ಕೋಸಲ ದೇಶದ ರಾಜಧಾನಿ ಅಯೋಧ್ಯೆ. ಸೂರ್ಯವಂಶದ ಅರಸನಾದ ದಶರಥನು ಅಲ್ಲಿ ಆಳುತ್ತಿದ್ದನು. ವಿಶ್ವಾಮಿತ್ರ ಋಷಿಯು ಒಂದು ದಿನ ಒಂದು ಮುಖ್ಯವಾದ ಕೆಲಸದ ಸಾಧನೆಗಾಗಿ ಅರಸನಲ್ಲಿಗೆ ಬಂದನು. ದಶರಥ ಮಹಾರಾಜನು ಮುನಿಯನ್ನು ಆದರಿಸಿ, “ಪೂಜ್ಯರೇ, ನಿಮ್ಮ ಕೋರಿಕೆ ಏನಿದ್ದರೂ ನಡೆಸಿಕೊಡುತ್ತೇನೆ, ಹೇಳಿರಿ” ಎಂದನು.

“ಅರಸ, ಸಿದ್ಧಾಶ್ರಮದಲ್ಲಿ ನಾನು ಮಾಡಲಿರುವ ಯಾಗಕ್ಕೆ ರಾಕ್ಷಸರ ಹಾವಳಿಯುಂಟಾಗಿದೆ. ಆದ್ದರಿಂದ ನಿನ್ನ ಹಿರಿಯ ಮಗನನ್ನು ನನ್ನೊಡನೆ ಕಳುಹಿಸಿಕೊಡು” ಎಂದನು ವಿಶ್ವಾಮಿತ್ರ.

ಧೀರ ಕುಮಾರ

ಧಶರಥನಿಗೆ ಈಗ ಪೇಚಾಟಕ್ಕಿಟ್ಟುಕೊಂಡಿತು. ಬಹುಕಾಲ ಮಕ್ಕಳಿಲ್ಲದೆ, ಯಜ್ಞಯಾಗಗಳನ್ನು ಮಾಡಿದ ಮೇಲೆ ಆತನಿಗೆ ನಾಲ್ಕು ಮಂದಿ ಪುತ್ರರಾಗಿದ್ದರು. ಹಿರಿಯ ಮಗ ರಾಮ ಎಂದರಂತು ದಶರಥನಿಗೆ ಪಂಚಪ್ರಾಣ. ಅವನಾದರೂ ಎಳೆಯ, ಇನ್ನೂ ಹದಿನೈದು ವರ್ಷ ತುಂಬಿಲ್ಲ; ವೇದಶಾಸ್ತ್ರಗಳನ್ನು, ಓದನ್ನು ಮುಗಿಸಿ ಈಗೀಗ ಬಿಲ್ಲುವಿದ್ಯೆ ಕಲಿತವನು. ಅಂತಹವನನ್ನು ರಾಕ್ಷಸರ ಮೇಲೆ ಬಿಡುವುದೆ? ಆದರೆ ವಿಶ್ವಾಮಿತ್ರನಿಗೆ ಬದಲು ಹೇಳುವಂತಿಲ್ಲ. ಯಾರು ಎಷ್ಷೇ ಸಮಾಧಾನ ಹೇಳಿದರೂ ದಶರಥನಿಗೂ ದಿಕ್ಕು ತೋಚಲಿಲ್ಲ.

ಕೊನೆಗೆ ರಾಜಕುಮಾರನನ್ನೇ ಕರೆಸಿದರು. ವಿಷಯವನ್ನು ಕೇಳಿ ಆ ಧೀರ ಕುಮಾರನು ಭಯಪಟ್ಟನೆ? ತಂದೆಯ ಪಾದಗಳಿಗೆ ನಮಸ್ಕರಿಸಿ ಬಿಲ್ಲನ್ನು ಭುಜಕ್ಕೇರಿಸಿದ. “ಗುರುದೇವ, ಅಪ್ಪಾಜಿಯವರ ಆಶೀರ್ವಾದವಿದೆ. ನಿಮ್ಮ ಅನುಗ್ರಹವಿದೆ. ಇನ್ನು ಆ ರಾಕ್ಷಸರು ನಮಗೆ ಎಷ್ಟು ಮಾತ್ರದವರು? ನಡೆಯಿರಿ ಹೋಗೋಣ” ಎಂದು ತಮ್ಮನನ್ನೂ ಜೊತೆ ಮಾಡಿಕೊಂಡು ಮುನಿಯ ಹಿಂದೆ ನಡೆದೇಬಿಟ್ಟ!

ಎಂಥಹ ಧೀರ ವಾಣಿ! ಆ ಕುಮಾರನಿಗೆ ಹೊಳಪಿನ ಕಣ್ಣು, ನಗೆ ಮುಖ, ಬೆನ್ನು ಮುಟ್ಟುವ ಗುಂಗುರು ಕೂದಲು! ಭುಜಕ್ಕೆ ಬಿಲ್ಲು, ಬೆನ್ನಿಗೆ ಬತ್ತಳಿಕೆ, ಧೀರವಾದ ನಡೆ; ಅವನು ಧಶರಥನ ಮುದ್ದುಮಗ! ಅವನೇ ಲೋಕಪಾವನನಾದ ಶ್ರೀರಾಮಚಂದ್ರಮೂರ್ತಿ. ಅವನ ಹಿಂದೆ ಹೊರಟವನು ಆತನನ್ನು ಎಡೆಬಿಡದ ತಮ್ಮ ಲಕ್ಷ್ಮಣ.

ಧಶರಥನಿಗೆ ಮೂವರು ರಾಣಿಯರಿದ್ದರು. ಹಿರಿಯ ರಾಣಿಯಾದ ಕೌಸಲ್ಯೆಯ ಮಗನೇ ಶ್ರೀರಾಮ. ಕಿರಿಯ ರಾಣಿ ಕೈಕೇಯಿ, ಆಕೆಯ ಮಗ ಭರತ. ಮತ್ತೊಬ್ಬ ರಾಣಿಯಾದ ಸುಮಿತ್ರೆಗೆ ಇಬ್ಬರು ಪುತ್ರರು – ಲಕ್ಷ್ಮಣ ಮತ್ರು ಶತ್ರುಘ್ನ.

ವಿಶ್ವಾಮಿತ್ರನ ಹಿಂದೆ ಹೊರಟ. ರಾಮಲಕ್ಷ್ಮಣರು ಕಾಲನಡಿಗೆಯಲ್ಲೇ ಅರಣ್ಯಗಳಲ್ಲಿ ಸಾಗಿದರು. ಅನೇಕ ನದಿಗಳನ್ನೂ ತಪೋವನಗಳನ್ನೂ ಕಂಡರು. ಅವೆಲ್ಲಕ್ಕೂ ಸಂಬಂಧಿಸಿದ ವೃತ್ತಾಂತಗಳನ್ನೂ ಕಥೆಗಳನ್ನೂ ವಿಶ್ವಾಮಿತ್ರನು ವಿವರಿಸುತ್ತಿದ್ದನು. ಅಷ್ಟೇ ಅಲ್ಲದೆ ಅನೇಕ ಶಸ್ತ್ರಾಸ್ತ್ರ ಮಂತ್ರಗಳನ್ನೂ ಕಲಿಸಿದನು. ರಾಮನಿಗೆ ಸಂತೋಷವೋ ಸಂತೋಷ. ಅವರು ರಾತ್ರಿಗಳಲ್ಲಿ ನೆಲದ ಮೇಲೆಯೇ ಮಲಗಬೇಕಾಗುತ್ತಿತ್ತು. ಗೆಡ್ಡೆಗೆಣಸುಗಳನ್ನೇ ತಿನ್ನಬೇಕಾಗುತ್ತಿತ್ತು. ಇಷ್ಟಾದರೂ ಗುರುವಿನ ಪಾದಗಳನ್ನೊತ್ತುವಾಗ ಬೇಸರವೆಂಬುದೇ ಇಲ್ಲ. ಹೀಗೆ ಹೋಗುವ ಮಾರ್ಗದಲ್ಲೇ ರಾಮನು ತಾಟಕಿಯನ್ನು ಕೊಂದಿದ್ದು. ಅವಳು ವಿಕಾರ ಸ್ವರೂಪದ ಮುದಿ ರಕ್ಕಸಿ. ಸಿದ್ಧಾಶ್ರಮದ ಋಷಿಗಳಿಗೆ ಅವಳ ಹಿಂಸೆ ಪ್ರಬಲವಾಗಿತ್ತು. ಧೂಳೆಬ್ಬಿಸಿ ಕಲ್ಲುಗಳನ್ನು ತೂರುತ್ತಾ ಬಾಯಿ ತೆರೆದು ಬಂದ ಅವಳನ್ನು ರಾಮನು ಒಂದೇ ಬಾಣದಿಂದ ಹೊಡೆದು ಕೊಂದನು.

ವಿಶ್ವಾಮಿತ್ರನು ಋಷಿಗಳೊಡನೆ ಆರು ದಿನಗಳ ಯಾಗವನ್ನು ಮಾಡಿದನು. ರಾಮಲಕ್ಷ್ಮಣರು ಹಗಲೂ ರಾತ್ರಿ ಬಿಲ್ಲು ಹಿಡಿದು ನಿಂತಿದ್ದರು. ಕೊನೆಗೂ ತಾಟಕಿಯ ಮಕ್ಕಳಾದ ಸುಬಾಹು ಹಾಗೂ ಮಾರೀಚರು ಯಾಗವನ್ನು ಧ್ವಂಸ ಮಾಡಲೆಂದು ಬಂದರು. ರಾಮನು ಸಿದ್ಧವಾಗಿಯೇ ಇದ್ದ. ಅವನ ಬಾಣದಿಂದ ಸುಬಾಹು ಸತ್ತುಬಿದ್ದನು. ಮಾರೀಚನು ಮಾತ್ರ ಅಂತರಿಕ್ಷದಲ್ಲೇ ಪೆಟ್ಟುತಿಂದು ಸಮುದ್ರಕ್ಕೆ ಬಿದ್ದನು. ಬದುಕಿದೆಯಾ ಬಡಜೀವವೇ ಎಂದುಕೊಂಡು ಈಜಿ ದಡವನ್ನು ಸೇರಿದ ಅವನು ಮತ್ತೇ ಋಷಿಗಳ ತಂಟೆಗೆ ಬರಲಿಲ್ಲ.

ಸೀತೆಯನ್ನು ಮದುವೆಯಾದದ್ದು

ಆಗಲೇ ಜನಕ ಮಹಾರಾಜನು ದೊಡ್ಡ ಯಾಗವನ್ನು ಮಾಡುವನೆಂಬ ಸುದ್ದಿ ಎಲ್ಲೆಲ್ಲೋ ಹರಡಿತು. ಜನಕನು ಮಿಥಿಲೆಯ ರಾಜ. ಆತನ ಬಳಿ ಬಹಳ ಪುರಾತನವಾದ ಶಿವಧನುಸ್ಸು ಇತ್ತು. ಶಿವನು ಜನಕನ ಹಿರಿಯರಿಗೆ ಕೊಟ್ಟ ಬಿಲ್ಲಾದುದರಿಂದ ಆ ಹೆಸರು ಬಂದಿತ್ತು. ಶ್ರೀರಾಮನಿಗೆ ಆ ಬಿಲ್ಲನ್ನು ನೋಡಬೇಕೆಂದು ಕುತೂಹಲ. “ಪೂಜ್ಯರೇ, ನಾವು ಮಿಥಿಲಿಗೆ ಹೋಗೋಣ. ಯಜ್ಞವನ್ನು ನೋಡುವುದಲ್ಲದೆ ಆ ಬಿಲ್ಲನ್ನೂ ನೋಡಿದಂತಾಗುತ್ತದೆ” ಎಂದನು. ಸರಿ ಎಲ್ಲರೂ ಪ್ರಯಾಣ ಹೊರಟರು.

ಮಿಥಿಲೆಯೇನು ಹತ್ತಿರದ ನಗರವೆ? ಶೋಣ, ಭದ್ರಾನದಿ, ಗಂಗಾನದಿ, ವಿಶಾಲನಗರ ಮುಂತಾದವುಗಳನ್ನು ನೋಡಿಕೊಂಡು ವಿಶ್ವಾಮಿತ್ರನೊಡನೆ ರಾಮ ಲಕ್ಷ್ಮಣರು ಮಿಥಿಲೆಗೆ ತಲುಪಿದರು. ದಾರಿಯಲ್ಲಿ ಋಷಿ ಗೌತಮರ ಹೆಂಡತಿ ಅಹಲ್ಯೆ ಯಾವುದೋ ತಪ್ಪು ಮಾಡಿ ಶಾಪಕ್ಕೆ ಒಳಗಾಗಿದ್ದಳು. ಯಾರ ಕಣ್ಣಿಗೂ ಕಾಣದೆ ದುಃಖಪಡುತ್ತಿದ್ದಳು. ರಾಮನ ಸಾನಿಧ್ಯದಿಂದ ಅವಳ ಶಾಪ ಮುಗಿದು, ಮತ್ತೆ ಅವಳು ಸುಂದರಿಯೂ ಪವಿತ್ರಳೂ ತೇಜಸ್ವಿನಿಯೂ ಆದ ಋಷಿಪತ್ನಿಯಾದಳು.

