್ತ ಆಕೆ ಅರ್ಧಯೋಜನ ಮಾತ್ರವನ್ನು, ನಟಿಸಿ ಏರಿದಂತೆ ಮಾಡಿ, ಮತ್ತೆ ಕಡಲಗರ್ಭವನ್ನು ಹೊಗಲು, ಆಂಜನೇಯನು ಫಕ್ಕನೆ ಗುದ್ದಿದಂತಾಗಿ ಐದಾರು ಯೋಜನ ಕೆಳಗೆ ಬಿದ್ದನು. ಈ ಪರಸ್ಪರ ಸೆಣೆದಾಟವನ್ನು ಕುವೆಂಪು ಉಪಮೆಯೊಂದರಲ್ಲಿ ಚಿತ್ರಿಸಿರುವುದು ಹೀಗೆ:

…..ರವಿಗಾತ್ರಮಂ ನಗುವ ತಾರಾದ್ವಯಂ
ಸಂಖ್ಯಾತೀತಮಾ ಜ್ಯೋತಿವತ್ಸರದ ದೂರದೊಳ್
ವಿಶ್ವಾಂತರಿಕ್ಷದೊಳ್, ಯುಗ ಯುಗಾಂತರಕೊರ್ಮೆ
ಲಕ್ಷಯೋಜನ ನಿಕಟಮಾಗಲ್, ಪರಸ್ಪರಂ
ಸಂಕರ್ಷಿಸಲ್ ತೊಡಗಿದಪುವಯ್. ಶಿಖಿಜ್ವಾಲೆ
ಯೋಜನ ಸಹಸ್ರಮಂ ಲಂಘಿಸುತೆ, ಜಿಹ್ವೆಯಂ
ಚಾಚುತಾಕಾಶಮಂ ನೆಕ್ಕುತಿರೆ, ಮೆಲ್ಲನೆಯ
ಪ್ರಳಯಾನುರಾಗದಿಂದೊಂದನೊಂದಂ ಸೆಳೆದು
ಬಳಿಸಾರ್ವುವಾಮಂಡಲದ್ವಯಂ. ಆವೊಲಾ
ಸಿಂಹಕೆ ಹನುಮರಿರ್ವರುಂ, ತಾವೊರ್ವರೊರ್ವರಂ
ಸೆಳೆದು, ಹೊಣರಿದರೊರ್ವರೊರ್ವರಂ ಸೋಲಿಸುವ
ಛಲದ ವೀರ್ಯದ ಗರ್ವದಿಂ
(ಶ್ರೀರಾ.ದ. ಸಂ.೧೧ ಪಂ.೨೮೨-೨೯೩. ಪು.೪೧೭)

ಆಕಾಶ ದೇಶದಲ್ಲಿ ಸಂಭವಿಸುವ ಅತ್ಯದ್ಭುತ ಘಟನೆಯೊಂದು ಇಲ್ಲಿ ಅರ್ಥಪೂರ್ಣವಾದ ಉಪಮಾ ಸಾಮಗ್ರಿಯಾಗಿ ಬಳಕೆಗೊಂಡಿರುವ ಕ್ರಮ ಅನನ್ಯವಾಗಿದೆ.

೫. ಶ್ರೀರಾಮನು ಸೀತೆ-ಲಕ್ಷ ಣರೊಡನೆ ‘ಚಿತ್ರಕೂಟ’ದಲ್ಲಿರುವಾಗ ಅವನ ಮನವೊಲಿಸಿ ಅಯೋಧ್ಯೆಗೆ ಕರೆದೊಯ್ಯಲೆಂದು ಭರತನು ಬಂದ ಸಂದರ್ಭದಲ್ಲಿ, ರಾಮನನ್ನು ಕಂಡ ಕೂಡಲೇ ಭರತನು ಓಡಿಬಂದು ರಾಮನನ್ನು ಅಪ್ಪಿಕೊಳ್ಳುತ್ತಾನೆ. ರಾಮನ ಪ್ರೀತಿಯ ಆಲಿಂಗನಕ್ಕೆ ಸಿಕ್ಕು ಆನಂದ ಮೂರ್ಛಿತನಾದ ಭರತನ ಮನಃಸ್ಥಿತಿಗೆ ‘ಪ್ರತಿಮೆ’ಯಾಗಿ ಕುವೆಂಪು ಚಿತ್ರಿಸುವ ಒಂದು ಪ್ರಾಕೃತಿಕ ಘಟನೆ ಅದ್ಭುತವಾಗಿದೆ. ಅದನ್ನು ಸಂಕ್ಷೇಪಿಸಿ ಅವರ ಮಾತಿನಲ್ಲಿಯೇ, ನಡುವೆ ನಮ್ಮ ವಿವರಣೆಯನ್ನೂ ಸೇರಿಸಿ ಹೀಗೆ ಉಲ್ಲೇಖಿಸಬಹುದು:

ದೇವಾಸುರರ ಮಂದರದ ಮೇಣ್
ವಾಸುಕಿಯ ಮಥನ ದೈತ್ಯತೆಗೆಂತು ಮುನ್ನೊಮ್ಮೆ
ತಾನುಕ್ಕಿತಂತೆ, ಭೂಜರಠಜಠರಾಂತರದ
ಪಲ್ಲಟದ ಪರಿಣಾಮದಿಂದ ಪ್ರಕೋಪಿಸುತೆ
ಭೋರ್ಗುದಿದು ಮೇಲ್ವಾಯ್ವುದಟ್ಲಾಂಟಿಕಾಂಬೋಧಿ
ಫೆಸಿಫಿಕಂಬುಧಿಯೊಡನೆ ಡಿಕ್ಕಿ ಹೊಡೆದುಕ್ಕಿ.
ಕಡಲೆರಡರೊಡಲ ನೀರವ್ವಳಿಕೆಗಡಿಯೆ
ಮೇಲಾದವೋಲೋಕರಿಪುದದ್ರಿಸಮ ಊರ್ಮಿ
ಮಾಲಾ ಭಯಂಕರ ಸಮುದ್ರಂ, ತಿಮಿಂಗಿಲಂ
ತೃಣದ ಕಣವಾಯಿತೆಂಬಂತೆ. ಪೊರಪೊಣ್ಮುತ್ತೆ
ಗೋಚರಿಪುದೊಂದದ್ಭುತಂ ದ್ವೀಪ ಖಂಡಮದೊ
ಸಸ್ಯ ಹೀನಂ ಪ್ರಾಣರಹಿತಂ.

ಇದೊಂದು ದ್ವೀಪಸಂಭವದ ಘಟನೆ. ಸಮುದ್ರವೆಂಬ ತಾಯಿ ತಾನು ಹಡೆದ ಈ ದ್ವೀಪ ಶಿಶುವನ್ನು ನೋಡುತ್ತಾಳೆ. ಬರೀ ಸಸ್ಯಹೀನವಾದ ಬತ್ತಲೆಯ ಬರಡು ನೆಲ. ಹೀಗೆ ಅನೇಕ ವರ್ಷಗಳ ಕಾಲ ಈ ಸಮುದ್ರಾಂಬೆ, ತನ್ನ ತರಂಗಗಳಿಂದ ಮುದ್ದಾಡುತ್ತ, ಈ ದ್ವೀಪವೆನ್ನುವ ತನ್ನ ಮಗನ ದೇಹಕ್ಕೆ ಚೈತನ್ಯವನ್ನು ಎಚ್ಚರಿಸಲು ತಪಸ್ಸು ಮಾಡುತ್ತಾಳೆ. ಹೀಗೇ ಅನೇಕ ವರ್ಷಗಳು ಉರುಳುತ್ತವೆ. ನೂರಾರು ಯುಗಗಳು ಗತಿಸುತ್ತವೆ. ಅದೆಷ್ಟೋ ಯುಗಯುಗಗಳ ಅನಂತರ ಆ ದ್ವೀಪದ ಮೆಯ್ಯೊಳಗೆ ಮಿಂಚು ಸಂಚರಿಸಿದಂತಾಗಿ ಮೆಲ್ಲಗೆ ಹಸಿರು ಮೂಡತೊಡಗುತ್ತದೆ. ಅನಂತರ ಸಸ್ಯಗಳೆದ್ದು ದಟ್ಟವಾದ ಕಾಡು ಬೆಳೆಯುತ್ತದೆ. ಹೀಗೆ–

………..ಕಣ್ದೆರೆದರೇನಂತೆ, ಜೀವಕ್ಕೆ
ಬಾಯ್ದೆರೆಯದಿನ್ನುಮೆಂತೆನೆ, ಹಕ್ಕಿಮಿಗಗಳ್ಗೆ
ಹುಟ್ಟುಮೂಡಿಲ್ಲದುದರಿಂದೆಸೆವುದಾ ದೀವಿ
ಮೂಗುವಟ್ಟಂತೆವೋಲ್………..
ಶಿಶಿರೋಪಚಾರಕ್ಕೆ
ಕಣ್ದೆರೆದನಾ ಭರತನಣ್ಣನಾಲಿಂಗನದ
ನೀಲದೋಲನೊಳೊಂದು ನುಡಿಮೊಳೆಯದೆಳಹಸುಳೆ.
(ಶ್ರೀರಾ.ದ. ಸಂ.೯. ಪಂ.೩೫೩-೩೮೨. ಪು.೧೬೭-೧೬೮)

ಇದೊಂದು ಮಹೋಪಮೆ. ಮಹೋಪಮೆಯೊಳಗಿನ ಸಾಮಗ್ರಿ, ದ್ವೀಪಸಂಭವದಂಥ ಮಹಾದ್ಭುತ ನೈಸರ್ಗಿಕ ಘಟನೆ. ಸೂಕ್ಷ ವಾಗಿ ಇಲ್ಲಿ ಡಾರ್ವಿನ್ನನ ವಿಕಾಸವಾದದ ಪ್ರಸ್ತಾಪವೂ ಇದೆ.

೬. ‘ಕುಂಭಕರ್ಣನನೆಬ್ಬಿಸಿಮ್’–ಎಂಬ ಶ್ರೀಸಂಪುಟದ ಮೊದಲ ಸಂಚಿಕೆಯಲ್ಲಿ ರಾವಣನ ಅಪ್ಪಣೆಯ ಮೇರೆಗೆ, ಕುಂಭಕರ್ಣನನ್ನು ಎಬ್ಬಿಸುವ ಒಂದು ಅದ್ಭುತಪ್ರಸಂಗ ಚಿತ್ರಿತವಾಗಿದೆ. ‘ಕನ್ನಡದಿ ಬೇರೆ ಕತೆಯೆಂಬಂತೆ’ ಕುವೆಂಪು ನಿರ್ವಹಿಸಿದ ಈ ಸಂದರ್ಭ–ಕುಂಭಕರ್ಣನನ್ನು ಎಬ್ಬಿಸುವುದೆಂದರೆ ಈ ಪೃಥಿವಿಯ ಪ್ರಾಣಸತ್ವವನ್ನು ಜಾಗ್ರತಗೊಳಿಸುವ ಒಂದು ಪ್ರಕ್ರಿಯೆಯಂತಿದೆ. ಸೃಷ್ಟಿಯ ಆದಿಕಾಲದ ಅಸ್ಪಷ್ಟತೆಯ ಗರ್ಭದಿಂದ ಸಸ್ಯ, ಸರೀಸೃಪ, ಮಹಾದ್ಭುತಪಕ್ಷಿರೂಪದ ಪೆಡಂಭೂತಗಳು, ಮಹಾವಾನರ, ಮತ್ತು ಮನುಷ್ಯ–ಹೀಗೆ ಸೃಷ್ಟಿಯ ವಿಕಾಸದ ಇತಿಹಾಸವೇ ಬಿಚ್ಚಿಕೊಳ್ಳುವ ಅದ್ಭುತ ಘಟನೆ, ಕುಂಭಕರ್ಣನನ್ನು ಎಬ್ಬಿಸುವ ಪ್ರಸಂಗವಾಗಿ ರೂಪುಗೊಂಡಿದೆ. (ನೋಡಿ: ಶ್ರೀಸಂಪುಟ, ಸಂಚಿಕೆ ೧. ಪಂ.೧೯೦-೨೮೦. ಪು.೬೬೬-೬೬೯)

೭. ‘ದಶಾನನ ಸ್ವಪ್ನಸಿದ್ಧಿ’–ಎನ್ನುವ ಇನ್ನೊಂದು ‘ಶಿಖರ ಸಂಚಿಕೆ’ ರಾವಣನಿಗೆ ಸೀತೆಯ ಬಗೆಗಿದ್ದ ಅದಮ್ಯವಾದ ಕಾಮರುಚಿ ಸಂಪೂರ್ಣ ವಿನಾಶವಾಗಿ, ಅವನ ಮನಸ್ಸು ಆಮೂಲಾಗ್ರವಾಗಿ ಪರಿವರ್ತನೆಯಾದ ಬಗೆಯನ್ನು ಒಂದು ಅದ್ಭುತವಾದ ‘ಪ್ರತಿಮೆ’ಯ ಮೂಲಕ ಚಿತ್ರಿಸುತ್ತದೆ. ಇಡೀ ಸಂದರ್ಭ ರಾವಣನಿಗೆ, ಮಹಾಕಾಳಿಯ ದೇಗುಲದಲ್ಲಿ ಒದಗಿದ ಒಂದು ‘ಸ್ವಪ್ನದರ್ಶನ’ದಂತೆ ಚಿತ್ರಿತವಾಗಿದೆ. ಈ ‘ಸ್ವಾಪ್ನಿಕಮನೋಮಯ’ದಲ್ಲಿ, ರಾವಣ ತಾಯಿ ದುರ್ಗೆಯನ್ನು ಕುರಿತು, ರಾಮನು ರಣದಲ್ಲಿ ಸೋಲುವಂತೆಯೂ, ಸೀತೆ ತನಗೆ ವಶವಾಗುವಂತೆಯೂ ವರವನ್ನು ಕರುಣಿಸು ಎಂದು ಕೇಳಿಕೊಳ್ಳುತ್ತಾನೆ. ಜಗದಂಬೆ ‘ತಥಾಸ್ತು’ (ಹಾಗೆಯೆ ಆಗಲಿ) ಎನ್ನುತ್ತಾಳೆ. ರಾವಣ ಆಶ್ಚರ್ಯಗೊಂಡು– ‘ಸೀತೆ ಸೋಲ್ವಳೇ, ರಾಮನಂ ಗೆಲ್ವೆನಿದು ದಿಟಮೆ?’ ಎನ್ನುತ್ತಾನೆ. ತಾಯಿ ಕಾಳಿ ಹೇಳುತ್ತಾಳೆ: ‘ಸೀತೆಯಾಲಿಂಗಿಪಳ್, ಚುಂಬಿಸಿ ಎರ್ದೆಗೊತ್ತುವಳ್; ರಣದಿ ರಾಮನ ಸೋಲಿಪಯ್, ಪುನರ್ ಜನ್ಮದೊಳ್!’

