ಅನುಬಂಧ

ಶ್ರೀರಾಮಾಯಣದರ್ಶನಂ ಹಸ್ತಪ್ರತಿ

ಕುವೆಂಪು ರಾಮಾಯಣದರ್ಶನಂ ಮಹಾಕಾವ್ಯ, ಅದು ೧೯೪೯-೫೦ರ ಕಾಲದಲ್ಲಿ ಪ್ರಕಟವಾದಂದಿನಿಂದ ಈವರೆಗೆ ಬಹುಸಂಖ್ಯೆಯ ಮುದ್ರಣಗಳನ್ನು ಕಂಡಿದೆ. ಮೈಸೂರಿನ ಕನ್ನಡ ಅಧ್ಯಯನ ಸಂಸ್ಥೆ ಮತ್ತು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಹಾಗೂ ಇತ್ತೀಚೆಗೆ ಕನ್ನಡ ಪುಸ್ತಕ ಪ್ರಾಧಿಕಾರ–ಈ ಕೃತಿಯ ಸುಲಭ ಬೆಲೆಯ ಆವೃತ್ತಿಗಳನ್ನು ಅಧಿಕ ಸಂಖ್ಯೆಯಲ್ಲಿ ಮುದ್ರಿಸಿದ ಕಾರಣದಿಂದ ಈ ಕೃತಿ ಸಹಸ್ರಾರು ಸಾಹಿತ್ಯಾಸಕ್ತರ ಕೈ ಸೇರಿದೆ.

೧೯೯೭ರಲ್ಲಿ ಕನ್ನಡ ಸಂಸ್ಕೃತಿ ನಿರ್ದೇಶನಾಲಯವು ಈ ರಾಮಾಯಣದರ್ಶನಂ ಕೃತಿಯ ಹಸ್ತಪ್ರತಿಯನ್ನು ಪ್ರಕಟಿಸಿದೆ. ಇದು ಕುವೆಂಪು ಹಸ್ತಾಕ್ಷರದ–ಕಂಪ್ಯೂಟರಿನ ಸಹಾಯದಿಂದ ಸಿದ್ಧಪಡಿಸಿದ–ಮೂಲದ ಯಥಾಪ್ರತಿ. ಒಂದು ಸಾವಿರದ ಆರುನೂರು ಪುಟಗಳಷ್ಟು ವ್ಯಾಪಕವಾಗಿರುವ, ಕುವೆಂಪು ಹಸ್ತಾಕ್ಷರದ ಪ್ರತಿಕೃತಿಯಾಗಿರುವ ಈ ಮಹಾ ಸಂಪುಟವನ್ನು, ಶ್ರೀ ಪೂರ್ಣಚಂದ್ರ ತೇಜಸ್ವಿ, ಪ್ರೊ. ಜಿ.ಎಚ್. ನಾಯಕ ಮತ್ತು ಶ್ರೀ ಬಿ.ಎನ್. ಶ್ರೀರಾಮ ಇವರು ಸಂಪಾದಕರಾಗಿ ಸಿದ್ಧಪಡಿಸಿದ್ದಾರೆ.