ಜನಕನ ಯಜ್ಞಶಾಲೆ ತುಂಬಾ ವಿಶಾಲವಾಗಿತ್ತು. ಸಾವಿರಾರು ಮಂದಿ ಅಲ್ಲಿ ನೆರದಿದ್ದರು. ಜನಕ ಮಹಾರಾಜನು ವಿಶ್ವಾಮಿತ್ರನನ್ನು ಸತ್ಕರಿಸಿ, “ಋಷಿವರ್ಯ, ಇಂತಹ ಶಿಷ್ಯರನ್ನು ಪಡೆದ ನೀವು ಧನ್ಯರು. ಆಶ್ವಿನೀ ದೇವತೆಗಳಂತೆ ಮೆರೆಯುತ್ತಿರುವ ಈ ಕುಮಾರರು ಯಾರು?” ಎಂದನು. ವಿಶ್ವಾಮಿತ್ರನು ಎಲ್ಲವನ್ನೂ ವಿವರಿಸಿ, “ಅರಸ, ಇವರು ಧಶರಥನ ಮಕ್ಕಳು. ಶ್ರೀರಾಮನು ಶಿವಧನುಸ್ಸನ್ನು ನೋಡಬೇಕಂತೆ. ಅದನ್ನು ಇಲ್ಲಿಗೆ ತರಿಸು” ಎಂದನು.

ಯಜ್ಞವು ಮುಗಿದ ಮೇಲೆ ಬಿಲ್ಲನ್ನು ಅಲ್ಲಿಗೆ ತರಿಸಲಾಯಿತು. ತರಿಸುವುದೆಂದರೆ ಕೈಗಳಲ್ಲಿ ಹೊತ್ತು ತರಿಸಿದ್ದಲ್ಲ; ಅದು ಅಷ್ಟೊಂದು ಅಸಾಧಾರಣ ಬಿಲ್ಲು. ಅದನ್ನು ಚಕ್ರಗಳುಳ್ಳ ಪೆಟ್ಟಿಗೆಯಲ್ಲಿಡಲಾಗಿತ್ತು. ಹಲವಾರು ಸೈನಿಕರು ಒಟ್ಟಿಗೆ ಆ ಪೆಟ್ಟಿಗೆಯನ್ನೇ ನೂಕಿಕೊಂಡು ತಂದರು. ಜನಕರಾಜನು ಹೇಳಿದ: “ಮುನಿವರ್ಯ, ನನಗೆ ಸೀತೆಯೆಂಬ ಸುಂದರಿಯಾದ ಮಗಳಿದ್ದಾಳೆ. ಅವಳನ್ನು ಮದುವೆಯಾಗುವ ಆಸೆಯಿಂದ ಈವರೆಗೆ ಎಷ್ಟೋ ವೀರರು ಬಂದು ಹೋದರು. ಈ ಬಿಲ್ಲನ್ನು ಹೆದೆಯೇರಿಸಿ ಬಾಣ ಹೂಡುವ ವೀರನಿಗೆ ಸೀತೆಯನ್ನು ಮದುವೆ ಮಾಡಿಕೊಡುವುದಾಗಿ ನಾನು ಘೋಷಿಸಿದ್ದರಿಂದ ಯಾರಿಗೂ ಸಾಧ್ಯವಾಗಲಿಲ್ಲ. ಶ್ರೀರಾಮನೂ ಪ್ರಯತ್ನಿಸಲಿ.”

ಅಲ್ಲಿದ್ದ ಜನರಿಗೆ ಆ ಮಾತು ಕೇಳಿ ನಗೆ ಬಂದಿತು. ವೀರಾಧಿವೀರರಿಗೂ ಅಸಾಧ್ಯವಾದ ಬಿಲ್ಲನ್ನು ರಾಮನು ಎತ್ತಲಾರನೆಂದೇ ಅವರು  ಭಾವಿಸಿದ್ದರು. ಆದರೆ ವಿಶ್ವಾಮಿತ್ರನ ಕಣ್ಸನ್ನೆಯಾಗುತ್ತಲೇ ರಾಮನು ಬಿಲ್ಲಿನ ಬಳಿಗೆ ಬಂದನು. ಅವನು ಕೈಹಾಕುತ್ತಲೇ ಆ ಬಿಲ್ಲು ಬಿದಿರು ಕಡ್ಡಿಯಂತೆ ಚಕ್ಕನೆ ಎದ್ದುನಿಂತಿತು. ಅದಕ್ಕೆ ಹಗ್ಗವನ್ನು ಬಿಗಿಯಲೆಂದು ಬಿಲ್ಲಿನ ತುದಿ ಹಿಡಿದು ರಾಮನು ಬಲವಾಗಿ ಬಗ್ಗಿಸಿದನೋ ಇಲ್ಲವೋ ‘ಛಟಛಟ ಛಟಿಲ್ ‘ ಎಂದು ಕಿವಿ ಒಡೆಯುವಂತೆ ಶಬ್ಧ ಮಾಡುತ್ತಾ ಬಿಲ್ಲು ಅರ್ಧಕ್ಕೆ ಸರಿಯಾಗಿ ಮುರಿದುಬಿತ್ತು. ಸಭೆ ಬೆರಗಾಯಿತು. ಸುಂದರಿಯಾದ ಸೀತಾದೇವಿಯು ಹೂಮಾಲೆಯನ್ನು ತಂದು ಶ್ರೀರಾಮನ ಕೊರಳಿಗೆ ಹಾಕಿದಳು.

ಸೀತೆಗೂ ರಾಮನಿಗೂ ಮದುವೆಯಾಗುವ ಸುದ್ಧಿ ಬಂದೊಡನೆ ಅಯೋಧ್ಯೆಯಲ್ಲಿ ಸಂಭ್ರಮವೋ ಸಂಭ್ರಮ. ಧಶರಥ, ರಾಣಿಯರು, ರಾಜಪರಿವಾರ ಮಿಥಿಲೆಗೆ ಬಂದಿಳಿದರು. ಜನಕನು ಸೀತೆಯ ಕೈಯನ್ನು ರಾಮನ ಕೈಯಲ್ಲಿಟ್ಟು, “ಶ್ರೀರಾಮ, ಇವಳು ನಿನ್ನ ಧರ್ಮಪತ್ನಿ. ಇವಳನ್ನು ರಕ್ಷಿಸಕೊಂಡು ಸುಖವಾಗಿ ಬಾಳು” ಎಂದು ಹರಿಸಿದನು ರಾಮನ ಮದುವೆಯೊಂದೇ ಅಲ್ಲ, ತಂಮ್ಮಂದಿರದೂ ಆಗಲೇ ಮದುವೆಯಾಯಿತು. ಜನಕರಾಜನ ಮತ್ತೊಬ್ಬ ಮಗಳಾದ ಊರ್ಮಿಳೆಯೇ ಲಕ್ಷ್ಮಣನ ಹೆಂಡತಿ. ಭರತನ ಪತ್ನಿ ಮಾಂಡವಿ. ಶತ್ರುಘ್ನನ ಹೆಂಡತಿ ಶೃತಕೀರ್ತಿ. ಈ ಕೊನೆಯ ಇಬ್ಬರೂ ಜನಕರಾಜನ ತಮ್ಮನ ಪುತ್ರಿಯರು.

ಮದುವೆಯ ಕಾರ್ಯಗಳೆಲ್ಲಾ ಮುಗಿದು, ದಶರಥನು ಪರಿವಾರ ಮತ್ತು ಮಕ್ಕಳು-ಸೊಸೆಯರೊಡನೆ ಅಯೋಧ್ಯೆಗೆ ಹೊರಟನು. ದಾರಿಯಲ್ಲಿ ಶ್ರೀರಾಮನು ಪರಶುರಾಮನೆಂಬ ವೀರರನ್ನು ಎದುರಿಸಬೇಕಾಯಿತು. “ಶ್ರೀರಾಮ, ಶಿವಧನುಸ್ಸನ್ನು ಮುರಿದ ಮಾತ್ರಕ್ಕೆ ನೀನು ಲೋಕೈಕ ವೀರನಾಗಲಿಲ್ಲ. ನೀನು ನನ್ನ ಕೈಯಲ್ಲಿರುವ ವೈಷ್ಣವ ಧನುಸ್ಸಿಗೆ ಬಾಣ ಹೂಡಿದರೆ ಆಗ ಮಾತ್ರ ವೀರನೇ ಸರಿ” ಎಂದನು ಪರಶುರಾಮ. ಶ್ರೀರಾಮನು ಹೆದರುತ್ತಾನೆಯೆ? ವೈಷ್ಣವ ಧನುಸ್ಸಿಗೂ ಅವನು ಬಾಣ ಹೂಡಿ ಗೆದ್ದ. ಪರಶುರಾಮನು ಆಶ್ಚರ್ಯಪಟ್ಟು ಅವನನ್ನು ಕೊಂಡಾಡಿ ಹೊರಟುಹೋದನು.

ಪಟ್ಟಾಭೀಷೇಕವಂತೆ‘!

ಕಿರಿಯ ರಾಣಿಯಾದ ಕೈಕೆಯ ಅಣ್ಣನು ರಾಜಗೃಹಪುರದಲ್ಲಿ ಆಳುತ್ತಿದ್ದನು. ಆತನಿಗೆ ಗಂಡುಮಕ್ಕಳಿರಲಿಲ್ಲ. ಆದ್ದರಿಂದ ಆತನು ದಶರಥನನ್ನು ಒಪ್ಪಿಸಿ, ಭರತ ಶತ್ರುಘ್ನರಿಬ್ಬರನ್ನೂ ಕೆಲವು ಕಾಲ ತನ್ನ ಮನೆಯಲ್ಲಿರಿಸಿಕೊಳ್ಳುವುದಾಗಿ ಕರೆದುಕೊಂಡು ಹೋದನು. ರಾಮ ಲಕ್ಷ್ಮಣರಿಬ್ಬರೂ ತಂದೆತಾಯಿಗಳ ಸೇವೆ ಮಾಡುತ್ತಾ ಅಯೋಧ್ಯೆಯಲ್ಲೇ ಉಳಿದರು.

ಧಶರಥನು ಮುದುಕನಾಗುತ್ತಿದ್ದನು. ಆತನು ರಾಮನಿಗೆ ಯುವರಾಜ ಪಟ್ಟಾಭಿಷೇಕ ಮಾಡುವ ಬಗ್ಗೆ ವಿಚಾರ ಮಾಡಿದನು. ಪ್ರಜೆಗಳಿಗೆ ಆ ಮಾತು ಕೇಳಿ ಆನಂದವಾಯಿತು. ಆಗ ಆತನು ರಾಮನನ್ನು ಕರೆಸಿ, “ಕುಮಾರ, ನಾನು ಮುದುಕನಾಗುತ್ತಿದ್ದೇನೆ. ಇನ್ನು ಪ್ರಜೆಗಳನ್ನು ಪಾಲಿಸುವ ಕರ್ತವ್ಯ ನಿನ್ನದು. ಪೌರರೂ ಸಹ ನೀನು ರಾಜನಾಗುವುದನ್ನು ನೋಡಲು ಅಪೇಕ್ಷಿಸುತ್ತಿದ್ದಾರೆ. ನಾಳೆಯೇ ನಿನಗೆ ಯುವರಾಜ ಪಟ್ಟಾಭಿಷೇಕ. ದೀಕ್ಷೆಗೆ ಇಂದೇ ಸೀತೆಯೊಡನೆ ಸಿದ್ಧನಾಗು” ಎಂದನು. ರಾಮನಿಗೆ ಈ ಮಾತು ಕೇಳಿ ಸಂಕೋಚವೆನಿಸಿತು. ಆದರೆ ತಂದೆಗೆ ಸಹಾಯವಾಗುತ್ತದೆ, ಕಷ್ಟ ಕಡಮೆಯಾಗುತ್ತದೆ. ಹಾಗೆಂದು ತಂದೆಯ ಅಪ್ಪಣೆಯಂತೆ ದೀಕ್ಷೆಗೆ ಸಿದ್ಧನಾದನು.

ಸುದ್ಧಿ ಮಿಂಚಿನಂತೆ ಎಲ್ಲೆಲ್ಲೂ ಹಬ್ಬಿತು. ಆಡುವ ಮಕ್ಕಳೂ ಸಹ “ಶ್ರೀರಾಮನಿಗೆ ಪಟ್ಟಾಭಿಷೇಕವಂತೆ” ಎಂದು ಕುಣಿದಾಡಿದರು. ಸುಣ್ಣ-ಬಣ್ಣ, ತಳಿರು-ತೋರಣಗಳಿಂದ ಪಟ್ಟಣದ ಅಲಂಕಾರ ಕಾರ್ಯ ಪ್ರಾರಂಭವಾಯಿತು. ಹಿರಿಯ ರಾಣಿ ಕೌಸಲ್ಯೆಯಂತೂ ಮಗನನ್ನು ಮೈದಡವಿ, ಶ್ರೀರಾಮ, “ಚಿರಾಯುವಾಗಿ ಬಾಳು ಮಗು” ಎಂದು ಹರಿಸಿದಳು. ಲಕ್ಷ್ಮಣನೂ ಸೀತೆಯೂ ಬಹು ಸಂತೋಷಪಟ್ಟರು.

