ರಾಗ ಕೇದಾರಗೌಳ ಝಂಪೆತಾಳ

ದೊರೆಯೆ ಕೇಳ್ ವಂಗನೃಪನು | ಅಲ್ಲದಡೆ | ಸರಿಯುಂಟೆ ಚೇದಿವರನು ||
ಭರಿತವಿಕ್ರಮ ಕೇಕಯ | ಮತ್ತೀಗ | ಸರಿ ಯಾರು ಸಾಲ್ವಪತಿಯ ||೭೪||
ಅರಸ ಮಗಧಾದೀಶನು | ಕೇಳೊರೆವೆ | ಕುರುಕುಲದ ಅವನಿಪನನು ||
ಹರಗೆ ಸರಿಯಹ ಸೈಂಧವ | ನೃಪನಿರುವ | ಸರಿದೊರೆಯು ಭೂರಿಶ್ರವ    ||೭೫||

ಅಂಗ ದೇಶದ ಭೂಪನು | ಮತ್ತಿನ್ನು | ತುಂಗವಿಕ್ರಮ ಶಲ್ಯನು ||
ವಿಂಗಡದ ದ್ರುಪದ ಪುತ್ರ | ನೋಡೈ ಕ | ಳಿಂಗದೊರೆ ತೊರೆ ವಿಚಿತ್ರ      ||೭೬||

ಬಿಡು ಮಂತ್ರಿ ತುಂಡರಸರ | ದೊರೆಯಾದ | ಕಡುಪರಾಕ್ರಮಿ ಭೂಪರ ||
ಸಡಗರದ ಕಾಶ್ಮಿರೇಶ | ಸರಿಯಾಹ | ಪೊಡವಿಪರು ಕೇಳು ಈಶ ||೭೭||

ಸಮನಹನು ಪೌರುಷದೊಳು | ಕೌಂಡ್ಲಿಕಗೆ | ಸುಮನಸರು ಬೆದರ್ವರೇಳು ||
ಅಮಿತ ವಿಕ್ರಮಗೆಯೆನ್ನ | ಸುತೆಯನ್ನು | ಕ್ರಮದಿಂದ ಕೊಡುವೆ ಮುನ್ನ     ||೭೮||

ಓಲೆಯನು ಬರೆದು ಈಗ | ಚರರಿಂದ | ಶೀಲನಿಗೆ ಕಳುಹು ಬೇಗ ||
ಆಲಸ್ಯ ಬೇಡ ಮತ್ತೆ | ಮುಂದಿನ್ನು | ಹೇಳಿ ಕಳುಹಿಸು ಇವೊತ್ತೆ   ||೭೯||

ಎಂದು ಹಲಧರ ನುಡಿಯಲು | ಕೇಳುತಲಿ | ಅಂದು ಮಂತ್ರಿಯು ಭರದೊಳು ||
ಚಂದದಿಂ ಲೇಖನವನು | ಚರರ ಮುಖ | ದಿಂದ ಕಳುಹಿದನು ತಾನು     ||೮೦||

ರಾಗ ಮಾರವಿ ಏಕತಾಳ

ಅತ್ತಲು ಕಾಶ್ಮೀರೇಶನು ಒಂದಿನ | ಇತ್ತನು ಓಲಗವ ||
ಉತ್ತಮ ಸಚಿವ ಪ್ರತಾಪಾಖ್ಯನು ಸಹಿ | ತರ್ತಿಯೊಳಾದಿನದಿ    ||೮೧||

ಹಿಂದಿನ ತೆರದಲಿ ಕಾಣಿಕೆ ಕಪ್ಪವ | ತಂದರೆ ಅವನಿಪರು ||
ಎಂದಾ ಮಂತ್ರಿಯೊಳುಸಿರುತ ಭೂಪತಿ | ಚಂದದೊಳಿರಲಾಗ   ||೮೨||

ಆಗಲೆ ದ್ವಾರಕಾನಗರದ ಚಾರರು | ಬೇಗದೊಳೈತಂದು ||
ಬಾಗುತ ಶಿರವನು ಲೇಖನವೀಯ | ಲ್ಕಾಗದ ವಾಚಿಸಿದ         ||೮೩||

ರಾಗ ಕೇದಾರಗೌಳ ಝಂಪೆತಾಳ

ರಾಜಾಧಿರಾಜರೊಳಗೆ | ಶ್ರೇಷ್ಠನಹ | ರಾಜ ಕೌಂಡ್ಲಿಕಭೂಪಗೆ ||
ಮೂಜಗದ ಭೂಪರಿಂದ | ಕಾಣಿಕೆಯ | ಸೋಜಿಗದಿ ಪಡೆವೆನಿಂದು         ||೮೪||

ದ್ವಾರಕಾಪುರದರಸನು | ಬಲಭದ್ರ | ವೀರ ನಿಮ್ಮಡಿಗೆಯಿನ್ನು ||
ಭೂರಿ ಸಂಭ್ರಮದಿ ನಾನು | ವಂದಿಸಿದ | ಕಾರಣವ ಪೇಳ್ವೆಯಿನ್ನು         ||೮೫||

ಕುಶಲಿಗರೆ ನಿಮ್ಮ ಪುರದಿ | ಪರಿವಾರ | ಅಸಮ ಸಾಹಸರು ಮುದದಿ ||
ಕುಶಲದಿಂದಿಹರೆಯೆನುತ | ಉತ್ತರವ | ಸಸಿನದಿಂ ಬರೆದು ಮತ್ತಾ        ||೮೬||