ಈಗ ನಾವಿರುವುದು ಕವಿಯ ಹಸ್ತಾಕ್ಷರ ಯುಗದ ಅಂತ್ಯಕಾಲದಲ್ಲಿ. ನಮ್ಮ ಪ್ರಾಚೀನ ಕವಿ ಕೃತಿಗಳೆಲ್ಲ ಬಹುತೇಕ ತಾಳೆಗರಿಗಳಲ್ಲಿ ಲಿಖಿತವಾಗಿವೆ. ಆದರೆ ಅವು ಯಾವುವನ್ನೂ ಆಯಾ ಕವಿಯ ಹಸ್ತಾಕ್ಷರಗಳೆಂದು ಹೇಳಲುಬರುವುದಿಲ್ಲ. ಒಬ್ಬ ಕವಿ ಬರೆದ ಹಸ್ತಾಕ್ಷರ ಕೃತಿ ಅನೇಕ ಲಿಪಿಕಾರರಿಂದ ಪ್ರತಿಮಾಡಿಸಲ್ಪಟ್ಟು, ತಲೆಯಿಂದ ತಲೆಗೆ ಬರುವ ಸಂದರ್ಭದಲ್ಲಿ ಕವಿಯೇ ಸ್ವಹಸ್ತದಿಂದ ಬರೆದ ಪ್ರತಿ ಯಾವುದೆಂಬುದನ್ನು ಪತ್ತೆ ಹಚ್ಚುವುದು ದುಸ್ತರವಾದ ಸಂಗತಿಯಾಗಿದೆ. ಹೀಗಾಗಿ ಪಂಪ, ರನ್ನ, ಕುಮಾರವ್ಯಾಸಾದಿಗಳ ಸ್ವಹಸ್ತಾಕ್ಷರಗಳು ಹೇಗಿದ್ದವೋ ತಿಳಿಯದು. ಸದ್ಯಕ್ಕೆ ಹದಿನೇಳು ಹದಿನೆಂಟನೆಯ ಶತಮಾನದ ಕವಿಯಾದ ಚಂದ್ರಸಾಗರವರ್ಣಿಯ ಹಸ್ತಪ್ರತಿಯಷ್ಟೆ ನಿಜವಾದ ಹಸ್ತಪ್ರತಿ ಎಂದು ವಿದ್ವಾಂಸರು ಹೇಳುತ್ತಾರೆ. ಬೆಳುಗೊಳದ ಬೆಟ್ಟದ ಬಂಡೆಯ ಮೇಲಿರುವ ‘ಶ್ರೀಕವಿರತ್ನ’ ಅನ್ನುವುದು ರನ್ನನ ಹಸ್ತಾಕ್ಷರ ಎಂದು ನಂಬಿಕೊಂಡು ಬರಲಾಗಿದೆ. ತಾಳೆಯೋಲೆ-ಭೂರ್ಜಪತ್ರ ತಾಮ್ರಪಟ ಮೊದಲಾದವುಗಳ ಮೇಲೆ ಕಂಟದಿಂದ ಬರೆಯಬೇಕಾಗಿದ್ದಂಥ ಅಥವಾ ಕೊರೆಯ ಬೇಕಾಗಿದ್ದಂಥ-ಕೊರವಣಿಗೆಯ ಕಾಲಮುಗಿದು ಕಾಗದದ ಮೇಲೆ ಲೇಖನಿಯಿಂದ ಬರೆಯಬಹುದಾದಂಥ ಕಾಲದ ಕವಿಕೃತಿಗಳನ್ನು–ಅವು ಮುದ್ರಣ ರೂಪದಲ್ಲಿ ಹೊರಬರುವ ಸೌಲಭ್ಯದ ಕಾಲಗಳಲ್ಲಿಯೂ–ಸಂರಕ್ಷಿಸಿ ಇಡುವುದು, ಕವಿಯ ವಿಚಾರದಲ್ಲಿರುವ ಅಭಿಮಾನದ ಮತ್ತು ಒಂದು ಸಮಾಜಕ್ಕೆ ಇರುವ ಸಾಂಸ್ಕೃತಿಕ ಜವಾಬ್ದಾರಿಯೆಂದು ಭಾವಿಸಿದ ಕಾರಣದಿಂದ ಅನೇಕ ದೇಶಗಳ ಗ್ರಂಥಾಲಯ ಹಾಗೂ ವಸ್ತುಸಂಗ್ರಹಾಲಯಗಳಲ್ಲಿ ಇಂದಿಗೂ ಅನೇಕ ಮಹತ್ವದ ಕವಿಗಳ ಹಸ್ತಪ್ರತಿಗಳು ಸುರಕ್ಷಿತವಾಗಿವೆ. ಕನ್ನಡದ ಒಂದು ನಿದರ್ಶನವನ್ನು ಕೊಡುವುದಾದರೆ ಕವಿ ಮುದ್ದಣನ ಹಸ್ತಪ್ರತಿಯ–ಆತನ ಕೈ ಬರೆಹದ ಸೊಗಸಾದ ಪ್ರತಿಯೊಂದು, ಕಳೆದ ಶತಮಾನದ ಏಳನೆಯ ದಶಕದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗವನ್ನು ಸೇರಿ ಸುರಕ್ಷಿತವಾಗಿದೆ. ಯಾವಾಗ ಲೇಖಕರು ತಮ್ಮ ಬರವಣಿಗೆಗೆ ಬೆರಳಚ್ಚು ಯಂತ್ರಗಳನ್ನು ಬಳಸತೊಡಗಿದರೋ ಮತ್ತೆ ಈಚೆಗೆ ಹೆಚ್ಚು ಹೆಚ್ಚಾಗಿ ಕಂಪ್ಯೂಟರ್ ಅನ್ನು ಬಳಸಲು ತೊಡಗಿದ್ದಾರೆಯೋ, ಈ ಕಾಲಮಾನದಲ್ಲಿ ಹಸ್ತಪ್ರತಿಯ ಬಗ್ಗೆ ಈವರೆಗೂ ಇದ್ದ ಭಾವುಕವಾದ ಸಂಬಂಧಗಳೂ ಕಳಚಿಬಿದ್ದಿವೆಯೆಂದೇ ಹೇಳಬೇಕು. ಹೀಗಾಗಿ ನಾವೀಗ ಕವಿಯ ಹಸ್ತಾಕ್ಷರ ಯುಗದ ಅಂತ್ಯದಲ್ಲಿ ನಿಂತಿದ್ದೇವೆ ಎಂದೇ ಹೇಳಬೇಕಾಗಿದೆ.