ಶ್ರೀರಾಮನು ಕಾಡಿಗೆ ಹೋಗಲಿ

ಶ್ರೀರಾಮನು ಯುವರಾಜನಾಗುವ ಸುದ್ದಿ ಕೈಕೆಯ ದಾಸಿಯಾದ ಮಂಥರೆಗೆ ಹಿಡಿಸಲಿಲ್ಲ. ಅವಳು ಕೈಕೆಯಲ್ಲಿಗೆ ಬಂದು, “ದೇವಿ, ಮೋಸವಾಯಿತು. ಭರತನು ಇಲ್ಲದಿರುವ ಈ ಸಮಯದಲ್ಲಿ ರಾಜನು ರಾಮನಿಗೆ ಪಟ್ಟ ಕಟ್ಟಲಿದ್ದಾನೆ” ಎಂದಳು. ಕೈಕೆಯು, “ಮಂಥರೆ, ಶ್ರೀರಾಮನು ಸದ್ಗುಣವಂತ. ಅವನಿಗೆ ನನ್ನ ಬಗ್ಗೆ ತುಂಬ ಗೌರವ. ಅಮ್ಮಾ ಎಂದು ಕರೆಯುತ್ತಾ ಬೇರೆಯವರಿಗಿಂತ ಹೆಚ್ಚಾಗಿ ನನ್ನನ್ನು ಉಪಚರಿಸುತ್ತಾನೆ. ಅವನು ಯುವರಾಜನಾಗುವುದು ನ್ಯಾಯವೇ ಆಗಿದೆ. ಇದಕ್ಕೆ ಭರತನನ್ನು ಕೇಳುವ ಅಗತ್ಯವೇನಿದೆ? ಹರ್ಷದ ಸುದ್ದಿ ತಂದ ನಿನಗೆ ಇದೋ ಬಹುಮಾನ ಹಿಡಿ” ಎಂದಳು.

“ಕೈಕೆ, ನೀನು ಹುಚ್ಚಳಂತೆ ಮಾತನಾಡಬೇಡ. ರಾಮನು ರಾಜನಾದರೆ ನೀನು ಕೌಸಲ್ಯೆಯ ದಾಸಿಯಾಗಬೇಕಾಗುತ್ತದೆ. ಶ್ರೀರಾಮನು ಭರತನನ್ನೂ ನಿನ್ನನ್ನೂ ಕಾಡಿಗಟ್ಟುತ್ತಾನೆ. ಇದನ್ನೆಲ್ಲಾ ತಪ್ಪಿಸಬೇಕಾದರೆ ಮೊದಲು ಶ್ರೀರಾಮನೇ ಕಾಡಿಗೆ ಹೋಗುವಂತೆ ಮಾಡು. ಭರತನಿಗೆ ರಾಜ್ಯ ಸಿಕ್ಕುವಂತೆ ಮಾಡು. ನೀನು ದಶರಥನ ಮುಂದೆ ಕೋಪ ಬಂದವಳಂತೆ ನಟಿಸಿ ಆತನಿಂದ ಈ ಎರಡು ವರಗಳನ್ನು ಪಡೆದುಕೋ. ಇದರಿಂದ ನಿನಗೆ ಕ್ಷೇಮವುಂಟಾಗುತ್ತದೆ” ಎಂದು ಮಂಥರೆ ಬೋಧಿಸಿದಳು.

ಮಂಥರೆಯ ಬೋಧನೆಯಿಂದ ಕೈಕೆಯ ಮನಸ್ಸು ಬದಲಾಯಿಸಿತು. ರಾಮನ ಮೇಲೆ ಅವಳಿಗಿದ್ದ ಪ್ರೀತಿಯೆಲ್ಲವೂ ದ್ವೇಷವಾಗಿ ಪರಿಣಮಿಸಿತು. ಆ ಸಂಜೆಯೇ ದಶರಧ ಮಹಾರಾಜನು ಶ್ರೀರಾಮನ ಪಟ್ಟಾಭಿಷೇಕದ ವಾರ್ತೆ ಹೇಳಲೆಂದು ಕೈಕೆಯ ಅರಮನೆಗೆ ಬಂದನು. ಕೋಪಗೊಂಡಿರುವ ಕೈಕೆಯನ್ನು ಆತನು ಸಮಾಧಾನಪಡಿಸುತ್ತಾ, “ರಾಣಿ, ಈ ಸಂತೋಷ ಸಮಯದಲ್ಲಿ ಕೋಪವೇಕೆ? ನಿನಗೇನು ಬೀಕೋ ಹೇಳು. ಅದನ್ನು ನಡೆಸಿಕೊಡುತ್ತೇನೆ. ಶ್ರೀರಾಮನ ಮೇಲೆ ಆಣೆಯಿಟ್ಟು ಹೇಳುತ್ತಿದ್ದೇನೆ” ಎಂದುಬಿಟ್ಟನು.

ಕೂಡಲೇ ಕೈಕೆ, “ಅರಸ, ನೀನು ನನಗೆ ಕೊಟ್ಟ ಮಾತಿನಿಂದ ಎರಡು ವರಗಳನ್ನು ಈಗ ನಡೆಸಿಕೊಡಬೇಕು. ಈಗ ಸಿದ್ಧಪಡಿಸಿರುವ ಸಾಮಗ್ರಿಯಿಂದ ಭರತನಿಗೆ ಯುವರಾಜಪಟ್ಟವನ್ನು ಕಟ್ಟಬೇಕು, ಇದೇ ಮೊದಲನೆಯ ವರ, ಶ್ರೀರಾಮನು ಇಂದೇ ರಾಜ್ಯವನ್ನು ಬಿಟ್ಟು ನಾರುಮಡಿಯನ್ನುಟ್ಟು, ಹದಿನಾಲ್ಕು ವರ್ಷ ದಂಡಕಾರಣ್ಯದಲ್ಲಿ ವಾಸಿಸಲು ಹೋಗಬೇಕು. ಇದೇ ಎರಡನೆಯ ವರ!” ಎಂದಳು.

ಕೊನೆಯ ಮಾತನ್ನು ಕೇಳುತ್ತಲೇ ದಶರಥನು, ಅಯ್ಯೋ ಪಾಪಿ! ನಿನ್ನನ್ನು ಶ್ರೀರಾಮನು ತಾಯಿಯನ್ನು ಆದರಿಸುವಂತೆ ಆದರಿಸುತ್ತಿದ್ದನಲ್ಲ. ನಿನಗೆ ಅವನು ಮಾಡಿದ ಅಪರಾಧವೇನು? ಅವನನ್ನು ಬಿಟ್ಟು ನಾನು ಹೇಗೆ ಬದುಕಲಿ?” ಎಂದು ಮೂರ್ಛೆ ಬಿದ್ದುಬಿಟ್ಟನು. ಜ್ಞಾನ ಬಂದನಂತರ ಅವನು ಅಳುತ್ತಾ ಕೈಕೆಯನ್ನು ಬೇಡಿಕೊಂಡನು, ಗೋಳಾಡಿದನು, ಕಣ್ಣೀರು ಸುರಿಸಿದನು, ಕೊನೆಗೆ ದುಃಖ ತಡೆಯಲಾರದೆ ಹಾಸಿಗೆಯಲ್ಲಿ ಉರುಳಿದನು. ಆದರೆ ಕೈಕೆ ಒಂದಕ್ಕೂ ಜಗ್ಗಲಿಲ್ಲ.

ತಂದೆಯ ಮಾತೇ ಮುಖ್ಯ

ಬೆಳಗಾಯಿತು. ಶ್ರೀರಾಮನು ತಮ್ಮನೊಡನೆ ಕೈಕೆಯ ಅರಮನೆಗೆ ಬಂದನು. ತಂದೆಯ ಸ್ಥಿತಿಯನ್ನು ಕಂಡು ಅವನಿಗೆ ಕಳವಳವಾಯಿತು. ದಶರಥನು ನಿಧಾನವಾಗಿ ಕಣ್ಣು ತೆರದು, “ಮಗೂ ಶ್ರೀರಾಮ. . . . .” ಎಂದನು. ಮುಂದಕ್ಕೆ ಮಾತನಾಡಲಾಗದೆ ಗಳಗಳನೆ ಅಳತೊಡಗಿದನು. ಆಗ ಕೈಕೇಯು, “ಶ್ರೀರಾಮ, ನಿನ್ನ ತಂದೆ ನನಗೆ ಮಾತು ಕೊಟ್ಟಿದ್ದಾನೆ. ಅದನ್ನು ನೀನು ನಡೆಸಿಕೊಡುತ್ತಿಯೋ ಇಲ್ಲವೋ ಎಂದು ಪೆಚಾಡುತ್ತಿದ್ದಾನೆ” ಎಂದಳು.

“ಅಮ್ಮಾ, ತಂದೆಯವರು ನಿಮಗೆ ಕೊಟ್ಟಿರುವ ಮಾತನ್ನು ನಾನು ನಡೆಸಿಕೊಡವೆ. ಅದೇನು ಹೇಳಿರಿ. ರಾಮನದು ಒಂದೇ ಮಾತು.”

“ಹಾಗಾದರೆ ಕೇಳು. ಭರತನಿಗೆ ಯುವರಾಜ ಪಟ್ಟಾಭಿಷೇಕವಾಗಬೇಕು. ಈಗಿಂದೀಗಲೇ ನೀನು ನಾರು ಮಡಿಯುಟ್ಟು ಹದಿನಾಲ್ಕು ವರ್ಷದ ವನಸವಾಸಕ್ಕೆ ತೆರಳಬೇಕು. ಇದು ಅರಸನ ಆಜ್ಞೆ.”

“ತಾಯೇ, ಇಷ್ಟು ಮಾತ್ರಕ್ಕಾಗಿ ತಂದೆಯವರು ವ್ಯಥೆಪಡಬೇಕೆ? ತಂದೆಯ ಮಾತಿಗಾಗಿ ನಾನು ಬೆಂಕಿಗೆ ಬೇಕಾದರೂ ಧುಮುಕಬಲ್ಲೆ. ನಾನು ಸಂತೋಷದಿಂದ ಅರಣ್ಯಕ್ಕೆ ಇಂದೇ ಹೊರಡುವೆ.”  

'ನಾನು ಸಂತೋಷದಿಂದ ಅರಣ್ಯಕ್ಕೆ ಇಂದೇ ಹೊರಡುವೆ.'

ಶ್ರೀರಾಮನ ಮಾತನ್ನು ಕೇಳಿ ಲಕ್ಷ್ಮಣನಿಗೆ ರೋಷ ಬಂದಿತು. ಅವನು, “ಛಿಛೀ, ಇಂತಹ ತಂದೆತಾಯಿಗಳಿರುವುದಕ್ಕಿಂತಲೂ ಸಾಯುವುದು ಲೇಸು” ಎಂದನು. ಶ್ರೀರಾಮನು ಅವನನ್ನು ಗದರಿಸಿ, “ತಪ್ಪು, ಲಕ್ಷ್ಮಣ; ಮಕ್ಕಳು ತಂದೆತಾಯಿಗಳಿಗೆ ಮಾಡಬೇಕಾದ ಸೇವೆ ಇದೇನೇ? ಅಲ್ಲಿ ನೋಡು, ಅಪ್ಪಾಜಿಯವರು ನಮ್ಮ ಮೇಲಿನ ಮಮತೆಯಿಂದ ದುಃಖಿಸುತ್ತಿರುವುದು ಕಾಣಲಿಲ್ಲಿವೆ? ಅವರ ಮಾತನ್ನು ನಡೆಸದಿದ್ದ ಮೇಲೆ ನಾವು ಹುಟ್ಟಿ ಫಲವೇನು? ನೀನು ಅವಿವೇಕದಿಂದ ತಂದೆತಾಯಿಗಳನ್ನು ಬೈದು ಪಾಪ ಮಡಿದೆ” ಎಂದನು. ಲಕ್ಷ್ಮಣನು, “ಅಣ್ಣಾ, ಕೋಪದಲ್ಲಿ ನಾನು ಮಾಡಿದ್ದು ತಪ್ಪಾಯಿತು, ಕ್ಷಮಿಸು” ಎಂದನು.

ಧಶರಥನು ಅಳುತ್ತಾ, “ಅಪ್ಪಾ ಶ್ರೀರಾಮ, ಲಕ್ಷ್ಮಣನು ಹೇಳಿದ್ದೇ ಸರಿ. ನಾನು ನಿನ್ನ ವೈರಿ. ನೀನು ನನ್ನನ್ನು ಸದೆಬಡಿದು ರಾಜನಾಗು. ಆದರೆ ನನ್ನನ್ನೂ ಅಯೋಧ್ಯೆಯನ್ನೂ ಬಿಟ್ಟು ಕಾಡಿಗೆ ಹೋದರೆ ನಾನು ಬದಕಲಾರೆ” ಎಂದನು ಶ್ರೀರಾಮನು ತಂದೆಯ ಪಾದಗಳಿಗೆ ನಮಸ್ಕರಿಸಿ, “ಅಪ್ಪಾಜೀ, ನೀವು ಹೀಗೆ ಶೋಕಿಸಬೇಡಿರಿ. ಭರತನೇ ರಾಜನಾಗಲಿ. ಅವನು ನನ್ನ ತಮ್ಮನೇ ಹೊರತು ಬೇರೆಯವನಲ್ಲ. ನಿಮ್ಮ ಮಾತನ್ನುಳಿಸಿ ನಿಮ್ಮನ್ನು ಸತ್ಯವಂತರೆನಿಸುವುದೇ ನನಗೆ ಸುಖ. ನಾನು ಸಂತೋಷದಿಂದ ವನವಾಸ ಮುಗಿಸಿ ಬರುವೆ. ಅಪ್ಪಣೆ ಕೊಡಿರಿ” ಎಂದನು.

