ರಾಗ ಭೈರವಿ ಅಷ್ಟತಾಳ

ಮರುಳು ಈಶನೆ ಕೇಳ್ ನೀನು | ಸೋದರಳಿಯ | ತರಳ ನಿನಗೆ ಇವನು ||
ಬರಿದೆ ಪೇಳಿದರೊಪ್ಪೆ ಸರಿಯಾಗಿ ಪೇಳುತ್ತ | ಹರಣವನುಳುಹಿಕೊಳ್ಳೊ   ||೩೪೦||

ಮಡದಿ ಪಾರ್ವತಿ ನಿನ್ನಯ | ಸೋದರಿಯಳು | ಪಡೆದತಾಯನು ಕೇಳಯ್ಯ ||
ಜಡಜಾಂಬಕ ಬಲ್ಲ ನೀನದನರಿಯೆಯ | ಕಡೆಗೆ ತಮ್ಮನ ಕೇಳಿಕೊ         ||೩೪೧||

ಯದುಕುಲದವರು ನಾವು | ನಿನ್ನಯ ಭೂತ | ಸದನಕ್ಕೆ ತಂಗಿಯೀವು |
ದಿದು ಸಟೆ ಸೋದರಿಯೋರ್ವಳೆ ಸೌಭದ್ರೆ | ಅದುಭುತ ನೀನಲ್ಲಯ್ಯ      ||೩೪೨||

ಅರಿಯದೆ ಪೇಳ್ವೆ ಭಾವ | ನಿನ್ನಯ ಮೂಲ | ಅರುಹುವೆ ಕೇಳೀ ಭಾವ ||
ದುರುಳ ಕಂಸನ ತಂಗಿತರಳರು ನೀವೆಂದು | ಅರಿಯದೆ ಪೇಳ್ವೆ ಯಾಕೆ   ||೩೪೩||
ಭೂತ ಪಿಶಾಚಿಗಳು | ನಿನ್ನಯ ಸೇನೆ | ಆತುದುಯೆನುತಾಗಳು ||

ಧಾತುಗೆಡುತ ಮೊದಲವರಿತ್ತರು ನಾ | ನೀತಿಯ ತಪ್ಪಿಕೊಡೆ     ||೩೪೪||
ನೀತಿವಂತರದಹುದು | ನಿಮ್ಮಯ ಜಾತಿ | ನೀತಿಯು ಬಹುಯೋಗ್ಯದ್ದು ||
ತ್ರೇತಾಯುಗದ ಹಿಂದೆ ಪುಟ್ಟಿದ ರೇವತಿ | ನಾಥನು ನೀನಲ್ಲಯ್ಯ ||೩೪೫||

ದುರುಳತನದ ಮಾತನು | ಆಡಲುಬೇಡ | ದುರುಳತ್ವದಿಂ ದಕ್ಷನ ||
ಕೊರಳನ್ನೆ ಕಡಿಸಿದ ದ್ರೋಹಿ ನೀ ಶ್ವಶುರನೆಂ | ದರಿತು ನೀ ಮಾಡಿಸಿದೆ   ||೩೪೬||

ಮಾವ ಕಂಸನನು ಪೋಗಿ | ಕೊಂದಿಹ ದುಷ್ಟ | ಭಾವವ ನೀವೆಸಗಿ ||
ಕೇವಲ ದುರುಳತ್ವ ಗೈದಿಂತು ಪರರನ್ನು | ಭಾವಿಸಿ ಪೇಳ್ವುದೇಕೆ ||೩೪೭||

ದುಷ್ಟ ಸ್ವಭಾವದೊಳು | ಮನ್ಮಥನನ್ನು | ಸುಟ್ಟುರುಹಿದೆ ಆಗಳು ||
ಶ್ರೇಷ್ಠ ನೀನೆಂತೆಂಬೆ ನೋಡಲಾಗದು ಇಂದು | ಭ್ರಷ್ಟ ನಿನ್ನಯ ಮೊಗವ   ||೩೪೮||

ಭಾಮಿನಿ

ಎಂದು ನಾನಾಪರಿಯೊಳೀರ್ವರು |
ಅಂದು ಮೂದಲಿಸುತ್ತ ಬಹುಪರಿ |
ಯಿಂದ ಕ್ರೋಧವ ಗೊಂಡು ಗದೆಯೊಳು ಇಂದುಧರಗಾಗ ||
ಮುಂದಲಿಸಿ ಹೊಡೆಯಲ್ಕೆ ಬಳಿಕದ |
ನಂದು ಸೆಳೆಯುತ ಶೂಲದಿಂದಾ |
ನಂದನಂದನಗೆಸೆಯೆ ನುಡಿದನು ಹಲವು ತೆರದಿಂದ   ||೩೪೯||