ಎನ್ನ ಮೋಹದ ಪುತ್ರಿಯ | ಸಂಭ್ರಮದಿ | ಇನ್ನು ಕೇಳ್ ನಿನಗೆ ರಾಯ ||
ನಿರ್ಣಯದಿ ಧಾರೆಯೆರೆದು | ಕೊಡುವೆ ನಾ | ಕನ್ನೆಯಳ ಬದಲು ಬರೆದು   ||೮೭||

ಕಳುಹಬೇಕೀಗ ಎನುತ | ಬರೆದಿರುವ | ಬಲನ ಲೇಖನ ನೋಡುತ ||
ಇಳೆಯಪಾಲಕ ಹಿಗ್ಗುತ | ವಿಪ್ರರನು | ಗಳಿಗೆಯೊಳು ಕರೆದು ಮತ್ತಾ       ||೮೮||

ರಾಗ ಕೇದಾರಗೌಳ ಅಷ್ಟತಾಳ

ಕೇಳ್ ವಿಪ್ರ ದ್ವಾರಕಾಪುರಪತಿ ಬಲಭದ್ರ | ಶೀಲಗುಣಾನ್ವಿತನು ||
ಓಲೆಯ ಬರೆದಿಹ ಪುತ್ರಿಯ ಕೊಡುವೆನೆಂ | ದಾಲೈಸಬೇಕು ಮತ್ತೆ         ||೮೯||

ಲಗ್ನ ನಿಶ್ಚಯಿಸಿ ನೀವುತ್ತರ ಕೊಡಬೇಕು | ವಿಘ್ನವಿಲ್ಲದ ದಿವಸ ||
ಸುಜ್ಞವಂತನೆ ಪೇಳಬೇಕೆಂದ ಭೂಪಗೆ | ಲಗ್ನವ ಗುಣಿಸಿ ವಿಪ್ರ    ||೯೦||

ಬರುವ ವತ್ಸರ ಮಾಘಮಾಸದ ಪಂಚಮಿ | ಇರುವುದೈ ಶುಭಲಗ್ನವು ||
ಸರಿಬೀಳದಿರೆ ಮುಂದೆ ಪುಷ್ಯ ಸಪ್ತಮಿಯೊಳು | ಇರುವುದು ಲಗ್ನ ಕೇಳು   ||೯೧||

ಏನಯ್ಯ ಮುದಿ ವಿಪ್ರ ತ್ವರ್ಯದಿ ಲಗ್ನ ನಿ | ಧಾನಿಸಿ ನೋಡೆಂದರೆ ||
ಸಾನುರಾಗದಿ ಮುಂದೆ ಮುಂದಿನ ವತ್ಸರ | ನೀನು ನೋಡುವೆ ಯಾಕಯ್ಯ         ||೯೨||

ಯಾವ ಬೆಲೆಯ ಲಗ್ನಯೀಗ ನಾ ನೋಡುವೆ | ನೀವುದು ಸಾಮ್ಯ ಕೇಳಿ ||
ಭೂವರೇಣ್ಯನು ತಂದುಕೊಟ್ಟರೆ ಪೇಳ್ವೆನೆಂ | ದಾ ವಿಪ್ರನಿಗೆ ಪೇಳ್ದನು      ||೯೩||

ಸರಿಯಾದ ಮರ್ಯಾದೆ ಭೂರಿ ದಕ್ಷಿಣೆಗಳ | ಪರಿ ಪರಿಯೊಳು ಕೊಳ್ಳಿರಿ ||
ತ್ವರಿತದಿ ಲಗ್ನವ ಗುಣಿಸಿ ಕೊಡಲು ಬೇಕು | ಬರೆಸುವೆ ಬದಲುತ್ತರ         ||೯೪||

ಭಾಮಿನಿ

ದೊರೆಯೆ ಚಿತ್ತೈಸೆನ್ನ ವಚನವ |
ಇರುವುದೈ ವೈಶಾಖ ಶುದ್ಧದ |
ವರ ನವಮಿ ರವಿದಿನ ದಿವಾಘಟಿಗಳಿಗೆ ಐದಕ್ಕೆ ||
ತರುಣಿಯನು ಕೈವರ್ತಿಸೆನಲಾ |
ಅರಸ ಬರೆಸಿದ ಲೇಖನವನದ |
ಚರರ ಕೈಯೊಳಗಿತ್ತು ಉಡುಗೊರೆ ಸಹಿತ ಕಳುಹಿದನು ||೯೫||

ರಾಗ ಸಾಂಗತ್ಯ ರೂಪಕತಾಳ

ಸ್ವಸ್ತಿ ಶ್ರೀಮದ್ ಯದುತಿಲಕಗೆ ಕಾಶ್ಮೀರ | ಪೃಥ್ವಿಪಾಲಕ ಕೌಂಡ್ಲಿಕಾಖ್ಯ ||
ವಿಸ್ತಾರದಲಿ ನಮೋ ನಮೋಯೆಂದು ವಂದಿಸಿ | ಮಸ್ತಕ ಚಾಚಿ ಪೇಳಿದನು         ||೯೬||

ನಿಮ್ಮ ಲೇಖನ ನೋಡಿ ಹರುಷದಿಂದಲಿ ನಾವು | ನಮ್ಮ ಪುರೋಹಿತರನ್ನು ||
ಘಮ್ಮನೆ ಕರೆಸುತ್ತ ಲಗ್ನವನಿರಿಸಿರ್ಪೆ | ಬ್ರಹ್ಮನ ಲಿಖಿತದಂತಿನ್ನು  ||೯೭||