ಅಯೋಧ್ಯೆಯಲ್ಲಿ ನಾವಿರುವುದಿಲ್ಲ

ಶ್ರೀರಾಮನ ನಿರ್ಧಾರವನ್ನು ಕೇಳಿದ ಮೇಲೆ ಸೀತೆಯೂ ಲಕ್ಷ್ಮಣನೂ ಸಹ ಅರಣ್ಯಕ್ಕೆ ಹೊರಡಲು ಸಿದ್ಧರಾದರು. ಎಷ್ಟು ಹೇಳಿದರೂ ಅವರು ಸುಮ್ಮನಾಗದಿದ್ದುದರಿಂದ ರಾಮನು ಒಪ್ಪಬೇಕಾಯಿತು. ಕೌಸಲ್ಯೆಯೂ ಹಟ ಮಾಡಿದಾಗ ಶ್ರೀರಾಮನು, “ಅಮ್ಮಾ ನೀನು ಬಂದುಬಿಟ್ಟರೆ ತಂದೆಯನ್ನು ನೋಡಿಕೊಳ್ಳುವವರಾರು?” ಎಂದು ಸಮಾಧಾನ ಹೇಳಿ ತಡೆದನು. ಅನಂತರ ಕೈಕೆ ಕೊಟ್ಟ ನಾರುಬಟ್ಟೆಗಳನ್ನುಟ್ಟು ಶ್ರೀರಾಮನು ಸೀತಾಲಕ್ಷ್ಮಣರೊಡನೆ ರಥದಲ್ಲಿ ಕುಳಿತನು. ಮಂತ್ರಿಯಾದ ಸುಮಂತನು ರಥ ನಡೆಸಿದನು.

ಶ್ರೀರಾಮನೇ ಅರಣ್ಯಕ್ಕೆ ಹೋದಮೇಲೆ ಈ “ಅಯೋಧ್ಯೆಯಲ್ಲಿ ನಾವಿರುವುದಿಲ್ಲ” ಎನ್ನುತ್ತಾ ಅನೇಕ ಪ್ರಜೆಗಳು ಮನೆಮಾರುಗಳನ್ನು ಬಿಟ್ಟು ರಾಮನ ರಥದ ಹಿಂದೆ ಹೊರಟರು. ಮಾರನೆಯ ದಿನ ಅವರನ್ನು ಹೇಗೋ ತಪ್ಪಿಸಿ ಶ್ರೀರಾಮನು ಮುಂದೆ ಸಾಗಿದನು.

ಚಿತ್ರಕೂಟ ಪರ್ವತದಲ್ಲಿ

ಶ್ರೀರಾಮನು ರಥದಲ್ಲಿಯೇ ಗಂಗಾನದಿ ತೀರದ ಶೃಂಗವೇರಪುರಕ್ಕೆ ತಲುಪಿದನು. ಅಲ್ಲಿನ ರಾಜನಾದ ಗುಹನು ಶ್ರೀರಾಮನಿಗೂ ಲಕ್ಷ್ಮಣನಿಗೂ ಆಲದ ಹಾಲಿನಿಂದ ಕೂದಲನ್ನು ಜಟೆಯಾಗಿ ಕಟ್ಟಿದನು. ರಾಮ ಲಕ್ಷ್ಮಣರಿಬ್ಬರೂ ತಾಪಸ ವೇಷದಿಂದ ಕಂಗೊಳಿಸಿದರು. ಆನಂತರ ಶ್ರೀರಾಮನು ಸುಮಂತನಿಗೆ “ಅಯೋಧ್ಯೆಯಲ್ಲಿ ಹಿರಿಯರೆಲ್ಲರಿಗೂ ನಮ್ಮ ವಂದನೆಗಳನ್ನು ತಿಳಿಸು. ಭರತನಿಗೆ ಆಶೀರ್ವಾದ ತಿಳಿಸು” ಎಂದು ಹೇಳಿ ಹಿಂದಕ್ಕೆ ಕಳುಹಿಸಿದನು.

ನಾವೆಯಲ್ಲಿ ಗಂಗಾನದಿಯನ್ನು ದಾಟಿದ ಮೇಲೆ ಶ್ರೀರಾಮನು ಸೀತೆ ಮತ್ತು ಲಕ್ಷ್ಮಣರೊಡನೆ ಭಯಂಕರವಾದ ಕಾಡಿನಲ್ಲಿ ಹೊರಟನು. ಪಾಪ, ಸೀತೆ ಅರಣ್ಯವನ್ನು ಕಂಡದ್ದು, ಅದೇ ಮೊದಲ ಸಲ. ಎಲ್ಲೆಲ್ಲೂ ಕಲ್ಲು, ಮುಳ್ಳು, ಪೊದೆ, ಗಿಡಮರಗಳು. ಹೆಜ್ಜೆ ಹೆಜ್ಜೆಗೂ ಹಾವುಗಳ ಭಯ. ತಕ್ಕಮಟ್ಟಿಗೆ ಕ್ಷೇಮವಾಗಿದ್ದ ಸ್ಥಳವೆಂದರೆ ಚಿತ್ರಕೂಟ ಪರ್ವತ. ಭರದ್ವಾಜನೆಂಬ ಋಷಿಯು ತೋರಿದ ದಾರಿಯಿಂದ ಹೊರಟು ಚಿತ್ರಕೂಟ ಪರ್ವತ ತಲುಪಿದರು. ಅಲ್ಲಿ ಎಲೆ, ಹುಲ್ಲುಗಳಿಂದ ಗುಡಿಸಲನ್ನು ಕಟ್ಟಿ ವಾಸಿಸತೊಡಗಿದರು.

ಇತ್ತ ಸುಮಂತನು ಹಿಂತಿರುಗಿದ ಮೇಲೆ ಅಯೋಧ್ಯೆಯಲ್ಲಿ ದಶರಥನು ಆ ರಾತ್ರಿಯೇ ಶ್ರೀರಾಮನನ್ನು ನೆನೆಯುತ್ತಾ ಪ್ರಾಣಬಿಟ್ಟನು. ಮಾವನ ಮನೆಯಿಂದ ಮನೆಯಿಂದ ಬಂದ ಭರತನು ರಾಜನಾಗಲು ಒಪ್ಪಲಿಲ್ಲ. ಅವನೂ ಗೋಳಾಡಿದ. ತಾಯಿಯಾದ ಕೈಕೆಗೆ ಛೀಮಾರಿ ಹಾಕಿದ. “ಅಮ್ಮಾ , ರಾಜ್ಯದ ದುರಾಸೆಯಿಂದ ಇಷ್ಟೊಂದು ಪಾಪ ಮಾಡಿದ ನಿನ್ನ ಮುಖವನ್ನು ನೋಡಲಾರೆ. ನಾನು ರಾಜನಾಗುವುದಿಲ್ಲ. ಶ್ರೀರಾಮನನ್ನು ನಾನು ಕರೆತರುತ್ತೇನೆ.” ಎಂದು ಪ್ರಯಾಣ ಹೊರಟೇಬಿಟ್ಟನು. ಸರಿ, ಭರತನು ಹಿಂದೆ ರಾಜಮಾತೆಯರು, ಮಂತ್ರಿಗಳು, ಪರಿವಾರ — ಹೀಗೆ ದೊಡ್ಡ ಸೈನ್ಯವೇ ಚಿತ್ರಕೂಟಕ್ಕೆ ಬಂದುಬಿಟ್ಟಿತು.

ತಂದೆಯ ಮರಣವಾರ್ತೆಯನ್ನು ಕೇಳಿದ ಶ್ರೀರಾಮನ ದುಃಖ ಅಷ್ಟಿಷ್ಟಲ್ಲ. “ನಾವು ತಬ್ಬಲಿಗಳಾದೆವು” ಎಂದು ಶೋಕಿಸಿದನು. ಅನಂತರ ಭರತನು ಶ್ರೀರಾಮನು ಪಾದಗಳನ್ನು ಹಿಡಿದು, “ಅಣ್ಣಾ, ರಾಜ್ಯ ನಿನ್ನದು. ನಾನು ನಿನ್ನ ಸೇವಕ. ನೀನು ಬಂದು ರಾಜನಾಗು. ನನ್ನ ತಾಯಿಯ ಅಪರಾಧವನ್ನು ಕ್ಷಮಿಸು” ಎಂದು ಹಟ ಹಿಡಿದನು. ಜೊತೆಯಲ್ಲಿದ್ದ ಪರಿವಾರದವರೂ ಶ್ರೀರಾಮನನ್ನು ಬೇಡಿದರು. ಶ್ರೀರಾಮನು ಭರತನ ಕಣ್ಣಿರನ್ನು ಒರೆಸಿ, “ಭರತ, ತಂದೆಯ ಆಜ್ಞೆಯನ್ನು ನಾವಿಬ್ಬರೂ ಪಾಲಿಸಬೇಕಾದುದು ಧರ್ಮ. ಆತನು ನಿನಗೆ ರಾಜ್ಯವನ್ನೂ ನನಗೆ ವನವಾಸವನ್ನು ಒಪ್ಪಿಸಿ ಹೋಗಿದ್ದಾನೆ. ನಾನು ವನವಾಸ ಮುಗಿಸಿ ಬಂದಮೇಲೆ ನಿನ್ನ ಇಷ್ಟವೇ ಆಗಲಿ” ಎಂದು ಸಂತೈಸಿದನು. ಭರತನು ಒಪ್ಪಬೇಕಾಯಿತು. ವನವಾಸದ ಅನಂತರ ಕೂಡಲೇ ಹಿಂತಿರುಗದಿದ್ದರೆ ತಾನು ಬದುಕುವುದಿಲ್ಲವೆಂದು ರಾಮನಿಗೆ ತಿಳಿಸಿದನು. ಅನಂತರ ಶ್ರೀರಾಮನ ಪಾದುಕೆಗಳನ್ನು ಪಡೆದುಕೊಂಡನು. ತಾನು ತಪಸ್ವಿಯಂತಿದ್ದು ಶ್ರೀರಾಮನ ಹೆಸರಿನಲ್ಲೇ ರಾಜ್ಯವಾಳುವುದಾಗಿ ಹೇಳಿ, ಪರಿವಾರದೊಡನೆ ಅಯೋಧ್ಯೆಯ ಕಡೆಗೆ ಮರಳಿದನು.

ಶೂರ್ಪಣಖಿಯ ಹಾವಳಿ

ಶ್ರೀರಾಮನು ಚಿತ್ರಕೂಟವನ್ನು ಬಿಟ್ಟು ಸೀತೆ ಮತ್ತು ಲಕ್ಷ್ಮಣರೊಡನೆ ಪಂಚವಟಿ ಕ್ಷೇತ್ರದಲ್ಲಿ ನೆಲಸಿದನು. ಅಲ್ಲಿ ನೀರು ಮತ್ತು ಹಣ್ಣು ಹಂಪಲು ಸಾಕಷ್ಟು ದೊರೆಯುತ್ತಿತ್ತು. ಅಲ್ಲಿರುವಾಗ ಒಂದು ದಿನ ಗುಂಪುಗುಂಪಾಗಿ ಮುನಿಗಳೆಲ್ಲರೂ ಬಂದು, “ಶ್ರೀರಾಮ, ಇಲ್ಲಿಗೆ ಸಮೀಪವಾದ ಜನಸ್ಥಾನದಲ್ಲಿ ರಾಕ್ಷಸರಿದ್ದಾರೆ. ಆ ದುಷ್ಟರು ನಮ್ಮ ಜಪತಪಗಳನ್ನು ಕೆಡಿಸಿ ಹಿಂಸಿಸುತ್ತಿದ್ದಾರೆ. ಅವರನ್ನು ನಾಶಪಡಿಸಿ ನಮ್ಮನ್ನು ನೀನೇ ರಕ್ಷಿಸಬೇಕು” ಎಂದು ಬೇಡಿಕೊಂಡರು. ಶ್ರೀರಾಮನು ಹಾಗೆಯೇ ಆಗಲೆಂದು ಅವರಿಗೆ ಧೈರ್ಯ ಹೇಳಿ ಕಳುಹಿಸಿಕೊಟ್ಟನು. ಇದಾದ ಮರುದಿನದಿಂದಲೇ ರಾಕ್ಷಸರ ಹಾವಳಿ ಪ್ರಾರಂಭವಾಯಿತು.

ಜನಸ್ಥಾನದ ರಾಕ್ಷಸರು ಸಮುದ್ರ ಮಧ್ಯದಲ್ಲಿದ್ದ ಲಂಕಾದ್ವೀಪದಿಂದ ಬಂದವರು. ಲಂಕೆಯ ಅಧಿಪತಿ ರಾವಣ. ಅವನಿಗೆ ಹತ್ತು ತಲೆ, ಇಪ್ಪತ್ತು ಕೈಗಳು. ಅವನು ತಪಸ್ಸು ಮಾಡಿ ಬ್ರಹ್ಮನಿಂದ ವರಗಳನ್ನು ಪಡೆದವನು. ಈ ವರಬಲದ ಗರ್ವದಿಂದಲೇ ಮಾನವರನ್ನು ಹಿಂಸಿಸಿದನು. ಆ ರಾವಣನು ಅನೇಕರನ್ನು ಹೆಂಗಸರು, ಮಕ್ಕಳೆನ್ನದೆ ಸೆರೆ ಹಿಡಿದಿದ್ದನು. ಆ ರಾವಣನ ತಂಗಿಯೇ ಶೂಪರ್ಣಖಿ.