ಈ ಹಿನ್ನೆಲೆಯಲ್ಲಿ ಕನ್ನಡ ಸಂಸ್ಕೃತಿ ನಿರ್ದೇಶನಾಲಯವು ಕುವೆಂಪು ಅವರ ಶ್ರೀರಾಮಾಯಣದರ್ಶನಂ ಮಹಾಕಾವ್ಯದ ಯಥಾಪ್ರತಿಯ ಮುದ್ರಣರೂಪವನ್ನು ಪ್ರಕಟಿಸಿದೆ. ವಿಲಿಯಂ ಬ್ಲೇಕ್‌ನ ಹಾಗೂ ಟಿ.ಎಸ್. ಇಲಿಯೆಟ್‌ನ ಕವಿತೆಗಳ ಹಸ್ತಪ್ರತಿಯ, ಯಥಾವತ್ತಾದ ಮುದ್ರಣರೂಪಗಳೂ ಬಂದಿವೆ–ಇಂಗ್ಲೆಂಡಿನಲ್ಲಿ. ಆದರೆ ಕವಿ ಕುವೆಂಪು ಅವರ ರಾಮಾಯಣ ದರ್ಶನಂ ಅನ್ನು ಹೀಗೆ ಯಥಾಪ್ರತಿಯಲ್ಲಿ ಸಂಗೋಪನ ಮಾಡುವ ಈ ಪ್ರಯತ್ನ ಭಾರತೀಯ ಸಾಹಿತ್ಯ ಸಂದರ್ಭದಲ್ಲಿಯೆ ಮೊದಲಿನದೆಂದು ಹೇಳಬಹುದು.

ಈಗ ಅವರ ಶ್ರೀರಾಮಾಯಣದರ್ಶನಂ ಮಹಾಕಾವ್ಯವೇ ಅದರ ಪೂರ್ಣರೂಪದಲ್ಲಿ ನಮಗೆ ಮುದ್ರಣ ರೂಪದಲ್ಲಿ ಲಭ್ಯವಾಗುತ್ತಿರುವಾಗ, ಅದೇ ರಾಮಾಯಣದರ್ಶನದ ಹಸ್ತಪ್ರತಿಯ ಯಥಾವತ್ತಾದ ಮುದ್ರಣದಿಂದ ಆಗುವ ಪ್ರಯೋಜನವೇನು? ಎಷ್ಟಾದರೂ ಇದು ಅವರ ಹಸ್ತಪ್ರತಿಯಂತೆಯೆ ಕುತೂಹಲದ ಹಾಗೂ ಗೌರವದಿಂದ ಸಂರಕ್ಷಿಸಲ್ಪಡಬೇಕಾದ ವಸ್ತುವಿನ ಪರಿಗಣನೆಗೆ ಸೇರಬಹುದಾದದ್ದು ತಾನೆ?

ಇದರ ‘ಪ್ರಯೋಜನ’ ಸೀಮಿತವಾದದ್ದಾದರೂ, ರಾಮಾಯಣದರ್ಶನಂ ಕೃತಿ ನಿರ್ಮಿತಿಯ ಬಗ್ಗೆ ಅನೇಕ ಹೊಸ ಸಂಗತಿಗಳನ್ನು ಇದು ತಿಳಿಸುತ್ತದೆ:

ಸ್ವಾರಸ್ಯದ ಸಂಗತಿಯೆಂದರೆ ಈ ಹಸ್ತಪ್ರತಿಯ ಉದ್ದಕ್ಕೂ ಅದು ಲಿಖಿತವಾದ ದಿನಾಂಕಗಳನ್ನು ಕಾಣಿಸಲಾಗಿದೆ. ಕುವೆಂಪು ತಮ್ಮ ಈ ಮಹಾಕಾವ್ಯವನ್ನು ಬರೆಯಬೇಕೆಂದು ಮನಸ್ಸು ಮಾಡಿದ್ದು ೨೭-೧-೧೯೩೬ರಂದು. ಆದರೆ ಯಾಕೋ ಏನೋ ಅದು ವಾಸ್ತವವಾಗಿ ಪ್ರಾರಂಭವಾದದ್ದು ಆರುದಿನಗಳ ನಂತರ, ಅಂದರೆ ೨-೨-೧೯೩೬ರಂದು. (ಪು.೧) ಅದು ಮುಕ್ತಾಯಗೊಂಡದ್ದು ೧೨-೧-೧೯೪೫ರಂದು ಶುಕ್ರವಾರ ಬೆಳಿಗ್ಗೆ ಹನ್ನೊಂದು ಗಂಟೆ ಹನ್ನೊಂದು ನಿಮಿಷಕ್ಕೆ (ಪು.೧೧೦೫)–ಅಂದರೆ ಇಡೀ ಕಾವ್ಯದ ನಿರ್ಮಿತಿ ತೆಗೆದುಕೊಂಡದ್ದು ಒಟ್ಟು ಒಂಬತ್ತು ವರ್ಷಗಳ ಕಾಲ.[1] ಈ ಕೃತಿ ರಚನೆಯ ಅಷ್ಟೂ ಕಾಲದಲ್ಲಿ ಬೆಂಗಳೂರು ಮತ್ತು ಮೈಸೂರಿನಲ್ಲಿ ಇದ್ದ ಬಗ್ಗೆ ದಿನಾಂಕಗಳಿವೆ.