ಆ ಕೂಡಲೆ ರಾವಣನು ಕಾಣ್ಕೆಯೊಂದನ್ನು ಕಾಣುತ್ತಾನೆ:

ಮಿಳ್ಮಿಳನೆ ನೋಡುತಿರ್ದಸುರದೃಷ್ಟಿಗೆ ಮುಂದೆ
ಮೆರೆದತ್ತದೊಂದು ದೇವಾಲಯಂ. ಪೀಠಾಗ್ರದೊಳ್
ದೇವವಿಗ್ರಹಮಲ್ತು. ನಿಂದುದೊಂದಶ್ವಂ,
ಮಹದ್ ಭೀಮತನು, ತನ್ನ ಪಿಂಗಾಲ್ಗಳನ್ನೂರಿ
ಮುಂಗಾಲ್ಗಳಂ ನೆಗಹಿ, ಮೇಣ್ ನಿಗುರ್ದಂಗದಿಂ
ನರ್ತಿಸುತೆ ನೆಲವನೊದೆದುದು ಖುರಪುಟಧ್ವನಿಗೆ
ಕೆನೆವ ಹೇಷೆಗೆ ದಶಗ್ರೀವಾಸುಗದಗದಿಸೆ.
ಇದೇನಿದೇನೆನುತಿರಲ್, ದೀರ್ಘ ಖಡ್ಗಂಬಿಡಿದು
ಮೂಡಿದುದು ನಭದೊಳ್ ಬೃಹನ್ಮುಷ್ಟಿ. ಇಳಿದುದು
ಕುದುರೆಯ ಕೊರಳ್ಗೆ. ಕತ್ತರಿಸುರುಳ್ದುದುಮಂಡೆ
ಮಣ್ಗೆ. ಖಂಡೆಯಮಿರದೆ ಕಾರಿದುದು ನೆತ್ತರ್
ಪೊನಲ್ ಪರಿಯೆ. ಓಡಿ ದಶಶಿರನೇರಿದನು ಬಳಿಯೆ
ಹೊಳೆದಡದೊಳಿರ್ದೊಂದು ದೋಣಿಯಂ. ರುಂಡದಿಂ
ಬೇರ್ವರಿದು ದಿಂಡುರುಳ್ದಶ್ವಮುಂಡಂ ನೆಗೆದು
ಕುಪ್ಪಳಿಸಿ ಬಿದ್ದೆದ್ದು ಕುಣಿಕುಣಿದು ಹಾರಾಡಿ
ದೊಪ್ಪನಪ್ಪಳಿಸಿಳೆಗೆ ಚಿಮ್ಮಿ ಮುಂಬರಿದುದಾ
ಮಂಡೋದರಿಯ ಗಂಡನಿರ್ದೆಡೆಗೆ….

ಮುಂದೆ ನದೀಜಲವೆಲ್ಲ ನೆತ್ತರಾಗಿ, ದಶಾನನನು ಏರಿದ್ದ ದೋಣಿ ತಲೆಕೆಳಗಾಗಿ, ನೆತ್ತರಿನ ಹೊಳೆಯೊಳಗೆ ಅವನು ತೇಲಿಮುಳುಗಿ, ಕೂಡಲೆ ತನ್ನ ಸಹೋದರ ಕುಂಭಕರ್ಣನನ್ನು ಕಂಡು ಕೂಗಲಾಗಿ, ಆ ಇಬ್ಬರೂ ಹೊಳೆಯೊಡನೆ ಹೋರಾಡಿ ಹೇಗೋ ದಡಕ್ಕೆ ಏರಿದರು. ನೋಡುತ್ತಾರೆ, ಇದ್ದಕ್ಕಿದ್ದ ಹಾಗೆ ತಾವಿಬ್ಬರೂ ಶಿಶುಗಳಂತಾಗಿದ್ದಾರೆ! ಸುತ್ತಲೂ ಯಾವುದೋ ಋಷ್ಯಾಶ್ರಮದ ಶಾಂತಿ. ತಾವು ಯಾರು ಏನು-ಎಂಬ ಆ ಪೂರ್ವದ ಏನೊಂದೂ ನೆನಪಿಗೆ ಬರುತ್ತಿಲ್ಲ. ನೆನೆಯುವ ಆ ಪ್ರಯತ್ನವಷ್ಟೂ ವ್ಯರ್ಥವಾಯಿತು. ವಿಸ್ಮ ತಿಯ ವೈತರಣಿಗೆ ಮುಳುಗಿಹೋಯಿತು ಆತ್ಮ. ಶಿಶುಶರೀರದಿಂದ ತಾನೂ ತನ್ನ ಸಹೋದರ ಕುಂಭಕರ್ಣನೂ ಆಗತಾನೆ ಹುಟ್ಟಿದ ಮಕ್ಕಳಂತೆ ಅಳತೊಡಗಿದಾಗ, ಸೀತೆ ಅಲ್ಲಿಗೆ ಬಂದು, ಮಕ್ಕಳನ್ನು ಎತ್ತಿ ಮುದ್ದಾಡುತ್ತಾಳೆ. ಹಾಡಿ ಮೊಲೆಯೂಡಿಸಿ, ತೊಡೆಯಮೇಲೆ ಕೂಡಿಸಿ ಎದೆಗೊತ್ತಿಕೊಂಡು ಸಂತೈಸುತ್ತಾಳೆ’ (ದಶಾನನ ಸ್ವಪ್ನಸಿದ್ಧಿ. ಸಂಚಿಕೆ ೭. ಪಂ.೧೭೫-೨೧೨. ಪು. ೭೭೨-೭೭೩)

ವಾಸ್ತವವಾಗಿ ಇಲ್ಲಿ ಕಾಣುವ ಮಹದ್ ಭೀಮತನುವಿನ ಕುದುರೆ ಮನಸ್‌ಶಾಸ್ತ್ರದ ಪ್ರಕಾರ ಅದಮ್ಯವಾದ ಕಾಮದ ಸಂಕೇತ.[1] ಅದನ್ನು ಸುದೀರ್ಘವಾದ ಖಡ್ಗವನ್ನು ಹಿಡಿದ ಕೈಯೊಂದು ಕತ್ತರಿಸುವುದು, ಅನಂತರ ಕತ್ತರಿಸಿದ ಕುದುರೆಯ ಮೈಯಿಂದ ಹರಿದ ರಕ್ತವು ಬಂದು ಮಹಾಪ್ರವಾಹವಾಗಿ ರಾವಣನು ಕೊಚ್ಚಿಹೋಗುವುದು, ಅನಂತರ ಪುನರ್ಜನ್ಮ ಸದೃಶವಾದ ಘಟನೆಯೊಂದು ಸಂಭವಿಸಿ, ರಾವಣ-ಕುಂಭಕರ್ಣರಿಬ್ಬರೂ ಅವಳಿಮಕ್ಕಳಾಗಿ ಸೀತೆಯ ತೊಡೆಯೇರುವುದು–ಈ ಎಲ್ಲವೂ ರಾವಣನ ಕಾಮರುಚಿ ವಿನಾಶವಾಗಿ, ಆತನ ಮನಸ್ಸು ಸೀತೆಯ ಬಗೆಗಿನ ಮಾತೃಭಾವದಲ್ಲಿ ಉದಾತ್ತೀಕರಣಗೊಳ್ಳುವ ಪ್ರಕ್ರಿಯೆಯನ್ನು ಸೂಚಿಸುತ್ತವೆ. ಕುವೆಂಪು ಅವರು ಈ ಸಂದರ್ಭವನ್ನು ಚಿತ್ರಿಸುವಲ್ಲಿ ಮನೋವಿಜ್ಞಾನದ ತಿಳಿವಳಿಕೆಯನ್ನು ಬಳಸಿಕೊಂಡಿರುವ ಕ್ರಮ ಅಪೂರ್ವವಾಗಿದೆ.

೮. ಕುವೆಂಪು ತಮ್ಮ ಕಾಲದ ‘ಯುದ್ಧವಿಜ್ಞಾನ’ವನ್ನೂ ಶ್ರೀರಾಮಾಯಣದರ್ಶಂ ದಲ್ಲಿ, ಅಲ್ಲಲ್ಲಿ ತಂದಿದ್ದಾರೆ. ಇಲ್ಲಿ ವರ್ಣಿತವಾಗಿರುವ ಯುದ್ಧದ ಚಿತ್ರಣಗಳಲ್ಲಿ ಆಧುನಿಕ ಸಮರದ ಛಾಯೆಯನ್ನು ಗುರುತಿಸಬಹುದು. ಒಂದೆರಡು ನಿದರ್ಶನಗಳನ್ನು ಕೊಡುವುದಾದರೆ; ವಾನರವೀರರು ಕಡಲಿಗೆ ಸೇತುವೆ ಕಟ್ಟುವ ಸಮಯದಲ್ಲಿ, ಈ ಪ್ರಯತ್ನವನ್ನು ವಿಫಲಗೊಳಿಸಲೆಂದು, ರಾವಣನ ಕಡೆಯ ವಿದ್ಯುಜ್ಜಿಹ್ವನೆಂಬ ದೈತ್ಯನು, ಹೂಡಿದ ಹೂಟದ ವರ್ಣನೆಯನ್ನು ಗಮನಿಸಬಹುದು. ಕಪಿವೀರರು ನೋಡುತ್ತಿದ್ದಂತೆ ಹಡಗಿನಂತೆ ತೋರುವ ಬಂಡೆಯೊಂದು ತೆಂಕಣದಿಕ್ಕಿನಿಂದ ಕಡಲ ನೀರನ್ನು ಸೀಳಿಕೊಂಡು ಮಹಾವೇಗದಿಂದ, ಇತ್ತ ಧಾವಿಸುತ್ತದೆ. ಆ ಸಿಡಿಲ್ ಬಂಡೆಯನ್ನು ‘ಕೈಯ್ಯ ಕೋವಿಯಿಂ’ (ಕೋವಿ ಎಂಬ ಮಾತನ್ನು ಗಮನಿಸಿ) ವಾನರನೊಬ್ಬನು ಕವಣೆಯೆಸೆದಾಗ ‘ಕೂಡೆ ಕಿಡಿಕಿಡಿಯೆಳ್ದು ಪುಡಿ ಪುಡಿವೋಗಿ… ಹೊಗೆಯುಗುಳ್ದೊಡನೊಡನೆ ಓಕರಿಸುತುರಿವೆಂಕೆಯಂ ಆ ಭೈತ್ರ ದೈತ್ಯಂ, ತಟ್ಟಿತ್ತು ಮೇಘಂ ಬೊಕ್ಕು ಮರೆಯಪ್ಪವೊಲ್ ಮುಳುಗಿ ಮಾಯವಾದನು ಮಹಾಬ್ಧಿ ಕುಕ್ಷಿಯಲಿ’ (ಲಂಕಾ ಸಂಪುಟ. ಸಂ.೯. ಪಂ. ೨೭೭-೨೭೯; ೨೯೦-೨೯೨. ಪು. ೫೬೦-೫೯೧). ಆದರೆ ಹಾಗೆ ಮುಳುಗಿದ ಆ ಭೈತ್ರ (ಹಡಗು) ಮತ್ತಿನ್ನೆಲ್ಲೋ ಮೇಲೆದ್ದಾಗ, ಐವರು ವಾನರವೀರರು ವಿದ್ಯುಜ್ಜಿಹ್ವನಿದ್ದ ಕಡೆಗೆ ನುಗ್ಗಿ ಆ ರಾಕ್ಷಸನ ಮೈಯ್ಯ ಸಿಡಿಮದ್ದಿನ ಮನೆಯನ್ನು ಬೆನ್ನಟ್ಟಿ ಪ್ರವೇಶಿಸಿದರು. ಆಗ

…………..ಹಗಲೆ ಇರುಳಾಯ್ತೊ
ಎನಲ್ಕೊಂದು ತೆಕ್ಕನುಕ್ಕಿತು, ಚಕ್ಕಮುಕ್ಕಿಯಂ
ಕುಕ್ಕಿದೊಲ್ ಭಾಸ್ಕರ ಲಕ್ಷತಿಗ್ಮ ಖರರೋಚಿ,
ಬಡಿಯಲೊಡೆದುದೊ ಸಿಡಿಲೆ ಡಿಂಡಿಮವೆನಲ್, ಕೇಳ್ದ
ಕಿವಿ ಮೂರ್ಛೆಯಂ ಮರೆವೊಗಲ್ ಪೊಣ್ಮಿದುದೊ ಸದ್ದು
ದಿಗಿಭ ಹೃದಯದ ಧೈರ್ಯಮಳ್ಳಾಡುವೊಲ್! ಬೆಂಕೆ
ತಗುಳಿದೆಣ್ಣೆಯ ಗಣಿಯಿನುಣ್ಮುವಂದದಿ ಕರಿಯ
ಮುದ್ದೆಯ ರಾಶಿ ರಾಶಿಯ ಹೊಗೆಯ ಹೊರಳಿ
ಧೂಮ ಕಾಳಾಂಧಕಾರದಿ ಮುಸುಕುತಂಬುಧಿಯ
ಸೀಮೆಯಂ ಘುಳು ಘುಳು ಘುಳುಂ ಮುಳುಗಿದನು ಮಹಾ
ಧ್ವಾನ ಚೀತ್ಕಾರದಿಂದಾ ಭಯಂಕರಾಭೀಳ
ಭೈತ್ರಾವತಾರಿ ದೈತ್ಯಂ
(ಅಲ್ಲೇ: ಪಂ. ೩೧೭-೩೨೮: ಪು.೫೯೧-೫೯೨)

ಈ ಚಿತ್ರ ಎರಡನೇ ಮಹಾಯುದ್ಧದಲ್ಲಿ ಬಳಸಲಾದ ಜಲಾಂತರ್ಗಾಮಿ ಸಬ್ ಮೇರಿನ್ ಯುದ್ಧತಂತ್ರಗಳನ್ನೂ, ಕಡಲ ಮೇಲಿನ ಸಮರನೌಕೆಗಳನ್ನು ಒಳಗಿನಿಂದಲೇ ಸ್ಫೋಟಿಸಿದ ಸಂದರ್ಭಗಳನ್ನೂ ಯಥಾವತ್ತಾಗಿ ನೆನಪಿಗೆ ತರುತ್ತದೆ. ಕುಂಭಕರ್ಣನು ಯುದ್ಧರಂಗಕ್ಕೆ ಬಂದು ವಾನರಸೇನೆಯನ್ನು ನುಚ್ಚುನೂರು ಮಾಡಿದ ಸಂದರ್ಭವನ್ನು ಕುವೆಂಪು–

…………….ಕೊಂದನರೆದನು ಕೋಟಿ
ಕಪಿಕುಲರಾ. ಇಂದಲ್ಲಿ ಐರೋಪ್ಯದೌಷ್ಟ
ಪ್ರಯೋಗಿಸುವ ದೈತ್ಯಯಂತ್ರಗಳೆಂತು ಮನೆಯೆನದೆ
ಮಠವೆನದೆ, ಚರವೆನದಚರವೆನದೆ, ಪೆಣ್ಣೆನದೆ
ಗಂಡೆನದೆ, ನಾಗರಿಕರೆನದೆ, ಸೈನಿಕರೆನದೆ
ಪಸುಪಸುಳೆಯೆನ್ನದೆಯೆ, ತಗ್ಗುಬ್ಬು ತಡೆಯೆನದೆ
ಮುಂದೆ ತಡೆಬಂದನಿತುಮಂ ಮೆಟ್ಟಿ ತುಳಿತುಳಿದು
……………………
ಮಿಳ್ತುವಿನ
ಮುನ್ನಡೆಗೆ ರಕ್ತದೋಕುಳಿವೊಯ್ದು ಕಂಬನಿಯ
ಕಾಲುವೆಗೆ ರಕ್ತವರ್ತ್ಮಗಳಾಗುತಿರ್ಪಂತೆವೋಲ್
ಮುಂಬರಿದನಾ ಕುಂಭಕರ್ಣಂ, ದಶಾನನ
ಮಹಾಸಮರಯಂತ್ರಸ್ವರೂಪಂ.
(ಶ್ರೀ ಸಂಪುಟ ಸಂ.೨. ಪಂ.೧೧೩-೧೨೪. ಪು.೬೮೦)

ಎಂದು ವರ್ಣಿಸುತ್ತ, ತಮ್ಮ ಸಮಕಾಲೀನ ಸಂದರ್ಭದ ಎರಡನೆಯ ಮಹಾಯುದ್ಧದ ಸಮರತಂತ್ರವನ್ನು ಉಪಮೆಯಾಗಿ ಬಳಸುತ್ತಾರೆ.