ಸರಿಯೆ ವೈಶಾಖ ಶುದ್ಧದ ನವಮಿಯ ದಿನ | ವಿರುವುದು ಭಾನುವಾರದಲಿ ||
ವಿರಚಿಸುವುದು ಲಗ್ನ ಘಳಿಗೆ ಐದಕೆ ನಿಮ್ಮ | ಪುರಕೆ ದಿಬ್ಬಣವ ಕೂಡುತಲಿ ||೯೮||

ಬರುವೆನು ಪರಿವಾರ ಸಹಿತಲಿ ಸುತೆಯನ್ನು | ಎರೆದು ಧಾರೆಯನೆಸಗುತ್ತ ||
ಹರಸಿ ಕಳುಹಿ ಕೊಡಬೇಕೆಂದೆನುತ್ತಲಿ | ಬರೆದಿಹ ಪರಿಯ ಕಾಣುತ್ತ        ||೯೯||

ರಾಗ ಕಾಂಭೋಜಿ ಝಂಪೆತಾಳ

ಕೃತವರ್ಮ ಮಂತ್ರಿ ಕೇಳ್ | ಸುತೆಗೆ ಸರಿಯಾದ ವರ |
ರತುನ ದೊರಕಿದ ನಮಗೆ | ಅತಿ ಹರುಷವಾಯ್ತು       ||೧೦೦||

ಬರುವ ನವಮಿಗೆ ಲಗ್ನ | ಪುರವ ಶೃಂಗರಿಸು ನೀ |
ಧರಣಿಪಾಲರಿಗೆಲ್ಲ | ಬರೆಸು ಓಲೆಯನು       ||೧೦೧||

ಎನುತ ಮಂತ್ರಿಯೊಳರುಹಿ | ಜನಪಾಲನಿರಲಿತ್ತ |
ಚಿನುಮಯನು ಅರಿತನಿದ | ಜನರ ಮುಖದಿಂದ        ||೧೦೨||

ರಾಗ ಸೌರಾಷ್ಟ್ರ ತ್ರಿವುಡೆತಾಳ

ದುರುಳ ಕ್ಷತ್ರಿಯ ಕೌಂಡ್ಲಿಕಾಖ್ಯಗೆ | ತರಳೆ ಯೋಗಿನಿಯನ್ನು ಪರಿಣಯ |
ವಿರಚಿಸುವನಗ್ರಜನು ಆತನ | ತರಿವುಪಾಯ  ||೧೦೩||

ಮಾಡಬೇಹುದೆನುತ್ತ ಮನದಲಿ | ಗಾಢದಿಂ ಸುರಮುನಿಯ ಸ್ಮರಿಸಲು |
ಮಾಡುತಲಿ ಹರಿಕೀರ್ತನೆಯ ಮುನಿ | ಓಡಿ ಬಂದ      ||೧೦೪||

ರಾಗ ಆನಂದಭೈರವಿ ಆದಿತಾಳ

ಪಾಹಿ ಶ್ರೀವರ ಕೇಶವ | ಜನಾರ್ದನ | ಪಾಹಿ ಶ್ರೀವರ ಮಾಧವ ||
ಪಾಹಿ ಶ್ರೀಪತಿ ನಿನ್ನ | ತ್ರಾಹಿ ವಂದಿಪೆ ಮುನ್ನ |
ಪಾಹಿ ನೀ ಕಾಯೆನ್ನ | ತೋಯಜನೇತ್ರನೆ || ಪಾಹಿ ಶ್ರೀವರ ಕೇಶವ       ||೧೦೫||

ದುರಿತಾರಿ ಭವಭಂಜನ | ಸೂಕರನಾಗಿ | ದುರುಳ ಹಿರಣ್ಯಾಕ್ಷನ ||
ತರಿದು ತರಳನ ಕಾವ | ಪರಿಗೆ ನರ ಹರಿಯಾಗಿ |
ಕರುಳಮಾಲೆಯ ನಿನ್ನ | ಕೊರಳೊಳು ಧರಿಸಿದೆ || ಪಾಹಿ ||      ||೧೦೬||

ಲೆಕ್ಕವಿಲ್ಲದ ದುಷ್ಟರ | ಸಂಹರಿಸಿ ನೀ | ದುಃಖಪಡುವರೆಲ್ಲರ ||
ಫಕ್ಕನೆ ಸಲಹಿದೆ | ರಕ್ಕಸವೈರಿಯೆ |
ಒಕ್ಕಣಿಸುವುದೇನು |  ಗಕ್ಕನೆ ಕರೆಸಿದೆ || ಪಾಹಿ ||      ||೧೦೭||

ರಾಗ ಕೇದಾರಗೌಳ ಅಷ್ಟತಾಳ

ಸುರಮುನಿ ಬಂದಿಹೆ ಅಪರೂಪದೊಳು ನೀನು | ತರಿಸಿರ್ದ ಪೀಠದೊಳು ||
ಭರದಿಂದ ಕುಳ್ಳಿರು ಲೋಕವಾರ್ತೆಗಳೇನು | ಅರುಹು ನೀ ತಿಳಿದಿರ್ದುದ  ||೧೦೮||

ಅರಿಯೆನು ನಾನೊಂದು ಪೊಸವಾರ್ತೆ ಕೇಳೊಂದು | ದುರುಳ ಕೌಂಡ್ಲಿಕ ರಾಜಗೆ ||
ಹರಿಯೆ ನಿನ್ನಗ್ರಜ ತರಳೆ ಯೋಗಿನಿಯರನ್ನು | ಪರಿಣಯ ಮಾಳ್ಪರಂತೆ   ||೧೦೯||