ಅವರು ಈ ಕಾವ್ಯವನ್ನು ಪ್ರಾರಂಭಿಸಿದಾಗ ಅದರ ಶೀರ್ಷಿಕೆ ‘ಶ್ರೀರಾಮಾಯಣ’.  ಈ ಹಸ್ತಪ್ರತಿಯ ಮೊದಲ ಪುಟದಲ್ಲಿರುವ ಹೆಸರೂ ಇದೇ. ಆದರೆ ಅವರು ಈ ಕೃತಿಯನ್ನು ಮುಗಿಸುವ ಹೊತ್ತಿಗೆ ಅದು ‘ಶ್ರೀರಾಮಾಯಣದರ್ಶನಂ’ ಆಯಿತು. ಅವರೇ ಒಂದೆಡೆ ಸಂದರ್ಶನವೊಂದರಲ್ಲಿ ‘ಮೊದಮೊದಲು ಕಾವ್ಯ ಬರೆಯಬೇಕೆಂಬುದು ನನ್ನ ಗುರಿಯಾಗಿತ್ತೆ ಹೊರತು ದಾರ್ಶನಿಕ ಕಾವ್ಯರಚನೆ ನನ್ನ ಗುರಿಯಾಗಿರಲಿಲ್ಲ’ (ಸ.ಗ. ಸಂ.೨ ಪು.೧೦೮೭)– ಎಂದು ಹೇಳಿಕೊಂಡಿರುವುದನ್ನು ಇಲ್ಲಿ ನೆನೆಯಬಹುದು. ಅವರ ಕಾವ್ಯರಚನೆಗೆ ಅವರ ಅಧ್ಯಾತ್ಮಿಕ ಪ್ರವೃತ್ತಿ ಮೂಲ ಪ್ರಚೋದನೆಯಾದ ಕಾರಣ, ಅದು ಕೇವಲ ‘ರಾಮಾಯಣ’ ವಾಗದೆ, ವಿವಿಧ ದಾರ್ಶನಿಕ ಆಯಾಮಗಳನ್ನು ಪಡೆದುಕೊಂಡದ್ದು ಸಹಜವಾಗಿದೆ. ಅಷ್ಟೇ ಅಲ್ಲ ಈ ಕೃತಿ ರಚನೆಯಾದ ಮೇಲೆ, ಈ ಕಾವ್ಯದ ವಿವಿಧ ಸಂದರ್ಭಗಳನ್ನು ದರ್ಶನ ದೃಷ್ಟಿಯಿಂದ ಅರ್ಥಮಾಡಿಕೊಳ್ಳಲು ಸಹಾಯಕವಾಗುವಂಥ, ವ್ಯಾಖ್ಯಾನಗಳನ್ನು, ತಾತ್ವಿಕ ವಿಚಾರಗಳನ್ನು ಕುವೆಂಪು ಪ್ರತ್ಯೇಕವಾಗಿ ಬರೆದು ಅನಂತರ ಈ ಕಾವ್ಯ ಮುದ್ರಣಕ್ಕೆ ಹೋಗುವಾಗ ಸೇರಿಸಿದರೆಂಬುದನ್ನು ಈ ಹಸ್ತಪ್ರತಿ ಸಾಬೀತುಪಡಿಸುತ್ತದೆ. ಹೀಗೆ ಮೂಲ ಹಸ್ತಪ್ರತಿಯಲ್ಲಿ ಇಲ್ಲದ, ಆದರೆ ಮುದ್ರಿತ ಪ್ರತಿಯಲ್ಲಿ ಕಾವ್ಯದ ಒಂದು ಭಾಗವಾಗಿ ಸೇರಿಕೊಂಡಿರುವ ಇಂಥ ಭಾಗಗಳನ್ನು ಇದರ ಸಂಪಾಕರು, ಈ ಹಸ್ತಪ್ರತಿಯ ‘ಅನುಬಂಧ-೨’ ರಲ್ಲಿ ಕಾಣಿಸಿದ್ದಾರೆ. ಇಂಥ ಭಾಗಗಳು ಆರರಷ್ಟಿವೆ. ನಿದರ್ಶನಕ್ಕೆ ಒಂದೆರಡನ್ನು ಉಲ್ಲೇಖಿಸುವುದಾದರೆ: ಈ ಕೃತಿಯ ಮೊದಲಲ್ಲಿ ‘ಶ್ರೀ ವೆಂಕಣ್ಣಯ್ಯನವರಿಗೆ’ ಎಂಬ ಅರ್ಪಣೆಯ ಭಾಗ, ‘ಇದೊ ಮುಗಿಸಿ ತಂದಿಹೆನ್ ಈ ಬೃಹದ್‌ಗಾನಮಂ ನಿಮ್ಮ ಸಿರಿಯಡಿಗೊಪ್ಪಿಸಲ್ಕೆ, ಓ ಪ್ರಿಯ ಗುರುವೆ’ ಎಂದು ಪ್ರಾರಂಭವಾಗುತ್ತದೆ. ಆದರೆ ವಾಸ್ತವವಾಗಿ ಶ್ರೀರಾಮಾಯಣದರ್ಶನಂ, ಈ ಪಂಕ್ತಿಗಳನ್ನು ಬರೆಯುವಾಗ, ಇನ್ನೂ ಮುಗಿದಿರಲಿಲ್ಲ. ಕುವೆಂಪು ಅವರು ಬೆಂಗಳೂರಿನ ಸಾಹಿತ್ಯಪರಿಷತ್ತಿನಲ್ಲಿ ಮಾಡಿದ ಭಾಷಣದ ಸಂದರ್ಭದಲ್ಲಿ ಈ ವಿಷಯವನ್ನು ಹೀಗೆ ಪ್ರಸ್ತಾಪಿಸಿದ್ದಾರೆ: ‘ಶ್ರೀ ವೆಂಕಣ್ಣಯ್ಯನವರು ತೀರಿಕೊಂಡಾಗ ಇದನ್ನು ಅವರಿಗೆ ಅರ್ಪಿಸಿ ಈ ಸಾಲುಗಳನ್ನು ಬರೆದೆ: ‘ಇದೊ ಮುಗಿಸಿ ತಂದಿಹೆನ್….’ ಎಂದು ಬರೆದಿದ್ದರೂ ಆಗಿನ್ನೂ ಕಾವ್ಯ ಮುಗಿದಿರಲಿಲ್ಲ. ಮುಗಿದಾಗ ಉಪಯೋಗವಾಗಲಿ ಎಂದು ಬರೆದದ್ದು’ (ಸ.ಗ. ಸಂ.೨ ಪು.೫೪೮). ವೆಂಕಣ್ಣಯ್ಯನವರು ತೀರಿಕೊಂಡದ್ದು ೨೫.೨.೧೯೩೯ರಂದು. ಈ ಅರ್ಪಣೆಯ ಭಾಗವನ್ನು ಕುವೆಂಪು ಬರೆದದ್ದು ಅವರ ಹಸ್ತಪ್ರತಿಯಲ್ಲಿ ಕಾಣಿಸಿರುವಂತೆ, ವೆಂಕಣ್ಣಯ್ಯನವರು ತೀರಿಕೊಂಡ ಎಂಟು ತಿಂಗಳ ಅನಂತರ. (೯-೧೦-೩೯; ೧೨-೧೦-೩೯). ಈ ಹೊತ್ತಿಗೆ ಕುವೆಂಪು ಅವರ ಕೃತಿ ಇನ್ನೂ ಕಿಷ್ಕಿಂಧಾಕಾಂಡದ ಮೂರನೆಯ ಸಂಚಿಕೆ–‘ಶಬರಿಗಾದನು ಅತಿಥಿ ದಾಶರಥಿ’–ಎನ್ನುವಲ್ಲಿತ್ತು. ಶ್ರೀ ವೆಂಕಣ್ಣಯ್ಯನವರಿಗೆ–ಎನ್ನುವ ಅರ್ಪಣೆಯ ಭಾಗ ಈ ಕೃತಿ ಮುದ್ರಣಾಲಯಕ್ಕೆ ಹೋಗುವಾಗ ಸೇರಿಕೊಂಡದ್ದು. ಹೀಗೆಯೆ, ‘ಶಬರಿಗಾದನು ಅತಿಥಿ ದಾಶರಥಿ’ ಎಂಬ ಸಂಚಿಕೆಯ ಮುದ್ರಿತಪ್ರತಿಯಲ್ಲಿರುವ:

ಭಗವದಾಗಮನಮೇಂ
ಭಕ್ತನ ನಿರೀಕ್ಷಿಸಿದ ರೂಪದಿಂ ಬಂದಪುದೆ?
ಸುಖದವೋಲಾಶಿಸಲ್ ದುಃಖದೊಲ್ ಮೈದೋರಿ
ಭಕ್ತನನಿತಂ ಸುಲಿದು ನೈವೇದ್ಯಮಂ ಕೊಳದೆ
ಪೇಳ್ ಅಹಂಕಾರಮಂ ದಿವ್ಯಶೂನ್ಯತೆಗದ್ದುವೊಲ್
ಸಂಪೂರ್ಣತಾಸಿದ್ಧಿಯೊಲ್
(ಶ್ರೀರಾ.ದ. ಕಿಷ್ಕಿಂಧಾಸಂಪುಟಂ. ಸಂ.೩. ಪಂ.೧೬೪-೬೯, ಪು.೨೭೩)

ಈ ಪಂಕ್ತಿಗಳು ಹಸ್ತಪ್ರತಿಯಲ್ಲಿ ಇಲ್ಲ. ಇವು ಕುವೆಂಪು ತಮ್ಮ ಹಸ್ತಪ್ರತಿ ಮುದ್ರಣಕ್ಕೆ ಹೋಗುವ ಮೊದಲು, ಈ ಶಬರಿಯ ಪ್ರಸಂಗ ಬೇರೊಂದು ಅಧ್ಯಾತ್ಮಿಕ ಅರ್ಥವಂತಿಕೆಯನ್ನು ಕೊಡಲು ಬರೆದವುಗಳು. ಹೀಗೆಯೆ ‘ಕುಂಭಕರ್ಣನನ್ ಎಬ್ಬಿಸಿಮ್’ ಎಂಬ ಸಂಚಿಕೆಯ ಮೊದಲಿಗೆ ಸೇರಿಸಬೇಕೆಂದು ಮೂವತ್ತು ಪಂಕ್ತಿಗಳನ್ನು ಬೇರೊಂದೆಡೆ ಕುವೆಂಪು ಬರೆದಿಟ್ಟಿದ್ದರೆಂಬ ಸಂಗತಿಯನ್ನು ಸಂಪಾದಕರು ಸಿದ್ಧಪಡಿಸಿರುವ ಅನುಬಂಧದಲ್ಲಿ ಕಾಣಬಹುದು. ಸಂಪಾದಕರೇ ಪ್ರಸ್ತಾಪಿಸಿರುವಂತೆ ‘ಶ್ರೀರಾಮಾಯಣದರ್ಶನಂ ಮಹಾಕಾವ್ಯದ ಹಸ್ತಪ್ರತಿಯ ಪಠ್ಯವು ಮುದ್ರಣಲಿಪಿಯ ಆವೃತ್ತಿಗಳಲ್ಲಿ ತದ್ವತ್ತಾಗಿ ಇಲ್ಲ. ಕವಿಯ ಜೀವಿತಕಾಲದಲ್ಲಿಯೇ ಮುದ್ರಿತ ಆವೃತ್ತಿಗಳಲ್ಲಿಯೂ ಅಲ್ಲಲ್ಲಿ ತಿದ್ದುಪಡಿ ಪರಿಷ್ಕಾರಗಳು ಆಗಿವೆ.’ (ಅನುಬಂಧ-೨, ಪು.೪)