ಶೂರ್ಪಣಖಿ ದುಷ್ಟ ರಾಕ್ಷಸಿ. ಅವಳು ಒಂದು ದಿನ ಪಂಚವಟಿಗೆ ಬಂದಳು. ರಾಮಲಕ್ಷ್ಮಣರನ್ನು ನೋಡಿದೊಡನೆ, “ನನ್ನನ್ನು ಮದುವೆಯಾಗಿರಿ, ಇಲ್ಲದಿದ್ದರೆ ನಿಮ್ಮನ್ನು ನುಂಗುತ್ತೇನೆ” ಎಂದಳು. ಅಷ್ಟೇ ಅಲ್ಲ, ಸೀತೆಯ ಮೇಲೆ ಬೀಳಲು ಹೆಜ್ಜೆ ಹಾಕಿದಳು. ಆಗ ಲಕ್ಷ್ಮಣನು ಅವಳಿಗೆ ಅವಮಾನವಾಗುವಂತೆ ಅವಳ ಕಿವಿ, ಮೂಗುಗಳನ್ನು ಕತ್ತಿಯಿಂದ ಕೊಯ್ದು ಓಡಿಸಿದನು. ಮುಂದೆ ರಾಮನ ಕಷ್ಟಗಳಿಗೆಲ್ಲಾ ಇವಳೇ ಕಾರಣಳಾದಳು.

ಶೂರ್ಪಣಖಿಯ ಪರವಾಗಿ ಜನಸ್ಥಾನದಲ್ಲಿದ್ದ ರಾಕ್ಷಸರೆಲ್ಲರೂ ಪಂಚವಟಿಯ ಮೇಲೆ ದಾಳಿ ಮಾಡಿದರು. ಶ್ರೀರಾಮನು ಹೆದರಲಿಲ್ಲ. ಆ ರಾಕ್ಷಸರೆಲ್ಲರನ್ನೂ ಕೊಂದು ಹೆಸರಿಲ್ಲದಂತೆ ಮಾಡಿದನು. ಇದರಿಂದ ರೋಷಗೊಂಡ ಶೂಪರ್ಣಖಿಯು ಅಣ್ಣನಾದ ರಾವಣನಿಗೆ ತಿಳಿಸಲೆಂದು ಲಂಕಾದ್ವೀಪಕ್ಕೆ ಓಡಿದಳು.

ಮೋಸ

ಜನಸ್ಥಾನದಲ್ಲಿದ್ದ ರಾಕ್ಷಸರನ್ನೆಲ್ಲ ಕೊಂದು ಶೂರ್ಪಣಖಿಯನ್ನು ಅವಮಾನ ಪಡಿಸಿದನೆಂದು ಕೇಳಿ ರಾವಣನು ಉರಿದೆದ್ದನು. “ಆ ಶ್ರೀರಾಮನು ನನ್ನ ಮುಂದೆ ಎಷ್ಟರವನು! ನಾನು ಸೀತೆಯನ್ನು ಕದ್ದು ತಂದು ರಾಣಿಯನ್ನಾಗಿ ಮಾಡಿಕೊಳ್ಳುತ್ತೇನೆ. ಸೀತೆಯ ದುಃಖದಿಂದ ರಾಮನು ತಾನಾಗಿಯೇ ಸಾಯಲಿ” ಎಂದು ಅವನು ಗುಡುಗಿದನು.

ರಾವಣನು ಮಾರೀಚನ ಬಳಿಗೆ ಬಂದು, “ಮಾರೀಚ, ನೀನು ಜಿಂಕೆಯಾಗಿ ಸೀತೆಯ ಮನಸ್ಸನ್ನು ಒಲಿಸು. ಆಗ ಜಿಂಕೆ ಹಿಡಿಯಲೆಂದು ರಾಮನು ಹೊರಬರುತ್ತಾನೆ. ನಾನು ಸುಲಭವಾಗಿ ಸೀತೆಯನ್ನು ಕದ್ದೊಯ್ಯುತ್ತೇನೆ” ಎಂದನು. ಶ್ರೀರಾಮನ ಹೆಸರು ಕೇಳುತ್ತಲೇ ಮಾರೀಚನು ಹೆದರಿ, “ಬೇಡ ರಾವಣ, ಶ್ರೀರಾಮನ ಶಕ್ತಿ ನಿನಗೆ ಗೊತ್ತಿಲ್ಲ. ಅವನು ಇನ್ನೂ ಹುಡುಗನಾಗಿದ್ದಾಗಲೇ ಅವನ ಬಾಣದಿಂದ ನಾನು ಮೂಳೆ ಮುರಿಸಿಕೊಂಡು ಹೇಗೋ ಬದುಕಿದ್ದೇನೆ. ಅಂದಮೇಲೆ ಈಗ ಅವನ ಪರಾಕ್ರಮ ಕೇಳಬೇಕೆ? ಅವನು ಕೆರಳಿದರೆ ನಿನ್ನನ್ನೂ ಲಂಕೆಯನ್ನೂ ನಾಶಮಾಡದೆ ಬಿಡುವುದಿಲ್ಲ” ಎಂದು ಎಷ್ಟೋ ಹೇಳಿದನು. ದುಷ್ಟ ರಾವಣನಿಗೆ ಅದೊಂದು ಹಿಡಿಸಲಿಲ್ಲ. ಮಾರೀಚನು ಒಪ್ಪಲೇಬೇಕಾಯಿತು. ಇಬ್ಬರೂ ಪಂಚವಟಿಗೆ ಬಂದರು. ರಾವಣನು ತಪಸ್ವಿಯ ವೇಷದಿಂದ ಮರೆಯಲ್ಲಿ ನಿಂತನು. ಮಾರೀಚನು ಬಂಗಾರದ ಬಣ್ಣದ ಮಾಯಾಜಿಂಕೆಯಾಗಿ ಆಶ್ರಮದ ಮುಂದೆ ಸುಳಿದನು.

ಜಿಂಕೆಯನ್ನು ಕಂಡ ಸೀತೆಯು ಅದು ತನಗೆ ಬೇಕೆಂದು ರಾಮನಿಗೆ ತಿಳಿಸಿದಳು. ರಾಮನು ಬಿಲ್ಲು ಹಿಡಿದು ಅದರ ಹಿಂದೆ ಓಡುತ್ತಾ ಕಾಡಿನಲ್ಲಿ ಬುಹು ದೂರ ಬಂದನು. ಕೊನೆಗೆ ಜಿಂಕೆಯ ಮೇಲೆ ಬಾಣ ಹೂಡಿದನು. ಬಾಣದ ಪೆಟ್ಟು ಬೀಳುತ್ತಲೇ “ಹಾ ಲಕ್ಷ್ಮಣಾ, ಹಾ ಸೀತೆ” ಎಂದು ಕೂಗಿ ಜಿಂಕೆಯಾಗಿದ್ದ ಮಾರೀಚನು ನಿಜ ರೂಪದಲ್ಲಿ ಸತ್ತುಬಿದ್ದನು. ಇತ್ತ ಆಶ್ರಮದಲ್ಲಿದ್ದ ಲಕ್ಷ್ಮಣನು ಸೀತೆಯ ಕೋರಿಕೆಯಂತೆ ಶ್ರೀರಾಮನನ್ನು ಹುಡುಕಲೆಂದು ಹೊರಟನು. ರಾವಣನಿಗೆ ಸಮಯ ಸಿಕ್ಕಿತು. ಅವನ ನಿಜರೂಪವನ್ನು ಕಂಡಾಗ ಸೀತೆ ಚಿಟ್ಟನೆ ಚೀರಿ ಮೂರ್ಛೆ ಹೋದಳು. ರಾವಣನು ಅವಳನ್ನು ಪುಷ್ಪಕ ವಿಮಾನದಲ್ಲಿ ಹಾಕಿಕೊಂಡು ಲಂಕೆಗೆ ಹೊರಟೇಬಿಟ್ಟ.

ಶ್ರೀರಾಮನೂ ಲಕ್ಷ್ಮಣನೂ ಆಶ್ರಮಕ್ಕೆ ಬಂದು ನೋಡಿದಾಗ ಸೀತೆಯಿರಲಿಲ್ಲ. ನೆರೆಹೊರೆಯಲ್ಲಿ ಹುಡುಕಿ ವಿಫಲರಾದ ಮೇಲೆ ರಾಮನಿಗೆ ಕಣ್ಣೀರು ಉಕ್ಕಿತು. “ಲಕ್ಷ್ಮಣ, ಸೀತೆಯಿಲ್ಲದೆ ಹೇಗೆ ಬದುಕಲಿ? ಅವಳನ್ನು ಕಳೆದುಕೊಂಡಮೇಲೆ ನನ್ನ ಪರಾಕ್ರಮವೇ ವ್ಯರ್ಥ” ಎಂದು ಗೋಳಾಡಿದನು. ಲಕ್ಷ್ಮಣನು, “ಅಣ್ಣಾ ಅಧೈರ್ಯಪಟ್ಟರೆ ಪ್ರಯೋಜನವಿಲ್ಲ. ನಾವು ಹುಡುಕೋಣ ನಡೆ” ಎಂದು ಸಮಾಧಾನ ಹೇಳಿದನು. ಇಬ್ಬರೂ ಸೀತೆಯನ್ನು ಹುಡುಕುತ್ತಾ ಹೊರಟರು. ಸ್ವಲ್ಪ ದೂರ ಬಂದಮೇಲೆ ಅವರಿಗೆ ಜಟಾಯು ಎಂಬ ಪಕ್ಷಿರಾಜನು ಕಾಣಿಸಿದನು. ರೆಕ್ಕೆ ಬಿದ್ದುಹೋಗಿದ್ದ ಅವನು ಸಾಯುವುದರಲ್ಲಿದ್ದನು. ಶ್ರೀರಾಮನನ್ನು ಕಂಡೊಡನೆ. “ಶ್ರೀರಾಮ, ದುಷ್ಟ ರಾವಣನು ಸೀತೆಯನ್ನು ಲಂಕೆಗೆ ಕದ್ದೊಯ್ದನು. ಅವನೊಡನೆ ಹೋರಾಡಿ ನನಗೆ ಈ ಸ್ಥಿತಿಯಾಯಿತು” ಎನ್ನುತ್ತಾ ಪ್ರಾಣಬಿಟ್ಟನು. ರಾಮನು ದುಃಖದಿಂದ. “ಆಹಾ, ಲಕ್ಷ್ಮಣ ನನಗಾಗಿ ಪ್ರಾಣ ಕೊಟ್ಟ ಈ ಮಹಾತ್ಮನ ಸದ್ಗುಣ ಕಂಡೆಯಾ!” ಎಂದು ಕೊಂಡಾಡಿದನು.

ಶ್ರೀರಾಮದೂತ

ಪಂಪಾ ಸರೋವರದ ಮುಂದೆ ಋಷ್ಯಮೂಕ ಪರ್ವತದ ಬಳಿ ಕಿಷ್ಕಿಂಧಾ ನಗರವಿತ್ತು. ಅಲ್ಲಿಯ ರಾಜ ವಾಲಿ. ಇವನ ತಮ್ಮನೇ ಸುಗ್ರೀವ ರಾಜ. ವಾಲಿಯು ತಮ್ಮನ ಹೆಂಡತಿಯನ್ನೂ ರಾಜ್ಯವನ್ನೂ ಅಪಹರಿಸಿ, ಅವನನ್ನು ಋಷ್ಯಮೂಕ ಪರ್ವತಕ್ಕೆ ಓಡಿಸಿದ್ದನು. ಸುಗ್ರೀವನ ಮಂತ್ರಿಗಳಲ್ಲಿ ಹನುಮಂತನು ವಿದ್ವಾಂಸನೂ ವೀರನೂ ಆಗಿದ್ದನು. ಶ್ರೀರಾಮನಿಗೂ ಸುಗ್ರೀವನಿಗೂ ಗೆಳೆತನ ಮಾಡಿಸಿದವನು ಹನುಮಂತನೇ. ಶ್ರೀರಾಮನು ಸುಗ್ರೀವನ ಕಷ್ಟಕ್ಕಾಗಿ ಮರುಗಿ, “ಮಿತ್ರ, ನೀನು ಯೋಚಿಸಬೇಡ. ವಾಲಿಯನ್ನು ಕೊಂದು ನಿನಗೆ ರಾಜ್ಯ ಕೊಡಿಸುವ ಭಾರ ನನ್ನದು. ಅನಂತರ ನಿನ್ನವರ ಸಹಾಯದಿಂದ ನಾವೆಲ್ಲರೂ ಸೀತೆಯನ್ನು ಹುಡುಕೋಣ” ಎಂದನು.

ಕೊಟ್ಟ ಮಾತಿಗೆ ತಪ್ಪಲಿಲ್ಲ ಶ್ರೀರಾಮ. ಮಾರನೆಯ ದಿನವೇ ವಾಲಿಗೂ ಸುಗ್ರೀವನಿಗೂ ಯುದ್ದವನ್ನೇರ್ಪಡಿಸಿ ಶ್ರೀರಾಮನು ವಾಲಿಯನ್ನು ಸಂಹರಿಸಿದನು. ಅನಂತರ ಸುಗ್ರೀವನನ್ನು ಕಿಷ್ಕಿಂಧೆಯ ರಾಜನನ್ನಾಗಿಯೂ ವಾಲಿಯ ಮಗನಾದ ಅಂಗದನನ್ನು ಯುವರಾಜನನ್ನಾಗಿಯೂ ಮಾಡಿದನು. ಕಿಷ್ಕಿಂಧೆಯ ಪ್ರಜೆಗಳೆಲ್ಲರೂ ರಾಮನಿಗೆ ಕೃತಜ್ಞತೆಗಳನ್ನರ್ಪಿಸಿದರು.