ಯಾರು ಪೇಳ್ದರು ನಿನಗೀ ವಿಚಾರಗಳನ್ನು | ಭೋರನೆ ಅರುಹೀಗಳು ||
ನಾರಿಯನಾ ಖಳನಿಂಗೆ ಲಗ್ನವ ಗೈವಾ | ಕಾರಣ ನಾನರಿಯೆ    ||೧೧೦||

ಬರುತ ನಾ ಕಂಡೆನು ವರಕಾಶ್ಮೀರೇಶನು | ಪುರವ ಶೃಂಗರಿಸಿರ್ಪನು ||
ಧರಣಿಪ ಸೈಂಧವ ಶಿಶುಪಾಲ ಮುಂತಾದ | ಅರಸರ್ಗೆ ಲೇಖನವ        ||೧೧೧||

ಕಳುಹಿಸಿರ್ಪನುಯೆಂಬ ಪರಿಯನು ತಿಳಿದಿಹೆ | ಖಳಕುಲಾಂತಕ ಎನ್ನೊಳು ||
ಒಳವಾಗಿ ಅರುಹದೆ ವಂಚಿಪ ಪರಿಯೇನು | ನಳಿನನಾಭನೆ ಪೇಳಯ್ಯ    ||೧೧೨||

ರಾಗ ಮಧುಮಾಧವಿ ಏಕತಾಳ

ಸುರಮುನಿ ಕೇಳಿಂದು ತರಳೆಯನೀಗ | ದುರುಳಂಗೆ ಕೊಡುವುದು ಸರಿಯಲ್ಲ ಹೀಗೆ ||
ಅರುಹಲು ಅಗ್ರಜ ಕೋಪಿಸದಿರನು | ಅರುಹುವೆ ಕೇಳೊಂದುಪಾಯವ ನೀನು      ||೧೧೩||

ರಜತಾದ್ರಿಪುರಕಾಗಿ ತೆರಳಿ ಪಾರ್ವತಿಗೆ | ನಿಜವಾಗಿ ಗಣಪತಿಸತಿಯೀಕೆಯಾಗೆ ||
ಭುಜಗಭೂಷಣ ನಮಗಹಿತನೆ ನೋಡು | ಕಜ್ಜವಗೆಯ್ಯಬೇಕೆನುತ ಮಾತಾಡು       ||೧೧೪||

ನಾಳೆಯ ದಿವಸವೆ ದಿಬ್ಬಣಗೂಡಿ | ತಾಳದೆ ಬರುವುದುಯೆನುತ ನೀ ಓಡಿ ||
ಹೇಳು ಪಾರ್ವತಿಗೆ ಈ ಬಲನು ಯೋಚಿಸಿದ | ಖೂಳ ಕೌಂಡ್ಲಿಕನಿಂಗೆ ಕೊಡುವನೆಂದೆನುತ   ||೧೧೫||

ನವಮಿಯ ದಿನವೆ ದಿಬ್ಬಣವ ಒಡಗೂಡಿ | ತವಕದಿಂ ಬರಬೇಕೆಂದೆನುತ ಮಾತಾಡಿ ||
ವಿವರದಿ ಪತ್ರಿಕೆ ಬರೆಸಿರ್ದ ಪರಿಯ | ವಿವರಿಸಿ ಪೇಳು ನೀನೆಲ್ಲ ಸಂಗತಿಯ         ||೧೧೬||

ಭಾಮಿನಿ

ಬರಲನಂತರ ಬಲಗೆ ಪೇಳಿಯೆ |
ತರಳೆಯನು ಗಣಪತಿಗೆ ಲಗ್ನವ |
ವಿರಚಿಸುವ ತೆರ ಮಾಡಬಹುದೆಂದೆನುತ ಕರೆದುಸಿರು ||
ಮುರಹರನ ನುಡಿ ಕೇಳಿ ನಾರದ |
ನೆರಗಿ ಪೊಡಮಟ್ಟಾಗ ತೆರಳುತ |
ಗಿರಿಸುತೆಯ ಕಾಣುತ್ತ ಮಣಿಯಲು ಕಂಡು ಉಮೆಯಾಗ         ||೧೧೭||

ರಾಗ ಬೇಗಡೆ ಅಷ್ಟತಾಳ

ಎರಗಿ ಉಪಚರಸುತ್ತ ಕುಳ್ಳಿರಿಸಿ | ಸುರಮುನಿಗೆ ಪಾರ್ವತಿ | ಬರವಿದೆಲ್ಲಿಂದೆನುತ ಸತ್ಕರಿಸಿ ||
ಪರಮ ಸ್ವಾರಿಯು ತೆರಳಿ ಬಂದಿಹ | ಪರಿಯು ಅಪರೂಪದೊಳು ನಮ್ಮಯ |
ಪುರಿಗೆ ಬಂದಿಹ ಹದನವನು ನೀ | ನರುಹಬೇಹುದು ಎನಗೆ ಶೀಘ್ರದಿ       ||೧೧೮||

ತಾಯೆ ಕೇಳೌ ಸುತಗೆ ಸತಿಹೋಗಿ | ಜನಿಸಿಹಳು ರೇವತಿ |
ಆಯತಾಂಬಕಿಬಲರ್ಗೆ  ಸುತೆಯಾಗಿ ||
ರಾಯ ಕೌಂಡ್ಲಿಕನೆಂಬವಗೆ ಬಲ | ದೇವ ಲಗ್ನವ ನಾಳೆ ಗೈವನು |
ಬೀಯಗನು ಹರನವಗೆ ಅದರಿಂ | ದಾಯವನು ನಾ ಪೇಳ್ವೆ ಕೇಳ್ವುದು     ||೧೧೯||