ಪ್ರತಿಯೊಂದು ಸಂಚಿಕೆಯನ್ನೂ ಅವರು ಮೊದಮೊದಲು ‘ಅದ್ರಿ’ ಎಂದು ಕರೆದವರು ಅನಂತರ ಇಂಗೋಲ್–ಎಂದು ಬದಲಾಯಿಸಿದಾರೆ. ಈಗ ಅಚ್ಚಾದ ಪ್ರತಿಗಳಲ್ಲಿ ಸಂಚಿಕೆಯೆಂದೇ ಇದೆ. ಗಮನಿಸಬೇಕಾದ ಇನ್ನೊಂದು ಸಂಗತಿಯೆಂದರೆ ಈ ಕೃತಿಯ ನಿರ್ಮಿತಿ ಮೈಸೂರಿನ ಉದಯರವಿ, ಬೆಂಗಳೂರಿನ ವಿಶ್ವೇಶ್ವರಪುರ ಮತ್ತು ಮಲ್ಲೇಶ್ವರದ ಅವರ ವಾಸದ ಮನೆಯಲ್ಲಿ ಮುಂದುವರಿದಿದ್ದನ್ನೂ ಯಾವ ಯಾವ ಸಂಚಿಕೆ ಯಾವ ಯಾವ ದಿನಾಂಕಗಳಲ್ಲಿ ಲಿಖಿತವಾಯಿತೆಂಬುದನ್ನೂ ನಿಖರವಾಗಿ ನಮೂದಿಸಿರುವ ಕ್ರಮ. ಜತೆಗೆ ಅಲ್ಲಲ್ಲಿ ಅಂದಂದಿನ ಘಟನೆಗಳನ್ನು ಕುರಿತು ದಾಖಲಿಸಿರುವುದು ಕುತೂಹಲದ ಸಂಗತಿಯಾಗಿದೆ. ೫-೨-೧೯೩೯ರಲ್ಲಿ, ಪ್ರಾರಂಭಿಸಿದ ‘ಅತ್ರಿಯಿಂದಗಸ್ತ್ಯಂಗೆ’ ಎಂಬ ಸಂಚಿಕೆಯಲ್ಲಿ ಒಂದೆಡೆ ೨೫-೨-೧೯೩೯ನೇ ದಿನಾಂಕ ಹಾಕಿ ‘ವೆಂಕಣ್ಣಯ್ಯನವರು ತೀರಿಹೋದರೇ!’ ಎಂದು ಮಾರ್ಜಿನ್‌ನಲ್ಲಿ ಬರೆದಿದ್ದಾರೆ. ‘ಓ ಲಕ್ಷ ಣಾ’ ಸಂಚಿಕೆಯ ಪ್ರಾರಂಭದಲ್ಲಿ ಒಂದೆಡೆ ೩-೯-೧೯೩೯ನೆ ದಿನಾಂಕವನ್ನು ನಮೂದಿಸಿ ‘ಯುದ್ಧ ಪ್ರಾರಂಭವಾದ ಸುದ್ದಿ’ ಎಂದು ಬರೆದಿದ್ದಾರೆ. ಪು. ೩೮೨ರಲ್ಲಿ ‘ಅಸಿಸ್ಟೆಂಟ್ ಪ್ರೊಫೆಸರ್ ಪಟ್ಟಕ್ಕೆ, ಬೆಂಗಳೂರು ೮-೧೧-೧೯೩೯’ ಎನ್ನುವ ಬರಹವಿದೆ. ಪು. ೪೮೦ರಲ್ಲಿ ‘೪-೮-೧೯೪೦ ಶ್ರೀಮನ್ ಮಹಾರಾಜ ಕೃಷ್ಣರಾಜ ಒಡೆಯರು ನಿನ್ನೆ ರಾತ್ರಿ ಒಂಬತ್ತು ಗಂಟೆಗೆ ವಿಧಿವಶರಾದರೆಂದು ಇವತ್ತು ಬೆಳಿಗ್ಗೆ ತಿಳಿಯಿತು’ ಎಂದು ಬರೆಯಲಾಗಿದೆ. ‘ಅಶ್ರುಗಂಗೋತ್ರಿ’–ಎಂಬ ಸಂಚಿಕೆಯ ಪ್ರಾರಂಭದಲ್ಲಿ ಮೇಲೆ ಸಣ್ಣಗೆ ಹೀಗೆ ಬರೆಯಲಾಗಿದೆ (ಪು.