ಸೀತೆಯನ್ನು ಹುಡುಕುವ ಕಾರ್ಯ ಪ್ರಾರಂಭವಾಯಿತು. ಸುಗ್ರೀವನು ದಿಕ್ಕುದಿಕ್ಕುಗಳಿಗೆ ಕಪಿವೀರರ ತಂಡಗಳನ್ನು ಕಳುಹಿಸಿಕೊಡುತ್ತಾ ಒಂದು ತಿಂಗಳೊಳಗಾಗಿ ಸೀತೆಯನ್ನು ಹುಡುಕಿ ಸುದ್ದಿ ತರಬೇಕೆಂದು ಆಜ್ಞೆ ಮಾಡಿದನು. ಅವರ ಪೈಕಿ ಹನುಮಂತನ ಕೈಗೆ ಶ್ರೀರಾಮನು ಉಂಗುರವನ್ನು ಕೊಟ್ಟು, “ಕಪಿವೀರ, ನೀನು ಲಂಕೆಯ ಕಡೆಗೆ ಹೋಗು. ಅಲ್ಲಿ ಸೀತೆಯನ್ನು ಕಂಡರೆ ನನ್ನ ಈ ಉಂಗುರವನ್ನು ತೋರಿಸು. ರಾವಣನ ಶಕ್ತಿ-ಸಾಮರ್ಥ್ಯಗಳನ್ನೂ ಸಹ ತಿಳಿದು ಬಾ” ಎಂದನು. ಹನುಮಂತನು ಕೈಮುಗಿದು, “ಶ್ರೀರಾಮಚಂದ್ರ ನಾನು ನಿನ್ನ ಸೇವಕ. ರಾವಣನು ಪಾತಾಳಕ್ಕಿಳಿದರೂ ಪತ್ತೆ ಹಚ್ಚುತ್ತೇನೆ. ಸೀತಾಮಾತೆಯನ್ನು ಕಂಡೇ ಬರುತ್ತೇನೆ” ಎಂದು ಬೀಳ್ಕೊಂಡು ಹೊರಟನು.

ಕಪಿವೀರರ ದೊಡ್ಡ ತಂಡವೇ ಹೊರಟಿತು. ಆದರೆ ಸಮುದ್ರವನ್ನು ದಾಟಿ ಲಂಕೆಯನ್ನು ತಲುಪಿದ ಸಾಹಸಿ ಹನುಮಂತನೊಬ್ಬನೇ. ಅಲ್ಲಿನ ಅಶೋಕವನದಲ್ಲಿ ರಾಕ್ಷಸಿಯರ ನಡುವೆ ಶ್ರೀರಾಮನಿಗಾಗಿ ಕಣ್ಣೀರು ಸುರಿಸುತ್ತಾ ಕುಳಿತಿದ್ದ ಸೀತೆಯನ್ನು ಕಂಡನು ಹನುಮಂತ. ಶ್ರೀರಾಮನ ಉಂಗುರವನ್ನು ಆಕೆಗೆ ಕೊಟ್ಟು, “ತಾಯೇ, ಶ್ರೀರಾಮನನ್ನು ಸಾವಿರ ರಾವಣರಾದರೂ ಎದುರಿಸಲಾರರು. ಶೀಘ್ರದಲ್ಲೇ ಶ್ರೀರಾಮನು ಬರುತ್ತಾನೆ. ರಾಕ್ಷಸರನ್ನು ಕೊಂದು ನಿಮ್ಮನ್ನು ಕರೆದೊಯ್ಯುತ್ತಾನೆ” ಎಂದು ಧೈರ್ಯ ಹೇಳಿ ಆಕೆಯಿಂದ ಚೂಡಾಮಣಿಯೆಂಬ ಆಭರಣವನ್ನು ಗುರುತಿಗಾಗಿ ಪಡೆದುಕೊಂಡನು. ಅಷ್ಟೇ ಅಲ್ಲ, ರಾವಣನಿಗೆ ಬುದ್ದಿವಾದ ಹೇಳಿದ. ರಾಮನ ಬಳಿಗೆ ಹಿಂದಿರುಗಿದ.

ವಿಭೀಷಣನಿಗೆ ಅಭಯ

ಹನುಮಂತನಿಂದ ಲಂಕೆಯ ವಿವರಗಳೆಲ್ಲವೂ ಶ್ರೀರಾಮನಿಗೆ ತಿಳಿಯಿತು. ಮರುದಿನವೇ ಕಪಿಸೈನ್ಯಗಳೊಡನೆ ಎಲ್ಲರೂ ಸಮುದ್ರತೀರಕ್ಕೆ ಬಂದರು. ಕಪಿವೀರರು ತಂದೆಸೆದ ಕಲ್ಲು ಬೆಟ್ಟಗಳಿಂದ ಸೇತುವೆ ನಿರ್ಮಾಣವಾಗತೊಡಗಿತು. ಆ ಸಮಯದಲ್ಲೇ ಲಂಕೆಯ ವಿಭೀಷಣನು ಶ್ರೀರಾಮನಲ್ಲಿಗೆ ಬಂದದ್ದು. ವಿಭೀಷಣನು ರಾವಣನ ತಮ್ಮ. ಆದರೆ ಸದ್ಗುಣವಂತ. ಅವನು ರಾವಣನ ದುರಾಚಾರಿಗಳಿಗೆ ಹೇಸಿ ಲಂಕೆಯಿಂದ ಬಂದುಬಿಟ್ಟನು. ರಾಮನು ಪಾದಗಳಿಗೆ ನಮಸ್ಕರಿಸಿ, ನಮಸ್ಕರಿಸಿ, “ಶ್ರೀರಾಮ, ಇನ್ನು ನಾನು ನಿನ್ನವನು. ನಿನಗೆ ಶರಣು ಬಂದಿದ್ದೇನೆ. ನನ್ನನ್ನು ರಕ್ಷಿಸು” ಎಂದನು. ಶತ್ರುಪಕ್ಷದವನಾದ ವಿಭೀಷಣನನ್ನು ಸೇರಿಸಿಕೊಳ್ಳಲು ಸುಗ್ರೀವನಿಗಂತೂ ಇಷ್ಟವೇ ಇರಲಿಲ್ಲ. ಆದರೆ ಶ್ರೀರಾಮನು ಕರುಣಾಮೂರ್ತಿ. ಅವನು, “ಶರಣು ಬಂದವರನ್ನು ರಕ್ಷಿಸುವುದೇ ನನ್ನ ಧರ್ಮ. ಮಿತ್ರಭಾವದಿಂದ ಬಂದಮೇಲೆ ವಿಭೀಷಣನೇ ಏಕೆ, ಶತ್ರುವಾದ ರಾವಣನೇ ಬಂದರೂ ನಾನು ಕ್ಷಮಿಸುತ್ತೇನೆ. ವಿಭೀಷಣ, ನೀನು ನಮ್ಮವನಾದೆ. ರಾವಣನನ್ನು ಕೊಂದು ನಿನ್ನನ್ನು ಲಂಕೆಗೆ ರಾಜನನ್ನಾಗಿ ಮಾಡುತ್ತೇನೆ” ಎಂದನು.  

'ಶರಣು ಬಂದವರನ್ನು ರಕ್ಷಿಸುವುದೇ ನನ್ನ ಧರ್ಮ.'

ಲಂಕೆಗೆ ಮುತ್ತಿಗೆ

ಕಪಿ ಸೈನ್ಯದೊಡನೆ ಶ್ರೀರಾಮನು ಸೇತುವೆಯ ಮೂಲಕ ಸಮುದ್ರವನ್ನು ದಾಟಿ ಲಂಕೆಯನ್ನು ಮುತ್ತಿದನು. ಆಗಲೂ ಯುದ್ಧವಾಗುವುದು ಬೇಡವೆಂದೇ ಶ್ರೀರಾಮನ ಇಷ್ಟ. ರಾವಣನ ಅಪರಾಧಕ್ಕಾಗಿ ಯುದ್ಧದಲ್ಲಿ ಅನೇಕರು ಸಾಯುತ್ತಾರೆ. ಪ್ರಜೆಗಳಿಗೆ ಹಿಂಸೆಯಾಗುತ್ತದೆಯೆಂದು ರಾಮನಿಗೆ ವ್ಯಥೆ. “ಈಗಲೂ ರಾವಣನೂ ಸೀತೆಯನ್ನೊಪ್ಪಿಸಲಿ, ಅವನನ್ನು ಕ್ಷಮಿಸುತ್ತೇನೆ” ಎಂದು ಶ್ರೀರಾಮನು ರಾವಣನಿಗೆ ಹೇಳಿಕಳುಹಿಸಿದನು. ಆದರೆ ರಾವಣನು ಈ ಮಾತನ್ನು ತಿರಸ್ಕರಿಸಿದ. “ಸೀತೆಯನ್ನೊಪ್ಪಿಸುವುದಿಲ್ಲ, ಯುದ್ಧದಲ್ಲಿ ನಾನು ರಾಮ ಲಕ್ಷ್ಮಣರನ್ನು ಕೊಲ್ಲುತ್ತೇನೆ” ಎಂದು ಗರ್ಜಿಸಿದನು ರಾವಣ. ಅವನು ಸೈನ್ಯವನ್ನು ಸಜ್ಜುಗೊಳಿಸಿದನು. ರಾಕ್ಷಸ ವೀರರೆಲ್ಲರೂ ಹಾಹಾಕಾರ ಮಾಡುತ್ತಾ “ರಾಮನನ್ನು ಕೊಲ್ಲುತ್ತೇವೆ. ವಾನರರನ್ನೆಲ್ಲ ಹಿಡಿದು ನುಂಗುತ್ತೇವೆ. ಸುಗ್ರೀವನನ್ನು ಹರಿದು ತಿನ್ನುತ್ತೇವೆ” ಎಂದು ಆರ್ಭಟಿಸಿದರು.

ಎಲ್ಲೆಲ್ಲೂ ರಣಕಹಳೆಗಳು, ರಣಭೇರಿಗಳು ಮೊಳಗಿದವು. ರಣರಂಗದಲ್ಲಿ ಆನೆಗಳು, ಕುದುರೆಗಳು, ಧ್ವಜಗಳುಳ್ಳ ರಥಗಳು ನುಗ್ಗಿದವು. ಸೈನಿಕರ ಕೈಗಳಲ್ಲಿ ಕತ್ತಿ, ಗುರಾಣಿ, ಬಿಲ್ಲುಬಾಣಗಳು ಮೆರೆದವು. ವೀರರ ಗರ್ಜನೆಗಳಿಂದ ಎಲ್ಲರ ಕಿವಿಗಳೂ ತೂತು ಬೀಳುವಂತೆ ಕೋಲಾಹಲವೆದ್ದಿತು. ಹೋರಾಡುವಾಗ ಎದ್ದ ಧೂಳಿನಿಂದ ಆಕಾಶವೇ ಮುಚ್ಚಿಹೋಗುವಂತಾಯಿತು. ಭೀಕರ ಯುದ್ಧ ನಡೆಯಿತು. ಎಲ್ಲೆಲ್ಲೂ ತಲೆಗಳು ಉರುಳಿದುವು.

ರಾಕ್ಷಸರ ಸಂಹಾರ

ರಾವಣನ ರಾಕ್ಷಸಸೈನ್ಯ ಅಪಾರವಾಗಿತ್ತು. ರಾಕ್ಷಸರು ಭಯಂಕರ ಸ್ವರೂಪಿಗಲು, ಕ್ರೂರಿಗಳು, ಸಾಹಸಿಗಳು. ದಿನದಿನಕ್ಕೆ ರಾವಣನ ಕಡೆಯ ವೀರರೆಲ್ಲರೂ ಸಾಯತೊಡಗಿದರು. ಸಾವಿರಾರು ಮಂದಿ ಸತ್ತು ರಕ್ತದ ಕಾಲುವೆಯೇ ಹರಿಯಿತು. ರಾಕ್ಷಸರೂ ಸಹ ವಾನರಸೈನ್ಯದ ಮೇಲೆ ಪ್ರಬಲವಾಗಿಯೇ ದಾಳಿ ಮಾಡಿದರು. ಒಮ್ಮೆ ಸುಗ್ರೀವ ಅತಿ ಸಾಹಸ ಮಾಡಿ ರಾವಣನ ಕೈಗೆ ಸಿಕ್ಕಿ ಕಷ್ಟಪಟ್ಟು ತಪ್ಪಿಸಿಕೊಂಡು ಬಂದ. ಶ್ರೀರಾಮನು ಅವನಿಗೆ, “ನಿನಗೇನಾದರೂ ಅಪಾಯವಾದರೆ ನಾನು ಬುದುಕಿ ಫಲವೇನು? ಇನ್ನು ಮೇಲೆ ಹೀಗೆ ಮಾಡಬೇಡ” ಎಂದ.