ಸುತಗೆ ಈ ದಿನ ಲಗ್ನಗೈಸೆಂದು | ಪತಿಯೊಡನೆ ಕೇಳಿಕೊ |
ಸತಿಯ ವಾರ್ತೆಯ ಹೇಳಿ ತಿಳಿಸಿಂದು ||
ಜತನದಿಂ ನೀವ್ ದಿಬ್ಬಣದಿ ಪೋ | ಗುತಲಿ ವೈವಾಹವನು ಗೈದಾ |
ಸುತೆಯ ತರದಿರೆ ದೊರೆಗೆ ಲಗ್ನವು | ಸತತ ಗೈವನು ನಾಳೆ ನಿಶ್ಚಯ     ||೧೨೦||

ಕಂದ

ನಾರದನರುಹಿದ ವಾರ್ತೆಯ |
ನಾರಿಯು ಕೇಳುತಲಾತನ ತಾ ಬೀಳ್ಗೊಂಡುಂ ||
ಭೋರನೆ ಪತಿಯೆಡೆಗೈದಿ ಪ |
ದಾರವಿಂದಕ್ಕೆರಗುತಲಿ ಪೇಳ್ದಳು ಮುದದಿಂ   ||೧೨೧||

ರಾಗ ಕೇದಾರಗೌಳ ಝಂಪೆತಾಳ

ಕಾಂತ ಕೇಳೆನ್ನ ಸೊಲ್ಲ | ಗಣಪತಿಗೆ | ನಿಂತು ಈ ದಿನದ ನಲ್ಲ ||
ಸಂತಸದಿ ಮದುವೆಗಿರಿಸು | ಎಂದುಸಿರೆ | ಕಾಂತೆಯಳಿಗೆಂದ ಬಿರುಸು    ||೧೨೨||

ನಾರಿಮಣಿ ಕೇಳೆ ಇಂದು | ನಿಲಲಾರೆ | ಬಾರಿಬಾರಿಗು ತಾ ಬಂದು ||
ಸೇರಿ ಸ್ತುತಿಸುವ ಭಕ್ತನು | ಈ ದಿವಸ | ಸಾರಿ ಬಂದಿಹನವನನು ||೧೨೩||

ದ್ವಾರಕಾಪುರದ ದೊರೆಯ | ಸುತೆಯಳನು | ಭೋರನೇ ಎನ್ನ ತನಯ ||
ಧಾರೆಯಿಂ ವರಿಸಬೇಕು | ದಿಬ್ಬಣದಿ | ವೋರಂತೆ ಪೋಪ ಸಾಕು          ||೧೨೪||

ಬಿಡೆನು ಈದಿನ ಭಕ್ತನ | ಕೈಲಾಸ | ದೆಡೆಗೆ ಕರೆತಹೆನಾತನ ||
ಮಡದಿ ಕೇಳೆಮ್ಮ ಸುತಗೆ | ನಾಳೆ ದಿನ | ಬಿಡು ಲಗ್ನ ವಿಘ್ನಪತಿಗೆ ||೧೨೫||

ಈ ದಿನವೆ ಪೋಗಿ ಬಲನ | ಕುವರಿಯನು | ಸಾಧಿಸದೆ ಬಿಡಲು ಹದನ ||
ಆ ಧರಾಧಿಪ ಕೌಂಡ್ಲಿಕ | ನೆಂಬವಗೆ | ಮೋದದಲಿ ಕೊಡುವ ಬಳಿಕ        ||೧೨೬||

ಭಾಮಿನಿ

ತರುಣಿ ಕೇಳ್ ಕೇಳಾತಗಾಕೆಯ |
ಪರಿಣಯವ ಗೈಯಲ್ಕೆ ಎಮ್ಮಯ |
ತರಳ ಗಣನಾಥಂಗೆ ಬದಲೊರ್ವಳನು ಕರೆತಂದು ||
ವಿರಚಿಸುವೆ ಲಗ್ನವನು ಸುಮ್ಮನೆ |
ಕರಿಕರಿಸಬೇಡೆನ್ನ ಪೋಪೆನು |
ಶರಣ ಬಹುಪರಿ ಬಳಲುತಿಹ ಪ್ರಾಣವನು ನೀಗಿಸದೆ    ||೧೨೭||

ರಾಗ ಕಾಂಭೋಜಿ ಅಷ್ಟತಾಳ

ತರವಲ್ಲ ಕಂದಗೆ ಪರಿಣಯ ಗೈಸದೆ | ಪ್ರಾಣಕಾಂತ || ಈಗ |
ತೆರಳಿ ಪೋಪುದು ನೀನು ಭಜಕನ ನೆಪದಿಂದ | ಪ್ರಾಣಕಾಂತ   ||೧೨೮||

ಹೇಳಿದ ದಿನವೆಲ್ಲ ನಾಳೆಯೆನ್ನುವದಿದು | ಪ್ರಾಣಕಾಂತ || ಇಂದು |
ತಾಳದೆ ಪರಿಣಯವೆಸಗದೆ ಬಿಟ್ಟರೆ | ಪ್ರಾಣಕಾಂತ     ||೧೨೯||

ತಟ್ಟನೆನ್ನಯ ಪ್ರಾಣವಂ ಪಾದದೆಡೆಯಲ್ಲಿ | ಪ್ರಾಣಕಾಂತ || ನಾನು |
ಬಿಟ್ಟಪೆ ನೋಡೀಗ ಪುಸಿಯಲ್ಲ ದಿಟವಿದು | ಪ್ರಾಣಕಾಂತ         ||೧೩೦||