ರಾಗ ಪಂಚಾಗತಿ ಮಟ್ಟೆತಾಳ

ಯದುಕುಲೇಂದ್ರ ರಾಮ ನಿನಗೆ ಕದನ ಬೇಡೆಲೊ |
ಮುದದಿ ಸುತೆಯ ಧಾರೆಯೆರೆದು ಮದುವೆ ಮಾಡೆಲೊ ||೩೫೦||

ಕರೆಸಿದವನ ಧುರದಿ ಕೊಂದೆ ತರಳನ್ಯಾರೆಲಾ |
ವರನ ಪುಡುಕಿ ತರಲುಬೇಕು ತರಳೆಗ್ಯಾವನ  ||೩೫೧||

ತರಲು ಬೇಡ ತರಳನನ್ನು ತರಳೆಗಿಂದಿಲಿ ||
ವರನು ಎನ್ನ ಕುವರ  ಕೇಳು ಬರಿಯ ಮಾತಿಲಿ         ||೩೫೨||

ದುರುಳ ಕೇಳು ತರಳೆಯನ್ನು ನಿನ್ನ ಸುತನಿಗೆ |
ಪರಿಣಯವನು ಗೈವನಲ್ಲ ಕರಿಯಮೊಗನಿಗೆ   ||೩೫೩||
ಹೀನಗೆಯ್ಯಬೇಡ ಪಾಪಿ ಊನವಲ್ಲವೊ |
ಕ್ಷೋಣಿಯೊಳಗೆ ಮೊದಲು ಪೂಜೆಯೇನನೆಂಬೆಯೊ     ||೩೫೪||

ಯದುಕುಲಕ್ಕೆ ಯೋಗ್ಯನಲ್ಲ ಮದುವೆ ಮಾಳ್ಪರೆ |
ಸುದತಿಯನ್ನು ಕೊಡೆನು ಇಂದು ಕದನ ಗೈದರೆ         ||೩೫೫||

ಮೂಢ ಕೇಳು ನಿಮ್ಮ ಕುಲವ ಆಡಬೇಡವೊ |
ಗಾಢದಿಂದ ಕದನಗೆಯ್ಯೆ ಕೇಡು ತಪ್ಪದೊ     ||೩೫೬||

ರಾಗ ಮಾರವಿ ಏಕತಾಳ

ಎನುತೀಪರಿಯಲಿ ನುಡಿವುತ ಶಂಕರ | ಘನತರ ರೋಷದೊಳು ||
ಕಣೆಗಳ ಸುರಿಯಲು ಕತ್ತರಿಸುತಲಾ | ದಿನಮಣಿಯಂದದೊಳು  ||೩೫೭||

ಪ್ರಜ್ವಲಿಸುತ ತಾ ಮುಸಲವ ತೆಗೆದಿಡೆ | ಧೂರ್ಜಟಿ ಕಾಣುತಲಿ ||
ಗರ್ಜಿಸುತಾಕ್ಷಣ ಕರದಲಿ ಪಿಡಿಯುತ | ನಿರ್ಜೀವಿಸಿ ಸೆಳೆಯೆ     ||೩೫೮||

ಕಂಡಾ ಬಲನದ ಹಲವನ ತಿರುಹುತ | ಮಂಡೆಗೆ ಎರಗಿದನು ||
ಕೆಂಡವನುಗುಳುತ ಹರನದ ತಾ ಕೈ | ಕೊಂಡನು ಸೂಟಿಯಲಿ  ||೩೫೯||
ಭುಜವನೊದರಿಸಿ  ಬರುತಿಹ ರಾಮನ | ಭುಜಗಭೂಷಣನಂದು ||