ಇಂದ್ರಜಿತು, ತನ್ನ ಮುಂದಿನ ಯುದ್ಧಕ್ಕಾಗಿ ‘ದುರ್ ವಿಜ್ಞಾನಶಕ್ತಿಗಳನ್ನು’ ಪಡೆಯಲು ರಹಸ್ಯವಾದ ಸ್ಥಾನವೊಂದರಲ್ಲಿ ನಿಕುಂಭಿಲಾ ಯಜ್ಞಕ್ರಿಯೆಗಾಗಿ ನಿರ್ಮಿಸಲಾದ ಮಂತ್ರಮಂಟಪ ದಲ್ಲಿ ಕೂತು ಅಥರ್ವ ವೇದವನ್ನು ಪಠಿಸುತ್ತಾ ವೇದೋಕ್ತ ತಾಂತ್ರಿಕವಿಧಾನದಿಂದ, ಮಹಾಶಕ್ತಿಮಾತೃಕೆಯರನ್ನು ಆಹ್ವಾನಿಸಿದಾಗ:

……….ಕುದಿಯತೊಡಗಿದುದೊಡನೆ
ಪರಿಧಿಯಾಗಿರ್ದಗ್ನಿಶರಧಿ! ಗಂಧಕ ಗಂಧಮಯ
ಧೂಮಮೇಘಂಗಳೆದ್ದುವು ವಿಕಾರಾಕೃತಿಯ
ವಿನ್ಯಾಸದಿಂ, ಚಿದಾಕಾಶಮಂ ತೀವಿ! ಮೇಣ್
ಕಲಿಯುಗಾಭೀಳ ಯುದ್ಧೋದ್ಯಮಕೆ ಪಾಶ್ಚಾತ್ಯ
ಭೌತ ವೈಜ್ಞಾನಿಕ ಯಮಾಸಕ್ತಿ ನಿರ್ಮಿಸುವ
ಯಂತ್ರ ಕರ್ಮಾಗಾರ ಭೂತ ಚೀತ್ಕಾರಮಂ
ಕೀಳ್ಗೈವ ನಾರಕ ಬೃಹತ್ ಶಬ್ದಕೋಟಿಗಳ್
ಪೊಣ್ಮಿದುವು ತಲ್ಲಣಂಗೊಳ್ಳಲಸು ಅಸುರ
ವೈಜ್ಞಾನಿಗುಂ.
(ಶ್ರೀಸಂಪುಟ. ಸಂ.೪. ಪಂ.೨೧೬-೨೨೫. ಪು.೭೧೫)

ಈ ಸಂದರ್ಭವನ್ನು ಕುರಿತು ಕುವೆಂಪು ‘ಸಂದರ್ಶನ’ವೊಂದರಲ್ಲಿ ಹೇಳುತ್ತಾರೆ: “ಅದನ್ನು ಬರೆಯುತ್ತಿದ್ದಾಗ ಎರಡನೆಯ ಮಹಾಯುದ್ಧ ಬಿರುಸಾಗಿ ನಡೆಯುತ್ತಿತ್ತು. ವಿಧವಿಧವಾದ ಬಾಂಬುಗಳ ಹಾಗೂ ಟ್ಯಾಂಕುಗಳ ದಾಳಿ ನಡೆಯುತ್ತಿತ್ತು. ಇಲ್ಲಿನ ‘ನಿಕುಂಭಿಲಾ’ ಒಂದು ಪ್ರತಿಮೆ. ಇಂದ್ರಜಿತುವಿನ ಯೋಗಕರ‍್ಮಾಗಾರ ಪಾಶ್ಚಾತ್ಯ (ಅಣುಬಾಂಬಿನ) ವಿಜ್ಞಾನಿಯ Secret Laboratory ಇದ್ದ ಹಾಗೆ. ಅಲ್ಲಿನ ಕಾವಲಿನ ಶಕ್ತಿಗಳು ಆ Laboratoryಯ Secret gaurds ಇದ್ದ ಹಾಗೆ…..” (ಸ.ಗ. ಸಂ.೨. ಪು.೧೦೧೭).

ಈ ಕೆಲವು ಸಂಗತಿಗಳು ‘ಶ್ರೀರಾಮಾಯಣದರ್ಶನಂ’ ಶ್ರೀ ಕುವೆಂಪು, ವಾಲ್ಮೀಕಿ ರಾಮಾಯಣಕ್ಕೆ ಇಪ್ಪತ್ತನೆಯ ಶತಮಾನದಲ್ಲಿ ಕೊಟ್ಟ ಪುನರ್ಭವದ ಸ್ವರೂಪಕ್ಕೆ ಸಾಕ್ಷಿಯಾಗಿವೆ.

ಕುವೆಂಪು ತಮ್ಮ ರಾಮಾಯಣದರ್ಶನಂ ಕೃತಿಯೊಳಗೆ ಕಥಾ ಪ್ರಾರಂಭಕ್ಕೆ ಮುನ್ನ, ಜಗತ್ತಿನ ಮಹಾಕವಿಗಳನ್ನು ಗೌರವದಿಂದ ನೆನೆಯುವಾಗ ಹೋಮರ್ ಮಹಾಕವಿಯನ್ನು ಮೊಟ್ಟಮೊದಲಿಗೆ ಸ್ಮರಿಸಿದರೂ, ಅವರಿಗೆ ಹೋಮರನ ಮಹಾಕಾವ್ಯವಾದ ಇಲಿಯಡ್ ಅನ್ನು ಕುರಿತು ಅಂತಹ ತೃಪ್ತಿಯೇನೂ ಇಲ್ಲ; ಅವರು ಮೆಚ್ಚುವುದು ಹೋಮರನ ಕಲೆಯನ್ನೆ ಹೊರತು, ಅವನ ಕತೆಯನ್ನಲ್ಲ. ಹೋಮರನನ್ನು ಕುರಿತ ಸಾನೆಟ್ ಒಂದರಲ್ಲಿ (ಕೃತ್ತಿಕೆ: ಪು.೫೧) ತಮ್ಮ ಅತೃಪ್ತಿಯನ್ನು ತೀವ್ರವಾಗಿ ತೋಡಿಕೊಂಡಿದ್ದಾರೆ. ‘ಹೋಮರ್, ನಿನ್ನ ಕಲೆ ಪಿರಿದಾದೊಡಂ, ನಿನ್ನ ಕತೆ ಪಿರಿದಲ್ತು’ ಎನ್ನುವ ಕುವೆಂಪು, ವಾಲ್ಮೀಕಿ ರಾಮಾಯಣದ ಸೀತೆಯ ಶುಚಿಯ ಗಂಗೆಯಲ್ಲಿ ಮಿಂದ ತಮಗೆ, ಹೋಮರನ ಕಾವ್ಯದ ನಾಯಿಕೆಯಾದ ಹೆಲೆನ್, ತನ್ನ ನಾಡು ಮನೆ ಅಣ್ಣತಮ್ಮಂದಿರನ್ನೂ, ತನ್ನ ಗಂಡನನ್ನೂ, ಪುಟ್ಟ ಹೆಣ್ಣು ಕೂಸನ್ನೂ ತೊರೆದು, ತನುರುಚಿಗಾಗಿ ತನ್ನ ಮಿಂಡನ ಜತೆ ಓಡಿಹೋದ ನಡವಳಿಕೆ  ಹೇಸಿಗೆ ತರುವ ಸಂಗತಿಯಾಗಿದೆ ಎಂದು ನಿರ್ದಾಕ್ಷಿಣ್ಯವಾಗಿ ತಮ್ಮ ಅಭಿಪ್ರಾಯವನ್ನು ದಾಖಲಿಸುತ್ತಾರೆ.

ರಾಮಾಯಣವನ್ನು ಮತ್ತೊಂದು ಹೆಸರಿನಿಂದ ಕರೆಯುವುದಾದರೆ, ಅದನ್ನು ಸೀತಾಚರಿತ ಎನ್ನಬಹುದು. ಅಷ್ಟರಮಟ್ಟಿಗೆ ಸೀತೆಯ ಪಾತ್ರ, ಪಾವಿತ್ರ ಕ್ಕೆ, ಪಾತಿವ್ರತ್ಯಕ್ಕೆ ಮತ್ತು ಅಪಾರವಾದ ಸಹನೆಗೆ ಸಂಕೇತವಾಗಿದೆ. ಇಡೀ ರಾಮಾಯಣವೇ ಸೀತೆಯ ಬದುಕಿನ ದಾರುಣವೂ ಕರುಣಾಪೂರ್ಣವೂ ಆದ ಘಟನೆಗಳಿಂದ ತುಂಬಿ ಅವಳ ಓರಗೆಯ ಇತರ ಮಹಿಳೆಯರ ಕಡೆಗೆ ಓದುಗರ ಗಮನವು ಅಷ್ಟಾಗಿ ಹೋಗುವುದೇ ಇಲ್ಲ. ಓದುಗರ ಗಮನದ ವಿಚಾರ ಹಾಗಿರಲಿ, ವಾಲ್ಮೀಕಿಯ ಕೃತಿ ಅನಂತರದ ಸಂಸ್ಕೃತ ಹಾಗೂ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಅವತರಣಗೊಂಡರೂ ಸೀತೆಯ ಪಾತ್ರದ ವಿಚಾರದಲ್ಲಿ ಅದೇ ಭಕ್ತಿ-ಗೌರವದ ನಿಲುವುಗಳು ಉದ್ದಕ್ಕೂ ಪ್ರತಿಪಾದಿತವಾಗಿವೆ. ಇದು ಸೀತೆಯ ಪಾತ್ರದ ಮಹತಿಯನ್ನು ಸೂಚಿಸುತ್ತದೆ. ಸೀತೆಯ ಪಾತ್ರವಷ್ಟನ್ನೇ ಕುರಿತು, ಪ್ರತ್ಯೇಕವಾದ ಕಾವ್ಯಗಳನ್ನು ಬರೆದ ಒರಿಯಾ ಭಾಷೆಯ ಗಂಗಾಧರ ಮೆಹರ್ (೧೮೬೨-೧೯೨೪) ಮತ್ತು ಮಲೆಯಾಳಿ ಭಾಷೆಯ ಕುಮಾರನ್ ಆಸಾನ್ (೧೮೭೩-೧೯೨೪) ಇವರು, ಉತ್ತರಕಾಂಡದ ಸೀತಾ ಪರಿತ್ಯಾಗದ ಕರುಣ ಕಥೆಯನ್ನೂ, ಸೀತೆಗೊದಗಿದ ವ್ಯಥೆಯನ್ನೂ ಮತ್ತು ಚಿರದುಃಖಿನಿಯಾದ ಸೀತೆಯ ಅಂತರಾಳದ ತುಮುಲಗಳನ್ನೂ ಚಿತ್ರಿಸುತ್ತಾರೆ. ಗಂಗಾಧರ ಮೆಹರ್ ಅವರ ಕೃತಿಯ ಹೆಸರು ‘ತಪಸ್ವಿನಿ’. ಅದು ಪ್ರಕಟವಾದದ್ದು ೧೯೧೫ರಲ್ಲಿ; ಕುಮಾರನ್ ಆಸಾನ್ ಅವರ ಕೃತಿಯ ಹೆಸರು ‘ಚಿಂತ ವಿಸ್ತಯಾಯಾ ಸೀತಾ’. ಅದು ಪ್ರಕಟವಾದದ್ದು ೧೯೧೯ರಲ್ಲಿ. ಈ ಎರಡು ಕೃತಿಗಳ ವಸ್ತುವೂ, ವಾಲ್ಮೀಕಿಯ ಉತ್ತರಕಾಂಡದಲ್ಲಿ ಬರುವ, ಪರಿತ್ಯಕ್ತಳಾದ ಸೀತೆಯ ದ್ವಿತೀಯ ವನವಾಸ ಪ್ರಸಂಗವನ್ನು ಕೇಂದ್ರವಾಗಿ ಇರಿಸಿಕೊಂಡವುಗಳು. ಇಬ್ಬರಿಗೂ ಶ್ರೀರಾಮನ ಅಶ್ವಮೇಧದ ಸಂದರ್ಭವನ್ನಾಗಲಿ, ರಾಮನಿಗೂ ಲವಕುಶರಿಗೂ ನಡೆದ ಯುದ್ಧವನ್ನಾಗಲಿ ಚಿತ್ರಿಸುವ ಕಥಾ ಕುತೂಹಲವಿಲ್ಲ. ಗಂಗಾಧರ ಮೆಹರ್ ಅವರ ಕೃತಿ ಅತ್ಯಂತ ಭಾವಗೀತಾತ್ಮಕವಾಗಿ, ಸೀತೆಗೆ ರಾಮನ ವಿಚಾರದಲ್ಲಿರುವ ಭಾವನೆಗಳನ್ನು ಚಿತ್ರಿಸುತ್ತ, ಸೀತೆ ಮರಳಿ ಅಯೋಧ್ಯೆಗೆ ಹೋಗುವ ವಿಚಾರದಲ್ಲಿ ಅನಾಸಕ್ತಳಾಗಿ, ಆಕೆ ವಾಲ್ಮೀಕಿಯ ಆಶ್ರಮದಲ್ಲಿ ತನ್ನ ಜೀವಮಾನವನ್ನು ‘ತಪಸ್ವಿಯಂತೆ’ ಕಳೆದಳೆಂಬಂತೆ ನಿರೂಪಿಸುತ್ತದೆ. ಕುಮಾರನ್ ಆಸಾನ್ ಅವರ ಕೃತಿ ಸೀತೆಯ ಪಾತ್ರವನ್ನು ನಿರ್ವಹಿಸುವಲ್ಲಿ ವಾಲ್ಮೀಕಿಯಿಂದ ಭಿನ್ನವಾದ ನಿಲುವನ್ನು ತಾಳುತ್ತದೆ. ‘ಸೀತಾಕಾವ್ಯ’ವೆಂದು ಜನರ ಬಾಯಲ್ಲಿ ಕರೆಯಿಸಿಕೊಳ್ಳುವ ಈ ಕಾವ್ಯ, ಅದರ ಶೀರ್ಷಿಕೆಯೇ ಸೂಚಿಸುವಂತೆ ಸೀತೆಯ ಚಿಂತನೆಗಳನ್ನು ಕುರಿತದ್ದು; ರಾಮನಿಂದ ಪರಿತ್ಯಕ್ತಳಾದ ಸೀತೆ ವಾಲ್ಮೀಕಿಯ ಆಶ್ರಮದಲ್ಲಿ ಕೂತು ತನ್ನ ಇಡೀ ಬದುಕನ್ನು ಕುರಿತು ಚಿಂತಿಸುವ ಅಥವಾ ಧ್ಯಾನಿಸುವ, ಹಾಗೂ ತನಗೆ ತಾನೇ ಮಾತನಾಡಿಕೊಳ್ಳುವ ನಾಟಕೀಯ ಸ್ವಗತಲಹರಿಯಲ್ಲಿ ನಿರೂಪಿತವಾಗಿದೆ. ಋಷಿ ವಾಲ್ಮೀಕಿ ಲವಕುಶರನ್ನು ಕರೆದುಕೊಂಡು ಅಯೋಧ್ಯೆಗೆ ಹೋಗಿದ್ದಾನೆ. ಇತ್ತ ಆಶ್ರಮದಲ್ಲಿ ಸೀತೆ ಒಬ್ಬಳೇ. ಆಕೆ ಒಬ್ಬಳೇ ಕೂತು, ಪುರುಷ ಪ್ರಧಾನವಾದ ವ್ಯವಸ್ಥೆಯಲ್ಲಿ ಉದ್ದಕ್ಕೂ ಬದುಕಬೇಕಾಗಿ ಬಂದ ಹೆಣ್ಣಾದ ತಾನು ಪಟ್ಟ ಪಾಡುಗಳನ್ನು, ಎದುರಿಸಬೇಕಾಗಿ ಬಂದ ಸಂದಿಗ್ಧಗಳನ್ನು ಕುರಿತು, ಯೋಚಿಸುತ್ತಾ, ಶ್ರೀರಾಮನಿಗೆ ಇದ್ದ ಸಾಮ್ರಾಜ್ಯವಿಸ್ತರಣ ದಾಹವನ್ನೂ, ರಾವಣನ ಸ್ತ್ರೀ ವ್ಯಾಮೋಹವನ್ನೂ, ಅಂಥ ಶ್ರೇಷ್ಠ ರಾಜವಂಶದಲ್ಲಿ ಹುಟ್ಟಿದ ರಾಮ ಮತ್ತೆ ತನ್ನನ್ನು ಪರಿತ್ಯಜಿಸಿದ್ದರ ಹಿಂದಿರುವ ದ್ರೋಹವನ್ನೂ, ದುಃಖ ಮತ್ತು ಅಸಮಾಧಾನದ ಧ್ವನಿಯಲ್ಲಿ ತೋಡಿಕೊಳ್ಳುತ್ತಾಳೆ. ಅಂಥ ಮೃದು ಮನಸ್ಸಿನ ಸೀತೆ ಕೂಡಾ ಎಲ್ಲ ಕಾಲದ ಮಹಿಳೆಯರ ದನಿಯಾಗಿ, ಗಂಡಸರ ವರ್ತನೆಗಳನ್ನು ವಿಮರ್ಶೆಯ ಒರೆಗಲ್ಲಿಗೆ ಉಜ್ಜಿ ನೋಡುತ್ತಾಳೆ. ಸಹಸ್ರಾರು ವರ್ಷಗಳಿಂದ ರಾಮಕತೆಯನ್ನು ಬರೆದ ಯಾವ ಕವಿಯೂ ಸೀತೆಯ ಮನಃಸ್ಥಿತಿಯನ್ನು ಹೀಗೆ ಬೆಚ್ಚಿ ಬೀಳುವಂತೆ ಚಿತ್ರಿಸಿರಲಿಲ್ಲವೆನ್ನುವುದು ನಿಜವಾದರೂ, ಮೂಲತಃ ಕಲೆಗಾರರಾದ ಆಸಾನ್, ಮೂಲರಾಮಾಯಣದ ಸೀತೆಯ ಸ್ತ್ರೀಸಹಜವಾದ ನಯ, ನವುರು, ಮಾರ್ದವತೆಗಳಿಗೆ ಭಂಗಬಾರದ ರೀತಿಯಲ್ಲಿ ಈ ‘ಸ್ತ್ರೀಪ್ರಸಂಗ’ವನ್ನು ನಿರ್ವಹಿಸಿದ್ದಾರೆ ಎನ್ನುವುದು ಗಮನಾರ್ಹವಾದ ಸಂಗತಿಯಾಗಿದೆ.[2]