ರಾಗ ಸೌರಾಷ್ಟ್ರ ಮಟ್ಟೆತಾಳ

ಮಡದಿಯೆಂದ ನುಡಿಯ ಕೇಳಿ | ತಡೆಯದಾಗ ಪ್ರಮಥರಿಂಗೆ ||
ಒಡನೆ ಪೇಳ್ದ ಪೋಗಿ ಭೂತ | ಗಡಣ ಸಹಿತಲಿ          ||೧೩೧||

ರಮಣಿ ಕೇಳು ಪುತ್ರ ಸಹಿತ | ಪ್ರಮಥರೊಡನೆ ಕೂಡಿ ನೀನು ||
ಕ್ರಮದಿ ದಿಬ್ಬಣವ ಕೊಂಡು | ಗಮಿಸಿರೀಗಲೆ   ||೧೩೨||

ಶರಣನೆಡೆಗೆ ಪೋಗಿ ನಾನು | ಭರದಿ ನಮ್ಮಲ್ಲಿಗವನ ||
ಕರೆದುತಂದು ದ್ವಾರಕಾಕ್ಕೆ | ತ್ವರಿತದಿಂದಲಿ   ||೧೩೩||

ಬರುವೆ ನಿಜವಿದೀಗಳೆಂದು | ಪೊರಟು ಹರನು ನಡೆಯಲತ್ತ ||
ಗಿರಿಜೆ ಗಣರ ನೋಡಿ ಮತ್ತೆ | ಯೊರೆದಳೀಪರಿ         ||೧೩೪||

ಭಾಮಿನಿ

ನಂದಿ ಭೃಂಗಿಯು ವೀರಭದ್ರನು |
ಸ್ಕಂದ ಪ್ರಮಥಾಧಿಪರ ಸಹಿತತಿ |
ಚಂದದಿಂ ದಿಬ್ಬಣಕೆ ಬೇಗದಿ ಪೊರಡಿರೆಂದೆನುತ ||
ಬಂದು ಮದುಮಗ ಗಣಪತಿಯ ಮಿಗಿ |
ಲಿಂದ ಶೃಂಗರಿಸುತ್ತಲೇರಿಸಿ |
ಅಂದಣದೊಳಾ ಶುಭ ಮುಹೂರ್ತದಿ ಪೊರಟಳಾವುಮೆಯು     ||೧೩೫||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಇತ್ತಲಾ ಕಾಶ್ಮೀರಪುರದೊಳು | ಇತ್ತು ಕೌಂಡ್ಲಿಕ ಓಲಗವ ಸಚಿ |
ವೋತ್ತಮನ ಸಹಿತಾಗಿ ಕರೆಸಿದ | ನಾಪ್ತರುಗಳ         ||೧೩೬||

ಸೈಂಧವಗೆ ಶಿಶುಪಾಲರ್ಗಾಕ್ಷಣ | ಚಂದದಿಂದಲಿ ಚರರ ಕಳುಹ |
ಲ್ಕೆಂದ ವಾರ್ತೆಯ ತಿಳಿದು ಭೂಮಿಪರ್ | ಬಂದರಂದು          ||೧೩೭||

ಬಂದವರನಿದಿರ್ಗೊಂಡು ಭೂಪತಿ | ಯೆಂದನಾ ದ್ವಾರಕೆಗೆ ದಿಬ್ಬಣ |
ಮಂದಿ ಸಹಿತಲೆ ಪೊರಡಬೇಕೆನ | ಲೆಂದ ಚೈದ್ಯ       ||೧೩೮||

ಕಾಶ್ಮೀರಾಧಿಪ ಕೇಳು ನಿನ್ನಯ | ವಿಸ್ಮಯದ ನುಡಿ ಯಾಕೆ ಪೇಳುವೆ |
ಲಕ್ಷ್ಮೀಪತಿಯಿಹ ಪುರಕೆ ದಿಬ್ಬಣ | ಸಸ್ಮಿತದಲಿ ||೧೩೯||

ಪೊರಡಲ್ಯಾತಕೆ ಲಗ್ನ ಯಾರಿಗೆ | ತರಳೆಯೆಲ್ಲಿಹಳೆಂಬುದೆಲ್ಲ ವಿ |
ವರಿಸೆನಲ್ಕಾಕ್ಷಣವೆ ಪೇಳ್ದ ವಿ | ಸ್ತರವನಿಂತು  ||೧೪೦||

ರಾಗ ದೇಶಿ ಅಷ್ಟತಾಳ

ಸೈಂಧವ ಶಿಶುಪಾಲರೀಗ | ಕೇಳಿ | ಚಂದದಿ ಬಲರಾಮ ಬೇಗ ||
ಬಂದರೆನಗೆ ತನ್ನ ಮಗಳನ್ನು ಕೊಡುವೆ ತಾ | ನೆಂದೆನುತಲಿ ಓಲೆ ಬರೆಸಿರ್ಪ ದಿಬ್ಬಣ         ||೧೪೧||

ಪೋಗಿ ನಾವಾ ಸುದತಿಯನು | ಬೇಗ | ಸಾಗಿಸಿ ತರಬೇಕಾಕೆಯನು |
ನಾಗಶಯನ ನಮಗಹಿತನಾಗಿರುವನು | ತಾಗಿ ಬಂದರೆ ನೀವು ನೀಗಿಸಬೇಕಷ್ಟೆ    ||೧೪೨||