ಗಜಬಜಿಸುತ್ತಲಿ ಸೆರೆವಿಡಿದಾಕ್ಷಣ | ಕಜವನುಗೆಯ್ಯೆನುತ          ||೩೬೦||

ಭಾಮಿನಿ

ಅರಸ ಕೇಳೇನೆಂಬೆ ಯದುಕುಲ |
ದರಸನನು ಸೆರೆವಿಡಿದು ಶಂಕರ |
ಭರದಿ ನುಡಿದನು ಭರಿತ ರೋಷಾತುರದಿ ಮೂದಲಿಸಿ ||
ದುರುಳ ಭೂತಾಧಿಪರು ನಾವೈ |
ಕರಿಮುಖನುಯೆಮ್ಮಯ ಕುಮಾರನು |
ಬರಿದೆ ಮೌನವ ತಾಳ್ದುದೇತಕೆ ಧುರವನೆಸಗೆಂದ      ||೩೬೧||

ರಾಗ ಕಾಪಿ ಅಷ್ಟತಾಳ

ಎನುತಲಿ ಶಂಕರ  ನುಡಿವುತ್ತ | ತಾನು | ಘನಕೋಪದಿಂದನುವರಿಸುತ್ತ ||
ವಿನಯದಿ ಬಲನೊಳು ನುಡಿದನು | ಯದು | ತನಯನೆ ದುಗುಡವಿದೇನಿನ್ನು        ||೩೬೨||

ಸಾರಿ ಪೇಳಿದರೆಮ್ಮ ಜರೆದೆಯ | ನೀನಿ | ನ್ನಾರುಭಟೆಯ ತೋರು ತೋರಯ್ಯ ||
ಕೂರಸಿಯಿಂದಲಿ ಕಂಠವ | ಹೆ | ಮ್ಮಾರಿಗೆ ಔತಣ ಬಡಿಸುವ     ||೩೬೩||

ನಮ್ಮ ಶರಣ ಬಾಣ ಶಂಬರ | ನಿನ್ನ | ತಮ್ಮ ಕೊಂದಿಹ ನರಮುರಕರ ||
ಒಮ್ಮೆಯೆ ಮೆಟ್ಟಿದ ಬಲಿಯನು | ಕೇಳು | ಬ್ರಹ್ಮನ ಲಿಪಿಯು ಜೀವರಿಗಿನ್ನು  ||೩೬೪||

ದುರುಳನೆನ್ನುತ ಹಿರಣ್ಯಾಕ್ಷನ | ಆ | ತರಳನ ನೆವದಿ ಅವನ ತಮ್ಮನ ||
ಬರಿದೆ ಸಂಹರಿಸಿದ ಭಕ್ತರ | ನಿನ್ನ | ಕೊರಳರಿವೆನು ಪೇಳು ಕಾಯ್ವರ      ||೩೬೫||

ಕಂದ

ಈ ಪರಿಯಂ ಕಾಣುತ ಗಿರಿ |
ಜಾತೆಯು ಬಂದಡ್ಡಯಿಸುತ ವಂದಿಸಿ ಪ್ರಿಯನಂ ||
ಕೋಪವ ಬಿಡು ಸೆರೆ ಸಿಕ್ಕಿಹ |
ಭೂಪತಿಯೆನ್ನಗ್ರಜನಂ ಕಾಪಾಡೆಂದಳ್       ||೩೬೬||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಸಿಟ್ಟು ಸಂತೈಸಲ್ಕೆ ಆ ಕ್ಷಣ | ಕಟ್ಟಿ ಕರಗಳ ಬಿಗಿದು ತಂದಾ |
ಕೊಟ್ಟು ನಂದಿಯ ಕೈಯೊಳೆಂದನು | ದಿಟ್ಟತನದಿ       ||೩೬೭||

ಗಣರ ಜೊತೆಯಲಿ ಕೂಡಿ ಸುತ್ತಲಿ | ಕುಣಿಸುವುದು ದಿನದಿನದೊಳೀತನ |
ಅಣುಗೆಯನು ಕರೆತನ್ನಿರೆಂದನು | ಗಣರಿಗಾಗ ||೩೬೮||

ಬಲನು ದುಮ್ಮಾನದಲಿ ಬಳಿಕಾ | ನಳಿನನಾಭನ ಕಂಡು ಸನ್ನೆಯೊ |
ಳರುಹಿದನು ಹಲವಂಗದಿಂದಲಿ | ಉಳುಹಿಸೆನ್ನ         ||೩೬೯||

ತಿಳಿದು ಶ್ರೀಹರಿಯಾಗಲುರೆ ಕಡು | ಮುಳಿಸಿನಿಂದಲಿ ಇರುವ ಈಶನ |
ಬಳಿಗೆ ಬಂದಿಂತೆಂದನಾಕ್ಷಣ | ನಲವಿನಿಂದ   ||೩೭೦||