ಒಟ್ಟಿನಲ್ಲಿ ಹೇಳುವುದಾದರೆ ವಾಲ್ಮಿಕಿಯಿಂದ ಮೊದಲುಗೊಂಡು ಆಧುನಿಕ ಕಾಲದವರೆಗೆ,  ಸೀತೆಯ ವ್ಯಕ್ತಿತ್ವದ ಘನತೆ, ಅವಳಿಗೊದಗಿದ ಸಂಕಟಗಳು ಎಲ್ಲ ಕವಿಗಳ ಗಮನವನ್ನು ಸೆಳೆದವೇ ಹೊರತು, ಶ್ರೀರಾಮನ ತಮ್ಮನಾದ ಲಕ್ಷ ಣನ ಭಾರ‍್ಯೆಯಾದ ಊರ‍್ಮಿಳೆಯ ಏಕಾಕಿತನವನ್ನು ಕುರಿತು, ಹದಿನಾಲ್ಕು ವರ್ಷಗಳ ಕಾಲ ಆಕೆ ತನ್ನ ಗಂಡನಿಂದ ಅಗಲಿರಬೇಕಾಗಿ ಬಂದ ವ್ಯಥೆಯನ್ನು ಕುರಿತು ‘ಯಾರೂ ಚಿಂತಿಸುವುದೇ ಇಲ್ಲವಲ್ಲ!’ ಎನ್ನುವ ಈ ಕಸಿವಿಸಿ ಇಡೀ ಭಾರತೀಯ ಸಾಹಿತ್ಯವಿಮರ್ಶೆಯ ಸಂದರ್ಭದಲ್ಲಿ ಮೊಟ್ಟಮೊದಲು ಒಂದು ಧ್ವನಿಯಾಗಿ ಅಭಿವ್ಯಕ್ತವಾದದ್ದು ವಂಗಕವಿ ರವೀಂದ್ರನಾಥ ಟ್ಯಾಗೂರರ ‘ಕಾವ್ಯದ ಅನಾದರ’ ಎಂಬ ಲೇಖನದಲ್ಲಿ. ಈ ಲೇಖನ ಅವರ ‘ಪ್ರಾಚೀನ ಸಾಹಿತ್ಯ’ ಎಂಬ ಬಂಗಾಳಿ ಭಾಷೆಯ ಕೃತಿಯಲ್ಲಿರುವುದೆಂದು, ಅದೇ ಕೃತಿಯನ್ನು ಅದೇ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿ ೧೯೨೭ರಲ್ಲಿ ಪ್ರಕಟಿಸಿದ ಪ್ರೊ. ಟಿ.ಎಸ್. ವೆಂಕಣ್ಣಯ್ಯನವರು ಹೇಳುತ್ತಾರೆ.[3]

‘ಕಾವ್ಯದ ಅನಾದರ’–ಎಂಬ ಲೇಖನದಲ್ಲಿ ರವೀಂದ್ರನಾಥ ಟ್ಯಾಗೂರರು ಹೀಗೆ ಹೇಳುತ್ತಾರೆ: ‘ವಾಲ್ಮೀಕಿ ಮಹಾಕವಿಯು ತನ್ನ ಕಲ್ಪನಾಶಕ್ತಿಯ ಕರುಣಜಲವೆಲ್ಲವನ್ನೂ ಜನಕಸುತೆಯ (ಸೀತಾದೇವಿಯ) ಪುಣ್ಯಾಭಿಷೇಕದಲ್ಲಿಯೇ ಮುಗಿಸಿಬಿಟ್ಟಿರುತ್ತಾನೆ. ಕಳೆಗುಂದಿದ ಮುಖವುಳ್ಳವಳೂ ಸಮಸ್ತ ಐಹಿಕ ಸುಖದಿಂದ ವಂಚಿತಳೂ ಆಗಿ ಸೀತಾದೇವಿಯ ಛಾಯೆಯಲ್ಲಿ ಅವಕುಂಠನವತಿಯಾಗಿ ನಿಂತಿರುವ ಮತ್ತೊಬ್ಬ ರಾಜಕುಮಾರಿಯ (ಆಕೆಯೂ ಜನಕ ಸುತೆಯೇ) ಚಿರದುಃಖದಿಂದ ತಪ್ತವಾದ ನಮ್ರ ಲಲಾಟದ ಮೇಲೆ ಕವಿಯು ತನ್ನ  ಕಮಂಡಲುವಿನ ಒಂದು ತೊಟ್ಟು ನೀರನ್ನಾದರೂ ಏಕೆ ಚುಮುಕಿಸುವುದಿಲ್ಲ? ಅಯ್ಯೋ, ಅವ್ಯಕ್ತ ವೇದನೆಯಾದ ಊರ್ಮಿಳಾ ದೇವಿ! ನೀನು ಉಷಃಕಾಲದಲ್ಲಿ ಕಣ್ಣಿಗೆ ಬೀಳುವ ನಕ್ಷತ್ರದಂತೆ ಮಹಾಕಾವ್ಯದ ಮೇರುಶಿಖರದಲ್ಲಿ ಒಂದು ಬಾರಿ ಮಾತ್ರ ಗೋಚರಳಾದೆ; ಆಮೇಲೆ ಅರುಣ ಕಾಂತಿಯಲ್ಲಿ ಕಣ್ಮರೆಯಾದ ನೀನು ಪುನಃ ಕಾಣಲಿಲ್ಲ. ನಿನ್ನ ಉದಯಾಚಲವೆಲ್ಲಿ, ಅಸ್ತಾಚಲವೆಲ್ಲಿ–ಎಂದು ಕೇಳುವುದನ್ನು ಕೂಡ ಎಲ್ಲರೂ ಮರೆತು ಬಿಟ್ಟಿರುತ್ತಾರೆ……

‘ಊರ್ಮಿಳಾದೇವಿಯನ್ನು ನಾವು ನೋಡಿರುವುದು ಒಂದೇ ಒಂದು ಸಲ–ವಿದೇಹ ನಗರಿಯ ವಿವಾಹ ಸಭೆಯಲ್ಲಿ. ಆಮೇಲೆ ಆಕೆಯು ರಘುವಂಶದ ರಾಜರ ಅಂತಃಪುರವನ್ನು ಪ್ರವೇಶ ಮಾಡಿದಂದಿನಿಂದ ಆಕೆಯನ್ನು ಪುನಃ ಒಂದು ದಿನವಾದರೂ ನೋಡಿದಂತೆ ಮನಸ್ಸಿಗೆ ತೋರುವುದಿಲ್ಲ….. ಯಾವ ದಿವಸ ಅಯೋಧ್ಯೆಯನ್ನು ಅಂಧಕಾರಮಯ ಮಾಡಿ ರಾಮಲಕ್ಷ ಣರು ಸೀತಾದೇವಿಯೊಡನೆ ತಾಪಸವೇಷದಿಂದ ಕಾಡಿನ ದಾರಿಯಲ್ಲಿ ಹೊರಟುಹೋದರೋ ಆ ದಿವಸ, ಊರ‍್ಮಿಳಾದೇವಿಯು ಅರಮನೆಯ ನಿರ್ಜನವಾದೊಂದು ಶಯ್ಯಾಗೃಹದಲ್ಲಿ, ತೊಟ್ಟು ಕಳಚಿದ ಮೊಗ್ಗಿನಂತೆ ಮೂರ್ಛಿತಳಾಗಿ ಬಿದ್ದಿದ್ದಳೆಂದು ತೋರುತ್ತದೆ… ಲಕ್ಷ ಣನು ರಾಮಚಂದ್ರನಿಗಾಗಿ ಸರ್ವವಿಧಗಳಲ್ಲಿಯೂ ಸ್ವಾರ್ಥ ತ್ಯಾಗ ಮಾಡಿದನು. ಆ ಕೀರ್ತಿಯು ಈಗಲೂ ಭರತ ಖಂಡದಲ್ಲಿ ಮನೆ ಮನೆಯಲ್ಲಿಯೂ ಕೇಳಿ ಬರುತ್ತದೆ. ಆದರೆ ಸೀತಾದೇವಿಗಾಗಿ ಊರ‍್ಮಿಳಾದೇವಿಯು ಮಾಡಿದ ಸ್ವಾರ್ಥತ್ಯಾಗವು ಜಗತ್ತಿನಲ್ಲಿ ಮಾತ್ರವೇ ಅಲ್ಲ, ಕಾವ್ಯದಲ್ಲಿಯೂ ಕೂಡಾ ಕಂಡುಬರುವುದಿಲ್ಲ…. ಲಕ್ಷ ಣನೇನೋ ಹನ್ನೆರಡು ವರ್ಷ ಕಾಲ ಪೂಜಾಯೋಗ್ಯರಾದ ಪ್ರಿಯಜನರ ಸೇವಾಕಾರ್ಯದಲ್ಲಿ ನಿರತನಾಗಿದ್ದನು. ಊರ್ಮಿಳಾದೇವಿಯು ತನ್ನ ಜೀವನದ ಆ ಹನ್ನೆರಡು ವರ್ಷಗಳನ್ನು ಹೇಗೆ ಕಳೆದಳು?’ (ಪ್ರಾಚೀನ ಸಾಹಿತ್ಯ: ಅನು: ಟಿ.ಎಸ್. ವೆಂಕಣ್ಣಯ್ಯ. ಪು.೮೩, ೮೪-೮೫, ೮೬) ಅತ್ಯಂತ ಕಾವ್ಯಮಯವೂ, ಹೃದಯಸ್ಪರ್ಶಿಯೂ ಆಗಿರುವ ಟ್ಯಾಗೂರರ ಈ ಪ್ರತಿಕ್ರಿಯೆ, ಮೊಟ್ಟಮೊದಲ ಬಾರಿ ರಾಮಾಯಣದ ಊರ‍್ಮಿಳಾ ದೇವಿಯ ಬಗ್ಗೆ ಮತ್ತು ಆಕೆ ‘ಅನಾದರ’ಕ್ಕೆ ಒಳಗಾಗಿರುವ ಬಗ್ಗೆ ಪ್ರಸ್ತಾಪ ಮಾಡುತ್ತದೆ.

ರವೀಂದ್ರನಾಥ ಟ್ಯಾಗೂರರ ಈ ಬರೆಹ ಖಂಡಿತವಾಗಿಯೂ ಅವರ ಸಮಕಾಲೀನ ಭಾರತೀಯ ಕವಿ ಮನಸ್ಸುಗಳ ಮೇಲೆ ಪ್ರಭಾವವನ್ನು ಬೀರಿ ಊರ‍್ಮಿಳೆಯ ಪಾತ್ರವನ್ನು ಕುರಿತು ಪುನರಾಲೋಚಿಸುವಂತೆ ಮಾಡಿರಬೇಕು. ಆಧುನಿಕ ಭಾರತೀಯ ಸಾಹಿತ್ಯ ಸಂದರ್ಭದಲ್ಲಿ ನಮ್ಮ ಗಮನಕ್ಕೆ ಬಂದಂತೆ ಊರ‍್ಮಿಳೆಯ ಪಾತ್ರವನ್ನು ತಮ್ಮ ಕೃತಿಗಳಲ್ಲಿ ಪುನರ್ಭವಗೊಳಿಸಿದವರು ಇಬ್ಬರು. ಒಬ್ಬರು ಹಿಂದೀ ಭಾಷೆಯ ಶ್ರೇಷ್ಠ ಕವಿಯಾದ ಮೈಥಿಲೀ ಶರಣಗುಪ್ತರು ಮತ್ತು ಕನ್ನಡದ ಮಹತ್ವದ ಕವಿಯಾದ ಕುವೆಂಪು ಮತ್ತೊಬ್ಬರು. ಮೈಥಿಲೀ ಶರಣಗುಪ್ತರ ಕಾವ್ಯ ‘ಸಾಕೇತ’ (೧೯೩೨)–ಊರ‍್ಮಿಳೆಯನ್ನೆ ಕಥಾ ನಾಯಿಕೆಯನ್ನಾಗಿ ಮಾಡಿಕೊಂಡ ಕೃತಿ; ಕುವೆಂಪು ಅವರ ರಾಮಾಯಣದರ್ಶನಂ (೧೯೪೯) ಮಹಾಕಾವ್ಯ, ರಾಮಾಯಣ ಕಥಾ ಪರಂಪರೆಯೊಳಗೇ ಮೊದಲಬಾರಿಗೆ ಊರ‍್ಮಿಳೆಯ ಪಾತ್ರವನ್ನು ವಿಶಿಷ್ಟವಾಗಿ ಚಿತ್ರಿಸಿರುವ ಕೃತಿ. ಅವರ ರಾಮಾಯಣ ದರ್ಶನದ ಅಯೋಧ್ಯಾ ಸಂಪುಟದ ನಾಲ್ಕನೆಯ ಸಂಚಿಕೆಯ ಹೆಸರೇ ‘ಊರ್ಮಿಳಾ’, ಅಷ್ಟೇ ಅಲ್ಲ ಊರ್ಮಿಳಾ ಹೆಸರಿನ ಸಂಚಿಕೆಯನ್ನು ಬರೆದು ಮುಗಿಸಿದ ದಿನವೇ–ಅಂದರೆ ೧೩-೯-೧೯೩೬ರಂದೇ ‘ಊರ್ಮಿಳಾ ದೇವಿ’ ಎಂಬ ಹೆಸರಿನ ಸಾನೆಟ್ ಒಂದನ್ನು ಅವರು ಬರೆದರೆನ್ನುವುದು ಸ್ವಾರಸ್ಯದ ಸಂಗತಿಯಾಗಿದೆ.[4] ಅಷ್ಟರಮಟ್ಟಿಗೆ ಊರ‍್ಮಿಳೆಯ ವ್ಯಕ್ತಿತ್ವ ಅವರ ಮನಸ್ಸನ್ನು ಸೂರೆಗೊಂಡಂತೆ ತೋರುತ್ತದೆ. ‘ನೀರವ ಧ್ಯಾನವಧೂ ಹೇ ಊರ‍್ಮಿಳಾದೇವಿ’ ಎಂದು ‘ಶ್ರೀರಾಮಾಯಣದರ್ಶನಂ’ ದಲ್ಲಿ ಪ್ರಾರಂಭವಾಗುವ ನಿರೂಪಣಾಭಾಗವೂ, ‘ರಾಮಾಯಣದ ಮಹಾರತ್ನವೇದಿಕೆಯ ಮೇಲೆ’ ಎಂದು ಪ್ರಾರಂಭವಾಗುವ ಅವರ ಸಾನೆಟ್ಟಿನ ಒಳತಿರುಳೂ, ಈ ಹಿಂದೆ ಉಲ್ಲೇಖಿ ಸಿದ ರವೀಂದ್ರನಾಥ ಟ್ಯಾಗೂರರ ಚಿಂತನೆಗಳನ್ನು ಯಥಾವತ್ತಾಗಿ ಅನುರಣಿಸುವಂತೆ ತೋರುತ್ತವೆ.