೬೩೫): ‘೧೩ + ೧ ಪಂಕ್ತಿಗಳನ್ನು ರಾತ್ರಿ ೩ ಗಂಟೆಯಲ್ಲಿ ರಚಿಸಿ, ಪ್ರಯತ್ನದಿಂದ ರಚನಾ ಪ್ರವಾಹವನ್ನು ನಿಲ್ಲಿಸಿ ನಿದ್ರಿಸಿದೆನು. ೨೩-೧೧-೧೯೪೧’. ೭೦೨ನೇ ಪುಟದ ತುದಿಗೆ ‘೧೪-೩-೧೯೪೨ ರಂಗೂನ್ ಜಪಾನರ ವಶವಾಗಿದೆ. ಇಲ್ಲೆಲ್ಲಾ ವಿಮಾನ ಧಾಳಿಯ ಭಯ’ ಎಂಬ ಬರೆಹವಿದೆ. ಪು.೭೧೯, ‘ತಾ. ೭-೪-೧೯೪೨ ಕೊಲಂಬೋಕ್ಕೆ ಬಾಂಬು ಬಿತ್ತು. ವಿಶಾಖಪಟ್ಟಣ ಕಾಕಿವಾಡಗಳಿಗೂ ಬಿತ್ತು. ಯುದ್ಧ ಇಲ್ಲಿಗೂ ಬಂತು’. ಪು. ೭೩೪ರಲ್ಲಿ ‘ಮೈಸೂರಿಗೆ ಶ್ರೀ ಕೃಷ್ಣಶಾಸ್ತ್ರಿಗಳ ೬ ತಿಂಗಳ ರಜಾಕಾಲದಲ್ಲಿ ಅವರ ಬದಲು ಪ್ರೊಫೆಸರ್ ಆಗಿ ಹೋಗಲು ಇವತ್ತೋ ನಾಳೆಯೋ ಆರ್ಡರ್ ನಿರೀಕ್ಷೆಯಿದೆ. ತಾ. ೨೫.೬.೧೯೪೨’ ಎಂದಿದೆ; ಅದರ ಮುಂದಿನ ಪುಟದಲ್ಲೇ ೮-೭-೪೨ ಬುಧವಾರ; ಮೊನ್ನೆ ಭಾನುವಾರ ಮೈಸೂರಿಗೆ ಬಂದೆ. ನಿನ್ನೆ ಮಂಗಳವಾರ ಕಾಲೇಜಿಗೆ ಹೋಗಿ ಕೆಲಸ ಪ್ರಾರಂಭಿಸಿದೆ’ (ಪು. ೭೩೫); ಮುಂದೆ ಮೂರು ಪುಟಗಳ ಅನಂತರ (ಪು.೭೩೮) ‘ನಮ್ಮ ಕಾಲೇಜು ಮುಚ್ಚಿದೆ. ಭರತ ಖಂಡದಲ್ಲಿ ಸತ್ಯಾಗ್ರಹ ಚಳುವಳಿ ಹಬ್ಬಿದೆ. ಗಾಂಧಿಜಿ ಮೊದಲಾದವರ ಸಾಮೂಹಿಕ ದಸ್ತಗಿರಿಯಿಂದ ಹಿಂಸೆ ತಲೆಹಾಕಿದೆ. ಬೆಂಗಳೂರಿನಲ್ಲಿಯೂ ಜನರು ಸತ್ತಿದ್ದಾರೆಂದು ವಾರ‍್ತೆ’ ೨೧-೮-೧೯೪೨. ಇದೇ ರೀತಿ ‘ಮುಷ್ಕರಕ್ಕಾಗಿ ಮುಚ್ಚಿದ ಕಾಲೇಜು ಬಾಗಿಲು ತೆರೆಯಿತು’ (ಪು ೭೪೫); ಶ್ರೀ ಕೆ.ಆರ್. ಶ್ರೀನಿವಾಸ ಅಯ್ಯಂಗಾರ್ ತೀರಿಹೋದರು’ (ಪು.೮೦೦), ‘ಸ್ವಭಾನು ಸಂವತ್ಸರದ ಆಷಾಡ ಬಹುಳ ಚತುರ್ದಶೀ ಮಂಗಳವಾರ ಮೂರು ಗಂಟೆ ಇಪ್ಪತ್ತೆ  ದು ನಿಮಿಷಕ್ಕೆ (ಹೊಸ ಕಾಲದ ಪ್ರಕಾರ) ಮಲ್ಲೇಶ್ವರದ ದಕ್ಷಿಣದ ಕೊನೆಯ ಬೀದಿಯ ೨೧೦೫ನೆ ಮನೆಯಲ್ಲಿ ಇಂದುಕಲಾ ಜನಿಸಿದಳು. ೨೧-೭-೧೯೪೩ (ಪು. ೮೨೩); ‘ನಿನ್ನೆ ವೆಂಕಟಪ್ಪ ಕಲಾ ಶಾಲೆಗೆ ಹೋಗಿದ್ದೆ, ಗಾಂಧಿ-ಜಿನ್ನಾ ಭೇಟಿಯಾಗಿದೆ. (ಪು. ೯೫೦)–ಎಂಬ ಈ ಉಲ್ಲೇಖಗಳಿವೆ.