ಎಂದ ಮಾತನು ಕೇಳುತಾಗ | ನಗು | ತೆಂದನು ಶಿಶುಪಾಲಯೋಗ ||
ಮಂದಿ ಸಹಿತ ನಾವು ತೆರಳೋಣ ಕೃಷ್ಣನು | ಬಂದರೆ ಪೋರನ ಶಿಕ್ಷಿಪೆ ನಾ ನಿಜ   ||೧೪೩||

ಭಾಮಿನಿ

ಎಂದು ನಾನಾವಿಧದ ಪೌರುಷ |
ದಂದವನು ದಿಟವೆಂಬ ಸೈಂಧವ |
ನಂದು ಶಿಶುಪಾಲಾಖ್ಯ ಮೊದಲಾದವರನೊಡಗೊಂಡು ||
ವಂದಿ ಮಾರ್ಬಲ ಸಹಿತ ಸ್ತ್ರೀಯರು |
ಸಂದಣಿಸೆ ರಥವೇರ್ದು ಕೌಂಡ್ಲಿಕ |
ಮಂದಿರವ ಪೊರವಂಟು ನಡೆದನು ಸಿಂಧುಘೋಷದಲಿ ||೧೪೪||

ರಾಗ ಸಾರಂಗ ರೂಪಕತಾಳ

ಬರುತಾ ಪಥದಿ ಅಶ್ವ ಸುರಿಸಿತು ನೀರ್ಗಳ | ಎರಡು ಕಣ್ಣಿನೊಳೇನನೆಂಬೆ ||
ಕರಿಗಳು ಮೃತ್ತಿಕೆ ಶಿರದೊಳಗಾಂತವು | ವರವಿಪ್ರ ಮುಂಡನಗೈದು        ||೧೪೫||

ಇದಿರಾಗಿ ಬರುವುದ ಕಾಣುತ್ತ ಮುಂದಕ್ಕೆ | ಒದಗಿನಿಂ ಬರುತಿರ್ದರಾಗ ||
ಮುದಿ ಮಾರಿ ಹೊಲೆಯನು ತೃಣಕಾಷ್ಠ ಹೊತ್ತು ತಾ | ಮದಮುಖನಂತಿದಿರ್ಬಂದ  ||೧೪೬||

ಕಂಡು ಭೂಪಾಲರು ದಂಡಧರನಂದದಿ | ದಂಡಿಸುವೆವು ದಾರಿ ಬಿಟ್ಟು ||
ಕಂಡಕಡೆಗೆ ಪೋಗು ಎಂದಟ್ಟಿ ಬರುತಿರೆ | ದಿಂಡನೋರುವ ಬಳುವೆ ಪೊತ್ತು        ||೧೪೭||

ನಡುಮಾರ್ಗದೊಳಗಿಟ್ಟು ಬಡಕೊಳ್ಳುತಿರ್ದನು | ಕಡೆಯೊಳು ಮುಂದಕ್ಕೆ ಬರಲು ||
ಸಡಗರದಲಿ ಪತಿಶೂನ್ಯೆಯಾಗಿಹವಿಪ್ರ | ಮಡದಿ ಬಂದಳು ಇದಿರಿನಲಿ     ||೧೪೮||

ಅವಶಕುನವ ತೃಣಕೆಣಿಸುತ ಕೌಂಡ್ಲಿಕ | ಲವಲವಿಕೆಯೊಳ್ ಮುಂದೆ ಬರಲು ||
ಅವನೀಶರೆಲ್ಲರು ಮನದೊಳಗೆಣಿಸದೆ | ಭುವನೇಶ ಕೇಳೆಂದ ಮುನಿಪ    ||೧೪೯||

ಭಾಮಿನಿ

ಇತ್ತ ಗಿರಿಸುತೆ ಗಣರ ಕೂಡುತ |
ಅರ್ತಿಯಲಿ ನಡೆತಂದು ದ್ವಾರಕೆ |
ಪತ್ತನದಿ ಬೀಡಿಕೆಯ ಬಿಡುತಲಿ ಮತ್ತೆ ತಾನಂದು ||
ಚಿತ್ತದಲಿ ಯೋಚಿಸಿದಳಾಗಲೆ |
ಉತ್ತಮವು ಶ್ರೀಹರಿಯ ಒಲವೆ |
ನ್ನತ್ತ ಪಡೆದಪೆನೆನುತ ಪೊರಟೈತಂದಳರಮನೆಗೆ      ||೧೫೦||

ರಾಗ ತೋಡಿ ಏಕತಾಳ

ಬಂದ ಗಿರಿಜೆಯನ್ನು ನೋಡಿ | ಚಂದದಿಂದ ಹರಿಯು ನಗುತ |
ಎಂದು ಬಂದೆ ತಂಗಿ ಕುಳಿರು | ಮಂದಗಾಮಿನಿ        ||೧೫೧||

ವಂದಿಸುತ್ತ ನುಡಿದಳಣ್ಣ | ಇಂದು ಬಂದೆ ನಿನ್ನ ಪುರಕೆ |
ಚಂದವೇನೈ ಸತಿಯರ್ ಸಹಿತ | ನಂದನಂದನ        ||೧೫೨||

ಕುಶಲದಿಂದಲಿರ್ಪೆಯೆಲ್ಲ | ಕುಶಲಿಗಳೆ ನೀವೆಲ್ಲ ತಂಗಿ |
ಉಸಿರು ನೀನೀಗೋರ್ವಳಿಲ್ಲಿ | ವಿಷಯ ಬಂದುದ       ||೧೫೩||