ಊರ‍್ಮಿಳೆಯನ್ನು ಕುರಿತು ಹಿಂದೀಭಾಷೆಯಲ್ಲಿ ರಚಿತವಾದ ಕಾವ್ಯ–ಮೈಥಿಲೀ ಶರಣಗುಪ್ತರ ಕೃತಿ ‘ಸಾಕೇತ’. ಈ ಕಾವ್ಯದ ಮುಖ್ಯಘಟನೆಗಳು ನಡೆಯುವುದು ಅಯೋಧ್ಯೆ ಅಥವಾ ಸಾಕೇತದಲ್ಲಿ. ಹಿಂದಿನ ಮಹಾಕಾವ್ಯಗಳಲ್ಲಿ ಅವಜ್ಞೆಗೆ ಗುರಿಯಾದ ಪಾತ್ರಗಳನ್ನು ಮುನ್ನೆಲೆಗೆ ತರುವುದು ಅವರ ಉದ್ದೇಶ. ಹೀಗಾಗಿ ಊರ‍್ಮಿಳೆ ಈ ಕಾವ್ಯದ ನಾಯಿಕೆ. ಮೈಥಿಲೀ ಶರಣಗುಪ್ತರು ಊರ‍್ಮಿಳೆಯನ್ನು ಕೇಂದ್ರ ಪಾತ್ರವನ್ನಾಗಿ ಮಾಡಿಕೊಂಡು ಕೃತಿ ರಚಿಸಲು, ಈಗ ಪ್ರಸ್ತಾಪಿಸಿದ ‘ಕಾವ್ಯದ ಅನಾದರ’ ಎಂಬ ಲೇಖನದಲ್ಲಿ ಟ್ಯಾಗೂರರು ಪ್ರಸ್ತಾಪಿಸಿದ ಚಿಂತನೆಗಳು ಖಂಡಿತವಾಗಿಯೂ ಪ್ರೇರಣೆಯಾಗಿರಬೇಕು. ಸಾಕೇತ ಮುಖ್ಯವಾಗಿ ಒಂದು ಪ್ರೇಮಕಥೆ; ಲಕ್ಷ ಣನ ಅಗಲಿಕೆಯಿಂದ ಪರಿತಪಿಸುವ ವಿರಹಿಣಿ ಊರ‍್ಮಿಳೆಯ ವ್ಯಥೆ. ಈ ವ್ಯಥೆಯೇ ಇಲ್ಲಿ ಪ್ರಧಾನ. ಈ ಭಾಗದಲ್ಲಿ ಮೂಲದ ಕಥೆಯಿಂದ ಭಿನ್ನವಾದ ಹಲವಾರು ಬದಲಾವಣೆಗಳನ್ನು ಮೈಥಿಲೀ ಶರಣಗುಪ್ತರು ಮಾಡಿಕೊಂಡಿದ್ದಾರೆ. ಶತ್ರುಘ್ನ ಹನುಮಾನರು ಅಯೋಧ್ಯೆಯ ಜನಕ್ಕೆ ರಾಮನ ವನವಾಸದ ವೃತ್ತಾಂತವನ್ನು ಹೇಳುವುದು, ರಾಮರಾವಣರ ಯುದ್ಧದ ವಿಷಯವನ್ನು ತಿಳಿದು, ಅವರಿಗೆ ನೆರವಾಗಲೆಂದು ಅಯೋಧ್ಯೆಯಿಂದ ಹೊರಟ ಸೈನ್ಯವನ್ನು ಉದ್ದೇಶಿಸಿ, ಊರ‍್ಮಿಳೆಯು ಸ್ಫೂರ್ತಿದಾಯಕವಾದ ಭಾಷಣವನ್ನು ಮಾಡುವುದು ಇತ್ಯಾದಿ…

ಕುವೆಂಪು ತಮ್ಮ ರಾಮಾಯಣದರ್ಶನಂ ಬರೆಯುವಾಗ ಹಿಂದಿನ ಮಹಾಕಾವ್ಯದಲ್ಲಿ ಅಲಕ್ಷ ಕ್ಕೆ ಗುರಿಯಾದ ಪಾತ್ರಗಳನ್ನು ಮುನ್ನೆಲೆಗೆ ತರುವ ಉದ್ದೇಶವನ್ನು ತುಂಬ ಅರ್ಥಪೂರ್ಣವಾಗಿ ನಿರ್ವಹಿಸಿದ್ದಾರೆ. ಮಂಥರೆ, ಊರ‍್ಮಿಳೆ, ಚಂದ್ರನಖಿ, ಮಂಡೋದರಿ, ಧಾನ್ಯಮಾಲಿನಿ, ಅನಲೆ–ಈ ಕೆಲವು ಪಾತ್ರಗಳನ್ನು ಗಮನಿಸಬಹುದು. ಇವುಗಳ ನಡುವೆ ಊರ‍್ಮಿಳೆಯ ಪಾತ್ರವನ್ನು ಒಬ್ಬ ತಪಸ್ವಿನಿಯಂತೆ ಚಿತ್ರಿಸಿದ್ದಾರೆ. ಅವರ ಪಾಲಿಗೆ ಊರ‍್ಮಿಳೆ ‘ನೀರವ ಧ್ಯಾನವಧು’. ಕಡೆದ ಕಡಲಿನಂತೆ ಅಯೋಧ್ಯಾನಗರಿ, ಕೈಕೆ-ಮಂಥರೆಯರ ಕಾರಣದಿಂದ ಅಲ್ಲೋಲಕಲ್ಲೋಲವಾದ ಕ್ರಾಂತಿದಿನ ಅವಳು ಎಲ್ಲಿದ್ದಳು, ಏನಾದಳು ಎಂಬ ಪ್ರಶ್ನೆಗಳನ್ನು ಎತ್ತಿ,–

ಪ್ರಾಣೇಶ
ಲಕ್ಷ ಣಂ ರಾಮಸೀತೆಯರೊಡನಯೋಧ್ಯೆಯಂ
ಬಿಟ್ಟಂದು ತೊಟ್ಟು, ಸರಯೂ ನದಿಯ ತೀರದೊಳ್
ಪರ್ಣಕುಟಿಯಂ ರಚಿಸಿ ಚಿರತಪಸ್ವಿನಿಯಾಗಿ
ಕಟ್ಟಿದಳ್ ಚಿತ್ತಪೋಮಂಗಳದ ರಕ್ಷೆಯಂ
ಮೈಥಿಲಿಗೆ ರಾಮಂಗೆ ಮೇಣ್ ತನ್ನಿನಿಯ ದೇವನಿಗೆ
(ಶ್ರೀ ರಾ.ದ. ಅಯೋಧ್ಯಾ ಸಂಪುಟಂ ಸಂ.೪. ಪಂ.೫೮೮-೫೯೩. ಪು.೧೦೧)

ಎನ್ನುತ್ತಾರೆ. ಅಷ್ಟೇ ಅಲ್ಲ ‘ಸೀತೆಯ ತಪಕೆ ಮಿಗಿಲ್ ನಿನ್ನ ಅಖ್ಯಾತಮಾ ದೀರ್ಘಮೌನವ್ರತಂ, ಮೂಕಸತಿ ಹೇ ಗೋಚರಾತೀತೆ’ (ಅಲ್ಲೆ, ಪಂ.೫೭೩-೫೭೫) ಎಂದು ಪ್ರಶಂಸಿಸುತ್ತಾರೆ. ಕುವೆಂಪು ಇನ್ನೂ ಒಂದು ಸಂಗತಿಯನ್ನು ಪ್ರಸ್ತಾಪಿಸುತ್ತಾರೆ. ಅದೆಂದರೆ: ವನವಾಸದ ಅವಧಿಯಲ್ಲಿ ಯಾವತ್ತೂ ರಾಮ-ಸೀತೆಯರು ಲಕ್ಷ ಣನು ತಮಗಾಗಿ ತನ್ನ ಸತಿ ಊರ್ಮಿಳೆಯನ್ನು ಬಿಟ್ಟು ಬಂದಿದ್ದಾನೆ, ಅವನು ಏಕಾಂಗಿಯಾಗಿದ್ದಾನೆ– ಎಂಬ ವಿಚಾರವನ್ನು ಮರೆಯುವುದಿಲ್ಲ. ತಮ್ಮ ಸುಖದ ನಡುವೆ ಲಕ್ಷ ಣನ ಅಂತರಂಗದ ಕೊರಗನ್ನು ನಿರ್ಲಕ್ಷಿಸುವುದಿಲ್ಲ. ಚಿತ್ರಕೂಟದಲ್ಲಿರುವಾಗ ಒಂದುದಿನ ನಡುರಾತ್ರಿ, ರಾಮನು ಲಕ್ಷ ಣನನ್ನು ಕರೆದು–‘ತಮ್ಮ ನಾಳೆಯೆ ನೀನು ಅಯೋಧ್ಯೆಗೆ ಹಿಂದಿರುಗು, ಊರ‍್ಮಿಳೆ ನಿನ್ನನ್ನೆ ಕರೆದು ಗೋಳಾಡುತ್ತಿರುವಂತೆ ನಾನು ಕನಸನ್ನು ಕಂಡೆ’ ಎನ್ನುತ್ತಾನೆ. ಅದಕ್ಕೆ ಲಕ್ಷ ಣ–

ಅಣ್ಣ
ಕಾಂತೆ ಊರ್ಮಿಳೆ ತಪಸ್ವಿನಿ, ನಿನ್ನೊಡನೆ ಬರುವ
ಮುನ್ನ ಆಕೆಯ ಕೃಪೆಯನಾಂತೆ ಬಂದೆನ್. ನಿನಗೆ
ಚಿಂತೆಯಿನಿತಾ ದೆಸೆಗೆ ಬೇಡಯ್.
(ಶ್ರೀ ರಾ.ದ. ಅಯೋಧ್ಯಾಸಂಪುಟ ಸಂ.೭, ಪಂ.೧೩೪-೧೩೭. ಪು.೧೨೩)

ಎಂದು ಆಶ್ವಾಸನೆ ಕೊಡುತ್ತಾನೆ. ಈ ಉಕ್ತಿಯ ಮೂಲಕ, ಲಕ್ಷ ಣನು, ತಾನು  ರಾಮ-ಸೀತೆಯರೊಡನೆ ವನವಾಸಕ್ಕೆ ಹೊರಡುವ ಮುನ್ನ, ತನ್ನ ಸತಿಯಾದ ಊರ‍್ಮಿಳೆಯ ಅನುಮೋದನೆಯನ್ನು ಪಡೆದುಕೊಂಡಿದ್ದನೆಂಬುದನ್ನು ಖಚಿತಪಡಿಸುತ್ತಾನೆ. ಮುಂದೆ ಊರ‍್ಮಿಳೆಯ ತಪಸ್ ಶಕ್ತಿ ರಾಮ-ಸೀತೆ-ಲಕ್ಷ ಣರ ಕ್ಷೇಮಕ್ಕಾಗಿ, ಒಂದು ರಕ್ಷಕ ಶಕ್ತಿಯಂತೆ ಹೇಗೆ ವರ್ತಿಸಿತು ಎಂಬುದನ್ನು ಕುವೆಂಪು ಉದ್ದಕ್ಕೂ ಸೂಕ್ಷ ವಾಗಿ ಚಿತ್ರಿಸಿದ್ದಾರೆ.

ಶ್ರೀರಾಮಾಯಣದರ್ಶನಂ ಕಾವ್ಯದಲ್ಲಿ ಊರ‍್ಮಿಳೆ ಸಹೃದಯರಿಗೆ ಗೋಚರವಾಗುವುದು, ಶ್ರೀರಾಮನು ಲಂಕೆಯಿಂದ ನೇರವಾಗಿ ಅಯೋಧ್ಯೆಗೆ, ಹದಿನಾಲ್ಕು ವರ್ಷಗಳ ನಂತರ ಸೀತಾ ಲಕ್ಷ ಣರೊಡನೆ ಹಿಂದಿರುಗಿದ ಸಂದರ್ಭದಲ್ಲಿ. ಸರಯೂ ನದೀತೀರದಲ್ಲಿ ಪರ್ಣಕುಟಿ ಯೊಂದರಲ್ಲಿ ಅಷ್ಟೂ ವರ್ಷಗಳ ಕಾಲ ತಪಸ್ವಿನಿಯಾಗಿದ್ದ ಊರ‍್ಮಿಳೆಗೆ ಭರತನ ಹೆಂಡತಿಯಾದ ಮಾಂಡವಿಯು ರಾಮ-ಲಕ್ಷ ಣ ಸೀತೆಯರು ಬಂದ ವರ್ತಮಾನವನ್ನು ಸಂಭ್ರಮದಿಂದ ತಿಳಿಸಿ, ಅವರನ್ನು ನೋಡಲು ಭರತನಿರುವ ನಂದಿಗ್ರಾಮಕ್ಕೆ ಹೋಗೋಣವೆಂದು ತ್ವರೆ ಮಾಡುತ್ತಾಳೆ. ಆಗ ಊರ‍್ಮಿಳೆ, ಸ್ನಾನ ಮಾಡದೆ ಬೇರೆ ಬಟ್ಟೆಯುಡದೆ ಅವರನ್ನು ನೋಡಲು ಹೋಗುವುದು ಒಳ್ಳೆಯದಲ್ಲ ಎನ್ನುತ್ತಾಳೆ. ಅದಕ್ಕೆ ಮಾಂಡವಿ ಹೇಳುತ್ತಾಳೆ: ‘ಇಷ್ಟು ವರ್ಷ ನೀನು ಮಾಡಿದ್ದ ತಪಸ್ಸನ್ನು ಅವರು ನೋಡಬಾರದೆ? ನೀನು ಹೇಗಿದ್ದೀಯೋ ಹಾಗೆಯೇ ಬಾ’. ಊರ‍್ಮಿಳೆ ಉತ್ತರ ಕೊಡುತ್ತಾಳೆ:

ಚಿಃ ಕಡಲ್ಗಿದಿರ್
ಪನಿಗೇಂ ಪ್ರದರ್ಶನಂ? ದೇವರ ತಪಕ್ಕಿದಿರ್
ನಮ್ಮದೊರ್ ತೃಣಮಲ್ತೆ! ಸಂತೋಷ ಸಮಯದೊಳ್
ತೋರ್ಪುದನುಚಿತವೆಮ್ಮಕಷ್ಟಂ. ತನ್ನ ತಾನ್
ಇಲ್ಲಗೈವುದೆ ಎಲ್ಲ ಸಾಧನೆಗೆ ಕೊನೆಯ ಗುರಿ
ಮೇಣ್ ತಪಕೆ ಕೇಳ್, ತಂಗೆ ಪರಮಪ್ರಯೋಜನಂ
(ಶ್ರೀ ರಾ.ದ. ಶ್ರೀಸಂಪುಟ ಸಂ.೧೨. ಪಂ.೨೮೦-೨೮೯. ಪು.೮೫೯)

ಒಂದೆಡೆ ಕುವೆಂಪು ಹೀಗೆ ಹೇಳುತ್ತಾರೆ: ‘ಈ ನನ್ನ ಕಾವ್ಯವನ್ನು ಎರಡುಮೂರು ದೃಷ್ಟಿಗಳಿಂದ ನೋಡಬೇಕಾಗುತ್ತದೆ. ಕಾವ್ಯ ಬೇಕಾದವರಿಗೆ ಇಲ್ಲಿ ಕಾವ್ಯ ಸಿಗುತ್ತದೆ, ಕತೆ ಬೇಕಾದವರಿಗೆ ಕತೆ ಸಿಗುತ್ತದೆ. ದರ್ಶನ ಬೇಕಾದವರಿಗೆ ದರ್ಶನ ಸಿಗುತ್ತದೆ’ (ಸ.ಗ. ಸಂ.೨. ಪು. ೧೦೮೪) ಕುವೆಂಪು, ಕಾವ್ಯ, ಕತೆ, ದರ್ಶನ ಇವುಗಳನ್ನು ಬಿಡಿಬಿಡಿಯಾಗಿ ಉಲ್ಲೇಖಿಸಿದರೂ ಅವರ ಮಹಾಕೃತಿ ಮೂಲತಃ ಕಾವ್ಯವೇ; ಈ ಕಾವ್ಯ ಮೂಲದ ಕತೆಯನ್ನು ಹೇಗೆ ಬಳಸಿಕೊಂಡಿದೆ, ಅದರಲ್ಲಿ ಅವರ ದರ್ಶನವು ಹೇಗೆ ಮೈದೋರಿದೆ–ಎಂಬಿವು ಅನಂತರ ಕೇಳಿಕೊಳ್ಳಬೇಕಾದ ಪ್ರಶ್ನೆಗಳಾಗಿವೆ. ಕತೆಯ ವಿಚಾರದಲ್ಲಿ ಹೇಳುವುದಾದರೆ,  ‘ಕನ್ನಡದಿ ಬೇರೆ ಕತೆಯೆಂಬಂತೆ, ಬೇರೆ ಮೆಯ್ಯಾಂತಂತೆ, ಮರುವುಟ್ಟುವಡೆದಂತೆ’ ಎನ್ನುವುದು ಶ್ರೀರಾಮಾಯಣದರ್ಶನದ ಸ್ವರೂಪವಾಗಿದೆ. ಅದರಲ್ಲೂ ‘ಸಾಗರೋಲ್ಲಂಘನ’ದ ಸಂದರ್ಭದಿಂದ ಮುಂದಿನ ಕಥಾ ವಿನ್ಯಾಸವಂತೂ, ಮೂಲರಾಮಾಯಣಕ್ಕೆ ಕುವೆಂಪು ಕೊಟ್ಟ ಪುನರ್ಭವ ಪ್ರಸಂಗಗಳಿಂದ, ಇದು ಬೇರೆ ಕತೆಯೆಂಬಂತೆ ಭಾಸವಾಗುತ್ತದೆ. ಆಂಜನೇಯನ ಕನಕಲಂಕಾನ್ವೇಷಣ ಸಂದರ್ಭ, ಕುಂಭಕರ್ಣನನ್ನು ಎಬ್ಬಿಸುವ ಸಂದರ್ಭ, ಇಂದ್ರಜಿತುವಿನ ನಿಕುಂಭಿಲಾ ಯಜ್ಞದ ಸಂದರ್ಭ, ದಶಾನನ ಸ್ವಪ್ನ ಸಿದ್ಧಿಯ ಸಂದರ್ಭ, ಮೂಲ ರಾಮಾಯಣಕ್ಕಿಂತ ಭಿನ್ನವಾದ ಕತೆಗಾರಿಕೆಯನ್ನೂ ಕಲೆಗಾರಿಕೆಯನ್ನೂ ಪ್ರಕಟಿಸುತ್ತವೆ.

ಈಗ ಕೇಳಿಕೊಳ್ಳಬೇಕಾದ ಪ್ರಶ್ನೆಯೆಂದರೆ ಮೂಲ ರಾಮಾಯಣಕ್ಕಿಂತ ಭಿನ್ನವಾದ ಕತೆಗಾರಿಕೆಯನ್ನೂ ಕಲೆಗಾರಿಕೆಯನ್ನೂ ಒಳಗೊಳ್ಳುವ ಈ ಕಾವ್ಯವನ್ನು ಕುವೆಂಪು ಅವರು ಶ್ರೀರಾಮಾಯಣ ಎಂದು ಕರೆಯದೆ ಶ್ರೀರಾಮಾಯಣದರ್ಶನಂ ಎಂದು ಕರೆದಿರುವ ಕಾರಣ, ಇಲ್ಲಿನ ದರ್ಶನ ಯಾವುದು?

ಸರಳವಾಗಿ ಹೇಳುವುದಾದರೆ ದರ್ಶನ ಎನ್ನುವುದು ಕವಿಯಾದವನಿಗೆ, ತನ್ನ ಅನುಭವ, ಆಲೋಚನೆ, ಅಧ್ಯಯನ, ಧ್ಯಾನ, ತಪಸ್ಸು ಮತ್ತು ಸಂಸ್ಕಾರಗಳಿಂದ ಸಾಧ್ಯವಾಗುವ ಲೋಕಗ್ರಹಿಕೆ ಮತ್ತು ಅದರಿಂದ ಸಿದ್ಧವಾಗುವ ಒಂದು ಮನೋಧರ್ಮ. ಕುವೆಂಪು ಅವರು ಇಪ್ಪತ್ತನೆ ಶತಮಾನದ ವಿಜ್ಞಾನ, ತತ್ವಜ್ಞಾನ ಮತ್ತು ವೇದಾಂತ ವಿಜ್ಞಾನಗಳ ಹಿನ್ನೆಲೆಯಲ್ಲಿ ರಾಮಾಯಣದ ಕಥಾವಸ್ತುವನ್ನು ವ್ಯಾಖ್ಯಾನಿಸಿರುವ ಕ್ರಮದಲ್ಲಿ ಅವರ ‘ದರ್ಶನ’ವನ್ನು ಗುರುತಿಸಬಹುದು. ಕುವೆಂಪು ಅವರೇ ತಮ್ಮ ಕಾವ್ಯಸಂದರ್ಭದಲ್ಲಿ ಇಲ್ಲಿ ಅಭಿವ್ಯಕ್ತವಾಗಿರುವ ದರ್ಶನವನ್ನು ಕುರಿತು ಪ್ರಸ್ತಾಪಿಸಿರುವರಾದರೂ,[5] ತಾತ್ವಿಕ ಸ್ವರೂಪದ ಆ ವ್ಯಾಖ್ಯಾನಗಳಿಗಿಂತ ಬೇರೆಯಾದ ಕೆಲವು ಮಿಂಚಿನ ಕೀಲಿಕೈಗಳನ್ನು ನಾವು ಅವರ ಕೃತಿಯಲ್ಲೆ ಹುಡುಕಿಕೊಳ್ಳುವುದು ಒಳ್ಳೆಯದು.

ಮೊದಲನೆಯದೆಂದರೆ ಈ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಉದ್ಧಾರವಿದೆ. ಸೃಷ್ಟಿಯ ಈ ಮಹದ್ ವ್ಯೂಹರಚನೆಯಲ್ಲಿ ಯಾರೂ ಯಾವ ಕಾರಣಕ್ಕೂ ಇದ್ದಲ್ಲೇ ಇದ್ದು ಸ್ಥಗಿತಗೊಳ್ಳಬೇಕಾಗಿಲ್ಲ.[6] ಪ್ರತಿಯೊಂದು ಜೀವಕ್ಕೂ ತನ್ನ ಪಾರಿಣಾಮಕ ಪಥದ ಯಾತ್ರೆಯಲ್ಲಿ ಇಂದಲ್ಲ ನಾಳೆ ತನ್ನ ಬಿಡುಗಡೆಯನ್ನು ಪಡೆದುಕೊಳ್ಳುವ ಅವಕಾಶ ಮತ್ತು ಅಧಿಕಾರವಿದೆ. ಶ್ರೀರಾಮಾಯಣದರ್ಶನಂ ಎತ್ತಿಹಿಡಿಯುವ ದರ್ಶನಗಳಲ್ಲಿ ಇದೂ ಒಂದು. ಮಂಥರೆಯಿಂದ ಮೊದಲುಗೊಂಡು ರಾವಣನವರೆಗೆ ಯಾವ ಪಾತ್ರವೂ ಈ ಮಹಾಚಲನೆಯಲ್ಲಿ ಕ್ರಮೇಣ ಪಡೆದುಕೊಳ್ಳುವ ಪರಿವರ್ತನೆಗೆ ಹೊರತಲ್ಲ. ಲಂಕೆಯಿಂದ ಅಯೋಧ್ಯೆಯವರೆಗೆ ಅದೆಷ್ಟು ಬಿಡುಗಡೆಗಳು, ಅದೆಷ್ಟು ತಪಸ್ಸಿದ್ಧಿಗಳು. ಈ ಹಿನ್ನೆಲೆಯಿಂದ ಕುವೆಂಪು ರಾಮಾಯಣದ ಪ್ರತಿಯೊಂದು ಪಾತ್ರವೂ ತಮ್ಮ ಜನ್ಮೋದ್ದೇಶ ಸಾಧನೆಯ ಪಾರಿಣಾಮಕ ಪಥದೊಳಗಿನ ಸಾಧಕರೇ. ಮಂಥರೆ, ಅಹಲ್ಯೆ, ಶಬರಿ, ಸಂಪಾತಿ, ಮಹಾಪಾರ್ಶ್ವ, ರಾವಣ ಅಷ್ಟೇ ಅಲ್ಲ ರಾಮ-ಸೀತೆಯರೂ ಸಾಧಕರೇ. ಶ್ರೀರಾಮನ ವನವಾಸ ಪ್ರಯಾಣವೇ ಅನೇಕ ಸಾಧಕರ ತಪಸ್ಸಿದ್ಧಿಗೆ, ಹಾಗೂ ರಾಮನ ತಪೋವೃದ್ಧಿಗೆ ಕಾರಣವಾಗಿದೆ. ಅಷ್ಟೆ ಅಲ್ಲ, ಶ್ರೀರಾಮನೆ ತನ್ನ ಸ್ವಸ್ವರೂಪವನ್ನು ಸಾಕ್ಷಾತ್ಕರಿಸಿಕೊಳ್ಳುವ ಒಂದು ವಿಧಾನವೂ ಆಗಿದೆ. ಮಂಥರೆಯ ನೆವದಿಂದ ಸಂಭವಿಸಿದ ಮತ್ತು ಮೇಲುನೋಟಕ್ಕೆ ಒಂದು ‘ದುರ್ಘಟನೆ’ಯೆಂಬಂತೆ ತೋರುವ, ರಾಮನ ರಾಜ್ಯಪರಿತ್ಯಾಗ ಮತ್ತು ವನವಾಸ ಕ್ಲೇಶಗಳಿಗೆ ಕಾರಣವಾದ ಒಂದು ಅಚಾತುರ್ಯ, ಅನೇಕರ ಅಭ್ಯುದಯಕ್ಕೆ ಮತ್ತು ಕರ‍್ಮಕ್ಷಯಕ್ಕೆ ಹೇಗೆ ಕಾರಣವಾಯಿತು ಎಂಬ ಕಾಣ್ಕೆ (ದರ್ಶನ)ಯೊಂದು ಸೀತೆಯ ಮಾತಿನ ಮೂಲಕ ಅಭಿವ್ಯಕ್ತವಾಗಿದೆ. ರಾಮ-ರಾವಣರ ಯುದ್ಧ ಅತ್ತ ನಡೆಯುತ್ತಿರುವಾಗ, ಅಶೋಕವನದೊಳಗಿದ್ದ ಸೀತೆ, ತ್ರಿಜಟೆಯನ್ನು ಕುರಿತು ಹೀಗೆ ಹೇಳುತ್ತಾಳೆ:

ನಿನಗೊಂದನೊರೆದಪೆನು ಎನಗೊದಗಿದೊಂದು
ನವ್ಯಸಾಕ್ಷಾತ್ಕಾರಮಂ. ಆವುದಾಗಲಿ ನೆಪಂ
ಫಲದಾಯಕಂ ತಪಂ. ನನಗೆ, ರಘುನಾಥಂಗೆ
ಮೇಣ್ ರಾಕ್ಷಸೇಂದ್ರನಿಗೆ, ಮೂವರ್ಗಂ ಅವರವರ
ಕರ್ಮಾನುಸಾರಿ ಜನ್ಮೋದ್ದೇಶ ಸಾಧನೆಗೆ
ಮೇಣಾತ್ಮವಿಕಸನದ ಪರಿಣಾಮಸಿದ್ಧಿಗೆ
ಸಹಾಯಮಾದುದು ಮಂಥರೆಯ ಮೂಲದೀ ಬೃಹದ್
ದುರ್ಘಟನೆ. ಇನ್ನೆನಿತು ಜೀವರಿಗೆ ತಂತಮ್ಮ
ಕರ್ಮಕ್ಷಯಕೆ ಮತ್ತೆ ಧರ್ಮಾಭ್ಯುದಯಕಿದು
ನಿಮಿತ್ತಮಾದಪುದೊ ಪೇಳ್ವರಾರ್?
(ಶ್ರೀ ರಾ.ದ. ಶ್ರೀಸಂಪುಟ. ಸಂ.೬. ಪಂ.೧೯೬-೨೦೩. ಪು.೬೫೪)

ಎಂದು. ವಾಸ್ತವವಾಗಿ ಇದು ‘ಪೂರ್ಣದೃಷ್ಟಿ’ಗೆ ವೇದ್ಯವಾಗುವ ಒಂದು ಮಹಾಸತ್ಯ. ಕುವೆಂಪು ಅವರ ಮಾತಿನಲ್ಲಿಯೇ ಹೇಳುವುದಾದರೆ, ‘ಯಾವುದು ಖಂಡದೃಷ್ಟಿಗೆ ಅನ್ಯಾಯ ವೆಂದೂ ಅಧರ್ಮವೆಂದೂ ವ್ಯರ್ಥವೆಂದೂ ತೋರುವ ವ್ಯಾಪಾರಗಳು, ಪೂರ್ಣದೃಷ್ಟಿಗೆ ಅಷ್ಟರಲ್ಲಿಯೇ ಕೊನೆಗಾಣದೆ–ಪರಮ ಪ್ರಯೋಜನದ ಕಡೆ ಚಲಿಸುವಂತೆ ಗೋಚರಿಸುತ್ತವೆ. (ಸ.ಗ. ಸಂ.೧ ಪು.೨೫೧)

