ರಾಮಯ್ಯ-ಚೆನ್ನಮ್ಮ ದಂಪತಿಗಳ ಸುಪುತ್ರರಾದ ಶ್ರೀರಾಮುಲು ಚಿನ್ನದ ಗಣಿಗಳ ಬೀಡಾದ ಕೋಲಾರದವರು. ತಂದೆ ರಾಮಯ್ಯ ನಾಗಸ್ವರ ವಾದಕರಾಗಿದ್ದರು. ಶ್ರೀರಾಮುಲು ಕೇವಲ ಒಂಭತ್ತು ವರ್ಷದ ಬಾಲಕನಾಗಿದ್ದಾಗಲೇ ಪಿತೃ ವಿಯೋಗವಾಯಿತು. ಕೋಲಾರದವರೇ ಆದ ರಾಮರಾಯರು ಮತ್ತು ಕೃಷ್ಣಮೂರ್ತಿಗಳ ಶಿಕ್ಷಣದಲ್ಲಿ ಶ್ರೀರಾಮುಲು ನಾಗಸ್ವರವನ್ನು ಅಭ್ಯಾಸ ಮಾಡಿದರು. ಮುಂದೆ ಕುಂಭಕೋಣಂ ಸ್ವಾಮಿ ಅಯ್ಯರ್ ಹಾಗೂ ಟಿ.ಆರ್. ಗಂಗಾಧರಂ ಅವರುಗಳಲ್ಲಿ ಪ್ರೌಢ ಶಿಕ್ಷಣ ಪಡೆದು ಪ್ರಬುದ್ಧರಾದರು.

ಗ್ರಾಮಾಂತರ ಪ್ರದೇಶದಲ್ಲಿ ಹುಟ್ಟಿ ಬೆಳೆದು, ಬಾಳುತ್ತಿರುವವರಾದರೂ ಶ್ರೀರಾಮುಲು ಅವರ ಪ್ರತಿಭೆ ನಾಡಿನಲ್ಲೂ , ನೆರೆಯ ನಾಡುಗಳಲ್ಲೂ ಪ್ರಸರಿಸಿದೆ. ಹಲವಾರು ಸಂಘ ಸಂಸ್ಥೆಗಳಿಂದಲೂ, ಉತ್ಸವ ಸಮಿತಿಗಳಿಂದಲೂ ಇವರ ವಾದನಕ್ಕೆ ಕರೆ ಬರುತ್ತಿರುತ್ತದೆ. ನೆರೆ ರಾಜ್ಯಗಳಿಂದಲೂ ಬರುವ  ವಿದ್ಯಾರ್ಥಿಗಳೂ ಸೇರಿದಂತೆ ನೂರಾರು ಮಂದಿ ಶಿಷ್ಯರು ಇವರ ಶಿಕ್ಷಣದ ಲಾಭ ಪಡೆದಿದ್ದಾರೆ ಹಾಗೂ ಪಡೆಯುತ್ತಿದ್ದಾರೆ.

ಇವರ ಸೇವೆಯನ್ನು ಗುರುತಿಸಿ ‘ಶೃತಿಲಯ ಜ್ಞಾನ’ ‘ವಿಶಾರದ’, ‘ಸವಿತಾ ಸಮಾಜ ಕರ್ನಾಟಕ’, ‘ನಾದ ಚಿಂತಾಮಣಿ’, ‘ಗಾನಕಲಾ ಪರಿಷತ್‌ ಚಿಂತಾಮಣಿ’, ‘ವಿಶ್ವೇಶ್ವರಯ್ಯ ಪ್ರಶಸ್ತಿ’, ‘ಕೈವಾರ ನಾರಾಯಣ ಪ್ರಶಸ್ತಿ’, ‘ಸ್ವರ ಸಿಂಧೂರ’ ಮುಂತಾಗಿ ಹಲವು ಸಂಸ್ಥೆಗಳು ಪುರಸ್ಕರಿಸಿವೆ. ಇದರೊಂದಿಗೆ ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ೨೦೦೫-೦೬ನೇ ಸಾಲಿನ ಪ್ರಶಸ್ತಿಯೂ ಇವರಿಗೆ ಲಭ್ಯವಾಗಿದೆ.