ರಾಗ ದೇಶಿ ಅಷ್ಟತಾಳ

ಭಾವಯ್ಯ ಶರಣು ನಮ್ಮ | ಅಣ್ಣಯ್ಯನ | ಕಾವ ಭಾರವು ಕೇಳ್ ನಿಮ್ಮ ||
ಭಾವನಲ್ಲವೆ ಬಿಡು ಕೋಪವ ನೀ ನಮ್ರ | ಭಾವದಿಂದಲಿ ರಕ್ಷಿಸೆಂದು ಕರುಣಸಿಂಧು ||೩೭೧||

ಕರಗಳ ಬಿಡಿಸು ನಮ್ಮ | ಹಿರಿಯನೀತ | ಸೆರೆಯನ್ನು ಬಿಡಿಸಿ ನಿಮ್ಮ ||
ತರಳಗೆ ಲಗ್ನವ ವಿರಚಿಸಬಾರದೆ | ಮರುಳಾಟಿಕೆ ಬೇಡ ಹರ ನೀನು ದಯ ಮಾಡು ||೩೭೨||

ಎಂದು ಶ್ರೀಹರಿ ಪೇಳಲು | ಕೇಳುತಲಾಗ | ಇಂದುಧರನು ಏಳಲು ||
ವಂದಿಸಿ ಕೃಷ್ಣಗೆ ಕರಪಿಡಿದಾಕ್ಷಣ | ಒಂದನರಿಯದಾತ ಮಂದ ಬುದ್ಧಿಗಳಿಂದ        ||೩೭೩||

ಧುರವೆಸಗಿದ ನಮ್ಮಲಿ | ಬಂದಿಹ ನಮ್ಮ | ತರುಣಿಯ ಕಡೆಗಣ್ಣಲಿ ||
ಸರಿಯಾಗಿ ಕಾಣದೆ ದುರಹಂಕಾರದಿ | ತರಳೆಯ ಕೊಡೆನೆಂದು ತರಳನ ಜರೆದನು ||೩೭೪||

ಬಳಿಕ ನೀ ಸಂಗರಕೆ | ಬಂದಿಹೆಯಲ್ಲಾ | ಗಳಿಗೆಯೊಳ್ ಪೇಳಲೀಕೆ ||
ಕೊಳಗುಳಕೆಮ್ಮೊಳು ಇನ್ನೊಮ್ಮೆ ಬಂದರೆ | ತಿಳಿವುದು ಭಾವಯ್ಯ ಒಳವನೆಲ್ಲವ ಈಗ        ||೩೭೫||

ಭಾಮಿನಿ
ಇಂತುಸಿರೆ ಶ್ರೀ ಹರಿಯು ಕೇಳುತ |
ಕಂತುಹರನಾಕ್ಷಣವೆ ಬಲನನು |
ಸಂತವಿಸಿ ಕರೆತಂದು ಕರಗಳನಿಂತು ಬಿಡಿಸುತಲಿ ||
ಚಿಂತೆಯನು ಬಿಡು ಭಾವ ನಮ್ಮಯ |
ಕಾಂತೆಯಳ ನುಡಿ ಕೇಳದೀಪರಿ |
ಬಂತು ದುಗುಡವ ಬಿಟ್ಟು ಶೀಘ್ರದಿ ಪರಿಣಯವನೆಸಗು  ||೩೭೬||

ರಾಗ ನವರೋಜು ಏಕತಾಳ

ಶಂಕರನೆಂದುದ ಕೇಳಿ | ಬಲು | ಬಿಂಕವ ಬಿಟ್ಟನು ತಾಳಿ ||
ಪಂಕಜಮುಖಿಯನು ಗಣಪತಿಗೀಗಳೆ | ಶಂಕೆಯ ಮಾಡದೆ ಮದುವೆಯ ಮಾಳ್ಪೆನು          ||೩೭೭||

ಮನದಲಿ ಯೋಚಿಸಿ ಬಲನು | ಬಹು | ವಿನಯದಿ ವಂದಿಸಿ ತಾನು ||
ಅನುವರವೆಸಗಿದೆ ತಿಳಿಯದೆ ನಿಮ್ಮಯ | ಅಣುಗಗೆ ಕುವರಿಯ ಕೊಡುವೆನು ಶೀಘ್ರದಿ         ||೩೭೮||