ಕುವೆಂಪು ಅವರ ಪ್ರಕಾರ ‘ಪೂರ್ಣದೃಷ್ಟಿ’ ಎನ್ನುವುದು ‘ದರ್ಶನ’ ಎನ್ನುವುದಕ್ಕೆ ಒಂದು ಪರ್ಯಾಯನಾಮ. ‘ಪೂರ್ಣದೃಷ್ಟಿಯೆ ನಿಜವಾದ ಶಾಶ್ವತವಾದ ಸವೋತ್ಕೃಷ್ಟವಾದ ‘ದರ್ಶನ’ (ಸ.ಗ. ಸಂ.೧. ಪು.೨೭) ಈ ಪೂರ್ಣದೃಷ್ಟಿಗೆ ಅಥವಾ ದರ್ಶನಕ್ಕೆ ಗೋಚರಿಸುವ ಮತ್ತೊಂದು ಸತ್ಯವೆಂದರೆ:

ನೆಯ್ದಾಳುತಿದೆ ಜಗವನೊಂದತಿ ವಿರಾಣ್ಮನಂ
ಸೂಕ್ಷಾ ತಿ ಸೂಕ್ಷ ತಂತ್ರದಿಂ ಬಿಗಿದು ಕಟ್ಟಿಯುಂ
ಜೀವಿಗಳ್ಗಿಚ್ಛೆಯಾ ಸ್ವಾತಂತ್ರ ಭಾವಮಂ
ನೀಡಿ. ಮಂಥರೆ, ಸೀತೆ, ರಾಮರಾವಣರೆಲ್ಲರುಂ
ಸೂತ್ರಗೊಂಬೆಗಳಲ್ತೆ ವಿಧಿಯ ಹಸ್ತದಲಿ?
(ಶ್ರೀ ರಾ.ದ. ಅಯೋಧ್ಯಾ ಸಂಪುಟಂ. ಸಂ.೩ ಪಂ. ೧೩೧-೧೩೫. ಪು.೬೦-೬೧)

ಇದು ಮುಖ್ಯವಾಗಿ ವಿಶ್ವಸಂಕಲ್ಪ ಮತ್ತು ವ್ಯಕ್ತಿ ಸ್ವಾತಂತ್ರ ಗಳ ಸಂಬಂಧವನ್ನು ಕುರಿತು ಕುವೆಂಪು ಮಂಡಿಸುವ ನಿಲುವು. ಅವರು ಹೇಳುತ್ತಾರೆ, ಈ ಜಗತ್ತನ್ನು ಒಂದು ‘ಅತಿವಿರಾಣ್’ ಮನಸ್ಸೊಂದು, ತನ್ನ ಇಚ್ಛೆಯ ಸೂತ್ರದಿಂದ ಈ ಜಗತ್ತನ್ನು ನೆಯ್ದು ಅದನ್ನು ತನ್ನ ಅಧೀನವನ್ನಾಗಿ ಮಾಡಿಕೊಂಡು ಆಳುತ್ತಿದೆ. ಹೀಗೆ ಅದು ತನ್ನ ಸೂಕ್ಷಾ ತಿಸೂಕ್ಷ  ತಂತ್ರದಿಂದ ಬಿಗಿದು ಕಟ್ಟಿದ್ದರೂ, ಅದು ಜೀವಿಗಳನ್ನು ಇಚ್ಛಾಸ್ವಾತಂತ್ರ ವಿಲ್ಲದ ಗೊಂಬೆಗಳನ್ನಾಗಿ ಮಾಡಿಲ್ಲ. ಜೀವಿಗಳಿಗೆ ತಾವೂ ತಮ್ಮ ಇಚ್ಛೆಯಂತೆ ನಡೆದುಕೊಳ್ಳುತ್ತಿದ್ದೇವೆ ಎನ್ನುವ ‘ಸ್ವಾತಂತ್ರ ಭಾವ’ವನ್ನು ನೀಡಿದೆಯಂತೆ. ಇದು ದೈವೇಚ್ಛೆ ಹಾಗೂ ಮಾನುಷೇಚ್ಛೆಗಳ ಸಂಬಂಧ. ಒಂದು ರೀತಿಯಲ್ಲಿ ಈ ವಿರಾಣ್‌ಮನ ಅಥವಾ ಭಗವದಿಚ್ಛೆಗೆ ಮತ್ತೊಂದು ಹೆಸರು ವಿಧಿ. ಕುವೆಂಪು ಅವರ ದೃಷ್ಟಿಗೆ ‘ಕರ್ಮ, ವಿಧಿ, ಮತ್ತು ಈಶ್ವರೇಚ್ಛೆ–ಈ ಮೂರೂ ಅಭಿನ್ನ, ಒಂದೇ ತತ್ವದ ಮೂರು ಮುಖಗಳು’ (ಕು.ನಾ.ಸಂ. ಪು.೨೮೧) ಆದುದರಿಂದಲೇ ಕುವೆಂಪು ‘ಸೀತೆ ರಾಮ ರಾವಣರೆಲ್ಲರುಂ ಸೂತ್ರ ಗೊಂಬೆಗಳಲ್ತೆ ಆ ವಿಧಿಯ ಹಸ್ತದಲಿ’ ಎಂದು ರಾಮಾಯಣದರ್ಶನಂ ದ ಅಥವಾ ರಾಮಾಯಣದ ಪಾತ್ರ ಹಾಗೂ ಘಟನಾವಳಿಗಳ ಹಿಂದಿರುವ, ವಿರಾಣ್‌ಮನದ ಸಂಕಲ್ಪದ ಕಡೆಗೆ ಸಹೃದಯರ ಗಮನವನ್ನು ಸೆಳೆಯುತ್ತಾರೆ. ಮತ್ತು ಈ ಸಂಗತಿಯನ್ನು ತಮ್ಮ ಮಹಾಕಾವ್ಯದಲ್ಲಿ ಇಪ್ಪತ್ತಕ್ಕೂ ಹೆಚ್ಚು ಬಾರಿ ಪ್ರಸ್ತಾಪಿಸುತ್ತಾರೆ.[7] ಕೆಲವನ್ನು ಗಮನಿಸುವುದಾದರೆ: ಮರುದಿನ ಶ್ರೀರಾಮನಿಗೆ ಪಟ್ಟಾಭಿಷೇಕ ಮಾಡಬೇಕೆಂದು ದಶರಥನು ಸಂಕಲ್ಪ ಮಾಡಿದ ಆ ರಾತ್ರಿ, ಮರುದಿನ ಕೈಕೇಯಿಗೆ ದುರ್ಬೋಧನೆ ಮಾಡಲು ಮಂಥರೆಯ ಮನಸ್ಸನ್ನು ಸಜ್ಜುಗೊಳಿಸುವ ದುಃಸ್ವಪ್ನವೊಂದು ಆಕೆಗೆ ಬೀಳುತ್ತದೆ. ಇದನ್ನು ಕುರಿತು ಕವಿ,

ಮಥಿಸಿದುದು ದಶಶಿರನ ವಿಧಿ ಮಂಥರೆಯ ಮನದಿ
ತನ್ನ ತಂತ್ರದ ಕೃತಿಯನಾ ಇರುಳ್ ಕನಸಿನಲಿ
(ಶ್ರೀ ರಾ.ದ. ಅಯೋಧ್ಯಾ ಸಂಪುಟ ಪಂ.೧೩೬-೧೩೭. ಪು.೬೧)

ಎಂದು ವ್ಯಾಖ್ಯಾನಿಸುತ್ತಾರೆ. ಶ್ರೀರಾಮನು ತಾನು ರಾಜ್ಯತ್ಯಾಗ ಮಾಡಿ ವನವಾಸಕ್ಕೆ ಹೊರಟಾಗ ಲಕ್ಷ ಣನು, ಅದು ನ್ಯಾಯಸಮ್ಮತವಲ್ಲವೆಂದು ವಾದಿಸಿದಾಗ ಶ್ರೀರಾಮನು ಹೇಳುತ್ತಾನೆ:

ಮುನಿಯದಿರ್ ಸೌಮಿತ್ರಿ,
ಬರಿದೆ ಬಯ್ವುದೆ ತಂದೆಯಂ, ತಿಳಿಯದಾಂತರ್ಯಮಂ?
ಕೋಸಲದ ನೆಲದ ದೊರೆತನವೆನಗೆ ದೊರೆಯದಿರೆ
ಕೇಡೆಂದು ಬಗೆಯದಿರ್. ಲೇಸನೆಸಗುವ ವಿಧಿಗೆ
ಬಹುಪಥಗಳುಂಟು ನಡೆಯಲ್
(ಶ್ರೀ ರಾ.ದ. ಅಯೋಧ್ಯಾಸಂಪುಟಂ ಸಂ.೪. ಪಂ.೮೮-೯೧. ಪು.೮೩)

ರಾಮನ ನಿರ್ಗಮನದ ನಂತರ, ಅಯೋಧ್ಯೆಗೆ ಹಿಂದಿರುಗಿದ ಭರತ, ಅರಮನೆ ಯೊಳಗಾದ ದುರ್ಘಟನಾ ಪರಂಪರೆಗಳನ್ನು ಕಂಡು ಅತ್ಯಂತ ದುಃಖಿತನಾದಾಗ–

ಧೀರಮತಿ ಪಾರ್ಥಿವ ಕುಮಾರ ತಡೆ ಶೋಕವಂ
…………….
ದುರ್ದಮ ನಿಯಂತೃವಿಧಿತಾಂ
ತಂದೊಡ್ಡಿದೀ ಮಹತ್ ಕ್ಲೇಶಮಂ ಬುದ್ಧಿಯಿಂ
ಪರಿಹರಿಸೆ ಯತ್ನಗೈ
(ಶ್ರೀ ರಾ.ದ. ಅಯೋಧ್ಯಾ ಸಂಪುಟ ಸಂ.೬. ಪಂ.೧೫೨; ೧೫೪-೧೫೬. ಪು.೧೧೯)

ಎಂದು ಋಷಿ ವಶಿಷ್ಠರು ಸಮಾಧಾನಪಡಿಸುತ್ತಾರೆ. ಚಿತ್ರಕೂಟದಿಂದ ಅತ್ರಿ ಋಷಿಯ ಆಶ್ರಮಕ್ಕೆ ರಾಮಲಕ್ಷ ಣ ಸೀತೆಯರು ಬಂದಾಗ, ಅತ್ರಿ ಋಷಿಯ ಪತ್ನಿಯಾದ ಅನಸೂಯೆಯು ಸೀತೆಗೆ ಮುಂದೆ ಒದಗಲಿರುವ ವಿಪತ್ ಪರಂಪರೆಯನ್ನು ಯೋಗದೃಷ್ಟಿಯಿಂದ ಅರಿತು, ನಿಡುಸುಯ್ದು ‘ಹಾ, ವಿಧಿಯ ಕೃತಿಕೌಶಲಕೆ ಅವಧಿಯಿಹುದೆ’–ಎಂದು ತನಗೆ ತಾನೇ ಆಡಿಕೊಂಡಳಂತೆ, ಆದರೆ ಮುಂದಿನ ಸಂಕಟಗಳನ್ನೆದುರಿಸಲು ಮಂತ್ರರಕ್ಷೆಯೆಂಬಂತೆ ಸೀತೆಗೆ ಪತಿವ್ರತಾಪ್ರೇಮ ಮಹಿಮಾಶಕ್ತಿಯನ್ನು ಉಪದೇಶಿಸಿದಳಂತೆ. (ಶ್ರೀ ರಾ.ದ. ಅಯೋಧ್ಯಾ ಸಂಪುಟಂ. ಸಂ.೧೦. ಪಂ. ೪೮-೫೦; ೬೩-೬೫ ಪು.೧೮೦)

ರಾವಣನ ಅಪ್ಪಣೆಯ ಮೇರೆಗೆ, ರಣರಂಗಕ್ಕೆ ಬಂದ ಮಹಾಪಾರ್ಶ್ವನೆಂಬ ಸೇನಾನಿ, ರಾಮನಿಗೆ ಸರಿಸಮನೆನುವಂತೆ ಸೆಣಸಿ, ತೀವ್ರವಾಗಿ ಗಾಯಗೊಂಡು, ತನ್ನ ಸಾರಥಿಯ ನೆರವಿನಿಂದ ರಣರಂಗದಿಂದ ವಿವಿಕ್ತವೂ ದೂರವೂ ಆದೊಂದು ಸ್ಥಳಕ್ಕೆ ಬರುತ್ತಾನೆ. ಮಹಾಶಕ್ತಿ ಸಾಧಕನೂ, ಸೇನಾನಿಯೂ ಆದ ಮಹಾಪಾರ್ಶ್ವನು, ತನ್ನ ಸೂತನನ್ನು ಕುರಿತು, ತನಗೊದಗಲಿರುವ ಒಂದು ವಿಶೇಷಾನುಭೂತಿಯ ಮನಃಸ್ಥಿತಿಯಲ್ಲಿ ಹೀಗೆ ಹೇಳುತ್ತಾನೆ:

ಪಾಪಮುಂ
ಪುಣ್ಯಮುಖಿ! ಐಹಿಕದ ವೈರಿ ಆಧ್ಮಾತ್ಮಿಕಕೆ
ಕೆಳೆಯಹನ್, ಗುರುವಹನ್. ಬಹುಪಥಗಳ್ ವಿಧಿಗೆ
ತನ್ನಯ ಕಾರ್ಯಸಾಧನೆಗೆ. ನನ್ನಿಷ್ಟದೇವತೆಯೆ
ಸೀತಾಸ್ವರೂಪದಿಂ ಮೋಹಿಸಿದಳೆಂಬಂತೆ
ತೋರುತಿದೆ ಲಂಕಾಧಿನಾಥನಂ…….
(ಶ್ರೀ ರಾ.ದ. ಲಂಕಾಸಂಪುಟಂ, ಪಂ.೭೭-೮೨, ಪು.೬೬೨)

ಅಶೋಕವನದೊಳಗಿದ್ದ ಸೀತೆ ರಾಮ-ರಾವಣರ ಯುದ್ಧದಿಂದ ಆಗುತ್ತಿದ್ದ ಮಹಾ ವಿನಾಶವನ್ನು ಕುರಿತು, ಅದಕ್ಕೆ ತಾನೂ ಕಾರಣನಾದೆನಲ್ಲ ಎಂಬ ಅಳುಕನ್ನು ಅನುಭವಿಸುತ್ತ ಕೊನೆಗೆ,

………ವಿಧಿಯ ಸೂತ್ರದ ಜಗಜ್ಜಾಲದೊಳ್
ವ್ಯಕ್ತಿಗಳ್ ಗ್ರಂಥಿಮಾತ್ರಗಳಲ್ತೆ. ವಿಧಿಹಸ್ತ
ಕೌಶಲಪ್ರತಿಮೆಗಳ್? ನಂನಮ್ಮ ಕರ್ಮಫಲ
ನಾಮುಣಲ್ ವೇಳ್ಕುಂ
(ಶ್ರೀರಾ.ದ. ಶ್ರೀಸಂಪುಟ. ಸಂ.೩. ಪಂ.೭೮-೮೦ ಪು.೬೯೯)