ರಾವಣನ ಮಗನ ಹೆಸರು ಮೇಘನಾದ. ಇವನು ಬಹಳ ಶೂರ. ದೇವೇಂದ್ರನ್ನೇ ಯುದ್ಧದಲ್ಲಿ ಗೆದ್ದು ‘ಇಂದ್ರಜಿತು’ ಎಂದು ಖ್ಯಾತಿ ಪಡೆದಿದ್ದನು. ಇವನು ಒಂದು ಸಲ ಮಾಯೆಯಿಂದ ನಿರ್ಮಿಸಿದ ಸೀತೆಯನ್ನು ತಂದು ರಣರಂಗದಲ್ಲಿ ಎಲ್ಲರೂ ಕಾಣುವಂತೆ ಅವಳ ತಲೆ ಕಡಿದು ಹಾಕಿದ. ಶ್ರೀರಾಮನ ದುಃಖ ಹೇಳಬೇಕೆ? ಅಷ್ಟರಲ್ಲೇ ವಿಭೀಷಣನು ಬಂದು, “ಶ್ರೀರಾಮ, ಅವಳು ನಿಜವಾದ ಸೀತೆಯಲ್ಲ. ಸೀತೆ ಸುರಕ್ಷಿತವಾಗಿದ್ದಾಳೆ” ಎಂದು ತಿಳಿಸದಿದ್ದರೆ ಏನೇನಾಗುತ್ತಿತ್ತೋ! ಕೊನೆಗೆ ಲಕ್ಷ್ಮಣನು ಇಂದ್ರಜಿತುವನ್ನು ಯುದ್ಧದಲ್ಲಿ ಕೊಂದನು.

ರಾಮಬಾಣ

ಶ್ರೀರಾಮನು ಕೊಂದ ಮತ್ತೊಬ್ಬ ಭಯಂಕರ ರಾಕ್ಷಸನ ಹೆಸರು ಕುಂಭಕರ್ಣ. ಅವನು ರಾವಣನ ತಮ್ಮ. ಅವನಿಗೆ ಪರ್ವತದಂತಹ ಶರೀರ. ರಾಶಿಗಟ್ಟಲೆ ಆಹಾರ ಬೇಕು ಅವನ ಹೊಟ್ಟೆಗೆ! ಕುರಿಕೋಣಗಳನ್ನು ಗಬಗಬನೆ ನುಂಗುವ ದೊಡ್ಡ ಬಾಯಿ ಅವನದು. ಅವನು ತಿಂಗಳುಗಟ್ಟಲೆ ನಿದ್ದೆ ಹೋಗುತ್ತಿದ್ದನಂತೆ. ಇವನು ರಣರಂಗಕ್ಕೆ ಬಂದಾಗ ವಾನರರೆಲ್ಲರೂ ಭೂತ ಬಂದಿತೆಂದು ಹೆದರಿ ಓಡಿದರು. ಆಯುಧವೇ ಇಲ್ಲದೆ ಅವನು ಕಾಲಿಗೆ ಸಿಕ್ಕಿದವರನ್ನು ತುಳಿದು, ಕೈಗೆ ಸಿಕ್ಕಿದವರನ್ನು ಬಾಯಿಗೆ ಹಾಕಿಕೊಂಡು ನುಂಗುತ್ತಾ ರಾಮನಿದ್ದಲ್ಲಿಗೆ ಬಂದನು. ರಾಮನು ಅವನ ಕೈಕಾಲುಗಳನ್ನು ಕತ್ತರಿಸಿ, ಕೊನೆಯ ಬಾಣದಿಂದ ಅವನ ತಲೆಯನ್ನೂ ಸಹ ಕಡಿದನು. ಈ ವೇಳೆಗೆ ರಾವಣನ ಕಡೆ ಪ್ರಹಸ್ತ, ವಜ್ರದಂಷ್ಟ್ರ ಮೊದಲಾದ ರಾಕ್ಷಸವೀರರೆಲ್ಲರೂ ರಾಮನಿಂದ ಹತರಾಗಿದ್ದರು.

ರಾವಣನ ಕಡೆ ಇನ್ನು ಸೈನ್ಯವೇ ಇಲ್ಲ ಎಂದುಕೊಂಡಾಗ ಇದ್ದಕ್ಕಿದ್ದಂತೆ ಎಣಿಸಲಾಗದಷ್ಟು ಅಪಾರ ಸಂಖ್ಯೆಯ ರಾಕ್ಷಸಸೈನ್ಯ ಒಮ್ಮೆಲೇ ಬಂದುಬಿಟ್ಟಿತು! ರಾವಣನು ಬಹಳ ಗುಟ್ಟಾಗಿ ಆ ಸೈನ್ಯವನ್ನು ತರಬೇತಿ ಮಾಡಿದ್ದುದರಿಂದ ಆ ಸೈನ್ಯಕ್ಕೆ ‘ಮೂಲಬಲ’ ಎಂದು ಹೆಸರಿತ್ತು. ಆ ಸೈನ್ಯದ ಹೊಡೆತಕ್ಕೆ ಹೆದರಿ ವಾನರ ಸೈನ್ಯ ಓಡಿತು. ಶ್ರೀರಾಮನು ಆಗ ಒಂದು ಚಮತ್ಕಾರ ಮಾಡಿದನು. ಬಿಲ್ಲನ್ನು ಠಂಕಾರ ಮಾಡಿ ಒಂದು ಮೋಹಕವಾದ ಬಾಣವನ್ನು ಬಿಟ್ಟನು. ಅದು ಯಾರನ್ನು ಏನೂ ಮಾಡದೆ ಸೈನ್ಯವನ್ನು ಪ್ರದಕ್ಷಿಣೆ ಮಾಡಿ ಬಂದುಬಿಟ್ಟಿತು. ಕೂಡಲೇ ರಾಕ್ಷಸರಿಗೆ ಮಂಕುಬೂದಿ ಎರಚಿದಂತಾಯಿತು. ‘ಇದೋ ರಾಮ ಇಲ್ಲಿದ್ದಾನೆ’ ಎನ್ನುತ್ತಾ ಒಬ್ಬ ರಾಕ್ಷಸ ವೀರನು ತನ್ನ ಜೊತೆಯವನನ್ನೇ ಕೊಂದನು. ರಾಕ್ಷಸ ಸೈನ್ಯದಲ್ಲಿ ಎಲ್ಲರ ಕಣ್ಣಿಗೂ ಹೀಗೆಯೇ ಭ್ರಮೆಯಾಯಿತು. ರಾಕ್ಷಸರು ತಾವೇ ಹೊಡೆದಾಡಿಕೊಂಡು ಎಲ್ಲರೂ ಸತ್ತು ಬಿದ್ದರು. ಶ್ರೀರಾಮನೂ ವಾನರರೂ ಈ ವಿಚಿತ್ರವನ್ನು ನೋಡುತ್ತಿದ್ದರು. ಸುಗ್ರೀವಾದಿಗಳು ಕೈಮುಗಿದು, “ಶ್ರೀರಾಮಚಂದ್ರ, ಲೋಕದಲ್ಲಿ ಇಂತಹ ವಿಚಿತ್ರವನ್ನು ನಾವು ಕಂಡಿಲ್ಲ, ಕೇಳಿಲ್ಲ, ಇಂದು ಕಂಡೆವು” ಎಂದರು.

ರಾವಣನ ಸಂಹಾರ

ಹತ್ತು ತಲೆಗಳ ರಾವಣನು ಕೊನೆಗೆ ರಾಮನ ಮುಂದೆ ರಥದಲ್ಲಿ ಬಂದು ನಿಂತನು. ಆದರೆ ಅಷ್ಟರಲ್ಲಿ ವಿಭೀಷಣನೂ ಲಕ್ಷ್ಮಣನೂ ಅವನ ಮೇಲೆ ಬಾಣಗಳನ್ನು ಹೂಡುತ್ತಾ ಹೋರಾಡತೊಡಗಿದರು. ರಾವಣನು ಘಂಟಾಶಕ್ತಿಯೆಂಬ ಆಯುಧವನ್ನು ಪ್ರಯೋಗಿಸಿದಾಗ ಅದು ಲಕ್ಷ್ಮಣನ ಎದೆಗೆ ಬಡಿದು ಅವನು ನೆಲಕ್ಕೆ ಉರುಳಿಬಿಟ್ಟನು. ಶ್ರೀರಾಮನು ಕೆರಳಿದ ಸಿಂಹದಂತೆ ಬಾಣ ಹೂಡಿ, “ರಾವಣ, ಇಂದು ನಿನಗೆ ಕೊನೆ. ಇನ್ನು ಈ ಭೂಮಿಯ ಮೇಲೆ ರಾಮನಿರಬೇಕು, ಇಲ್ಲವೇ ರಾವಣನಿರಬೇಕು, ಬಾ” ಎಂದು ನುಗ್ಗಿದನು. ಆ ರಭಸಕ್ಕೆ ತಾಳಲಾರದೆ ರಾವಣನು ಕಾಲುಕಿತ್ತು ಓಡಿದನು.

ಲಕ್ಷ್ಮಣನು ಪ್ರಜ್ಞೆತಪ್ಪಿ ಬಿದ್ದಿರುವುದನ್ನು ಕಂಡ ರಾಮನಿಗೆ ಎದೆಯೊಡೆದಂತಾಯಿತು. “ತಮ್ಮಾ, ನೀನು ಹೋದಮೇಲೆ ನಾನು ಬದುಕುವನೆ? ನೀನು ವನವಾಸಕ್ಕೆ ನನ್ನ ಹಿಂದೆ ಬಂದೆ. ಈಗ ನಿನ್ನ ಹಿಂದೆ ನಾನು ಪರಲೋಕಕ್ಕೆ ಬರುತ್ತೇನೆ” ಎಂದು ಕಣ್ಣೀರಿಟ್ಟನು ಶ್ರೀರಾಮ. ಆಗ ಸೈನ್ಯದಲ್ಲಿದ್ದ ವೈದ್ಯ ಪಂಡಿತನಾದ ಸುಷೇಣನು ಧೈರ್ಯ ಹೇಳಿ, “ಶ್ರೀರಾಮಚಂದ್ರ, ಲಕ್ಷ್ಮಣನು ಸತ್ತಿಲ್ಲ. ಹನುಮಂತನು ಹಿಮವತ್ಪರ್ವತದಿಂದ ಸಂಜೀವಿನಿ ಬೇರು ತರುತ್ತಾನೆ. ಆ ಔಷಧದಿಂದ ಲಕ್ಷ್ಮಣನು ಬದುಕುತ್ತಾನೆ” ಎಂದನು. ಲಕ್ಷ್ಮಣನು ಔಷಧೋಪಚಾರದಿಂದ ಎದ್ದಮೇಲೆ ಶ್ರೀರಾಮನಿಗೆ ಸಮಾಧಾನವಾಯಿತು.

ಶ್ರೀರಾಮನಿಗೂ ರಾವಣನಿಗೂ ಕೊನೆಯ ಯುದ್ಧ ನಡೆಯಿತು. ಲೋಕದಲ್ಲೇ ಹಿಂದೆಂದೂ ನಡೆದಿರಲಿಲ್ಲವೆಂಬಂತಹ ಘೋರವಾದ ಯುದ್ಧ. ಶ್ರೀರಾಮನು ಬಾಣಗಳಿಂದ ರಾವಣನ ತಲೆಗಳನ್ನು ಎಷ್ಟು ಸಲ ಕಡಿದರೂ ಅವನಿಗೆ ವರಬಲದಿಂದ ಹೊಸ ತಲೆಗಳು ಮೂಡುತ್ತಿದ್ದವು. ಕೊನೆಗೆ ಎದೆಗೆ ಗುರಿಮಾಡಿ ಹೊಡೆಯುತ್ತಲೇ ರಾವಣನು ಭಯಂಕರವಾಗಿ ಚೀರಿ, ರಕ್ತವನ್ನು ಕಾರುತ್ತಾ ಸತ್ತುಬಿದ್ದನು. ಆಕಾಶದಲಿದ್ದ ದೇವತೆಗಳು, “ಅಬ್ಬ! ಇದೆಂತಹ ಯದ್ಧ! ಸಮುದ್ರಕ್ಕೆ ಸಮುದ್ರವೇ ಸಾಟಿ ಎಂಬಂತೆ ರಾಮ-ರಾವಣರ ಯುದ್ಧಕ್ಕೆ ರಾಮ-ರಾವಣರ ಯದ್ಧವೇ ಸಾಟಿ. ರಾಮನಿಗೆ ಜಯವಾಯಿತು. ದುಷ್ಟ ರಾಕ್ಷರು ಸತ್ತರು. ಲೋಕದಲ್ಲಿ ಶಾಂತಿ ನೆಲೆಸಿತು. ಧರ್ಮಕ್ಕೆ ಜಯವಾಯಿತು” ಎಂದು ಹೂಮಳೆ ಸುರಿಸಿ ಕೊಂಡಾಡಿದರು. 

ರಾಮನು ವಿಭೀಷಣನಿಗೆ, “ವಿಭೀಷಣ, ರಾವಣನು ತನ್ನ ತಪ್ಪಿನಿಂದ ಸತ್ತನಾದರು ಅವನು ವೀರ. ವೀರರನ್ನು ನಾನು ಗೌರವಿಸುತ್ತೇನೆ. ನಿನಗಾದರೋ ಅವನು ಅಣ್ಣ. ಅವನಿಗೆ ಅಂತ್ಯಸಂಸ್ಕಾರ ಮಾಡಬೇಕಾದುದು ನಿನ್ನ ಧರ್ಮ” ಎಂದು ಹೇಳಿ ಎಲ್ಲವನ್ನೂ ಮಾಡಿಸಿದನು.