ಎಸೆಗುವೆನೆಂದುದ ಕೇಳಿ | ಹರ | ಕುಶಲದಲಿ ಮುದ ತಾಳಿ ||
ವಿಷಮವು ಸೈರಿಸಿಕೊಂಡಿಹೆ ಭಾವನೆ | ವ್ಯಸನಗಳಿಲ್ಲವು ನಡೆ ಪುರಕೀಗಳೆ          ||೩೭೯||

ರಾಗ ಮಧ್ಯಮಾವತಿ ತ್ರಿವುಡೆತಾಳ

ಹರನ ವಚನವ ಮನ್ನಿಸುತಲಾ | ಪುರಕೆ ಕರೆದೊಯ್ದಾಗ ಬಲ ತಾ |
ಪರಿಪರಿಯೊಳುಪಚರಿಸುತಿರ್ದನು | ಹರನ ಗಣರನು ವಹಿಲದಿ   ||೩೮೦||
ಶ್ರೀವರನು ಉಪಚರಿಸಿ ಹರನನು | ಭಾಮೆ ರುಕ್ಮಿಣಿ ಸಹಿತ ಬಂದಾ |
ದೇವಿ ಪಾರ್ವತಿಯನ್ನು ಕರೆತಂ | ದಾ ವಿಭವದಲಿ ಮನ್ನಿಸಿ       ||೩೮೧||
ಕುಳ್ಳಿರಿಸುತಾಸನದಿ ಮತ್ತವ | ರೆಲ್ಲವರಿಗೂ ತೃಷೆಗೆ ಈಯುತ |
ನಿಲ್ಲದಾ ವೀಳೆಯವ ಕೊಡಿಸಿದ | ಸಲ್ಲಲಿತದಿಂದಾಗಳೆ  ||೩೮೨||
ವಧುವರರ ಶೃಂಗರಿಸಿ ತನ್ನಿರಿ | ವಿಧಿಯಪೂರ್ವಕದಿಂದ ಲಗ್ನವ |
ಒದಗಿನಲಿ ಗಾರ್ಗ್ಯರನು ಕರೆಸುತ | ಮುದದೊಳೆಂದನು ಶಂಕರ ||೩೮೩||

ಭಾಮಿನಿ

ದೊರೆಯೆ ಲಾಲಿಸು ಬಳಿಕ ವಿಪ್ರರ |
ಹರಕೆಯನು ಕೈಗೊಂಡು ರಾಮನು |
ವಿರಚಿಸಿದ ಧಾರೆಯನು ತರಳೆಗೆ ಏನ ಬಣ್ಣಿಪೆನು ||
ಧರಣಿಸುರರಿಗೆ ದಕ್ಷಿಣೆಯ ತಾ |
ಪರಮ ಹರುಷದಿ ಬಲನು ಕೊಡುತಿರೆ |
ತರುಣಿಯರು ಆರತಿಯ ಬೆಳಗಿದರಂದು ಪರಸುತಲಿ   ||೩೮೪||

ರಾಗ ಢವಳಾರ ಅಷ್ಟತಾಳ

ಆರತಿಯೆತ್ತಿದರು ನಾರಿಯರೆಲ್ಲರು |          || ಪಲ್ಲವಿ ||
ಧೀರ ಗಣನಾಥಗೆ || ಆರತಿಯೆತ್ತಿದರು
ಗೌರಿಯ ವರಪುತ್ರ ಸಿದ್ಧಿವಿನಾಯಕ |
ಸಾರಸನೇತ್ರೆಗೆ ಸರಸಿಜ ಮುಖಿಯರು | ಆರತಿಯೆತ್ತಿದರು       ||೩೮೫||

ಮಾತೆಯ ಮಾತಿಗೆ ತಾತನೊಳ್ ಧುರಗೆಯ್ದ |
ಖ್ಯಾತಿಯುತಗೆ ಋಷಿಜಾತೆಗೆ ಸಹಿತಲಿ || ಆರತಿಯೆತ್ತಿದರು      ||೩೮೬||