ಎಂದು ಸಮಾಧಾನ ಪಟ್ಟುಕೊಳ್ಳುತ್ತಾಳೆ. ಈ ಕೆಲವು ಪ್ರಾತಿನಿಧಿಕವಾದ ಸಂದರ್ಭಗಳನ್ನೂ ಅಲ್ಲಿ ವಿಧಿ ಅಥವಾ ಜಗತ್ತನ್ನು ಆಳುತ್ತಿರುವ ವಿರಾಣ್ ಮನದ ಸಂಕಲ್ಪವನ್ನು ಕುರಿತು ವಿವಿಧ ಪಾತ್ರಗಳು ತೋರುವ ಪ್ರತಿಕ್ರಿಯೆಗಳನ್ನೂ ಗಮನಿಸಿದರೆ ಹೀಗೆ ಅನ್ನಿಸುತ್ತದೆ: ನಮಗೆ ಗೊತ್ತಿರಲಿ ಬಿಡಲಿ ಈ ಜಗತ್ತಿನ ಸಮಸ್ತವನ್ನೂ ನಿರ್ಣಯಿಸುವ ಒಂದು ವಿರಾಟ್ ಸಂಕಲ್ಪ ಅಥವಾ ವಿಧಿ ಎನ್ನುವುದಿದೆ. ವಶಿಷ್ಠ, ಅತ್ರಿ, ಅನಸೂಯೆ ಇಂಥ ತ್ರಿಕಾಲಜ್ಞಾನಿಗಳು ಅದರ ವಿನ್ಯಾಸವನ್ನು ಬಲ್ಲರು; ಆದರೆ ಅವರು ಅದರ ಕಾರ್ಯವನ್ನು ತಡೆಯಲಾರರು ಮತ್ತು ಹಾಗೆ  ತಡೆಯುವ ಯಾವ ಪ್ರಯತ್ನವೂ ಋತವಿರುದ್ಧ ಎನ್ನುವುದನ್ನು ಬಲ್ಲರು. ಮತ್ತು ಅದನ್ನು ಎದುರಿಸಲಗತ್ಯವಾದ ಧೈರ್ಯದ ಮಾತುಗಳನ್ನು ಹೇಳಬಲ್ಲರು ಅಥವಾ ತಪಸ್ ಶಕ್ತಿಯ ರಕ್ಷಾಕವಚವನ್ನು ವ್ಯಕ್ತಿಗಳಿಗೆ ನೀಡಬಲ್ಲರು. ಶ್ರೀರಾಮನಂಥವನು ತನ್ನ ಧೀರವ್ಯಕ್ತಿತ್ವದಿಂದ ವಿಧಿಯ ವಿನ್ಯಾಸ ಶಿವಾಭಿಮುಖವಾದುದೆಂಬುದನ್ನು ತನ್ನ ಪ್ರಜ್ಞೆಯಿಂದ ಗುರುತಿಸಬಲ್ಲನು. ಮಹಾಪಾರ್ಶ್ವನಂಥ ಶಕ್ತಿಸಾಧಕ ‘ಬಹುಪಥಗಳ್ ವಿಧಿಗೆ ತನ್ನ ಕಾರ್ಯಸಾಧನೆಗೆ’– ಎನ್ನುವುದನ್ನು ಒಂದು ಕಾಣ್ಕೆಯೆಂಬಂತೆ ಘೋಷಿಸಬಲ್ಲನು. ಹಾಗೆಂದರೆ ರಾಮಾಯಣ ದರ್ಶನದ ಪಾತ್ರಗಳೆಲ್ಲ ವಿಶ್ವಸಂಕಲ್ಪದ ಕೀಲುಕೊಟ್ಟ ಗೊಂಬೆಗಳು, ಅವುಗಳಿಗೆ ಸ್ವಇಚ್ಛೆ ಯೆಂಬುದೇನೂ ಇಲ್ಲವೆಂದು ಈ ಎಲ್ಲ ಮಾತುಗಳ ಅರ್ಥವಲ್ಲ. ಮಂಥರೆ-ದಶರಥ- ಕೈಕೆ-ರಾವಣ ಇಂಥವರು ವಿಧಿವಶರಾಗಿ ನಡೆದುಕೊಂಡರೂ, ಅವರು ತಮ್ಮ ವಾಸ್ತವಸ್ಥಿತಿಯನ್ನು ಮೀರಲು ಅಥವಾ ಬದಲಾಯಿಸಲು ಪಟ್ಟಪಾಡುಗಳು ನಡೆಯಿಸಿದ ಹೋರಾಟಗಳೂ ಆಯಾ ಪಾತ್ರಗಳಿಗಿದ್ದ ‘ಇಚ್ಛೆಯಾ ಸ್ವಾತಂತ್ರ ಭಾವ’ದ ಸಂಕೇತಗಳಾಗಿವೆ. ವಿಧಿಯ ವಿನ್ಯಾಸವನ್ನು ಒಪ್ಪಿಕೊಂಡ ಶ್ರೀರಾಮನೂ ಹಾಗೂ ಸೀತೆಯೂ ತಮ್ಮ ತಮ್ಮ ಮಾನುಷ್ಯದ ನೆಲೆಗಳಲ್ಲಿ ಅನುಭವಿಸಿದ ಸಂಕಟಗಳು, ಎದುರಿಸಬೇಕಾಗಿ ಬಂದ ಸಂದಿಗ್ಧಗಳೂ ಏನು ಕಡಮೆಯೆ?

ಆದರೆ ಪೂರ್ಣದೃಷ್ಟಿಗೆ ಗೋಚರವಾಗುವ ನಿತ್ಯಸತ್ಯವೇ ಬೇರೆ. ಅದನ್ನು ಕುವೆಂಪು ಸುರ ಮುಖ್ಯನಾದ ಇಂದ್ರನಿಗೆ ಬ್ರಹ್ಮನು ಹೇಳುವ ಮಾತಿನಲ್ಲಿ ಹೀಗೆ ಸೂಚಿಸಿದ್ದಾರೆ:

ನಡೆವುದನಿತುಂ ನಡೆಯಬೇಕಾದುದೆ
ವಲಂ…… ಪರಮಪ್ರಯೋಜನಂ
ಪೂರ್ಣಚಿದ್ ಗೋಚರಂ
(ಶ್ರೀ ರಾ.ದ. ಶ್ರೀಸಂಪುಟ ಸಂ.೧. ಪಂ. ೨೬೬-೨೬೮ ಪು.೭೫೭)

ಕುವೆಂಪು ಶ್ರೀರಾಮಾಯಣದರ್ಶನಂ ಮಹಾಕಾವ್ಯವನ್ನು ಬರೆದಿರುವುದು ಇಂಥ ಪೂರ್ಣದೃಷ್ಟಿಯ ನಿಲುವಿನಲ್ಲಿಯೇ. ಆ ನಿಲುವಿಗೆ

…..ರಾಮನ ಕಿರೀಟದಾ
ರನ್ನವಣಿಯೋಲೆ ರಮ್ಯಂ, ಪಂಚವಟಿಯೊಳ್
ದಿನೇಶೋದಯದ ಶಾದ್ವಲದ ಪಸುರ್ ಗರುಕೆಯೊಳ್
ತೃಣ ಸುಂದರಿಯ ಮೂಗುತಿಯ ಮುತ್ತುಪನಿಯಂತೆ
ಮಿರುಮಿರುಗಿ ಮೆರೆವ ಹಿಮಬಿಂದುವುಂ.
(ಶ್ರೀ ರಾ.ದ. ಅಯೋಧ್ಯಾ ಸಂಪುಟ. ಸಂ.೧. ಪಂ. ೧೧೧-೧೧೫ ಪು.೭)

‘ರಾಮನ ಕಿರೀಟದಲ್ಲಿ ಥಳಥಳಿಸುವ ರತ್ನದ ಮಣಿ ಎಷ್ಟು ರಮ್ಯವಾದದ್ದೋ, ಪಂಚವಟಿಯಲ್ಲಿ ಸೂರ್ಯೋದಯದ ಸಂದರ್ಭದಲ್ಲಿ, ಹಸಿರು ಹುಲ್ಲಿನ ಎಸಳಿನ ಮೇಲೆ-ತೃಣ ಸುಂದರಿಯ ಮೂಗುತಿಯ ಮುತ್ತಿನ ಹನಿಯಂತೆ-ಮಿರುಮಿರುಗಿ ಮಿನುಗುವ ಇಬ್ಬನಿಯೂ ಅಷ್ಟೇ ರಮ್ಯವಾದದ್ದು.’

ಈ ಸಮದರ್ಶನವೆ ಶ್ರೀರಾಮಾಯಣದರ್ಶನಂ ಮಹಾಕಾವ್ಯವನ್ನು ನಿರ್ವಹಿಸಿದ ಪ್ರತಿಭೆಯ ಲಕ್ಷಣವಾಗಿದೆ. ಅವರ ಮಾತಿನಲ್ಲೆ ಹೇಳುವುದಾದರೆ: ‘ಅದು ಯುಗ ಚೈತನ್ಯದ ಸಮಷ್ಟಿಪ್ರಜ್ಞೆಯ ಸೃಷ್ಟಿ. ಅದು ಶ್ರೀರಾಮಾಯಣದ ಅತ್ಯಂತ ಆಧುನಿಕ ಅವತಾರ; ಅದು ವೈದಿಕ ಸಂಪ್ರದಾಯದ ವಾಲ್ಮೀಕಿ ರಾಮಾಯಣಕ್ಕೆ ಋಣಿಯಾಗಿರುವಂತೆ, ಜೈನ ಸಂಪ್ರದಾಯದ ರಾಮಾಯಣಗಳಿಗೂ ಋಣಿಯಾಗಿದೆ. ವ್ಯಾಸ, ವಾಲ್ಮೀಕಿ, ಪಂಪ, ನಾಗಚಂದ್ರಾದಿಗಳಿಗೆಂತೊ ಅಂತೆಯೆ ಹೋಮರ್, ವರ್ಜಿಲ್, ಡಾಂಟೆ, ಮಿಲ್ಟನ್ನರಿಗೂ ಋಣಿಯಾಗಿದೆ. ಅಲ್ಲಿ  ಶ್ರೀರಾಮಕೃಷ್ಣ ವಿವೇಕಾನಂದರ ಸಮನ್ವಯ ದರ್ಶನವನ್ನೆಂತೊ ಅಂತೆಯೆ, ಗಾಂಧೀಜಿ- ವಿನೋಬಾಜಿಯವರಿಂದ ಪ್ರಣೀತವಾದ ಸರ್ವೋದಯ ಭಾವನೆಯನ್ನೂ, ಪಾಶ್ಚಾತ್ಯ ವಿಜ್ಞಾನದ ವಿಕಾಸವಾದವನ್ನೆಂತೊ ಅಂತೆ ಶ್ರೀ ಅರವಿಂದ ಪ್ರಣೀತವಾದ ಪೂರ್ಣಯೋಗ ದರ್ಶನವನ್ನೂ ಸಂದರ್ಶಿಸಬಹುದು. ಸಮನ್ವಯ, ಸರ್ವೋದಯ ಮತ್ತು ಪೂರ್ಣದೃಷ್ಟಿ–ಇವುಗಳೆ ಶ್ರೀರಾಮಾಯಣದರ್ಶನದ ತ್ರಿನೇತ್ರಗಳಾಗಿವೆ. (ಸ.ಗ. ಸಂ.೨ ಪು.೩೮೩-೩೮೪)

 


[1] ‘ಅಲ್ಲಿ ಬರುವ ಕುದುರೆ, ಅದು Sex Elementನ (ಅಥವಾ Energyಯ) ಪ್ರತಿಮೆ. ಇದನ್ನು ಗುರುತಿಸಿ ಇನ್ನೂ ಯಾರೂ ಬರೆದಂತಿಲ್ಲ’ ಎನ್ನುತ್ತಾರೆ ಕುವೆಂಪು (೧೭-೧೦-೧೯೭೦) ಸಂದರ್ಶನವೊಂದರಲ್ಲಿ: (ಸ.ಗ. ಸಂ.೨., ಪು.೧೦೧೭)

[2] ನೋಡಿ: Master pieces of Indian Literature Ed. K.M. George. Pub. National Book Trust. India (1997) pp. 705-708; 1065-1066.

[3] ವಾಸ್ತವವಾಗಿ ವೆಂಕಣ್ಣಯ್ಯನವರು ಪ್ರಸ್ತಾಪಿಸುವ ಬಂಗಾಳಿಭಾಷೆಯ ‘ಪ್ರಾಚೀನ ಸಾಹಿತ್ಯ’ ಪ್ರಕಟವಾದದ್ದು ೧೯೦೭ರಲ್ಲಿ ಮತ್ತು ‘ಕಾವ್ಯದ ಅನಾದರ’ ಎಂಬ ಕನ್ನಡ ಅನುವಾದದ ಮೂಲ ಬಂಗಾಳಿ ಲೇಖನದ ಶೀರ್ಷಿಕೆ ‘ಕಾವ್ಯೇರ್ ಉಪೇಕ್ಷಿತಾ’.

[4] ‘ಊರ‍್ಮಿಳಾ’ ಎಂಬ ಸಂಚಿಕೆಯನ್ನು ಬರೆದು ಮುಗಿಸಿದ್ದು ೧೩-೯-೧೯೩೬ ಎಂದು ಸ್ವಹಸ್ತಾಕ್ಷರದ ‘ಶ್ರೀರಾಮಾಯಣದರ್ಶನಂ’ (೧೯೯೭)ದಲ್ಲಿ, ಕುವೆಂಪು ದಾಖಲಿಸಿದ್ದಾರೆ (ಪು.೧೩೭) ಹಾಗೆಯೇ ‘ಊರ‍್ಮಿಳಾದೇವಿ’ ಎಂಬ ಸಾನೆಟ್ಟನ್ನೂ ಅದೇದಿನ–೧೩-೯-೧೯೩೬–ಬರೆದದ್ದಾಗಿ, ‘ಕೃತ್ತಿಕೆ’ ಕವನ ಸಂಗ್ರಹದಲ್ಲಿ ಕಾಣಿಸಲಾಗಿದೆ.

[5] ‘ಶ್ರೀರಾಮನಾಲೋಕದಿಂದವತರಿಸಿ ಬಂದು
ಈಲೋಕ ಸಂಭವೆಯನೆಮ್ಮ ಭೂಜಾತೆಯಂ
ಸೀತೆಯಂ ವರಿಸುತಾಕೆಯ ನೆವದಿ ಮೃಚ್ಛಕ್ತಿಯಂ
ಮರ್ದಿಸುತೆ, ಸಂವರ್ಧಿಪೋಲ್ ಚಿಚ್ಛಕ್ತಿಯಂ
ರಾವಣಾವಿದ್ಯೆಯೀ ನಮ್ಮ ಮರ್ತ್ಯ ಪ್ರಜ್ಞೆ ತಾಂ
ತನ್ನ ತಮದಿಂ ಮುಕ್ತಮಪ್ಪುದು ದಿಟಂ….
(ಶ್ರೀರಾ.ದ. ಪು.xvi. ಪಂ.೩೮-೪೩)

ಅಷ್ಟೇ ಅಲ್ಲ

‘ಒಂದು ಮಹಾಶಕ್ತಿಯು ಅನ್ನಮಯ ಪ್ರಪಂಚದಿಂದ
ಆನಂದಮಯ ಪ್ರಪಂಚಕ್ಕೇರಿದ ಆತ್ಮದ ಪ್ರಯಾಣದ ಕಥೆ’
(ಸ.ಗ. ಸಂ.೨. ಪು.೧೧೨೦)

‘ನನ್ನ ಕೃತಿ ಕೇವಲ ನನ್ನ ಸೃಷ್ಟಿ ಅಲ್ಲ, ಭಗವಂತನ ಅವತಾರ’
(ಸ.ಗ. ಸಂ.೨. ಪು. ೧೧೨೪)

[6] ………ಪಾಪಿಗುದ್ಧಾರಮಿಹುದೌ
ಸೃಷ್ಟಿಯ ಮಹದ್‌ವ್ಯೂಹರಚನೆಯೊಳ್
(ಶ್ರೀರಾ.ದ. ಅಯೋಧ್ಯಾ ಸಂಪುಟಂ. ಸಂ.೫. ಪಂ.೩೦೩-೩೦೪. ಪು.೧೧೩

[7] ಶ್ರೀರಾಮಾಯಣದರ್ಶನಂ: (ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟನೆ-೨೦೦೦)
ಪುಟ. ೧೬, ೨೪, ೩೭, ೬೦, ೬೧, ೭೪, ೭೫, ೭೮, ೭೯, ೮೩, ೮೫, ೮೬, ೮೭, ೧೧೩, ೧೧೯, ೧೭೨, ೧೭೪, ೧೮೦, ೩೧೭, ೩೧೮, ೩೧೯, ೩೩೦, ೩೩೩, ೪೬೭, ೬೬೨, ೬೯೯, ೭೫೨, ೮೫೦.