ಬಲನ ಕುವರಿಯೆನ್ನ ಸುತಗೆ | ಒಲವಿನಿಂದ ಕೊಡಬೇಕೆನುತ |
ನಿಲದೆ ಬಂದೆ ನಿನ್ನ ಬಳಿಗೆ | ಹಲವು ಮಾತೇನು        ||೧೫೪||

ಎನ್ನ ಕೇಳ್ವುದೇನು ತಂಗಿ | ನಿನ್ನ ಅಣ್ಣನೊಡನೆ ಕೇಳಿ |
ಮುನ್ನ ಲಗ್ನಗೈವ ಬಗೆಗೆ | ಯೆನ್ನ ಸಮ್ಮತ     ||೧೫೫||

ದುಷ್ಟ ಕ್ಷತ್ರಿಯ ಕೌಂಡ್ಲಿಕಗೆ | ಕೊಟ್ಟು ಮದುವೆ ಮಾಳ್ಪನಂತೆ |
ನಿಷ್ಠೂರ ಬಂದರು ಬಿಡೆ ನಿ | ನ್ನಿಷ್ಟವೇನಣ್ಣ     ||೧೫೬||

ರಾಗ ಕಾಂಭೋಜಿ ರೂಪಕತಾಳ

ಕೇಳವ್ವ ತಂಗಿ ನೀಯೆನ್ನಯ ಮನದಿರವ | ಪೇಳಿದರೇನಹುದಣ್ಣ ||
ಖೂಳ ನೃಪಾಲಗೆ ಬಾಲಿಕೆಯ ಕೊಡುವೆನೆಂ | ದಾಲೋಚನೆಯ ಮಾಡಿಯಿಂದು    ||೧೫೭||

ದಿಬ್ಬಣವ ಒಡಗೊಂಡು ಬರುವನೀಕ್ಷಣದೊಳೆಂ | ದಬ್ಬರ ತುಂಬಿದೆ ಪುರದಿ ||
ಅರ್ಭಕ ಸಹಿತಾಗಿ ಪೋಗಿ ನೀ ಕೇಳೆಂದು | ಉಬ್ಬಿಸಿದನಾ ಗಿರಿಸುತೆಯ   ||೧೫೮||

ಎನಗೆ ನೀ ಸಹಾಯಕನಾದರೀಕ್ಷಣದೊಳು | ತನಯಗೆ ಲಗ್ನವ ಗೈವೆ ||
ಜನಪ ಕೌಂಡ್ಲಿಕ ಬರಲಾತನ ಗಣರಿಂದ | ಹನನ ಗೈಸುವೆನಿಂದು ನೋಡು         ||೧೫೯||

ಬಲದೇವನೆನ್ನನು ಕರೆದರೆ ಬಂದಲ್ಲಿ | ಗೆಲಿಸುವೆ ನಿನ್ನನ್ನು ಕೇಳು ||
ಕಲಹಕ್ಕೆ ಬಂದರು ಗೆಲವು ನಿನ್ನಲಿ ಮಾಳ್ಪೆ | ಖಳನ ಶಿಕ್ಷಿಸು ತಂಗಿ ನೀನು ||೧೬೦||

ಎಂದು ಈಪರಿ ನಂಬುಗೆಯ ಕೊಂಡು ತೆರಳಲು | ಇಂದುಧರನ ಸತಿಯಾಗ ||
ಬಂದಳು ಗಣರಿರ್ಪ ಬಳಿಗೆ ತಾನೈ ತಂದು | ಎಂದಳು ನಂದಿಕೇಶ್ವರಗೆ    ||೧೬೧||

ಪೋಗಿ ಬಲನ ಕೂಡೆ ಎನ್ನಯ ಕುವರಗೆ | ಯೋಗಿನಿಯನ್ನು ನೀನಿಂದು ||
ಬೇಗದಿಂದಲಿ ಧಾರೆಗೈಸಿ ತಾ ಕೊಡಲೆಂದು | ನಾಗಭೂಷಣ ಪೇಳ್ದನೆನುತ         ||೧೬೨||

ರಾಗ ಘಂಟಾರವ ಅಷ್ಟತಾಳ

ಎಂದ ಮಾತನು ಕೇಳುತಲಾಕ್ಷಣ |
ಇಂದುಧರನಂದದಲಿ ಪೊರಟೈ | ತಂದನಾ ಬಲನಿದಿರಿಗೆ        ||೧೬೩||

ಕಾಣುತಾಕ್ಷಣ ಬಲದೇವನುಸಿರಿದ |
ಜಾಣನಂದೀಶ್ವರನೆ ಬಂದಿಹೆ | ಯೇನು ಕಾರಣ ಪೇಳೆಲಾ       ||೧೬೪||

ಕೇಳಯ್ಯಯಾದವೇಂದ್ರನೆ ನಾನೀಗ |
ಪೇಳುವುದ ನೀ ಲಾಲಿಸಾದರೆ | ಶೂಲಪಾಣಿಯಕುವರಗೆ         ||೧೬೫||

ನಿನ್ನ ಪುತ್ರಿಯ ಪಾಣಿಗ್ರಹಣ ಗೈದು |
ಮುನ್ನ ಗಣಪತಿ ದೇವನಿಗೆ ನೀ | ಸನ್ಮತದಿ ಕೊಡಲೆನುತಲಿ      ||೧೬೬||

ಒಡೆಯನಪ್ಪಣೆಯಿಂದಲಿ ಬಂದಿಹೆ |
ಒಡತಿಸಹಿತಲಿ ಬಂದು ಉಪವನ | ದೆಡೆಯೊಳಿರುವೆವು ಕೇಳೆಲಾ         ||೧೬೭||