ಸೀತೆಯ ಅಗ್ನಿಪರೀಕ್ಷೆ

ಶುಭದಿನದಲ್ಲಿ ವಿಭೀಷಣನಿಗೆ ಲಂಕೆಯ ಪಟ್ಟಾಭಿಷೇಕವಾಯಿತು. ಇನ್ನು ಸೀತೆಯನ್ನು ಕರೆದುಕೊಂಡು ಹೋಗಬೇಕಲ್ಲವೇ ಶ್ರೀರಾಮ? ಆದರೆ ಹಾಗೆ ಮಾಡದೆ ಶ್ರೀರಾಮನು, “ಸೀತೆ, ರಾವಣನಿಂದ ನಿನ್ನನ್ನು ಬಿಡಿಸಿ ನನ್ನ ಧರ್ಮವನ್ನು ಪಾಲಿಸಿದ್ದೇನೆ. ಆದರೆ ರಾಕ್ಷಸರ ವಶದಲ್ಲಿದ್ದ ನಿನ್ನನ್ನು ಸ್ವೀಕರಿಸಲಾರೆ” ಎಂದುಬಿಟ್ಟನು. ಸೀತಾಮಾತೆಯ ದುಃಖ ಅಷ್ಟಿಷ್ಟಲ್ಲ. ಆಕೆ ಬೆಂಕಿಗೆ ದುಮುಕಿದಳು. ಅಷ್ಟರಲ್ಲಿ ದೇವತೆಗಳೇ ಭೂಮಿಗಿಳಿದು ಬಂದರು. ಬೆಂಕಿಯೂ ಸಹ ತಣ್ಣಗಾಯಿತು. ಅಗ್ನಿದೇವನೇ ಸೀತೆಯನ್ನು ರಾಮನಿಗೆ ಒಪ್ಪಿಸಿ, “ಶ್ರೀರಾಮ, ಈ ಪತಿವ್ರತೆಯನ್ನು ಸ್ವೀಕರಿಸು. ಸೀತೆಯ ಮೇಲೆ ಅನುಮಾನ ನಿನಗೆ ತಕ್ಕುದಲ್ಲ” ಎಂದನು. ಶ್ರೀರಾಮನೂ ಸಹ ಕಣ್ಣೀರನ್ನು ಒರೆಸಿಕೊಂಡು, “ದೇವತೆಗಳೇ, ಸೀತೆಯಿಲ್ಲದೆ ನಾನು ಮಾತ್ರ ಬದುಕುವೆನೆ? ಅವಳು ಪತಿವ್ರತೆಯೆಂದು ಬಲ್ಲೆ. ಆದರೆ ಅವಳ ಆದರ್ಶ ಚರಿತ್ರೆ ಲೋಕಕ್ಕೂ ತಿಳಿಯಲೆಂದೇ ಹೀಗೆ ಮಾಡಿದೆ” ಎಂದು ಸೀತೆಯನ್ನು ಕೈಹಿಡಿದು ಕರೆದುಕೊಂಡನು. ಎಲ್ಲರಿಗೂ ಸಂತೋಷವಾಯಿತು.

'ಶ್ರೀರಾಮನು ರಾವಣನನ್ನು ಕೊಂದನು’

ಶ್ರೀರಾಮನು ಸೀತೆಯೊಡನೆ ಪುಷ್ಪಕ ವಿಮಾನವನ್ನೇರಿದನು. ಆತನೊಡನೆ ಲಕ್ಷ್ಮಣ, ಸುಗ್ರೀವ, ವಿಭೀಷಣ, ವಾನರ ವೀರರು, ರಾಕ್ಷಸ ವೀರರು — ಎಲ್ಲರೂ ಹೊರಟು ಅಯೋಧ್ಯೆಗೆ ಬಂದರು. ಭರತನಿಗೂ ಅಯೋಧ್ಯೆಯ ಪ್ರಜೆಗಳಿಗೂ ಸಂತೋಷವಾಯಿತು. ಶುಭ ದಿನದಲ್ಲಿ ಶ್ರೀರಾಮನಿಗೆ ರಾಜ್ಯ ಪಟ್ಟಾಭಿಷೇಕವಾಯಿತು. ಪ್ರಜೆಗಳೆಲ್ಲರೂ “ಶ್ರೀರಾಮನೇ ನಮ್ಮ ತಂದೆ, ಸೀತೆಯೇ ನಮಗೆ ತಾಯಿ, ಇದು ರಾಮರಾಜ್ಯ” ಎಂದು ಹೊಗಳಿ ಕೊಂಡಾಡಿದರು. ದೇವತೆಗಳು ಮತ್ತು ಋಷಿ ಮುನಿಗಳೆಲ್ಲರೂ “ಶ್ರೀರಾಮಚಂದ್ರ, ಸುಗ್ರೀವ ವಿಭೀಷಣರಿಗೆ ರಾಜ್ಯವನ್ನು ಕೊಟ್ಟೆ. ತಂದೆಯ ಮಾತನ್ನು ನಡೆಸಿ ಕೀರ್ತಿಪಡೆದೆ. ದುಷ್ಟ ರಾಕ್ಷಸರನ್ನು ಕೊಂದು ಲೋಕದಲ್ಲಿ ಶಾಂತಿಯನ್ನು ಸ್ಥಾಪಿಸಿದೆ. ನಿನ್ನ ಚರಿತ್ರೆ ಲೋಕದಲ್ಲಿ ಶಾಶ್ವತವಾಗಲಿ” ಎಂದು ಹರಸಿದರು.

ಸತ್ಯವಂತಧರ್ಮಶೀಲ

ಶ್ರೀರಾಮನು ಪ್ರಜೆಗಳನ್ನು ತನ್ನ ಮಕ್ಕಳಂತೆ ಪಾಲಿಸಿದನು. ಆತನು ರಾಜ್ಯದಲ್ಲಿ ಸತ್ಯ-ಧರ್ಮಗಳು ಸದಾ ನೆಲೆಸಿದ್ದವು. ರಾಜನಂತೆ ಪ್ರಜೆ ಎಂಬ ಗಾದೆಯಿದೆಯಲ್ಲವೆ? ಶ್ರೀರಾಮನ ಪ್ರಜೆಗಳು ಸತ್ಯವಾದಿಗಳು, ತ್ಯಾಗಿಗಳು, ಧರ್ಮ ಪ್ರೇಮಿಗಳು. ಶ್ರೀರಾಮನು, “ಸತ್ಯ ಧರ್ಮಗಳ ರಕ್ಷಣೆಗಾಗಿ ನಾನು ಏನು ಬೇಕಾದರೂ ಮಾಡುತ್ತೇನೆ. ರಾಜ್ಯ, ತಮ್ಮಂದಿರು, ಕೊನೆಗೆ ಸೀತೆಯನ್ನೇ ಬೇಕಾದರೂ ತ್ಯಜಿಸುತ್ತೇನೆ” ಎಂದು ಘೋಷಿಸಿದ ಆದರ್ಶಮೂರ್ತಿ. ಒಂದು ಸಲ ಇದರ ಪರೀಕ್ಷೆಯೂ ಆಗಿ ಹೋಯಿತು. ಯಾರೋ ಒಬ್ಬ ಪ್ರಜೆಯು ಸೀತೆಯ ನೆಪವಿಟ್ಟು ರಾಮನನ್ನು ದೂಷಿಸಿದನು. ಶ್ರೀರಾಮನು ದುಃಖವನ್ನು ನುಂಗಿಕೊಂಡು ಸೀತೆಯನ್ನು ಕಾಡಿಗೆ ಕಳುಹಿಸಿಯೇ ಬಿಟ್ಟನು. ಸೀತೆಯು ಆಗ ಗರ್ಭಿಣಿ. ಈ ಸಂದರ್ಭದಲ್ಲೇ ಆಕೆ ವಾಲ್ಮೀಕಿಯ ಆಶ್ರಯದಲ್ಲಿ ಲವ-ಕುಶರೆಂಬ ಅವಳಿ ಮಕ್ಕಳನ್ನು ಹೆತ್ತದ್ದು!

ಇಂತಹ ಮತ್ತೊಂದು ಸ್ವಾರಸ್ಯದ ನಿದರ್ಶನವಿದೆ. ಶ್ರೀರಾಮನ ರಾಜ್ಯದಲ್ಲಿ ಅಪರಾಧಿಗಳೇ ಇರಲಿಲ್ಲವಂತೆ. ಅಂದಮೇಲೆ ನ್ಯಾಯಾಲಯದಲ್ಲಿ ದೂರು ಕೊಡುವವರಿರುತ್ತಾರೆಯೆ? ಒಂದು ಸಲ ಒಂದು ನಾಯಿಯು ಶ್ರೀರಾಮನ ನ್ಯಾಯಾಲಯಕ್ಕೆ ಬಂದು, “ಪ್ರಭು, ನಾನು ಹಸಿದು ಎಂದು ಮನೆಗೆ ಹೋದಾಗ ಮನೆಯ ಯಜಮಾನನು ನನ್ನನ್ನು ಹೊಡೆದಿದ್ದಾನೆ. ಅವನನ್ನು ಶಿಕ್ಷಿಸು” ಎಂದಿತಂತೆ. ಶ್ರೀರಾಮನು ನಾಯಿಯೆಂದು ಉದಾಸೀನ ಮಾಡಲಿಲ್ಲ. ಆ ವ್ಯಕ್ತಿಯನ್ನು ಕರೆಸಿ ದಂಡ ವಿಧಿಸಿದನಂತೆ. ಇಂತಹ ಧರ್ಮಮೂರ್ತಿ ಶ್ರೀರಾಮ. ಆದ್ದರಿಂದಲೇ ‘ರಾಮೋ ವಿಗ್ರಹವಾನ್ ಧರ್ಮಃ’. ಅಂದರೆ ಶ್ರೀರಾಮನು ಧರ್ಮದ ಅವತಾರವೆಂಬ ಮಾತು ಲೋಕವಿಖ್ಯಾತವಾಗಿದೆ.

ರಾಮರಾಜ್ಯ

ಇದು ಶ್ರೀರಾಮನ ಕಥೆ. ಶ್ರೀರಾಮನ ಕಥೆಯನ್ನು ಮೊಟ್ಟಮೊದಲಿಗೆ ವಾಲ್ಮೀಕಿ ಮುನಿಯು ಸಂಸ್ಕೃತದಲ್ಲಿ ಬರೆದನು. ಅದೇ ಶ್ರೀಮದ್ರಾಮಾಯಣ. ಅಂದಿನಿಂದ ಇಂದಿನವರೆಗೆ ಶ್ರೀರಾಮನ ಬಗ್ಗೆ ಎಷ್ಟೋ ಗ್ರಂಥಗಳು ರಚಿತವಾಗಿವೆ. ವಿದೇಶಗಳಲ್ಲೂ ಶ್ರೀರಾಮನ ಕಥೆ ಜನಪ್ರಿಯವಾಗಿದೆ. ರಾಮರಾಜ್ಯ ಎಂದರೆ ಅನ್ಯಾಯವಿಲ್ಲದ, ಎಲ್ಲರೂ ಸುಖವಾಗಿ ಸಂತೋಷವಾಗಿ ಇರುವ ರಾಜ್ಯ ಎಂಬ ಕಲ್ಪನೆ ಬಂದಿದೆ.

ಶ್ರೀರಾಮ ಅಸಮಾನ ಪರಾಕ್ರಮಿ. ಆದರೆ ಅವನನ್ನು ಜನ ಭಕ್ತಿಯಿಂದ ನೆನೆಯುವುದು ಅವನ ಧರ್ಮ ಪರಿಪಾಲನೆಗಾಗಿ. ತಂದೆಯ ಮಾತನ್ನು ಉಳಿಸಲು ಒಂದು ಕ್ಷಣವೂ ಯೋಚಿಸದೆ ಕಾಡಿಗೆ ಹೊರಟ. ಭರತನೇ ಬಂದು ಬೇಡಿದರೂ ಹದಿನಾಲ್ಕು ವರ್ಷ ಕಳೆಯುವವರೆಗೆ ಹಿಂದಿರುಗುವುದಿಲ್ಲ ಎಂದ. ಶರಣುಬಂದ ಶತ್ರುವನ್ನು ಪ್ರೀತಿಯಿಂದ ಕಂಡ. ಸತ್ತ ರಾವಣನನ್ನು ಗೌರವಿಸಿದ. ರಾಜ್ಯವನ್ನಾಳಿದ್ದು ತನ್ನ ವೈಭವಕ್ಕಲ್ಲ. ತನ್ನ ಸುಖಕ್ಕಲ್ಲ, ಪ್ರಜೆಗಳ ಸುಖಕ್ಕಾಗಿ. ರಾಜನಾದ ತಾನು ಪ್ರಜೆಗಳ ಮೊದಲನೆಯ ಸೇವಕನಾದ. ಮಾತಿನ ಮೃದುತ್ವ, ಔದಾರ್ಯ, ವಾತ್ಸಲ್ಯ, ಧರ್ಮನಿಷ್ಠೆ ಎಲ್ಲ ಸಂಗಮಿಸಿದ ಪುಣ್ಯಮೂರ್ತಿ ಶ್ರೀರಾಮ.