ಶಂಕರನಂದನ ಅಂಕುರವಾಹನ |
ಪಂಕಜವದನೆಗೆ ಶಶಿಮುಖಿಗೆ || ಆರತಿಯೆತ್ತಿದರು       ||೩೮೭||

ಭಾಮಿನಿ

ಇನಿತು ಸಂತಸದಿಂದಲಾಗಳೆ |
ವನಿತೆಯರು ಆರತಿಯ ಬೆಳಗಲು |
ದಿನವು ಮೂರೊಂದರಲಿ ತನುಜೆಗೆ ನಾಕವಂ ರಚಿಸಿ ||
ದಿನಪತೇಜದಿ ಮೆರೆವ ವಧುವರ |
ರನುವಿನಿಂ ಕರೆದೊಯ್ದ ಶಂಕರ |
ನೆನುವುದನು ನಾನೀಗ ಪೇಳಿದೆ ಚಿನುಮಯನ ಸ್ಮರಿಸಿ ||೩೮೮||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಇಂತು ವೈಶಂಪಾಯಮುನಿಪತಿ | ಸಂತಯಿಸಿ ಜನಮೇಜಯಾಖ್ಯನಿ |
ಗಿಂತು ಪೇಳಿದ ಕಥೆಯ ನಾನಿದ | ನಂತರದಲಿ        ||೩೮೯||

ವಿರಚಿಸಿದೆ ವರ ಯಕ್ಷಗಾನದಿ | ಅರಿಯೆ ನಾ ಲಯತಾಳಗಳ ಸಿರಿ |
ವರನ ಧ್ಯಾನದಿ ಪೇಳ್ದ ಕಥನವ | ನರರು ಇಂದು       ||೩೯೦||

ಇರಲು ತಪ್ಪದ ತಿದ್ದಿ ಮೆರೆಸಲು | ಪೊರೆವ ನಿಮ್ಮನು ಯದುವರೇಣ್ಯನು |
ಹರಸುವುದು ನೀವೀಗಲೆನ್ನನು | ಕರುಣದಿಂದ ||೩೯೧||

ರಾಗ ಸಾಂಗತ್ಯ ರೂಪಕತಾಳ

ಅಕ್ಷಯವತ್ಸರ ಪುಷ್ಯಮಾಸದ ಶುಕ್ಲ | ಪಕ್ಷ ನವಮಿಯ ಸುದಿನದಿ ||
ಲಕ್ಷ್ಮೀಶ ನುಡಿಸಿದ ತೆರದಿಂದ ಬರೆದೆನು | ಈಕ್ಷಿಪುದೆಲ್ಲರೀ ದಿನದಿ          ||೩೯೨||

ಸೃಷ್ಟಿಪುರದವಾಸ ರಾಮಕೃಷ್ಣಯ್ಯನು | ಅಷ್ಟಮಠದ ಮಧ್ಯೆಯಿರುವ ||
ಶ್ರೇಷ್ಠ ಗುರುರಾಯರ್ಗೆ ನಾನಿಂದು ಹರುಷದಿ | ಕೊಟ್ಟಿರ್ಪೆ ಸಕಲ ಸ್ವತಂತ್ರ ||

ಮಂಗಲ
ರಾಗ ಮೋಹನ ಆದಿತಾಳ

ರಜತಾದ್ರಿವಾಸಗೆ ಪಾರ್ವತಿಗೆ | ತ್ರಿಜಗತ್ಪಾಲಗೆ ಗಿರಿಸುತೆಗೆ ||
ಭುಜಗ ಭೂಷಣನಿಗೆ ಶಾಂಭವಿದೇವಿಗೆ | ಕುಜನಕುಠಾರಿಗೆ ಗೌರಿಗೆ ಶಿವಗೆ |
ಮಂಗಲಂ ಜಯ ಮಂಗಲಂ         ||೩೯೩||

ಶಂಕರನಂದನ ಗಣಪತಿಗೆ | ಅಂಕುರವಾಹನ ದೇವರಿಗೆ ||
ಕಿಂಕರನಿಕರವ ಸಂತತ ಸಲಹುವ | ಪಂಕಜನೇತ್ರೆಗೆ ಸುರಮುನಿಗೆ |
ಮಂಗಲಂ ಜಯ ಮಂಗಲಂ         ||೩೯೪||

ಸುರಮುನಿನಮಿತ ಸರ್ವೇಶ್ವರಗೆ | ಗರುಡ ಗಮನಗೆ ಹರಪುತ್ರಗೆ ||
ಪರಮಕೃಪಾನಿಧಿ ಶ್ರೀರಾಮಕೃಷ್ಣಗೆ | ಕರುಣಾಕರ ಶ್ರೀ ಕೃಷ್ಣನಿಗೆ ||
ಮಂಗಲಂ ಜಯ ಮಂಗಲಂ         ||೩೯೫||

ಯಕ್ಷಗಾನ ಯೋಗಿನೀ ಕಲ್ಯಾಣ ಮುಗಿದುದು