ಶ್ರೀರಾಮಾಯಣದರ್ಶನಂ ಹಸ್ತಪ್ರತಿಯ ಮೇಲೆ ಸಾಂದರ್ಭಿಕವಾಗಿ ಕುವೆಂಪು, ಅಂದಂದಿನ ತಮ್ಮ ವೈಯಕ್ತಿಕ ಹಾಗೂ ಸಾರ್ವಜನಿಕ ಸಂಗತಿಗಳನ್ನು ಬರೆದದ್ದು ಯಾಕೆ ಎನ್ನುವುದು ತಿಳಿಯುವುದಿಲ್ಲ–ಈ ಬರೆಹಗಳು ಅವರು ಈ ಕೃತಿ ರಚನೆ ಮಾಡುತ್ತಿದ್ದ ಸಂದರ್ಭದ, ದೇಶೀಯ ಹಾಗೂ ಜಾಗತಿಕ ಘಟನೆಗಳನ್ನು ಸೂಚಿಸುತ್ತವೆ ಎಂಬುದು ನಿಜವಾದರೂ.

ಕುವೆಂಪು ಅವರ ‘ಸ್ವಹಸ್ತಾಕ್ಷರದ ಶ್ರೀರಾಮಾಯಣದರ್ಶನಂ’–ಮುದ್ರಿತ ಹಸ್ತಪ್ರತಿಯ ಒಂದು ವಿಶೇಷವೇನೆಂದರೆ: ಕುವೆಂಪು ಅವರ ಕೈ ಬರೆಹದ ಸೊಗಸು. ತಾ.೨.೨.೧೯೩೬ರಿಂದ, ಅಂದರೆ ಕೃತಿನಿರ್ಮಿತಿಗೆ ತೊಡಗಿದಂದಿನಿಂದ ೧೧-೭-೧೯೩೮ರವರೆಗಿನ, ಮೊದಲ ಎಂಟು ಸಂಚಿಕೆ (ಇಂಗೋಲ್)ಯವರೆಗೆ, ಹಸ್ತಪ್ರತಿಯಲ್ಲಿ ಸುಮಾರು ಇನ್ನೂರು ಪುಟಗಳಲ್ಲಿ ಅಲ್ಲಲ್ಲಿ ತಿದ್ದುಪಾಟುಗಳಿವೆ, ಹೊಡೆದು ಹಾಕಿದ ಭಾಗಗಳಿವೆ. ಆದರೆ ಅನಂತರದ ಎಂಟು ನೂರು ಪುಟಗಳ ಹಸ್ತಪ್ರತಿಯಲ್ಲಿ ಒಂದಿನಿತೂ ಸ್ಖಾಲಿತ್ಯವಿಲ್ಲದ, ಸೊಗಸಾದ ಹಾಗೂ ನಿರರ್ಗಳವಾದ ಕೈ ಬರೆಹವನ್ನು ನೋಡಿದರೆ, ಕುಮಾರವ್ಯಾಸನೆಂದಂತೆ ‘ಪದವಿಟ್ಟಳು ಪದೊಂದಗ್ಗಳಿಕೆ’ಗೆ ನಿದರ್ಶನವಾಗಿ, ‘ವರವಲ್ಲದೆಯೆ ಬರಲೊಲ್ಲದಾ ಚಿರಂತನ ಶ್ರೀ ಸ್ಫೂರ್ತಿಯುಂ’ ಎಂದು ಕುವೆಂಪು ಅವರೇ ಹೇಳಿಕೊಂಡ ಮಾತಿಗೊಂದು ಸಮರ್ಥನೆಯಾಗಿದೆ.

 


[1] ಶ್ರೀರಾಮಾಯಣದರ್ಶನಂ ನಿರ್ಮಿತಿಯಾದ ಅವಧಿ–ಪ್ರಾರಂಭದ ಹಾಗೂ ಮುಕ್ತಾಯದ ದಿನಾಂಕಗಳ ಲೆಕ್ಕದಲ್ಲಿ–ಒಂಬತ್ತು ವರ್ಷಗಳಾದರೂ ೧೩-೯-೧೯೩೬ರಿಂದ ೩೧-೧೨-೧೯೩೭ರವರೆಗೆ, ಸುಮಾರು ಒಂದು ವರ್ಷ ಮೂರು ತಿಂಗಳ ಕಾಲ ಇದರ ಬರವಣಿಗೆ ಸ್ಥಗಿತಗೊಂಡಿದೆ. ಆದರೆ ಬಹು ಸಂಖ್ಯೆಯ ಮುಖ್ಯವಾದ ಭಾವಗೀತೆಗಳನ್ನು ಬರೆದ ಉಲ್ಲೇಖವಿದೆ (ನೆ.ದೋ. ಪು.೮೬೯).